ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಡಿಸೆಂಬರ್‌ ಪು. 1-3
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಡಿಸೆಂಬರ್‌ 3-9
  • ಡಿಸೆಂಬರ್‌ 10-16
  • ಡಿಸೆಂಬರ್‌ 17-23
  • ಡಿಸೆಂಬರ್‌ 24-30
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಡಿಸೆಂಬರ್‌ ಪು. 1-3

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಡಿಸೆಂಬರ್‌ 3-9

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಅಕಾ 10:6​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಚರ್ಮಕಾರ ಸೀಮೋನ: ಚರ್ಮಕಾರ ಅಂದರೆ ಪ್ರಾಣಿಗಳ ಚರ್ಮದ ಕೆಲಸಗಾರ. ಚರ್ಮಕ್ಕೆ ಅಂಟಿಕೊಂಡಿರುವ ಯಾವುದೇ ಕೂದಲು, ಮಾಂಸ ಮತ್ತು ಕೊಬ್ಬನ್ನು ಸುಣ್ಣದ ದ್ರವವನ್ನು ಬಳಸಿ ತೆಗೆದು ಹಾಕುತ್ತಾನೆ. ಬಳಿಕ ಆ ಚರ್ಮವನ್ನು ತೀಕ್ಷ್ಣವಾದ ಮದ್ಯಪಾನದಿಂದ ಶುಚಿಗೊಳಿಸಿ ಚರ್ಮದ ಸಾಮಾನುಗಳನ್ನು ತಯಾರಿಸುತ್ತಾನೆ. ಹೀಗೆ ಚರ್ಮದ ವಸ್ತುಗಳನ್ನು ತಯಾರಿಸುವಾಗ ಕೆಟ್ಟವಾಸನೆ ಬರುತ್ತದೆ. ಶುಚಿಮಾಡಲು ತುಂಬ ನೀರು ಬೇಕು. ಅದಕ್ಕೇ ಸೀಮೋನನು ಸಮುದ್ರದ ಬಳಿ ಬಹುಶಃ ಯೊಪ್ಪದ ಸುತ್ತಮುತ್ತಲಿನ ಪ್ರದೇಶದಲ್ಲಿ ಜೀವಿಸಿದ್ದನೆಂದು ಕಾಣುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಪ್ರಾಣಿಗಳ ಹೆಣಗಳೊಂದಿಗೆ ಕೆಲಸ ಮಾಡುವವನು ವಿಧಿವತ್ತಾಗಿ ಅಶುದ್ಧನಾಗಿದ್ದನು. (ಯಾಜ 5:2; 11:39) ಈ ಕಾರಣದಿಂದ ಅನೇಕ ಯೆಹೂದ್ಯರು ಚರ್ಮಕಾರರನ್ನು ಕೀಳಾಗಿ ಕಾಣುತ್ತಿದ್ದರು, ಅವರೊಂದಿಗೆ ಉಳುಕೊಳ್ಳಲು ಹಿಂಜರಿಯುತ್ತಿದ್ದರು. ವಾಸ್ತವದಲ್ಲಿ, ಚರ್ಮಕಾರನ ಕೆಲಸ ಗೊಬ್ಬರ ಸಂಗ್ರಹಿಸುವವನ ಕೆಲಸಕ್ಕಿಂತ ಕೀಳೆಂದು ಟ್ಯಾಲ್ಮುಡ್‌ ಗ್ರಂಥವು ನಿರ್ಧರಿಸಿತ್ತು. ಆದರೂ ಈ ಪೂರ್ವಾಗ್ರಹಕ್ಕೆ ಪೇತ್ರ ಗಮನಕೊಡದೆ ಸೀಮೋನನ ಮನೆಯಲ್ಲಿ ಉಳುಕೊಳ್ಳುತ್ತಿದ್ದನು. ಈ ವಿಷಯದಲ್ಲಿ ಪೇತ್ರನು ತೋರಿಸಿದ ಬಿಚ್ಚುಮನಸ್ಸು ಮುಂದಕ್ಕೆ ಅವನಿಗೆ ದೊರೆತ ನೇಮಕಕ್ಕೆ ಅಂದರೆ ಒಬ್ಬ ಅನ್ಯನ ಮನೆಗೆ ಭೇಟಿಕೊಡುವ ನೇಮಕಕ್ಕೆ ಒಂದು ಆಸಕ್ತಿಕರ ದಾರಿಯನ್ನು ನೀಡಿತು. “ಚರ್ಮಕಾರ” (ಬಿರ್ಸಿಯಸ್‌) ಎಂಬುದರ ಗ್ರೀಕ್‌ ಪದ, ಸಿಮೋನನ ಮನೆತನದ ಹೆಸರನ್ನು ಸೂಚಿಸುತ್ತಿತ್ತು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ.

