-
ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ನೆರವಾಗುವಿರಿ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 26
ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ನೆರವಾಗುವಿರಿ?
ಎಸ್ಟೋನಿಯ
ಜಿಂಬಾಬ್ವೆ
ಮಂಗೋಲಿಯ
ಪೋರ್ಟರಿಕೊ
ಯೆಹೋವನ ಸಾಕ್ಷಿಗಳ ಪ್ರತಿಯೊಂದು ರಾಜ್ಯ ಸಭಾಗೃಹ ಯೆಹೋವ ದೇವರ ನಾಮವನ್ನು ಹೊತ್ತಿದೆ. ಆದ್ದರಿಂದ, ಆ ಕಟ್ಟಡವನ್ನು ಕಾಲಕಾಲಕ್ಕೆ ದುರಸ್ತಿ ಮಾಡಿ ಸದಾ ನೀಟಾಗಿ ಇಡುವುದು ನಮ್ಮ ಆರಾಧನೆಯ ಭಾಗ. ಶುಚಿಕಾರ್ಯ ಹಾಗೂ ದುರಸ್ತಿ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬಹುದು.
ಸಭಾ ಕೂಟದ ನಂತರ ಸ್ವಚ್ಛಗೊಳಿಸುವಿಕೆ. ಪ್ರತಿ ಸಲ ಸಭಾ ಕೂಟ ಮುಗಿದ ನಂತರ ಸೋದರ ಸೋದರಿಯರು ರಾಜ್ಯ ಸಭಾಗೃಹವನ್ನು ಶುಚಿಗೊಳಿಸುತ್ತಾರೆ. ಅದಲ್ಲದೆ ವಾರಕ್ಕೊಮ್ಮೆ ಕೂಲಂಕಷವಾಗಿ ಶುಚಿಗೊಳಿಸಲಾಗುತ್ತದೆ. ಒಬ್ಬ ಸಭಾ ಹಿರಿಯ ಅಥವಾ ಶುಶ್ರೂಷಾ ಸೇವಕ ಶುಚಿಕಾರ್ಯಗಳ ಪಟ್ಟಿಮಾಡಿ ಮೇಲುಸ್ತುವಾರಿ ವಹಿಸುತ್ತಾರೆ. ನೆಲ ಗುಡಿಸುವುದು, ಒರೆಸುವುದು, ಧೂಳು ಜಾಡಿಸುವುದು, ಕುರ್ಚಿ ಜೋಡಿಸುವುದು, ಶೌಚಾಲಯಗಳನ್ನು ಶುಚಿಮಾಡಿ ರೋಗಾಣು ಮುಕ್ತಗೊಳಿಸುವುದು, ಕಿಟಕಿ ಬಾಗಿಲು ಕನ್ನಡಿಗಳನ್ನು ಒರೆಸುವುದು, ಕಸ ವಿಲೇವಾರಿ, ಅಂಗಳವನ್ನು ಶುಚಿ ಮಾಡುವುದು ಹೀಗೆ ನಾನಾ ಕೆಲಸಗಳನ್ನು ಸಭಾ ಸದಸ್ಯರು ಸ್ವಯಂ ಮುಂದೆ ಬಂದು ಮಾಡುತ್ತಾರೆ. ವರ್ಷಕ್ಕೊಮ್ಮೆ ಎಲ್ಲರೂ ಸೇರಿ ಹೆಚ್ಚುವರಿ ಶುಚಿಕಾರ್ಯದಲ್ಲಿ ಒಳಗೂಡುತ್ತಾರೆ. ನಮ್ಮ ಮಕ್ಕಳಿಗೂ ಚಿಕ್ಕಪುಟ್ಟ ಕೆಲಸ ವಹಿಸುತ್ತೇವೆ. ಹೀಗೆ ಅವರಲ್ಲಿ ಆರಾಧನಾ ಸ್ಥಳದ ಬಗ್ಗೆ ಗೌರವಭಾವ ಬೆಳೆಸುತ್ತೇವೆ.—ಪ್ರಸಂಗಿ 5:1.
