ಅಧ್ಯಾಯ 44
ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
ಪ್ರಶ್ನೆಗಳು, ಬಾಯಿಮಾತಿನ ಅಥವಾ ಮಾನಸಿಕ ಪ್ರತಿಕ್ರಿಯೆಯನ್ನು ಕೇಳಿಕೊಳ್ಳುವುದರಿಂದ, ಅವು ನಿಮ್ಮ ಕೇಳುಗರನ್ನು ಭಾಷಣದಲ್ಲಿ ಒಳಗೂಡಿಸಲು ಸಹಾಯಮಾಡುತ್ತವೆ. ಸಂಭಾಷಣೆಗಳನ್ನು ಪ್ರಾರಂಭಿಸಲು ಮತ್ತು ಹುರಿದುಂಬಿಸುವ ವಿಚಾರಗಳ ವಿನಿಮಯದಲ್ಲಿ ಆನಂದಿಸಲು ಪ್ರಶ್ನೆಗಳು ನಿಮಗೆ ಸಹಾಯಮಾಡಬಲ್ಲವು. ಒಬ್ಬ ಭಾಷಣಕಾರರೂ ಬೋಧಕರೂ ಆಗಿರುವ ನೀವು, ಆಸಕ್ತಿಯನ್ನು ಕೆರಳಿಸಲು, ಒಬ್ಬನು ಒಂದು ವಿಷಯದ ಕುರಿತು ತರ್ಕಬದ್ಧವಾಗಿ ಯೋಚಿಸಿ ನೋಡಲು ಅಥವಾ ನೀವು ಏನು ಹೇಳುತ್ತೀರೋ ಅದಕ್ಕೆ ಒತ್ತುನೀಡಲು ಪ್ರಶ್ನೆಗಳನ್ನು ಉಪಯೋಗಿಸಬಹುದು. ನೀವು ಪ್ರಶ್ನೆಗಳ ಸದುಪಯೋಗವನ್ನು ಮಾಡುವಾಗ, ಜನರು ನಿಷ್ಕ್ರಿಯರಾಗಿ ಕಿವಿಗೊಡುವ ಬದಲು ಕ್ರಿಯಾಶೀಲರಾಗಿ ಆಲೋಚಿಸುವಂತೆ ನೀವು ಅವರನ್ನು ಪ್ರೋತ್ಸಾಹಿಸುತ್ತೀರಿ. ನಿಮ್ಮ ಮನಸ್ಸಿನಲ್ಲಿ ಒಂದು ಉದ್ದೇಶವಿರಲಿ ಮತ್ತು ಅದನ್ನು ಸಾಧಿಸಲು ಸಹಾಯ ದೊರೆಯುವ ರೀತಿಯಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿರಿ.
ಸಂಭಾಷಣೆಯನ್ನು ಪ್ರೋತ್ಸಾಹಿಸುವುದಕ್ಕಾಗಿ. ನೀವು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ತಮಗೆ ಇಷ್ಟವಿರುವಲ್ಲಿ ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಅವರಿಗೆ ಕರೆ ನೀಡುವ ಸಂದರ್ಭಗಳಿಗೆ ಎಚ್ಚರವಾಗಿರಿ.
ಅನೇಕ ಸಾಕ್ಷಿಗಳು ಕೇವಲ “ನೀವು . . . ಎಂದಾದರೂ ಯೋಚಿಸಿದ್ದುಂಟೊ?” ಎಂದು ಕೇಳುವ ಮೂಲಕ ಆಸಕ್ತಿಕರವಾದ ಚರ್ಚೆಗಳನ್ನು ಆರಂಭಿಸುತ್ತಾರೆ. ಅನೇಕ ಜನರ ಮನಸ್ಸಿನಲ್ಲಿರುವ ಪ್ರಶ್ನೆಯನ್ನು ಅವರು ಆರಿಸಿಕೊಳ್ಳುವಾಗ, ಕ್ಷೇತ್ರ ಶುಶ್ರೂಷೆಯಲ್ಲಿ ಅವರಿಗೆ ಹೆಚ್ಚುಕಡಿಮೆ ಯಾವಾಗಲೂ ಒಳ್ಳೆಯ ಅನುಭವ ಸಿಗುವ ಭರವಸೆಯಿರುತ್ತದೆ. ನಿಮ್ಮ ಪ್ರಶ್ನೆಯು ಆ ವ್ಯಕ್ತಿಯ ಆಲೋಚನೆಗೆ ಹೊಸದಾಗಿದ್ದರೂ, ಅದು ಅವನ ಕುತೂಹಲವನ್ನು ಕೆರಳಿಸಬಹುದು. “. . . ನಿಮ್ಮ ಅಭಿಪ್ರಾಯವೇನು?” “. . . ನಿಮಗೆ ಹೇಗನಿಸುತ್ತದೆ?” ಮತ್ತು “. . . ನೀವು ನಂಬುತ್ತೀರೊ?” ಎಂಬಂಥ ಅಭಿವ್ಯಕ್ತಿಗಳ ಸಹಾಯದಿಂದ ಬೇರೆ ಬೇರೆ ರೀತಿಯ ವಿಚಾರಗಳನ್ನು ನಾವು ಪರಿಚಯಿಸಸಾಧ್ಯವಿದೆ.
