-
ಉತ್ತಮ ಆರೋಗ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟಎಚ್ಚರ!—2004 | ಜುಲೈ
-
-
ಉತ್ತಮ ಆರೋಗ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟ
ಜೋಆ್ಯನಳು ನ್ಯೂ ಯಾರ್ಕಿನಲ್ಲಿ ವಾಸಿಸುತ್ತಿದ್ದಾಳೆ ಮತ್ತು ಅವಳಿಗೆ ಕ್ಷಯ (ಟಿಬಿ)ರೋಗವಿತ್ತು. ಆದರೆ ಅವಳಿಗಿದ್ದ ರೋಗವು ಸಾಮಾನ್ಯವಾದ ರೀತಿಯ ಕ್ಷಯರೋಗವಲ್ಲ. ಕಾರ್ಯತಃ ಎಲ್ಲಾ ರೀತಿಯ ಔಷಧಗಳನ್ನು ಪ್ರತಿರೋಧಿಸುವ ಸಾಮರ್ಥ್ಯವಿದ್ದ ಮತ್ತು ತನ್ನ ಬಲಿಪಶುಗಳಲ್ಲಿ ಅರ್ಧದಷ್ಟು ಮಂದಿಯನ್ನು ಕೊಲ್ಲುವ ರೂಪಾಂತರಿತ ಜಾತಿಯ ಕ್ಷಯರೋಗದಿಂದ ಅವಳು ಪೀಡಿತಳಾಗಿದ್ದಳು. ಆದರೂ, ಜೋಆ್ಯನಳು ಕ್ರಮವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಲಿಲ್ಲ, ಮತ್ತು ಇಷ್ಟರಲ್ಲಾಗಲೇ ಅವಳಿಂದ ಇತರರು ಸಹ ಕ್ಷಯರೋಗದಿಂದ ಒಮ್ಮೆಯಾದರೂ ಸೋಂಕಿತರಾದರು. ‘ಅವಳನ್ನು ಒಂದು ಕೋಣೆಯಲ್ಲಿ ಬಂಧಿಸಿಡಬೇಕು’ ಎಂದು ಹತಾಶರಾದ ಅವಳ ವೈದ್ಯರು ಹೇಳಿದರು.
ಕ್ಷಯರೋಗವು ಪುರಾತನಕಾಲದ ಕೊಲೆಗಡುಕ ರೋಗವಾಗಿದೆ. ವಾಸ್ತವದಲ್ಲಿ ಕೋಟಿಗಟ್ಟಲೆ ಜನರು ಈ ಕ್ಷಯರೋಗದಿಂದ ನರಳಿ ಸತ್ತಿದ್ದಾರೆ. ಪುರಾತನ ಈಜಿಪ್ಟ್ ಮತ್ತು ಪೆರುಗಳ ಮಮಿಗಳಲ್ಲಿ ಈ ರೋಗದ ಪುರಾವೆಯು ಕಂಡುಬಂದಿದೆ. ಇಂದು, ಮತ್ತೆ ತಲೆಯೆತ್ತಿರುವ ಕ್ಷಯರೋಗದ ಜಾತಿಗಳು ಪ್ರತಿ ವರ್ಷ ಸುಮಾರು 20 ಲಕ್ಷ ಜನರನ್ನು ಬಲಿತೆಗೆದುಕೊಳ್ಳುತ್ತಿವೆ.
ಆಫ್ರಿಕದ ಒಂದು ಗುಡಿಸಿಲಿನ ಚಿಕ್ಕ ಮಂಚವೊಂದರಲ್ಲಿ ಮಲಗಿಕೊಂಡಿದ್ದ ಕಾರ್ಲೀಟೋಸ್‌ನ ಹಣೆಯ ಮೇಲೆ ಬೆವರಿನ ಹನಿಗಳು ಮೂಡಿದ್ದವು. ಮಲೇರಿಯ ಜ್ವರವು ಅವನನ್ನು ಎಷ್ಟು ಅಶಕ್ತನನ್ನಾಗಿ ಮಾಡಿತ್ತೆಂದರೆ, ಅವನಿಗೆ ಅಳಲು ಸಹ ಶಕ್ತಿಯಿರಲಿಲ್ಲ. ಅವನ ಚಿಂತಾಭರಿತ ಹೆತ್ತವರ ಬಳಿ ಔಷಧಕ್ಕಾಗಿ ಹಣವೂ ಇರಲಿಲ್ಲ, ಮತ್ತು ತಮ್ಮ ಮಗನಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲು ಹತ್ತಿರದಲ್ಲಿ ಒಂದು ಚಿಕಿತ್ಸಾಲಯವೂ ಇರಲಿಲ್ಲ. ಜ್ವರವಂತೂ ಕಡಿಮೆಯಾಗಲೇ ಇಲ್ಲ, ಮತ್ತು 48 ತಾಸುಗಳಲ್ಲಿ ಅವನು ಅಸುನೀಗಿದನು.
ಮಲೇರಿಯ ಜ್ವರವು ಪ್ರತಿ ವರ್ಷ ಕಾರ್ಲೀಟೋಸ್‌ನಂಥ ಸುಮಾರು ಹತ್ತು ಲಕ್ಷ ಮಕ್ಕಳನ್ನು ಕೊಲ್ಲುತ್ತದೆ. ಪೂರ್ವ ಆಫ್ರಿಕದ ಹಳ್ಳಿಗಳಲ್ಲಿ, ಅನೇಕ ಮಕ್ಕಳಿಗೆ ಒಂದು ತಿಂಗಳಿನಲ್ಲಿ, ಮಲೇರಿಯ ಜ್ವರವನ್ನು ಹರಡುವ ಸೊಳ್ಳೆಗಳು ಸುಮಾರು 50ರಿಂದ 80 ಸಲ ಕಚ್ಚುತ್ತವೆ. ಈ ಸೊಳ್ಳೆಗಳು ಹೊಸ ಕ್ಷೇತ್ರಗಳಿಗೂ ಹಬ್ಬುತ್ತಿವೆ, ಮತ್ತು ಮಲೇರಿಯ ಜ್ವರದ ವಿರುದ್ಧ ನೀಡಲ್ಪಡುವ ಔಷಧಗಳು ಕಡಿಮೆ ಪರಿಣಾಮಕಾರಿಯಾಗುತ್ತಿವೆ. ಒಂದು ಅಂದಾಜಿಗನುಸಾರ, ಪ್ರತಿ ವರ್ಷ 30 ಕೋಟಿ ಜನರು ತೀವ್ರವಾದ ಮಲೇರಿಯ ಜ್ವರದಿಂದ ನರಳುತ್ತಾರೆ.
ಕ್ಯಾಲಿಫಾರ್ನಿಯದ ಸಾನ್ ಫ್ರಾನ್ಸಿಸ್ಕೋದಲ್ಲಿ ವಾಸಿಸುತ್ತಿದ್ದ 30 ವರ್ಷ ಪ್ರಾಯದ ಕೆನಥ್ ಎಂಬ ವ್ಯಕ್ತಿ 1980ರಲ್ಲಿ ಪ್ರಥಮ ಬಾರಿಗೆ ವೈದ್ಯರ ಬಳಿ ಹೋದನು. ತನಗೆ ಅತಿಭೇದಿ ಮತ್ತು ವಿಪರೀತ ಆಯಾಸವಾಗುತ್ತಿದೆ ಎಂದು ಅವನು ವೈದ್ಯರಿಗೆ ತಿಳಿಸಿದನು. ಒಂದು ವರ್ಷದ ನಂತರ ಅವನು ಮೃತಪಟ್ಟನು. ಅವನು ಪರಿಣತರಿಂದ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡಿದ್ದನಾದರೂ, ಅವನ ದೇಹವು ಕ್ರಮೇಣ ಬಡಕಲಾಗುತ್ತಾ ಹೋಯಿತು, ಮತ್ತು ಕಟ್ಟಕಡೆಗೆ ಅವನು ನ್ಯುಮೋನಿಯಕ್ಕೆ ತುತ್ತಾಗಿ ಸತ್ತನು.
ಎರಡು ವರ್ಷಗಳಾನಂತರ, ಸಾನ್ ಫ್ರಾನ್ಸಿಸ್ಕೋದಿಂದ ಸುಮಾರು 16,000 ಕಿಲೊಮೀಟರುಗಳಷ್ಟು ದೂರದಲ್ಲಿರುವ ಉತ್ತರ ಟಾನ್ಸೇನಿಯದಲ್ಲಿನ ಯುವತಿಯೊಬ್ಬಳು ಅದೇ ರೀತಿಯ ರೋಗಲಕ್ಷಣಗಳಿಂದ ಕಷ್ಟಾನುಭವಿಸತೊಡಗಿದಳು. ಕೆಲವೇ ವಾರಗಳಲ್ಲಿ ಅವಳು ನಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಳು, ಮತ್ತು ಸ್ವಲ್ಪದರಲ್ಲೇ ತೀರಿಹೋದಳು. ಜೂಲೀಆನಾ ಎಂಬ ಹೆಸರು ಮುದ್ರಿಸಲ್ಪಟ್ಟಿದ್ದ ಬಟ್ಟೆಗಳನ್ನು ಮಾರುತ್ತಿದ್ದ ಪುರುಷನೊಬ್ಬನು ಟಾನ್ಸೇನಿಯದ ಆ ಯುವತಿಗೆ ಮತ್ತು ಇತರ ಸ್ಥಳಿಕ ಸ್ತ್ರೀಯರಿಗೆ ಈ ರೋಗವನ್ನು ಸೋಂಕಿಸಿದ್ದರಿಂದ, ಹಳ್ಳಿಯ ಜನರು ಈ ವಿಚಿತ್ರ ರೋಗಕ್ಕೆ ಜೂಲೀಆನಾಳ ರೋಗ ಎಂದು ಹೆಸರಿಟ್ಟರು.
ಕೆನಥ್‌ಗೆ ಮತ್ತು ಟಾನ್ಸೇನಿಯದ ಆ ಸ್ತ್ರೀಗೆ ಒಂದೇ ರೀತಿಯ ರೋಗವಿತ್ತು. ಅದು ಏಡ್ಸ್ ಆಗಿತ್ತು. ಇಸವಿ 1980ಗಳ ಆರಂಭದಲ್ಲಿ, ವೈದ್ಯಕೀಯ ವಿಜ್ಞಾನವು ಅತ್ಯಂತ ಅಪಾಯಕಾರಿ ಸೂಕ್ಷ್ಮಜೀವಿಗಳನ್ನು ನಿಯಂತ್ರಣಕ್ಕೆ ತಂದಿರುವಂತೆ ತೋರುತ್ತಿದ್ದಾಗಲೇ, ಈ ಹೊಸ ಸೋಂಕು ರೋಗವು ಇಡೀ ಮಾನವಕುಲವನ್ನು ಪೀಡಿಸಲಿಕ್ಕಾಗಿ ತಲೆದೋರಿತು. ಎರಡೇ ದಶಕಗಳಲ್ಲಿ ಏಡ್ಸ್ ರೋಗದಿಂದ ಉಂಟುಮಾಡಲ್ಪಟ್ಟ ಮರಣ ಸಂಖ್ಯೆಯು, 14ನೇ ಶತಮಾನದಲ್ಲಿ ಯೂರೇಸಿಯದಾದ್ಯಂತ ಹಬ್ಬಿದ ಮತ್ತು ಯೂರೋಪ್ ಎಂದೆಂದಿಗೂ ಮರೆಯದಂಥ ಪ್ಲೇಗ್ ರೋಗದಿಂದ ಬರಮಾಡಲ್ಪಟ್ಟ ಮರಣ ಸಂಖ್ಯೆಯಷ್ಟೇ ಉಚ್ಚವಾಗಿತ್ತು.
ಪ್ಲೇಗ್‌ಮಾರಿ
ಬ್ಲ್ಯಾಕ್ ಡೆತ್ (ಕರಿ ಮೃತ್ಯು) ಎಂದು ಕರೆಯಲ್ಪಡುವ ಪ್ಲೇಗ್‌ಮಾರಿಯ ಆರಂಭವು, 1347ರಷ್ಟು ಹಿಂದಿನ ಕಾಲದ್ದೆಂದು ಪತ್ತೆಹಚ್ಚಸಾಧ್ಯವಿದೆ. ಕ್ರಿಮೆಯದಿಂದ ಹಡಗೊಂದು ಸಿಸಿಲ್ಯ ದ್ವೀಪದಲ್ಲಿದ್ದ ಮೆಸಿನದ ತಂಗುದಾಣದಲ್ಲಿ ನಿಲ್ಲಿಸಲ್ಪಟ್ಟಾಗ ಇದು ತಲೆದೋರಿತು. ಸಾಮಾನ್ಯವಾಗಿ ಸಾಗಿಸುವ ಸಾಮಾನು-ಸರಂಜಾಮಿನೊಂದಿಗೆ ಈ ಹಡಗು ಪ್ಲೇಗ್ ರೋಗವನ್ನೂ ಸಾಗಿಸಿತು.a ಸ್ವಲ್ಪದರಲ್ಲೇ ಬ್ಲ್ಯಾಕ್ ಡೆತ್ ಇಟಲಿಯಾದ್ಯಂತ ಹಬ್ಬಿತು.
ಅದರ ಮುಂದಿನ ವರ್ಷದಲ್ಲಿ, ಇಟಲಿಯ ಸಿಯೆನದ ಆನ್‌ಯೋಲೊ ಡೀ ಟೂರಾ ಎಂಬಾತನು ತನ್ನ ಪಟ್ಟಣದಲ್ಲಿನ ಭೀಕರ ಸನ್ನಿವೇಶವನ್ನು ಹೀಗೆ ವರ್ಣಿಸಿದನು: ‘ಸಿಯೆನದಲ್ಲಿನ ಪ್ರಾಣನಷ್ಟವು ಮೇ ತಿಂಗಳಿನಲ್ಲಿ ಆರಂಭವಾಯಿತು. ಅದು ತುಂಬ ಕ್ರೂರವಾದ ಹಾಗೂ ಭೀಕರವಾದ ಸಂಗತಿಯಾಗಿತ್ತು. ರೋಗಿಗಳು ಹೆಚ್ಚುಕಡಿಮೆ ಆ ಕೂಡಲೇ ಸಾವನ್ನಪ್ಪಿದರು. ಹಗಲೂರಾತ್ರಿ ನೂರಾರು ಸಂಖ್ಯೆಯಲ್ಲಿ ಜನರು ಸತ್ತರು.’ ಅವನು ಕೂಡಿಸಿ ಹೇಳಿದ್ದು: ‘ನನ್ನ ಸ್ವಂತ ಕೈಯಿಂದಲೇ ನಾನು ನನ್ನ ಐದು ಮಂದಿ ಮಕ್ಕಳ ಶವಸಂಸ್ಕಾರಮಾಡಿದೆ, ಮತ್ತು ಇನ್ನೂ ಅನೇಕರು ಸಹ ಇದನ್ನೇ ಮಾಡಿದರು. ಮರಣದಲ್ಲಿ ಯಾರನ್ನೇ ಕಳೆದುಕೊಂಡರೂ ಯಾರೊಬ್ಬರೂ ಅಳಲಿಲ್ಲ, ಏಕೆಂದರೆ ಹೆಚ್ಚುಕಡಿಮೆ ಪ್ರತಿಯೊಬ್ಬರೂ ಮರಣವನ್ನು ಎದುರುನೋಡುತ್ತಿದ್ದರು. ಎಷ್ಟು ಅಪಾರ ಸಂಖ್ಯೆಯಲ್ಲಿ ಜನರು ಸತ್ತರೆಂದರೆ, ಇದು ಲೋಕಾಂತ್ಯವಾಗಿದೆ ಎಂದು ಎಲ್ಲರೂ ನಂಬಿದರು.’
ನಾಲ್ಕೇ ವರ್ಷಗಳಲ್ಲಿ ಪ್ಲೇಗು ಯೂರೋಪಿನಾದ್ಯಂತ ಹಬ್ಬಿತು ಮತ್ತು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು—ಬಹುಶಃ ಎರಡು ಕೋಟಿ ಮತ್ತು ಮೂರು ಕೋಟಿಗಳ ನಡುವಣ ಸಂಖ್ಯೆಯಷ್ಟು ಮಂದಿ—ತಮ್ಮ ಜೀವಗಳನ್ನು ಕಳೆದುಕೊಂಡರು ಎಂದು ಕೆಲವು ಇತಿಹಾಸಗಾರರು ಹೇಳುತ್ತಾರೆ. ಅತಿ ದೂರದ ಐಸ್‌ಲೆಂಡ್‌ಗೆ ಸಹ ಪ್ಲೇಗು ಹಬ್ಬಿತು ಮತ್ತು ಅದು ಜನಸಂಖ್ಯೆಯಲ್ಲಿ ಹೆಚ್ಚು ಮಂದಿಯನ್ನು ಸಂಹರಿಸಿಬಿಟ್ಟಿತು. ದೂರಪ್ರಾಚ್ಯದಲ್ಲಿ, ಪ್ಲೇಗ್ ಮತ್ತು ಅದೇ ಸಮಯದಲ್ಲಿ ಉಂಟಾದ ಬರಗಾಲದ ಫಲಿತಾಂಶವಾಗಿ, 13ನೆಯ ಶತಮಾನದ ಆರಂಭದಲ್ಲಿ ಚೀನಾದ ಜನಸಂಖ್ಯೆಯು 12.3 ಕೋಟಿಯಿಂದ 14ನೆಯ ಶತಮಾನದಲ್ಲಿ 6.5 ಕೋಟಿಗೆ ಬಂದಿಳಿಯಿತು ಎಂದು ಹೇಳಲಾಗಿದೆ.