ಡಿಸೆಂಬರ್‌ 10-16

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಅಕಾ 13:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಪೌಲನೆಂದು ಕರೆಯಲ್ಪಡುವ ಸೌಲನು: ಇಲ್ಲಿಂದ ಸೌಲನನ್ನು ಪೌಲನೆಂದು ಕರೆಯಲಾಗುತ್ತದೆ. ಈ ಅಪೊಸ್ತಲನು ರೋಮನ್‌ ಪೌರತ್ವವುಳ್ಳ ಇಬ್ರಿಯನಾಗಿ ಹುಟ್ಟಿದನು. (ಅಕಾ 22:27, 28; ಫಿಲಿ 3:5) ಈ ಕಾರಣದಿಂದ ಅವನಿಗೆ ಬಾಲ್ಯದಿಂದಲೇ ಸೌಲನೆಂಬ ಇಬ್ರಿಯ ಹೆಸರು ಮತ್ತು ಪೌಲನೆಂಬ ರೋಮನ್‌ ಹೆಸರೂ ಇದ್ದಿರುವುದು ಸಂಭಾವ್ಯ. ಆ ಕಾಲದ ಯೆಹೂದ್ಯರಿಗೆ ಅದರಲ್ಲೂ ಇಸ್ರಾಯೇಲಿನ ಹೊರಗೆ ಜೀವಿಸುತ್ತಿದ್ದವರಿಗೆ ಎರಡು ಹೆಸರುಗಳಿರುತ್ತಿದದ್ದು ಹೊಸ ವಿಷಯವೇನಲ್ಲ. (ಅಕಾ 12:12; 13:1) ಪೌಲನ ಸಂಬಂಧಿಕರಲ್ಲಿ ಕೆಲವರಿಗೂ ರೋಮನ್‌ ಮತ್ತು ಗ್ರೀಕ್‌ ಹೆಸರುಗಳಿದ್ದವು. (ರೋಮ 16:7, 21) “ಅನ್ಯ ಜನಾಂಗಗಳಿಗೆ ಅಪೊಸ್ತಲನಾಗಿದ್ದ” ಪೌಲ ಯೆಹೂದ್ಯರಲ್ಲದವರಿಗೆ ಸಾರುವ ನೇಮಕ ಹೊಂದಿದ್ದನು. (ರೋಮ 11:13) ಹಾಗಾಗಿ ಜನ ತನ್ನ ರೋಮನ್‌ ಹೆಸರನ್ನು ಹೆಚ್ಚು ಸ್ವೀಕರಣೀಯವಾಗಿ ಕಾಣಬಹುದೆಂದು ನೆನಸಿ ಆ ಹೆಸನ್ನು ಬಳಸಲು ನಿರ್ಣಯಿಸಿದ್ದಿರಬೇಕು. (ಅಕಾ 9:15; ಗಲಾ 2:7, 8) ಸೆರ್ಗ್ಯ ಪೌಲನಿಗೆ ಗೌರವ ಸೂಚಿಸುವ ಸಲುವಾಗಿ ಪೌಲನು ತನ್ನ ರೋಮನ್‌ ಹೆಸರನ್ನು ಇಟ್ಟುಕೊಂಡಿರಬೇಕೆಂದು ಕೆಲವರು ಹೇಳುತ್ತಾರೆ. ಆದರೆ ಇದು ಅಸಂಭವನೀಯ, ಯಾಕೆಂದರೆ ಪೌಲನು ಸೈಪ್ರಸ್‌ನ್ನು ಬಿಟ್ಟು ಹೋದ ಮೇಲೆಯೂ ಆ ಹೆಸರನ್ನೇ ಉಳಿಸಿಕೊಂಡನು. ಇನ್ನು ಕೆಲವರು, ಅವನ ಇಬ್ರಿಯ ಹೆಸರಿನ ಗ್ರೀಕ್‌ ಉಚ್ಚಾರಣೆಯು ‘ದರ್ಪದಿಂದ ಮೆರೆದು ನಡೆಯುವಂಥ’ ಒಬ್ಬ ವ್ಯಕ್ತಿ (ಅಥವಾ ಪ್ರಾಣಿಯನ್ನು) ಸೂಚಿಸುವ ಒಂದು ಗ್ರೀಕ್‌ ಪದದ ಉಚ್ಛಾರಣೆಯಂತೆ ಕೇಳಿಸುತ್ತಿದುದರಿಂದ ಪೌಲನು ಆ ಹೆಸರನ್ನು ಉಪಯೋಗಿಸಲಿಲ್ಲ ಎಂದು ಹೇಳುತ್ತಾರೆ.—ಅಕಾ 7:58​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಪೌಲ: ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿ ಪೌಲೋಸ್‌ ಎಂಬ ಹೆಸರು, ಲ್ಯಾಟಿನ್‌ ಭಾಷೆಯ ಪೌಲುಸ್‌ ನಿಂದ ಬಂದ ಪದವಾಗಿದೆ. ಇದರ ಅರ್ಥ “ಚಿಕ್ಕ ಅಥವಾ ಸಣ್ಣ” ಎಂದಾಗಿದ್ದು, ಇದನ್ನು 157 ಬಾರಿ ಅಪೊಸ್ತಲ ಪೌಲನಿಗೆ ಮತ್ತು ಒಂದು ಸಲ ಪ್ರಾಂತ್ಯಾಧಿಕಾರಿ ಸರ್ಗ್ಯ ಪೌಲನಿಗೆ ಬಳಸಲಾಗಿದೆ.—ಅಕಾ 13:7.

