-
ನಮ್ಮ ಸಭಾ ಕೂಟಗಳ ಪ್ರಯೋಜನವೇನು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 5
ನಮ್ಮ ಸಭಾ ಕೂಟಗಳ ಪ್ರಯೋಜನವೇನು?
ಅರ್ಜೆಂಟೀನ
ಸಿಯೆರಾ ಲಿಯೋನ್
ಬೆಲ್ಜಿಯಮ್
ಮಲೇಷಿಯ
ಅನೇಕ ಜನರು ಕ್ರೈಸ್ತ ಕೂಟಗಳಿಗೆ ಹೋಗುವುದಿಲ್ಲ. ಕಾರಣ ಅವರಿಗೆ ಬೇಕಾದ ಆಧ್ಯಾತ್ಮ ಮಾರ್ಗದರ್ಶನ ಹಾಗೂ ಸಾಂತ್ವನ ಅಲ್ಲಿ ದೊರೆಯುತ್ತಿಲ್ಲ. ಹಾಗಾದರೆ ಯೆಹೋವನ ಸಾಕ್ಷಿಗಳ ಸಭೆಗೆ ಹೋಗುವುದರಿಂದ ನಿಮಗೆ ಪ್ರಯೋಜನವಿದೆಯೇ? ಅಲ್ಲಿ ನೀವೇನು ಪಡೆಯುವಿರಿ?
ಪ್ರೀತಿ ಮುತುವರ್ಜಿ ಇರುವ ಜನರ ಸ್ನೇಹ ಹಾಗೂ ಸಂತೋಷ ಪಡೆಯುವಿರಿ. ಒಂದನೇ ಶತಮಾನದಲ್ಲಿ ಕ್ರೈಸ್ತರು ಸಭೆ ಸೇರಿ ದೇವರನ್ನು ಆರಾಧಿಸುತ್ತಿದ್ದರು. ಬೈಬಲನ್ನು ಓದಿ ಅಧ್ಯಯನ ಮಾಡುತ್ತಿದ್ದರು. ಅಣ್ಣತಮ್ಮ ಅಕ್ಕತಂಗಿಯರಂತೆ ಬೆಂಬಲ ಪ್ರೋತ್ಸಾಹ ನೀಡುತ್ತಿದ್ದರು. (ಇಬ್ರಿಯ 10:24, 25) ಅಲ್ಲಿ ಪ್ರೀತಿ ವಾತ್ಸಲ್ಯ ತುಂಬಿತುಳುಕುತ್ತಿತ್ತು. ಅವರ ನಡುವೆ ನಿಜವಾದ ಸ್ನೇಹಬಾಂಧವ್ಯ ಇತ್ತು. (2 ಥೆಸಲೊನೀಕ 1:3; 3 ಯೋಹಾನ 14) ಆ ಕ್ರೈಸ್ತರ ನಮೂನೆಯನ್ನೇ ಯೆಹೋವನ ಸಾಕ್ಷಿಗಳು ಪಾಲಿಸುತ್ತಿದ್ದಾರೆ. ಅವರ ಸಭೆಗಳಲ್ಲಿ ಸ್ನೇಹ ಸಂಭ್ರಮದ ವಾತಾವರಣವಿದೆ.
ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕಲು ಕಲಿತು ಪ್ರಯೋಜನ ಪಡೆಯುವಿರಿ. ಬೈಬಲ್‌ನಲ್ಲಿ ತಿಳಿಸಿರುವಂತೆ ಇಂದು ಸಹ ಸ್ತ್ರೀಪುರುಷರು ಹಾಗೂ ಮಕ್ಕಳು ಸಭೆ ಸೇರುತ್ತಾರೆ. ಅರ್ಹ ಉಪನ್ಯಾಸಕರು ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕುವುದು ಹೇಗೆಂದು ನಮಗೆ ಕಲಿಸುತ್ತಾರೆ. (ಧರ್ಮೋಪದೇಶಕಾಂಡ 31:12; ನೆಹೆಮೀಯ 8:8) ಕಾರ್ಯಕ್ರಮದಲ್ಲಿ ಸಭಿಕರೆಲ್ಲರೂ ಭಾಗವಹಿಸುವ ಹಾಗೂ ಜೊತೆಗೂಡಿ ಸ್ತುತಿಗೀತೆಗಳನ್ನು ಹಾಡುವ ಅವಕಾಶವಿದೆ. ಇದು ದೇವರ ಮೇಲೆ ನಾವಿಟ್ಟಿರುವ ನಂಬಿಕೆ, ನಮಗಿರುವ ಭವ್ಯ ನಿರೀಕ್ಷೆ ಇವನ್ನೆಲ್ಲ ಹಂಚಿಕೊಳ್ಳಲು ಸಂದರ್ಭ ಒದಗಿಸುತ್ತದೆ.—ಇಬ್ರಿಯ 10:23.
