-
ಬೈಬಲ್ ಸತ್ಯ ಪುನಃ ಹೇಗೆ ಬೆಳಕಿಗೆ ಬಂತು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 3
ಬೈಬಲ್ ಸತ್ಯ ಪುನಃ ಹೇಗೆ ಬೆಳಕಿಗೆ ಬಂತು?
ಬೈಬಲ್ ವಿದ್ಯಾರ್ಥಿಗಳು, 1870ರ ದಶಕ
ಕಾವಲಿನಬುರುಜು ಪತ್ರಿಕೆಯ ಮೊದಲ ಪ್ರತಿ, 1879
ಕಾವಲಿನಬುರುಜು ಇಂದು
ಕ್ರಿಸ್ತನ ಮರಣದ ನಂತರ ಕ್ರೈಸ್ತರ ಮಧ್ಯೆ ಸುಳ್ಳು ಬೋಧಕರು ಹುಟ್ಟಿಕೊಂಡು ಬೈಬಲ್ ಸತ್ಯಗಳನ್ನು ತಿರುಚುವರು ಎಂದು ಬೈಬಲ್ ಮುಂಚೆಯೇ ತಿಳಿಸಿತ್ತು. (ಅಪೊಸ್ತಲರ ಕಾರ್ಯಗಳು 20:29, 30) ಹಾಗೆಯೇ ಆಯಿತು. ಸುಳ್ಳು ಬೋಧಕರು ಯೇಸುವಿನ ಬೋಧನೆಯೊಂದಿಗೆ ಸುಳ್ಳು ಧರ್ಮದ ತತ್ವಗಳನ್ನು ಮಿಶ್ರಗೊಳಿಸಿದರು. ಹೀಗೆ ನಕಲಿ ಕ್ರೈಸ್ತ ಧರ್ಮ ಹುಟ್ಟಿಕೊಂಡಿತು. (2 ತಿಮೊಥೆಯ 4:3, 4) ಹಾಗಿರುವಾಗ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂದು ನಮಗೆ ಗೊತ್ತಾಗಿದ್ದು ಹೇಗೆ?
ತಕ್ಕ ಸಮಯದಲ್ಲಿ ಯೆಹೋವನು ಸತ್ಯವನ್ನು ಬೆಳಕಿಗೆ ತಂದನು. ಅಂತ್ಯಕಾಲದಲ್ಲಿ “ತಿಳುವಳಿಕೆಯು ಹೆಚ್ಚುವುದು” ಎಂದು ಯೆಹೋವನು ಬಹಳ ಸಮಯದ ಹಿಂದೆಯೇ ತಿಳಿಸಿದ್ದನು. (ದಾನಿಯೇಲ 12:4) ಇಸವಿ 1870ರ ಸಮಯದಷ್ಟಕ್ಕೆ ಅದು ನಿಜವಾಗತೊಡಗಿತು. ಚರ್ಚಿನ ಅನೇಕ ಬೋಧನೆಗಳು ಬೈಬಲಿನ ಅನುಸಾರ ಇಲ್ಲವೆಂಬ ವಿಷಯವನ್ನು ಸತ್ಯಕ್ಕಾಗಿ ಹುಡುಕುತ್ತಿದ್ದ ಜನರ ಚಿಕ್ಕ ಗುಂಪೊಂದು ಮನಗಂಡಿತು. ಹಾಗಾಗಿ, ಸತ್ಯಾಂಶಗಳನ್ನು ಬೈಬಲಿನಲ್ಲಿಯೇ ಹುಡುಕಿ ತಿಳಿದುಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದರು. ಅವರ ಪ್ರಯತ್ನವನ್ನು ಯೆಹೋವ ದೇವರು ಆಶೀರ್ವದಿಸಿ ಬೈಬಲ್ ವಚನಗಳ ತಿಳುವಳಿಕೆಯನ್ನು ಕೊಟ್ಟನು.
