ಬೈಬಲ್ ಪುಸ್ತಕ ನಂಬರ್ 23—ಯೆಶಾಯ
ಲೇಖಕ: ಯೆಶಾಯ
ಬರೆಯಲ್ಪಟ್ಟ ಸ್ಥಳ: ಯೆರೂಸಲೇಮ್
ಬರೆದು ಮುಗಿಸಿದ್ದು: ಸಾ.ಶ.ಪೂ. 732ರ ಬಳಿಕ
ಆವರಿಸಲ್ಪಟ್ಟ ಕಾಲ: ಸುಮಾರು ಸಾ.ಶ.ಪೂ. 778-732ರ ಬಳಿಕ
ಕ್ರೂರಿಯಾಗಿದ್ದ ಅಶ್ಶೂರ ಅರಸನಿಂದ ಕರಾಳವಾದ ಕೇಡಿನ ಸೂಚನೆಯ ನೆರಳು ಮಧ್ಯಪೂರ್ವದ ಬೇರೆ ಸಾಮ್ರಾಜ್ಯಗಳ ಮತ್ತು ರಾಜ್ಯಗಳ ಮೇಲೆ ಬಿದ್ದಿತ್ತು. ಆ ಪ್ರದೇಶವೆಲ್ಲ ಒಳಸಂಚು ಮತ್ತು ಮೈತ್ರಿಯ ಕುರಿತಾದ ಮಾತುಕತೆಯಿಂದ ತುಂಬಿತ್ತು. (ಯೆಶಾ. 8:9-13) ಉತ್ತರ ಭಾಗದ ಧರ್ಮಭ್ರಷ್ಟ ಇಸ್ರಾಯೇಲು ಈ ಅಂತಾರಾಷ್ಟ್ರೀಯ ಒಳಸಂಚಿಗೆ ಬೇಗನೆ ಬಲಿಬೀಳಲಿಕ್ಕಿತ್ತು, ಮತ್ತು ದಕ್ಷಿಣ ಭಾಗದಲ್ಲಿ ಯೆಹೂದದ ಅರಸರು ಅಪಾಯದ ಸಂಭವದೊಂದಿಗೆ ಆಳುತ್ತಿದ್ದರು. (2 ಅರ. ಅಧ್ಯಾ. 15-21) ಹೊಸ ಯುದ್ಧಾಯುಧಗಳು ತಯಾರಿಸಲ್ಪಟ್ಟು ಬಳಸಲ್ಪಡುತ್ತಿದ್ದವು ಮತ್ತು ಇದು ಆ ಕಾಲದ ಭೀಕರತೆಯನ್ನು ವರ್ಧಿಸಿತು. (2 ಪೂರ್ವ. 26:14, 15) ಅಂತಹ ಸಮಯದಲ್ಲಿ ಸಂರಕ್ಷಣೆ ಮತ್ತು ವಿಮೋಚನೆಗಾಗಿ ಯಾವನಾದರೂ ಎತ್ತ ನೋಡಸಾಧ್ಯವಿತ್ತು? ಚಿಕ್ಕದಾಗಿದ್ದ ಯೆಹೂದ ರಾಜ್ಯದ ಜನರು ಮತ್ತು ಯಾಜಕರ ತುಟಿಗಳಲ್ಲಿ ಯೆಹೋವನ ಹೆಸರು ಹೊರಬರುತ್ತಿದ್ದರೂ, ಅವರ ಹೃದಯಗಳು ಬೇರೆ ದಿಕ್ಕುಗಳಿಗೆ, ಅಂದರೆ ಮೊದಲು ಅಶ್ಶೂರದ ಕಡೆಗೂ ಬಳಿಕ ಐಗುಪ್ತದ ಕಡೆಗೂ ತಿರುಗಿದ್ದವು. (2 ಅರ. 16:7; 18:21) ಯೆಹೋವನ ಶಕ್ತಿಯಲ್ಲಿ ಅವರಿಗಿದ್ದ ನಂಬಿಕೆ ಕುಂದಿಹೋಗಿತ್ತು. ಮುಚ್ಚುಮರೆಯಿಲ್ಲದ ವಿಗ್ರಹಾರಾಧನೆ ಇರದಿದ್ದ ಕಡೆಗಳಲ್ಲಿ ಕಪಟಾರಾಧನೆ ಅಂದರೆ ನಿಜವಾದ ದೇವಭಯದ ಬದಲಿಗೆ ಬಾಹ್ಯಾಚಾರದ ಮೇಲೆ ಆಧರಿಸಿದ ಆರಾಧನಾ ರೀತಿಯು ಅಸ್ತಿತ್ವದಲ್ಲಿತ್ತು.
