ಅಧ್ಯಾಯ ಐದು
ಯೆಹೋವನ ಆರಾಧಕರು ಅನುಭವಿಸುವ ಸ್ವಾತಂತ್ರ್ಯ
1, 2. (ಎ) ಪ್ರಥಮ ಮಾನವ ಜೊತೆಗೆ ದೇವರು ಯಾವ ರೀತಿಯ ಸ್ವಾತಂತ್ರ್ಯವನ್ನು ಕೊಟ್ಟನು? (ಬಿ) ಆದಾಮಹವ್ವರ ಕೆಲಸಗಳನ್ನು ನಿಯಂತ್ರಿಸಿದ ಕೆಲವು ನಿಯಮಗಳನ್ನು ಹೆಸರಿಸಿರಿ.
ಯೆಹೋವನು ಪ್ರಥಮ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದಾಗ, ಮಾನವರು ಇಂದು ಅನುಭವಿಸುವ ಯಾವುದೇ ಸ್ವಾತಂತ್ರ್ಯಕ್ಕಿಂತ ಎಷ್ಟೊ ಮಿಗಿಲಾದ ಸ್ವಾತಂತ್ರ್ಯವನ್ನು ಅನುಭವಿಸಿದರು. ಅವರ ಬೀಡು ಪರದೈಸವಾಗಿತ್ತು, ಸುಂದರವಾದ ಏದೆನ್ ಉದ್ಯಾನವನವಾಗಿತ್ತು. ಅವರ ತನುಮನಗಳು ಪರಿಪೂರ್ಣವಾಗಿದ್ದುದರಿಂದ ಯಾವುದೇ ಕಾಯಿಲೆ ಅವರ ಜೀವನದ ಸುಖವನ್ನು ಕುಂದಿಸಲಿಲ್ಲ. ಪ್ರತಿಯೊಬ್ಬನಿಗಾಗಿ ಈಗ ಕಾದುಕೊಂಡಿರುವ ಮರಣವು ಆಗ ಅವರಿಗಾಗಿ ಕಾಯುತ್ತಿರಲಿಲ್ಲ. ಮತ್ತು, ಅವರು ಯಂತ್ರಮಾನವರಾಗಿರಲಿಲ್ಲ. ಅವರಿಗೆ ಅದ್ಭುತಕರವಾದ ಇಚ್ಛಾಸ್ವಾತಂತ್ರ್ಯ ಅಂದರೆ ಸ್ವಂತ ನಿರ್ಣಯಗಳನ್ನು ಮಾಡುವ ಸ್ವಾತಂತ್ರ್ಯವಿತ್ತು. ಆದರೆ ಅಂತಹ ಆಶ್ಚರ್ಯಕರವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಮುಂದುವರಿಯಬೇಕಾದರೆ, ದೇವರ ನಿಯಮಗಳನ್ನು ಅವರು ಮಾನ್ಯಮಾಡಬೇಕಿತ್ತು.
2 ದೃಷ್ಟಾಂತಕ್ಕೆ, ದೇವರು ಸ್ಥಾಪಿಸಿರುವ ಭೌತಿಕ ನಿಯಮಗಳನ್ನು ಪರಿಗಣಿಸಿರಿ. ಈ ನಿಯಮಗಳು ಬರೆದಿಡಲ್ಪಟ್ಟಿರುವುದಿಲ್ಲವಾದರೂ, ಅವುಗಳಿಗೆ ವಿಧೇಯತೆಯನ್ನು ತೋರಿಸುವುದು ಸ್ವಾಭಾವಿಕವಾಗಿರುವಂತೆ ಆದಾಮಹವ್ವರನ್ನು ರಚಿಸಲಾಗಿತ್ತು. ಹಸಿವೆಯು ತಿನ್ನುವ ಅಗತ್ಯವನ್ನು ಸೂಚಿಸಿತು; ಬಾಯಾರಿಕೆಯು ಕುಡಿಯುವುದನ್ನು, ಸೂರ್ಯಾಸ್ತಮಾನವು ನಿದ್ರೆಯ ಆವಶ್ಯಕತೆಯನ್ನು ಸೂಚಿಸಿತು. ಯೆಹೋವನು ಅವರಿಗೆ ಕೆಲಸದ ನೇಮಕವನ್ನೂ ಕೊಟ್ಟನು. ಅದು ಕಾರ್ಯತಃ ಒಂದು ನಿಯಮವಾಗಿತ್ತು. ಏಕೆಂದರೆ ಅದು ಅವರ ಕಾರ್ಯರೀತಿಯನ್ನು ನಿಯಂತ್ರಿಸಿತು. ಅವರು ಮಕ್ಕಳನ್ನು ಹುಟ್ಟಿಸಿ, ಭೂಮಿಯ ಅನೇಕ ಜೀವರಾಶಿಗಳ ಮೇಲೆ ಪ್ರಭುತ್ವ ನಡೆಸಿ, ಪರದೈಸಿನ ಮೇರೆಯು ಇಡೀ ಭೂಗೋಳವನ್ನೇ ವ್ಯಾಪಿಸುವ ತನಕ ಅದನ್ನು ವಿಸ್ತರಿಸಬೇಕಾಗಿತ್ತು. (ಆದಿಕಾಂಡ 1:28; 2:15) ಅದೆಷ್ಟು ಹಿತಕರವೂ ಪ್ರಯೋಜನಕರವೂ ಆದ ನಿಯಮವಾಗಿತ್ತು! ಅದು ಅವರಿಗೆ ಪೂರ್ಣವಾಗಿ ತೃಪ್ತಿಕರವಾದ ಕೆಲಸವನ್ನು, ಹಿತಕರವಾದ ರೀತಿಗಳಲ್ಲಿ ತಮ್ಮ ಸಹಜ ಶಕ್ತಿಗಳನ್ನು ಉಪಯೋಗಿಸುವಂತೆ ಸಾಧ್ಯಮಾಡಿತು. ಅಲ್ಲದೆ, ತಮ್ಮ ಕೆಲಸದ ನೇಮಕವನ್ನು ಹೇಗೆ ಪೂರೈಸುವುದೆಂಬ ವಿಷಯದಲ್ಲಿ ಅವರಿಗೆ ತುಂಬ ಸ್ವಾತಂತ್ರ್ಯವಿತ್ತು. ಇದಕ್ಕಿಂತ ಹೆಚ್ಚನ್ನು ಯಾರು ಬಯಸಾರು?
