ದೇವರು ಇದನ್ನೇ ಉದ್ದೇಶಿಸಿದನೊ?
ಯಾವುದೇ ವಾರ್ತಾಪತ್ರಿಕೆಯನ್ನು ಓದಿ, ಟಿವಿ ನೋಡಿ, ಇಲ್ಲವೆ ರೇಡಿಯೊ ಕೇಳಿ. ಪಾತಕ, ಯುದ್ಧ ಮತ್ತು ಭಯೋತ್ಪಾದನೆಯ ಬಗ್ಗೆ ಎಷ್ಟೊಂದು ಸುದ್ದಿಗಳಿರುತ್ತವೆ! ನಿಮ್ಮ ಸ್ವಂತ ತಾಪತ್ರಯಗಳ ಕುರಿತು ಯೋಚಿಸಿರಿ. ಬಹುಶಃ ಅಸ್ವಸ್ಥತೆ ಇಲ್ಲವೆ ಒಬ್ಬ ಪ್ರಿಯ ವ್ಯಕ್ತಿಯ ಮರಣವು ನಿಮಗೆ ತುಂಬ ಸಂಕಟವನ್ನು ಉಂಟುಮಾಡುತ್ತಿರಬಹುದು. ಸತ್ಪುರುಷನಾದ ಯೋಬನಂತೆಯೇ ನಿಮಗೂ ‘ವ್ಯಥೆಯಲ್ಲಿ ತೋಯ್ದಿರುವ’ ಅನಿಸಿಕೆಯಾಗುತ್ತಿರಬಹುದು.—ಯೋಬ 10:15, ದಿ ಹೋಲಿ ಬೈಬಲ್ ಇನ್ ದ ಲ್ಯಾಂಗ್ವೇಜ್ ಆಫ್ ಟುಡೇ.
ಹೀಗೆ ಪ್ರಶ್ನಿಸಿಕೊಳ್ಳಿ:
ದೇವರು ನನಗೂ ಉಳಿದೆಲ್ಲಾ ಮಾನವಕುಲಕ್ಕೂ ಇದನ್ನೇ ಉದ್ದೇಶಿಸಿದನೊ?
ನನ್ನ ಸಮಸ್ಯೆಗಳನ್ನು ನಿಭಾಯಿಸಲು ನಾನೆಲ್ಲಿ ಸಹಾಯವನ್ನು ಕಂಡುಕೊಳ್ಳಬಲ್ಲೆ?
ನಾವೆಂದಾದರೂ ಭೂಮಿಯ ಮೇಲೆ ಶಾಂತಿಯನ್ನು ನೋಡುವೆವು ಎಂಬುದಕ್ಕೆ ಯಾವುದೇ ನಿರೀಕ್ಷೆ ಇದೆಯೆ?
ಈ ಪ್ರಶ್ನೆಗಳಿಗೆ ಬೈಬಲ್ ತೃಪ್ತಿಕರವಾದ ಉತ್ತರಗಳನ್ನು ಒದಗಿಸುತ್ತದೆ.
ದೇವರು ಭೂಮಿಯ ಮೇಲೆ ಈ ಬದಲಾವಣೆಗಳನ್ನು ತರುವನೆಂದು ಬೈಬಲ್ ಬೋಧಿಸುತ್ತದೆ.
“ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4
“ಕುಂಟನು ಜಿಂಕೆಯಂತೆ ಹಾರುವನು.”—ಯೆಶಾಯ 35:5
“ಕುರುಡರ ಕಣ್ಣು ಕಾಣುವದು.”—ಯೆಶಾಯ 35:5
‘ಸಮಾಧಿಗಳಲ್ಲಿರುವವರೆಲ್ಲರು ಎದ್ದು ಹೊರಗೆ ಬರುವರು.’ —ಯೋಹಾನ 5:28, 29
“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24
“ಭೂಮಿಯ ಮೇಲೆ ದವಸಧಾನ್ಯವು ಸಮೃದ್ಧವಾಗಿರುವುದು.” —ಕೀರ್ತನೆ 72:16, NW
ಬೈಬಲು ಏನು ಬೋಧಿಸುತ್ತದೊ ಅದರಿಂದ ಪ್ರಯೋಜನ ಪಡೆಯಿರಿ
ಹಿಂದಿನ ಪುಟಗಳಲ್ಲಿ ಏನನ್ನು ತೋರಿಸಲಾಗಿದೆಯೊ ಅದನ್ನು ಬರಿಯ ಪೊಳ್ಳು ವಿಚಾರಗಳೆಂದು ಹೇಳಿ ಒಡನೆ ತಳ್ಳಿಹಾಕಬೇಡಿ. ಈ ಸಂಗತಿಗಳನ್ನು ನೆರವೇರಿಸುವೆನೆಂದು ಮಾತುಕೊಟ್ಟಿರುವಾತನು ದೇವರು ಮತ್ತು ಅದನ್ನು ಆತನು ಹೇಗೆ ಮಾಡುವನೆಂಬುದನ್ನು ಬೈಬಲು ವಿವರಿಸುತ್ತದೆ.