2 ಹಾಗಾದರೆ, ಯೆಹೋವನ ಪರವಾಗಿ ಯಾರು ಮಾತಾಡುವರು? ಆತನ ರಕ್ಷಣಾಶಕ್ತಿಯನ್ನು ಯಾರು ಪ್ರಕಟಿಸಾರು? ಆಗ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂಬ ಸಿದ್ಧಮನಸ್ಸಿನ ಉತ್ತರವು ಸಿಕ್ಕಿತು. ಅದು ಇದಕ್ಕಿಂತ ಮೊದಲೇ ಪ್ರವಾದಿಸುತ್ತಿದ್ದ ಯೆಶಾಯನ ಮಾತಾಗಿತ್ತು. ಕುಷ್ಠರೋಗಿಯಾಗಿದ್ದ ಉಜ್ಜೀಯನು ಸತ್ತ ವರುಷ ಅಂದರೆ ಸುಮಾರು ಸಾ.ಶ.ಪೂ. 778ನೇ ವರುಷ ಅದಾಗಿತ್ತು. (ಯೆಶಾ. 6:1, 8) ಯೆಶಾಯ ಎಂಬ ಹೆಸರಿನ ಅರ್ಥ “ರಕ್ಷಣೆಯು ಯೆಹೋವನದ್ದೇ” ಎಂದಾಗಿದೆ. ಇದು ಯೇಸು ಎಂಬ ಹೆಸರಿನ ಅರ್ಥವೂ ಆಗಿದೆ. ಆದರೆ ಇದನ್ನು ವ್ಯತಿರಿಕ್ತ ಕ್ರಮದಲ್ಲಿ (“ಯೆಹೋವನೇ ರಕ್ಷಣೆ”) ಬರೆಯಲಾಗುತ್ತದೆ. ಯೆಶಾಯನ ಪ್ರವಾದನೆಯೂ ಆದಿಯಿಂದ ಅಂತ್ಯದ ವರೆಗೆ, ಯೆಹೋವನೇ ರಕ್ಷಣೆ ಆಗಿದ್ದಾನೆ ಎಂಬ ವಾಸ್ತವಾಂಶವನ್ನು ಎತ್ತಿತೋರಿಸುತ್ತದೆ.
3 ಯೆಶಾಯನು ಆಮೋಚನ (ಯೆಹೂದದ ಇನ್ನೊಬ್ಬ ಪ್ರವಾದಿಯಾಗಿದ್ದ ಆಮೋಸನಲ್ಲ) ಮಗನು. (1:1) ಅವನ ಜನನ ಮರಣಗಳ ಬಗ್ಗೆ ಶಾಸ್ತ್ರವು ಏನೂ ಹೇಳುವುದಿಲ್ಲ, ಆದರೆ ಯೆಹೂದಿ ಸಂಪ್ರದಾಯವು ಹೇಳುವ ಪ್ರಕಾರ ಅವನು ದುಷ್ಟ ಅರಸ ಮನಸ್ಸೆಯಿಂದಾಗಿ ಗರಗಸದಿಂದ ಕೊಯ್ಯಲ್ಪಟ್ಟನು. (ಇಬ್ರಿಯ 11:37ನ್ನು ಹೋಲಿಸಿ.) ಅವನು ಪ್ರವಾದಿನಿಯಾಗಿದ್ದ ತನ್ನ ಹೆಂಡತಿ ಮತ್ತು ಪ್ರವಾದನಾತ್ಮಕ ಹೆಸರುಗಳಿದ್ದ ಕಡಮೆಪಕ್ಷ ಇಬ್ಬರು ಗಂಡು ಮಕ್ಕಳೊಂದಿಗೆ ಯೆರೂಸಲೇಮಿನಲ್ಲಿ ಇದ್ದನೆಂದು ಅವನ ಬರಹಗಳು ತೋರಿಸುತ್ತವೆ. (ಯೆಶಾ. 7:3; 8:1, 3) ಅವನು ಯೆಹೂದದ ಕಡಮೆಪಕ್ಷ ನಾಲ್ವರು ಅರಸರ ಕಾಲದಲ್ಲಿ, ಅಂದರೆ ಉಜ್ಜೀಯ, ಯೋತಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಸುಮಾರು ಸಾ.ಶ.ಪೂ. 778ರಿಂದ (ಉಜ್ಜೀಯನು ಸತ್ತ ವರುಷ ಇಲ್ಲವೆ ಅದಕ್ಕಿಂತಲೂ ಮೊದಲು) ಆರಂಭಿಸಿ, ಕಡಮೆಪಕ್ಷ ಸಾ.ಶ.ಪೂ. 732ರ (ಹಿಜ್ಕೀಯನ 14ನೆಯ ವರುಷದ) ಅನಂತರವೂ ಅಥವಾ 46 ವರುಷಗಳ ವರೆಗಾದರೂ ಸೇವೆಮಾಡಿದನು ಎಂದು ವ್ಯಕ್ತವಾಗುತ್ತದೆ. ಸಾ.ಶ.ಪೂ. 732ರ ವರುಷದೊಳಗೆ ಅವನು ತನ್ನ ಪ್ರವಾದನೆಯನ್ನು ಬರೆದಿಟ್ಟಿದ್ದನೆಂಬುದರಲ್ಲಿ ಸಂದೇಹವಿಲ್ಲ. (1:1; 6:1; 36:1) ಅವನ ದಿನಗಳಲ್ಲಿದ್ದ ಇತರ ಪ್ರವಾದಿಗಳು ಯೆಹೂದದಲ್ಲಿ ಮೀಕ ಮತ್ತು ಉತ್ತರದಲ್ಲಿ ಹೋಶೇಯ ಹಾಗೂ ಓದೇದ್ ಇವರೇ.—ಮೀಕ 1:1; ಹೋಶೇ. 1:1; 2 ಪೂರ್ವ. 28:6-9.
