ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • cl ಅಧ್ಯಾ. 6 ಪು. 57-66
  • ನಾಶಕಾರಕ ಶಕ್ತಿ “ಯೆಹೋವನು ಯುದ್ಧಶೂರನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾಶಕಾರಕ ಶಕ್ತಿ “ಯೆಹೋವನು ಯುದ್ಧಶೂರನು”
  • ಯೆಹೋವನ ಸಮೀಪಕ್ಕೆ ಬನ್ನಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೈವಿಕ ಯುದ್ಧಕ್ಕೆ ಎದುರಾಗಿ ಮಾನವ ಕದನಗಳು
  • ಶಾಂತಿಯ ದೇವರು ಯುದ್ಧಮಾಡಲು ನಿರ್ಬಂಧಕ್ಕೊಳಗಾಗುವುದೇಕೆ?
  • ದುಷ್ಟತನವನ್ನು ತೆಗೆದುಬಿಡಲು ದೇವರು ಕ್ರಿಯೆಗೈಯುತ್ತಾನೆ
  • ತನ್ನ ನಾಮದ ಪರವಾಗಿ ಹೋರಾಡುವುದು
  • ತನ್ನ ಜನರಿಗೋಸ್ಕರವಾಗಿ ಹೋರಾಡುವುದು
  • ‘ಯುದ್ಧಶೂರನ’ ಸಮೀಪಕ್ಕೆ ಬನ್ನಿರಿ
  • ಸತ್ಯ ದೇವರು ಯಾರು?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಯೆಹೋವ—ಸತ್ಯ ಮತ್ತು ಜೀವಂತ ದೇವರು
    ಕಾವಲಿನಬುರುಜು—1993
  • ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ’
    2007ರ ಇಂಗ್ಲಿಷ್‌ ಕಾವಲಿನಬುರುಜು ಪತ್ರಿಕೆಗಳಿಂದ ಅಧ್ಯಯನ ಲೇಖನಗಳು
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಯೆಹೋವನ ಸಮೀಪಕ್ಕೆ ಬನ್ನಿರಿ
cl ಅಧ್ಯಾ. 6 ಪು. 57-66
ಯೆಹೋವ ದೇವರು ಅಹಂಕಾರಿ ಫರೋಹನನ್ನೂ ಈಜಿಪ್ಟಿನ ಸೇನೆಯನ್ನೂ ಕೆಂಪು ಸಮುದ್ರದಲ್ಲಿ ನಾಶ ಮಾಡಿದನು

ಅಧ್ಯಾಯ 6

ನಾಶಕಾರಕ ಶಕ್ತಿ “ಯೆಹೋವನು ಯುದ್ಧಶೂರನು”

1-3. (ಎ) ಇಸ್ರಾಯೇಲ್ಯರು ಐಗುಪ್ತ್ಯರಿಂದ ಯಾವ ಬೆದರಿಕೆಯನ್ನು ಎದುರಿಸಿದರು? (ಬಿ) ಯೆಹೋವನು ತನ್ನ ಜನರಿಗೋಸ್ಕರ ಹೇಗೆ ಯುದ್ಧಮಾಡಿದನು?

ಇಸ್ರಾಯೇಲ್ಯರು ಸಿಕ್ಕಿಬಿದ್ದಿದ್ದರು​—ಅತ್ತ ತಡೆಗೋಡೆಯಂತಿದ್ದ ಪರ್ವತ ಪ್ರಪಾತಗಳು ಮತ್ತು ಇತ್ತ ದುರ್ಗಮವಾದ ಕಡಲು. ನಿರ್ದಯವಾದ ಕೊಲ್ಲುವ ಯಂತ್ರದಂತಿದ್ದ ಐಗುಪ್ತ ಸೇನೆಯು ಅವರನ್ನು ಸಂಹರಿಸಿಬಿಡುವ ದೃಢಸಂಕಲ್ಪದಿಂದ ಬೆಂಬತ್ತಿಬರುತ್ತಾ ಇತ್ತು.a ಆದರೂ ನಿರಾಶಾಹೀನರಾಗದಂತೆ ಮೋಶೆಯು ಅವರನ್ನು ಉತ್ತೇಜಿಸುತ್ತಾನೆ. “ಯೆಹೋವನೇ ನಿಮಗಾಗಿ ಯುದ್ಧಮಾಡುವನು” ಎಂಬ ಆಶ್ವಾಸನೆಯನ್ನು ಅವರಿಗೆ ಕೊಡುತ್ತಾನೆ.​—ವಿಮೋಚನಕಾಂಡ 14:14.

2 ಆದರೂ ಮೋಶೆಯೇ ಯೆಹೋವನಿಗೆ ಮೊರೆಯಿಟ್ಟನೆಂದು ವ್ಯಕ್ತವಾಗುತ್ತದೆ, ಮತ್ತು ದೇವರು ಪ್ರತಿಕ್ರಿಯಿಸುತ್ತಾ ಅಂದದ್ದು: “ನೀನು ನನಗೆ ಮೊರೆಯಿಡುವದೇನು? . . . ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು.” (ವಿಮೋಚನಕಾಂಡ 14:15, 16) ಅಲ್ಲಿ ಸಂಭವಿಸಲಾರಂಭಿಸಿದ ಘಟನೆಗಳನ್ನು ತುಸು ಊಹಿಸಿಕೊಳ್ಳಿರಿ. ಯೆಹೋವನು ಆ ಕೂಡಲೇ ತನ್ನ ದೂತನಿಗೆ ಆಜ್ಞಾಪಿಸುತ್ತಾನೆ, ಮತ್ತು ಮೇಘಸ್ತಂಭವು ಬಂದು ಇಸ್ರಾಯೇಲ್ಯರ ಹಿಂದೆ ನಿಂತುಕೊಂಡಿತು. ಅದು ಪ್ರಾಯಶಃ ಗೋಡೆಯೋಪಾದಿ ಚಾಚುತ್ತಾ ಐಗುಪ್ತ್ಯರ ಆಕ್ರಮಣವನ್ನು ಅಡ್ಡಗಟ್ಟಿತು. (ವಿಮೋಚನಕಾಂಡ 14:19, 20; ಕೀರ್ತನೆ 105:39) ಆಗ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬಲವಾದ ಬಿರುಗಾಳಿ ಬೀಸಿತು, ಮತ್ತು ಸಮುದ್ರವು ವಿಭಾಗವಾಯಿತು. ನೀರು ಹೇಗೊ ಘನೀಭವಿಸಿ ಗೋಡೆಯಂತೆ ನಿಲ್ಲುತ್ತದೆ. ಇಡೀ ಜನಾಂಗವು ಹಾದುಹೋಗುವಷ್ಟು ಅಗಲವಾದ ದಾರಿಯು ತೆರೆಯಲ್ಪಡುತ್ತದೆ!​—ವಿಮೋಚನಕಾಂಡ 14:21; 15:8.

3 ಈ ಮಹಾ ಶಕ್ತಿಯ ಪ್ರದರ್ಶನವನ್ನು ಕಂಡಾಗ, ಫರೋಹನು ತನ್ನ ದಂಡುಗಳಿಗೆ ಹಿಂದೆಹೋಗುವಂತೆ ಆಜ್ಞಾಪಿಸಬೇಕಿತ್ತು. ಆದರೆ ಅದರ ಬದಲು, ಅಹಂಕಾರಿಯಾದ ಫರೋಹನು ಮುಂದೊತ್ತಿ ಆಕ್ರಮಿಸುವ ಅಪ್ಪಣೆ ಕೊಡುತ್ತಾನೆ. (ವಿಮೋಚನಕಾಂಡ 14:23) ಐಗುಪ್ತ್ಯರು ಬೆನ್ನಟ್ಟುತ್ತಾ ಸಮುದ್ರತಳಕ್ಕೆ ಧಾವಿಸುತ್ತಾರೆ. ಆದರೆ ಅವರ ರಥಗಳ ಚಕ್ರಗಳು ಬಿದ್ದುಹೋಗಲಾಗಿ, ಅವರ ಆಕ್ರಮಣವು ಕೂಡಲೆ ಗಲಿಬಿಲಿಯಲ್ಲಿ ಕೊನೆಗೊಳ್ಳುತ್ತದೆ. ಇಸ್ರಾಯೇಲ್ಯರು ಸುರಕ್ಷಿತರಾಗಿ ಆಚೆ ದಡವನ್ನು ಸೇರಿದಾಕ್ಷಣ, ಯೆಹೋವನು ಮೋಶೆಗೆ ಆಜ್ಞಾಪಿಸಿದ್ದು: ‘ಸಮುದ್ರದ ಮೇಲೆ ನಿನ್ನ ಕೈ ಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಣುಗಿಸುವದು.’ ಆ ನೀರಿನ ಗೋಡೆಗಳು ಕುಸಿದು ಬೀಳುತ್ತವೆ, ಮತ್ತು ಫರೋಹನೂ ಅವನ ಸೇನೆಯೂ ನೀರಿನಲ್ಲಿ ಮುಳುಗಿ ಹೋಗುತ್ತಾರೆ!​—ವಿಮೋಚನಕಾಂಡ 14:24-28; ಕೀರ್ತನೆ 136:15.

