ಆಡಳಿತ ಮಂಡಲಿಯಿಂದ ಒಂದು ಪತ್ರ
ಪ್ರೀತಿಯ ಜೊತೆ ಯೆಹೋವನ ಸಾಕ್ಷಿಗಳೇ:
ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಪ್ರೀತಿ ಮತ್ತು ಗಣ್ಯತೆಯನ್ನು ವ್ಯಕ್ತಪಡಿಸಲು ತನಗೆ ದೊರೆತ ಪ್ರತಿಯೊಂದು ಸಂದರ್ಭವನ್ನು ಬಳಸಿಕೊಂಡನು. ರೋಮ್ನಲ್ಲಿದ್ದ ಕ್ರೈಸ್ತರಿಗೆ ಅವನು ಬರೆದದ್ದು: “ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.” (ರೋಮಾ. 1:8) ಹೌದು ಆ ಪ್ರಥಮ ಶತಮಾನದ ಕ್ರೈಸ್ತರು ತಮ್ಮ ಬಲವಾದ ನಂಬಿಕೆ ಹಾಗೂ ಹುರುಪಿನ ಸುವಾರ್ತೆ ಸಾರುವಿಕೆಗೆ ರೋಮ್ನ ಉದ್ದಗಲಕ್ಕೂ ಹೆಸರುವಾಸಿಗಳಾಗಿದ್ದರು. (1 ಥೆಸ. 1:8) ತನ್ನ ಸಹೋದರರ ಮೇಲೆ ಪೌಲನಿಗೆ ಅಷ್ಟು ಗಾಢ ಪ್ರೀತಿಯಿದ್ದದ್ದರಲ್ಲಿ ಆಶ್ಚರ್ಯವೇನಿಲ್ಲ!
ನಿಮ್ಮ ಕುರಿತು ನೆನಸುವಾಗಲೆಲ್ಲ ಪೌಲನಂತೆ ನಾವು ಸಹ ಯೆಹೋವನಿಗೆ ಉಪಕಾರ ಹೇಳುತ್ತೇವೆ. ನಿಮ್ಮೆಲ್ಲರನ್ನು ನಾವು ತುಂಬ ಪ್ರೀತಿಸುತ್ತೇವೆ! ಅಲ್ಲದೆ ಯೆಹೋವನು ಸಹ ನಿಮ್ಮನ್ನು ವ್ಯಕ್ತಿಗತವಾಗಿ ಪ್ರೀತಿಸುತ್ತಾನೆಂಬ ಖಾತ್ರಿ ನಿಮಗಿರಲಿ. ನಿಮ್ಮಲ್ಲಿ ಕೆಲವರಿಗೆ ತೀವ್ರ ವಿರೋಧವಿದ್ದರೂ ನೀವು ಸಾರುವುದನ್ನು ಮುಂದುವರಿಸುತ್ತಿದ್ದೀರಿ. ನೀವು ತೋರಿಸುತ್ತಿರುವ ಈ ಧೀರ ಮತ್ತು ನಿರ್ಭೀತ ಮನೋಭಾವವು ಯೆಹೋವನ ಮನಸ್ಸನ್ನು ಎಷ್ಟೊಂದು ಸಂತೋಷಪಡಿಸುತ್ತಿರಬೇಕು!—ಜ್ಞಾನೋ. 27:11.
ಕರ್ತನಾದ ಯೇಸು ಕ್ರಿಸ್ತನು “ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ” ಹೊರಟಿದ್ದಾನೆ ಮತ್ತು ಕ್ರಿಸ್ತನ ಹಿಂಬಾಲಕರ ವಿರುದ್ಧವಾಗಿ ಕಲ್ಪಿಸಿದ ಯಾವ ಆಯುಧವೂ ಜಯಿಸದು ಎಂಬದಕ್ಕೆ ಸಾಕಷ್ಟು ಪುರಾವೆಗಳನ್ನು ನೀವು ಯಿಯರ್ ಬುಕ್ನಲ್ಲಿ ಕಾಣುವಿರಿ.—ಪ್ರಕ. 6:2; ಯೆಶಾ. 54:17.
ಫಿಲಿಪ್ಪಿಯದ ಕ್ರೈಸ್ತರಿಗೆ ಪೌಲನು ಬರೆದದ್ದು: “ನೀವು . . . ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ.” (ಫಿಲಿ. 1:3-5) ನಿಮ್ಮ ಕುರಿತು ನೆನಸುವಾಗೆಲ್ಲಾ ಆಡಳಿತ ಮಂಡಲಿಯ ಸದಸ್ಯರಾದ ನಮಗೂ ಅದೇ ಭಾವನೆ ಉಕ್ಕುತ್ತದೆ. 2007ರ ಸೇವಾ ವರ್ಷದಲ್ಲಿ 66,91,790 ಪ್ರಚಾರಕರು ಲೋಕವ್ಯಾಪಕವಾಗಿ 236 ದೇಶಗಳಲ್ಲಿ ಒಟ್ಟು 143,17,61,554 ತಾಸುಗಳನ್ನು ಸುವಾರ್ತೆ ಸಾರುವುದರಲ್ಲಿ ಕಳೆದರು. ಸುವಾರ್ತೆಯ ಪ್ರಚಾರಕ್ಕಾಗಿ ನೀವು ಎಂಥ ಮಹತ್ತರ ಸಹಕಾರವನ್ನು ನೀಡುತ್ತಿದ್ದೀರಿ! ನಮ್ಮೆಲ್ಲರ ಪ್ರಯತ್ನಗಳಿಂದ ಪ್ರಯೋಜನ ಪಡೆದಿರುವ ಲಕ್ಷಾಂತರ ಜನರ ಕುರಿತು ತುಸು ಯೋಚಿಸಿ. ಈ ಎಲ್ಲ ಪ್ರಯತ್ನಗಳು ಯೆಹೋವನ ಮಹಿಮೆಗಾಗಿಯೇ!
