ನೀವು ಸಮಯವನ್ನು ಉಪಯೋಗಿಸುವ ರೀತಿಯ ಮೇಲೆ ಕಟ್ಟುನಿಟ್ಟಾದ ನಿಗಾವನ್ನಿಡಿರಿ
1. ಎಲ್ಲೆಡೆಯೂ ಇರುವ ಜನರು ಇಂದು ಯಾವ ಪಂಥಾಹ್ವಾನವನ್ನು ಎದುರಿಸುತ್ತಿದ್ದಾರೆ?
1 ಸಮಯ ಮತ್ತು ಶ್ರಮವನ್ನು ಕಡಿಮೆಗೊಳಿಸಲಿಕ್ಕಾಗಿ ಯಂತ್ರಸಾಮಗ್ರಿಗಳನ್ನು ಉಪಯೋಗಿಸುವ ಈ ಯುಗದಲ್ಲಿ, ಅನೇಕರಿಗೆ ಹೆಚ್ಚು ವಿಷಯಗಳನ್ನು ಮಾಡಲಿಕ್ಕಿರುವುದಾದರೂ ಅವುಗಳನ್ನು ಮಾಡಲು ಸ್ವಲ್ಪವೇ ಸಮಯವಿರುತ್ತದೆ. ನೀವು ಒಂದು ಒಳ್ಳೆಯ ಆತ್ಮಿಕ ನಿಯತಕ್ರಮವನ್ನಿಟ್ಟುಕೊಳ್ಳುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತೀರೋ? ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ವ್ಯಯಿಸಲು ಸಾಧ್ಯವಿದ್ದರೆ ಒಳ್ಳೇದಿತ್ತೆಂದು ನಿಮಗೆ ಅನಿಸುತ್ತದೋ? ನಮ್ಮ ಸಮಯವನ್ನು ನಾವು ಹೇಗೆ ಸದ್ವಿನಿಯೋಗಿಸಬಲ್ಲೆವು?—ಕೀರ್ತ. 90:12; ಫಿಲಿ. 1:9-11.
2, 3. ಮಾಹಿತಿ ತಂತ್ರಜ್ಞಾನವು ಯಾವ ಪಂಥಾಹ್ವಾನವನ್ನೊಡ್ಡುತ್ತದೆ, ಮತ್ತು ನಮ್ಮಲ್ಲಿ ಪ್ರತಿಯೊಬ್ಬರು ಸ್ವ-ಪರಿಶೀಲನೆಯನ್ನು ಹೇಗೆ ಮಾಡಸಾಧ್ಯವಿದೆ?
2 ಸಮಯವನ್ನು ಪೋಲುಮಾಡುವ ವಿಷಯಗಳನ್ನು ಗುರುತಿಸಿರಿ: ನಾವೆಲ್ಲರೂ ನಮ್ಮ ಸಮಯವನ್ನು ಹೇಗೆ ಉಪಯೋಗಿಸುತ್ತೇವೆಂಬುದನ್ನು ಆಗಿಂದಾಗ್ಗೆ ಪರಿಶೀಲಿಸಿ ನೋಡಬೇಕು. ಬೈಬಲು ಉತ್ತೇಜಿಸುವುದು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” (ಎಫೆ. 5:15, 16) ಮಾಹಿತಿ ತಂತ್ರಜ್ಞಾನದಿಂದ ಒಡ್ಡಲ್ಪಡುವ ಪಂಥಾಹ್ವಾನಗಳನ್ನು ಪರಿಗಣಿಸಿರಿ. ಕಂಪ್ಯೂಟರ್ ಮತ್ತು ಇನ್ನಿತರ ಇಲೆಕ್ಟ್ರಾನಿಕ್ ಯಂತ್ರಸಾಮಗ್ರಿಗಳಿಂದ ನ್ಯಾಯೋಚಿತವಾದ ಉಪಯೋಗಗಳಿವೆಯಾದರೂ, ನಾವು ನಮ್ಮ ಸಮಯವನ್ನು ಉಪಯೋಗಿಸುವ ರೀತಿಯ ಮೇಲೆ ಕಟ್ಟುನಿಟ್ಟಾದ ನಿಗಾವನ್ನಿಡದಿದ್ದರೆ ಅವು ಒಂದು ಪಾಶವಾಗಿ ಪರಿಣಮಿಸಬಹುದು.—1 ಕೊರಿಂ. 7:29, 31.