3. ತಮ್ಮ ನಿರ್ಣಯ ಸ್ವಾತಂತ್ರ್ಯವನ್ನು ವಿವೇಕದಿಂದ ಉಪಯೋಗಿಸಲು ಆದಾಮಹವ್ವರು ಹೇಗೆ ಕಲಿಯಸಾಧ್ಯವಿತ್ತು?
3 ಆದಾಮಹವ್ವರಿಗೆ ನಿರ್ಣಯಗಳನ್ನು ಮಾಡುವ ಅವಕಾಶವು ಕೊಡಲ್ಪಟ್ಟಾಗ, ಅವರು ಮಾಡಲಿದ್ದ ಯಾವುದೇ ನಿರ್ಣಯವು ಒಳ್ಳೆಯ ಪರಿಣಾಮಗಳನ್ನು ತರಲಿತ್ತು ಎಂಬ ಅರ್ಥದಲ್ಲಿರಲಿಲ್ಲ. ಅವರು ತಮ್ಮ ನಿರ್ಣಯ ಸ್ವಾತಂತ್ರ್ಯವನ್ನು, ದೇವರ ನಿಯಮ ಮತ್ತು ಮೂಲತತ್ತ್ವಗಳ ಮೇರೆಗಳೊಳಗೆ ಉಪಯೋಗಿಸಬೇಕಾಗಿತ್ತು. ಅವರು ಈ ನಿಯಮ ಮತ್ತು ಮೂಲತತ್ತ್ವಗಳನ್ನು ಹೇಗೆ ಕಲಿಯಲಿದ್ದರು? ತಮ್ಮ ನಿರ್ಮಾಣಿಕನಿಗೆ ಕಿವಿಗೊಟ್ಟು ಆತನ ಕೆಲಸಗಳನ್ನು ಅವಲೋಕಿಸುವ ಮೂಲಕವೇ. ದೇವರು ಆದಾಮಹವ್ವರಿಗೆ ಅವರು ಕಲಿತುಕೊಂಡದ್ದನ್ನು ಅನ್ವಯಿಸಿಕೊಳ್ಳಲು ಬೇಕಾದ ಬುದ್ಧಿಶಕ್ತಿಯನ್ನು ಕೊಟ್ಟಿದ್ದನು. ಅವರು ಪರಿಪೂರ್ಣರಾಗಿ ಸೃಷ್ಟಿಸಲ್ಪಟ್ಟಿದ್ದರಿಂದ, ನಿರ್ಣಯಗಳನ್ನು ಮಾಡುವಾಗ ಅವರ ಸ್ವಾಭಾವಿಕ ಪ್ರವೃತ್ತಿಯು ದೇವರ ಗುಣಗಳನ್ನು ಪ್ರತಿಬಿಂಬಿಸುವುದಾಗಿತ್ತು. ದೇವರು ತಮಗೆ ಏನನ್ನು ಮಾಡಿದ್ದಾನೊ ಅದಕ್ಕಾಗಿ ನಿಜವಾಗಿ ಕೃತಜ್ಞತೆಯನ್ನು ತೋರಿಸಿ ಆತನನ್ನು ಮೆಚ್ಚಿಸುವ ಬಯಕೆಯುಳ್ಳವರಾಗಿರುವಲ್ಲಿ, ಅವರು ಹಾಗೆ ಮಾಡಲು ಜಾಗರೂಕತೆಯಿಂದಿರುತ್ತಿದ್ದರೆಂಬುದು ನಿಶ್ಚಯ.—ಆದಿಕಾಂಡ 1:26, 27; ಯೋಹಾನ 8:29.
4. (ಎ) ಒಂದು ಮರದ ಹಣ್ಣನ್ನು ತಿನ್ನಬಾರದೆಂದು ಆದಾಮಹವ್ವರಿಗೆ ಕೊಡಲ್ಪಟ್ಟ ಆಜ್ಞೆಯು ಅವರ ಸ್ವಾತಂತ್ರ್ಯವನ್ನು ಅಪಹರಿಸಿತೊ? (ಬಿ) ಇದು ಯೋಗ್ಯವಾದ ಆವಶ್ಯಕತೆಯಾಗಿದ್ದದ್ದು ಏಕೆ?
4 ಆದುದರಿಂದ, ಜೀವದಾತನಾದ ತನ್ನ ಕಡೆಗೆ ಅವರಿಗಿದ್ದ ನಿಷ್ಠೆಯನ್ನು ಮತ್ತು ತಾನು ಆಜ್ಞಾಪಿಸಿದ್ದ ಕ್ಷೇತ್ರದೊಳಗೆ ಉಳಿಯಲು ಅವರಿಗಿದ್ದ ಸಿದ್ಧಮನಸ್ಸನ್ನು ಪರೀಕ್ಷಿಸಲು ಯೆಹೋವನು ನ್ಯಾಯವಾಗಿಯೇ ನಿರ್ಣಯಿಸಿದನು. ಯೆಹೋವನು ಆದಾಮನಿಗೆ ಈ ಆಜ್ಞೆಯನ್ನು ಕೊಟ್ಟನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಹವ್ವಳನ್ನು ಸೃಷ್ಟಿಸಿದ ಬಳಿಕ ಆಕೆಗೂ ಈ ನಿಯಮವು ತಿಳಿಸಲ್ಪಟ್ಟಿತು. (ಆದಿಕಾಂಡ 3:2, 3) ಈ ನಿರ್ಬಂಧವು ಅವರ ಸ್ವಾತಂತ್ರ್ಯವನ್ನು ಅಪಹರಿಸಿತೊ? ನಿಶ್ಚಯವಾಗಿಯೂ ಇಲ್ಲ. ಆ ಒಂದು ವೃಕ್ಷದ ಫಲವನ್ನು ಅವರು ತಿನ್ನಬಾರದಾಗಿತ್ತಾದರೂ, ಅವರು ತಿಂದು ಆಸ್ವಾದಿಸಬಹುದಾಗಿದ್ದ ಎಲ್ಲಾ ವಿಧದ ಆಹಾರಗಳು ಹೇರಳವಾಗಿದ್ದವು. (ಆದಿಕಾಂಡ 2:8, 9) ದೇವರು ಭೂಮಿಯನ್ನು ಸೃಷ್ಟಿಸಿದ್ದುದರಿಂದ, ಭೂಮಿಯು ದೇವರದ್ದು ಎಂಬುದನ್ನು ಅವರು ಒಪ್ಪಿಕೊಳ್ಳುವುದು ಯೋಗ್ಯವಾಗಿತ್ತು. ಈ ಕಾರಣದಿಂದ, ತನ್ನ ಉದ್ದೇಶಗಳಿಗೆ ಯೋಗ್ಯವಾಗಿರುವ ಮತ್ತು ಮಾನವಕುಲಕ್ಕೆ ಪ್ರಯೋಜನ ತರುವ ನಿಯಮಗಳನ್ನು ಮಾಡುವ ಹಕ್ಕು ಆತನಿಗಿದೆ.—ಕೀರ್ತನೆ 24:1, 10.
