ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 7/1 ಪು. 19-24
  • ‘ಮರಣವು ನಿವೃತ್ತಿಯಾಗುವದು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಮರಣವು ನಿವೃತ್ತಿಯಾಗುವದು’
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾವ ರೀತಿಯ ದೇಹ?
  • ಒಂದು ಭೌಮಿಕ ಪುನರುತ್ಥಾನವೊ?
  • ಯಾರು ಹಿಂದಿರುಗಿ ಬರುವರು?
  • ಕ್ರಮಬದ್ಧವಾದ ಪುನರುತ್ಥಾನ
  • ಪುನರುತ್ಥಾನದ ನಿರೀಕ್ಷೆಗೆ ಶಕ್ತಿಯಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • “ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ?”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • “ಸತ್ತವರು ಎಬ್ಬಿಸಲ್ಪಡುವರು”
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1998
w98 7/1 ಪು. 19-24

‘ಮರಣವು ನಿವೃತ್ತಿಯಾಗುವದು’

“ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.”—1 ಕೊರಿಂಥ 15:26.

1, 2. (ಎ) ಮೃತರಿಗಾಗಿ ಅಪೊಸ್ತಲ ಪೌಲನು ಯಾವ ನಿರೀಕ್ಷೆಯನ್ನು ಎತ್ತಿಹಿಡಿದನು? (ಬಿ) ಪುನರುತ್ಥಾನದ ಕುರಿತು ಯಾವ ಪ್ರಶ್ನೆಯನ್ನು ಪೌಲನು ಸಂಬೋಧಿಸಿದನು?

“ನಾನು ದೇಹದ ಪುನರುತ್ಥಾನದಲ್ಲಿ ಮತ್ತು ಅನಂತ ಜೀವನದಲ್ಲಿ . . . ನಂಬಿಕೆಯಿಡುತ್ತೇನೆ.” ಹೀಗೆಂದು ಅಪೊಸ್ತಲರ ವಿಶ್ವಾಸ ಪ್ರಮಾಣವು ಹೇಳುತ್ತದೆ. ಕ್ಯಾತೊಲಿಕರು ಹಾಗೂ ಪ್ರಾಟೆಸ್ಟಂಟರು ಸಹ ಅದನ್ನು ಕರ್ತವ್ಯಪ್ರಜ್ಞೆಯಿಂದ ಪುನರುಚ್ಚರಿಸುತ್ತಾರೆ. ಅವರ ನಂಬಿಕೆಗಳು, ಅಪೊಸ್ತಲರು ಎಂದಾದರೂ ನಂಬಿದ್ದ ವಿಷಯಕ್ಕೆ ಸಮಾನವಾಗಿರುವುದಕ್ಕಿಂತಲೂ ಗ್ರೀಕ್‌ ತತ್ವಜ್ಞಾನಕ್ಕೆ ಹೆಚ್ಚು ಅನುರೂಪವಾಗಿವೆ ಎಂಬುದನ್ನು ಅವರು ಗ್ರಹಿಸುವುದೇ ಇಲ್ಲ. ಆದರೆ ಅಪೊಸ್ತಲ ಪೌಲನು ಗ್ರೀಕ್‌ ತತ್ವಜ್ಞಾನವನ್ನು ತಿರಸ್ಕರಿಸಿದನು ಮತ್ತು ಅಮರ ಆತ್ಮದಲ್ಲಿ ನಂಬಿಕೆಯನ್ನಿಡಲಿಲ್ಲ. ಆದರೂ, ಭವಿಷ್ಯತ್ಕಾಲದ ಜೀವಿತದಲ್ಲಿ ಅವನು ದೃಢವಾಗಿ ನಂಬಿಕೆಯಿಟ್ಟನು ಮತ್ತು ಪ್ರೇರಣೆಯ ಕೆಳಗೆ ಬರೆದುದು: “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:26) ಅದು ಸಾಯುತ್ತಿರುವ ಮಾನವ ಕುಲಕ್ಕೆ ಏನನ್ನು ತಾನೇ ಅರ್ಥೈಸುತ್ತದೆ?

2 ಇದರ ಉತ್ತರಕ್ಕಾಗಿ ನಾವು 1 ಕೊರಿಂಥ, 15ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ, ಪುನರುತ್ಥಾನದ ಕುರಿತಾದ ಪೌಲನ ಚರ್ಚೆಗೆ ಹಿಂದಿರುಗೋಣ. ಆರಂಭದ ವಚನಗಳಲ್ಲಿ ಪೌಲನು, ಪುನರುತ್ಥಾನವನ್ನು ಕ್ರೈಸ್ತ ಸಿದ್ಧಾಂತದ ಅತ್ಯಾವಶ್ಯಕ ಭಾಗವಾಗಿ ನಿರೂಪಿಸಿದ್ದನ್ನು ನೀವು ಜ್ಞಾಪಿಸಿಕೊಳ್ಳಸಾಧ್ಯವಿದೆ. ಈಗ ಅವನು ನಿರ್ದಿಷ್ಟವಾದ ಪ್ರಶ್ನೆಯ ಕುರಿತು ಮಾತಾಡುತ್ತಾನೆ: “ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ, ಎಂಥ ದೇಹದಿಂದ ಬರುತ್ತಾರೆ ಎಂದು ಒಬ್ಬನು ಕೇಳಾನು.”—1 ಕೊರಿಂಥ 15:35.

ಯಾವ ರೀತಿಯ ದೇಹ?

3. ಕೆಲವರು ಪುನರುತ್ಥಾನವನ್ನು ಏಕೆ ತಿರಸ್ಕರಿಸಿದರು?

3 ಈ ಪ್ರಶ್ನೆಯನ್ನು ಎಬ್ಬಿಸುತ್ತಾ, ಪೌಲನು ಪ್ಲೇಟೋವಿನ ತತ್ವಜ್ಞಾನದ ಪ್ರಭಾವವನ್ನು ಪ್ರತಿರೋಧಿಸಲು ಉದ್ದೇಶಿಸಿದ್ದಿರಬಹುದು. ಮರಣದಲ್ಲಿ ದೇಹದಿಂದ ಪಾರಾಗಿ ಉಳಿಯುವ ಒಂದು ಅಮರ ಆತ್ಮ ಮನುಷ್ಯನಿಗೆ ಇದೆಯೆಂದು ಪ್ಲೇಟೋ ಕಲಿಸಿದನು. ಇಂತಹ ಒಂದು ವಿಚಾರದೊಂದಿಗೆ ಬೆಳೆದುಬಂದ ಜನರಿಗೆ, ಕ್ರೈಸ್ತ ಬೋಧನೆಯು ಅನಾವಶ್ಯಕವೆಂದು ತೋರಿದ್ದರಲ್ಲಿ ಸಂದೇಹವಿಲ್ಲ. ಮರಣದಿಂದ ಬದುಕಿ ಉಳಿಯುವ ಆತ್ಮವಿರುವುದಾದರೆ, ಪುನರುತ್ಥಾನದ ಆವಶ್ಯಕತೆಯಾದರೂ ಏಕಿದೆ? ಅಲ್ಲದೆ, ಪುನರುತ್ಥಾನವು ತರ್ಕಹೀನವಾಗಿ ತೋರಿರಬಹುದು. ದೇಹವು ಒಮ್ಮೆ ಮಣ್ಣಿನಲ್ಲಿ ಲೀನವಾದ ಮೇಲೆ, ಪುನರುತ್ಥಾನವು ಹೇಗೆ ಸಾಧ್ಯವಾದೀತು? ಬೈಬಲ್‌ ವ್ಯಾಖ್ಯಾನಕಾರ ಹೈನ್ರಿಕ್‌ ಮೇಯರ್‌ ಹೇಳುವುದೇನೆಂದರೆ, ಕೆಲವು ಕೊರಿಂಥದವರ ವಿರೋಧವು, “ಶರೀರದ ಪುನಸ್ಸ್ಥಾಪನೆಯು ಅಸಾಧ್ಯವೆಂಬ ತತ್ವಾತ್ಮಕ ಆಧಾರದ ಮೇಲೆ” ಬಹುಶಃ ಆಧರಿಸಿತ್ತು.

