-
ನೋಹನ ಹಡಗುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 5
ನೋಹನ ಹಡಗು
ದಿನ ಕಳೆದಂತೆ ಭೂಮಿಯಲ್ಲಿ ಜನರು ಹೆಚ್ಚಾದರು. ಅವರಲ್ಲಿ ತುಂಬ ಜನ ಕೆಟ್ಟದ್ದನ್ನೇ ಮಾಡುತ್ತಿದ್ದರು. ಮನುಷ್ಯರು ಮಾತ್ರ ಅಲ್ಲ, ಸ್ವರ್ಗದಲ್ಲಿದ್ದ ಕೆಲವು ದೇವದೂತರು ಕೂಡ ಕೆಟ್ಟವರಾದರು. ಅವರು ಸ್ವರ್ಗವನ್ನು ಬಿಟ್ಟು ಭೂಮಿಗೆ ಬಂದರು. ಯಾಕೆ ಗೊತ್ತಾ? ಮಾನವ ದೇಹವನ್ನು ಧರಿಸಿ ಭೂಮಿಯಲ್ಲಿದ್ದ ಸುಂದರ ಸ್ತ್ರೀಯರನ್ನು ಮದುವೆಯಾಗಲಿಕ್ಕಾಗಿ.
ಹೀಗೆ ಮದುವೆಯಾದ ದೇವದೂತರಿಗೆ ಮಕ್ಕಳು ಹುಟ್ಟಿದರು. ಆ ಮಕ್ಕಳು ಬೇರೆ ಮಕ್ಕಳಂತೆ ಇರಲಿಲ್ಲ. ಅವರಿಗೆ ತುಂಬ ಶಕ್ತಿ ಇತ್ತು, ನೋಡಲು ತುಂಬ ಎತ್ತರ ಹಾಗೂ ಸಿಕ್ಕಾಪಟ್ಟೆ ದಪ್ಪ ಇದ್ದರು. ಅವರು ಜನರಿಗೆ ಹಿಂಸೆ ಕೊಡುತ್ತಿದ್ದರು. ಪರಿಸ್ಥಿತಿ ಹೀಗೇ ಮುಂದುವರಿಯುವುದು ಯೆಹೋವನಿಗೆ ಇಷ್ಟವಿರಲಿಲ್ಲ. ಆದ್ದರಿಂದಲೇ ಜಲಪ್ರಳಯದ ಮೂಲಕ ಎಲ್ಲಾ ಕೆಟ್ಟ ಜನರನ್ನು ನಾಶಮಾಡಲು ಮುಂದಾದನು.
ಆದರೆ ಇವರ ಮಧ್ಯೆ ಒಬ್ಬ ಒಳ್ಳೇ ವ್ಯಕ್ತಿ ಇದ್ದ. ಅವನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅವನೇ ನೋಹ. ಅವನ ಕುಟುಂಬದಲ್ಲಿ ಹೆಂಡತಿ, ಶೇಮ್, ಹಾಮ್, ಯೆಫೆತ್ ಎಂಬ ಮೂರು ಗಂಡುಮಕ್ಕಳು ಹಾಗೂ ಮೂರು ಜನ ಸೊಸೆಯರಿದ್ದರು. ನೋಹ ಮತ್ತವನ ಕುಟುಂಬ ಜಲಪ್ರಳಯದಿಂದ ಬಚಾವಾಗಲು ದೊಡ್ಡದೊಂದು ಹಡಗನ್ನ ಕಟ್ಟಲು ಯೆಹೋವನು ಹೇಳಿದನು. ಹಡಗು ಅಂದರೆ ನೀರಿನ ಮೇಲೆ ತೇಲುವ ಒಂದು ದೊಡ್ಡ ಪೆಟ್ಟಿಗೆ. ಯೆಹೋವನು ನೋಹನಿಗೆ ಪ್ರಾಣಿಗಳನ್ನೂ ಹಡಗಲ್ಲಿ ಸೇರಿಸಲು ಹೇಳಿದನು. ಹೀಗೆ ಪ್ರಾಣಿಗಳ ಜೀವ ಸಹ ಉಳಿಯಲು ಸಾಧ್ಯವಿತ್ತು.