4 ಪ್ರವಾದನಾತ್ಮಕ ನ್ಯಾಯತೀರ್ಪುಗಳನ್ನು ಯೆಶಾಯನು ಬರೆದಿಡಬೇಕೆಂಬ ಯೆಹೋವನ ಆಜ್ಞೆ ಯೆಶಾಯ 30:8ರಲ್ಲಿ ವ್ಯಕ್ತವಾಗುತ್ತದೆ: “ನೀನೀಗ ಮನೆಗೆ ಹೋಗಿ ಈ ಮಾತು ಮುಂದಿನ ಕಾಲದಲ್ಲಿ ಶಾಶ್ವತ ಸಾಕ್ಷಿಯಾಗಿರುವಂತೆ ಇವರೆದುರಿಗೆ ಹಲಿಗೆಯ ಮೇಲೆ ಕೆತ್ತು, ಪುಸ್ತಕದಲ್ಲಿ ಬರೆ.” ಪುರಾತನ ಯೆಹೂದಿ ರಬ್ಬಿಗಳು ಯೆಶಾಯನೇ ಲೇಖಕನೆಂದು ಒಪ್ಪಿ, ಆ ಪುಸ್ತಕವನ್ನು ಪ್ರಮುಖ ಪ್ರವಾದಿಗಳ (ಯೆಶಾಯ, ಯೆರೆಮೀಯ ಮತ್ತು ಯೆಹೆಜ್ಕೇಲ್) ಪುಸ್ತಕಗಳಲ್ಲಿ ಪ್ರಥಮವಾದದ್ದೆಂದು ಸೇರಿಸಿದರು.
5 ಅಧ್ಯಾಯ 40ರಿಂದ ಹಿಡಿದು, ಪುಸ್ತಕದ ಬರವಣಿಗೆಯ ಶೈಲಿಯಲ್ಲಿ ಕಂಡುಬರುವ ಬದಲಾವಣೆಯನ್ನು ಸೂಚಿಸುತ್ತ ಕೆಲವರು ಇದು ಇನ್ನೊಬ್ಬ ಲೇಖಕನನ್ನು ಅಥವಾ “ಎರಡನೆಯ ಯೆಶಾಯ”ನನ್ನು ಸೂಚಿಸುತ್ತದೆಂದು ಹೇಳುತ್ತಾರಾದರೂ, ಬರೆಯಲಾಗುತ್ತಿದ್ದ ವಿಷಯವು ಬದಲಾಗಿರುವುದರಿಂದಲೇ ಇದನ್ನು ಮಾಡಲಾಯಿತೆಂಬ ವಿವರಣೆಯೇ ಇದಕ್ಕೆ ಸಾಕು. ತನ್ನ ಹೆಸರಿನ ಪುಸ್ತಕವನ್ನು ಪೂರ್ತಿಯಾಗಿ ಯೆಶಾಯನೇ ಬರೆದಿರುವುದಕ್ಕೆ ಧಾರಾಳವಾದ ಸಾಕ್ಷ್ಯವಿದೆ. ಉದಾಹರಣೆಗೆ, ಈ ಪುಸ್ತಕದ ಏಕತೆಯು ‘ಇಸ್ರಾಯೇಲ್ಯರ ಸದಮಲಸ್ವಾಮಿ’ ಎಂಬ ಅಭಿವ್ಯಕ್ತಿಯಿಂದ ಕಂಡುಬರುತ್ತದೆ. ಈ ಅಭಿವ್ಯಕ್ತಿ 1-39ನೇ ಅಧ್ಯಾಯಗಳಲ್ಲಿ 12 ಬಾರಿ, ಮತ್ತು 40-66 ಅಧ್ಯಾಯಗಳಲ್ಲಿ 13 ಬಾರಿ, ಹೀಗೆ ಒಟ್ಟು 25 ಬಾರಿ ತೋರಿಬರುವಾಗ, ಮಿಕ್ಕ ಹೀಬ್ರು ಶಾಸ್ತ್ರಗಳಲ್ಲೆಲ್ಲ 6 ಬಾರಿ ಮಾತ್ರ ಕಂಡುಬರುತ್ತದೆ. ಅಪೊಸ್ತಲ ಪೌಲನು ಸಹ ಯೆಶಾಯನ ಪ್ರವಾದನೆಯ ಎಲ್ಲ ಭಾಗಗಳಿಂದ ಉಲ್ಲೇಖಿಸುತ್ತ, ಇಡೀ ಪುಸ್ತಕವು ಯೆಶಾಯನೆಂಬ ಒಬ್ಬನೇ ಲೇಖಕನದ್ದೆಂದು ಸೂಚಿಸುವ ಮೂಲಕ ಯೆಶಾಯ ಪುಸ್ತಕದ ಅಖಂಡತೆಗೆ ಸಾಕ್ಷಿನೀಡುತ್ತಾನೆ.—ರೋಮಾಪುರ 10:16, 20; 15:12ನ್ನು ಯೆಶಾಯ 53:1; 65:1; 11:1ರೊಂದಿಗೆ ಹೋಲಿಸಿ.