ಯೆಹೋವನು ಕೆಂಪು ಸಮುದ್ರದ ಬಳಿ ಒಬ್ಬ “ಯುದ್ಧಶೂರ”ನಾಗಿ ಪರಿಣಮಿಸಿದನು

4. (ಎ) ಕೆಂಪು ಸಮುದ್ರದ ಬಳಿಯಲ್ಲಿ ಯೆಹೋವನು ಏನಾಗಿ ಪರಿಣಮಿಸಿದನು? (ಬಿ) ಯೆಹೋವನ ಕುರಿತಾದ ಈ ಚಿತ್ರಣಕ್ಕೆ ಕೆಲವರು ಹೇಗೆ ಪ್ರತಿಕ್ರಿಯೆ ತೋರಿಸಾರು?

4 ಇಸ್ರಾಯೇಲ್‌ ಜನಾಂಗವನ್ನು ದೇವರು ಕೆಂಪು ಸಮುದ್ರದ ಬಳಿಯಲ್ಲಿ ಹೀಗೆ ಪಾರುಗೊಳಿಸಿ ಕಾಪಾಡಿದ್ದು, ಮಾನವರೊಂದಿಗೆ ದೇವರು ನಡಿಸಿದ ವ್ಯವಹಾರಗಳ ಇತಿಹಾಸದಲ್ಲಿ ಒಂದು ಬಹುಮುಖ್ಯವಾದ ಘಟನೆ. ಅಲ್ಲಿ ಯೆಹೋವನು ತನ್ನನ್ನು “ಯುದ್ಧಶೂರ”ನಾಗಿ ರುಜುಪಡಿಸಿದನು. (ವಿಮೋಚನಕಾಂಡ 15:3) ಆದರೆ ಯೆಹೋವನ ಕುರಿತಾದ ಈ ಚಿತ್ರಣಕ್ಕೆ ನಿಮ್ಮ ಪ್ರತಿಕ್ರಿಯೆಯೇನು? ಯುದ್ಧವು ಮಾನವಕುಲಕ್ಕೆ ಬಹಳ ಸಂಕಟವನ್ನೂ ದುರವಸ್ಥೆಯನ್ನೂ ತಂದಿರುತ್ತದೆ. ಹೀಗಿರಲಾಗಿ, ದೇವರ ನಾಶಕಾರಕ ಶಕ್ತಿಯ ಉಪಯೋಗವು, ನೀವಾತನ ಸಮೀಪಕ್ಕೆ ಬರುವಂತೆ ಪ್ರೋತ್ಸಾಹಕ ಅಂಶವಾಗಿರುವ ಬದಲಿಗೆ ಒಂದು ತಡೆಗಟ್ಟಾಗಿರುವಂತೆ ತೋರಬಲ್ಲದೊ?

ದೈವಿಕ ಯುದ್ಧಕ್ಕೆ ಎದುರಾಗಿ ಮಾನವ ಕದನಗಳು

5, 6. (ಎ) ದೇವರನ್ನು “ಸೇನಾಧೀಶ್ವರನಾದ ಯೆಹೋವನು” ಎಂದು ಕರೆದಿರುವುದು ಯೋಗ್ಯವಾಗಿದೆಯೇಕೆ? (ಬಿ) ದೈವಿಕ ಹೋರಾಟಗಳು ಮಾನವ ಹೋರಾಟಗಳಿಗಿಂತ ಹೇಗೆ ಭಿನ್ನವಾಗಿವೆ?

5 ಬೈಬಲಿನ ಮೂಲ ಭಾಷೆಗಳಿಗನುಸಾರ, ದೇವರಿಗೆ “ಸೇನಾಧೀಶ್ವರನಾದ ಯೆಹೋವನು” ಎಂಬ ಬಿರುದು ಹೀಬ್ರು ಶಾಸ್ತ್ರಗಳಲ್ಲಿ ಹೆಚ್ಚುಕಡಿಮೆ ಮುನ್ನೂರು ಸಾರಿ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಎರಡು ಸಾರಿ ಕೊಡಲ್ಪಟ್ಟಿದೆ. (1 ಸಮುವೇಲ 1:11) ಪರಮಾಧಿಕಾರಿ ಅಧಿಪತಿಯಾದ ಯೆಹೋವನ ಕೈಕೆಳಗೆ ದೇವದೂತ ಗಣಗಳ ಮಹಾ ಸೈನ್ಯವು ಇದೆ. (ಯೆಹೋಶುವ 5:13-15; 1 ಅರಸುಗಳು 22:19) ಈ ಸೇನೆಯ ನಾಶಕಾರಕ ಶಕ್ತಿಯು ಅಪಾರವೇ ಸರಿ. (ಯೆಶಾಯ 37:36) ಮಾನವರು ಮಾಡುವ ನಾಶನದ ಕುರಿತಾಗಿ ನೆನಸುವುದೇ ಅಹಿತಕರವೆಂಬುದು ನಿಜ. ಆದರೆ ದೇವರ ಯುದ್ಧಗಳಾದರೊ ಮಾನವರ ಕ್ಷುಲ್ಲಕ ಕದನಗಳಂತಿರುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಲೇಬೇಕು. ಮಿಲಿಟರಿ ಮತ್ತು ರಾಜಕೀಯ ಮುಖಂಡರು ತಾವು ನಡೆಸುವಂಥ ಯುದ್ಧಗಳಿಗೆ ಉದಾತ್ತ ಉದ್ದೇಶಗಳಿವೆಯೆಂದು ಹೇಳಲು ಪ್ರಯತ್ನಿಸಬಹುದು. ಆದರೆ ಮಾನವ ಯುದ್ಧದಲ್ಲಿ ಅನಿವಾರ್ಯವಾಗಿ ದುರಾಶೆ ಮತ್ತು ಸ್ವಾರ್ಥವು ಇದ್ದೇ ಇರುತ್ತದೆ.

6 ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನಾದರೊ ಭಾವನೆಗಳಿಂದ ಕುರುಡನಾಗಿ ಕಾರ್ಯವೆಸಗುವುದಿಲ್ಲ. ಧರ್ಮೋಪದೇಶಕಾಂಡ 32:4 ಹೇಳುವುದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು.” ಅಂಕೆರಹಿತ ಕ್ರೋಧ, ಕ್ರೌರ್ಯ, ಮತ್ತು ಹಿಂಸಾಚಾರವನ್ನು ದೇವರ ವಾಕ್ಯವು ಖಂಡಿಸುತ್ತದೆ. (ಆದಿಕಾಂಡ 49:7; ಕೀರ್ತನೆ 11:5) ಹೀಗೆ ಯೆಹೋವನು ಕಾರಣವಿಲ್ಲದೆ ಎಂದೂ ಕ್ರಿಯೆಗೈಯುವುದಿಲ್ಲ. ಆತನು ತನಗಿರುವ ನಾಶಕಾರಕ ಶಕ್ತಿಯನ್ನು ಮಿತವಾದ ರೀತಿಯಲ್ಲಿ, ಮತ್ತು ಒಂದು ಸಂಕಷ್ಟದ ಪರಿಸ್ಥಿತಿಯನ್ನು ನಿರ್ವಹಿಸಲು ಅನ್ಯ ಮಾರ್ಗವೇ ಇರದಿದ್ದಾಗ, ಕೊನೆಯ ಉಪಾಯದೋಪಾದಿ ಬಳಸುತ್ತಾನೆ. ಇದು ಆತನು ತನ್ನ ಪ್ರವಾದಿಯಾದ ಯೆಹೆಜ್ಕೇಲನಿಗೆ ಹೇಳಿದ ರೀತಿಯಲ್ಲೇ ಇದೆ: “ಕರ್ತನಾದ ಯೆಹೋವನು ಇಂತೆನ್ನುತ್ತಾನೆ​—ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವುಂಟೋ? ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ.”​—ಯೆಹೆಜ್ಕೇಲ 18:23.

