ಅಧ್ಯಾಯ 45
ಬೋಧಿಸಲು ಸಹಾಯಕವಾಗಿರುವ ದೃಷ್ಟಾಂತಗಳು/ಉದಾಹರಣೆಗಳು
ದೃಷ್ಟಾಂತಗಳೂ ಉದಾಹರಣೆಗಳೂ ಪ್ರಬಲವಾದ ಬೋಧನಾ ಉಪಕರಣಗಳಾಗಿವೆ. ಅವು ಅನೇಕವೇಳೆ, ಎದ್ದುಕಾಣುವಂಥ ಪರಿಣಾಮಕಾರಿತ್ವದಿಂದ ಗಮನವನ್ನು ಆಕರ್ಷಿಸುತ್ತವೆ ಮತ್ತು ಸೆರೆಹಿಡಿಯುತ್ತವೆ. ಅವು ಯೋಚನಾ ಸಾಮರ್ಥ್ಯವನ್ನು ಹುರಿದುಂಬಿಸುತ್ತವೆ. ಅವು ಭಾವಾವೇಶವನ್ನು ಉತ್ತೇಜಿಸಿ, ಹೀಗೆ ಮನಸ್ಸಾಕ್ಷಿ ಮತ್ತು ಹೃದಯವನ್ನು ತಲಪುತ್ತವೆ. ಕೆಲವೊಮ್ಮೆ, ಯಾವುದಾದರೊಂದು ಪೂರ್ವಕಲ್ಪಿತ ಅಭಿಪ್ರಾಯವನ್ನು ಹೋಗಲಾಡಿಸಲು ದೃಷ್ಟಾಂತಗಳನ್ನು ಉಪಯೋಗಿಸಬಹುದು. ಅವು ಫಲಕಾರಿಯಾದ ಸ್ಮರಣ ಸಹಾಯಕಗಳೂ ಆಗಿವೆ. ನಿಮ್ಮ ಬೋಧನೆಯಲ್ಲಿ ನೀವು ಅವುಗಳನ್ನು ಉಪಯೋಗಿಸುತ್ತೀರೊ?
ಅಲಂಕಾರಗಳೆಂದರೆ ಸಾಮಾನ್ಯವಾಗಿ ಕೇವಲ ಕೆಲವೇ ಪದಗಳು ಆವಶ್ಯಕವಾಗಿರುವ ದೃಷ್ಟಾಂತಗಳು; ಆದರೂ ಅವು ಸುವ್ಯಕ್ತವಾದ ಮಾನಸಿಕ ಚಿತ್ರಣಗಳನ್ನು ರೂಪಿಸಬಲ್ಲವು. ಅವುಗಳನ್ನು ಜಾಗರೂಕತೆಯಿಂದ ಆರಿಸಿಕೊಳ್ಳುವಲ್ಲಿ, ಅವುಗಳ ಅರ್ಥದಲ್ಲಿ ಹೆಚ್ಚಿನದ್ದು ಸ್ವಯಂ ವ್ಯಕ್ತವಾಗುತ್ತದೆ. ಆದರೆ ಒಂದು ಸಂಕ್ಷಿಪ್ತ ವಿವರಣೆಯನ್ನು ಕೊಡುವ ಮೂಲಕ ಒಬ್ಬ ಬೋಧಕನು ಅವುಗಳ ಮೌಲ್ಯವನ್ನು ಪುಷ್ಟಿಗೊಳಿಸಬಹುದು. ಬೈಬಲು ನೀವು ಕಲಿಯಸಾಧ್ಯವಿರುವ ಉದಾಹರಣೆಗಳಿಂದ ತುಂಬಿದೆ.
