ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳಿರಿ
“[ನೀನು] ದೀನರನ್ನು ಉದ್ಧರಿಸುತ್ತೀ.”—2 ಸಮುವೇಲ 22:28.
1, 2. ಲೋಕದ ಅನೇಕ ಅರಸರಲ್ಲಿ ಯಾವುದು ಸರ್ವಸಾಮಾನ್ಯ ಸಂಗತಿಯಾಗಿತ್ತು?
ಐಗುಪ್ತದ ಪಿರಮಿಡ್ಗಳು, ಗತಕಾಲದಲ್ಲಿ ಆ ದೇಶವನ್ನು ಆಳಿದಂಥ ಪುರುಷರ ಬಗ್ಗೆ ಸಾಕ್ಷ್ಯನೀಡುತ್ತವೆ. ಇತಿಹಾಸದಲ್ಲಿ ಹೆಸರನ್ನು ಗಳಿಸಿರುವ ಇನ್ನಿತರ ಗಮನಾರ್ಹ ಪುರುಷರು, ಅಶ್ಶೂರ್ಯರ ಅರಸನಾದ ಸನ್ಹೇರೀಬ, ಗ್ರೀಸ್ ದೇಶದ ಮಹಾ ಅಲೆಕ್ಸಾಂಡರ್ ಮತ್ತು ರೋಮಿನ ಜೂಲಿಯಸ್ ಸೀಸರ್ ಆಗಿದ್ದಾರೆ. ಈ ಎಲ್ಲ ಅರಸರಲ್ಲಿ ಒಂದು ವಿಷಯವು ಸರ್ವಸಾಮಾನ್ಯವಾಗಿತ್ತು. ಇವರು ನಿಜವಾಗಿಯೂ ದೀನಭಾವದವರಾಗಿದ್ದರೆಂಬ ದಾಖಲೆಯನ್ನು ಮಾಡಲಿಲ್ಲ.—ಮತ್ತಾಯ 20:25, 26.
2 ಮೇಲೆ ತಿಳಿಸಲ್ಪಟ್ಟಿರುವ ಅರಸರಲ್ಲಿ ಯಾರೇ ಆಗಲಿ, ಅವರ ರಾಜ್ಯದಲ್ಲಿ ಸಾಂತ್ವನದ ಅಗತ್ಯದಲ್ಲಿರುವ ಬಡ ಪ್ರಜೆಗಳಿಗಾಗಿ ಹುಡುಕಾಟ ನಡೆಸುವ ರೂಢಿ ಇದ್ದುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ? ನಿಶ್ಚಯವಾಗಿಯೂ ಇಲ್ಲ! ಅಥವಾ ದಬ್ಬಾಳಿಕೆಗೆ ಒಳಗಾಗಿರುವ ನಾಗರಿಕರಿಗೆ ಸಾಂತ್ವನ ನೀಡಲಿಕ್ಕಾಗಿ ಅಂಥವರ ಬಡ ನಿವಾಸಗಳಿಗೆ ಅವರು ಹೋಗುವುದನ್ನು ಸಹ ನೀವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಶ್ವದ ಪರಮಪ್ರಧಾನ ಪ್ರಭುವಾಗಿರುವ ಯೆಹೋವ ದೇವರಿಗೆ ದೀನರಾದ ಮಾನವ ಜೀವಿಗಳ ಕಡೆಗಿರುವ ಮನೋಭಾವಕ್ಕಿಂತ ಈ ಅರಸರ ಮನೋಭಾವವು ಎಷ್ಟು ಭಿನ್ನವಾಗಿದೆ!
ದೀನಭಾವದ ಅತಿ ಶ್ರೇಷ್ಠ ಉದಾಹರಣೆ
3. ಪರಮಪ್ರಧಾನ ಪ್ರಭುವು ತನ್ನ ಮಾನವ ಪ್ರಜೆಗಳನ್ನು ಹೇಗೆ ಉಪಚರಿಸುತ್ತಾನೆ?
3 ಯೆಹೋವನು ಅಗಮ್ಯವಾದ ರೀತಿಯಲ್ಲಿ ಮಹೋತ್ತಮನಾಗಿದ್ದಾನೆ ಮತ್ತು ಶ್ರೇಷ್ಠನಾಗಿದ್ದಾನೆ, ಆದರೆ “ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ಮತ್ತು ಬೇರೆ ಬೇರೆ ಕಷ್ಟಪರೀಕ್ಷೆಗಳ ಪರಿಣಾಮವಾಗಿ ಮನಸ್ಸು ಜಜ್ಜಿಹೋಗಿರುವಂಥ ದೀನ ಆರಾಧಕರನ್ನು ಕಂಡುಕೊಳ್ಳುವಾಗ ಯೆಹೋವನು ಏನು ಮಾಡುತ್ತಾನೆ? ಇಂಥ ‘ದೀನರ ಆತ್ಮವನ್ನೂ ಜಜ್ಜಿಹೋದವರ ಮನಸ್ಸನ್ನೂ ಉಜ್ಜೀವಿಸುವುದಕ್ಕಾಗಿ’ ಅಥವಾ ಪುನಶ್ಚೈತನ್ಯಗೊಳಿಸಲಿಕ್ಕಾಗಿ ತನ್ನ ಪವಿತ್ರಾತ್ಮದ ಮೂಲಕ ಆತನು ಒಂದರ್ಥದಲ್ಲಿ ಅಂಥವರೊಂದಿಗೆ ‘ನಿವಾಸಿಸುತ್ತಿದ್ದಾನೆ.’ (ಯೆಶಾಯ 57:15) ಹೀಗೆ ಪುನಶ್ಚೈತನ್ಯಗೊಂಡ ಆತನ ಆರಾಧಕರು, ಸಂತೋಷದಿಂದ ಆತನ ಸೇವೆಯನ್ನು ಪುನಃ ಆರಂಭಿಸಲು ಹೆಚ್ಚಿನ ಮಟ್ಟಿಗೆ ಶಕ್ತರಾಗಿರುತ್ತಾರೆ. ದೇವರು ನಿಜವಾಗಿಯೂ ಎಷ್ಟು ದೀನಭಾವವನ್ನು ತೋರಿಸುತ್ತಾನೆ!
4, 5. (ಎ) ದೇವರು ಆಳ್ವಿಕೆ ನಡೆಸುವ ವಿಧದ ಕುರಿತು ಕೀರ್ತನೆಗಾರನಿಗೆ ಹೇಗನಿಸಿತು? (ಬಿ) ‘ದೀನರಿಗೆ’ ಸಹಾಯಮಾಡಲಿಕ್ಕಾಗಿ ದೇವರು ‘ಬಾಗುವುದರ’ ಅರ್ಥವೇನು?