ಹಿಂದಿನ ಯಾವುದೇ ಸಾಂಕ್ರಾಮಿಕ ರೋಗವಾಗಲಿ, ಯುದ್ಧವಾಗಲಿ, ಬರಗಾಲವಾಗಲಿ ಅಷ್ಟರ ತನಕ ಅಂಥ ವ್ಯಾಪಕ ನರಳಾಟವನ್ನು ಉಂಟುಮಾಡಿರಲಿಲ್ಲ. “ಅದು ಮಾನವ ಇತಿಹಾಸದಲ್ಲಿಯೇ ಸರಿಸಾಟಿಯಿಲ್ಲದಿರುವಂಥ ಒಂದು ವಿಪತ್ತಾಗಿತ್ತು” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ. “ಯೂರೋಪ್, ಉತ್ತರ ಆಫ್ರಿಕ, ಮತ್ತು ಏಷ್ಯಾದ ಕೆಲವು ಕ್ಷೇತ್ರಗಳ ಕಾಲುಭಾಗ ಮತ್ತು ಅರ್ಧಭಾಗದ ನಡುವಣ ಸಂಖ್ಯೆಯಷ್ಟು ಜನರು ಸಾವನ್ನಪ್ಪಿದರು.”
ಅಮೆರಿಕಗಳು ಲೋಕದ ಇತರ ಭಾಗಗಳಿಂದ ಪ್ರತ್ಯೇಕವಾಗಿರುವುದರಿಂದ ಪ್ಲೇಗ್‌ಮಾರಿಯ ಹಾವಳಿಯಿಂದ ತಪ್ಪಿಸಿಕೊಂಡವು. ಆದರೆ ಮಹಾಸಾಗರದಲ್ಲಿ ಸಂಚರಿಸುವ ಹಡಗುಗಳು ಬೇಗನೆ ಈ ಪ್ರತ್ಯೇಕತೆಗೆ ಭಂಗವೊಡ್ಡಿದವು. ಹದಿನಾರನೆಯ ಶತಮಾನದಲ್ಲಿ, ಪ್ಲೇಗ್‌ಗಿಂತ ಹೆಚ್ಚು ಮಾರಕವಾಗಿ ಪರಿಣಮಿಸಿದ ಸಾಂಕ್ರಾಮಿಕ ರೋಗಗಳ ಒಂದು ಅಲೆಯು ‘ನೂತನ ಲೋಕದ’ ಮೇಲೆ ಧ್ವಂಸಕಾರಕ ಪರಿಣಾಮವನ್ನು ಬೀರಿತು.
ಸಿಡುಬು ರೋಗವು ಅಮೆರಿಕಗಳನ್ನು ವಶಪಡಿಸಿಕೊಂಡದ್ದು
ಇಸವಿ 1492ರಲ್ಲಿ ಕೊಲಂಬಸನು ವೆಸ್ಟ್ ಇಂಡೀಸ್‌ಗೆ ಆಗಮಿಸಿದಾಗ, ಅವನು ಅಲ್ಲಿನ ಸ್ಥಳೀಯ ಜನರನ್ನು ‘ಸುಂದರವಾದ ರೂಪವಿದ್ದು, ಅತ್ಯುತ್ತಮ ಗುಣಲಕ್ಷಣಗಳಿರುವ ಮತ್ತು ಮಧ್ಯಮ ಎತ್ತರವಿದ್ದು ದಷ್ಟಪುಷ್ಟ ದೇಹ’ಗಳುಳ್ಳ ಜನರೆಂದು ವರ್ಣಿಸಿದನು. ಆದರೂ, ಅವರ ಆರೋಗ್ಯಭರಿತ ಹೊರತೋರಿಕೆಯು, ‘ಪುರಾತನ ಲೋಕದ’ ರೋಗಗಳಿಗೆ ಅವರ ಸುಲಭಬೇಧ್ಯತೆಯನ್ನು ಮರೆಮಾಡಿತು.
ಇಸವಿ 1518ರಲ್ಲಿ, ಹಿಸ್ಪನಿಯೋಲ ದ್ವೀಪದಲ್ಲಿ ಸಿಡುಬು ರೋಗವು ತಲೆದೋರಿತು. ಸ್ಥಳೀಯ ಅಮೆರಿಕನರು ಹಿಂದೆಂದೂ ಸಿಡುಬು ರೋಗಕ್ಕೆ ತುತ್ತಾಗಿರಲಿಲ್ಲ, ಮತ್ತು ಇದರ ಪರಿಣಾಮವು ವಿಧ್ವಂಸಕವಾಗಿತ್ತು. ಒಬ್ಬ ಸ್ಪ್ಯಾನಿಷ್ ಪ್ರತ್ಯಕ್ಷದರ್ಶಿಯು ಅಂದಾಜುಮಾಡಿದಂತೆ, ಆ ದ್ವೀಪದಲ್ಲಿ ಕೇವಲ ಒಂದು ಸಾವಿರ ಜನರು ಮಾತ್ರ ಇದರಿಂದ ಬದುಕಿ ಉಳಿದರು. ಅತಿ ಬೇಗನೆ ಈ ಸಾಂಕ್ರಾಮಿಕ ರೋಗವು ಮೆಕ್ಸಿಕೊ ಮತ್ತು ಪೆರುವಿಗೆ ಸಹ ಹಬ್ಬಿತು ಮತ್ತು ಇದೇ ರೀತಿಯ ಪರಿಣಾಮಗಳು ಸಂಭವಿಸಿದವು.
ತದನಂತರದ ಶತಮಾನದಲ್ಲಿ, ಇಂಗ್ಲೆಂಡಿನಿಂದ ಬಂದ ನೆಲೆಸಿಗರು ಉತ್ತರ ಅಮೆರಿಕದ ಮ್ಯಾಸಚೂಸೆಟ್ಸ್‌ನ ಕ್ಷೇತ್ರಕ್ಕೆ ಆಗಮಿಸಿದಾಗ, ಸಿಡುಬು ರೋಗವು ಬಹುಮಟ್ಟಿಗೆ ದೇಶದ ಎಲ್ಲಾ ನಿವಾಸಿಗಳನ್ನು ಹತಿಸಿಬಿಟ್ಟಿತ್ತು ಎಂಬುದು ಅವರಿಗೆ ತಿಳಿದುಬಂತು. “ಸ್ಥಳೀಯರಲ್ಲಿ ಬಹುಮಟ್ಟಿಗೆ ಎಲ್ಲರೂ ಸಿಡುಬು ರೋಗದಿಂದ ಸಾವನ್ನಪ್ಪಿದ್ದಾರೆ” ಎಂದು ಇಂಗ್ಲೆಂಡಿನಿಂದ ಬಂದ ನೆಲೆಸಿಗರ ನಾಯಕನಾದ ಜಾನ್ ವಿಂತ್ರೋಪ್ ಬರೆದನು.
ಸಿಡುಬು ರೋಗದ ನಂತರ ಇತರ ಸಾಂಕ್ರಾಮಿಕ ರೋಗಗಳು ಬಂದವು. ಒಂದು ಕೃತಿಗನುಸಾರ, ಕೊಲಂಬಸನು ಬಂದು ಒಂದು ಶತಮಾನವು ಕಳೆಯುವಷ್ಟರಲ್ಲಿ, ವಿದೇಶೀಯರಿಂದ ಆಮದುಮಾಡಲ್ಪಟ್ಟ ರೋಗಗಳು ‘ನೂತನ ಲೋಕದ’ ಜನಸಂಖ್ಯೆಯಲ್ಲಿ 90 ಪ್ರತಿಶತದಷ್ಟು ಮಂದಿಯನ್ನು ಹತಿಸಿಬಿಟ್ಟವು. ಮೆಕ್ಸಿಕೋದ ಜನಸಂಖ್ಯೆಯು 3 ಕೋಟಿಯಿಂದ 30 ಲಕ್ಷಕ್ಕೆ ಇಳಿದಿತ್ತು, ಮತ್ತು ಪೆರುವಿನ ಜನಸಂಖ್ಯೆಯು 80 ಲಕ್ಷದಿಂದ 10 ಲಕ್ಷಕ್ಕೆ ಇಳಿದಿತ್ತು. ಸಿಡುಬು ರೋಗಕ್ಕೆ ತುತ್ತಾದವರು ಸ್ಥಳೀಯ ಅಮೆರಿಕನರು ಮಾತ್ರವೇ ಆಗಿರಲಿಲ್ಲ. “ಮಾನವ ಇತಿಹಾಸದಾದ್ಯಂತ ಸಿಡುಬು ರೋಗವು ಕೋಟಿಗಟ್ಟಲೆ ಜನರ ಜೀವಗಳನ್ನು ಬಲಿತೆಗೆದುಕೊಂಡಿದೆ, ಪ್ಲೇಗ್‌ಗಿಂತಲೂ ಎಷ್ಟೋ ಅಧಿಕ . . . ಮತ್ತು ಇಪ್ಪತ್ತನೆಯ ಶತಮಾನದಲ್ಲಿ ನಡೆದಿರುವ ಎಲ್ಲಾ ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿರುವವರ ಒಟ್ಟು ಸಂಖ್ಯೆಗಿಂತಲೂ ಅಧಿಕ” ಎಂದು, ಉಪದ್ರವ—ಸಿಡುಬು ರೋಗದ ಮಾಜಿ ಹಾಗೂ ಭಾವೀ ಬೆದರಿಕೆ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ.
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಹೋರಾಟವು ಇನ್ನೂ ಜಯವನ್ನು ಸಾಧಿಸಿಲ್ಲ
ಈಗ, ಪ್ಲೇಗ್ ಮತ್ತು ಸಿಡುಬಿನಂಥ ಭೀಕರ ಸಾಂಕ್ರಾಮಿಕ ರೋಗಗಳು ಗತ ಇತಿಹಾಸದಲ್ಲಿ ಮಾತ್ರವೇ ಸಂಭವಿಸಿರುವ ವಿಪತ್ತುಗಳಾಗಿ ತೋರಬಹುದು. ಇಪ್ಪತ್ತನೆಯ ಶತಮಾನದಲ್ಲಿ, ವಿಶೇಷವಾಗಿ ಔದ್ಯೋಗೀಕೃತ ದೇಶಗಳಲ್ಲಿ ಸೋಂಕು ರೋಗಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮಾನವಕುಲವು ಅನೇಕ ಸಂಘರ್ಷಗಳನ್ನು ಜಯಿಸಿದೆ. ವೈದ್ಯರು ಅಧಿಕಾಂಶ ರೋಗಗಳ ಮೂಲ ಕಾರಣಗಳನ್ನು ಪತ್ತೆಹಚ್ಚಿದರು, ಮತ್ತು ಅವರು ಈ ರೋಗಗಳನ್ನು ಗುಣಪಡಿಸುವ ಮಾರ್ಗಗಳನ್ನು ಸಹ ಕಂಡುಕೊಂಡರು. (ಕೆಳಗೆ ಕೊಡಲ್ಪಟ್ಟಿರುವ ಚೌಕವನ್ನು ನೋಡಿ.) ಹೊಸ ಲಸಿಕೆಗಳು ಮತ್ತು ಆ್ಯಂಟಿಬೈಆಟಿಕ್‌ಗಳು, ಗುಣಪಡಿಸಲು ತುಂಬ ಕಷ್ಟಕರವಾಗಿರುವಂಥ ರೋಗಗಳನ್ನೂ ನಿರ್ಮೂಲನಗೊಳಿಸುವುದರಲ್ಲಿ ಸರ್ವರೋಗಾಪಹಾರಿಗಳಾಗಿ ಕಾರ್ಯನಡಿಸುವಂತೆ ಕಂಡುಬಂತು.
ಆದರೂ, ‘ಅಲರ್ಜಿ ಮತ್ತು ಸೋಂಕು ರೋಗಗಳ ಯು.ಎಸ್. ರಾಷ್ಟ್ರೀಯ ಸಂಸ್ಥೆ’ಯ ಮಾಜಿ ನಿರ್ದೇಶಕರಾಗಿರುವ ಡಾ. ರಿಚರ್ಡ್ ಕ್ರೌಸ ಅವರು ತಿಳಿಸುವಂತೆ, “ಪ್ಲೇಗ್ ಮರಣ ಹಾಗೂ ತೆರಿಗೆಯಷ್ಟೇ ನಿಶ್ಚಿತವಾಗಿದೆ.” ಕ್ಷಯ ಮತ್ತು ಮಲೇರಿಯದಂಥ ರೋಗಗಳು ಸಹ ನಿರ್ಮೂಲನಮಾಡಲ್ಪಟ್ಟಿಲ್ಲ. ಮತ್ತು ಇತ್ತೀಚಿನ ಏಡ್ಸ್ ಸರ್ವವ್ಯಾಪಿ ರೋಗವು, ಅಂಟುರೋಗವು ಇನ್ನೂ ಭೂಗೋಳವನ್ನು ಬೆದರಿಸುತ್ತಿದೆ ಎಂಬ ನಿರಾಶಾದಾಯಕ ಜ್ಞಾಪನವನ್ನು ನೀಡಿದೆ. “ಸೋಂಕು ರೋಗಗಳು ಜಗತ್ತಿನಲ್ಲಿ ಮರಣಕ್ಕೆ ಮುಖ್ಯ ಕಾರಣವಾಗಿ ಉಳಿದಿವೆ; ಮುಂದೆಯೂ ದೀರ್ಘಕಾಲದ ವರೆಗೆ ಅವು ಹಾಗೆಯೇ ಉಳಿಯುವವು” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ.
ರೋಗದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಗಮನಾರ್ಹ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ಕಳೆದ ಕೆಲವು ದಶಕಗಳ ಸಾಧನೆಗಳು ತಾತ್ಕಾಲಿಕವಾಗಿರಬಹುದಷ್ಟೆ ಎಂದು ಕೆಲವು ವೈದ್ಯರು ಕಳವಳಗೊಳ್ಳುತ್ತಾರೆ. “ಸೋಂಕು ರೋಗಗಳಿಂದ ಒಡ್ಡಲ್ಪಟ್ಟಿರುವ ಅಪಾಯವು ಇನ್ನೂ ಹೋಗಿಲ್ಲ—ಇನ್ನೂ ಅತ್ಯಧಿಕವಾಗುತ್ತಾ ಇದೆ” ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ರಾಬರ್ಟ್ ಶೋಪ್ ಎಚ್ಚರಿಕೆ ನೀಡುತ್ತಾರೆ. ಮುಂದಿನ ಲೇಖನವು ಇದಕ್ಕೆ ಕಾರಣವೇನು ಎಂಬುದನ್ನು ವಿವರಿಸುವುದು. (g04 5/22)
[ಪಾದಟಿಪ್ಪಣಿ]
a ಪ್ಲೇಗ್ ರೋಗವು ಹಲವಾರು ರೂಪಗಳಲ್ಲಿ ಕಾಣಿಸಿಕೊಂಡಿತು. ಇದರಲ್ಲಿ ಗೆಡ್ಡೆ ಪ್ಲೇಗ್ ಮತ್ತು ನ್ಯುಮೋನಿಯದಂಥ ಪ್ಲೇಗ್ ಸಹ ಒಳಗೂಡಿತ್ತು. ಮುಖ್ಯವಾಗಿ ಇಲಿಗಳಿಂದ ರವಾನಿಸಲ್ಪಡುತ್ತಿದ್ದ ಚಿಗಟಗಳು ಗೆಡ್ಡೆ ಪ್ಲೇಗನ್ನು ಹಬ್ಬಿಸಿದವು ಮತ್ತು ಸೋಂಕಿತ ವ್ಯಕ್ತಿಗಳ ಕೆಮ್ಮು ಹಾಗೂ ಸೀನಿನ ಮೂಲಕ ಅನೇಕವೇಳೆ ನ್ಯುಮೋನಿಯದಂಥ ಪ್ಲೇಗು ಹಬ್ಬಿಸಲ್ಪಟ್ಟಿತು.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಎರಡೇ ದಶಕಗಳಲ್ಲಿ ಏಡ್ಸ್ ರೋಗದಿಂದ ಉಂಟುಮಾಡಲ್ಪಟ್ಟ ಮರಣ ಸಂಖ್ಯೆಯು, 14ನೇ ಶತಮಾನದಲ್ಲಿ ಯೂರೇಸಿಯದಾದ್ಯಂತ ಹಬ್ಬಿದ ಪ್ಲೇಗ್ ರೋಗದಿಂದ ಬರಮಾಡಲ್ಪಟ್ಟ ಮರಣ ಸಂಖ್ಯೆಯಷ್ಟೇ ಉಚ್ಚವಾಗಿತ್ತು
[ಪುಟ 6ರಲ್ಲಿರುವ ಚೌಕ/ಚಿತ್ರಗಳು]
ಜ್ಞಾನಕ್ಕೆ ವ್ಯತಿರಿಕ್ತವಾಗಿ ಮೂಢನಂಬಿಕೆ
ಹದಿನಾಲ್ಕನೆಯ ಶತಮಾನದಲ್ಲಿ ಪ್ಲೇಗ್‌ಮಾರಿಯು ಏವಿಗ್ನಾನ್‌ನಲ್ಲಿದ್ದ ಪೋಪ್‌ನ ಮನೆವಾರ್ತೆಯ ಮೇಲೆ ಬೆದರಿಕೆಯೊಡ್ಡಿದಾಗ, ಕುಂಭರಾಶಿಯ ಸಂಕೇತದಲ್ಲಿ ಶನಿ, ಗುರು, ಮತ್ತು ಮಂಗಳ ಎಂಬ ಮೂರು ಗ್ರಹಗಳ ಸಮಾಗಮವೇ ಈ ಸಾಂಕ್ರಾಮಿಕ ರೋಗಕ್ಕೆ ಮೂಲ ಕಾರಣವೆಂದು ವೈದ್ಯರು ಅವನಿಗೆ ತಿಳಿಸಿದರು.
