ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಡಿಸೆಂಬರ್ 2-8
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 7-9
“ಎಣಿಸಲಾಗದ ಮಹಾ ಸಮೂಹವನ್ನು ಯೆಹೋವನು ಆಶೀರ್ವದಿಸುವನು”
it-1 ಪುಟ 997 ಪ್ಯಾರ 1
ಮಹಾ ಸಮೂಹ
ಮಹಾ ಸಮೂಹದವರು ರಕ್ಷಣೆ ಹೊಂದಿ ಇದೇ ಭೂಮಿಯಲ್ಲಿ ಜೀವಿಸುವ ಜನರಾಗಿದ್ದರೆ, ಅವರು ಸ್ವರ್ಗದಲ್ಲಿರುವ ‘ದೇವರ ಸಿಂಹಾಸನ ಮತ್ತು ಕುರಿಮರಿಯ ಮುಂದೆ ನಿಂತಿರುವುದು’ ಹೇಗೆ? (ಪ್ರಕ 7:9) ಬೈಬಲ್ ನಲ್ಲಿ “ನಿಲ್ಲುವುದು” ಎಂಬ ಪದವನ್ನು ನಾವು ಯಾರ ಮುಂದಿದ್ದೇವೋ ಅವರು ನಮ್ಮನ್ನು ಇಷ್ಟಪಡುತ್ತಾರೆ, ಮೆಚ್ಚುತ್ತಾರೆ ಅನ್ನೋ ರೀತಿಯಲ್ಲಿ ಬಳಸಲಾಗಿದೆ. (ಕೀರ್ತ 1:5; 5:5; ಜ್ಞಾನೋ 22:29; ಲೂಕ 1:19) ಪ್ರಕಟನೆ ಪುಸ್ತಕದ 6 ನೇ ಅಧ್ಯಾಯ, “ಭೂರಾಜರೂ ಉನ್ನತ ಪದವಿಯವರೂ ಮಿಲಿಟರಿ ಅಧಿಪತಿಗಳೂ ಐಶ್ವರ್ಯವಂತರೂ ಬಲಿಷ್ಠರೂ ಪ್ರತಿಯೊಬ್ಬ ದಾಸನೂ ಪ್ರತಿಯೊಬ್ಬ ಸ್ವತಂತ್ರನೂ” ದೇವರು ಅವರನ್ನು ನೋಡಬಾರದೆಂದು ಮತ್ತು ಕುರಿಮರಿಯ ಕೋಪಕ್ಕೆ ಗುರಿ ಆಗಬಾರದೆಂದು ಅಡಗಿಕೊಂಡರು ಅಂತ ಹೇಳುತ್ತೆ. ಏಕೆಂದರೆ, ದೇವರ “ಕ್ರೋಧದ ಮಹಾ ದಿನವು ಬಂದಿದೆ, ಯಾರು ನಿಲ್ಲಶಕ್ತರು?” ಅಂತ ಅವರು ಭಯಪಡುತ್ತಾರೆ. (ಪ್ರಕ 6:15-17; ಲೂಕ 21:36 ರನ್ನು ಹೋಲಿಸಿ.) ಹಾಗಾಗಿ, ದೇವರ ಆ ಕ್ರೋಧದ ದಿನದಲ್ಲಿ ಯಾರು ರಕ್ಷಿಸಲ್ಪಡುತ್ತಾರೋ, ಯಾರು ದೇವರ ಮತ್ತು ಕುರಿಮರಿಯ ಮೆಚ್ಚಿಗೆ ಪಡೆದು ಅವರ ಮುಂದೆ ನಿಲ್ಲುವ ಅರ್ಹತೆ ಹೊಂದಿದ್ದಾರೋ ಅವರೇ ‘ಮಹಾ ಸಮೂಹಕ್ಕೆ’ ಸೇರಿದವರು.
it-2 ಪುಟ 1127 ಪ್ಯಾರ 4
ಸಂಕಟ
ಯೆರೂಸಲೇಮ್ ನಾಶವಾಗಿ ಸುಮಾರು ಮೂವತ್ತು ವರ್ಷಗಳಾದ ಮೇಲೆ ಅಪೊಸ್ತಲ ಯೋಹಾನ ಎಲ್ಲಾ ಭಾಷೆ, ಕುಲ, ಜನಾಂಗಗಳಿಂದ ಬಂದ ಮಹಾ ಸಮೂಹದವರನ್ನು ಸೂಚಿಸುತ್ತಾ, “ಇವರು ಆ ಮಹಾ ಸಂಕಟವನ್ನು ಪಾರಾಗಿ ಬರುವವರು” ಅಂತ ಹೇಳಿದ. (ಪ್ರಕ 7:13, 14) ಇಲ್ಲಿ ಇವರು “ಮಹಾ ಸಂಕಟವನ್ನು ಪಾರಾಗಿ ಬರುವವರು” ಅಂತಿದೆ. ಆದರೆ ಸಂಕಟವನ್ನು ಪಾರಾಗುವುದು ಅಂದರೇನು? ಅಪೊಸ್ತಲರ ಕಾರ್ಯಗಳು 7:9,10 ರಲ್ಲಿ, ‘ದೇವರು ಅವನೊಂದಿಗಿದ್ದು (ಯೋಸೇಫ) ಅವನ ಎಲ್ಲ ಸಂಕಟಗಳಿಂದ ಅವನನ್ನು ವಿಮೋಚಿಸಿದನು’ ಅಂತ ಇದೆ. ಇಲ್ಲಿ ‘ಅವನನ್ನು ವಿಮೋಚಿಸಿದನು’ ಅಂದ್ರೆ, ದೇವರು ಯೋಸೇಫನಿಗೆ ಕಷ್ಟಗಳನ್ನು ತಾಳಿಕೊಳ್ಳಲು ಶಕ್ತಿ ಕೊಟ್ಟನು ಎಂದು ಮಾತ್ರ ಅರ್ಥ ಅಲ್ಲ. ಯೋಸೇಫ ತನಗೆ ಬಂದ ಎಲ್ಲ ಕಷ್ಟಗಳನ್ನು ಎದುರಿಸಿ ಅದರಿಂದ ಹೊರಗೆ ಬಂದನು ಅಥವಾ ಅವುಗಳನ್ನು ಪಾರುಮಾಡಿದನು ಎಂದೂ ಅರ್ಥ ಇದೆ.