4 ಪಾಪಭರಿತ ಮಾನವರಿಗೆ ಸಹಾಯಮಾಡಲಿಕ್ಕಾಗಿ ಪರಮಾಧಿಕಾರಿ ಕರ್ತನು ಎಷ್ಟರ ಮಟ್ಟಿಗೆ ತನ್ನನ್ನು ತಗ್ಗಿಸಿಕೊಂಡಿದ್ದಾನೋ ಅಷ್ಟರ ಮಟ್ಟಿಗೆ ವಿಶ್ವದಲ್ಲಿ ಯಾರೊಬ್ಬರೂ ತಮ್ಮನ್ನು ತಗ್ಗಿಸಿಕೊಂಡಿಲ್ಲ. ಆದುದರಿಂದಲೇ ಕೀರ್ತನೆಗಾರನು ಹೀಗೆ ಬರೆಯಶಕ್ತನಾದನು: “ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಗಳಲ್ಲಿ ಮೆರೆಯುತ್ತದೆ. ನಮ್ಮ ಯೆಹೋವದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ. ಆತನು ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.”—ಕೀರ್ತನೆ 113:4-7.
5 ಯೆಹೋವನು ಶುದ್ಧನು ಮತ್ತು ಪವಿತ್ರನು ಆಗಿದ್ದಾನೆ. ಹೀಗಿರುವುದರಿಂದ ಆತನಲ್ಲಿ “ಸೊಕ್ಕು” ಅಥವಾ ಅಹಂಕಾರವು ಇಲ್ಲವೇ ಇಲ್ಲ. (ಮಾರ್ಕ 7:22, 23) “ಬಾಗು” ಎಂಬ ಪದವು, ಸಾಮಾಜಿಕವಾಗಿ ಕಡಿಮೆ ದರ್ಜೆಯಲ್ಲಿರುವ ವ್ಯಕ್ತಿಯ ಮಟ್ಟಕ್ಕೆ ಬರುವುದು ಅಥವಾ ತನಗಿರುವ ಸ್ಥಾನ ಇಲ್ಲವೆ ಪದವಿಯನ್ನು ಲೆಕ್ಕಿಸದೇ ಇತರರೊಂದಿಗೆ ವ್ಯವಹರಿಸುವಾಗ ದೊಡ್ಡಸ್ತಿಕೆ ತೋರಿಸದಿರುವುದನ್ನು ಸೂಚಿಸಸಾಧ್ಯವಿದೆ. ತನ್ನ ಅಪರಿಪೂರ್ಣ ಮಾನವ ಆರಾಧಕರ ಆವಶ್ಯಕತೆಗಳಿಗೆ ಪ್ರೀತಿಪರ ರೀತಿಯಲ್ಲಿ ಗಮನಕೊಡುವ ನಮ್ಮ ದೀನಭಾವದ ದೇವರ ಸ್ವರೂಪವನ್ನು ಕೀರ್ತನೆ 113:6 ಎಷ್ಟು ಚೆನ್ನಾಗಿ ವರ್ಣಿಸುತ್ತದೆ!—2 ಸಮುವೇಲ 22:36.
ಯೇಸು ಏಕೆ ದೀನಭಾವದವನಾಗಿದ್ದನು?
6. ಯೆಹೋವನ ದೀನಭಾವದ ಅತಿ ಶ್ರೇಷ್ಠ ಕೃತ್ಯವು ಯಾವುದಾಗಿತ್ತು?
6 ದೇವರ ದೀನಭಾವ ಮತ್ತು ಪ್ರೀತಿಯ ಅತಿ ದೊಡ್ಡ ಕೃತ್ಯವು, ತನ್ನ ಪ್ರೀತಿಯ ಏಕಜಾತ ಪುತ್ರನನ್ನು ಮಾನವಕುಲದ ರಕ್ಷಣೆಗಾಗಿ ಭೂಮಿಯ ಮೇಲೆ ಜನಿಸುವಂತೆ ಮತ್ತು ಒಬ್ಬ ಮಾನವನಾಗಿ ಬೆಳೆಸಲ್ಪಡುವಂತೆ ಕಳುಹಿಸಿದ್ದೇ ಆಗಿತ್ತು. (ಯೋಹಾನ 3:16) ಯೇಸು ತನ್ನ ಸ್ವರ್ಗೀಯ ತಂದೆಯ ಕುರಿತಾದ ಸತ್ಯವನ್ನು ನಮಗೆ ಕಲಿಸಿದನು; ತದನಂತರ “ಲೋಕದ ಪಾಪವನ್ನು” ನಿವಾರಣೆಮಾಡಲಿಕ್ಕಾಗಿ ಅವನು ತನ್ನ ಪರಿಪೂರ್ಣ ಮಾನವ ಜೀವವನ್ನು ತ್ಯಾಗಮಾಡಿದನು. (ಯೋಹಾನ 1:29; 18:37) ತನ್ನ ತಂದೆಯಾದ ಯೆಹೋವನ ದೀನಭಾವವನ್ನೂ ಸೇರಿಸಿ ಇತರ ಎಲ್ಲ ವಿಷಯಗಳಲ್ಲಿ ಆತನನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಾ, ದೇವರು ಅವನಿಂದ ಏನನ್ನು ಕೇಳಿಕೊಂಡನೋ ಅದನ್ನು ಮಾಡಲು ಯೇಸು ಮನಃಪೂರ್ವಕವಾಗಿ ಸಿದ್ಧನಿದ್ದನು. ಇದು, ದೇವರ ಸೃಷ್ಟಿಜೀವಿಗಳಲ್ಲಿ ಒಬ್ಬನಿಂದ ತೋರಿಸಲ್ಪಟ್ಟ ದೀನಭಾವ ಮತ್ತು ಪ್ರೀತಿಯ ಅತಿ ಶ್ರೇಷ್ಠ ಮಾದರಿಯಾಗಿತ್ತು. ಯೇಸುವಿನ ದೀನಭಾವವನ್ನು ಎಲ್ಲರೂ ಗಣ್ಯಮಾಡಲಿಲ್ಲ ಮತ್ತು ಅವನ ವೈರಿಗಳು ಅವನನ್ನು ಮಾನವಕುಲದಲ್ಲೇ ತೀರ ‘ಕನಿಷ್ಠನಾಗಿ’ ಪರಿಗಣಿಸಿದರು. (ದಾನಿಯೇಲ 4:17) ಹೀಗಿದ್ದರೂ, ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳು ಯೇಸುವನ್ನು ಅನುಕರಿಸಬೇಕು ಮತ್ತು ಪರಸ್ಪರರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ದೀನಭಾವವನ್ನು ತೋರಿಸಬೇಕು ಎಂದು ಮನಗಂಡನು.—1 ಕೊರಿಂಥ 11:1; ಫಿಲಿಪ್ಪಿ 2:3, 4.
7, 8. (ಎ) ಯೇಸು ಹೇಗೆ ದೀನಭಾವದವನಾಗಿರಲು ಕಲಿತನು? (ಬಿ) ತನ್ನ ಭಾವೀ ಶಿಷ್ಯರಿಗೆ ಯೇಸು ಯಾವ ವಿನಂತಿಯನ್ನು ಮಾಡಿದನು?
7 ಪೌಲನು ಯೇಸುವಿನ ಅತ್ಯುತ್ತಮ ಮಾದರಿಯನ್ನು ಎತ್ತಿತೋರಿಸುತ್ತಾ ಬರೆದುದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ [“ಯಾತನಾ ಕಂಬದ,” NW] ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.”—ಫಿಲಿಪ್ಪಿ 2:5-8.
