ಧೈರ್ಯ ಮತ್ತು ವಿವೇಚನೆಯಿಂದ ಸಾರುವುದು
ಜೋಪಾನವಾಗಿಡಿ
1 ಇಂದಿನ ಪರಿಸ್ಥಿತಿಗಳಲ್ಲಿ ಸಾರಲು ನಾವು ಸನ್ನದ್ಧರಾಗಿರುವುದು: ಪರಮಾಧಿಕಾರಿ ಪ್ರಭುವಾದ ಯೆಹೋವನು ಮತ್ತು ಸಭೆಯ ಶಿರಸ್ಸೂ ಆಳುತ್ತಿರುವ ಅರಸನೂ ಆದ ಯೇಸು ಕ್ರಿಸ್ತನು, ಇವರಿಬ್ಬರೂ ಕ್ರೈಸ್ತ ಚಟುವಟಿಕೆಯಲ್ಲಿ ನಮ್ಮೊಂದಿಗಿದ್ದಾರೆ. ಮಾತ್ರವಲ್ಲ, ನಾವು ಬೈಬಲಿನ ಸಹಾಯದಿಂದ ಮತ್ತು ಯೇಸು ಉಪಯೋಗಿಸುತ್ತಿರುವ ‘ನಂಬಿಗಸ್ತ ಆಳು’ ಕೊಡುವ ಅತ್ಯುತ್ತಮ ಸಲಹೆಸೂಚನೆಗಳಿಂದ ಸುಸನ್ನದ್ಧರಾಗಿದ್ದೇವೆ.—2 ತಿಮೊ. 3:17; ಮತ್ತಾ. 24:45-47; 28:20.
2 “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ” ಇರುವುದರಿಂದ ಈಗ ನಾವು ನಮ್ಮ ಶುಶ್ರೂಷೆಯಲ್ಲಿ, ಅದರಲ್ಲೂ ಮನೆಮನೆ ಸೇವೆಯಲ್ಲಿ ಹೆಚ್ಚೆಚ್ಚು ಸವಾಲುಗಳನ್ನು ಎದುರಿಸುತ್ತಿದ್ದೇವೆ. (1 ಕೊರಿಂ. 7:31) ಒಂದನೇ ಶತಮಾನದಲ್ಲಿ ಪರಿಸ್ಥಿತಿಗಳು ಬದಲಾದಾಗ ಆರಂಭದ ಶಿಷ್ಯರು ತಮ್ಮ ಶುಶ್ರೂಷೆಯ ವಿಧಾನವನ್ನು ಸಹ ಹೊಂದಿಸಿಕೊಳ್ಳಬೇಕಾಯಿತು. (ಲೂಕ 22:35, 36) ಸಾರುವಾಗ ನಾವು ವಿವೇಚನೆಯನ್ನು ತೋರಿಸಬೇಕಾಗಿದ್ದರೂ, ಯಾವ ವಿಷಯದಲ್ಲಿಯೂ ಹೆದರಬಾರದು. ಯೆಹೋವನು ಬೇಕಾದ ಬಲವನ್ನು ಖಂಡಿತ ಒದಗಿಸುವನೆಂದು ದೃಢಭರವಸೆಯಿಂದಿರಬೇಕು.—ಫಿಲಿ. 1:28.
3 ವಿರೋಧಗಳ ಮಧ್ಯೆಯೂ ಹೇಗೆ ಸಾರಬೇಕೆಂಬುದರ ಕುರಿತ ಸಹಾಯಕರ ಮಾಹಿತಿಯನ್ನು ಇಸವಿ 2003ರಲ್ಲಿ ಪತ್ರಗಳು ಮತ್ತು ಸೇವಾ ಕೂಟದ ಭಾಗಗಳ ಮೂಲಕ ಒದಗಿಸಲಾಗಿತ್ತು. ಈಗ ಆ ನಿರ್ದೇಶನಗಳನ್ನು ಪರಿಷ್ಕರಿಸಿ ನವೀಕರಿಸಬೇಕಾಗಿದೆ. ಈ ಹಿಂದೆ ನೀಡಲಾದ ನಿರ್ದೇಶನಗಳನ್ನು ಸಮಯ ದಾಟಿದಂತೆ ಅನೇಕ ಸಭೆಗಳು ಪಾಲಿಸಲಿಲ್ಲವೆಂದು ತೋರುತ್ತದೆ. ಆದರೆ ಶುಶ್ರೂಷೆಯಲ್ಲಿ ವಿರೋಧವು ಹೆಚ್ಚಾಗುತ್ತಿರುವುದರಿಂದ ಕೊಡಲ್ಪಡುವ ನಿರ್ದೇಶನಗಳನ್ನು ಈಗ ನಾವು ಜರೂರಿಯಾಗಿ ಪಾಲಿಸಬೇಕಾಗಿದೆ. ದೇಶದ ಎಲ್ಲ ಕಡೆಗಳಲ್ಲಿಯೂ ಒಂದೇ ರೀತಿಯ ಇಲ್ಲವೆ ಒಂದೇ ಪ್ರಮಾಣದ ವಿರೋಧವನ್ನು ಎದುರಿಸಲಾಗುತ್ತಿಲ್ಲ. ಆದುದರಿಂದ, ನಾವೆಲ್ಲರು ನಮ್ಮ ನಮ್ಮ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೆಯಲ್ಲಿ ಈ ನಿರ್ದೇಶನಗಳನ್ನು ಅನ್ವಯಿಸಿಕೊಳ್ಳಬೇಕಾಗಿದೆ. ಈಗಾಗಲೇ ಇರುವ ಸಮಸ್ಯೆಗಳನ್ನು ನಿಭಾಯಿಸುವುದು ಮಾತ್ರವಲ್ಲ ಹೊಸ ಸಮಸ್ಯೆಗಳು ಉದ್ಭವಿಸದಂತೆ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಮನಸ್ಸಿನಲ್ಲಿಡಿರಿ. ಆದುದರಿಂದಲೇ, ಸದ್ಯಕ್ಕೆ ನಾವು ಸಮಸ್ಯೆಗಳನ್ನು ಎದುರಿಸುತ್ತಿಲ್ಲವಾದರೂ ಈ ಲೇಖನದಲ್ಲಿರುವ ಸಲಹೆಗಳನ್ನು ನಾವು ಅನ್ವಯಿಸಿಕೊಳ್ಳತಕ್ಕದ್ದು.