it-1 ಪುಟ 996-997
ಮಹಾ ಸಮೂಹ
ಅವರು ಯಾರು? ಪ್ರಕಟನೆ 7 ನೇ ಅಧ್ಯಾಯ ಮತ್ತು ಅದರಲ್ಲಿರೋ ವಿಷಯದ ಬಗ್ಗೆ ಮಾತಾಡುವ ಬೇರೆ ಬೈಬಲ್ ವಚನಗಳನ್ನು ಹೋಲಿಸುವಾಗ “ಮಹಾ ಸಮೂಹ” ಯಾರೆಂದು ಗೊತ್ತಾಗುತ್ತೆ. ಪ್ರಕಟನೆ 7:15-17 ರಲ್ಲಿ ದೇವರು, “ತನ್ನ ಗುಡಾರವನ್ನು ಅವರ ಮೇಲೆ ಹರಡುವನು”, ಅವರನ್ನು “ಜೀವಜಲದ ಒರತೆಗಳ ಬಳಿಗೆ ನಡಿಸುವನು” ಮತ್ತು “ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು” ಅಂತ ಇದೆ. ಪ್ರಕಟನೆ 21:2-4 ರಲ್ಲೂ “ದೇವರ ಗುಡಾರವು ಮಾನವಕುಲದೊಂದಿಗೆ ಇದೆ”, “ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು” ಮತ್ತು “ಇನ್ನು ಮರಣವಿರುವುದಿಲ್ಲ” ಎಂಬ ಮಾತುಗಳಿವೆ . ಪ್ರಕಟನೆ 21 ರಲ್ಲಿ ಯೋಹಾನನು ಕಂಡ ಈ ದರ್ಶನ ಸ್ವರ್ಗದಲ್ಲಿರುವ ವ್ಯಕ್ತಿಗಳ ಬಗ್ಗೆ ಅಲ್ಲ ಬದಲಾಗಿ ಇದೇ ಭೂಮಿಯಲ್ಲಿರುವ ಜನರ ಬಗ್ಗೆ. ಇದರಿಂದ ಮಹಾ ಸಮೂಹದವರು ಇದೇ ಭೂಮಿಯ ಮೇಲೆ ಜೀವಿಸುವ ಜನರು ಅಂತ ಗೊತ್ತಾಗುತ್ತೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಪ್ರಕಟನೆ ಪುಟ 115 ಪ್ಯಾರ 4
ದೇವರ ಇಸ್ರಾಯೇಲಿಗೆ ಮುದ್ರೆ ಒತ್ತುವುದು
4 ನಿಸ್ಸಂದೇಹವಾಗಿ, ಈ ನಾಲ್ಕು ದೇವದೂತರು ನೇಮಿತ ಸಮಯದ ತನಕ ನ್ಯಾಯತೀರ್ಪನ್ನು ಜಾರಿಗೊಳಿಸುವದನ್ನು ತಡೆಹಿಡಿಯಲು ಯೆಹೋವನು ಬಳಸುವ ನಾಲ್ಕು ದೇವದೂತಗಣಗಳನ್ನು ಪ್ರತಿನಿಧಿಸುತ್ತವೆ. ದೈವಿಕ ರೋಷದ ಈ ಗಾಳಿಗಳನ್ನು ದೇವದೂತರುಗಳು ಒಂದೊಂದಾಗಿ ಉತ್ತರದಿಂದ, ದಕ್ಷಿಣದಿಂದ, ಪೂರ್ವದಿಂದ ಮತ್ತು ಪಶ್ಚಿಮದಿಂದ ಬಿಡುಗಡೆಗೊಳಿಸಿದಾಗ, ಆಗಲಿರುವ ವಿನಾಶವು ಬೃಹತ್ ಪ್ರಮಾಣದ್ದು. ಅದು ಪ್ರಾಚೀನ ಏಲಾಮ್ಯರನ್ನು ಚದರಿಸಲು, ಧ್ವಂಸಗೊಳಿಸಲು ಮತ್ತು ನಿರ್ಮೂಲಗೊಳಿಸಲು ಯೆಹೋವನು ನಾಲ್ಕು ಗಾಳಿಗಳನ್ನು ಉಪಯೋಗಿಸಿರುವುದಕ್ಕೆ, ಭಾರಿ ಪ್ರಮಾಣದ ಹೋಲಿಕೆಯಾಗಲಿರುವುದು. (ಯೆರೆಮೀಯ 49:36-38) ಇದೊಂದು ಬೃಹತ್ ಗಾತ್ರದ ಚಂಡಮಾರುತವಾಗಿದ್ದು, ಅಮ್ಮೋನ್ ಜನಾಂಗವನ್ನು ನಿರ್ಮೂಲಗೊಳಿಸಲು ಯೆಹೋವನು ಉಪಯೋಗಿಸಿದ “ತುಫಾನು” ಗಿಂತಲೂ ಎಷ್ಟೋ ಹೆಚ್ಚು ವಿಧ್ವಂಸಕಾರಿಯಾಗಲಿರುವುದು. (ಆಮೋಸ 1:13-15) ತನ್ನ ಸಾರ್ವಭೌಮತೆಯನ್ನು ಬರಲಿರುವ ಎಲ್ಲಾ ನಿತ್ಯತೆಗೆ ಅವನು ಸಮರ್ಥಿಸುವಾಗ, ಯೆಹೋವನ ರೋಷದ ದಿನದಲ್ಲಿ ನಿಲ್ಲಲು ಸೈತಾನನ ಸಂಸ್ಥೆಯ ಯಾವುದೇ ಭಾಗಕ್ಕೆ ಸಾಧ್ಯವಾಗದು.—ಕೀರ್ತನೆ 83:15, 18; ಯೆಶಾಯ 29:5, 6.
