ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 30 ಪು. 186-ಪು. 189 ಪ್ಯಾ. 4
  • ಇತರರಲ್ಲಿ ಆಸಕ್ತಿಯನ್ನು ತೋರಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇತರರಲ್ಲಿ ಆಸಕ್ತಿಯನ್ನು ತೋರಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು
    1991 ನಮ್ಮ ರಾಜ್ಯದ ಸೇವೆ
  • ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಹೃದಯವನ್ನು ತಲಪಲು ಪ್ರಯತ್ನಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸ್ಪಷ್ಟವಾದ ವೈಯಕ್ತಿಕ ಅನ್ವಯ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 30 ಪು. 186-ಪು. 189 ಪ್ಯಾ. 4

ಅಧ್ಯಾಯ 30

ಇತರರಲ್ಲಿ ಆಸಕ್ತಿಯನ್ನು ತೋರಿಸುವುದು

ನೀವೇನು ಮಾಡುವ ಅಗತ್ಯವಿದೆ?

ಬೇರೆಯವರ ಭಾವನೆಗಳ ಕುರಿತು ನೀವು ಕಾಳಜಿ ವಹಿಸುತ್ತೀರೆಂಬುದನ್ನೂ ಅವರ ಹಿತಕ್ಷೇಮದ ಬಗ್ಗೆ ಚಿಂತಿತರಾಗಿದ್ದೀರೆಂಬುದನ್ನೂ ತೋರಿಸಿರಿ.

ಇದು ಪ್ರಾಮುಖ್ಯವೇಕೆ?

ಯೆಹೋವನು ತೋರಿಸಿರುವ ಪ್ರೀತಿಯನ್ನು ನಾವು ಅನುಕರಿಸುವ ಒಂದು ವಿಧವು ಇದೇ ಆಗಿದೆ ಮಾತ್ರವಲ್ಲ, ಇದರಿಂದಾಗಿ ನಾವು ಒಬ್ಬ ವ್ಯಕ್ತಿಯ ಹೃದಯವನ್ನು ತಲಪಲು ಶಕ್ತರಾಗಬಹುದು.

ನಾವು ಬೈಬಲಿನ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ, ಅವರ ಮನಸ್ಸಿನಲ್ಲಿ ಮಾಹಿತಿಯನ್ನು ತುಂಬಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವ ಅಗತ್ಯವಿದೆ. ನಾವು ಹೃದಯಕ್ಕೆ ಹಿಡಿಸುವಂತೆ ಮಾತಾಡಬೇಕು. ನಮ್ಮ ಕೇಳುಗರಲ್ಲಿ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು ಇದನ್ನು ಮಾಡುವ ಒಂದು ವಿಧವಾಗಿದೆ. ಇಂತಹ ಆಸಕ್ತಿಯನ್ನು ಬೇರೆ ಬೇರೆ ವಿಧಗಳಲ್ಲಿ ತೋರಿಸಸಾಧ್ಯವಿದೆ.

ನಿಮ್ಮ ಕೇಳುಗರ ದೃಷ್ಟಿಕೋನವನ್ನು ಪರಿಗಣಿಸಿರಿ. ಅಪೊಸ್ತಲ ಪೌಲನು ತನ್ನ ಕೇಳುಗರ ಹಿನ್ನೆಲೆ ಮತ್ತು ಮಾನಸಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡನು. ಅವನು ವಿವರಿಸಿದ್ದು: “ಯೆಹೂದ್ಯರನ್ನು ಸಂಪಾದಿಸಿಕೊಳ್ಳುವದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ನಿಯಮಗಳಿಗೆ ಅಧೀನನಲ್ಲದವನಾದರೂ ನಿಯಮಗಳಿಗೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮಗಳಿಗೆ ಅಧೀನನಂತಾದೆನು. ನಾನು ದೇವರ ನೇಮವಿಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೊಳಗಾದವನೇ; ಆದರೂ ನಿಯಮವಿಲ್ಲದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮವಿಲ್ಲದವನಂತಾದೆನು. ಬಲವಿಲ್ಲದವರನ್ನು ಸಂಪಾದಿಸುವದಕ್ಕೆ ಅವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ. ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.” (1 ಕೊರಿಂ. 9:20-23) ಹಾಗಾದರೆ ಇಂದು ನಾವು ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗುವುದು’ ಹೇಗೆ?