3 ನಮ್ಮಲ್ಲಿ ಪ್ರತಿಯೊಬ್ಬನು ಹೀಗೆ ಕೇಳಿಕೊಳ್ಳಬೇಕು: ‘ಯಾವ ಪ್ರಯೋಜನಕ್ಕೂ ಬಾರದ ಇ-ಮೇಲ್ ಸಂದೇಶಗಳನ್ನು ಓದುತ್ತಾ ಅವುಗಳಿಗೆ ಉತ್ತರಗಳನ್ನು ಕಳುಹಿಸುತ್ತಾ ನಾನು ಪ್ರತಿ ದಿನ ಸಮಯ ಕಳೆಯುತ್ತೇನೋ? ನಾನು ಅನೇಕಾವರ್ತಿ ಟೆಲಿಫೋನ್ ಕರೆಗಳನ್ನು ಮಾಡುವುದರಲ್ಲಿ ಅಥವಾ ಅತ್ಯಲ್ಪವಾದ ವಿಷಯಗಳ ಕುರಿತು ಅಕ್ಷರ ರೂಪದ ಸಂದೇಶಗಳನ್ನು ಕಳುಹಿಸುವುದರಲ್ಲಿ ಮುಳುಗಿದ್ದೇನೋ? (1 ತಿಮೊ. 5:13) ನಾನು ಯಾವುದೇ ಉದ್ದೇಶವಿಲ್ಲದೆ ಇಂಟರ್ನೆಟ್ನಲ್ಲಿ ಕೈಯಾಡಿಸುತ್ತಿದ್ದೇನೋ ಅಥವಾ ಟಿವಿಯನ್ನು ನೋಡುತ್ತಿರುವಾಗ ಗೊತ್ತುಗುರಿಯಿಲ್ಲದೆ ಒಂದರಿಂದ ಮತ್ತೊಂದು ಚ್ಯಾನಲ್ಗೆ ಬದಲಾಯಿಸುತ್ತಾ ಇರುತ್ತೇನೋ? ಇಲೆಕ್ಟ್ರಾನಿಕ್ ಆಟಗಳಲ್ಲಿ ತಲ್ಲೀನನಾಗಿರುವುದು ನಾನು ದೇವರ ವಾಕ್ಯದ ಅಧ್ಯಯನದಲ್ಲಿ ವ್ಯಯಿಸಬೇಕಾದ ಸಮಯವನ್ನು ಕಬಳಿಸುತ್ತಿದೆಯೋ?’ ಇಂತಹ ಬೆನ್ನಟ್ಟುವಿಕೆಗಳು ನಮ್ಮ ಆತ್ಮಿಕ ಕ್ಷೇಮವನ್ನು ಮರೆಯಲ್ಲಿದ್ದುಕೊಂಡು ಹಾಳುಗೆಡವಬಲ್ಲವು.—ಜ್ಞಾನೋ. 12:11.
4. ಒಬ್ಬ ಯುವಕನು ಯಾವ ಸರಿಪಡಿಸುವಿಕೆಯನ್ನು ಮಾಡಿದನು, ಮತ್ತು ಏಕೆ?
4 ಸಮಯವನ್ನು ಜ್ಞಾನದಿಂದ ಉಪಯೋಗಿಸುವುದು: ಇಲೆಕ್ಟ್ರಾನಿಕ್ ಯಂತ್ರಸಾಮಗ್ರಿಗಳು ನಮ್ಮ ಸಮಯ ಮತ್ತು ಗಮನವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತವೆ. ಕಂಪ್ಯೂಟರ್ ಆಟಗಳಲ್ಲಿ ತೀರ ತಲ್ಲೀನನಾಗಿದ್ದ ಒಬ್ಬ ಯುವಕನು ಒಪ್ಪಿಕೊಳ್ಳುವುದು: “ನಾನು ಕೆಲವೊಮ್ಮೆ ಶುಶ್ರೂಷೆ ಅಥವಾ ಒಂದು ಕ್ರೈಸ್ತ ಕೂಟಕ್ಕೆ ಮುಂಚೆ ಆಟವಾಡಿ ಹೋಗುವುದಾದರೆ, ನನಗೆ ಗಮನವನ್ನು ಕೇಂದ್ರೀಕರಿಸಲು ತುಂಬ ಕಷ್ಟವಾಗುತ್ತಿತ್ತು. ಮನೆಗೆ ಹಿಂದಿರುಗಿದ ಮೇಲೆ ಒಂದು ನಿರ್ದಿಷ್ಟ ಆಟವನ್ನು ಹೇಗೆ ಉತ್ತಮವಾಗಿ ಆಡಬಹುದು ಎಂಬುದರ ಕುರಿತಾಗಿಯೇ ನಾನು ಹೆಚ್ಚುಕಡಿಮೆ ಯಾವಾಗಲೂ ಚಿಂತಿಸುತ್ತಿರುತ್ತಿದ್ದೆ. ನನ್ನ ವೈಯಕ್ತಿಕ ಅಧ್ಯಯನ ಮತ್ತು ಕ್ರಮದ ಬೈಬಲ್ ವಾಚನವು ಇದರಿಂದ ಬಾಧಿಸಲ್ಪಟ್ಟಿತು. ದೇವರನ್ನು