7, 8. (ಎ) ಯೋಬನು ತನ್ನ ಸಂಕಷ್ಟಗಳ ಕುರಿತು ಯಾವ ತಪ್ಪು ತೀರ್ಮಾನವನ್ನು ಮಾಡಿದನು? (ಬಿ) ಈ ವಿಷಯದಲ್ಲಿ ಯೋಬನ ಆಲೋಚನೆಯನ್ನು ಎಲೀಹು ಸರಿಪಡಿಸಿದ್ದು ಹೇಗೆ? (ಸಿ) ಯೋಬನ ಅನುಭವದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

7 ಹಾಗಾದರೆ ಯೆಹೋವನು ತನ್ನ ನಾಶಕಾರಕ ಶಕ್ತಿಯನ್ನು ಉಪಯೋಗಿಸುವುದಾದರೂ ಏಕೆ? ಅದನ್ನು ಉತ್ತರಿಸುವದಕ್ಕೆ ಮುಂಚೆ, ನೀತಿವಂತನಾದ ಯೋಬನನ್ನು ನಾವು ನೆನಪಿಗೆ ತರುವುದು ಉಚಿತವಾದೀತು. ಯೋಬನು​—ವಾಸ್ತವದಲ್ಲಿ ಯಾವನೇ ಮಾನವನು​—ಸಂಕಷ್ಟಕಾಲದಲ್ಲಿ ದೇವರಿಗೆ ನಂಬಿಗಸ್ತನಾಗಿ ಉಳಿಯುವನೊ ಎಂದು ಸೈತಾನನು ಸವಾಲನ್ನೊಡ್ಡಿದನು. ಯೋಬನ ನಂಬಿಗಸ್ತ ಸಮಗ್ರತೆಯನ್ನು ಪರೀಕ್ಷಿಸುವಂತೆ ಸೈತಾನನಿಗೆ ಅನುಮತಿ ನೀಡುವ ಮೂಲಕ ಯೆಹೋವನು ಆ ಸವಾಲನ್ನು ಸ್ವೀಕರಿಸಿದನು. ಪರಿಣಾಮವಾಗಿ ಯೋಬನು ರೋಗಪೀಡಿತನಾದನು, ಅವನ ಐಶ್ವರ್ಯವೆಲ್ಲವೂ ನಷ್ಟವಾಯಿತು, ಮತ್ತು ಅವನು ತನ್ನ ಎಲ್ಲಾ ಮಕ್ಕಳನ್ನೂ ಕಳೆದುಕೊಂಡನು. (ಯೋಬ 1:1–2:8) ಇದರಲ್ಲಿ ಒಳಗೂಡಿದ್ದ ವಾದಾಂಶಗಳ ಬಗ್ಗೆ ಯೋಬನಿಗೆ ತಿಳಿದಿರಲಿಲ್ಲವಾದ್ದರಿಂದ, ದೇವರು ಅನ್ಯಾಯವಾಗಿ ತನ್ನನ್ನು ಶಿಕ್ಷಿಸುತ್ತಿರುವುದರಿಂದಲೇ ಈ ಸಂಕಷ್ಟವು ತನಗೆ ಬಂದಿದೆಯೆಂದು ಯೋಬನು ತಪ್ಪಾಗಿ ತೀರ್ಮಾನಿಸಿದನು. ತನ್ನನ್ನು “ಗುರಿ”ಮಾಡಿದ್ದು ಮತ್ತು “ಶತ್ರು”ವಾಗಿ ಮಾಡಿದ್ದು ಏಕೆಂಬದಾಗಿ ಅವನು ದೇವರಿಗೆ ಕೇಳಿದನು.​—ಯೋಬ 7:20; 13:24.

8 ಎಲೀಹು ಎಂಬ ಯೌವನಸ್ಥನು ಯೋಬನ ಯೋಚನೆಯಲ್ಲಿದ್ದ ದೋಷವನ್ನು ಹೊರಗೆಡವುತ್ತಾ ಅಂದದ್ದು: “ನನ್ನ ನೀತಿಯು ದೇವರ ನೀತಿಗಿಂತ ಹೆಚ್ಚೆಂದುಕೊಳ್ಳುತ್ತೀಯಾ?” (ಯೋಬ 35:3) ಹೌದು, ದೇವರಿಗಿಂತ ನಮಗೆ ಹೆಚ್ಚು ತಿಳಿದಿದೆ ಅಥವಾ ದೇವರು ಅನ್ಯಾಯದಿಂದ ವರ್ತಿಸಿದ್ದಾನೆ ಎಂದು ಊಹಿಸಿಕೊಳ್ಳುವುದು ಅವಿವೇಕವೇ ಸರಿ. “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ!” ಎಂದು ಎಲೀಹು ಘೋಷಿಸಿದನು. “ಇಂಥ ಸರ್ವಶಕ್ತನನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವದಿಲ್ಲ” ಎಂದನಾತನು ತದನಂತರ. (ಯೋಬ 34:10; 36:22, 23; 37:23) ದೇವರು ಹೋರಾಡುವಾಗ, ಒಂದು ಒಳ್ಳೆಯ ಹೇತುವಿನಿಂದಾಗಿಯೆ ಹೋರಾಡುತ್ತಾನೆಂಬ ವಿಷಯದಲ್ಲಿ ನಾವು ನಿಶ್ಚಿತರಾಗಿರಬಲ್ಲೆವು. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಶಾಂತಿಯ ದೇವರಾಗಿರುವ ಆತನು ಕೆಲವೊಮ್ಮೆ ಯೋಧನ ಪಾತ್ರವನ್ನು ವಹಿಸುವುದೇಕೆ ಎಂಬುದಕ್ಕೆ ಕೆಲವು ಕಾರಣಗಳನ್ನು ಪರಿಶೋಧಿಸೋಣ.​—1 ಕೊರಿಂಥ 14:33.

ಶಾಂತಿಯ ದೇವರು ಯುದ್ಧಮಾಡಲು ನಿರ್ಬಂಧಕ್ಕೊಳಗಾಗುವುದೇಕೆ?

9. ಶಾಂತಿಯ ದೇವರು ಹೋರಾಡುವುದೇಕೆ?

9 ದೇವರನ್ನು “ಯುದ್ಧಶೂರನು” ಎಂದು ಹೊಗಳಿದ ನಂತರ, “ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ . . . ಎಲ್ಲಿ?” ಎಂದು ಮೋಶೆ ಘೋಷಿಸಿದನು. (ವಿಮೋಚನಕಾಂಡ 15:11) ಅದೇ ರೀತಿಯಾಗಿ ಪ್ರವಾದಿಯಾದ ಹಬಕ್ಕೂಕನೂ ಬರೆದದ್ದು: “ಕೇಡನ್ನು ನೋಡಲಾರದ ಅತಿಪವಿತ್ರದೃಷ್ಟಿಯುಳ್ಳವನೇ, ಕೆಡುಕನ್ನು ಕಟಾಕ್ಷಿಸಲಾರದವನೇ.” (ಹಬಕ್ಕೂಕ 1:13) ಯೆಹೋವನು ಪ್ರೀತಿಸ್ವರೂಪನಾದ ದೇವರಾಗಿದ್ದಾನಾದರೂ, ಆತನು ಪರಿಶುದ್ಧತೆ, ನೀತಿ, ಮತ್ತು ನ್ಯಾಯವುಳ್ಳ ದೇವರೂ ಆಗಿರುತ್ತಾನೆ. ಕೆಲವೊಮ್ಮೆ ಅಂಥ ಗುಣಗಳು, ಆತನು ತನ್ನ ನಾಶಕಾರಕ ಶಕ್ತಿಯನ್ನು ಉಪಯೋಗಿಸುವಂತೆ ನಿರ್ಬಂಧಿಸುತ್ತವೆ. (ಯೆಶಾಯ 59:15-19; ಲೂಕ 18:7) ಹೀಗೆ ದೇವರು ಹೋರಾಡುವಾಗ ಆತನ ಪರಿಶುದ್ಧತೆಯು ಕಳಂಕಿತವಾಗುವುದಿಲ್ಲ, ಬದಲಿಗೆ ಆತನ ಪರಿಶುದ್ಧತೆಯೇ ಆತನು ಹೋರಾಡುವುದಕ್ಕೆ ಕಾರಣ ಆಗಿದೆ.​—ಯಾಜಕಕಾಂಡ 19:2.