4 ಈ ಪತ್ರದಲ್ಲಿರುವ ಬೈಬಲ್ ಆಧಾರಿತ ಹಾಗೂ ವ್ಯಾವಹಾರಿಕ ಸಲಹೆಗಳಿಗೆ ಕೂಡಿಸಿ ಸಾಮಾನ್ಯ ಕಾನೂನಿಗೆ ಸಂಬಂಧಪಟ್ಟ ವಿಷಯಗಳನ್ನು ಬ್ರಾಂಚ್ ಆಫೀಸ್ ಆದಷ್ಟು ಬೇಗನೆ ಒದಗಿಸಲಿದೆ. ಇದು, ಎಲ್ಲರೂ ತಮ್ಮ ಕಾನೂನುಬದ್ಧ ಹಕ್ಕನ್ನು ತಿಳಿದುಕೊಳ್ಳಲು ನೆರವಾಗುವುದು. ಸಾರುವಾಗ ಬಂಧನಕ್ಕೊಳಗಾದರೆ ಏನು ಮಾಡಬೇಕು ಎಂಬ ನಿರ್ದೇಶನವನ್ನು ಇದು ವಿವರವಾಗಿ ತಿಳಿಸಿಕೊಡುವುದು. ಈ ಮಾಹಿತಿಯು ನಿಮಗೆ ವೈಯಕ್ತಿಕವಾಗಿ ನೆರವಾಗುವುದು. ಅಲ್ಲದೆ, ನಿಮಗೆ ಸಹಾಯ ನೀಡಲು ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳುವಂತೆ ಹಿರಿಯರ ಮಂಡಲಿಗೆ ಸಹಾಯಮಾಡುವುದು.
5 ವಿರೋಧವನ್ನು ಎದುರಿಸಲು ಮತ್ತು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸದಾ ಸಿದ್ಧರಾಗಿರಬೇಕೆಂಬುದನ್ನು ನಾವೆಲ್ಲರೂ ತಿಳಿದುಕೊಂಡಿದ್ದೇವೆ. (2 ತಿಮೊ. 3:12) ನಮಗೆ ಬ್ರಾಂಚ್ ಆಫೀಸಿನ ಪೂರ್ಣ ಬೆಂಬಲವಿರುವುದೆಂಬ ಭರವಸೆಯಿರಲಿ. ಈಗಾಗಲೇ ನಮ್ಮ ಸಹೋದರರು ಎದುರಿಸಿದಂಥ ಸನ್ನಿವೇಶವನ್ನು ಎಂದಾದರೂ ನೀವು ಎದುರಿಸುವಲ್ಲಿ, ಉದಾಹರಣೆಗೆ, ವಿರೋಧಿಗಳ ಗುಂಪು ಸುತ್ತುವರಿಯುವಲ್ಲಿ ಇಲ್ಲವೆ ನ್ಯಾಯಾಲಯದ ‘ಅಧಿಪತಿಗಳ ಮುಂದೆ’ ಅಥವಾ ಪೋಲಿಸ್ ಸ್ಟೇಷನ್ಗೆ ಒಯ್ಯುವಲ್ಲಿ ಮತ್ತಾಯ 10:17-20ರಲ್ಲಿರುವ ಬುದ್ಧಿವಾದವನ್ನು ಮನಸ್ಸಿನಲ್ಲಿಡಿರಿ. ಹಿರಿಯರು ತಮಗೆ ಈಗಾಗಲೇ ಒದಗಿಸಲ್ಪಟ್ಟಿರುವ ನಿರ್ದೇಶನಗಳನ್ನು ಪಾಲಿಸತಕ್ಕದ್ದು ಮತ್ತು ಕೂಡಲೆ ಟೆಲೆಫೋನ್ ಮೂಲಕ ಬ್ರಾಂಚ್ ಆಫೀಸನ್ನು ಸಂಪರ್ಕಿಸಬೇಕು. ಯೆಹೋವನು ತನ್ನ ಸಂಘಟನೆಯ ಮೂಲಕ ನಮಗೆ ಸಹಾಯಮಾಡುವನು ಎಂಬ ಭರವಸೆ ನಮಗಿರಸಾಧ್ಯವಿದೆ.—ಯೆಶಾ. 54:17; ಫಿಲಿ. 1:7, 27-29.
6 ನಮ್ಮ ಶುಶ್ರೂಷೆಯಲ್ಲಿ ವಿರೋಧಗಳನ್ನು ಎದುರಿಸುತ್ತಿರುವ ಕಾರಣ: ವಿರೋಧದ ಮೂಲ ಕಾರಣವನ್ನು ಪ್ರಕಟನೆ 12ನೇ ಅಧ್ಯಾಯದ 12 ಮತ್ತು 17ನೇ ವಚನಗಳಲ್ಲಿ ವಿವರಿಸಲಾಗಿದೆ. ಅದು ಪಿಶಾಚನಾದ ಸೈತಾನನು ಕೋಪವನ್ನು ಕೆಂಡಕಾರುತ್ತಿರುವುದರಿಂದಲೇ ಆಗಿದೆ. ಈ ‘ಕಡೇ ದಿವಸಗಳಲ್ಲಿ’ ಅವನು ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ವಿರೋಧದ ಕಿಚ್ಚನ್ನು ಹೊತ್ತಿಸಿದ್ದಾನೆ. (2 ತಿಮೊ 3:3) ಜೀವದಾಯಕವಾದ ನಮ್ಮ ಸಾರುವ ಕೆಲಸಕ್ಕೆ ಪ್ರತಿಕ್ರಿಯಿಸದಂತೆ ಇತರರನ್ನು ತಡೆಯಲು ಅವನು ಬಯಸುತ್ತಾನೆ. ಅಷ್ಟಲ್ಲದೆ, ನಮ್ಮನ್ನು ಹೆದರಿಸಿ ನಿರುತ್ತೇಜಿಸುವ ಮೂಲಕ ಸಾರುವ ಕೆಲಸವನ್ನು ನಿಲ್ಲಿಸಿಬಿಡಲು ಬಯಸುತ್ತಾನೆ. ಆದರೆ ಈ ವಿಷಯದಲ್ಲಿ ಅವನು ಈ ಹಿಂದೆ ಸೋತಿದ್ದಾನೆ ಮತ್ತು ಈಗ ನಮ್ಮ ಕ್ಷೇತ್ರಗಳಲ್ಲಿ ಅವನು ಮಾಡುತ್ತಿರುವ ಪ್ರಯತ್ನಗಳಲ್ಲಿಯೂ ಮತ್ತೊಮ್ಮೆ ಸೋಲನ್ನು ಅನುಭವಿಸುವನು. ನಾವು ಬೇರೆ ಬೇರೆ ಯಿಯರ್ಬುಕ್ಗಳನ್ನು ಮತ್ತು ಪ್ರೊಕ್ಲೇಮರ್ಸ್ ಪುಸ್ತಕವನ್ನು ಓದಿದರೆ ಸಾಕು ನಮಗೆ ಇದು ಅರ್ಥವಾಗುತ್ತದೆ. ಒಂದರ ಅನಂತರ ಇನ್ನೊಂದು ದೇಶದಲ್ಲಿ ಒಂದರಮೇಲೊಂದರಂತೆ ನಮ್ಮ ಸಹೋದರರು ವಿರೋಧವನ್ನು ಎದುರಿಸಿದ್ದನ್ನು ಮತ್ತು ಯೆಹೋವನ ಬಲದಿಂದ ಅದನ್ನು ತಾಳಿಕೊಳ್ಳುತ್ತಾ ಆತನ ಸಾಕ್ಷಿಗಳಾಗಿ ಮುಂದುವರಿದು ಎಡೆಬಿಡದೆ ಶುಭವರ್ತಮಾನವನ್ನು ಸಾರಿದ್ದನ್ನು ಅಲ್ಲಿ ನಾವು ಕಾಣುತ್ತೇವೆ.—ಅ. ಕೃ. 5:42.