ಆದರೆ ಬೈಬಲು ಇದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತದೆ. ನೀವು ಈಗಲೂ ನಿಜವಾಗಿಯೂ ಸಂತೃಪ್ತಿಕರವಾದ ಜೀವನವನ್ನು ಅನುಭವಿಸುವುದಕ್ಕೆ ಇದು ಕೀಲಿಕೈಯನ್ನು ಒದಗಿಸುತ್ತದೆ. ನಿಮಗಿರುವ ಚಿಂತೆಗಳು ಮತ್ತು ತೊಂದರೆಗಳ ಕುರಿತು ಒಂದು ಕ್ಷಣ ಯೋಚಿಸಿರಿ. ಇವುಗಳಲ್ಲಿ ಹಣದ ತಾಪತ್ರಯ, ಕೌಟುಂಬಿಕ ಸಮಸ್ಯೆಗಳು, ಆರೋಗ್ಯ ನಷ್ಟ ಅಥವಾ ಪ್ರಿಯರಾದವರೊಬ್ಬರ ಮರಣವು ಒಳಗೂಡಿರಬಹುದು. ಇಂದಿನ ಸಮಸ್ಯೆಗಳನ್ನು ನಿಭಾಯಿಸಲು ಬೈಬಲು ನಿಮಗೆ ಸಹಾಯಮಾಡಬಲ್ಲದು. ಮತ್ತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕವೂ ಅದು ನಿಮಗೆ ಉಪಶಮನವನ್ನು ನೀಡಬಲ್ಲದು:
ನಾವೇಕೆ ಕಷ್ಟಸಂಕಟವನ್ನು ಅನುಭವಿಸುತ್ತೇವೆ?
ಜೀವನದ ಚಿಂತೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು?
ನಾವು ನಮ್ಮ ಕುಟುಂಬ ಜೀವನವನ್ನು ಹೇಗೆ ಹೆಚ್ಚು ಸಂತೋಷಕರವನ್ನಾಗಿ ಮಾಡಬಲ್ಲೆವು?
ನಾವು ಸತ್ತಾಗ ನಮಗೇನಾಗುತ್ತದೆ?
ಮೃತಪಟ್ಟ ನಮ್ಮ ಪ್ರಿಯರನ್ನು ನಾವೆಂದಾದರೂ ನೋಡುವೆವೊ?
ಭವಿಷ್ಯತ್ತಿಗಾಗಿ ದೇವರು ಮಾಡಿರುವ ವಾಗ್ದಾನಗಳನ್ನು ಆತನು ನೆರವೇರಿಸುವನೆಂದು ನಮಗೆ ಹೇಗೆ ಖಾತ್ರಿಯಿರಬಲ್ಲದು?
ನೀವು ಈ ಪುಸ್ತಕವನ್ನು ಓದುತ್ತಿದ್ದೀರಿ ಎಂಬ ನಿಜತ್ವವು, ಬೈಬಲು ಏನನ್ನು ಬೋಧಿಸುತ್ತದೊ ಅದನ್ನು ನೀವು ಕಂಡುಕೊಳ್ಳಲು ಬಯಸುತ್ತೀರಿ ಎಂಬುದನ್ನು ತೋರಿಸುತ್ತದೆ. ಈ ಪುಸ್ತಕವು ನಿಮಗೆ ಸಹಾಯಮಾಡುವುದು. ಪುಟದ ಕೆಳಬದಿಯಲ್ಲಿ ಪ್ಯಾರಗ್ರಾಫ್ಗಳಿಗೆ ತಾಳೆಬೀಳುವ ಪ್ರಶ್ನೆಗಳಿರುವುದನ್ನು ಗಮನಿಸಿ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಚರ್ಚಿಸುವಾಗ ಈ ಪ್ರಶ್ನೋತ್ತರ ವಿಧಾನವನ್ನು ಉಪಯೋಗಿಸುವುದರಲ್ಲಿ ಲಕ್ಷಾಂತರ ಜನರು ಸಂತೋಷಪಟ್ಟಿರುತ್ತಾರೆ. ನೀವೂ ಹಾಗೆ ಸಂತೋಷಪಡುವಿರೆಂದು ನಮ್ಮ ಹಾರೈಕೆ. ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬುದನ್ನು ಕಲಿಯುವ ರೋಮಾಂಚಕವೂ ತೃಪ್ತಿಕರವೂ ಆದ ಅನುಭವದಲ್ಲಿ ನೀವೀಗ ಸಂತೋಷಿಸುವಾಗ ದೇವರ ಆಶೀರ್ವಾದವು ನಿಮ್ಮ ಮೇಲಿರಲಿ!