ಉಪಮಾಲಂಕಾರ ಮತ್ತು ರೂಪಕಾಲಂಕಾರಗಳಿಂದ ಆರಂಭಿಸಿರಿ. ಅಲಂಕಾರದಲ್ಲಿ ಅತಿ ಸರಳವಾದದ್ದು ಉಪಮಾಲಂಕಾರವೇ ಆಗಿದೆ. ದೃಷ್ಟಾಂತಗಳನ್ನು ಉಪಯೋಗಿಸಲು ನೀವು ಈಗ ತಾನೇ ಕಲಿಯುತ್ತಿರುವುದಾದರೆ, ಉಪಮಾಲಂಕಾರದಿಂದ ಆರಂಭಿಸುವುದನ್ನು ನೀವು ಸಹಾಯಕರವಾಗಿ ಕಂಡುಕೊಳ್ಳಬಹುದು. ಇಲ್ಲಿ ಸಾಮಾನ್ಯವಾಗಿ “ಅಂತೆ” ಅಥವಾ “ಹಾಗೆ” ಎಂಬ ಪದಗಳನ್ನು ಉಪಯೋಗಿಸಲಾಗುತ್ತದೆ. ತೀರ ಭಿನ್ನವಾಗಿರುವ ಎರಡು ಸಂಗತಿಗಳನ್ನು ಹೋಲಿಸುವಾಗ, ಉಪಮಾಲಂಕಾರಗಳು ಅವುಗಳಲ್ಲಿ ಸಾಮಾನ್ಯವಾಗಿರುವ ವಿಷಯಗಳನ್ನು ಎತ್ತಿ ತೋರಿಸುತ್ತವೆ. ಬೈಬಲು ಸೃಷ್ಟಿವಸ್ತುಗಳನ್ನು ಅಂದರೆ, ಸಸ್ಯಗಳು, ಪ್ರಾಣಿಗಳು ಮತ್ತು ಆಕಾಶಸ್ಥ ಕಾಯಗಳನ್ನೂ ಮಾನವ ಅನುಭವಗಳನ್ನೂ ಉಪಯೋಗಿಸುವುದರಿಂದ, ಅದರಲ್ಲಿ ಸಮೃದ್ಧವಾದ ಆಲಂಕಾರಿಕ ಭಾಷೆಯಿದೆ. ಕೀರ್ತನೆ 1:3 ರಲ್ಲಿ, ಕ್ರಮವಾಗಿ ದೇವರ ವಾಕ್ಯವನ್ನು ಓದುವಂಥ ಒಬ್ಬ ವ್ಯಕ್ತಿಯು, “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು,” ಅಂದರೆ ಫಲಭರಿತವಾದ ಮತ್ತು ಬಾಡಿಹೋಗದ ಮರದಂತಿರುವನು ಎಂದು ನಮಗೆ ಹೇಳಲಾಗಿದೆ. ದುಷ್ಟನು, ತನ್ನ ಆಹಾರಕ್ಕಾಗಿ ಹೊಂಚಿಕೊಂಡಿರುವ “ಸಿಂಹದಂತೆ” ಇದ್ದಾನೆ ಎಂದು ಹೇಳಲಾಗಿದೆ. (ಕೀರ್ತ. 10:9) ಯೆಹೋವನು ಅಬ್ರಹಾಮನಿಗೆ ಅವನ ಸಂತಾನವು, “ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯ”ವಾಗುವುದೆಂದು ವಾಗ್ದಾನಮಾಡಿದನು. (ಆದಿ. 22:17) “ನಡುಕಟ್ಟು ಸೊಂಟಕ್ಕೆ ಬಿಗಿದಿರುವಂತೆ” ಇಸ್ರಾಯೇಲ್ ಮತ್ತು ಯೆಹೂದವು ತನಗೆ ಬಿಗಿದುಕೊಂಡಿರುವುದು ಎಂದು ಯೆಹೋವನು ತನ್ನ ಮತ್ತು ಇಸ್ರಾಯೇಲ್ ಜನಾಂಗದ ಮಧ್ಯೆ ಸಾಧ್ಯಗೊಳಿಸಿದಂಥ ಆಪ್ತ ಸಂಬಂಧದ ಕುರಿತಾಗಿ ನುಡಿದನು.—ಯೆರೆ. 13:11.