5. (ಎ) ಆದಾಮಹವ್ವರು ತಮಗಿದ್ದ ಮಹಿಮಾನ್ವಿತ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಹೇಗೆ? (ಬಿ) ಆದಾಮಹವ್ವರು ಅನುಭವಿಸಿದ್ದ ಸ್ವಾತಂತ್ರ್ಯದ ಸ್ಥಾನವನ್ನು ಯಾವುದು ಭರ್ತಿಮಾಡಿತು, ಮತ್ತು ಇದು ನಮ್ಮ ಮೇಲೆ ಯಾವ ಪರಿಣಾಮವನ್ನು ತಂದಿದೆ?
5 ಆದರೆ ಏನು ಸಂಭವಿಸಿತು? ಸ್ವಾರ್ಥ ಹೆಬ್ಬಯಕೆಯಿಂದ ಪ್ರಚೋದಿಸಲ್ಪಟ್ಟ ಒಬ್ಬ ದೇವದೂತನು, ತನ್ನ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಿ “ಪ್ರತಿಭಟಕ” ಎಂಬ ಅರ್ಥವಿರುವ ಸೈತಾನನಾದನು. ಅವನು ದೇವರ ಚಿತ್ತಕ್ಕೆ ವ್ಯತಿರಿಕ್ತವಾಗಿರುವ ಒಂದು ವಿಷಯದ ಆಶ್ವಾಸನೆ ಕೊಟ್ಟು ಹವ್ವಳನ್ನು ವಂಚಿಸಿದನು. (ಆದಿಕಾಂಡ 3:4, 5) ದೇವರ ನಿಯಮವನ್ನು ಉಲ್ಲಂಘಿಸುವುದರಲ್ಲಿ ಆದಾಮನು ಹವ್ವಳ ಜೊತೆ ಸೇರಿದನು. ಯಾವುದು ತಮ್ಮದಾಗಿರಲಿಲ್ಲವೊ ಅದನ್ನು ತೆಗೆದುಕೊಂಡಾಗ ಅವರು ತಮ್ಮ ಮಹಿಮಾನ್ವಿತ ಸ್ವಾತಂತ್ರ್ಯವನ್ನು ಕಳೆದುಕೊಂಡರು. ದೇವರು ಈ ಮುಂಚೆಯೇ ಎಚ್ಚರಿಸಿದ್ದಂತೆ, ಪಾಪವು ಅವರ ಯಜಮಾನನಾಗಿ, ಮರಣವು ಅಂತಿಮವಾಗಿ ಅವರನ್ನು ಆಹುತಿ ತೆಗೆದುಕೊಂಡಿತು. ಅವರು ತಮ್ಮ ಸಂತತಿಗೆ ಪಾಪವನ್ನು ಬಾಧ್ಯತೆಯಾಗಿ ದಾಟಿಸಿದರು. ಇದು ಹುಟ್ಟಿನಿಂದಲೇ ತಪ್ಪುಮಾಡುವ ಪ್ರವೃತ್ತಿಯಲ್ಲಿ ತೋರಿಬರುತ್ತದೆ. ಈ ಪಾಪವು ರೋಗ, ವೃದ್ಧಾಪ್ಯ ಮತ್ತು ಮರಣದಲ್ಲಿ ಅಂತ್ಯಗೊಳ್ಳುವ ಬಲಹೀನತೆಗಳನ್ನೂ ಫಲಿಸಿತು. ತಪ್ಪುಮಾಡುವ ಪ್ರವೃತ್ತಿಯು, ಸೈತಾನಿಕ ಪ್ರಭಾವದಿಂದ ಕೆರಳಿಸಲ್ಪಟ್ಟು, ಹಗೆತನ, ಪಾತಕ, ದಬ್ಬಾಳಿಕೆ ಮತ್ತು ಯುದ್ಧಗಳಲ್ಲಿ ಕೋಟ್ಯಂತರ ಜೀವಗಳನ್ನು ಆಹುತಿ ತೆಗೆದುಕೊಂಡಿರುವ ಇತಿಹಾಸವಿರುವಂಥ ಒಂದು ಮಾನವ ಸಮಾಜವನ್ನು ಉಂಟುಮಾಡಿದೆ. ದೇವರು ಆದಿಯಲ್ಲಿ ಮಾನವಕುಲಕ್ಕೆ ಕೊಟ್ಟ ಸ್ವಾತಂತ್ರ್ಯಕ್ಕಿಂತ ಇದು ಎಷ್ಟು ವ್ಯತಿರಿಕ್ತವಾಗಿದೆ!—ಧರ್ಮೋಪದೇಶಕಾಂಡ 32:4, 5; ಯೋಬ 14:1, 2; ರೋಮಾಪುರ 5:12; ಪ್ರಕಟನೆ 12:9.
ಸ್ವಾತಂತ್ರ್ಯವು ಎಲ್ಲಿ ದೊರೆಯುತ್ತದೆ?
6. (ಎ) ನಿಜ ಸ್ವಾತಂತ್ರ್ಯವು ಎಲ್ಲಿ ದೊರೆಯಬಲ್ಲದು? (ಬಿ) ಯೇಸು ಯಾವ ವಿಧದ ಬಿಡುಗಡೆಯ ಕುರಿತು ಮಾತಾಡಿದನು?
6 ಇಂದು ಎಲ್ಲೆಡೆಯೂ ಕಂಡುಬರುವ ಕೆಟ್ಟ ಪರಿಸ್ಥಿತಿಗಳನ್ನು ನೋಡುವಾಗ, ಜನರು ಹೆಚ್ಚು ಸ್ವಾತಂತ್ರ್ಯಕ್ಕಾಗಿ ಹಾರೈಸುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ನಿಜ ಸ್ವಾತಂತ್ರ್ಯವನ್ನು ಎಲ್ಲಿ ಕಂಡುಕೊಳ್ಳಬಹುದು? ಯೇಸು ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) ಈ ಬಿಡುಗಡೆಯು, ಜನರು ಒಬ್ಬ ಅಧಿಕಾರಿಯನ್ನೊ ಒಂದು ವಿಧದ ಸರಕಾರವನ್ನೊ ತಳ್ಳಿಹಾಕಿ ಇನ್ನೊಂದನ್ನು ಆರಿಸಿಕೊಳ್ಳುವಂಥ ರೀತಿಯದ್ದಲ್ಲ. ಬದಲಿಗೆ, ಈ ಬಿಡುಗಡೆಯು ಮಾನವ ಸಮಸ್ಯೆಗಳ ಮೂಲ ಕಾರಣಕ್ಕೆ ಕೈತೋರಿಸುತ್ತದೆ. ಯೇಸು ಇಲ್ಲಿ ಪಾಪದೊಳಗಿನ ದಾಸತ್ವದಿಂದ ಬರುವ ಬಿಡುಗಡೆಯನ್ನು ಚರ್ಚಿಸುತ್ತಿದ್ದನು. (ಯೋಹಾನ 8:24, 34-36) ಆದುದರಿಂದ, ಒಬ್ಬನು ಯೇಸು ಕ್ರಿಸ್ತನ ನಿಜ ಶಿಷ್ಯನಾಗುವಲ್ಲಿ, ಅವನು ತನ್ನ ಜೀವಿತದಲ್ಲಿ ಗಮನಾರ್ಹವಾದ ಬದಲಾವಣೆಯನ್ನು, ಒಂದು ವಿಮೋಚನೆಯನ್ನು ಅನುಭವಿಸುತ್ತಾನೆ!
7. (ಎ)ಈಗ ನಾವು ಯಾವ ಅರ್ಥದಲ್ಲಿ ಪಾಪವಿಮುಕ್ತರಾಗಿದ್ದೇವೆ? (ಬಿ) ಆ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕಾದರೆ ನಾವೇನು ಮಾಡತಕ್ಕದ್ದು?
7 ಇದರ ಅರ್ಥವು, ನಿಜ ಕ್ರೈಸ್ತರು ಈಗ ಪಾಪಕರವಾದ ನಡತೆಯ ಕಡೆಗೆ ಓಲುವ, ಹುಟ್ಟಿನಿಂದ ಬಂದಿರುವ ಪ್ರವೃತ್ತಿಯ ಪರಿಣಾಮಗಳನ್ನು ಅನುಭವಿಸುವುದಿಲ್ಲ ಎಂದಾಗಿಲ್ಲ. ಅವರು ಪಾಪವನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ, ಅವರು ಅದರೊಂದಿಗೆ ಇನ್ನೂ ಹೋರಾಟವನ್ನು ಮಾಡಬೇಕಾಗಿದೆ. (ರೋಮಾಪುರ 7:21-25) ಆದರೆ ಒಬ್ಬ ವ್ಯಕ್ತಿಯು ಯೇಸುವಿನ ಬೋಧನೆಗಳಿಗನುಸಾರ ನಿಜವಾಗಿಯೂ ಜೀವಿಸುವುದಾದರೆ, ಅವನು ಪಾಪಕ್ಕೆ ದಾಸನಾಗಿರುವುದಿಲ್ಲ. ಪಾಪವು ಅವನಿಗೆ, ಯಾವುದೇ ವಿನಾಯಿತಿ ಇಲ್ಲದೆ ಆಜ್ಞೆಗಳಿಗೆ ವಿಧೇಯತೆ ತೋರಿಸಬೇಕೆಂದು ಅಪೇಕ್ಷಿಸುವ ಒಬ್ಬ ಸರ್ವಾಧಿಕಾರಿಯಂತಿರುವುದಿಲ್ಲ. ಉದ್ದೇಶರಹಿತವಾದ ಮತ್ತು ತಪ್ಪಿತಸ್ಥ ಮನಸ್ಸಾಕ್ಷಿಯನ್ನು ಬಿಟ್ಟುಹೋಗುವ ಜೀವನ ರೀತಿಯಲ್ಲಿ ಅವನು ಸಿಕ್ಕಿಬೀಳುವುದಿಲ್ಲ. ಗತ ಪಾಪಗಳು ಕ್ರಿಸ್ತನ ಯಜ್ಞದಲ್ಲಿಟ್ಟ ನಂಬಿಕೆಯ ಮೂಲಕ ಕ್ಷಮಿಸಲ್ಪಟ್ಟಿರುವ ಕಾರಣ ಅವನು ಶುದ್ಧ ಮನಸ್ಸಾಕ್ಷಿಯನ್ನು ಅನುಭವಿಸುವನು. ಪಾಪಪ್ರವೃತ್ತಿಗಳು ಅವನನ್ನು ಪ್ರಭಾವಿಸಲು ತೊಡಗಬಹುದಾದರೂ, ಅವನು ಅವುಗಳ ಪ್ರಭಾವಕ್ಕೆ ಒಳಗಾಗಲು ನಿರಾಕರಿಸುವನು. ಏಕೆಂದರೆ ಕ್ರಿಸ್ತನ ಶುದ್ಧ ಬೋಧನೆಗಳನ್ನು ಅವನು ನೆನಪಿಸಿಕೊಳ್ಳುವುದರಿಂದ, ಪಾಪವು ತನ್ನ ಯಜಮಾನನಲ್ಲವೆಂದು ಅವನು ತೋರಿಸುತ್ತಾನೆ.—ರೋಮಾಪುರ 6:12-17.
8. (ಎ) ಸತ್ಯ ಕ್ರೈಸ್ತತ್ವವು ನಮಗೆ ಯಾವ ಸ್ವಾತಂತ್ರ್ಯಗಳನ್ನು ಕೊಡುತ್ತದೆ? (ಬಿ) ಐಹಿಕ ಅಧಿಕಾರಿಗಳ ಕಡೆಗೆ ನಮ್ಮ ಮನೋಭಾವವೇನಾಗಿರಬೇಕು?