10. (ಎ) ಯುದ್ಧಮಾಡುವ ಅಗತ್ಯವು ದೇವರಿಗೆ ಮೊತ್ತಮೊದಲಾಗಿ ಉಂಟಾದದ್ದು ಯಾವಾಗ ಮತ್ತು ಹೇಗೆ? (ಬಿ) ಆದಿಕಾಂಡ 3:15​ರಲ್ಲಿ ಮುಂತಿಳಿಸಲ್ಪಟ್ಟ ವೈರತ್ವವು ಹೇಗೆ ಮಾತ್ರ ಇತ್ಯರ್ಥವಾಗಸಾಧ್ಯವಿತ್ತು, ಮತ್ತು ನೀತಿವಂತ ಮಾನವಕುಲಕ್ಕೆ ಯಾವ ಪ್ರಯೋಜನಗಳೊಂದಿಗೆ?

10 ಮೊದಲನೆಯ ದಂಪತಿಯಾದ ಆದಾಮಹವ್ವರು ದೇವರ ವಿರುದ್ಧ ದಂಗೆಯೆದ್ದಾಗ, ಅಲ್ಲಿ ಉಂಟಾದ ಸನ್ನಿವೇಶವನ್ನು ಪರಿಗಣಿಸಿರಿ. (ಆದಿಕಾಂಡ 3:1-6) ಅವರ ಅನೀತಿಯ ಕೃತ್ಯವನ್ನು ಆತನು ಸಹಿಸಿ ಸುಮ್ಮನಿರುತ್ತಿದ್ದಲ್ಲಿ, ವಿಶ್ವದ ಪರಮಾಧಿಕಾರಿಯೋಪಾದಿ ತನ್ನ ಸ್ವಂತ ಸ್ಥಾನವನ್ನು ಆತನು ಶಿಥಿಲಗೊಳಿಸುತ್ತಿದ್ದನು. ನೀತಿವಂತ ದೇವರೋಪಾದಿ, ಅವರಿಗೆ ಮರಣ ಶಿಕ್ಷೆಯನ್ನು ವಿಧಿಸಲು ಆತನು ಬದ್ಧನಾಗಿದ್ದನು. (ರೋಮಾಪುರ 6:23) ಬೈಬಲಿನ ಮೊದಲನೆಯ ಪ್ರವಾದನೆಯಲ್ಲಿ, ತನ್ನ ಸ್ವಂತ ಸೇವಕರ ಮತ್ತು “ಸರ್ಪ”ವಾದ ಸೈತಾನನ ಸೇವಕರ ನಡುವೆ ವೈರತ್ವವು ಅಸ್ತಿತ್ವದಲ್ಲಿರುವುದೆಂದು ಆತನು ಪ್ರವಾದಿಸಿದನು. (ಪ್ರಕಟನೆ 12:9; ಆದಿಕಾಂಡ 3:15) ಕಟ್ಟಕಡೆಗೆ ಈ ವೈರತ್ವವು ಇತ್ಯರ್ಥವಾಗುವುದು ಸೈತಾನನು ಜಜ್ಜಲ್ಪಡುವಾಗಲೇ. (ರೋಮಾಪುರ 16:20) ಆದರೆ ಆ ನ್ಯಾಯತೀರ್ಪಿನ ಕೃತ್ಯವು ನೀತಿವಂತರಾದ ಮಾನವಕುಲಕ್ಕೆ ಮಹಾ ಆಶೀರ್ವಾದದಲ್ಲಿ ಫಲಿಸುವುದು. ಸೈತಾನನ ಪ್ರಭಾವವು ಭೂಮಿಯಿಂದ ತೊಲಗಿಸಲ್ಪಟ್ಟು, ಒಂದು ಭೌಗೋಳಿಕ ಪರದೈಸಿಗೆ ಹಾದಿಯು ತೆರೆಯಲ್ಪಡುವುದು. (ಮತ್ತಾಯ 19:28) ಆ ಸಮಯದ ತನಕ, ಸೈತಾನನ ಪಕ್ಷದಲ್ಲಿರುವವರೆಲ್ಲರೂ, ದೇವಜನರ ಶಾರೀರಿಕ ಮತ್ತು ಆಧ್ಯಾತ್ಮಿಕ ಕ್ಷೇಮಕ್ಕೆ ಒಂದು ಮುಂದುವರಿಯುತ್ತಿರುವ ಬೆದರಿಕೆಯಾಗಿ ಪರಿಣಮಿಸುವರು. ಆಗಾಗ್ಗೆ, ಯೆಹೋವನು ಹಸ್ತಕ್ಷೇಪವನ್ನು ಮಾಡಲೇಬೇಕಾಗುವದು.

ದುಷ್ಟತನವನ್ನು ತೆಗೆದುಬಿಡಲು ದೇವರು ಕ್ರಿಯೆಗೈಯುತ್ತಾನೆ

11. ಒಂದು ಭೌಗೋಳಿಕ ಜಲಪ್ರಳಯವನ್ನು ತರಲು ದೇವರು ಬದ್ಧನಾಗಿದ್ದದ್ದೇಕೆ?

11 ಅಂಥ ಹಸ್ತಕ್ಷೇಪದ ಒಂದು ಸಂದರ್ಭವು ನೋಹನ ದಿನದ ಜಲಪ್ರಳಯವಾಗಿತ್ತು. ಆದಿಕಾಂಡ 6:11, 12 ಹೇಳುವುದು: “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು. ದೇವರು ಲೋಕವನ್ನು ನೋಡಿದಾಗ ಅದು ಕೆಟ್ಟುಹೋಗಿತ್ತು; ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.” ಭೂಮಿಯಲ್ಲಿ ಉಳಿದಿರುವ ನೈತಿಕತೆಯ ಕೊನೆಯ ಅವಶೇಷವನ್ನು ದುಷ್ಟರು ನಂದಿಸಿಬಿಡುವಂತೆ ದೇವರು ಅನುಮತಿಸಲಿದ್ದನೊ? ಇಲ್ಲ. ಅನೈತಿಕತೆ ಮತ್ತು ಹಿಂಸಾಚಾರದತ್ತ ಬಲವಾದ ಒಲವುಳ್ಳವರನ್ನು ಆ ಲೋಕದಿಂದ ತೊಲಗಿಸಲು ಒಂದು ಭೌಗೋಳಿಕ ಜಲಪ್ರಳಯವನ್ನು ತರಲು ಯೆಹೋವನು ಬದ್ಧನಾಗಿದ್ದನು.

12. (ಎ) ಅಬ್ರಹಾಮನ ‘ಸಂತಾನದ’ ಕುರಿತು ಯೆಹೋವನು ಏನನ್ನು ಮುಂತಿಳಿಸಿದನು? (ಬಿ) ಅಮೋರಿಯರನ್ನು ಏಕೆ ಹೊರಡಿಸಿಬಿಡಬೇಕಾಯಿತು?