ಇತರರೊಂದಿಗೆ ಮಾತಾಡುವ ಮೊದಲು, ಸ್ವಲ್ಪ ಸಮಯವಾದರೂ ಅವರನ್ನು ಅವಲೋಕಿಸುವ ಅವಕಾಶ ನಿಮಗಿರುವಲ್ಲಿ, ಅವರ ಅಭಿರುಚಿಗಳು ಮತ್ತು ಪರಿಸ್ಥಿತಿಗಳ ಸೂಚನೆಗಳನ್ನು ನೀವು ಗಮನಿಸಬಹುದು. ಅವರು ಯಾವ ಉದ್ಯೋಗದವರು ಎಂದು ನೀವು ಹೇಳಬಲ್ಲಿರೊ? ಅವರ ಧಾರ್ಮಿಕ ನಂಬಿಕೆಗಳ ಪುರಾವೆಯನ್ನು ನೀವು ನೋಡುತ್ತೀರೊ? ಅವರ ಕುಟುಂಬ ಜೀವನ ಹೇಗಿದೆಯೆಂಬುದನ್ನು ನೀವು ಗ್ರಹಿಸಬಲ್ಲಿರೋ? ನೀವು ಏನನ್ನು ಅವಲೋಕಿಸುತ್ತೀರೊ ಅದರ ಆಧಾರದ ಮೇಲೆ, ನಿಮ್ಮ ನಿರೂಪಣೆಯು ನಿಮ್ಮ ಕೇಳುಗರಿಗೆ ಹೆಚ್ಚು ಹಿಡಿಸುವಂಥ ರೀತಿಯಲ್ಲಿ ಅದನ್ನು ಹೊಂದಿಸಿಕೊಳ್ಳಬಲ್ಲಿರೊ?

ನಿಮ್ಮ ನಿರೂಪಣೆಯನ್ನು ಹೆಚ್ಚು ಹಿಡಿಸುವಂತೆ ಮಾಡುವುದು, ನಿಮ್ಮ ಟೆರಿಟೊರಿಯಲ್ಲಿರುವ ಜನರನ್ನು ನೀವು ಹೇಗೆ ಸಮೀಪಿಸುವಿರಿ ಎಂಬ ವಿಷಯದ ಕುರಿತು ನೀವು ಮುಂದಾಗಿಯೇ ಆಲೋಚಿಸುವುದನ್ನು ಕೇಳಿಕೊಳ್ಳುತ್ತದೆ. ಕೆಲವು ಪ್ರದೇಶಗಳಲ್ಲಿ, ಹೊರದೇಶಗಳಿಂದ ಬಂದವರೂ ಇರುತ್ತಾರೆ. ಇಂತಹ ಜನರು ನಿಮ್ಮ ಟೆರಿಟೊರಿಯಲ್ಲಿ ವಾಸಿಸುತ್ತಿರುವಲ್ಲಿ, ಅವರಿಗೆ ಸಾಕ್ಷಿ ನೀಡುವ ಪರಿಣಾಮಕಾರಿ ವಿಧಾನವನ್ನು ನೀವು ಕಂಡುಕೊಂಡಿದ್ದೀರೋ? “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿರುವುದರಿಂದ, ನೀವು ಯಾರನ್ನು ಭೇಟಿಯಾಗುತ್ತೀರೋ ಅವರೆಲ್ಲರಿಗೆ ಹಿಡಿಸುವಂಥ ರೀತಿಯಲ್ಲಿ ರಾಜ್ಯದ ಸಂದೇಶವನ್ನು ನೀಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ.—1 ತಿಮೊ. 2:4.

ಗಮನಕೊಟ್ಟು ಆಲಿಸಿರಿ. ಯೆಹೋವನು ಎಲ್ಲವನ್ನೂ ಬಲ್ಲಾತನಾಗಿರುವುದಾದರೂ, ಆತನು ಇತರರಿಗೆ ಕಿವಿಗೊಡುತ್ತಾನೆ. ಪ್ರವಾದಿ ಮೀಕಾಯೆಹು ಒಂದು ದರ್ಶನವನ್ನು ಪಡೆದನು. ಅದರಲ್ಲಿ ಒಂದು ನಿರ್ದಿಷ್ಟ ವಿಷಯವನ್ನು ಹೇಗೆ ನಿರ್ವಹಿಸಬೇಕೆಂಬ ವಿಷಯದಲ್ಲಿ ದೇವದೂತರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಂತೆ ಯೆಹೋವನು ಅವರನ್ನು ಪ್ರೋತ್ಸಾಹಿಸುತ್ತಿರುವುದನ್ನು ಅವನು ನೋಡಿದನು. ತದನಂತರ ಒಬ್ಬ ದೇವದೂತನು ಕೊಟ್ಟ ಸಲಹೆಯನ್ನು ಆ ದೇವದೂತನು ಪೂರೈಸುವಂತೆ ದೇವರು ಅನುಮತಿಸಿದನು. (1 ಅರ. 22:19-22) ಸೊದೋಮಿನ ಮೇಲೆ ಬರಲಿದ್ದ ನ್ಯಾಯತೀರ್ಪಿನ ಕುರಿತು ಅಬ್ರಹಾಮನು ಚಿಂತೆಯನ್ನು ವ್ಯಕ್ತಪಡಿಸಿದಾಗ, ಯೆಹೋವನು ಕೃಪೆತೋರಿ ಅವನು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಅನುಮತಿಸಿದನು. (ಆದಿ. 18:23-33) ಕಿವಿಗೊಡುವ ವಿಷಯದಲ್ಲಿ ಯೆಹೋವನ ಮಾದರಿಯನ್ನು ನಾವು ನಮ್ಮ ಶುಶ್ರೂಷೆಯಲ್ಲಿ ಹೇಗೆ ಅನುಕರಿಸಬಲ್ಲೆವು?