6 ಆಸಕ್ತಿಕರವಾಗಿ 1947ರಿಂದ ಆರಂಭಗೊಂಡು, ಮೃತ ಸಮುದ್ರದ ವಾಯವ್ಯ ತೀರದ ಸಮೀಪದಲ್ಲಿರುವ ಖಿರ್ಬ್ಯಾಟ್ ಕೂಮ್ರಾನ್ನ ಗುಹೆಗಳ ಅಂಧಕಾರದಿಂದ ಕೆಲವು ಹಳೆಯ ದಾಖಲೆಗಳನ್ನು ಹೊರತರಲಾಯಿತು. ಅವು ಯೆಶಾಯನ ಪ್ರವಾದನೆಯನ್ನೊಳಗೊಂಡಿದ್ದ ಮೃತ ಸಮುದ್ರದ ಸುರುಳಿಗಳಾಗಿದ್ದವು. ಇವನ್ನು ಸುರಕ್ಷಿತವಾಗಿ ಉಳಿಸಲ್ಪಟ್ಟಿದ್ದ ಮ್ಯಾಸರೆಟಿಕ್ ಪೂರ್ವದ ಹೀಬ್ರು ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ಇದು ಸುಮಾರು 2,000 ವರುಷಗಳಷ್ಟು ಹಳೆಯದು ಆಗಿದ್ದು ಸಾ.ಶ.ಪೂ. ಎರಡನೆಯ ಶತಮಾನದ ಅಂತ್ಯಭಾಗಕ್ಕೆ ಸೇರಿದ್ದಾಗಿದೆ. ಹೀಗೆ, ಅದರ ಗ್ರಂಥಪಾಠವು, ಹೀಬ್ರು ಶಾಸ್ತ್ರಗಳ ಆಧುನಿಕ ಭಾಷಾಂತರಗಳು ಯಾವುದರ ಮೇಲೆ ಆಧಾರಗೊಂಡಿವೆಯೊ ಆ ಮ್ಯಾಸರೆಟಿಕ್ ಗ್ರಂಥಪಾಠಕ್ಕಿಂತ ಸುಮಾರು ಒಂದು ಸಾವಿರ ವರುಷಗಳಿಗಿಂತ ಹೆಚ್ಚು ಹಳೆಯದ್ದಾಗಿದೆ. ಕಾಗುಣಿತದ ಕೆಲವು ಸಣ್ಣ ರೀತಿಯ ವ್ಯತ್ಯಾಸಗಳು ಮತ್ತು ವ್ಯಾಕರಣ ರಚನಾಕ್ರಮದಲ್ಲಿ ವ್ಯತ್ಯಾಸಗಳು ಇವೆಯೆಂಬುದು ನಿಜವಾದರೂ, ಮ್ಯಾಸರೆಟಿಕ್ ಗ್ರಂಥಪಾಠದಿಂದ ಇದು ತಾತ್ತ್ವಿಕವಾಗಿ ಮಾರ್ಪಟ್ಟಿರುವುದಿಲ್ಲ. ನಮ್ಮ ಬೈಬಲ್ಗಳು ಇಂದು ಯೆಶಾಯನ ಮೂಲ ಪ್ರೇರಿತ ಸಂದೇಶವನ್ನು ಒಳಗೊಂಡಿವೆ ಎಂಬುದಕ್ಕೆ ಇದೇ ದೃಢೀಕರಿಸುವ ರುಜುವಾತಾಗಿದೆ. ಇದಲ್ಲದೆ, ಈ ಪುರಾತನ ಸುರುಳಿಗಳು ಇಬ್ಬರು “ಯೆಶಾಯರು” ಇದ್ದರೆಂಬ ವಿಮರ್ಶಕರ ವಾದವನ್ನು ತಪ್ಪೆಂದು ತೋರಿಸುತ್ತವೆ. ಹೇಗೆಂದರೆ, 39ನೆಯ ಅಧ್ಯಾಯವು ಬರೆಯಲ್ಪಟ್ಟಿರುವ ಅಂಕಣದ ಕೊನೆಯ ಸಾಲಿನಲ್ಲೇ 40ನೆಯ ಅಧ್ಯಾಯವು ಶುರುವಾಗಿ, ಅದರ ಪ್ರಥಮ ವಾಕ್ಯವು ಮುಂದಿನ ಅಂಕಣದಲ್ಲಿ ಮುಗಿಯುತ್ತದೆ. ಹಾಗಾದರೆ, ನಕಲು ಪ್ರತಿಯ ಲೇಖಕನಿಗೆ, ಕೆಲವರು ಹೇಳುವಂತೆ ಲೇಖಕರು ಇಲ್ಲಿ ಬದಲಾಗಿದ್ದಾರೆ ಅಥವಾ ಈ ಹಂತದಲ್ಲಿ ಪುಸ್ತಕವು ವಿಭಾಗವಾಗುತ್ತದೆ ಎಂಬ ಆಲೋಚನೆಯೇ ಇರಲಿಲ್ಲವೆಂದು ವ್ಯಕ್ತವಾಗುತ್ತದೆ.a
7 ಯೆಶಾಯನ ಪುಸ್ತಕದ ವಿಶ್ವಾಸಾರ್ಹತೆಗೆ ಹೇರಳವಾದ ರುಜುವಾತಿದೆ. ಕ್ರೈಸ್ತ ಬೈಬಲ್ ಲೇಖಕರು ಹೆಚ್ಚು ಸಲ ಉಲ್ಲೇಖಿಸಿರುವ ಪ್ರವಾದಿಗಳಲ್ಲಿ, ಮೋಶೆಯನ್ನು ಬಿಟ್ಟರೆ, ನಂತರದವನು ಯೆಶಾಯನೇ ಆಗಿದ್ದಾನೆ. ತದ್ರೀತಿ, ಈ ಪುಸ್ತಕ ಕೃತಕವಲ್ಲವೆಂಬುದಕ್ಕೆ ಐತಿಹಾಸಿಕ ಹಾಗೂ ಪ್ರಾಕ್ತನಶಾಸ್ತ್ರೀಯ ರುಜುವಾತು ಧಾರಾಳವಿದೆ. ಉದಾಹರಣೆಗೆ, ಯೆರೂಸಲೇಮಿನ ಮುತ್ತಿಗೆಯ ಕುರಿತ ಸನ್ಹೇರೀಬನ ಸ್ವಂತ ವೃತ್ತಾಂತವಿರುವ ಷಡ್ಭುಜೀಯ ಅಶ್ರಗ ಸೇರಿರುವ ಅಶ್ಶೂರ ರಾಜರ ಐತಿಹಾಸಿಕ ದಾಖಲೆಗಳಿವೆ.b (ಯೆಶಾ., 36, 37ನೆಯ ಅಧ್ಯಾ.) ಒಮ್ಮೆ ಬಾಬೆಲಾಗಿದ್ದ ಹಾಳುಬಿದ್ದಿರುವ ದಿಬ್ಬಗಳು, ಯೆಶಾಯ 13:17-22ರ ನೆರವೇರಿಕೆಗೆ ಈಗಲೂ ಸಾಕ್ಷಿಯನ್ನು ಕೊಡುತ್ತವೆ.c ಯಾರ ಬಗ್ಗೆ ಯೆಶಾಯನು 200 ವರುಷಗಳಿಗೆ ಮುಂಚೆಯೇ ಬರೆದಿಟ್ಟಿದ್ದನೊ ಆ ಕೋರೆಷನೆಂಬ ಹೆಸರಿನ ರಾಜನು ಯೆಹೂದ್ಯರನ್ನು ಬಿಡುಗಡೆಗೊಳಿಸಿದನು ಎಂಬುದಕ್ಕೆ, ಬಾಬೆಲಿನಿಂದ ನಡೆದು ಹಿಂದೆ ಬಂದ ಸಾವಿರಾರು ಮಂದಿ ಯೆಹೂದ್ಯರಲ್ಲಿ ಪ್ರತಿಯೊಬ್ಬನು ಜೀವಂತ ಸಾಕ್ಷ್ಯವಾಗಿದ್ದನು. ಕೋರೆಷನಿಗೆ ಆ ಬಳಿಕ ಯೆಶಾಯನ ಈ ಪ್ರವಾದನಾತ್ಮಕ ಲೇಖನವು ತೋರಿಸಲ್ಪಟ್ಟಿರಬಹುದು, ಏಕೆಂದರೆ ಯೆಹೂದಿ ಜನಶೇಷವನ್ನು ಅವನು ಬಿಡುಗಡೆಗೊಳಿಸಿದಾಗ, ಹಾಗೆ ಬಿಡುಗಡೆಗೊಳಿಸಲು ತನ್ನನ್ನು ಯೆಹೋವನು ನೇಮಿಸಿದ್ದಾನೆಂದು ಅವನು ಹೇಳಿದನು.—ಯೆಶಾ. 44:28; 45:1; ಎಜ್ರ 1:1-3.
8 ಯೆಶಾಯನ ಪುಸ್ತಕದಲ್ಲಿ ಮೆಸ್ಸೀಯನ ಕುರಿತ ಪ್ರವಾದನೆಗಳು ಎದ್ದುಕಾಣುತ್ತವೆ. ಯೆಶಾಯನನ್ನು “ಸುವಾರ್ತಾಕಾರ ಪ್ರವಾದಿ” ಎಂದು ಕರೆಯಲಾಗಿದೆ. ಏಕೆಂದರೆ ಯೇಸುವಿನ ಜೀವನದ ಘಟನೆಗಳ ಕುರಿತಾದ ಅವನ ಅನೇಕಾನೇಕ ಭವಿಷ್ಯವಾಣಿಗಳು ನೆರವೇರಿದವು. ಅಧ್ಯಾಯ 53, ದೀರ್ಘಕಾಲದ ತನಕ “ರಹಸ್ಯಾರ್ಥದ ಅಧ್ಯಾಯ” ಆಗಿತ್ತು. ಅಪೊಸ್ತಲರ ಕೃತ್ಯಗಳು 8ನೆಯ ಅಧ್ಯಾಯದಲ್ಲಿ ಸೂಚಿಸಲ್ಪಟ್ಟಿರುವ ಐಥಿಯೋಪ್ಯದ ಕಂಚುಕಿಗೆ ಮಾತ್ರವಲ್ಲ, ಇಡೀ ಯೆಹೂದಿ ಜನಕ್ಕೆ ಅದು ರಹಸ್ಯಾರ್ಥವಾಗಿತ್ತು. ಅದರಲ್ಲಿ ಯೇಸು ಅನುಭವಿಸಿದ ದುರುಪಚಾರದ ಬಗ್ಗೆ ಎಷ್ಟು ವಿಶದವಾಗಿ ಮುಂತಿಳಿಸಲಾಗಿದೆಯೆಂದರೆ, ಅದು ಒಬ್ಬ ಪ್ರತ್ಯಕ್ಷಸಾಕ್ಷಿ ಬರೆದಂಥ ವೃತ್ತಾಂತದಂತೆ ಇದೆ. ಕೆಳಗಣ ಹೋಲಿಕೆಗಳು ತೋರಿಸುವಂತೆ, ಯೆಶಾಯನ ಈ ಗಮನಾರ್ಹವಾದ ಅಧ್ಯಾಯದ ಪ್ರವಾದನಾತ್ಮಕ ನೆರವೇರಿಕೆಗಳನ್ನು ಗ್ರೀಕ್ ಶಾಸ್ತ್ರಗಳು ದಾಖಲೆಮಾಡಿವೆ: ವಚನ 1—ಯೋಹಾನ 12:37, 38; ವಚನ 2—ಯೋಹಾನ 19:5-7; ವಚನ 3—ಮಾರ್ಕ 9:12; ವಚನ 4—ಮತ್ತಾಯ 8:16, 17; ವಚನ 5—1 ಪೇತ್ರ 2:24; ವಚನ 6—1 ಪೇತ್ರ 2:25; ವಚನ 7—ಅ. ಕೃತ್ಯಗಳು 8:32, 35; ವಚನ 8—ಅ. ಕೃತ್ಯಗಳು 8:33; ವಚನ 9—ಮತ್ತಾಯ 27:57-60; ವಚನ 10—ಇಬ್ರಿಯ 7:27; ವಚನ 11—ರೋಮಾಪುರ 5:18; ವಚನ 12—ಲೂಕ 22:37. ಇಂತಹ ನಿಷ್ಕೃಷ್ಟ ಮುಂತಿಳಿಸುವಿಕೆಗೆ ದೇವರಲ್ಲದೆ ಇನ್ನಾವನು ಮೂಲನಾಗಿರಬಲ್ಲನು?
