ಯೆಹೋವನ ದಿವ್ಯ ರಥದೊಂದಿಗೆ ಸರಿಸಮವಾಗಿ ಚಲಿಸಿರಿ
“ಅವರು ಕೇಳಿದರೂ ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ನುಡಿಯಲೇ ಬೇಕು.”—ಯೆಹೆಜ್ಕೇಲ 2:7.
1, 2. ಯೆಹೆಜ್ಕೇಲನು ಯಾವ ರಾಜವೈಭವದ ವಾಹನವನ್ನು ಕಂಡನು ಮತ್ತು ಅವನಿಗೆ ಏನು ಹೇಳಲ್ಪಟ್ಟಿತು?
ಯೆಹೋವನ ದಿವ್ಯ ರಥವು ಈಗ ಆತನ ಸೇವಕರ ಮುಂದೆ ನಿಂತಿರುತ್ತದೆ. ತಮ್ಮ ನಂಬಿಕೆಯ ನೇತ್ರಗಳಿಂದ ಅವರು, ತಮ್ಮ ಸಾರ್ವಭೌಮ ಕರ್ತನ ಆ ರಾಜವೈಭವದ ರಥವನ್ನು ಕಾಣುತ್ತಾರೆ. ಅದು ಮಹಿಮಾಭರಿತ, ಗಂಭೀರಭೀಷಣ ಮತ್ತು ಮಹಾವೈಭವದಿಂದ ಕೂಡಿದೆ.
2 ಅದೇ ರಾಜವೈಭವದ ರಥವು ಸುಮಾರು 2,600 ವರ್ಷಗಳ ಹಿಂದೆ ದರ್ಶನದಲ್ಲಿ ದೇವರ ಪ್ರವಾದಿಯಾದ ಯೆಹೆಜ್ಕೇಲನ ಮುಂದೆ ನಿಂತಿತ್ತು. ಈ ಸಿಂಹಾಸನ-ವಾಹಕ ರಥದಿಂದ—ಅಂದರೆ ಆತ್ಮ ಜೀವಿಗಳಿರುವ ದೇವರ ಸ್ವರ್ಗೀಯ ಸಂಸ್ಥೆಯಿಂದ ಯೆಹೋವನು ಈ ನಾಟಕೀಯ ಆಜ್ಞೆಯನ್ನು ಯೆಹೆಜ್ಕೇಲನಿಗೆ ಕೊಡುತ್ತಾನೆ: “ನಾನು ಯಾವ ಸಂತಾನದ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ ಹಟಗಾರರೂ ಆಗಿರುತ್ತಾರೆ. ನೀನು ಅವರಿಗೆ—ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿ. ಅವರು ದ್ರೋಹಿ ವಂಶದವರು, ಒಂದುವೇಳೆ ಕೇಳದೆ ಹೋದಾರು. ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿಯು ತಮ್ಮ ಮಧ್ಯೆ ಕಾಣಿಸಿಕೊಂಡಿದ್ದಾನೆಂದು ತಿಳಿದೇ ಇರುವರು.”—ಯೆಹೆಜ್ಕೇಲ 2:4, 5.
3. ಯಾವ ಆಧುನಿಕ ದಿನದ ಪಡಿರೂಪವು ಯೆಹೆಜ್ಕೇಲನಿಗೆ ಇದೆ?
3 ಯೆಹೆಜ್ಕೇಲನು ದೃಢಸಂಕಲ್ಪದಿಂದ ಆ ಆಜ್ಞೆಯನ್ನು ಕೈಕೊಂಡನು, ದೈವಿಕ ಹಸ್ತದ ಏಕಮಾತ್ರ ಉಪಕರಣವಾಗಿ ಕಾರ್ಯನಡಿಸಿದನು. ತದ್ರೀತಿಯಲ್ಲಿ ದೇವರಿಗೆ ಈಗ ತನ್ನ ಹತೋಟಿಯಲ್ಲಿ ಒಂದು ಏಕಮಾತ್ರ ಸಂಘಟನಾ ಉಪಕರಣವಿದೆ. ಯೆಹೆಜ್ಕೇಲನ ವರ್ಗವಾದ ಅಭಿಷಿಕ್ತ ಉಳಿಕೆಯವರು, ಕೊನೆಯ ಸಾಕ್ಷಿಯನ್ನು ಕೊಡುವ ಈ ಕಾರ್ಯದ ಅಗ್ರಭಾಗದಲ್ಲಿದ್ದಾರೆ, “ಬೇರೆ ಕುರಿಗಳ” “ಮಹಾ ಸಮೂಹದವರು” ಅವರ ಸುತ್ತಲೂ ಒಟ್ಟುಸೇರಿ ಅವರಿಗೆ ಬೆಂಬಲವನ್ನು ನೀಡುತ್ತಿದ್ದಾರೆ. (ಪ್ರಕಟನೆ 7:9, 10; ಯೋಹಾನ 10:16) ಒಟ್ಟಾಗಿ ಅವರು “ಒಂದೇ ಹಿಂಡು” ಆಗಿರುತ್ತಾರೆ ಮತ್ತು ಮಹಾ ರಥಸವಾರನಾದ ಯೆಹೋವ ದೇವರ ಪರಮಾಧಿಕಾರದ ಕೆಳಗೆ, ಒಳ್ಳೇ ಕುರುಬನಾದ ಯೇಸು ಕ್ರಿಸ್ತನು ಅವರನ್ನು ನಡಿಸುತ್ತಿದ್ದಾನೆ.
4, 5. ದೇವರ ದೃಶ್ಯ ಸಂಸ್ಥೆಯು ಅಸ್ತಿತ್ವಕ್ಕೆ ಬಂದದ್ದು ಹೇಗೆ ಮತ್ತು ಯೆಶಾಯ 60:22ಕ್ಕೆ ಹೊಂದಿಕೆಯಲ್ಲಿ ಅದು ಏನನ್ನು ಅನುಭವಿಸಿದೆ?
4 ಯೆಹೋವನ ಮಾರ್ಗದರ್ಶನದ ಕೆಳಗೆ ಈ ವಿಶ್ವವ್ಯಾಪಕ ಸಂಸ್ಥೆಯು ಒಂದು ಚಿಕ್ಕ ಪ್ರಾರಂಭದಿಂದ ಬೆಳೆದು, “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ. ಆತನು ನ್ಯಾಯ ತೀರ್ಪು ಮಾಡುವ ಗಳಿಗೆಯು ಬಂದಿದೆ” ಎಂಬ ಆಜ್ಞೆಯನ್ನು ಘೋಷಿಸುವ ಒಂದು ಮಹಾ ಕಾರ್ಯಭಾರಿಯಾಗಿ ಪರಿಣಮಿಸಿದೆ. (ಪ್ರಕಟನೆ 14:7) ಯೆಹೆಜ್ಕೇಲನು ಹೇಗೆ ತಾನಾಗಿಯೇ ಏಳಲಿಲ್ಲವೋ ಅಥವಾ ತನ್ನನ್ನು ಪ್ರವಾದಿಯಾಗಿ ನೇಮಿಸಿಕೊಳ್ಳಲಿಲ್ಲವೋ, ಹಾಗೆಯೇ ದೇವರ ದೃಶ್ಯ ಸಂಸ್ಥೆಯೂ ತನ್ನನ್ನು ತಾನೇ ನಿರ್ಮಿಸಿಕೊಳ್ಳಲಿಲ್ಲ ಅಥವಾ ನೇಮಿಸಿಕೊಳ್ಳಲಿಲ್ಲ. ಅದು ಕೇವಲ ಮಾನುಷ ಚಿತ್ತದಿಂದ ಅಥವಾ ಪ್ರಯತ್ನದಿಂದ ಹೊರಟು ಬರಲಿಲ್ಲ. ಆ ದಿವ್ಯ ರಥ-ಸವಾರನು ತಾನೇ ಈ ಸಂಘಟನೆಯು ಅಸ್ತಿತ್ವಕ್ಕೆ ಬರುವಂತೆ ಸಾಧ್ಯಮಾಡಿದಾತನು. ದೇವರಾತ್ಮದಿಂದ ಶಕ್ತಿಯನ್ನು ಪಡೆದದ್ದಾಗಿ ಮತ್ತು ಪರಿಶುದ್ಧ ದೂತರಿಂದ ಬೆಂಬಲಿಸಿಕೊಂಡು, ಯೆಹೋವನ ಜನರು ‘ಅಲ್ಪನಿಂದ ಒಂದು ಬಲವಾದ ಜನಾಂಗವಾಗುವ’ ಇಂಥ ನಾಟಕೀಯ ವಿಸ್ತಾರವನ್ನು ಸಥ್ವಃ ಅನುಭವಿಸಿದ್ದಾರೆ.—ಯೆಶಾಯ 60:22.