it-1 ಪುಟ 12
ಅಬ್ಯಾಡನ್
ಅಬ್ಯಾಡನ್, ಅಗಾಧ ಸ್ಥಳದ ದೂತ—ಅವನು ಯಾರು?
ಪ್ರಕಟನೆ 9:11 ರಲ್ಲಿ ‘ಅಗಾಧ ಸ್ಥಳದ ದೂತನನ್ನು’ “ಅಬ್ಯಾಡನ್” ಎಂದು ಕರೆಯಲಾಗಿದೆ. ಅದರ ಗ್ರೀಕ್ ಪದ, ಅಪಾಲ್ಯನ್ ಅಂದರೆ “ವಿನಾಶಕ.” 19 ನೇ ಶತಮಾನದಲ್ಲಿ ಈ ದೇವದೂತನು ವೆಸ್ಪೇಸಿಯನ್ ಚಕ್ರವರ್ತಿ, ಮುಹಮ್ಮದ್ ಮತ್ತು ನೆಪೋಲಿಯನ್ರವರನ್ನು ಮುನ್ಸೂಚಿಸಿದನು ಎಂದು ಹೇಳಲಾಗಿತ್ತು. ಈ ದೂತನು ಸೈತಾನನ ಹಿಂಬಾಲಕನು ಎಂಬ ಅನಿಸಿಕೆಯೂ ಇತ್ತು. ಆದರೆ ಪ್ರಕಟನೆ 20:1-3 ರಲ್ಲಿ, “ತನ್ನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈಯನ್ನು” ಹಿಡಿದುಕೊಂಡಿರುವ ಒಬ್ಬ ದೂತನ ಬಗ್ಗೆ ಹೇಳಲಾಗಿದೆ. ಈ ದೂತನು ಸೈತಾನನ ಕಡೆಯವನಲ್ಲ. ಅವನು ಸ್ವರ್ಗದಿಂದ ಬಂದಿರುವ ಯೆಹೋವನ ಪ್ರತಿನಿಧಿಯಾಗಿದ್ದು, ಸೈತಾನನ್ನು ಅಗಾಧ ಸ್ಥಳಕ್ಕೆ ದೊಬ್ಬಿ ಬಿಡುತ್ತಾನೆ. ಇಂಟರ್ಪ್ರಿಟರ್ ಬೈಬಲ್, ಪ್ರಕಟನೆ 9:11 ರ ಬಗ್ಗೆ, “ಅಬ್ಯಾಡನ್ ಸೈತಾನನ ದೂತನಲ್ಲ. ಅವನು ದೇವರು ನೇಮಿಸಿದ ನಾಶನದ ಕೆಲಸವನ್ನು ಮಾಡುವ ದೇವರ ದೂತನಾಗಿದ್ದಾನೆ” ಅಂತ ಹೇಳಿತು.
ಹೀಬ್ರು ಶಾಸ್ತ್ರಗ್ರಂಥದಲ್ಲಿ “ಅವಾದ್ಧನ್” ಎಂಬ ಪದವನ್ನು ಶಿಯೋಲ್ ಮತ್ತು ಮರಣವನ್ನು ಸೂಚಿಸಲು ಬಳಸಲಾಗಿದೆ. ಪ್ರಕಟನೆ 1:18 ರಲ್ಲಿ “ಸದಾಕಾಲಕ್ಕೂ ಜೀವಿಸುತ್ತಿರುವವನಾಗಿದ್ದೇನೆ; ಮರಣದ ಮತ್ತು ಹೇಡೀಸ್ನ ಬೀಗದ ಕೈಗಳು ನನ್ನ ಬಳಿ ಇವೆ” ಎಂದು ಯೇಸು ಹೇಳಿದ್ದಾನೆ. ಅವನಿಗೆ ಅಗಾಧ ಸ್ಥಳದ ಮೇಲೆ ಅಧಿಕಾರ ಇದೆ ಎಂದು ಲೂಕ 8:31 ತೋರಿಸುತ್ತೆ. ಅವನಿಗೆ ಸೈತಾನನ್ನೇ ನಾಶಮಾಡುವ ಶಕ್ತಿಯಿದೆ ಎಂದು ಇಬ್ರಿಯ 2:14 ರಿಂದ ಗೊತ್ತಾಗುತ್ತೆ. ಅದು ಹೇಳುವುದು, ‘ಮರಣವನ್ನು ಉಂಟುಮಾಡಶಕ್ತನಾದವನನ್ನು ಅಂದರೆ ಪಿಶಾಚನನ್ನು ತನ್ನ ಮರಣದ ಮೂಲಕ ಇಲ್ಲದಂತೆ ಮಾಡಲು ಯೇಸು ರಕ್ತಮಾಂಸದಲ್ಲಿ ಭಾಗಿಯಾದನು.’ ಪ್ರಕಟನೆ 19:11-16 ರಿಂದ ಅಬ್ಯಾಡನ್, ದುಷ್ಟರನ್ನು ನಾಶ ಮಾಡಲು ಅಥವಾ ವಧಿಸಲು ಯೆಹೋವನು ನೇಮಿಸಿದ ದೂತ ಅನ್ನೋದು ವ್ಯಕ್ತ.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ನಾವು ನಿಮ್ಮೊಂದಿಗೆ ಬರುವೆವು”
12 ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರ ಸಂಖ್ಯೆ ಹಲವಾರು ವರ್ಷಗಳಿಂದ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಇತ್ತೀಚೆಗೆ ಆ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಾ ಇದೆ. ಇದರ ಬಗ್ಗೆ ನಮಗೆ ಚಿಂತೆಯಾಗಬೇಕಾ? ಇಲ್ಲ. ಯಾಕೆಂದು ನೋಡೋಣ.
