ಸುನಡತೆಯುಳ್ಳ ಮಕ್ಕಳನ್ನು ಬೆಳೆಸುವುದು—ಈಗಲೂ ಸಾಧ್ಯವೊ?
“ನಾವೀಗ ತೀರ ಜಟಿಲವಾದ ಒಂದು ಸಮಾಜದಲ್ಲಿ, ತೀರ ಮಿಶ್ರರೂಪದ ಒಂದು ಸಂಸ್ಕೃತಿಯಲ್ಲಿ ಜೀವಿಸುತ್ತಿದ್ದೇವೆ; ಇದರಲ್ಲಿ ಏಕರೀತಿಯ ನಿಯಮಾವಳಿಯಿಲ್ಲ” ಎಂದು ಕೆನಡದ ಆಟವಾದಲ್ಲಿನ ಕುಟುಂಬಕ್ಕಾಗಿರುವ ವ್ಯಾನ್ಯೇ ಸಂಸ್ಥೆಯ ರಾಬರ್ಟ್ ಗ್ಲಾಸಪ್ ಗಮನಿಸುತ್ತಾರೆ. ಯಾವ ಫಲಿತಾಂಶದೊಂದಿಗೆ? ದ ಟೊರಾಂಟೊ ಸ್ಟಾರ್ ವಾರ್ತಾಪತ್ರಿಕೆಯಲ್ಲಿ ಒಂದು ವರದಿಯು ಹೇಳುವುದು: “ಹದಿಪ್ರಾಯದ ಗರ್ಭಧಾರಣೆಗಳು, ಯುವಪ್ರಾಯದ ಹಿಂಸಾಚಾರಗಳು ಹಾಗೂ ಹದಿಪ್ರಾಯದ ಆತ್ಮಹತ್ಯೆಗಳು—ಇವೆಲ್ಲವೂ ಏರಿಕೆಯಲ್ಲಿವೆ.”
ಈ ಸಮಸ್ಯೆಯು ಉತ್ತರ ಅಮೆರಿಕದ ಹೊರಗೂ ವ್ಯಾಪಿಸುತ್ತದೆ. ಅಮೆರಿಕದ ರ್ಹೋಡ್ ಐಲೆಂಡ್ನಲ್ಲಿನ ಬ್ರೌನ್ ವಿಶ್ವವಿದ್ಯಾನಿಲಯದ ಮಾನವ ಅಭಿವೃದ್ಧಿಗಾಗಿರುವ ಕೇಂದ್ರದ ನಿರ್ದೇಶಕರಾದ ಬಿಲ್ ಡೇಮನ್, ಬ್ರಿಟನ್ನಿನಲ್ಲಿ ಮತ್ತು ಇನ್ನಿತರ ಐರೋಪ್ಯ ರಾಷ್ಟ್ರಗಳಲ್ಲಿ, ಹಾಗೂ ಆಸ್ಟ್ರೇಲಿಯ, ಇಸ್ರೇಲ್ ಮತ್ತು ಜಪಾನಿನಲ್ಲಿ, ಈ ವಾದಾಂಶಗಳ ಅಧ್ಯಯನಮಾಡಿದ್ದಾರೆ. ಯುವ ಜನರಿಗೆ ಮಾರ್ಗದರ್ಶನವನ್ನು ಒದಗಿಸುವುದರಲ್ಲಿ, ಚರ್ಚುಗಳು, ಶಾಲೆಗಳು, ಹಾಗೂ ಇತರ ಸಂಸ್ಥೆಗಳ ಅವನತಿಯನ್ನು ಅವರು ಸೂಚಿಸುತ್ತಾರೆ. ನಮ್ಮ ಸಂಸ್ಕೃತಿಯು “ಗುಣಲಕ್ಷಣ ಹಾಗೂ ದಕ್ಷತೆಯನ್ನು ರೂಪಿಸುವ ಸಲುವಾಗಿ, ಮಕ್ಕಳಿಗೆ ಏನು ಅಗತ್ಯವಿದೆ ಎಂಬುದರ ಪರಿಜ್ಞಾನ ನಮ್ಮ ಸಂಸ್ಕೃತಿಗೆ ಇಲ್ಲವಾಗಿದೆ” ಎಂಬುದನ್ನು ಅವರು ನಂಬುತ್ತಾರೆ. “ಮಕ್ಕಳ ಆರೋಗ್ಯ ಹಾಗೂ ಕ್ಷೇಮಕ್ಕೆ, ಶಿಸ್ತು ಅಪಾಯಕರವಾದದ್ದಾಗಿದೆ” ಎಂದು ಕಲಿಸುವ ತಂದೆತಾಯ್ತನದ ಪರಿಣತರನ್ನು ಉದ್ಧರಿಸುತ್ತಾ, ಇದು “ಹಟಮಾರಿಗಳಾದ, ಅವಿಧೇಯ ಮಕ್ಕಳ ಬೆಳೆಸುವಿಕೆಗೆ ಒಂದು ಸೂತ್ರ”ವಾಗಿದೆಯೆಂದು ಡೇಮನ್ ಸಮರ್ಥಿಸುತ್ತಾರೆ.