ಸುಮಾರು ನಾಲ್ಕು ಶತಮಾನಗಳ ಬಳಿಕ, ಜಾರ್ಜ್ ವಾಷಿಂಗ್ಟನ್ ಅವರಿಗೆ ಗಂಟಲು ನೋವು ಉಂಟಾಯಿತು. ಮೂವರು ಹೆಸರಾಂತ ವೈದ್ಯರು ಅವರ ಅಭಿಧಮನಿ ರಕ್ತನಾಳದಿಂದ ಎರಡು ಲೀಟರುಗಳಷ್ಟು ರಕ್ತವನ್ನು ಬಸಿಯುವ ಮೂಲಕ ಅವರ ಸೋಂಕಿಗೆ ಚಿಕಿತ್ಸೆ ನೀಡಿದರು. ಕೆಲವೇ ತಾಸುಗಳಲ್ಲಿ ಇವರು ತೀರಿಕೊಂಡರು. ಸುಮಾರು 2,500 ವರ್ಷಗಳ ವರೆಗೆ, ಅಂದರೆ ಹಿಪೊಕ್ರೇಟಿಸನ ಕಾಲದಿಂದ ಹಿಡಿದು 19ನೆಯ ಶತಮಾನದ ಮಧ್ಯಭಾಗದ ತನಕ, ರೋಗಿಯ ರಕ್ತವನ್ನು ಹೊರಡಿಸುವುದು ಪ್ರಮಾಣಭೂತವಾದ ವೈದ್ಯಕೀಯ ರೂಢಿಯಾಗಿತ್ತು.
ಮೂಢನಂಬಿಕೆ ಮತ್ತು ಸಂಪ್ರದಾಯವು ವೈದ್ಯಕೀಯ ಪ್ರಗತಿಯನ್ನು ವಿಳಂಬಿಸಿತಾದರೂ, ಸೋಂಕು ರೋಗಗಳ ಕಾರಣಗಳು ಮತ್ತು ಅವುಗಳಿಗಾಗಿರುವ ಔಷಧಗಳನ್ನು ಕಂಡುಹಿಡಿಯಲಿಕ್ಕಾಗಿ ಸಮರ್ಪಣಾಭಾವದ ವೈದ್ಯರು ಬಹಳಷ್ಟು ಶ್ರಮಿಸಿದರು. ಅವರು ಮಾಡಿದ ಪ್ರಮುಖ ಸಾಧನೆಗಳಲ್ಲಿ ಕೆಲವು ಈ ಕೆಳಗೆ ಕೊಡಲ್ಪಟ್ಟಿವೆ.
◼ ಸಿಡುಬು ರೋಗ. 1798ರಲ್ಲಿ, ಎಡ್ವರ್ಡ್ ಜನ್ನರ್ ಎಂಬಾತನು ಸಿಡುಬು ರೋಗಕ್ಕೆ ಒಂದು ಲಸಿಕೆಯನ್ನು ಸಿದ್ಧಪಡಿಸುವುದರಲ್ಲಿ ಯಶಸ್ವಿಯಾದನು. ಇಪ್ಪತ್ತನೆಯ ಶತಮಾನದಲ್ಲಿ, ಪೋಲಿಯೊ, ಪೀತಜ್ವರ, ದಡಾರ, ಮತ್ತು ಜರ್ಮನ್ ದಡಾರದಂಥ ಇತರ ರೋಗಗಳನ್ನು ತಡೆಗಟ್ಟುವುದರಲ್ಲಿ ಲಸಿಕೆಗಳು ಪರಿಣಾಮಕಾರಿಯಾಗಿ ಕಂಡುಬಂದಿವೆ.
◼ ಕ್ಷಯರೋಗ. ಇಸವಿ 1882ರಲ್ಲಿ, ರಾಬರ್ಟ್ ಕೋಚ್ ಕ್ಷಯರೋಗದ ಬ್ಯಾಕ್ಟೀರಿಯವನ್ನು ಗುರುತಿಸಿದನು ಮತ್ತು ಈ ರೋಗಕ್ಕಾಗಿ ಒಂದು ಪರೀಕ್ಷೆಯನ್ನು ವಿಕಸಿಸಿದನು. ಸುಮಾರು 60 ವರ್ಷಗಳ ಬಳಿಕ, ಕ್ಷಯರೋಗಕ್ಕೆ ಚಿಕಿತ್ಸೆ ನೀಡಲಿಕ್ಕಾಗಿ ಸ್ಟ್ರೆಪ್ಟೊಮೈಸಿನ್ ಎಂಬ ಪರಿಣಾಮಕಾರಿ ಆ್ಯಂಟಿಬೈಆಟಿಕ್ ಅನ್ನು ಕಂಡುಹಿಡಿಯಲಾಯಿತು. ಈ ಔಷಧವು ಗೆಡ್ಡೆ ಪ್ಲೇಗನ್ನು ಗುಣಪಡಿಸುವುದರಲ್ಲಿಯೂ ಪ್ರಯೋಜನದಾಯಕವಾಗಿ ರುಜುವಾಯಿತು.
◼ ಮಲೇರಿಯ. ಹದಿನೇಳನೆಯ ಶತಮಾನದಿಂದ, ಸಿಂಕೋನ ಮರದ ತೊಗಟೆಯಲ್ಲಿ ದೊರಕುವ ಕ್ವಿನೀನ್ ಎಂಬ ಪದಾರ್ಥವು ಮಲೇರಿಯ ಜ್ವರದಿಂದ ನರಳುತ್ತಿದ್ದ ಕೋಟಿಗಟ್ಟಲೆ ಜನರ ಜೀವಗಳನ್ನು ಸಂರಕ್ಷಿಸಿತು. ಇಸವಿ 1897ರಲ್ಲಿ, ರೊನಾಲ್ಡ್ ರೋಸ್ ಎಂಬಾತನು ಅನೊಫೆಲಿಸ್ ಎಂಬ ಸೊಳ್ಳೆಗಳು ಮಲೇರಿಯ ಜ್ವರವನ್ನು ಹಬ್ಬಿಸುತ್ತವೆ ಎಂಬುದನ್ನು ಕಂಡುಹಿಡಿದನು, ಮತ್ತು ಉಷ್ಣವಲಯದ ದೇಶಗಳಲ್ಲಿ ಮರಣ ಸಂಖ್ಯೆಯನ್ನು ಕಡಿಮೆಗೊಳಿಸಲಿಕ್ಕಾಗಿ ಸೊಳ್ಳೆಗಳ ಸಂಖ್ಯಾಭಿವೃದ್ಧಿಯನ್ನು ನಿಯಂತ್ರಿಸುವ ಪ್ರಯತ್ನಗಳು ಮಾಡಲ್ಪಟ್ಟವು.
[ಚಿತ್ರಗಳು]
ರಾಶಿಚಕ್ರ (ಮೇಲೆ) ಮತ್ತು ರಕ್ತವನ್ನು ಹೊರಡಿಸುವುದು
[ಕೃಪೆ]
ಎರಡೂ ಚಿತ್ರ: Biblioteca Histórica “Marqués de Valdecilla”
[ಪುಟ 3ರಲ್ಲಿರುವ ಚಿತ್ರಗಳು]
ಇಂದು, ಮತ್ತೆ ತಲೆಯೆತ್ತಿರುವ ಕ್ಷಯರೋಗದ ಜಾತಿಗಳು ಪ್ರತಿ ವರ್ಷ ಸುಮಾರು 20 ಲಕ್ಷ ಜನರನ್ನು ಬಲಿತೆಗೆದುಕೊಳ್ಳುತ್ತಿವೆ
[ಕೃಪೆ]
ಎಕ್ಸ್ ರೇ: New Jersey Medical School–National Tuberculosis Center; ಪುರುಷ: Photo: WHO/Thierry Falise
[ಪುಟ 4ರಲ್ಲಿರುವ ಚಿತ್ರ]
ಸುಮಾರು 1500ನೆಯ ಇಸವಿಯದ್ದೆಂದು ಹೇಳಲಾಗುವ ಒಂದು ಜರ್ಮನ್ ಕೆತ್ತನೆಯು, ಪ್ಲೇಗ್‌ಮಾರಿಯ ವಿರುದ್ಧ ಸಂರಕ್ಷಿಸಿಕೊಳ್ಳಲಿಕ್ಕಾಗಿ ವೈದ್ಯನೊಬ್ಬನು ಒಂದು ಮಾಸ್ಕನ್ನು ಧರಿಸಿರುವುದನ್ನು ಚಿತ್ರಿಸುತ್ತದೆ. ಅದರ ಕೊಕ್ಕಿನಲ್ಲಿ ಸುಗಂಧದ್ರವ್ಯವಿತ್ತು
[ಕೃಪೆ]
Godo-Foto
[ಪುಟ 4ರಲ್ಲಿರುವ ಚಿತ್ರ]
ಗೆಡ್ಡೆ ಪ್ಲೇಗನ್ನು ಉಂಟುಮಾಡಿದ ಬ್ಯಾಕ್ಟೀರಿಯ
[ಕೃಪೆ]
© Gary Gaugler/Visuals Unlimited
-
-
ರೋಗದ ವಿರುದ್ಧವಾದ ಹೋರಾಟದಲ್ಲಿ ಜಯಾಪಜಯಗಳುಎಚ್ಚರ!—2004 | ಜುಲೈ
-
-
ರೋಗದ ವಿರುದ್ಧವಾದ ಹೋರಾಟದಲ್ಲಿ ಜಯಾಪಜಯಗಳು
ಇಸವಿ 1942ರ ಆಗಸ್ಟ್ 5ರಂದು ಡಾ. ಅಲೆಕ್ಸಾಂಡರ್ ಫ್ಲೆಮಿಂಗ್‌ರವರಿಗೆ, ತಮ್ಮ ರೋಗಿಗಳಲ್ಲಿ ಒಬ್ಬನಾಗಿದ್ದ ಸ್ನೇಹಿತನೊಬ್ಬನು ಸಾವಿನ ಅಂಚಿನಲ್ಲಿದ್ದಾನೆ ಎಂಬುದು ಮನವರಿಕೆಯಾಯಿತು. ಈ 52 ವರ್ಷ ಪ್ರಾಯದ ಪುರುಷನು ಮಿದುಳುಬಳ್ಳಿಯ ಉರಿಯೂತ (ಮೆನಿಂಜೈಟಿಸ್)ದಿಂದ ಅಸ್ವಸ್ಥನಾಗಿದ್ದನು, ಮತ್ತು ಫ್ಲೆಮಿಂಗ್‌ರವರು ಸಕಲ ಪ್ರಯತ್ನಗಳನ್ನು ಮಾಡಿದರೂ ಆ ಸ್ನೇಹಿತನು ಗಾಢ ವಿಸ್ಮೃತಿಯ (ಕೋಮ) ಸ್ಥಿತಿಯನ್ನು ತಲಪಿದ್ದನು.
ಹದಿನೈದು ವರ್ಷಗಳಿಗೆ ಮೊದಲು, ಫ್ಲೆಮಿಂಗ್‌ರವರು ನೀಲಹಸುರು ಬಣ್ಣದ ಬೂಷ್ಟಿನಿಂದ ಉತ್ಪಾದಿಸಲ್ಪಟ್ಟ ಒಂದು ಅಸಾಧಾರಣ ಪದಾರ್ಥವನ್ನು ಆಕಸ್ಮಿಕವಾಗಿ ಕಂಡುಹಿಡಿದರು. ಅದಕ್ಕೆ ಅವರು ಪೆನ್ಸಿಲಿನ್ ಎಂದು ಹೆಸರಿಟ್ಟರು. ಅದಕ್ಕೆ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಶಕ್ತಿಯಿತ್ತು ಎಂಬುದನ್ನು ಅವರು ಗಮನಿಸಿದರು; ಆದರೆ ಅವರು ಶುದ್ಧ ಪೆನ್ಸಿಲಿನನ್ನು ಮಾತ್ರವೇ ಪ್ರತ್ಯೇಕಿಸಲು ಅಸಮರ್ಥರಾದ ಕಾರಣ, ಅವರದನ್ನು ಕೇವಲ ಒಂದು ಆ್ಯಂಟಿಸೆಪ್ಟಿಕ್ ಆಗಿ ಮಾತ್ರವೇ ಬಳಸಿ, ಪರೀಕ್ಷಿಸಿದರು. ಆದರೂ, 1938ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿದ್ದ ಹೋವರ್ಡ್ ಫ್ಲೋರೀ ಮತ್ತು ಅವನ ಸಂಶೋಧನಾ ತಂಡವು, ಮಾನವರ ಮೇಲೆ ಪ್ರಯೋಗಿಸಿ ನೋಡಲಿಕ್ಕಾಗಿ ಸಾಕಷ್ಟು ಪ್ರಮಾಣದ ಪೆನ್ಸಿಲಿನನ್ನು ಉತ್ಪಾದಿಸಲು ಪ್ರಯತ್ನಿಸುವ ಸವಾಲನ್ನು ಸ್ವೀಕರಿಸಿತು. ಫ್ಲೆಮಿಂಗ್‌ರವರು ಫ್ಲೋರೀಗೆ ಫೋನ್‌ಮಾಡಿದಾಗ, ಅವನ ಬಳಿ ಲಭ್ಯವಿದ್ದ ಎಲ್ಲಾ ಪೆನ್ಸಿಲಿನನ್ನು ಕಳುಹಿಸಿಕೊಡಲು ಅವನು ಸಿದ್ಧನಾದನು. ಇದು ಫ್ಲೆಮಿಂಗ್‌ರವರು ತಮ್ಮ ಸ್ನೇಹಿತನನ್ನು ಉಳಿಸಿಕೊಳ್ಳುವ ಕೊನೆಯ ಅವಕಾಶವಾಗಿತ್ತು.
ಪೆನ್ಸಿಲಿನನ್ನು ಚುಚ್ಚುಮದ್ದಿನ ಮೂಲಕ ಸ್ನಾಯುವಿನೊಳಗೆ ಸೇರಿಸಿದಾಗ ಅದು ಸಾಕಾಗದಂತೆ ಕಂಡುಬಂದದ್ದರಿಂದ, ಫ್ಲೆಮಿಂಗ್‌ರವರು ಅದನ್ನು ತಮ್ಮ ಸ್ನೇಹಿತರ ಮಿದುಳುಬಳ್ಳಿಗೇ ನೇರವಾಗಿ ಚುಚ್ಚಿದರು. ಆ ಪೆನ್ಸಿಲಿನ್ ಸೂಕ್ಷ್ಮಜೀವಿಗಳನ್ನು ನಾಶಮಾಡಿಬಿಟ್ಟಿತು; ಮತ್ತು ಒಂದು ವಾರಕ್ಕಿಂತ ಸ್ವಲ್ಪ ಹೆಚ್ಚು ಸಮಯದೊಳಗೆ ಫ್ಲೆಮಿಂಗ್‌ರ ರೋಗಿಯು ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಹಿಂದಿರುಗಿದನು. ಆ್ಯಂಟಿಬೈಆಟಿಕ್‌ಗಳ ಯುಗವು ಆರಂಭವಾಗಿತ್ತು ಮತ್ತು ರೋಗದ ವಿರುದ್ಧವಾದ ಮಾನವಕುಲದ ಹೋರಾಟದಲ್ಲಿ ಒಂದು ಹೊಸ ಮೈಲುಗಲ್ಲನ್ನು ತಲಪಲಾಗಿತ್ತು.