8 ಕ್ರೈಸ್ತರಾದ ನಾವು ಅನುಭವಿಸುವ ಸ್ವಾತಂತ್ರ್ಯಗಳ ಕುರಿತು ಯೋಚಿಸಿರಿ. ಸುಳ್ಳುಬೋಧನೆಗಳ ಪರಿಣಾಮಗಳಿಂದ, ಮೂಢನಂಬಿಕೆಗಳ ದಾಸತ್ವದಿಂದ ಮತ್ತು ಪಾಪಕ್ಕೆ ದಾಸರಾಗಿರುವುದರಿಂದ ನಾವು ವಿಮುಕ್ತರಾಗಿದ್ದೇವೆ. ಮೃತರ ಸ್ಥಿತಿ ಮತ್ತು ಪುನರುತ್ಥಾನದ ಕುರಿತಾದ ಅದ್ಭುತಕರವಾದ ಸತ್ಯಗಳು ನಮ್ಮನ್ನು ಅಸಮಂಜಸವಾದ ಮರಣಭಯದಿಂದ ಬಿಡುಗಡೆಮಾಡಿವೆ. ದೇವರ ನೀತಿಯ ಸರಕಾರವು, ಅಪರಿಪೂರ್ಣ ಮಾನವ ಸರಕಾರಗಳ ಸ್ಥಾನವನ್ನು ತೆಗೆದುಕೊಳ್ಳುವುದು ಎಂಬ ಜ್ಞಾನವು ನಮ್ಮನ್ನು ನಿರೀಕ್ಷಾಹೀನತೆಯಿಂದ ವಿಮೋಚಿಸುತ್ತದೆ. (ದಾನಿಯೇಲ 2:44; ಮತ್ತಾಯ 6:10) ಆದರೆ, ಇಂತಹ ಸ್ವಾತಂತ್ರ್ಯಗಳು ನಾವು ಸರಕಾರೀ ಅಧಿಕಾರಿಗಳಿಗೆ ಮತ್ತು ಅವರ ಕಾನೂನುಗಳಿಗೆ ಅಗೌರವವನ್ನು ತೋರಿಸುವುದನ್ನು ನ್ಯಾಯಸಮ್ಮತವಾಗಿ ಮಾಡುವುದಿಲ್ಲ.—ತೀತ 3:1, 2; 1 ಪೇತ್ರ 2:16, 17.
9. (ಎ) ಈಗ ಮಾನವರಿಗೆ ಸಾಧ್ಯವಿರುವುದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸ್ವಾತಂತ್ರ್ಯವನ್ನು ಅನುಭವಿಸುವಂತೆ ಯೆಹೋವನು ನಮಗೆ ಪ್ರೀತಿಪೂರ್ವಕವಾಗಿ ಹೇಗೆ ಸಹಾಯಮಾಡುತ್ತಾನೆ? (ಬಿ) ನಾವು ವಿವೇಕಯುತ ನಿರ್ಣಯಗಳನ್ನು ಹೇಗೆ ಮಾಡಬಲ್ಲೆವು?
9 ನಾವು ಜೀವಿಸಬೇಕಾದ ಅತ್ಯುತ್ತಮ ವಿಧವನ್ನು ನಾವೇ ಪರೀಕ್ಷೆಮಾಡಿ, ಯಾವುದು ಸರಿ ಯಾವುದು ತಪ್ಪು ಎಂದು ಕಂಡುಹಿಡಿಯುವಂತೆ ಯೆಹೋವನು ಏರ್ಪಡಿಸುವುದಿಲ್ಲ. ನಾವು ಯಾವ ರೀತಿಯಲ್ಲಿ ರಚಿಸಲ್ಪಟ್ಟಿದ್ದೇವೆ, ನಮಗೆ ಯಾವುದು ನಿಜ ಸಂತೃಪ್ತಿಯನ್ನು ತರುತ್ತದೆ ಮತ್ತು ನಮ್ಮ ನಿತ್ಯಪ್ರಯೋಜನಕ್ಕೆ ಏನು ಬೇಕಾಗಿದೆ ಎಂಬುದನ್ನು ಆತನೇ ತಿಳಿದಿದ್ದಾನೆ. ಒಬ್ಬ ವ್ಯಕ್ತಿಗೆ ಆತನೊಂದಿಗಿರುವ ಮತ್ತು ಜೊತೆ ಮಾನವರೊಂದಿಗಿರುವ ಸಂಬಂಧವನ್ನು ಯಾವ ಆಲೋಚನೆಗಳು ಮತ್ತು ವರ್ತನೆಗಳು ಹಾಳುಮಾಡಬಲ್ಲವು ಮತ್ತು ಪ್ರಾಯಶಃ ಆ ವ್ಯಕ್ತಿಯನ್ನು ನೂತನ ಲೋಕಕ್ಕೆ ಪ್ರವೇಶಿಸುವುದರಿಂದಲೂ ತಡೆದು ಹಿಡಿಯಬಲ್ಲವೆಂಬುದು ಆತನಿಗೆ ತಿಳಿದಿದೆ. ಯೆಹೋವನು ಈ ಎಲ್ಲಾ ವಿಷಯಗಳನ್ನು ಬೈಬಲಿನ ಮತ್ತು ಆತನ ಸಂಸ್ಥೆಯ ಮೂಲಕ ಪ್ರೀತಿಪೂರ್ವಕವಾಗಿ ತಿಳಿಯಪಡಿಸುತ್ತಾನೆ. (ಮಾರ್ಕ 13:10; ಗಲಾತ್ಯ 5:19-23; 1 ತಿಮೊಥೆಯ 1:12, 13) ಆ ಬಳಿಕ, ದೇವದತ್ತ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಿ ಅದಕ್ಕೆ ಹೇಗೆ ನಾವು ಪ್ರತಿವರ್ತನೆಯನ್ನು ತೋರಿಸುತ್ತೇವೆಂಬುದು ನಮ್ಮ ಪಾಲಿಗೆ ಬಿಡಲ್ಪಟ್ಟ ವಿಷಯವಾಗಿದೆ. ನಾವು ಬೈಬಲು ಏನು ಹೇಳುತ್ತದೊ ಅದಕ್ಕೆ ಕಿವಿಗೊಡುವುದಾದರೆ, ಆದಾಮನು ಮಾಡಿದಂತೆ ಅವಿವೇಕದ ನಿರ್ಣಯಗಳನ್ನಲ್ಲ, ವಿವೇಕಯುತ ನಿರ್ಣಯಗಳನ್ನು ಮಾಡುವೆವು. ಆಗ ನಾವು ನಮ್ಮ ಜೀವನದ ಪ್ರಮುಖ ಧ್ಯೇಯವು ಯೆಹೋವನೊಂದಿಗೆ ಮಾಡಿಕೊಳ್ಳುವ ಸುಸಂಬಂಧವೇ ಎಂಬುದನ್ನು ತೋರಿಸುವೆವು.
ಇನ್ನೊಂದು ವಿಧದ ಸ್ವಾತಂತ್ರ್ಯವನ್ನು ಅಪೇಕ್ಷಿಸುವುದು
10. ಯೆಹೋವನ ಸಾಕ್ಷಿಗಳಾಗಿರುವ ಕೆಲವರು ಯಾವ ವಿಧದ ಸ್ವಾತಂತ್ರ್ಯವನ್ನು ಅಪೇಕ್ಷಿಸಿದ್ದಾರೆ?