ಸೌವಾರ್ತಿಕನಾಗಿದ್ದ ಫಿಲಿಪ್ಪನು, ಯೆಶಾಯನ ಪ್ರವಾದನೆಯನ್ನು ಗಟ್ಟಿಯಾಗಿ ಓದುತ್ತಿದ್ದ ಐಥಿಯೋಪ್ಯದ ಆಸ್ಥಾನಾಧಿಕಾರಿಯನ್ನು ಸಮೀಪಿಸಿದಾಗ, “ನೀನು ಓದುವದು ನಿನಗೆ ತಿಳಿಯುತ್ತದೋ?” ಎಂದಷ್ಟೇ ಕೇಳಿದನು. (ಅ. ಕೃ. 8:30) ಈ ಪ್ರಶ್ನೆಯು ಯೇಸು ಕ್ರಿಸ್ತನ ಕುರಿತಾದ ಸತ್ಯ ವಿಷಯಗಳನ್ನು ವಿವರಿಸಲು ಫಿಲಿಪ್ಪನಿಗೆ ದಾರಿಯನ್ನು ತೆರೆಯಿತು. ಇದೇ ರೀತಿಯ ಪ್ರಶ್ನೆಯನ್ನು ಉಪಯೋಗಿಸುತ್ತಾ, ಆಧುನಿಕ ದಿನಗಳ ಕೆಲವು ಸಾಕ್ಷಿಗಳು, ಬೈಬಲ್ ಸತ್ಯದ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದುಕೊಳ್ಳಲು ನಿಜವಾಗಿಯೂ ತೀವ್ರಾಪೇಕ್ಷೆಯಿದ್ದಂಥ ಜನರನ್ನು ಕಂಡುಕೊಂಡಿದ್ದಾರೆ.
ಜನರಿಗೆ ತಮ್ಮ ಸ್ವಂತ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವ ಸಂದರ್ಭವು ಕೊಡಲ್ಪಟ್ಟಾಗ, ಅನೇಕರು ನಿಮಗೆ ಕಿವಿಗೊಡಲು ಹೆಚ್ಚು ಮನಸ್ಸುಮಾಡುತ್ತಾರೆ. ಪ್ರಶ್ನೆಯನ್ನು ಕೇಳಿದ ಬಳಿಕ, ಗಮನಕೊಟ್ಟು ಆಲಿಸಿರಿ. ಆ ವ್ಯಕ್ತಿಯ ಉತ್ತರವನ್ನು ಒಪ್ಪಿಕೊಳ್ಳುವಾಗ ಟೀಕಾತ್ಮಕರಾಗಿರುವ ಬದಲು ದಯಾಭಾವದವರಾಗಿರಿ. ನೀವು ಯಥಾರ್ಥ ಭಾವದಿಂದ ಪ್ರಶಂಸಿಸುವ ಸಂದರ್ಭವಿದ್ದರೆ, ಹಾಗೆ ಮಾಡಿರಿ. ಒಂದು ಸಂದರ್ಭದಲ್ಲಿ ಒಬ್ಬ ಶಾಸ್ತ್ರಿಯು “ಬುದ್ಧಿಯಿಂದ ಉತ್ತರಕೊಟ್ಟದ್ದನ್ನು” ಕಂಡು ಯೇಸು, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದು ಹೇಳಿ ಅವನನ್ನು ಶ್ಲಾಘಿಸಿದನು. (ಮಾರ್ಕ 12:34) ನಿಮಗೆ ಆ ವ್ಯಕ್ತಿಯ ದೃಷ್ಟಿಕೋನವೇ ಇರದಿದ್ದರೂ, ಅವನು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ನೀವು ಅವನಿಗೆ ಉಪಕಾರ ಹೇಳಸಾಧ್ಯವಿದೆ. ಅವನು ಹೇಳಿದ ವಿಚಾರವು, ಬೈಬಲ್ ಸತ್ಯವನ್ನು ಅವನೊಂದಿಗೆ ಹಂಚಿಕೊಳ್ಳುವಾಗ ನೀವು ಗಣನೆಗೆ ತೆಗೆದುಕೊಳ್ಳಬೇಕಾದ ಒಂದು ಮನೋಭಾವವನ್ನು ನಿಮಗೆ ತಿಳಿಯಪಡಿಸಬಹುದು.
