ಬೈಬಲ್ ಪುಸ್ತಕ ನಂಬರ್ 22—ಪರಮ ಗೀತ
ಲೇಖಕ: ಸೊಲೊಮೋನ್
ಬರೆಯಲ್ಪಟ್ಟ ಸ್ಥಳ: ಯೆರೂಸಲೇಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ.ಪೂ. 1020
“ಈ ಪರಮೋದಾತ್ತ ಗೀತವು ಇಸ್ರಾಯೇಲಿಗೆ ಕೊಡಲ್ಪಟ್ಟ ದಿನವನ್ನು ನೋಡಲು ಇಡೀ ಲೋಕವೇ ಅನರ್ಹವಾಗಿತ್ತು.” ಹೀಗೆಂದು ಹೇಳುತ್ತ, ಸಾಮಾನ್ಯ ಶಕ ಒಂದನೆಯ ಶತಮಾನದಲ್ಲಿ ಜೀವಿಸುತ್ತಿದ್ದ ಅಕೀಬ ಎಂಬ ಯೆಹೂದಿ ರಬ್ಬಿಯು ಸೊಲೊಮೋನನ ಪರಮ ಗೀತಕ್ಕಾಗಿ ತನ್ನ ಕೃತಜ್ಞತೆಯನ್ನು ತೋರಿಸಿದನು.a “ಪರಮ ಗೀತ” ಎಂದು ಈ ಪುಸ್ತಕಕ್ಕಿರುವ ಶಿರೋನಾಮವು ಹೀಬ್ರು ಗ್ರಂಥಪಾಠದ ಪದಕ್ಕೆ ಪದದ ಅರ್ಥಾನುಸಾರ ಪರಮ ಶ್ರೇಷ್ಠತೆಯನ್ನು ಸೂಚಿಸುತ್ತದೆ. ಇದು ಗೀತೆಗಳ ಒಂದು ಸಂಗ್ರಹವಾಗಿರದೆ ಒಂದೇ ಗೀತೆಯಾಗಿದೆ ಮತ್ತು “ಅತ್ಯುನ್ನತ ಮಟ್ಟದ ಪರಿಪೂರ್ಣತೆಯ, ಇರುವವುಗಳಲ್ಲೇ ಇಲ್ಲವೆ ಬರೆಯಲ್ಪಟ್ಟಿರುವವುಗಳಲ್ಲೇ ಅತ್ಯುತ್ತಮವಾದ ಒಂದು ಗೀತೆಯಾಗಿದೆ.”b
2 ಈ ಗೀತೆಯನ್ನು ಬರೆದವನು, ಅದರ ಪೀಠಿಕೆಯಲ್ಲಿ ಹೇಳಿರುವಂತೆ ಯೆರೂಸಲೇಮಿನ ಅರಸ ಸೊಲೊಮೋನನಾಗಿದ್ದಾನೆ. ಹೀಬ್ರು ಕವಿತೆಯ ಈ ಅತಿ ಸೊಗಸಾದ ಮಾದರಿಯನ್ನು ಬರೆಯಲು ಅವನು ಅತಿ ಅರ್ಹತೆಯುಳ್ಳವನಾಗಿದ್ದನು. (1 ಅರ. 4:32) ಇದು ಅರ್ಥಗರ್ಭಿತವಾದ ಮತ್ತು ಸೌಂದರ್ಯದ ವರ್ಣನೆಯಲ್ಲಿ ಅತಿ ವರ್ಣರಂಜಿತವಾದ ಕವನವಾಗಿದೆ. ಇದರ ಪೌರಸ್ತ್ಯ ಹಿನ್ನೆಲೆಯನ್ನು ಮನಸ್ಸಿನಲ್ಲಿ ಚಿತ್ರೀಕರಿಸುವ ವಾಚಕನು ಇದನ್ನು ಇನ್ನೂ ಹೆಚ್ಚು ಮಾನ್ಯಮಾಡುವನು. (ಪರಮ. 4:11, 13; 5:11; 7:4) ಇದನ್ನು ಬರೆದ ಸಂದರ್ಭವು ಅದ್ವಿತೀಯವಾದುದಾಗಿತ್ತು. ಈ ಮಹಾ ಸೊಲೊಮೋನ್ ರಾಜನು ವಿವೇಕದಲ್ಲಿ ವಿಖ್ಯಾತನು, ಬಲಶಾಲಿಯು ಮತ್ತು ತನ್ನ ಪ್ರಾಪಂಚಿಕ ಐಶ್ವರ್ಯದ ಹೊಳಪಿನಲ್ಲಿ ಶೆಬದ ರಾಣಿಯನ್ನೂ ದಿಗ್ಭ್ರಮೆಗೊಳಿಸಿದವನಾಗಿದ್ದರೂ, ತಾನು ಪ್ರೇಮಿಸಿದ ಸಾಮಾನ್ಯ ಹಳ್ಳಿಗಾಡಿನ ಹುಡುಗಿಯನ್ನು ಪ್ರಭಾವಿಸಲು ಅವನಿಗೆ ಸಾಧ್ಯವಾಗಲಿಲ್ಲ. ಕುರುಬ ಹುಡುಗನೊಬ್ಬನಲ್ಲಿ ಆಕೆಗಿದ್ದ ಅಚಲ ಪ್ರೀತಿಯು ಅರಸನನ್ನು ಸೋಲಿಸಿತು. ಆದಕಾರಣ ಈ ಪುಸ್ತಕವನ್ನು ನ್ಯಾಯವಾಗಿ, ಸೊಲೊಮೋನನ ಭಗ್ನ ಪ್ರೇಮದ ಗೀತೆ ಎಂದು ಕರೆಯಬಹುದು. ಯೆಹೋವನು ಮುಂದಿನ ಯುಗಗಳ ಬೈಬಲ್ ವಾಚಕರ ಪ್ರಯೋಜನಾರ್ಥವಾಗಿ ಈ ಗೀತೆಯನ್ನು ರಚಿಸುವಂತೆ ಅವನನ್ನು ಪ್ರೇರೇಪಿಸಿದನು. ಅವನು ಯೆರೂಸಲೇಮಿನಲ್ಲಿ ಇದನ್ನು ಬರೆದನು. ಇದು ಪ್ರಾಯಶಃ ದೇವಾಲಯದ ರಚನೆ ಮುಗಿದ ಬಳಿಕ ಕೆಲವು ವರುಷಗಳಲ್ಲಿ, ಸುಮಾರು ಸಾ.ಶ.ಪೂ. 1020ರಲ್ಲಿ ಬರೆಯಲ್ಪಟ್ಟಿತು. ಅವನು ಈ ಗೀತೆಯನ್ನು ಬರೆಯುವಷ್ಟರಲ್ಲಿ ಅವನಿಗೆ “ಅರುವತ್ತು ರಾಣಿಯರೂ ಎಂಭತ್ತು ಜನ ಉಪಪತ್ನಿಯರೂ” ಇದ್ದರು. ಇದಕ್ಕೆ ಹೋಲಿಸುವಾಗ, ಅವನ ಆಳ್ವಿಕೆಯ ಅಂತ್ಯದಲ್ಲಿ “ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಮಂದಿ ಉಪಪತ್ನಿಯರಿದ್ದರು.”—ಪರಮ. 6:8; 1 ಅರ. 11:3.
3 ಸೊಲೊಮೋನನ ಪರಮ ಗೀತದ ಅಧಿಕೃತತೆಯು ಆದಿ ಕಾಲಗಳಲ್ಲಿ ಪೂರ್ತಿಯಾಗಿ ಪ್ರಶ್ನಾತೀತವಾಗಿತ್ತು. ನಮ್ಮ ಸಾಮಾನ್ಯ ಶಕಕ್ಕಿಂತ ದೀರ್ಘಕಾಲದ ಮುಂಚೆಯೇ ಅದನ್ನು ಹೀಬ್ರು ಅಂಗೀಕೃತ ಪುಸ್ತಕಗಳ ಅವಿಭಾಜ್ಯ ಮತ್ತು ಪ್ರೇರಿತ ಭಾಗವಾಗಿ ಪರಿಗಣಿಸಲಾಗಿತ್ತು. ಅದನ್ನು ಗ್ರೀಕ್ ಸೆಪ್ಟ್ಯುಅಜಿಂಟ್ನಲ್ಲಿ ಸೇರಿಸಲಾಗಿತ್ತು. ಜೊಸೀಫಸನು ಪವಿತ್ರ ಪುಸ್ತಕಗಳ ತನ್ನ ಪಟ್ಟಿಯಲ್ಲಿ ಅದನ್ನು ಕೂಡಿಸಿದ್ದನು. ಈ ಕಾರಣದಿಂದ ಅದರ ಅಧಿಕೃತತೆಗೆ ಹೀಬ್ರು ಶಾಸ್ತ್ರದ ಬೇರೆ ಯಾವುದೇ ಪುಸ್ತಕಕ್ಕೆ ಇರುವಷ್ಟೇ ಸಾಕ್ಷ್ಯವು ಇದೆ.
