ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಪು. 33-ಪು. 38 ಪ್ಯಾ. 5
  • ಸಂಶೋಧನೆ ಮಾಡುವ ವಿಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಶೋಧನೆ ಮಾಡುವ ವಿಧ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಮ್ಮ ಅತಿಮುಖ್ಯ ಸಂಶೋಧನಾ ಸಾಧನವಾದ ಬೈಬಲನ್ನು ಉಪಯೋಗಿಸುವುದು
  • ಬೇರೆ ಸಂಶೋಧನಾ ಸಾಧನಗಳನ್ನು ಉಪಯೋಗಿಸಲು ಕಲಿಯುವುದು
  • ಬೇರೆ ದೇವಪ್ರಭುತ್ವಾತ್ಮಕ ಲೈಬ್ರರಿಗಳು
  • ವೈಯಕ್ತಿಕ ಫೈಲುಗಳನ್ನು ಇಟ್ಟುಕೊಳ್ಳಿರಿ
  • ಜನರೊಂದಿಗೆ ಮಾತಾಡಿರಿ
  • ಪರಿಣಾಮಗಳ ಮೌಲ್ಯಮಾಪನ ಮಾಡಿರಿ
  • ಹೊಚ್ಚ ಹೊಸ ಸಂಶೋಧನಾ ಸಾಧನ
    2014 ನಮ್ಮ ರಾಜ್ಯದ ಸೇವೆ
  • ಇಂಡೆಕ್ಸ್‌ನ ಸಹಾಯದೊಂದಿಗೆ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು
    1991 ನಮ್ಮ ರಾಜ್ಯದ ಸೇವೆ
  • ರಾಜ್ಯ ಸಭಾಗೃಹ ಗ್ರಂಥಾಲಯದ ಅನುಕೂಲಗಳೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ದೇವಪ್ರಭುತ್ವ ಪುಸ್ತಕಭಂಡಾರವನ್ನು ಸಂಘಟಿಸುವ ವಿಧ
    ಕಾವಲಿನಬುರುಜು—1994
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಪು. 33-ಪು. 38 ಪ್ಯಾ. 5

ಸಂಶೋಧನೆ ಮಾಡುವ ವಿಧ

ಅರಸನಾದ ಸೊಲೊಮೋನನು “ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ ಪರೀಕ್ಷಿಸಿ ಕ್ರಮಪಡಿಸಿದನು.” ಏಕೆ? ಏಕೆಂದರೆ “ಒಪ್ಪಿಗೆಯ ಸತ್ಯದ ಮಾತುಗಳನ್ನು” ಬರೆಯಲು ಅವನು ಆಸಕ್ತನಾಗಿದ್ದನು. (ಪ್ರಸಂ. 12:9, 10) ಲೂಕನು ಕ್ರಿಸ್ತನ ಜೀವನದ ಘಟನೆಗಳನ್ನು ತರ್ಕಬದ್ಧ ಕ್ರಮದಲ್ಲಿ ಬರೆಯುವುದಕ್ಕಾಗಿ, ಅವುಗಳನ್ನು “ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿ” ಬರೆದನು. (ಲೂಕ 1:3) ದೇವರ ಸೇವಕರಾಗಿದ್ದ ಈ ಇಬ್ಬರೂ ಸಂಶೋಧನೆ ಮಾಡುತ್ತಿದ್ದರು.

ಸಂಶೋಧನೆ ಎಂದರೇನು? ಅದು, ಒಂದು ನಿರ್ದಿಷ್ಟ ವಿಷಯದ ಕುರಿತಾದ ಮಾಹಿತಿಗಾಗಿ ಜಾಗರೂಕತೆಯಿಂದ ಹುಡುಕುವುದೇ ಆಗಿದೆ. ಇದರಲ್ಲಿ ಓದುವಿಕೆ ಸೇರಿದೆ, ಮತ್ತು ಅಧ್ಯಯನ ಸೂತ್ರಗಳ ಅನ್ವಯ ಇದಕ್ಕೆ ಅಗತ್ಯವಾಗಿದೆ. ಜನರನ್ನು ಇಂಟರ್‌ವ್ಯೂ ಮಾಡುವುದು ಸಹ ಇದರಲ್ಲಿ ಒಳಗೂಡಿರಬಹುದು.

ಸಂಶೋಧನೆಯು ಅಗತ್ಯವಾಗಿರುವ ಸನ್ನಿವೇಶಗಳು ಯಾವುವು? ಕೆಲವು ಉದಾಹರಣೆಗಳು ಇಲ್ಲಿವೆ. ನಿಮ್ಮ ವೈಯಕ್ತಿಕ ಅಧ್ಯಯನ ಅಥವಾ ಬೈಬಲ್‌ ವಾಚನಗಳು ನಿಮಗೆ ಪ್ರಾಮುಖ್ಯವಾಗಿರುವ ಕೆಲವು ಪ್ರಶ್ನೆಗಳನ್ನು ಎಬ್ಬಿಸಬಹುದು. ನೀವು ಯಾರಿಗಾದರೂ ಸಾಕ್ಷಿ ನೀಡುವಾಗ ಆ ವ್ಯಕ್ತಿಯು ಕೇಳುವ ಒಂದು ಪ್ರಶ್ನೆಗೆ ಉತ್ತರ ನೀಡಲು ನಿರ್ದಿಷ್ಟವಾದ ಮಾಹಿತಿ ನಿಮಗೆ ಬೇಕಾಗಿರಬಹುದು. ಅಥವಾ, ಒಂದು ಭಾಷಣ ನೀಡುವ ನೇಮಕವು ನಿಮಗೆ ದೊರೆತಿರಬಹುದು.

ಆ ಭಾಷಣದ ನೇಮಕವನ್ನು ಪರಿಗಣಿಸಿರಿ. ನಿಮ್ಮ ಭಾಷಣಕ್ಕಾಗಿ ನೇಮಿಸಲ್ಪಟ್ಟಿರುವ ವಿಷಯಭಾಗವು ತೀರ ಸಾಧಾರಣವೆಂದು ನಿಮಗನಿಸಬಹುದು. ನೀವು ಅದನ್ನು ಸ್ಥಳಿಕವಾಗಿ ಹೇಗೆ ಅನ್ವಯಿಸಬಲ್ಲಿರಿ? ಸಂಶೋಧನೆ ಮಾಡುವ ಮೂಲಕ ಅದನ್ನು ಸಾರವತ್ತಾಗಿ ಮಾಡಿರಿ. ನಿಮ್ಮ ಭಾಷಣಕ್ಕೆ ತಕ್ಕದಾಗಿರುವ ಒಂದೆರಡು ಅಂಕಿಅಂಶಗಳನ್ನೊ ಅಥವಾ ನಿಮ್ಮ ಸಭಿಕರ ಜೀವನಗಳ ಮೇಲೆ ಪ್ರಭಾವ ಬೀರುವಂಥ ಒಂದು ಉದಾಹರಣೆಯನ್ನೊ ಆಧಾರವಾಗಿ ನೀಡುವಲ್ಲಿ, ಸಾಧಾರಣವಾಗಿ ಕಂಡುಬಂದಿದ್ದಿರಬಹುದಾದ ವಿಷಯವು ಬೋಧಪ್ರದವಾಗಿಯೂ ಪ್ರಚೋದನಾತ್ಮಕವಾಗಿಯೂ ಪರಿಣಮಿಸುವುದು. ನೀವು ಸಂಶೋಧನೆ ನಡೆಸುತ್ತಿರುವ ಪ್ರಕಟಿತ ವಿಷಯಭಾಗವು ಲೋಕವ್ಯಾಪಕವಾಗಿ ಎಲ್ಲಾ ವಾಚಕರಿಗಾಗಿ ತಯಾರಿಸಿದ್ದಾಗಿರಬಹುದು. ಆದುದರಿಂದ, ನೀವು ಅದರಲ್ಲಿರುವ ವಿಷಯಾಂಶಗಳನ್ನು ಒಂದು ಸಭೆಗೆ ಇಲ್ಲವೆ ಒಬ್ಬ ವ್ಯಕ್ತಿಗೆ, ಹೆಚ್ಚಿನ ವಿವರಗಳೊಂದಿಗೆ ವಿಸ್ತರಿಸಿ, ದೃಷ್ಟಾಂತಿಸಿ, ಅನ್ವಯಿಸುವ ಆವಶ್ಯಕತೆಯಿದೆ. ಹಾಗಾದರೆ, ನೀವು ಹೇಗೆ ಮುಂದುವರಿಯಬೇಕು?