ಇಂದಿನ ಯುವ ಜನರಿಗೆ ಯಾವುದರ ಅಗತ್ಯವಿದೆ? ಹೃದಮನಗಳನ್ನು ಸರಿಪಡಿಸುವ ಪ್ರೀತಿಪೂರ್ಣವಾದ ತರಬೇತಿಯು ಅವರಿಗೆ ನಿರಂತರವಾಗಿ ಬೇಕಾಗಿದೆ. ಬೇರೆ ಬೇರೆ ಯುವ ಜನರಿಗೆ ಬೇರೆ ಬೇರೆ ರೀತಿಯ ಶಿಸ್ತಿನ ಅಗತ್ಯವಿದೆ. ಪ್ರೀತಿಯಿಂದ ಪ್ರಚೋದಿತವಾಗಿರುವಾಗ, ಶಿಸ್ತನ್ನು ಅನೇಕವೇಳೆ ಸಮಂಜಸವಾದ ರೀತಿಯಲ್ಲಿ ಕೊಡಸಾಧ್ಯವಿದೆ. ಆದುದರಿಂದಲೇ ಜ್ಞಾನೋಕ್ತಿ 8:33ರಲ್ಲಿ ನಮಗೆ “ಶಿಸ್ತಿಗೆ ಕಿವಿಗೊಡಿರಿ” (NW) ಎಂದು ಹೇಳಲಾಗಿದೆ. ಕೆಲವರಾದರೋ, “ಕೇವಲ ಮಾತುಗಳಿಂದ ಸರಿಪಡಿಸಲ್ಪಡು”ವುದಿಲ್ಲ (NW). ಅವರಿಗೆ, ಅವಿಧೇಯತೆಗಾಗಿ ಸೂಕ್ತವಾದ ಶಿಕ್ಷೆಯು ಸಾಕಷ್ಟು ಪ್ರಮಾಣದಲ್ಲಿ ಅಗತ್ಯವಿರಬಹುದು. (ಜ್ಞಾನೋಕ್ತಿ 17:10; 23:13, 14; 29:19) ಈ ಶಿಫಾರಸ್ಸುಗಳನ್ನು ಮಾಡುವುದರಲ್ಲಿ, ಒಂದು ಮಗುವನ್ನು ಗಾಯಗೊಳಿಸಿ, ಅದಕ್ಕೆ ಬಾಧೆಯನ್ನು ಉಂಟುಮಾಡಬಹುದಾದ ಕೋಪದ ಹೊಡೆತಗಳನ್ನು ಅಥವಾ ತುಂಬ ಏಟುಗಳನ್ನು ಕೊಡುವುದನ್ನು ಬೈಬಲು ಅನುಮೋದಿಸುತ್ತಿಲ್ಲ. (ಜ್ಞಾನೋಕ್ತಿ 16:32) ಬದಲಾಗಿ, ತನನ್ನು ಏಕೆ ತಿದ್ದಲಾಗುತ್ತಿದೆ ಎಂಬುದನ್ನು ಒಂದು ಮಗುವು ಅರ್ಥಮಾಡಿಕೊಳ್ಳಬೇಕು ಮತ್ತು ಇದು ನಿಜವಾಗಿಯೂ ಹೆತ್ತವರು ತನ್ನ ಹಿತಕ್ಷೇಮದಲ್ಲಿ ಆಸಕ್ತರಾಗಿರುವ ಕಾರಣದಿಂದಲೇ ಎಂಬುದನ್ನು ಅದು ಗ್ರಹಿಸಬೇಕು.—ಇಬ್ರಿಯ 12:6, 11ನ್ನು ಹೋಲಿಸಿರಿ.
ಅಂತಹ ಪ್ರಾಯೋಗಿಕ ಹಾಗೂ ಸ್ವಸ್ಥಕರ ಬೈಬಲ್ ಸಂಬಂಧಿತ ಬುದ್ಧಿವಾದವು, ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದಲ್ಲಿ ಎತ್ತಿತೋರಿಸಲ್ಪಟ್ಟಿದೆ.