ಇತರರು ತಮ್ಮ ಮನಸ್ಸಿನಲ್ಲೇನಿದೆಯೊ ಅದನ್ನು ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸಿರಿ. ಒಂದು ಸೂಕ್ತವಾದ ಪ್ರಶ್ನೆಯನ್ನು ಹಾಕಿ, ಅವರ ಉತ್ತರಕ್ಕಾಗಿ ಸಾಕಷ್ಟು ಸಮಯ ನಿಲ್ಲಿರಿ. ಅವರು ಏನು ಹೇಳುತ್ತಾರೊ ಅದನ್ನು ನಿಜವಾಗಿಯೂ ಆಲಿಸಿರಿ. ನಿಮ್ಮ ಆಲೋಚನಾಪೂರ್ವಕವಾದ ಗಮನವು ಅವರು ಮುಚ್ಚುಮರೆಯಿಲ್ಲದೆ ಮಾತಾಡುವಂತೆ ಅವರನ್ನು ಪ್ರೋತ್ಸಾಹಿಸುವುದು. ಅವರ ಉತ್ತರವು ಅವರಿಗಿರುವ ಅಭಿರುಚಿಗಳೇನೆಂಬುದನ್ನು ವ್ಯಕ್ತಪಡಿಸುವುದಾದರೆ, ಸಮಯೋಚಿತ ನಯದಿಂದ ಪ್ರಶ್ನಿಸುವುದನ್ನು ಮುಂದುವರಿಸಿರಿ. ಸಂಭಾಷಣೆಯಲ್ಲಿ ಅನೇಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳದೆ, ಜಾಣತನದಿಂದ ಅವರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿರಿ. ಅವರ ವಿಚಾರಗಳನ್ನು ನಿಮಗೆ ಯಥಾರ್ಥವಾಗಿ ಪ್ರಶಂಸಿಸಲು ಸಾಧ್ಯವಿರುವಲ್ಲಿ, ಹಾಗೆ ಮಾಡಿರಿ. ಅವರ ದೃಷ್ಟಿಕೋನವನ್ನು ನೀವು ಒಪ್ಪದಿರುವಾಗಲೂ, ಅವರ ಹೇಳಿಕೆಗಳನ್ನು ದಯಾಭಾವದಿಂದ ಅಂಗೀಕರಿಸಿರಿ.—ಕೊಲೊ. 4:6, NW.

ಆದರೆ ಜನರಲ್ಲಿ ನಮಗಿರುವ ಆಸಕ್ತಿಯು, ಔಚಿತ್ಯದ ರೇಖೆಯನ್ನು ಮೀರಿಹೋಗದಂತೆ ನಾವು ಜೋಕೆ ವಹಿಸುವ ಅಗತ್ಯವಿದೆ. ಇತರರ ಕುರಿತು ಕಾಳಜಿ ವಹಿಸುವುದು, ಅವರ ಖಾಸಗಿ ವಿಚಾರಗಳಲ್ಲಿ ತಲೆಹಾಕಲು ನಮಗೆ ಅನುಮತಿಯನ್ನು ನೀಡುವುದಿಲ್ಲ. (1 ಪೇತ್ರ 4:15) ನಾವು ತೋರಿಸುವ ದಯಾಭಾವದ ಆಸಕ್ತಿಯನ್ನು, ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯು ತಪ್ಪಾಗಿ ಅರ್ಥಮಾಡಿಕೊಳ್ಳದಂತೆ ನಾವು ಜಾಗರೂಕರಾಗಿರುವ ಅಗತ್ಯವಿದೆ. ಇತರರಲ್ಲಿ ತೋರಿಸುವ ಆಸಕ್ತಿಯ ಸೂಕ್ತ ಮಟ್ಟವೆಂದು ಯಾವುದು ಪರಿಗಣಿಸಲ್ಪಡುತ್ತದೋ ಅದು ದೇಶದಿಂದ ದೇಶಕ್ಕೆ ಮಾತ್ರವಲ್ಲ, ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿರುವುದರಿಂದ, ಈ ವಿಷಯದಲ್ಲಿ ಒಳ್ಳೆಯ ವಿವೇಚನಾಶಕ್ತಿಯು ಅಗತ್ಯವಾಗಿದೆ.—ಲೂಕ 6:31.

ಒಬ್ಬ ಒಳ್ಳೆಯ ಕೇಳುಗನಾಗಿರುವುದಕ್ಕೆ ತಯಾರಿಯು ಸಹಾಯಕರವಾಗಿದೆ. ನಮ್ಮ ಸಂದೇಶವು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿರುವಾಗ, ನಾವು ಆರಾಮವಾಗಿರುವಂತೆ ಮತ್ತು ಸ್ವಾಭಾವಿಕ ರೀತಿಯಲ್ಲಿ ಇತರರಿಗೆ ಗಮನಕೊಡುವಂತೆ ಸಹಾಯಮಾಡುತ್ತದೆ. ಇದು ಅವರನ್ನು ಹಾಯಾಗಿಸಿ, ನಮ್ಮೊಂದಿಗೆ ಸಂಭಾಷಣೆಯನ್ನು ಮುಂದುವರಿಸಲು ಮನಸ್ಸುಳ್ಳವರಾಗಿರುವಂತೆ ಮಾಡಬಹುದು.