ದುರಸ್ತಿ ಕಾರ್ಯ. ವರ್ಷಕ್ಕೊಮ್ಮೆ ರಾಜ್ಯ ಸಭಾಗೃಹದ ಒಳಗೆ ಹೊರಗೆ ಪರೀಕ್ಷಿಸಲಾಗುತ್ತದೆ. ಕಟ್ಟಡವನ್ನು ಸುಸ್ಥಿತಿಯಲ್ಲಿಡಲು ನಿಯತವಾಗಿ ಏನೆಲ್ಲ ದುರಸ್ತಿ ಕಾರ್ಯವನ್ನು ಮಾಡಬೇಕೆಂದು ನಿರ್ಧರಿಸಲು ಇದು ನೆರವಾಗುತ್ತದೆ. ಹೀಗೆ ದೊಡ್ಡ ಪ್ರಮಾಣದ ದುರಸ್ತಿ ಖರ್ಚು ಬಾರದಂತೆ ನೋಡಿಕೊಳ್ಳಲಾಗುತ್ತದೆ. (2 ಪೂರ್ವಕಾಲವೃತ್ತಾಂತ 24:13; 34:11) ನೀಟಾಗಿ ಸುಸ್ಥಿತಿಯಲ್ಲಿರುವ ರಾಜ್ಯ ಸಭಾಗೃಹ ದೇವಾರಾಧನೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ದುರಸ್ತಿ ಮತ್ತು ಶುಚಿ ಕಾರ್ಯದಲ್ಲಿ ಕೈ ಜೋಡಿಸುವುದು ಯೆಹೋವ ದೇವರ ಮೇಲೆ ಮತ್ತು ಆತನ ಆರಾಧನೆಯ ಸ್ಥಳದ ಬಗ್ಗೆ ನಮಗೆ ಅತೀವ ಪ್ರೀತಿಯಿದೆ ಎಂದು ತೋರಿಸುತ್ತದೆ. (ಕೀರ್ತನೆ 122:1) ಮಾತ್ರವಲ್ಲ ನೆರೆಹೊರೆಯವರಲ್ಲಿ ಸತ್ಯಾರಾಧನೆಯ ಬಗ್ಗೆ ಗೌರವಭಾವ ಮೂಡಿಸುತ್ತದೆ.—2 ಕೊರಿಂಥ 6:3.
ನಮ್ಮ ಆರಾಧನೆಯ ಸ್ಥಳವನ್ನು ನಾವು ಹೇಗೆ ವೀಕ್ಷಿಸಬೇಕು?
ರಾಜ್ಯ ಸಭಾಗೃಹವನ್ನು ಶುಚಿಮಾಡಲು ಯಾವ ಏರ್ಪಾಡಿದೆ?
-
-
ರಾಜ್ಯ ಸಭಾಗೃಹ ಗ್ರಂಥಾಲಯದ ಅನುಕೂಲಗಳೇನು?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 27
ರಾಜ್ಯ ಸಭಾಗೃಹ ಗ್ರಂಥಾಲಯದ ಅನುಕೂಲಗಳೇನು?
ಇಸ್ರೇಲ್
ಚೆಕ್ ಗಣರಾಜ್ಯ
ಬೆನಿನ್
ಕೇಮನ್ ದ್ವೀಪಗಳು
ಬೈಬಲ್‌ನಲ್ಲಿರುವ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಆಸೆಯೇ? ಬೈಬಲ್‌ನ ಯಾವುದಾದರೂ ಒಂದು ವಚನ, ಒಬ್ಬ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ಹೆಚ್ಚು ವಿವರ ತಿಳಿದುಕೊಳ್ಳಬೇಕೇ? ಸಮಸ್ಯೆಯೊಂದನ್ನು ನಿಭಾಯಿಸಲು ಬೈಬಲ್‌ನಿಂದ ಸಲಹೆಸೂಚನೆ ಪಡೆಯಲು ಇಷ್ಟವಿದೆಯೇ? ಹಾಗಾದರೆ ನಮ್ಮ ರಾಜ್ಯ ಸಭಾಗೃಹ ಗ್ರಂಥಾಲಯ ನಿಮಗೆ ನೆರವಾಗುವುದು.
