ಕ್ಷೇತ್ರದಲ್ಲಿ ವಿವೇಚನೆಯಿಂದ ವರ್ತಿಸುವುದು
1 ಶುಶ್ರೂಷೆಯನ್ನು ಹೇಗೆ ಮಾಡಬೇಕೆಂಬುದರ ಕುರಿತಾಗಿ ಯೇಸು ತನ್ನ ಶಿಷ್ಯರಿಗೆ ಪ್ರಾಯೋಗಿಕವಾದ ಮತ್ತು ಸಮತೂಕದ ನಿರ್ದೇಶನಗಳನ್ನು ನೀಡಿದನು. ಸನ್ನಿವೇಶಗಳು ಬದಲಾದಂತೆ ಅವರು ತಮ್ಮ ಸೇವಾವಿಧಾನಗಳನ್ನು ಬದಲಾಯಿಸಿಕೊಳ್ಳಬೇಕು ಎಂಬುದು ಅವನಿಗೆ ತಿಳಿದಿತ್ತು. ಉದಾಹರಣೆಗೆ, ಅವನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಸಾರಲು ಮೊದಲ ಬಾರಿ ಕಳುಹಿಸಿದಾಗ ಮತ್ತಾಯ 10:9, 10ರಲ್ಲಿರುವ ನಿರ್ದೇಶನಗಳನ್ನು ನೀಡಿದನು. (ಲೂಕ 9:3) ಆ ಸಮಯದಲ್ಲಿ ಅದು ಸೂಕ್ತವಾದ ಸಲಹೆಯಾಗಿತ್ತು. ಆದರೆ ತರುವಾಯ ಪರಿಸ್ಥಿತಿಗಳು ಬದಲಾದವು. ಅವರ ಶುಶ್ರೂಷೆಗೆ ಆರಂಭದಲ್ಲಿ ದೊರೆತಂಥ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿಲ್ಲ. ಆದುದರಿಂದಲೇ ಲೂಕ 22:35-37ರಲ್ಲಿ ಅವನ ನಿರ್ದೇಶನಗಳು ಬದಲಾಗಿರುವುದನ್ನು ನಾವು ಕಾಣುತ್ತೇವೆ. ಅದೇ ರೀತಿ ಇಂದು, ನಾವು ಕೂಡ ನಮ್ಮ ಶುಶ್ರೂಷೆಯಲ್ಲಿ ಪರಿಸ್ಥಿತಿಗೆ ತಕ್ಕಂತೆ ನಮ್ಮ ಸೇವಾವಿಧಾನಗಳನ್ನು ಹೊಂದಿಸಿಕೊಳ್ಳಬೇಕು.
2 ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ಮತ್ತು ಯೋಗ್ಯ ಜನರನ್ನು ಹುಡುಕುವುದೇ ನಮ್ಮ ಗುರಿಯಾಗಿದೆ. ಯೆಹೋವನು ತನ್ನ ಸೇವಕರ ಹುರುಪಿನ ಕಾರ್ಯಚಟುವಟಿಕೆಯನ್ನು ಆಶೀರ್ವದಿಸುತ್ತಿರುವುದಕ್ಕೆ ಎದ್ದುಕಾಣುವ ಪುರಾವೆಯಿದೆ. ಹಾಗಿದ್ದರೂ, ಎಲ್ಲರೂ ನಮ್ಮ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದಿಲ್ಲ ಇಲ್ಲವೆ ಶಾಂತಿಯ ಸಂದೇಶವನ್ನು ಸ್ವೀಕರಿಸುವುದಿಲ್ಲ. ಸುವಾರ್ತೆ ಸಾರಲ್ಪಡುವುದು ಪಿಶಾಚನಾದ ಸೈತಾನನಿಗೂ ಇಷ್ಟವಿಲ್ಲ ಮತ್ತು ಅವನು ವಿರೋಧಗಳನ್ನು ಉಂಟುಮಾಡುವುದು ಸಹಜ. (1 ಪೇತ್ರ 5:8; ಪ್ರಕ. 12:12, 17) ಆದುದರಿಂದ, ಮುಖ್ಯವಾಗಿ ನಾವು ಮನೆಯಿಂದ ಮನೆಗೆ ಸಾರುವಾಗ ವಿವೇಕಿಗಳಾಗಿದ್ದು ಪ್ರಾಯೋಗಿಕ ರೀತಿಯಲ್ಲಿ ಸುಜ್ಞಾನಿಗಳಾಗಿ ವರ್ತಿಸಬೇಕಾಗಿದೆ. (ಜ್ಞಾನೋ. 3:21, 22) ನಿಮ್ಮ ಟೆರಿಟೊರಿಯಲ್ಲಿ ಸದ್ಯಕ್ಕೆ ವಿರೋಧವಿಲ್ಲದಿರುವುದಾದರೂ, ಸಮಸ್ಯೆಗಳು ಏಳದಂಥ ರೀತಿಯಲ್ಲಿ ಕ್ರಿಯೆಗೈಯುವುದು ಜಾಣತನವಾಗಿದೆ.—ಜ್ಞಾನೋ. 22:3.