ನಾವು ಇತರರಿಗೆ ಕಿವಿಗೊಡುವ ಮೂಲಕ ಅವರಿಗೆ ಮಾನಮರ್ಯಾದೆಯನ್ನು ಕೊಡುತ್ತೇವೆ. (ರೋಮಾ. 12:10) ನಾವು ಅವರ ವಿಚಾರಗಳು ಮತ್ತು ಅನಿಸಿಕೆಗಳನ್ನು ಅಮೂಲ್ಯವಾಗಿ ಎಣಿಸುತ್ತೇವೆಂಬುದಕ್ಕೆ ಇದು ರುಜುವಾತನ್ನು ಒದಗಿಸುತ್ತದೆ. ನಮಗೆ ಏನು ಹೇಳಲಿಕ್ಕಿದೆಯೊ ಅದಕ್ಕೆ ಅವರು ಹೆಚ್ಚು ಗಮನವನ್ನು ಕೊಡುವಂತೆಯೂ ಇದು ಮಾಡಬಹುದು. ಸಕಾರಣದಿಂದಲೇ, “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ” ಎಂದು ದೇವರ ವಾಕ್ಯವು ಸಲಹೆ ನೀಡುತ್ತದೆ.—ಯಾಕೋ. 1:19.

ಪ್ರಗತಿಯನ್ನು ಮಾಡಲು ಇತರರಿಗೆ ಸಹಾಯಮಾಡಿರಿ. ಇತರರ ಕಡೆಗೆ ನಮಗಿರುವ ಚಿಂತೆಯು, ಯಾರು ಆಸಕ್ತಿಯನ್ನು ತೋರಿಸುತ್ತಾರೋ ಅವರ ಕುರಿತು ಯೋಚಿಸುತ್ತಾ ಇರುವಂತೆ ಮತ್ತು ಅವರ ಅಗತ್ಯಗಳನ್ನು ಅತಿ ನೇರವಾಗಿ ಪೂರೈಸುವಂಥ ಬೈಬಲ್‌ ಸತ್ಯಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಅವರನ್ನು ಪುನರ್ಭೇಟಿ ಮಾಡುವಂತೆ ನಮ್ಮನ್ನು ಪ್ರೇರಿಸುವದು. ಮುಂದಿನ ಭೇಟಿಯನ್ನು ಯೋಜಿಸುವಾಗ, ಹಿಂದಿನ ಭೇಟಿಗಳಲ್ಲಿ ಅವರ ಬಗ್ಗೆ ನೀವು ಏನನ್ನು ಕಲಿತಿರೊ ಅದನ್ನು ಪರಿಗಣಿಸಿರಿ. ಅವರು ಮಹತ್ವ ನೀಡುವಂಥ ವಿಷಯವೊಂದರ ಕುರಿತು ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಿ. ಅವರು ಏನು ಕಲಿಯುತ್ತಿದ್ದಾರೊ ಅದರಿಂದ ಅವರು ಹೇಗೆ ಪ್ರಯೋಜನ ಪಡೆಯಬಲ್ಲರೆಂಬುದನ್ನು ನೋಡಲು ಅವರಿಗೆ ಸಹಾಯ ಮಾಡುತ್ತಾ, ಆ ವಿಷಯದ ಪ್ರಾಯೋಗಿಕ ಮೌಲ್ಯವನ್ನು ಎತ್ತಿತೋರಿಸಿರಿ.—ಯೆಶಾ. 48:17.

ನಿಮ್ಮ ಕೇಳುಗನು ಅವನ ಮನಸ್ಸನ್ನು ಕಾಡುತ್ತಿರುವ ಒಂದು ಸನ್ನಿವೇಶವನ್ನೊ ಸಮಸ್ಯೆಯನ್ನೊ ನಿಮಗೆ ತಿಳಿಯಪಡಿಸುವಲ್ಲಿ, ಇದನ್ನು ಅವನೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲಿಕ್ಕಾಗಿರುವ ವಿಶೇಷ ಸಂದರ್ಭವಾಗಿ ಪರಿಗಣಿಸಿರಿ. ಸಂಕಟದಲ್ಲಿದ್ದವರನ್ನು ಸಂತೈಸಲು ಸದಾ ಸಿದ್ಧನಾಗಿದ್ದ ಯೇಸುವಿನ ಮಾದರಿಯನ್ನು ಅನುಸರಿಸಿರಿ. (ಮಾರ್ಕ 6:31-34) ಥಟ್ಟನೆ ಪರಿಹಾರವನ್ನು ಸೂಚಿಸುವ ಅಥವಾ ಮೇಲು ಮೇಲಿನ ಸಲಹೆಯನ್ನು ನೀಡುವ ಪ್ರೇರಣೆಯನ್ನು ಪ್ರತಿರೋಧಿಸಿರಿ. ಏಕೆಂದರೆ ನಿಮ್ಮಲ್ಲಿ ಯಥಾರ್ಥ ಆಸಕ್ತಿಯ ಕೊರತೆಯಿದೆಯೆಂದು ಆ ವ್ಯಕ್ತಿಗೆ ಅನಿಸುವಂತೆ ಇದು ಮಾಡೀತು. ಬದಲಿಗೆ, ಸಹಾನುಭೂತಿಯನ್ನು ತೋರಿಸಿರಿ. (1 ಪೇತ್ರ 3:8) ಬಳಿಕ ಬೈಬಲಾಧಾರಿತ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಿ, ಆ ವ್ಯಕ್ತಿಯು ತನ್ನ ಸನ್ನಿವೇಶವನ್ನು ನಿಭಾಯಿಸುವಂತೆ ಸಹಾಯಮಾಡಲು ಆತ್ಮೋನ್ನತಿಯನ್ನು ಮಾಡುವ ಮಾಹಿತಿಯನ್ನು ಅವನೊಂದಿಗೆ ಹಂಚಿಕೊಳ್ಳಿರಿ. ನಿಮ್ಮ ಕೇಳುಗನ ವಿಷಯದಲ್ಲಿ ನೀವು ತೋರಿಸುವ ಚಿಂತೆಯು, ಅವನು ನಿಮಗೆ ಹೇಳುವ ಗುಟ್ಟಿನ ವಿಷಯಗಳನ್ನು, ಯಾವುದೇ ಸಕಾರಣವಿಲ್ಲದೆ ಇತರರಿಗೆ ತಿಳಿಯಪಡಿಸುವುದರಿಂದ ನಿಮ್ಮನ್ನು ತಡೆಯುವುದು.—ಜ್ಞಾನೋ. 25:9.