ಮಾಹಿತಿ ಪಡೆಯಲಿಕ್ಕೆ ಧಾವಿಸುವ ಮೊದಲು, ನಿಮ್ಮ ಸಭಿಕರನ್ನು ಪರಿಗಣಿಸಿರಿ. ಅವರಿಗೆ ಈಗಾಗಲೇ ಏನು ತಿಳಿದಿದೆ? ಯಾವುದನ್ನು ತಿಳಿಯುವ ಆವಶ್ಯಕತೆಯಿದೆ? ಆ ಬಳಿಕ ನಿಮ್ಮ ಉದ್ದೇಶವನ್ನು ಗುರುತಿಸಿಕೊಳ್ಳಿ. ಆ ಉದ್ದೇಶವು, ಒಂದು ವಿಷಯವನ್ನು ವಿವರಿಸುವುದಾಗಿದೆಯೊ? ಮನಗಾಣಿಸುವುದಾಗಿದೆಯೊ? ಯಾವುದಾದರೊಂದು ವಿಷಯವನ್ನು ತಪ್ಪೆಂದು ತೋರಿಸುವುದಾಗಿದೆಯೊ? ಇಲ್ಲವೆ ಪ್ರಚೋದಿಸುವುದಾಗಿದೆಯೊ? ವಿವರಿಸಬೇಕಾದರೆ ವಿಷಯವನ್ನು ಸ್ಪಷ್ಟಗೊಳಿಸಲಿಕ್ಕಾಗಿ ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಮೂಲ ನಿಜತ್ವಗಳನ್ನು ಅರ್ಥಮಾಡಿಕೊಳ್ಳಬಹುದಾದರೂ, ತಿಳಿಸಲಾಗಿರುವ ವಿಷಯವನ್ನು ಯಾವಾಗ ಮತ್ತು ಹೇಗೆ ಮಾಡಬೇಕೆಂಬುದರ ಬಗ್ಗೆ ನೀವು ಹೆಚ್ಚನ್ನು ಹೇಳುವ ಆವಶ್ಯಕತೆಯಿದ್ದೀತು. ಮನಗಾಣಿಸುವುದು ಅಂದರೆ ಒಂದು ವಿಷಯವು ಏಕೆ ಹಾಗಿದೆ ಎಂಬುದಕ್ಕೆ ಕಾರಣಗಳನ್ನು ಕೊಡುವುದರೊಂದಿಗೆ, ರುಜುವಾತನ್ನೂ ನೀಡುವುದನ್ನು ಕೇಳಿಕೊಳ್ಳುತ್ತದೆ. ತಪ್ಪೆಂದು ತೋರಿಸುವುದಕ್ಕೆ ಒಂದು ವಿವಾದದ ಎರಡೂ ಪಕ್ಷಗಳ ಪೂರ್ತಿ ಜ್ಞಾನದೊಂದಿಗೆ, ಉಪಯೋಗಿಸಲಾಗುವ ರುಜುವಾತಿನ ಜಾಗರೂಕ ವಿಶ್ಲೇಷಣೆ ಬೇಕಾಗುತ್ತದೆ. ಆದರೆ ನಾವು ಕೇವಲ ಶಕ್ತಿಯುತವಾದ ವಾಗ್ವಾದಗಳನ್ನು ಮಾಡಲು ಪ್ರಯತ್ನಿಸದೆ, ಆ ವಾಸ್ತವಾಂಶಗಳನ್ನು ದಯಾಭಾವದಿಂದ ತಿಳಿಯಪಡಿಸುವ ಮಾರ್ಗಗಳಿಗಾಗಿ ಹುಡುಕುತ್ತೇವೆ. ಪ್ರಚೋದಿಸುವುದರಲ್ಲಿ ಹೃದಯವನ್ನು ತಲಪುವ ವಿಷಯವು ಸೇರಿಕೊಂಡಿದೆ. ನಿಮ್ಮ ಸಭಿಕರಿಗೆ ಉತ್ತೇಜನ ನೀಡುವುದು ಮತ್ತು ಚರ್ಚಿಸಲ್ಪಡುತ್ತಿರುವ ವಿಷಯಕ್ಕನುಸಾರ ಕ್ರಿಯೆಗೈಯಲು ಅವರಿಗಿರುವ ಬಯಕೆಯನ್ನು ವರ್ಧಿಸುವುದೇ ಇದರ ಅರ್ಥವಾಗಿದೆ. ಕಷ್ಟಗಳ ಎದುರಿನಲ್ಲಿಯೂ ಅಂತಹ ನಿಲುವನ್ನು ತೆಗೆದುಕೊಂಡವರ ನಿಜ ಜೀವನ ಮಾದರಿಗಳು, ಹೃದಯವನ್ನು ತಲಪಲು ಸಹಾಯಮಾಡಬಲ್ಲವು.

ಈಗ ನೀವು ಪ್ರಾರಂಭಿಸಲು ಸಿದ್ಧರಾಗಿದ್ದೀರೊ? ಇನ್ನೂ ಇಲ್ಲ. ನಿಮಗೆ ಎಷ್ಟು ಮಾಹಿತಿಯು ಬೇಕಾಗಿದೆ ಎಂಬುದನ್ನು ಪರಿಗಣಿಸಿರಿ. ಸಮಯವು ಒಂದು ಪ್ರಾಮುಖ್ಯ ಅಂಶವಾಗಿರಬಹುದು. ನೀವು ಮಾಹಿತಿಯನ್ನು ಇತರರಿಗೆ ನೀಡಲಿರುವಲ್ಲಿ, ಅದನ್ನು ಮಾಡಲು ನಿಮಗೆ ಎಷ್ಟು ಸಮಯ ಲಭ್ಯವಿದೆ? ಐದು ನಿಮಿಷಗಳೊ? ನಲವತ್ತೈದು ನಿಮಿಷಗಳೊ? ಸಭಾ ಕೂಟಗಳಲ್ಲಿರುವಂತೆ ನಿಮಗೆ ಕೊಡಲಾಗುವ ಸಮಯವನ್ನು ಮೊದಲಾಗಿಯೇ ನಿರ್ಧರಿಸಲಾಗಿದೆಯೆ, ಇಲ್ಲವೆ ಬೈಬಲ್‌ ಅಧ್ಯಯನ ಅಥವಾ ಕುರಿಪಾಲನಾ ಭೇಟಿಯಲ್ಲಿರುವಂತೆ ಸಮಯವನ್ನು ಹೆಚ್ಚುಕಡಿಮೆ ಮಾಡಬಹುದೊ?