ಪ್ರಮುಖ ವಿಚಾರಗಳನ್ನು ಪರಿಚಯಪಡಿಸಲಿಕ್ಕಾಗಿ. ನೀವು ಜನರ ಒಂದು ಗುಂಪಿನೊಂದಿಗೆ ಮಾತಾಡುವಾಗ ಅಥವಾ ಒಬ್ಬ ವ್ಯಕ್ತಿಯೊಂದಿಗೆ ಮಾತಾಡುವಾಗ, ಪ್ರಮುಖ ವಿಚಾರಗಳಿಗೆ ಅವರನ್ನು ನಡಿಸಲಿಕ್ಕಾಗಿ ಪ್ರಶ್ನೆಗಳನ್ನು ಉಪಯೋಗಿಸಲು ಪ್ರಯತ್ನಿಸಿರಿ. ನಿಮ್ಮ ಪ್ರಶ್ನೆಗಳಲ್ಲಿ ನಿಮ್ಮ ಸಭಿಕರಿಗೆ ನಿಜವಾಗಿಯೂ ಆಸಕ್ತಿಯಿರುವ ವಿಷಯಗಳು ಒಳಗೂಡಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಕುತೂಹಲವೆಬ್ಬಿಸುವ ಪ್ರಶ್ನೆಗಳನ್ನೂ ನೀವು ಉಪಯೋಗಿಸಬಹುದು, ಏಕೆಂದರೆ ಅವುಗಳ ಉತ್ತರ ಸುಲಭವಾಗಿ ವಿಶದವಾಗುವುದಿಲ್ಲ. ಒಂದು ಪ್ರಶ್ನೆಯನ್ನು ಕೇಳಿದ ಬಳಿಕ ನೀವು ತುಸು ನಿಲ್ಲಿಸುವಲ್ಲಿ, ಮುಂದೆ ಹೇಳಲಿರುವುದನ್ನು ನಿಮ್ಮ ಸಭಿಕರು ಹೆಚ್ಚು ಆಸಕ್ತಿಯಿಂದ ಕೇಳಿಸಿಕೊಳ್ಳುವುದು ಸಂಭವನೀಯ.
ಒಂದು ಸಂದರ್ಭದಲ್ಲಿ, ಪ್ರವಾದಿಯಾದ ಮೀಕನು ಅನೇಕ ಪ್ರಶ್ನೆಗಳನ್ನು ಉಪಯೋಗಿಸಿ ಮಾತಾಡಿದನು. ತನ್ನನ್ನು ಆರಾಧಿಸುವವರಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆಂದು ಕೇಳಿದ ಬಳಿಕ, ಆ ಪ್ರವಾದಿಯು ಇನ್ನೂ ನಾಲ್ಕು ಪ್ರಶ್ನೆಗಳನ್ನು ಪ್ರಸ್ತುತಪಡಿಸಿದನು; ಅದರಲ್ಲಿ ಪ್ರತಿಯೊಂದಕ್ಕೆ ಒಂದು ಸಂಭವನೀಯ ಉತ್ತರವು ಒಳಗೂಡಿತ್ತು. ಆ ಪ್ರಶ್ನೆಗಳೆಲ್ಲ, ತನ್ನ ಚರ್ಚೆಯ ಆ ಭಾಗವನ್ನು ಅವನು ಯಾವ ಒಳನೋಟವುಳ್ಳ ಉತ್ತರವನ್ನು ಕೊಟ್ಟು ಮುಗಿಸಿದನೋ ಅದಕ್ಕಾಗಿ ಓದುಗರನ್ನು ತಯಾರಿಸಲು ಸಹಾಯಮಾಡುತ್ತವೆ. (ಮೀಕ 6:6-8) ನೀವು ಬೋಧಿಸುವಾಗ ಅದೇ ರೀತಿ ಏನಾದರೂ ಮಾಡಬಲ್ಲಿರೊ? ಹಾಗೆ ಮಾಡಲು ಪ್ರಯತ್ನಿಸಿರಿ.