ರೂಪಕಾಲಂಕಾರಗಳು ಸಹ ತೀರ ಭಿನ್ನವಾದ ಎರಡು ವಸ್ತುಗಳ ಮಧ್ಯೆ ಇರುವ ಹೋಲಿಕೆಯನ್ನು ಎತ್ತಿಹೇಳುತ್ತವೆ. ಆದರೆ ರೂಪಕಾಲಂಕಾರಗಳು ಹೆಚ್ಚು ಶಕ್ತಿಭರಿತವಾಗಿರುತ್ತವೆ. ಅದು ಒಂದು ವಸ್ತುವು ಇನ್ನೊಂದು ವಸ್ತುವೇ ಆಗಿದೆ ಎಂಬಂತೆ ಮಾತಾಡುತ್ತಾ, ಹೀಗೆ ಮೊದಲನೆಯ ವಸ್ತುವಿನ ಗುಣದಲ್ಲಿ ಸ್ವಲ್ಪವನ್ನು ಇನ್ನೊಂದು ವಸ್ತುವಿಗೆ ಕೊಡುತ್ತದೆ. ಯೇಸು ತನ್ನ ಶಿಷ್ಯರಿಗೆ, “ನೀವು ಲೋಕಕ್ಕೆ ಬೆಳಕಾಗಿದ್ದೀರಿ” ಎಂದು ಹೇಳಿದನು. (ಮತ್ತಾ. 5:14) ಲಂಗುಲಗಾಮಿಲ್ಲದ ಮಾತು ಮಾಡಬಲ್ಲ ಹಾನಿಯನ್ನು ವರ್ಣಿಸುತ್ತಾ, ಶಿಷ್ಯ ಯಾಕೋಬನು “ನಾಲಿಗೆಯು ಕಿಚ್ಚೇ” ಎಂದು ಬರೆದನು. (ಯಾಕೋ. 3:6) ದಾವೀದನು ಯೆಹೋವನ ಕುರಿತು, “ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲಾ” ಎಂದು ಹಾಡಿದನು. (ಕೀರ್ತ. 31:3) ಚೆನ್ನಾಗಿ ಆಯ್ಕೆಮಾಡಿರುವ ರೂಪಕಾಲಂಕಾರಕ್ಕೆ ಸಾಮಾನ್ಯವಾಗಿ ತುಸು ವಿವರಣೆ ಮಾತ್ರ ಅಗತ್ಯವಿರುತ್ತದೆ ಅಥವಾ ವಿವರಣೆಯ ಅಗತ್ಯವೇ ಇರುವುದಿಲ್ಲ. ಅದರ ಪರಿಣಾಮಕಾರಿತ್ವವನ್ನು ಅದರ ಸಂಕ್ಷಿಪ್ತತೆಯು ವರ್ಧಿಸುತ್ತದೆ. ಒಂದು ರೂಪಕಾಲಂಕಾರವು, ನಿಮ್ಮ ಸಭಿಕರು ವಾಸ್ತವಾಂಶದ ಕುರಿತಾದ ಒಂದು ಸರಳವಾದ ಹೇಳಿಕೆಯಿಂದ ಸಾಧ್ಯವಾಗದಂಥ ವಿಧದಲ್ಲಿ ಒಂದು ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುವುದು.
ಉತ್ಪ್ರೇಕ್ಷಾಲಂಕಾರವು ಅತಿಶಯೋಕ್ತಿಯಾಗಿದೆ ಮತ್ತು ಇದನ್ನು ವಿವೇಕದಿಂದ ಉಪಯೋಗಿಸಬೇಕು. ಇಲ್ಲದಿರುವಲ್ಲಿ ಅದನ್ನು ಅಪಾರ್ಥಮಾಡಿಕೊಳ್ಳುವ ಸಾಧ್ಯತೆಯಿದೆ. ಯೇಸು ಈ ಅಲಂಕಾರವನ್ನು ಒಂದು ಮರೆಯಲಾಗದ ಚಿತ್ರಣವನ್ನು ಬಣ್ಣಿಸಲಿಕ್ಕಾಗಿ ಉಪಯೋಗಿಸಿದನು. ಅವನು ಕೇಳಿದ್ದು: “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?” (ಮತ್ತಾ. 7:3) ನೀವು ಇದನ್ನೊ ಇತರ ಅಲಂಕಾರ ಭಾಷೆಗಳನ್ನೊ ಉಪಯೋಗಿಸಲು ಪ್ರಯತ್ನಿಸುವ ಮುಂಚೆ, ಉಪಮಾಲಂಕಾರ ಮತ್ತು ರೂಪಕಾಲಂಕಾರಗಳ ಪರಿಣಾಮಕಾರಿಯಾದ ಉಪಯೋಗವನ್ನು ಮಾಡಲು ಕಲಿಯಿರಿ.
