ಮಾದರಿ ನಿರೂಪಣೆಗಳನ್ನು ಉಪಯೋಗಿಸುವ ವಿಧ
1. ಒದಗಿಸಲ್ಪಡುವ ಮಾದರಿ ನಿರೂಪಣೆಗಳನ್ನು ನಾವು ಹೇಗೆ ವೀಕ್ಷಿಸಬೇಕು?
1 ನಮ್ಮ ಪತ್ರಿಕೆಗಳು ಮತ್ತು ಇತರ ಪ್ರಕಾಶನಗಳನ್ನು ನೀಡಲಿಕ್ಕಾಗಿರುವ ಮಾದರಿ ನಿರೂಪಣೆಗಳು ನಮ್ಮ ರಾಜ್ಯದ ಸೇವೆಯಲ್ಲಿ ಕ್ರಮವಾಗಿ ಕಾಣಿಸಿಕೊಳ್ಳುತ್ತವೆ. ಶುಶ್ರೂಷೆಯಲ್ಲಿ ಭಾಗವಹಿಸುತ್ತಿರುವಾಗ, ನಾವು ಈ ಸೂಚಿತ ನಿರೂಪಣೆಗಳನ್ನು ಲಿಖಿತ ರೂಪದಲ್ಲಿರುವ ಹಾಗೆಯೇ ಪುನರುಚ್ಚರಿಸುವ ಅಗತ್ಯವಿಲ್ಲ. ನಾವು ಏನು ಹೇಳಬೇಕು ಎಂಬ ವಿಷಯದಲ್ಲಿ ಅವು ನಮಗೆ ಒಂದು ಹೊರಮೇರೆಯನ್ನು ಒದಗಿಸುತ್ತವೆ ಅಷ್ಟೆ. ನಾವು ಆ ನಿರೂಪಣೆಗಳನ್ನು ನಮ್ಮ ಸ್ವಂತ ಮಾತುಗಳಲ್ಲಿ ಪ್ರಸ್ತುತಪಡಿಸುವುದಾದರೆ ಅವು ಹೆಚ್ಚು ಪರಿಣಾಮಕಾರಿಯಾಗಿರುವವು. ನಾವು ಸ್ವಾಭಾವಿಕ ರೀತಿಯಲ್ಲಿ ಮನೆಯವರೊಂದಿಗೆ ಮಾತನಾಡುವಾಗ ಅದು ಅವರು ಸಹಜವಾಗಿ ವರ್ತಿಸುವಂತೆ ಮಾಡುತ್ತದೆ ಮತ್ತು ನಮ್ಮ ನಿಷ್ಕಪಟತನ ಹಾಗೂ ನಿಶ್ಚಿತಾಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ.—2 ಕೊರಿಂ. 2:17; 1 ಥೆಸ. 1:5.
2. ನಿರೂಪಣೆಗಳನ್ನು ತಯಾರಿಸುತ್ತಿರುವಾಗ ನಾವು ಸ್ಥಳಿಕ ಪದ್ಧತಿಗಳನ್ನು ಪರಿಗಣಿಸಬೇಕು ಏಕೆ?