4 ಆದರೂ ಕೆಲವರು, ಈ ಪುಸ್ತಕದ ಮೂಲ ಹೀಬ್ರು ಗ್ರಂಥಪಾಠದಲ್ಲಿ ಎಲ್ಲೂ ದೇವರ ಬಗ್ಗೆ ಸೂಚನೆಯಿಲ್ಲವೆಂಬ ಕಾರಣದಿಂದ ಅದರ ಅಧಿಕೃತತೆಯನ್ನು ಸಂದೇಹಕ್ಕೊಳಪಡಿಸಿದ್ದಾರೆ. ಆದರೆ, ಹೇಗೆ “ದೇವರು” ಎಂಬ ಪದವು ಇದ್ದರೆ ಮಾತ್ರ ಒಂದು ಪುಸ್ತಕವು ಅಧಿಕೃತವಾಗುವುದಿಲ್ಲವೊ ಹಾಗೆಯೇ ದೇವರು ಎಂಬ ಪದ ಇಲ್ಲದೆ ಇರುವುದರಿಂದ ಅದು ಅನರ್ಹವಾಗುವುದಿಲ್ಲ. ದೈವಿಕ ನಾಮವು 8ನೆಯ ಅಧ್ಯಾಯದ 6ನೆಯ ವಚನದಲ್ಲಿ ಕಂಡುಬರುತ್ತದೆ. ಅಲ್ಲಿ ಪ್ರೀತಿಯನ್ನು “ಯೆಹೋವನ ರೋಷಾಗ್ನಿ” ಎಂದು ಕರೆಯಲಾಗಿದೆ. “ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ” ಎಂದು ಯೇಸು ಕ್ರಿಸ್ತನು ಹೇಳಿದಾಗ ಯಾವ ಬರಹಗಳನ್ನು ಸಮ್ಮತಿಪೂರ್ವಕವಾಗಿ ಸೂಚಿಸಿದನೊ ಅದರಲ್ಲಿ ಈ ಪುಸ್ತಕವು ಒಂದು ಭಾಗವಾಗಿರುವುದು ನಿರ್ವಿವಾದ. (ಯೋಹಾ. 5:39) ಇದಲ್ಲದೆ, ಪರಮ ಗೀತವು ಆಧ್ಯಾತ್ಮಿಕ ಅರ್ಥದಲ್ಲಿ ಕ್ರಿಸ್ತ ಮತ್ತು “ಮದಲಗಿತ್ತಿಯ” ಮಧ್ಯೆ ಇರುವ ಪರಸ್ಪರ ಪ್ರೀತಿಯ ಉತ್ಕೃಷ್ಟ ಗುಣದ ಶಕ್ತಿಭರಿತ ಚಿತ್ರಣವನ್ನು ಕೊಡುವುದರಿಂದ, ಅದಕ್ಕೆ ಬೈಬಲ್ನ ಅಂಗೀಕೃತ ಪುಸ್ತಕಗಳ ಪಟ್ಟಿಯಲ್ಲಿ ಒಂದು ಅದ್ವಿತೀಯ ಸ್ಥಾನವು ಇದೆ.—ಪ್ರಕ. 19:7, 8; 21:9.
ಪ್ರಯೋಜನಕರವೇಕೆ?