13 “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ.” (2 ತಿಮೊ. 2:19) ಸ್ಮರಣೆಯ ಸಮಯದಲ್ಲಿ ಎಷ್ಟು ಮಂದಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುತ್ತಾರೆಂದು ಸಹೋದರರು ಲೆಕ್ಕಮಾಡಿ ವರದಿಸುತ್ತಾರೆ. ಆದರೆ ಯಾರು ನಿಜವಾಗಿ ಅಭಿಷಿಕ್ತರು ಎಂಬುದು ಈ ಸಹೋದರರಿಗೆ ತಿಳಿದಿಲ್ಲ. ಅದು ಯೆಹೋವನಿಗೆ ಮಾತ್ರ ಗೊತ್ತು. ಹಾಗಾಗಿ ಆ ಸಂಖ್ಯೆಯಲ್ಲಿ ತಾವು ಅಭಿಷಿಕ್ತರೆಂದು ನೆನಸುವ ಆದರೆ ನಿಜವಾಗಿ ಅಭಿಷಿಕ್ತರಲ್ಲದವರ ಸಂಖ್ಯೆಯೂ ಸೇರಿರುತ್ತದೆ. ಉದಾಹರಣೆಗೆ, ರೊಟ್ಟಿ ದ್ರಾಕ್ಷಾಮದ್ಯ ಸೇವಿಸುತ್ತಿದ್ದ ಕೆಲವರು ಸಮಯಾನಂತರ ಅದನ್ನು ನಿಲ್ಲಿಸಿ ಬಿಟ್ಟರು. ಇನ್ನೂ ಕೆಲವರಿಗೆ ಮಾನಸಿಕ ಇಲ್ಲವೇ ಭಾವನಾತ್ಮಕ ಸಮಸ್ಯೆಗಳು ಇರುವುದರಿಂದ ತಾವು ಸ್ವರ್ಗದಲ್ಲಿ ಕ್ರಿಸ್ತನೊಟ್ಟಿಗೆ ಆಳಲಿದ್ದೇವೆಂಬುದು ಅವರ ಅನಿಸಿಕೆ. ಹಾಗಾಗಿ ನಿಜವಾಗಿ ಅಭಿಷಿಕ್ತರಾಗಿರುವವರು ಈಗ ಭೂಮಿ ಮೇಲೆ ಎಷ್ಟು ಮಂದಿ ಉಳಿದಿದ್ದಾರೆಂದು ನಮಗೆ ಸರಿಯಾಗಿ ಗೊತ್ತಿಲ್ಲ.
14 ಯೇಸು ಅಭಿಷಿಕ್ತರನ್ನು ಸ್ವರ್ಗಕ್ಕೆ ಕೊಂಡೊಯ್ಯಲು ಬರುವಾಗ ಭೂಮಿಯ ಅನೇಕ ಭಾಗಗಳಲ್ಲಿ ಅಭಿಷಿಕ್ತರು ಇರುವರು. ಯೇಸು “ತುತೂರಿಯ ಮಹಾ ಶಬ್ದದೊಂದಿಗೆ ತನ್ನ ದೂತರನ್ನು ಕಳುಹಿಸುವನು ಮತ್ತು ಅವರು ಅವನು ಆಯ್ದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು” ಎನ್ನುತ್ತದೆ ಬೈಬಲ್. (ಮತ್ತಾ. 24:31) ಕಡೇ ದಿವಸಗಳಲ್ಲಿ ಭೂಮಿ ಮೇಲೆ ಉಳಿದಿರುವ ಅಭಿಷಿಕ್ತರ ಸಂಖ್ಯೆ ಚಿಕ್ಕದ್ದಾಗಿರುವುದೆಂದು ಸಹ ಬೈಬಲ್ ತೋರಿಸುತ್ತದೆ. (ಪ್ರಕ. 12:17) ಆದರೆ ಮಹಾ ಸಂಕಟ ಆರಂಭವಾಗುವ ಸಮಯದಲ್ಲಿ ಎಷ್ಟು ಮಂದಿ ಉಳಿದಿರುವರೆಂದು ಅದು ಹೇಳುವುದಿಲ್ಲ.