ಉದಾಹರಣೆಗಳನ್ನು ಉಪಯೋಗಿಸಿರಿ. ಆಲಂಕಾರಿಕ ಭಾಷೆಯನ್ನು ಉಪಯೋಗಿಸುವ ಬದಲು, ಬೋಧನಾ ಸಾಧನಗಳೋಪಾದಿ ನೀವು ಕಾಲ್ಪನಿಕ ಕಥನಗಳನ್ನು ಇಲ್ಲವೆ ನಿಜ ಜೀವನದ ಅನುಭವಗಳಿರುವ ಉದಾಹರಣೆಗಳನ್ನು ಉಪಯೋಗಿಸಲು ಬಯಸಬಹುದು. ಆದರೆ ಇದು ಅತಿರೇಕಕ್ಕೆ ಹೋಗಸಾಧ್ಯವಿರುವುದರಿಂದ, ಇದನ್ನು ವಿವೇಚನೆಯಿಂದ ಉಪಯೋಗಿಸುವ ಅಗತ್ಯವಿದೆ. ಇಂತಹ ಉದಾಹರಣೆಗಳನ್ನು ನಿಜವಾಗಿಯೂ ಪ್ರಾಮುಖ್ಯವಾಗಿರುವ ಅಂಶಗಳನ್ನು ಸಮರ್ಥಿಸಲು ಮಾತ್ರ ಉಪಯೋಗಿಸಬೇಕು. ಮತ್ತು ಅವುಗಳನ್ನು ಕೇವಲ ಆ ಕಥೆಯು ಜ್ಞಾಪಕದಲ್ಲಿರುವಂಥ ರೀತಿಯಲ್ಲಿ ಹೇಳದೆ, ಭಾಷಣದ ಅಂಶವನ್ನು ಜ್ಞಾಪಕದಲ್ಲಿಡುವಂಥ ರೀತಿಯಲ್ಲಿ ಹೇಳಬೇಕು.
ಎಲ್ಲ ಉದಾಹರಣೆಗಳು ವಾಸ್ತವಿಕ ಘಟನೆಗಳಾಗಿರಬೇಕೆಂದಿಲ್ಲವಾದರೂ, ಅವು ನಿಜ ಜೀವನದ ಮನೋಭಾವಗಳನ್ನು ಅಥವಾ ಸನ್ನಿವೇಶಗಳನ್ನು ಪ್ರತಿಬಿಂಬಿಸಬೇಕು. ಪಶ್ಚಾತ್ತಾಪಿಗಳಾದ ಪಾಪಿಗಳನ್ನು ಹೇಗೆ ಪರಿಗಣಿಸಬೇಕೆಂಬುದನ್ನು ಯೇಸು ಕಲಿಸುತ್ತಿದ್ದಾಗ, ತನ್ನ ಕಳೆದುಹೋಗಿದ್ದ ಕುರಿಯನ್ನು ಕಂಡುಕೊಂಡಂಥ ಒಬ್ಬ ಮನುಷ್ಯನ ಸಂತೋಷದ ಕುರಿತು ಹೇಳುವ ಮೂಲಕ ಅವನು ಆ ಅಂಶವನ್ನು ದೃಷ್ಟಾಂತಿಸಿದನು. (ಲೂಕ 15:1-7) ಒಬ್ಬನು ತನ್ನ ನೆರೆಯವನನ್ನು ಪ್ರೀತಿಸುವ ವಿಷಯದಲ್ಲಿ ಧರ್ಮಶಾಸ್ತ್ರವು ಕೊಟ್ಟಿದ್ದ ಆಜ್ಞೆಯ ಪೂರ್ಣ ಇಂಗಿತವನ್ನು ಅರ್ಥಮಾಡಿಕೊಳ್ಳಲು ಅಸಮರ್ಥನಾಗಿದ್ದ ಒಬ್ಬ ಮನುಷ್ಯನಿಗೆ ಉತ್ತರ ಕೊಡುತ್ತಾ ಯೇಸು, ಗಾಯಗೊಂಡಿದ್ದ ಒಬ್ಬ ಮನುಷ್ಯನಿಗೆ ಒಬ್ಬ ಯಾಜಕನೂ ಒಬ್ಬ ಲೇವ್ಯನೂ ಸಹಾಯಮಾಡದೇ ಹೋದರೂ, ಸಮಯಕ್ಕೆ ಸರಿಯಾಗಿ ಸಹಾಯವನ್ನು ನೀಡಿದಂಥ ಸಮಾರ್ಯದವನೊಬ್ಬನ ಕಥೆಯನ್ನು