16 ದೇವರ ಮನುಷ್ಯನು ಇಂದು ಪ್ರಯೋಜನಕರವಾಗಿ ಕಂಡುಕೊಳ್ಳಬಹುದಾದ ಯಾವ ಪಾಠಗಳು ಈ ಪ್ರೇಮಗೀತೆಯಲ್ಲಿ ಕಲಿಸಲ್ಪಟ್ಟಿವೆ? ನಂಬಿಗಸ್ತಿಕೆ, ನಿಷ್ಠೆ ಮತ್ತು ದೈವಿಕ ಮೂಲತತ್ತ್ವಗಳ ಕಡೆಗೆ ಸಮಗ್ರತೆ ಇಲ್ಲಿ ಸ್ಪಷ್ಟವಾಗಿ ತೋರಿಸಲ್ಪಟ್ಟಿದೆ. ಒಬ್ಬ ನಿಜ ಪ್ರೇಮಿಯಲ್ಲಿರಬೇಕಾದ ಸದ್ಗುಣ ಮತ್ತು ನಿಷ್ಕಪಟತೆಯ ರಮ್ಯತೆಯನ್ನು ಈ ಗೀತೆ ಬೋಧಿಸುತ್ತದೆ. ನಿಜ ಪ್ರೀತಿ ಅಜೇಯವಾಗಿ, ನಂದಿಸಲಾಗದಂಥದ್ದಾಗಿ ಮತ್ತು ಖರೀದಿಸಲಾರದ್ದಾಗಿ ಇರುತ್ತದೆಂದು ಅದು ಬೋಧಿಸುತ್ತದೆ. ಕ್ರೈಸ್ತ ಯುವ ಸ್ತ್ರೀಪುರುಷರು ಹಾಗೂ ಗಂಡಹೆಂಡತಿಯರು, ಪ್ರಲೋಭನೆಗಳು ಎದ್ದೇಳುವಾಗ ಮತ್ತು ಅಪಕರ್ಷಣೆಗಳು ತೋರಿಬರುವಾಗ ಸಮಗ್ರತೆಯ ಈ ಯೋಗ್ಯ ಮಾದರಿಯಿಂದ ಪ್ರಯೋಜನ ಪಡೆಯಬಲ್ಲರು.
17 ಆದರೆ ಈ ಪ್ರೇರಿತ ಗೀತೆ ಕ್ರೈಸ್ತ ಸಭೆಯಲ್ಲಿರುವ ಎಲ್ಲರಿಗೂ ಅತಿ ಪ್ರಯೋಜನಕರವಾಗಿದೆ. ಒಂದನೆಯ ಶತಮಾನದ ಕ್ರೈಸ್ತರು ಇದನ್ನು ಪ್ರೇರಿತ ಶಾಸ್ತ್ರಗಳ ಭಾಗವೆಂದು ಒಪ್ಪಿಕೊಂಡರು. ಅವರಲ್ಲಿ ಒಬ್ಬನು ಬರೆದುದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾ. 15:4) ಅದೇ ಪ್ರೇರಿತ ಬರಹಗಾರನಾದ ಪೌಲನು ಕ್ರೈಸ್ತ ಸಭೆಗೆ, “ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧಕನ್ಯೆಯಂತೆ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಮಾಡಿದೆನಲ್ಲಾ” ಎಂದು ಬರೆದಾಗ, ಕುರುಬ ಹುಡುಗನಲ್ಲಿ ಆ ಶೂಲಮ್ ಊರಿನ ಹುಡುಗಿಗಿದ್ದ ಪೂರ್ಣ ಪ್ರೀತಿಯ ವಿಷಯವು ಅವನ ಮನಸ್ಸಿನಲ್ಲಿದ್ದಿರುವ ಸಾಧ್ಯತೆ ಇದೆ. ಕ್ರಿಸ್ತನಿಗೆ ಸಭೆಯ ಮೇಲೆ ಇರುವ ಪ್ರೀತಿ ಗಂಡಹೆಂಡತಿಯರ ಮಧ್ಯೆ ಇರುವ ಪ್ರೀತಿಯಂತೆ ಇದೆ ಎಂದು ಸಹ ಪೌಲನು ಬರೆದನು. (2 ಕೊರಿಂ. 11:2; ಎಫೆ. 5:23-27) ಅದಕ್ಕೆ ಯೇಸು ಕ್ರಿಸ್ತನು ಒಳ್ಳೇ ಕುರುಬನು ಆಗಿದ್ದಾನೆ ಮಾತ್ರವಲ್ಲ, ತನ್ನ ಅಭಿಷಿಕ್ತ ಹಿಂಬಾಲಕರೊಂದಿಗೆ “ವಿವಾಹ”ಮಾಡಿಕೊಳ್ಳುವ ಅವರ್ಣನೀಯ ಆನಂದವನ್ನು ಅವರಿಗೆ ಎತ್ತಿಹಿಡಿಯುವ ಅರಸನೂ ಆಗಿದ್ದಾನೆ.—ಪ್ರಕ. 19:9; ಯೋಹಾ. 10:11.