ವಿಶೇಷವಾಗಿ, ನಾವು ಯಾರೊಂದಿಗೆ ಬೈಬಲ್‌ ಅಧ್ಯಯನವನ್ನು ನಡೆಸುತ್ತೇವೊ ಅವರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆವಶ್ಯಕತೆಗಳಿಗೆ ಪ್ರಾರ್ಥನಾಪೂರ್ವಕವಾದ ಗಮನವನ್ನು ಕೊಟ್ಟು, ಆ ಆವಶ್ಯಕತೆಗಳನ್ನು ಮನಸ್ಸಿನಲ್ಲಿಟ್ಟವರಾಗಿ ಬೈಬಲ್‌ ಅಧ್ಯಯನಕ್ಕಾಗಿ ತಯಾರಿಸಿರಿ. ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಅವನಾಗಲಿ ಅವಳಾಗಲಿ ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಹೋಗಲು ಮುಂದೆ ಇನ್ನೇನು ಮಾಡುವ ಅಗತ್ಯವಿದೆ?’ ಆ ವಿಷಯದಲ್ಲಿ ಬೈಬಲು ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಪ್ರಕಾಶನಗಳು ಏನು ಹೇಳುತ್ತವೆ ಎಂಬುದನ್ನು ವಿದ್ಯಾರ್ಥಿಯು ಗಣ್ಯಮಾಡುವಂತೆ ಅವನಿಗೆ ಪ್ರೀತಿಯಿಂದ ಸಹಾಯ ನೀಡಿರಿ. (ಮತ್ತಾ. 24:45) ಕೆಲವು ಸಂದರ್ಭಗಳಲ್ಲಿ, ಕೇವಲ ಸ್ವಲ್ಪ ವಿವರಣೆಯನ್ನು ಒದಗಿಸುವುದು ಮಾತ್ರ ಸಾಕಾಗಲಿಕ್ಕಿಲ್ಲ. ನಿರ್ದಿಷ್ಟವಾದ ಬೈಬಲ್‌ ಮೂಲತತ್ತ್ವವೊಂದನ್ನು ಹೇಗೆ ಅನ್ವಯಿಸಬೇಕೆಂಬುದನ್ನು ವಿದ್ಯಾರ್ಥಿಗೆ ತೋರಿಸುವ, ಅಂದರೆ ಅದರ ಅನ್ವಯವನ್ನು ಪ್ರದರ್ಶಿಸುವಂಥ ಒಂದು ವಿಷಯವನ್ನು ನೀವು ವಾಸ್ತವದಲ್ಲಿ ಜೊತೆಯಾಗಿ ಮಾಡುವ ಅಗತ್ಯವು ಇರಬಹುದು.—ಯೋಹಾ. 13:1-15.