4, 5. (ಎ) ನಂಬಿಕೆಯಿಲ್ಲದವರ ಆಕ್ಷೇಪಣೆಗಳು ತರ್ಕಸಮ್ಮತವಾಗಿರಲಿಲ್ಲ ಏಕೆ? (ಬಿ) “ಬೀಜ”ದ ಕುರಿತಾದ ಪೌಲನ ದೃಷ್ಟಾಂತವನ್ನು ವಿವರಿಸಿರಿ. (ಸಿ) ಪುನರುತ್ಥಾನಹೊಂದಿದ ಅಭಿಷಿಕ್ತರಿಗೆ ದೇವರು ಯಾವ ರೀತಿಯ ದೇಹಗಳನ್ನು ಕೊಡುತ್ತಾನೆ?

4 ಪೌಲನು ಅವರ ತರ್ಕಶೂನ್ಯತೆಯನ್ನು ಬಹಿರಂಗಪಡಿಸುತ್ತಾನೆ: “ಮೂಢನು ನೀನು; ನೀವು ಬಿತ್ತುವ ಬೀಜವು ಸಾಯದಿದ್ದರೆ, ಜೀವಿತವಾಗುವದಿಲ್ಲ, ನೋಡು; ಒಂದು ವೇಳೆ ಗೋಧಿಯನ್ನಾಗಲಿ ಬೇರೆ ಯಾವದೋ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವದಿಲ್ಲ. ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ.” (1 ಕೊರಿಂಥ 15:36-38) ಜನರಿಗೆ ತಾವು ಭೂಮಿಯ ಮೇಲಿದ್ದಾಗ ಇದ್ದಂತಹ ಶರೀರಗಳೊಂದಿಗೆ ದೇವರು ಎಬ್ಬಿಸುವವನಾಗಿರಲಿಲ್ಲ. ಬದಲಿಗೆ ಒಂದು ರೂಪಾಂತರವು ಸಂಭವಿಸಲಿತ್ತು.

5 ಪೌಲನು ಪುನರುತ್ಥಾನವನ್ನು ಬೀಜದ ಮೊಳಕೆಯೊಡೆಯುವಿಕೆಗೆ ಹೋಲಿಸುತ್ತಾನೆ. ಗೋಧಿಯ ಒಂದು ಚಿಕ್ಕ ಬೀಜಕ್ಕೂ, ಅದರಿಂದ ಬೆಳೆಯಲಿರುವ ಗಿಡಕ್ಕೂ ಯಾವುದೇ ಹೋಲಿಕೆಯಿರುವುದಿಲ್ಲ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಬೀಜವೊಂದು ಮೊಳಕೆಯೊಡೆಯಲು ಆರಂಭಿಸುವಾಗ, ಅದು ಬಹಳಷ್ಟು ಪ್ರಮಾಣಗಳಲ್ಲಿ ನೀರನ್ನು ಹೀರಿಕೊಳ್ಳುತ್ತದೆ. ನೀರು ಬೀಜದ ಒಳಗೆ ಅನೇಕ ರಾಸಾಯನಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಬೀಜದ ಆಂತರಿಕ ಅಂಗಾಂಶಗಳು ದೊಡ್ಡದಾಗಿ, ಬೀಜದ ಪೊರೆಯ ಹೊರಗೆ ಬರುವಂತೆಯೂ ಅದು ಮಾಡುತ್ತದೆ.” ಕಾರ್ಯತಃ, ಬೀಜವು ಇನ್ನುಮುಂದೆ ಒಂದು ಬೀಜವಾಗಿರದೆ, ಚಿಗುರುತ್ತಿರುವ ಗಿಡವಾಗುತ್ತದೆ. “ದೇವರು . . . ಅದಕ್ಕೆ ದೇಹವನ್ನು ಕೊಡುತ್ತಾನೆ,” ಅಂದರೆ, ಅದರ ಬೆಳವಣಿಗೆಯನ್ನು ನಿಯಂತ್ರಿಸುವ ವೈಜ್ಞಾನಿಕ ನಿಯಮಗಳನ್ನು ಆತನು ಸ್ಥಾಪಿಸಿದ್ದಾನೆ, ಮತ್ತು ಪ್ರತಿಯೊಂದು ಬೀಜಕ್ಕೆ ಅದರ ಜಾತಿಗನುಸಾರ ಒಂದು ದೇಹವು ಸಿಗುತ್ತದೆ. (ಆದಿಕಾಂಡ 1:11) ತದ್ರೀತಿಯಲ್ಲಿ, ಅಭಿಷಿಕ್ತ ಕ್ರೈಸ್ತರು ಮೊದಲು ಮಾನವರೋಪಾದಿ ಸಾಯುತ್ತಾರೆ. ತದನಂತರ, ದೇವರ ನೇಮಿತ ಸಮಯದಲ್ಲಿ, ಆತನು ಅವರಿಗೆ ಪೂರ್ತಿ ಹೊಸದಾದ ದೇಹಗಳನ್ನು ಕೊಟ್ಟು ಜೀವಿತರನ್ನಾಗಿ ಮಾಡುತ್ತಾನೆ. ಪೌಲನು ಫಿಲಿಪ್ಪಿಯವರಿಗೆ ಹೇಳಿದಂತೆ, “ಯೇಸು ಕ್ರಿಸ್ತನು . . . ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.” (ಫಿಲಿಪ್ಪಿ 3:20, 21; 2 ಕೊರಿಂಥ 5:1, 2) ಅವರು ಮಹಿಮಾಭರಿತ ದೇಹಗಳಲ್ಲಿ ಪುನರುತ್ಥಾನಹೊಂದಿ, ಸ್ವರ್ಗೀಯ ಕ್ಷೇತ್ರದಲ್ಲಿ ವಾಸಿಸುತ್ತಾರೆ.—1 ಯೋಹಾನ 3:2.

6. ದೇವರು ಪುನರುತ್ಥಿತರಿಗೆ ಸೂಕ್ತವಾದ ಆತ್ಮ ದೇಹಗಳನ್ನು ಕೊಡಸಾಧ್ಯವಿದೆ ಎಂದು ನಂಬುವುದು ಏಕೆ ತರ್ಕಸಮ್ಮತವಾಗಿದೆ?