7 ಕೆಲವೊಮ್ಮೆ ನಮ್ಮ ಸ್ಥಳಗಳಲ್ಲಿ ವಾಸಿಸುತ್ತಿರುವ ಜನರು ಧಾರ್ಮಿಕವಾಗಿ ಸೂಕ್ಷ್ಮ ಸಂವೇದಿಗಳಾಗಿರುವುದೇ ನಮ್ಮ ವಿರೋಧಕ್ಕೆ ಕಾರಣವಾಗಿರಬಹುದು. (ಅ. ಕೃ. 19:23-29) ಅನೇಕ ವೇಳೆ, ನಾವು ಕಾನೂನುಬಾಹಿರವಾಗಿ ಮತಾಂತರ ಮಾಡುತ್ತಿದ್ದೇವೆ ಎಂದು ವಿರೋಧಿಗಳು ಸುಳ್ಳು ಆಪಾದನೆ ಹೊರಿಸಲು ಸಹ ಅವರ ಧಾರ್ಮಿಕ ಮನೋಭಾವವೇ ಕಾರಣವಾಗಿರುತ್ತದೆ. ಅಥವಾ, ಬೈಬಲನ್ನು ಉಪಯೋಗಿಸುತ್ತಾ ಜನರ ಧಾರ್ಮಿಕ ನಂಬಿಕೆಗಳ ಕುರಿತು ವಾದಮಾಡುವ ಇಲ್ಲವೆ ಅವರ ದೇವರುಗಳನ್ನು ನಿಂದಿಸುವ ಮೂಲಕ ನಾವು ಕೋಮುಗಲಭೆ ಉಂಟುಮಾಡುತ್ತಿದ್ದೇವೆ ಎಂಬ ಆಪಾದನೆಯನ್ನು ಅವರು ನಮ್ಮ ಮೇಲೆ ಹಾಕಬಹುದು. ಅಂತಹ ಎಲ್ಲ ಅಪಾದನೆಗಳು ಸುಳ್ಳಾಗಿವೆ. ಏಕೆಂದರೆ, ನಾವು ನಮ್ಮ ನೆರೆಹೊರೆಯ ಜನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಿದ್ದೇವಷ್ಟೆ. ಮತ್ತು ಅದಕ್ಕನುಸಾರ ನಡೆಯಲು ಬಯಸುವ ತೀರ್ಮಾನವನ್ನು ಅವರಿಗೆ ಬಿಡುತ್ತೇವೆ. ನಾವು ಸದಾ ಸಭ್ಯತೆಯಿಂದಲೇ ಮಾತಾಡುತ್ತೇವೆ, ಯಾರನ್ನೂ ನಿಂದಿಸುವುದಿಲ್ಲ.—ಅ. ಕೃ. 17:22-28; ರೋಮಾ. 14:12; ಕೊಲೊ. 4:6.
8 ಸೇವೆಯಲ್ಲಿ ಅನುಸರಿಸಬೇಕಾದ ಸೂತ್ರಗಳು: ಧೈರ್ಯವಾಗಿರಿ. ಯೆಹೋವನ ಸಾಕ್ಷಿಗಳು ಮನುಷ್ಯರನ್ನು ಮೆಚ್ಚಿಸುವವರೂ ಅಲ್ಲ, ಅವರಿಗೆ ಭಯಪಡುವುದೂ ಇಲ್ಲ. (ಜ್ಞಾನೋ. 29:25; ಎಫೆ. 6:6; w93-KA 7/1 ಪು. 23) ಅಪೊಸ್ತಲರಂತೆ ನಾವೂ ಕೂಡ ಸಾರಲು ನಮಗಿರುವ ದೇವದತ್ತ ಜವಾಬ್ದಾರಿಯನ್ನು ಪೂರೈಸುವುದನ್ನು ತಡೆಯುವಂತೆ ವಿರೋಧಿಗಳಿಗೆ ಎಡೆಕೊಡುವುದಿಲ್ಲ.—ಅ. ಕೃ. 5:29.
9 ಜಾಗರೂಕರಾಗಿರಿ. ಯೇಸು ಮತ್ತು ದೇವರ ಇತರ ನಂಬಿಗಸ್ತ ಸೇವಕರು ಹಿಂಸೆಗಳನ್ನು ಎದುರಿಸಿದಾಗ ಸನ್ನಿವೇಶಗಳಿಗೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಆದರೂ, ಅವರು ಅನಾವಶ್ಯಕವಾಗಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಲಿಲ್ಲ ಎಂಬುದು ಸುವ್ಯಕ್ತ. ಅವರು ಅಪಾಯಕರ ಸನ್ನಿವೇಶದಲ್ಲಿದ್ದಾಗ ಧೈರ್ಯವನ್ನು ತೋರಿಸಿದರಾದರೂ ಜಾಣರಾಗಿದ್ದರು. (ಮತ್ತಾ. 10:16, 23) ಅವರ ಮುಖ್ಯ ಧ್ಯೇಯವು ಸಾರುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ಯೆಹೋವನಿಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಆಗಿತ್ತು. ವಿಭಿನ್ನ ಸನ್ನಿವೇಶಗಳಿಗೆ ಅವರು ತೋರಿಸಿದ ಪ್ರತಿಕ್ರಿಯೆಯು, ಇಂದು ವಿರೋಧ ಮತ್ತು ಹಿಂಸೆಗಳನ್ನು ಎದುರಿಸುವವರಿಗೆ ಉತ್ತಮ ಮಾದರಿಯಾಗಿದೆ.—w03-KA 10/1 ಪು. 14 ಪ್ಯಾರ 4ನ್ನು ನೋಡಿರಿ.