2 ನಿಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳಿ: ನಾವು ಸುವಾರ್ತೆಯನ್ನು ಪ್ರಸ್ತುತಪಡಿಸುವ ವಿಧವು ಸ್ಥಳಿಕ ಪದ್ಧತಿಗಳಿಂದ ಮಹತ್ತರವಾಗಿ ಪ್ರಭಾವಿಸಲ್ಪಡುತ್ತದೆ. ನೀವು ಮನೆಯವರ ಪರಿಚಯ ಮಾಡಿಕೊಂಡಾದ ಅನಂತರ ಸಂಭಾಷಣೆಯಲ್ಲಿ ನಿಮ್ಮ ನಿರೂಪಣೆಯನ್ನು ಹೆಣೆಯಬಲ್ಲಿರೋ ಅಥವಾ ವಿಷಯಕ್ಕೆ ಬನ್ನಿ ಎಂದು ನಿಮ್ಮ ಟೆರಿಟೊರಿಯಲ್ಲಿರುವ ಜನರು ನೇರವಾಗಿ ಕೇಳಿಬಿಡುತ್ತಾರೋ? ಇದು ಸ್ಥಳದಿಂದ ಸ್ಥಳಕ್ಕೆ, ಕೆಲವೊಮ್ಮೆ ವ್ಯಕ್ತಿಯಿಂದ ವ್ಯಕ್ತಿಗೂ ಬದಲಾಗುವದುಂಟು. ಪ್ರಶ್ನೆಗಳ ಉಪಯೋಗದಲ್ಲೂ ವಿವೇಚನೆಯು ಅವಶ್ಯ. ಕೆಲವು ಸ್ಥಳಗಳಲ್ಲಿ ಯೋಗ್ಯವಾಗಿರುವ ಪ್ರಶ್ನೆಗಳು, ಬೇರೆ ಕಡೆಗಳಲ್ಲಿ ಜನರನ್ನು ಕಿರಿಕಿರಿಗೊಳಿಸಬಹುದು. ಆದುದರಿಂದ, ನಾವು ಒಳ್ಳೆಯ ತೀರ್ಮಾನಶಕ್ತಿಯನ್ನು ಉಪಯೋಗಿಸಬೇಕು ಮತ್ತು ಸ್ಥಳಿಕವಾಗಿ ಯಾವುದು ಸ್ವೀಕಾರಾರ್ಹವಾಗಿದೆಯೋ ಅದಕ್ಕೆ ತಕ್ಕ ಹಾಗೆ ನಮ್ಮ ನಿರೂಪಣೆಗಳನ್ನು ಹೊಂದಿಸಿಕೊಳ್ಳಬೇಕು.
3. ನಾವು ಭೇಟಿಮಾಡುವ ಜನರ ಹಿನ್ನೆಲೆ ಮತ್ತು ಯೋಚನಾಧಾಟಿಯನ್ನು ಏಕೆ ಪರಿಗಣಿಸಬೇಕು?
3 ಮಾತ್ರವಲ್ಲದೆ, ಕ್ಷೇತ್ರ ಸೇವೆಗಾಗಿ ತಯಾರಿಸುತ್ತಿರುವಾಗ ನಾವು ನಮ್ಮ ಟೆರಿಟೊರಿಯಲ್ಲಿರುವ ಜನರ ಹಿನ್ನೆಲೆ ಮತ್ತು ಯೋಚನಾಧಾಟಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಉದಾಹರಣೆಗೆ, ನೀವು ಮತ್ತಾಯ 6:9, 10ನ್ನು, ಒಬ್ಬ ನಿಷ್ಠಾವಂತ ಕ್ಯಾಥೊಲಿಕನೊಂದಿಗೆ ಚರ್ಚಿಸುವ ವಿಧಕ್ಕೂ “ಕರ್ತನ ಪ್ರಾರ್ಥನೆ”ಯನ್ನು ತಿಳಿಯದಿರುವ ವ್ಯಕ್ತಿಯೊಂದಿಗೆ ಚರ್ಚಿಸುವ ವಿಧಕ್ಕೂ ವ್ಯತ್ಯಾಸವಿರುತ್ತದೆ. ನಾವು ಹೆಚ್ಚಿನ ಸಂದರ್ಭಗಳಲ್ಲಿ ಸ್ವಲ್ಪ ಮುಂದಾಲೋಚನೆಯೊಂದಿಗೆ ನಮ್ಮ ನಿರೂಪಣೆಗಳನ್ನು ಹೊಂದಿಸಿಕೊಳ್ಳುವಲ್ಲಿ, ಶುಶ್ರೂಷೆಯಲ್ಲಿ ಭೇಟಿಮಾಡುವ ಜನರಿಗೆ ಅವನ್ನು ಹೆಚ್ಚು ಮನಮುಟ್ಟುವಂಥದ್ದಾಗಿ ಮಾಡಬಲ್ಲೆವು.—1 ಕೊರಿಂ. 9:20-23.
4. ಒಳ್ಳೆಯ ತಯಾರಿ ಏಕೆ ಅಗತ್ಯ?
4 ನಾವು ಒಂದುವೇಳೆ ಒಂದು ಮಾದರಿ ನಿರೂಪಣೆಯನ್ನು ಲಿಖಿತ ರೂಪದಲ್ಲಿರುವಂತೆಯೇ ಉಪಯೋಗಿಸಲು ತೀರ್ಮಾನಿಸುವುದಾದರೂ, ಇದು ಒಳ್ಳೆಯ ತಯಾರಿಗೆ ಒಂದು ವಿನಾಯಿತಿಯಾಗಿರುವುದಿಲ್ಲ. ನಾವು ತೋರಿಸಲು ಯೋಜಿಸುವ ಲೇಖನ ಅಥವಾ ಅಧ್ಯಾಯವನ್ನು ಜಾಗರೂಕವಾಗಿ ಓದಬೇಕು ಮತ್ತು ಆಸಕ್ತಿಯನ್ನು ಕೆರಳಿಸಬಹುದಾದ ಅಂಶಗಳಿಗಾಗಿ ಹುಡುಕಬೇಕು. ಅನಂತರ ಅವನ್ನು ನಮ್ಮ ನಿರೂಪಣೆಯಲ್ಲಿ ಸೇರಿಸಬೇಕು. ನಮ್ಮ ಪ್ರಕಾಶನಗಳಲ್ಲಿರುವ ಉತ್ತಮ ಮಾಹಿತಿಯ ಪರಿಚಯವಿದ್ದರೆ ಮಾತ್ರ ನಾವು ಅವುಗಳನ್ನು ಉತ್ಸಾಹದಿಂದ ನೀಡಬಲ್ಲೆವು.
5. ನಾವು ಭಿನ್ನವಾದೊಂದು ನಿರೂಪಣೆಯನ್ನು ಏಕೆ ತಯಾರಿಸಬಹುದು, ಮತ್ತು ನಾವಿದನ್ನು ಹೇಗೆ ಮಾಡಬಲ್ಲೆವು?
5 ಇತರ ಸಮೀಪಿಸುವಿಕೆಗಳು: ನಾವು ಮಾದರಿ ನಿರೂಪಣೆಗಳಾಗಿ ಕೊಡಲ್ಪಡುವವುಗಳನ್ನು ಮಾತ್ರ ಉಪಯೋಗಿಸುವ ನಿರ್ಬಂಧವಿದೆಯೋ? ಇಲ್ಲ. ನಿಮಗೆ ಮತ್ತೊಂದು ಸಮೀಪಿಸುವಿಕೆ ಅಥವಾ ಬೇರೊಂದು ವಚನ ಹೆಚ್ಚು ಸುಲಭವಾಗಿ ತೋರುವುದಾದರೆ ಅದನ್ನು ಉಪಯೋಗಿಸಿರಿ. ವಿಶೇಷವಾಗಿ ಪತ್ರಿಕೆಗಳ ವಿಷಯದಲ್ಲಿ ಹೇಳುವುದಾದರೆ, ನಿಮ್ಮ ಟೆರಿಟೊರಿಯಲ್ಲಿ ವಿಶೇಷವಾಗಿ ಆಸಕ್ತಿಯನ್ನು ಕೆರಳಿಸಬಹುದಾದ ಇತರ ಲೇಖನಗಳನ್ನು ಸಹ ಮನೆಯವರಿಗೆ ತೋರಿಸಲು ಪ್ರಯತ್ನಿಸಿರಿ. ಸೇವಾ ಕೂಟದಲ್ಲಿ ಕ್ಷೇತ್ರ ಸೇವೆಯ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಲಿರುವಾಗ, ಸ್ಥಳಿಕ ಟೆರಿಟೊರಿಯಲ್ಲಿ ಉತ್ತಮ ಫಲಿತಾಂಶಗಳನ್ನು ತರಬಹುದಾದ ಯಾವುದೇ ಸಮೀಪಿಸುವಿಕೆಯನ್ನು ಪ್ರತ್ಯಕ್ಷಾಭಿನಯಿಸಲು ಏರ್ಪಾಡುಗಳನ್ನು ಮಾಡಬಹುದು. ಈ ರೀತಿಯಲ್ಲಿ ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಎಲ್ಲರಿಗೂ ಸಹಾಯವು ದೊರೆತಂತಾಗುವುದು.