ಹೇಳಿದನು. (ಲೂಕ 10:30-37) ಜನರ ಮನೋಭಾವಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸುವವರಾಗಿರಲು ನೀವು ಕಲಿಯುವಲ್ಲಿ, ಈ ಬೋಧನಾ ಸಾಧನದ ಪರಿಣಾಮಕಾರಿಯಾದ ಉಪಯೋಗವನ್ನು ನೀವು ಮಾಡಬಲ್ಲಿರಿ.
ಪ್ರವಾದಿಯಾದ ನಾತಾನನು ರಾಜ ದಾವೀದನಿಗೆ ತಿದ್ದುಪಾಟನ್ನು ನೀಡಲಿಕ್ಕಾಗಿ ಒಂದು ಕಾಲ್ಪನಿಕ ಸನ್ನಿವೇಶವನ್ನು ನಿರೂಪಿಸಿದನು. ಆ ಕಥನವು ಪರಿಣಾಮಕಾರಿಯಾಗಿತ್ತು, ಏಕೆಂದರೆ ದಾವೀದನು ಆತ್ಮಸಮರ್ಥನೆಯನ್ನು ಮಾಡುತ್ತಾ ಪ್ರತಿಕ್ರಿಯಿಸಬಹುದಾಗಿದ್ದ ಒಂದು ಸನ್ನಿವೇಶವನ್ನು ಇದು ತಪ್ಪಿಸಿತು. ಅನೇಕ ಕುರಿಗಳಿದ್ದ ಒಬ್ಬ ಐಶ್ವರ್ಯವಂತನು ಮತ್ತು ಒಂದೇ ಒಂದು ಹೆಣ್ಣು ಕುರಿಮರಿಯಿದ್ದ ಹಾಗೂ ಅದನ್ನು ಕೋಮಲ ಪರಾಮರಿಕೆಯಿಂದ ಬೆಳೆಸುತ್ತಿದ್ದ ಒಬ್ಬ ಬಡವನ ಕುರಿತಾದ ಕಥೆ ಅದಾಗಿತ್ತು. ಒಂದು ಕಾಲದಲ್ಲಿ ದಾವೀದನು ತಾನೇ ಒಬ್ಬ ಕುರುಬನಾಗಿದ್ದನು, ಆದಕಾರಣ ಅವನು ಆ ಕುರಿಮರಿಯ ಒಡೆಯನ ಭಾವನೆಗಳನ್ನು ಅರ್ಥಮಾಡಿಕೊಳ್ಳಶಕ್ತನಾಗಿದ್ದನು. ಆ ಬಡವನು ಪೋಷಿಸಿದ ಕುರಿಮರಿಯನ್ನು ವಶಪಡಿಸಿಕೊಂಡಿದ್ದ ಐಶ್ವರ್ಯವಂತನ ವಿಷಯದಲ್ಲಿ ದಾವೀದನು ಸಾತ್ವಿಕ ಕ್ರೋಧದಿಂದ ಪ್ರತಿಕ್ರಿಯಿಸಿದನು. ಆಗ ನಾತಾನನು ನೇರವಾಗಿ ದಾವೀದನಿಗೆ ಹೇಳಿದ್ದು: “ಆ ಮನುಷ್ಯನು ನೀನೇ.” ಇದು ದಾವೀದನ ಹೃದಯಕ್ಕೆ ನಾಟಿತು ಮತ್ತು ಅವನು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟನು. (2 ಸಮು. 12:1-14) ಪ್ರ್ಯಾಕ್ಟಿಸ್ ಮಾಡುವಲ್ಲಿ, ನೀವು ಮನಸ್ಸಿಗೆ ಹಿಡಿಸುವಂಥ ರೀತಿಯಲ್ಲಿ ಭಾವನಾತ್ಮಕ ವಾದಾಂಶಗಳೊಂದಿಗೆ ವ್ಯವಹರಿಸಲು ಕಲಿಯಬಲ್ಲಿರಿ.