ಇನ್ನೊಂದು ಸಂದರ್ಭದಲ್ಲಿ, ಪೌಲನು ತನ್ನ ಸಹೋದರರ ಮೇಲಿದ್ದ ಸಹಾನುಭೂತಿಯನ್ನು ವ್ಯಕ್ತಪಡಿಸಿದನು. ಥೆಸಲೋನಿಕದವರಿಗೆ ಅವನು ಬರೆದದ್ದು: ‘ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆಯನ್ನು ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಳ್ಳುತ್ತೇವೆ.’ (1 ಥೆಸ. 1:2, 3) ಜೀವನದಲ್ಲಿ ಅನೇಕ ಸಮಸ್ಯೆಗಳಿರುತ್ತವೆ ನಿಜ. ಅವು ತಲೆದೋರುವಾಗ ನಾವು ಸೈರಣೆಯಿಂದ ತಾಳಿಕೊಳ್ಳುವುದು ತುಂಬ ಪ್ರಾಮುಖ್ಯವಾಗಿದೆ. ನೀವು ವೈಯಕ್ತಿಕವಾಗಿ ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ? ಒಂದು ಗಂಭೀರ ಕಾಯಿಲೆಯು, ಯೆಹೋವನಿಗೆ ನೀವು ಸಲ್ಲಿಸುವ ಸೇವೆಯನ್ನು ತುಂಬ ಕಡಿಮೆಗೊಳಿಸಿದ್ದಕ್ಕಾಗಿ ನೀವು ಹತಾಶರಾಗಿದ್ದೀರೋ? ತಣಿಸಲಾಗದ ವೈರಿಯಾದ ಪಾತಾಳವು, ಹಲವಾರು ವರ್ಷ ನಿಮ್ಮೊಂದಿಗೆ ಸಹಬಾಳ್ವೆ ನಡೆಸಿದ ನಿಮ್ಮ ಪ್ರೀತಿಯ ಸಂಗಾತಿಯನ್ನು ಬಲಿತೆಗೆದುಕೊಂಡಿದೆಯೋ? (ಜ್ಞಾನೋ. 30:15, 16) ಕರ್ತನಲ್ಲಿ ವಿಶ್ವಾಸಿಯಾಗಿರುವವರನ್ನೇ ಮದುವೆಯಾಗಬೇಕೆಂಬ ಶಾಸ್ತ್ರೀಯ ಹಿತೋಪದೇಶವನ್ನು ನಿಷ್ಠೆಯಿಂದ ಪಾಲಿಸುತ್ತಾ, ನಿಮ್ಮಂತೆ ಯೆಹೋವನನ್ನು ಪ್ರೀತಿಸುವ ಒಬ್ಬ ವಿವಾಹ ಸಂಗಾತಿಗಾಗಿ ನೀವು ಮಾಡುತ್ತಿರುವ ಹುಡುಕಾಟವು ನಿಷ್ಪಲವಾದಂತೆ ಕಾಣುತ್ತಿದೆಯೋ? (1 ಕೊರಿಂ. 7:39) ಆರ್ಥಿಕ ಮುಗ್ಗಟ್ಟಿನಿಂದಾಗಿ ನಿಮ್ಮ ಮಕ್ಕಳನ್ನು ಬೆಳೆಸಲು ತುಂಬ ಕಷ್ಟಪಡುತ್ತಿದ್ದೀರೋ? ಸನ್ನಿವೇಶ ಏನೇ ಆಗಿರಲಿ ನೀವು ರಾಜ್ಯಾಭಿರುಚಿಗಳನ್ನು ಮೊದಲಿಡುವಲ್ಲಿ ಯೆಹೋವನು, ‘ನಿಮ್ಮ ಕೆಲಸವನ್ನು ಮತ್ತು ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ’ ಎಂಬ ಖಾತ್ರಿ ನಿಮಗಿರಬಲ್ಲದು. ಸಹೋದರ ಸಹೋದರಿಯರೇ, ದಯವಿಟ್ಟು ‘ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದಿರಿ’!—ಇಬ್ರಿ. 6:10; ಗಲಾ. 6:9.