8 ‘ಯೇಸು ಹೇಗೆ ದೀನಭಾವದವನಾಗಿರಲು ಕಲಿತನು?’ ಎಂದು ಕೆಲವರು ಆಲೋಚಿಸಬಹುದು. ತನ್ನ ಸ್ವರ್ಗೀಯ ತಂದೆಯೊಂದಿಗೆ ಎಲ್ಲ ಸೃಷ್ಟಿಕಾರ್ಯದಲ್ಲಿ “ಶಿಲ್ಪಿಯಾಗಿ” ಅವನು ಸೇವೆಮಾಡಿದ ಅಗಣಿತ ವರುಷಗಳ ವರೆಗಿನ ದೇವರೊಂದಿಗಿನ ನಿಕಟ ಸಹವಾಸದ ಫಲಿತಾಂಶವಾಗಿ ಅವನಿದನ್ನು ಕಲಿತನು. (ಜ್ಞಾನೋಕ್ತಿ 8:30) ಏದೆನಿನಲ್ಲಿ ದಂಗೆಯು ನಡೆದ ಬಳಿಕ, ದೇವರ ಜ್ಯೇಷ್ಠಪುತ್ರನು ಪಾಪಭರಿತ ಮಾನವರೊಂದಿಗೆ ತನ್ನ ತಂದೆಯು ಹೇಗೆ ದೀನಭಾವದಿಂದ ವ್ಯವಹರಿಸುತ್ತಾನೆ ಎಂಬುದನ್ನು ಕಣ್ಣಾರೆ ನೋಡಲು ಶಕ್ತನಾಗಿದ್ದನು. ಅದಕ್ಕನುಸಾರ, ಭೂಮಿಯಲ್ಲಿದ್ದಾಗ ಯೇಸು ತನ್ನ ತಂದೆಯ ದೀನಭಾವವನ್ನು ಪ್ರತಿಬಿಂಬಿಸಿದನು ಮತ್ತು ಈ ವಿನಂತಿಯನ್ನು ಮಾಡಿದನು: “ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ.”—ಮತ್ತಾಯ 11:29; ಯೋಹಾನ 14:9.
9. (ಎ) ಮಕ್ಕಳಲ್ಲಿದ್ದ ಯಾವ ಗುಣವು ಯೇಸುವಿಗೆ ತುಂಬ ಆಕರ್ಷಕವಾಗಿ ಕಂಡುಬಂತು? (ಬಿ) ಒಂದು ಚಿಕ್ಕ ಮಗುವನ್ನು ಉಪಯೋಗಿಸುತ್ತಾ ಯೇಸು ಯಾವ ಪಾಠವನ್ನು ಕಲಿಸಿದನು?
9 ಯೇಸು ನಿಜವಾಗಿಯೂ ದೀನಭಾವದವನಾಗಿದ್ದ ಕಾರಣ, ಚಿಕ್ಕ ಮಕ್ಕಳು ಅವನಿಗೆ ಭಯಪಡುತ್ತಿರಲಿಲ್ಲ. ಬದಲಾಗಿ, ಅವರು ಅವನ ಕಡೆಗೆ ಆಕರ್ಷಿತರಾದರು. ಅವನೂ ಮಕ್ಕಳಿಗೆ ತುಂಬ ಅಕ್ಕರೆಯನ್ನು ತೋರಿಸಿದನು ಮತ್ತು ಅವರ ಕಡೆಗೆ ಗಮನಕೊಟ್ಟನು. (ಮಾರ್ಕ 10:13-16) ಮಕ್ಕಳಲ್ಲಿದ್ದ ಯಾವ ಗುಣವು ಯೇಸುವಿಗೆ ತುಂಬ ಆಕರ್ಷಕವಾಗಿ ಕಂಡುಬಂತು? ಅವನ ವಯಸ್ಕ ಶಿಷ್ಯರಲ್ಲಿ ಕೆಲವರು ಯಾವಾಗಲೂ ತೋರಿಸದಿದ್ದಂಥ ಅಪೇಕ್ಷಣೀಯ ಗುಣಗಳು ಅವರಲ್ಲಿದ್ದವು ಎಂಬುದಂತೂ ನಿಶ್ಚಯ. ಚಿಕ್ಕ ಮಕ್ಕಳು ವಯಸ್ಕರನ್ನು ತಮಗಿಂತ ಶ್ರೇಷ್ಠರಾಗಿ ಪರಿಗಣಿಸುತ್ತಾರೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅವರು ಕೇಳುವಂಥ ಅನೇಕ ಪ್ರಶ್ನೆಗಳಿಂದ ನೀವಿದನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ. ಹೌದು, ಅನೇಕ ವಯಸ್ಕರಿಗೆ ಹೋಲಿಸುವಾಗ ಮಕ್ಕಳಲ್ಲಿ ಇತರರಿಂದ ಕಲಿಯುವ ಮನೋಭಾವವಿರುತ್ತದೆ ಮತ್ತು ವಯಸ್ಕರಲ್ಲಿರುವಷ್ಟು ಅನುಚಿತ ಹೆಮ್ಮೆಯ ಪ್ರವೃತ್ತಿ ಅವರಲ್ಲಿರುವುದಿಲ್ಲ. ಒಂದು ಸಂದರ್ಭದಲ್ಲಿ ಯೇಸು ಒಂದು ಎಳೆಯ ಮಗುವನ್ನು ಉದಾಹರಣೆಯಾಗಿ ಉಪಯೋಗಿಸುತ್ತಾ, ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲ.” ತದನಂತರ ಅವನು ಮುಂದುವರಿಸಿದ್ದು: “ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, [ಇಲ್ಲವೆ, ದೀನನಾಗುತ್ತಾನೊ] ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು.” (ಮತ್ತಾಯ 18:3, 4) ಯೇಸು ಈ ನಿಯಮವನ್ನು ತಿಳಿಯಪಡಿಸಿದನು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”—ಲೂಕ 14:11; 18:14; ಮತ್ತಾಯ 23:12.
10. ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
10 ಆ ಸತ್ಯವು ಪ್ರಮುಖ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ನಿತ್ಯಜೀವವನ್ನು ಪಡೆದುಕೊಳ್ಳುವ ನಮ್ಮ ಪ್ರತೀಕ್ಷೆಯು, ನಾವು ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳುವುದರ ಮೇಲೆ ಸ್ವಲ್ಪ ಮಟ್ಟಿಗೆ ಹೊಂದಿಕೊಂಡಿರುವುದಾದರೂ, ದೀನಭಾವದವರಾಗಿರುವುದನ್ನು ಕ್ರೈಸ್ತರು ಕೆಲವೊಮ್ಮೆ ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ ಏಕೆ? ನಮ್ಮ ವೈಯಕ್ತಿಕ ಹೆಮ್ಮೆಯನ್ನು ನಿಗ್ರಹಿಸಿ, ಕಷ್ಟಪರೀಕ್ಷೆಗಳಿಗೆ ದೀನಭಾವದಿಂದ ಪ್ರತಿಕ್ರಿಯಿಸುವುದು ಒಂದು ಪಂಥಾಹ್ವಾನವಾಗಿದೆ ಏಕೆ? ಮತ್ತು ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳುವುದರಲ್ಲಿ ಯಶಸ್ಸನ್ನು ಪಡೆಯಲು ನಮಗೆ ಯಾವುದು ಸಹಾಯಮಾಡುವುದು?—ಯಾಕೋಬ 4:6, 10.