ಕೊನೆಯದಾಗಿ, ನಿಮಗೆ ಲಭ್ಯವಿರುವ ಸಂಶೋಧನಾ ಸಾಧನಗಳು ಯಾವುವು? ನಿಮ್ಮ ಮನೆಯಲ್ಲಿರುವ ಸಾಧನಗಳಿಗೆ ಕೂಡಿಸಿ, ನಿಮ್ಮ ರಾಜ್ಯ ಸಭಾಗೃಹದ ಲೈಬ್ರರಿಯಲ್ಲಿ ಇನ್ನೂ ಹೆಚ್ಚು ಸಾಹಿತ್ಯಗಳಿವೆಯೆ? ಯೆಹೋವನ ಸೇವೆಯಲ್ಲಿ ಅನೇಕ ವರುಷಗಳನ್ನು ಕಳೆದಿರುವ ಸಹೋದರರು, ತಮ್ಮ ಸಂಶೋಧನಾ ಸಾಹಿತ್ಯಗಳನ್ನು ನೀವು ಉಪಯೋಗಿಸುವಂತೆ ಅನುಮತಿಸಲು ಇಷ್ಟಪಟ್ಟಾರೊ? ನಿಮ್ಮ ಕ್ಷೇತ್ರದಲ್ಲಿ, ಅಗತ್ಯಬಿದ್ದಲ್ಲಿ ಪರಾಮರ್ಶನ ಗ್ರಂಥಗಳನ್ನು ಉಪಯೋಗಿಸಲು ಸಾಧ್ಯವಾಗುವ ಸಾರ್ವಜನಿಕ ಲೈಬ್ರರಿಯಿದೆಯೆ?

ನಮ್ಮ ಅತಿಮುಖ್ಯ ಸಂಶೋಧನಾ ಸಾಧನವಾದ ಬೈಬಲನ್ನು ಉಪಯೋಗಿಸುವುದು

ನಿಮ್ಮ ಸಂಶೋಧನಾ ಯೋಜನೆಯಲ್ಲಿ ಒಂದು ಶಾಸ್ತ್ರವಚನದ ಅರ್ಥವು ಸೇರಿರುವುದಾದರೆ, ಬೈಬಲನ್ನು ಉಪಯೋಗಿಸಿಯೇ ನಿಮ್ಮ ಯೋಜನೆಯನ್ನು ಆರಂಭಿಸಿರಿ.

ಪೂರ್ವಾಪರವನ್ನು ಪರೀಕ್ಷಿಸಿರಿ. ಸ್ವತಃ ಹೀಗೆ ಕೇಳಿಕೊಳ್ಳಿ: ‘ಈ ವಚನವು ಯಾರಿಗೆ ನಿರ್ದೇಶಿಸಲ್ಪಟ್ಟಿತ್ತು? ಈ ಹೇಳಿಕೆಯನ್ನು ಮಾಡುವಂತೆ ನಡೆಸಿದ ಪರಿಸ್ಥಿತಿಗಳ ಕುರಿತು ಅಥವಾ ಅದರಲ್ಲಿ ಒಳಗೂಡಿರುವ ಜನರ ಮನೋಭಾವದ ಕುರಿತು ಸುತ್ತಲಿನ ವಚನಗಳು ಏನು ಹೇಳುತ್ತವೆ?’ ಇಂತಹ ವಿವರಗಳು ಅನೇಕವೇಳೆ ಒಂದು ವಚನವನ್ನು ನಾವು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವವು ಮಾತ್ರವಲ್ಲ, ನೀವು ಯಾವ ಭಾಷಣದಲ್ಲಿ ಅದನ್ನು ಉಪಯೋಗಿಸುತ್ತೀರೊ ಅದಕ್ಕೆ ಅವು ಜೀವವನ್ನೂ ತುಂಬಿಸಬಲ್ಲವು.

ಉದಾಹರಣೆಗೆ, ಹೃದಯವನ್ನು ಸ್ಪರ್ಶಿಸಿ ಜೀವಿತಗಳನ್ನು ಪ್ರಭಾವಿಸಲು ದೇವರ ವಾಕ್ಯಕ್ಕಿರುವ ಶಕ್ತಿಯನ್ನು ತೋರಿಸಲು ಇಬ್ರಿಯ 4:12 ನ್ನು ಅನೇಕವೇಳೆ ಉಲ್ಲೇಖಿಸಲಾಗುತ್ತದೆ. ಅದು ಹೇಗೆಂಬ ವಿಷಯದಲ್ಲಿ ನಮಗಿರುವ ಗಣ್ಯತೆಗೆ ಅದರ ಪೂರ್ವಾಪರವು ಗಹನತೆಯನ್ನು ನೀಡುತ್ತದೆ. ಯೆಹೋವನು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ದೇಶವನ್ನು ಪ್ರವೇಶಿಸುವ ಮೊದಲು 40 ವರ್ಷಕಾಲ ಅರಣ್ಯದಲ್ಲಿ ಅಲೆದಾಡಿದ ಇಸ್ರಾಯೇಲ್ಯರ ಅನುಭವಗಳನ್ನು ಅದು ಚರ್ಚಿಸುತ್ತದೆ. (ಇಬ್ರಿ. 3:7–4:13) “ದೇವರ ವಾಕ್ಯವು,” ಅಂದರೆ ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಗೆ ಹೊಂದಿಕೆಯಲ್ಲಿ ಅವರನ್ನು ವಿಶ್ರಾಂತಿಯ ಸ್ಥಳಕ್ಕೆ ಕೊಂಡೊಯ್ಯುವ ಆತನ ವಾಗ್ದಾನವು ಸತ್ತಿರಲಿಲ್ಲ; ಅದು ಸಜೀವವಾಗಿದ್ದು, ನೆರವೇರಿಕೆಯ ಕಡೆಗೆ ಮುಂದುವರಿಯುತ್ತಿತ್ತು. ಅದರಲ್ಲಿ ತಮಗೆ ನಂಬಿಕೆಯಿದೆಯೆಂದು ತೋರಿಸಲು ಇಸ್ರಾಯೇಲ್ಯರಿಗೆ ಸಕಲ ಕಾರಣಗಳೂ ಇದ್ದವು. ಆದರೆ, ಯೆಹೋವನು ಅವರನ್ನು ಐಗುಪ್ತದಿಂದ ಸೀನಾಯಿ ಬೆಟ್ಟಕ್ಕೆ ಮತ್ತು ಅಲ್ಲಿಂದ ವಾಗ್ದಾನ ದೇಶಕ್ಕೆ ನಡೆಸಿದ ಸಮಯದಲ್ಲಿ ಅವರು ಪದೇ ಪದೇ ನಂಬಿಕೆಯ ಕೊರತೆಯನ್ನು ತೋರಿಸಿದರು. ಹೀಗೆ, ದೇವರು ತನ್ನ ವಾಕ್ಯವನ್ನು ನೆರವೇರಿಸಿದ ವಿಧಕ್ಕೆ ಅವರು ತೋರಿಸಿದ ಪ್ರತಿಕ್ರಿಯೆಯ ಮೂಲಕ ಅವರ ಹೃದಯಗಳಲ್ಲಿ ಏನಿತ್ತೊ ಅದು ಪ್ರತ್ಯಕ್ಷವಾಯಿತು. ಇದೇ ರೀತಿಯಲ್ಲಿ ನಮ್ಮ ದಿನಗಳಲ್ಲಿ ದೇವರ ವಾಗ್ದಾನದ ವಾಕ್ಯವು ಮನುಷ್ಯರ ಹೃದಯದಲ್ಲಿ ಏನಿದೆಯೊ ಅದನ್ನು ಹೊರಗೆಡಹುತ್ತದೆ.