ಸಂಶೋಧನೆಗೆ ಅನುಕೂಲ ಸಾಧನಗಳು. ಯೆಹೋವನ ಸಾಕ್ಷಿಗಳ ಎಲ್ಲ ಸಾಹಿತ್ಯ ನಿಮ್ಮಲ್ಲಿ ಇಲ್ಲದಿರಬಹುದು. ಆದರೆ ರಾಜ್ಯ ಸಭಾಗೃಹದ ಗ್ರಂಥಾಲಯದಲ್ಲಿ ನಿಮ್ಮ ಭಾಷೆಯ ಇತ್ತೀಚಿನ ಪ್ರತಿಯೊಂದು ಸಾಹಿತ್ಯ ಲಭ್ಯವಿದೆ. ಅಲ್ಲದೆ ಬೈಬಲಿನ ವಿವಿಧ ಭಾಷಾಂತರಗಳು, ಪದಕೋಶಗಳು ಹಾಗೂ ಇನ್ನಿತರ ಉಪಯುಕ್ತ ಪುಸ್ತಕಗಳು ಅಲ್ಲಿವೆ. ಅವುಗಳನ್ನು ನೀವು ಸಭಾ ಕೂಟಗಳ ಮುನ್ನ ಅಥವಾ ನಂತರ ಉಪಯೋಗಿಸಬಹುದು. ಸಭಾಗೃಹದಲ್ಲಿ ಕಂಪ್ಯೂಟರ್ ಇರುವಲ್ಲಿ ವಾಚ್‌ಟವರ್ ಲೈಬ್ರರಿ ಎಂಬ ಪ್ರೋಗ್ರಾಮ್ ಅನ್ನು ಸಹ ನೀವು ಬಳಸಿಕೊಳ್ಳಬಹುದು. ಅದರಲ್ಲಿ ನಮ್ಮ ಸಾಹಿತ್ಯದ ಭಂಡಾರವೇ ಇದ್ದು ನಿಮಗೆ ಬೇಕಾದ ವಿಷಯ, ಪದ ಅಥವಾ ವಚನದ ಬಗ್ಗೆ ಸಂಶೋಧನೆ ಮಾಡುವುದು ಅತೀ ಸುಲಭ.
ಜೀವನ ಮತ್ತು ಸೇವೆ ಕೂಟದ ವಿದ್ಯಾರ್ಥಿಗಳಿಗೆ ಉಪಯುಕ್ತ. ನೀವು ನೇಮಕವನ್ನು ತಯಾರಿಸುವಾಗ ರಾಜ್ಯ ಸಭಾಗೃಹದಲ್ಲಿರುವ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬಹುದು. ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕರು ಗ್ರಂಥಾಲಯದ ಉಸ್ತುವಾರಿ ಮಾಡುತ್ತಾರೆ. ಪ್ರಕಟಗೊಳ್ಳುವ ಪ್ರತಿಯೊಂದು ಸಾಹಿತ್ಯ ಗ್ರಂಥಾಲಯಕ್ಕೆ ಸೇರ್ಪಡೆಯಾಗುತ್ತಿದೆ ಹಾಗೂ ಸುಸ್ಥಿತಿಯಲ್ಲಿ ಇಡಲಾಗಿದೆ ಎನ್ನುವುದನ್ನು ಅವರು ಖಚಿತಪಡಿಸಿ ಕೊಳ್ಳುತ್ತಾರೆ. ಬೇಕಾದ ಮಾಹಿತಿಯನ್ನು ಸಂಗ್ರಹಿಸುವುದು ಹೇಗೆಂದು ಅವರು ಇಲ್ಲವೇ ನಿಮ್ಮ ಬೈಬಲ್ ಟೀಚರ್ ನಿಮಗೆ ತೋರಿಸುವರು. ಗ್ರಂಥಾಲಯದ ಪುಸ್ತಕಗಳನ್ನು ರಾಜ್ಯ ಸಭಾಗೃಹದಿಂದ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಗ್ರಂಥಾಲಯದ ಪುಸ್ತಕಗಳಲ್ಲಿ ಬರೆಯುವುದಾಗಲಿ ಗುರುತು ಹಾಕುವುದಾಗಲಿ ಮಾಡದೆ ಜೋಪಾನವಾಗಿ ಬಳಸಬೇಕು.