15 ಅಭಿಷಿಕ್ತರನ್ನು ಯಾವಾಗ ಆಯ್ಕೆಮಾಡಬೇಕೆಂದು ಯೆಹೋವನು ನಿರ್ಣಯಿಸುತ್ತಾನೆ. (ರೋಮ. 8:28-30) ಯೆಹೋವನು ಅಭಿಷಿಕ್ತರ ಆಯ್ಕೆಮಾಡಲಾರಂಭಿಸಿದ್ದು ಯೇಸುವಿನ ಪುನರುತ್ಥಾನದ ನಂತರವೇ. ಒಂದನೇ ಶತಮಾನದಲ್ಲಿ ನಿಜ ಕ್ರೈಸ್ತರೆಲ್ಲರೂ ಅಭಿಷಿಕ್ತರಾಗಿದ್ದರೆಂದು ತೋರುತ್ತದೆ. ಅನಂತರ ನೂರಾರು ವರ್ಷಗಳ ತನಕ ಇದ್ದ ಕ್ರೈಸ್ತರಲ್ಲಿ ಹೆಚ್ಚಿನವರು ಕೇವಲ ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದರು, ನಿಜವಾಗಿ ಕ್ರಿಸ್ತನ ಹಿಂಬಾಲಕರಾಗಿರಲಿಲ್ಲ. ಹಾಗಿದ್ದರೂ ಆ ವರ್ಷಗಳಲ್ಲಿ ಅವರ ಮಧ್ಯೆ ನಿಜ ಕ್ರೈಸ್ತರಾಗಿದ್ದ ಕೆಲವರು ಇದ್ದರು. ಅವರನ್ನು ಯೆಹೋವನು ಅಭಿಷಿಕ್ತರನ್ನಾಗಿ ಮಾಡಿದನು. ಇವರು ಯೇಸು ಹೇಳಿದಂತೆ ಕಳೆಗಳ ಮಧ್ಯೆ ಬೆಳೆಯುವ ಗೋದಿಯಂತಿದ್ದರು. (ಮತ್ತಾ. 13:24-30) ಈ ಕಡೇ ದಿವಸಗಳಲ್ಲಿ ಯೆಹೋವನು ಜನರನ್ನು 1,44,000 ಮಂದಿಯ ಭಾಗವಾಗಿರಲು ಆಯ್ಕೆಮಾಡುವುದನ್ನು ಮುಂದುವರಿಸಿದ್ದಾನೆ. (ಕೊನೆ ಟಿಪ್ಪಣಿ ನೋಡಿ.) ಕಡೇ ದಿವಸಗಳ ಕೊನೆ ಭಾಗದಲ್ಲೂ ದೇವರು ಕೆಲವರನ್ನು ಆಯ್ಕೆಮಾಡಲು ನಿರ್ಣಯಿಸುವಲ್ಲಿ ಅದನ್ನು ಪ್ರಶ್ನಿಸಲು ನಾವ್ಯಾರು? (ಯೆಶಾ. 45:9; ದಾನಿ. 4:35; ರೋಮನ್ನರಿಗೆ 9:11, 16 ಓದಿ.) (ಕೊನೆ ಟಿಪ್ಪಣಿ ನೋಡಿ.) ಯೇಸು ಹೇಳಿದ ಒಂದು ದೃಷ್ಟಾಂತದಲ್ಲಿ ದಿನದ ಕೊನೆಗೆ ಬಂದು ಕೆಲಸಮಾಡಿದವರಿಗೆ ಯಜಮಾನನು ಕೂಲಿ ಕೊಟ್ಟದ್ದರ ಬಗ್ಗೆ ಕೆಲವು ಕೆಲಸಗಾರರು ಗೊಣಗಿದಂತೆ ನಾವು ಗೊಣಗಬಾರದು.—ಮತ್ತಾಯ 20:8-15 ಓದಿ.
16 ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿರುವ ಎಲ್ಲರೂ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿನ’ ಭಾಗವಲ್ಲ. (ಮತ್ತಾ. 24:45-47) ಯೆಹೋವ ಮತ್ತು ಯೇಸು ಒಂದನೇ ಶತಮಾನದಲ್ಲಿ ಮಾಡಿದಂತೆ ಇಂದು ಸಹ ಅನೇಕರಿಗೆ ಉಣಿಸಲಿಕ್ಕೆ ಅಂದರೆ ಬೋಧಿಸಲಿಕ್ಕೆ ಕೆಲವೇ ಮಂದಿಯನ್ನು ಬಳಸುತ್ತಿದ್ದಾರೆ. ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನು ಬರೆಯಲು ಒಂದನೇ ಶತಮಾನದಲ್ಲಿದ್ದ ಅಭಿಷಿಕ್ತ ಕೈಸ್ತರಲ್ಲಿ ಬೆರಳೆಣಿಕೆಯಷ್ಟೇ ಮಂದಿಯನ್ನು ಬಳಸಲಾಯಿತು. ಹಾಗೆಯೇ ಇಂದು, ದೇವಜನರಿಗೆ ‘ತಕ್ಕ ಸಮಯಕ್ಕೆ ಆಹಾರವನ್ನು ಕೊಡುವ’ ಜವಾಬ್ದಾರಿ ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವರಿಗೆ ಮಾತ್ರ ಇದೆ.
ಡಿಸೆಂಬರ್ 9-15
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 10-12
“‘ಇಬ್ಬರು ಸಾಕ್ಷಿಗಳನ್ನು’ ಕೊಲ್ಲಲಾಗುತ್ತೆ ಮತ್ತು ಪುನಃ ಎಬ್ಬಿಸಲಾಗುತ್ತೆ”
ವಾಚಕರಿಂದ ಪ್ರಶ್ನೆಗಳು
ಪ್ರಕಟನೆ 11 ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಇಬ್ಬರು ಸಾಕ್ಷಿಗಳು ಯಾರು?
ಪ್ರಕಟನೆ 11:3 ರಲ್ಲಿ 1,260 ದಿನಗಳವರೆಗೆ ಪ್ರವಾದಿಸಿದ ಇಬ್ಬರು ಸಾಕ್ಷಿಗಳ ಕುರಿತು ತಿಳಿಸಲಾಗಿದೆ. ಅದೇ ವೃತ್ತಾಂತದ ಮುಂದಿನ ವಚನಗಳಲ್ಲಿ ಹೀಗನ್ನಲಾಗಿದೆ: ಆ ಸಾಕ್ಷಿಗಳನ್ನು ಕಾಡುಮೃಗ ‘ಜಯಿಸುತ್ತದೆ ಮತ್ತು ಕೊಲ್ಲುತ್ತದೆ.’ ಆದರೆ “ಮೂರೂವರೆ ದಿವಸಗಳಾದ” ನಂತರ ಅವರಿಗೆ ಪುನಃ ಜೀವ ಬರುತ್ತದೆ. ಇದನ್ನು ನೋಡಿದವರೆಲ್ಲರಿಗೂ ಆಶ್ಚರ್ಯವಾಗುತ್ತದೆ.—ಪ್ರಕ. 11:7, 11.