ಅಡ್ಡ ಉಲ್ಲೇಖಗಳನ್ನು (ಕ್ರಾಸ್‌-ರೆಫರೆನ್ಸ್‌) ಪರೀಕ್ಷಿಸಿ ನೋಡಿರಿ. ಕೆಲವು ಬೈಬಲುಗಳಲ್ಲಿ ಸಹಾಯಕರವಾಗಿರುವ ಅಡ್ಡ ಉಲ್ಲೇಖಗಳಿವೆ. ಈ ವಿಷಯದಲ್ಲಿ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲ್‌ ಒಂದು ಒಳ್ಳೇ ಉದಾಹರಣೆಯಾಗಿದೆ. ಸತ್ಯವೇದವು ಬೈಬಲ್‌ ಸಹ ಒಂದಿಷ್ಟು ಅಡ್ಡ ಉಲ್ಲೇಖಗಳನ್ನು ಒಳಗೊಂಡಿದೆ. ಉದಾಹರಣೆಗೆ, 1 ಪೇತ್ರ 3:6 ರನ್ನು ಗಮನಿಸಿರಿ; ಅಲ್ಲಿ ಸಾರಳನ್ನು ಕ್ರೈಸ್ತ ಪತ್ನಿಯರು ಅನುಕರಿಸಲು ಯೋಗ್ಯಳಾದ ಮಾದರಿಯಾಗಿ ತೋರಿಸಲಾಗಿದೆ. ಕೊಡಲ್ಪಟ್ಟಿರುವ ಅಡ್ಡ ಉಲ್ಲೇಖವಾದ ಆದಿಕಾಂಡ 18:12 ಅದನ್ನು ದೃಢಪಡಿಸುತ್ತದೆ. ಅಲ್ಲಿ ಸಾರಳು ಅಬ್ರಹಾಮನನ್ನು ಯಜಮಾನನೆಂದು “ತನ್ನೊಳಗೆ” ಹೇಳಿಕೊಂಡಳೆಂದು ತೋರಿಸುತ್ತದೆ. ಹಾಗಾದರೆ, ಆಕೆಯ ಅಧೀನತೆಯು ಹೃತ್ಪೂರ್ವಕವಾದುದಾಗಿತ್ತು. ಇಂತಹ ಒಳನೋಟಗಳಲ್ಲದೆ, ಅಡ್ಡ ಉಲ್ಲೇಖಗಳು ನಿಮ್ಮನ್ನು ಒಂದು ಬೈಬಲ್‌ ಪ್ರವಾದನೆಯ ಇಲ್ಲವೆ ಧರ್ಮಶಾಸ್ತ್ರದ ಒಡಂಬಡಿಕೆಯ ನಮೂನೆಯ ನೆರವೇರಿಕೆಯನ್ನು ತೋರಿಸುವ ವಚನಗಳಿಗೆ ನಡೆಸಬಹುದು. ಆದರೆ ಕೆಲವು ಅಡ್ಡ ಉಲ್ಲೇಖಗಳು ಅಂತಹ ವಿವರಗಳನ್ನು ಕೊಡಲಿಕ್ಕಾಗಿ ಇರುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ. ಅವು ಕೇವಲ ಸಮನಾಂತರ ವಿಷಯಗಳು ಅಥವಾ ಜೀವನಚರಿತ್ರೆ ಇಲ್ಲವೆ ಭೌಗೋಳಿಕ ಮಾಹಿತಿಗಳನ್ನು ಸೂಚಿಸಬಹುದು.

ಬೈಬಲ್‌ ಕನ್‌ಕಾರ್ಡೆನ್ಸ್‌ನ ಸಹಾಯದಿಂದ ಹುಡುಕುವುದು. ಬೈಬಲ್‌ ಕನ್‌ಕಾರ್ಡೆನ್ಸ್‌ ಎಂಬುದು ಇಂಗ್ಲಿಷ್‌ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಪದಗಳ ಅಕ್ಷರಮಾಲೆಗನುಸಾರವಾದ ವಿಷಯಸೂಚಿಯಾಗಿದೆ. ನೀವು ಯಾವುದರ ಕುರಿತು ಸಂಶೋಧನೆ ನಡೆಸುತ್ತಿದ್ದೀರೊ ಆ ವಿಷಯವಸ್ತುವಿಗೆ ಸಂಬಂಧಪಟ್ಟ ಶಾಸ್ತ್ರವಚನಗಳನ್ನು ಹುಡುಕಲು ಅದು ನಿಮಗೆ ಸಹಾಯಮಾಡಬಲ್ಲದು. ಅವನ್ನು ನೀವು ಸಂಶೋಧಿಸುತ್ತ ಹೋಗುವಾಗ, ನೀವು ಸಹಾಯಕರವಾದ ಇನ್ನಿತರ ವಿವರಗಳನ್ನು ಕಲಿತುಕೊಳ್ಳುವಿರಿ. ಆಗ ನೀವು ದೇವರ ವಾಕ್ಯದಲ್ಲಿರುವ ಸತ್ಯದ ‘ಮಾದರಿಯ’ ರುಜುವಾತನ್ನು ನೋಡುವಿರಿ. (2 ತಿಮೊ. 1:13) ನೂತನ ಲೋಕ ಭಾಷಾಂತರದಲ್ಲಿ (ಇಂಗ್ಲಿಷ್‌) “ಬೈಬಲ್‌ ವರ್ಡ್ಸ್‌ ಇಂಡೆಕ್ಸ್ಡ್‌”ನ ಮೂಲಭೂತ ಪಟ್ಟಿಯಿದೆ. ಮತ್ತು ಕಾಂಪ್ರಿಹೆನ್ಸಿವ್‌ ಕನ್‌ಕಾರ್ಡೆನ್ಸ್‌ ಇದಕ್ಕಿಂತ ಹೆಚ್ಚು ವಿಸ್ತೃತವಾಗಿದೆ. ಇದು ನೀವು ಓದುವಂಥ ಭಾಷೆಯಲ್ಲಿ ಲಭ್ಯವಿರುವಲ್ಲಿ, ಅದು ಬೈಬಲಿನ ಪ್ರತಿಯೊಂದು ಪ್ರಧಾನ ಪದಗಳಿರುವ ಎಲ್ಲ ಶಾಸ್ತ್ರವಚನಗಳಿಗೆ ನಿಮ್ಮನ್ನು ನಡೆಸುವುದು.

ಬೇರೆ ಸಂಶೋಧನಾ ಸಾಧನಗಳನ್ನು ಉಪಯೋಗಿಸಲು ಕಲಿಯುವುದು

ಪುಟ 33ರಲ್ಲಿರುವ ಚೌಕವು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸಿರುವ ಅನೇಕ ಸಂಶೋಧನಾ ಸಾಧನಗಳನ್ನು ಹೆಸರಿಸುತ್ತದೆ. (ಮತ್ತಾ. 24:45-47) ಅಲ್ಲಿ ಕೊಡಲ್ಪಟ್ಟಿರುವ ಅನೇಕ ಸಾಧನಗಳಲ್ಲಿ ಒಂದೊಂದು ಪರಿವಿಡಿಯಿದೆ, ಮತ್ತು ಅನೇಕ ಪುಸ್ತಕಗಳಿಗೆ ಹಿಂಬದಿಯಲ್ಲಿ ನಿರ್ದಿಷ್ಟ ಮಾಹಿತಿಯನ್ನು ಪತ್ತೆಹಚ್ಚಲು ಅನುಕೂಲವಾಗುವಂತಹ ರೀತಿಯಲ್ಲಿ ವಿನ್ಯಾಸಿಸಲ್ಪಟ್ಟಿರುವ ಒಂದು ವಿಷಯಸೂಚಿಯಿದೆ. ಪ್ರತಿ ವರ್ಷಾಂತ್ಯದಲ್ಲಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆ ಇವೆರಡರಲ್ಲಿಯೂ ಆ ವರ್ಷದ ಲೇಖನಗಳ ಸಂಗ್ರಹದ ವಿಷಯವಸ್ತುಸೂಚಿಯನ್ನು (ಸಬ್ಜೆಕ್ಟ್‌ ಇಂಡೆಕ್ಸ್‌) ಪ್ರಕಟಿಸಲಾಗುತ್ತದೆ.