12 ಕಾನಾನ್ಯರ ವಿರುದ್ಧವಾದ ದೇವರ ನ್ಯಾಯತೀರ್ಪಿನ ವಿಷಯವೂ ಹೀಗೆ ಇತ್ತು. ಭೂಮಿಯ ಎಲ್ಲಾ ಜನಾಂಗಗಳು ಅಬ್ರಹಾಮನ ‘ಸಂತಾನದ’ ಮೂಲಕ ತಮ್ಮನ್ನು ಆಶೀರ್ವಾದ ಪಾತ್ರರನ್ನಾಗಿ ಮಾಡಲಿರುವರೆಂದು ಯೆಹೋವನು ಪ್ರಕಟಪಡಿಸಿದ್ದನು. ಆ ಉದ್ದೇಶಕ್ಕೆ ಹೊಂದಿಕೆಯಲ್ಲಿ, ಅಮೋರಿಯರೆಂಬ ಜನರು ನಿವಾಸಿಸುತ್ತಿದ್ದ ಕಾನಾನ್‌ ದೇಶವು ಅಬ್ರಹಾಮನ ವಂಶಕ್ಕೆ ಕೊಡಲ್ಪಡುವದೆಂದು ದೇವರು ವಿಧಿಸಿದ್ದನು. ಆ ಜನರನ್ನು ಅವರ ದೇಶದಿಂದ ಬಲವಂತವಾಗಿ ಹೊರಡಿಸಿಬಿಡುವದರಲ್ಲಿ ದೇವರು ನ್ಯಾಯಸಮ್ಮತನೆಂದು ಹೇಗೆ ಹೇಳಸಾಧ್ಯ? ಅಂಥ ಹೊರಡಿಸುವಿಕೆಯು ಸುಮಾರು 400 ವರ್ಷಗಳ ವರೆಗೆ, ಅಂದರೆ ‘ಅಮೋರಿಯರ ಅಪರಾಧವು ಪೂರ್ಣ ಸ್ಥಿತಿಗೆ ಬರುವ’ ತನಕ ಸಂಭವಿಸಲಾರದೆಂದು ಯೆಹೋವನು ಮುಂತಿಳಿಸಿದ್ದನು.b (ಆದಿಕಾಂಡ 12:1-3; 13:14, 15; 15:​13, 16; 22:18) ಆ ಕಾಲಾವಧಿಯಲ್ಲಿ, ಅಮೋರಿಯರು ನೈತಿಕ ಭ್ರಷ್ಟತೆಯೊಳಗೆ ಸಂಪೂರ್ಣ ರೀತಿಯಲ್ಲಿ ಆಳವಾಗಿ ಮುಳುಗಿಹೋದರು. ಕಾನಾನ್‌ ದೇಶವು ವಿಗ್ರಹಾರಾಧನೆ, ರಕ್ತಪಾತ, ಮತ್ತು ಹೀನವಾದ ಲೈಂಗಿಕಾಚರಣೆಗಳ ದೇಶವಾಯಿತು. (ವಿಮೋಚನಕಾಂಡ 23:24; 34:12, 13; ಅರಣ್ಯಕಾಂಡ 33:52) ಈ ದೇಶದ ನಿವಾಸಿಗಳು ತಮ್ಮ ಮಕ್ಕಳನ್ನು ಸಹ ಯಜ್ಞದ ಬೆಂಕಿಗೆ ಎಸೆದು ಆಹುತಿಕೊಟ್ಟರು. ಪರಿಶುದ್ಧನಾದ ದೇವರು ತನ್ನ ಜನರನ್ನು ಅಂಥ ದುಷ್ಟತನಕ್ಕೆ ಒಡ್ಡಸಾಧ್ಯವಿದೆಯೆ? ಇಲ್ಲ! ಆತನು ಘೋಷಿಸಿದ್ದು: “ಅವರ ದೇಶವು ಅಶುದ್ಧವಾಗಿ ಹೋದದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ; ಆ ದೇಶವು ತನ್ನಲ್ಲಿ ವಾಸಿಸಿದವರನ್ನು ಕಾರಿಬಿಟ್ಟಿತು.” (ಯಾಜಕಕಾಂಡ 18:21-25) ಆದರೂ ಯೆಹೋವನು ಗೊತ್ತುಗುರಿಯಿಲ್ಲದೆ ಜನರನ್ನು ನಾಶಗೊಳಿಸಲಿಲ್ಲ. ರಾಹಾಬ ಮತ್ತು ಗಿಬ್ಯೋನ್ಯರಂತೆ, ಯೋಗ್ಯ ಪ್ರವೃತಿಯಿದ್ದ ಕಾನಾನ್ಯರು ಕಾಪಾಡಿ ಉಳಿಸಲ್ಪಟ್ಟರು.​—ಯೆಹೋಶುವ 6:25; 9:3-27.

ತನ್ನ ನಾಮದ ಪರವಾಗಿ ಹೋರಾಡುವುದು

13, 14. (ಎ) ಯೆಹೋವನು ತನ್ನ ನಾಮವನ್ನು ಪವಿತ್ರೀಕರಿಸಲು ಬದ್ಧನಾಗಿದ್ದನೇಕೆ? (ಬಿ) ತನ್ನ ನಾಮಕ್ಕೆ ಹತ್ತಿದ್ದ ನಿಂದೆಯನ್ನು ಯೆಹೋವನು ತೊಲಗಿಸಿದ್ದು ಹೇಗೆ?

13 ಯೆಹೋವನು ಪರಿಶುದ್ಧನಾಗಿರುವುದರಿಂದ, ಆತನ ನಾಮವೂ ಪರಿಶುದ್ಧವಾಗಿರುತ್ತದೆ. (ಯಾಜಕಕಾಂಡ 22:32) “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. (ಮತ್ತಾಯ 6:​9, 10) ಏದೆನಿನಲ್ಲಾದ ದಂಗೆಯು ದೇವರ ನಾಮವನ್ನು ಅಪವಿತ್ರಗೊಳಿಸಿ, ದೇವರ ಸತ್ಕೀರ್ತಿ ಮತ್ತು ಆತನ ಆಳುವ ವಿಧಾನದ ಕುರಿತು ಸಂದೇಹಗಳನ್ನೆಬ್ಬಿಸಿತು. ಯೆಹೋವನು ಅಂಥ ಸುಳ್ಳಾರೋಪ ಮತ್ತು ದಂಗೆಯನ್ನು ಎಂದಿಗೂ ಮನ್ನಿಸಿಬಿಡಲು ಸಾಧ್ಯವಿದ್ದಿರಲಿಲ್ಲ. ತನ್ನ ನಾಮಕ್ಕೆ ಹತ್ತಿದ್ದ ನಿಂದೆಯನ್ನು ತೊಲಗಿಸಲು ಆತನು ಬದ್ಧನಾಗಿದ್ದನು.​—ಯೆಶಾಯ 48:11.

14 ಇಸ್ರಾಯೇಲ್ಯರನ್ನು ಇನ್ನೊಮ್ಮೆ ಪರಿಗಣನೆಗೆ ತನ್ನಿರಿ. ಎಷ್ಟರ ತನಕ ಅವರು ಐಗುಪ್ತದಲ್ಲಿ ದಾಸರಾಗಿದ್ದರೋ ಅಷ್ಟರ ತನಕ, ಭೂಮಿಯ ಎಲ್ಲಾ ಜನಾಂಗಗಳು ಅಬ್ರಹಾಮನ ಸಂತಾನದ ಮೂಲಕ ತಮ್ಮನ್ನು ಆಶೀರ್ವಾದ ಪಾತ್ರವಾಗಿ ಮಾಡಿಕೊಳ್ಳುವವು ಎಂಬ ದೇವರ ವಾಗ್ದಾನವು ಟೊಳ್ಳಾಗಿ ಕಂಡುಬಂದಿತ್ತು. ಆದರೆ ಅವರನ್ನು ಪಾರುಗೊಳಿಸಿ ಒಂದು ಜನಾಂಗದೋಪಾದಿ ಸ್ಥಾಪಿಸುವ ಮೂಲಕ, ಯೆಹೋವನು ತನ್ನ ನಾಮಕ್ಕೆ ಹತ್ತಿದ್ದ ನಿಂದೆಯನ್ನು ತೊಲಗಿಸಿದನು. ಪ್ರವಾದಿಯಾದ ದಾನಿಯೇಲನು ಪ್ರಾರ್ಥನೆಯಲ್ಲಿ ನೆನಪಿಸಿಕೊಂಡದ್ದು: “ಕರ್ತನೇ, ನಮ್ಮ ದೇವರೇ, ಭುಜಪರಾಕ್ರಮವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ಇಂದಿನ ವರೆಗೂ ಪ್ರಸಿದ್ಧವಾಗಿರುವ ಹೆಸರನ್ನು ಪಡೆದುಕೊಂಡವನೇ, ಈಗ ಚಿತ್ತೈಸು.”​—ದಾನಿಯೇಲ 9:15.

15. ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರನ್ನು ಯೆಹೋವನು ಪಾರುಗೊಳಿಸಿದ್ದೇಕೆ?

15 ಆಸಕ್ತಿಯ ಸಂಗತಿಯೇನೆಂದರೆ, ದಾನಿಯೇಲನು ಈ ರೀತಿಯಾಗಿ ಪ್ರಾರ್ಥಿಸಿದ್ದು, ಯೆಹೋವನು ತನ್ನ ನಾಮದ ಪರವಾಗಿ ಇನ್ನೊಮ್ಮೆ ಕ್ರಿಯೆಗೈಯುವ ಅಗತ್ಯವು ಎದ್ದಾಗಲೇ. ಅವಿಧೇಯರಾದ ಯೆಹೂದ್ಯರು ಬಂಧಿಗಳಾಗಿದ್ದರು, ಈ ಸಲ ಬಾಬೆಲಿನಲ್ಲಿ. ಅವರ ಸ್ವಂತ ರಾಜಧಾನಿ ಪಟ್ಟಣವಾದ ಯೆರೂಸಲೇಮು ಧ್ವಂಸವಾಗಿ ಹಾಳುಬಿದ್ದಿತ್ತು. ಯೆಹೂದ್ಯರನ್ನು ಅವರ ಸ್ವದೇಶದಲ್ಲಿ ಪುನಸ್ಸ್ಥಾಪಿಸುವ ಮೂಲಕ ಯೆಹೋವನ ನಾಮವು ಮಹಿಮೆಗೇರುವುದೆಂದು ದಾನಿಯೇಲನಿಗೆ ತಿಳಿದಿತ್ತು. ಆದುದರಿಂದ ದಾನಿಯೇಲನು ಹೀಗೆ ಪ್ರಾರ್ಥಿಸಿದನು: “ಸ್ವಾಮೀ, ಕ್ಷಮಿಸು! ಸ್ವಾಮೀ, ಲಾಲಿಸು, ಕಾರ್ಯವನ್ನು ಸಾಧಿಸು! ತಡಮಾಡಬೇಡ! ನನ್ನ ದೇವರೇ, ನಿನ್ನ ಜನವೂ ಪಟ್ಟಣವೂ ನಿನ್ನ ಹೆಸರಿನವುಗಳಾದ ಕಾರಣ ನಿನ್ನ ಹೆಸರನ್ನು ಕಾಪಾಡಿಕೋ!” (ಓರೆ ಅಕ್ಷರಗಳು ನಮ್ಮವು.)​—ದಾನಿಯೇಲ 9:18, 19.

ತನ್ನ ಜನರಿಗೋಸ್ಕರವಾಗಿ ಹೋರಾಡುವುದು

16. ತನ್ನ ನಾಮವನ್ನು ಸಮರ್ಥಿಸಿಕೊಳ್ಳುವುದರಲ್ಲಿ ಯೆಹೋವನಿಗಿರುವ ಅಭಿರುಚಿಯು ಆತನನ್ನು ನಿರ್ದಯನೂ ಸ್ವಾರ್ಥಚಿತ್ತನೂ ಆಗಿ ಮಾಡುವುದಿಲ್ಲವೇಕೆಂದು ವಿವರಿಸಿರಿ.

16 ತನ್ನ ನಾಮವನ್ನು ಸಮರ್ಥಿಸಿ ಕಾಪಾಡಿಕೊಳ್ಳುವುದರಲ್ಲಿ ಯೆಹೋವನಿಗಿರುವ ಅಭಿರುಚಿಯು ಆತನನ್ನು ನಿರ್ದಯನೂ ಸ್ವಾರ್ಥಚಿತ್ತನೂ ಆಗಿ ಮಾಡುತ್ತದೊ? ಇಲ್ಲ, ಯಾಕಂದರೆ ಆತನ ಪರಿಶುದ್ಧತೆ ಮತ್ತು ನ್ಯಾಯಕ್ಕಾಗಿ ಆತನಿಗಿರುವ ಪ್ರೀತಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಮೂಲಕ ಆತನು ತನ್ನ ಜನರನ್ನು ಕಾಪಾಡುತ್ತಾನೆ. ಆದಿಕಾಂಡ 14ನೆಯ ಅಧ್ಯಾಯವನ್ನು ಪರಿಗಣನೆಗೆ ತನ್ನಿರಿ. ಸೊದೋಮನ್ನು ಆಕ್ರಮಿಸಿದ ನಾಲ್ವರು ಅರಸರು ಅಬ್ರಹಾಮನ ಸೋದರ ಮಗನಾದ ಲೋಟನನ್ನೂ ಲೋಟನ ಕುಟುಂಬವನ್ನೂ ಅಪಹರಿಸಿಕೊಂಡು ಹೋದರು ಎಂಬುದನ್ನು ನಾವಲ್ಲಿ ಓದುತ್ತೇವೆ. ಬಹಳ ಪ್ರಬಲವಾಗಿದ್ದ ಆ ಸೈನ್ಯಗಳನ್ನು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಅಬ್ರಹಾಮನು ಸೋಲಿಸಿಬಿಟ್ಟದ್ದು ದೇವರ ಸಹಾಯದಿಂದಲೇ! ಈ ವಿಜಯದ ವೃತ್ತಾಂತವು, “‘ಯೆಹೋವನ ಯುದ್ಧಗಳು’ ಎಂಬ ಗ್ರಂಥದಲ್ಲಿ” ಪ್ರಥಮವಾಗಿ ದಾಖಲಾಗಿರುವ ಸಂಭಾವ್ಯತೆಯಿದೆ. ಈ ಗ್ರಂಥವು, ಬೈಬಲಿನಲ್ಲಿ ವರದಿಸಲ್ಪಟ್ಟಿರದ ಕೆಲವು ಮಿಲಿಟರಿ ಕದನಗಳನ್ನೂ ದಾಖಲಿಸಿರುವ ಒಂದು ಪುಸ್ತಕವಾಗಿರಬಹುದು. (ಅರಣ್ಯಕಾಂಡ 21:​14, ಪರಿಶುದ್ಧ ಬೈಬಲ್‌) ಇನ್ನೂ ಅನೇಕಾನೇಕ ಯುದ್ಧವಿಜಯಗಳು ಹಿಂಬಾಲಿಸಿ ಬರಲಿದ್ದವು.

17. ಕಾನಾನ್‌ ದೇಶವನ್ನು ಪ್ರವೇಶಿಸಿಯಾದ ನಂತರ ಇಸ್ರಾಯೇಲ್ಯರಿಗಾಗಿ ಯೆಹೋವನು ಹೋರಾಡಿದನೆಂದು ಯಾವುದು ತೋರಿಸುತ್ತದೆ? ಉದಾಹರಣೆಗಳನ್ನು ಕೊಡಿರಿ.

17 ಇಸ್ರಾಯೇಲ್ಯರು ಕಾನಾನ್‌ ದೇಶವನ್ನು ಪ್ರವೇಶಿಸುವ ಸ್ವಲ್ಪ ಮುಂಚಿತವಾಗಿ ಮೋಶೆಯು ಅವರಿಗೆ ಆಶ್ವಾಸನೆಯನ್ನಿತ್ತದ್ದು: “ನಿಮ್ಮ ಮುಂದುಗಡೆಯಲ್ಲಿ ಹೋಗುವ ನಿಮ್ಮ ದೇವರಾದ ಯೆಹೋವನು ಐಗುಪ್ತದೇಶದಲ್ಲಿಯೂ . . . ನಿಮಗೋಸ್ಕರ ಯುದ್ಧಮಾಡಿದಂತೆಯೇ ಈಗಲೂ ನಿಮ್ಮ ಕಡೆಯವನಾಗಿ ಯುದ್ಧಮಾಡುವನು.” (ಧರ್ಮೋಪದೇಶಕಾಂಡ 1:30; 20:1) ಮೋಶೆಯ ಉತ್ತರಾಧಿಕಾರಿಯಾದ ಯೆಹೋಶುವನಿಂದ ಆರಂಭಿಸಿ, ನ್ಯಾಯಸ್ಥಾಪಕರ ಕಾಲಾವಧಿಯಲ್ಲೆಲ್ಲ ಮತ್ತು ಯೆಹೂದದ ನಂಬಿಗಸ್ತ ಅರಸರ ಆಳಿಕೆಗಳಲ್ಲೂ, ಯೆಹೋವನು ತನ್ನ ಜನರಿಗಾಗಿ ಹೋರಾಡುತ್ತಾ, ಅವರ ಶತ್ರುಗಳ ವಿರುದ್ಧವಾಗಿ ಅನೇಕ ಮಹತ್ತಾದ ವಿಜಯಗಳನ್ನು ದಯಪಾಲಿಸಿದನು ಎಂಬುದಂತೂ ನಿಶ್ಚಯ.​—ಯೆಹೋಶುವ 10:1-14; ನ್ಯಾಯಸ್ಥಾಪಕರು 4:12-17; 2 ಸಮುವೇಲ 5:17-21.