10 ಪ್ರತೀಕಾರ ಮಾಡದಿರಿ. ಒತ್ತಡದ ಕೆಳಗಿರುವಾಗ ಯೇಸು ಮತ್ತು ಅಪೊಸ್ತಲರು ಪ್ರತಿಕ್ರಿಯಿಸಿದ ವಿಧದಿಂದ ನಾವು ಕಲಿಯುವ ಇನ್ನೊಂದು ಪ್ರಾಮುಖ್ಯ ವಿಷಯವೇನೆಂದರೆ, ಎಂದಿಗೂ ವಿರೋಧಿಗಳಿಗೆ ಪ್ರತೀಕಾರ ಮಾಡದಿರುವುದಾಗಿದೆ. ಯೇಸುವಾಗಲಿ ಆತನ ಶಿಷ್ಯರಾಗಲಿ ವಿರೋಧಿಗಳಿಗೆ ಎದುರಾಗಿ ಹೋರಾಡಲು ಯಾವುದೇ ಗುಂಪಿನ ಮರೆಹೋದದ್ದರ ಕುರಿತು ಅಥವಾ ಅದನ್ನು ತಡೆಗಟ್ಟಲಿಕ್ಕಾಗಿ ಯಾವುದೇ ಚಳುವಳಿಯನ್ನು ಏರ್ಪಡಿಸಿದ್ದರ ಕುರಿತು ನಾವು ಬೈಬಲಿನಲ್ಲಿ ಎಲ್ಲಿಯೂ ಕಾಣುವುದಿಲ್ಲ. ನಾವು ರೋಮಾಪುರ 12:17-21ರಲ್ಲಿರುವ ಅಪೊಸ್ತಲ ಪೌಲನ ಸಲಹೆಯನ್ನು ಚಾಚೂತಪ್ಪದೆ ಪಾಲಿಸಬೇಕು.—ಜ್ಞಾನೋ. 20:22.
11 ಸಾಧ್ಯವಾದರೆ ತೊಂದರೆಯನ್ನು ತಪ್ಪಿಸಿ. ಕೆಲವು ಸಮಯಗಳಲ್ಲಿ ಓಡಿಹೋಗುವುದು ವಿವೇಕತನ ಮತ್ತು ಧೀರತನ ಎಂದು ಬೈಬಲ್ ಸ್ಪಷ್ಟಪಡಿಸುತ್ತದೆ. ಇದನ್ನು ದೃಢೀಕರಿಸುತ್ತಾ ಯೇಸು ತನ್ನ ಶಿಷ್ಯರನ್ನು ಸಾರಲು ಕಳುಹಿಸುವುದಕ್ಕೆ ಮುಂಚೆ ಹೀಗೆ ಹೇಳಿದನು: “ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿ ಹೋಗಿರಿ.” (ಮತ್ತಾ. 10:23) ಹೌದು, ಯೇಸುವಿನ ಶಿಷ್ಯರು ತಮ್ಮ ವಿರೋಧಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕಿತ್ತು. ಅವರು ಒತ್ತಾಯದಿಂದ ಇತರರನ್ನು ಮತಾಂತರಗೊಳಿಸಲು ಆಂದೋಲನವನ್ನು ನಡೆಸಬಾರದಾಗಿತ್ತು. ಅವರು ಶಾಂತಿಯ ಸಂದೇಶವನ್ನು ಸಾರಿದರು. (ಮತ್ತಾ. 10:11-14; ಅ. ಕೃ. 10:34-37) ಆದುದರಿಂದ, ವಿರೋಧಿಗಳ ಕೋಪವು ಸ್ಫೋಟಗೊಳ್ಳಲು ಅವಕಾಶಕೊಡುವ ಬದಲು ಕ್ರೈಸ್ತರು ಓಡಿಹೋಗಬೇಕಿತ್ತು. ಹೀಗೆ ಅವರು ಕೋಪೋದ್ರಿಕ್ತ ಜನರಿಂದ ದೂರವಿರಬೇಕಿತ್ತು. ಈ ರೀತಿಯಲ್ಲಿ, ಅವರು ಯೆಹೋವನೊಂದಿಗಿನ ತಮ್ಮ ಅಮೂಲ್ಯ ಸಂಬಂಧವನ್ನು ಮತ್ತು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಂಡರು.—2 ಕೊರಿಂ. 4:1, 2; w02-KA 4/15 ಪು. 32ನ್ನು ನೋಡಿರಿ.
12 ಆರಿಸಿಕೊಳ್ಳಿರಿ. ಟೆರಿಟೊರಿಯಲ್ಲಿರುವ ಎಲ್ಲ ಜನರು ಒಳ್ಳೇ ಪ್ರತಿಕ್ರಿಯೆ ತೋರಿಸುವುದಿಲ್ಲವೆಂದು ಯೇಸು ತನ್ನ ಶಿಷ್ಯರಿಗೆ ತಿಳಿಸಿದನು. ಅವನು ಹೇಳಿದ್ದು: “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ.” ಒಂದುವೇಳೆ, ಎಲ್ಲರೂ ರಾಜ್ಯ ಸಂದೇಶವನ್ನು ಸ್ವೀಕರಿಸುವಲ್ಲಿ “ವಿಚಾರಣೆ ಮಾಡಿ” ಎಂದು ಹೇಳುವ ಆವಶ್ಯಕತೆಯಿರಲಿಲ್ಲ. ಸಂದೇಶದಲ್ಲಿ ಆಸಕ್ತಿಯನ್ನು ತೋರಿಸದಿದ್ದವರಿಗೆ ಅವರು ಹೇಗೆ ಪ್ರತಿಕ್ರಿಯೆ ತೋರಿಸಬೇಕಿತ್ತು? “ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನು ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ” ಅಂದರೆ, ಅವರು ನ್ಯಾಯತೀರಿಸುವಿಕೆಯನ್ನು ಯೆಹೋವನಿಗೆ ಬಿಟ್ಟು ಸಮಾಧಾನದಿಂದ ಹೋಗಬೇಕಿತ್ತು.—ಮತ್ತಾ. 10:11, 14; w88 7/15 ಪು. 11 ಪ್ಯಾರ 9ನ್ನು ನೋಡಿರಿ.
