ಅಧ್ಯಾಯ 48
ತರ್ಕಸಮ್ಮತವಾಗಿ ಮಾತಾಡುವ ರೀತಿ
ದೇವರ ವಾಕ್ಯವು ನಮ್ಮ ಜೀವಿತಗಳಲ್ಲಿ ಮಾಡಿರುವ ಬದಲಾವಣೆಗಳಿಗಾಗಿ ನಾವು ಆಭಾರಿಗಳಾಗಿದ್ದೇವೆ ಮತ್ತು ಇದರಿಂದ ಇತರರೂ ಪ್ರಯೋಜನ ಪಡೆಯಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ಇದಲ್ಲದೆ, ಜನರು ಸುವಾರ್ತೆಗೆ ಹೇಗೆ ಪ್ರತಿವರ್ತನೆ ತೋರಿಸುತ್ತಾರೆ ಎಂಬುದು, ಅವರ ಭಾವೀ ಪ್ರತೀಕ್ಷೆಗಳ ಮೇಲೆ ಪ್ರಭಾವ ಬೀರುತ್ತದೆಂಬುದು ನಮಗೆ ಗೊತ್ತು. (ಮತ್ತಾ. 7:13, 14; ಯೋಹಾ. 12:48) ಅವರು ಸತ್ಯವನ್ನು ಅಂಗೀಕರಿಸಬೇಕೆಂಬುದು ನಮ್ಮ ಶ್ರದ್ಧಾಪೂರ್ವಕವಾದ ಬಯಕೆಯಾಗಿದೆ. ಆದರೂ, ನಮ್ಮ ಬಲವಾದ ನಿಶ್ಚಿತಾಭಿಪ್ರಾಯಗಳೂ ಹುರುಪೂ ಅತಿ ಹೆಚ್ಚು ಒಳಿತನ್ನು ಮಾಡಬೇಕಾದರೆ, ಅವುಗಳಿಗೆ ವಿವೇಚನಾಶಕ್ತಿಯನ್ನು ಕೂಡಿಸುವ ಅಗತ್ಯವಿದೆ.
ಒಬ್ಬ ವ್ಯಕ್ತಿಯು ಅಮೂಲ್ಯವೆಂದೆಣಿಸುವಂಥ ಒಂದು ನಂಬಿಕೆಯನ್ನು ನಿರ್ದಾಕ್ಷಿಣ್ಯವಾಗಿ ಸುಳ್ಳೆಂದು ಬಯಲುಪಡಿಸುವ ಸತ್ಯದ ನೇರವಾದ ಹೇಳಿಕೆಯು—ಅದಕ್ಕೆ ಆಧಾರವಾಗಿ ಶಾಸ್ತ್ರವಚನಗಳ ಉದ್ದ ಪಟ್ಟಿಯೇ ಒದಗಿಸಲ್ಪಟ್ಟರೂ—ಸಾಮಾನ್ಯವಾಗಿ ಒಳ್ಳೇ ರೀತಿಯಲ್ಲಿ ಅಂಗೀಕರಿಸಲ್ಪಡುವುದಿಲ್ಲ. ಉದಾಹರಣೆಗೆ, ಜನಪ್ರಿಯವಾದ ಆಚರಣೆಗಳನ್ನು ವಿಧರ್ಮಿ ಮೂಲದವುಗಳೆಂದು ಕೇವಲ ಖಂಡಿಸುವಲ್ಲಿ, ಇದು ಬೇರೆ ಜನರಿಗೆ ಅವುಗಳ ವಿಷಯದಲ್ಲಿ ಇರುವ ಅನಿಸಿಕೆಗಳನ್ನು ಬದಲಾಯಿಸಲಿಕ್ಕಿಲ್ಲ. ತರ್ಕಸಮ್ಮತವಾದ ಮಾತಿನ ರೀತಿಯು ಸಾಮಾನ್ಯವಾಗಿ ಹೆಚ್ಚು ಯಶಸ್ವಿಕರವಾಗಿರುತ್ತದೆ. ಹಾಗಾದರೆ ತರ್ಕಸಮ್ಮತರಾಗಿರುವುದರಲ್ಲಿ ಏನು ಒಳಗೂಡಿದೆ?