18. (ಎ) ಯೆಹೋವನು ಬದಲಾಗದೆ ಇರುವುದಕ್ಕಾಗಿ ನಾವೇಕೆ ಕೃತಜ್ಞರಾಗಿರಬಲ್ಲೆವು? (ಬಿ) ಆದಿಕಾಂಡ 3:15​ರಲ್ಲಿ ವಿವರಿಸಲ್ಪಟ್ಟ ವೈರತ್ವವು ಪರಾಕಾಷ್ಠೆಯನ್ನು ಮುಟ್ಟುವಾಗ ಏನು ಸಂಭವಿಸುವುದು?

18 ಯೆಹೋವನು ಬದಲಾಗಿರುವುದಿಲ್ಲ; ಈ ಭೂಗ್ರಹವನ್ನು ಒಂದು ಶಾಂತಿಭರಿತವಾದ ಪರದೈಸಾಗಿ ಮಾರ್ಪಡಿಸುವ ಆತನ ಉದ್ದೇಶವೂ ಬದಲಾಗಿರುವುದಿಲ್ಲ. (ಆದಿಕಾಂಡ 1:27, 28) ದುಷ್ಟತನವನ್ನು ದೇವರು ಈಗಲೂ ಹೇಸುತ್ತಾನೆ. ಅದೇ ಸಮಯದಲ್ಲಿ, ತನ್ನ ಜನರನ್ನು ಆತನು ತುಂಬ ಪ್ರೀತಿಸುತ್ತಾನೆ ಮತ್ತು ಅವರಿಗೋಸ್ಕರ ಬೇಗನೆ ಕ್ರಿಯೆಗೈಯುವನು. (ಕೀರ್ತನೆ 11:7) ವಾಸ್ತವದಲ್ಲಿ, ಆದಿಕಾಂಡ 3:15​ರಲ್ಲಿ ವರ್ಣಿಸಲ್ಪಟ್ಟಿರುವ ವೈರತ್ವವು, ಭವಿಷ್ಯತ್ತಿನಲ್ಲಿ ಬೇಗನೆ ಒಂದು ಗಮನಾರ್ಹವಾದ ಹಾಗೂ ಹಿಂಸಾತ್ಮಕ ತಿರುಗುಬಿಂದುವನ್ನು ಮುಟ್ಟುವುದನ್ನು ನಿರೀಕ್ಷಿಸಲಾಗಿದೆ. ತನ್ನ ಹೆಸರನ್ನು ಪರಿಶುದ್ಧಗೊಳಿಸಲು ಹಾಗೂ ತನ್ನ ಜನರನ್ನು ಕಾಪಾಡಿ ಉಳಿಸಲು ಯೆಹೋವನು ಪುನಃ ಒಮ್ಮೆ ‘ಯುದ್ಧಶೂರನಾಗಿ’ ಪರಿಣಮಿಸಲಿದ್ದಾನೆ!​—ಜೆಕರ್ಯ 14:3; ಪ್ರಕಟನೆ 16:14, 16.

19. (ಎ) ದೇವರ ನಾಶಕಾರಕ ಶಕ್ತಿಯ ಪ್ರಯೋಗವು ನಮ್ಮನ್ನು ಆತನ ಸಮೀಪಕ್ಕೆ ಸೆಳೆಯಬಲ್ಲದೇಕೆಂಬುದನ್ನು ದೃಷ್ಟಾಂತಿಸಿರಿ. (ಬಿ) ದೇವರು ನಮಗೋಸ್ಕರ ಹೋರಾಡಲು ಸಿದ್ಧಮನಸ್ಕನಾಗಿರುವುದು ನಮ್ಮನ್ನು ಹೇಗೆ ಪ್ರಭಾವಿಸಬೇಕು?

19 ಒಂದು ದೃಷ್ಟಾಂತವನ್ನು ಗಮನಿಸಿರಿ: ಒಂದು ಕ್ರೂರ ಮೃಗವು ಒಬ್ಬ ವ್ಯಕ್ತಿಯ ಕುಟುಂಬದವರ ಮೇಲೆರಗಿದೆಯೆಂದು ಭಾವಿಸಿರಿ. ಆ ವ್ಯಕ್ತಿ ಆಗ ಆ ಹೋರಾಟದಲ್ಲಿ ಸೇರಿ ಆ ಕ್ರೂರ ಮೃಗವನ್ನು ಕೊಂದುಬಿಡುತ್ತಾನೆ. ಅವನ ಈ ಕೃತ್ಯವನ್ನು ನೋಡಿ ಅವನ ಹೆಂಡತಿ ಮಕ್ಕಳು ಅವನಿಂದ ವಿಕರ್ಷಿಸಲ್ಪಡುವರು ಎಂದೆಣಿಸುತ್ತೀರೊ? ಬದಲಿಗೆ ಅವನು ಅವರಿಗಾಗಿ ತೋರಿಸಿದ ನಿಸ್ವಾರ್ಥ ಪ್ರೀತಿಯನ್ನು ನೋಡಿ ಅವರ ಹೃದಯ ತುಂಬಿಬರುವುದೆಂದು ನೀವು ನಿರೀಕ್ಷಿಸುವಿರಲ್ಲವೇ? ತದ್ರೀತಿಯಲ್ಲಿ ನಾವೂ, ದೇವರು ತನ್ನ ನಾಶಕಾರಕ ಶಕ್ತಿಯನ್ನು ಉಪಯೋಗಿಸುವಾಗ ಅದರಿಂದ ವಿಕರ್ಷಿಸಲ್ಪಡಬಾರದು. ನಮಗೋಸ್ಕರ ಹೋರಾಡಿ ನಮ್ಮನ್ನು ಕಾಪಾಡಿ ಉಳಿಸಲು ಆತನಿಗಿರುವ ಸಿದ್ಧಮನಸ್ಸು ಆತನಿಗಾಗಿ ನಮಗಿರುವ ಪ್ರೀತಿಯನ್ನು ಹೆಚ್ಚಿಸಬೇಕು. ಆತನ ಅಪರಿಮಿತ ಶಕ್ತಿಗಾಗಿರುವ ನಮ್ಮ ಗೌರವವೂ ಗಾಢವಾಗಬೇಕು. ಹೀಗೆ ನಾವು “ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ” ಮಾಡುವವರಾಗಿರಬಲ್ಲೆವು.​—ಇಬ್ರಿಯ 12:28.

‘ಯುದ್ಧಶೂರನ’ ಸಮೀಪಕ್ಕೆ ಬನ್ನಿರಿ

20. ದೈವಿಕ ಯುದ್ಧದ ಕುರಿತಾದ ಬೈಬಲ್‌ ವೃತ್ತಾಂತಗಳನ್ನು ನಾವು ಓದುವಾಗ, ನಮಗದು ಸಂಪೂರ್ಣವಾಗಿ ಅರ್ಥವಾಗದಿರಬಹುದಾದರೂ, ನಾವು ಹೇಗೆ ಪ್ರತಿಕ್ರಿಯಿಸಬೇಕು, ಮತ್ತು ಏಕೆ?