ಆ್ಯಂಟಿಬೈಆಟಿಕ್‌ಗಳ ಯುಗ
ಆ್ಯಂಟಿಬೈಆಟಿಕ್‌ಗಳು ಮೊದಲ ಬಾರಿಗೆ ಉಪಯೋಗಕ್ಕೆ ಬರತೊಡಗಿದಾಗ, ಅವು ಚಮತ್ಕಾರದ ಔಷಧದೋಪಾದಿ ಕಂಡುಬಂದವು. ಈ ಮುಂಚೆ ಗುಣಪಡಿಸಲು ಅಸಾಧ್ಯವಾಗಿ ತೋರಿದ, ಬ್ಯಾಕ್ಟೀರಿಯ, ಶಿಲೀಂಧ್ರ, ಅಥವಾ ಇತರ ಸೂಕ್ಷ್ಮಜೀವಾಣುಗಳಿಂದ ಉಂಟುಮಾಡಲ್ಪಟ್ಟ ಸೋಂಕು ರೋಗಗಳನ್ನು ಈಗ ಯಶಸ್ವಿಕರವಾಗಿ ಗುಣಪಡಿಸಸಾಧ್ಯವಾಯಿತು. ಹೊಸ ಔಷಧಗಳ ಪರಿಣಾಮವಾಗಿ, ಮೆನಿಂಜೈಟಿಸ್, ನ್ಯುಮೋನಿಯ, ಮತ್ತು ಕೆಂಜ್ವರಗಳಿಂದ ಉಂಟಾಗುವ ಮರಣಗಳು ಬಹಳಷ್ಟು ಕಡಿಮೆಯಾದವು. ಒಬ್ಬ ವ್ಯಕ್ತಿಯು ಆಸ್ಪತ್ರೆಯಲ್ಲಿರುವಾಗ ಅಂಟಿಸಿಕೊಳ್ಳುತ್ತಿದ್ದು, ಈ ಮುಂಚೆ ತುಂಬ ಮಾರಕವಾಗಿರುತ್ತಿದ್ದ ಸೋಂಕು ರೋಗಗಳು ಈಗ ಕೆಲವೇ ದಿನಗಳಲ್ಲಿ ಗುಣವಾಗುತ್ತಿದ್ದವು.
ಫ್ಲೆಮಿಂಗ್‌ರ ಕಾಲದಿಂದಲೂ ಸಂಶೋಧಕರು ಇನ್ನೂ ಅನೇಕಾನೇಕ ಆ್ಯಂಟಿಬೈಆಟಿಕ್‌ಗಳನ್ನು ಉತ್ಪಾದಿಸಿದ್ದಾರೆ, ಮತ್ತು ಹೊಸ ಹೊಸ ರೀತಿಯ ಆ್ಯಂಟಿಬೈಆಟಿಕ್‌ಗಳಿಗಾಗಿ ಇನ್ನೂ ಅನ್ವೇಷಣೆಯು ಮುಂದುವರಿಯುತ್ತಾ ಇದೆ. ಕಳೆದ 60 ವರ್ಷಗಳಲ್ಲಿ, ರೋಗದ ವಿರುದ್ಧವಾದ ಹೋರಾಟದಲ್ಲಿ ಆ್ಯಂಟಿಬೈಆಟಿಕ್‌ಗಳು ಅತ್ಯಗತ್ಯವಾದ ಆಯುಧವಾಗಿ ಪರಿಣಮಿಸಿವೆ. ಜಾರ್ಜ್ ವಾಷಿಂಗ್ಟನ್ ಇಂದು ಬದುಕಿರುತ್ತಿದ್ದಲ್ಲಿ, ಖಂಡಿತವಾಗಿಯೂ ವೈದ್ಯರು ಅವನ ಗಂಟಲು ನೋವಿಗಾಗಿ ಆ್ಯಂಟಿಬೈಆಟಿಕ್ಸ್ ಚಿಕಿತ್ಸೆ ನೀಡುತ್ತಿದ್ದರು ಮತ್ತು ಅವನು ಬಹುಶಃ ಒಂದು ವಾರದಲ್ಲೇ ಚೇತರಿಸಿಕೊಳ್ಳುತ್ತಿದ್ದನು. ಒಂದಲ್ಲ ಒಂದು ಸೋಂಕು ರೋಗವನ್ನು ತಡೆಗಟ್ಟುವುದರಲ್ಲಿ ಆ್ಯಂಟಿಬೈಆಟಿಕ್‌ಗಳು ಕಾರ್ಯತಃ ನಮ್ಮೆಲ್ಲರಿಗೂ ಸಹಾಯಮಾಡಿವೆ. ಆದರೂ, ಆ್ಯಂಟಿಬೈಆಟಿಕ್‌ಗಳು ಕೆಲವು ನ್ಯೂನತೆಗಳನ್ನೂ ಹೊಂದಿವೆ ಎಂಬುದು ಸುವ್ಯಕ್ತವಾಗಿದೆ.
ಏಡ್ಸ್ ಮತ್ತು ಇನ್‌ಫ್ಲೂಯೆನ್ಸದಂಥ, ವೈರಸ್‌ಗಳಿಂದ ಉಂಟುಮಾಡಲ್ಪಡುವ ರೋಗಗಳ ಮೇಲೆ ಆ್ಯಂಟಿಬೈಆಟಿಕ್‌ಗಳ ಚಿಕಿತ್ಸೆಯು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅಷ್ಟುಮಾತ್ರವಲ್ಲ, ಕೆಲವು ಜನರಿಗೆ ಕೆಲವೊಂದು ಆ್ಯಂಟಿಬೈಆಟಿಕ್‌ಗಳು ಅಲರ್ಜಿಯನ್ನು ಉಂಟುಮಾಡಿವೆ. ಮತ್ತು ಅನೇಕ ಹಾನಿಕರ ಜೀವಾಣುಗಳನ್ನು ನಾಶಪಡಿಸುವಂಥ ಆ್ಯಂಟಿಬೈಆಟಿಕ್‌ಗಳು, ನಮ್ಮ ದೇಹದಲ್ಲಿರುವ ಸಹಾಯಕರ ಸೂಕ್ಷ್ಮಜೀವಾಣುಗಳನ್ನು ಸಹ ಕೊಂದುಬಿಡಬಹುದು. ಆದರೆ ಆ್ಯಂಟಿಬೈಆಟಿಕ್‌ಗಳಿಂದ ಬರುವ ಅತಿ ದೊಡ್ಡ ಸಮಸ್ಯೆಯು ಅವುಗಳ ಅತಿಯಾದ ಬಳಕೆ ಅಥವಾ ಕಡಿಮೆ ಬಳಕೆಯೇ ಆಗಿದೆ.
ರೋಗಿಗಳಿಗೆ ಸ್ವಲ್ಪ ಗುಣವಾದಂತೆ ಅನಿಸುವಾಗಲೊ ಅಥವಾ ಚಿಕಿತ್ಸೆಯು ತೀರ ದೀರ್ಘಕಾಲ ಮುಂದುವರಿಯುತ್ತಿರುವಂತೆ ಅವರಿಗೆ ತೋರುವುದರಿಂದಲೊ, ಅವರು ವೈದ್ಯರಿಂದ ಸೂಚಿಸಲ್ಪಟ್ಟ ಆ್ಯಂಟಿಬೈಆಟಿಕ್ ಚಿಕಿತ್ಸೆಯನ್ನು ಪೂರ್ಣವಾಗಿ ತೆಗೆದುಕೊಳ್ಳದಿರುವಾಗ ಅವುಗಳ ಕಡಿಮೆ ಬಳಕೆಯುಂಟಾಗುತ್ತದೆ. ಇದರ ಫಲಿತಾಂಶವಾಗಿ, ಆ್ಯಂಟಿಬೈಆಟಿಕ್‌ಗಳಿಂದ ಆಕ್ರಮಣ ಮಾಡುತ್ತಿರುವ ಎಲ್ಲಾ ಬ್ಯಾಕ್ಟೀರಿಯಗಳು ನಾಶವಾಗದಿರಬಹುದು; ಇದು, ಇನ್ನೂ ಪ್ರತಿರೋಧಕ ಶಕ್ತಿಯುಳ್ಳ ಬ್ಯಾಕ್ಟೀರಿಯಗಳು ಬದುಕಿ ಉಳಿದು, ಇನ್ನಷ್ಟು ಅಧಿಕಗೊಳ್ಳುವಂತೆ ಮಾಡಬಹುದು. ಕ್ಷಯರೋಗದ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಇದು ಅನೇಕಬಾರಿ ಸಂಭವಿಸಿದೆ.
ವೈದ್ಯರು ಮತ್ತು ರೈತರು ಈ ಹೊಸ ಔಷಧಗಳ ಅತಿಯಾದ ಬಳಕೆಗೆ ದೋಷಿಗಳಾಗಿರುತ್ತಾರೆ. “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅನೇಕವೇಳೆ ಆ್ಯಂಟಿಬೈಆಟಿಕ್‌ಗಳು ವೈದ್ಯರಿಂದ ಅನಗತ್ಯವಾಗಿ ಶಿಫಾರಸ್ಸು ಮಾಡಲ್ಪಟ್ಟಿವೆ, ಮತ್ತು ಅನೇಕ ಇತರ ದೇಶಗಳಲ್ಲಿ ಅವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಸಿಕ್ಕಾಬಟ್ಟೆ ಉಪಯೋಗಿಸಲ್ಪಡುತ್ತವೆ” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುತ್ತದೆ. “ಇವುಗಳನ್ನು ದೊಡ್ಡ ಪ್ರಮಾಣಗಳಲ್ಲಿ ಜಾನುವಾರುಗಳಿಗೆ ತಿನ್ನಿಸಲಾಗುತ್ತಿದೆ, ರೋಗವನ್ನು ಗುಣಪಡಿಸಲಿಕ್ಕಾಗಿ ಅಲ್ಲ, ಬದಲಾಗಿ ಜಾನುವಾರಗಳ ತೀವ್ರಗತಿಯ ಬೆಳವಣಿಗೆಗಾಗಿಯೇ; ಸೂಕ್ಷ್ಮಜೀವಿಗಳ ಅತಿಯಾದ ಪ್ರತಿರೋಧಕ್ಕೆ ಇದು ಮುಖ್ಯ ಕಾರಣವಾಗಿದೆ.” ಇದರ ಫಲಿತಾಂಶವಾಗಿ, “ಹೊಸ ಆ್ಯಂಟಿಬೈಆಟಿಕ್‌ಗಳ ಸರಬರಾಯಿಯು ಅತಿ ಬೇಗನೆ ಕೊನೆಗೊಳ್ಳಬಹುದು” ಎಂದು ಆ ಪುಸ್ತಕವು ಎಚ್ಚರಿಕೆ ನೀಡುತ್ತದೆ.
ಆದರೆ ಆ್ಯಂಟಿಬೈಆಟಿಕ್‌ಗಳ ಪ್ರತಿರೋಧದ ಕುರಿತಾದ ಈ ಚಿಂತೆಗಳಲ್ಲದೆ, 20ನೆಯ ಶತಮಾನದ ಎರಡನೆಯ ಅರ್ಧಭಾಗವು ವೈದ್ಯಕೀಯ ವಿಜಯಗಳ ಕಾಲಾವಧಿಯಾಗಿತ್ತು. ವೈದ್ಯಕೀಯ ಸಂಶೋಧಕರು ಬಹುಮಟ್ಟಿಗೆ ಯಾವುದೇ ವ್ಯಾಧಿಯನ್ನು ಹೊಡೆದೋಡಿಸಲಿಕ್ಕಾಗಿರುವ ಔಷಧಗಳನ್ನು ಕಂಡುಹಿಡಿಯಲು ಶಕ್ತರಾಗಿರುವಂತೆ ತೋರಿತು. ಮತ್ತು ಲಸಿಕೆಗಳು ರೋಗವನ್ನು ತಡೆಗಟ್ಟುವ ಪ್ರತೀಕ್ಷೆಯನ್ನು ಸಹ ಒದಗಿಸಿದವು.
ವೈದ್ಯಕೀಯ ವಿಜ್ಞಾನವು ಸಾಧಿಸಿರುವ ವಿಜಯಗಳು
“ಸೋಂಕು ಪ್ರತಿರಕ್ಷೆಯನ್ನು ಒದಗಿಸುವುದು, ಇತಿಹಾಸದಲ್ಲೇ ಸಾಧಿಸಲ್ಪಟ್ಟಿರುವ ಸಾರ್ವಜನಿಕ ಆರೋಗ್ಯದ ಅತಿ ದೊಡ್ಡ ಯಶೋಗಾಥೆಯಾಗಿದೆ” ಎಂದು ದ ವರ್ಲ್ಡ್ ಹೆಲ್ತ್ ರಿಪೋರ್ಟ್ 1999 ಎಂಬ ಪತ್ರಿಕೆಯು ತಿಳಿಸಿತು. ಲೋಕವ್ಯಾಪಕವಾಗಿ ಲಸಿಕೆಹಾಕುವ ಬೃಹತ್ ಕಾರ್ಯಾಚರಣೆಗಳ ಫಲವಾಗಿ ಈಗಾಗಲೇ ಕೋಟಿಗಟ್ಟಲೆ ಜೀವಗಳು ಸಂರಕ್ಷಿಸಲ್ಪಟ್ಟಿವೆ. ಭೂವ್ಯಾಪಕವಾದ ಸೋಂಕುರಕ್ಷಾ ಕಾರ್ಯಕ್ರಮವು, 20ನೆಯ ಶತಮಾನದ ಎಲ್ಲಾ ಯುದ್ಧಗಳಿಗಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿರುವ ಮಾರಕ ಸಿಡುಬು ರೋಗವನ್ನು ನಿರ್ಮೂಲನಮಾಡಿದೆ, ಮತ್ತು ತದ್ರೀತಿಯ ಕಾರ್ಯಾಚರಣೆಯು ಪೋಲಿಯೊ ರೋಗವನ್ನು ಬಹುಮಟ್ಟಿಗೆ ಇಲ್ಲವಾಗಿಸಿದೆ. (“ಸಿಡುಬು ಮತ್ತು ಪೋಲಿಯೊ ರೋಗಗಳ ಮೇಲಿನ ವಿಜಯಗಳು” ಎಂಬ ಚೌಕವನ್ನು ನೋಡಿ.) ಜೀವಕ್ಕೆ ಅಪಾಯವನ್ನೊಡ್ಡುವಂಥ ಸಾಮಾನ್ಯ ರೋಗಗಳಿಂದ ಸಂರಕ್ಷಿಸಲಿಕ್ಕಾಗಿ ಅನೇಕ ಮಕ್ಕಳಿಗೆ ಈಗ ಲಸಿಕೆಯು ನೀಡಲ್ಪಡುತ್ತಿದೆ.
ಇನ್ನಿತರ ರೋಗಗಳನ್ನು ಕಡಿಮೆ ಗಮನಾರ್ಹವಾದ ವಿಧಗಳಿಂದ ನಿಯಂತ್ರಿಸಲಾಗಿದೆ. ಎಲ್ಲಿ ಸಾಕಷ್ಟು ನೈರ್ಮಲ್ಯವ್ಯವಸ್ಥೆ ಮತ್ತು ಸುರಕ್ಷಿತವಾದ ನೀರಿನ ಸರಬರಾಯಿ ಇದೆಯೋ ಅಲ್ಲಿ, ನೀರಿನ ಮೂಲಕ ಹರಡುವ ಕಾಲರದಂತಹ ಸೋಂಕು ರೋಗಗಳು ಸಮಸ್ಯೆಗಳನ್ನು ಉಂಟುಮಾಡುವುದು ತೀರ ಅಪರೂಪ. ಅನೇಕ ದೇಶಗಳಲ್ಲಿ ಚಿಕಿತ್ಸೆಗಾಗಿ ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ಸಂಪರ್ಕಿಸುವ ಅವಕಾಶಗಳು ಹೆಚ್ಚಿರುವುದರಿಂದ, ಅಧಿಕಾಂಶ ರೋಗಗಳು ಸಾವನ್ನು ಉಂಟುಮಾಡುವುದಕ್ಕೆ ಮೊದಲೇ ಅವುಗಳನ್ನು ಪತ್ತೆಹಚ್ಚಿ, ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಸಾಧ್ಯವಾಗುತ್ತಿದೆ. ಹೆಚ್ಚು ಉತ್ತಮವಾದ ಆಹಾರಪಥ್ಯ ಮತ್ತು ವಾಸಮಾಡುವ ಪರಿಸ್ಥಿತಿಗಳು, ಹಾಗೂ ಆಹಾರವನ್ನು ಸರಿಯಾಗಿ ನಿರ್ವಹಿಸುವ ಮತ್ತು ಶೇಖರಿಸುವ ವಿಷಯದಲ್ಲಿ ನಿಯಮಗಳನ್ನು ಜಾರಿಗೆ ತರುವುದು ಸಹ ಸಾರ್ವಜನಿಕ ಆರೋಗ್ಯವನ್ನು ಉತ್ತಮಗೊಳಿಸಲು ನೆರವನ್ನಿತ್ತಿದೆ.
ಒಂದು ಸಲ ವಿಜ್ಞಾನಿಗಳು ಸೋಂಕು ರೋಗಗಳಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಿದರೆಂದರೆ, ಹಬ್ಬುತ್ತಿರುವ ಸಾಂಕ್ರಾಮಿಕ ರೋಗವನ್ನು ನಿಲ್ಲಿಸಲು ಆರೋಗ್ಯಾಧಿಕಾರಿಗಳು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ಇಸವಿ 1907ರಲ್ಲಿ ಸಾನ್ ಫ್ರಾನ್ಸಿಸ್ಕೋದಲ್ಲಿ ತಲೆದೋರಿದ ಗೆಡ್ಡೆ ಪ್ಲೇಗು ಕೆಲವೇ ಮಂದಿಯನ್ನು ಬಲಿತೆಗೆದುಕೊಂಡಿತು, ಏಕೆಂದರೆ ಯಾವುದರ ಚಿಗಟಗಳು ರೋಗವನ್ನು ಹಬ್ಬಿಸುತ್ತಿದ್ದವೋ ಆ ಇಲಿಗಳನ್ನು ನಿರ್ಮೂಲನಮಾಡಲಿಕ್ಕಾಗಿ ಆ ನಗರವು ಕೂಡಲೆ ವ್ಯಾಪಕವಾದ ಪ್ರಯತ್ನಗಳನ್ನು ಮಾಡಲಾರಂಭಿಸಿತು. ಇನ್ನೊಂದು ಕಡೆಯಲ್ಲಿ, ಇಸವಿ 1896ರಲ್ಲಿ ಆರಂಭಿಸುತ್ತಾ, 12 ವರ್ಷಗಳೊಳಗೆ ಇದೇ ರೋಗವು ಭಾರತದಲ್ಲಿ ಒಂದು ಕೋಟಿ ಮರಣಗಳಿಗೆ ಕಾರಣವಾಯಿತು, ಏಕೆಂದರೆ ಆ ಸಮಯದಲ್ಲಿನ್ನೂ ಯಾವುದು ಇದನ್ನು ಹಬ್ಬಿಸುತ್ತಿದೆ ಎಂಬುದು ಕಂಡುಹಿಡಿಯಲ್ಪಟ್ಟಿರಲಿಲ್ಲ.
ರೋಗದ ವಿರುದ್ಧವಾದ ಹೋರಾಟದಲ್ಲಿ ಅಪಜಯಗಳು
ಗಮನಾರ್ಹವಾದ ಹೋರಾಟಗಳು ಗೆಲ್ಲಲ್ಪಟ್ಟಿವೆ ಎಂಬುದಂತೂ ಸ್ಪಷ್ಟ. ಆದರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಜಯಗಳು ಲೋಕದ ಸಂಪದ್ಭರಿತ ದೇಶಗಳಿಗೆ ಮಾತ್ರ ಮೀಸಲಾಗಿವೆ. ಚಿಕಿತ್ಸೆಯಿಂದ ಗುಣಪಡಿಸಸಾಧ್ಯವಿರುವ ರೋಗಗಳು ಈಗಲೂ ಕೋಟಿಗಟ್ಟಲೆ ಜನರನ್ನು ಕೊಲ್ಲುತ್ತಿವೆ. ಹೀಗಾಗುತ್ತಿರುವುದು ಸಾಕಷ್ಟು ಹಣಕಾಸಿನ ಕೊರತೆಯಿಂದಲೇ. ಅಭಿವೃದ್ಧಿಶೀಲ ದೇಶಗಳಲ್ಲಿರುವ ಅನೇಕರಿಗೆ ಈಗಲೂ ಸಾಕಷ್ಟು ನೈರ್ಮಲ್ಯವ್ಯವಸ್ಥೆ, ಆರೋಗ್ಯಾರೈಕೆ, ಮತ್ತು ಸುರಕ್ಷಿತವಾದ ನೀರಿನ ಸರಬರಾಯಿ ಇಲ್ಲ. ಅಪಾರ ಸಂಖ್ಯೆಯಲ್ಲಿ ಜನರು ಗ್ರಾಮೀಣಪ್ರದೇಶಗಳಿಂದ ಅಭಿವೃದ್ಧಿಹೊಂದುತ್ತಿರುವ ದೇಶಗಳ ದೊಡ್ಡ ನಗರಗಳಿಗೆ ವಲಸೆಹೋಗುತ್ತಿರುವ ಕಾರಣದಿಂದ, ಈ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಿದೆ. ಈ ಅಂಶಗಳ ಫಲಿತಾಂಶವಾಗಿ, ಲೋಕಾರೋಗ್ಯ ಸಂಸ್ಥೆಯು ಯಾವುದನ್ನು “ರೋಗವೆಂಬ ಹೊರೆಯ ಅಸಮ ಪಾಲು” ಎಂದು ಕರೆಯುತ್ತದೋ ಅದು, ಲೋಕದಲ್ಲಿರುವ ಬಡವರಿಗೆ ಮಾತ್ರ ಬರುತ್ತದೆ.
ಸ್ವಾರ್ಥತೆಯ ಕಾರಣದಿಂದ ಮುಂದಾಲೋಚನೆಯ ಕೊರತೆಯು, ಈ ಆರೋಗ್ಯ ಅಸಮತೋಲನಕ್ಕೆ ಪ್ರಮುಖ ಕಾರಣವಾಗಿದೆ. “ಲೋಕದ ಅತ್ಯಂತ ಮಾರಕವಾದ ಸಾಂಕ್ರಾಮಿಕ ರೋಗಗಳಲ್ಲಿ ಕೆಲವು ತೆಗೆದುಹಾಕಲ್ಪಟ್ಟಿರುವಂತೆ ತೋರುತ್ತವೆ” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ. “ಇವುಗಳಲ್ಲಿ ಕೆಲವು ಬಡ ಉಷ್ಣವಲಯ ಹಾಗೂ ಉಪಉಷ್ಣವಲಯದ ಪ್ರಾಂತಗಳಲ್ಲಿ ಮಾತ್ರ ಇಲ್ಲವೆ ಮುಖ್ಯವಾಗಿ ಅಲ್ಲಿ ಕಂಡುಬರುತ್ತವೆ.” ಸಂಪದ್ಭರಿತ ವಿಕಸಿತ ದೇಶಗಳು ಮತ್ತು ಔಷಧವಸ್ತುಗಳ ಕಂಪೆನಿಗಳು ನೇರವಾಗಿ ಲಾಭವನ್ನು ಪಡೆದುಕೊಳ್ಳದಿರಬಹುದಾದ ಕಾರಣ, ಈ ರೋಗಗಳ ಚಿಕಿತ್ಸೆಗಾಗಿ ಹಣಕಾಸನ್ನು ಕೊಡಲು ನಿರಾಕರಿಸುತ್ತವೆ.
ರೋಗವನ್ನು ಹಬ್ಬಿಸುವುದರಲ್ಲಿ ಮಾನವರ ಬೇಜವಾಬ್ದಾರಿ ನಡವಳಿಕೆಯೂ ಇನ್ನೊಂದು ಅಂಶವಾಗಿದೆ. ಈ ಕಟು ವಾಸ್ತವಿಕತೆಯ ಮುಖ್ಯ ಉದಾಹರಣೆಯನ್ನು, ದೇಹದ ದ್ರವಗಳ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಬ್ಬಿಸಲ್ಪಡುವಂಥ ಏಡ್ಸ್ ವೈರಸ್‌ನ ವಿಷಯದಲ್ಲಿ ಅತ್ಯುತ್ತಮವಾಗಿ ಚಿತ್ರಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಈ ಸರ್ವವ್ಯಾಪಿ ರೋಗವು ಲೋಕದಾದ್ಯಂತ ತ್ವರಿತಗತಿಯಲ್ಲಿ ಹಬ್ಬಿದೆ. (“ಏಡ್ಸ್—ನಮ್ಮ ಕಾಲದ ವ್ಯಾಧಿ” ಎಂಬ ಚೌಕವನ್ನು ನೋಡಿ.) “ಏಡ್ಸ್‌ನ ಹಬ್ಬುವಿಕೆಗೆ ಸ್ವತಃ ಮಾನವರೇ ಕಾರಣರಾಗಿದ್ದಾರೆ. ಮತ್ತು ಈ ಹೇಳಿಕೆಯು ಒಂದು ನೀತಿಬೋಧಕವಲ್ಲ, ವಾಸ್ತವದಲ್ಲಿ ಇದೊಂದು ನಿಜತ್ವವಾಗಿದೆ” ಎಂದು ಸೋಂಕುರೋಗ ಶಾಸ್ತ್ರಜ್ಞನಾದ ಜೋ ಮೆಕಾಮೈಕ್ ಹೇಳುತ್ತಾನೆ.
ಯಾವ ರೀತಿಯಲ್ಲಿ ಮಾನವರು ತಮಗರಿವಿಲ್ಲದೇ ಏಡ್ಸ್ ವೈರಸನ್ನು ಹಬ್ಬಿಸಿದರು? ಬರಲಿರುವ ಮಾರಕ ವ್ಯಾಧಿ (ಇಂಗ್ಲಿಷ್) ಎಂಬ ಪುಸ್ತಕವು ಈ ಮುಂದಿನ ಅಂಶಗಳನ್ನು ಪಟ್ಟಿಮಾಡುತ್ತದೆ: ಸಾಮಾಜಿಕ ಬದಲಾವಣೆಗಳು—ವಿಶೇಷವಾಗಿ ಅನೇಕ ಲೈಂಗಿಕ ಸಂಗಾತಿಗಳನ್ನು ಹೊಂದಿರುವುದು—ರತಿರವಾನಿತ ರೋಗಗಳ ಅಲೆಯನ್ನು ಉಂಟುಮಾಡಿ, ಈ ವೈರಸ್ ಭದ್ರವಾಗಿ ತಳವೂರುವಂತೆ ಮತ್ತು ಅದು ಒಬ್ಬ ಸೋಂಕಿತ ವ್ಯಕ್ತಿಯಿಂದ ಇನ್ನೂ ಅನೇಕ ಜನರಿಗೆ ಹಬ್ಬುವುದನ್ನು ಸುಲಭವಾಗಿಸಿದವು. ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ವೈದ್ಯಕೀಯ ಚುಚ್ಚುಮದ್ದುಗಳಿಗಾಗಿ ಅಥವಾ ಕಾನೂನುಬಾಹಿರ ಅಮಲೌಷಧದ ಉಪಯೋಗಕ್ಕಾಗಿ ಮಲಿನಗೊಂಡಿರುವ, ಅನೇಕಬಾರಿ ಉಪಯೋಗಿಸಲ್ಪಟ್ಟಿರುವ ಸಿರಿಂಜ್‌ಗಳ ವ್ಯಾಪಕವಾದ ಬಳಕೆಯು ಸಹ ತದ್ರೀತಿಯ ಪರಿಣಾಮವನ್ನು ಉಂಟುಮಾಡಿತು. ಶತಕೋಟಿ ಡಾಲರುಗಳ ಭೌಗೋಳಿಕ ರಕ್ತೋದ್ಯಮವು ಸಹ, ಒಬ್ಬ ದಾನಿಯಿಂದ ಅನೇಕ ಮಂದಿ ಗ್ರಾಹಕರಿಗೆ ಏಡ್ಸ್ ವೈರಸನ್ನು ದಾಟಿಸಿತು.
ಈ ಮುಂಚೆ ತಿಳಿಸಲ್ಪಟ್ಟಿರುವಂತೆ, ಆ್ಯಂಟಿಬೈಆಟಿಕ್‌ಗಳ ಅತಿಯಾದ ಬಳಕೆ ಅಥವಾ ಕಡಿಮೆ ಬಳಕೆಯು, ಪ್ರತಿರೋಧಕ ಸೂಕ್ಷ್ಮಜೀವಿಗಳ ಉದಯಕ್ಕೆ ಕಾರಣವಾಗಿದೆ. ಈ ಸಮಸ್ಯೆಯು ಗಂಭೀರವಾಗಿದೆ ಮತ್ತು ಇನ್ನಷ್ಟು ಕ್ಲಿಷ್ಟವಾಗುತ್ತಾ ಹೋಗುತ್ತಿದೆ. ಗಾಯದಲ್ಲಿ ಸೋಂಕನ್ನು ಉಂಟುಮಾಡುವಂಥ ಸ್ಟೆಫಿಲೋಕೊಕಸ್ ಬ್ಯಾಕ್ಟೀರಿಯವನ್ನು, ಪೆನ್ಸಿಲಿನ್‌ನ ಉತ್ಪನ್ನಗಳಿಂದ ಈ ಮುಂಚೆ ಸುಲಭವಾಗಿ ನಿರ್ಮೂಲಗೊಳಿಸಲಾಗುತ್ತಿತ್ತು. ಆದರೆ ಈಗ, ಬಹಳ ಸಮಯದಿಂದಲೂ ಉಪಯೋಗಿಸಲ್ಪಡುತ್ತಿರುವ ಈ ಆ್ಯಂಟಿಬೈಆಟಿಕ್‌ಗಳು ಅನೇಕವೇಳೆ ನಿಷ್ಪ್ರಯೋಜಕವಾಗಿ ಕಂಡುಬರುತ್ತಿವೆ. ಆದುದರಿಂದ ವೈದ್ಯರು ಇನ್ನೂ ಹೊಸತಾದ, ಹೆಚ್ಚು ದುಬಾರಿಯಾದ ಆ್ಯಂಟಿಬೈಆಟಿಕ್‌ಗಳನ್ನು ಉಪಯೋಗಿಸಬೇಕಾಗುತ್ತದೆ, ಆದರೆ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿರುವ ಆಸ್ಪತ್ರೆಗಳು ಇದಕ್ಕೆ ಬೇಕಾದಷ್ಟು ಹಣವನ್ನು ತೆರಲು ಸಮರ್ಥವಾಗಿರುವುದು ತೀರ ವಿರಳ. ಅತಿ ನವನವೀನ ಆ್ಯಂಟಿಬೈಆಟಿಕ್‌ಗಳು ಸಹ ಕೆಲವು ಸೂಕ್ಷ್ಮಜೀವಿಗಳನ್ನು ಹೊಡೆದೋಡಿಸಲು ಅಶಕ್ತವಾಗಿ ಪರಿಣಮಿಸಬಹುದು ಮತ್ತು ಇದು ಆಸ್ಪತ್ರೆಯಲ್ಲಿ ತಗಲುವ ಸೋಂಕುಗಳನ್ನು ಇನ್ನೂ ಹೆಚ್ಚು ಸಾಮಾನ್ಯವಾದದ್ದಾಗಿ ಹಾಗೂ ಮಾರಕವಾದದ್ದಾಗಿ ಮಾಡಿಬಿಡಬಹುದು. ‘ಅಲರ್ಜಿ ಮತ್ತು ಸೋಂಕು ರೋಗಗಳ ಯು.ಎಸ್. ರಾಷ್ಟ್ರೀಯ ಸಂಸ್ಥೆ’ಯ ಮಾಜಿ ನಿರ್ದೇಶಕರಾಗಿರುವ ಡಾ. ರಿಚರ್ಡ್ ಕ್ರೌಸರವರು ಪ್ರಚಲಿತ ಸನ್ನಿವೇಶವನ್ನು, “ಸೂಕ್ಷ್ಮಜೀವಿಗಳ ಪ್ರತಿರೋಧವೆಂಬ ಸಾಂಕ್ರಾಮಿಕ ರೋಗ” ಎಂದು ನಿರ್ದಾಕ್ಷಿಣ್ಯವಾಗಿ ವರ್ಣಿಸುತ್ತಾರೆ.
“ಇಂದು ನಾವು ಹೆಚ್ಚು ಸಾಫಲ್ಯವನ್ನು ಪಡೆದಿದ್ದೇವೋ?”
ಈಗ, ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿಯೂ ರೋಗಗಳ ಬೆದರಿಕೆಯು ಇನ್ನೂ ಕಣ್ಮರೆಯಾಗಿಲ್ಲ ಎಂಬುದು ಸುಸ್ಪಷ್ಟ. ಏಕಪ್ರಕಾರವಾಗಿ ಹಬ್ಬುತ್ತಿರುವ ಏಡ್ಸ್ ರೋಗ, ಔಷಧಗಳಿಗೆ ಪ್ರತಿರೋಧ ತೋರಿಸುವ ರೋಗಾಣುಗಳ ಉದಯ, ಮತ್ತು ಕ್ಷಯ ಹಾಗೂ ಮಲೇರಿಯ ಜ್ವರದಂಥ ಪುರಾತನ ಕೊಲೆಗಡುಕ ವ್ಯಾಧಿಗಳ ಪುನರಾಗಮನವು, ರೋಗದ ವಿರುದ್ಧವಾದ ಹೋರಾಟವು ಇನ್ನೂ ಮುಂದುವರಿಯುತ್ತಿದೆ ಎಂಬುದನ್ನೇ ರುಜುಪಡಿಸುತ್ತಿದೆ.