3 ಕ್ಷೇತ್ರಸೇವಾ ಕೂಟಗಳು: ಪುಸ್ತಕ ಅಧ್ಯಯನದ ಏರ್ಪಾಡುಗಳನ್ನು ಅನುಸರಿಸುವುದು ಕ್ಷೇತ್ರಸೇವಾ ಗುಂಪುಗಳು ಚಿಕ್ಕದಾಗಿರುವ ಖಾತ್ರಿಯನ್ನು ಕೊಡುತ್ತದೆ. ಅಂಥ ಗುಂಪುಗಳು ಒಬ್ಬ ಸಹೋದರನ ಇಲ್ಲವೆ ಸಹೋದರಿಯ ಮನೆಯಲ್ಲಿ ಕೂಡಿಬರಸಾಧ್ಯವಿದೆ. ಆದರೆ ಆ ಮನೆಯು, ಧಾರ್ಮಿಕವಾಗಿ ಸೂಕ್ಷ್ಮ ಸಂವೇದನೆಯಿರುವ ಇಲ್ಲವೆ ಅತಿರೇಕವಿರುವ ಸ್ಥಳದಲ್ಲಿಯೋ ಅಥವಾ ಆಸುಪಾಸಿನಲ್ಲಿಯೋ ಇಲ್ಲದಿರುವುದು ಉತ್ತಮ. ಒಂದು ವೇಳೆ ಕೂಟಕ್ಕಾಗಿ ಅಂಥ ಸ್ಥಳ ಲಭ್ಯವಿಲ್ಲದಿರುವಲ್ಲಿ ರಾಜ್ಯ ಸಭಾಗೃಹವನ್ನು ಉಪಯೋಗಿಸುವುದು ವಿವೇಕತನವಾಗಿದೆ. ಏಕೆಂದರೆ, ನಾವು ಅಲ್ಲಿಗೆ ಹೋಗಿಬರುವುದರಿಂದ ಅದು ಸಾಮಾನ್ಯವಾಗಿ ಜನರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಅಥವಾ ಸೇವೆಮಾಡಲಿರುವ ಟೆರಿಟೊರಿಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿನ ಒಂದು ಸಾರ್ವಜನಿಕ ಸ್ಥಳದಲ್ಲಿ ಕೂಡಿಬರಬಹುದು. ಕ್ಷೇತ್ರಸೇವಾ ಕೂಟದ ಸ್ಥಳದಿಂದ ಹೊರಡುವ ಮೊದಲೇ ಎಲ್ಲ ಏರ್ಪಾಡುಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಹೀಗೆ, ಗಮನ ಸೆಳೆಯದ ರೀತಿಯಲ್ಲಿ ಇಬ್ಬಿಬ್ಬರಾಗಿ ಸೇವೆಮಾಡುವ ಸ್ಥಳಕ್ಕೆ ಹೋಗಬಹುದು. ಏರು ಧ್ವನಿಯಲ್ಲಿ ಮಾತಾಡುತ್ತ ಅಥವಾ ನಮ್ಮೆಡೆಗೆ ಜನರ ಗಮನವನ್ನು ಸೆಳೆಯುವಂಥ ವಿಷಯಗಳನ್ನು ಮಾಡುತ್ತಾ ಟೆರಿಟೊರಿಯಲ್ಲಿ ಗುಂಪುಗೂಡುವುದು ವಿವೇಕತನವಲ್ಲ. ಖಾಸಗಿ ವಾಹನಗಳಲ್ಲಿ ಹೋಗುವುದಾದರೆ ಅದನ್ನು ಸೇವೆಮಾಡುವ ಟೆರಿಟೊರಿಯಲ್ಲಿ ನಿಲ್ಲಿಸದಿರುವುದು ಉತ್ತಮ, ಇದು ನಿಯಂತ್ರಣವಿಲ್ಲದ ಗುಂಪುಗಳ ಗಮನವನ್ನು ಸೆಳೆಯುವುದಿಲ್ಲ.