ಇತರರು ತಮ್ಮ ಜೀವಿತಗಳನ್ನು ಯೆಹೋವನ ಮಟ್ಟಗಳಿಗೆ ಹೊಂದಿಕೆಯಲ್ಲಿ ತರುವಂತೆ ಅವರಿಗೆ ಸಹಾಯ ನೀಡುವಾಗ, ಸಮತೆ ಮತ್ತು ಉತ್ತಮ ತೀರ್ಮಾನಶಕ್ತಿ ಬೇಕಾಗುತ್ತದೆ. ಜನರ ಹಿನ್ನೆಲೆಗಳೂ ಸಾಮರ್ಥ್ಯಗಳೂ ಭಿನ್ನ ಭಿನ್ನವಾಗಿರುತ್ತವೆ ಮತ್ತು ಅವರು ಮಾಡುವ ಪ್ರಗತಿಯೂ ವಿಭಿನ್ನ ಮಟ್ಟದಲ್ಲಿರುತ್ತದೆ. ಆದುದರಿಂದ, ನೀವು ಇತರರಿಂದ ಏನು ಅಪೇಕ್ಷಿಸುತ್ತೀರೊ ಅದು ನ್ಯಾಯಸಮ್ಮತವಾದದ್ದಾಗಿರಲಿ. (ಫಿಲಿ. 4:5, NW) ಅವರ ಜೀವಿತಗಳಲ್ಲಿ ಬದಲಾವಣೆಮಾಡುವಂತೆ ಅವರನ್ನು ಒತ್ತಾಯಿಸಬೇಡಿರಿ. ದೇವರ ವಾಕ್ಯವೂ ಆತನ ಆತ್ಮವೂ ಅವರನ್ನು ಪ್ರಚೋದಿಸುವಂತೆ ಬಿಡಿರಿ. ಜನರು ತನ್ನನ್ನು ಒತ್ತಾಯಪೂರ್ವಕವಾಗಿ ಅಲ್ಲ, ಬದಲಾಗಿ ಸಂತೋಷದಿಂದ ತಾವಾಗಿಯೇ ಸೇವಿಸಬೇಕೆಂಬುದು ಯೆಹೋವನ ಅಪೇಕ್ಷೆಯಾಗಿದೆ. (ಕೀರ್ತ. 110:3) ಅವರು ಎದುರಿಸುವ ವೈಯಕ್ತಿಕ ನಿರ್ಣಯಗಳ ಕುರಿತು ನೀವು ನಿಮ್ಮ ಸ್ವಂತ ಅಭಿಪ್ರಾಯವನ್ನು ಕೊಡುವುದರಿಂದ ದೂರವಿರಿ. ಮತ್ತು ಅವರು, ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೇಳಿಕೊಳ್ಳುವುದಾದರೂ, ಅವರಿಗಾಗಿ ನಿರ್ಣಯಗಳನ್ನು ಮಾಡದಿರುವಂತೆ ಜಾಗ್ರತೆ ವಹಿಸಿರಿ.—ಗಲಾ. 6:5.

ಪ್ರಾಯೋಗಿಕ ಸಹಾಯವನ್ನು ನೀಡಿರಿ. ಯೇಸು ತನ್ನ ಕೇಳುಗರ ಆತ್ಮಿಕ ಹಿತದ ಕುರಿತಾಗಿ ಪ್ರಧಾನವಾಗಿ ಚಿಂತಿಸಿದನಾದರೂ, ಅವರ ಬೇರೆ ಆವಶ್ಯಕತೆಗಳ ವಿಷಯದಲ್ಲೂ ಅವನು ಸೂಕ್ಷ್ಮಗ್ರಾಹಿಯಾಗಿದ್ದನು. (ಮತ್ತಾ. 15:32) ನಮ್ಮ ಬಳಿ ಸೀಮಿತ ಪ್ರಾಪಂಚಿಕ ಸಂಪನ್ಮೂಲವು ಇರುವುದಾದರೂ, ನಾವು ಸಹಾಯ ನೀಡಸಾಧ್ಯವಿರುವ ಅನೇಕ ಪ್ರಾಯೋಗಿಕ ವಿಧಗಳಿವೆ.

ನಾವು ಇತರರಲ್ಲಿ ವಹಿಸುವ ಆಸಕ್ತಿಯು, ಅವರ ವಿಷಯದಲ್ಲಿ ನಾವು ಪರಿಗಣನೆ ತೋರಿಸುವಂತೆ ಮಾಡುವುದು. ಉದಾಹರಣೆಗೆ, ಹವಾಮಾನವು ನಿಮ್ಮ ಕೇಳುಗನಿಗೆ ತೊಂದರೆಯನ್ನು ಉಂಟುಮಾಡುವುದಾದರೆ, ಹೆಚ್ಚು ಯೋಗ್ಯವಾದ ಸ್ಥಳಕ್ಕೆ ಹೋಗಿರಿ ಅಥವಾ ಬೇರೆ ಸಮಯದಲ್ಲಿ ಚರ್ಚೆಯನ್ನು ಮುಂದುವರಿಸಲು ಏರ್ಪಾಡನ್ನು ಮಾಡಿರಿ. ನೀವು ಅನನುಕೂಲವಾದ ಸಮಯದಲ್ಲಿ ಅವರನ್ನು ಭೇಟಿಮಾಡಿರುವುದಾದರೆ, ಬೇರೆ ಸಮಯದಲ್ಲಿ ಹಿಂದಿರುಗಿ ಬರುತ್ತೇನೆಂದು ಹೇಳಿರಿ. ನಿಮ್ಮ ನೆರೆಯವನೊ, ಆಸಕ್ತಿಯನ್ನು ತೋರಿಸಿರುವಂಥ ಒಬ್ಬ ವ್ಯಕ್ತಿಯೊ ಕಾಯಿಲೆ ಬಿದ್ದಿರುವುದಾದರೆ ಇಲ್ಲವೆ ಆಸ್ಪತ್ರೆಯಲ್ಲಿರುವುದಾದರೆ, ಒಂದು ಕಾರ್ಡನ್ನೊ ಚಿಕ್ಕ ಪತ್ರವನ್ನೊ ಕಳುಹಿಸುವ ಮೂಲಕ ಅಥವಾ ಅವನನ್ನು ಭೇಟಿ ಮಾಡುವ ಮೂಲಕ ನಿಮ್ಮ ಚಿಂತೆಯನ್ನು ವ್ಯಕ್ತಪಡಿಸಿರಿ. ಸೂಕ್ತವಾಗಿರುವಲ್ಲಿ, ನೀವು ಒಂದು ಸಾಧಾರಣವಾದ ಊಟವನ್ನು ಒದಗಿಸಬಹುದು ಅಥವಾ ಬೇರೆ ರೀತಿಯ ಸಹಾಯವನ್ನು ಮಾಡಬಹುದು.