“ದೈವಜ್ಞಾನವನ್ನು” ನಿಕ್ಷೇಪದಂತೆ ಹುಡುಕಬೇಕೆಂದು ಬೈಬಲ್ ತಿಳಿಸುತ್ತದೆ. (ಜ್ಞಾನೋಕ್ತಿ 2:1-5) ಆ ರೀತಿ ಹುಡುಕಲು ರಾಜ್ಯ ಸಭಾಗೃಹದ ಗ್ರಂಥಾಲಯ ನಿಮಗೆ ನೆರವಾಗುತ್ತದೆ.
ರಾಜ್ಯ ಸಭಾಗೃಹ ಗ್ರಂಥಾಲಯದಲ್ಲಿ ಯಾವೆಲ್ಲ ಸೌಲಭ್ಯವಿದೆ?
ಗ್ರಂಥಾಲಯವನ್ನು ಸದುಪಯೋಗಿಸಲು ನಿಮಗೆ ಯಾರು ನೆರವು ನೀಡುವರು?
-
-
ನಮ್ಮ ವೆಬ್‌ಸೈಟ್‌ನಲ್ಲಿ ಏನೇನಿದೆ?ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
-
-
ಅಧ್ಯಾಯ 28
ನಮ್ಮ ವೆಬ್‌ಸೈಟ್‌ನಲ್ಲಿ ಏನೇನಿದೆ?
ಫ್ರಾನ್ಸ್
ಪೋಲೆಂಡ್
ರಷ್ಯ
ಯೇಸು ತನ್ನ ಅನುಯಾಯಿಗಳಿಗೆ ಹೀಗೆ ಹೇಳಿದನು, “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು.” (ಮತ್ತಾಯ 5:16) ಆ ನಿಟ್ಟಿನಲ್ಲಿ ನಾವು ನವನವೀನ ತಂತ್ರಜ್ಞಾನವನ್ನು ಸಹ ಉಪಯೋಗಿಸುತ್ತೇವೆ. ಇಂಟರ್‌ನೆಟ್ ಅದರಲ್ಲೊಂದು. jw.org ನಮ್ಮ ಅಧಿಕೃತ ವೆಬ್‌ಸೈಟ್. ಯೆಹೋವನ ಸಾಕ್ಷಿಗಳಾದ ನಮ್ಮ ನಂಬಿಕೆ, ಕಾರ್ಯಚಟುವಟಿಕೆ ಮುಂತಾದ ಅನೇಕ ಮಾಹಿತಿ ಅದರಲ್ಲಿ ಲಭ್ಯ. ನಮ್ಮ ವೆಬ್‌ಸೈಟ್‌ನ ವೈಶಿಷ್ಟ್ಯಗಳೇನು?
ನಿಮ್ಮ ಪ್ರಶ್ನೆಗಳಿಗೆ ಬೈಬಲ್ ನೀಡುವ ಉತ್ತರ ಅದರಲ್ಲಿದೆ. ಜನರ ಮನಸ್ಸನ್ನು ಸದಾ ಕಾಡುವ ಪ್ರಶ್ನೆಗಳಿಗೆ ಅಲ್ಲಿ ಸೂಕ್ತ ಉತ್ತರ ಸಿಗುತ್ತದೆ. ಉದಾಹರಣೆಗೆ, ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಮತ್ತು ಸತ್ತವರು ಮತ್ತೆ ಬದುಕಿ ಬರುತ್ತಾರಾ? ಎಂಬ ಕರಪತ್ರ ನಮ್ಮ ವೆಬ್‌ಸೈಟ್‌ನಲ್ಲಿ 600ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯ. ನೂತನ ಲೋಕ ಭಾಷಾಂತರ ಬೈಬಲ್ ಸಹ 130ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯ. ಅಲ್ಲದೆ ಬೈಬಲ್ ಕಲಿಕೆಗೆ ನೆರವಾಗುವ ಬಹಳ ಪುಸ್ತಕಗಳು ಅದರಲ್ಲಿವೆ. ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕ ಅವುಗಳಲ್ಲಿ ಒಂದು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಇತ್ತೀಚಿನ ಸಂಚಿಕೆಗಳೂ ಆ ಸೈಟ್‌ನಲ್ಲಿವೆ. ಇವನ್ನೆಲ್ಲ ನೀವು ವೆಬ್‌ಸೈಟ್‌ನಲ್ಲಿ ಓದಬಹುದು. ಆಡಿಯೋಗಳನ್ನು ಆಲಿಸಬಹುದು. ಬೇಕಿದ್ದಲ್ಲಿ ಅವುಗಳನ್ನು MP3, PDF ಅಥವಾ EPUB ಫಾರ್ಮ್ಯಾಟ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬೈಬಲ್ ವಿಷಯಗಳನ್ನು ತಿಳಿಯಲು ಇಚ್ಛಿಸುವ ಜನರಿಗೆ ಅವರ ಭಾಷೆಯಲ್ಲಿ ಕೆಲವೊಂದು ಮಾಹಿತಿಯನ್ನು ಮುದ್ರಿಸಿ ಕೊಡಬಹುದು. ಹಲವಾರು ಸನ್ನೆ ಭಾಷೆಗಳ ವಿಡಿಯೋ ಪ್ರಕಾಶನಗಳೂ ಲಭ್ಯ. ಬೈಬಲ್ ನಾಟಕಗಳು, ನಾಟಕ ರೂಪದ ಬೈಬಲ್ ವಾಚನಗಳು ಮತ್ತು ಇಂಪಾದ ಸಂಗೀತಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಿಡುವಿನ ಸಮಯದಲ್ಲಿ ಸವಿಯಬಹುದು.
ಯೆಹೋವನ ಸಾಕ್ಷಿಗಳಿಗೆ ಸಂಬಂಧಿಸಿದ ಸತ್ಯ ವರದಿಗಳು ಅದರಲ್ಲಿವೆ. ನಾವು ಹಮ್ಮಿಕೊಂಡ ಕಾರ್ಯಕ್ರಮ, ಭೂವ್ಯಾಪಕವಾಗಿ ಸುವಾರ್ತೆ ಸಾರುವ ಕೆಲಸದ ಪ್ರಗತಿ, ವಿಪತ್ತಿನ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯ ಇತ್ಯಾದಿ ವರದಿಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಓದಬಹುದು. ಮುಂದೆ ನಡೆಯಲಿರುವ ಅಧಿವೇಶನಗಳ ವಿವರ ಮತ್ತು ನಮ್ಮ ಬ್ರಾಂಚ್ ಆಫೀಸ್‌ಗಳ ವಿಳಾಸ ಸಹ ಅಲ್ಲಿದೆ.
ಹೀಗೆ ಭೂಮಿಯ ಮೂಲೆಮೂಲೆಗೂ ಸತ್ಯದ ಬೆಳಕನ್ನು ಪ್ರಕಾಶಿಸಲು ಸಾಧ್ಯವಾಗುತ್ತಿದೆ. ಭೂಪಟದ ಯಾವುದೋ ಮೂಲೆಯಲ್ಲಿರುವ ಅಂಟಾರ್ಟಿಕ್ ಖಂಡದ ಜನರು ಸಹ ನಮ್ಮ ವೆಬ್‌ಸೈಟ್‌ನ ಪ್ರಯೋಜನ ಪಡೆಯುತ್ತಿದ್ದಾರೆ. “ಯೆಹೋವನ ವಾಕ್ಯವು ತ್ವರಿತವಾಗಿ ಹಬ್ಬುತ್ತಾ” ಪ್ರಪಂಚದಾದ್ಯಂತ ಇರುವ ಎಲ್ಲ ಜನರಿಗೆ ತಿಳಿದು ಆತನ ನಾಮ ಮಹಿಮೆಗೊಳ್ಳಲಿ ಎನ್ನುವುದೇ ನಮ್ಮ ಪ್ರಾರ್ಥನೆ.—2 ಥೆಸಲೊನೀಕ 3:1.
ಬೈಬಲ್ ಸತ್ಯವನ್ನು ಕಲಿಯಲು ಜನರಿಗೆ jw.org ವೆಬ್‌ಸೈಟ್ ಹೇಗೆ ನೆರವಾಗುತ್ತಿದೆ?
ನಮ್ಮ ವೆಬ್‌ಸೈಟ್‌ನಲ್ಲಿ ಯಾವ ಮಾಹಿತಿಯನ್ನು ಜಾಲಾಡಲು ಇಷ್ಟಪಡುತ್ತೀರಿ?
-