-
ಬಾಬೆಲಿನ ಗೋಪುರಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 7
ಬಾಬೆಲಿನ ಗೋಪುರ
ಜಲಪ್ರಳಯ ಆದ ಮೇಲೆ ನೋಹನ ಪುತ್ರರಿಗೆ ಅನೇಕ ಮಕ್ಕಳು ಹುಟ್ಟಿದರು. ಅವರ ಕುಟುಂಬ ದೊಡ್ಡದಾಗುತ್ತಾ ಹೋದಂತೆ ಅವರು ಒಂದೊಂದು ದಿಕ್ಕಿಗೆ ಹೋದರು. ಹೀಗೆ ಯೆಹೋವನು ಹೇಳಿದಂತೆ ಭೂಮಿಯ ತುಂಬ ಜನರಾದರು.
ಆದರೆ ಕೆಲವು ಕುಟುಂಬಗಳು ಯೆಹೋವನ ಮಾತನ್ನು ಕೇಳಲಿಲ್ಲ. ಅವರು ‘ನಾವೆಲ್ಲ ಸೇರಿ ಒಂದು ಪಟ್ಟಣ ಕಟ್ಟೋಣ. ಆಕಾಶ ಮುಟ್ಟೊ ತರ ಎತ್ತರದ ಗೋಪುರ ಕಟ್ಟಿ ದೊಡ್ಡ ಹೆಸ್ರು ಮಾಡಿಕೊಳ್ಳೋಣ’ ಎಂದು ಹೇಳಿದರು.
ಜನರ ಈ ಯೋಚನೆ ಯೆಹೋವನಿಗೆ ಸ್ವಲ್ಪವೂ ಇಷ್ಟ ಆಗಲಿಲ್ಲ. ಆದ್ದರಿಂದ ಕಟ್ಟೋ ಕೆಲಸವನ್ನೇ ನಿಲ್ಲಿಸಿಬಿಟ್ಟನು. ಹೇಗೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಜನರೆಲ್ಲ ಬೇರೆ ಬೇರೆ ಭಾಷೆ ಮಾತಾಡುವ ಹಾಗೆ ಯೆಹೋವನು ಮಾಡಿದನು. ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ಅರ್ಥ ಆಗುತ್ತಿರಲಿಲ್ಲ. ಆದ್ದರಿಂದ ಜನರು ಕೆಲಸವನ್ನು ನಿಲ್ಲಿಸಲೇಬೇಕಾಯಿತು. ಅವರು ಕಟ್ಟುತ್ತಿದ್ದ ಪಟ್ಟಣಕ್ಕೆ ಬಾಬೆಲ್ ಎಂಬ ಹೆಸರು ಬಂತು. ಬಾಬೆಲ್ ಅಂದರೆ “ಗಲಿಬಿಲಿ.” ಹೀಗೆ ಭಾಷೆಯ ಗಲಿಬಿಲಿಯಿಂದ ಬೇಸತ್ತ ಜನ ಗಂಟು ಮೂಟೆ ಕಟ್ಟಿಕೊಂಡು ಒಂದೊಂದು ದಿಕ್ಕಿಗೆ ಹೋಗಿ ವಾಸಿಸಲು ಶುರುಮಾಡಿದರು. ಆದರೆ ಇದರಿಂದ ಬುದ್ಧಿ ಕಲಿತರಾ? ಇಲ್ಲ. ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಅನ್ನುವ ಹಾಗೆ ಅವರು ಕೆಟ್ಟದ್ದನ್ನು ಮಾಡುತ್ತಾ ಹೋದರು. ಇಂಥವರ ಮಧ್ಯೆ ಯೆಹೋವನನ್ನು ಪ್ರೀತಿಸುವವರು ಯಾರಾದರೂ ಇದ್ದರಾ? ಉತ್ತರ ಮುಂದಿನ ಅಧ್ಯಾಯದಲ್ಲಿದೆ.