“ಮೇಲಣಿಂದ ಬರುವ ವಿವೇಕವು . . . ಶಾಂತ ಪ್ರಕೃತಿಯದ್ದೂ ತರ್ಕಸಮ್ಮತವೂ ಆಗಿದೆ” ಎಂದು ಶಾಸ್ತ್ರವಚನಗಳು ಹೇಳುತ್ತವೆ. (ಯಾಕೋ. 3:17, NW) “ತರ್ಕಸಮ್ಮತ” ಎಂದು ಇಲ್ಲಿ ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದದ ಅಕ್ಷರಾರ್ಥವು, “ಮಣಿಯುವುದು” ಎಂದಾಗಿದೆ. ಕೆಲವು ಭಾಷಾಂತರಗಳು ಇದನ್ನು, “ವಿಚಾರಪೂರ್ಣ,” “ಸೌಮ್ಯ,” ಅಥವಾ “ಸಹಿಸಿಕೊಳ್ಳುವ” ಎಂದು ಭಾಷಾಂತರಿಸುತ್ತವೆ. ತರ್ಕಸಮ್ಮತತೆಯು ಶಾಂತ ಪ್ರಕೃತಿಯೊಂದಿಗೆ ಜೊತೆಗೂಡಿಸಲ್ಪಟ್ಟಿರುವುದನ್ನು ಗಮನಿಸಿರಿ. ತೀತ 3:2 ರಲ್ಲಿ ಇದನ್ನು ಸಾಧುಗುಣದೊಂದಿಗೆ ಉಲ್ಲೇಖಿಸಲಾಗಿದ್ದು, ಕುತರ್ಕಮಾಡುವುದಕ್ಕೆ ತದ್ವಿರುದ್ಧವಾಗಿ ತೋರಿಸಲಾಗಿದೆ. ಫಿಲಿಪ್ಪಿ 4:5 (NW), ನಾವು “ತರ್ಕಸಮ್ಮತತೆ”ಗಾಗಿ ಪ್ರಸಿದ್ಧರಾಗಿರಬೇಕೆಂದು ನಮ್ಮನ್ನು ಪ್ರೋತ್ಸಾಹಿಸುತ್ತದೆ. ತರ್ಕಸಮ್ಮತನಾಗಿರುವಂಥ ಒಬ್ಬ ವ್ಯಕ್ತಿಯು ತಾನು ಯಾರೊಂದಿಗೆ ಮಾತಾಡುತ್ತಾನೊ ಅವರ ಹಿನ್ನೆಲೆ, ಸನ್ನಿವೇಶಗಳು ಮತ್ತು ಅನಿಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಯಾವಾಗ ಸೂಕ್ತವೊ ಆಗ ಅವನು ಇನ್ನೊಬ್ಬನಿಗೆ ಮಣಿಯಲು ಸಿದ್ಧಮನಸ್ಸುಳ್ಳವನಾಗಿರುತ್ತಾನೆ. ಇಂತಹ ರೀತಿಯಲ್ಲಿ ಇತರರೊಂದಿಗೆ ವ್ಯವಹರಿಸುವುದು ಅವರ ಹೃದಮನಗಳನ್ನು ತೆರೆಯಲು ಸಹಾಯಮಾಡುವುದರಿಂದ, ನಾವು ಶಾಸ್ತ್ರವಚನಗಳಿಂದ ಅವರೊಂದಿಗೆ ತರ್ಕಿಸುವಾಗ ಅವರು ಕಿವಿಗೊಡಲು ಹೆಚ್ಚು ಇಷ್ಟವುಳ್ಳವರಾಗಿರುತ್ತಾರೆ.
ಆರಂಭಿಸಲಿಕ್ಕಾಗಿರುವ ವಿಷಯ. ಅಪೊಸ್ತಲ ಪೌಲನು ಥೆಸಲೊನೀಕದಲ್ಲಿದ್ದಾಗ, ಶಾಸ್ತ್ರಾಧಾರದಿಂದ “ಅವರ ಸಂಗಡ ವಾದಿಸಿ ಆಯಾ ವಚನಗಳ ಅರ್ಥವನ್ನು ಬಿಚ್ಚಿ—ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತು ಎದ್ದುಬರುವದು ಅಗತ್ಯವೆಂತಲೂ” ವಿವರಿಸಿದನೆಂದು ಇತಿಹಾಸಕಾರನಾದ ಲೂಕನು ವರದಿಸುತ್ತಾನೆ. (ಅ. ಕೃ. 17:2, 3) ಪೌಲನು ಇದನ್ನು ಒಂದು ಯೆಹೂದಿ ಸಭಾಮಂದಿರದಲ್ಲಿ ಮಾಡಿದ್ದು ಗಮನಾರ್ಹ. ಅವನ ಸಭಿಕರು ಹೀಬ್ರು ಶಾಸ್ತ್ರವನ್ನು ಅಧಿಕಾರವುಳ್ಳ ಪ್ರಮಾಣಗ್ರಂಥವಾಗಿ ಪರಿಗಣಿಸುತ್ತಿದ್ದರು. ಆದಕಾರಣ, ಅವರು ಅಂಗೀಕರಿಸಿದಂಥ ಒಂದು ವಿಷಯದಿಂದ ಅವನು ಆರಂಭಿಸಿದ್ದು ಸೂಕ್ತವಾಗಿತ್ತು.