ಒಂದು ವಿಷಯವಸ್ತುವಿನ ಕುರಿತು ತರ್ಕಿಸಲಿಕ್ಕಾಗಿ. ಇತರರು ಒಂದು ವಾದವಿಷಯದ ತರ್ಕಬದ್ಧತೆಯನ್ನು ನೋಡುವಂತೆ ಸಹಾಯಮಾಡಲಿಕ್ಕಾಗಿ ಪ್ರಶ್ನೆಗಳನ್ನು ಉಪಯೋಗಿಸಸಾಧ್ಯವಿದೆ. ಮಲಾಕಿಯ 1:2-10 ರಲ್ಲಿ ತೋರಿಸಲ್ಪಟ್ಟಿರುವಂತೆ, ಯೆಹೋವನು ಇಸ್ರಾಯೇಲ್ಯರಿಗೆ ಒಂದು ಗಂಭೀರವಾದ ದೈವೋಕ್ತಿಯನ್ನು ಕೊಡುವಾಗ ಇದನ್ನೇ ಮಾಡಿದನು. ಆತನು ಮೊದಲಾಗಿ, “ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂದು ಅವರಿಗೆ ಹೇಳಿದನು. ಆದರೆ ಅವರು ಆ ಪ್ರೀತಿಯನ್ನು ಗಣ್ಯಮಾಡಲು ತಪ್ಪಿಹೋದಾಗ, ಆತನು ಕೇಳಿದ್ದು: “ಏಸಾವನು ಯಾಕೋಬನ ಅಣ್ಣನಲ್ಲವೆ”? ಬಳಿಕ ಯೆಹೋವನು, ಏದೋಮಿನ ಹಾಳುಬಿದ್ದಿರುವ ಅವಸ್ಥೆಯನ್ನು ಸೂಚಿಸಿ, ಆ ಜನಾಂಗದ ದುಷ್ಟತ್ವದ ಕಾರಣ ದೇವರು ಅವರನ್ನು ಪ್ರೀತಿಸಲಿಲ್ಲವೆಂದು ಹೇಳಿದನು. ಇದನ್ನು ಅನುಸರಿಸಿ, ತನ್ನ ಪ್ರೀತಿಗೆ ಇಸ್ರಾಯೇಲ್ಯರು ಸರಿಯಾದ ಪ್ರತಿಕ್ರಿಯೆಯನ್ನು ತೋರಿಸಲು ತಪ್ಪಿಹೋದದ್ದನ್ನು ಒತ್ತಿಹೇಳಲಿಕ್ಕಾಗಿ ಆತನು ದೃಷ್ಟಾಂತಗಳನ್ನು ಕೊಟ್ಟು ಅವುಗಳ ಮಧ್ಯೆ ಪ್ರಶ್ನೆಗಳನ್ನು ಕೇಳಿದನು. ಅವುಗಳಲ್ಲಿ ಕೆಲವು ಪ್ರಶ್ನೆಗಳನ್ನು ಅಪನಂಬಿಗಸ್ತರಾದ ಯಾಜಕರೇ ಕೇಳುತ್ತಿರುವಂತೆ ತಿಳಿಸಲಾಗಿದೆ. ಬೇರೆ ಪ್ರಶ್ನೆಗಳು ಯೆಹೋವನೇ ಯಾಜಕರಿಗೆ ಕೇಳಿದ ಪ್ರಶ್ನೆಗಳಾಗಿದ್ದವು. ಈ ಸಂಭಾಷಣೆಯು ಭಾವಾವೇಶವನ್ನು ಉತ್ತೇಜಿಸಿ, ನಮ್ಮ ಗಮನವನ್ನು ಸೆರೆಹಿಡಿಯುತ್ತದೆ; ತರ್ಕಬದ್ಧತೆಯು ನಿರಾಕರಿಸಲಾಗದಂಥದ್ದಾಗಿದೆ; ಸಂದೇಶವು ಅವಿಸ್ಮರಣೀಯವಾಗಿದೆ.
ಕೆಲವು ಮಂದಿ ಭಾಷಣಕಾರರು ಪ್ರಶ್ನೆಗಳನ್ನು ಇದೇ ರೀತಿ ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೆ. ಸಭಿಕರ ಬಾಯಿಮಾತಿನ ಉತ್ತರವನ್ನು ಅವರು ನಿರೀಕ್ಷಿಸದಿರಬಹುದಾದರೂ, ಒಂದು ಸಂಭಾಷಣೆಯಲ್ಲಿ ಭಾಗವಹಿಸುತ್ತಿದ್ದಾರೋ ಎಂಬಂತೆ ಸಭಿಕರು ಆ ಚರ್ಚೆಯಲ್ಲಿ ಮಾನಸಿಕವಾಗಿ ಒಳಗೂಡುತ್ತಾರೆ.