ಸೇವಿಸುವುದರಲ್ಲಿನ ನನ್ನ ಆನಂದವು ಕುಂದುತ್ತಾ ಹೋಯಿತು.” ತಾನು ಬದಲಾವಣೆಗಳನ್ನು ಮಾಡುವ ಅಗತ್ಯವಿದೆ ಎಂಬುದನ್ನು ಮನಗಂಡವನಾಗಿ ಅವನು ಎಲ್ಲಾ ಕಂಪ್ಯೂಟರ್ ಆಟಗಳನ್ನು ಡಿಲೀಟ್ ಮಾಡಿಬಿಟ್ಟನು. “ಹಾಗೆ ಮಾಡುವುದು ತುಂಬ ಕಷ್ಟಕರವಾಗಿತ್ತು,” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. “ನಾನು ಆ ಆಟಗಳೊಂದಿಗೆ ಊಹಿಸಿದ್ದಕ್ಕಿಂತ ಹೆಚ್ಚಾಗಿ ಅಂಟಿಕೆಯನ್ನು ಬೆಳೆಸಿಕೊಂಡಿದ್ದೆ. ಆದರೆ ಅದೇ ಸಮಯದಲ್ಲಿ ನಾನು ಜಯಗಳಿಸಿದ್ದೇನೆ ಎಂಬ ಭಾವನೆಯೂ ನನ್ನಲ್ಲಿ ಮೂಡಿತು, ಏಕೆಂದರೆ ನಾನು ಇದನ್ನು ನನ್ನ ಒಳಿತಿಗಾಗಿಯೇ ಮಾಡಿದ್ದೇನೆಂಬುದು ನನಗೆ ಗೊತ್ತಿತ್ತು.”—ಮತ್ತಾ. 5:29, 30.
5. ನಾವು ಆತ್ಮಿಕ ಚಟುವಟಿಕೆಗಳಿಗಾಗಿ ಹೇಗೆ ಸಮಯವನ್ನು ಖರೀದಿಸಬಲ್ಲೆವು, ಮತ್ತು ಹೀಗೆ ಮಾಡುವುದರಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುವೆವು?
5 ನೀವು ಕೆಲವೊಂದು ಕ್ಷೇತ್ರಗಳಲ್ಲಿ ಸರಿಪಡಿಸುವಿಕೆಗಳನ್ನು ಮಾಡಲಿಕ್ಕಿರುವುದಾದರೆ ಈ ರೀತಿಯ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿರಬಹುದು. ನೀವು ಪ್ರತಿ ದಿನ ಅನಗತ್ಯವಾದ ಚಟುವಟಿಕೆಗಳಿಂದ ಅರ್ಧ ತಾಸನ್ನು ಖರೀದಿಸಬಲ್ಲಿರೋ? ಒಂದು ವರ್ಷದಲ್ಲಿ ಇಡೀ ಬೈಬಲನ್ನು ಓದಿ ಮುಗಿಸಲಿಕ್ಕಾಗಿ ಬೇಕಾಗಿರುವುದು ಹೆಚ್ಚುಕಡಿಮೆ ಅಷ್ಟು ಸಮಯ ಮಾತ್ರವೇ. ಆತ್ಮಿಕವಾಗಿ ಅದೆಷ್ಟು ಪ್ರತಿಫಲದಾಯಕವಾಗಿರುವುದು! (ಕೀರ್ತ. 19:7-11; 119:97-100) ಬೈಬಲ್ ವಾಚನಕ್ಕೆ, ಕೂಟದ ತಯಾರಿಗೆ, ಮತ್ತು ಕ್ಷೇತ್ರ ಸೇವೆಗಾಗಿ ನಿರ್ದಿಷ್ಟ ಸಮಯಗಳನ್ನು ಗೊತ್ತುಪಡಿಸಿರಿ. (1 ಕೊರಿಂ. 15:58) ಹೀಗೆ ಮಾಡುವುದು, ಸಮಯವನ್ನು ಪೋಲುಮಾಡುವ ವಿಷಯಗಳ ಮೇಲೆ ಹತೋಟಿಯನ್ನಿಟ್ಟುಕೊಳ್ಳಲು ನೆರವಾಗುವುದು ಮತ್ತು ‘ಕರ್ತನ [“ಯೆಹೋವನ,” NW] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರಲು’ ನಿಮಗೆ ಸಹಾಯಮಾಡುವುದು.—ಎಫೆ. 5:17.