ಪ್ರಯೋಜನಕರವೇಕೆ?
34 ಯಾವುದೇ ದೃಷ್ಟಿಕೋನದಿಂದ ನೋಡಿದರೂ, ಯೆಶಾಯನ ಪ್ರವಾದನಾತ್ಮಕ ಪುಸ್ತಕ ಯೆಹೋವ ದೇವರು ಕೊಟ್ಟಿರುವ ಅತಿ ಪ್ರಯೋಜನಕರವಾದ ಉಡುಗೊರೆಯಾಗಿದೆ. ಅದು ದೇವರ ಉದಾತ್ತ ಆಲೋಚನೆಗಳನ್ನು ಹೊರಚಿಮ್ಮಿಸುತ್ತದೆ. (ಯೆಶಾ. 55:8-11) ಬೈಬಲ್ ಸತ್ಯಗಳ ಸಾರ್ವಜನಿಕ ಭಾಷಣಕಾರರು ಸುವ್ಯಕ್ತ ಚಿತ್ರಣಗಳ ನಿಧಿಯೊ ಎಂಬಂತಿರುವ ಯೆಶಾಯ ಪುಸ್ತಕದಿಂದ, ಯೇಸುವಿನ ಸಾಮ್ಯಗಳಂತೆಯೇ ಹೃದಯಗಳಲ್ಲಿ ನಾಟಬಲ್ಲ ದೃಷ್ಟಾಂತಗಳನ್ನು ಆಯ್ದುಕೊಳ್ಳಬಲ್ಲರು. ಒಂದೇ ಮರದಿಂದ ಸೌದೆಯನ್ನೂ ಆರಾಧನೆಗಾಗಿ ವಿಗ್ರಹವನ್ನೂ ಮಾಡುವ ಮನುಷ್ಯನ ಮೂರ್ಖತನವನ್ನು ಯೆಶಾಯನು ಪ್ರಬಲವಾಗಿ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತುತ್ತಾನೆ. ಉದ್ದವಿಲ್ಲದ ಹಾಸಿಗೆಯಲ್ಲಿ ಅಗಲವಿಲ್ಲದ ಹೊದಿಕೆಯಿದ್ದವನಾಗಿ ಮಲಗುವ ಮನುಷ್ಯನ ಸುಖದ ಅಭಾವವನ್ನು ನಾವೂ ಅನುಭವಿಸುವಂತೆ ಅವನು ಮಾಡುತ್ತಾನೆ ಮತ್ತು ಬೊಗಳಲು ಸಹ ತೀರ ಸೋಮಾರಿಗಳಾದ ಮೂಗ ನಾಯಿಗಳಂತೆ ಗಾಢನಿದ್ರೆಯಲ್ಲಿರುವ ಪ್ರವಾದಿಗಳ ಸದ್ದನ್ನು ನಾವು ಕೇಳಿಸಿಕೊಳ್ಳುವಂತೆ ಮಾಡುತ್ತಾನೆ. ಯೆಶಾಯನು ತಾನೇ ಹೇಳಿರುವಂತೆ, ‘ಯೆಹೋವನ ಶಾಸ್ತ್ರದಲ್ಲಿ ಹುಡುಕಿ ಓದುವಲ್ಲಿ’ ಅವನು ಈ ದಿನಕ್ಕಾಗಿ ಕೊಟ್ಟಿರುವ ಪ್ರಬಲ ಸಂದೇಶವನ್ನು ನಾವು ಮಾನ್ಯಮಾಡಬಲ್ಲೆವು.—44:14-20; 28:20; 56:10-12; 34:16.