ನಾವು ಬೈಬಲ್ ಅಧ್ಯಯನವನ್ನು ನಡೆಸುವಾಗ, ವಿದ್ಯಾರ್ಥಿಯು ಭಾಗವಹಿಸುವಂತೆ ಅಗತ್ಯಪಡಿಸುವಂಥ ಒಂದು ವಿಧಾನವನ್ನು ಉಪಯೋಗಿಸುತ್ತೇವೆ. ಆಗ ವಿದ್ಯಾರ್ಥಿಯು ಮುದ್ರಿತ ಉತ್ತರಗಳನ್ನು ಕೇವಲ ಓದಿಹೇಳದಿರುವುದಾದರೆ, ಅದು ಹೆಚ್ಚು ಪ್ರಯೋಜನಕರವಾಗಿರುತ್ತದೆ. ಆದುದರಿಂದ, ದಯಾಭಾವದಿಂದ ವಿದ್ಯಾರ್ಥಿಯೊಂದಿಗೆ ತರ್ಕಿಸಲು ಸಹಾಯಕವಾದ ಉಪಪ್ರಶ್ನೆಗಳನ್ನು ಹಾಕಿರಿ. ಮುಖ್ಯ ವಿಚಾರಗಳು ಬರುವಾಗ, ಉತ್ತರವನ್ನು ಕೊಡಲಿಕ್ಕಾಗಿ ಅವನು ಬೈಬಲನ್ನು ಆಧಾರವಾಗಿ ಉಪಯೋಗಿಸುವಂತೆ ಪ್ರೋತ್ಸಾಹಿಸಿರಿ. ನೀವು ಹೀಗೂ ಕೇಳಬಹುದು: “ನಾವು ಈಗ ಚರ್ಚಿಸುತ್ತಿರುವ ವಿಷಯವು ಹಿಂದೆ ಕಲಿತಿರುವ ಬೇರೆ ಅಂಶಕ್ಕೆ ಹೇಗೆ ಸಂಬಂಧಿಸುತ್ತದೆ? ಇದೇಕೆ ಪ್ರಾಮುಖ್ಯವಾಗಿದೆ? ಇದು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕು?” ನಿಮ್ಮ ಸ್ವಂತ ನಿಶ್ಚಿತಾಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕಿಂತ ಅಥವಾ ನೀವೇ ಹೆಚ್ಚಿನ ವಿವರಣೆಯನ್ನು ಕೊಡುವುದಕ್ಕಿಂತ ಈ ಮೇಲಿನ ವಿಧಾನವು ಹೆಚ್ಚು ಪರಿಣಾಮಕಾರಿಯಾಗಿದೆ. ಈ ರೀತಿಯಲ್ಲಿ, ದೇವರನ್ನು ಆರಾಧಿಸಲು ವಿದ್ಯಾರ್ಥಿಯು ತನ್ನ “ತರ್ಕಶಕ್ತಿ”ಯನ್ನು ಉಪಯೋಗಿಸುವಂತೆ ನೀವು ಅವನಿಗೆ ಸಹಾಯಮಾಡುತ್ತೀರಿ.—ರೋಮಾ. 12:1, NW.
ಒಬ್ಬ ವಿದ್ಯಾರ್ಥಿಯು ಒಂದು ನಿರ್ದಿಷ್ಟ ವಿಚಾರವನ್ನು ಗ್ರಹಿಸುವುದಿಲ್ಲವಾದರೆ, ತಾಳ್ಮೆಯಿಂದಿರಿ. ಅವನು ನೀವು ಹೇಳುತ್ತಿರುವ ವಿಷಯವನ್ನು ತಾನು ಅನೇಕ ವರ್ಷಗಳಿಂದ ಕಲಿತಿರುವ ವಿಷಯಕ್ಕೆ ಹೋಲಿಸಿ ನೋಡಲು ಪ್ರಯತ್ನಿಸುತ್ತಿರಬಹುದು. ಆ ವಿಷಯವಸ್ತುವನ್ನು ಇನ್ನೊಂದು ಕೋನದಿಂದ ಸಮೀಪಿಸುವುದು ಸಹಾಯಕರವಾಗಿದ್ದೀತು. ಆದರೆ ಕೆಲವೊಮ್ಮೆ, ತೀರ ಪ್ರಾಥಮಿಕ ರೀತಿಯ ತರ್ಕದ ಅಗತ್ಯವಿರುತ್ತದೆ. ಶಾಸ್ತ್ರವಚನಗಳನ್ನು ಧಾರಾಳವಾಗಿ ಉಪಯೋಗಿಸಿರಿ. ದೃಷ್ಟಾಂತಗಳನ್ನು ಉಪಯೋಗಿಸಿರಿ. ಇವುಗಳೊಂದಿಗೆ, ಆ ವ್ಯಕ್ತಿಯನ್ನು ರುಜುವಾತಿನ ಬಗ್ಗೆ ತಾರ್ಕಿಕವಾಗಿ ಚರ್ಚಿಸಲು ಕರೆಕೊಡುವಂಥ ಸರಳವಾದ ಪ್ರಶ್ನೆಗಳನ್ನು ಉಪಯೋಗಿಸಿರಿ.