5 ಸುಮಾರು 40,00,000ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು 212 ದೇಶಗಳಲ್ಲಿ ರಾಜ್ಯ ಸಂದೇಶವನ್ನು ಸಾರುತ್ತಾ ಇದ್ದಾರೆ. ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ಗಳಾಗಿ ಸಂಸ್ಥಾಪಿತವಾಗಿರುವ 63,000ಕ್ಕಿಂತಲೂ ಹೆಚ್ಚು ಸಭೆಗಳಲ್ಲಿ ಅವರು ಜತೆಗೂಡಿರುತ್ತಾರೆ. ವಿಸ್ತಾರವಾದ ಬ್ರಾಂಚ್ ಆಫೀಸು ಮತ್ತು ಮುದ್ರಣಾ ಸೌಕರ್ಯಗಳು ಸಂಸ್ಥೆಯ ಮುಖ್ಯ ಕಾರ್ಯಾಲಯದ ಕೇಂದ್ರವಾಗಿರುವ ಆಡಳಿತಾ ಮಂಡಲಿಯ ಮಾರ್ಗದರ್ಶನೆಯ ಕೆಳಗೆ ಕಾರ್ಯನಡಿಸುತ್ತಾ ಇದೆ. ಏಕ ವ್ಯಕ್ತಿಯೋ ಎಂಬಂತೆ ಅವರೆಲ್ಲರೂ, ಸುವಾರ್ತೆಯನ್ನು ಸಾರುತ್ತಾ, ಕೇಳುವವರಿಗೆ ಕಲಿಸುತ್ತಾ, ಕೂಟಗಳಿಗಾಗಿ ಕಟ್ಟಡಗಳನ್ನು ಕಟ್ಟುತ್ತಾ ಮುಂದೆ ಸಾಗುತ್ತಿದ್ದಾರೆ. ಹೌದು, ಯೆಹೋವನ ದೃಶ್ಯ ಸಂಸ್ಥೆಯು ಆ ದಿವ್ಯ ರಥ ಮತ್ತು ಅದರ ಸವಾರನೊಂದಿಗೆ ಸರಿಸಮಾನವಾಗಿ ಮುಂಚಲಿಸುತ್ತಾ ಇದೆ.
6. ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ಸರಿಸಮವಾಗಿ ಮುಂದೆ ಚಲಿಸುವದರಲ್ಲಿ ಏನೆಲ್ಲಾ ಒಳಗೂಡಿದೆ?
6 ಯೆಹೋವನ ಸಾಕ್ಷಿಗಳಲ್ಲಿ ನೀವೂ ಒಬ್ಬರಾಗಿದ್ದರೆ, ಯೆಹೋವನ ಈ ದೃಶ್ಯ ಸಂಸ್ಥೆಯೊಂದಿಗೆ ನೀವು ಸರಿಸಮಾನವಾಗಿ ಮುಂದೆ ಚಲಿಸುತ್ತಿದ್ದೀರೋ? ಅದು ಕೇವಲ ಕ್ರೈಸ್ತ ಕೂಟಗಳಿಗೆ ಹಾಜರಾಗುವದು ಮತ್ತು ಶುಶ್ರೂಷೆಯಲ್ಲಿ ಸಮಯ ಕಳೆಯುವ ಒಂದು ಸರಳ ವಿಷಯವಲ್ಲ. ಮುಖ್ಯವಾಗಿ, ಆ ಸರಿಸಮ ವೇಗವು ಪ್ರಗತಿ ಮತ್ತು ಆತ್ಮಿಕ ಬೆಳವಣಿಗೆಯ ಸಂಬಂಧದಲ್ಲಿದೆ. ಒಂದು ಸಕಾರಾತ್ಮಕ ಹೊರನೋಟ, ಯೋಗ್ಯ ಪ್ರಥಮತೆಗಳನ್ನು ಇಡುವುದು ಮತ್ತು ತಿಳುವಳಿಕೆಗೆ ಅನುಗುಣವಾಗಿ ಮುಂದರಿಯುವದು ಇದರಲ್ಲಿ ಕೂಡಿದೆ. ನಾವು ಯೆಹೋವನ ದಿವ್ಯ ರಥದೊಂದಿಗೆ ಸರಿಸಮವಾದ ವೇಗದಲ್ಲಿ ಮುಂದುವರಿಯುವುದಾದರೆ, ನಮ್ಮ ಜೀವಿತಗಳು ನಾವು ಸಾರುವ ಸಂದೇಶಕ್ಕೆ ಸರಿ ಹೊಂದಿಕೆಯಲ್ಲಿ ಇರುವವು.
7. ದೇವರ ಪ್ರವಾದಿಯೋಪಾದಿ ಯೆಹೆಜ್ಕೇಲನ ನಡವಳಿಯನ್ನು ಯಾಕೆ ಲಕ್ಷ್ಯಕ್ಕೆ ತರಬೇಕು?
7 ಸರಿಸಮವಾದ ವೇಗವನ್ನಿಡುವ ವಿಷಯದಲ್ಲಿ, ಯೆಹೋವನ ಆಧುನಿಕ ಕಾಲದ ಜನರು ಯೆಹೆಜ್ಕೇಲನ ಮಾದರಿಯಿಂದ ಹೆಚ್ಚನ್ನು ಕಲಿಯಬಹುದು. ಯೆಹೋವನಿಂದ ವಿಶಿಷ್ಟ ನೇಮಕವನ್ನು ಪಡೆದಿದ್ದರೂ ಯೆಹೆಜ್ಕೇಲನಿಗೆ ಇನ್ನೂ ಅನಿಸಿಕೆಗಳು, ಚಿಂತೆಗಳು ಮತ್ತು ಅಗತ್ಯತೆಗಳು ಇದ್ದವು. ತುಲನಾತ್ಮಕವಾಗಿ ವಿವಾಹಿತ ಯುವ ಪುರುಷನಾಗಿದ್ದರೂ, ಪತ್ನಿಯನ್ನು ಮರಣದಲ್ಲಿ ಕಳಕೊಂಡ ದುಃಖವನ್ನು ಅವನು ಅನುಭವಿಸಿದ್ದನು. ಆದರೂ ಅವನು ಯೆಹೋವನ ಪ್ರವಾದಿಯೋಪಾದಿ ತನ್ನ ನೇಮಕವನ್ನೆಂದೂ ಅಸಡ್ಡೆ ಮಾಡಿರಲಿಲ್ಲ. ಬೇರೆ ವಿಷಯಗಳಲ್ಲೂ ಯೆಹೆಜ್ಕೇಲನು ತನ್ನನ್ನು ಹೇಗೆ ನಡಿಸಿಕೊಂಡನು ಎಂದು ಗಮನಿಸುವ ಮೂಲಕವೂ, ದೇವರ ದೃಶ್ಯ ಸಂಸ್ಥೆಯೊಂದಿಗೆ ಸರಿಸಮ ವೇಗದಲ್ಲಿ ಮುಂದುವರಿಯಲು ನಾವು ಬಲಪಡಿಸಲ್ಪಡುವೆವು. ಇದು ನಮಗೆ ದೇವರ ಅದೃಶ್ಯ ಸಂಸ್ಥೆಯೊಂದಿಗೆ ಸಮಾನವೇಗದಲ್ಲಿ ಮುಂದೆ ಚಲಿಸಲು ಶಕ್ತರನ್ನಾಗಿ ಮಾಡುವದು.