18 ಕ್ರಿಸ್ತನ ಈ ಅಭಿಷಿಕ್ತ ಹಿಂಬಾಲಕರು ಶೂಲೇಮ್ಯ ಹುಡುಗಿಯ ಮಾದರಿಯಿಂದ ಬಹಳಷ್ಟು ಪ್ರಯೋಜನವನ್ನು ಪಡೆಯಬಲ್ಲರೆಂಬುದು ಖಂಡಿತ. ಅವರು ಸಹ ತಮ್ಮ ಪ್ರೀತಿಯಲ್ಲಿ ನಿಷ್ಠರಾಗಿರಬೇಕು. ಈ ಲೋಕದ ಪ್ರಾಪಂಚಿಕತೆಯ ಹೊಳಪಿನಿಂದ ಅಪಕರ್ಷಿತರಾಗಬಾರದು. ಅವರಿಗೆ ಬಹುಮಾನ ದೊರೆಯುವ ತನಕವೂ ಅವರು ತಮ್ಮ ಸಮಗ್ರತೆಯಲ್ಲಿ ಸಮತೋಲನವುಳ್ಳವರಾಗಿಬೇಕು. ಅವರ ಮನಸ್ಸು ಮೇಲಿರುವವುಗಳಲ್ಲಿ ಇಡಲ್ಪಟ್ಟಿರುತ್ತದೆ ಮತ್ತು ಅವರು ‘ಪ್ರಥಮವಾಗಿ ರಾಜ್ಯವನ್ನು’ ಹುಡುಕುತ್ತಾರೆ. ಅವರು ತಮ್ಮ ಕುರುಬನಾದ ಯೇಸು ಕ್ರಿಸ್ತನ ಪ್ರೀತಿಯ ಮಾತುಗಳನ್ನು ಸ್ವೀಕರಿಸುತ್ತಾರೆ. ಈ ಪ್ರಿಯನು ಅದೃಶ್ಯನಾಗಿರುವುದಾದರೂ, ತಮ್ಮ ಪಕ್ಕದಲ್ಲಿಯೇ ಇದ್ದಾನೆಂದೂ ತಾವು ಧೈರ್ಯವನ್ನು ತಂದುಕೊಂಡು ಲೋಕವನ್ನು ಜಯಿಸಲು ಕರೆಕೊಡುತ್ತಿದ್ದಾನೆಂದೂ ತಿಳಿದವರಾಗಿ ಅವರು ಅತಿಯಾಗಿ ಹರ್ಷಿಸುತ್ತಾರೆ. ತಮ್ಮ ಕುರುಬ ರಾಜನಿಗಾಗಿ “ಯೆಹೋವನ ರೋಷಾಗ್ನಿ”ಯಷ್ಟು ಉರಿಯುವಂಥ ತಣಿಸಲಾಗದ ಪ್ರೀತಿಯು ಅವರಿಗಿರುವುದರಿಂದ, ಅವರು ಲೋಕವನ್ನು ಜಯಿಸಿ, ಮಹಿಮಾಭರಿತವಾದ ಸ್ವರ್ಗೀಯ ರಾಜ್ಯದಲ್ಲಿ ಅವನ ಜೊತೆಬಾಧ್ಯಸ್ಥರಾಗಿ ಅವನೊಂದಿಗೆ ಕೂಡಿಕೊಳ್ಳುವರೆಂಬುದು ನಿಶ್ಚಯ. ಹೀಗೆ, ಯಾಹುವಿನ ನಾಮ ಪವಿತ್ರೀಕರಿಸಲ್ಪಡುವುದು!—ಮತ್ತಾ. 6:33; ಯೋಹಾ. 16:33.
[ಪಾದಟಿಪ್ಪಣಿಗಳು]
b ಕ್ಲಾರ್ಕ್ಸ್ ಕಾಮೆಂಟರಿ, ಸಂಪುಟ III, ಪುಟ 841.