ಆಂತರಿಕ ಅನಿಸಿಕೆಗಳನ್ನು ಹೊರತರಲಿಕ್ಕಾಗಿ. ಜನರು ಪ್ರಶ್ನೆಗಳಿಗೆ ಉತ್ತರ ಕೊಡುವಾಗ, ತಮಗೆ ಆ ವಿಷಯದಲ್ಲಿ ನಿಜವಾಗಿಯೂ ಹೇಗನಿಸುತ್ತದೆಂಬುದನ್ನು ಯಾವಾಗಲೂ ತೋರಿಸಿಕೊಡುವುದಿಲ್ಲ. ನೀವು ಅಪೇಕ್ಷಿಸುತ್ತೀರೆಂದು ಅವರು ಎಣಿಸುವ ಉತ್ತರಗಳನ್ನು ಮಾತ್ರ ಅವರು ಕೊಡಬಹುದು. ಇಲ್ಲಿ ವಿವೇಚನೆ ಅಗತ್ಯ. (ಜ್ಞಾನೋ. 20:5) “ಇದನ್ನು ನಂಬುತ್ತೀಯಾ?” ಎಂದು ಯೇಸು ಕೇಳಿದಂತೆ ನೀವೂ ಕೇಳಬಹುದು.—ಯೋಹಾ. 11:26.
ಯೇಸುವಿನ ಶಿಷ್ಯರಲ್ಲಿ ಅನೇಕರು ಅವನು ಹೇಳಿದ ವಿಷಯದ ಕುರಿತು ಅಸಮಾಧಾನಪಟ್ಟು ಅವನನ್ನು ತ್ಯಜಿಸಿದಾಗ, ಈ ವಿಷಯದಲ್ಲಿ ತನ್ನ ಅಪೊಸ್ತಲರಿಗೆ ಹೇಗನಿಸುತ್ತದೆಂದು ವ್ಯಕ್ತಪಡಿಸುವಂತೆ ಅವನು ಅವರನ್ನು ಕೇಳಿಕೊಂಡನು. ಅವನು ಹೀಗೆ ಪ್ರಶ್ನಿಸಿದನು: “ನೀವು ಸಹ ಹೋಗಬೇಕೆಂದಿದ್ದೀರಾ?” ಆಗ ಪೇತ್ರನು ಅವರ ಅನಿಸಿಕೆಗಳನ್ನು ಈ ಮಾತುಗಳಲ್ಲಿ ತಿಳಿಸಿದನು: “ಸ್ವಾಮೀ, ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು. ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.” (ಯೋಹಾ. 6:67-69) ಇನ್ನೊಂದು ಸಂದರ್ಭದಲ್ಲಿ, ಯೇಸು ತನ್ನ ಶಿಷ್ಯರಿಗೆ “ಜನರು ಮನುಷ್ಯಕುಮಾರನೆಂಬ ನನ್ನನ್ನು ಯಾರು ಅನ್ನುತ್ತಾರೆ”? ಎಂದು ಕೇಳಿದನು. ಇದರ ಹಿಂದೆಯೇ ಅವನು ಇನ್ನೊಂದು ಪ್ರಶ್ನೆಯನ್ನು ಹಾಕಿ, ಅವರು ತಮ್ಮ ಹೃದಯಗಳಲ್ಲಿದ್ದುದನ್ನು ತಿಳಿಯಪಡಿಸುವಂತೆ ಆಮಂತ್ರಿಸಿದನು. “ಆದರೆ ನೀವು ನನ್ನನ್ನು ಯಾರನ್ನುತ್ತೀರಿ”? ಎಂದು ಅವನು ಕೇಳಿದನು. ಇದಕ್ಕೆ ಉತ್ತರವನ್ನು ಕೊಡುತ್ತಾ ಪೇತ್ರನು ಹೇಳಿದ್ದು: “ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು.” (ಓರೆ ಅಕ್ಷರಗಳು ನಮ್ಮವು.)—ಮತ್ತಾ. 16:13-16.