ಆದರೆ ಅಥೇನೆಯ ಅರಿಯೊಪಾಗದಲ್ಲಿ ಪೌಲನು ಗ್ರೀಕರೊಂದಿಗೆ ಮಾತಾಡುತ್ತಿದ್ದಾಗ, ಅವನು ಶಾಸ್ತ್ರಗಳನ್ನು ಉಲ್ಲೇಖಿಸುತ್ತಾ ಚರ್ಚೆಯನ್ನು ಆರಂಭಿಸಲಿಲ್ಲ. ಬದಲಿಗೆ, ಅವರಿಗೆ ತಿಳಿದಿದ್ದ ಮತ್ತು ಅವರು ಅಂಗೀಕರಿಸಿದ ವಿಷಯಗಳಿಂದ ಅವನು ಆರಂಭಿಸಿ, ಅವರನ್ನು ಸೃಷ್ಟಿಕರ್ತನ ಮತ್ತು ಆತನ ಉದ್ದೇಶಗಳ ಕುರಿತಾದ ಚರ್ಚೆಯ ಕಡೆಗೆ ನಡೆಸುವಂತೆ ಇವುಗಳನ್ನು ಉಪಯೋಗಿಸಿದನು.—ಅ. ಕೃ. 17:22-31.
ಆಧುನಿಕ ಸಮಯಗಳಲ್ಲಿ, ಬೈಬಲು ತಮ್ಮ ಜೀವಿತಗಳಲ್ಲಿ ಪ್ರಮಾಣಗ್ರಂಥವಾಗಿದೆ ಎಂದು ಅಂಗೀಕರಿಸದಿರುವಂಥ ಅಸಂಖ್ಯಾತ ಜನರಿದ್ದಾರೆ. ಆದರೆ ಈಗಿನ ವಿಷಯಗಳ ವ್ಯವಸ್ಥೆಯಲ್ಲಿ ಹೆಚ್ಚುಕಡಿಮೆ ಪ್ರತಿಯೊಬ್ಬರ ಜೀವಿತವೂ ಕಠೋರವಾದ ಸನ್ನಿವೇಶಗಳಿಂದ ಜರ್ಜರಿತವಾಗಿದೆ. ಜನರು ಹೆಚ್ಚು ಉತ್ತಮವಾಗಿರುವ ಸಂಗತಿಗಾಗಿ ಹಾರೈಸುತ್ತಾರೆ. ಅವರನ್ನು ಕ್ಷೋಭೆಗೊಳಪಡಿಸುತ್ತಿರುವಂಥ ವಿಷಯದ ಬಗ್ಗೆ ನೀವು ಪ್ರಥಮವಾಗಿ ಚಿಂತೆಯನ್ನು ತೋರಿಸಿ, ಬಳಿಕ ಅದನ್ನು ಬೈಬಲು ಹೇಗೆ ವಿವರಿಸುತ್ತದೆ ಎಂಬುದನ್ನು ತೋರಿಸುವಲ್ಲಿ, ಇಂತಹ ತರ್ಕಸಮ್ಮತವಾದ ಮಾತಿನ ರೀತಿಯು, ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಕೇಳಿಸಿಕೊಳ್ಳುವಂತೆ ಅವರನ್ನು ಪ್ರಚೋದಿಸಬಹುದು.