ದೀನಭಾವದವರಾಗಿರುವುದು ಕಷ್ಟಕರವಾಗಿದೆ ಏಕೆ?
11. ನಾವು ದೀನಭಾವದವರಾಗಿರಲು ಪ್ರಯಾಸಪಡುವುದು ಏಕೆ ಆಶ್ಚರ್ಯಕರ ಸಂಗತಿಯಾಗಿರುವುದಿಲ್ಲ?
11 ದೀನಭಾವದವರಾಗಿರಲು ಪ್ರಯಾಸಪಡುತ್ತಿರುವವರು ನೀವೊಬ್ಬರೇ ಅಲ್ಲ. 1920ರಷ್ಟು ಹಿಂದೆ, ದೀನಭಾವದ ಆವಶ್ಯಕತೆಯ ಕುರಿತಾದ ಬೈಬಲ್ ಸಲಹೆಯನ್ನು ಈ ಪತ್ರಿಕೆಯು ಚರ್ಚಿಸುತ್ತಾ ಹೀಗೆ ಹೇಳಿಕೆ ನೀಡಿತ್ತು: “ಕರ್ತನು ದೀನಭಾವಕ್ಕೆ ಎಷ್ಟು ಮಹತ್ತರವಾದ ಮೌಲ್ಯವನ್ನು ನೀಡುತ್ತಾನೆಂಬುದನ್ನು ನಾವು ಗಮನಿಸುವಾಗ, ಈ ಗುಣವನ್ನು ಪ್ರತಿದಿನವೂ ಬೆಳೆಸಿಕೊಳ್ಳುವಂತೆ ಇದು ನಿಜ ಶಿಷ್ಯರೆಲ್ಲರನ್ನು ಹುರಿದುಂಬಿಸಬೇಕು.” ತದನಂತರ ಅದರಲ್ಲಿ ಬಿಚ್ಚುಮನಸ್ಸಿನ ಈ ಅಂಗೀಕಾರವು ತಿಳಿಸಲ್ಪಟ್ಟಿತ್ತು: “ಶಾಸ್ತ್ರವಚನಗಳು ಇಷ್ಟೆಲ್ಲ ಸಲಹೆಗಳನ್ನು ನೀಡಿರುವುದಾದರೂ, ಮಾನವ ಸ್ವಭಾವದ ಅಪರಿಪೂರ್ಣತೆಯು ಹೇಗಿದೆಯೆಂದರೆ, ಯಾರು ಕರ್ತನ ಜನರಾಗುತ್ತಾರೋ ಮತ್ತು ಕರ್ತನ ಮಾರ್ಗವನ್ನು ಅನುಸರಿಸಲು ನಿರ್ಧರಿಸುತ್ತಾರೋ ಅವರು, ಬೇರೆ ಯಾವುದೇ ಗುಣಕ್ಕಿಂತಲೂ ಹೆಚ್ಚಾಗಿ ದೀನಭಾವದ ವಿಷಯದಲ್ಲಿ ಹೆಚ್ಚು ಕಷ್ಟವನ್ನು ಮತ್ತು ಹೆಚ್ಚೆಚ್ಚು ಹೋರಾಟವನ್ನು ನಡೆಸಬೇಕಾಗಿರುವಂತೆ ತೋರುತ್ತದೆ.” ಇದು, ನಿಜ ಕ್ರೈಸ್ತರು ದೀನಭಾವದವರಾಗಿರಲು ಏಕೆ ಪ್ರಯಾಸಪಡಬೇಕಾಗಿದೆ ಎಂಬುದಕ್ಕಿರುವ ಒಂದು ಕಾರಣವನ್ನು ಎತ್ತಿತೋರಿಸುತ್ತದೆ; ನಮ್ಮ ಪಾಪಪೂರ್ಣ ಮಾನವ ಸ್ವಭಾವವು ಅನಗತ್ಯವಾದ ಹಿರಿಮೆಯನ್ನು ಪಡೆದುಕೊಳ್ಳಲು ಹಂಬಲಿಸುವುದೇ ಆಗಿದೆ. ಏಕೆಂದರೆ ನಾವು ಸ್ವಾರ್ಥಪರ ಹಂಬಲಗಳಿಗೆ ಬಲಿಬಿದ್ದಂಥ ಪಾಪಭರಿತ ದಂಪತಿಯಾದ ಆದಾಮಹವ್ವರ ಸಂತತಿಯಾಗಿದ್ದೇವೆ.—ರೋಮಾಪುರ 5:12.
12, 13. (ಎ) ಕ್ರೈಸ್ತ ದೀನಭಾವವನ್ನು ತೋರಿಸುವುದಕ್ಕೆ ಲೋಕವು ಒಂದು ತಡೆಯಾಗಿದೆ ಹೇಗೆ? (ಬಿ) ದೀನಭಾವವನ್ನು ಬೆಳೆಸಿಕೊಳ್ಳಲಿಕ್ಕಾಗಿರುವ ನಮ್ಮ ಹೋರಾಟವನ್ನು ಇನ್ನೂ ಹೆಚ್ಚು ಕಷ್ಟಕರವಾದದ್ದಾಗಿ ಯಾರು ಮಾಡುತ್ತಾರೆ?
12 ದೀನಭಾವವನ್ನು ತೋರಿಸುವುದು ನಮಗೆ ಕಷ್ಟಕರವಾಗಿರಬಹುದಾದ ಇನ್ನೊಂದು ಕಾರಣವು, ಇತರರಿಗಿಂತಲೂ ಶ್ರೇಷ್ಠರಾಗಿರಲು ಹೆಣಗಾಡುವಂತೆ ಜನರನ್ನು ಉತ್ತೇಜಿಸುವಂಥ ಲೋಕದಿಂದ ನಾವು ಸುತ್ತುವರಿದಿರುವುದೇ ಆಗಿದೆ. ಈ ಲೋಕದ ಸಾಮಾನ್ಯ ಗುರಿಗಳಲ್ಲಿ, “[ಪಾಪಭರಿತ] ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ”ವನ್ನು ತೃಪ್ತಿಪಡಿಸುವುದಕ್ಕಾಗಿರುವ ಹಂಬಲವೂ ಸೇರಿದೆ. (1 ಯೋಹಾನ 2:16) ಇಂಥ ಲೌಕಿಕ ಬಯಕೆಗಳಿಗೆ ಅಡಿಯಾಳುಗಳಾಗುವುದಕ್ಕೆ ಬದಲಾಗಿ, ಯೇಸುವಿನ ಶಿಷ್ಯರು ತಮ್ಮ ಕಣ್ಣುಗಳನ್ನು ಸರಳವಾಗಿಟ್ಟುಕೊಳ್ಳಬೇಕಾಗಿದೆ ಮತ್ತು ದೇವರ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರೀಕರಿಸಬೇಕಾಗಿದೆ.—ಮತ್ತಾಯ 6:22-24, 31-33; 1 ಯೋಹಾನ 2:17.