20 ಬೈಬಲು ಪ್ರತಿಯೊಂದು ಸಂದರ್ಭದಲ್ಲಿ ದೈವಿಕ ಯುದ್ಧದ ಕುರಿತಾದ ಯೆಹೋವನ ನಿರ್ಣಯಗಳ ಎಲ್ಲಾ ವಿವರಗಳನ್ನು ತಿಳಿಸುವುದಿಲ್ಲ ನಿಶ್ಚಯ. ಆದರೆ ಒಂದು ವಿಷಯ ಮಾತ್ರ ಖಂಡಿತ: ಯೆಹೋವನೆಂದೂ ತನ್ನ ನಾಶಕಾರಕ ಶಕ್ತಿಯನ್ನು ಅನ್ಯಾಯವಾಗಿ, ಸಿಕ್ಕಾಬಟ್ಟೆ ಅಥವಾ ಕ್ರೂರ ರೀತಿಯಲ್ಲಿ ಪ್ರಯೋಗಿಸುವುದಿಲ್ಲ. ಅನೇಕ ಸಲ, ಬೈಬಲ್‌ ವೃತ್ತಾಂತವೊಂದರ ಪೂರ್ವಾಪರವನ್ನು ಅಥವಾ ಹಿನ್ನೆಲೆಯ ಸ್ವಲ್ಪ ಮಾಹಿತಿಯನ್ನು ಪರಿಗಣಿಸುವುದು, ವಿಷಯಗಳ ನಡುವಣ ಪರಸ್ಪರ ಸಂಬಂಧವನ್ನು ನೋಡುವಂತೆ ನಮಗೆ ಸಹಾಯಮಾಡುವುದು. (ಜ್ಞಾನೋಕ್ತಿ 18:13) ನಮಗೆ ಎಲ್ಲಾ ವಿವರಗಳು ಸಿಗದಿರುವಾಗಲೂ, ಯೆಹೋವನ ಕುರಿತು ಕೇವಲ ಹೆಚ್ಚನ್ನು ಕಲಿಯುವುದು ಮತ್ತು ಆತನ ಅಮೂಲ್ಯ ಗುಣಗಳ ಬಗ್ಗೆ ಮನನ ಮಾಡುವುದು, ಏಳಬಹುದಾದ ಯಾವುದೇ ಸಂದೇಹಗಳನ್ನು ಬಗೆಹರಿಸಲು ನಮಗೆ ನೆರವಾಗಬಲ್ಲದು. ನಾವಿದನ್ನು ಮಾಡುವಾಗ, ನಮ್ಮ ದೇವರಾದ ಯೆಹೋವನಲ್ಲಿ ಭರವಸೆಯಿಡಲು ನಮಗೆ ಹೇರಳವಾದ ಕಾರಣವಿರುವದನ್ನು ಕಂಡುಕೊಳ್ಳುವೆವು.​—ಯೋಬ 34:12.

21. ಕೆಲವೊಮ್ಮೆ ಯೆಹೋವನು “ಯುದ್ಧಶೂರ”ನಾಗಿರುವುದಾದರೂ, ಆತನ ಸಹಜ ಸ್ವಭಾವವು ಯಾವುದು?

21 ಸನ್ನಿವೇಶವು ಅಗತ್ಯಪಡಿಸುವಾಗ ಯೆಹೋವನು “ಯುದ್ಧಶೂರ”ನಾಗುತ್ತಾನಾದರೂ, ಆತನು ಯುದ್ಧೋತ್ಸಾಹವುಳ್ಳ ಸ್ವಭಾವದವನು ಎಂದು ಇದರ ಅರ್ಥವಲ್ಲ. ಯೆಹೆಜ್ಕೇಲನ ದಿವ್ಯ ರಥದ ದರ್ಶನದಲ್ಲಿ, ಯೆಹೋವನು ತನ್ನ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಸಿದ್ಧನಾಗಿರುವವನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಆದರೂ, ದೇವರು ಮುಗಿಲುಬಿಲ್ಲಿನಿಂದ​—ಒಂದು ಶಾಂತಿಯ ಕುರುಹಿನಿಂದ​—ಸುತ್ತುವರಿಯಲ್ಪಟ್ಟಿರುವುದನ್ನು ಯೆಹೆಜ್ಕೇಲನು ಕಂಡನು. (ಆದಿಕಾಂಡ 9:13; ಯೆಹೆಜ್ಕೇಲ 1:28; ಪ್ರಕಟನೆ 4:3) ಸ್ಪಷ್ಟವಾಗಿಯೇ, ಯೆಹೋವನು ಪ್ರಶಾಂತನೂ ಶಾಂತಿಶೀಲನೂ ಆಗಿರುತ್ತಾನೆ. “ದೇವರು ಪ್ರೀತಿಸ್ವರೂಪಿ” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 4:8) ಯೆಹೋವನ ಎಲ್ಲಾ ಗುಣಗಳೂ ಪರಿಪೂರ್ಣ ಸಮತೆಯಲ್ಲಿವೆ. ಆದುದರಿಂದ ಅಂಥ ಶಕ್ತಿಶಾಲಿಯಾದ ಆದರೂ ಪ್ರೀತಿಭರಿತ ದೇವರ ಸಮೀಪಕ್ಕೆ ಬರಲು ನಾವು ಶಕ್ತರಾಗಿರುವುದು ಅದೆಂಥ ಸುಯೋಗ!

a ಯೆಹೂದಿ ಚರಿತ್ರೆಗಾರ ಜೊಸೀಫಸನಿಗನುಸಾರ ಆ ಇಬ್ರಿಯರನ್ನು, “600 ರಥಗಳೂ 50,000 ರಾಹುತರೂ ಭಾರೀ ಶಸ್ತ್ರಸಜ್ಜಿತರಾಗಿದ್ದ 2,00,000ದಷ್ಟು ಕಾಲಾಳುಗಳೂ ಬೆನ್ನಟ್ಟಿದ್ದರು.”​—ಜ್ಯೂಯಿಶ್‌ ಆ್ಯಂಟಿಕ್ವಿಟೀಸ್‌ II, 324 [xv, 3].

b ಇಲ್ಲಿ “ಅಮೋರಿಯರು” ಎಂಬ ಪದವು ಕಾನಾನಿನ ಎಲ್ಲಾ ನಿವಾಸಿಗಳನ್ನು ಒಳಗೂಡಿರುತ್ತದೆಂಬುದು ವ್ಯಕ್ತ.​—ಧರ್ಮೋಪದೇಶಕಾಂಡ 1:6-8, 19-21, 27; ಯೆಹೋಶುವ 24:15, 18.

ಧ್ಯಾನಕ್ಕಾಗಿ ಪ್ರಶ್ನೆಗಳು

  • 2 ಅರಸುಗಳು 6:8-17 “ಸೇನಾಧೀಶ್ವರನಾದ ಯೆಹೋವನು” ಎಂಬ ದೇವರ ಪಾತ್ರವು, ಸಂಕಷ್ಟದ ಸಮಯದಲ್ಲಿ ನಮಗೆ ಪ್ರೋತ್ಸಾಹದಾಯಕವಾಗಿ ಹೇಗೆ ಪರಿಣಮಿಸಬಲ್ಲದು?

  • ಯೆಹೆಜ್ಕೇಲ 33:10-20 ತನ್ನ ನಾಶಕಾರಕ ಶಕ್ತಿಯನ್ನು ಪ್ರಯೋಗಿಸುವ ಮುಂಚೆ, ತನ್ನ ನಿಯಮೋಲ್ಲಂಘಕರಿಗೆ ಯೆಹೋವನು ಯಾವ ಅವಕಾಶವನ್ನು ದಯೆಯಿಂದ ಒದಗಿಸುತ್ತಾನೆ?

  • 2 ಥೆಸಲೊನೀಕ 1:6-10 ದುಷ್ಟ ಜನರ ಮೇಲೆ ಬರಲಿರುವ ನಾಶನವು ದೇವರ ನಂಬಿಗಸ್ತ ಸೇವಕರಿಗೆ ಹೇಗೆ ಉಪಶಮನವನ್ನು ತರಲಿದೆ?

  • 2 ಪೇತ್ರ 2:4-13 ತನ್ನ ನಾಶಕಾರಕ ಶಕ್ತಿಯನ್ನು ಪ್ರಯೋಗಿಸಲು ಯೆಹೋವನನ್ನು ಪ್ರೇರಿಸುವುದು ಯಾವುದು, ಇದು ಮಾನವಕುಲಕ್ಕೆ ಯಾವ ಪಾಠಗಳನ್ನು ಒದಗಿಸುತ್ತದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