6 ಇದನ್ನು ನಂಬುವುದು ತೀರ ಕಷ್ಟಕರವೊ? ಇಲ್ಲ. ಪ್ರಾಣಿಗಳಿಗೆ ವಿಭಿನ್ನ ರೀತಿಯ ದೇಹಗಳಿವೆ ಎಂದು ಪೌಲನು ತರ್ಕಿಸುತ್ತಾನೆ. ಇದಕ್ಕೆ ಕೂಡಿಸಿ, ಅವನು ಸ್ವರ್ಗೀಯ ದೇವದೂತರನ್ನು ಮಾಂಸರಕ್ತವುಳ್ಳ ಮನುಷ್ಯರೊಂದಿಗೆ ವೈದೃಶ್ಯಗೊಳಿಸುತ್ತಾ ಹೇಳುವುದು: “ಪರಲೋಕದ ದೇಹಗಳುಂಟು, ಭೂಲೋಕದ ದೇಹಗಳುಂಟು.” ನಿರ್ಜೀವ ಸೃಷ್ಟಿಯಲ್ಲೂ ಮಹಾ ವೈವಿಧ್ಯವಿದೆ. ನೀಲಿ ನಕ್ಷತ್ರಗಳು, ರೆಡ್‌ ಜೈಅಂಟ್‌ (ದೊಡ್ಡ ಆಕಾರದ ನಕ್ಷತ್ರ)ಗಳು, ಮತ್ತು ವೈಟ್‌ ಡ್ವಾರ್ಫ್‌ (ಬಿಳಿ ಕುಬ್ಜತಾರೆ)ಗಳಂತಹ ಆಕಾಶಕಾಯಗಳನ್ನು ವಿಜ್ಞಾನವು ಕಂಡುಹಿಡಿಯುವ ಬಹಳ ಸಮಯದ ಮೊದಲೇ, “ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚುಕಡಿಮೆಯುಂಟಷ್ಟೆ” ಎಂದು ಪೌಲನು ಹೇಳಿದನು. ಇದರ ನೋಟದಲ್ಲಿ, ದೇವರು ಪುನರುತ್ಥಾನಹೊಂದಿದ ಅಭಿಷಿಕ್ತರಿಗೆ ಸೂಕ್ತವಾದ ಸ್ವರ್ಗೀಯ ದೇಹಗಳನ್ನು ಒದಗಿಸಬಲ್ಲನೆಂಬುದು ನ್ಯಾಯಸಮ್ಮತವಲ್ಲವೊ?—1 ಕೊರಿಂಥ 15:39-41.

7. ಶಾಶ್ವತತೆಯ ಅರ್ಥವೇನು? ಅಮರತ್ವದ ಅರ್ಥವೇನು?

7 ಪೌಲನು ಅನಂತರ ಹೇಳುವುದು: “ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವದು. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ನಿರ್ಲಯಾವಸ್ಥೆಯಲ್ಲಿ ಎದ್ದು ಬರುತ್ತದೆ.” (1 ಕೊರಿಂಥ 15:42) ಮನುಷ್ಯನ ದೇಹವು, ಪರಿಪೂರ್ಣವಾಗಿರುವಾಗಲೂ ನಾಶವಾಗುವಂತಹದ್ದಾಗಿದೆ. ಅದನ್ನು ಕೊಲ್ಲಸಾಧ್ಯವಿದೆ. ಉದಾಹರಣೆಗೆ, ಪುನರುತ್ಥಾನಹೊಂದಿದ ಯೇಸು “ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲ”ವೆಂದು ಪೌಲನು ಹೇಳಿದನು. (ಅ. ಕೃತ್ಯಗಳು 13:34) ಅವನು ಪರಿಪೂರ್ಣ ಮಾನವ ದೇಹವಾಗಿದ್ದರೂ, ಕೆಡುವ ಒಂದು ದೇಹದಲ್ಲಿ ಎಂದಿಗೂ ಹಿಂದೆ ಬರುವುದಿಲ್ಲ. ಪುನರುತ್ಥಾನಹೊಂದಿದ ಅಭಿಷಿಕ್ತರಿಗೆ ದೇವರು ಕೊಡುವಂತಹ ದೇಹಗಳು—ಮರಣಪಡದ ಇಲ್ಲವೆ ಕೊಳೆತುಹೋಗದ ಶಾಶ್ವತವಾದ ದೇಹಗಳಾಗಿವೆ. ಪೌಲನು ಮುಂದುವರಿಸುವುದು: “ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎದ್ದುಬರುವದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎದ್ದುಬರುವದು; ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎದ್ದುಬರುವದು.” (1 ಕೊರಿಂಥ 15:43, 44) ಅಲ್ಲದೆ, ಪೌಲನು ಹೇಳುವುದು: “ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದು.” ಅಮರತ್ವವೆಂದರೆ, ಅಂತ್ಯರಹಿತವಾದ ನಾಶವಾಗದ ಜೀವನ. (1 ಕೊರಿಂಥ 15:53; ಇಬ್ರಿಯ 7:16) ಈ ರೀತಿಯಲ್ಲಿ, ಪುನರುತ್ಥಾನಹೊಂದಿದವರು, ತಮ್ಮ ಪುನರುತ್ಥಾನವನ್ನು ಸಾಧ್ಯಗೊಳಿಸಿದ, “ಪರಲೋಕದಿಂದ ಬಂದಾತ”ನಾದ ಯೇಸುವಿನ “ಸಾರೂಪ್ಯವನ್ನು” ಧರಿಸಿಕೊಳ್ಳುತ್ತಾರೆ.—1 ಕೊರಿಂಥ 15:45-49.

8. (ಎ) ಪುನರುತ್ಥಿತರು, ಭೂಮಿಯ ಮೇಲೆ ಜೀವಂತರಾಗಿದ್ದ ಅದೇ ವ್ಯಕ್ತಿಗಳೆಂದು ನಮಗೆ ಹೇಗೆ ಗೊತ್ತಾಗುತ್ತದೆ? (ಬಿ) ಪುನರುತ್ಥಾನವು ಸಂಭವಿಸುವಾಗ ಯಾವ ಪ್ರವಾದನೆಗಳು ನೆರವೇರುತ್ತವೆ?