ಸೈರಣೆಯಿಂದ ತಾಳಿಕೊಳ್ಳಲು ನಿಮಗೆ ಯಾವುದು ಸಹಾಯಮಾಡಬಲ್ಲದು? ಥೆಸಲೊನೀಕದ ಕ್ರೈಸ್ತರಂತೆ, ‘ಕ್ರಿಸ್ತನ ಮೇಲಣ ನಿರೀಕ್ಷೆಯು’ ನಮಗೆ ಸಹಾಯಮಾಡುತ್ತದೆ. ಸೂಕ್ತವಾಗಿಯೇ ಪೌಲನು ತದನಂತರ, ‘ರಕ್ಷಣೆಯ ನಿರೀಕ್ಷೆಯನ್ನು’ ಪ್ರಬಲವಾದ ಶಿರಸ್ತ್ರಾಣಕ್ಕೆ ಹೋಲಿಸಿದನು. ಇದು ಕ್ರೈಸ್ತರನ್ನು ನಕಾರಾತ್ಮಕ ಆಲೋಚನೆ ಹಾಗೂ ಪೀಡಿಸುತ್ತಿರುವ ಸಂಶಯಗಳಿಂದ ಸಂರಕ್ಷಿಸಬಲ್ಲ ಶಿರಸ್ತ್ರಾಣವಾಗಿದೆ.—1 ಥೆಸ. 5:8.
ಸಂತೋಷದಿಂದ ತಾಳಿಕೊಳ್ಳುವ ಮೂಲಕ ವಿಶ್ವಪರಮಾಧಿಕಾರದ ಕುರಿತ ಮಹಾ ವಿವಾದಾಂಶದ ವಿಷಯದಲ್ಲಿ ಸೈತಾನನ ಮೂದಲಿಕೆಗಳಿಗೆ ನೀವು ಉತ್ತರವನ್ನು ಕೊಡುತ್ತೀರಿ. ದೇವರ ಸೇವಕರು ಸಹಜವಾಗಿಯೇ ಸ್ವಾರ್ಥ ಪ್ರವೃತ್ತಿಯವರಾಗಿದ್ದಾರೆ ಎಂದು ಸೈತಾನನು ಹೇಳುತ್ತಾನೆ. ಅಲ್ಲದೆ ಒಂದು ಸೀಮಿತ ಸಮಯಕ್ಕೆ ಅವರು ದೇವರನ್ನು ಸೇವಿಸಲು ಸಿದ್ಧರಾಗಿರಬಹುದಾದರೂ ಕಷ್ಟಗಳು ಹೆಚ್ಚಾದರೆ ಅಥವಾ ಈ ವಿಷಯ ವ್ಯವಸ್ಥೆಯು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಮುಂದುವರಿಯುವುದಾದರೆ ಅವರ ಭಕ್ತಿ ಕಡಿಮೆಯಾಗುತ್ತದೆ ಎಂಬದು ಅವನ ವಾದವಾಗಿದೆ. ಸೈತಾನನೊಬ್ಬ ನೀಚ ಸುಳ್ಳುಗಾರನೆಂದು ಬಹಿರಂಗಪಡಿಸುವ ವಿಶೇಷ ಅವಕಾಶ ನಿಮಗಿದೆ! ಒಂದೊಂದು ದಿನ ಕಳೆದಂತೆ, ನೀವು ನಿರೀಕ್ಷಿಸುತ್ತಿರುವ ಆಶೀರ್ವಾದಗಳನ್ನು ಪಡೆಯುವ ದಿನಕ್ಕೆ ಹೆಚ್ಚೆಚ್ಚು ಸಮೀಪವಾಗುತ್ತಿದ್ದಿರಿ.
ಸಹೋದರರ ಬಲವಾದ ನಂಬಿಕೆ, ಸಾರುವ ಕೆಲಸಕ್ಕಾಗಿ ಅವರ ಮಹತ್ತರ ಸಹಕಾರ ಮತ್ತು ಅವರ ಸೈರಣೆಯನ್ನು ಶ್ಲಾಘಿಸಲು ಸಿಕ್ಕಿದ ಪ್ರತಿಯೊಂದು ಸಂದರ್ಭವನ್ನು ಪೌಲನು ಬಳಸಿಕೊಳ್ಳಲು ಹರ್ಷಿಸಿದಂತೆ, ಈ ಸುಸಂದರ್ಭದಲ್ಲಿ ನಿಮ್ಮನ್ನು ಪ್ರಶಂಸಿಸಲು ನಾವು ಸಂತೋಷಿಸುತ್ತೇವೆ. ಬಿಟ್ಟುಕೊಡದೆ ಒಳ್ಳೆದನ್ನು ಮಾಡುವುದನ್ನು ಮುಂದುವರಿಸಿರಿ!
ಮುಂದಿನ ವರ್ಷವು ಸಮೃದ್ಧವಾದ ಆಧ್ಯಾತ್ಮಿಕ ಆಶೀರ್ವಾದಗಳಿಂದ ತುಂಬಿತುಳುಕಲಿ. ಶುಭ ಹಾರೈಕೆಗಳೊಂದಿಗೆ
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