ಸತ್ಯಕ್ಕಾಗಿ ಹುಡುಕುತ್ತಿದ್ದ ಗುಂಪು ಬೈಬಲನ್ನು ಆಳವಾಗಿ ಪರಿಶೀಲಿಸಿತು. ಬೈಬಲ್ ವಿದ್ಯಾರ್ಥಿಗಳು ಎಂದು ಕರೆಯಲಾಗುತ್ತಿದ್ದ ಆ ಗುಂಪು ಬಳಸಿದ ವಿಧಾನವನ್ನೇ ನಾವಿಂದು ಬಳಸುತ್ತೇವೆ. ಅವರು ಒಂದು ವಿಷಯವನ್ನು ಆರಿಸಿ ಬೈಬಲ್ ಆ ಕುರಿತು ಏನು ಹೇಳುತ್ತದೆಂದು ಚರ್ಚಿಸುತ್ತಿದ್ದರು. ಬೈಬಲಿನಲ್ಲಿ ಯಾವುದಾದರೂ ವಿಷಯ ಅರ್ಥವಾಗದಿದ್ದಾಗ ಅದಕ್ಕೆ ಸಂಬಂಧಿಸಿದ ಬೇರೆ ವಚನಕ್ಕಾಗಿ ಹುಡುಕುತ್ತಿದ್ದರು. ಸಂಬಂಧಪಟ್ಟ ಎಲ್ಲಾ ವಚನಗಳು ಒಂದೇ ಅರ್ಥವನ್ನು ಕೊಡುತ್ತಿದೆ ಎಂದು ಮನಗಂಡಾಗ ತಾವು ಕಂಡುಕೊಂಡ ಆ ವಿಷಯವನ್ನು ಬರೆದಿಡುತ್ತಿದ್ದರು. ಹೀಗೆ ಬೈಬಲಿನಿಂದಲೇ ಬೈಬಲ್ ವಚನಗಳ ಅರ್ಥವನ್ನು ಹುಡುಕಿ ತಿಳಿದುಕೊಳ್ಳುತ್ತಿದ್ದರು. ಈ ವಿಧಾನದಿಂದ ದೇವರ ಹೆಸರು, ಆತನ ರಾಜ್ಯ, ಭೂಮಿ ಮತ್ತು ಮನುಷ್ಯರನ್ನು ಆತನು ಸೃಷ್ಟಿಸಿದ ಉದ್ದೇಶ, ಸತ್ತವರ ಸ್ಥಿತಿ ಹಾಗೂ ಪುನರುತ್ಥಾನದ ಕುರಿತ ಸತ್ಯಾಂಶವನ್ನು ಕಂಡುಕೊಂಡರು. ಈ ಸತ್ಯ ಅವರನ್ನು ಸುಳ್ಳು ಆಚಾರ ವಿಚಾರಗಳಿಂದ ಬಿಡುಗಡೆಗೊಳಿಸಿತು.—ಯೋಹಾನ 8:31, 32.
ಆ ಸತ್ಯವನ್ನು ಎಲ್ಲ ಜನರಿಗೆ ತಿಳಿಸಬೇಕಾದ ಜರೂರಿಯನ್ನು ಇಸವಿ 1879ರಷ್ಟಕ್ಕೆ ಬೈಬಲ್ ವಿದ್ಯಾರ್ಥಿಗಳು ಮನಗಂಡರು. ಹಾಗಾಗಿ ಅದೇ ವರ್ಷ ಅವರೊಂದು ಪತ್ರಿಕೆಯನ್ನು ಪ್ರಕಟಿಸಿದರು. ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಹೆಸರಿನಲ್ಲಿ ಅದು ಇಂದಿಗೂ ಸತತವಾಗಿ ಪ್ರಕಟಗೊಳ್ಳುತ್ತಿದೆ. ಬೈಬಲ್ ಸತ್ಯವನ್ನು ನಾವೀಗ 750ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟಿಸುತ್ತಾ 240 ದೇಶಗಳಲ್ಲಿರುವ ಜನರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಬೈಬಲ್ ಸತ್ಯದ ತಿಳುವಳಿಕೆ ಇಷ್ಟು ಪ್ರಮಾಣದಲ್ಲಿ ಹಿಂದೆಂದೂ ಲಭ್ಯವಿರಲಿಲ್ಲ!