ಒಂದು ಬೈಬಲ್ ಅಧ್ಯಯನವನ್ನು ನಡೆಸುವ ಸಮಯದಲ್ಲಿ, ಕೆಲವು ವಿವಾದಾಂಶಗಳು ಬರುವಾಗ ತದ್ರೀತಿಯ ಕ್ರಮವನ್ನು ಅನುಸರಿಸುವುದು ಪ್ರಯೋಜನಕರವೆಂದು ನೀವು ಕಂಡುಕೊಳ್ಳಬಹುದು. ನೀವು ಹೀಗೆ ಕೇಳಬಹುದು: “ಈ ವಿಷಯವನ್ನು ನಿಮ್ಮ ಸಹಪಾಠಿಗಳು (ಅಥವಾ ಸಹೋದ್ಯೋಗಿಗಳು) ಹೇಗೆ ವೀಕ್ಷಿಸುತ್ತಾರೆ?” ಬಳಿಕ, “ಇದರ ವಿಷಯದಲ್ಲಿ ನಿಮಗೆ ಹೇಗನಿಸುತ್ತದೆ?” ಎಂದು ನೀವು ಕೇಳಬಹುದು. ಆ ವ್ಯಕ್ತಿಯ ನಿಜವಾದ ಅನಿಸಿಕೆಗಳು ಏನೆಂಬುದನ್ನು ನೀವು ತಿಳಿಯುವಾಗ, ಒಬ್ಬ ಬೋಧಕರೋಪಾದಿ ನೀವು ಆ ವ್ಯಕ್ತಿಗೆ ಅತಿ ಹೆಚ್ಚು ಸಹಾಯವನ್ನು ನೀಡಲು ಸಾಧ್ಯವಾಗುತ್ತದೆ.
ಹೆಚ್ಚಿನ ಒತ್ತನ್ನು ನೀಡಲಿಕ್ಕಾಗಿ. ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡಲಿಕ್ಕಾಗಿ ಸಹ ಪ್ರಶ್ನೆಗಳನ್ನು ಉಪಯೋಗಿಸಸಾಧ್ಯವಿದೆ. ರೋಮಾಪುರ 8:31, 32 ರಲ್ಲಿ ದಾಖಲಿಸಲ್ಪಟ್ಟಿರುವ ಪ್ರಕಾರ, ಅಪೊಸ್ತಲ ಪೌಲನು ಹೀಗೆ ಮಾಡಿದನು: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?” ಇಲ್ಲಿ ಪ್ರತಿ ಸಂದರ್ಭದಲ್ಲಿ, ಒಂದು ಪ್ರಶ್ನೆಯು ಅದರ ಮುಂಚಿನ ವಾಕ್ಯಭಾಗವನ್ನು ವಿಸ್ತರಿಸುವುದನ್ನು ಗಮನಿಸಿರಿ.
ಬಾಬೆಲಿನ ರಾಜನ ವಿರುದ್ಧವಾದ ಯೆಹೋವನ ನ್ಯಾಯತೀರ್ಪನ್ನು ದಾಖಲಿಸಿದ ಬಳಿಕ, ಪ್ರವಾದಿಯಾದ ಯೆಶಾಯನು ಈ ಮಾತುಗಳನ್ನು ಕೂಡಿಸುತ್ತಾ ಬಲವಾದ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಿದನು: “ಸೇನಾಧೀಶ್ವರನಾದ ಯೆಹೋವನು ಉದ್ದೇಶಮಾಡಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು?” (ಯೆಶಾ. 14:27) ಇಂತಹ ಪ್ರಶ್ನೆಗಳಲ್ಲಿ ಅಡಕವಾಗಿರುವ ವಿಷಯಗಳು, ಅಲ್ಲಿ ಹೇಳಲ್ಪಟ್ಟಿರುವ ವಿಚಾರಗಳನ್ನು ಅಲ್ಲಗಳೆಯಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತವೆ. ಅದಕ್ಕೆ ಉತ್ತರ ಬೇಕೆಂದಿರುವುದಿಲ್ಲ.
