ಹೊಸ ಬ್ರೋಷರನ್ನು ವಿತರಿಸಲು ವಿಶೇಷ ಕಾರ್ಯಾಚರಣೆ
1 ಲೋಕದ ಪರಿಸ್ಥಿತಿಗಳಿಂದಾಗಿ ಇಂದು ಅನೇಕ ಜನರು ಚಿಂತಿತರಾಗಿದ್ದಾರೆ, ಆದರೆ ಲೋಕವು ಏಕೆ ಹೀಗಿದೆ, ಮುಂದೆ ಏನು ಕಾದಿದೆ ಮತ್ತು ಬರಲಿರುವ ನ್ಯಾಯತೀರ್ಪಿನಿಂದ ತಪ್ಪಿ ಪಾರಾಗಬೇಕಾದರೆ ಏನು ಮಾಡಬೇಕು ಎಂಬುದು ಕೇವಲ ಕೊಂಚ ಮಂದಿಗೆ ಮಾತ್ರ ತಿಳಿದಿದೆ. (ಯೆಹೆ. 9:4) ಆದುದರಿಂದ ಜನರು ನಮ್ಮ ಸಮಯಗಳ ಮಹತ್ವವನ್ನು ಗ್ರಹಿಸುವಂತೆ ಅವರಿಗೆ ಸಹಾಯಮಾಡಲು, ಏಪ್ರಿಲ್ 18ರ ಸೋಮವಾರದಿಂದ ಮೇ 15ರ ಭಾನುವಾರದ ತನಕ ಎಚ್ಚರಿಕೆಯಿಂದಿರಿ! ಎಂಬ ಹೊಸ ಬ್ರೋಷರನ್ನು ವಿತರಿಸಲು ವಿಶೇಷ ಕಾರ್ಯಾಚರಣೆಯು ನಡೆಸಲ್ಪಡುವುದು.
2 ಈ ಬ್ರೋಷರನ್ನು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ತೊಡಗಿರುವಾಗ, ಪುನರ್ಭೇಟಿಯನ್ನು ಮಾಡುವಾಗ, ಅನೌಪಚಾರಿಕವಾಗಿ ಸಾಕ್ಷಿನೀಡುವಾಗ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸಾಕ್ಷಿಕೊಡುವಾಗ ನೀಡಬಹುದು. ಹಾಗಿದ್ದರೂ, ಎಚ್ಚರಿಕೆಯಿಂದಿರಿ! ಎಂಬ ಈ ಬ್ರೋಷರನ್ನು ಮನಸೋ ಇಚ್ಛೆಯಾಗಿ ನೀಡಬಾರದು. ಬದಲಾಗಿ, ಲೋಕ ಘಟನೆಗಳ ಅರ್ಥದ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ತಿಳಿಯಲು ಆಸಕ್ತಿಯನ್ನು ತೋರಿಸುವ ಜನರಿಗೆ ಮಾತ್ರ ಈ ಬ್ರೋಷರನ್ನು ನೀಡಬೇಕು. ಯಾರು ಈ ಸಂದೇಶದಲ್ಲಿ ಕೊಂಚ ಆಸಕ್ತಿಯನ್ನು ಮಾತ್ರ ತೋರಿಸುತ್ತಾರೊ ಅಂಥವರಿಗೆ ಈ ಬ್ರೋಷರಿನ ಬದಲು ಒಂದು ಟ್ರ್ಯಾಕ್ಟ್ ಅನ್ನು ನೀಡಬಹುದು.