ಈ ಇಬ್ಬರು ಸಾಕ್ಷಿಗಳು ಯಾರು? ಅವರು ಯಾರೆಂದು ಗುರುತಿಸಲು ಅದೇ ವೃತ್ತಾಂತದಲ್ಲಿರುವ ವಿವರಗಳು ನಮಗೆ ಸಹಾಯ ಮಾಡುತ್ತವೆ. ಮೊದಲನೇ ವಿವರವೇನೆಂದರೆ, ಈ ಇಬ್ಬರು ಸಾಕ್ಷಿಗಳು “ಎರಡು ಆಲೀವ್ ಮರಗಳಿಂದಲೂ ಎರಡು ದೀಪಸ್ತಂಭಗಳಿಂದಲೂ ಸಂಕೇತಿಸಲ್ಪಡುತ್ತಾರೆ” ಎಂದು ತಿಳಿಸಲಾಗಿದೆ. (ಪ್ರಕ. 11:4) ಇದು, ಜೆಕರ್ಯನ ಪ್ರವಾದನೆಯಲ್ಲಿ ತಿಳಿಸಲಾಗಿರುವ ದೀಪಸ್ತಂಭ ಮತ್ತು ಎರಡು ಆಲೀವ್ ಮರಗಳನ್ನು ನಮಗೆ ನೆನಪಿಸುತ್ತದೆ. ಜೆಕರ್ಯನ ಪ್ರವಾದನೆಯಲ್ಲಿರುವ ಆಲೀವ್ ಮರಗಳು ಯೆಹೋವನಿಂದ ಅಭಿಷಿಕ್ತರಾದ ‘ಇಬ್ಬರು ಪುರುಷರನ್ನು’ ಚಿತ್ರಿಸುತ್ತದೆ. ಅವರು ‘ಸರ್ವಭೂಲೋಕದೊಡೆಯನ ಸನ್ನಿಧಿಸೇವಕರಾಗಿದ್ದ’ ದೇಶಾಧಿಪತಿ ಜೆರುಬ್ಬಾಬೆಲ್ ಮತ್ತು ಮಹಾ ಯಾಜಕ ಯೆಹೋಶುವ ಆಗಿದ್ದಾರೆ. (ಜೆಕ. 4:1-3, 14) ಎರಡನೇ ವಿವರವೇನೆಂದರೆ, ಆ ಇಬ್ಬರು ಸಾಕ್ಷಿಗಳು ಮೋಶೆ ಮತ್ತು ಎಲೀಯನು ಮಾಡಿದ ಸೂಚಕಕಾರ್ಯಗಳಿಗೆ ಹೋಲುವಂಥ ಕೆಲಸಗಳನ್ನು ಮಾಡುವರೆಂದು ವರ್ಣಿಸಲಾಗಿದೆ.—ಪ್ರಕಟನೆ 11:5, 6 ನ್ನು ಅರಣ್ಯಕಾಂಡ 16:1-7, 28-35 ಮತ್ತು 1 ಅರಸುಗಳು 17:1; 18:41-45ರೊಂದಿಗೆ ಹೋಲಿಸಿ.
ಪ್ರಕಟನೆ 11 ನೇ ಅಧ್ಯಾಯ ಮತ್ತು ಜೆಕರ್ಯ 4:1-3, 14 ರಲ್ಲಿರುವ ವಿವರಗಳಲ್ಲಿ ಯಾವ ಸಮಾನತೆಯಿದೆ? ಈ ವೃತ್ತಾಂತಗಳು ಪರೀಕ್ಷೆಯ ಸಮಯದಲ್ಲಿ ದೇವರ ಅಭಿಷಿಕ್ತರ ಪೈಕಿ ಯಾರು ಮುಂದಾಳತ್ವ ವಹಿಸುತ್ತಿದ್ದರೊ ಅವರಿಗೆ ಸೂಚಿಸುತ್ತದೆ. ಇದೇ ರೀತಿ ಪ್ರಕಟನೆ 11 ನೇ ಅಧ್ಯಾಯವನ್ನು ನೆರವೇರಿಸುತ್ತಾ “ಗೋಣಿತಟ್ಟುಗಳನ್ನು ಧರಿಸಿಕೊಂಡು” ಮೂರುವರೆ ವರ್ಷ ಸಾರಿದವರು ದೇವರ ರಾಜ್ಯ ಸ್ವರ್ಗದಲ್ಲಿ 1914 ರಲ್ಲಿ ಸ್ಥಾಪನೆಯಾದಾಗ ಅಭಿಷಿಕ್ತ ಸಹೋದರರಲ್ಲಿ ಯಾರು ಮುಂದಾಳತ್ವ ವಹಿಸುತ್ತಿದ್ದರೊ ಅವರಾಗಿದ್ದರು.