ಬೋಧಿಸಲಿಕ್ಕಾಗಿ ಅತ್ಯುಪಯುಕ್ತವಾದ ಅನೇಕ ಉದಾಹರಣೆಗಳನ್ನು ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿರುವ ಘಟನೆಗಳಿಂದ ತೆಗೆಯಸಾಧ್ಯವಿದೆ. “ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದಾಗ, ಯೇಸು ಕೆಲವೇ ಮಾತುಗಳಲ್ಲಿ ಇದನ್ನು ಮಾಡಿದನು. (ಲೂಕ 17:32) ತನ್ನ ಸಾನ್ನಿಧ್ಯದ ಸೂಚನೆಯನ್ನು ವಿವರವಾಗಿ ತಿಳಿಸುವಾಗ ಯೇಸು “ನೋಹನ ದಿವಸ”ಗಳಿಗೆ ಸೂಚಿಸಿ ಮಾತಾಡಿದನು. (ಮತ್ತಾ. 24:37-39) ಇಬ್ರಿಯ 11ನೆಯ ಅಧ್ಯಾಯದಲ್ಲಿ, ಅಪೊಸ್ತಲ ಪೌಲನು 16 ಮಂದಿ ಪುರುಷರನ್ನೂ ಸ್ತ್ರೀಯರನ್ನೂ ಹೆಸರಿಸಿ, ಅವರನ್ನು ನಂಬಿಕೆಯ ಮಾದರಿಗಳಾಗಿ ಸೂಚಿಸಿದನು. ನೀವು ಬೈಬಲಿನೊಂದಿಗೆ ಚಿರಪರಿಚಿತರಾಗುವಾಗ, ಶಾಸ್ತ್ರವಚನಗಳು ತಮ್ಮ ಪುಟಗಳಲ್ಲಿ ಹೆಸರಿಸಿರುವ ಘಟನೆಗಳ ಮತ್ತು ಜನರ ಕುರಿತು ಏನು ಹೇಳುತ್ತವೋ ಅದರಿಂದ ಪ್ರಬಲವಾದ ಉದಾಹರಣೆಗಳನ್ನು ಪಡೆದುಕೊಳ್ಳಲು ಶಕ್ತರಾಗುವಿರಿ.—ರೋಮಾ. 15:4; 1 ಕೊರಿಂ. 10:11.