ದೇವರ ಮೇಲೆ ನಿಮ್ಮ ನಂಬಿಕೆ ಹೆಚ್ಚಿ ಆಶೀರ್ವಾದ ಪಡೆಯುವಿರಿ. ಯೇಸುವಿನ ಅನುಯಾಯಿಗಳಲ್ಲಿ ಒಬ್ಬನಾಗಿದ್ದ ಪೌಲ ಎಂಬವನೊಮ್ಮೆ ಒಂದು ಸಭೆಗೆ ಪತ್ರ ಬರೆದು “ನಾನು ನಿಮ್ಮನ್ನು ನೋಡಲು ಹಂಬಲಿಸುತ್ತಿದ್ದೇನೆ, . . . ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅಂದರೆ ನಿಮ್ಮ ನಂಬಿಕೆಯಿಂದ ನಾನು ಮತ್ತು ನನ್ನ ನಂಬಿಕೆಯಿಂದ ನೀವು ಉತ್ತೇಜಿಸಲ್ಪಡಲು ಸಾಧ್ಯವಾಗಬಹುದು” ಎಂದು ತಿಳಿಸಿದನು. (ರೋಮನ್ನರಿಗೆ 1:11, 12) ಹೌದು ನಾವು ಪ್ರತಿವಾರವೂ ಸಭೆಗೆ ಹಾಜರಾಗಿ ದೇವಭಕ್ತ ಜನರೊಂದಿಗೆ ಬೆರೆಯುವಾಗ ದೇವರ ಮೇಲೆ ನಮ್ಮ ನಂಬಿಕೆ ಹೆಚ್ಚುತ್ತೆ. ಅಲ್ಲದೆ ಬೈಬಲ್‌ನಲ್ಲಿರುವ ತತ್ವಗಳನ್ನು ಕಾರ್ಯರೂಪಕ್ಕೆ ಹಾಕಲು ಸ್ಫೂರ್ತಿ ಸಿಗುತ್ತೆ.
ನೀವೇಕೆ ನಮ್ಮ ಈ ವಾರದ ಕ್ರೈಸ್ತ ಕೂಟಕ್ಕೆ ಹಾಜರಾಗಿ ಮೇಲೆ ತಿಳಿಸಿದ್ದನ್ನೆಲ್ಲ ಖುದ್ದಾಗಿ ಆಸ್ವಾದಿಸಬಾರದು? ನಿಮ್ಮನ್ನು ಸ್ನೇಹಪೂರ್ವಕವಾಗಿ ಬರಮಾಡಿಕೊಳ್ಳಲಾಗುವುದು. ಕಾರ್ಯಕ್ರಮ ಉಚಿತವಾಗಿದೆ.
ನಮ್ಮ ಸಭೆಯ ಕಾರ್ಯಕಲಾಪ ಯಾವ ನಮೂನೆಯನ್ನು ಆಧರಿಸಿದೆ?
ಯೆಹೋವನ ಸಾಕ್ಷಿಗಳ ಸಭೆಗೆ ಹಾಜರಾಗುವುದರಿಂದ ಯಾವೆಲ್ಲ ಪ್ರಯೋಜನ ಸಿಗುತ್ತದೆ?
-
-
ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 6
ಯೆಹೋವನ ಸಾಕ್ಷಿಗಳೇಕೆ ಪರಸ್ಪರ ಸಾಹಚರ್ಯಕ್ಕೆ ಮಹತ್ವ ಕೊಡುತ್ತಾರೆ?
