ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಜನವರಿ 7-13
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಅಕಾ 22:16ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಅವನ ಹೆಸರನ್ನು ಹೇಳಿಕೊಳ್ಳುವ ಮೂಲಕ ನಿನ್ನ ಪಾಪಗಳನ್ನು ತೊಳೆದುಕೊ: ಅಥವಾ “ನಿನ್ನ ಪಾಪಗಳನ್ನು ತೊಳೆದುಕೊ ಮತ್ತು ಅವನ ಹೆಸರನ್ನು ಹೇಳಿಕೊ.” ದೀಕ್ಷಾಸ್ನಾನದ ನೀರಿನಿಂದ ಒಬ್ಬನು ತನ್ನ ಪಾಪಗಳನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಯೇಸುವಿನ ಹೆಸರನ್ನು ಹೇಳಿಕೊಳ್ಳುವ ಮೂಲಕ ಪಾಪಗಳನ್ನು ತೊಳೆದುಕೊಳ್ಳಬೇಕು. ಅದರರ್ಥ ಯೇಸುವಿನ ಮೇಲೆ ನಂಬಿಕೆ ಇಡಬೇಕು ಮತ್ತು ಆ ನಂಬಿಕೆಯನ್ನು ಕ್ರೈಸ್ತ ಚಟುವಟಿಕೆಗಳಲ್ಲಿ ತೋರಿಸಬೇಕು.—ಅಕಾ 10:43; ಯಾಕೊ 2:14, 18.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
w10 2/1 ಪುಟ 13 ಪ್ಯಾರ 2ರಿಂದ ಪುಟ 14 ಪ್ಯಾರ 2
ಕ್ರೈಸ್ತರು ಸಬ್ಬತ್ತನ್ನು ಆಚರಿಸಬೇಕಾ?
ಕ್ರಿಸ್ತನು ಧರ್ಮಶಾಸ್ತ್ರವನ್ನು ನೆರವೇರಿಸಿದನು ಅಂದಮೇಲೆ ಕ್ರೈಸ್ತರು ಸಬ್ಬತ್ತನ್ನು ಆಚರಿಸಬೇಕಾ? ಅಪೊಸ್ತಲ ಪೌಲನು ದೇವರಿಂದ ಪ್ರೇರಿತನಾಗಿ ಹೀಗೆ ಉತ್ತರಿಸಿದ್ದಾನೆ: “ಆದುದರಿಂದ ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಅಥವಾ ಹಬ್ಬದ ವಿಷಯದಲ್ಲಿ ಅಥವಾ ಅಮಾವಾಸ್ಯೆಯನ್ನಾಗಲಿ ಸಬ್ಬತ್ತನ್ನಾಗಲಿ ಆಚರಿಸುವ ವಿಷಯದಲ್ಲಿ ಯಾವನೂ ನಿಮ್ಮನ್ನು ತೀರ್ಪುಮಾಡದಿರಲಿ. ಅವು ಬರಬೇಕಾಗಿರುವ ಸಂಗತಿಗಳ ಛಾಯೆಯಾಗಿವೆ; ಆದರೆ ನಿಜತ್ವವು ಕ್ರಿಸ್ತನಿಗೆ ಸೇರಿದ್ದಾಗಿದೆ.”—ಕೊಲೊಸ್ಸೆ 2:16, 17.