ಈ ಬೈಬಲ್‌ ಅಧ್ಯಯನ ಪ್ರಕಾಶನಗಳಲ್ಲಿ ಯಾವ ರೀತಿಯ ಮಾಹಿತಿಯು ಕೊಡಲ್ಪಟ್ಟಿರುತ್ತದೆ ಎಂಬುದರ ಬಗ್ಗೆ ಚಿರಪರಿಚಿತರಾಗಿರುವುದು, ನಮ್ಮ ಸಂಶೋಧನಾ ವಿಧಾನವನ್ನು ಚುರುಕುಗೊಳಿಸಬಲ್ಲದು. ಉದಾಹರಣೆಗೆ, ನಿಮಗೆ ಪ್ರವಾದನೆ, ಸಿದ್ಧಾಂತ, ಕ್ರೈಸ್ತ ನಡತೆ ಅಥವಾ ಬೈಬಲಿನ ಮೂಲತತ್ತ್ವಗಳ ಅನ್ವಯದ ಕುರಿತು ತಿಳಿಯುವ ಅಪೇಕ್ಷೆಯಿದೆ ಎಂದಿಟ್ಟುಕೊಳ್ಳಿ. ನೀವು ತಿಳಿಯಲು ಬಯಸುವ ವಿಷಯವು ಕಾವಲಿನಬುರುಜು ಪತ್ರಿಕೆಯಲ್ಲಿರುವುದು ಸಂಭವನೀಯ. ಎಚ್ಚರ! ಪತ್ರಿಕೆಯಲ್ಲಿ, ಈಗ ನಡೆಯುತ್ತಿರುವ ಘಟನೆಗಳು, ಸಮಕಾಲೀನ ಸಮಸ್ಯೆಗಳು, ಧರ್ಮ, ವಿಜ್ಞಾನ ಮತ್ತು ವಿವಿಧ ದೇಶಗಳ ಜನರ ಕುರಿತಾದ ಲೇಖನಗಳಿವೆ. ಸುವಾರ್ತಾ ಪುಸ್ತಕಗಳಲ್ಲಿರುವ ಪ್ರತಿಯೊಂದು ವೃತ್ತಾಂತದ ಕುರಿತಾದ ವ್ಯಾಖ್ಯಾನಗಳು, ಕಾಲಾನುಕ್ರಮವಾಗಿ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕದಲ್ಲಿ ಕಂಡುಬರುತ್ತವೆ. ಸಂಪೂರ್ಣವಾದ ಬೈಬಲ್‌ ಪುಸ್ತಕಗಳ ಪ್ರತಿಯೊಂದು ವಚನದ ಚರ್ಚೆಯು, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!, ಮತ್ತು ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು ಎಂಬ ಪುಸ್ತಕದ ಎರಡು ಸಂಪುಟಗಳಲ್ಲಿ ಕಂಡುಬರುತ್ತದೆ. ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಕ್ಷೇತ್ರ ಸೇವೆಯಲ್ಲಿ ಸಾಮಾನ್ಯವಾಗಿ ಕೇಳಲ್ಪಡುವ ನೂರಾರು ಬೈಬಲ್‌ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನು ನೀವು ಕಂಡುಕೊಳ್ಳುವಿರಿ. ಯುವ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಾಗೂ ಅವುಗಳಿಗಿರುವ ಪರಿಹಾರಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನು ನೋಡಿ. ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಚರಿತ್ರೆಯ ಸವಿವರವಾದ ವೃತ್ತಾಂತವು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಪುಸ್ತಕದಲ್ಲಿದೆ. ಭೂವ್ಯಾಪಕ ಸುವಾರ್ತಾ ಸಾರುವಿಕೆಯ ಸದ್ಯದ ಬೆಳವಣಿಗೆಯ ಕುರಿತಾದ ವರದಿಗಾಗಿ, ಇತ್ತೀಚಿನ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ವನ್ನು ಪರೀಕ್ಷಿಸಿರಿ. ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಎಂಬುದು, ಒಂದು ಬೈಬಲ್‌ ವಿಶ್ವಕೋಶ ಮತ್ತು ಭೂಪಟದ ಪುಸ್ತಕವಾಗಿದೆ. ನಿಮಗೆ ಬೈಬಲಿಗೆ ಸಂಬಂಧಿಸಿದ ಜನರು, ಸ್ಥಳಗಳು, ವಸ್ತುಗಳು, ಭಾಷೆಗಳು ಅಥವಾ ಐತಿಹಾಸಿಕ ಘಟನೆಗಳ ಕುರಿತಾದ ವಿವರಗಳ ಅಗತ್ಯವಿರುವಲ್ಲಿ ಇದೊಂದು ಅತ್ಯುತ್ತಮ ಮೂಲವಾಗಿದೆ.

“ವಾಚ್‌ ಟವರ್‌ ಪ್ರಕಾಶನಗಳ ವಿಷಯಸೂಚಿ.” 20ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗಿರುವ ಈ ವಿಷಯಸೂಚಿಯು (ಇಂಡೆಕ್ಸ್‌) ನಮ್ಮ ಪ್ರಕಾಶನಗಳಲ್ಲಿರುವ ವಿವಿಧ ಪುಸ್ತಕಗಳಲ್ಲಿರುವ ಮಾಹಿತಿಗೆ ನಿಮ್ಮನ್ನು ನಡೆಸುವುದು. ಇದು ವಿಷಯವಸ್ತುಸೂಚಿ (ಸಬ್ಜೆಕ್ಟ್‌ ಇಂಡೆಕ್ಸ್‌) ಮತ್ತು ವಚನಸೂಚಿ (ಸ್ಕ್ರಿಪ್ಚರ್‌ ಇಂಡೆಕ್ಸ್‌) ಎಂಬ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ವಿಷಯವಸ್ತುಸೂಚಿಯನ್ನು ಉಪಯೋಗಿಸಲು, ನೀವು ಪರೀಕ್ಷಿಸಲು ಬಯಸುವ ವಿಷಯವಸ್ತುವನ್ನು ಪ್ರತಿನಿಧಿಸುವ ಒಂದು ಪದವನ್ನು ಹುಡುಕಿ ತೆಗೆಯಿರಿ. ವಚನಸೂಚಿಯನ್ನು ಉಪಯೋಗಿಸಲು, ನೀವು ಹೆಚ್ಚು ತಿಳಿವಳಿಕೆಯನ್ನು ಪಡೆಯಲು ಬಯಸುವ ವಚನವನ್ನು, ವಚನಗಳ ಪಟ್ಟಿಯಿಂದ ಹುಡುಕಿ ತೆಗೆಯಿರಿ. ಆ ವಿಷಯಸೂಚಿ ಆವರಿಸುವ ವರುಷಗಳಲ್ಲಿ, ನಿಮ್ಮ ಭಾಷೆಯಲ್ಲಿ ಆ ವಿಷಯವಸ್ತು ಅಥವಾ ವಚನದ ಮೇಲೆ ಏನಾದರೂ ಪ್ರಕಾಶಿಸಲ್ಪಟ್ಟಿರುವಲ್ಲಿ, ಅದರಲ್ಲಿ ಅನೇಕ ಉಲ್ಲೇಖಗಳ ಪಟ್ಟಿಯನ್ನು ನೀವು ಕಂಡುಕೊಳ್ಳುವಿರಿ. ಕೊಡಲ್ಪಟ್ಟಿರುವ ಪುಸ್ತಕಗಳ ಹೆಸರುಗಳ ಸಂಕ್ಷಿಪ್ತ ರೂಪವನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ವಿಷಯಸೂಚಿಯ ಮೊದಲ ಪುಟದಲ್ಲಿ ಕೊಟ್ಟಿರುವ ಕೀಲಿ ಕೈಯನ್ನು ಉಪಯೋಗಿಸಿರಿ. (ಉದಾಹರಣೆಗೆ, ಆ ಸಹಾಯದ ಮೂಲಕ, w99 3/1 15 ಎಂಬುದು 1999 ರ ಕಾವಲಿನಬುರುಜು, ಮಾರ್ಚ್‌ 1 ರ ಸಂಚಿಕೆ, ಪುಟ 15 ನ್ನು ಸೂಚಿಸುತ್ತದೆಂದು ನೀವು ತಿಳಿಯುವಿರಿ.) “ಕ್ಷೇತ್ರ ಶುಶ್ರೂಷಾ ಅನುಭವಗಳು” ಮತ್ತು “ಯೆಹೋವನ ಸಾಕ್ಷಿಗಳ ಜೀವನ ಕಥೆಗಳು” ಎಂಬಂಥ ಮುಖ್ಯ ಶಿರೋನಾಮಗಳು, ಸಭೆಗಾಗಿ ಪ್ರಚೋದನಾತ್ಮಕ ಭಾಷಣಗಳನ್ನು ತಯಾರಿಸುವುದರಲ್ಲಿ ಪ್ರಯೋಜನಕರವಾಗಿರಬಲ್ಲವು.