10 ಕೆಲವೊಮ್ಮೆ, ಯೆಹೋವನ ಸಾಕ್ಷಿಗಳಲ್ಲಿ ಯುವ ಜನರು ಹಾಗೂ ವಯಸ್ಕರು ತಮಗೆ ಇನ್ನೊಂದು ವಿಧದ ಸ್ವಾತಂತ್ರ್ಯವು ಬೇಕೆಂದು ನೆನಸಬಹುದು. ಲೋಕವು ಆಕರ್ಷಕವಾಗಿ ಕಂಡುಬರುವಾಗ, ಅವರು ಅದರ ಕುರಿತು ಚಿಂತಿಸಿದಷ್ಟಕ್ಕೆ, ಲೋಕಪ್ರಿಯವಾಗಿರುವ ಅಕ್ರೈಸ್ತ ವಿಷಯಗಳನ್ನು ಮಾಡುವ ಅಪೇಕ್ಷೆಯು ಅವರಲ್ಲಿ ಹೆಚ್ಚು ಪ್ರಬಲವಾಗುತ್ತದೆ. ಇಂಥವರು ಅಮಲೌಷಧವನ್ನು ದುರುಪಯೋಗಿಸಲಿಕ್ಕಿಲ್ಲ, ವಿಪರೀತ ಕುಡಿಯುವವರಾಗಿರಲಿಕ್ಕಿಲ್ಲ ಅಥವಾ ಜಾರತ್ವದಲ್ಲಿ ತೊಡಗಲು ಯೋಜಿಸಲಿಕ್ಕಿಲ್ಲ. ಆದರೆ ಸತ್ಯ ಕ್ರೈಸ್ತರಲ್ಲದವರೊಂದಿಗೆ ಅವರು ಸಹವಾಸಿಸಿ, ಅವರಿಂದ ಅಂಗೀಕರಿಸಲ್ಪಡಲು ಬಯಸಬಹುದು. ಅವರ ನಡೆನುಡಿಗಳನ್ನೂ ಅವರು ಅನುಕರಿಸತೊಡಗಬಹುದು.—3 ಯೋಹಾನ 11.
11. ಕೆಲವು ಸಲ ದುಷ್ಪ್ರೇರಣೆಗಳು ಎಲ್ಲಿಂದ ಬರುತ್ತವೆ?
11 ಕೆಲವೊಮ್ಮೆ ಅಕ್ರೈಸ್ತ ನಡತೆಯಲ್ಲಿ ಒಳಗೂಡುವ ದುಷ್ಪ್ರೇರಣೆಯು ಯೆಹೋವನ ಸೇವಕರೆಂದು ಹೇಳಿಕೊಳ್ಳುವವರಿಂದಲೂ ಬರುತ್ತದೆ. ಆದಿಕ್ರೈಸ್ತರಲ್ಲಿ ಕೆಲವರು ಹಾಗೆ ಮಾಡಿರುವುದರಿಂದ ನಮ್ಮ ದಿನಗಳಲ್ಲಿಯೂ ಹಾಗೆ ನಡೆಯುವ ಸಾಧ್ಯತೆಯಿದೆ. ಇಂತಹ ಜನರು, ಅನೇಕವೇಳೆ ತಮಗೆ ಸುಖಾನುಭವವನ್ನು ತರುತ್ತವೆಂದು ನೆನಸುವ ಆದರೆ ದೇವರ ನಿಯಮಗಳಿಗೆ ವಿರುದ್ಧವಾಗಿರುವ ಸಂಗತಿಗಳನ್ನು ಮಾಡಬಯಸುತ್ತಾರೆ. “ಮಜಾ” ಮಾಡುವುದರಲ್ಲಿ ಭಾಗವಹಿಸುವಂತೆ ಅವರು ಇತರರನ್ನು ಪ್ರೋತ್ಸಾಹಿಸುತ್ತಾರೆ. “ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ, ಆದರೆ ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ.”—2 ಪೇತ್ರ 2:19.
12. ದೇವರ ನಿಯಮ ಮತ್ತು ಮೂಲತತ್ತ್ವಗಳಿಗೆ ವ್ಯತಿರಿಕ್ತವಾದ ನಡತೆಯಿಂದ ಬರುವ ಶೋಚನೀಯ ಪರಿಣಾಮಗಳಾವುವು?
12 ಇಂತಹ ಸ್ವಾತಂತ್ರ್ಯವೆಂದು ಕರೆಯಲ್ಪಡುವ, ಆದರೆ ದೇವರ ನಿಯಮಗಳಿಗೆ ಅವಿಧೇಯತೆ ತೋರಿಸುವ ವಿಷಯಗಳ ಪರಿಣಾಮವು ಮಾತ್ರ ಯಾವಾಗಲೂ ಕೆಟ್ಟದ್ದಾಗಿರುತ್ತದೆ. ದೃಷ್ಟಾಂತಕ್ಕೆ, ನಿಷಿದ್ಧ ಕಾಮದಿಂದ ಮನೋವಿಕಾರ, ರೋಗ, ಮರಣ, ಅನಪೇಕ್ಷಿತ ಗರ್ಭಧಾರಣೆ ಮತ್ತು ಒಂದು ವಿವಾಹಬಂಧವೂ ಮುರಿಯಲ್ಪಡುವ ಸಾಧ್ಯತೆ ಇದೆ. (1 ಕೊರಿಂಥ 6:18; 1 ಥೆಸಲೊನೀಕ 4:3-8) ಅಮಲೌಷಧದ ದುರುಪಯೋಗವು ಶೀಘ್ರಕೋಪ, ಮಾತಿನ ತೇಲುಚ್ಚಾರ, ಮಬ್ಬು ದೃಷ್ಟಿ, ತಲೆ ತಿರುಗುವಿಕೆ, ಉಸಿರಾಡುವುದರಲ್ಲಿ ಸಮಸ್ಯೆ, ಭ್ರಾಂತಿ ಮತ್ತು ಮರಣವನ್ನು ತರಬಲ್ಲದು. ಇದರಿಂದ ಚಟ ಹಿಡಿಯಸಾಧ್ಯವಿರುವುದರಿಂದ, ಈ ಚಟವನ್ನು ಮುಂದುವರಿಸುವ ಉದ್ದೇಶವು ಒಬ್ಬನನ್ನು ಪಾತಕಕ್ಕೆ ಇಳಿಸಬಹುದು. ಹೆಚ್ಚು ಕಡಮೆ ಇದೇ ರೀತಿಯ ಪರಿಣಾಮಗಳು ಮದ್ಯದ ದುರುಪಯೋಗದಿಂದಲೂ ಬರುತ್ತವೆ. (ಜ್ಞಾನೋಕ್ತಿ 23:29-35) ಇಂತಹ ರೀತಿಯ ನಡತೆಯುಳ್ಳವರು, ತಾವು ಸ್ವತಂತ್ರರೆಂದು ನೆನಸಬಹುದಾದರೂ ಪಾಪದ ದಾಸರೆಂದು ಕಂಡುಹಿಡಿಯುವಷ್ಟರೊಳಗೆ ಪರಿಸ್ಥಿತಿಯು ಹತೋಟಿ ಮೀರಿರುತ್ತದೆ. ಮತ್ತು ಪಾಪವು ಕ್ರೂರಿಯಾದ ಯಜಮಾನ ಎಂಬುದರಲ್ಲಿ ಸಂಶಯವಿಲ್ಲ! ಆದುದರಿಂದ ಈಗಲೇ ಈ ವಿಷಯದಲ್ಲಿ ನ್ಯಾಯಬದ್ಧವಾಗಿ ತರ್ಕಿಸುವುದರಿಂದ, ಅಂತಹ ಅನುಭವವಾಗುವಲ್ಲಿ ಅದರಿಂದ ನಮ್ಮನ್ನು ಕಾಪಾಡಿಕೊಳ್ಳಲು ಸಹಾಯ ದೊರೆಯಬಲ್ಲದು.—ಗಲಾತ್ಯ 6:7, 8.