ನೇಮಕವು ಸ್ವೀಕರಿಸಲ್ಪಟ್ಟು, ನೆರವೇರಿಸಲ್ಪಟ್ಟದ್ದು
8. ಅವನ ನೇಮಕದ ಸಂಬಂಧದಲ್ಲಿ, ಯಾವ ಮಾದರಿಯನ್ನು ಯೆಹೆಜ್ಕೇಲನು ಇಟ್ಟನು?
8 ನೇಮಕವನ್ನು ಸ್ವೀಕರಿಸಿ ಅದನ್ನು ನೆರವೇರಿಸಿದ ಮೂಲಕ ಯೆಹೆಜ್ಕೇಲನು ಒಂದು ಒಳ್ಳೇ ಮಾದರಿಯನ್ನಿಟ್ಟನು. ಆದರೂ, ಅದನ್ನು ಪೂರೈಸಲು ವಿಧೇಯತೆ ಮತ್ತು ಧೈರ್ಯವು ಬೇಕಿತ್ತು, ಯಾಕಂದರೆ ನಾವು ಓದುವುದು: “ನರಪುತ್ರನೇ, ನೀನು ಮುಳ್ಳು ಕಂಪೆಗಳಿಗೆ ಸಿಕ್ಕಿಕೊಂಡು ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ. ಅವರ ಗದರಿಕೆಗೆ ಹೆದರದಿರು; ಅವರು ದ್ರೋಹಿ ವಂಶದವರು; ಅವರ ಬಿರುನುಡಿಗೆ ದಿಗಿಲುಪಡಬೇಡ. ಅವರ ಬಿರುನೋಟಕ್ಕೆ ಬೆಚ್ಚದಿರು. ಅವರು ಕೇಳಿದರೂ ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ನುಡಿಯಲೇ ಬೇಕು; ಅವರು ದ್ರೋಹಿಗಳೇ ಹೌದು. ಇದಲ್ಲದೆ ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು. ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಿರಬೇಡ.”—ಯೆಹೆಜ್ಕೇಲ 2:6-8.
9. ಏನನ್ನು ಮಾಡುವ ಮೂಲಕ ಮಾತ್ರ ಯೆಹೆಜ್ಕೇಲನು ರಕ್ತಾಪರಾಧದಿಂದ ಮುಕ್ತನಾಗುತ್ತಿದ್ದನು?
9 ತನ್ನ ನೇಮಕವನ್ನು ಪೂರೈಸಲು ಸದಾ ಪ್ರಚೋದಿಸುವ ಅಗತ್ಯವುಳ್ಳವನಾಗಿ ಜಡತೆಯನ್ನು ಯಾ ದಿಗಿಲನ್ನು ಯೆಹೆಜ್ಕೇಲನು ತೋರಿಸಬಾರದಿತ್ತು. ಅವನು ಮನಃಪೂರ್ವಕವಾಗಿ ಮತ್ತು ಧೈರ್ಯದಿಂದ ಯೆಹೋವನ ಮಾತನ್ನು ನುಡಿದರೆ ಮಾತ್ರವೇ ರಕ್ತಾಪರಾಧದಿಂದ ಮುಕ್ತನಾಗಿರುತ್ತಿದ್ದನು. ಯೆಹೆಜ್ಕೇಲನಿಗೆ ಹೇಳಲ್ಪಟ್ಟದ್ದು: “ನೀನು ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ ದುರ್ಮಾರ್ಗವನ್ನೂ ಬಿಡದೆ ಹೋದರೆ ತನ್ನ ಅಪರಾಧದಿಂದ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.”—ಯೆಹೆಜ್ಕೇಲ 3:19.
10. ಯೆಹೆಜ್ಕೇಲ ವರ್ಗವು ಆ ಪ್ರವಾದಿಯಂತೆಯೇ ಇತ್ತೆಂದು ಹೇಗೆ ರುಜುವಾಯಿತು?
10 ಯೆಹೆಜ್ಕೇಲನ ವಿಷಯದಂತೆಯೇ, ಅಭಿಷಿಕ್ತ ಯೆಹೆಜ್ಕೇಲ ವರ್ಗದವರು ತಮ್ಮ ದೇವದತ್ತ ನೇಮಕವನ್ನು ಸ್ವೀಕರಿಸಿದ್ದಾರೆ ಮತ್ತು ನೆರವೇರಿಸುತ್ತಿದ್ದಾರೆ. ನಾವು ಯೆಹೋವನ ಸಾಕ್ಷಿಗಳಾಗಿದ್ದರೆ, ನಮ್ಮ ವಿಧೇಯತೆಯ ಮೇಲೆ ನಮ್ಮ ಜೀವ ಮತ್ತು ಇತರರ ಜೀವಗಳು ಆತುಕೊಂಡಿವೆ ಎಂಬದನ್ನು ಜ್ಞಾಪಕದಲ್ಲಿಡಬೇಕು. (1 ತಿಮೊಥಿ 4:15, 16) ಪ್ರತಿಯೊಬ್ಬ ಸಾಕ್ಷಿಯು ಯೆಹೋವನ ಸಂಸ್ಥೆಯೊಂದಿಗೆ ಸರಿಸಮವಾಗಿ ಮುಂದರಿಯುವ ಅಗತ್ಯವಿದೆ. ದೇವರು ನಮ್ಮನ್ನು ತನ್ನ ರಥಕ್ಕೆ ಕಟ್ಟಿ ಎಳೆದುಕೊಂಡು ಹೋಗಲಾರನು. ನಿರಾಸಕ್ತಿ ಮತ್ತು ವಿಭಜಿತ ಹೃದಯವನ್ನು ರಥ ಚಾಲಕನು ಹೇಸುತ್ತಾನೆ. ಆದುದರಿಂದ ದೈವಿಕ ಅಭಿರುಚಿಗಳನ್ನು ನಮ್ಮ ಜೀವಿತದ ಕೇಂದ್ರದಲ್ಲಿಡುವಂತೆ ಯೆಹೋವನ ದೃಶ್ಯ ಸಂಸ್ಥೆಯು ನಮ್ಮನ್ನು ಪ್ರಬೋಧಿಸುತ್ತದೆ. ಅಂಥ ಬುದ್ಧಿವಾದಕ್ಕೆ ಹೊಂದಿಕೆಯುಳ್ಳ ಪ್ರತಿಕ್ರಿಯೆಯು ಯೆಹೋವನ ಸಂಸ್ಥೆಯೊಂದಿಗೆ ಸಮಹೆಜ್ಜೆಯಿಟ್ಟು ನಡೆಯುವಂತೆ ಮಾಡುತ್ತದೆ ಮತ್ತು ನಮ್ಮ ಪವಿತ್ರ ಶುಶ್ರೂಷೆಯನ್ನು ದಿನಚರ್ಯೆಗಿಂತ ಇಲ್ಲವೇ ಯಾಂತ್ರಿಕತೆಗಿಂತ ಮೇಲಕ್ಕೇರಿಸುವುದು. ಯೆಹೋವನ ಜನರು ಒಟ್ಟುಗಟ್ಟಳೆಯಲ್ಲಿ ಗಮನಾರ್ಹವಾದ ಭಕ್ತಿಯನ್ನು ಪ್ರದರ್ಶಿಸುತ್ತಾರೆ ನಿಶ್ಚಯ. ನಮ್ಮ ವ್ಯಕ್ತಿಪರ ಪಾಲು, ಆ ಸರಿಸಮಾನ ವೇಗವನ್ನು ಕಾಪಾಡಿಕೊಳ್ಳುವದೇ.
ದೇವರ ವಾಕ್ಯವನ್ನು ಹೃದಯದೊಳಗೆ ತಕ್ಕೊಳ್ಳುವುದು
11. ದೇವರ ವಾಕ್ಯದ ಸಂಬಂಧದಲ್ಲಿ ಯೆಹೆಜ್ಕೇಲನು ಯಾವ ಮಾದರಿಯನ್ನಿಟ್ಟನು?