4 ನಿಮ್ಮ ಸುತ್ತಮುತ್ತಲೂ ನಡೆಯುವ ವಿಷಯಗಳನ್ನು ಗಮನಿಸಿರಿ: ನಾವು ಸೇವೆಮಾಡುತ್ತಿರುವುದನ್ನು ಗಮನಿಸಿದ ಒಬ್ಬ ವ್ಯಕ್ತಿಯೇ ಅನಂತರ ನಮ್ಮ ವಿರುದ್ಧ ಕ್ರಮಕೈಗೊಳ್ಳುವಂತೆ ಜನರನ್ನು ಒಟ್ಟುಗೂಡಿಸಿ, ಹೀಗೆ ಸಮಸ್ಯೆಗಳು ಆರಂಭಗೊಳ್ಳುತ್ತವೆ ಎಂದು ಕಂಡುಕೊಳ್ಳಲಾಗಿದೆ. ಇಂಥ ಪರಿಸ್ಥಿತಿಯನ್ನು ತಪ್ಪಿಸಬೇಕಾದರೆ, ಸೇವೆಮಾಡುವಾಗ ಅಪಾಯಸೂಚನೆಯ ಕುರಿತು ಎಚ್ಚರಿಕೆ ವಹಿಸುತ್ತಾ ಗಮನಿಸುವವರಾಗಿರಿ. ಒಬ್ಬ ಪ್ರಚಾರಕನು ಮನೆಯವನೊಂದಿಗೆ ಮಾತಾಡುತ್ತಿರುವಾಗ ಇನ್ನೊಬ್ಬನು ಆ ಸಂಭಾಷಣೆಗೆ ನಿರ್ಲಕ್ಷ್ಯಭಾವ ತೋರಿಸದೆ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸಹ ಗಮನಿಸುತ್ತಿರಬೇಕು. (ಮತ್ತಾ. 10:16) ಯಾರಾದರೂ ನಿಮ್ಮನ್ನು ಗಮನಿಸುತ್ತಿರುವಂತೆ ಕಂಡುಬಂದಲ್ಲಿ, ಪ್ರಾಯಶಃ ಅವರು ನಿಮ್ಮ ಚಲನವಲನಗಳನ್ನು ನೋಡುತ್ತಾ ಮೊಬೈಲ್ ಫೋನ್ನಲ್ಲಿ ಮಾತಾಡುತ್ತಿರುವುದಾದರೆ, ನಿಮ್ಮ ಸಂಭಾಷಣೆಯನ್ನು ಅಲ್ಲಿಗೆ ಮೊಟಕುಗೊಳಿಸಿ ಶಾಂತವಾಗಿ ಅಲ್ಲಿಂದ ಹೊರಟು ಹೋಗಿ. (ಜ್ಞಾನೋ. 17:14) ಸೇವೆಮಾಡಲಿಕ್ಕಾಗಿ ಇನ್ನೊಂದು ಟೆರಿಟೊರಿಯನ್ನು ಮೊದಲೇ ನಿಯೋಜಿಸಸಾಧ್ಯವಿದೆ ಮತ್ತು ಆ ಟೆರಿಟೊರಿಗೆ ಹೋಗಿ ಸಾರಬಹುದು. ಇದಕ್ಕೆಲ್ಲಾ ಪ್ರೌಢತೆ ಮತ್ತು ವಿವೇಕ ಅಗತ್ಯವಿರುವುದರಿಂದ, ಹೊಸ ಪ್ರಚಾರಕರು ಯಾವಾಗಲೂ ನುರಿತವರೊಂದಿಗೆ ಸೇವೆಮಾಡುವುದು ಉತ್ತಮ.