13 ವಿವೇಚನೆ ತೋರಿಸಿ. ಸೇವೆ ಮಾಡುತ್ತಿರುವಾಗ ಸಂದೇಹಾಸ್ಪದ ಸನ್ನಿವೇಶಗಳು ತೋರಿಬರುವುದಾದರೆ ಆದಷ್ಟು ಬೇಗ ಆ ಸ್ಥಳವನ್ನು ಬಿಟ್ಟುಹೋಗಿ. ಬೈಬಲ್ ಹೇಳುವುದು: “ಜಾಣನು ತನ್ನ ನಡತೆಯನ್ನು [“ಹೆಜ್ಜೆಗಳನ್ನು,” NW] ಚೆನ್ನಾಗಿ ಗಮನಿಸುವನು.” (ಜ್ಞಾನೋ. 14:15) ಅದು ಮತ್ತೂ ಹೇಳುವುದು: “ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.” (ಜ್ಞಾನೋ. 17:14) ನಿಮ್ಮ ಹೆಜ್ಜೆಗಳನ್ನು ಜಾಣ್ಮೆಯಿಂದ ಗಮನಿಸುವ ವಿಷಯದಲ್ಲಿ, ಅಪಾಯ ಉಂಟಾಗಬಹುದಾದ ಕ್ಷೇತ್ರಗಳಿಗೆ ಹೋಗದಿರುವುದು ಸೇರಿದೆ. ಒಬ್ಬರೇ ಸೇವೆ ಮಾಡುವುದು ಅಷ್ಟಾಗಿ ಯೋಗ್ಯವಲ್ಲದ ಸ್ಥಳಗಳಲ್ಲಿ ನಿಮ್ಮೊಡನೆ ಕೆಲಸಮಾಡಲು ಇನ್ನೊಬ್ಬ ಪ್ರಚಾರಕರನ್ನು ಕರೆದೊಯ್ಯಿರಿ. ಅಪಾರ್ಟ್ಮಂಟ್ ಬಿಲ್ಡಿಂಗ್ಗಳಲ್ಲಿ ಸೇವೆ ಮಾಡುವಾಗ ಹಲವಾರು ಪ್ರಚಾರಕರು ಒಂದೇ ಅಂತಸ್ತಿನಲ್ಲಿ, ಸಾಧ್ಯವಾದರೆ ಸಹೋದರರ ನೇತೃತ್ವದಲ್ಲಿ ಕೆಲಸಮಾಡುವುದು ಪ್ರಯೋಜನಕರವಾಗಿರಬಹುದು. ಮನೆಯೊಳಗೆ ಅಥವಾ ಅಪಾರ್ಟ್ಮಂಟ್ ಒಳಗೆ ಆಮಂತ್ರಿಸಿದರೆ ಒಳಗೆ ಹೋಗುವ ಮುನ್ನ ವಿವೇಚನೆ ತೋರಿಸಿರಿ.
14 ಹಿರಿಯರ ಮಂಡಲಿಯು ಈಗ ಕಾರ್ಯರೂಪಕ್ಕೆ ಹಾಕಬೇಕಾದ ವಿಷಯಗಳು: ಸೇವಾ ಕಮಿಟಿಯ ನೇತೃತ್ವದಲ್ಲಿ ಹಿರಿಯರು ಸಭಾ ಟೆರಿಟೊರಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಧಾರ್ಮಿಕ ಅತಿರೇಕಿಗಳು (religious extremists) ಎಲ್ಲೆಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಧಾರ್ಮಿಕ ಅತಿರೇಕಿಗಳು ಹೆಚ್ಚಾಗಿ ಹತ್ತಿರ ಹತ್ತಿರದಲ್ಲೇ ವಾಸಿಸುತ್ತಾರೆ. ಟೆರಿಟೊರಿಯಲ್ಲಿ ಅಂತಹ ವ್ಯಕ್ತಿಗಳ ಕೇವಲ ಒಂದು ಮನೆ ಇರುವುದಾದರೂ ಅದನ್ನು ಸಹ ನಕ್ಷೆಯಲ್ಲಿ ಗುರುತಿಸಬೇಕು. ಅಂಥ ಮನೆ ಮತ್ತು ಸ್ಥಳಗಳನ್ನು ಬಿಟ್ಟುಬಿಡಬೇಕು. ಸಾರುವ ಕೆಲಸ ಮಾಡಲಿಕ್ಕಾಗಿ ಸಭೆಗೆ ಇತರ ಟೆರಿಟೊರಿಗಳು ಇವೆ. ಅವು ಒಳ್ಳೆಯ ಫಲಿತಾಂಶಗಳನ್ನು ತರಬಹುದು.
15 ಕ್ಷೇತ್ರ ಸೇವೆಯ ಕೂಟಕ್ಕಾಗಿರುವ ಸಭಾ ಏರ್ಪಾಡನ್ನೂ ಮತ್ತು ಗುಂಪಿನ ಏರ್ಪಾಡನ್ನೂ ಪರಿಶೀಲಿಸಿರಿ. ಸಮಸ್ಯಾತ್ಮಕ ಪ್ರದೇಶಗಳಲ್ಲಿರುವ ಸಹೋದರರ ಮನೆಗಳನ್ನು ಇಂಥ ಕೂಟಕ್ಕೆ ಉಪಯೋಗಿಸದಿರುವುದನ್ನು ಖಚಿತಪಡಿಸಿಕೊಳ್ಳಿ. ಕ್ಷೇತ್ರ ಸೇವೆಗಾಗಿ ಟೆರಿಟೊರಿಯಲ್ಲಿ ದೊಡ್ಡ ದೊಡ್ಡ ಗುಂಪಾಗಿ ಸೇರದಿರುವುದೂ ಒಳ್ಳೇದು. ಸೇವೆ ಮಾಡುವಾಗ ಸಹ ವಿವೇಚನೆಯನ್ನು ತೋರಿಸಬೇಕು. ಗದ್ದಲವೆಬ್ಬಿಸುತ್ತಾ ಗಟ್ಟಿಯಾಗಿ ಮಾತಾಡುವುದು, ಸೇವೆ ಮುಗಿದ ಅನಂತರ ಒಂದು ಸ್ಥಳದಲ್ಲಿ ಎಲ್ಲರೂ ಒಟ್ಟುಸೇರುವುದು ಮತ್ತಿತ್ತರ ರೀತಿಗಳಲ್ಲಿ ಅನಗತ್ಯ ಗಮನ ಸೆಳೆಯಬಾರದು.
16 ಇದಕ್ಕೆ ಹೊಂದಿಕೆಯಲ್ಲಿ 1998ರ ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 5ರಲ್ಲಿ ಹೀಗೆ ತಿಳಿಸಿತ್ತು: ‘ಒಳ್ಳೆಯ ರೀತಿಯಲ್ಲಿ ಸಂಘಟಿಸುವುದಾದರೆ, ನಾವು ಟೆರಿಟೊರಿಯಲ್ಲಿ ಒಟ್ಟುಗೂಡುವಾಗ ದೊಡ್ಡದಾದ ಮತ್ತು ಎಲ್ಲರಿಗೂ ಎದ್ದುಕಾಣುವಂತಹ ರೀತಿಯಲ್ಲಿ ಗುಂಪುಕಟ್ಟಿಕೊಳ್ಳುವುದನ್ನು ತಪ್ಪಿಸಸಾಧ್ಯವಿದೆ. ಪ್ರಚಾರಕರ ಒಂದು ದೊಡ್ಡ ಗುಂಪು ಹಲವಾರು ಕಾರು, ಮೋಟಾರುಸೈಕಲ್, ಸ್ಕೂಟರ್ ಅಥವಾ ವ್ಯಾನ್ಗಳಲ್ಲಿ ಬಂದು ತಮ್ಮ ಮನೆ ಮುಂದೆ ಇಳಿಯುವಾಗ ಕೆಲವು ಮನೆಯವರು ಭಯಭೀತರಾಗಬಹುದು. ಅವರ ನಿವಾಸಸ್ಥಾನಗಳ ಮೇಲೆ ನಾವು ‘ದಾಳಿಮಾಡುತ್ತಿದ್ದೇವೆ’ ಎಂಬ ಅಭಿಪ್ರಾಯವನ್ನು ಮೂಡಿಸಬಾರದು. ಕ್ಷೇತ್ರ ಸೇವೆಗಾಗಿ ಕೂಟಗಳನ್ನು ನಡೆಸುವಾಗಲೇ, ಟೆರಿಟೊರಿಯಲ್ಲಿ ಯಾರ್ಯಾರು ಕೆಲಸಮಾಡುತ್ತಾರೆ ಎಂಬುದನ್ನು ಗೊತ್ತುಪಡಿಸುವುದು ಉತ್ತಮ. ಒಂದು ಕುಟುಂಬದಂತೆ ತೋರಿಬರುವ ಪ್ರಚಾರಕರ ಚಿಕ್ಕ ಗುಂಪುಗಳನ್ನು ನೋಡುವಾಗ, ಮನೆಯವರು ಅಷ್ಟೇನೂ ಭಯಪಡುವುದಿಲ್ಲ ಮತ್ತು ಇದು ಟೆರಿಟೊರಿಯಲ್ಲಿ ಕೆಲಸಮಾಡುವಾಗ, ಮತ್ತೆ ಸಂಘಟಿಸುವದನ್ನು ಅವಶ್ಯಪಡಿಸುವದಿಲ್ಲ.’
17 ಒಂದೇ ಟೆರಿಟೊರಿಯಲ್ಲಿ ಕೆಲಸಮಾಡುತ್ತಿರುವ ವಿವಿಧ ಭಾಷೆಗಳನ್ನಾಡುವ ಗುಂಪುಗಳು ಅಥವಾ ಸಭೆಗಳು ಆ ಟೆರಿಟೊರಿಯಲ್ಲಿ ಸೇವೆ ಮಾಡುವಷ್ಟು ಕಾಲವು ಎಲ್ಲ ವಿಷಯಗಳನ್ನು “ಮರ್ಯಾದೆಯಿಂದಲೂ ಕ್ರಮದಿಂದಲೂ” ಮಾಡುತ್ತಿವೆ ಎಂಬುದನ್ನು ಸಹ ಹಿರಿಯರು ಪರೀಕ್ಷಿಸುವರು. (1 ಕೊರಿಂ. 14:40) ಇದು ಸಹ ಸೇವೆ ಮಾಡುತ್ತಿರುವ ಗುಂಪುಗಳ ಕಡೆಗೆ ಅನುಚಿತ ಗಮನವನ್ನು ಸೆಳೆಯದಿರಲಿಕ್ಕಾಗಿಯೇ.
18 ಪ್ರತಿಯೊಬ್ಬರು ಗಮನಕೊಡಬೇಕಾದ ಸಂಗತಿಗಳು: ಸಭೆಗಳು ಸೇವಾ ಚಟುವಟಿಕೆಯನ್ನು ಮಾಡುತ್ತಿರುವ ರೀತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗಿರುವುದರಿಂದ, ಮುಂದೆ ಯೋಜಿಸಲಾಗುವ ಏರ್ಪಾಡುಗಳಿಗೆ ಎಲ್ಲರೂ ಅಧೀನರಾಗಿ ಕೆಲಸಮಾಡುವುದು ಅತ್ಯಗತ್ಯವಾಗಿದೆ.
19 ನಾವು ಮನೆಯವರಿಗೆ ಯಾವುದೇ ಪುಸ್ತಕ, ಪತ್ರಿಕೆ, ಟ್ರ್ಯಾಕ್ಟ್ ಅಥವಾ ಇತರ ಸಾಹಿತ್ಯಗಳನ್ನು ನೀಡುವ ಮುಂಚೆ, ನಮ್ಮೊಂದಿಗೆ ಸಂಭಾಷಿಸಲು ಮತ್ತು ನಮ್ಮ ಸಂದೇಶಕ್ಕೆ ಕಿವಿಗೊಡಲು ಆ ಮನೆಯವರಿಗೆ ಇಷ್ಟವಿದೆಯೋ ಎಂದು ಮೊದಲು ಖಚಿತಪಡಿಸಿಕೊಳ್ಳುವುದು ಜಾಣತನವಾಗಿದೆ. ಬೈಬಲಿನಿಂದ ಶುಭಸಮಾಚಾರವನ್ನು ತಿಳಿಸುವುದೇ ನಮ್ಮ ಭೇಟಿಯ ಉದ್ದೇಶವಾಗಿದೆ. ಮನೆಯವರು ಶಾಂತಮನಸ್ಸುಳ್ಳವರೆಂದು ಕಂಡುಕೊಂಡ ಬಳಿಕ ಸಾಹಿತ್ಯ ನೀಡಲು ನಾವು ನಿರ್ಧರಿಸಬಹುದು.
20 ನಾವು ಶುಶ್ರೂಷೆಯಲ್ಲಿ ಭಾಗವಹಿಸುವಾಗ ನಮ್ಮ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಜಾಗರೂಕತೆಯಿಂದ ಗಮನಿಸುತ್ತಿರಬೇಕು. ಮನೆಯವರು ವಿರೋಧವನ್ನು ತರುತ್ತಾರೆ ಎಂಬ ಸೂಚನೆ ದೊರೆತೊಡನೆ ಜಾಣ್ಮೆಯಿಂದ ಸಂಭಾಷಣೆಯನ್ನು ಕೊನೆಗೊಳಿಸಿ ಅಲ್ಲಿಂದ ಹೊರಡಿರಿ. ಅವಶ್ಯವಾದಲ್ಲಿ ಆ ಕ್ಷೇತ್ರವನ್ನೇ ಬಿಟ್ಟುಬನ್ನಿರಿ. ಇಬ್ಬರು ಜೊತೆಯಾಗಿ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವುದಾದರೆ, ಒಬ್ಬನು ಸಾಕ್ಷಿ ನೀಡುತ್ತಿರುವಾಗ ಮತ್ತೊಬ್ಬನು ಸಮೀಪದಲ್ಲಿ ನಡೆಯುವ ಘಟನೆಗಳ ಪರಿವೆಯೇ ಇಲ್ಲದಷ್ಟು ಸಂಭಾಷಣೆಯಲ್ಲಿ ತಲ್ಲೀನಾಗದೆ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎಂದು ಕಣ್ಣಿಡಬೇಕು. ಅನೇಕ ವೇಳೆ ತೊಂದರೆಗಳು ಆರಂಭವಾಗುವುದು ಯಾರೋ ಒಬ್ಬರು ನಾವು ಮಾಡುತ್ತಿರುವ ಕೆಲಸವನ್ನು ಗಮನಿಸುವಾಗಲೇ. ಬಳಿಕ ಆ ವ್ಯಕ್ತಿ, ನಮ್ಮನ್ನು ಸುತ್ತುವರಿಯುವಂತೆ ಇತರರನ್ನು ಒಟ್ಟುಗೂಡಿಸುತ್ತಾನೆ.