ಒಬ್ಬ ಬೈಬಲ್ ವಿದ್ಯಾರ್ಥಿಗೆ ಅವನ ಹೆತ್ತವರು ದಾಟಿಸಿರುವ ಬಾಧ್ಯತೆಯಲ್ಲಿ, ಕೆಲವು ಧಾರ್ಮಿಕ ನಂಬಿಕೆಗಳೂ ಪದ್ಧತಿಗಳೂ ಒಳಗೂಡಿರಬಹುದು. ಆದರೆ ಈಗ ಆ ನಂಬಿಕೆಗಳೂ ಪದ್ಧತಿಗಳೂ ದೇವರಿಗೆ ಮೆಚ್ಚಿಕೆಯಾಗಿಲ್ಲ ಎಂದು ಆ ವಿದ್ಯಾರ್ಥಿಯು ತಿಳಿದುಕೊಳ್ಳುತ್ತಾನೆ, ಮತ್ತು ಬೈಬಲಿನ ಬೋಧನೆಯನ್ನು ಅಂಗೀಕರಿಸಿ ಹಿಂದಿನ ನಂಬಿಕೆಗಳನ್ನು ತ್ಯಜಿಸುತ್ತಾನೆ. ತನ್ನ ಈ ನಿರ್ಣಯವನ್ನು ಅವನು ತನ್ನ ಹೆತ್ತವರಿಗೆ ಹೇಗೆ ವಿವರಿಸಬಲ್ಲನು? ತಾವು ಅವನಿಗೆ ಕೊಟ್ಟ ಧಾರ್ಮಿಕ ಬಾಧ್ಯತೆಯನ್ನು ಅವನು ತ್ಯಜಿಸಿರುವ ಕಾರಣ, ಅವನು ತಮ್ಮನ್ನೂ ತ್ಯಜಿಸುತ್ತಿದ್ದಾನೆ ಎಂದು ಅವರಿಗನಿಸಬಹುದು. ಆದಕಾರಣ, ತನ್ನ ನಿರ್ಣಯಕ್ಕೆ ಆಧಾರವನ್ನು ಬೈಬಲಿನಿಂದ ವಿವರಿಸಲು ಪ್ರಯತ್ನಿಸುವುದಕ್ಕೆ ಮುಂಚೆ, ತನ್ನ ಹೆತ್ತವರ ಮೇಲೆ ತನಗಿರುವ ಪ್ರೀತಿ ಮತ್ತು ಗೌರವದ ಪುನರಾಶ್ವಾಸನೆಯನ್ನು ಅವರಿಗೆ ಕೊಡುವ ಆವಶ್ಯಕತೆಯಿದೆ ಎಂದು ಅವನು ತೀರ್ಮಾನಿಸಬಹುದು.
ಮಣಿಯಬೇಕಾಗಿರುವ ಸಮಯ. ಯೆಹೋವನಿಗೆ ಒಡೆತನ ತೋರಿಸಲು ಪೂರ್ಣ ಅಧಿಕಾರವು ಇರುವುದಾದರೂ, ಆತನು ಗಮನಾರ್ಹವಾದ ತರ್ಕಸಮ್ಮತತೆಯನ್ನು ತೋರಿಸುತ್ತಾನೆ. ಲೋಟನನ್ನೂ ಅವನ ಕುಟುಂಬವನ್ನೂ ಸೊದೋಮಿನಿಂದ ರಕ್ಷಿಸುವಾಗ ಯೆಹೋವನ ದೂತರು, “ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು” ಎಂದು ಹೇಳಿದರು. ಆದರೂ ಲೋಟನು, “ಸ್ವಾಮೀ, ಅದು ನನ್ನಿಂದಾಗದು” ಎಂದು ಬೇಡಿಕೊಂಡನು. ಚೋಗರಿಗೆ ಓಡಿಹೋಗಲು ತನಗೆ ಅನುಮತಿ ನೀಡುವಂತೆ ಅವನು ಮನವಿಮಾಡಿಕೊಂಡನು. ಲೋಟನು ಹಾಗೆ ಮಾಡುವಂತೆ ಅನುಮತಿಸುವ ಮೂಲಕ ಯೆಹೋವನು ಅವನಿಗೆ ಪರಿಗಣನೆಯನ್ನು ತೋರಿಸಿದನು; ಹೀಗೆ, ಬೇರೆ ಪಟ್ಟಣಗಳು ನಾಶಗೊಳಿಸಲ್ಪಟ್ಟಾಗ ಚೋಗರ್ ಉಳಿಸಲ್ಪಟ್ಟಿತು. ಆದರೂ ಆ ಬಳಿಕ, ಲೋಟನು ಯೆಹೋವನ ಮೂಲ ನಿರ್ದೇಶನವನ್ನು ಅನುಸರಿಸಿ ಬೆಟ್ಟದ ಸೀಮೆಗೆ ಹೊರಟುಹೋದನು. (ಆದಿ. 19:17-30) ತನ್ನ ಮಾರ್ಗವು ಸರಿಯೆಂಬುದು ಯೆಹೋವನಿಗೆ ತಿಳಿದಿದ್ದರೂ, ಲೋಟನು ಅದನ್ನು ಗಣ್ಯಮಾಡುವ ತನಕ ದೇವರು ತಾಳ್ಮೆಯಿಂದ ಪರಿಗಣನೆಯನ್ನು ತೋರಿಸಿದನು.