8 ಈ ರೂಪಾಂತರವು ಸಂಭವಿಸಿದ ಬಳಿಕವೂ, ಈ ಪುನರುತ್ಥಾನಹೊಂದಿದವರು ತಾವು ಸಾಯುವ ಮೊದಲು ಇದ್ದಂತೆಯೇ ಇರುವ ವ್ಯಕ್ತಿಗಳಾಗಿರುತ್ತಾರೆ. ಅವರು ಅವೇ ಸ್ಮರಣೆಗಳೊಂದಿಗೆ ಮತ್ತು ಅವೇ ಅತ್ಯುತ್ತಮ ಕ್ರೈಸ್ತ ಗುಣಗಳೊಂದಿಗೆ ಎಬ್ಬಿಸಲ್ಪಡುವರು. (ಮಲಾಕಿಯ 3:3; ಪ್ರಕಟನೆ 21:10, 18) ಈ ವಿಷಯದಲ್ಲಿ ಅವರು ಯೇಸು ಕ್ರಿಸ್ತನನ್ನು ಹೋಲುತ್ತಾರೆ. ಅವನು ಸ್ವರ್ಗೀಯ ರೂಪದಿಂದ ಮಾನವ ರೂಪಕ್ಕೆ ಬದಲಾದನು. ತರುವಾಯ ಅವನು ಮೃತಪಟ್ಟು, ಸ್ವರ್ಗೀಯ ಜೀವಿಯಾಗಿ ಪುನರುತ್ಥಿತನಾದನು. ಆದರೂ, “ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.” (ಇಬ್ರಿಯ 13:8) ಅಭಿಷಿಕ್ತರಿಗೆ ಎಂತಹ ಒಂದು ಮಹಿಮಾಭರಿತ ಸುಯೋಗವಿದೆ! ಪೌಲನು ಹೇಳುವುದು: “ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವದು. ಆ ಮಾತು ಏನಂದರೆ—ಮರಣವು ನುಂಗಿಯೇ ಹೋಯಿತು, ಜಯವಾಯಿತು ಎಂಬದೇ. ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”—1 ಕೊರಿಂಥ 15:54, 55; ಯೆಶಾಯ 25:8; ಹೋಶೇಯ 13:14.

ಒಂದು ಭೌಮಿಕ ಪುನರುತ್ಥಾನವೊ?

9, 10. (ಎ) 1 ಕೊರಿಂಥ 15:24 ರ ಪೂರ್ವಾಪರಕ್ಕೆ ಅನುಸಾರವಾಗಿ, “ಸಮಾಪ್ತಿ”ಯು ಏನಾಗಿದೆ, ಮತ್ತು ಅದರ ಸಂಬಂಧದಲ್ಲಿ ಯಾವ ಘಟನೆಗಳು ನಡೆಯುತ್ತವೆ? (ಬಿ) ಮರಣವು ನಿವೃತ್ತಿಯಾಗಬೇಕಾದರೆ ಏನು ಸಂಭವಿಸಲೇಬೇಕು?

9 ಸ್ವರ್ಗದಲ್ಲಿ ಅಮರ ಆತ್ಮದ ಜೀವಿತದ ನಿರೀಕ್ಷೆ ಇಲ್ಲದಿರುವ ಕೋಟ್ಯಂತರ ಜನರಿಗೆ ಯಾವ ಭವಿಷ್ಯವಾದರೂ ಇದೆಯೊ? ಖಂಡಿತವಾಗಿಯೂ ಇದೆ! ಸ್ವರ್ಗೀಯ ಪುನರುತ್ಥಾನವು ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಸಂಭವಿಸುತ್ತದೆಂದು ವಿವರಿಸಿದ ಬಳಿಕ, ಅನಂತರದ ಘಟನೆಗಳನ್ನು ಪೌಲನು ರೇಖಿಸುತ್ತಾನೆ. ಅವನು ಹೇಳುವುದು: “ಆ ಮೇಲೆ ಆತನು ಬೇರೆ ಎಲ್ಲಾ ಧೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿ.”—1 ಕೊರಿಂಥ 15:23, 24.

10 “ಸಮಾಪ್ತಿ”ಯು, ಕ್ರಿಸ್ತನ ಸಹಸ್ರ ವರ್ಷದ ಆಳಿಕೆಯ ಸಮಾಪ್ತಿಯಾಗಿದೆ. ಆಗ ಯೇಸು ದೀನನಾಗಿಯೂ ನಿಷ್ಠಾವಂತನಾಗಿಯೂ ರಾಜ್ಯವನ್ನು ತನ್ನ ದೇವರು ಹಾಗೂ ತಂದೆಗೆ ಒಪ್ಪಿಸಿಬಿಡುತ್ತಾನೆ. (ಪ್ರಕಟನೆ 20:4) ಆಗ “ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬ” ದೇವರ ಉದ್ದೇಶವು ನೆರವೇರಿಕೆಯನ್ನು ಕಂಡುಕೊಂಡಿರುವುದು. (ಎಫೆಸ 1:9, 10) ಆದರೆ ಮೊದಲು, ದೇವರ ಪರಮ ಇಚ್ಛೆಗೆ ವಿರುದ್ಧವಾಗಿರುವ ‘ಎಲ್ಲಾ ಸರಕಾರ ಮತ್ತು ಎಲ್ಲ ಅಧಿಕಾರ ಮತ್ತು ಶಕ್ತಿ’ಯನ್ನು ಯೇಸು ನಾಶಮಾಡಿರುವನು. ಇದು ಅರ್ಮಗೆದೋನಿನಲ್ಲಿ ಬರುವಂತಹ ನಾಶನಕ್ಕಿಂತಲೂ ಹೆಚ್ಚನ್ನು ಒಳಗೊಳ್ಳುವುದು. (ಪ್ರಕಟನೆ 16:16; 19:11-21) ಪೌಲನು ಹೇಳುವುದು: “[ಕ್ರಿಸ್ತನು] ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:25, 26) ಹೌದು, ಆದಾಮಸಂಬಂಧಿತ ಪಾಪಮರಣಗಳ ಎಲ್ಲ ಗುರುತುಗಳು ತೆಗೆದುಹಾಕಲ್ಪಟ್ಟಿರುವವು. ಆಗ ಅನಿವಾರ್ಯವಾಗಿ, ಸತ್ತವರನ್ನು ಜೀವಿತರನ್ನಾಗಿ ಮಾಡುವ ಮೂಲಕ, ದೇವರು “ಸಮಾಧಿ”ಗಳನ್ನು ಬರಿದುಮಾಡಿರುವನು.—ಯೋಹಾನ 5:28.

11. (ಎ) ದೇವರು ಸತ್ತವರನ್ನು ಪುನಃ ಸೃಷ್ಟಿಸಬಲ್ಲನೆಂದು ನಮಗೆ ಹೇಗೆ ಗೊತ್ತು? (ಬಿ) ಭೂಮಿಯ ಮೇಲಿನ ಜೀವಿತಕ್ಕೆ ಪುನರುತ್ಥಾನಗೊಳ್ಳುವವರಿಗೆ ಯಾವ ರೀತಿಯ ದೇಹಗಳು ಕೊಡಲ್ಪಡುವವು?