21 ತಪ್ಪಭಿಪ್ರಾಯ ಉಂಟುಮಾಡುವ ಪದಗಳನ್ನು ನಾವು ಉಪಯೋಗಿಸಬಾರದು. ಉದಾಹರಣೆಗೆ, ಬೈಬಲಿನಿಂದ ಕೆಲವೊಂದು ಒಳ್ಳೆಯ ಸಮಾಚಾರಗಳನ್ನು ‘ಹಂಚಿಕೊಳ್ಳಲಿಕ್ಕಾಗಿ’ ನಾವು ಬಂದಿದ್ದೇವೆ ಎಂದು ನಾವು ಹೇಳಬಹುದು. ನಾವು ಏನನ್ನೋ ‘ಕೊಡುತ್ತೇವೆ’ ಎಂಬ ಪದಪ್ರಯೋಗ ಮಾಡುವಲ್ಲಿ ನಾವು ಅವರನ್ನು ಮತಾಂತರಗೊಳಿಸಲು ಮನವೊಲಿಸುತ್ತಿದ್ದೇವೆ ಎಂದು ಅವರು ಕಥೆಕಟ್ಟಬಹುದು. ಒಂದು ವೇಳೆ ಅವರು ತಮ್ಮ ಆರಾಧನೆಯ ವಿಧಾನದ ಕುರಿತು ನಮ್ಮ ಅಭಿಪ್ರಾಯವೇನೆಂದು ಕೇಳಬಹುದು. ಅಥವಾ ವಿಗ್ರಹಾರಾಧನೆಯ ಕುರಿತು ನಮ್ಮ ಅನಿಸಿಕೆಯೇನೆಂದು ಕೇಳಬಹುದು. ಆಗ, ಅಂಥ ವಿಷಯಗಳನ್ನು ತೀರ್ಪು ಮಾಡಲಿಕ್ಕಾಗಿ ನಾವು ಬಂದಿಲ್ಲ ಮತ್ತು ಅವರ ಧಾರ್ಮಿಕ ವಿಷಯಗಳಲ್ಲಿ ಅವರು ಮಾಡಿರುವ ಆಯ್ಕೆಗಳು ಸರಿಯೆಂದಾಗಲಿ ತಪ್ಪೆಂದಾಗಲಿ ನಾವು ಹೇಳುವುದೂ ಇಲ್ಲವೆಂದು ತಿಳಿಸಸಾಧ್ಯವಿದೆ. ಆ ವಿಷಯಗಳನ್ನು ಅವರೇ ನಿರ್ಣಯಿಸಬೇಕಾಗಿದೆ. ನಾವು ಬೈಬಲಿನಲ್ಲಿರುವ ಒಳ್ಳೆಯ ಮಾಹಿತಿಯನ್ನು ತಿಳಿಸಲು ಬಯಸುತ್ತೇವೆ. ಅದನ್ನು ಕೇಳುವುದು ಬಿಡುವುದು ಅವರ ಇಷ್ಟವಾಗಿದೆ.
22 ಸೇವೆಗೆ ಉಪಯೋಗಿಸುವ ಬ್ಯಾಗ್ ಮತ್ತು ನಮ್ಮ ವಸ್ತ್ರದಿಂದ ನಾವು ಇತರರಿಗಿಂತ ಭಿನ್ನರೆಂದು ತೋರಿಸಿಕೊಳ್ಳುವುದು ಬೇಡ. ಏಕೆಂದರೆ, ಅದು ನಮ್ಮ ಕಡೆಗೆ ಹಾಗೂ ನಮ್ಮ ಸೇವೆಯ ಕಡೆಗೆ ಜನರ ಅನುಚಿತ ಗಮನ ಸೆಳೆಯಬಹುದು. ಕ್ಷೇತ್ರ ಸೇವೆಗೆ ನಾವು ನೀಟಾದ ಸಭ್ಯ ಉಡುಪನ್ನು ಧರಿಸಬೇಕಾದರೂ, ಬಹುಶಃ ಬೇರೆ ದೇಶಗಳಲ್ಲಿನ ಸಹೋದರರನ್ನು ನೋಡಿ ಅವರನ್ನು ಅನುಸರಿಸುತ್ತಾ ಒಂದು ಸ್ಟ್ಯಾಂಡರ್ಡ್ ಆಗಿರುವ ಬಟ್ಟೆಗಳನ್ನೇ ಹಾಕಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕಡೆಗೆ ಮತ್ತು ನಮ್ಮ ಕೆಲಸದ ಕಡೆಗೆ ಗಮನ ಸೆಳೆಯುವಂಥ ದೊಡ್ಡ ಬ್ಯಾಗ್ಗಳನ್ನು ಉಪಯೋಗಿಸುವ ಬದಲು, ನಮ್ಮ ವಸ್ತ್ರದಲ್ಲಿ ಅಥವಾ ಗಮನ ಸೆಳೆಯದ ಸಣ್ಣ ಫೋಲ್ಡರ್ನಲ್ಲಿ ಬೈಬಲ್ ಮತ್ತು ಸ್ವಲ್ಪ ಸಾಹಿತ್ಯಗಳನ್ನು ಒಯ್ಯುವುದು ಉತ್ತಮ.
23 ನಾವು ಮಾತಾಡುವಾಗ ಅಕ್ಕಪಕ್ಕದಲ್ಲಿರುವವರ ಗಮನವನ್ನು ಸೆಳೆಯುವಂಥ ರೀತಿಯಲ್ಲಿ ಮನೆಯವರೊಂದಿಗೆ ಗಟ್ಟಿಯಾಗಿ ಮಾತಾಡಬಾರದು. ಬೊಬ್ಬೆ ಹಾಕಿ ಮಾತಾಡುವುದು ಇತರರನ್ನು ಒಟ್ಟು ಸೇರಿಸುತ್ತದೆ ಹಾಗೂ ನಾವು ಮಾಡುವ ಕೆಲಸದ ಮೇಲೆ ಯಾರಿಗಾದರೂ ಕೋಪವೆಬ್ಬಿಸುವ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಅನುಭವಗಳು ತೋರಿಸಿಕೊಟ್ಟಿವೆ.