ಗೋಣಿತಟ್ಟುಗಳನ್ನು ಧರಿಸಿಕೊಂಡು ಸಾರಿದ ಸಮಯಾವಧಿಯ ಕೊನೆಯಲ್ಲಿ ಈ ಅಭಿಷಿಕ್ತರನ್ನು ಸಾಂಕೇತಿಕವಾಗಿ ಕೊಲ್ಲಲಾಯಿತು ಅಂದರೆ ಜೈಲಿಗೆ ಹಾಕಲಾಯಿತು. ಅವರನ್ನು ಜೈಲಿನಲ್ಲಿ ಹಾಕಲಾದ ಅವಧಿಯನ್ನು ಸಾಂಕೇತಿಕವಾಗಿ ಮೂರುವರೆ ದಿವಸಗಳು ಎಂದು ಸೂಚಿಸಲಾಗಿದೆ. ಈ ಅವಧಿಯನ್ನು ಮೂರುವರೆ ವರ್ಷಗಳಿಗೆ ಹೋಲಿಸುವಾಗ ಅಲ್ಪ ಸಮಯವಾಗಿತ್ತು. ದೇವಜನರ ವೈರಿಗಳು ಅವರ ಕೆಲಸವನ್ನು ಧೂಳಿಪಟಮಾಡಿದ್ದೇವೆಂದು ನೆನಸಿ ಅತ್ಯಾನಂದದಿಂದ ಹಿರಿಹಿರಿ ಹಿಗ್ಗಿದರು.—ಪ್ರಕ. 11:8-10.
ಆದರೆ ಪ್ರವಾದನೆಯಲ್ಲಿ ತಿಳಿಸಲಾದಂತೆ ಮೂರುವರೆ ದಿನದ ಅಂತ್ಯದಲ್ಲಿ ಆ ಎರಡು ಸಾಕ್ಷಿಗಳಿಗೆ ಮರುಜೀವ ನೀಡಲಾಯಿತು. ಅಂದರೆ ಅವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಇವರಲ್ಲಿ ನಂಬಿಗಸ್ತರಾಗಿ ಉಳಿದವರು 1919 ರಲ್ಲಿ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಂದ ವಿಶೇಷ ನೇಮಕವನ್ನು ಪಡೆದರು. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಾಗಿ’ ಕೆಲಸ ಮಾಡುವ ನೇಮಕ ಪಡೆದವರಲ್ಲಿ ಇವರೂ ಸೇರಿದ್ದರು. ಈ ಆಳು ಕಡೇ ದಿವಸಗಳಲ್ಲಿ ದೇವಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಬೇಕಿತ್ತು.—ಮತ್ತಾ. 24:45-47; ಪ್ರಕ. 11:11, 12.
ಆಸಕ್ತಿಕರವಾಗಿ, ಪ್ರಕಟನೆ 11:1, 2 ಈ ಘಟನೆಗಳನ್ನು ಆಧ್ಯಾತ್ಮಿಕ ಆಲಯವನ್ನು ಅಳತೆಮಾಡಲಾಗುವ ಸಮಯಕ್ಕೆ ಜೋಡಿಸುತ್ತದೆ. ಆಧ್ಯಾತ್ಮಿಕ ಆಲಯದ ಇದೇ ರೀತಿಯ ಪರಿಶೀಲನೆಯನ್ನು ಮತ್ತು ಅದನ್ನು ಹಿಂಬಾಲಿಸಿ ಮಾಡಲಾಗುವ ಶುದ್ಧೀಕರಣವನ್ನು ಮಲಾಕಿಯ 3 ನೇ ಅಧ್ಯಾಯದಲ್ಲೂ ತಿಳಿಸಲಾಗಿದೆ. (ಮಲಾ. 3:1-4) ಈ ಪರಿಶೀಲನೆ ಮತ್ತು ಶುದ್ಧೀಕರಣದ ಕೆಲಸಕ್ಕೆ ಎಷ್ಟು ಸಮಯ ಹಿಡಿಯಿತು? ಅದು 1914 ರಿಂದ ಆರಂಭಿಸಿ 1919 ರ ಆರಂಭದ ತಿಂಗಳುಗಳ ತನಕ ನಡೆಯಿತು. ಈ ಸಮಯಾವಧಿಯಲ್ಲಿ ಪ್ರಕಟನೆ 11 ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ 1,260 ದಿನಗಳು (42 ತಿಂಗಳುಗಳು) ಮತ್ತು ಸಾಂಕೇತಿಕ ಮೂರುವರೆ ದಿನಗಳು ಒಳಗೊಂಡಿವೆ.