11 ಇದು ಮಾನವರನ್ನು ಪುನಃ ಸೃಷ್ಟಿಸುವುದನ್ನು ಅರ್ಥೈಸುತ್ತದೆ. ಇದು ಅಸಾಧ್ಯವೊ? ಇಲ್ಲ, ಏಕೆಂದರೆ ದೇವರು ಅದನ್ನು ಮಾಡಸಾಧ್ಯವೆಂದು ಕೀರ್ತನೆ 104:29, 30 ನಮಗೆ ಆಶ್ವಾಸನೆ ನೀಡುತ್ತದೆ: “ಅವುಗಳ ಶ್ವಾಸವನ್ನು ತೆಗೆದುಕೊಳ್ಳಲು ಅವು ಸತ್ತು ತಿರಿಗೆ ಮಣ್ಣಿಗೆ ಸೇರುತ್ತವೆ. ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ.” ಪುನರುತ್ಥಾನ ಹೊಂದಿದವರು ತಾವು ಸಾಯುವ ಮೊದಲು ಯಾವ ರೀತಿಯ ವ್ಯಕ್ತಿಗಳಾಗಿದ್ದರೊ ಅದೇ ರೀತಿಯವರಾಗಿರುವುದಾದರೂ, ಅವೇ ದೇಹಗಳನ್ನು ಪಡೆದುಕೊಂಡಿರುವ ಅಗತ್ಯ ಅವರಿಗೆ ಇರುವುದಿಲ್ಲ. ಸ್ವರ್ಗಕ್ಕೆ ಹೋಗಲಿಕ್ಕಾಗಿ ಎಬ್ಬಿಸಲ್ಪಡುವವರ ವಿಷಯದಲ್ಲಿ ಸತ್ಯವಾಗಿರುವಂತೆ, ದೇವರು ತನಗೆ ಇಷ್ಟವಾಗುವ ದೇಹವನ್ನು ಅವರಿಗೆ ಕೊಡುವನು. ಅವರ ನವೀನ ದೇಹಗಳು ಶಾರೀರಿಕವಾಗಿ ಸ್ವಸ್ಥವಾಗಿರುವವು ಮತ್ತು ಅವರ ಮೂಲ ದೇಹಕ್ಕೆ ತಕ್ಕಮಟ್ಟಿಗೆ ಹೋಲುವಂತಹವುಗಳಾಗಿರುವವು. ಇದರಿಂದ ಅವರು ತಮ್ಮ ಪ್ರಿಯರಿಂದ ಗುರುತಿಸಲ್ಪಡುವರು.

12. ಭೌಮಿಕ ಪುನರುತ್ಥಾನವು ಯಾವಾಗ ಸಂಭವಿಸುತ್ತದೆ?

12 ಭೌಮಿಕ ಪುನರುತ್ಥಾನವು ಯಾವಾಗ ಸಂಭವಿಸುವುದು? ಮಾರ್ಥಳು ತನ್ನ ಸತ್ತ ಸಹೋದರನಾದ ಲಾಜರನ ಬಗ್ಗೆ ಹೇಳಿದ್ದು: “ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.” (ಯೋಹಾನ 11:24) ಅದು ಅವಳಿಗೆ ಹೇಗೆ ಗೊತ್ತಿತ್ತು? ಅವಳ ದಿನದಲ್ಲಿ ಪುನರುತ್ಥಾನವು ವಾದವಿವಾದದ ವಿಷಯವಾಗಿತ್ತು. ಏಕೆಂದರೆ ಫರಿಸಾಯರು ಅದನ್ನು ನಂಬಿದರು, ಆದರೆ ಸದ್ದುಕಾಯರು ಅದನ್ನು ನಂಬಲಿಲ್ಲ. (ಅ. ಕೃತ್ಯಗಳು 23:8) ಆದರೂ, ಪುನರುತ್ಥಾನದಲ್ಲಿ ನಿರೀಕ್ಷೆಯನ್ನಿಟ್ಟಿದ್ದ ಕ್ರೈಸ್ತಪೂರ್ವ ಸಾಕ್ಷಿಗಳ ಕುರಿತು ಮಾರ್ಥಳಿಗೆ ಗೊತ್ತಿದ್ದಿರಬಹುದು. (ಇಬ್ರಿಯ 11:35) ಮತ್ತು, ಕಡೇ ದಿನದಲ್ಲಿ ಪುನರುತ್ಥಾನವು ಸಂಭವಿಸುವುದೆಂದು ಅವಳು ದಾನಿಯೇಲ 12:13 ರಿಂದ ವಿವೇಚಿಸಿದ್ದಿರಸಾಧ್ಯವಿದೆ. ಇದನ್ನು ಅವಳು ಸ್ವತಃ ಯೇಸುವಿನಿಂದಲೇ ತಿಳಿದುಕೊಂಡಿದ್ದಿರಬಹುದು. (ಯೋಹಾನ 6:39) ಆ “ಕಡೇ ದಿನವು” ಕ್ರಿಸ್ತನ ಸಹಸ್ರ ವರ್ಷದ ಆಳಿಕೆಯೊಂದಿಗೆ ಸರಿಹೊಂದುತ್ತದೆ. (ಪ್ರಕಟನೆ 20:6) ಈ ಮಹಾನ್‌ ಘಟನೆಯು ಆರಂಭವಾಗುವಾಗ, ಆ “ದಿನ”ದಲ್ಲಿ ಆಗುವ ಸಂಭ್ರಮವನ್ನು ಊಹಿಸಿಕೊಳ್ಳಿರಿ!—ಲೂಕ 24:41 ನ್ನು ಹೋಲಿಸಿರಿ.

ಯಾರು ಹಿಂದಿರುಗಿ ಬರುವರು?

13. ಪುನರುತ್ಥಾನದ ಯಾವ ದರ್ಶನವು ಪ್ರಕಟನೆ 20:12-14 ರಲ್ಲಿ ದಾಖಲಿಸಲ್ಪಟ್ಟಿದೆ?

13 ಪ್ರಕಟನೆ 20:12-14 ರಲ್ಲಿ, ಯೋಹಾನನು ಕಂಡ ಭೌಮಿಕ ಪುನರುತ್ಥಾನದ ದರ್ಶನವು ದಾಖಲಿಸಲ್ಪಟ್ಟಿದೆ: “ಇದಲ್ಲದೆ ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಮತ್ತು ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು. ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.”

14. ಪುನರುತ್ಥಾನಹೊಂದಿದವರಲ್ಲಿ ಯಾರೆಲ್ಲ ಸೇರಿರುವರು?