11 ದೇವರ ವಾಕ್ಯವನ್ನು ತನ್ನ ಹೃದಯದೊಳಗೆ ತಕ್ಕೊಳ್ಳುವುದರಲ್ಲೂ ಯೆಹೆಜ್ಕೇಲನು ಒಳ್ಳೇ ಮಾದರಿಯಿಟ್ಟನು. ದೇವದತ್ತ ಉರುಳೆ ಅಥವಾ ಸುರುಳಿಯನ್ನು ತಿನ್ನುವಂತೆ ಅಪ್ಪಣೆಕೊಟ್ಟಾಗ, ಅವನದನ್ನು ತಿಂದನು. “ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು” ಅನ್ನುತ್ತಾನೆ ಯೆಹೆಜ್ಕೇಲನು. ಆ ಸುರುಳಿಯು “ಗೋಳು, ಮೂಲುಗು, ಮೊರೆ” ಗಳಿಂದ ತುಂಬಿದ್ದರೂ ಅದು ಯೆಹೆಜ್ಕೇಲನಿಗೆ ಸಿಹಿಯಾಗಿತ್ತು ಯಾಕಂದರೆ ಅವನು ಯೆಹೋವನನ್ನು ಪ್ರತಿನಿಧಿಸುವ ಗೌರವವನ್ನು ಗಣ್ಯಮಾಡಿದ್ದನು. ದೇವದತ್ತ ನೇಮಕವನ್ನು ಪೂರೈಸುವುದು ಆ ಪ್ರವಾದಿಗೆ ಒಂದು ಸಿಹಿಯಾದ ಅನುಭವವಾಗಿತ್ತು. ದೇವರು ಅವನಿಗೆ ಅಂದದ್ದು: “ನರಪುತ್ರನೇ, ನಾನು ನಿನಗೆ ನುಡಿಯುವ ಮಾತುಗಳನ್ನೆಲ್ಲಾ ಕಿವಿಯಿಂದ ಕೇಳಿ ಹೃದಯದಲ್ಲಿಟ್ಟುಕೋ.” (ಯೆಹೆಜ್ಕೇಲ 2:9–3:3, 10) ಆ ದರ್ಶನಗಳು ಯೆಹೆಜ್ಕೇಲನಿಗೆ ಯಾವುದರಲ್ಲಿ ಭಾಗವಹಿಸಲು ದೇವರು ಅನುಮತಿಸಿದ್ದಾನೆಂಬದನ್ನು ಸ್ಪಷ್ಟವಾಗಿಗಿ ಅರಿಯುವಂತೆ ಮಾಡಿದವು ಮತ್ತು ಯೆಹೋವನೊಂದಿಗಿನ ಅವನ ಸಂಬಂಧವನ್ನು ಬಲಗೊಳಿಸಿದವು.
12. ತನ್ನ ಪ್ರವಾದನಾ ಸೇವೆಯ ಸುಮಾರು ಎರಡು ದಶಕಕ್ಕಿಂತ ಹೆಚ್ಚಿನ ಸಮಯದಲ್ಲಿ ಯೆಹೆಜ್ಕೇಲನು ಏನು ಮಾಡಿದನು?
12 ಯೆಹೆಜ್ಕೇಲನಿಗೆ ದರ್ಶನಗಳೂ ಸಂದೇಶಗಳೂ ಕೊಡಲ್ಪಟ್ಟದ್ದು ಹಲವಾರು ಉದ್ದೇಶಗಳಿಗಾಗಿ ಮತ್ತು ಬೇರೆ ಬೇರೆ ಶ್ರೋತೃವೃಂದಕ್ಕಾಗಿ. ಅವನದನ್ನು ಕಿವಿಗೊಟ್ಟು ಕೇಳಬೇಕಾಗಿತ್ತು, ನುಡಿಯಬೇಕಾಗಿತ್ತು ಮತ್ತು ಹೇಳಿದಂತೆ ಕ್ರಿಯೆ ಗೈಯಬೇಕಿತ್ತು. ಅವನ ಪ್ರವಾದನಾ ಸೇವೆಯ ಸುಮಾರು 22 ವರ್ಷಗಳಲ್ಲಿ ಹೊಸ ಮಾಹಿತಿಗಳು ಮತ್ತು ಕಾರ್ಯವಿಧಾನಗಳು ಅವನಿಗೆ ಪ್ರಗತಿಪೂರ್ವಕವಾಗಿ ತಿಳಿಸಲ್ಪಟ್ಟವು. ಕೆಲವೊಮ್ಮೆ ಯೆಹೆಜ್ಕೇಲನು ವಿಶಿಷ್ಟ ಮಾತುಗಳು ಕೂಡಿದ್ದ ಸಂದೇಶವನ್ನು ತಿಳಿಸಿದನು. ಬೇರೆ ಸಮಯದಲ್ಲಿ, ಯೆರೂಸಲೇಮನ್ನು ಸೂಚಿಸಿದ ಒಂದು ಇಟ್ಟಿಗೆಯ ಮುಂದೆ ಮಲಗಿದಂಥಾ ಮೂಕಾಭಿನಯಗಳನ್ನು ಮಾಡಿದನು. (ಯೆಹೆಜ್ಕೇಲ 4:1-8) ವೈಯಕ್ತಿಕ ವಿಷಯಗಳಲ್ಲಿ ಅವನಿಟ್ಟ ಮಾದರಿಯಲ್ಲಿ, ಅವನ ಪತ್ನಿ ಸತ್ತಾಗ ತೋರಿಸಿದ ಪ್ರತಿಕ್ರಿಯೆಯಂಥವುಗಳಲ್ಲಿ ಸಹಾ, ಒಂದು ಸಂದೇಶವು ಅಡಕವಾಗಿತ್ತು. (ಯೆಹೆಜ್ಕೇಲ 24:15-19) ಪ್ರಚಲಿತ ಸ್ಥಿತಿಗನುಸಾರ ಅವನಿರಬೇಕಿತ್ತು, ಯಾವಾಗಲೂ ತಕ್ಕದಾದ್ದ ಸಂದೇಶವನ್ನು ನೀಡುತ್ತಾ, ತಕ್ಕ ಸಮಯದಲ್ಲಿ ತಕ್ಕದಾದ್ದ ಕ್ರಿಯೆ ಕೈಕೊಳ್ಳುತ್ತಾ ಇರಬೇಕಿತ್ತು. ಯೆಹೆಜ್ಕೇಲನು ಯೆಹೋವನೊಂದಿಗೆ ಅತ್ಯಂತ ಹತ್ತಿರದ, ಪ್ರಗತಿಪರ ಕೆಲಸದ ಸಂಬಂಧದಲ್ಲಿ ಕಟ್ಟಲ್ಪಟ್ಟಿದ್ದನು.
13. ಯೆಹೋವನೊಂದಿಗೆ ಒಂದು ಹತ್ತಿರದ ಸಂಬಂಧವನ್ನು ನಾವು ಹೇಗೆ ಕಟ್ಟಬಹುದು?
13 ತದ್ರೀತಿಯಲ್ಲಿ ಯೆಹೋವನೊಂದಿಗೆ ಆತನ ಜೊತೆಗೆಲಸದವರಾಗಿ ಒಂದು ಹತ್ತಿರದ ಸಂಬಂಧವನ್ನು ಕಾಪಾಡಲು, ನಾವು ದೇವರ ವಾಕ್ಯವನ್ನು ನಮ್ಮ ಹೃದಯದೊಳಗೆ ಇಡಬೇಕು. (1 ಕೊರಿಂಥ 3:9) ಈ ವಿಷಯದಲ್ಲಿ ದೇವರ ದೃಶ್ಯ ಸಂಸ್ಥೆಯೊಂದಿಗೆ ಸರಿಸಮವಾಗಿ ಚಲಿಸಲು, ಹೊತ್ತುಹೊತ್ತಿಗೆ ಒದಗಿಸಲ್ಪಡುವ ಆತ್ಮಿಕ ಆಹಾರದ ಪ್ರವಾಹದೊಂದಿಗೆ ಸಮವೇಗದಲ್ಲಿ ಸಾಗಬೇಕು. (ಮತ್ತಾ 24:45-47) “ಶುದ್ಧಭಾಷೆ”ಯು ಎಡೆಬಿಡದೆ ವಿಶಾಲಗೊಳ್ಳುತ್ತಾ ಇದೆ. (ಚೆಫನ್ಯ 3:9) ನಾವು ಸಮವೇಗದಲ್ಲಿ ಮುಂದರಿದರೆ ಮಾತ್ರವೇ ರಥಸವಾರನ ಮಾರ್ಗದರ್ಶನೆಗೆ ನಿಜವಾಗಿ ವಿಧೇಯರಾಗಲು ಶಕ್ತರಾಗುವೆವು.