ಇತರರೊಂದಿಗೆ ಯಶಸ್ವಿಕರವಾದ ರೀತಿಯಲ್ಲಿ ವ್ಯವಹರಿಸಲಿಕ್ಕಾಗಿ ನಾವು ಸಹ ತರ್ಕಸಮ್ಮತರಾಗಿರಬೇಕು. ಇನ್ನೊಬ್ಬ ವ್ಯಕ್ತಿಯ ಅಭಿಪ್ರಾಯ ತಪ್ಪೆಂದು ನಮಗೆ ಖಂಡಿತವಾಗಿ ಗೊತ್ತಿರಬಹುದು ಮತ್ತು ಅದನ್ನು ರುಜುಪಡಿಸಲು ಪ್ರಬಲವಾದ ವಾದಗಳು ನಮ್ಮ ಮನಸ್ಸಿನಲ್ಲಿರಬಹುದು. ಆದರೆ ಕೆಲವು ಸಲ, ಅವನ ವಿಚಾರವು ತಪ್ಪೆಂದು ಅವನು ಒಪ್ಪಿಕೊಳ್ಳುವಂತೆ ಒತ್ತಡಹಾಕದಿರುವುದು ಒಳ್ಳೇದು. ತರ್ಕಸಮ್ಮತರಾಗಿರುವುದರ ಅರ್ಥವು ಯೆಹೋವನ ಮಟ್ಟಗಳನ್ನು ರಾಜಿಮಾಡಿಕೊಳ್ಳುವುದಲ್ಲ. ಆ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಉಪಕಾರ ಹೇಳುವುದು ಅಥವಾ ಕೆಲವು ತಪ್ಪು ಹೇಳಿಕೆಗಳಿಗೆ ಪ್ರತ್ಯುತ್ತರ ಕೊಡದೆ ಇರುವುದು ಉತ್ತಮವಾದದ್ದಾಗಿರಬಹುದು. ಆಗ ನಿಮ್ಮ ಚರ್ಚೆಯನ್ನು ಹೆಚ್ಚು ಒಳಿತನ್ನು ಸಾಧಿಸುವ ವಿಷಯದ ಮೇಲೆ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುವುದು. ನೀವು ಏನನ್ನು ನಂಬುತ್ತೀರೊ ಅದನ್ನು ಅವನು ಖಂಡಿಸುವುದಾದರೂ, ಕೋಪಮಾಡಬೇಡಿರಿ. ಅವನಿಗೆ ಏಕೆ ಹಾಗನಿಸುತ್ತದೆ ಎಂದು ನೀವು ಅವನನ್ನು ಕೇಳಬಹುದು. ಅವನು ಉತ್ತರ ಕೊಡುವಾಗ ಜಾಗರೂಕತೆಯಿಂದ ಕಿವಿಗೊಡಿರಿ. ಆಗ ನಿಮಗೆ ಅವನ ಆಲೋಚನಾ ರೀತಿಯ ಕುರಿತು ಒಳನೋಟವು ದೊರೆಯುವುದು. ಮತ್ತು ಇದು ಮುಂದಿನ ಒಂದು ಸಮಯಕ್ಕಾಗಿ ಒಂದು ರಚನಾತ್ಮಕ ಸಂಭಾಷಣೆಗೆ ಅಸ್ತಿವಾರವನ್ನೂ ಹಾಕಬಹುದು.—ಜ್ಞಾನೋ. 16:23; 19:11.
ಯೆಹೋವನು ಮಾನವರಿಗೆ, ಆಯ್ಕೆಮಾಡುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಅವರು ಆ ಸಾಮರ್ಥ್ಯವನ್ನು ವಿವೇಕಯುತವಾಗಿ ಉಪಯೋಗಿಸದೆ ಇರಬಹುದಾದರೂ, ಅವರು ಅದನ್ನು ಉಪಯೋಗಿಸುವಂತೆ ಆತನು ಅನುಮತಿಸುತ್ತಾನೆ. ಯೆಹೋವನ ಪರವಾಗಿ ಮಾತಾಡುತ್ತಾ ಯೆಹೋಶುವನು, ಇಸ್ರಾಯೇಲ್ಯರೊಂದಿಗಿನ ದೇವರ ವ್ಯವಹಾರಗಳ ಕುರಿತು ವಿವರಿಸಿದನು. ಆದರೆ ಆ ಬಳಿಕ ಅವನಂದದ್ದು: “ಯೆಹೋವನನ್ನು ಸೇವಿಸುವದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು [ಯೂಫ್ರೇಟೀಸ್] ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲನಿವಾಸಿಗಳಾದ ಅಮೋರಿಯರ ದೇವತೆಗಳೋ, ಹೇಳಿರಿ. ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” (ಯೆಹೋ. 24:15) ನಮಗೆ ಇಂದು ಕೊಡಲ್ಪಟ್ಟಿರುವ ನೇಮಕವು “ಸಾಕ್ಷಿ”ಯನ್ನು ನೀಡುವುದೇ. ನಾವು ನಿಶ್ಚಿತಾಭಿಪ್ರಾಯದಿಂದ ಮಾತಾಡುತ್ತೇವಾದರೂ ಇತರರು ಅದನ್ನು ನಂಬಲೇಬೇಕೆಂದು ನಾವು ಬಲಾತ್ಕರಿಸಲು ಪ್ರಯತ್ನಿಸುವುದಿಲ್ಲ. (ಮತ್ತಾ. 24:14) ಅದನ್ನು ಆಯ್ಕೆಮಾಡುವುದು ಅವರ ಹಕ್ಕಾಗಿದೆ, ಮತ್ತು ನಾವು ಅದನ್ನು ಅವರಿಂದ ದೋಚಿಕೊಳ್ಳುವುದಿಲ್ಲ.