ಸಂಶೋಧನೆಯಲ್ಲಿ ನಾವು ತೀರ ತಲ್ಲೀನರಾಗಿಹೋಗಬಹುದಾದ ಕಾರಣ, ಸದ್ಯದ ವಿಷಯಕ್ಕೆ ಸಂಬಂಧಿಸದಂಥ ವಿಷಯಗಳಿಂದಾಗಿ ಅಪಕರ್ಷಿತರಾಗದಂತೆ ಜಾಗ್ರತೆ ವಹಿಸಿರಿ. ನಿಮಗೆ ಈಗ ಅಗತ್ಯವಿರುವ ವಿಷಯವನ್ನು ಹುಡುಕುವ ನಿಮ್ಮ ಉದ್ದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ವಿಷಯಸೂಚಿಯು ಒಂದು ನಿರ್ದಿಷ್ಟ ಮೂಲ ವಿಷಯಕ್ಕೆ ನಿಮ್ಮನ್ನು ನಡೆಸುವಲ್ಲಿ, ಆ ಪುಟಕ್ಕೆ(ಗಳಿಗೆ) ಹೋಗಿ ಆವಶ್ಯಕವಾಗಿರುವ ವಿಷಯಗಳಿಗೆ ನಿಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ ಉಪಶೀರ್ಷಿಕೆಗಳು ಮತ್ತು ಪ್ಯಾರಗ್ರಾಫ್‌ಗಳ ಆರಂಭದ ವಾಕ್ಯಗಳನ್ನು ಉಪಯೋಗಿಸಿರಿ. ಒಂದು ಪ್ರತ್ಯೇಕ ಬೈಬಲ್‌ ವಚನದ ಅರ್ಥವನ್ನು ನೀವು ಹುಡುಕುತ್ತಿರುವಲ್ಲಿ, ಪ್ರಥಮವಾಗಿ ನಿಮಗೆ ಸೂಚಿಸಲ್ಪಟ್ಟಿರುವ ಪುಟದಲ್ಲಿರುವ ಉಲ್ಲೇಖವನ್ನು ಕಂಡುಹಿಡಿಯಿರಿ. ಬಳಿಕ ಅದರ ಸುತ್ತಲಿರುವ ಹೇಳಿಕೆಗಳನ್ನು ಪರೀಕ್ಷಿಸಿರಿ.

ಸಿಡಿ-ರಾಮ್‌ನಲ್ಲಿ “ವಾಚ್‌ಟವರ್‌ ಲೈಬ್ರರಿ.” ನಿಮಗೆ ಕಂಪ್ಯೂಟರನ್ನು ಉಪಯೋಗಿಸುವ ಸಂದರ್ಭವಿರುವಲ್ಲಿ, ಸಿಡಿ-ರಾಮ್‌ನಲ್ಲಿರುವ ವಾಚ್‌ಟವರ್‌ ಲೈಬ್ರರಿ ಅನ್ನು ಉಪಯೋಗಿಸುವುದರಿಂದ ನೀವು ಪ್ರಯೋಜನ ಪಡೆಯಬಹುದು. ಇದು ನಮ್ಮ ಅನೇಕಾನೇಕ ಪ್ರಕಾಶನಗಳ ಸಂಗ್ರಹವನ್ನು ಒಳಗೊಂಡಿದೆ. ಅದರಲ್ಲಿರುವ ಸುಲಭವಾಗಿ ಉಪಯೋಗಿಸಬಹುದಾದ ಸರ್ಚ್‌ ಪ್ರೋಗ್ರ್ಯಾಮ್‌, ವಾಚ್‌ಟವರ್‌ ಲೈಬ್ರರಿಯಲ್ಲಿರುವ ಯಾವುದೇ ಪದವನ್ನು, ಪದಸರಣಿಯನ್ನು ಅಥವಾ ಶಾಸ್ತ್ರವಚನದ ಉಲ್ಲೇಖವನ್ನು ಹುಡುಕಲು ಸಾಧ್ಯಮಾಡುತ್ತದೆ. ನಿಮ್ಮ ಭಾಷೆಯಲ್ಲಿ ಈ ಸಂಶೋಧನಾ ಸಾಧನವು ಇಲ್ಲದಿರುವುದಾದರೂ, ನಿಮಗೆ ಪರಿಚಿತವಾಗಿದ್ದು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿರುವ ಅಂತಾರಾಷ್ಟ್ರೀಯ ಭಾಷೆಯೊಂದರ ಮೂಲಕ ನೀವು ಅದರಿಂದ ಪ್ರಯೋಜನ ಪಡೆಯಬಹುದು.

ಬೇರೆ ದೇವಪ್ರಭುತ್ವಾತ್ಮಕ ಲೈಬ್ರರಿಗಳು

ತಿಮೊಥೆಯನಿಗೆ ಬರೆದ ತನ್ನ ಎರಡನೆಯ ಪ್ರೇರಿತ ಪತ್ರದಲ್ಲಿ ಪೌಲನು, “ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದಗಳನ್ನೂ” ರೋಮಿಗೆ ತರುವಂತೆ ಆ ಯೌವನಸ್ಥನನ್ನು ಕೇಳಿಕೊಂಡನು. (2 ತಿಮೊ. 4:12, 13) ಪೌಲನು ಕೆಲವು ಬರವಣಿಗೆಗಳನ್ನು ಅಮೂಲ್ಯವಾಗಿ ಪರಿಗಣಿಸುತ್ತಾ ಅವುಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದನು. ನೀವೂ ಹಾಗೆ ಮಾಡಬಲ್ಲಿರಿ. ನೀವು ಕಾವಲಿನಬುರುಜು, ಎಚ್ಚರ!, ಮತ್ತು ನಮ್ಮ ರಾಜ್ಯದ ಸೇವೆ ಇವುಗಳ ಸ್ವಂತ ಪ್ರತಿಗಳನ್ನು, ಸಭಾ ಕೂಟಗಳಲ್ಲಿ ಅವುಗಳನ್ನು ಚರ್ಚಿಸಿಯಾದ ಮೇಲೆಯೂ ಜೋಪಾನವಾಗಿ ಇಡುತ್ತೀರೊ? ಹಾಗೆ ಇಡುವಲ್ಲಿ, ನಿಮ್ಮ ಬಳಿಯಿರುವ ಬೇರೆ ಕ್ರೈಸ್ತ ಪ್ರಕಾಶನಗಳೊಂದಿಗೆ ಇವೂ ನಿಮಗೆ ಸಂಶೋಧನಾ ಸಾಧನಗಳಾಗಿ ಉಪಯೋಗಿಸಲು ಲಭ್ಯವಿರುವವು. ಅಧಿಕಾಂಶ ಸಭೆಗಳು ರಾಜ್ಯ ಸಭಾಗೃಹದಲ್ಲಿ ದೇವಪ್ರಭುತ್ವಾತ್ಮಕ ಸಾಹಿತ್ಯಗಳ ಒಂದು ಲೈಬ್ರರಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತವೆ. ಇದು ಇಡೀ ಸಭೆಯ ಪ್ರಯೋಜನಾರ್ಥವಾಗಿ, ಅಂದರೆ ಅವರು ರಾಜ್ಯ ಸಭಾಗೃಹದಲ್ಲಿರುವಾಗ ಉಪಯೋಗಿಸಲಿಕ್ಕಾಗಿ ಇದೆ.