ತಪ್ಪು ಆಲೋಚನಾ ರೀತಿಯನ್ನು ಬಯಲುಪಡಿಸಲಿಕ್ಕಾಗಿ. ಜಾಗರೂಕತೆಯಿಂದ ಯೋಚಿಸಿ ಕೇಳುವ ಪ್ರಶ್ನೆಗಳು, ತಪ್ಪು ಆಲೋಚನಾ ರೀತಿಯನ್ನು ಬಯಲುಪಡಿಸಲಿಕ್ಕಾಗಿಯೂ ಬಲಾಢ್ಯವಾದ ಉಪಕರಣಗಳಾಗಿವೆ. ಒಬ್ಬ ಮನುಷ್ಯನನ್ನು ಗುಣಪಡಿಸುವ ಮೊದಲು, ಯೇಸು ಫರಿಸಾಯರನ್ನೂ ಕೆಲವು ಮಂದಿ ಧರ್ಮೋಪದೇಶಕರನ್ನೂ, “ಸಬ್ಬತ್‌ದಿನದಲ್ಲಿ ಸ್ವಸ್ಥಮಾಡುವದು ಸರಿಯೋ? ಸರಿಯಲ್ಲವೋ”? ಎಂದು ಕೇಳಿದನು. ಆ ಮನುಷ್ಯನನ್ನು ಗುಣಪಡಿಸಿದ ಬಳಿಕ ಅವನು ಇನ್ನೊಂದು ಪ್ರಶ್ನೆಯನ್ನು ಹಾಕಿದನು: “ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್‌ದಿನದಲ್ಲಾದರೂ ಮೇಲಕ್ಕೆ ತೆಗೆಯುವದಿಲ್ಲವೇ”? (ಲೂಕ 14:1-6) ಇದಕ್ಕೆ ಉತ್ತರವನ್ನು ಅವನು ನಿರೀಕ್ಷಿಸಲೂ ಇಲ್ಲ, ಅವರು ಕೊಡಲೂ ಇಲ್ಲ. ಆ ಪ್ರಶ್ನೆಗಳು ಅವರ ತಪ್ಪು ಆಲೋಚನಾ ರೀತಿಯನ್ನು ಬಯಲುಪಡಿಸಿದವು.
ಕೆಲಮೊಮ್ಮೆ, ನಿಜ ಕ್ರೈಸ್ತರು ಸಹ ತಪ್ಪು ಆಲೋಚನಾ ರೀತಿಗಳಿಗೆ ತುತ್ತಾಗಬಹುದು. ಒಂದನೆಯ ಶತಮಾನದ ಕೊರಿಂಥದಲ್ಲಿದ್ದ ಕೆಲವರು, ತಮ್ಮ ಮಧ್ಯೆಯೇ ಬಗೆಹರಿಸಲು ಶಕ್ತರಾಗಿರಬೇಕಾಗಿದ್ದ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ತಮ್ಮ ಸಹೋದರರನ್ನು ನ್ಯಾಯಾಲಯಗಳಿಗೆ ಒಯ್ಯುತ್ತಿದ್ದರು. ಈ ವಿಷಯವನ್ನು ಅಪೊಸ್ತಲ ಪೌಲನು ಹೇಗೆ ಬಗೆಹರಿಸಿದನು? ಅವರು ತಮ್ಮ ಆಲೋಚನಾ ರೀತಿಯನ್ನು ಸರಿಹೊಂದಿಸಿಕೊಳ್ಳುವಂತೆ, ಮನಸ್ಸಿಗೆ ನಾಟುವಂಥ ರೀತಿಯಲ್ಲಿ ಅವನು ಅನೇಕ ಪ್ರಶ್ನೆಗಳನ್ನು ಕೇಳಿದನು.—1 ಕೊರಿಂ. 6:1-8.
ಪ್ರ್ಯಾಕ್ಟಿಸ್ ಮಾಡುವಲ್ಲಿ, ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ನೀವು ಕಲಿಯಬಲ್ಲಿರಿ. ಆದರೂ, ಗೌರವವನ್ನು ತೋರಿಸಲು ಮರೆಯದಿರಿ. ವಿಶೇಷವಾಗಿ ವೃದ್ಧರಿಗೆ, ನಿಮಗೆ ವೈಯಕ್ತಿಕವಾಗಿ ಪರಿಚಯವಿಲ್ಲದವರಿಗೆ ಮತ್ತು ಅಧಿಕಾರ ಸ್ಥಾನದಲ್ಲಿರುವವರೊಂದಿಗೆ ಮಾತಾಡುವಾಗ ಇದನ್ನು ನೆನಪಿನಲ್ಲಿಡಿರಿ. ಬೈಬಲ್ ಸತ್ಯವನ್ನು ಮನಸ್ಸಿಗೆ ಹಿಡಿಸುವಂಥ ರೀತಿಯಲ್ಲಿ ಸಾದರಪಡಿಸಲಿಕ್ಕಾಗಿ ಪ್ರಶ್ನೆಗಳನ್ನು ಉಪಯೋಗಿಸಿರಿ.