ಪ್ರಶ್ನೆಗಳನ್ನು ಕೇಳಿರಿ. ಜನರೊಂದಿಗೆ ತರ್ಕಸಮ್ಮತವಾಗಿ ಮಾತಾಡುವುದರಲ್ಲಿ ಯೇಸು ಅತ್ಯುತ್ತಮವಾದ ಮಾದರಿಯನ್ನಿಟ್ಟನು. ಅವನು ಅವರ ಹಿನ್ನೆಲೆಗಳನ್ನು ಗಣನೆಗೆ ತೆಗೆದುಕೊಂಡು, ಅವರು ಸುಲಭವಾಗಿ ಅಂಗೀಕರಿಸುವಂತಹ ದೃಷ್ಟಾಂತಗಳನ್ನು ಉಪಯೋಗಿಸಿದನು. ಅವನು ಪ್ರಶ್ನೆಗಳನ್ನೂ ಪರಿಣಾಮಕಾರಿಯಾದ ರೀತಿಯಲ್ಲಿ ಉಪಯೋಗಿಸಿದನು. ಇದು ಇತರರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವನ್ನು ಕೊಟ್ಟು, ಅವರ ಹೃದಯಗಳಲ್ಲಿ ಏನಿತ್ತೆಂಬುದನ್ನು ತಿಳಿಯಪಡಿಸಿತು. ಚರ್ಚಿಸಲ್ಪಡುತ್ತಿರುವ ವಿಷಯದ ಕುರಿತು ಅವರು ಆಲೋಚಿಸುವಂತೆಯೂ ಇದು ಪ್ರೋತ್ಸಾಹಿಸಿತು.
ಒಬ್ಬ ಧರ್ಮೋಪದೇಶಕನು ಯೇಸುವನ್ನು, “ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು”? ಎಂದು ಕೇಳಿದನು. ಯೇಸು ಅವನಿಗೆ ಸುಲಭವಾಗಿ ಉತ್ತರವನ್ನು ಕೊಡಬಹುದಾಗಿತ್ತು. ಆದರೆ ಹಾಗೆ ಮಾಡದೆ, ಆ ಮನುಷ್ಯನು ತನ್ನ ಅಭಿಪ್ರಾಯವನ್ನು ತಿಳಿಯಪಡಿಸುವಂತೆ ಅವನು ಕೇಳಿಕೊಂಡನು. “ಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ಇದಕ್ಕೆ ಆ ಮನುಷ್ಯನು ಸರಿಯಾದ ಉತ್ತರವನ್ನು ಕೊಟ್ಟನು. ಆದರೆ ಅವನು ಸರಿಯಾದ ಉತ್ತರವನ್ನು ಕೊಟ್ಟ ಕಾರಣ ಚರ್ಚೆಯು ಅಲ್ಲಿಗೇ ನಿಂತಿತೊ? ಖಂಡಿತವಾಗಿಯೂ ಇಲ್ಲ. ಆ ವ್ಯಕ್ತಿಯು ಮುಂದುವರಿಸುವಂತೆ ಯೇಸು ಬಿಟ್ಟನು, ಮತ್ತು ಆ ಮನುಷ್ಯನು ತಾನೇ ಕೇಳಿದ ಪ್ರಶ್ನೆಯು ಅವನು ತನ್ನನ್ನೇ ನೀತಿವಂತನೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನೆಂಬುದನ್ನು ಸೂಚಿಸಿತು. “ನನ್ನ ನೆರೆಯವನು ಯಾರು”? ಎಂದು ಅವನು ಕೇಳಿದನು. ಇದರ ಅರ್ಥನಿರೂಪಣೆಯನ್ನು ಯೇಸು ಕೊಡಲಿಲ್ಲ. ಹಾಗೆ ಕೊಡುತ್ತಿದ್ದರೆ, ಅನ್ಯರ ಮತ್ತು ಸಮಾರ್ಯದವರ ಕಡೆಗೆ ಆಗ ಯೆಹೂದ್ಯರಿಗಿದ್ದ ಮನೋಭಾವದ ಕಾರಣ ಅದು ಆ ಮನುಷ್ಯನು ವಾಗ್ವಾದಿಸುವಂತೆ ಮಾಡಬಹುದಿತ್ತು. ಅದಕ್ಕೆ ಬದಲಾಗಿ, ಯೇಸು ಒಂದು ದೃಷ್ಟಾಂತವನ್ನು ಕೊಟ್ಟು, ಅದರ ವಿಷಯದಲ್ಲಿ ತಾರ್ಕಿಕವಾಗಿ ಯೋಚಿಸುವಂತೆ ಅವನಿಗೆ ಕರೆಕೊಟ್ಟನು. ಅದು ನೆರೆಯವನಾದ ಸಮಾರ್ಯದವನ ಕುರಿತಾಗಿತ್ತು. ಇವನು ಸುಲಿಗೆ ಮಾಡಲ್ಪಟ್ಟು ಹೊಡೆಯಲ್ಪಟ್ಟಿದ್ದ ಒಬ್ಬ ಪ್ರಯಾಣಿಕನಿಗೆ ಸಹಾಯಮಾಡಿದ್ದನು. ಒಬ್ಬ ಯಾಜಕನೂ ಒಬ್ಬ ಲೇವಿಯನೂ ಅವನಿಗೆ ಸಹಾಯಮಾಡಲು ಪ್ರಯತ್ನಿಸಲಿಲ್ಲ. ಒಂದು ಸರಳವಾದ ಪ್ರಶ್ನೆಯ ಮೂಲಕ ಆ ಮನುಷ್ಯನು ಆ ದೃಷ್ಟಾಂತದ ಸಾರಾಂಶವನ್ನು ಗ್ರಹಿಸಿದ್ದಾನೋ ಎಂಬುದನ್ನು ಯೇಸು ಖಚಿತಪಡಿಸಿಕೊಂಡನು. ಯೇಸುವಿನ ತರ್ಕಸಮ್ಮತವಾದ ಮಾತಿನ ರೀತಿಯು, “ನೆರೆಯವನು” ಎಂಬ ಆ ಪದವು, ಈ ಮನುಷ್ಯನು ಮೊದಲು ಗ್ರಹಿಸದೆ ಇದ್ದ ಅರ್ಥವನ್ನು ಪಡೆದುಕೊಳ್ಳುವಂತೆ ಮಾಡಿತು. (ಲೂಕ 10:25-37) ಅನುಕರಿಸಲು ಎಷ್ಟು ಉತ್ತಮವಾದ ಮಾದರಿ! ಇಡೀ ಹೊತ್ತು ನೀವೇ ಮಾತಾಡುವ ಬದಲಿಗೆ, ಕಾರ್ಯತಃ ಮನೆಯವನಿಗಾಗಿ ನೀವೇ ಯೋಚಿಸುವ ಬದಲಿಗೆ, ನಿಮ್ಮ ಕೇಳುಗನು ಆಲೋಚಿಸುವಂತೆ ಪ್ರೋತ್ಸಾಹಿಸಲು ಸಮಯೋಚಿತ ಜಾಣ್ಮೆಯಿಂದ ಕೂಡಿದ ಪ್ರಶ್ನೆಗಳನ್ನೂ ದೃಷ್ಟಾಂತಗಳನ್ನೂ ಹೇಗೆ ಉಪಯೋಗಿಸಬಹುದೆಂಬುದನ್ನು ಕಲಿಯಿರಿ.
ಕಾರಣಗಳನ್ನು ಕೊಡಿರಿ. ಅಪೊಸ್ತಲ ಪೌಲನು ಥೆಸಲೊನೀಕದ ಸಭಾಮಂದಿರದಲ್ಲಿ ಮಾತಾಡಿದಾಗ, ತನ್ನ ಸಭಿಕರು ಅಂಗೀಕರಿಸಿದ ಪ್ರಮಾಣಗ್ರಂಥದಿಂದ ಓದಿದ್ದಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿದನು. ಪೌಲನು ತಾನು ಓದಿದ ವಿಷಯಗಳನ್ನು ವಿವರಿಸಿ, ರುಜುಪಡಿಸಿ, ಅನ್ವಯಿಸಿದನೆಂದು ಲೂಕನು ವರದಿ ಮಾಡುತ್ತಾನೆ. ಇದರ ಫಲಿತಾಂಶವಾಗಿ, ‘ಅವರಲ್ಲಿ ಕೆಲವರು ಒಡಂಬಟ್ಟು ಪೌಲ ಸೀಲರನ್ನು ಸೇರಿಕೊಂಡರು.’—ಅ. ಕೃ. 17:1-4.