ಕ್ರಿಸ್ತನ ಮರಣದ ನಂತರ ಸುಳ್ಳು ಬೋಧಕರು ಬೈಬಲ್ ಸತ್ಯಗಳನ್ನು ಏನು ಮಾಡಿದರು?
ದೇವರ ವಾಕ್ಯದಲ್ಲಿರುವ ಸತ್ಯವನ್ನು ಹುಡುಕಿ ಕಂಡುಕೊಳ್ಳಲು ನಮ್ಮಿಂದ ಹೇಗೆ ಸಾಧ್ಯವಾಯಿತು?
-
-
ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 4
ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣ?
ಕಾಂಗೊ (ಕಿನ್ಷಾಸ)
ರುವಾಂಡ
ಕ್ರಿ.ಶ. ಮೂರು ಅಥವಾ ನಾಲ್ಕನೆಯ ಶತಮಾನದ ಸಿಮಕಸ್ ಭಾಷಾಂತರದ ಅವಶೇಷ. ಕೀರ್ತನೆ 69:31ರಲ್ಲಿ ಯೆಹೋವ ಎಂಬ ಹೆಸರು ಇರುವುದನ್ನು ಗಮನಿಸಬಹುದು.
ಯೆಹೋವನ ಸಾಕ್ಷಿಗಳಾದ ನಾವು ಅನೇಕ ವರ್ಷಗಳ ತನಕ ಆಗ ಲಭ್ಯವಿದ್ದ ಬೈಬಲ್‌ಗಳನ್ನು ಉಪಯೋಗಿಸುತ್ತಿದ್ದೆವು, ಮುದ್ರಿಸಿ ವಿತರಿಸುತ್ತಿದ್ದೆವು. ಆದರೆ ಜನರು “ಸತ್ಯದ ನಿಷ್ಕೃಷ್ಟ ಜ್ಞಾನವನ್ನು” ಪಡೆದುಕೊಳ್ಳಬೇಕಾದರೆ ಒಂದು ಹೊಸ ಭಾಷಾಂತರದ ಅವಶ್ಯವಿದೆ ಎನ್ನುವುದನ್ನು ಮನಗಂಡೆವು. ಏಕೆಂದರೆ ಪ್ರತಿಯೊಬ್ಬ ಮಾನವನು ಸತ್ಯದ ನಿಷ್ಕೃಷ್ಟ ಜ್ಞಾನ ಪಡೆಯಬೇಕೆನ್ನುವುದು ದೇವರ ಇಷ್ಟ. (1 ತಿಮೊಥೆಯ 2:3, 4) ಹಾಗಾಗಿ, ಎಲ್ಲ ಜನರಿಗೆ ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ಒಂದು ಬೈಬಲನ್ನು ಹೊರತಂದೆವು. ನೂತನ ಲೋಕ ಭಾಷಾಂತರ ಎಂದು ಕರೆಯಲಾಗುವ ಆ ಬೈಬಲ್ 1950ರಿಂದ ಆರಂಭಿಸಿ ಹಲವಾರು ಸಂಪುಟಗಳಾಗಿ ಬಿಡುಗಡೆ ಆಯಿತು. ಅನುವಾದದಲ್ಲಿ ನಿಷ್ಕೃಷ್ಟತೆಯನ್ನು ಕಾಪಾಡಿಕೊಳ್ಳಲಾಗಿದ್ದು ಇಂದು ಈ ಭಾಷಾಂತರ ಕನ್ನಡವನ್ನೂ ಸೇರಿಸಿ 130ಕ್ಕೂ ಅಧಿಕ ಭಾಷೆಯಲ್ಲಿ ಲಭ್ಯ.