ಮಡಗಾಸ್ಕರ್
ನಾರ್ವೆ
ಲೆಬನಾನ್
ಇಟಲಿ
ಮಳೆಯೇ ಇರಲಿ ಬಿಸಿಲೇ ಇರಲಿ. ಬೆಟ್ಟ ಗುಡ್ಡ ದಾಟಬೇಕಾಗಿರಲಿ ನಾವು ಕ್ರೈಸ್ತ ಕೂಟಗಳಿಗೆ ತಪ್ಪದೇ ಹಾಜರಾಗುತ್ತೇವೆ. ಬದುಕಿನಲ್ಲಿ ಎಷ್ಟೇ ಕಷ್ಟಗಳಿರಲಿ ಇಡೀ ದಿನ ಕೆಲಸ ಮಾಡಿ ಬಳಲಿರಲಿ ನಾವು ಮಾತ್ರ ಸಭೆಗೆ ಹಾಜರ್. ಇಷ್ಟೆಲ್ಲ ತೊಡಕುಗಳಿದ್ದರೂ ಯೆಹೋವನ ಸಾಕ್ಷಿಗಳು ಪರಸ್ಪರ ಸಾಹಚರ್ಯವನ್ನು ಇಷ್ಟಪಡುವುದೇಕೆ?
ಒಳಿತಿರುವುದರಿಂದ. ಸಭೆ ಸೇರುವವರು “ಪರಸ್ಪರ ಹಿತಚಿಂತಕರಾಗಿ” ಇರಬೇಕೆಂದು ಪೌಲ ಹೇಳಿದನು. (ಇಬ್ರಿಯ 10:24) ಅವನ ಮಾತಿನ ಅರ್ಥ ಸಭೆಗೆ ಬರುವವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಬೇಕು, ಮುತುವರ್ಜಿ ಕಾಳಜಿ ವಹಿಸಬೇಕು ಎನ್ನುವುದೇ. ನಾವಿಂದು ಎದುರಿಸುತ್ತಿರುವ ಕಷ್ಟಗಳನ್ನು ಸಭೆಯಲ್ಲಿರುವ ಕೆಲವರು ಈಗಾಗಲೇ ಜಯಿಸಿ ಬಂದಿರಬಹುದು. ಅವರೊಂದಿಗೆ ಮಾತಾಡಿ ಅವರ ಅನುಭವವನ್ನು ತಿಳಿದುಕೊಳ್ಳುವುದರಿಂದ ಖಂಡಿತ ನಮಗೆ ಒಳಿತಾಗುತ್ತದೆ. ನಮ್ಮ ಕಷ್ಟಗಳನ್ನು ಜಯಿಸಲು ನೆರವಾಗುತ್ತದೆ.
ನಿಜ ಸ್ನೇಹಿತರು ಸಿಗುವುದರಿಂದ. ಸಭೆಯಾಗಿ ಕೂಡಿಬರುವ ನಾವು ಕೇವಲ ಪರಿಚಯಸ್ಥರಷ್ಟೇ ಅಲ್ಲ. ಅದಕ್ಕಿಂತಲೂ ಹೆಚ್ಚಾದ ಅತ್ಯಾಪ್ತ ಸ್ನೇಹ ಬಾಂಧವ್ಯ ನಮ್ಮಲ್ಲಿದೆ. ವಿನೋದ ವಿಹಾರ ಮುಂತಾದ ಬೇರೆ ಸಂದರ್ಭದಲ್ಲೂ ನಾವು ಒಟ್ಟುಗೂಡುತ್ತೇವೆ. ಇಂಥ ಸಾಹಚರ್ಯ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ನೆರವಾಗಿ ನಮ್ಮ ನಡುವಿನ ಪ್ರೀತಿ ಸಾಮರಸ್ಯವನ್ನು ಬಿಗಿಯಾಗಿಸುತ್ತದೆ. ಈ ನಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಸಮಸ್ಯೆ ಎದುರಾದಲ್ಲಿ ನಾವು ಹೆಗಲಿಗೆ ಹೆಗಲಾಗಿರುತ್ತೇವೆ. (ಜ್ಞಾನೋಕ್ತಿ 17:17) ಸಭೆಗೆ ಬರುವ ಎಲ್ಲರೊಂದಿಗೆ ನಾವು ಭೇದಭಾವವಿಲ್ಲದೆ ಬೆರೆಯುತ್ತೇವೆ. ಹೀಗೆ ‘ಪರಸ್ಪರ ಹಿತವನ್ನು ಚಿಂತಿಸುವವರು’ ಆಗಿದ್ದೇವೆ.—1 ಕೊರಿಂಥ 12:25, 26.