“ಒಂದು ಶತಮಾನಕ್ಕಿಂತ ಮುಂಚಿನ ಸಮಯಕ್ಕೆ ಹೋಲಿಸುವಾಗ ಇಂದು ನಾವು ಹೆಚ್ಚು ಸಾಫಲ್ಯವನ್ನು ಪಡೆದಿದ್ದೇವೋ?” ಎಂದು ನೊಬೆಲ್ ಪಾರಿತೋಷಕ ವಿಜೇತರಾದ ಜೋಶುವ ಲೆಡರ್‌ಬರ್ಗರು ಕೇಳಿದರು. ಅವರು ಹೇಳಿದ್ದು: “ಹೆಚ್ಚಿನ ವಿಧಗಳಲ್ಲಿ ನಾವು ಇನ್ನೂ ಹದಗೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಸೂಕ್ಷ್ಮಜೀವಿಗಳ ವಿಷಯದಲ್ಲಿ ನಾವು ಅಲಕ್ಷ್ಯವನ್ನು ತೋರಿಸಿದ್ದೇವೆ, ಮತ್ತು ಆ ಅಲಕ್ಷ್ಯಮನೋಭಾವದ ಪರಿಣಾಮಗಳನ್ನೇ ನಾವೀಗ ಕೊಯ್ಯುತ್ತಿದ್ದೇವೆ.” ವೈದ್ಯಕೀಯ ವಿಜ್ಞಾನ ಮತ್ತು ಲೋಕದ ಎಲ್ಲಾ ರಾಷ್ಟ್ರಗಳ ದೃಢಸಂಕಲ್ಪದ ಪ್ರಯತ್ನದಿಂದ ಸದ್ಯದ ಹಿನ್ನಡೆಗಳನ್ನು ಜಯಿಸಸಾಧ್ಯವಿದೆಯೋ? ಸಿಡುಬು ರೋಗವು ನಿರ್ಮೂಲಗೊಳಿಸಲ್ಪಟ್ಟಂತೆ, ಪ್ರಧಾನ ಸೋಂಕು ರೋಗಗಳು ಕಾಲಕ್ರಮೇಣ ನಿರ್ಮೂಲಗೊಳಿಸಲ್ಪಡುವವೋ? ನಮ್ಮ ಕೊನೆಯ ಲೇಖನವು ಈ ಪ್ರಶ್ನೆಗಳನ್ನು ಪರಿಗಣಿಸುವುದು. (g04 5/22)
[ಪುಟ 8ರಲ್ಲಿರುವ ಚೌಕ/ಚಿತ್ರ]
ಸಿಡುಬು ಮತ್ತು ಪೋಲಿಯೊ ರೋಗಗಳ ಮೇಲಿನ ವಿಜಯಗಳು
ಇಸವಿ 1977ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಲೋಕಾರೋಗ್ಯ ಸಂಸ್ಥೆಯು (ಡಬ್ಲ್ಯೂ.ಏಚ್.ಓ.), ಸಾಮಾನ್ಯ ರೀತಿಯಲ್ಲಿ ಹಬ್ಬುವ ಸಿಡುಬು ರೋಗವಿದ್ದ, ಕೊನೆಯದಾಗಿ ಕಂಡುಬಂದ ರೋಗಿಯನ್ನು ಪತ್ತೆಹಚ್ಚಿತು. ಸೊಮಾಲಿಯದಲ್ಲಿ ವಾಸಿಸುತ್ತಿದ್ದ ಆಲೀ ಮಾವೌ ಮಾಲೇನ್ ಎಂಬ ಆಸ್ಪತ್ರೆಯ ಅಡುಗೆಭಟ್ಟನಿಗೆ ಈ ರೋಗವು ತಗಲಿತಾದರೂ, ಇದರಿಂದ ಅವನು ಗಂಭೀರವಾಗಿ ಬಾಧಿತನಾಗಲಿಲ್ಲ, ಮತ್ತು ಕೆಲವೇ ವಾರಗಳಲ್ಲಿ ಅವನು ಸಂಪೂರ್ಣ ಗುಣಮುಖನಾದನು. ಅವನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರಿಗೂ ಲಸಿಕೆಯನ್ನು ನೀಡಲಾಯಿತು.
ತುಂಬ ನಿಧಾನವಾಗಿ ಸರಿಯುತ್ತಿರುವಂತೆ ಕಂಡುಬಂದ ಎರಡು ವರ್ಷಗಳಾದ್ಯಂತ ವೈದ್ಯರು ತುಂಬ ಚಿಂತಾಭರಿತರಾಗಿ ಕಾದರು. ದೃಢಪಡಿಸಲ್ಪಟ್ಟ ಇನ್ನೊಂದು “ಶೀಘ್ರವ್ಯಾಪಕ ಸಿಡುಬು ರೋಗದ ಕೇಸನ್ನು” ಯಾರಾದರೂ ವರದಿಸುವಲ್ಲಿ ಅವರಿಗೆ 1,000 ಅಮೆರಿಕನ್ ಡಾಲರುಗಳ ಇನಾಮನ್ನು ಘೋಷಿಸಲಾಗಿತ್ತು. ಯಾರೊಬ್ಬರೂ ಈ ಇನಾಮನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಲಿಲ್ಲ, ಮತ್ತು 1980ರ ಮೇ 8ರಂದು, “ಲೋಕವೂ ಅದರ ಎಲ್ಲಾ ಜನರೂ ಸಿಡುಬು ರೋಗದಿಂದ ಬಿಡುಗಡೆಯನ್ನು ಪಡೆದುಕೊಂಡಿದ್ದಾರೆ” ಎಂದು ಡಬ್ಲ್ಯೂ.ಏಚ್.ಓ. ಅಧಿಕೃತವಾಗಿ ಘೋಷಿಸಿತು. ಒಂದು ದಶಕಕ್ಕೆ ಹಿಂದೆಯಷ್ಟೇ ಸಿಡುಬು ರೋಗವು ಒಂದು ವರ್ಷಕ್ಕೆ ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ಮರಣಗಳನ್ನು ಉಂಟುಮಾಡುತ್ತಿತ್ತು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದು ಪ್ರಮುಖ ಸೋಂಕು ರೋಗವು ನಿರ್ಮೂಲಗೊಳಿಸಲ್ಪಟ್ಟಿತು.a
ಪೋಲಿಯೊ, ಅಥವಾ ಪೋಲಿಯೊಮೈಇಲೈಟಿಸ್ ರೋಗವು ಬಾಲ್ಯಾವಸ್ಥೆಯಲ್ಲಿ ಬರುವ ದುರ್ಬಲಗೊಳಿಸುವಂಥ ರೋಗವಾಗಿದ್ದು, ಇದನ್ನು ಸಹ ನಿರ್ಮೂಲನಗೊಳಿಸಸಾಧ್ಯವಿದೆ ಎಂಬ ಪ್ರತೀಕ್ಷೆಯು ಕಂಡುಬಂತು. ಇಸವಿ 1955ರಲ್ಲಿ, ಜೋನಾಸ್ ಸಾಲ್ಕ್ ಎಂಬಾತನು ಪೋಲಿಯೋಗಾಗಿ ಪರಿಣಾಮಕಾರಿಯಾದ ಲಸಿಕೆಯನ್ನು ಕಂಡುಹಿಡಿದನು, ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹಾಗೂ ಇತರ ದೇಶಗಳಲ್ಲಿ ಪೋಲಿಯೊ ವಿರುದ್ಧ ಸೋಂಕು ಪ್ರತಿರಕ್ಷೆಯ ಕಾರ್ಯಾಚರಣೆಯು ಆರಂಭಿಸಲ್ಪಟ್ಟಿತು. ಸಮಯಾನಂತರ ಬಾಯಿಯ ಮೂಲಕ ನೀಡಲ್ಪಡುವ ಲಸಿಕೆಯು ಕಂಡುಹಿಡಿಯಲ್ಪಟ್ಟಿತು. ಇಸವಿ 1988ರಲ್ಲಿ, ಪೋಲಿಯೊವನ್ನು ನಿರ್ಮೂಲಮಾಡಲಿಕ್ಕಾಗಿ ಡಬ್ಲ್ಯೂ.ಏಚ್.ಓ. ಒಂದು ಲೋಕವ್ಯಾಪಕ ಕಾರ್ಯಕ್ರಮವನ್ನು ಆರಂಭಿಸಿತು.
“ಇಸವಿ 1988ರಲ್ಲಿ ನಾವು ನಿರ್ಮೂಲನ ಪ್ರಯತ್ನಗಳನ್ನು ಆರಂಭಿಸಿದಾಗ, ಪ್ರತಿ ದಿನ ಪೋಲಿಯೊ ರೋಗವು 1000ಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಪಾರ್ಶ್ವವಾಯುವಿಗೆ ಒಳಪಡಿಸುತ್ತಿತ್ತು” ಎಂದು, ಆಗ ಡಬ್ಲ್ಯೂ.ಏಚ್.ಓ.ದ ಡೈರೆಕ್ಟರ್ ಜನರಲ್‌ರಾಗಿದ್ದ ಡಾ. ಗ್ರೋ ಹಾರ್ಲಮ್ ಬ್ರಂಟ್‌ಲಾನ್ ವರದಿಸುತ್ತಾರೆ. “ಇಸವಿ 2001ರಲ್ಲಿ, ಇಡೀ ವರ್ಷದಾದ್ಯಂತ 1000ಕ್ಕಿಂತಲೂ ಎಷ್ಟೋ ಕಡಿಮೆ ಪೋಲಿಯೊ ರೋಗಿಗಳಿದ್ದರು.” ಪೋಲಿಯೊ ಈಗ ಹತ್ತಕ್ಕಿಂತಲೂ ಕಡಿಮೆ ದೇಶಗಳಲ್ಲಿ ಮಾತ್ರ ಇದೆ; ಈ ದೇಶಗಳಲ್ಲಿ ಅಂತಿಮವಾಗಿ ಈ ರೋಗವನ್ನು ನಿರ್ಮೂಲನಗೊಳಿಸುವಂತೆ ಸಹಾಯಮಾಡಲು ಇನ್ನೂ ಹೆಚ್ಚಿನ ಹಣಕಾಸಿನ ಆವಶ್ಯಕತೆಯಿದೆ.
[ಪಾದಟಿಪ್ಪಣಿ]
a ಅಂತಾರಾಷ್ಟ್ರೀಯ ಲಸಿಕೆ ಕಾರ್ಯಾಚರಣೆಯಿಂದ ಜಯಿಸಸಾಧ್ಯವಿದ್ದ ರೋಗವು ಸಿಡುಬು ರೋಗವಾಗಿತ್ತು, ಏಕೆಂದರೆ ಇಲಿಗಳು ಅಥವಾ ಕೀಟಗಳಂಥ ತೊಂದರೆದಾಯಕ ರೋಗಾಣುಗಳಿಂದ ಹಬ್ಬಿಸಲ್ಪಡುತ್ತಿದ್ದ ರೋಗಗಳಿಗೆ ಅಸದೃಶವಾಗಿ, ಸಿಡುಬು ರೋಗದ ವೈರಸ್ ತನ್ನ ಬದುಕಿ ಉಳಿಯುವಿಕೆಗಾಗಿ ಮಾನವ ಆಶ್ರಯದ ಮೇಲೆ ಅವಲಂಬಿಸಿರುತ್ತದೆ.
[ಚಿತ್ರ]
ಇಥಿಯೋಪಿಯದ ಹುಡುಗನೊಬ್ಬನು ಪೋಲಿಯೊ ಲಸಿಕೆಯನ್ನು ಬಾಯಿಗೆ ಹಾಕಿಸಿಕೊಳ್ಳುತ್ತಿರುವುದು
[ಕೃಪೆ]
© WHO/P. Virot
[ಪುಟ 10ರಲ್ಲಿರುವ ಚೌಕ/ಚಿತ್ರ]
ಏಡ್ಸ್—ನಮ್ಮ ಕಾಲದ ವ್ಯಾಧಿ
ಏಡ್ಸ್ ರೋಗವು ಒಂದು ಹೊಸ ಭೌಗೋಳಿಕ ಬೆದರಿಕೆಯಾಗಿ ಪರಿಣಮಿಸಿದೆ. ಈ ರೋಗವು ಕಂಡುಹಿಡಿಯಲ್ಪಟ್ಟು ಸುಮಾರು 20 ವರ್ಷಗಳು ಕಳೆದ ಬಳಿಕ, ಈಗಾಗಲೇ ಆರು ಕೋಟಿಗಿಂತಲೂ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಏಡ್ಸ್ ಸರ್ವವ್ಯಾಪಿ ರೋಗವು “ಇನ್ನೂ ಆರಂಭದ ಹಂತದಲ್ಲಿದೆ” ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡುತ್ತಾರೆ. ಸೋಂಕಿನ ಪ್ರಮಾಣಗಳು “ಈ ಮುಂಚೆ ನಂಬಲಾಗಿದ್ದಕ್ಕಿಂತಲೂ ಅತ್ಯಧಿಕ ಮಟ್ಟದಲ್ಲಿ ಏರುತ್ತಿವೆ,” ಮತ್ತು ಲೋಕದ ಯಾವ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಸೋಂಕಿದೆಯೋ ಅಲ್ಲಿನ ಪರಿಣಾಮಗಳು ಹೃದಯವಿದ್ರಾವಕವಾಗಿವೆ.
“ಲೋಕವ್ಯಾಪಕವಾಗಿ ಏಚ್‌ಐವಿ/ಏಡ್ಸ್ ರೋಗದಿಂದ ಅಸ್ವಸ್ಥರಾಗಿರುವ ಅಧಿಕಾಂಶ ಮಂದಿ ತಮ್ಮ ಜೀವಿತದ ಅತ್ಯಂತ ಚಟುವಟಿಕೆಭರಿತ ಹಂತದಲ್ಲಿದ್ದಾರೆ” ಎಂದು ವಿಶ್ವ ಸಂಸ್ಥೆಯ ವರದಿಯೊಂದು ವಿವರಿಸುತ್ತದೆ. ಇದರ ಫಲಿತಾಂಶವಾಗಿ, 2005ನೇ ಇಸವಿಯಷ್ಟಕ್ಕೆ ದಕ್ಷಿಣ ಆಫ್ರಿಕದ ಹಲವಾರು ದೇಶಗಳು ತಮ್ಮ ಕೆಲಸಗಾರರಲ್ಲಿ 10 ಪ್ರತಿಶತ ಮತ್ತು 20 ಪ್ರತಿಶತದ ನಡುವಣ ಸಂಖ್ಯೆಯಷ್ಟು ಜನರನ್ನು ಕಳೆದುಕೊಳ್ಳುವವು ಎಂದು ಸಂಶೋಧಕರು ಅಂದಾಜುಮಾಡುತ್ತಾರೆ. ಆ ವರದಿಯು ಇನ್ನೂ ಹೇಳುವುದು: “ಉಪಸಹಾರ ಆಫ್ರಿಕದಲ್ಲಿನ ಸರಾಸರಿ ಜೀವನಾಯುಷ್ಯವು ಸದ್ಯಕ್ಕೆ 47 ವರ್ಷಗಳಾಗಿದೆ. ಏಡ್ಸ್ ಇಲ್ಲದಿರುತ್ತಿದ್ದರೆ ಅಲ್ಲಿನ ಜೀವನಾಯುಷ್ಯವು 62 ವರ್ಷಗಳಾಗಿರುತ್ತಿತ್ತು.”
ಒಂದು ಲಸಿಕೆಯನ್ನು ಕಂಡುಹಿಡಿಯಲಿಕ್ಕಾಗಿರುವ ಪ್ರಯತ್ನಗಳು ಇಷ್ಟರ ತನಕ ನೆಲಕಚ್ಚಿವೆ, ಮತ್ತು ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿನ 60 ಲಕ್ಷ ಏಡ್ಸ್ ರೋಗಿಗಳಲ್ಲಿ ಕೇವಲ 4 ಪ್ರತಿಶತ ಮಂದಿ ಮಾತ್ರ ಔಷಧ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಸದ್ಯಕ್ಕೆ ಏಡ್ಸ್ ರೋಗವನ್ನು ಗುಣಪಡಿಸುವ ಯಾವುದೇ ಔಷಧವಿಲ್ಲ, ಮತ್ತು ಈಗಾಗಲೇ ಸೋಂಕಿತರಾಗಿರುವ ಅಧಿಕಾಂಶ ಜನರಿಗೆ ಕಾಲಕ್ರಮೇಣ ಈ ರೋಗವು ಖಂಡಿತವಾಗಿಯೂ ಕಾಣಿಸಿಕೊಳ್ಳುವುದು ಎಂದು ವೈದ್ಯರು ನಂಬುತ್ತಾರೆ.