ವೈಯಕ್ತಿಕ ಫೈಲುಗಳನ್ನು ಇಟ್ಟುಕೊಳ್ಳಿರಿ

ನೀವು ಮಾತಾಡುವಾಗ ಮತ್ತು ಕಲಿಸುವಾಗ ಉಪಯೋಗಿಸಶಕ್ತರಾಗುವಂತೆ ಆಸಕ್ತಿಯ ವಿಷಯಗಳಿಗೆ ಎಚ್ಚರವಾಗಿರಿ. ಒಂದು ವಾರ್ತಾಪತ್ರದಲ್ಲಿ ಅಥವಾ ಪತ್ರಿಕೆಯಲ್ಲಿ, ನೀವು ಶುಶ್ರೂಷೆಯಲ್ಲಿ ಉಪಯೋಗಿಸಬಹುದಾದ ಒಂದು ಸುದ್ದಿಯೊ, ಸಂಖ್ಯಾಸಂಗ್ರಹಣವೊ, ಅಥವಾ ದೃಷ್ಟಾಂತವೊ ದೊರೆಯುವಲ್ಲಿ, ಅದನ್ನು ಕತ್ತರಿಸಿಡಿರಿ ಅಥವಾ ಅದರ ನಕಲು ಪ್ರತಿಯನ್ನು ಮಾಡಿ ಇಡಿರಿ. ತಾರೀಖು, ಪತ್ರಿಕೆಯ ಹೆಸರು, ಪ್ರಾಯಶಃ ಲೇಖಕನ ಅಥವಾ ಪ್ರಕಾಶಕನ ಹೆಸರನ್ನು ಅದರಲ್ಲಿ ಸೇರಿಸಿರಿ. ಇತರರಿಗೆ ಸತ್ಯವನ್ನು ವಿವರಿಸಲು ಸಹಾಯವಾಗುವಂತೆ, ಸಭಾ ಕೂಟಗಳಲ್ಲಿ ಹೇಳಲಾಗುವ ತರ್ಕಗಳನ್ನು ಮತ್ತು ದೃಷ್ಟಾಂತಗಳನ್ನು ಬರೆದಿಟ್ಟುಕೊಳ್ಳಿ. ನೀವು ಒಂದು ಒಳ್ಳೆಯ ದೃಷ್ಟಾಂತದ ಕುರಿತು ಆಲೋಚಿಸಿರುವುದಾದರೂ ಅದನ್ನು ಆ ಕೂಡಲೇ ಉಪಯೋಗಿಸಲು ಸಂದರ್ಭ ಸಿಗದೆ ಹೋಗಿದ್ದುಂಟೊ? ಅದನ್ನು ಬರೆದಿಟ್ಟು, ಒಂದು ಫೈಲಿನಲ್ಲಿಡಿರಿ. ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಸೇರಿ ಸ್ವಲ್ಪ ಸಮಯವಾಗುವುದರೊಳಗೆ ಅನೇಕ ಭಾಷಣಗಳನ್ನು ತಯಾರಿಸಿರುವಿರಿ. ಈ ಭಾಷಣಗಳಿಗಾಗಿ ನೀವು ಬರೆದಿಟ್ಟ ಟಿಪ್ಪಣಿಗಳನ್ನು ಬಿಸಾಡಿಬಿಡುವ ಬದಲು, ಅವನ್ನು ಜೋಪಾನವಾಗಿ ಇಟ್ಟುಕೊಳ್ಳಿರಿ. ನೀವು ಮಾಡಿರುವ ಸಂಶೋಧನೆಯು ಸಮಯಾನಂತರ ಉಪಯುಕ್ತವಾಗಿ ಪರಿಣಮಿಸಬಹುದು.

ಜನರೊಂದಿಗೆ ಮಾತಾಡಿರಿ

ಜನರು ಮಾಹಿತಿಯ ಸಮೃದ್ಧ ಮೂಲವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಲೂಕನು ತನ್ನ ಸುವಾರ್ತಾ ವೃತ್ತಾಂತವನ್ನು ಸಂಗ್ರಹಿಸುತ್ತಿದ್ದಾಗ, ಪ್ರತ್ಯಕ್ಷ ಸಾಕ್ಷಿಗಳನ್ನು ಪ್ರಶ್ನಿಸಿ ಅವನು ಹೆಚ್ಚಿನ ಮಾಹಿತಿಯನ್ನು ಶೇಖರಿಸಿದ್ದಿರಬೇಕು ಎಂಬುದು ಸುವ್ಯಕ್ತ. (ಲೂಕ 1:1-4) ನೀವು ಸಂಶೋಧಿಸಲು ಪ್ರಯತ್ನಿಸುತ್ತಿರುವ ಒಂದು ವಿಷಯದ ಮೇಲೆ ಪ್ರಾಯಶಃ ಜೊತೆ ಕ್ರೈಸ್ತನೊಬ್ಬನು ಬೆಳಕು ಬೀರಬಹುದು. ಎಫೆಸ 4:8, 11-16 ಕ್ಕನುಸಾರ, ನಾವು “ದೇವಕುಮಾರನ ವಿಷಯವಾದ ಜ್ಞಾನ”ದಲ್ಲಿ ಬೆಳೆಯುವಂತೆ ನಮಗೆ ಸಹಾಯಮಾಡಲಿಕ್ಕಾಗಿ ಕ್ರಿಸ್ತನು ‘ಮನುಷ್ಯರಲ್ಲಿ ದಾನಗಳನ್ನು’ ಉಪಯೋಗಿಸುತ್ತಾನೆ. ದೇವರನ್ನು ಸೇವಿಸುವುದರಲ್ಲಿ ಅನುಭವವಿರುವವರನ್ನು ಪ್ರಶ್ನಿಸುವುದು, ಉಪಯುಕ್ತವಾದ ವಿಚಾರಗಳನ್ನು ಹೊರತಂದೀತು. ಜನರೊಡನೆ ನಡೆಸುವ ಮಾತುಕತೆಯು, ಅವರೇನು ಯೋಚಿಸುತ್ತಿದ್ದಾರೆಂಬುದನ್ನು ಸಹ ಹೊರಗೆಡಹಬಹುದು ಮತ್ತು ಇದು ನಿಜವಾಗಿಯೂ ಪ್ರಾಯೋಗಿಕವಾದ ವಿಷಯವನ್ನು ನೀವು ತಯಾರಿಸುವಂತೆ ಸಹಾಯಮಾಡಬಲ್ಲದು.

ಪರಿಣಾಮಗಳ ಮೌಲ್ಯಮಾಪನ ಮಾಡಿರಿ

ಗೋಧಿಯ ಬೆಳೆಯನ್ನು ಕೊಯ್ದ ಬಳಿಕ, ಧಾನ್ಯವನ್ನು ಹೊಟ್ಟಿನಿಂದ ಬೇರ್ಪಡಿಸುವ ಅಗತ್ಯವಿದೆ. ನಿಮ್ಮ ಸಂಶೋಧನೆಯ ಫಲದ ವಿಷಯದಲ್ಲಿಯೂ ಹೀಗೆಯೇ. ಅದು ಉಪಯೋಗಕ್ಕೆ ಸಿದ್ಧವಾಗುವ ಮೊದಲು, ನೀವು ಬೆಲೆಯುಳ್ಳದ್ದನ್ನು ಅನಾವಶ್ಯಕವಾದುದರಿಂದ ಪ್ರತ್ಯೇಕಿಸುವುದು ಅಗತ್ಯ.