“ಹೆಚ್ಚಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ತಗ್ಗಿಸ್ತಾನೆ. ತಗ್ಗಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ಮೇಲೆ ಎತ್ತುತ್ತಾನೆ.”—ಲೂಕ 18:14
-
-
ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 8
ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು
ಬಾಬೆಲ್‌ಗೆ ಹತ್ತಿರದಲ್ಲೇ ಊರ್ ಎಂಬ ಪಟ್ಟಣ ಇತ್ತು. ಅಲ್ಲಿದ್ದ ಎಲ್ಲರೂ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಅವರ ಮಧ್ಯೆ ಯೆಹೋವನನ್ನು ಮಾತ್ರ ಆರಾಧಿಸುತ್ತಿದ್ದ ಒಬ್ಬ ವ್ಯಕ್ತಿ ಇದ್ದ. ಅವನೇ ಅಬ್ರಹಾಮ.
ಒಂದು ದಿನ ಯೆಹೋವನು ಅಬ್ರಹಾಮನಿಗೆ ‘ನೀನು ನಿನ್ನ ಮನೆ, ನೆಂಟರು, ಊರನ್ನು ಬಿಟ್ಟು ನಾನು ತೋರಿಸೋ ದೇಶಕ್ಕೆ ಹೋಗು’ ಎಂದು ಹೇಳಿದನು. ‘ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ. ನಿನ್ನಿಂದ ಅನೇಕ ಜನ್ರು ಆಶೀರ್ವಾದ ಪಡ್ಕೊಳ್ತಾರೆ’ ಎಂದೂ ಮಾತುಕೊಟ್ಟನು.
ಯಾವ ದೇಶಕ್ಕೆ ಹೋಗಬೇಕು, ಏನು ಮಾಡಬೇಕು ಅನ್ನುವುದೇನೂ ಅಬ್ರಹಾಮನಿಗೆ ಗೊತ್ತಿರಲಿಲ್ಲ. ಆದರೆ ಅವನಿಗೆ ಯೆಹೋವನ ಮೇಲೆ ಭರವಸೆ ಇತ್ತು. ಆದ್ದರಿಂದ ಅಬ್ರಹಾಮ, ಹೆಂಡತಿ ಸಾರ, ತಂದೆ ತೆರಹ ಹಾಗೂ ತಮ್ಮನ ಮಗನಾದ ಲೋಟ ದೇವರ ಮಾತಿಗೆ ವಿಧೇಯರಾಗಿ ಗಂಟು ಮೂಟೆ ಕಟ್ಟಿಕೊಂಡು ತಮ್ಮ ದೂರದ ಪ್ರಯಾಣ ಮಾಡಿದರು.
ಕೊನೆಗೂ ಅಬ್ರಹಾಮ ಮತ್ತವನ ಕುಟುಂಬ ಯೆಹೋವನು ತೋರಿಸಿದ ದೇಶಕ್ಕೆ ಬಂದರು. ಅದೇ ಕಾನಾನ್. ಆಗ ಅಬ್ರಹಾಮನಿಗೆ 75 ವರ್ಷ. ಅಲ್ಲಿ ಯೆಹೋವನು ಅಬ್ರಹಾಮನಿಗೆ ‘ನೀನು ಈಗ ನೋಡುತ್ತಿರುವ ದೇಶವನ್ನು ನಾನು ನಿನ್ನ ಮಕ್ಕಳಿಗೆ ಕೊಡ್ತೀನಿ’ ಎಂದು ಮಾತು ಕೊಟ್ಟನು. ಆದರೆ ಅಷ್ಟರಲ್ಲಿ ಅಬ್ರಹಾಮ ಮತ್ತು ಸಾರಳಿಗೆ ವಯಸ್ಸಾಗಿತ್ತು. ಅವರಿಗೆ ಮಕ್ಕಳಿರಲಿಲ್ಲ. ಆದರೆ ಯೆಹೋವನು ತನ್ನ ಮಾತನ್ನು ಹೇಗೆ ಉಳಿಸಿಕೊಂಡನು? ಮುಂದೆ ಕಲಿಯೋಣ.
“ನಂಬಿಕೆ ಇದ್ದಿದ್ರಿಂದಾನೇ ಅಬ್ರಹಾಮ ದೇವರ ಮಾತನ್ನ ಕೇಳಿ . . . ಅವನು ಎಲ್ಲಿಗೆ ಹೋಗ್ತಿದ್ದಾನೆ ಅಂತ ಅವನಿಗೇ ಗೊತ್ತಿಲ್ಲದೆ ಇದ್ರೂ ಅವನು ತನ್ನ ಊರು ಬಿಟ್ಟು ಹೋದ.”—ಇಬ್ರಿಯ 11:8
-