13 ದೀನಭಾವವನ್ನು ಬೆಳೆಸಿಕೊಳ್ಳುವುದು ಮತ್ತು ತೋರಿಸುವುದು ಕಷ್ಟಕರವಾಗಿರುವಂಥ ಮೂರನೆಯ ಕಾರಣವು, ಅಹಂಕಾರದ ಮೂಲನಾಗಿರುವ ಪಿಶಾಚನಾದ ಸೈತಾನನು ಈ ಲೋಕವನ್ನು ಆಳುತ್ತಿರುವುದೇ ಆಗಿದೆ. (2 ಕೊರಿಂಥ 4:4; 1 ತಿಮೊಥೆಯ 3:6) ಸೈತಾನನು ತನ್ನ ದುಷ್ಟ ಪ್ರವೃತ್ತಿಗಳನ್ನು ಪ್ರವರ್ಧಿಸುತ್ತಾನೆ. ಉದಾಹರಣೆಗೆ, ಯೇಸು ತನಗೆ ಆರಾಧನೆಯನ್ನು ಸಲ್ಲಿಸುವುದಾದರೆ, “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ಅವನಿಗೆ ಕೊಡುತ್ತೇನೆಂದು ಸೈತಾನನು ತಿಳಿಸಿದನು. ಸದಾ ದೀನಭಾವದವನಾಗಿದ್ದ ಯೇಸು, ಪಿಶಾಚನ ಬೇಡಿಕೆಯನ್ನು ನೇರವಾಗಿ ತಿರಸ್ಕರಿಸಿದನು. (ಮತ್ತಾಯ 4:8, 10) ತದ್ರೀತಿಯಲ್ಲಿ ಕ್ರೈಸ್ತರು ಹಿರಿಮೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಂತೆ ಸೈತಾನನು ಅವರನ್ನು ಪ್ರಲೋಭಿಸುತ್ತಾನೆ. ಆದರೆ ದೀನಭಾವದ ಕ್ರೈಸ್ತರು ದೇವರಿಗೆ ಸ್ತುತಿ ಮತ್ತು ಘನತೆಯನ್ನು ಸಲ್ಲಿಸುತ್ತಾ, ಯೇಸುವಿನ ಮಾದರಿಯನ್ನು ಅನುಸರಿಸಲು ಪ್ರಯತ್ನಿಸುತ್ತಾರೆ.—ಮಾರ್ಕ 10:17, 18.
ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳುವುದು ಮತ್ತು ತೋರಿಸುವುದು
14. “ಕಪಟದೀನತೆ” ಎಂದರೇನು?
14 ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು ಜನರ ಮೇಲೆ ಪ್ರಭಾವ ಬೀರಲಿಕ್ಕಾಗಿ, ಹೊರತೋರಿಕೆಗೆ ದೀನಭಾವದ ಸೋಗನ್ನು ಹಾಕುವುದರ ಕುರಿತು ಎಚ್ಚರಿಕೆ ನೀಡಿದನು. ಪೌಲನು ಇದನ್ನು “ಕಪಟದೀನತೆ” (NIBV) ಎಂದು ವರ್ಣಿಸಿದನು. ದೀನಭಾವದವರಾಗಿರುವ ಸೋಗನ್ನು ಹಾಕಿಕೊಳ್ಳುವವರು ಆಧ್ಯಾತ್ಮಿಕ ಮನೋಭಾವದ ಜನರಾಗಿರುವುದಿಲ್ಲ. ಬದಲಾಗಿ, ತಾವು ನಿಜವಾಗಿಯೂ ಹೆಮ್ಮೆಯಿಂದ ‘ಉಬ್ಬಿಕೊಂಡಿದ್ದೇವೆ’ ಎಂಬುದನ್ನು ಅವರು ತಮಗರಿವಿಲ್ಲದೆಯೇ ತೋರಿಸಿಕೊಡುತ್ತಾರೆ. (ಕೊಲೊಸ್ಸೆ 2:18, 23) ಯೇಸು ಇಂಥ ಸುಳ್ಳು ದೀನಭಾವದ ಉದಾಹರಣೆಗಳನ್ನು ಸೂಚಿಸಿ ಮಾತಾಡಿದನು. ಫರಿಸಾಯರ ಡಂಬಾಚಾರದ ಪ್ರಾರ್ಥನೆಗಳಿಗಾಗಿ ಮತ್ತು ಜನರಿಂದ ಗಮನಿಸಲ್ಪಡಲಿಕ್ಕಾಗಿ ಅವರು ಸಪ್ಪಗಿನ ಮತ್ತು ವಿಕಾರವಾದ ಮುಖಗಳೊಂದಿಗೆ ಉಪವಾಸಮಾಡುತ್ತಿದ್ದ ವಿಧಕ್ಕಾಗಿ ಯೇಸು ಅವರನ್ನು ಖಂಡಿಸಿದನು. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ವೈಯಕ್ತಿಕ ಪ್ರಾರ್ಥನೆಗಳು ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿರಬೇಕಾದರೆ, ಅವುಗಳನ್ನು ದೀನಭಾವದಿಂದ ಮಾಡಬೇಕಾಗಿದೆ.—ಮತ್ತಾಯ 6:5, 6, 16.
15. (ಎ) ದೀನಮನಸ್ಸನ್ನು ಕಾಪಾಡಿಕೊಳ್ಳಲು ನಾವೇನು ಮಾಡಸಾಧ್ಯವಿದೆ? (ಬಿ) ದೀನಭಾವದ ಒಳ್ಳೇ ಉದಾಹರಣೆಗಳಲ್ಲಿ ಕೆಲವು ಯಾವುವು?
15 ದೀನಭಾವದ ಅತ್ಯುತ್ತಮ ಉದಾಹರಣೆಗಳಾಗಿರುವ ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ಕ್ರೈಸ್ತರು ನಿಜವಾದ ದೀನಮನಸ್ಸನ್ನು ಕಾಪಾಡಿಕೊಳ್ಳಲು ಸಹಾಯವನ್ನು ಪಡೆದುಕೊಳ್ಳಬಲ್ಲರು. ಇದನ್ನು ಮಾಡುವುದರಲ್ಲಿ, ಬೈಬಲಿನ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುವ ಬೈಬಲ್ ಅಧ್ಯಯನ ಸಹಾಯಕಗಳ ಕ್ರಮವಾದ ಅಧ್ಯಯನವು ಒಳಗೂಡಿದೆ. (ಮತ್ತಾಯ 24:45) ಇಂಥ ಅಧ್ಯಯನವು ಕ್ರೈಸ್ತ ಮೇಲ್ವಿಚಾರಕರಿಗೆ ತುಂಬ ಅತ್ಯಾವಶ್ಯಕವಾದದ್ದಾಗಿದೆ, ಏಕೆಂದರೆ ಅವರ “ಹೃದಯವು [ಅವರು ತಮ್ಮ] ಸಹೋದರರಿಗಿಂತ ತಮ್ಮನ್ನು ಮೇಲೇರಿಸಿಕೊಳ್ಳದಂತೆ” (NW) ಸಹಾಯಮಾಡುತ್ತದೆ. (ಧರ್ಮೋಪದೇಶಕಾಂಡ 17:19, 20; 1 ಪೇತ್ರ 5:1-3) ದೀನ ಮನೋಭಾವವನ್ನು ತೋರಿಸಿದ್ದಕ್ಕಾಗಿ ಆಶೀರ್ವದಿಸಲ್ಪಟ್ಟಂಥ ರೂತ್, ಹನ್ನ, ಎಲಿಸಬೇತ್ ಹಾಗೂ ಇನ್ನಿತರರ ಅನೇಕಾನೇಕ ಉದಾಹರಣೆಗಳ ಕುರಿತು ಮನನಮಾಡಿರಿ. (ರೂತಳು 1:16, 17; 1 ಸಮುವೇಲ 1:11, 20; ಲೂಕ 1:41-43) ಯೆಹೋವನ ಸೇವೆಯಲ್ಲಿ ದೀನಭಾವದವರಾಗಿ ಉಳಿದ ದಾವೀದ, ಯೋಷೀಯ, ಸ್ನಾನಿಕನಾದ ಯೋಹಾನ ಮತ್ತು ಅಪೊಸ್ತಲ ಪೌಲರಂಥ ಅಗ್ರಗಣ್ಯ ಪುರುಷರ ಅತ್ಯುತ್ತಮ ಉದಾಹರಣೆಗಳ ಕುರಿತಾಗಿಯೂ ಆಲೋಚಿಸಿರಿ. (2 ಪೂರ್ವಕಾಲವೃತ್ತಾಂತ 34:1, 2, 19, 26-28; ಕೀರ್ತನೆ 131:1; ಯೋಹಾನ 1:26, 27; 3:26-30; ಅ. ಕೃತ್ಯಗಳು 21:20-26; 1 ಕೊರಿಂಥ 15:9) ಮತ್ತು ಕ್ರೈಸ್ತ ಸಭೆಯಲ್ಲಿ ನಾವು ಕಂಡುಕೊಳ್ಳುವ ದೀನಭಾವದ ಆಧುನಿಕ ದಿನದ ಅನೇಕ ಉದಾಹರಣೆಗಳ ಕುರಿತಾಗಿ ಏನು? ಈ ಉದಾಹರಣೆಗಳ ಕುರಿತಾಗಿ ಧ್ಯಾನಿಸುವ ಮೂಲಕ, ‘ಒಬ್ಬರು ಇನ್ನೊಬ್ಬರ ಕಡೆಗೆ ದೀನಭಾವವನ್ನು’ ತೋರಿಸಲು ನಿಜ ಕ್ರೈಸ್ತರಿಗೆ ಸಹಾಯವು ಸಿಗುವುದು.—1 ಪೇತ್ರ 5:5.
16. ಕ್ರೈಸ್ತ ಶುಶ್ರೂಷೆಯು ನಾವು ದೀನಭಾವದವರಾಗಿರಲು ಹೇಗೆ ಸಹಾಯಮಾಡುತ್ತದೆ?
16 ಕ್ರೈಸ್ತ ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ಸಹ ದೀನಭಾವದವರಾಗಿರಲು ನಮಗೆ ಸಹಾಯಮಾಡಬಲ್ಲದು. ಮನೆಯಿಂದ ಮನೆಯ ಸೇವೆಯಲ್ಲಿ ಹಾಗೂ ಇತರ ಸ್ಥಳಗಳಲ್ಲಿ ನಾವು ಕಂಡುಕೊಳ್ಳುವಂಥ ಅಪರಿಚಿತರನ್ನು ಸಮೀಪಿಸುವಾಗ ನಾವು ಪರಿಣಾಮಕಾರಿಯಾಗಿರುವಂತೆ ದೀನಮನಸ್ಸು ನಮಗೆ ನೆರವಾಗಬಲ್ಲದು. ಆರಂಭದಲ್ಲಿ ಮನೆಯವರು ರಾಜ್ಯದ ಸಂದೇಶಕ್ಕೆ ನಿರಾಸಕ್ತಿಯಿಂದ ಅಥವಾ ಒರಟಾಗಿ ಪ್ರತಿಕ್ರಿಯಿಸುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ನಮ್ಮ ನಂಬಿಕೆಗಳು ಅನೇಕವೇಳೆ ಪ್ರಶ್ನಿಸಲ್ಪಡುತ್ತವೆ, ಮತ್ತು ಇಂಥ ಸಂದರ್ಭಗಳಲ್ಲಿ ಆ ಪ್ರಶ್ನೆಗಳಿಗೆ “ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ” ಉತ್ತರಿಸಲು ದೀನಭಾವವು ಕ್ರೈಸ್ತರಿಗೆ ಸಹಾಯಮಾಡಬಲ್ಲದು. (1 ಪೇತ್ರ 3:15) ದೀನಭಾವದ ದೇವರ ಸೇವಕರು ಹೊಸ ಟೆರಿಟೊರಿಗಳಿಗೆ ಸ್ಥಳಾಂತರಿಸಿದ್ದಾರೆ ಮತ್ತು ಭಿನ್ನ ಸಂಸ್ಕೃತಿಗಳು ಹಾಗೂ ಜೀವನ ಮಟ್ಟಗಳಿರುವ ಜನರಿಗೆ ಸಹಾಯಮಾಡಿದ್ದಾರೆ. ಇಂಥ ಶುಶ್ರೂಷಕರು ಯಾರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಬಯಸುತ್ತಾರೋ ಅವರಿಗೆ ಹೆಚ್ಚು ನೆರವಾಗಲಿಕ್ಕಾಗಿ ಒಂದು ಹೊಸ ಭಾಷೆಯನ್ನು ಕಲಿಯುವಂಥ ಕಷ್ಟಕರ ಕೆಲಸವನ್ನು ದೀನಭಾವದಿಂದ ನಿಭಾಯಿಸಬೇಕಾಗಿದ್ದಿರಬಹುದು. ಇದು ಎಷ್ಟೊಂದು ಪ್ರಶಂಸಾರ್ಹವಾದದ್ದಾಗಿದೆ!—ಮತ್ತಾಯ 28:19, 20.
17. ಯಾವ ಕ್ರೈಸ್ತ ಜವಾಬ್ದಾರಿಗಳು ದೀನಭಾವವನ್ನು ಅಗತ್ಯಪಡಿಸುತ್ತವೆ?
17 ದೀನಭಾವದ ಸಹಾಯದಿಂದ ಅನೇಕರು ತಮ್ಮ ಸ್ವಂತ ಅಭಿರುಚಿಗಳಿಗಿಂತಲೂ ಹೆಚ್ಚಾಗಿ ಇತರರ ಅಭಿರುಚಿಗಳಿಗೆ ಆದ್ಯತೆ ನೀಡುತ್ತಾ, ತಮ್ಮ ಕ್ರೈಸ್ತ ಕರ್ತವ್ಯಗಳನ್ನು ಪೂರೈಸಿದ್ದಾರೆ. ಉದಾಹರಣೆಗೆ, ಒಬ್ಬ ಕ್ರೈಸ್ತ ತಂದೆಯು ತನ್ನ ಮಕ್ಕಳೊಂದಿಗೆ ಬೈಬಲ್ ಅಧ್ಯಯನಕ್ಕಾಗಿ ತಯಾರಿಸಲು ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ಅಧ್ಯಯನವನ್ನು ನಡೆಸಲು ತನ್ನ ಸ್ವಂತ ಬೆನ್ನಟ್ಟುವಿಕೆಗಳಿಂದ ಸಮಯವನ್ನು ಬದಿಗಿರಿಸಲಿಕ್ಕಾಗಿ ಅವನಿಗೆ ದೀನಭಾವದ ಅಗತ್ಯವಿರುತ್ತದೆ. ಅಪರಿಪೂರ್ಣರಾಗಿರುವ ತಮ್ಮ ಹೆತ್ತವರನ್ನು ಗೌರವಿಸುವಂತೆ ಮತ್ತು ಅವರಿಗೆ ವಿಧೇಯತೆ ತೋರಿಸುವಂತೆ ದೀನಭಾವವು ಮಕ್ಕಳಿಗೆ ಸಹಾಯಮಾಡುತ್ತದೆ. (ಎಫೆಸ 6:1-4) ಅವಿಶ್ವಾಸಿ ಗಂಡಂದಿರನ್ನು ಹೊಂದಿರುವ ಹೆಂಡತಿಯರು, ‘ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವ’ ಮೂಲಕ ತಮ್ಮ ಸಂಗಾತಿಗಳನ್ನು ಸತ್ಯದ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿರುವಾಗ, ಅನೇಕವೇಳೆ ದೀನಭಾವವನ್ನು ತೋರಿಸುವುದನ್ನು ಅಗತ್ಯಪಡಿಸುವಂಥ ಸನ್ನಿವೇಶಗಳನ್ನು ಎದುರಿಸುತ್ತಾರೆ. (1 ಪೇತ್ರ 3:1, 2) ಅಸ್ವಸ್ಥರಾದ ಹಾಗೂ ವೃದ್ಧರಾಗುತ್ತಿರುವ ಹೆತ್ತವರ ಆವಶ್ಯಕತೆಗಳನ್ನು ನಾವು ಪ್ರೀತಿಯಿಂದ ಪೂರೈಸುತ್ತಿರುವಾಗ ಸಹ ದೀನಭಾವ ಮತ್ತು ಸ್ವತ್ಯಾಗದ ಪ್ರೀತಿಯಂಥ ಗುಣಗಳು ತುಂಬ ಪ್ರಯೋಜನಕರವಾಗಿವೆ.—1 ತಿಮೊಥೆಯ 5:3.
ದೀನಭಾವವು ಸಮಸ್ಯೆಗಳನ್ನು ಬಗೆಹರಿಸುತ್ತದೆ
18. ದೀನಭಾವವು ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಸಹಾಯಮಾಡಬಲ್ಲದು?
18 ದೇವರ ಮಾನವ ಸೇವಕರೆಲ್ಲರು ಅಪರಿಪೂರ್ಣರಾಗಿದ್ದಾರೆ. (ಯಾಕೋಬ 3:2) ಕೆಲವೊಮ್ಮೆ ಕ್ರೈಸ್ತರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಅಥವಾ ತಪ್ಪು ಅಭಿಪ್ರಾಯಗಳು ತಲೆದೋರಬಹುದು. ಇನ್ನೊಬ್ಬನ ವಿರುದ್ಧ ಆಪಾದನೆ ಹೊರಿಸಲು ಒಬ್ಬನಿಗೆ ಸೂಕ್ತವಾದ ಕಾರಣವಿರಬಹುದು. ಸಾಮಾನ್ಯವಾಗಿ ಇಂಥ ಸನ್ನಿವೇಶಗಳನ್ನು ಈ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ಬಗೆಹರಿಸಸಾಧ್ಯವಿದೆ: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ಈ ಬುದ್ಧಿವಾದವನ್ನು ಅನುಸರಿಸುವುದು ಸುಲಭವೇನಲ್ಲ ಎಂಬುದು ಒಪ್ಪತಕ್ಕದ್ದೇ, ಆದರೆ ದೀನಭಾವವು ಒಬ್ಬನು ಇದನ್ನು ಅನ್ವಯಿಸಿಕೊಳ್ಳುವಂತೆ ಸಹಾಯಮಾಡುವುದು.
19. ನಮ್ಮ ಮನನೋಯಿಸಿರುವಂಥ ಯಾರೊಂದಿಗಾದರೂ ಮಾತಾಡುವಾಗ ನಾವು ಏನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
19 ಕೆಲವೊಮ್ಮೆ ಆಪಾದನೆಗೆ ಸೂಕ್ತವಾದ ಕಾರಣವಿದೆ ಮತ್ತು ಸಮಸ್ಯೆಯು ಅಲಕ್ಷಿಸಲಾರದಷ್ಟು ಗಂಭೀರವಾದದ್ದಾಗಿದೆ ಎಂದು ಒಬ್ಬ ಕ್ರೈಸ್ತನಿಗೆ ಅನಿಸಬಹುದು. ಆಗ, ಶಾಂತಿಭರಿತ ಸಂಬಂಧವನ್ನು ಪುನಸ್ಸ್ಥಾಪಿಸುವ ಉದ್ದೇಶದಿಂದ, ಯಾರು ಮನನೋಯಿಸಿದ್ದಾರೆಂದು ನೀವು ಭಾವಿಸುತ್ತೀರೋ ಆ ವ್ಯಕ್ತಿಯನ್ನು ಸಮೀಪಿಸುವಂತೆ ದೀನಭಾವವು ನಿಮಗೆ ಸಹಾಯಮಾಡುವುದು. (ಮತ್ತಾಯ 18:15) ಕೆಲವೊಮ್ಮೆ ಕ್ರೈಸ್ತರ ನಡುವೆ ಸಮಸ್ಯೆಗಳು ಬಗೆಹರಿಯದೇ ಮುಂದುವರಿಯುವುದಕ್ಕೆ ಒಂದು ಕಾರಣವು, ಒಂದು ಪಕ್ಷದವರು ಅಥವಾ ಎರಡೂ ಪಕ್ಷಗಳವರು ಸಮಸ್ಯೆಗೆ ತಾವೇ ಜವಾಬ್ದಾರರು ಎಂಬುದನ್ನು ಒಪ್ಪಿಕೊಳ್ಳಲಾರದಷ್ಟು ಹೆಮ್ಮೆಯುಳ್ಳವರಾಗಿರುವುದೇ ಆಗಿದೆ. ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಸಮೀಪಿಸಲಿಕ್ಕಾಗಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವಂಥ ಒಬ್ಬ ವ್ಯಕ್ತಿಯು ಸ್ವನೀತಿಭರಿತವಾದ, ಟೀಕಾತ್ಮಕ ರೀತಿಯಲ್ಲಿ ಅದನ್ನು ಮಾಡಬಹುದು. ಇದಕ್ಕೆ ವಿರುದ್ಧವಾಗಿ, ನಿಜವಾಗಿಯೂ ದೀನಭಾವವನ್ನು ಹೊಂದಿರುವುದು ಅನೇಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದರಲ್ಲಿ ತುಂಬ ಪರಿಣಾಮಕಾರಿಯಾಗಿರುವುದು.
20, 21. ದೀನಭಾವದವರಾಗಿರಲು ನಮಗಿರುವ ಅತ್ಯುತ್ತಮ ಸಹಾಯಗಳಲ್ಲಿ ಒಂದು ಯಾವುದು?
20 ದೀನಭಾವವನ್ನು ಬೆಳೆಸಿಕೊಳ್ಳುವುದರಲ್ಲಿ ಒಂದು ಪ್ರಮುಖ ಹೆಜ್ಜೆಯು, ದೇವರ ಸಹಾಯ ಮತ್ತು ಆತ್ಮಕ್ಕಾಗಿ ಪ್ರಾರ್ಥಿಸುವುದೇ ಆಗಿದೆ. ಆದರೆ, “ದೇವರು . . . ದೀನರಿಗಾದರೋ ಕೃಪೆಯನ್ನು [ತನ್ನ ಪವಿತ್ರಾತ್ಮವನ್ನು ಸಹ] ಅನುಗ್ರಹಿಸುತ್ತಾನೆ” ಎಂಬುದನ್ನು ನೆನಪಿನಲ್ಲಿಡಿ. (ಯಾಕೋಬ 4:6) ಆದುದರಿಂದ, ಒಬ್ಬ ಜೊತೆ ವಿಶ್ವಾಸಿಯೊಂದಿಗೆ ನಿಮಗೆ ಏನಾದರೂ ಭಿನ್ನಾಭಿಪ್ರಾಯವಿರುವಲ್ಲಿ, ನಿಮ್ಮಿಂದಾಗಿರುವ ಚಿಕ್ಕ ಅಥವಾ ದೊಡ್ಡ ತಪ್ಪನ್ನು ದೀನಭಾವದಿಂದ ಒಪ್ಪಿಕೊಳ್ಳಲು ಸಹಾಯಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿರಿ. ಒಂದುವೇಳೆ ನಿಮಗೆ ಯಾರಾದರೂ ನೋವನ್ನು ಮಾಡಿದ್ದು, ಆ ವ್ಯಕ್ತಿಯು “ನನ್ನಿಂದ ತಪ್ಪಾಯಿತು, ಕ್ಷಮಿಸಿ” ಎಂದು ಯಥಾರ್ಥ ಮನಸ್ಸಿನಿಂದ ಹೇಳುವಲ್ಲಿ, ದೀನಭಾವದಿಂದ ಕ್ಷಮಿಸಿಬಿಡಿರಿ. ಹೀಗೆ ಮಾಡುವುದು ಕಷ್ಟಕರವಾಗಿರುವಲ್ಲಿ, ನಿಮ್ಮ ಹೃದಯದಲ್ಲಿರಬಹುದಾದ ಯಾವುದೇ ಅಹಂಕಾರಭಾವವನ್ನು ತೆಗೆದುಹಾಕಲಿಕ್ಕಾಗಿ ಪ್ರಾರ್ಥನಾಪೂರ್ವಕವಾಗಿ ಯೆಹೋವನ ಸಹಾಯವನ್ನು ಕೇಳಿಕೊಳ್ಳಿ.
21 ದೀನಭಾವವು ತರುವಂಥ ಅನೇಕ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು, ಈ ಅಮೂಲ್ಯ ಗುಣವನ್ನು ಬೆಳೆಸಿಕೊಳ್ಳುವಂತೆ ಮತ್ತು ಕಾಪಾಡಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸಬೇಕು. ದೀನಭಾವವನ್ನು ಬೆಳೆಸಿಕೊಳ್ಳಲಿಕ್ಕಾಗಿ, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಎಷ್ಟು ಅಪೂರ್ವವಾದ ಮಾದರಿ ನಮಗಿದೆ! “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ” ಎಂಬ ದೈವಿಕ ಆಶ್ವಾಸನೆಯನ್ನು ಎಂದಿಗೂ ಮರೆಯದಿರಿ.—ಜ್ಞಾನೋಕ್ತಿ 22:4.
ಧ್ಯಾನಿಸಲಿಕ್ಕಾಗಿರುವ ಅಂಶಗಳು
• ದೀನಭಾವದ ಅತ್ಯುತ್ತಮ ಮಾದರಿಗಳು ಯಾರಾಗಿದ್ದಾರೆ?
• ದೀನಭಾವವನ್ನು ಬೆಳೆಸಿಕೊಳ್ಳುವುದು ಕಷ್ಟಕರವೇಕೆ?
• ನಾವು ದೀನಭಾವದವರಾಗಿರಲು ನಮಗೆ ಯಾವುದು ಸಹಾಯಮಾಡಸಾಧ್ಯವಿದೆ?
• ದೀನಭಾವದವರಾಗಿ ಉಳಿಯುವುದು ಅಷ್ಟೊಂದು ಪ್ರಾಮುಖ್ಯವಾಗಿದೆ ಏಕೆ?
[ಪುಟ 26ರಲ್ಲಿರುವ ಚಿತ್ರ]
ಯೇಸು ನಿಜವಾಗಿಯೂ ದೀನಭಾವದವನಾಗಿದ್ದನು
[ಪುಟ 28ರಲ್ಲಿರುವ ಚಿತ್ರ]
ಇತರರಿಗಿಂತ ಶ್ರೇಷ್ಠರಾಗಿರಲು ಹೆಣಗಾಡುವಂತೆ ಲೋಕವು ಜನರನ್ನು ಉತ್ತೇಜಿಸುತ್ತದೆ
[ಕೃಪೆ]
WHO photo by L. Almasi/K. Hemzǒ
[ಪುಟ 29ರಲ್ಲಿರುವ ಚಿತ್ರ]
ನಮ್ಮ ಶುಶ್ರೂಷೆಯಲ್ಲಿ ಅಪರಿಚಿತರನ್ನು ಸಮೀಪಿಸುವಂತೆ ದೀನಭಾವವು ನಮಗೆ ಸಹಾಯಮಾಡುತ್ತದೆ
[ಪುಟ 30ರಲ್ಲಿರುವ ಚಿತ್ರಗಳು]
ನಾವು ದೀನಭಾವದಿಂದ ಒಂದು ಸಮಸ್ಯೆಯನ್ನು ಪ್ರೀತಿಯಿಂದ ಮುಚ್ಚುವ ಮೂಲಕ ಭಿನ್ನಾಭಿಪ್ರಾಯಗಳು ಅನೇಕವೇಳೆ ಬಗೆಹರಿಸಲ್ಪಡಸಾಧ್ಯವಿದೆ
[ಪುಟ 31ರಲ್ಲಿರುವ ಚಿತ್ರಗಳು]
ಕ್ರೈಸ್ತರು ದೀನಭಾವವನ್ನು ಅನೇಕ ವಿಧಗಳಲ್ಲಿ ತೋರಿಸಸಾಧ್ಯವಿದೆ