3 ಹೀಗೆ ಹೇಳುವ ಮೂಲಕ ನೀವು ಒಬ್ಬ ವ್ಯಕ್ತಿಯ ಗಮನವನ್ನು ಸೆಳೆಯಬಹುದು:
◼ “ಇಂದು ಸರ್ವಸಾಮಾನ್ಯವಾಗಿರುವ ಗಂಭೀರ ಸಮಸ್ಯೆಗಳು ಮತ್ತು ಭೀಕರ ಘಟನೆಗಳ ಕುರಿತು ಅನೇಕ ಜನರು ಚಿಂತಿತರಾಗಿದ್ದಾರೆ. [ಸ್ಥಳಿಕವಾಗಿ ತಿಳಿದಿರುವ ಒಂದು ವಿಷಯವನ್ನು ಉಲ್ಲೇಖಿಸಿರಿ.] ಬೈಬಲಿನಲ್ಲಿ ಇಂಥ ವಿಷಯಗಳು ಮುಂಚಿತವಾಗಿಯೇ ತಿಳಿಸಲ್ಪಟ್ಟಿವೆ ಎಂಬುದು ನಿಮಗೆ ಗೊತ್ತಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ನೀವು ಉಲ್ಲೇಖಿಸಿದ ಉದಾಹರಣೆಗೆ ಸೂಕ್ತವಾಗಿರುವ ಶಾಸ್ತ್ರವಚನವನ್ನು ಓದಿರಿ. ಒಂದುವೇಳೆ, ಮತ್ತಾಯ 24:3, 7, 8; ಲೂಕ 21:7, 10, 11; ಅಥವಾ 2 ತಿಮೊಥೆಯ 3:1-5ರಂಥ ಯಾವುದೇ ವಚನಗಳನ್ನು ಉಪಯೋಗಿಸಬಹುದು.] ನಮ್ಮ ಸಮಯಗಳ ಅರ್ಥವನ್ನು ಮತ್ತು ಮಾನವಕುಲಕ್ಕಾಗಿ ಮುಂದೆ ಏನು ಕಾದಿದೆ ಎಂಬುದನ್ನು ಬೈಬಲ್ ಪ್ರಕಟಪಡಿಸುತ್ತದೆ. ಈ ಕುರಿತು ಹೆಚ್ಚನ್ನು ತಿಳಿಯಲು ನೀವು ಬಯಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಯಥಾರ್ಥವಾದ ಆಸಕ್ತಿಯು ತೋರಿಸಲ್ಪಟ್ಟಲ್ಲಿ ಬ್ರೋಷರನ್ನು ನೀಡಿರಿ.] ಈ ಬ್ರೋಷರನ್ನು ಯಾವುದೇ ವೆಚ್ಚವಿಲ್ಲದೆ ನೀಡಲಾಗುತ್ತದೆ. ಆದರೆ ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ನೀವು ದಾನಕೊಡಲು ಬಯಸುವುದಾದರೆ, ಅದನ್ನು ಸ್ವೀಕರಿಸಲು ನಾವು ಸಂತೋಷಿಸುತ್ತೇವೆ.”
4 ಅಥವಾ ಈ ರೀತಿಯಾಗಿ ಮಾತಾಡುವುದು ಕಾರ್ಯಸಾಧಕವೆಂದು ನೀವು ಕಂಡುಕೊಳ್ಳಬಹುದು:
◼ “ಲೋಕದಲ್ಲಿ ಸಂಭವಿಸುವ ಅಚ್ಚರಿಗೊಳಿಸುವಂಥ ಘಟನೆಗಳಿಂದ ಅಥವಾ ಗಂಭೀರವಾದ ವೈಯಕ್ತಿಕ ನಷ್ಟದಿಂದಾಗಿ ಇಂದು ಅನೇಕರು ದುಃಖಿತರಾಗಿದ್ದಾರೆ. ದೇವರು ಮಧ್ಯ ಪ್ರವೇಶಿಸಿ ಇಂಥ ವಿಷಯಗಳು ಸಂಭವಿಸದಂತೆ ಏಕೆ ತಡೆಯುವುದಿಲ್ಲ ಎಂದು ಅನೇಕರು ಯೋಚಿಸುತ್ತಾರೆ. ಆದರೆ, ಮಾನವಕುಲದ ಕಷ್ಟಸಂಕಟವನ್ನು ತೆಗೆದುಹಾಕಲು ದೇವರು ಬೇಗನೆ ಕ್ರಮಕೈಗೊಳ್ಳಲಿದ್ದಾನೆ ಎಂಬ ಆಶ್ವಾಸನೆಯನ್ನು ಬೈಬಲ್ ನೀಡುತ್ತದೆ. ಮಾನವಕುಲಕ್ಕೆ ದೇವರು ಯಾವ ಪ್ರಯೋಜನಗಳನ್ನು ತರಲಿದ್ದಾನೆ ಎಂಬುದನ್ನು ಗಮನಿಸಿರಿ. [ಕೀರ್ತನೆ 37:10, 11ನ್ನು ಓದಿ.] ಇದರ ಕುರಿತು ಹೆಚ್ಚನ್ನು ತಿಳಿಯಲು ನೀವು ಬಯಸುತ್ತೀರೊ?” ನಂತರ ಮೇಲೆ ತಿಳಿಸಿರುವ ರೀತಿಯಲ್ಲಿಯೇ ಮುಕ್ತಾಯಗೊಳಿಸಿರಿ.