ನೋಹನು ಕೂಡಲೇ ಹಡಗನ್ನ ಕಟ್ಟಲು ಶುರುಮಾಡಿದನು. ಅದನ್ನು ಕಟ್ಟಿ ಮುಗಿಸಲು ನೋಹ ಮತ್ತು ಅವನ ಕುಟುಂಬಕ್ಕೆ ಸುಮಾರು 50 ವರ್ಷ ಹಿಡಿಯಿತು. ಯೆಹೋವನು ಹಡಗನ್ನ ಹೇಗೆ ಕಟ್ಟಬೇಕೆಂದು ಹೇಳಿದನೋ ನೋಹನು ಹಾಗೆಯೇ ಕಟ್ಟಿದನು. ಹಡಗು ಕಟ್ಟುವುದರ ಜೊತೆಗೆ ಜಲಪ್ರಳಯ ಬರುತ್ತದೆ ಎಂದು ನೋಹ ಜನರನ್ನು ಎಚ್ಚರಿಸುತ್ತಿದ್ದನು. ಆದರೆ ಆ ಎಚ್ಚರಿಕೆಯನ್ನು ಜನ ಕೇಳಲೇ ಇಲ್ಲ.
ಕೊನೆಗೂ ಹಡಗಿನ ಒಳಗೆ ಹೋಗುವ ದಿನ ಬಂದೇ ಬಿಟ್ಟಿತು! ನಂತರ ಏನಾಯಿತು? ನೋಡೋಣ ಬನ್ನಿ.
“ನೋಹನ ದಿನಗಳು ಹೇಗಿದ್ದವೋ ಅದೇ ತರ ಮನುಷ್ಯಕುಮಾರನ ಸಾನಿಧ್ಯದ ಸಮಯ ಇರುತ್ತೆ.”—ಮತ್ತಾಯ 24:37
-
-
ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 6
ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ
ಕೊನೆಗೂ ನೋಹ, ಅವನ ಕುಟುಂಬ ಮತ್ತು ಪ್ರಾಣಿಗಳು ಹಡಗಿನ ಒಳಗೆ ಹೋದರು. ಯೆಹೋವ ದೇವರು ಹಡಗಿನ ಬಾಗಿಲನ್ನು ಗಟ್ಟಿಯಾಗಿ ಮುಚ್ಚಿದನು. ನಂತರ ಧೋ ಅಂತ ಮಳೆ ಸುರಿಯಲು ಆರಂಭವಾಯಿತು. ಮಳೆಯ ಆರ್ಭಟಕ್ಕೆ ಭೂಮಿಯಲ್ಲಿ ನೀರು ತುಂಬಿ ಹಡಗು ತೇಲಲು ಶುರು ಆಯಿತು. ಎಲ್ಲಿ ನೋಡಿದ್ರು ಬರೀ ನೀರು! ಹಡಗು ಹೊರಗಿದ್ದವರೆಲ್ಲಾ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಆದರೆ ನೋಹ ಮತ್ತು ಅವನ ಕುಟುಂಬ ಮಾತ್ರ ಹಡಗಲ್ಲಿ ಸುರಕ್ಷಿತವಾಗಿತ್ತು. ಅವರು ‘ಅಬ್ಬಾ! ಯೆಹೋವ ದೇವರ ಮಾತು ಕೇಳಿದ್ದು ಒಳ್ಳೇದಾಯಿತು’ ಎಂದು ಅಂದುಕೊಂಡಿರಬಹುದು.