ಡಿಸೆಂಬರ್‌ 17-23

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಅಕಾ 16:37​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ರೋಮನರಾದ ನಮ್ಮನ್ನು: ಅಂದರೆ ರೋಮನ್‌ ನಾಗರಿಕರಾದ ನಮ್ಮನ್ನು. ಪೌಲ ಮತ್ತು ಸೀಲರು ಸಹ ರೋಮನ್‌ ನಾಗರಿಕರಾಗಿದ್ದರು. ರೋಮನ್‌ ನಾಗರಿಕರನ್ನು ಯಾವಾಗಲೂ ಸರಿಯಾದ ವಿಧದಲ್ಲಿ ನ್ಯಾಯವಿಚಾರಣೆ ಮಾಡಬೇಕಿತ್ತು. ರೋಮನ್‌ ಕಾಯಿದೆಗನುಸಾರ ತಪ್ಪಿತಸ್ಥನೆಂದು ನಿರ್ಣಯವಾಗದ ಹೊರತು ಅವನನ್ನು ಬಹಿರಂಗವಾಗಿ ಶಿಕ್ಷಿಸುವಂತಿರಲಿಲ್ಲ. ರೋಮನ್‌ ನಾಗರಿಕನಿಗೆ ಸಾಮ್ರಾಜ್ಯದಲ್ಲಿ ಎಲ್ಲಿ ಹೋದರೂ ಕೆಲವು ನಿರ್ದಿಷ್ಟ ಹಕ್ಕುಗಳು ಮತ್ತು ಸೌಲಭ್ಯಗಳು ಸಿಗುತ್ತಿದ್ದವು. ಅವನು ಅಲ್ಲಿನ ನಗರಗಳ ಕಾನೂನಿಗಲ್ಲ, ಬದಲಿಗೆ ರೋಮನ್‌ ಕಾನೂನಿಗೆ ಅಧೀನನಾಗಿದ್ದನು. ತಪ್ಪು ಹೊರಿಸಲ್ಪಟ್ಟಾಗ ಸ್ಥಳೀಯ ಕಾನೂನಿಗನುಸಾರ ವಿಚಾರಣೆಗೆ ಒಳಪಡಲು ಒಪ್ಪಬಹುದಾದರೂ ಬೇಕಾದರೆ ತನ್ನ ವಿಚಾರಣೆಯನ್ನು ರೋಮನ್‌ ನ್ಯಾಯಾಲಯದಲ್ಲಿ ನಡೆಸಬೇಕೆಂದು ಕೇಳುವ ಹಕ್ಕನ್ನು ಪಡೆದಿರುತ್ತಿದ್ದರು. ಮರಣ ದಂಡನೆಯ ಶಿಕ್ಷೆ ವಿಧಿಸಲ್ಪಟ್ಟಾಗ ಆರೋಪಿ ಚಕ್ರವರ್ತಿಗೆ ಅಪೀಲು ಮಾಡುವ ಹಕ್ಕನ್ನೂ ಪಡೆದಿದ್ದನು. ಅಪೊಸ್ತಲ ಪೌಲನು ರೋಮನ್‌ ಸಾಮ್ರಾಜ್ಯದಲ್ಲೆಲ್ಲ ವಿಸ್ತಾರವಾಗಿ ಸುವಾರ್ತೆ ಸಾರಿದನು. ಬೈಬಲಲ್ಲಿ ದಾಖಲೆಯಾದ ಮೂರು ಸಂದರ್ಭಗಳಲ್ಲಿ, ರೋಮನ್‌ ನಾಗರಿಕನಾಗಿ ತನ್ನ ಹಕ್ಕನ್ನು ಬಳಸಿದನು. ಮೊದಲನೆಯದನ್ನು ಫಿಲಿಪ್ಪಿಯಲ್ಲಿ ಫಿಲಿಪ್ಪಿಯ ನ್ಯಾಯಾಧೀಶರುಗಳು ಅವನಿಗೆ ಹೊಡಿಸಿದಾಗ ನಡೆಯಿತು. ಅವರು ತನಗೆ ಹೊಡಿಸಿ ತನ್ನ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಅವನಂದನು. ಬೇರೆ ಎರಡು ಸಂದರ್ಭಗಳ ಬಗ್ಗೆ ಅಕಾ 22:25; 25:11​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಡಿಸೆಂಬರ್‌ 24-30

ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 17-18

“ಅಪೊಸ್ತಲ ಪೌಲನಂತೆ ಸಾರಿರಿ ಮತ್ತು ಕಲಿಸಿರಿ”

ಅಕಾ 17:2, 3​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತರ್ಕಿಸಿದನು: ಪೌಲನು ಅವರಿಗೆ ಸುವಾರ್ತೆಯನ್ನು ಬರೇ ಹೇಳಲಿಲ್ಲ, ತರ್ಕಿಸಿದನು. ಅಂದರೆ ಅದನ್ನು ವಿವರಿಸಿದನು ಮತ್ತು ಶಾಸ್ತ್ರವಚನಗಳಿಂದ ಪುರಾವೆಯನ್ನು ಕೊಟ್ಟನು. ಪ್ರೇರಿತ ಹೀಬ್ರೂ ಶಾಸ್ತ್ರವಚನಗಳ ಪುರಾವೆ ಕೊಟ್ಟು ವಿವರಿಸಿದನು. ಅವನು ಶಾಸ್ತ್ರವಚನಗಳನ್ನು ಬರೇ ಓದಲಿಲ್ಲ, ಓದಿ, ತರ್ಕಿಸಿದನು. ತನ್ನ ತರ್ಕಸರಣಿಯನ್ನು ತನ್ನ ಸಭಿಕರಿಗೆ ಅನ್ವಯಿಸಿ ಮಾತಾಡಿದನು. ತರ್ಕಿಸು ಎಂಬ ಪದದ ಗ್ರೀಕ್‌ ಕ್ರಿಯಾಪದ ಡಿಯಾಲಿಗೊಮಾಯ್‌ ಎಂಬ ಪದಕ್ಕೆ “ಮಾತಿನ ವಿನಿಮಯ ಮಾಡುವುದು; ಸಂಭಾಷಿಸುವುದು; ಚರ್ಚಿಸುವುದು” ಎಂಬರ್ಥವಿದೆ. ಜನರೊಂದಿಗೆ ಕೂತು ಪರಸ್ಪರ ಪ್ರತಿಕ್ರಿಯಿಸಿ ಮಾತಾಡುವುದನ್ನು ಇದು ಸೂಚಿಸುತ್ತದೆ. ಈ ಗ್ರೀಕ್‌ ಪದವನ್ನು ಅಕಾ 17:17; 18:4, 19; 19:8, 9; 20:7, 9​ರಲ್ಲಿಯೂ ಬಳಸಲಾಗಿದೆ.