5 ಅಚ್ಚುಕಟ್ಟಾಗಿದ್ದರೂ ಎದ್ದುಕಾಣದಿರುವುದು: ಶುಶ್ರೂಷೆಯಲ್ಲಿರುವಾಗ ವಿವೇಚನೆಯಿಂದ ವರ್ತಿಸುತ್ತಾ ನಮ್ಮೆಡೆಗೆ ಅನುಚಿತ ಗಮನ ಸೆಳೆಯದಿರುವುದರಲ್ಲಿ ನಮ್ಮ ಹೊರತೋರಿಕೆಗೂ ಒಂದು ಪಾತ್ರವಿದೆ. ನಮ್ಮ ಉಡುಪು ಮತ್ತು ಕೇಶಾಲಂಕಾರವು ಸದಾ ಅಚ್ಚುಕಟ್ಟಾಗಿ ಶುದ್ಧವಾಗಿ ಸರಳವಾಗಿರಬೇಕು. ಅದೇ ಸಮಯದಲ್ಲಿ, ನಾವಿರುವ ಸಮುದಾಯದ ಸಾಮಾನ್ಯ ಶೈಲಿಯಲ್ಲಿ ಉಡುಪನ್ನು ಧರಿಸಿಕೊಳ್ಳುವುದು ಶಾಸ್ತ್ರೀಯವಾಗಿ ಯೋಗ್ಯವಾಗಿದೆ. ಜನರ ಮಧ್ಯೆ ಭಿನ್ನವಾಗಿ ಎದ್ದುಕಾಣುತ್ತ ನಾವು ಇತರರ ಗಮನವನ್ನು ಸೆಳೆಯಬಯಸುವುದಿಲ್ಲ. ಆ ಸಮುದಾಯದವರಲ್ಲ ಎಂಬ ತೋರಿಕೆಯನ್ನು ಕೊಡುತ್ತಾ ಪ್ರಾಯಶಃ ನಮ್ಮ ಸಂದೇಶದ ಕಡೆಗೆ ಜನರು ಪೂರ್ವಾಗ್ರಹ ಪೀಡಿತರಾಗುವಂತೆ ನಾವು ಮಾಡುವುದಿಲ್ಲ. ಯೇಸು ತನ್ನ ಕಾಲದಲ್ಲಿನ ಜನರು ಉಡುತ್ತಿದ್ದಂಥ ವಸ್ತ್ರವನ್ನೇ ಧರಿಸುತ್ತಿದ್ದನು. ಹಾಗಾಗಿ ಯೂದನು ಅವನನ್ನು ತೋರಿಸಿಕೊಡಲಿಕ್ಕಾಗಿ ಮುದ್ದಿಡಬೇಕಾಯಿತು. ಯೇಸು ಎದ್ದುಕಾಣುವಂಥ ರೀತಿಯಲ್ಲಿ ವಸ್ತ್ರ ಧರಿಸಿರಲಿಲ್ಲ. (ಮತ್ತಾ. 26:48; ಮಾರ್ಕ 14:44) ಆದುದರಿಂದ, ಪ್ರತಿಯೊಬ್ಬರು ಈ ವಿಷಯಕ್ಕೆ ಗಮನ ನೀಡಬೇಕಾಗಿದೆ. ಯಾರಾದರೂ ಮೇಲಿನ ಮೂಲತತ್ತ್ವಗಳಿಗೂ ಹೇಳಿಕೆಗಳಿಗೂ ಅನುಸಾರವಾಗಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನಿಸಿದರೆ, ಇತರರು ಅವರ ಸ್ವಂತ ತೀರ್ಮಾನಕ್ಕೆ ಬೆಲೆಕೊಡಬೇಕು. ನಮ್ಮ ಶುಶ್ರೂಷೆಯಲ್ಲಿ ನಾವು ಎಲ್ಲಾ ಸಂಗತಿಗಳಲ್ಲೂ ನಿಂದೆಗೆ ಅವಕಾಶಕೊಡುವುದಿಲ್ಲ.—2 ಕೊರಿಂ. 6:3.
6 ಸೇವೆಯಲ್ಲಿ ವಿವೇಚನೆ ತೋರಿಸುವುದಾದರೆ ಅದು ಮುಂದೆ ಉದ್ಭವಿಸಸಾಧ್ಯವಿರುವ ಸಮಸ್ಯೆಗಳನ್ನು ಕಡಿಮೆಗೊಳಿಸುವುದು. ಹೀಗೆ ಮಾಡುವ ಮೂಲಕ ನಾವು ಈ ಕಡೇ ದಿವಸಗಳ ಕಠಿನಕಾಲಗಳಲ್ಲಿ ಜೀವಿಸುತ್ತಿರುವುದಾದರೂ ಯೆಹೋವನ ಚಿತ್ತವನ್ನು ಮಾಡುತ್ತಾ ಆತನಿಗೆ ಸ್ತುತಿ ಮತ್ತು ಘನತೆಯನ್ನು ತರುವೆವು.