ಕೆಲವೊಮ್ಮೆ ಒಂದು ಭಾಷಣದ ಅಂಶವನ್ನು ಪುಷ್ಟೀಕರಿಸಲಿಕ್ಕಾಗಿ, ಆಧುನಿಕ ದಿನದ ಒಂದು ನಿಜ ಜೀವನ ಅನುಭವವನ್ನು ಹೇಳುವುದನ್ನು ನೀವು ಪ್ರಯೋಜನಕರವಾದದ್ದಾಗಿ ಕಂಡುಕೊಳ್ಳಬಹುದು. ಆದರೆ ಹೀಗೆ ಮಾಡುವಾಗ, ಸತ್ಯವೆಂದು ದೃಢವಾಗಿರುವ ಅನುಭವಗಳನ್ನು ಮಾತ್ರ ಉಪಯೋಗಿಸಲು ಜಾಗರೂಕತೆಯಿಂದ ಇರಿ. ನಿಮ್ಮ ಸಭಿಕರಲ್ಲಿ ಯಾರನ್ನಾದರೂ ಅನಾವಶ್ಯಕವಾಗಿ ಪೇಚಾಟಕ್ಕೆ ಒಳಪಡಿಸುವಂಥವುಗಳನ್ನು ಅಥವಾ ನಿಮ್ಮ ಮುಖ್ಯ ವಿಷಯಕ್ಕೆ ಸಂಬಂಧಿಸದಂಥ ಒಂದು ವಾದಾಸ್ಪದ ವಿಷಯವಿಸ್ತುವಿಗೆ ಗಮನ ಸೆಳೆಯುವ ಅನುಭವಗಳನ್ನು ಉಪಯೋಗಿಸಬೇಡಿರಿ. ಆ ಅನುಭವವು ಒಂದು ಉದ್ದೇಶವನ್ನು ಸಾಧಿಸಬೇಕೆಂಬುದನ್ನೂ ಜ್ಞಾಪಕದಲ್ಲಿಡಿರಿ. ನಿಮ್ಮ ಭಾಷಣದ ಉದ್ದೇಶವನ್ನು ಬಿಟ್ಟು ಬೇರೆ ಕಡೆಗೆ ಗಮನವನ್ನು ಸೆಳೆಯುವ ಅನಾವಶ್ಯಕವಾದ ವಿವರಗಳನ್ನು ತಿಳಿಸಬೇಡಿರಿ.
ಅದರ ಅರ್ಥ ತಿಳಿದೀತೊ? ನೀವು ಯಾವುದೇ ದೃಷ್ಟಾಂತವನ್ನು ಅಥವಾ ಉದಾಹರಣೆಯನ್ನು ಉಪಯೋಗಿಸಿದರೂ, ಅದು ಒಂದು ನಿಶ್ಚಿತ ಉದ್ದೇಶವನ್ನು ಪೂರೈಸಬೇಕು. ಆದರೆ ನೀವು ಅದನ್ನು ಚರ್ಚಿಸುತ್ತಿರುವ ವಿಷಯವಸ್ತುವಿಗೆ ಅನ್ವಯಿಸದಿದ್ದರೆ, ಅದು ಆ ಉದ್ದೇಶವನ್ನು ಪೂರೈಸುವುದೋ?
ತನ್ನ ಶಿಷ್ಯರು ‘ಲೋಕಕ್ಕೆ ಬೆಳಕಾಗಿದ್ದಾರೆ’ ಎಂದು ಸೂಚಿಸಿದ ಬಳಿಕ ಯೇಸು, ದೀಪವನ್ನು ಹೇಗೆ ಉಪಯೋಗಿಸಲಾಗುತ್ತದೆ ಮತ್ತು ಶಿಷ್ಯರಿಗೆ ಇದು ಯಾವ ಜವಾಬ್ದಾರಿಯನ್ನು ಸೂಚಿಸುತ್ತದೆ ಎಂಬುದರ ಕುರಿತು ಕೆಲವು ಹೇಳಿಕೆಗಳನ್ನು ಮಾಡಿದನು. (ಮತ್ತಾ. 5:15, 16) ಕಳೆದುಹೋದ ಕುರಿಯ ದೃಷ್ಟಾಂತವನ್ನು ಕೊಟ್ಟ ಬಳಿಕ ಅವನು, ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯದಲ್ಲಿ ಸ್ವರ್ಗದಲ್ಲಾಗುವ ಸಂತೋಷದ ಕುರಿತು ಮಾತಾಡಿದನು. (ಲೂಕ 15:7) ನೆರೆಯವನಾದ ಸಮಾರ್ಯದವನ ಕುರಿತಾದ ತನ್ನ ಕಥೆಯ ಬಳಿಕ, ಯೇಸು ತನ್ನ ಕೇಳುಗನಿಗೆ ಮನಸ್ಸಿಗೆ ನಾಟುವಂಥ ಪ್ರಶ್ನೆಯನ್ನು ಕೇಳಿದನು ಮತ್ತು ಬಳಿಕ ನೇರವಾದ ಬುದ್ಧಿವಾದವನ್ನು ನೀಡಿದನು. (ಲೂಕ 10:36, 37) ಇದಕ್ಕೆ ವ್ಯತಿರಿಕ್ತವಾಗಿ, ವಿವಿಧ ರೀತಿಯ ನೆಲದ ಕುರಿತಾದ ದೃಷ್ಟಾಂತವನ್ನೂ ಹೊಲದಲ್ಲಿ ಬೆಳೆದಿದ್ದ ಹಣಜಿಯ ದೃಷ್ಟಾಂತವನ್ನೂ ಯೇಸು ಇಡೀ ಜನಸಮೂಹಕ್ಕೆ ವಿವರಿಸದೆ, ಅದರ ವಿವರಣೆಯನ್ನು ಕೇಳುವಷ್ಟು ನಮ್ರರಾಗಿದ್ದವರಿಗೆ ಮಾತ್ರ ವಿವರಿಸಿದನು. (ಮತ್ತಾ. 13:1-30, 36-43) ತನ್ನ ಮರಣಕ್ಕೆ ಮೂರು ದಿವಸಗಳ ಮುಂಚೆ ಯೇಸು, ಕೊಲೆಗಾರರಾದ ದ್ರಾಕ್ಷೇತೋಟದ ವ್ಯವಸಾಯಗಾರರ ಕುರಿತಾದ ದೃಷ್ಟಾಂತವನ್ನು ಕೊಟ್ಟನು. ಅವನು ಇದರ ಅನ್ವಯವನ್ನು ಮಾಡಲಿಲ್ಲ, ಏಕೆಂದರೆ ಅದರ ಅಗತ್ಯವಿರಲಿಲ್ಲ. “ಮಹಾಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತಾಡುತ್ತಾನೆಂದು” ತಿಳಿದುಕೊಂಡರು. (ಮತ್ತಾ. 21:33-45) ಹೀಗೆ, ದೃಷ್ಟಾಂತದ ಸ್ವರೂಪ, ಸಭಿಕರ ಮನೋಭಾವ ಮತ್ತು ನಿಮ್ಮ ಭಾಷಣದ ಉದ್ದೇಶ—ಇವೆಲ್ಲವೂ ಅನ್ವಯವು ಬೇಕೊ ಮತ್ತು ಬೇಕಾಗಿರುವಲ್ಲಿ ಎಷ್ಟರ ಮಟ್ಟಿಗೆ ಅದರ ಅಗತ್ಯವಿದೆ ಎಂಬುದನ್ನು ನಿರ್ಧರಿಸುತ್ತವೆ.
ದೃಷ್ಟಾಂತಗಳನ್ನೂ ಉದಾಹರಣೆಗಳನ್ನೂ ಪರಿಣಾಮಕಾರಿಯಾಗಿ ಉಪಯೋಗಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದಾದರೂ, ಆ ಪ್ರಯತ್ನವು ಸಾರ್ಥಕವಾದದ್ದಾಗಿದೆ. ಚೆನ್ನಾಗಿ ಆರಿಸಲ್ಪಟ್ಟ ದೃಷ್ಟಾಂತಗಳು, ಹೃದಮನಗಳಿಗೆ ಹಿಡಿಸುವಂಥವುಗಳೂ ಆಗಿರುತ್ತವೆ. ಇದರ ಫಲಿತಾಂಶವಾಗಿ ಸಂದೇಶವು ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ರವಾನಿಸಲ್ಪಡುತ್ತದೆ. ಅನೇಕವೇಳೆ ಸರಳವಾದ ವಾಸ್ತವಿಕ ಹೇಳಿಕೆಗಳಿಂದ ಈ ರೀತಿಯ ಪರಿಣಾಮವನ್ನು ಬೀರಸಾಧ್ಯವಿರುವುದಿಲ್ಲ.