14, 15. ದೇವರ ಸಂಸ್ಥೆಯಿಂದ ಇಡಲ್ಪಟ್ಟ ವೇಗಕ್ಕೆ ಸರಿಸಮವಾಗಿ ಮುಂದರಿಯಲು ಯಾವ ದಿನಚರಿಯು ಅವಶ್ಯವಾಗಿದೆ?
14 ಇದಕ್ಕಾಗಿ ನಮಗೆ ವೈಯಕ್ತಿಕ ಪ್ರಾರ್ಥನೆ, ಖಾಸಗಿ ಅಧ್ಯಯನ ಮತ್ತು ಸುವಾರ್ತೆಯ ಪವಿತ್ರ ಶುಶ್ರೂಷೆಯಲ್ಲಿ ಪಾಲುಗಾರಿಕೆಯು ಅತ್ಯಾವಶ್ಯಕ. (ರೋಮಾಪುರ 15:16) ದೇವರ ಸಂದೇಶವನ್ನೊಳಗೊಂಡ ಆ ಸುರುಳಿಯನ್ನು ತಿಂದದರ್ದಲ್ಲಿ ಯೆಹೆಜ್ಕೇಲನ ಮಾದರಿಯನ್ನು ನೆನಪಿಗೆ ತನ್ನಿರಿ. ಯೆಹೆಜ್ಕೇಲನು ಇಡೀ ಸುರುಳಿಯನ್ನು ಸೇವಿಸಿದನು, ಅದರ ಒಂದು ಅಂಶವನ್ನಲ್ಲ. ತನ್ನ ವ್ಯಕ್ತಿಪರ ರುಚಿಗೆ ಹೆಚ್ಚು ಹಿಡಿಸುವ ತುಣುಕುಗಳನ್ನು ಅವನು ಜೋಕೆಯಿಂದ ಹೆಕ್ಕಿ ಆರಿಸಲಿಲ್ಲ. ಅದೇ ರೀತಿ, ಬೈಬಲಿನ ಮತ್ತು ಕ್ರಿಸ್ತೀಯ ಸಾಹಿತ್ಯಗಳ ನಮ್ಮ ವೈಯಕ್ತಿಕ ಅಭ್ಯಾಸ, ಆತ್ಮಿಕ ಅಹಾರದ ಪ್ರವಾಹದೊಂದಿಗೆ ಸರಿಸಮ ವೇಗದಲ್ಲಿರುವಂತೆ ಕ್ರಮಪಡಿಸಲ್ಪಡಬೇಕು ಮತ್ತು ಆತ್ಮಿಕ ಮೇಜಲ್ಲಿ ಬಡಿಸಿರುವ ಎಲ್ಲದರಲ್ಲಿ, ಆಳವಾದ ಸತ್ಯಗಳಲ್ಲೂ, ನಾವು ಪಾಲುಗಾರರಾಗಬೇಕು.
15 ಗಟ್ಟಿಯಾದ ಆಹಾರದ ಅರ್ಥವನ್ನು ತಿಳಿಯಲು ನಾವು ಪ್ರಾರ್ಥನಾಪೂರ್ವಕವಾದ ಪ್ರಯತ್ನವನ್ನು ಮಾಡುತ್ತೇವೋ? ಸರಿಸಮ ವೇಗದಲ್ಲಿ ಇರಲು ನಮ್ಮ ಜ್ಞಾನ ಮತ್ತು ತಿಳುವಳಿಕೆಯು ಪ್ರಾಥಮಿಕ ಮಟ್ಟಕ್ಕಿಂತ ಹೆಚ್ಚಾಗಿರಬೇಕು. ನಾವು ಓದುವುದು: “ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲಿ ಅನುಭವವಿಲ್ಲದವನಾಗಿದ್ದಾನೆ. ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನದಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:13, 14) ಹೌದು, ಆತ್ಮಿಕ ಪ್ರಗತಿಯನ್ನು ಮಾಡುವುದು ದೇವರ ಸಂಸ್ಥೆಯೊಂದಿಗೆ ಸರಿಸಮ ವೇಗದಲ್ಲಿ ಮುಂದರಿಯುವುದರ ಪ್ರಾಮುಖ್ಯ ಆವಶ್ಯಕತೆಯಾಗಿದೆ.
ನಿರಾಸಕ್ತಿಯಿಂದಾಗಿ ಹಿಮ್ಮೆಟ್ಟದಿರು
16, 17. ಯೆಹೆಜ್ಕೇಲನು ನಿರಾಸಕ್ತಿ, ನಿಂದೆ, ಮತ್ತು ಪ್ರತಿಕ್ರಿಯೆಯಲ್ಲಿ ಕೊರತೆಯೊಂದಿಗೆ ಹೇಗೆ ವ್ಯವಹರಿಸಿದನು?
16 ನಿರಾಸಕ್ತಿಯಾಗಲಿ ನಿಂದೆಯಾಗಲಿ ತನ್ನನ್ನು ಹಿಮ್ಮೆಟ್ಟುವಂತೆ ಬಿಡದೆ ವಿಧೇಯನಾಗಿ ಮುಂದರಿದರಲ್ಲೂ ಯೆಹೆಜ್ಕೇಲನು ಒಳ್ಳೇ ಮಾದರಿಯನ್ನಿಟ್ಟಿರುವನು. ತದ್ರೀತಿ, ಶುದ್ಧ ಭಾಷೆಯ ವಿಕಾಸನದೊಂದಿಗೆ ಸಮಾನವೇಗದಲ್ಲಿರುವ ಮೂಲಕ ರಾಜಯೋಗ್ಯ ರಥಸವಾರನಿಂದ ತಕ್ಕೊಳ್ಳಲ್ಪಟ್ಟ ಮಾರ್ಗದರ್ಶನಕ್ಕೆ ನಾವು ಸರ್ವಮೇಳದಲ್ಲಿರುವೆವು. ಹೀಗೆ ನಾವು ಆತನ ಆಜೆಗ್ಞಳಿಗೆ ಪ್ರತಿಕ್ರಿಯೆ ತೋರಿಸಲು ಸನ್ನದ್ಧರಿರುವೆವು ಮತ್ತು ಯೆಹೋವನ ತೀರ್ಪಿನ ಸಂದೇಶವನ್ನು ಯಾರಿಗೆ ತಿಳಿಸುತ್ತೇವೋ ಅವರ ನಿರಾಸಕ್ತಿಗೆ ಮತ್ತು ನಿಂದೆಗಳಿಗೆ ಹಿಮ್ಮೆಟ್ಟದಂತೆ ಬಲಪಡಿಸಲ್ಪಡುವೆವು. ಕೆಲವು ಜನರು ದಪ್ಪತಲೆಯವರೂ, ಕಲ್ಲೆದೆಯವರೂ ಆಗಿದ್ದು ಕ್ರಿಯಾಶೀಲತೆಯಿಂದ ವಿರೋಧಿಸುವರು ಎಂದು ಯೆಹೆಜ್ಕೇಲನಿಗೆ ತಿಳಿಸಿದ ಹಾಗೆ ನಮಗೂ ಯೆಹೋವನು ಮುನ್ನೆಚ್ಚರಿಕೆ ಕೊಟ್ಟಿದ್ದಾನೆ. ಇತರರು ಕಿವಿಗೊಡಲಾರರು ಯಾಕೆಂದರೆ ಅವರು ಯೆಹೋವನಿಗೆ ಕಿವಿಗೊಡ ಬಯಸುವದಿಲ್ಲ. (ಯೆಹೆಜ್ಕೇಲ 3:7-9) ಇನ್ನಿತರರು, ಯೆಹೆಜ್ಕೇಲ 33:31, 32 ತಿಳಿಸುವಂತೆ, ಕಪಟಿಗಳಾಗಿದ್ದಾರೆ: “ಪ್ರಶ್ನೆಕೇಳುವ ಜನರಂತೆ ಅವರು ನಿನ್ನ ಬಳಿಗೆ ಬಂದು ನನ್ನ ಭಕ್ತರಾಗಿ ನಿನ್ನ ಮುಂದೆ ಕೂತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವದಿಲ್ಲ; ಬಾಯಿಂದ ಬಹು ಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೇನೋ ತಾವು ದೋಚಿಕೊಂಡದರ ಮೇಲೆ ಹೋಗುತ್ತದೆ. ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರ ಸ್ವರದಿಂದ ಹಾಡುವ ಪ್ರೇಮಗೀತೆಗೆ ಸಮಾನವಾಗಿದೆ. ನಿನ್ನ ಮಾತುಗಳನ್ನು ಕೇಳುತ್ತಾರೆ ಆದರೆ ಕೈಕೊಳ್ಳುವದಿಲ್ಲ.”