ಈ ಮಾತಿನಿಂದ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೋ ಅದರಲ್ಲಿ ಒಂದು ಗಮನಾರ್ಹ ಬದಲಾವಣೆಯಾಗಿರುವುದು ಗೊತ್ತಾಗುತ್ತದೆ. ಯಾಕೆ ಆ ಬದಲಾವಣೆ? ಯಾಕೆಂದರೆ ಕ್ರೈಸ್ತರು ಒಂದು ಹೊಸ ನಿಯಮದಡಿ ಇದ್ದಾರೆ. ಅದು ‘ಕ್ರಿಸ್ತನ ನಿಯಮವಾಗಿದೆ’. (ಗಲಾತ್ಯ 6:2) ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಸಿಕ್ಕಿದ ನಿಯಮ ಯೇಸುವಿನ ಮರಣದಿಂದ ಪೂರೈಸಲ್ಪಟ್ಟು ಅಷ್ಟಕ್ಕೇ ಕೊನೆಗೊಂಡಿತು. (ರೋಮನ್ನರಿಗೆ 10:4; ಎಫೆಸ 2:15) ಸಬ್ಬತ್ತನ್ನು ಆಚರಿಸುವ ಆಜ್ಞೆಯು ಕೂಡ ಕೊನೆಗೊಂಡಿತಾ? ಹೌದು. ಪೌಲನು ‘ಧರ್ಮಶಾಸ್ತ್ರದಿಂದ . . . ಮುಕ್ತರಾಗಿದ್ದೇವೆ’ ಎಂದು ಹೇಳುತ್ತಾ, ಮುಂದೆ ದಶಾಜ್ಞೆಗಳಲ್ಲಿ ಒಂದು ಆಜ್ಞೆಯನ್ನು ಉಲ್ಲೇಖಿಸುತ್ತಾನೆ. (ರೋಮನ್ನರಿಗೆ 7:6, 7) ದಶಾಜ್ಞೆಗಳೂ ಸೇರಿ ಇಡೀ ಧರ್ಮಶಾಸ್ತ್ರ ಕೊನೆಯಾಯಿತು. ಧರ್ಮಶಾಸ್ತ್ರದಲ್ಲಿ ಸಬ್ಬತ್ ನಿಯಮನೂ ಸೇರಿರುವುದರಿಂದ ದೇವರ ಸೇವಕರು ಸಬ್ಬತ್ತನ್ನು ಆಚರಿಸಬೇಕಾಗಿಲ್ಲ.
ಇಸ್ರಾಯೇಲ್ಯರ ಆರಾಧನಾ ರೀತಿ ಹೋಗಿ ಕ್ರೈಸ್ತರ ಆರಾಧನಾ ರೀತಿ ಬಂದದ್ದನ್ನು ಈ ರೀತಿ ದೃಷ್ಟಾಂತಿಸಬಹುದು: ಒಂದು ದೇಶ ತನ್ನ ಸಂವಿಧಾನವನ್ನು ಬದಲಾವಣೆ ಮಾಡಿಕೊಳ್ಳಬಹುದು. ಹೊಸ ಸಂವಿಧಾನವನ್ನು ಕಾನೂನುಬದ್ಧವಾಗಿ ಜಾರಿಗೊಳಿಸಿದ ನಂತರ ಹಳೆಯ ಸಂವಿಧಾನವನ್ನು ಇನ್ನು ಮುಂದೆ ಪಾಲಿಸುವ ಅಗತ್ಯವಿರಲ್ಲ. ಹೊಸ ಸಂವಿಧಾನದಲ್ಲಿರುವ ಕೆಲವು ನಿಯಮಗಳು ಹಳೆಯ ಸಂವಿಧಾನದಲ್ಲಿ ಇದ್ದಿರಬಹುದು, ಇನ್ನಿತರ ನಿಯಮಗಳು ಹೊಸದಾಗಿರಬಹುದು. ಆದುದರಿಂದ ಜನರು ಹೊಸ ಸಂವಿಧಾನದಲ್ಲಿ ಯಾವೆಲ್ಲಾ ನಿಯಮಗಳನ್ನು ಈಗ ಜಾರಿಗೊಳಿಸಲಾಗಿವೆ ಎಂದು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ, ಒಬ್ಬ ನಿಷ್ಠಾವಂತ ಪ್ರಜೆ ಹೊಸ ಸಂವಿಧಾನದಲ್ಲಿರುವ ನಿಯಮಗಳನ್ನು ಯಾವಾಗಿಂದ ಪಾಲಿಸಬೇಕು ಅನ್ನುವುದನ್ನು ತಿಳಿದುಕೊಳ್ಳಲು ಬಯಸುತ್ತಾನೆ.