5 ಬ್ರೋಷರನ್ನು ಪಡೆದುಕೊಂಡ ಪ್ರತಿಯೊಬ್ಬ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ತೆಗೆದುಕೊಳ್ಳಿರಿ ಮತ್ತು ಆಸಕ್ತಿಯನ್ನು ಬೆಳೆಸಲು ಪುನರ್ಭೇಟಿಯನ್ನು ಮಾಡಿರಿ. ಇದನ್ನು ಹೇಗೆ ಮಾಡಬಲ್ಲಿರಿ ಎಂಬ ಸಲಹೆಯನ್ನು ಮುಂಬರುವ ಸೇವಾ ಕೂಟದಲ್ಲಿ ಪರಿಗಣಿಸಲಾಗುವುದು. ಒಂದುವೇಳೆ ಪ್ರಥಮ ಭೇಟಿಯಲ್ಲಿಯೇ ವ್ಯಕ್ತಿಯೊಬ್ಬನು ಬಹಳ ಆಸಕ್ತಿಯನ್ನು ತೋರಿಸುವುದಾದರೆ, ಎಚ್ಚರಿಕೆಯಿಂದಿರಿ! ಬ್ರೋಷರಿನಿಂದಲೇ ಅಥವಾ ಅಪೇಕ್ಷಿಸು ಬ್ರೋಷರಿನಂಥ ಇನ್ನೊಂದು ಸಾಹಿತ್ಯವನ್ನು ಉಪಯೋಗಿಸುತ್ತಾ ಕೂಡಲೇ ನೀವು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಸಾಧ್ಯವಿರಬಹುದು.
6 ಈ ಲೇಖನವು ಚರ್ಚಿಸಲ್ಪಡುವ ಸೇವಾ ಕೂಟದ ಅನಂತರ ಹೊಸ ಬ್ರೋಷರಿನ ಪ್ರತಿಗಳು ಲಭ್ಯಗೊಳಿಸಲ್ಪಡುವುದು. ಪ್ರಚಾರಕರು ಮತ್ತು ಪಯನೀಯರರು ಆರಂಭದಲ್ಲಿ, ವಿಶೇಷ ಕಾರ್ಯಾಚರಣೆಯ ಮೊದಲ ಕೆಲವು ದಿನಗಳಿಗೆ ಬೇಕಾಗಿರುವಷ್ಟು ಪ್ರತಿಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗುತ್ತದೆ. ಯೆಹೋವನು ತನ್ನ ಸ್ತುತಿಗಾಗಿ ಮತ್ತು ಎಲ್ಲ ಕಡೆಗಳಲ್ಲಿರುವ ಪ್ರಾಮಾಣಿಕ ಹೃದಯದ ಜನರ ಪ್ರಯೋಜನಾರ್ಥವಾಗಿ ಈ ವಿಶೇಷ ಕಾರ್ಯಾಚರಣೆಯನ್ನು ಆಶೀರ್ವದಿಸಲಿ.—ಕೀರ್ತ. 90:17.