ಬೈಬಲ್‌ ವಿದ್ಯಾರ್ಥಿಗಳು ಪ್ರಗತಿಮಾಡಿದಂತೆ, ಅವರ ಹಿಂದಿನ ಜೊತೆಗಾರರೊಂದಿಗೆ ಅವರು ಹೆಚ್ಚು ಸಮಯವನ್ನು ಕಳೆಯದ ಕಾರಣ, ಅವರಲ್ಲಿ ಭಾವನಾತ್ಮಕ ಶೂನ್ಯತೆ ಉಂಟಾಗಬಹುದು. ಆದಕಾರಣ, ಅವರ ಮಿತ್ರರಾಗಿರಿ. ಅವರೊಂದಿಗಿನ ಬೈಬಲ್‌ ಅಧ್ಯಯನದ ನಂತರ ಮತ್ತು ಬೇರೆ ಸಮಯದಲ್ಲಿ ಅವರೊಂದಿಗೆ ಮಾತಾಡುತ್ತಾ ಸಮಯವನ್ನು ಕಳೆಯಿರಿ. ಅವರು ಒಳ್ಳೇ ಸಹವಾಸಗಳನ್ನು ಬೆಳೆಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿರಿ. (ಜ್ಞಾನೋ. 13:20) ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ಅವರಿಗೆ ಸಹಾಯಮಾಡಿರಿ. ಅಂತಹ ಕೂಟಗಳಲ್ಲಿ ಅವರೊಂದಿಗೆ ಕುಳಿತುಕೊಳ್ಳಿರಿ; ಅವರ ಮಕ್ಕಳನ್ನು ನೋಡಿಕೊಳ್ಳಲು ನೆರವಾಗಿರಿ. ಹೀಗೆ ಕಾರ್ಯಕ್ರಮದಿಂದ ಎಲ್ಲರೂ ಪೂರ್ಣ ರೀತಿಯಲ್ಲಿ ಪ್ರಯೋಜನ ಹೊಂದುವಂತಾಗುವುದು.

ಹೃತ್ಪೂರ್ವಕವಾದ ಆಸಕ್ತಿಯನ್ನು ತೋರಿಸಿರಿ. ಇತರರಲ್ಲಿ ಆಸಕ್ತಿಯನ್ನು ತೋರಿಸುವುದು ನೀವು ಕ್ರಮೇಣ ಬೆಳೆಸಿಕೊಂಡು ನಿಸ್ಸೀಮರಾಗುವಂಥ ಒಂದು ಕೌಶಲವಾಗಿರುವುದಿಲ್ಲ, ಬದಲಾಗಿ ಅದು ಯಥಾರ್ಥವಾದದ್ದಾಗಿದ್ದು, ಇತರರ ಭಕ್ತಿವೃದ್ಧಿಮಾಡುವ ಹೇತುವಿನೊಂದಿಗೆ ಹೃದಯದಾಳದಿಂದ ಬರುವಂಥದ್ದಾಗಿರುತ್ತದೆ. ಇತರರಲ್ಲಿ ನಾವು ತೋರಿಸುವ ಆಸಕ್ತಿಯು ಅನೇಕ ವಿಧಗಳಲ್ಲಿ ತೋರಿಬರುತ್ತದೆ. ನಾವು ಹೇಗೆ ಆಲಿಸುತ್ತೇವೆ ಮತ್ತು ನಾವು ಏನು ಹೇಳುತ್ತೇವೆ ಎಂಬುದರಲ್ಲಿ ಇದು ತೋರಿಬರುತ್ತದೆ. ನಾವು ಇತರರಿಗೆ ತೋರಿಸುವ ದಯಾಭಾವ ಮತ್ತು ಪರಿಗಣನೆಯಲ್ಲಿ ಅದು ಕಂಡುಬರುತ್ತದೆ. ನಾವು ಏನೂ ಹೇಳದಿರುವಾಗ ಮತ್ತು ಮಾಡದಿರುವಾಗಲೂ, ಅದು ನಮ್ಮ ಮನೋಭಾವ ಮತ್ತು ಮುಖಭಾವದಲ್ಲಿ ತಿಳಿದುಬರುತ್ತದೆ. ನಾವು ಇತರರ ಕುರಿತು ನಿಜವಾಗಿಯೂ ಚಿಂತಿಸುವಲ್ಲಿ, ಅವರಿಗೆ ಅದು ಖಂಡಿತವಾಗಿಯೂ ಗೊತ್ತಾಗುವುದು.