14 ಪುನರುತ್ಥಾನದಲ್ಲಿ “ದೊಡ್ಡವರೂ ಚಿಕ್ಕವರೂ,” ಜೀವಿಸಿ ಮೃತಪಟ್ಟಿರುವ ಪ್ರಸಿದ್ಧರೂ ಅಪ್ರಸಿದ್ಧರೂ ಸೇರಿರುವರು. ಅಷ್ಟೇಕೆ, ಶಿಶುಗಳೂ ಪುನರುತ್ಥಾನದಲ್ಲಿ ಸೇರಿರುವರು! (ಯೆರೆಮೀಯ 31:15, 16) ಅ. ಕೃತ್ಯಗಳು 24:15 ರಲ್ಲಿ ಮತ್ತೊಂದು ಪ್ರಮುಖ ವಿವರವು ಪ್ರಕಟಿಸಲ್ಪಟ್ಟಿದೆ: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.” ‘ನೀತಿವಂತ’ರಲ್ಲಿ ಪ್ರಸಿದ್ಧರು, ಹೇಬೆಲ, ಹನೋಕ, ನೋಹ, ಅಬ್ರಹಾಮ, ಸಾರಳು, ಮತ್ತು ರಾಹಾಬಳಂತಹ ಗತಕಾಲದ ನಂಬಿಗಸ್ತ ಸ್ತ್ರೀಪುರುಷರೂ ಸೇರಿರುವರು. (ಇಬ್ರಿಯ 11:1-40) ಅಂತಹವರೊಂದಿಗೆ ಮಾತಾಡಲು ಮತ್ತು ಬಹಳ ಸಮಯದ ಹಿಂದೆ ನಡೆದ ಬೈಬಲ್‌ ಘಟನೆಗಳ ಪ್ರತ್ಯಕ್ಷಸಾಕ್ಷಿ ವಿವರಗಳನ್ನು ತಿಳಿದುಕೊಳ್ಳಲು ಶಕ್ತರಾಗಿರುವುದನ್ನು ಊಹಿಸಿಕೊಳ್ಳಿರಿ! ಈ ‘ನೀತಿವಂತರಲ್ಲಿ,’ ಇತ್ತೀಚಿನ ವರ್ಷಗಳಲ್ಲಿ ಸತ್ತಂತಹ ಮತ್ತು ಸ್ವರ್ಗೀಯ ನಿರೀಕ್ಷೆ ಇಲ್ಲದಿರುವಂತಹ ಸಾವಿರಾರು ದೇವಭಯವುಳ್ಳ ವ್ಯಕ್ತಿಗಳೂ ಸೇರಿದ್ದಾರೆ. ಇವರಲ್ಲಿ ಇರಬಹುದಾದಂತಹ ಒಬ್ಬ ಕುಟುಂಬ ಸದಸ್ಯರು ಇಲ್ಲವೆ ಪ್ರಿಯರು ನಿಮಗಿದ್ದಾರೊ? ಅವರನ್ನು ಪುನಃ ನೋಡಸಾಧ್ಯವಿದೆಯೆಂಬ ಅರಿವು ಎಷ್ಟು ಸಾಂತ್ವನದಾಯಕ! ಆದರೆ, ಮತ್ತೆ ಬರಲಿರುವ ಈ ‘ಅನೀತಿವಂತರು’ ಯಾರಾಗಿದ್ದಾರೆ? ಅವರಲ್ಲಿ, ಬೈಬಲ್‌ ಸತ್ಯವನ್ನು ಕಲಿಯಲು ಮತ್ತು ಅನ್ವಯಿಸಿಕೊಳ್ಳಲು ಅವಕಾಶ ಸಿಗದೆ ಸತ್ತುಹೋದ ನೂರಾರು ಕೋಟಿ ಜನರು ಸೇರಿದ್ದಾರೆ.

15. ಹಿಂದಿರುಗಿ ಬರುವವರಿಗೆ ‘ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಗುವುದು’ ಎಂದರೇನು?

15 ಆದರೆ, ಹಿಂದಿರುಗಿ ಬರುವವರಿಗೆ, ‘ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಗುವುದು’ ಹೇಗೆ? ಈ ಪುಸ್ತಕಗಳು, ಅವರ ಹಿಂದಿನ ಕೃತ್ಯಗಳ ದಾಖಲೆಯಾಗಿರುವುದಿಲ್ಲ. ಅವರು ಮರಣಹೊಂದಿದಾಗ, ತಮ್ಮ ಜೀವಮಾನ ಕಾಲದಲ್ಲಿ ತಾವು ಮಾಡಿದ್ದ ಪಾಪಗಳಿಂದ ಅವರು ವಿಮುಕ್ತರಾಗಿದ್ದಾರೆ. (ರೋಮಾಪುರ 6:7, 23) ಆದರೆ, ಪುನರುತ್ಥಾನಹೊಂದಿದ ಮಾನವರು ಇನ್ನೂ ಆದಾಮಸಂಬಂಧಿತ ಪಾಪದ ಕೆಳಗಿರುವರು. ಹಾಗಾದರೆ, ಯೇಸು ಕ್ರಿಸ್ತನ ಯಜ್ಞದಿಂದ ಸಂಪೂರ್ಣವಾಗಿ ಪ್ರಯೋಜನ ಪಡೆದುಕೊಳ್ಳಲು, ಎಲ್ಲರೂ ಅನುಸರಿಸಬೇಕಾದ ದೈವಿಕ ಉಪದೇಶಗಳನ್ನು ಈ ಪುಸ್ತಕಗಳು ನಿರೂಪಿಸುವವು. ಆದಾಮಸಂಬಂಧಿತ ಪಾಪದ ಕೊನೆಯ ಗುರುತು ಅಳಿಸಿಹಾಕಲ್ಪಟ್ಟಂತೆ, ಪೂರ್ಣ ಅರ್ಥದಲ್ಲಿ “ಮರಣವು . . . ನಿವೃತ್ತಿಯಾಗುವದು.” ಸಾವಿರ ವರ್ಷಗಳ ಅಂತ್ಯದೊಳಗಾಗಿ, ದೇವರು “ಸಮಸ್ತರಲ್ಲಿಯೂ ಸಮಸ್ತವೂ ಆಗುವನು.” (1 ಕೊರಿಂಥ 15:28) ಇನ್ನು ಮುಂದೆ ಮನುಷ್ಯನಿಗೆ ಒಬ್ಬ ಮಹಾ ಯಾಜಕನ ಇಲ್ಲವೆ ಪ್ರಾಯಶ್ಚಿತ್ತವನ್ನು ಒದಗಿಸುವವನ ಮಧ್ಯಸ್ಥಿಕೆಯ ಅಗತ್ಯವಿರುವುದಿಲ್ಲ. ಆದಾಮನು ಆದಿಯಲ್ಲಿ ಅನುಭವಿಸಿದಂತಹ ಪರಿಪೂರ್ಣ ಸ್ಥಿತಿಗೆ ಎಲ್ಲ ಮಾನವ ಕುಲವು ಪುನಸ್ಥಾಪಿಸಲ್ಪಡುವುದು.

ಕ್ರಮಬದ್ಧವಾದ ಪುನರುತ್ಥಾನ

16. (ಎ) ಪುನರುತ್ಥಾನವು ಕ್ರಮಬದ್ಧವಾದ ಪ್ರಕ್ರಿಯೆಯಾಗಿರುವುದೆಂದು ನಂಬುವುದು ಏಕೆ ತರ್ಕಸಮ್ಮತವಾಗಿದೆ? (ಬಿ) ಮೃತರಿಂದ ಹಿಂದಿರುಗುವವರಲ್ಲಿ ಪ್ರಥಮರು ಯಾರಾಗಿರಬಹುದು?