ಸಮಸ್ಯೆಗಳು ಎಲ್ಲಿ ಪ್ರಾರಂಭವಾಗುತ್ತವೆ?
13. (ಎ) ಸಮಸ್ಯೆಗಳಿಗೆ ನಡೆಸುವ ಆಶಾಪಾಶಗಳು ಅನೇಕವೇಳೆ ಹೇಗೆ ಉದ್ರೇಕಿಸಲ್ಪಡುತ್ತವೆ? (ಬಿ) “ದುಸ್ಸಹವಾಸ” ಏನೆಂದು ತಿಳಿಯಲು, ಯಾರ ದೃಷ್ಟಿಕೋನವು ನಮಗೆ ಅಗತ್ಯ? (ಸಿ) ಪರಿಚ್ಛೇದ 13ರಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳಿಗೆ ಉತ್ತರ ಕೊಡುವಾಗ, ಯೆಹೋವನ ದೃಷ್ಟಿಕೋನವನ್ನು ಒತ್ತಿಹೇಳಿರಿ.
13 ಸಮಸ್ಯೆಗಳು ಅನೇಕವೇಳೆ ಎಲ್ಲಿ ಪ್ರಾರಂಭವಾಗುತ್ತವೆಂಬುದರ ಬಗ್ಗೆ ಯೋಚಿಸಿರಿ. ಬೈಬಲು ವಿವರಿಸುವುದು: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” (ಯಾಕೋಬ 1:14, 15) ಈ ಆಶಾಪಾಶ ಹೇಗೆ ಉದ್ರೇಕಿಸಲ್ಪಡುತ್ತದೆ? ನಮ್ಮ ಮನಸ್ಸಿನೊಳಗೆ ಏನು ಹೋಗುತ್ತದೊ ಅದರಿಂದಲೇ. ಅನೇಕವೇಳೆ ಇದಕ್ಕೆ ಕಾರಣವು ಬೈಬಲ್ ಮೂಲತತ್ತ್ವಗಳನ್ನು ಕಾರ್ಯರೂಪಕ್ಕೆ ಹಾಕದವರೊಂದಿಗೆ ಮಾಡುವ ಒಡನಾಟವೇ. “ದುಸ್ಸಹವಾಸ”ದಿಂದ ದೂರವಿರಬೇಕೆಂಬುದು ನಮಗೆಲ್ಲರಿಗೂ ತಿಳಿದದೆ ನಿಶ್ಚಯ. (1 ಕೊರಿಂಥ 15:33) ಆದರೆ ದುಸ್ಸಹವಾಸಗಳು ಯಾವುವು? ಯೆಹೋವನು ಅದನ್ನು ಹೇಗೆ ವೀಕ್ಷಿಸುತ್ತಾನೆ? ಈ ಕೆಳಗಿನ ಪ್ರಶ್ನೆಗಳ ಕುರಿತು ತರ್ಕಿಸಿ, ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ತೆರೆದು ನೋಡುವುದು ನಾವು ಸರಿಯಾದ ತೀರ್ಮಾನಕ್ಕೆ ಬರುವಂತೆ ನಮಗೆ ಸಹಾಯಮಾಡಬಲ್ಲದು.
ಕೆಲವರು ಗೌರವಾರ್ಹರೆಂದು ತೋರಿಬರುತ್ತಾರೆಂಬ ನಿಜತ್ವವು ಅವರು ಒಳ್ಳೆಯ ಸಹವಾಸಕ್ಕೆ ಯೋಗ್ಯರೆಂದು ಅರ್ಥವೊ? (ಆದಿಕಾಂಡ 34:1, 2, 18, 19)
ಅವರ ಸಂಭಾಷಣೆ, ಅವರ ಕುಚೇಷ್ಟೆಯ ನುಡಿಗಳು, ನಾವು ಅವರ ಸಮೀಪದ ಒಡನಾಡಿಗಳಾಗಿರಬೇಕೆಂದು ಸೂಚಿಸುತ್ತವೊ? (ಎಫೆಸ 5:3, 4)
ತನ್ನನ್ನು ಪ್ರೀತಿಸದಿರುವವರೊಂದಿಗೆ ಆಪ್ತ ಗೆಳೆತನವನ್ನು ಆರಿಸಿಕೊಳ್ಳುವುದು ಯೆಹೋವನಿಗೆ ಹೇಗನಿಸುತ್ತದೆ? (2 ಪೂರ್ವಕಾಲವೃತ್ತಾಂತ 19:1, 2)
ನಮ್ಮ ನಂಬಿಕೆಗಳಲ್ಲಿ ಪಾಲಿಗರಾಗದಿರುವಂಥ ಜನರೊಂದಿಗೆ ನಾವು ಕೆಲಸಕ್ಕೊ ಶಾಲೆಗೊ ಹೋಗಬಹುದಾದರೂ, ಇದರ ವಿಷಯದಲ್ಲಿ ಜಾಗರೂಕತೆಯ ಅಗತ್ಯ ಏಕಿದೆ? (1 ಪೇತ್ರ 4:3, 4)
ಟಿವಿ ಮತ್ತು ಚಲನಚಿತ್ರಗಳನ್ನು ನೋಡುವುದು, ಇಂಟರ್‌ನೆಟ್ ಉಪಯೋಗಿಸುವುದು, ಪುಸ್ತಕ, ಪತ್ರಿಕೆ ಮತ್ತು ವಾರ್ತಾಪತ್ರಿಕೆಗಳನ್ನು ಓದುವುದು—ಇವೆಲ್ಲ ಇತರರೊಂದಿಗೆ ಜೊತೆಗೂಡುವ ವಿಧಗಳಾಗಿವೆ. ಇವುಗಳ ಮೂಲದಿಂದ ಬರುವ ಯಾವ ವಿಧದ ಸಂಗತಿಗಳ ವಿಷಯದಲ್ಲಿ ನಾವು ಎಚ್ಚರವಾಗಿರುವುದು ಆವಶ್ಯಕ? (ಜ್ಞಾನೋಕ್ತಿ 3:31; ಯೆಶಾಯ 8:19; ಎಫೆಸ 4:17-19)
ನಾವು ಮಾಡುವ ಒಡನಾಡಿಗಳ ಆಯ್ಕೆಯು, ನಾವು ಯಾವ ವಿಧದ ಜನರೆಂಬುದರ ಬಗ್ಗೆ ಯೆಹೋವನಿಗೆ ಏನನ್ನು ತಿಳಿಸುತ್ತದೆ? (ಕೀರ್ತನೆ 26:1, 4, 5; 97:10)
14. ದೇವರ ವಾಕ್ಯದ ಸಲಹೆಯನ್ನು ಈಗ ನಂಬಿಗಸ್ತಿಕೆಯಿಂದ ಅನ್ವಯಿಸುವವರಿಗೆ ಯಾವ ಮಹಾ ಬಿಡುಗಡೆಯು ಮುಂದಿದೆ?