[ಚಿತ್ರ]
ಏಚ್‌ಐವಿ ವೈರಸ್‌ನಿಂದ ಸೋಂಕಿತವಾಗಿರುವ ಟಿ ಲಿಂಪೊಸೈಟ್ ಜೀವಕೋಶಗಳು
[ಕೃಪೆ]
Godo-Foto
[ಪುಟ 7ರಲ್ಲಿರುವ ಚಿತ್ರ]
ಪ್ರಯೋಗಾಲಯದ ಕೆಲಸಗಾರನೊಬ್ಬನು ಹೋರಾಡಲು ಕಷ್ಟಕರವಾಗಿರುವ ವೈರಸ್‌ನ ಜಾತಿಯೊಂದನ್ನು ಪರೀಕ್ಷಿಸುತ್ತಿರುವುದು
[ಕೃಪೆ]
CDC/Anthony Sanchez
-
-
ರೋಗಮುಕ್ತವಾದ ಒಂದು ಲೋಕಎಚ್ಚರ!—2004 | ಜುಲೈ
-
-
ರೋಗಮುಕ್ತವಾದ ಒಂದು ಲೋಕ
“ಸರ್ವರಿಗೂ ಮೂಲಭೂತ ಆರೋಗ್ಯಾರೈಕೆಯನ್ನು ಖಾತ್ರಿಪಡಿಸಲಿಕ್ಕಾಗಿರುವ ಸಹಭಾಗಿತ್ವ ಮನೋಭಾವದಲ್ಲಿ ಮತ್ತು ಸೇವೆಯಲ್ಲಿ ಎಲ್ಲಾ ದೇಶಗಳು ಸಹಕರಿಸಬೇಕು, ಏಕೆಂದರೆ ಯಾವುದೇ ಒಂದು ದೇಶದಲ್ಲಿನ ಜನರಿಂದ ಸಾಧಿಸಲ್ಪಡುವ ಆರೋಗ್ಯವು ಪ್ರತಿಯೊಂದು ದೇಶಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ ಮತ್ತು ಪ್ರಯೋಜನದಾಯಕವಾಗಿದೆ.”—ಆಲ್ಮ-ಆಟ ಘೋಷಣೆ, ಸೆಪ್ಟೆಂಬರ್ 12, 1978.
ಇಪ್ಪತ್ತೈದು ವರ್ಷಗಳ ಹಿಂದೆ, ಭೂಮಿಯಲ್ಲಿರುವ ಪ್ರತಿಯೊಬ್ಬರಿಗೆ ಮೂಲಭೂತ ಆರೋಗ್ಯಾರೈಕೆಯನ್ನು ಒದಗಿಸುವ ಗುರಿಯನ್ನು ಸಾಧಿಸಸಾಧ್ಯವಿದೆ ಎಂದು ಕೆಲವರಿಗೆ ಅನಿಸಿತು. ಈಗ ಯಾವುದು ಕಸಕ್‌ಸ್ತಾನ್ ಆಗಿದೆಯೋ ಆ ಆಲ್ಮ-ಆಟದಲ್ಲಿ ನಡೆದ ‘ಮೂಲಭೂತ ಆರೋಗ್ಯಾರೈಕೆಯ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ’ಕ್ಕೆ ಹಾಜರಾದ ಪ್ರತಿನಿಧಿಗಳು, 2000 ಇಸವಿಯಷ್ಟಕ್ಕೆ ಪ್ರಮುಖ ಸೋಂಕು ರೋಗಗಳ ವಿರುದ್ಧ ಮಾನವಕುಲದವರೆಲ್ಲರೂ ಸೋಂಕು ಪ್ರತಿರಕ್ಷೆಯನ್ನು ಪಡೆಯುವಂತೆ ಏರ್ಪಡಿಸುವ ನಿರ್ಧಾರವನ್ನು ಮಾಡಿದರು. ಅದೇ ವರ್ಷದಲ್ಲಿ, ಭೂಮಿಯಲ್ಲಿರುವ ಪ್ರತಿಯೊಬ್ಬರಿಗೂ ಮೂಲಭೂತ ನೈರ್ಮಲ್ಯ ವ್ಯವಸ್ಥೆ ಮತ್ತು ಸುರಕ್ಷಿತ ನೀರು ಲಭ್ಯವಾಗುವುದು ಎಂಬ ನಿರೀಕ್ಷೆಯೂ ಅವರಿಗಿತ್ತು. ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂ.ಏಚ್.ಓ.)ಯ ಎಲ್ಲಾ ಸದಸ್ಯ ರಾಜ್ಯಗಳು ಈ ಘೋಷಣೆಗೆ ಸಹಿ ಹಾಕಿದವು.
ಈ ಗುರಿಯು ಖಂಡಿತವಾಗಿಯೂ ಪ್ರಶಂಸಾರ್ಹವಾಗಿತ್ತಾದರೂ, ತರುವಾಯದ ಕಾರ್ಯಾವಳಿಗಳು ನಿರಾಶಾದಾಯಕವಾಗಿದ್ದವು. ಖಂಡಿತವಾಗಿಯೂ ಇಂದು ಮೂಲಭೂತ ಆರೋಗ್ಯಾರೈಕೆಯು ಪ್ರತಿಯೊಬ್ಬರಿಗೂ ಲಭ್ಯವಿಲ್ಲ, ಮತ್ತು ಸೋಂಕು ರೋಗಗಳು ಈಗಲೂ ಭೂಮಿಯ ಮೇಲಿರುವ ನೂರಾರು ಕೋಟಿ ಜನರ ಜೀವಗಳಿಗೆ ಬೆದರಿಕೆಯನ್ನೊಡ್ಡುತ್ತಿವೆ. ಮತ್ತು ಈ ಮಾರಕ ರೋಗಗಳು ಅನೇಕವೇಳೆ, ಜೀವಿತದ ಪ್ರಮುಖ ಘಟ್ಟದಲ್ಲಿರುವ ಮಕ್ಕಳನ್ನು ಹಾಗೂ ವಯಸ್ಕರನ್ನು ಬಾಧಿಸುತ್ತವೆ.
ಏಡ್ಸ್, ಕ್ಷಯ, ಮತ್ತು ಮಲೇರಿಯ ಎಂಬ ರೋಗಗಳ ಮುಮ್ಮಡಿ ಬೆದರಿಕೆಯು, ‘ಸಹಭಾಗಿತ್ವ ಮನೋಭಾವದಲ್ಲಿ ಸಹಕರಿಸುವಂತೆ’ ದೇಶಗಳನ್ನು ಒತ್ತಾಯಿಸಿಲ್ಲ. ‘ಏಡ್ಸ್, ಕ್ಷಯ ಮತ್ತು ಮಲೇರಿಯ ರೋಗಗಳ ವಿರುದ್ಧವಾದ ಹೋರಾಟಕ್ಕಾಗಿರುವ ಭೌಗೋಳಿಕ ನಿಧಿ’ ಎಂಬ ಇತ್ತೀಚಿಗೆ ಸ್ಥಾಪಿತವಾದ ಸಂಸ್ಥೆಯು, ಈ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲಿಕ್ಕಾಗಿ 13 ಶತಕೋಟಿ ಅಮೆರಿಕನ್ ಡಾಲರುಗಳನ್ನು ಸರಕಾರಗಳ ಬಳಿ ವಿನಂತಿಸಿಕೊಂಡಿತು. 2002ನೇ ಇಸವಿಯ ಬೇಸಗೆಕಾಲದಷ್ಟಕ್ಕೆ ಕೇವಲ 2 ಶತಕೋಟಿ ಅಮೆರಿಕನ್ ಡಾಲರುಗಳಷ್ಟು ಹಣವು ಮಾತ್ರ ನೀಡಲ್ಪಟ್ಟಿತಾದರೂ, ಅದೇ ವರ್ಷದಲ್ಲಿ ಮಿಲಿಟರಿಗಾಗಿ ವ್ಯಯಿಸಲ್ಪಟ್ಟ ಹಣವು 700 ಶತಕೋಟಿ ಅಮೆರಿಕನ್ ಡಾಲರುಗಳನ್ನು ತಲಪಿತ್ತು! ಅಸಂತೋಷಕರವಾಗಿಯೇ, ಇಂದಿನ ವಿಭಾಗಿತ ಲೋಕದಲ್ಲಿ ಪ್ರತಿಯೊಬ್ಬರ ಒಳಿತಿಗಾಗಿ ಎಲ್ಲಾ ದೇಶಗಳನ್ನು ಒಂದುಗೂಡಿಸಲು ಸಮರ್ಥವಾಗಿರುವಂಥ ಬೆದರಿಕೆಗಳು ಕೆಲವೇ.
ಆರೋಗ್ಯಾಧಿಕಾರಿಗಳಿಗೆ ಅತ್ಯುತ್ತಮವಾದ ಹೇತುಗಳಿರುವುದಾದರೂ, ಸೋಂಕು ರೋಗಗಳ ವಿರುದ್ಧವಾದ ಹೋರಾಟದಲ್ಲಿ ಅವರಿಗೆ ತುಂಬ ಇತಿಮಿತಿಗಳಿವೆ. ಸರಕಾರಗಳು ಅಗತ್ಯವಿರುವ ಹಣವನ್ನು ಒದಗಿಸದಿರಬಹುದು. ಸೂಕ್ಷ್ಮಜೀವಿಗಳು ಅನೇಕ ಔಷಧಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿವೆ, ಮತ್ತು ಜನರು ಅತ್ಯಂತ ಅಪಾಯಕರ ಜೀವನ ರೀತಿಯನ್ನು ಬೆನ್ನಟ್ಟುವುದನ್ನೇ ಪಟ್ಟುಹಿಡಿಯುತ್ತಿರಬಹುದು. ಅಷ್ಟುಮಾತ್ರವಲ್ಲ, ಕೆಲವೊಂದು ಕ್ಷೇತ್ರಗಳಲ್ಲಿ ಸರ್ವಸಾಮಾನ್ಯವಾಗಿರುವ ಬಡತನ, ಯುದ್ಧ, ಮತ್ತು ಬರಗಾಲಗಳಂಥ ಸಮಸ್ಯೆಗಳು ಲಕ್ಷಾಂತರ ಮಾನವರಿಗೆ ಯಶಸ್ವಿಕರವಾಗಿ ರೋಗಾಣುಗಳನ್ನು ಸೋಂಕಿಸಲು ಸೂಕ್ತವಾದ ಅವಕಾಶಗಳನ್ನು ಒದಗಿಸುತ್ತವೆ.
ನಮ್ಮ ಆರೋಗ್ಯದ ಬಗ್ಗೆ ದೇವರಿಗಿರುವ ಆಸಕ್ತಿ
ರೋಗಗಳ ಸಮಸ್ಯೆಗೆ ಒಂದು ಪರಿಹಾರವಿದೆ. ಯೆಹೋವ ದೇವರು ಮಾನವಕುಲದ ಆರೋಗ್ಯದಲ್ಲಿ ತುಂಬ ಆಸಕ್ತಿ ವಹಿಸುತ್ತಾನೆ ಎಂಬ ಸ್ಪಷ್ಟವಾದ ಪುರಾವೆ ನಮಗಿದೆ. ನಮ್ಮ ಸೋಂಕು ಪ್ರತಿರಕ್ಷೆಯೇ ಈ ಆಸಕ್ತಿಗೆ ಪ್ರಮುಖ ರುಜುವಾತಾಗಿದೆ. ಪುರಾತನ ಇಸ್ರಾಯೇಲಿಗೆ ಯೆಹೋವನು ಕೊಟ್ಟ ಅನೇಕ ನಿಯಮಗಳು, ಸೋಂಕು ರೋಗಗಳಿಂದ ಅವರನ್ನು ಕಾಪಾಡುವ ಬಯಕೆಯು ಆತನಿಗಿತ್ತು ಎಂಬುದನ್ನು ತೋರಿಸುತ್ತವೆ.a
ತನ್ನ ತಂದೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಯೇಸು ಕ್ರಿಸ್ತನು ಸಹ ಅಸ್ವಸ್ಥರಿಗಾಗಿ ಸಹಾನುಭೂತಿಯನ್ನು ತೋರಿಸುತ್ತಾನೆ. ಕುಷ್ಠರೋಗದಿಂದ ನರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಯೇಸು ಭೇಟಿಯಾದ ವಿಷಯವನ್ನು ಮಾರ್ಕನ ಸುವಾರ್ತೆಯು ವರ್ಣಿಸುತ್ತದೆ. “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಆ ಕುಷ್ಠರೋಗಿಯು ಹೇಳಿದನು. ಆ ಮನುಷ್ಯನು ಸಹಿಸಿಕೊಂಡಿದ್ದ ನೋವು ಹಾಗೂ ಕಷ್ಟಾನುಭವವನ್ನು ಯೇಸು ಮನಗಂಡಾಗ, ಅವನಿಗೆ ತುಂಬ ಕನಿಕರವುಂಟಾಯಿತು. ಅದಕ್ಕೆ ಯೇಸು ಉತ್ತರಿಸಿದ್ದು: “ನನಗೆ ಮನಸ್ಸುಂಟು; ಶುದ್ಧವಾಗು.”—ಮಾರ್ಕ 1:40, 41.
ಯೇಸುವಿನ ಅದ್ಭುತಕರ ಗುಣಪಡಿಸುವಿಕೆಗಳು ಕೆಲವೇ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸುವಾರ್ತಾ ಲೇಖಕನಾದ ಮತ್ತಾಯನು ದಾಖಲಿಸುವುದೇನೆಂದರೆ, ಯೇಸು “ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.” (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 4:23) ಅವನ ಗುಣಪಡಿಸುವಿಕೆಗಳು ಕೇವಲ ಯೂದಾಯ ಮತ್ತು ಗಲಿಲಾಯದಲ್ಲಿದ್ದ ಅಸ್ವಸ್ಥರಿಗೆ ಮಾತ್ರ ಸಹಾಯಮಾಡಲಿಲ್ಲ. ಆ ಗುಣಪಡಿಸುವಿಕೆಗಳು, ಯೇಸು ಯಾವುದರ ಕುರಿತು ಸಾರಿದನೋ ಆ ದೇವರ ರಾಜ್ಯವು ಯಾರಿಂದಲೂ ವಿರೋಧವನ್ನು ಎದುರಿಸದೆ ಮಾನವಕುಲದ ಮೇಲೆ ಆಳ್ವಿಕೆ ನಡೆಸುವಾಗ, ಎಲ್ಲಾ ರೀತಿಯ ರೋಗಗಳು ಹೇಗೆ ಅಂತಿಮವಾಗಿ ಕಾಣೆಯಾಗುವವು ಎಂಬುದರ ಮುನ್ನೋಟವನ್ನು ನಮಗೆ ನೀಡುತ್ತವೆ.
ಭೂವ್ಯಾಪಕ ಆರೋಗ್ಯ ನನಸಾಗದ ಕನಸಲ್ಲ
ಭೂವ್ಯಾಪಕ ಆರೋಗ್ಯವು ನನಸಾಗದ ಕನಸಲ್ಲ ಎಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. ‘ದೇವರ ನಿವಾಸವು ಮನುಷ್ಯರಲ್ಲಿ ಇರುವಂಥ’ ಸಮಯವನ್ನು ಅಪೊಸ್ತಲ ಯೋಹಾನನು ಮುನ್ನೋಡಿದನು. ದೇವರು ಈ ರೀತಿಯಲ್ಲಿ ಕ್ರಿಯೆಗೈಯುವುದರ ಫಲಿತಾಂಶವಾಗಿ, ‘ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಗುವುದು.’ ಇದು ತುಂಬ ಒಳ್ಳೇದಾಗಿರುವುದಾದರೂ ನಂಬಲು ಅಸಾಧ್ಯವಾಗಿರುವಂತೆ ತೋರುತ್ತದೋ? ಮುಂದಿನ ವಚನದಲ್ಲಿ ದೇವರು ತಾನೇ ಪ್ರಕಟಿಸುವುದು: “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”—ಪ್ರಕಟನೆ 21:3-5.
ರೋಗದ ಅಂತ್ಯವು ಅಗತ್ಯವಾಗಿ ಬಡತನ, ಬರಗಾಲ, ಮತ್ತು ಯುದ್ಧದ ಅಂತ್ಯವನ್ನು ಸಹ ಕೇಳಿಕೊಳ್ಳುತ್ತದೆ ಎಂಬುದಂತೂ ನಿಶ್ಚಯ, ಏಕೆಂದರೆ ಅನೇಕವೇಳೆ ಈ ವಿಪತ್ತುಗಳೂ ಸೋಂಕು ರೋಗದ ಸೂಕ್ಷ್ಮಜೀವಾಣುಗಳೂ ಜೊತೆಜೊತೆಯಾಗಿ ಕಾರ್ಯನಡಿಸುತ್ತವೆ. ಆದುದರಿಂದ, ಯೆಹೋವನು ಈ ಬೃಹತ್ ಕೆಲಸವನ್ನು ತನ್ನ ರಾಜ್ಯಕ್ಕೆ, ಕ್ರಿಸ್ತನಿಂದ ಆಳಲ್ಪಡುವ ಒಂದು ಸ್ವರ್ಗೀಯ ಸರಕಾರಕ್ಕೆ ನೇಮಿಸುತ್ತಾನೆ. ಲಕ್ಷಾಂತರ ಮಂದಿಯ ಕಟ್ಟಾಸಕ್ತಿಯ ಪ್ರಾರ್ಥನೆಗಳಿಗೆ ಉತ್ತರವಾಗಿ ಈ ಸರಕಾರವು ಬಂದೇ ಬರುವುದು, ಮತ್ತು ದೇವರ ಚಿತ್ತವು ಭೂಲೋಕದಲ್ಲಿಯೂ ನೆರವೇರುವುದನ್ನು ಖಾತ್ರಿಪಡಿಸುವುದು.—ಮತ್ತಾಯ 6:10.