ಅದೇ ರೀತಿ ಯೆಹೋವ ದೇವರು ಇಸ್ರಾಯೇಲ್ ಜನಾಂಗಕ್ಕೆ 600ಕ್ಕೂ ಹೆಚ್ಚು ನಿಯಮಗಳನ್ನು ಕೊಟ್ಟನು. ಇದರಲ್ಲಿ 10 ಪ್ರಾಮುಖ್ಯ ನಿಯಮಗಳಿದ್ದವು, ನೈತಿಕತೆ, ಯಜ್ಞಗಳು, ಆರೋಗ್ಯ ಮತ್ತು ಸಬ್ಬತ್ ಬಗ್ಗೆನೂ ನಿಯಮಗಳಿದ್ದವು. ಆದರೆ ಯೇಸು ತನ್ನ ಅಭಿಷಿಕ್ತ ಹಿಂಬಾಲಕರು ಹೊಸ “ಜನಾಂಗ” ಆಗುತ್ತಾರೆ ಎಂದು ಹೇಳಿದನು. (ಮತ್ತಾಯ 21:43) ಕ್ರಿಸ್ತ ಶಕ 33ರಿಂದ ಈ ಜನಾಂಗವು ಹೊಸ “ಸಂವಿಧಾನವನ್ನು” ಪಾಲಿಸಬೇಕಿತ್ತು. ಅದು ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸಬೇಕು ಎಂಬ ಎರಡು ಮುಖ್ಯವಾದ ನಿಯಮಗಳ ಮೇಲೆ ಆಧರಿತವಾಗಿತ್ತು. (ಮತ್ತಾಯ 22:36-40) ‘ಕ್ರಿಸ್ತನ ನಿಯಮದಲ್ಲಿರುವ’ ಕೆಲವು ನಿಯಮಗಳು ಧರ್ಮಶಾಸ್ತ್ರದಲ್ಲೂ ಇವೆ, ಇನ್ನು ಕೆಲವು ಹೊಸ ನಿಯಮಗಳಾಗಿವೆ. ಆದರೆ ಧರ್ಮಶಾಸ್ತ್ರದಲ್ಲಿದ್ದ ಕೆಲವು ನಿಯಮಗಳು ‘ಕ್ರಿಸ್ತನ ನಿಯಮದಲ್ಲಿ’ ಇಲ್ಲವೇ ಇಲ್ಲ. ಅಂಥ ಒಂದು ನಿಯಮವೇ ಸಬ್ಬತ್ತನ್ನು ಆಚರಿಸಬೇಕೆಂಬ ನಿಯಮ.
ಜನವರಿ 14-20
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಅಕಾ 23:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ನಾನೊಬ್ಬ ಫರಿಸಾಯನು: ಆ ಸಭಿಕರಲ್ಲಿ ಕೆಲವರಿಗೆ ಪೌಲನ ಪರಿಚಯವಿತ್ತು. (ಅಕಾ 22:5) ಆತನು ತನ್ನನ್ನು ಫರಿಸಾಯರ ಮಗನು ಎಂದು ಹೇಳಿಕೊಂಡಾಗ, ತಾನು ಫರಿಸಾಯರ ಕುಟುಂಬದಿಂದಲೇ ಬಂದವನು ಅಂತ ಹೇಳಿಕೊಳ್ಳುತ್ತಿದ್ದಾನೆಂದು ಸಭಿಕರು ಅರ್ಥಮಾಡಿಕೊಂಡಿರಬೇಕು. ಇಲ್ಲಿ ಅವನು ತನ್ನನ್ನು ತಪ್ಪಾಗಿ ಪರಿಚಯಿಸಿಕೊಳ್ಳುತ್ತಿದ್ದಾನೆ ಎಂದು ಅವರು ನೆನಸಲಿಲ್ಲ. ಯಾಕೆಂದರೆ ಈಗಾಗಲೇ ಅವನು ಹುರುಪಿನ ಕ್ರೈಸ್ತನಾಗಿದ್ದಾನೆ ಎಂದು ಹಿರೀಸಭೆಯ ಫರಿಸಾಯರಿಗೆ ಗೊತ್ತಿತ್ತು. ಆದರೆ ಈ ಸನ್ನಿವೇಶದಲ್ಲಿ ತನ್ನನ್ನು ಫರಿಸಾಯನೆಂದು ಅವನು ಹೇಳಿದ್ದು ಸೂಕ್ತವಾಗಿತ್ತು. ಪೌಲನು ತನ್ನನ್ನು ಸದ್ದುಕಾಯನೆಂದು ಹೇಳದೆ ಫರಿಸಾಯನು ಎಂದು ಹೇಳಿದ್ದಕ್ಕೆ ಕಾರಣ ಏನೆಂದರೆ ಪುನರುತ್ಥಾನದ ವಿಷಯದಲ್ಲಿ ಫರಿಸಾಯರಿಗೂ ಅವನಿಗೂ ಒಂದೇ ತರದ ನಂಬಿಕೆ ಇತ್ತು. ಈ ರೀತಿ ಅಲ್ಲಿದ್ದ ಫರಿಸಾಯರು ಒಪ್ಪುವಂಥ ವಿಷಯವನ್ನು ಹೇಳಿದನು. ಇಂಥ ಒಂದು ವಿವಾದಾತ್ಮಕ ವಿಷಯವನ್ನು ಅವನು ಪ್ರಸ್ತಾಪಿಸಿದ ಕಾರಣ ಹಿರೀಸಭೆಯ ಕೆಲವು ಸದಸ್ಯರು ಅವನ ವಾದವನ್ನು ಒಪ್ಪುತ್ತಾರೆ ಎಂಬ ನಿರೀಕ್ಷೆ ಅವನಿಗಿತ್ತು. ಅವನು ಅಂದುಕೊಂಡಂತೆಯೇ ಆಯಿತು. (ಅಕಾ 23:7-9) ನಂತರ ಅವನು ಅಗ್ರಿಪ್ಪ ರಾಜನ ಮುಂದೆ ವಾದಿಸುವಾಗಲೂ ತನ್ನ ಬಗ್ಗೆ ಹೇಳಿಕೊಂಡ ವಿಷಯ ಅಕಾ 23:6ರಲ್ಲಿರುವ ಮಾತಿನಂತೆಯೇ ಇದೆ. (ಅಕಾ 26:5) ನಂತರ ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಅವನು ರೋಮ್ನಿಂದ ಪತ್ರ ಬರೆದಾಗ ಪುನಃ ಇನ್ನೊಮ್ಮೆ ತಾನು ಫರಿಸಾಯ ಕುಟುಂಬದಿಂದ ಬಂದವನೆಂದು ಉಲ್ಲೇಖಿಸಿದನು. (ಫಿಲಿ 3:5) ಅಕಾ 15:5ರಲ್ಲಿ ಹಿಂದೆ ಫರಿಸಾಯರಾಗಿದ್ದ ಕ್ರೈಸ್ತರ ಬಗ್ಗೆ ಹೇಳಿರುವುದೂ ಗಮನಾರ್ಹ ವಿಷಯವಾಗಿದೆ.—ಅಕಾ 15:5ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ನೋಡಿ.
ಅಕಾ 24:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ದ್ರೂಸಿಲ್ಲ: ಇವಳು ಅಕಾ 12:1ರಲ್ಲಿ ತಿಳಿಸಿರುವ ಹೆರೋದನ ಅಂದರೆ 1ನೆಯ ಹೆರೋದ ಅಗ್ರಿಪ್ಪನ ಮೂರನೆಯ ಹಾಗೂ ಕಿರಿಯ ಮಗಳು. ಇವಳು ಕ್ರಿಸ್ತ ಶಕ 38ರಲ್ಲಿ ಹುಟ್ಟಿರಬಹುದು. ಇವಳು 2ನೆಯ ಅಗ್ರಿಪ್ಪ ಮತ್ತು ಬರ್ನಿಕೆಯ ತಂಗಿಯಾಗಿದ್ದಳು. (ಅಕಾ 25:13ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ಮತ್ತು ಪದಕೋಶದಲ್ಲಿ “ಹೆರೋದ” ನೋಡಿ.) ರಾಜ್ಯಪಾಲ ಫೇಲಿಕ್ಸನು ಅವಳ ಎರಡನೆಯ ಗಂಡ. ಅವಳು ಮೊದಲು ಇಮೆಸದ ಎಸಿಸಸ್ ಎಂಬ ಸಿರಿಯದ ರಾಜನನ್ನು ಮದುವೆಯಾಗಿದ್ದಳು. ಆದರೆ ಅವನಿಂದ ವಿಚ್ಛೇದನ ಪಡೆದ ನಂತರ ಸುಮಾರು ಕ್ರಿಸ್ತ ಶಕ 54ರಲ್ಲಿ ಫೇಲಿಕ್ಸನನ್ನು ಮದುವೆಯಾದಳು. ಆಗ ಅವಳಿಗೆ ಸುಮಾರು 16 ವರ್ಷ. ಪೌಲನು ಫೇಲಿಕ್ಸನ ಮುಂದೆ ನಿಂತು “ನೀತಿ, ಸ್ವನಿಯಂತ್ರಣ ಮತ್ತು ಬರಲಿರುವ ನ್ಯಾಯವಿಚಾರಣೆಯ ಬಗ್ಗೆ” ಮಾತನಾಡಿದಾಗ ಇವಳೂ ಅಲ್ಲಿದ್ದಿರಬಹುದು. (ಅಕಾ 24:25) ಫೇಲಿಕ್ಸನಿಗೆ ಬದಲಾಗಿ ಫೆಸ್ತನು ರಾಜ್ಯಪಾಲನ ಸ್ಥಾನಕ್ಕೆ ಬಂದನು. ಆದರೆ ಫೇಲಿಕ್ಸನು “ಯೆಹೂದ್ಯರ ಮೆಚ್ಚುಗೆಯನ್ನು ಪಡೆಯಲು ಬಯಸಿ” ಪೌಲನನ್ನು ಸೆರೆಯಲ್ಲೇ ಬಿಟ್ಟು ಹೋದನು. ಯುವತಿಯಾದ ತನ್ನ ಪತ್ನಿಯನ್ನು ಮೆಚ್ಚಿಸುವುದಕ್ಕಾಗಿ ಅವನು ಹಾಗೆ ಮಾಡಿದನೆಂದು ಕೆಲವರು ನೆನಸುತ್ತಾರೆ. ಯಾಕೆಂದರೆ ಅವಳು ಯೆಹೂದ್ಯಳಾಗಿದ್ದಳು.—ಅಕಾ 24:27.
ಜನವರಿ 21-27
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಅಕಾ 26:14ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಮುಳ್ಳುಗೋಲನ್ನು ಒದೆಯುತ್ತಿರುವುದು: ಪ್ರಾಣಿಗಳಿಂದ ಕೆಲಸ ಮಾಡಿಸಲು ಅವುಗಳಿಗೆ ಚುಚ್ಚಲು ಬಳಸುತ್ತಿದ್ದ ಒಂದು ಚೂಪಾದ ಕೋಲಿಗೆ ಮುಳ್ಳುಗೋಲು ಅನ್ನುತ್ತಾರೆ. (ನ್ಯಾಯ 3:31) “ಮುಳ್ಳುಗೋಲನ್ನು ಒದೆಯುವುದು” ಎಂಬ ಹೇಳಿಕೆ ಗ್ರೀಕ್ ಸಾಹಿತ್ಯದಲ್ಲಿರುವ ಒಂದು ನಾಣ್ಣುಡಿಯಾಗಿದೆ. ಒಂದು ಹಠಮಾರಿ ಹೋರಿ ಮುಳ್ಳುಗೋಲಿನ ತಿವಿತಕ್ಕೆ ಪ್ರತಿಭಟಿಸಿ ಆ ಚೂಪಾದ ಕೋಲಿಗೆ ತಿರುಗಿ ಒದೆಯುವುದನ್ನು ಅದು ಚಿತ್ರಿಸುತ್ತದೆ. ಇದರಿಂದ ನೋವಾಗುವುದು ಆ ಪ್ರಾಣಿಗೇ. ಕ್ರೈಸ್ತನಾಗುವ ಮುಂಚೆ ಸೌಲನ ವರ್ತನೆ ಕೂಡ ಅದೇ ರೀತಿ ಇತ್ತು. ಯೆಹೋವ ದೇವರ ಬೆಂಬಲವಿದ್ದ ಯೇಸುವಿನ ಹಿಂಬಾಲಕರ ವಿರುದ್ಧವಾಗಿ ಹೋರಾಡುತ್ತಾ ಪೌಲನು ತನ್ನ ಜೀವಕ್ಕೆ ತಾನೇ ಅಪಾಯ ತಂದುಕೊಳ್ಳುತ್ತಿದ್ದನು. (ಹೋಲಿಸಿ ಅಕಾ 5:38, 39; 1ತಿಮೊ 1:13, 14.) ಪ್ರಸಂ 12:11ರಲ್ಲಿ ತಿಳಿಸಲಾದ “ಮುಳ್ಳುಗೋಲುಗಳು” ಸಾಂಕೇತಿಕ ಅರ್ಥದಲ್ಲಿವೆ. ಇದನ್ನು ಒಬ್ಬ ವಿವೇಕಿಯ ಮಾತುಗಳಿಗೆ ಹೋಲಿಸಲಾಗಿದೆ. ಆ ಮಾತುಗಳಿಂದ ಪ್ರೇರಿತನಾದ ಒಬ್ಬ ವ್ಯಕ್ತಿ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ಮುಂದಾಗುತ್ತಾನೆ.