ಬೈಬಲ್—ಸರಳ ಭಾಷೆಯಲ್ಲಿ ಇರಬೇಕು. ಕಾಲ ಬದಲಾದಂತೆ ಭಾಷೆ ಬದಲಾಗುತ್ತದೆ. ಅನೇಕ ಬೈಬಲ್ ಭಾಷಾಂತರಗಳಲ್ಲಿ ಬಳಸಲಾಗಿದ್ದ ಪದಗಳು ಹಳೆಯದ್ದಾಗಿದ್ದವು ಹಾಗೂ ಹೆಚ್ಚಿನವರಿಗೆ ಅರ್ಥವಾಗುತ್ತಿರಲಿಲ್ಲ. ಅಲ್ಲದೆ ಬೈಬಲಿನ ಮೂಲ ಪ್ರತಿಗಳಿಗೆ ನಿಖರವಾಗಿ ಹೋಲುವ ಪ್ರಾಚೀನ ಹಸ್ತಪ್ರತಿಗಳು ದೊರೆತವು. ಇವು ಬೈಬಲ್‌ನಲ್ಲಿ ಉಪಯೋಗಿಸಲಾಗಿರುವ ಹೀಬ್ರು, ಆರಮೇಯಿಕ್ ಹಾಗೂ ಗ್ರೀಕ್ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕಾರಿಯಾಗಿದ್ದವು.
ಬೈಬಲ್—ದೇವರ ವಾಕ್ಯದ ಮೂಲಾರ್ಥವನ್ನು ನಿಖರವಾಗಿ ತಿಳಿಸಬೇಕು. ದೇವರ ವಾಕ್ಯವನ್ನು ತರ್ಜುಮೆ ಮಾಡುವವರು ಅದರ ಮೂಲಾರ್ಥವನ್ನು ಬದಲಾಯಿಸದೆ ನಿಖರವಾಗಿ ತಿಳಿಸಬೇಕು. ಆದರೆ ಅನೇಕ ಬೈಬಲ್ ಭಾಷಾಂತರಗಳಲ್ಲಿ ಯೆಹೋವ ದೇವರ ಹೆಸರನ್ನೇ ತೆಗೆದುಬಿಟ್ಟಿದ್ದಾರೆ.
ಬೈಬಲ್—ತನ್ನ ಗ್ರಂಥಕರ್ತನಾದ ಯೆಹೋವ ದೇವರಿಗೆ ಮಹಿಮೆ ಕೊಡಬೇಕು. (2 ಸಮುವೇಲ 23:2) ಕೆಳಗಿನ ಚಿತ್ರದಲ್ಲಿರುವಂತೆ ಬೈಬಲಿನ ಪ್ರಾಚೀನ ಹಸ್ತಪ್ರತಿಗಳಲ್ಲಿ ಯೆಹೋವ ದೇವರ ಹೆಸರು ಸುಮಾರು 7,000 ಬಾರಿ ಕಂಡುಬರುತ್ತದೆ. ನೂತನ ಲೋಕ ಭಾಷಾಂತರ ಬೈಬಲಿನಲ್ಲಿ ದೇವರ ಹೆಸರನ್ನು ಪುನಃಸ್ಥಾಪಿಸಲಾಗಿದೆ. (ಕೀರ್ತನೆ 83:18) ನೂತನ ಲೋಕ ಭಾಷಾಂತರ ಬೈಬಲನ್ನು ಅನುವಾದ ಮಾಡಲು ವರ್ಷಾನುಗಟ್ಟಲೆ ಹಾಕಿದ ಪರಿಶ್ರಮ ವ್ಯರ್ಥವಾಗಲಿಲ್ಲ. ಅದು ಓದಲು ಸುಲಭವಾಗಿದ್ದು ಯೆಹೋವ ದೇವರ ಆಲೋಚನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ನಿಮ್ಮ ಭಾಷೆಯಲ್ಲಿ ನೂತನ ಲೋಕ ಭಾಷಾಂತರ ಬೈಬಲ್ ಇರಲಿ ಇಲ್ಲದಿರಲಿ ಪ್ರತಿ ದಿನ ಯೆಹೋವ ದೇವರ ವಾಕ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.—ಯೆಹೋಶುವ 1:8; ಕೀರ್ತನೆ 1:2, 3.
ನೂತನ ಲೋಕ ಭಾಷಾಂತರ ಬೈಬಲನ್ನು ಹೊರತರಲು ಕಾರಣವೇನು?
ದೇವರ ಇಷ್ಟವನ್ನು ತಿಳಿದುಕೊಳ್ಳಲು ಇಚ್ಛಿಸುವವರು ಪ್ರತಿನಿತ್ಯ ಏನು ಮಾಡಬೇಕು?
-