17 ಇದರ ಫಲಿತಾಂಶವೇನಾಗಲಿದೆ? 33ನೇ ವಚನವು ತಿಳಿಸುವುದು: “ಮತ್ತು ನೀನು ಮುಂತಿಳಿಸಿದ್ದು ಸಂಭವಿಸುವಾಗ—ಆಹಾ, ಸಂಭವಿಸಲೇ ಬೇಕು—ತಮ್ಮ ಮಧ್ಯದಲ್ಲಿದ್ದವನು ಪ್ರವಾದಿಯೇ ಎಂದು ಅವರಿಗೆ ನಿಶ್ಚಿತವಾಗುವದು.” ಪ್ರತಿವರ್ತನೆಯ ಕೊರತೆಯಿಂದಾಗಿ ಯೆಹೆಜ್ಕೇಲನು ಬಿಟ್ಟುಕೊಡಲಿಲ್ಲವೆಂಬದನ್ನು ಈ ಮಾತುಗಳು ಪ್ರಕಟಿಸುತ್ತವೆ. ಇತರರ ಔದಾಸೀನ್ಯತೆಯು ಅವನನ್ನು ಉದಾಸೀನನ್ನಾಗಿ ಮಾಡಲಿಲ್ಲ. ಜನರು ಕೇಳಿದರೂ ಕೇಳದಿದ್ದರೂ, ಅವನು ದೇವರಿಗೆ ವಿಧೇಯನಾದನು ಮತ್ತು ತನಗೆ ಕೊಡಲ್ಪಟ್ಟ ನೇಮಕವನ್ನು ನೆರವೇರಿಸಿದನು.
18. ನಿಮಗೆ ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?
18 ಯೆಹೋವನ ದೃಶ್ಯ ಸಂಸ್ಥೆಯು ಈಗ ಜನರೆಲ್ಲರೂ ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಬೇಕೆಂಬ ಘೋಷಣೆಯನ್ನು ಅತ್ಯಂತ ತೀವ್ರಗೊಳಿಸಿದೆ. ರಾಜ್ಯ ಸಂದೇಶವನ್ನು ಕೊಡುವ ಧೀರ ನಿಲುವನ್ನು ತಕ್ಕೊಂಡದ್ದಕ್ಕಾಗಿ, ನೈತಿಕ ಜೀವನ ಶೈಲಿಯನ್ನು ನಡಿಸುವುದಕ್ಕಾಗಿ ನೀವು ಟೀಕಿಸಲ್ಪಟ್ಟಲ್ಲಿ, ಬಿಟ್ಟುಕೊಡದೆ ಮುಂದರಿಸುವಿರೋ? ರಕ್ತವನ್ನು ತಕ್ಕೊಳ್ಳದ್ದಕ್ಕಾಗಿ, ರಾಷ್ಟ್ರೀಯ ಕುರುಹುಗಳನ್ನು ಆರಾಧಿಸದಕ್ಕಾಗಿ, ಲೋಕದ ಹಬ್ಬದಿನಗಳನ್ನು ಆಚರಿಸದಕ್ಕಾಗಿ ಒತ್ತಡಕ್ಕೆ ಗುರಿಯಾಗುವಾಗ ನೀವು ದೃಢವಾಗಿ ನಿಲ್ಲುತ್ತೀರೋ?—ಮತ್ತಾಯ 5:11, 12; 1 ಪೇತ್ರ 4:4, 5.
19. ಯೆಹೋವನ ದಿವ್ಯ ರಥದೊಂದಿಗೆ ನಾವು ಸರಿಸಮವಾಗಿ ಮುಂದೆ ಚಲಿಸುವುದಾದರೆ, ಮಾರ್ಗದರ್ಶನೆಯ ವಿಷಯದಲ್ಲಿ ನಾವೇನು ಮಾಡುವೆವು?
19 ಇದು ಒಂದು ಸುಲಭ ಜೀವನಕ್ರಮವಲ್ಲ, ಆದರೆ ಕೊನೆಯ ತನಕ ತಾಳುವವನು ರಕ್ಷಣೆ ಹೊಂದುವನು. (ಮತ್ತಾಯ 24:13) ಯೆಹೋವನ ಸಹಾಯದಿಂದ, ಲೋಕದ ಜನರು ನಮ್ಮನ್ನು ಅವರಂತೆ ಮಾಡುವದಕ್ಕೆ ಮತ್ತು ಹೀಗೆ ಯೆಹೋವನ ದಿವ್ಯ ರಥದಿಂದ ಸರಿಸಮವಾಗಿ ಮುಂದೆ ಚಲಿಸುವದರಿಂದ ತಪ್ಪುವಂತೆ ನಾವು ಬಿಟ್ಟುಕೊಡಲಾರೆವು. (ಯೆಹೆಜ್ಕೇಲ 2:8; ರೋಮಾಪುರ 12:21) ರಥದಂಥ ದಿವ್ಯದೂತ ಸಂಸ್ಥೆಯೊಂದಿಗೆ ನಾವು ಸರಿಸಮವಾಗಿ ಮುಂದರಿದರೆ, ದೇವರ ದೃಶ್ಯ ಸಂಸ್ಥೆಯ ಮೂಲಕವಾಗಿ ದೊರೆಯುವ ಮಾರ್ಗದರ್ಶನೆ ಮತ್ತು ಸೂಚನೆಗಳಿಗೆ ಒಡನೆಯೇ ಹೊಂದಿಕೆಯನ್ನು ತೋರಿಸುವೆವು. ನಮ್ಮ ನಂಬಿಕೆಗೆ ಬರುವ ಆಕ್ರಮಣಗಳನ್ನು ಎದುರಿಸಲು, ಜೀವದ ವಾಕ್ಯದ ಮೇಲಣ ನಮ್ಮ ಹಿಡಿತವನ್ನು ಬಿಗಿಯಾಗಿಡಲು ಮತ್ತು ಆ ದಿವ್ಯರಥದ ರಾಜಯೋಗ್ಯ ಸವಾರನಲ್ಲಿ ಕೇಂದ್ರಿತವಾದ ಆತ್ಮಿಕ ವಾಸ್ತವಿಕತೆಗಳ ಮೇಲೆ ನಮ್ಮ ನೆಟ್ಟ ದೃಷ್ಟಿಯನ್ನಿಡುವಂತೆ ನಮಗೇನು ಬೇಕೋ ಅದನ್ನು ಯೆಹೋವನು ಒದಗಿಸುತ್ತಾನೆ.
ಸರಿಸಮವಾಗಿ ಮುಂದರಿಯುವಂತೆ ಪ್ರೇರೇಪಣೆ
20. ಯೆಹೆಜ್ಕೇಲನಿಂದ ದಾಖಲೆಯಾದ ಯಾವ ಕೆಲವು ವಿಷಯಗಳು ನಮ್ಮನ್ನು ಸರಿಸಮವಾಗಿ ಮುಂದೆ ಚಲಿಸುವಂತೆ ಪ್ರೇರಿಸಬೇಕು?