24 ಮನೆಯೊಳಗೆ ಆಮಂತ್ರಿಸಲ್ಪಡುವಾಗ ಜಾಗರೂಕರಾಗಿರಿ. ಏಕೆಂದರೆ, ಮನೆಯೊಳಗೆ ಆಮಂತ್ರಿಸುವ ಮೂಲಕ ಪ್ರಚಾರಕರು ಅಲ್ಲಿಂದ ಹೋಗದಂತೆ ಮಾಡಿ ಬಳಿಕ ಫೋನ್ ಮಾಡುವ ಮೂಲಕ ಇತರರನ್ನು ಒಟ್ಟು ಸೇರಿಸಲು ಕೆಲವೊಮ್ಮೆ ವಿರೋಧಿಗಳು ಈ ತಂತ್ರವನ್ನು ಉಪಯೋಗಿಸಿದ್ದಾರೆ. ಮನೆಯವನು ಫೋನ್ ಮಾಡುವುದಾದರೆ ಅಥವಾ ತನ್ನ ಕುಟುಂಬದ ಬೇರೊಬ್ಬ ಸದಸ್ಯನನ್ನು ಫೋನ್ ಮಾಡುವಂತೆ ಕೇಳಿಕೊಳ್ಳುವುದಾದರೆ ಇದು ನಿಮಗೆ ಅಲ್ಲಿಂದ ಹೊರಡಲು ಸೂಚನೆಯಾಗಿದೆ ಎಂದು ತಿಳಿದುಕೊಳ್ಳಿ.
25 ನಮ್ಮ ಉದ್ದೇಶ ನೆನಪಿನಲ್ಲಿರಲಿ: ನಮ್ಮ ಉದ್ದೇಶವು ಯೋಗ್ಯರನ್ನು ವಿಚಾರಿಸಿ ತಿಳಿದುಕೊಳ್ಳುವುದು ಅಂದರೆ ನಮ್ಮ ಸಂದೇಶಕ್ಕೆ ಕಿವಿಗೊಡಲು ಬಯಸುವವರನ್ನು ಹುಡುಕುವುದಾಗಿದೆ. ಆದರೆ ಸುವಾರ್ತೆ ಸಾರುವುದಕ್ಕೆ ತಡೆಯೊಡ್ಡುವವರ ಅಥವಾ ಅದನ್ನು ನಿಲ್ಲಿಸಲು ಪಣತೊಟ್ಟವರ ಗಮನವನ್ನು ಸೆಳೆಯಲು ನಾವು ಬಯಸುವುದಿಲ್ಲ.
26 ಯೆಹೋವನು ಬೆಂಬಲಿಸುತ್ತಾನೆಂಬ ಭರವಸೆಯಿರಲಿ: ನಿಮ್ಮ ಸೇವೆಯ ವಿಧಾನದಲ್ಲಿ ಈ ಅತ್ಯವಶ್ಯಕ ಹೊಂದಾಣಿಕೆಗಳನ್ನು ಮಾಡುವಾಗ ಯೆಹೋವನು ಸದಾ ನಿಮ್ಮನ್ನು ಬೆಂಬಲಿಸುತ್ತಾನೆ ಎಂಬ ಭರವಸೆಯಿರಲಿ. (ಯೆಶಾ. 54:17; ಫಿಲಿ. 4:13) ಯೇಸು ತನ್ನ ಶಿಷ್ಯರನ್ನು ಸಾರಲು ಕಳುಹಿಸಿದಾಗ ಅವರಿಗೆ ಸೂಚಿಸಿದಂತೆ ಸದ್ಯದ ಸನ್ನಿವೇಶ ಹಾಗೂ ಪರಿಸ್ಥಿತಿಗಳಿಗೆ ಹೊಂದಿಸಿಕೊಳ್ಳುವುದು ವಿವೇಕವೂ ಶಾಸ್ತ್ರೀಯವೂ ಆಗಿದೆ. (ಮತ್ತಾ. 10:5-23) ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಸಾಕ್ಷಿ ನೀಡುವಾಗ ಸರಿಯಾದ ವಿಮರ್ಶನಾ ಶಕ್ತಿಯನ್ನು ಉಪಯೋಗಿಸಿರಿ. ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸಹ ಗಮನಿಸುವವರಾಗಿರಿ. ಜೀವವನ್ನು ಪಡೆದುಕೊಳ್ಳುವಂತೆ ಯೆಹೋವನು ನೀಡುತ್ತಿರುವ ಹೃತ್ಪೂರ್ವಕ ಆಮಂತ್ರಣವನ್ನು ಸ್ವೀಕರಿಸಲು ಕಾತುರದಿಂದಿರುವ ಸಹೃದಯದ ಜನರ ಕಡೆಗೆ ನಿಮ್ಮನ್ನು ದೇವದೂತರು ಮಾರ್ಗದರ್ಶಿಸುವರು ಎಂಬ ನಂಬಿಕೆ ನಿಮಗಿರಲಿ.—ಪ್ರಕ. 14:6.
27 ನಿಮ್ಮ ಶುಶ್ರೂಷೆಯನ್ನು ಧೈರ್ಯದಿಂದ ಮತ್ತು ವಿವೇಚನೆಯಿಂದ ಮಾಡಲು ನಿಮಗೆ ನೆರವಾಗಲಿಕ್ಕಾಗಿ ಮುಂಬರುವ ತಿಂಗಳುಗಳಲ್ಲಿ ನಮ್ಮ ರಾಜ್ಯದ ಸೇವೆಯಲ್ಲಿ ಹೆಚ್ಚಿನ ಲೇಖನಗಳು ಬರಲಿವೆ. ಕೊಡಲಾಗಿರುವ ಸಲಹೆಸೂಚನೆಗಳನ್ನು ಪಾಲಿಸೋಣ ಮತ್ತು ಸಂಘಟನೆಯು ಮುಂದೆ ಮಾಡಲಿರುವ ಯಾವುದೇ ಏರ್ಪಾಡನ್ನು ಬೆಂಬಲಿಸೋಣ.
[ಪುಟ 3 ರಲ್ಲಿರುವಚಿತ್ರ]
ಈ ಪುರವಣಿಯನ್ನು ಉಪಯೋಗಿಸುವ ವಿಧ
ಇದರಲ್ಲಿರುವ ವಿಷಯಗಳನ್ನು ಜಾಗರೂಕತೆಯಿಂದ ಓದಿ ಅದರ ಕುರಿತು ಆಲೋಚಿಸಿರಿ. ಕೊಡಲ್ಪಟ್ಟಿರುವ ಸಲಹೆಗಳನ್ನು ಅನ್ವಯಿಸಲು ಸಿದ್ಧವಾಗಿರಿ. ಈ ಲೇಖನದಲ್ಲಿರುವ ಸಲಹೆಸೂಚನೆ ಮತ್ತು ಮಾರ್ಗದರ್ಶನಗಳನ್ನು ಪಾಲಿಸಲು ಯಾವಾಗದಿಂದ ಆರಂಭಿಸಬೇಕು? ಈ ಕೂಡಲೆ!