35 ಈ ಪ್ರವಾದನೆಯು ಪ್ರತ್ಯೇಕವಾಗಿ ಮೆಸ್ಸೀಯನ ಮೂಲಕ ಬರುವ ದೇವರ ರಾಜ್ಯದ ಮೇಲೆ ಬೆಳಕುಬೀರುತ್ತದೆ. ಯೆಹೋವನು ತಾನೇ ಪರಮಶ್ರೇಷ್ಠ ಅರಸನು. ನಮ್ಮನ್ನು ರಕ್ಷಿಸುವಾತನು ಆತನೇ. (33:22) ಹಾಗಾದರೆ ಮೆಸ್ಸೀಯನ ಸ್ಥಾನವೇನು? ದೇವದೂತನು ಮಗು ಹುಟ್ಟುವ ವಿಷಯದಲ್ಲಿ ಮರಿಯಳಿಗೆ ಮಾಡಿದ ಪ್ರಕಟನೆಯು, ಆ ಮಗುವು ದಾವೀದನ ಸಿಂಹಾಸನವನ್ನು ಪಡೆಯುವುದರಲ್ಲಿ ಯೆಶಾಯ 9:6, 7ನ್ನು ನೆರವೇರಿಸುತ್ತದೆಂದು ತೋರಿಸಿತು: “ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ಮತ್ತಾಯ 1:22, 23, ಕನ್ನಿಕೆಯಿಂದ ಯೇಸು ಜನಿಸಿದ್ದು ಯೆಶಾಯ 7:14ರ ನೆರವೇರಿಕೆಯೆಂದು ತೋರಿಸಿ, ಆ ಮಗುವನ್ನು “ಇಮ್ಮಾನುವೇಲ್” ಎಂದು ಗುರುತಿಸುತ್ತದೆ. ಸುಮಾರು 30 ವರುಷಗಳ ತರುವಾಯ, “ಪರಲೋಕರಾಜ್ಯವು ಸಮೀಪವಾಯಿತು” ಎಂದು ಸಾರುತ್ತ ಸ್ನಾನಿಕನಾದ ಯೋಹಾನನು ತೋರಿಬಂದನು. ಎಲ್ಲ ನಾಲ್ಕು ಮಂದಿ ಸುವಾರ್ತಾಲೇಖಕರು, ಯೆಶಾಯ 40:3ನ್ನು ಉಲ್ಲೇಖಿಸುತ್ತ ‘ಅಡವಿಯಲ್ಲಿ ಸಾರಿಹೇಳುತ್ತ ಬಂದವನು’ ಈ ಯೋಹಾನನೇ ಎಂದು ತೋರಿಸುತ್ತಾರೆ. (ಮತ್ತಾ. 3:1-3; ಮಾರ್ಕ 1:2-4; ಲೂಕ 3:3-6; ಯೋಹಾ. 1:23) ಯೇಸು ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಜನಾಂಗಗಳನ್ನು ಆಳುವ ಮೆಸ್ಸೀಯನು, ಯೆಹೋವನ ಅಭಿಷಿಕ್ತನು, ಇಷಯನ ಬುಡ ಅಥವಾ ಚಿಗುರು ಆದನು. ಯೆಶಾಯ 11:1, 10ರ ನೆರವೇರಿಕೆಯಲ್ಲಿ, ಜನಾಂಗಗಳು ಅವನನ್ನು ಆಶ್ರಯಿಸಲೇಬೇಕು.—ರೋಮಾ. 15:8, 12.
36 ಯೆಶಾಯನು ಅರಸನಾದ ಮೆಸ್ಸೀಯನನ್ನು ಹೇಗೆ ಗುರುತಿಸುತ್ತಾನೆಂದು ನೋಡಿ! ಯೇಸು ತಾನು ಯೆಹೋವನ ಅಭಿಷಿಕ್ತನು ಎಂಬುದನ್ನು ತೋರಿಸಲು ಯೆಶಾಯನ ಸುರುಳಿಯಿಂದ ತನ್ನ ನೇಮಕವನ್ನು ಓದುತ್ತಾನೆ. ಬಳಿಕ ಅವನು “ದೇವರ ರಾಜ್ಯದ ಸುವಾರ್ತೆಯನ್ನು” ಸಾರಿಹೇಳಿದನು ಮತ್ತು ಅವನು ಹೇಳಿದಂತೆ ಅವನು ‘ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದನು.’ (ಲೂಕ 4:17-19, 43; ಯೆಶಾ. 61:1, 2) ನಾಲ್ಕು ಸುವಾರ್ತಾ ವೃತ್ತಾಂತಗಳು ಯೆಶಾಯ 53ನೆಯ ಅಧ್ಯಾಯದಲ್ಲಿ ಮುಂತಿಳಿಸಿರುವಂತೆ, ಯೇಸುವಿನ ಭೂಶುಶ್ರೂಷೆ ಮತ್ತು ಅವನು ಮರಣಪಟ್ಟ ವಿಧದ ಕುರಿತು ವಿವರವಾಗಿ ತಿಳಿಸುತ್ತವೆ. ಯೆಹೂದ್ಯರು ರಾಜ್ಯದ ಸುವಾರ್ತೆಯನ್ನು ಕೇಳಿಸಿಕೊಂಡು ಯೇಸುವಿನ ಅದ್ಭುತಕಾರ್ಯಗಳನ್ನು ನೋಡಿದರೂ, ಅವರಿಗೆ ಅವಿಶ್ವಾಸದ ಹೃದಯಗಳಿದುದರಿಂದ, ಯೆಶಾಯ 6:9, 10; 29:13; ಮತ್ತು 53:1ರ ನೆರವೇರಿಕೆಯ ಪ್ರಕಾರ ಅವರಿಗೆ ಅದರ ಅರ್ಥ ತಿಳಿಯದೆ ಹೋಯಿತು. (ಮತ್ತಾ. 13:14, 15; ಯೋಹಾ. 12:38-40; ಅ. ಕೃ. 28:24-27; ರೋಮಾ. 10:16; ಮತ್ತಾ. 15:7-9; ಮಾರ್ಕ 7:6, 7) ಯೇಸು ಅವರಿಗೆ ಮುಗ್ಗರಿಸುವ ಬಂಡೆಯಾಗಿದ್ದರೂ ಯೆಹೋವನು ಚೀಯೋನಿನಲ್ಲಿ ಹಾಕಿದ ಅಸ್ತಿವಾರದ ಮೂಲೆಗಲ್ಲಾದನು. ಮತ್ತು ಯೆಶಾಯ 8:14 ಮತ್ತು 28:16ರ ನೆರವೇರಿಕೆಯಲ್ಲಿ ಯೆಹೋವನು ಇದರ ಮೇಲೆಯೇ ತನ್ನ ಆಧ್ಯಾತ್ಮಿಕಾಲಯವನ್ನು ಕಟ್ಟುತ್ತಾನೆ.—ಲೂಕ 20:17; ರೋಮಾ. 9:32, 33; 10:11; 1 ಪೇತ್ರ 2:4-10.