ಅಧ್ಯಯನ ಬೈಬಲಿನಲ್ಲಿರುವ ಪದಕೋಶ
ಮುಳ್ಳುಗೋಲು. ಚೂಪಾದ ಲೋಹದ ತುದಿಯಿರುವ ಉದ್ದವಾದ ಕೋಲು. ರೈತರು ಇದನ್ನು ಪ್ರಾಣಿಗಳಿಂದ ಕೆಲಸ ಮಾಡಿಸಲು ಬಳಸುತ್ತಿದ್ದರು. ಈ ಮುಳ್ಳುಗೋಲನ್ನು ಒಬ್ಬ ವಿವೇಕಿಯ ಮಾತುಗಳಿಗೆ ಹೋಲಿಸಲಾಗಿದೆ. ಆ ಮಾತುಗಳು ವಿವೇಕಯುತ ಬುದ್ಧಿವಾದವನ್ನು ಅನ್ವಯಿಸಲು ಕಿವಿಗೊಡುವವನಿಗೆ ಸಹಾಯ ಮಾಡುತ್ತವೆ. “ಮುಳ್ಳುಗೋಲನ್ನು ಒದೆಯುತ್ತಿರುವುದು” ಎಂಬ ನಾಣ್ಣುಡಿ ಒಂದು ಹಠಮಾರಿ ಹೋರಿ ಮುಳ್ಳುಗೋಲಿನ ತಿವಿತಕ್ಕೆ ಪ್ರತಿಭಟಿಸಿ ಆ ಚೂಪಾದ ಕೋಲಿಗೆ ತಿರುಗಿ ಒದೆಯುವ ಕ್ರಿಯೆಯಿಂದ ಬಂದಿದೆ. ಹೀಗೆ ಒದೆಯುವಾಗ ನೋವಾಗುವುದು ಆ ಪ್ರಾಣಿಗೇ.—ಅಕಾ 26:14; ನ್ಯಾಯ 3:31.
ಜನವರಿ 28—ಫೆಬ್ರವರಿ 3
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಅಕಾ 27:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ದೋಷಪರಿಹಾರಕ ದಿನದ ಉಪವಾಸ: ಅಥವಾ “ಶರತ್ಕಾಲದ ಉಪವಾಸ.” ಅಂದರೆ ಒಂದು ನಿರ್ದಿಷ್ಟವಾದ ಉಪವಾಸ. “ಉಪವಾಸ”ಕ್ಕಿರುವ ಗ್ರೀಕ್ ಪದವು ಮೋಶೆಯ ಧರ್ಮಶಾಸ್ತ್ರದಲ್ಲಿ ಆಜ್ಞಾಪಿಸಲಾದ ಒಂದೇ ಒಂದು ಉಪವಾಸಕ್ಕೆ ಸೂಚಿಸುತ್ತದೆ. ಅದು ಯಾವುದೆಂದರೆ ಇಸ್ರಾಯೇಲ್ಯರು ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ದೋಷಪರಿಹಾರಕ ದಿನದಂದು ಮಾಡುತ್ತಿದ್ದ ಉಪವಾಸ. ಇದನ್ನು ಯಾಮ್ ಕಿಪ್ಪರ್ ಎಂದೂ ಕರೆಯುತ್ತಾರೆ. (ಹೀಬ್ರು, ಯಾಮ್·ಹಕ್·ಕಿಪ್·ಪುರಿಮ್, “ಡೇ ಆಫ್ ದ ಕವರಿಂಗ್ಸ್”). (ಯಾಜ 16:29-31; 