40 ದಿನ ಹಗಲು ರಾತ್ರಿ ಧಾರಾಕಾರವಾಗಿ ಸುರಿದ ಮಳೆ ಕೊನೆಗೂ ನಿಂತಿತು. ದಿನದಿಂದ ದಿನಕ್ಕೆ ಭೂಮಿ ಮೇಲಿದ್ದ ನೀರು ಕಡಿಮೆಯಾಗುತ್ತಾ ಹೋಯಿತು. ಒಂದಿನ ಹಡಗು ಬೆಟ್ಟದ ಮೇಲೆ ಬಂದು ನಿಂತಿತು. ಆದರೆ ಭೂಮಿ ಮೇಲೆ ನೀರು ಇನ್ನೂ ಇದ್ದಿದ್ದರಿಂದ ನೋಹನ ಕುಟುಂಬ ಹಡಗೊಳಗೇ ಇರಬೇಕಾಯಿತು.
ತಿಂಗಳುಗಳು ಕಳೆದಂತೆ ನೀರು ಕಡಿಮೆಯಾಯಿತು. ಒಂದು ವರ್ಷಕ್ಕಿಂತ ಹೆಚ್ಚು ಸಮಯ ನೋಹನ ಕುಟುಂಬ ಹಡಗಿನ ಒಳಗೇ ಇತ್ತು. ಆಮೇಲೆ ಯೆಹೋವ ದೇವರು ನೋಹನಿಗೆ ಹಡಗಿಂದ ಹೊರಗೆ ಬರುವಂತೆ ಹೇಳಿದನು. ಆಹಾ! ನೋಹನ ಕುಟುಂಬಕ್ಕೆ ಒಂದು ಹೊಸ ಲೋಕಕ್ಕೆ ಕಾಲಿಟ್ಟ ಅನುಭವ ಆಯಿತು. ಹಡಗಿಂದ ಹೊರಬಂದ ನಂತರ ತಮ್ಮನ್ನು ಕಾಪಾಡಿದ್ದಕ್ಕಾಗಿ ಅವರು ಯೆಹೋವನಿಗೆ ಉಪಕಾರ ಹೇಳಿ ಬಲಿಯನ್ನ ಕೊಟ್ಟರು.
ಆ ಬಲಿಯನ್ನ ಯೆಹೋವನು ಮೆಚ್ಚಿದನು. ಭೂಮಿಯ ಮೇಲಿರುವ ಎಲ್ಲವನ್ನು ಇನ್ನೆಂದಿಗೂ ನೀರಿನಿಂದ ನಾಶ ಮಾಡುವುದಿಲ್ಲ ಎಂದು ಮಾತು ಕೊಟ್ಟನು. ಇದಕ್ಕೆ ಸಾಕ್ಷಿಯಾಗಿ ಆಕಾಶದಲ್ಲಿ ಮೊದಲ ಮಳೆಬಿಲ್ಲು ಕಾಣುವಂತೆ ಮಾಡಿದನು. ನೀವು ಬಣ್ಣಬಣ್ಣದ ಮಳೆಬಿಲ್ಲನ್ನ ನೋಡಿದ್ದೀರಿ ತಾನೇ?
ಆಮೇಲೆ ಯೆಹೋವ ದೇವರು ನೋಹ ಮತ್ತು ಅವನ ಕುಟುಂಬದವರಿಗೆ ಮಕ್ಕಳನ್ನು ಪಡೆದು ಭೂಮಿಯಲ್ಲಿ ತುಂಬಿಕೊಳ್ಳಲು ಹೇಳಿದನು.
‘ನೋಹ ಹಡಗೊಳಗೆ ಹೋಗಿ ಪ್ರಳಯ ಬಂದು ಅವ್ರನ್ನೆಲ್ಲ ಕೊಚ್ಕೊಂಡು ಹೋಗೋ ತನಕ ಅವರು ತಲೆ ಕೆಡಿಸ್ಕೊಳ್ಳಲಿಲ್ಲ.’—ಮತ್ತಾಯ 24:38, 39
-