20 ಯೆಹೆಜ್ಕೇಲನ ದರ್ಶನವು ನಮ್ಮನ್ನು ಸರಿಸಮವಾಗಿ ಮುಂದೆ ಚಲಿಸುವಂತೆ ಪ್ರೇರೇಪಿಸತಕ್ಕದ್ದು. ಅವನು ಇಸ್ರಾಯೇಲ್ಯರ ಮೇಲೆ ದೇವರ ತೀರ್ಪುಗಳನ್ನು ಘೋಷಿಸಿದನು ಮಾತ್ರವಲ್ಲ ಅವರ ಪುನಃಸ್ಥಾಪನೆಯ ಪ್ರವಾದನೆಗಳನ್ನೂ ದಾಖಲೆ ಮಾಡಿದನು. ನೇಮಿತಕಾಲದಲ್ಲಿ ಯೆಹೋವನ ಸಿಂಹಾಸನದ ಮೇಲೆ ಆಳಲು ನ್ಯಾಯಬದ್ಧ ಹಕ್ಕುಳ್ಳವನಾದಾತನ ಕಡೆಗೂ ಯೆಹೆಜ್ಕೇಲನು ಕೈ ತೋರಿಸಿದ್ದನು. (ಯೆಹೆಜ್ಕೇಲ 21:27) ಆ ರಾಜ ಸೇವಕನಾದ “ದಾವೀದನು” ದೇವಜನರನ್ನು ಪುನಃ ಒಟ್ಟುಗೂಡಿಸುವನು ಮತ್ತು ಅವರ ಕುರುಬನಾಗಿ ನಡಿಸುವನು. (ಯೆಹೆಜ್ಕೇಲ 34:23, 24) ಅವರು ಮಾಗೋಗದ ಗೋಗನಿಂದ ಆಕ್ರಮಿಸಲ್ಪಡುವದಾದರೂ, ದೇವರು ಅವರನ್ನು ಪಾರುಗೊಳಿಸುವನು ಮತ್ತು ಆತನ ಶತ್ರುಗಳು ನಾಶನದ ಕಡೆಗೆ ಮುಂದೊತ್ತುವಾಗಲೂ, ‘ಯೆಹೋವನನ್ನು ತಿಳಿಯವಂತೆ’ ನಿರ್ಬಂಧಿಸಲ್ಪಡುವರು. (ಯೆಹೆಜ್ಕೇಲ 38:8-12; 39:4, 7) ಆಗ ದೇವರ ಸೇವಕರು ಆತ್ಮಿಕ ಮಂದಿರವು ಒಳಗೂಡಿರುವ ಶುದ್ಧಾರಾಧನೆಯ ಒಂದು ವ್ಯವಸ್ಥೆಯಲ್ಲಿ ನಿರಂತರವಾದ ಜೀವನವನ್ನು ಆನಂದಿಸುವರು. ಪವಿತ್ರಾಲಯದಿಂದ ಪ್ರವಹಿಸುವ ಜೀವಜಲದ ತೊರೆಯು ಆಹಾರಕ್ಕೂ ವಾಸಿಗೂ ಮೂಲವಾಗಿರುವುದು ಮತ್ತು ದೇಶದ ಭಾಗಗಳನ್ನು ಅವರ ಆಶೀರ್ವಾದಕ್ಕಾಗಿ ಬಾಧ್ಯತೆಯಾಗಿ ಹಂಚಲಾಗುವದು.—ಯೆಹೆಜ್ಕೇಲ 40:2; 47:9, 12, 21.
21. ಯೆಹೋವನ ಆಧುನಿಕ-ದಿನದ ಸಾಕ್ಷಿಗಳ ಪಾತ್ರವು ಯೆಹೆಜ್ಕೇಲನಿಗಿಂತ ದೊಡ್ಡದಾಗಿರುವುದು ಹೇಗೆ?
21 ಆ ಪ್ರವಾದನೆಗಳನ್ನು ದಾಖಲೆ ಮಾಡಲು ಯೆಹೆಜ್ಕೇಲನು ಎಷ್ಟು ಸಂತಸಪಟ್ಟಿರಬೇಕು! ಆದರೂ, ಯೆಹೋವನ ಆಧುನಿಕ ಸಾಕ್ಷಿಗಳ ಪಾತ್ರವು ಅದಕ್ಕಿಂತಲೂ ದೊಡ್ಡದು. ಆ ಪ್ರವಾದನೆಗಳಲ್ಲಿ ಕೆಲವು ನೆರವೇರುತ್ತಾ ಇರುವ ಸಮಯದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ವಾಸ್ತವದಲ್ಲಿ ನಾವು ಕೆಲವು ಪ್ರವಾದನೆಗಳಲ್ಲಿ ಕ್ರಿಯಾಶೀಲ ಪಾಲಿಗರಾಗಿದ್ದೇವೆ. ನ್ಯಾಯಬದ್ಧ ಹಕ್ಕುಳ್ಳವನಾದ ಯೇಸುವೀಗ ಆಳುತ್ತಿದ್ದಾನೆ ಎಂಬ ನಿಶ್ಚಯತೆಯನ್ನು ನಾವು ನಮ್ಮ ಜೀವನ ಕ್ರಮದಿಂದ ವೈಯಕ್ತಿಕವಾಗಿ ತೋರಿಸುತ್ತೇವೋ? ಯೆಹೋವನು ಶೀಘ್ರದಲ್ಲೇ ತನ್ನನ್ನು ಪವಿತ್ರಪಡಿಸುವನು ಮತ್ತು ಆತನ ಸಂಸ್ಥೆಯೊಂದಿಗೆ ಸರಿಸಮವಾಗಿ ಚಲಿಸುವವರನ್ನು ತನ್ನ ಹೊಸ ಲೋಕದೊಳಗೆ ವಿಮೋಚಿಸುವನು ಎಂಬ ವೈಯಕ್ತಿಕ ಖಾತರಿ ನಿಮಗಿದೆಯೇ? (2 ಪೇತ್ರ 3:13) ಅಂಥ ನಿಶ್ಚಯತೆ ಮತ್ತು ಅದರೊಂದಿಗೆ ನಂಬಿಕೆಯ ಕ್ರಿಯೆಗಳು, ಯೆಹೋವನ ದಿವ್ಯ ರಥದೊಂದಿಗೆ ನಾವು ಖಂಡಿತವಾಗಿಯೂ ಸರಿಸಮವಾಗಿ ಮುಂದೆ ಚಲಿಸುತ್ತೇವೆಂಬದನ್ನು ಪ್ರದರ್ಶಿಸುವುದು.
ಸರಿಸಮವಾಗಿ ಚಲಿಸುತ್ತಾ ಇರ್ರಿ
22. ಒಂದು ಶುಭ್ರವಾದ ಆತ್ಮಿಕ ಹೊರನೋಟವನ್ನು ಕಾಪಾಡುವಂತೆ, ನಾವು ಅಪಕರ್ಷಣೆಗಳನ್ನು ವರ್ಜಿಸಲು ಏನು ಮಾಡಬಹುದು?