16 ಸ್ವರ್ಗೀಯ ಪುನರುತ್ಥಾನವು ಕ್ರಮಬದ್ಧವಾಗಿದ್ದು, “ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿ” ಇರುವುದರಿಂದ, ಭೌಮಿಕ ಪುನರುತ್ಥಾನವು ಅವ್ಯವಸ್ಥಿತ ಜನಸಂಖ್ಯಾ ಸ್ಫೋಟವನ್ನು ಮಾಡುವುದಿಲ್ಲವೆಂಬುದು ಸ್ಪಷ್ಟವಾಗಿದೆ. (1 ಕೊರಿಂಥ 15:23) ಹೊಸದಾಗಿ ಪುನರುತ್ಥಾನಗೊಂಡವರನ್ನು ನೋಡಿಕೊಳ್ಳಬೇಕಾಗುವುದು ಒಪ್ಪತಕ್ಕ ವಿಷಯವೇ ಸರಿ. (ಲೂಕ 8:55 ನ್ನು ಹೋಲಿಸಿರಿ.) ಅವರಿಗೆ ಶಾರೀರಿಕ ಪೋಷಣೆ ಮತ್ತು—ಹೆಚ್ಚು ಪ್ರಮುಖವಾಗಿ—ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕುರಿತಾದ ಜೀವದಾಯಕ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಆತ್ಮಿಕ ನೆರವಿನ ಅಗತ್ಯವಿರುವುದು. (ಯೋಹಾನ 17:3) ಎಲ್ಲರೂ ಒಂದೇ ಕಾಲದಲ್ಲಿ ಜೀವಿತರಾಗುವುದಾದರೆ, ಅವರಿಗೆ ಯೋಗ್ಯವಾದ ಆರೈಕೆಯನ್ನು ನೀಡುವುದು ಅಸಾಧ್ಯ. ಆದುದರಿಂದ ಪುನರುತ್ಥಾನವು ಪ್ರಗತಿಪರವಾಗಿ ಸಂಭವಿಸುವುದೆಂದು ಊಹಿಸಿಕೊಳ್ಳುವುದು ತರ್ಕಸಮ್ಮತವು. ಸೈತಾನನ ವ್ಯವಸ್ಥೆಯ ಅಂತ್ಯಕ್ಕೆ ಸ್ವಲ್ಪ ಮೊದಲು ಸತ್ತಂತಹ ನಂಬಿಗಸ್ತ ಕ್ರೈಸ್ತರು, ಎಬ್ಬಿಸಲ್ಪಡುವವರಲ್ಲಿ ಬಹುಶಃ ಪ್ರಥಮರಾಗಿರುವರು. “ಅಧಿಕಾರಿ”ಗಳಾಗಿ ಸೇವೆಸಲ್ಲಿಸಲಿರುವ ಗತಕಾಲದ ನಂಬಿಗಸ್ತ ಪುರುಷರ ಪುನರುತ್ಥಾನವೂ ಮೊದಲೇ ಸಂಭವಿಸುವುದೆಂದು ನಾವು ನಿರೀಕ್ಷಿಸಬಲ್ಲೆವು.—ಕೀರ್ತನೆ 45:16.

17. ಪುನರುತ್ಥಾನದ ಯಾವ ವಿಷಯಗಳ ಕುರಿತು ಬೈಬಲು ಮೌನವಾಗಿದೆ, ಮತ್ತು ಇಂತಹ ವಿಷಯಗಳ ಕುರಿತು ಕ್ರೈಸ್ತರು ಏಕೆ ಅನುಚಿತವಾಗಿ ಚಿಂತಿತರಾಗಿರಬಾರದು?

17 ಆದರೂ, ನಾವು ಇಂತಹ ವಿಷಯಗಳಲ್ಲಿ ಕಟ್ಟುನಿಟ್ಟಾಗಿರಬಾರದು. ಅನೇಕ ವಿವಾದಾಂಶಗಳಿಗೆ ಬೈಬಲು ಉತ್ತರವನ್ನು ಕೊಡುವುದಿಲ್ಲ. ವ್ಯಕ್ತಿಗಳ ಪುನರುತ್ಥಾನವು ಹೇಗೆ, ಯಾವಾಗ, ಅಥವಾ ಎಲ್ಲಿ ಸಂಭವಿಸುವುದೆಂಬ ವಿವರಗಳನ್ನು ಅದು ಕೊಡುವುದಿಲ್ಲ. ಜೀವಿತರಾಗಿ ಹಿಂದಿರುಗುವವರಿಗೆ, ವಸತಿ, ಆಹಾರ, ಮತ್ತು ಬಟ್ಟೆಬರೆಗಳು ಹೇಗೆ ಒದಗಿಸಲ್ಪಡುವವು ಎಂಬುದನ್ನು ಅದು ನಮಗೆ ತಿಳಿಯಪಡಿಸುವುದಿಲ್ಲ. ಪುನರುತ್ಥಾನಹೊಂದಿದ ಮಕ್ಕಳ ಪೋಷಣೆ ಮತ್ತು ಆರೈಕೆಯಂತಹ ವಿವಾದಾಂಶಗಳು, ಇಲ್ಲವೆ ನಮ್ಮ ಮಿತ್ರರನ್ನು ಮತ್ತು ಪ್ರಿಯರನ್ನು ಒಳಗೊಳ್ಳಬಹುದಾದ ನಿರ್ದಿಷ್ಟ ಸನ್ನಿವೇಶಗಳನ್ನು, ಯೆಹೋವನು ಹೇಗೆ ನಿರ್ವಹಿಸುವನೆಂಬುದನ್ನು ನಾವು ನಿಖರವಾಗಿ ಹೇಳಸಾಧ್ಯವಿಲ್ಲ. ನಿಜ, ಇಂತಹ ವಿಷಯಗಳ ಕುರಿತು ಕುತೂಹಲಪಡುವುದು ಸ್ವಾಭಾವಿಕ, ಆದರೆ ಪ್ರಚಲಿತ ಸಮಯದಲ್ಲಿ ಉತ್ತರಿಸಲಾಗದಂತಹ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸುತ್ತಾ ಸಮಯವನ್ನು ವ್ಯಯಿಸುವುದು ಬುದ್ಧಿಹೀನ ವಿಷಯವಾಗಿರುವುದು. ನಮ್ಮ ಗಮನವು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದು ಮತ್ತು ನಿತ್ಯಜೀವವನ್ನು ಪಡೆದುಕೊಳ್ಳುವುದರ ಮೇಲೆ ಇರಬೇಕು. ಅಭಿಷಿಕ್ತ ಕ್ರೈಸ್ತರು ತಮ್ಮ ನಿರೀಕ್ಷೆಯನ್ನು ಮಹಿಮಾಭರಿತ ಸ್ವರ್ಗೀಯ ಪುನರುತ್ಥಾನದಲ್ಲಿ ಇರಿಸುತ್ತಾರೆ. (2 ಪೇತ್ರ 1:10, 11) “ಬೇರೆ ಕುರಿಗಳು” ದೇವರ ರಾಜ್ಯದ ಭೂಕ್ಷೇತ್ರದಲ್ಲಿ ಅನಂತ ಬಾಧ್ಯತೆಯನ್ನು ನಿರೀಕ್ಷಿಸುತ್ತಾರೆ. (ಯೋಹಾನ 10:16; ಮತ್ತಾಯ 25:33, 34) ಪುನರುತ್ಥಾನದ ಕುರಿತು ತಿಳಿಯದಿರುವ ಅನೇಕ ವಿವರಗಳ ವಿಷಯದಲ್ಲಿ, ನಾವು ಯೆಹೋವನಲ್ಲಿ ಭರವಸೆಯಿಡುತ್ತೇವೆ. ನಮ್ಮ ಭವಿಷ್ಯತ್ತಿನ ಸಂತೋಷವು, ‘ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸ’ಬಲ್ಲವನಾಗಿರುವಾತನ ಕೈಗಳಲ್ಲಿ ಸುರಕ್ಷಿತವಾಗಿದೆ.—ಕೀರ್ತನೆ 145:16; ಯೆರೆಮೀಯ 17:7.

18. (ಎ) ಯಾವ ವಿಜಯವನ್ನು ಪೌಲನು ಎತ್ತಿತೋರಿಸುತ್ತಾನೆ? (ಬಿ) ನಾವು ಪುನರುತ್ಥಾನದ ನಿರೀಕ್ಷೆಯಲ್ಲಿ ದೃಢವಾದ ನಂಬಿಕೆಯನ್ನಿಡುತ್ತೇವೆ ಏಕೆ?

18 ಪೌಲನು ಹೀಗೆ ಉದ್ಗರಿಸುವ ಮೂಲಕ ತನ್ನ ವಾದವನ್ನು ಮುಕ್ತಾಯಗೊಳಿಸುತ್ತಾನೆ: “ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ.” (1 ಕೊರಿಂಥ 15:57) ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಆದಾಮಸಂಬಂಧಿತ ಮರಣದ ಮೇಲೆ ವಿಜಯವನ್ನು ಗಳಿಸಲಾಗುತ್ತದೆ, ಮತ್ತು ಆ ವಿಜಯದಲ್ಲಿ ಅಭಿಷಿಕ್ತರೂ “ಬೇರೆ ಕುರಿ”ಗಳವರೂ ಭಾಗವಹಿಸುತ್ತಾರೆ. ಈ ಸಂತತಿಗೇ ಅಪೂರ್ವವಾಗಿರುವ ಒಂದು ನಿರೀಕ್ಷೆ, ಇಂದು ಜೀವಂತರಾಗಿರುವ “ಬೇರೆ ಕುರಿ”ಗಳಿಗಿದೆ. ಸದಾ ಹೆಚ್ಚುತ್ತಿರುವ “ಮಹಾ ಸಮೂಹದ” ಭಾಗದೋಪಾದಿ, ಅವರು ಬರಲಿರುವ “ಮಹಾ ಸಂಕಟ”ವನ್ನು ಪಾರಾಗಿ, ಶಾರೀರಿಕ ಮರಣವನ್ನು ಎಂದಿಗೂ ಅನುಭವಿಸದೆ ಇರಬಹುದು! (ಪ್ರಕಟನೆ 7:9, 14) ಹಾಗಿದ್ದರೂ, ‘ಕಾಲ ಮತ್ತು ಮುಂಗಾಣದ ಸಂಭವದ’ ಕಾರಣ, ಇಲ್ಲವೆ ಸೈತಾನನ ನಿಯೋಗಿಗಳ ಕೈಗಳಲ್ಲಿ ಮರಣವನ್ನು ಅನುಭವಿಸುವವರು, ಪುನರುತ್ಥಾನದ ನಿರೀಕ್ಷೆಯಲ್ಲಿ ತಮ್ಮ ಭರವಸೆಯನ್ನು ಇಡಬಲ್ಲರು.—ಪ್ರಸಂಗಿ 9:11.

19. ಇಂದು ಎಲ್ಲ ಕ್ರೈಸ್ತರು ಯಾವ ಉತ್ತೇಜನಕ್ಕೆ ಕಿವಿಗೊಡಬೇಕು?

19 ಆದಕಾರಣ, ಮರಣವು ನಿವೃತ್ತಿಯಾಗಲಿರುವ ಆ ಮಹಿಮಾಭರಿತ ದಿನಕ್ಕಾಗಿ ನಾವು ಆತುರವಾಗಿ ಕಾಯುತ್ತೇವೆ. ಪುನರುತ್ಥಾನದ ಕುರಿತು ಯೆಹೋವನು ಮಾಡಿರುವ ವಾಗ್ದಾನದಲ್ಲಿ ನಮಗಿರುವ ಅಚಲವಾದ ನಂಬಿಕೆಯು, ವಿಷಯಗಳ ಕುರಿತಾದ ವಾಸ್ತವಿಕವಾದ ನೋಟವನ್ನು ನಮಗೆ ನೀಡುತ್ತದೆ. ಈ ಜೀವಿತದಲ್ಲಿ ನಮಗೆ ಏನೇ ಸಂಭವಿಸಲಿ, ಸಾವೇ ಬರಲಿ, ಯೆಹೋವನು ವಾಗ್ದಾನಿಸಿರುವ ಬಹುಮಾನವನ್ನು ನಮ್ಮಿಂದ ಕಿತ್ತುಕೊಳ್ಳುವ ಶಕ್ತಿ ಯಾವುದಕ್ಕೂ ಇರಲಾರದು. ಆದಕಾರಣ, ಪೌಲನು ಕೊರಿಂಥದವರಿಗೆ ನೀಡಿದ ಅಂತಿಮ ಉತ್ತೇಜನವು, ಎರಡು ಸಾವಿರ ವರ್ಷಗಳ ಹಿಂದೆ ಇದ್ದಂತೆಯೇ ಈಗಲೂ ಸೂಕ್ತವಾಗಿದೆ: “ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.”—1 ಕೊರಿಂಥ 15:58.

ನೀವು ವಿವರಿಸಬಲ್ಲಿರೊ?

◻ ಪುನರುತ್ಥಿತ ಅಭಿಷಿಕ್ತರಿಗೆ ಯಾವ ರೀತಿಯ ದೇಹಗಳು ಇರುವವು ಎಂಬ ಪ್ರಶ್ನೆಯನ್ನು ಪೌಲನು ಹೇಗೆ ಉತ್ತರಿಸಿದನು?

◻ ಮರಣವು ಹೇಗೆ ಮತ್ತು ಯಾವಾಗ ನಿವೃತ್ತಿಯಾಗುವುದು?

◻ ಭೌಮಿಕ ಪುನರುತ್ಥಾನದಲ್ಲಿ ಯಾರಾರು ಸೇರಿರುವರು?

◻ ಬೈಬಲು ಉತ್ತರಿಸದೆ ಇರುವ ವಿಷಯಗಳ ಕುರಿತು ನಮ್ಮ ಮನೋಭಾವವು ಏನಾಗಿರಬೇಕು?

[ಪುಟ 20 ರಲ್ಲಿರುವ ಚಿತ್ರ]

ಒಂದು ನಾಟಕೀಯ ಬದಲಾವಣೆಯನ್ನು ಅನುಭವಿಸುವ ಮೂಲಕ, ಬೀಜವು ‘ಸಾಯುತ್ತದೆ’

[ಪುಟ 23 ರಲ್ಲಿರುವ ಚಿತ್ರ]

ನೋಹ, ಅಬ್ರಹಾಮ, ಸಾರಳು, ಮತ್ತು ರಾಹಾಬರಂತಹ ಗತಕಾಲದ ನಂಬಿಗಸ್ತ ಸ್ತ್ರೀಪುರುಷರು, ಪುನರುತ್ಥಾನಗೊಳ್ಳುವವರಲ್ಲಿ ಸೇರಿದ್ದಾರೆ

[ಪುಟ 24 ರಲ್ಲಿರುವ ಚಿತ್ರ]

ಪುನರುತ್ಥಾನವು ಮಹಾ ಆನಂದದ ಸಮಯವಾಗಿರುವುದು!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