ಆಧಾರಗಳಿಂದ ರುಜುಪಡಿಸಿದನು: ಈ ಗ್ರೀಕ್‌ ಪದದ ಅಕ್ಷರಾರ್ಥವು “ಪಕ್ಕದಲ್ಲಿ ಇರಿಸುವುದು (ಮಗ್ಗುಲಲ್ಲಿ ಇಡುವುದು)” ಎಂದಾಗಿದೆ. ಪೌಲನು ಇಬ್ರಿಯ ಶಾಸ್ತ್ರದ ಮೆಸ್ಸೀಯ ಸಂಬಂಧಿತ ಪ್ರವಾದನೆಗಳನ್ನು ಯೇಸುವಿನ ಜೀವಿತದ ಘಟನೆಗಳೊಂದಿಗೆ ಜಾಗರೂಕತೆಯಿಂದ ಸರಿಹೋಲಿಸಿ, ಆ ಪ್ರವಾದನೆಗಳನ್ನು ಯೇಸು ಹೇಗೆ ನೆರವೇರಿಸಿದನೆಂದು ರುಜುಪಡಿಸಿದ್ದನ್ನು ಇದು ಸೂಚಿಸಬಹುದು.

ಅಕಾ 17:17​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಪೇಟೆ: ಅಕ್ರೋಪೋಲಿಸ್‌ನ ವಾಯುವ್ಯ ದಿಕ್ಕಿನಲ್ಲಿರುವ ಅಥೆನ್ಸ್‌ ಪೇಟೆ (ಗ್ರೀಕ್‌, ಅಗೋರ) ಸುಮಾರು 5 ಹೆಕ್ಟೇರ್‌ (12 ಎಕರೆ) ಸ್ಥಳವನ್ನು ಆವರಿಸಿತ್ತು. ಅದು ಮಾರುವ-ಕೊಳ್ಳುವ ಸ್ಥಳ ಮಾತ್ರವೇ ಆಗಿರಲಿಲ್ಲ, ನಗರದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವೂ ಆಗಿತ್ತು. ಅಥೇನ್ಯರು ಈ ಸಾರ್ವಜನಿಕ ಚಟುವಟಿಕೆಗಳ ಕೇಂದ್ರದಲ್ಲಿ ಕೂಡಿಬಂದು ಬೌದ್ಧಿಕ ಚರ್ಚೆಗಳನ್ನು ನಡೆಸುವುದರಲ್ಲಿ ಸಂತೋಷಿಸುತ್ತಿದ್ದರು.