ಆ ಮಾಹಿತಿಯನ್ನು ನೀವು ಒಂದು ಭಾಷಣದಲ್ಲಿ ಉಪಯೋಗಿಸುವಲ್ಲಿ, ಹೀಗೆ ಕೇಳಿಕೊಳ್ಳಿರಿ: ‘ನಾನು ಉಪಯೋಗಿಸಲು ಬಯಸುವ ಅಂಶವು ನನ್ನ ಭಾಷಣದ ವಿಷಯವಸ್ತುವಿಗೆ ಸಾರ್ಥಕವಾದ ಯಾವುದನ್ನಾದರೂ ನಿಜವಾಗಿಯೂ ಕೂಡಿಸುತ್ತದೋ? ಅಥವಾ, ಈ ವಿಷಯವು ಆಸಕ್ತಿಕರವಾಗಿದೆಯಾದರೂ ನಾನು ಯಾವುದರ ಕುರಿತು ಮಾತಾಡಬೇಕಾಗಿದೆಯೋ ಆ ವಿಷಯವಸ್ತುವಿನಿಂದ ಇದು ಗಮನವನ್ನು ಬೇರೆ ಕಡೆಗೆ ಸೆಳೆಯುತ್ತದೋ?’ ಸದ್ಯದ ಘಟನೆಗಳನ್ನು ಅಥವಾ ಸದಾ ಬದಲಾಗುತ್ತಿರುವ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ವಿಷಯಗಳನ್ನು ನೀವು ಉಪಯೋಗಿಸಲು ಯೋಚಿಸುತ್ತಿರುವುದಾದರೆ, ಆ ಮಾಹಿತಿಯು ಸದ್ಯೋಚಿತವಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿ. ನಮ್ಮ ಹಳೆಯ ಪ್ರಕಾಶನಗಳಲ್ಲಿದ್ದ ಕೆಲವು ವಿಷಯಗಳು ಈಗ ಸದ್ಯೋಚಿತಗೊಳಿಸಲ್ಪಟ್ಟಿರಬಹುದು ಎಂಬುದನ್ನು ಗ್ರಹಿಸಿ, ತೀರ ಇತ್ತೀಚೆಗೆ ಪ್ರಕಟಿಸಲ್ಪಟ್ಟ ವಿಷಯಗಳನ್ನು ಉಪಯೋಗಿಸಿರಿ.

ನೀವು ಐಹಿಕ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸುವ ಆಯ್ಕೆಮಾಡುವುದಾದರೆ, ಎಚ್ಚರಿಕೆಯಿಂದಿರುವ ವಿಶೇಷ ಅಗತ್ಯವಿದೆ. ದೇವರ ವಾಕ್ಯವೇ ಸತ್ಯವೆಂಬುದನ್ನು ಎಂದಿಗೂ ಮರೆಯಬೇಡಿ. (ಯೋಹಾ. 17:17) ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸು ಮುಖ್ಯ ಪಾತ್ರವನ್ನು ವಹಿಸುತ್ತಾನೆ. ಆದಕಾರಣ, ‘ತನ್ನಲ್ಲೇ ಜ್ಞಾನವಿದ್ಯಾಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಗಿಸಿಕೊಂಡಿರುವ ಕ್ರಿಸ್ತನು’ ಎಂದು ಕೊಲೊಸ್ಸೆ 2:2, 3 ಹೇಳುತ್ತದೆ. ಸಂಶೋಧನೆಯ ಫಲವಾಗಿ ಸಿಕ್ಕಿದ ಮಾಹಿತಿಯನ್ನು ಆ ದೃಷ್ಟಿಕೋನದಿಂದ ಬೆಲೆಕಟ್ಟಿರಿ. ಐಹಿಕ ಮೂಲದ ಸಂಶೋಧನೆಯ ಸಂಬಂಧದಲ್ಲಿ, ‘ಈ ವಿಷಯವು ಅತಿಶಯೋಕ್ತಿಯೊ, ಊಹಾಪೋಹವೊ ಅಥವಾ ದೂರದೃಷ್ಟಿರಹಿತವಾದದ್ದೊ? ಸ್ವಾರ್ಥದ ಅಥವಾ ವ್ಯಾಪಾರವಾಗಬೇಕೆಂಬ ಉದ್ದೇಶದಿಂದ ಅದು ಬರೆಯಲ್ಪಟ್ಟಿದೆಯೊ? ಬೇರೆ ಅಧಿಕಾರಯುಕ್ತ ಮೂಲಗಳು ಅದನ್ನು ಒಪ್ಪುತ್ತವೋ? ಎಲ್ಲಕ್ಕಿಂತಲೂ ಮಿಗಿಲಾಗಿ, ಅದು ಬೈಬಲ್‌ ಸತ್ಯಕ್ಕೆ ಹೊಂದಿಕೆಯಾಗಿದೆಯೆ?’ ಎಂದು ಸ್ವತಃ ಕೇಳಿಕೊಳ್ಳಿರಿ.

ಜ್ಞಾನ, ತಿಳಿವಳಿಕೆ ಮತ್ತು ವಿವೇಚನೆಯನ್ನು “ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ” ಹುಡುಕುತ್ತ ಇರಬೇಕೆಂದು ಜ್ಞಾನೋಕ್ತಿ 2:1-5 ನಮ್ಮನ್ನು ಪ್ರೋತ್ಸಾಹಿಸುತ್ತದೆ. ಇದು ಪ್ರಯಾಸವನ್ನೂ ಹೇರಳವಾದ ಪ್ರತಿಫಲಗಳನ್ನೂ ಸೂಚಿಸುತ್ತದೆ. ಸಂಶೋಧನೆ ಪ್ರಯಾಸಕರವಾಗಿರುತ್ತದಾದರೂ, ಅದನ್ನು ಮಾಡುವಲ್ಲಿ ವಿಷಯಗಳ ಕುರಿತಾದ ದೇವರ ಅಭಿಪ್ರಾಯಗಳನ್ನು ಕಂಡುಕೊಳ್ಳಲು, ತಪ್ಪು ಅಭಿಪ್ರಾಯಗಳನ್ನು ತಿದ್ದಲು ಮತ್ತು ಸತ್ಯದ ಮೇಲಿನ ನಿಮ್ಮ ಹಿಡಿತವನ್ನು ಬಿಗಿಗೊಳಿಸಲು ಸಹಾಯವು ದೊರೆಯುವುದು. ಇದು ನಿಮ್ಮ ಭಾಷಣಗಳಿಗೆ ಸಾರವನ್ನೂ ಜೀವವನ್ನೂ ಕೊಟ್ಟು, ಭಾಷಣ ಕೊಡುವುದನ್ನು ಸಂತೋಷಕರವಾಗಿಯೂ, ಅದಕ್ಕೆ ಕಿವಿಗೊಡುವುದನ್ನು ಹರ್ಷಕರವಾಗಿಯೂ ಮಾಡುವುದು.

ಈ ಕೆಳಗಿನ ಸಂಶೋಧನಾ ಸಾಧನಗಳಲ್ಲಿ ಯಾವುದು ನಿಮ್ಮ ಬಳಿ ಇದೆ?

  • ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್‌)

  • ಕಾಂಪ್ರಿಹೆನ್ಸಿವ್‌ ಕನ್‌ಕಾರ್ಡೆನ್ಸ್‌

  • ಕಾವಲಿನಬುರುಜು ಮತ್ತು ಎಚ್ಚರ!

  • ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌)

  • ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌)

  • ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌)

  • ವಾಚ್‌ ಟವರ್‌ ಪ್ರಕಾಶನಗಳ ವಿಷಯಸೂಚಿ (ಇಂಗ್ಲಿಷ್‌)

  • ಸಿಡಿ-ರಾಮ್‌ನಲ್ಲಿ ವಾಚ್‌ಟವರ್‌ ಲೈಬ್ರರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