37 ಯೇಸು ಕ್ರಿಸ್ತನ ಅಪೊಸ್ತಲರು ಯೆಶಾಯನ ಪ್ರವಾದನೆಯ ಸದುಪಯೋಗವನ್ನು ಮಾಡುತ್ತ, ಅದನ್ನು ಶುಶ್ರೂಷೆಗೆ ಅನ್ವಯಿಸುತ್ತಿದ್ದರು. ಉದಾಹರಣೆಗೆ, ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಸಾರುವವರ ಅಗತ್ಯವಿದೆ ಎಂಬುದನ್ನು ತೋರಿಸುವಾಗ ಪೌಲನು ಯೆಶಾಯನ ಮಾತುಗಳನ್ನು ಉಲ್ಲೇಖಿಸಿ ಹೇಳುವುದು: “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ.” (ರೋಮಾ. 10:15; ಯೆಶಾ. 52:7; ಮತ್ತು ರೋಮಾಪುರ 10:11, 16, 20, 21ನ್ನೂ ನೋಡಿ.) ಸುವಾರ್ತೆಯ ಶಾಶ್ವತತೆಯನ್ನು ತೋರಿಸುವುದರಲ್ಲಿ ಪೇತ್ರನು ಸಹ ಯೆಶಾಯನ ಮಾತುಗಳನ್ನು ಉಲ್ಲೇಖಿಸುತ್ತಾನೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತದೆ. ಹುಲ್ಲು ಒಣಗಿಹೋಗುವದು, ಹೂವು ಉದುರಿಹೋಗುವದು; ಕರ್ತನ [ಯೆಹೋವನ] ಮಾತೋ ಸದಾಕಾಲವೂ ಇರುವದು ಎಂದು ಹೇಳಿದೆಯಷ್ಟೆ. ಆ ಮಾತು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.”—1 ಪೇತ್ರ 1:24, 25; ಯೆಶಾ. 40:6-8.
38 ಯೆಶಾಯನು ಭವಿಷ್ಯತ್ತಿಗಾಗಿರುವ ರಾಜ್ಯ ನಿರೀಕ್ಷೆಯನ್ನು ಎಷ್ಟು ಮಹಿಮಾಭರಿತವಾಗಿ ಚಿತ್ರಿಸುತ್ತಾನೆ! ಇಲ್ಲಿ ನೋಡಿ! ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದಲ್ಲಿ’ “ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು” ಮತ್ತು ರಾಜಪುತ್ರರು ನ್ಯಾಯದಿಂದ ದೊರೆತನ ಮಾಡುವರು. ಹರ್ಷೋಲ್ಲಾಸಗಳಿಗೆ ಇದು ಎಷ್ಟು ಉತ್ತಮ ಕಾರಣ! (65:17, 18; 32:1, 2) ಪುನಃ, ಪೇತ್ರನು ಯೆಶಾಯನ ಹರ್ಷಕರ ಸಂದೇಶವನ್ನು ಉಲ್ಲೇಖಿಸುತ್ತ ಹೇಳುವುದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ರಾಜ್ಯದ ಈ ಬೆರಗುಗೊಳಿಸುವ ಮುಖ್ಯವಿಷಯವು ಪ್ರಕಟನೆ ಪುಸ್ತಕದ ಅಂತಿಮ ಅಧ್ಯಾಯಗಳಲ್ಲಿ ಪೂರ್ಣ ಮಹಿಮೆಗೇರಿಸಲ್ಪಡುತ್ತದೆ.—ಯೆಶಾ. 66:22, 23; 25:8; ಪ್ರಕ. 21:1-5.
39 ಹೀಗೆ, ಯೆಶಾಯನ ಪುಸ್ತಕವು ಯೆಹೋವನ ವೈರಿಗಳನ್ನೂ ಆತನ ಸೇವಕರೆಂದು ಕಪಟಭಾವದಿಂದ ಹೇಳಿಕೊಳ್ಳುವವರನ್ನೂ ಉಗ್ರವಾಗಿ ಖಂಡಿಸುವಾಗ, ಯಾವುದರ ಮೂಲಕ ಯೆಹೋವನ ಮಹಾ ನಾಮವು ಪವಿತ್ರೀಕರಿಸಲ್ಪಡುವುದೊ ಆ ಮೆಸ್ಸೀಯ ರಾಜ್ಯದ ಶೋಭಾಯಮಾನವಾದ ನಿರೀಕ್ಷೆಯ ಕಡೆಗೆ ಘನತೆಗೇರಿಸುವ ಧ್ವನಿಯಲ್ಲಿ ಕೈತೋರಿಸುತ್ತದೆ. ಯೆಹೋವನ ರಾಜ್ಯದ ಆಶ್ಚರ್ಯಕರವಾದ ಸತ್ಯಗಳನ್ನು ವರ್ಣಿಸಲು ಮತ್ತು ‘ಆತನ ರಕ್ಷಣೆಯ’ ಹರ್ಷಕರ ನಿರೀಕ್ಷೆಯಲ್ಲಿ ನಮ್ಮ ಹೃದಯಗಳನ್ನು ಹುರಿದುಂಬಿಸಲು ಇದು ಧಾರಾಳವಾದ ಸಹಾಯವನ್ನು ನೀಡುತ್ತದೆ.—ಯೆಶಾ. 25:9; 40:28-31.
[ಪಾದಟಿಪ್ಪಣಿಗಳು]
a ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟಗಳು 1221-3.
b ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟ 957; ಸಂಪುಟ 2, ಪುಟಗಳು 894-5.
c ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟ 324.