23:26-32; ಅರ 29:7; ಪದಕೋಶದಲ್ಲಿ “ದೋಷಪರಿಹಾರಕ ದಿನ” ನೋಡಿ.) ದೋಷಪರಿಹಾರಕ ದಿನದಲ್ಲಿ “ಪ್ರಾಣವನ್ನು ಕುಂದಿಸಿಕೊಳ್ಳಬೇಕು” ಎಂಬ ಮಾತಿನ ಅರ್ಥ ಆ ದಿನದಂದು ಉಪವಾಸವನ್ನೂ ಸೇರಿಸಿ ಇನ್ನೂ ಬೇರೆ ಬೇರೆ ವಿಧಗಳಲ್ಲಿ ಜನರು ತಮ್ಮನ್ನು ತಾವು ನಿರಾಕರಿಸಿಕೊಳ್ಳಬೇಕಿತ್ತು ಎಂದಾಗಿದೆ. (ಯಾಜ 16:29) ದೋಷಪರಿಹಾರಕ ದಿನದಂದು ಜನರು ತಮ್ಮನ್ನು ತಾವೇ ನಿರಾಕರಿಸಿಕೊಳ್ಳಲು ಮಾಡುತ್ತಿದ್ದ ಮುಖ್ಯವಾದ ಕ್ರಿಯೆ ಉಪವಾಸ ಮಾಡುವುದಾಗಿತ್ತು ಅನ್ನುವುದನ್ನು ಅಕಾ 27:9ರಲ್ಲಿ ಬಳಸಿರುವ “ಉಪವಾಸ” ಎಂಬ ಪದ ಬೆಂಬಲಿಸುತ್ತದೆ. ದೋಷಪರಿಹಾರಕ ದಿನದ ಉಪವಾಸ ಸೆಪ್ಟೆಂಬರ್ ಅಂತ್ಯದಲ್ಲಿ ಇಲ್ಲವೆ ಅಕ್ಟೋಬರ್ ಆರಂಭದಲ್ಲಿ ನಡೆಯುತ್ತಿತ್ತು.
ಅಕಾ 28:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಸ್ಯೂಸ್ ಪುತ್ರರು: ಗ್ರೀಕ್ ಮತ್ತು ರೋಮನ್ ಪುರಾಣಗಳಿಗನುಸಾರ, ಕ್ಯಾಸ್ಟರ್ ಮತ್ತು ಪಾಲಿಕ್ಸ್ ಎಂಬವರೇ “ಸ್ಯೂಸ್ ಪುತ್ರರು” (ಗ್ರೀಕ್ನಲ್ಲಿ ಡೀಯೋಸ್ಕುರಾಯ್) ಆಗಿದ್ದರು. ಇವರು ಸ್ಯೂಸ್ ದೇವ (ಜುಪಿಟರ್) ಮತ್ತು ಲೀಡ ಎಂಬ ಸ್ಪಾರ್ಟನ್ ರಾಣಿಯ ಅವಳಿ ಪುತ್ರರು. ಆದರೆ ಜನರು ಹೆಚ್ಚಾಗಿ ಅವರನ್ನು ಸಮುದ್ರದಲ್ಲಿ ಅಪಾಯಕ್ಕೊಳಗಾದ ನಾವಿಕರನ್ನು ಕಾಪಾಡುವ ರಕ್ಷಕರು ಎಂದು ಪರಿಗಣಿಸಿದರು. ಹಡಗಿನ ಈ ಚಿಹ್ನೆಯ ಬಗ್ಗೆ ಅಕಾ 28:11ರಲ್ಲಿ ಇರುವ ವಿವರದಿಂದ ಈ ವೃತ್ತಾಂತವನ್ನು ಬರೆದಿರುವುದು ಇದನ್ನು ಕಣ್ಣಾರೆಕಂಡ ಒಬ್ಬ ವ್ಯಕ್ತಿನೇ ಎಂದು ಗೊತ್ತಾಗುತ್ತದೆ.