22 ‘ನೇಗಿಲಿನ ಮೇಲೆ ಕೈಯನ್ನು ಹಾಕಿದ’ದವರಾದ ನಾವು, ಈ ಲೋಕವು ನೀಡುವಂಥ ಯಾವುದೇ ವಿಷಯಕ್ಕಾಗಿ ಹಂಬಲಿಸುತ್ತಾ ಹಿಂದಕ್ಕೆ ನೋಡಬಾರದು. (ಲೂಕ 9:62; 17:32; ತೀತ 2:11-13) ಆದುದರಿಂದ, ಭೂಮಿಯ ಮೇಲೆ ನಿಕ್ಷೇಪವನ್ನು ಕೂಡಿಡುವ ಯಾವುದೇ ಪ್ರವೃತ್ತಿಯನ್ನು ನಾವು ನಿಗ್ರಹಿಸೋಣ ಮತ್ತು ನಮ್ಮ ಕಣ್ಣುಗಳನ್ನು ರಾಜ್ಯದ ಮೇಲೆಯೇ ಕೇಂದ್ರೀಕರಿಸಿಟ್ಟು, ಸರಳವಾಗಿಡೋಣ. (ಮತ್ತಾಯ 6:19-22, 33) ನಮ್ಮ ಜೀವಿತಗಳನ್ನು ಸಾಮಾನ್ಯವಾಗಿಟ್ಟರೆ ಮತ್ತು ಸಾಧ್ಯವಾದಾಗಲ್ಲೆಲ್ಲಾ ಐಹಿಕ ಹೊರೆಗಳನ್ನು ಹಗುರ ಮಾಡುವದಾದರೆ, ಯೆಹೋವನ ಸಂಸ್ಥೆಯೊಂದಿಗೆ ಸರಿಸಮವಾಗಿ ಮುಂದೆ ಚಲಿಸಲು ನಮಗೆ ಸಹಾಯವಾಗುವುದು. (ಇಬ್ರಿಯ 12:1-3) ಅಪಕರ್ಷಣೆಗಳು ಆ ದಿವ್ಯರಥದೆಡೆಗೆ ಮತ್ತು ರಥಸವಾರನೆಡೆಗೆ ನಮ್ಮ ನೋಟವನ್ನು ಮಂದಗೊಳಿಸಬಲ್ಲವು. ಆದರೆ ದೇವರ ಸಹಾಯದಿಂದ ನಾವು, ಯೆಹೆಜ್ಕೇಲನಂತೆ, ಒಂದು ಶುಭ್ರವಾದ ಆತ್ಮಿಕ ಹೊರನೋಟವನ್ನು ಕಾಪಾಡಿಕೊಳ್ಳಬಲ್ಲೆವು.
23. ಹೊಸಬರ ಪರವಾಗಿ ನಂಬಿಗಸ್ತ ಸಾಕ್ಷಿಗಳು ಏನನ್ನು ಮಾಡುವ ಅಗತ್ಯವಿದೆ?
23 ಯೆಹೋವನ ಸಾಕ್ಷಿಗಳಾದ ನಮ್ಮ ಜವಾಬ್ದಾರಿಕೆಯ ಒಂದು ಭಾಗವು, ಹೊಸಬರಾದ ಅನೇಕರಿಗೆ ದೇವರ ದಿವ್ಯ ರಥದೊಂದಿಗೆ ಸರಿಸಮಾನವಾಗಿ ಮುಂದರಿಯುವಂತೆ ಸಹಾಯ ಮಾಡುವುದಾಗಿದೆ. 1990ರಲ್ಲಿ, ಸುಮಾರು 1,00,00,000 ಜನರು ಯೇಸು ಕ್ರಿಸ್ತನ ಮರಣದ ಸ್ಮಾರಕಕ್ಕೆ ಹಾಜರಾದರು. ಇವರಲ್ಲಿ ಅನೇಕರು ಕೆಲವು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರಬಹುದಾದರೂ, ಯೆಹೋವನ ದೃಶ್ಯ ಸಂಸ್ಥೆಯೊಂದಿಗೆ ಪ್ರಗತಿ ಮಾಡುವ ಪ್ರಾಮುಖ್ಯತೆಯನ್ನು ಕಾಣುವ ಅಗತ್ಯ ಅವರಿಗಿದೆ. ನಂಬಿಗಸ್ತ ಸಾಕ್ಷಿಗಳೋಪಾದಿ, ನಾವು ತೋರಿಸುವ ಹುರುಪಿನಿಂದ ಮತ್ತು ಕೊಡುವ ಪ್ರೋತ್ಸಾಹನೆಯಿಂದ ಅವರಿಗೆ ಸಹಾಯಮಾಡಬಲ್ಲೆವು.
24. ಈ ಪರಮಾವಧಿಯ ಸಮಯಗಳಲ್ಲಿ ನಾವೇನನ್ನು ಮಾಡುವವರಾಗಬೇಕು?
24 ಇವು ಪರಮಾವಧಿಯ ಸಮಯವಾಗಿವೆ. ಆ ದಿವ್ಯ ರಥವು ನಮ್ಮ ಮುಂದೆ ನಿಂತಿರುವುದನ್ನು ನಂಬಿಕೆಯ ನೇತ್ರಗಳಿಂದ ನಾವು ನೋಡಿದ್ದೇವೆ. ರಾಜಯೋಗ್ಯ ರಥ ಸವಾರನು, ಜನಾಂಗಗಳಿಗೆ ಸಾರುವ ಒಂದು ನೇಮಕವನ್ನು ತನ್ನ ದೃಶ್ಯ ಸಂಸ್ಥೆಗೆ ಕೊಟ್ಟಿರುತ್ತಾನೆ ಯಾಕಂದರೆ ಆ ಮೂಲಕ ಯೆಹೋವನು ಯಾರೆಂದು ಜನರಿಗೆ ಕೊನೆಗೆ ತಿಳಿಯುವಂತೆಯೇ. (ಯೆಹೆಜ್ಕೇಲ 39:7) ಆದುದರಿಂದ ಯೆಹೋವನ ದಿವ್ಯ ರಥದೊಂದಿಗೆ ಸರಿಸಮವಾಗಿ ಮುಂದೆ ಚಲಿಸುವ ಮೂಲಕ, ದೇವರ ಪರಮಾಧಿಕಾರದ ಸಮರ್ಥನೆಯಲ್ಲಿ ಮತ್ತು ಆತನ ಪವಿತ್ರ ನಾಮದ ಪವಿತ್ರೀಕರಣದಲ್ಲಿ ಭಾಗವಹಿಸುವದಕ್ಕೆ ಈ ಮಹಾ ಸುಸಂದರ್ಭದ ಸದುಪಯೋಗವನ್ನು ಮಾಡಿರಿ. (w91 3/15)
ಹೇಗೆ ಉತ್ತರಿಸುವಿರಿ?
◻ ಅವನ ನೇಮಕದ ವಿಷಯದಲ್ಲಾದರೋ ಯೆಹೆಜ್ಕೇಲನು ಯಾವ ಮಾದರಿಯನ್ನಿಟ್ಟನು?
◻ ದೇವರ ಸಂಸ್ಥೆಯೊಂದಿಗೆ ಸರಿಸಮವಾಗಿ ಮುಂದೆ ಚಲಿಸುವುದು ಎಂದರೇನು?
◻ ಯೆಹೋವನ ವಾಕ್ಯವನ್ನು ಯೆಹೆಜ್ಕೇಲನು ಹೇಗೆ ವೀಕ್ಷಿಸಿದನು?
◻ ನಿರಾಸಕ್ತಿಗಳೊಂದಿಗೆ ವ್ಯವಹರಿಸುವಲ್ಲಿ ಯೆಹೆಜ್ಕೇಲನ ಮಾದರಿಯನ್ನು ನಾವು ಹೇಗೆ ಅನುಸರಿಸಬಹುದು?
◻ ಯೆಹೋವನ ದಿವ್ಯ ರಥದೊಂದಿಗೆ ಸರಿಸಮವಾಗಿ ಮುಂದೆ ಚಲಿಸಲು ಯೆಹೋವನ ಸಾಕ್ಷಿಗಳನ್ನು ಯಾವುದು ಪ್ರೇರಿಸಬೇಕು?
[ಪುಟ 25 ರಲ್ಲಿರುವ ಚಿತ್ರಗಳು]
ಯೆಹೋವನ ದಿವ್ಯ ರಥದೊಂದಿಗೆ ಸರಿಸಮ ವೇಗದಲ್ಲಿ ಚಲಿಸಲು ಏನು ಅವಶ್ಯವಿದೆ?
[ಪುಟ 26 ರಲ್ಲಿರುವ ಚಿತ್ರ]
ಯೆಹೆಜ್ಕೇಲನು ತನ್ನ ದೇವದತ್ತ ಸುಯೋಗಗಳನ್ನು ಗಣ್ಯ ಮಾಡಿದನು. ನೀವು ಮಾಡುತ್ತೀರೋ?