ದೇವರ ಇಷ್ಟವನ್ನು ಮಾಡುತ್ತಿರುವವರ ಜೊತೆ ನೀವು ಗೆಳೆತನ ಬೆಳೆಸಿಕೊಳ್ಳಬೇಕು ಎನ್ನುವುದೇ ನಮ್ಮಾಶೆ. ಆ ರೀತಿಯ ಜನರನ್ನು ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕಾಣಬಹುದು. ನಮ್ಮೊಂದಿಗಿನ ಒಡನಾಟವನ್ನು ತುಂಡರಿಸುವಂಥ ಅನೇಕ ವಿಷಯಗಳು ನಿಮಗೆ ಎದುರಾಗಬಹುದಾದರೂ ನಮ್ಮೊಂದಿಗಿನ ಸ್ನೇಹ ಸಂಪರ್ಕ ಕಡಿದುಹೋಗದಿರಲಿ.
ನಾವೇಕೆ ನಮ್ಮ ಸಾಹಚರ್ಯಕ್ಕೆ ಮಹತ್ವ ಕೊಡುತ್ತೇವೆ?
ನಮ್ಮ ಸಭೆಗೆ ಯಾವಾಗ ಬರ್ತೀರಾ?
-
-
ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 7
ನಮ್ಮ ಸಭಾ ಕೂಟಗಳಲ್ಲಿ ಯಾವ್ಯಾವ ಕಾರ್ಯಕ್ರಮ ನಡೆಯುತ್ತೆ?
ನ್ಯೂಜಿಲೆಂಡ್
ಜಪಾನ್
ಉಗಾಂಡ
ಲಿಥುವೇನಿಯ
ಪ್ರಾಚೀನ ಕಾಲದ ಸಭಾ ಕೂಟಗಳಲ್ಲಿ ಸ್ತುತಿಗೀತೆ ಹಾಡುವುದು, ಪ್ರಾರ್ಥನೆ ಮಾಡುವುದು, ಬೈಬಲ್ ಓದಿ ಚರ್ಚಿಸುವುದು ಪ್ರಮುಖವಾಗಿತ್ತು. (1 ಕೊರಿಂಥ 14:26) ನಮ್ಮ ಸಭಾ ಕೂಟಗಳಲ್ಲಿ ಸಹ ಅದೇ ವಿಧಾನ ಅನುಸರಿಸಲಾಗುತ್ತದೆ.
ನಮ್ಮ ಬದುಕಿಗೆ ನೆರವಾಗುವ ಬೈಬಲ್ ಆಧರಿತ ಉಪದೇಶ ಕಾರ್ಯಕ್ರಮ. ವಾರಾಂತ್ಯದಲ್ಲಿ 30 ನಿಮಿಷಗಳ ಬೈಬಲ್ ಉಪನ್ಯಾಸ ಇರುತ್ತದೆ. ನಮ್ಮ ಬದುಕಿನಲ್ಲಿ ಬೈಬಲ್ ಸಲಹೆಗಳನ್ನು ಅಳವಡಿಸುವುದು ಹೇಗೆಂದು ಆ ಉಪನ್ಯಾಸದಲ್ಲಿ ವಿವರಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಬೈಬಲ್‌ಗಳನ್ನು ತರುತ್ತಾರೆ ಮತ್ತು ಅಮೂಲ್ಯ ಸಲಹೆಗಳನ್ನು ಗುರುತಿಸಿಕೊಳ್ಳುತ್ತಾರೆ. ಉಪನ್ಯಾಸದ ನಂತರ “ಕಾವಲಿನಬುರುಜು” ಅಧ್ಯಯನ ಎಂಬ ಇನ್ನೊಂದು ಕಾರ್ಯಕ್ರಮ ಇರುತ್ತದೆ. ಒಂದು ತಾಸಿನ ಈ ಕಾರ್ಯಕ್ರಮದಲ್ಲಿ ಕಾವಲಿನಬುರುಜು ಎಂಬ ಮಾಸಿಕದಿಂದ (ಅಧ್ಯಯನ ಆವೃತ್ತಿ) ಲೇಖನವೊಂದನ್ನು ಚರ್ಚಿಸಲಾಗುತ್ತದೆ. ಹಾಜರಿರುವ ಎಲ್ಲರೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಬೈಬಲ್ ಮಾರ್ಗದರ್ಶನೆಗಳನ್ನು ಜೀವನದಲ್ಲಿ ಪಾಲಿಸುವುದು ಹೇಗೆಂದು ಈ ಚರ್ಚೆಯಿಂದ ಕಲಿಯಬಹುದು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಭೂವ್ಯಾಪಕವಾಗಿರುವ 1,10,000ಕ್ಕೂ ಅಧಿಕ ಸಭೆಗಳಲ್ಲಿ ಚರ್ಚಿಸಲಾಗುವ ಲೇಖನ ಒಂದೇ ಆಗಿರುತ್ತದೆ.
ನಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮ. ವಾರಮಧ್ಯದ ಒಂದು ಸಂಜೆ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಎಂಬ ಮೂರು ಭಾಗಗಳಿರುವ ಕಾರ್ಯಕ್ರಮವಿರುತ್ತದೆ. ಇದು ಪ್ರತಿ ತಿಂಗಳ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ಮೇಲೆ ಆಧರಿತವಾಗಿರುತ್ತದೆ. ಈ ಕೂಟದ ಮೊದಲನೇ ಭಾಗ ಬೈಬಲಿನಲ್ಲಿರುವ ರತ್ನಗಳು. ಇದು ಮೊದಲೇ ಓದಿಕೊಂಡು ಬಂದಿರುವ ಬೈಬಲಿನ ಕೆಲವು ಅಧ್ಯಾಯಗಳನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಂತರ ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ ಎಂಬ ಭಾಗದಲ್ಲಿ ಬೈಬಲಿನ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಹೇಗೆಂದು ತೋರಿಸುವ ಅಭಿನಯಗಳಿರುತ್ತವೆ. ಓದುವ ಮತ್ತು ಮಾತಾಡುವ ಸಾಮರ್ಥ್ಯವನ್ನು ಹೇಗೆ ಉತ್ತಮಗೊಳಿಸುವುದು ಎಂದು ಸಲಹೆ ನೀಡಲಾಗುತ್ತದೆ. (1 ತಿಮೊಥೆಯ 4:13) ಕೊನೆಯಲ್ಲಿ ನಮ್ಮ ಕ್ರೈಸ್ತ ಜೀವನ ಎಂಬ ಭಾಗದಲ್ಲಿ ಬೈಬಲ್ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಹೇಗೆ ಅನ್ವಯಿಸುವುದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಬೈಬಲನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲಿಕ್ಕಾಗಿ ಪ್ರಶ್ನೋತ್ತರ ಚರ್ಚೆ ಇರುತ್ತದೆ.
ನಮ್ಮ ಸಭಾ ಕೂಟಗಳಿಗೆ ನೀವು ಹಾಜರಾಗುವುದಾದರೆ ಅಲ್ಲಿ ನೀಡಲಾಗುವ ಬೈಬಲ್ ಶಿಕ್ಷಣ ಅದ್ಭುತವಾದದ್ದು ಎಂದು ಪ್ರತ್ಯಕ್ಷ ಕಾಣುವಿರಿ.—ಯೆಶಾಯ 54:13.
ಯೆಹೋವನ ಸಾಕ್ಷಿಗಳ ಸಭಾ ಕೂಟಗಳಲ್ಲಿ ಯಾವ ಕಾರ್ಯಕ್ರಮಗಳಿವೆ?
ಯಾವ ಕಾರ್ಯಕ್ರಮಕ್ಕೆ ಹಾಜರಾಗಲು ಯೋಜಿಸಿದ್ದೀರಿ?
-