ನಾವು ಇತರರಲ್ಲಿ ಯಥಾರ್ಥವಾದ ಆಸಕ್ತಿಯನ್ನು ತೋರಿಸುವುದಕ್ಕಿರುವ ಅತಿ ಪ್ರಾಮುಖ್ಯವಾದ ಕಾರಣವೇನಂದರೆ, ನಾವು ಹಾಗೆ ಮಾಡುವ ಮೂಲಕ ನಮ್ಮ ಸ್ವರ್ಗೀಯ ತಂದೆಯ ಪ್ರೀತಿ ಮತ್ತು ಕರುಣೆಗಳನ್ನು ಅನುಕರಿಸುತ್ತೇವೆ. ಇದು ನಮ್ಮ ಕೇಳುಗರನ್ನು ಯೆಹೋವನ ಬಳಿಗೆ ಮತ್ತು ನಾವು ಪ್ರಚುರಪಡಿಸುವಂತೆ ಆತನು ನಮಗೆ ಕೊಟ್ಟಿರುವ ಸಂದೇಶದ ಕಡೆಗೆ ಸೆಳೆಯಲು ಸಹಾಯಮಾಡುತ್ತದೆ. ಆದಕಾರಣ, ನೀವು ಸುವಾರ್ತೆಯನ್ನು ಹಂಚುವಾಗ, “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡ”ಲು ಪ್ರಯತ್ನಿಸುತ್ತಾ ಇರಲಿ.—ಫಿಲಿ. 2:4.

ನಿಜವಾದ ಆಸಕ್ತಿಯನ್ನು ತೋರಿಸುವ ವಿಧ

  • ಇನ್ನೊಬ್ಬ ವ್ಯಕ್ತಿಯು ಮಾತಾಡುವಾಗ ಕಿವಿಗೊಡಿರಿ. ಅವನ ವಿಚಾರಗಳು ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವನಿಗೆ ಉಪಕಾರ ಹೇಳಿ. ಅವನ ಮಾನಸಿಕ ಸ್ಥಿತಿಯನ್ನು ಚೆನ್ನಾಗಿ ತಿಳಿಯುವ ಉದ್ದೇಶದಿಂದ ಪ್ರಶ್ನೆಗಳನ್ನು ಕೇಳಿರಿ.

  • ನಿಮ್ಮ ಮಾತುಕತೆ ನಡೆದ ಬಳಿಕ ಆ ವ್ಯಕ್ತಿಯ ಕುರಿತು ಯೋಚಿಸಿರಿ. ಆದಷ್ಟು ಬೇಗನೆ ಅವನನ್ನು ಪುನಃ ಸಂಪರ್ಕಿಸಲು ಪ್ರಯತ್ನಿಸಿರಿ.

  • ಅವನ ಆವಶ್ಯಕತೆಗಳನ್ನು ಅತಿ ನೇರವಾಗಿ ಪೂರೈಸುವ ಬೈಬಲ್‌ ಸತ್ಯಗಳನ್ನು ಹಂಚಿಕೊಳ್ಳಿರಿ.

  • ಅವನಿಗೆ ಸಹಾಯಮಾಡಲಿಕ್ಕಾಗಿ ಕಾರ್ಯನಡಿಸಿರಿ. ಅವನ ಸದ್ಯದ ಮತ್ತು ದೀರ್ಘಾವಧಿಯ ಅಗತ್ಯಗಳನ್ನು ಪರಿಗಣಿಸಿರಿ.

ಅಭ್ಯಾಸಪಾಠಗಳು: (1) ಸಭಾ ಕೂಟಕ್ಕೆ ಮೊದಲು, ಹಾಜರಿರುವವರೊಬ್ಬರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ. ಕೇವಲ ನಮಸ್ಕಾರ ಎಂದು ಹೇಳುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿರಿ. ಆ ವ್ಯಕ್ತಿಯ ಹೆಚ್ಚಿನ ಪರಿಚಯಮಾಡಿಕೊಳ್ಳಲು ಪ್ರಯತ್ನಿಸಿರಿ. ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸಿರಿ. ಇದನ್ನು ಕ್ರಮವಾದ ರೂಢಿಯಾಗಿ ಮಾಡಿರಿ. (2) ಕ್ಷೇತ್ರ ಸೇವೆಯಲ್ಲಿ ನೀವು ಭೇಟಿಯಾಗುವ ವ್ಯಕ್ತಿಯಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ. ಕೇವಲ ಸಾಕ್ಷಿಯನ್ನು ನೀಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿರಿ. ಆ ವ್ಯಕ್ತಿಯ ಪರಿಚಯಮಾಡಿಕೊಳ್ಳಿ. ಆ ವ್ಯಕ್ತಿಯ ಬಗ್ಗೆ ನೀವು ಏನನ್ನು ತಿಳಿದುಕೊಳ್ಳುತ್ತೀರೋ ಅದನ್ನು ನೀವು ಹೇಳುವ ಮತ್ತು ಮಾಡುವ ವಿಷಯಗಳಿಗೆ ಹೊಂದಿಸಿಕೊಳ್ಳಿ. ಇದನ್ನು ಮಾಡುವ ಸಂದರ್ಭಗಳಿಗಾಗಿ ಹುಡುಕುತ್ತಾ ಇರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