ಅಕಾ 17:22, 23​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅಜ್ಞಾತ ದೇವರಿಗೆ: ಅಗ್ನೊಸ್ಟೈಥಿಓಯ್‌ ಎಂಬ ಗ್ರೀಕ್‌ ಪದಗಳು ಅಥೆನ್ಸ್‌ನ ಒಂದು ಬಲಿಪೀಠದ ಮೇಲಿದ್ದ ಬರಹಗಳ ಭಾಗ. ಅಥೇನ್ಯರು ಅನೇಕ ದೇವಸ್ಥಾನ ಮತ್ತು ಬಲಿಪೀಠಗಳನ್ನು ಕಟ್ಟಿ ದೇವ-ದೇವತೆಗಳ ಮೇಲೆ ತಮಗಿದ್ದ ಭಯವನ್ನು ತೋರಿಸುತ್ತಿದ್ದರು. ಖ್ಯಾತಿ, ನಮ್ರತೆ, ಶಕ್ತಿ, ಮನಗಾಣಿಸುವಿಕೆ ಮತ್ತು ಕರುಣೆಗಳಂಥ ಅಗೋಚರ ವಿಷಯಗಳನ್ನೂ ದೇವತೆಗಳಂತೆ ಎಣಿಸಿ ಬಲಿಪೀಠಗಳನ್ನು ಕಟ್ಟುತ್ತಿದ್ದರು. ತಾವು ಯಾವುದಾದರೂ ದೇವರನ್ನು ಬಿಟ್ಟುಬಿಟ್ಟಿದ್ದರೆ ಅವನ ಕೋಪಕ್ಕೆ ಗುರಿಯಾಗುತ್ತೇವೆ ಎಂಬ ಭಯದಿಂದಲೇ ಪ್ರಾಯಶಃ ಅವರು ಒಬ್ಬ “ಅಜ್ಞಾತ ದೇವರಿಗೆ” ಸಹ ಒಂದು ಬಲಿಪೀಠವನ್ನು ಸಮರ್ಪಿಸಿದ್ದರು. ಇಂಥ ಬಲಿಪೀಠದ ಮೂಲಕ ಆ ಜನರು ತಾವು ತಿಳಿಯದೆ ಇದ್ದ ಒಬ್ಬ ದೇವರು ಇದ್ದಾನೆ ಎಂದು ಒಪ್ಪಿಕೊಂಡರು. ಪೌಲನು ಆ ಬಲಿಪೀಠವನ್ನು ತನ್ನ ಸಾರುವಿಕೆಗೆ ಆಧಾರವಾಗಿ ಬಳಸಿ ತನ್ನ ಸಭಿಕರಿಗೆ ಜಾಣ್ಮೆಯಿಂದ ಸತ್ಯದೇವರ ಪರಿಚಯವನ್ನು ಮಾಡಿಸಿದನು. ಅದುವರೆಗೆ ಆ ದೇವರು ಅವರಿಗೆ ಅಜ್ಞಾತನಾಗಿದ್ದನು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಅಕಾ 18:21​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಯೆಹೋವನ ಚಿತ್ತವಿರುವುದಾದರೆ: ಯಾವುದೇ ವಿಷಯವನ್ನು ಮಾಡುವಾಗ ಅಥವಾ ಮಾಡಲು ಯೋಜಿಸುವಾಗ ದೇವರ ಚಿತ್ತವನ್ನು ಮನಸ್ಸಿಗೆ ತಂದುಕೊಳ್ಳಬೇಕೆಂದು ಈ ಹೇಳಿಕೆ ಒತ್ತಿಹೇಳುತ್ತದೆ. ಅಪೊಸ್ತಲ ಪೌಲನು ಈ ಮೂಲ ಸೂತ್ರವನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡನು. (1ಕೊರಿಂ 4:19; 16:7; ಇಬ್ರಿ 6:3) ಶಿಷ್ಯ ಯಾಕೋಬನು ಸಹ ತನ್ನ ವಾಚಕರನ್ನು ಹೀಗೆ ಪೋತ್ಸಾಹಿಸಿದನು: “ಯೆಹೋವನ ಚಿತ್ತವಾದರೆ ನಾವು ಬದುಕಿ ಇದನ್ನಾಗಲಿ ಅದನ್ನಾಗಲಿ ಮಾಡುವೆವು.” (ಯಾಕೋ 4:15) ಇಂಥ ಮಾತುಗಳು ಕೇವಲ ಟೊಳ್ಳು ಹೇಳಿಕೆಗಳಾಗಿರಬಾರದು. “ಯೆಹೋವನ ಚಿತ್ತವಾದರೆ” ಎಂದು ಯಾರಾದರೂ ಹೇಳುವುದಾದರೆ ಅವನು ಪ್ರಾಮಾಣಿಕತೆಯಿಂದ ಯೆಹೋವನ ಚಿತ್ತಕ್ಕನುಸಾರ ಕಾರ್ಯ ನಡಿಸಬೇಕು. ಈ ಮಾತನ್ನು ಯಾವಾಗಲೂ ಕೇಳಿಸುವಂತೆ ಹೊರಗೆ ಗಟ್ಟಿಯಾಗಿ ಹೇಳುವ ಅವಶ್ಯವಿಲ್ಲ. ಇದನ್ನು ಹೆಚ್ಚಾಗಿ ಹೃದಯದಲ್ಲಿ ಮಾತ್ರ ಹೇಳಲಾಗುತ್ತದೆ.—ಅಕಾ 21:14; 1ಕೊರಿಂ 4:19; ಯಾಕೋ 4:15 ಮತ್ತು App. C. ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