ನಾವು ಯಾವಾಗ ದೇವರ ರಾಜ್ಯವನ್ನು ನಿರೀಕ್ಷಿಸಸಾಧ್ಯವಿದೆ? ಈ ಪ್ರಶ್ನೆಯ ಕುರಿತು ಮಾತಾಡುತ್ತಿರುವಾಗ ಯೇಸು ಮುಂತಿಳಿಸಿದ್ದೇನೆಂದರೆ, ಲೋಕದಲ್ಲಿರುವ ಜನರು ತುಂಬ ಅರ್ಥಗರ್ಭಿತವಾದ ವಿಕಸನಗಳ ಸರಮಾಲೆಯನ್ನು ನೋಡುವರು ಮತ್ತು ಇದು ಅತಿ ಬೇಗನೆ ರಾಜ್ಯವು ಸೂಕ್ತವಾದ ಕ್ರಮವನ್ನು ಕೈಗೊಳ್ಳಲಿದೆ ಎಂಬುದರ ಸೂಚನೆಯಾಗಿರುವುದು. ಈ ವೈಶಿಷ್ಟ್ಯಗಳಲ್ಲಿ ಒಂದು, ‘ಅಲ್ಲಲ್ಲಿ ಉಂಟಾಗುವ ಅಂಟುಜಾಡ್ಯಗಳೇ’ (NW) ಆಗಿವೆ ಎಂದು ಅವನು ಹೇಳಿದನು. (ಲೂಕ 21:10, 11; ಮತ್ತಾಯ 24:3, 7) “ಅಂಟುಜಾಡ್ಯ” ಎಂಬುದಕ್ಕಾಗಿರುವ ಗ್ರೀಕ್ ಪದವು “ಯಾವುದೇ ರೀತಿಯ ಮಾರಕ ಸೋಂಕು ರೋಗವನ್ನು” ಸೂಚಿಸುತ್ತದೆ. ವೈದ್ಯಕೀಯ ವಿಜ್ಞಾನದ ಎಲ್ಲಾ ಪ್ರಗತಿಯ ಹೊರತಾಗಿಯೂ, ಖಂಡಿತವಾಗಿ 20ನೆಯ ಶತಮಾನವು ಅಂಟುಜಾಡ್ಯಗಳ ಘೋರ ತಲೆದೋರುವಿಕೆಗಳನ್ನು ಕಂಡಿದೆ.—“1914 ರಿಂದ ಸಂಭವಿಸಿದ ಅಂಟುಜಾಡ್ಯದಿಂದ ಉಂಟಾದ ಸಾವುಗಳು” ಎಂಬ ಚೌಕವನ್ನು ನೋಡಿ.
ಸುವಾರ್ತಾ ಪುಸ್ತಕಗಳಲ್ಲಿರುವ ಯೇಸುವಿನ ಮಾತುಗಳಿಗೆ ಸದೃಶವಾದ, ಪ್ರಕಟನೆ ಪುಸ್ತಕದಲ್ಲಿರುವ ಒಂದು ಪ್ರವಾದನೆಯು, ಯೇಸು ಕ್ರಿಸ್ತನು ಸ್ವರ್ಗದಲ್ಲಿ ಅಧಿಕಾರವನ್ನು ಪಡೆದುಕೊಳ್ಳುವಾಗ ಅವನನ್ನು ಜೊತೆಗೂಡುವ ಬೇರೆ ಬೇರೆ ಕುದುರೆ ಸವಾರರನ್ನು ಚಿತ್ರಿಸುತ್ತದೆ. ನಾಲ್ಕನೆಯ ಕುದುರೆ ಸವಾರನು ‘ಬೂದಿಬಣ್ಣದ ಕುದುರೆಯ’ ಮೇಲೆ ಕುಳಿತುಕೊಂಡಿದ್ದು, ಅವನು ತನ್ನ ಹಾದಿಯಲ್ಲಿ “ಅಂಟುರೋಗ”ವನ್ನು ಬಿತ್ತುತ್ತಾನೆ. (ಪ್ರಕಟನೆ 6:2, 4, 5, 8) ಇಸವಿ 1914 ರಿಂದ, ಕೆಲವು ಪ್ರಮುಖ ಸೋಂಕು ರೋಗಗಳಿಂದ ಉಂಟುಮಾಡಲ್ಪಟ್ಟಿರುವ ಮರಣ ಸಂಖ್ಯೆಯನ್ನು ನೋಡುವಾಗ, ಈ ಸಾಂಕೇತಿಕ ಕುದುರೆ ಸವಾರನು ನಿಜವಾಗಿಯೂ ಸವಾರಿಮಾಡುತ್ತಿದ್ದಾನೆ ಎಂಬುದನ್ನು ಅದು ದೃಢಪಡಿಸುತ್ತದೆ. ಲೋಕವ್ಯಾಪಕವಾಗಿ ಜನರು “ಅಂಟುರೋಗ”ದಿಂದ ನರಳುತ್ತಿರುವುದು, ದೇವರ ರಾಜ್ಯದ ಆಗಮನವು ಸಮೀಪಿಸಿದೆ ಎಂಬುದಕ್ಕೆ ಇನ್ನೂ ಹೆಚ್ಚಿನ ರುಜುವಾತನ್ನು ಒದಗಿಸುತ್ತದೆ.b—ಮಾರ್ಕ 13:29.
ಕೆಲವು ದಶಕಗಳ ವರೆಗೆ ಸೋಂಕು ರೋಗಗಳ ಹಬ್ಬುವಿಕೆಯನ್ನು ನಿಯಂತ್ರಿಸುವುದರಲ್ಲಿ ವೈದ್ಯಕೀಯ ವಿಜ್ಞಾನವು ಯಶಸ್ಸನ್ನು ಪಡೆದಿರುವುದಾದರೂ, ಒಂದು ಹೊಸ ಸಮಸ್ಯೆಯು ನಮ್ಮನ್ನು ಬೆದರಿಸಲು ಆರಂಭಿಸುತ್ತಿದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ನಮಗೆ ಮನುಷ್ಯಾತೀತ ಪರಿಹಾರದ ಅಗತ್ಯವಿದೆ ಎಂಬುದಂತೂ ಸ್ಪಷ್ಟ. ನಮ್ಮ ಸೃಷ್ಟಿಕರ್ತನು ಇದನ್ನೇ ಮಾಡುವ ವಾಗ್ದಾನವಿತ್ತಿದ್ದಾನೆ. ಪ್ರವಾದಿಯಾದ ಯೆಶಾಯನು ನಮಗೆ ಆಶ್ವಾಸನೆ ನೀಡುವುದೇನೆಂದರೆ, ದೇವರ ರಾಜ್ಯದ ಕೆಳಗೆ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಅಷ್ಟುಮಾತ್ರವಲ್ಲ, “[ದೇವರು] ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾಯ 25:8; 33:22, 24) ಆ ದಿನವು ಉದಯಿಸುವಾಗ, ರೋಗವು ಸದಾಕಾಲಕ್ಕೂ ಸಂಪೂರ್ಣವಾಗಿ ಜಯಿಸಲ್ಪಟ್ಟಿರುವುದು. (g04 5/22)
[ಪಾದಟಿಪ್ಪಣಿಗಳು]
a ಮೋಶೆಯ ಧರ್ಮಶಾಸ್ತ್ರದಲ್ಲಿ ಮಲವಿಸರ್ಜನೆ, ನೈರ್ಮಲ್ಯವ್ಯವಸ್ಥೆ, ಆರೋಗ್ಯಶಾಸ್ತ್ರ, ಮತ್ತು ಸಂಪರ್ಕ ನಿಷೇಧದ ಕುರಿತಾದ ಸೂಚನೆಗಳು ಒಳಗೂಡಿದ್ದವು. ಡಾ. ಏಚ್. ಓ. ಫಿಲಿಪ್ಸ್ ಹೇಳಿದ್ದೇನೆಂದರೆ, “ಬೈಬಲಿನಲ್ಲಿ ಕೊಡಲ್ಪಟ್ಟಿರುವ ಜೀವನದ ವಾಸ್ತವಾಂಶಗಳು, ರೋಗನಿರ್ಣಯ, ಚಿಕಿತ್ಸೆ, ಮತ್ತು ರೋಗಗಳನ್ನು ತಡೆಗಟ್ಟುವ ರೂಢಿಗಳು, ಹಿಪೊಕ್ರೇಟಿಸನ ಸಿದ್ಧಾಂತಗಳಿಗಿಂತ ಹೆಚ್ಚು ಮುಂದುವರಿದಂಥವುಗಳು ಮತ್ತು ವಿಶ್ವಾಸಾರ್ಹವಾದವುಗಳು ಆಗಿವೆ.”
b ದೇವರ ರಾಜ್ಯದ ಆಗಮನವು ಸಮೀಪಿಸಿದೆ ಎಂಬುದನ್ನು ರುಜುಪಡಿಸುವ ಇನ್ನೂ ಹೆಚ್ಚಿನ ವೈಶಿಷ್ಟ್ಯಗಳ ಪರಿಗಣನೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿ.
[ಪುಟ 12ರಲ್ಲಿರುವ ಚೌಕ]
1914ರಿಂದ ಸಂಭವಿಸಿದ ಅಂಟುಜಾಡ್ಯದಿಂದ ಉಂಟಾದ ಸಾವುಗಳು
ಈ ಸಂಖ್ಯಾಸಂಗ್ರಹಣಗಳು ಅಂದಾಜಾಗಿವೆ ಎಂಬುದಂತೂ ಖಂಡಿತ. ಆದರೂ 1914ರಿಂದ ಎಷ್ಟರ ಮಟ್ಟಿಗೆ ಅಂಟುಜಾಡ್ಯಗಳು ಮಾನವಕುಲವನ್ನು ಬಾಧಿಸಿವೆ ಎಂಬುದನ್ನು ಅವು ಸೂಚಿಸುತ್ತವೆ.
◼ ಸಿಡುಬು ರೋಗ (30 ಕೋಟಿ ಮತ್ತು 50 ಕೋಟಿಯ ನಡುವಣ ಸಂಖ್ಯೆ) ಸಿಡುಬು ರೋಗಕ್ಕಾಗಿ ಯಾವುದೇ ಪರಿಣಾಮಕಾರಿ ಚಿಕಿತ್ಸೆಯು ಎಂದೂ ಕಂಡುಹಿಡಿಯಲ್ಪಟ್ಟಿರಲಿಲ್ಲ. ಆದರೆ 1980ರಷ್ಟಕ್ಕೆ, ಒಂದು ಬೃಹತ್ ಅಂತಾರಾಷ್ಟ್ರೀಯ ಲಸಿಕೆ ಕಾರ್ಯಕ್ರಮವು ಅಂತಿಮವಾಗಿ ಈ ರೋಗವನ್ನು ನಿರ್ಮೂಲಗೊಳಿಸುವುದರಲ್ಲಿ ಸಫಲವಾಯಿತು.
◼ ಕ್ಷಯರೋಗ (10 ಕೋಟಿ ಮತ್ತು 15 ಕೋಟಿಯ ನಡುವಣ ಸಂಖ್ಯೆ) ಕ್ಷಯರೋಗವು ಈಗ ಪ್ರತಿ ವರ್ಷ ಹೆಚ್ಚುಕಡಿಮೆ 20 ಲಕ್ಷ ಮಂದಿಯನ್ನು ಕೊಲ್ಲುತ್ತದೆ, ಮತ್ತು ಲೋಕದಲ್ಲಿರುವ ಪ್ರತಿ 3 ಜನರಲ್ಲಿ ಒಬ್ಬನಿಗೆ ಕ್ಷಯರೋಗದ ಬ್ಯಾಕ್ಟೀರಿಯವು ಇದೆ.
◼ ಮಲೇರಿಯ (8 ಕೋಟಿ ಮತ್ತು 12 ಕೋಟಿಯ ನಡುವಣ ಸಂಖ್ಯೆ) ಇಪ್ಪತ್ತನೆಯ ಶತಮಾನದ ಮೊದಲ ಅರ್ಧಭಾಗದಲ್ಲಿ, ಮಲೇರಿಯ ಜ್ವರದಿಂದ ಸಾಯುತ್ತಿದ್ದವರ ಸಂಖ್ಯೆಯು ವರ್ಷವೊಂದಕ್ಕೆ ಸುಮಾರು 20 ಲಕ್ಷವಾಗಿತ್ತು. ಈಗ ಅತ್ಯಂತ ಹೆಚ್ಚಿನ ಮರಣ ಸಂಖ್ಯೆಯು ಆಫ್ರಿಕದ ಉಪಸಹಾರದಲ್ಲಿ ವರದಿಸಲ್ಪಟ್ಟಿದ್ದು, ಈಗಲೂ ಮಲೇರಿಯ ಜ್ವರವು ವರ್ಷವೊಂದಕ್ಕೆ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತದೆ.
◼ ಸ್ಪ್ಯಾನಿಷ್ ಇನ್‌ಫ್ಲೂಎನ್ಸಾ (2 ಕೋಟಿ ಮತ್ತು 3 ಕೋಟಿಯ ನಡುವಣ ಸಂಖ್ಯೆ) ಮರಣ ಸಂಖ್ಯೆಯು ಅತ್ಯಧಿಕವಾಗಿತ್ತೆಂದು ಕೆಲವು ಇತಿಹಾಸಗಾರರು ಹೇಳುತ್ತಾರೆ. ಈ ಮಾರಕ ಸಾಂಕ್ರಾಮಿಕ ರೋಗವು, ಒಂದನೆಯ ಲೋಕ ಯುದ್ಧದ ಬಳಿಕ 1918 ಮತ್ತು 1919ರಲ್ಲಿ ಲೋಕವ್ಯಾಪಕವಾಗಿ ಹಬ್ಬಿತ್ತು. “ಗೆಡ್ಡೆ ಪ್ಲೇಗು ಸಹ ಇಷ್ಟೊಂದು ಜನರನ್ನು ಇಷ್ಟು ತ್ವರಿತವಾಗಿ ಕೊಂದಿರಲಿಲ್ಲ” ಎಂದು ಮಾನವ ಮತ್ತು ಸೂಕ್ಷ್ಮಜೀವಿಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ.
◼ ಟೈಫಸ್ ಜ್ವರ (ಸುಮಾರು 2 ಕೋಟಿ) ಟೈಫಸ್ ಜ್ವರವೆಂಬ ಸಾಂಕ್ರಾಮಿಕ ರೋಗವು ಅನೇಕವೇಳೆ ಯುದ್ಧದ ಜೊತೆಯಲ್ಲೇ ಬರುತ್ತಿತ್ತು, ಮತ್ತು ಒಂದನೆಯ ಲೋಕ ಯುದ್ಧವು ಎಂಥ ಟೈಫಸ್ ಅಂಟುಜಾಡ್ಯವನ್ನು ಕೆರಳಿಸಿತೆಂದರೆ, ಇದು ಪೂರ್ವ ಯೂರೋಪ್‌ನಲ್ಲಿನ ದೇಶಗಳನ್ನೆಲ್ಲಾ ಧ್ವಂಸಮಾಡಿಬಿಟ್ಟಿತು.
◼ ಏಡ್ಸ್ (2 ಕೋಟಿಗಿಂತ ಹೆಚ್ಚು) ಈ ಆಧುನಿಕ ವ್ಯಾಧಿಯು ಈಗ ಪ್ರತಿ ವರ್ಷ 30 ಲಕ್ಷ ಜನರನ್ನು ಕೊಲ್ಲುತ್ತಿದೆ. ವಿಶ್ವ ಸಂಸ್ಥೆಯ ಏಡ್ಸ್ ಕಾರ್ಯಕ್ರಮದ ಪ್ರಚಲಿತ ಅಂದಾಜುಗಳು ಸೂಚಿಸುವುದೇನೆಂದರೆ, “ಅತಿ ವಿಸ್ತಾರವಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಪ್ರಯತ್ನಗಳು ಇಲ್ಲದಿರುವಲ್ಲಿ, 2000 ಮತ್ತು 2020ನೇ ಇಸವಿಯೊಳಗೆ . . . 6.8 ಕೋಟಿ ಜನರು ಸಾಯುವರು.”
[ಪುಟ 11ರಲ್ಲಿರುವ ಚಿತ್ರಗಳು]
ದೇವರ ರಾಜ್ಯದಲ್ಲಿ ಇಂಥ ರೋಗಗಳು ಎಂದೂ ಬೆದರಿಕೆಯನ್ನು ಒಡ್ಡವು
ಏಡ್ಸ್
ಮಲೇರಿಯ
ಕ್ಷಯರೋಗ
[ಕೃಪೆ]
ಏಡ್ಸ್: CDC; ಮಲೇರಿಯ: CDC/Dr. Melvin; ಕ್ಷಯರೋಗ: © 2003 Dennis Kunkel Microscopy, Inc.
[ಪುಟ 13ರಲ್ಲಿರುವ ಚಿತ್ರ]
ಯೇಸು ಎಲ್ಲಾ ರೀತಿಯ ರೋಗಗಳು ಮತ್ತು ಬೇನೆಯನ್ನು ಗುಣಪಡಿಸಿದನು
-