ನಿಮ್ಮ ಸಭಿಕರಲ್ಲಿ ಯಾರೇ ಇರಲಿ, ಹೀಗೆ ತರ್ಕಸಮ್ಮತವಾದ ರೀತಿಯಲ್ಲಿ ಮಾತಾಡುವುದು ಪ್ರಯೋಜನಕರವಾಗಿರಬಲ್ಲದು. ನೀವು ಸಂಬಂಧಿಕರಿಗೆ ಸಾಕ್ಷಿ ನೀಡುವಾಗ, ಸಹೋದ್ಯೋಗಿಗಳೊಂದಿಗೆ ಅಥವಾ ಸಹಪಾಠಿಗಳೊಂದಿಗೆ ಮಾತಾಡುವಾಗ, ನಿಮ್ಮ ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಅಪರಿಚಿತರೊಡನೆ ಮಾತಾಡುವಾಗ, ಒಂದು ಬೈಬಲ್ ಅಧ್ಯಯನವನ್ನು ನಡೆಸುವಾಗ ಅಥವಾ ಸಭೆಯಲ್ಲಿ ಒಂದು ಭಾಷಣವನ್ನು ಕೊಡುವಾಗಲೂ ಇದು ನಿಜವಾಗಿದೆ. ನೀವು ಒಂದು ಶಾಸ್ತ್ರವಚನವನ್ನು ಓದುವಾಗ ನಿಮಗೆ ಅದು ಚೆನ್ನಾಗಿ ಅರ್ಥವಾದರೂ, ಇನ್ನೊಬ್ಬರಿಗೆ ಪ್ರಾಯಶಃ ಅರ್ಥವಾಗಲಿಕ್ಕಿಲ್ಲ. ಮತ್ತು ನಿಮ್ಮ ವಿವರಣೆಯಾಗಲಿ ಅನ್ವಯವಾಗಲಿ ಅವರಿಗೆ ಉದ್ದಟತನದ ಒಂದು ಪ್ರತಿಪಾದನೆಯಾಗಿ ತೋರಿಬಂದೀತು. ಹಾಗಿರುವಲ್ಲಿ, ಆ ಶಾಸ್ತ್ರವಚನದಿಂದ ಕೆಲವು ಮುಖ್ಯ ಪದಗಳನ್ನು ಪ್ರತ್ಯೇಕಿಸಿ, ಅವುಗಳನ್ನು ವಿವರಿಸುವುದು ಸಹಾಯಕರವಾಗಿದ್ದೀತೊ? ಅದರ ಪೂರ್ವಾಪರ ವಿಷಯಗಳಿಂದ ಇಲ್ಲವೆ ಆ ವಿಷಯವಸ್ತುವಿನ ಕುರಿತು ತಿಳಿಸುವಂಥ ಇನ್ನೊಂದು ಶಾಸ್ತ್ರವಚನದಿಂದ ಸಮರ್ಥಕ ರುಜುವಾತನ್ನು ನೀವು ಕೊಡಬಲ್ಲಿರೊ? ನೀವು ಏನು ಹೇಳಿದ್ದೀರೊ ಅದರ ತರ್ಕಸಮ್ಮತತೆಯನ್ನು ತೋರಿಸಲು ಒಂದು ದೃಷ್ಟಾಂತವು ನೆರವಾದೀತೊ? ನಿಮ್ಮ ಸಭಿಕರೊಡನೆ ಈ ವಿಷಯದ ಕುರಿತು ತಾರ್ಕಿಕವಾಗಿ ಯೋಚಿಸಲು ಪ್ರಶ್ನೆಗಳು ಸಹಾಯಮಾಡುವವೊ? ಇಂತಹ ತರ್ಕಸಮ್ಮತತೆಯು ಅನುಕೂಲವಾದ ಪ್ರಭಾವವನ್ನು ಬೀರಿ, ಇತರರಿಗೆ ಆಲೋಚಿಸಲು ಅನೇಕ ಕಾರಣಗಳನ್ನು ಒದಗಿಸುವುದು.