14 ದೇವರ ನೂತನ ಲೋಕವು ಇನ್ನೇನು ನಮ್ಮ ಮುಂದೆಯೇ ಇದೆ. ದೇವರ ಸ್ವರ್ಗಿಯ ರಾಜ್ಯ ಸರಕಾರವು, ಸೈತಾನನ ಮತ್ತು ಅವನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಯ ಪ್ರಭಾವದಿಂದ ಮಾನವಕುಲವನ್ನು ಬಿಡುಗಡೆಮಾಡುವುದು. ಕ್ರಮೇಣ, ಪಾಪದ ದುಷ್ಪರಿಣಾಮಗಳನ್ನೆಲ್ಲಾ ವಿಧೇಯ ಮಾನವಕುಲದಿಂದ ತೆಗೆದುಬಿಡಲಾಗುವುದು. ಮತ್ತು ನಾವು ಪರದೈಸಿನಲ್ಲಿ ನಿತ್ಯಜೀವವನ್ನು ಅನುಭವಿಸಲು ಶಕ್ತರಾಗುವಂತೆ ನಮ್ಮ ತನುಮನಗಳೂ ಪರಿಪೂರ್ಣತೆಯನ್ನು ಪಡೆಯುವವು. ಅಂತಿಮವಾಗಿ ಸೃಷ್ಟಿಯೆಲ್ಲವೂ, “ಯೆಹೋವನ ಆತ್ಮ”ಕ್ಕೆ ಪೂರ್ತಿ ಹೊಂದಿಕೆಯಲ್ಲಿರುವ ಸ್ವಾತಂತ್ರ್ಯವನ್ನು ಅನುಭವಿಸುವುದು. (2 ಕೊರಿಂಥ 3:17, NW) ಹಾಗಿರುವಾಗ, ದೇವರ ವಾಕ್ಯದ ಸಲಹೆಯನ್ನು ಅಲಕ್ಷಿಸುವುದರಿಂದ ಇವೆಲ್ಲವನ್ನೂ ಕಳೆದುಕೊಳ್ಳುವ ಅಪಾಯದಲ್ಲಿರುವುದು ವಿವೇಕಪೂರ್ಣವೊ? ಇಂದು ನಮ್ಮ ಕ್ರೈಸ್ತ ಸ್ವಾತಂತ್ರ್ಯವನ್ನು ವಿವೇಕದಿಂದ ಉಪಯೋಗಿಸುತ್ತಾ, ನಮಗೆ ನಿಜವಾಗಿಯೂ ಬೇಕಾಗಿರುವುದು, “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ” ಎಂಬುದನ್ನು ನಾವು ಸ್ಪಷ್ಟವಾಗಿ ತೋರಿಸೋಣ.—ರೋಮಾಪುರ 8:21.
ಪುನರ್ವಿಮರ್ಶೆಯ ಚರ್ಚೆ
• ಪ್ರಥಮ ಮಾನವ ಜೊತೆಯು ಯಾವ ರೀತಿಯ ಸ್ವಾತಂತ್ರ್ಯವನ್ನು ಅನುಭವಿಸಿತು? ಇಂದು ಮಾನವಕುಲವು ಅನುಭವಿಸುತ್ತಿರುವುದರೊಂದಿಗೆ ಅದು ಹೇಗೆ ಹೋಲುತ್ತದೆ?
• ನಿಜಕ್ರೈಸ್ತರಿಗೆ ಯಾವ ಸ್ವಾತಂತ್ರ್ಯವಿದೆ? ಇದಕ್ಕೂ ಲೋಕವು ಯಾವುದನ್ನು ಸ್ವಾತಂತ್ರ್ಯವೆಂದೆಣಿಸುತ್ತದೊ ಅದಕ್ಕೂ ಇರುವ ಪರಸ್ಪರ ವ್ಯತ್ಯಾಸವೇನು?
• ದುಸ್ಸಹವಾಸಗಳನ್ನು ತ್ಯಜಿಸುವುದು ಅಷ್ಟೊಂದು ಪ್ರಾಮುಖ್ಯವೇಕೆ? ಆದಾಮನು ಮಾಡಿದ್ದಕ್ಕೆ ವ್ಯತಿರಿಕ್ತವಾಗಿ, ಕೆಟ್ಟದ್ದು ಇದೇ ಎಂಬ ವಿಷಯದಲ್ಲಿ ಯಾರ ನಿರ್ಣಯಗಳನ್ನು ನಾವು ಅಂಗೀಕರಿಸುತ್ತೇವೆ?
[ಪುಟ 46ರಲ್ಲಿರುವ ಚಿತ್ರಗಳು]
ದೇವರ ವಾಕ್ಯವು ಎಚ್ಚರಿಸುವುದು: “ಮೋಸಹೋಗಬೇಡಿರಿ. ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ”