ದೇವರೊಂದಿಗೆ ನಡೆಯುತ್ತಾ ಇರಿ
“ಆತ್ಮದಿಂದ ನಡೆಯುತ್ತಾ ಇರಿ, ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.”—ಗಲಾತ್ಯ 5:16, NW.
1. (ಎ) ಹನೋಕನು ಯಾವ ಪರಿಸ್ಥಿತಿಗಳ ನಡುವೆ ಮತ್ತು ಎಷ್ಟು ಸಮಯದ ವರೆಗೆ ದೇವರೊಂದಿಗೆ ನಡೆದನು? (ಬಿ) ನೋಹನು ಎಷ್ಟು ಸಮಯದ ವರೆಗೆ ದೇವರೊಂದಿಗೆ ನಡೆದನು, ಮತ್ತು ಯಾವ ಭಾರಿ ಜವಾಬ್ದಾರಿಗಳು ಅವನಿಗಿದ್ದವು?
ಹನೋಕನು “ಸತ್ಯ ದೇವರೊಂದಿಗೆ ನಡೆಯುತ್ತಾ ಇದ್ದನು” (NW) ಎಂಬುದಾಗಿ ಬೈಬಲು ನಮಗೆ ಹೇಳುತ್ತದೆ. ಅವನ ಸುತ್ತಲೂ ಇದ್ದ ಜನರ ತಲ್ಲಣಗೊಳಿಸುವ ನುಡಿ ಮತ್ತು ಭಕ್ತಿಹೀನ ನಡತೆಯ ಎದುರಿನಲ್ಲೂ, 365 ವರ್ಷಗಳ ಪ್ರಾಯದಲ್ಲಿ, ತನ್ನ ಜೀವಿತದ ಅಂತ್ಯದ ವರೆಗೆ ದೇವರೊಂದಿಗೆ ನಡೆಯುವುದರಲ್ಲಿ ಅವನು ಪಟ್ಟುಹಿಡಿದನು. (ಆದಿಕಾಂಡ 5:23, 24; ಯೂದ 14, 15) ನೋಹನೂ “ಸತ್ಯ ದೇವರೊಂದಿಗೆ ನಡೆದನು” (NW). ಅವನು ತನ್ನ ಕುಟುಂಬವನ್ನು ಪೋಷಿಸುತ್ತಿದ್ದಾಗ, ದಂಗೆಕೋರ ದೂತರೂ ಅವರ ಹಿಂಸಾತ್ಮಕ ಸಂತಾನದವರಿಂದಲೂ ಪ್ರಭಾವಿಸಲ್ಪಟ್ಟ ಲೋಕವನ್ನು ನಿಭಾಯಿಸುತ್ತಿದ್ದಾಗ, ಮತ್ತು ಪ್ರಾಚೀನ ಸಮಯಗಳ ಸಮುದ್ರಸಂಚಾರದ ಯಾವುದೇ ನೌಕೆಗಿಂತಲೂ ಬಹಳ ದೊಡ್ಡದಾಗಿದ್ದ ನಾವೆಯನ್ನು ಕಟ್ಟುವುದರಲ್ಲಿ ಒಳಗೊಂಡಿದ್ದ ಎಲ್ಲ ವಿವರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ ಹಾಗೆ ಮಾಡಿದನು. ಜಲಪ್ರಳಯದ ಅನಂತರವೂ, ಬಾಬೆಲಿನಲ್ಲಿ ಯೆಹೋವನ ವಿರುದ್ಧ ದಂಗೆಯು ಪುನಃ ಕಾಣಿಸಿಕೊಂಡಾಗಲೂ, ಅವನು ದೇವರೊಂದಿಗೆ ನಡೆಯುತ್ತಾ ಇದ್ದನು. ನೋಹನು ತನ್ನ ಮರಣದ ವರೆಗೆ—950 ವರ್ಷಗಳ ಪ್ರಾಯದ ತನಕ ದೇವರೊಂದಿಗೆ ನಡೆಯುತ್ತಾ ಇದ್ದನು.—ಆದಿಕಾಂಡ 6:9; 9:29.
2. ‘ದೇವರೊಂದಿಗೆ ನಡೆಯುವುದರ’ ಅರ್ಥವೇನು?
2 ನಂಬಿಕೆಯ ಈ ಪುರುಷರು ದೇವರೊಂದಿಗೆ “ನಡೆದರು” (NW) ಎಂಬುದಾಗಿ ಹೇಳುವಾಗ, ಆ ಪದವನ್ನು ಬೈಬಲು ರೂಪಕ ಅರ್ಥದಲ್ಲಿ ಬಳಸುತ್ತಿದೆ. ಹನೋಕನು ಮತ್ತು ನೋಹನು, ದೇವರಲ್ಲಿ ಬಲವಾದ ನಂಬಿಕೆಯ ಪ್ರಮಾಣವನ್ನು ನೀಡಿದ ವಿಧದಲ್ಲಿ ತಮ್ಮನ್ನು ನಡೆಸಿಕೊಂಡರೆಂಬುದನ್ನು ಇದು ಅರ್ಥೈಸುತ್ತದೆ. ಯೆಹೋವನು ಅವರಿಗೆ ಆಜ್ಞಾಪಿಸಿದ್ದನ್ನು ಅವರು ಮಾಡಿದರಲ್ಲದೆ, ಮತ್ತು ಮಾನವಕುಲದೊಂದಿಗಿನ ಆತನ ವ್ಯವಹಾರಗಳಿಂದ ಆತನ ಕುರಿತು ಅವರು ತಿಳಿದುಕೊಂಡಿದ್ದ ವಿಷಯಕ್ಕನುಗುಣವಾಗಿ ಅವರು ತಮ್ಮ ಜೀವಿತಗಳನ್ನು ಕ್ರಮಪಡಿಸಿಕೊಂಡರು. (2 ಪೂರ್ವಕಾಲವೃತ್ತಾಂತ 7:17ನ್ನು ಹೋಲಿಸಿರಿ.) ದೇವರು ಹೇಳಿದ ಮತ್ತು ಮಾಡಿದ ವಿಷಯದೊಂದಿಗೆ ಅವರು ಮಾನಸಿಕ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲ, ಆತನು ಅಪೇಕ್ಷಿಸಿದ ಎಲ್ಲ ವಿಷಯಗಳ ಮೇಲೆ ಅವರು ಕ್ರಿಯೆಗೈದರು. ಇದರಲ್ಲಿ ಕೇವಲ ಕೆಲವೊಂದಲ್ಲ ಬದಲಾಗಿ, ಅಪರಿಪೂರ್ಣ ಮಾನವರೋಪಾದಿ ಅವರಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಸಕಲ ವಿಷಯಗಳು ಸೇರಿದ್ದವು. ಹೀಗೆ, ಉದಾಹರಣೆಗಾಗಿ ನೋಹನು, ದೇವರು ಅವನಿಗೆ ಏನನ್ನು ಆಜ್ಞಾಪಿಸಿದನೊ ನಿಖರವಾಗಿ ಅದನ್ನೇ ಮಾಡಿದನು. (ಆದಿಕಾಂಡ 6:22) ನೋಹನು ತನಗೆ ಕೊಡಲ್ಪಟ್ಟ ನಿರ್ದೇಶನಗಳನ್ನು ಮೀರಿ ವಿಷಯಗಳನ್ನು ಮಾಡುತ್ತಿರಲಿಲ್ಲ, ಮತ್ತು ನಿರ್ಲಕ್ಷ್ಯದಿಂದ ಹಿಂದೆಬೀಳುತ್ತಲೂ ಇರಲಿಲ್ಲ. ಯೆಹೋವನೊಂದಿಗೆ ಆಪ್ತತೆಯನ್ನು ಅನುಭವಿಸುವವನಾಗಿ, ಯಾವ ಹಿಂಜರಿಕೆಯೂ ಇಲ್ಲದೆ ದೇವರಿಗೆ ಪ್ರಾರ್ಥಿಸುತ್ತಾ ಮತ್ತು ದೈವಿಕ ನಿರ್ದೇಶನಗಳನ್ನು ಆದರಿಸುತ್ತಾ, ಅವನು ದೇವರೊಂದಿಗೆ ನಡೆಯುತ್ತಿದ್ದನು. ನೀವು ಹಾಗೆ ಮಾಡುತ್ತಿದ್ದೀರೊ?
ಸುಸಂಗತವಾದ ಒಂದು ಜೀವನಕ್ರಮ
3. ದೇವರ ಸಮರ್ಪಿತ ಹಾಗೂ ದೀಕ್ಷಾಸ್ನಾನಪಡೆದುಕೊಂಡ ಎಲ್ಲ ಸೇವಕರಿಗೆ ಯಾವುದು ಅತಿ ಪ್ರಾಮುಖ್ಯವಾಗಿದೆ?
3 ಜನರು ದೇವರೊಂದಿಗೆ ನಡೆಯಲು ತೊಡಗುವುದನ್ನು ನೋಡುವುದು ಹೃದಯೋಲ್ಲಾಸಕರವಾಗಿದೆ. ಯೆಹೋವನ ಚಿತ್ತಕ್ಕನುಗುಣವಾಗಿ ಅವರು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವಾಗ, ಅವರು ನಂಬಿಕೆಯ ಪುರಾವೆಯನ್ನು ಕೊಡುತ್ತಾರೆ—ಅದರ ಹೊರತು ಯಾವನೂ ದೇವರನ್ನು ಮೆಚ್ಚಿಸಸಾಧ್ಯವಿಲ್ಲ. (ಇಬ್ರಿಯ 11:6) ಕಳೆದ ಐದು ವರ್ಷಗಳಲ್ಲಿ ಸರಾಸರಿಯಾಗಿ, ಪ್ರತಿ ವರ್ಷ 3,30,000ಕ್ಕಿಂತಲೂ ಹೆಚ್ಚು ಮಂದಿ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ನೀರಿನ ದೀಕ್ಷಾಸ್ನಾನಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆಂಬುದಕ್ಕೆ ನಾವೆಷ್ಟು ಹರ್ಷಿಸುತ್ತೇವೆ! ಆದರೆ, ಅವರು ಮತ್ತು ನಾವೆಲ್ಲರೂ ದೇವರೊಂದಿಗೆ ನಡೆಯುತ್ತಾ ಇರುವುದು ಸಹ ಪ್ರಾಮುಖ್ಯವಾಗಿದೆ.—ಮತ್ತಾಯ 24:13; ಪ್ರಕಟನೆ 2:10.
4. ಐಗುಪ್ತವನ್ನು ಬಿಟ್ಟುಬಂದ ಇಸ್ರಾಯೇಲ್ಯರಲ್ಲಿ ಹೆಚ್ಚಿನವರು, ಒಂದಿಷ್ಟು ನಂಬಿಕೆಯನ್ನು ತೋರಿಸಿದರಾದರೂ ವಾಗ್ದತ್ತ ದೇಶವನ್ನು ಪ್ರವೇಶಿಸಲಿಲ್ಲವೇಕೆ?
4 ಮೋಶೆಯ ದಿನದಲ್ಲಿ, ಒಂದು ಇಸ್ರಾಯೇಲ್ಯ ಕುಟುಂಬಕ್ಕೆ ಐಗುಪ್ತದಲ್ಲಿ ಪಸ್ಕವನ್ನು ಆಚರಿಸಲು ಮತ್ತು ಬಾಗಿಲುಗಳ ನಿಲುವುಕಂಬಗಳಿಗೂ, ಅವರ ಮನೆಯ ಬಾಗಿಲಿನ ಮೇಲಣ ಪಟ್ಟಿಗೂ ರಕ್ತವನ್ನು ಹಚ್ಚಲಿಕ್ಕಾಗಿ ನಂಬಿಕೆಯು ಅವಶ್ಯವಾಗಿತ್ತು. (ವಿಮೋಚನಕಾಂಡ 12:1-28) ಆದರೆ, ಕೆಂಪು ಸಮುದ್ರದ ಬಳಿ, ಫರೋಹನ ಸೈನ್ಯವು ತಮ್ಮ ಹಿಂದೆ ಅತಿ ನಿಕಟವಾಗಿರುವುದನ್ನು ನೋಡಿದಾಗ ಅನೇಕರ ನಂಬಿಕೆಯು ಕದಲಿತು. (ವಿಮೋಚನಕಾಂಡ 14:9-12) ಅವರು ಒಣಗಿದ ಸಮುದ್ರನೆಲದ ಮೂಲಕ ಸುರಕ್ಷಿತವಾಗಿ ದಾಟಿದಾಗ ಮತ್ತು ಉಕ್ಕೇರುತ್ತಿರುವ ನೀರು ಐಗುಪ್ತ್ಯ ಸೈನ್ಯವನ್ನು ಧ್ವಂಸಗೊಳಿಸುವುದನ್ನು ನೋಡಿದಾಗ, ಅವರು ಪುನಃ “[ಯೆಹೋವನ] ಮಾತು ನಂಬಿ”ದರೆಂದು ಕೀರ್ತನೆ 106:12 ತೋರಿಸುತ್ತದೆ. ಆದರೆ ಸ್ವಲ್ಪ ಸಮಯದೊಳಗೆ, ಅರಣ್ಯದಲ್ಲಿ ಅವರು ನೀರು, ಆಹಾರ ಮತ್ತು ಮೇಲ್ವಿಚಾರಣೆಯ ಕುರಿತಾಗಿ ಗೊಣಗಲಾರಂಭಿಸಿದರು. ವಾಗ್ದತ್ತ ದೇಶದಿಂದ ಹಿಂದಿರುಗಿ ಬಂದ 12 ಗೂಢಚಾರರಲ್ಲಿ 10 ಮಂದಿಯ ನಕಾರಾತ್ಮಕ ವರದಿಯು, ಅವರನ್ನು ಭಯಭೀತರನ್ನಾಗಿ ಮಾಡಿತು. ಆ ಪರಿಸ್ಥಿತಿಗಳ ಕೆಳಗೆ, ಕೀರ್ತನೆ 106:24 ಹೇಳುವಂತೆ, ಅವರು “[ದೇವರ] ಮಾತನ್ನು ನಂಬಲಿಲ್ಲ.” ಅವರು ಐಗುಪ್ತಕ್ಕೆ ಹಿಂದಿರುಗಿ ಹೋಗಲು ಬಯಸಿದರು. (ಅರಣ್ಯಕಾಂಡ 14:1-4) ಅವರಿಗೆ ಇದ್ದಂತಹ ಯಾವುದೇ ನಂಬಿಕೆಯು, ಅವರು ದೈವಿಕ ಶಕ್ತಿಯ ಕೆಲವೊಂದು ಅಸಾಧಾರಣ ಪ್ರದರ್ಶನಗಳನ್ನು ನೋಡಿದಾಗ ಮಾತ್ರ ಸಜೀವಗೊಳ್ಳುತ್ತಿತ್ತು. ಅವರು ದೇವರೊಂದಿಗೆ ನಡೆಯುತ್ತಾ ಇರಲಿಲ್ಲ. ಫಲಸ್ವರೂಪವಾಗಿ, ಆ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಲಿಲ್ಲ.—ಕೀರ್ತನೆ 95:10, 11.
5. ದೇವರೊಂದಿಗೆ ನಡೆಯುವ ವಿಷಯಕ್ಕೆ 2 ಕೊರಿಂಥ 13:5 ಮತ್ತು ಜ್ಞಾನೋಕ್ತಿ 3:5, 6 ಹೇಗೆ ಸಂಬಂಧಿಸಿವೆ?
5 “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ,” ಎಂಬುದಾಗಿ ಬೈಬಲು ನಮಗೆ ಬುದ್ಧಿವಾದ ನೀಡುತ್ತದೆ. (2 ಕೊರಿಂಥ 13:5) “ನಂಬಿಕೆಯಲ್ಲಿ” ಇರುವುದು, ಕ್ರೈಸ್ತ ನಂಬಿಕೆಗಳ ಸಂಗ್ರಹಕ್ಕೆ ಬಲವಾಗಿ ಅಂಟಿಕೊಳ್ಳುವುದನ್ನು ಅರ್ಥೈಸುತ್ತದೆ. ನಮ್ಮ ಜೀವನದ ಎಲ್ಲ ದಿವಸಗಳಲ್ಲಿ ದೇವರೊಂದಿಗೆ ನಡೆಯುವ ವಿಷಯದಲ್ಲಿ ನಾವು ಸಫಲರಾಗಬೇಕಾದರೆ ಇದು ಆವಶ್ಯಕ. ದೇವರೊಂದಿಗೆ ನಡೆಯಲು, ಯೆಹೋವನಲ್ಲಿ ಪೂರ್ಣವಾಗಿ ಭರವಸೆಯಿಡುತ್ತಾ, ನಂಬಿಕೆಯ ಗುಣವನ್ನೂ ನಾವು ಅಭ್ಯಸಿಸಬೇಕು. (ಜ್ಞಾನೋಕ್ತಿ 3:5, 6) ಹಾಗೆ ಮಾಡಲು ತಪ್ಪುವವರನ್ನು ಸಿಲುಕಿಸಬಲ್ಲ ಹಲವಾರು ಪಾಶಗಳು ಹಾಗೂ ಮುಚ್ಚಿದ ಗುಂಡಿಗಳಿವೆ. ಇವುಗಳಲ್ಲಿ ಕೆಲವು ಯಾವುವು?
ಆತ್ಮವಿಶ್ವಾಸದ ಪಾಶವನ್ನು ದೂರವಿಡಿರಿ
6. ಜಾರತ್ವ ಹಾಗೂ ವ್ಯಭಿಚಾರದ ಕುರಿತು ಎಲ್ಲ ಕ್ರೈಸ್ತರಿಗೆ ಯಾವ ವಿಷಯವು ಗೊತ್ತು, ಮತ್ತು ಈ ಪಾಪಗಳ ಬಗ್ಗೆ ಅವರಿಗೆ ಹೇಗನಿಸುತ್ತದೆ?
6 ದೇವರ ವಾಕ್ಯವು ಜಾರತ್ವ ಹಾಗೂ ವ್ಯಭಿಚಾರವನ್ನು ಖಂಡಿಸುತ್ತದೆಂದು ಬೈಬಲಿನ ಅಧ್ಯಯನಮಾಡಿ, ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿ, ದೀಕ್ಷಾಸ್ನಾನಪಡೆದುಕೊಂಡಿರುವ ಪ್ರತಿಯೊಬ್ಬನಿಗೂ ಗೊತ್ತಿದೆ. (1 ಥೆಸಲೊನೀಕ 4:1-3; ಇಬ್ರಿಯ 13:4) ಇದು ಸರಿಯೆಂದು ಅಂತಹವರು ಒಪ್ಪಿಕೊಳ್ಳುತ್ತಾರೆ. ಅದಕ್ಕನುಗುಣವಾಗಿ ಜೀವಿಸಲು ಅವರು ಉದ್ದೇಶಿಸುತ್ತಾರೆ. ಆದರೂ, ಲೈಂಗಿಕ ಅನೈತಿಕತೆಯು ಸೈತಾನನ ಅತ್ಯಂತ ಪರಿಣಾಮಕಾರಿ ಪಾಶಗಳಲ್ಲಿ ಒಂದಾಗಿ ಮುಂದುವರಿಯುತ್ತದೆ. ಏಕೆ?
7. ಮೋವಾಬಿನ ಬಯಲು ಸೀಮೆಗಳಲ್ಲಿ, ತಪ್ಪೆಂದು ತಮಗೆ ಗೊತ್ತಿದ್ದ ನಡತೆಯಲ್ಲಿ ಇಸ್ರಾಯೇಲ್ಯ ಪುರುಷರು ಹೇಗೆ ಒಳಗೊಂಡರು?
7 ಆರಂಭದಲ್ಲಿ, ಇಂತಹ ಅನೈತಿಕ ನಡತೆಯಲ್ಲಿ ಒಳಗೂಡುವವರು, ಹಾಗೆ ಮಾಡಲು ಯೋಜಿಸದೆ ಇರಬಹುದು. ಬಹುಶಃ ಮೋವಾಬಿನ ಬಯಲು ಸೀಮೆಯಲ್ಲಿದ್ದ ಇಸ್ರಾಯೇಲ್ಯರ ವಿಷಯದಲ್ಲಿಯೂ ಅದು ಸತ್ಯವಾಗಿತ್ತು. ಅರಣ್ಯದಲ್ಲಿನ ಜೀವಿತದ ಬಗ್ಗೆ ಬೇಸತ್ತುಹೋಗಿದ್ದ ಇಸ್ರಾಯೇಲ್ಯ ಪುರುಷರಿಗೆ, ಅವರನ್ನು ಆಕರ್ಷಿಸಿದ ಮೋವಾಬ್ಯ ಹಾಗೂ ಮಿದ್ಯಾನ್ಯ ಸ್ತ್ರೀಯರು ಮೊದಲಲ್ಲಿ ಸ್ನೇಹಪರರೂ ಉದಾರಿಗಳೂ ಆಗಿ ತೋರಿರಬಹುದು. ಆದರೆ, ಯೆಹೋವನನ್ನಲ್ಲದೆ ಬಾಳನನ್ನು ಆರಾಧಿಸಿದ ಮತ್ತು ಯಾರೊಂದಿಗೆ ಅವರ ವಿವಾಹವಾಗಿರಲಿಲ್ಲವೊ ಅಂತಹ ಪುರುಷರೊಂದಿಗೆ ಲೈಂಗಿಕ ಸಂಬಂಧಗಳನ್ನಿಟ್ಟುಕೊಳ್ಳುವಂತೆ ತಮ್ಮ ಹೆಣ್ಣು ಮಕ್ಕಳಿಗೆ (ಹೆಸರಾಂತ ಕುಟುಂಬಗಳಿಂದಲೂ) ಅನುಮತಿ ನೀಡಿದ ಜನರೊಂದಿಗಿನ ಸಾಹಚರ್ಯಕ್ಕಾಗಿದ್ದ ಆಮಂತ್ರಣಗಳನ್ನು ಇಸ್ರಾಯೇಲ್ಯರು ಸ್ವೀಕರಿಸಿದಾಗ ಏನು ಸಂಭವಿಸಿತು? ಇಸ್ರಾಯೇಲಿನ ಶಿಬಿರದಲ್ಲಿದ್ದ ಪುರುಷರು ಇಂತಹ ಸಹವಾಸಗಳನ್ನು ಅಪೇಕ್ಷಣೀಯವಾಗಿ ದೃಷ್ಟಿಸತೊಡಗಿದಾಗ, ತಪ್ಪೆಂದು ಅವರಿಗೆ ಗೊತ್ತಿದ್ದ ವಿಷಯಗಳನ್ನು ಮಾಡುವಂತೆ ಅವರು ಸೆಳೆಯಲ್ಪಟ್ಟರು, ಮತ್ತು ಈ ಕಾರಣದಿಂದಾಗಿ ಅವರು ತಮ್ಮ ಜೀವಗಳನ್ನು ತೆತ್ತರು.—ಅರಣ್ಯಕಾಂಡ 22:1; 25:1-15; 31:16; ಪ್ರಕಟನೆ 2:14.
8. ನಮ್ಮ ದಿನದಲ್ಲಿ, ಯಾವ ವಿಷಯವು ಒಬ್ಬ ಕ್ರೈಸ್ತನನ್ನು ಲೈಂಗಿಕ ಅನೈತಿಕತೆಗೆ ನಡೆಸಬಹುದು?
8 ನಮ್ಮ ದಿನದಲ್ಲಿ ವ್ಯಕ್ತಿಯೊಬ್ಬನು ತದ್ರೀತಿಯ ಪಾಶಕ್ಕೆ ಬಲಿಬೀಳುವಂತೆ ಯಾವುದು ಕಾರಣವಾಗಿರಬಹುದು? ಲೈಂಗಿಕ ಅನೈತಿಕತೆಯ ಗಂಭೀರತೆ ಅವನಿಗೆ ಗೊತ್ತಿರಬಹುದಾದರೂ, ಅವನು ಆತ್ಮವಿಶ್ವಾಸದ ಅಪಾಯವನ್ನು ಗ್ರಹಿಸದಿದ್ದರೆ, ಎಲ್ಲಿ ತಪ್ಪುಗೈಯುವಿಕೆಯ ಆಕರ್ಷಣೆಯು ಅವನ ವಿವೇಚನೆಯನ್ನು ಅತಿಶಯಿಸುತ್ತದೊ ಅಂತಹ ಸನ್ನಿವೇಶದೊಳಗೆ ತಾನು ಒಳಗೊಳ್ಳುವಂತೆ ಅವನು ಬಿಡಬಹುದು.—ಜ್ಞಾನೋಕ್ತಿ 7:6-9, 21, 22; 14:16.
9. ಯಾವ ಶಾಸ್ತ್ರೀಯ ಎಚ್ಚರಿಕೆಗಳು ನಮ್ಮನ್ನು ಅನೈತಿಕತೆಯಿಂದ ರಕ್ಷಿಸಬಲ್ಲವು?
9 ಸರಳವಾದ ಭಾಷೆಯಲ್ಲಿ, ಕೆಟ್ಟ ಸಹವಾಸವು ನಮ್ಮನ್ನು ಭ್ರಷ್ಟಗೊಳಿಸದಷ್ಟು ನಾವು ಪ್ರಬಲರೆಂದು ಯೋಚಿಸುವಂತೆ ತಪ್ಪುದಾರಿಗೆ ಸೆಳೆಯಲ್ಪಡುವುದರ ವಿರುದ್ಧ ದೇವರ ವಾಕ್ಯವು ನಮ್ಮನ್ನು ಎಚ್ಚರಿಸುತ್ತದೆ. ಅದರಲ್ಲಿ, ಅನೈತಿಕ ವ್ಯಕ್ತಿಗಳ ಜೀವನಗಳನ್ನು ಚಿತ್ರಿಸುವ ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಮತ್ತು ಅನೈತಿಕ ಅಭಿಲಾಷೆಗಳನ್ನು ಪ್ರಚೋದಿಸುವ ಪತ್ರಿಕೆಗಳನ್ನು ನೋಡುವುದು ಸೇರಿದೆ. (1 ಕೊರಿಂಥ 10:11, 12; 15:33) ತಪ್ಪಾದ ಪರಿಸ್ಥಿತಿಗಳಡಿಯಲ್ಲಿ ಜೊತೆವಿಶ್ವಾಸಿಗಳೊಂದಿಗಿನ ಸಹವಾಸವೂ ಗಂಭೀರವಾದ ಸಮಸ್ಯೆಗಳಿಗೆ ನಡೆಸಬಲ್ಲದು. ಲಿಂಗಗಳ ನಡುವಿನ ಆಕರ್ಷಣೆಯು ಬಲವಾದದ್ದಾಗಿದೆ. ಹೀಗಿರುವುದರಿಂದ, ಯಾರೊಂದಿಗೆ ನಮ್ಮ ವಿವಾಹವಾಗಿಲ್ಲವೊ ಇಲ್ಲವೆ ಯಾರು ನಮ್ಮ ಕುಟುಂಬದ ಸದಸ್ಯರಾಗಿಲ್ಲವೊ ಅಂತಹ ವಿರುದ್ಧ ಲಿಂಗದ ಯಾವುದೇ ವ್ಯಕ್ತಿಯೊಂದಿಗೆ ಒಬ್ಬಂಟಿಗರಾಗಿರುವುದು ಮತ್ತು ಗಮನಿಸಲ್ಪಡದೆ ಇರುವುದರ ವಿರುದ್ಧ ಯೆಹೋವನ ಸಂಸ್ಥೆಯು ಪ್ರೀತಿಪೂರ್ಣ ಚಿಂತೆಯಿಂದ ಎಚ್ಚರಿಕೆ ನೀಡಿದೆ. ದೇವರೊಂದಿಗೆ ನಡೆಯುತ್ತಾ ಇರಲು, ನಾವು ಆತ್ಮವಿಶ್ವಾಸದ ಪಾಶವನ್ನು ದೂರವಿರಿಸಿ, ಆತನು ನಮಗೆ ನೀಡುವ ಎಚ್ಚರಿಕೆಯ ಸಲಹೆಗೆ ಕಿವಿಗೊಡಬೇಕು.—ಕೀರ್ತನೆ 85:8.
ಮನುಷ್ಯನ ಭಯವು ನಿಮ್ಮನ್ನು ನಿಯಂತ್ರಿಸುವಂತೆ ಬಿಡದಿರಿ
10. “ಮನುಷ್ಯನ ಭಯ” ಒಂದು ಪಾಶವಾಗಿದೆ ಹೇಗೆ?
10 ಮತ್ತೊಂದು ಅಪಾಯವು ಜ್ಞಾನೋಕ್ತಿ 29:25ರಲ್ಲಿ ಗುರುತಿಸಲ್ಪಟ್ಟಿದೆ. ಅದು ಹೇಳುವುದು: “ಮನುಷ್ಯನ ಭಯ ಉರುಲು.” ಒಬ್ಬ ಬೇಟೆಗಾರನ ಪಾಶವು ಒಂದು ಪ್ರಾಣಿಯ ಕುತ್ತಿಗೆಯ ಸುತ್ತಲೂ ಬಿಗಿಯಾಗಿ ಎಳೆಯುವ ಕುಣಿಕೆ ಇಲ್ಲವೆ ಅದರ ಕಾಲುಗಳಲ್ಲಿ ಸಿಕ್ಕಿಕೊಳ್ಳುವ ಹಗ್ಗಗಳನ್ನು ಅನೇಕ ವೇಳೆ ಒಳಗೊಂಡಿರುತ್ತದೆ. (ಯೋಬ 18:8-11) ಮನುಷ್ಯರಿಗೆ ಭಯಪಡುವುದು, ಮುಕ್ತವಾಗಿ ಮಾತಾಡಲಿಕ್ಕಾಗಿ ಮತ್ತು ದೇವರನ್ನು ಮೆಚ್ಚಿಸುವಂತಹ ರೀತಿಯಲ್ಲಿ ತನ್ನನ್ನು ನಡೆಸಿಕೊಳ್ಳಲಿಕ್ಕಾಗಿರುವ ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ತದ್ರೀತಿಯಲ್ಲಿ ನಿರ್ಬಂಧಿಸಬಲ್ಲದು. ಇತರರನ್ನು ಮೆಚ್ಚಿಸುವಂತಹ ಬಯಕೆ ಸಾಮಾನ್ಯವಾದದ್ದು, ಮತ್ತು ಬೇರೆ ಜನರು ಏನು ನೆನಸುವರೆಂಬ ವಿಷಯದಲ್ಲಿ ನಿರ್ದಯವಾದ ಅನಾದರವು ಕ್ರೈಸ್ತೋಚಿತವಲ್ಲ. ಆದರೆ ಸಮತೂಕವು ಬೇಕಾಗಿದೆ. ಇತರ ಮಾನವರ ಸಂಭಾವ್ಯ ಪ್ರತಿಕ್ರಿಯೆಗಳ ಕುರಿತಾದ ಚಿಂತೆಯು, ದೇವರು ನಿಷೇಧಿಸುವಂತಹದ್ದನ್ನು ವ್ಯಕ್ತಿಯೊಬ್ಬನು ಮಾಡುವಂತೆ ಇಲ್ಲವೆ ದೇವರ ವಾಕ್ಯವು ಆಜ್ಞಾಪಿಸುವುದನ್ನು ಮಾಡುವುದರಿಂದ ದೂರವಿರುವಂತೆ ಪ್ರೇರಿಸುವಾಗ, ಆ ವ್ಯಕ್ತಿಯು ಬಲೆಯಲ್ಲಿ ಸಿಲುಕಿಕೊಂಡಿದ್ದಾನೆ.
11. (ಎ) ಮನುಷ್ಯನ ಭಯವು ಒಬ್ಬನನ್ನು ನಿಯಂತ್ರಿಸಲು ಬಿಡುವುದರ ವಿರುದ್ಧ ಇರುವ ಸುರಕ್ಷೆ ಯಾವುದು? (ಬಿ) ಮನುಷ್ಯರ ಭಯದೊಂದಿಗೆ ಹೋರಾಡುತ್ತಿದ್ದ ತನ್ನ ಸೇವಕರಿಗೆ ಯೆಹೋವನು ಹೇಗೆ ಸಹಾಯ ಮಾಡಿದನು?
11 ಅಂತಹ ಪಾಶದ ವಿರುದ್ಧವಿರುವ ಸಂರಕ್ಷಣೆಯು, ಒಬ್ಬನ ಸ್ವಾಭಾವಿಕ ಪ್ರವೃತ್ತಿಯಲ್ಲಲ್ಲ, “ಯೆಹೋವನಲ್ಲಿ ಭರವಸೆ” (NW) ಇಡುವುದರಲ್ಲಿ ನೆಲೆಸಿದೆ. (ಜ್ಞಾನೋಕ್ತಿ 29:25ಬಿ) ದೇವರಲ್ಲಿ ಭರವಸೆಯಿಡುವ ಮೂಲಕ, ನಾಚಿಕೆಸ್ವಭಾವದ ವ್ಯಕ್ತಿಯು ಸಹ ಧೈರ್ಯವಂತನಾಗಿಯೂ ಸ್ಥಿರಚಿತ್ತನಾಗಿಯೂ ಪರಿಣಮಿಸಸಾಧ್ಯವಿದೆ. ಸೈತಾನಸಂಬಂಧಿತ ವಿಷಯಗಳ ವ್ಯವಸ್ಥೆಯ ಒತ್ತಡಗಳಿಂದ ನಾವು ಸುತ್ತುವರಿದಿರುವಷ್ಟು ಸಮಯ, ಬಲೆಯಲ್ಲಿ ಸಿಲುಕಿಸುವ ಮನುಷ್ಯನ ಭಯದ ವಿರುದ್ಧ ನಾವು ಎಚ್ಚರವಾಗಿರುವ ಅಗತ್ಯವಿರುವುದು. ಧೈರ್ಯವಂತ ಸೇವೆಯ ಕುರಿತಾದ ಉತ್ತಮ ದಾಖಲೆಯು ಪ್ರವಾದಿಯಾದ ಎಲೀಯನಿಗಿದ್ದರೂ, ಅವನನ್ನು ಮರಣಕ್ಕೊಪ್ಪಿಸುವ ಬೆದರಿಕೆಯನ್ನು ಈಜೆಬೆಲಳು ಹಾಕಿದಾಗ, ಅವನು ಭಯಭೀತನಾಗಿ ಓಡಿಹೋದನು. (1 ಅರಸುಗಳು 19:2-18) ಒತ್ತಡದ ಕೆಳಗೆ, ಅಪೊಸ್ತಲ ಪೇತ್ರನು ಭಯಭೀತನಾಗಿ ಯೇಸು ಕ್ರಿಸ್ತನನ್ನು ಅಲ್ಲಗಳೆದನು, ಮತ್ತು ಹಲವಾರು ವರ್ಷಗಳ ಬಳಿಕ ಭಯದ ಕಾರಣ ಅವನು ನಂಬಿಕೆಗೆ ವಿರುದ್ಧವಾಗಿದ್ದ ರೀತಿಯಲ್ಲಿ ತನ್ನನ್ನು ನಡೆಸಿಕೊಂಡನು. (ಮಾರ್ಕ 14:66-71; ಗಲಾತ್ಯ 2:11, 12) ಹಾಗಿದ್ದರೂ, ಎಲೀಯ ಮತ್ತು ಪೇತ್ರರಿಬ್ಬರೂ ಆತ್ಮಿಕ ಸಹಾಯವನ್ನು ಸ್ವೀಕರಿಸಿದರು ಮತ್ತು ಯೆಹೋವನಲ್ಲಿ ಭರವಸೆಯಿಡುತ್ತಾ ದೇವರನ್ನು ಸ್ವೀಕಾರಯೋಗ್ಯವಾಗಿ ಸೇವಿಸುತ್ತಾ ಮುಂದುವರಿದರು.
12. ದೇವರನ್ನು ಮೆಚ್ಚಿಸುವುದರಿಂದ ಭಯವು ಅವರನ್ನು ತಡೆದುಹಿಡಿಯುವಂತೆ ಅನುಮತಿಸುವುದನ್ನು ದೂರವಿರಿಸಲು ವ್ಯಕ್ತಿಗಳು ಹೇಗೆ ಸಹಾಯಿಸಲ್ಪಟ್ಟಿದ್ದಾರೆಂಬುದನ್ನು ಆಧುನಿಕ ದಿನದ ಯಾವ ಉದಾಹರಣೆಗಳು ತೋರಿಸುತ್ತವೆ?
12 ನಮ್ಮ ದಿನದಲ್ಲಿರುವ ಯೆಹೋವನ ಸೇವಕರಲ್ಲಿ ಅನೇಕರು, ಬಲೆಯಲ್ಲಿ ಸಿಲುಕಿಸುವ ಭಯವನ್ನು ಜಯಿಸಲು ಕಲಿತಿದ್ದಾರೆ. ಗಯಾನದ ಒಬ್ಬ ಹದಿವಯಸ್ಕ ಸಾಕ್ಷಿ ಅಂಗೀಕರಿಸಿದ್ದು: “ಶಾಲೆಯಲ್ಲಿ ಸಮವಯಸ್ಕರ ಒತ್ತಡವನ್ನು ಪ್ರತಿರೋಧಿಸುವ ಹೋರಾಟವು ಬಲವಾಗಿದೆ.” ಆದರೆ ಅವಳು ಕೂಡಿಸಿದ್ದು: “ಯೆಹೋವನಲ್ಲಿನ ನನ್ನ ನಂಬಿಕೆಯೂ ಬಲವಾದದ್ದಾಗಿದೆ.” ಅವಳ ನಂಬಿಕೆಯ ಕಾರಣ ಇಡೀ ತರಗತಿಯ ಮುಂದೆ ಅವಳ ಶಿಕ್ಷಕನು ಅವಳನ್ನು ಅಪಹಾಸ್ಯಮಾಡಿದಾಗ, ಅವಳು ಮೌನವಾಗಿ ಯೆಹೋವನಿಗೆ ಪ್ರಾರ್ಥಿಸಿದಳು. ತದನಂತರ ಒಬ್ಬಂಟಿಗರಾಗಿದ್ದಾಗ ಅವಳು ಶಿಕ್ಷಕನಿಗೆ ಸಮಯೋಚಿತ ನಯದೊಂದಿಗೆ ಸಾಕ್ಷಿಯನ್ನು ನೀಡಿದಳು. ಬೆನಿನ್‌ನಲ್ಲಿದ್ದ ತನ್ನ ಪಟ್ಟಣಕ್ಕೆ ಭೇಟಿನೀಡುತ್ತಿದ್ದ ಸಮಯದಲ್ಲಿ, ಯೆಹೋವನ ಆವಶ್ಯಕತೆಗಳ ಕುರಿತು ಅಭ್ಯಸಿಸುತ್ತಿದ್ದ ಒಬ್ಬ ಯುವ ಪುರುಷನು, ತನಗಾಗಿ ಅವನ ತಂದೆ ಮಾಡಿದ್ದ ಒಂದು ಮೂರ್ತಿಯನ್ನು ತೊಲಗಿಸಿಬಿಡಲು ನಿಶ್ಚಯಿಸಿದನು. ಆ ಮೂರ್ತಿಯು ನಿರ್ಜೀವವಾಗಿತ್ತೆಂದು ಆ ಯುವ ಪುರುಷನಿಗೆ ಗೊತ್ತಿತ್ತು, ಮತ್ತು ಅವನು ಅದಕ್ಕೆ ಭಯಪಡಲಿಲ್ಲ, ಆದರೆ ಕಸಿವಿಸಿಗೊಂಡ ಹಳ್ಳಿಗರು ಅವನನ್ನು ಕೊಲ್ಲಲು ಪ್ರಯತ್ನಿಸಬಹುದೆಂಬ ಅರಿವೂ ಅವನಿಗಿತ್ತು. ಅವನು ಯೆಹೋವನಿಗೆ ಪ್ರಾರ್ಥಿಸಿ, ರಾತ್ರಿಯಲ್ಲಿ ಆ ಮೂರ್ತಿಯನ್ನು ಕಾಡಿಗೆ ತೆಗೆದುಕೊಂಡುಹೋಗಿ ಅದನ್ನು ಬಿಸಾಕಿಬಿಟ್ಟನು. (ನ್ಯಾಯಸ್ಥಾಪಕರು 6:27-31ನ್ನು ಹೋಲಿಸಿರಿ.) ಡೊಮಿನಿಕನ್ ರಿಪಬ್ಲಿಕ್‌ನಲ್ಲಿನ ಒಬ್ಬ ಸ್ತ್ರೀಯು ಯೆಹೋವನನ್ನು ಸೇವಿಸತೊಡಗಿದಾಗ, ಅವಳ ಗಂಡನು, ಅವನ ಮತ್ತು ಯೆಹೋವನ ನಡುವೆ ಯಾರಾದರೊಬ್ಬರನ್ನು ಆಯ್ಕೆಮಾಡುವಂತೆ ಒತ್ತಾಯಿಸಿದನು. ಆ ವ್ಯಕ್ತಿಯು ವಿವಾಹವಿಚ್ಛೇದನದ ಬೆದರಿಕೆಯನ್ನು ಒಡ್ಡಿದನು. ತನ್ನ ನಂಬಿಕೆಯನ್ನು ತ್ಯಜಿಸಿಬಿಡುವಂತೆ ಭಯವು ಅವಳನ್ನು ಪ್ರೇರಿಸುವುದೊ? ಅವಳು ಉತ್ತರಿಸಿದ್ದು: “ದಾಂಪತ್ಯದ್ರೋಹವು ಒಳಗೊಂಡಿದ್ದಲ್ಲಿ ನನಗೆ ನಾಚಿಕೆಯಾಗುತ್ತಿತ್ತು, ಆದರೆ ಯೆಹೋವ ದೇವರನ್ನು ಸೇವಿಸುವುದಕ್ಕಾಗಿ ನಾನು ನಾಚಿಕೆಪಟ್ಟುಕೊಳ್ಳುವುದಿಲ್ಲ!” ಅವಳು ದೇವರೊಂದಿಗೆ ನಡೆಯುತ್ತಾ ಇದ್ದಳು, ಮತ್ತು ಸಕಾಲದಲ್ಲಿ ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಅವಳ ಗಂಡನು ಅವಳ ಜೊತೆಸೇರಿದನು. ನಮ್ಮ ಸ್ವರ್ಗೀಯ ತಂದೆಯಲ್ಲಿ ಸಂಪೂರ್ಣ ಭರವಸೆಯೊಂದಿಗೆ, ಯೆಹೋವನನ್ನು ಮೆಚ್ಚಿಸುವುದೆಂದು ನಮಗೆ ಗೊತ್ತಿರುವ ವಿಷಯವನ್ನು ಮಾಡದೆ ಇರುವುದರಿಂದ ನಮ್ಮನ್ನು ತಡೆಯುವಂತೆ ಮನುಷ್ಯನ ಭಯಕ್ಕೆ ಅನುಮತಿ ನೀಡುವುದರಿಂದ ನಾವೂ ದೂರವಿರಬಲ್ಲೆವು.
ಸಲಹೆಯ ಮಹತ್ವವನ್ನು ಕನಿಷ್ಠಗೊಳಿಸುವುದರಿಂದ ದೂರವಿರಿ
13. 1 ತಿಮೊಥೆಯ 6:9ರಲ್ಲಿ ನಮಗೆ ಯಾವ ಪಾಶದ ಬಗ್ಗೆ ಎಚ್ಚರಿಕೆ ನೀಡಲ್ಪಟ್ಟಿದೆ?
13 ಬೇಟೆಗಾರರಿಂದ ಬಳಸಲ್ಪಡುವ ಕೆಲವು ಪಾಶಗಳು, ಒಂದು ನಿರ್ದಿಷ್ಟ ಸ್ಥಳವನ್ನು ಅನಿರೀಕ್ಷಿತವಾಗಿ ದಾಟಿಹೋಗುವ ಯಾವುದೇ ಪ್ರಾಣಿಯನ್ನು ಹಿಡಿಯಲು ವಿನ್ಯಾಸಿಸಲ್ಪಟ್ಟಿರುವುದಾದರೂ, ಮೋಸಕರವಾಗಿ ಆಕರ್ಷಕವಾಗಿರುವ ಎರೆಯ ಮೂಲಕ ಇತರ ಪಾಶಗಳು ಪ್ರಾಣಿಗಳನ್ನು ಸೆಳೆಯುತ್ತವೆ. ಅನೇಕ ಮಾನವರಿಗೆ, ಐಶ್ವರ್ಯಗಳು ಆ ರೀತಿಯಲ್ಲಿವೆ. (ಮತ್ತಾಯ 13:22) 1 ತಿಮೊಥೆಯ 6:8, 9ರಲ್ಲಿ, ನಾವು ಅನ್ನವಸ್ತ್ರಗಳಿಂದ ಸಂತೃಪ್ತರಾಗಿರುವಂತೆ ಬೈಬಲು ಉತ್ತೇಜಿಸುತ್ತದೆ. ಅನಂತರ ಅದು ಎಚ್ಚರಿಸುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು [“ದೃಢಸಂಕಲ್ಪಮಾಡಿರುವವರು,” NW] ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.”
14. (ಎ) ಅನ್ನವಸ್ತ್ರಗಳಿಂದ ಸಂತೃಪ್ತರಾಗಿರಬೇಕೆಂಬ ಸಲಹೆಯನ್ನು ಹೃದಯಕ್ಕೆ ತೆಗೆದುಕೊಳ್ಳುವುದರಿಂದ ಯಾವ ವಿಷಯವು ಒಬ್ಬ ವ್ಯಕ್ತಿಯನ್ನು ತಡೆಯಬಹುದು? (ಬಿ) 1 ತಿಮೊಥೆಯ 6:9ರಲ್ಲಿ ದಾಖಲಿಸಲ್ಪಟ್ಟ ಎಚ್ಚರಿಕೆಯನ್ನು ಒಬ್ಬನು ಕನಿಷ್ಠಗೊಳಿಸುವಂತೆ, ಐಶ್ವರ್ಯಗಳ ತಪ್ಪಾದ ಅರ್ಥನಿರೂಪಣೆಯು ಹೇಗೆ ಕಾರಣಾರ್ಥಕವಾಗಿರಬಹುದು? (ಸಿ) ಯಾವ ವಿಧದಲ್ಲಿ “ಕಣ್ಣಿನ ಆಶೆ”ಯು ಕೆಲವರನ್ನು, ಅವರಿಗಾಗಿ ಕಾದಿರುವ ಪಾಶಕ್ಕೆ ಕುರುಡರನ್ನಾಗಿ ಮಾಡುತ್ತದೆ?
14 ಈ ಎಚ್ಚರಿಕೆಯ ಎದುರಿನಲ್ಲೂ, ಅನೇಕರು ಈ ಸಲಹೆಯನ್ನು ಸ್ವತಃ ಅನ್ವಯಿಸಿಕೊಳ್ಳದಿರುವ ಕಾರಣ ಬಲೆಯಲ್ಲಿ ಸಿಕ್ಕಿಬೀಳುತ್ತಾರೆ. ಏಕೆ? ಯಾವುದರಿಂದ ನಾವು ಸಂತೃಪ್ತರಾಗಿರುವಂತೆ ಬೈಬಲು ಪ್ರೇರಿಸುತ್ತದೊ ಆ “ಅನ್ನವಸ್ತ್ರ”ಗಳಿಗಿಂತಲೂ ಹೆಚ್ಚಿನ ವಿಷಯವನ್ನು ಅಗತ್ಯಪಡಿಸುವ ಒಂದು ಜೀವನಶೈಲಿಗೆ ಅಂಟಿಕೊಳ್ಳುವಂತೆ ಒತ್ತಾಯಪಡಿಸಲು ಗರ್ವವು ಅವರನ್ನು ಪ್ರೇರಿಸುತ್ತಿರಬಹುದೊ? ಭಾರಿ ಶ್ರೀಮಂತ ಜನರಲ್ಲಿರುವ ಸ್ವತ್ತುಗಳನ್ನು ಮಾತ್ರ ಅವರು ಐಶ್ವರ್ಯಗಳೆಂದು ಅರ್ಥನಿರೂಪಿಸುವ ಕಾರಣ, ಬೈಬಲಿನ ಎಚ್ಚರಿಕೆಯನ್ನು ಅವರು ಕನಿಷ್ಠಗೊಳಿಸುತ್ತಿರಬಹುದೊ? ಐಶ್ವರ್ಯವಂತರಾಗಿರಬೇಕೆಂಬ ದೃಢಸಂಕಲ್ಪವನ್ನು ಅನ್ನವಸ್ತ್ರಗಳಿಂದ ಸಂತೃಪ್ತರಾಗಿರುವ ವಿಷಯದೊಂದಿಗೆ ಬೈಬಲು ವೈದೃಶ್ಯಗೊಳಿಸುತ್ತದೆ. (ಇಬ್ರಿಯ 13:5ನ್ನು ಹೋಲಿಸಿರಿ.) “ಕಣ್ಣಿನ ಆಶೆ”—ಆತ್ಮಿಕ ಬೆನ್ನಟ್ಟುವಿಕೆಗಳನ್ನೂ ಬಿಟ್ಟುಕೊಟ್ಟು, ತಾವು ನೋಡುವಂತಹ ವಸ್ತುಗಳನ್ನು ಪಡೆದುಕೊಳ್ಳುವ ಅಪೇಕ್ಷೆ—ಸತ್ಯ ಆರಾಧನೆಯ ಅಭಿರುಚಿಗಳನ್ನು ಅವರು ಎರಡನೆಯ ಸ್ಥಾನಕ್ಕೆ ತಳ್ಳುವಂತೆ ಮಾಡುತ್ತಿದೆಯೊ? (1 ಯೋಹಾನ 2:15-17; ಹಗ್ಗಾಯ 1:2-8) ಬೈಬಲಿನ ಸಲಹೆಗೆ ನಿಜವಾಗಿಯೂ ಕಿವಿಗೊಡುವ ಮತ್ತು ಯೆಹೋವನ ಸೇವೆಯನ್ನು ತಮ್ಮ ಜೀವಿತಗಳ ಕೇಂದ್ರಬಿಂದುವಾಗಿ ಮಾಡಿಕೊಳ್ಳುವ ಮೂಲಕ ದೇವರೊಂದಿಗೆ ನಡೆಯುವವರು ಎಷ್ಟೊಂದು ಹೆಚ್ಚು ಸಂತೋಷಿತರು!
ಜೀವಿತದ ವ್ಯಾಕುಲತೆಗಳನ್ನು ಯಶಸ್ವಿಕರವಾಗಿ ನಿಭಾಯಿಸುವುದು
15. ಯಾವ ಸನ್ನಿವೇಶಗಳು ಗ್ರಾಹ್ಯವಾಗಿಯೇ ಯೆಹೋವನ ಜನರಲ್ಲಿ ಅನೇಕರಿಗೆ ಕಳವಳವನ್ನುಂಟುಮಾಡುತ್ತವೆ, ಮತ್ತು ನಾವು ಅಂತಹ ಒತ್ತಡದ ಕೆಳಗಿರುವಾಗ ಯಾವ ಪಾಶದ ವಿಷಯದಲ್ಲಿ ಜಾಗರೂಕರಾಗಿರಬೇಕು?
15 ಐಶ್ವರ್ಯವಂತರಾಗಬೇಕೆಂಬ ದೃಢಸಂಕಲ್ಪಕ್ಕಿಂತಲೂ ಜೀವಿತದ ಆವಶ್ಯಕತೆಗಳನ್ನು ಪಡೆದುಕೊಳ್ಳುವ ವಿಷಯದಲ್ಲಿ ವ್ಯಾಕುಲಗೊಂಡ ಚಿಂತೆಯು ಹೆಚ್ಚು ಸಾಮಾನ್ಯವಾಗಿದೆ. ಯೆಹೋವನ ಸೇವಕರಲ್ಲಿ ಅನೇಕರು ಕನಿಷ್ಠಮೊತ್ತದ ಸ್ವತ್ತುಗಳೊಂದಿಗೆ ಜೀವಿಸುತ್ತಾರೆ. ಅತ್ಯಾವಶ್ಯಕವಾದ ಬಟ್ಟೆಬರೆ, ರಾತ್ರಿ ಮಲಗಲು ತಮ್ಮ ಕುಟುಂಬಕ್ಕೆ ಒಂದು ಸ್ಥಳ, ಮತ್ತು ದಿನಕ್ಕಾಗಿ ಕೊಂಚವಾದರೂ ಆಹಾರವನ್ನು ಪಡೆದುಕೊಳ್ಳುವ ಸಲುವಾಗಿಯೂ ಅವರು ಅನೇಕ ತಾಸುಗಳ ವರೆಗೆ ಕಷ್ಟಪಟ್ಟು ದುಡಿಯುತ್ತಾರೆ. ಇತರರು ಕಾಯಿಲೆಯ ಕಾರಣ ಇಲ್ಲವೆ ತಾವು ಅಥವಾ ಕುಟುಂಬದ ಸದಸ್ಯರು ವೃದ್ಧರಾಗುತ್ತಿರುವ ಕಾರಣ ಸಮಸ್ಯೆಗಳೊಂದಿಗೆ ಹೋರಾಡುತ್ತಾರೆ. ತಮ್ಮ ಜೀವಿತಗಳಲ್ಲಿ ಆತ್ಮಿಕ ಅಭಿರುಚಿಗಳನ್ನು ನಿಗ್ರಹಿಸುವಂತೆ ಇಂತಹ ಪರಿಸ್ಥಿತಿಗಳಿಗೆ ಅನುಮತಿ ನೀಡುವುದು ಎಷ್ಟು ಸುಲಭವಾಗಿದೆ!—ಮತ್ತಾಯ 13:22.
16. ಜೀವಿತದ ಒತ್ತಡಗಳನ್ನು ನಿಭಾಯಿಸುವಂತೆ ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ?
16 ಮೆಸ್ಸೀಯ ಸಂಬಂಧಿತ ರಾಜ್ಯದ ಕೆಳಗೆ ನಾವು ಅನುಭವಿಸಲಿರುವ ಪರಿಹಾರದ ಕುರಿತು ಯೆಹೋವನು ಪ್ರೀತಿಪೂರ್ವಕವಾಗಿ ನಮಗೆ ತಿಳಿಸುತ್ತಾನೆ. (ಕೀರ್ತನೆ 72:1-4, 16; ಯೆಶಾಯ 25:7, 8) ನಮ್ಮ ಆದ್ಯತೆಗಳನ್ನು ಸರಿಯಾದ ಕ್ರಮದಲ್ಲಿ ಹೇಗೆ ಇಡುವುದು ಎಂಬುದರ ಬಗ್ಗೆ ನಮಗೆ ಸಲಹೆ ನೀಡುವ ಮೂಲಕ, ಜೀವಿತದ ಒತ್ತಡಗಳನ್ನು ಈಗಲೂ ನಿಭಾಯಿಸುವಂತೆ ಆತನು ಸಹಾಯ ಮಾಡುತ್ತಾನೆ. (ಮತ್ತಾಯ 4:4; 6:25-34) ಗತ ಸಮಯಗಳಲ್ಲಿ ತನ್ನ ಸೇವಕರಿಗೆ ಆತನು ಹೇಗೆ ಸಹಾಯ ಮಾಡಿದನೆಂಬುದರ ಕುರಿತಾದ ದಾಖಲೆಯ ಮೂಲಕ, ಯೆಹೋವನು ನಮಗೆ ಪುನರ್‌ಆಶ್ವಾಸನೆ ನೀಡುತ್ತಾನೆ. (ಯೆರೆಮೀಯ 37:21; ಯಾಕೋಬ 5:11) ನಮ್ಮ ಮೇಲೆ ಯಾವುದೇ ವಿಪತ್ತು ಬರಲಿ, ತನ್ನ ನಿಷ್ಠಾವಂತ ಸೇವಕರಿಗಾಗಿರುವ ಆತನ ಪ್ರೀತಿಯು ಏಕಪ್ರಕಾರದ್ದಾಗಿಯೇ ಉಳಿಯುತ್ತದೆ ಎಂಬ ತಿಳಿವಳಿಕೆಯಿಂದ ಆತನು ನಮ್ಮನ್ನು ಬಲಪಡಿಸುತ್ತಾನೆ. (ರೋಮಾಪುರ 8:35-39) ಯೆಹೋವನಲ್ಲಿ ತಮ್ಮ ಭರವಸೆಯನ್ನಿಡುವವರಿಗೆ, ಆತನು ಪ್ರಕಟಿಸುವುದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.
17. ತೀಕ್ಷ್ಣವಾದ ವಿಪತ್ತನ್ನು ಅನುಭವಿಸುತ್ತಿರುವ ವ್ಯಕ್ತಿಗಳು ದೇವರೊಂದಿಗೆ ನಡೆಯುತ್ತಾ ಇರಲು ಹೇಗೆ ಶಕ್ತರಾಗಿದ್ದಾರೆಂಬುದಕ್ಕೆ ಉದಾಹರಣೆಗಳನ್ನು ಕೊಡಿರಿ.
17 ಈ ತಿಳಿವಳಿಕೆಯಿಂದ ಬಲಗೊಳಿಸಲ್ಪಟ್ಟು, ಸತ್ಯ ಕ್ರೈಸ್ತರು ಲೌಕಿಕ ಮಾರ್ಗಗಳಿಗೆ ತಿರುಗುವ ಬದಲು ದೇವರೊಂದಿಗೆ ನಡೆಯುತ್ತಾ ಇರುತ್ತಾರೆ. ಅನೇಕ ದೇಶಗಳಲ್ಲಿನ ಬಡವರಲ್ಲಿರುವ ಒಂದು ಸಾಮಾನ್ಯ ಲೌಕಿಕ ತತ್ವವಿಚಾರವು ಏನೆಂದರೆ, ನಿಮ್ಮ ಕುಟುಂಬಕ್ಕೆ ಉಣ್ಣಿಸಸಾಧ್ಯವಾಗುವಂತೆ ಹೇರಳವಾಗಿರುವವರಿಂದ ತೆಗೆದುಕೊಳ್ಳುವುದು ಕಳ್ಳತನವಲ್ಲವೆಂಬುದೇ. ಆದರೆ ನಂಬಿಕೆಯಿಂದ ನಡೆಯುವವರು ಆ ದೃಷ್ಟಿಕೋನವನ್ನು ತಿರಸ್ಕರಿಸುತ್ತಾರೆ. ಅವರು ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರ ಅನುಗ್ರಹವನ್ನು ಅಮೂಲ್ಯವೆಂದೆಣಿಸುತ್ತಾರೆ ಮತ್ತು ತಮ್ಮ ಪ್ರಾಮಾಣಿಕವಾದ ನಡತೆಗೆ ಬಹುಮಾನ ನೀಡಲು ಆತನ ಕಡೆಗೆ ನೋಡುತ್ತಾರೆ. (ಜ್ಞಾನೋಕ್ತಿ 30:8, 9; 1 ಕೊರಿಂಥ 10:13; ಇಬ್ರಿಯ 13:18) ವ್ಯಾವಹಾರಿಕ ಜಾಣತನದೊಂದಿಗೆ ಕೆಲಸಮಾಡುವ ಇಚ್ಛೆಯು, ನಿಭಾಯಿಸಲು ಅವಳಿಗೆ ಸಹಾಯಮಾಡಿತೆಂಬುದನ್ನು ಭಾರತದ ಒಬ್ಬ ವಿಧವೆ ಕಂಡುಕೊಂಡಳು. ಜೀವಿತದಲ್ಲಿನ ತನ್ನ ಪರಿಸ್ಥಿತಿಯ ಬಗ್ಗೆ ಅಸಮಾಧಾನಪಟ್ಟುಕೊಳ್ಳುವ ಬದಲಿಗೆ, ತನ್ನ ಜೀವಿತದಲ್ಲಿ ಅವಳು ದೇವರ ರಾಜ್ಯ ಹಾಗೂ ಆತನ ನೀತಿಯನ್ನು ಪ್ರಥಮವಾಗಿಡುವಲ್ಲಿ, ತನಗೂ ತನ್ನ ಮಗನಿಗೂ ಬೇಕಾದ ಆವಶ್ಯಕತೆಗಳನ್ನು ಪಡೆದುಕೊಳ್ಳಲಿಕ್ಕಾಗಿ ತಾನು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನೆಂಬ ವಿಷಯವು ಅವಳಿಗೆ ಗೊತ್ತಿತ್ತು. (ಮತ್ತಾಯ 6:33, 34) ಅವರು ಅನುಭವಿಸಬಹುದಾದ ವಿಪತ್ತು ಏನೇ ಆಗಿರಲಿ, ಯೆಹೋವನು ಅವರ ಆಶ್ರಯ ಹಾಗೂ ಶರಣನೆಂಬುದನ್ನು ಭೂಸುತ್ತಲೂ ಇರುವ ಅನೇಕ ಸಾವಿರಾರು ಜನರು ಪ್ರದರ್ಶಿಸುತ್ತಾರೆ. (ಕೀರ್ತನೆ 91:2) ನಿಮ್ಮ ವಿಷಯದಲ್ಲಿ ಅದು ಸತ್ಯವಾಗಿದೆಯೊ?
18. ಸೈತಾನನ ಲೋಕದ ಪಾಶಗಳಿಂದ ದೂರವಿರುವುದರ ಕೀಲಿ ಕೈ ಯಾವುದು?
18 ಪ್ರಚಲಿತ ವಿಷಯಗಳ ವ್ಯವಸ್ಥೆಯಲ್ಲಿ ನಾವು ಜೀವಿಸುವಷ್ಟು ಸಮಯ, ದೂರವಿಡಬೇಕಾದ ಪಾಶಗಳಿರುವವು. (1 ಯೋಹಾನ 5:19) ಬೈಬಲು ಇವುಗಳನ್ನು ಗುರುತಿಸಿ, ಇವುಗಳಿಂದ ದೂರವಿರುವುದು ಹೇಗೆಂಬುದನ್ನು ತೋರಿಸುತ್ತದೆ. ಯೆಹೋವನನ್ನು ನಿಜವಾಗಿಯೂ ಪ್ರೀತಿಸಿ, ಆತನನ್ನು ಅಪ್ರಸನ್ನಗೊಳಿಸುವ ವಿಷಯದಲ್ಲಿ ಹಿತಕರವಾದ ಭಯವುಳ್ಳವರು ಇಂತಹ ಪಾಶಗಳನ್ನು ಯಶಸ್ವಿಕರವಾಗಿ ನಿಭಾಯಿಸಬಲ್ಲರು. ಅವರು ‘ಪವಿತ್ರಾತ್ಮನನ್ನು ಅನುಸರಿಸಿ ನಡೆದು’ಕೊಳ್ಳುವುದಾದರೆ, ಲೌಕಿಕ ಮಾರ್ಗಗಳಿಗೆ ಒಳಗಾಗುವುದಿಲ್ಲ. (ಗಲಾತ್ಯ 5:16-25) ಯೆಹೋವನೊಂದಿಗಿನ ತಮ್ಮ ಸಂಬಂಧದ ಸುತ್ತಲೂ ತಮ್ಮ ಜೀವಿತಗಳನ್ನು ನಿಜವಾಗಿಯೂ ಕಟ್ಟಿಕೊಳ್ಳುವವರ ಮುಂದೆ, ದೇವರೊಂದಿಗೆ ನಡೆಯುತ್ತಾ ಸದಾಕಾಲ ಆತನೊಂದಿಗೆ ಆಪ್ತತೆಯನ್ನು ಅನುಭವಿಸುವ ಮಹಾ ಪ್ರತೀಕ್ಷೆಯಿದೆ.—ಕೀರ್ತನೆ 25:14.
ನಿಮ್ಮ ಹೇಳಿಕೆಯೇನು?
◻ ಆತ್ಮವಿಶ್ವಾಸವು ಹೇಗೆ ಒಂದು ಪಾಶವಾಗಿರಬಲ್ಲದು?
◻ ಮನುಷ್ಯನ ಭಯದಿಂದ ನಿಯಂತ್ರಿಸಲ್ಪಡುವುದರ ವಿರುದ್ಧ ನಮ್ಮನ್ನು ಯಾವುದು ರಕ್ಷಿಸಬಲ್ಲದು?
◻ ಐಶ್ವರ್ಯಗಳನ್ನು ಬೆನ್ನಟ್ಟುವ ಅಪಾಯದ ಕುರಿತ ಸಲಹೆಯನ್ನು ಅನ್ವಯಿಸಿಕೊಳ್ಳಲು ನಾವು ತಪ್ಪುವಂತೆ ಯಾವುದು ಮಾಡಬಲ್ಲದು?
◻ ಜೀವಿತದ ವ್ಯಾಕುಲತೆಗಳಿಗೆ ಸಿಲುಕಿಕೊಳ್ಳುವುದರಿಂದ ದೂರವಿರುವಂತೆ ಯಾವುದು ನಮ್ಮನ್ನು ಸಮರ್ಥರನ್ನಾಗಿಮಾಡಬಲ್ಲದು?
[ಪುಟ 16,17 ರಲ್ಲಿರುವ ಚಿತ್ರ]
ಅನೇಕರು ಜೀವನದುದ್ದಕ್ಕೂ ದೇವರೊಂದಿಗೆ ನಡೆಯುತ್ತಾ ಇರುತ್ತಾರೆ