ಸತ್ಕ್ರಿಯೆಗಳಿಗಾಗಿ ಹುರುಪುಳ್ಳ ಜನರನ್ನು ಶುದ್ಧೀಕರಿಸಲಿಕ್ಕಾಗಿ ಯೆಹೋವನು ಈ ಆಧ್ಯಾತ್ಮಿಕ ಶೋಧನೆಯ ಕೆಲಸವನ್ನು ಏರ್ಪಡಿಸಿದನು. ಇದಕ್ಕಾಗಿ ನಾವು ತುಂಬಾ ಸಂತೋಷಿಸುತ್ತೇವೆ. (ತೀತ 2:14) ಅಷ್ಟುಮಾತ್ರವಲ್ಲ, ಆ ಪರೀಕ್ಷೆಯ ಸಮಯದಲ್ಲಿ ನಂಬಿಗಸ್ತ ಅಭಿಷಿಕ್ತರ ಪೈಕಿ ಯಾರು ಮುಂದಾಳತ್ವ ವಹಿಸಿದರೊ ಅವರ ಮಾದರಿಯನ್ನು ಸಹ ನಾವು ಗಣ್ಯಮಾಡುತ್ತೇವೆ. ಇವರೇ ಪ್ರಕಟನೆ 11 ನೇ ಅಧ್ಯಾಯದಲ್ಲಿ ತಿಳಿಸಲಾದ ಇಬ್ಬರು ಸಾಕ್ಷಿಗಳು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ಪುಟ 880-881
ಸುರುಳಿ, ಪಟ್ಟಿ
ಸಾಂಕೇತಿಕ ಬಳಕೆ. ಬೈಬಲಲ್ಲಿ “ಸುರುಳಿ” ಎಂಬ ಪದವನ್ನು ಅನೇಕ ಬಾರಿ ಸಾಂಕೇತಿಕವಾಗಿ ಬಳಸಲಾಗಿದೆ. ಯೆಹೆಜ್ಕೇಲ ಮತ್ತು ಜೆಕರ್ಯ ಇಬ್ಬರೂ ದರ್ಶನದಲ್ಲಿ ಎರಡೂ ಕಡೆ ಬರೆದಿದ್ದ ಸುರುಳಿಗಳನ್ನು ಕಂಡರು. ಸಾಮಾನ್ಯವಾಗಿ ಸುರುಳಿಯ ಒಂದು ಕಡೆ ಮಾತ್ರ ಬರೆಯುತ್ತಿದ್ದರು. ಆದರೆ ಎರಡೂ ಕಡೆ ಬರೆದಿದ್ದ ಈ ಅಸಾಮಾನ್ಯ ಸುರುಳಿಗಳು, ಅದರಲ್ಲಿದ್ದ ನ್ಯಾಯತೀರ್ಪಿನ ಸಂದೇಶ ಎಷ್ಟು ಗಂಭೀರವಾಗಿತ್ತು ಎಂದು ತೋರಿಸಿಕೊಟ್ಟಿತು. (ಯೆಹೆ 2:9–3:3; ಜೆಕ 5:1-4) ಪ್ರಕಟನೆಯಲ್ಲಿ, ಬಿಗಿಯಾಗಿ ಏಳು ಮುದ್ರೆಗಳನ್ನೊತ್ತಿದ ಸುರುಳಿಯ ಬಗ್ಗೆ ಒಂದು ದರ್ಶನವಿದೆ. ಆ ಸುರುಳಿಯನ್ನು ತೆರೆದು ಅದರಲ್ಲಿ ಏನು ಬರೆದಿದೆ ಅಂತ ನೋಡುವ ಅಧಿಕಾರ ಯಾರಿಗೂ ಇರಲಿಲ್ಲ. ದೇವರ ಕುರಿಮರಿಗೆ ಮಾತ್ರ ಆ ಅಧಿಕಾರ ಇತ್ತು. (ಪ್ರಕ 5:1, 12; 6:1, 12-14) ದರ್ಶನದಲ್ಲಿ ಮುಂದೆ, ಯೋಹಾನನಿಗೆ ಒಂದು ಸುರುಳಿ ಕೊಡಲಾಯಿತು. ಅದನ್ನು ತಿನ್ನುವಂತೆ ಅವನಿಗೆ ಹೇಳಲಾಯಿತು. ಅವನದನ್ನು ತಿಂದಾಗ ಅದು ಸಿಹಿಯಾಗಿದೆ ಅಂತ ಅವನಿಗೆ ಅನಿಸಿತು. ಆದರೆ ಅದರಿಂದ ಅವನ ಹೊಟ್ಟೆ ಕಹಿಯಾಯಿತು. ಆ ಸುರುಳಿ ತೆರೆದಿತ್ತು ಮತ್ತು ಅದಕ್ಕೆ ಮುದ್ರೆ ಹಾಕಿರಲಿಲ್ಲ. ಹಾಗಾಗಿ, ಅದರಲ್ಲಿರುವ ವಿಷಯ ಯೋಹಾನನು ಓದಿ ಅರ್ಥಮಾಡಿಕೊಳ್ಳಬೇಕು ಅನ್ನೋದೇ ದೇವರ ಉದ್ದೇಶವಾಗಿತ್ತು ಅಂತ ಗೊತ್ತಾಗುತ್ತೆ. ಆ ಸುರುಳಿಯಲ್ಲಿರುವ ಸಂದೇಶ ದೇವರ ಸಂದೇಶವಾಗಿತ್ತು. ಹಾಗಾಗಿ ಯೋಹಾನನಿಗೆ ಅದು ಜೇನಿನಂತೆ ‘ಸಿಹಿಯಾಗಿತ್ತು.’ ಆದರೆ ಆ ಸಂದೇಶ ಕಹಿ ಸಹ ಆಗಿತ್ತು. ಅದು ಹೇಗೆ? ಆ ಸಂದೇಶದಲ್ಲಿ ಜನರು ಮುಂದೆ ಅನುಭವಿಸಲಿರುವ ಕೆಟ್ಟ ಸಂಗತಿಗಳೇ ಸೇರಿದ್ದವು. ಅದನ್ನು ಯೋಹಾನನು ಜನರಿಗೆ ಹೋಗಿ ಸಾರಬೇಕಿತ್ತು. (ಪ್ರಕ 10:1-11) ಯೆಹೆಜ್ಕೇಲನಿಗೂ ಇಂಥದ್ದೇ ಅನುಭವ ಆಗಿತ್ತು. ಅವನಿಗೆ ಕೊಟ್ಟ ಸುರುಳಿಯಲ್ಲಿ ಬರೀ “ಗೋಳು, ಮೂಲುಗು, ಮೊರೆ ಇವುಗಳೇ “ಇದ್ದವು.—ಯೆಹೆ 2:10.
it-2 ಪುಟ 187 ಪ್ಯಾರ 7-9
ಪ್ರಸವವೇದನೆ
ಯೋಹಾನನು ಕಂಡ ದರ್ಶನದಲ್ಲಿ ಅವನು ಒಂದು ಸ್ವರ್ಗೀಯ ಸ್ತ್ರೀಯನ್ನು ಕಂಡನು. ಅವಳು ‘ನೋವಿನಿಂದಲೂ ಪ್ರಸವವೇದನೆಯಿಂದಲೂ ಕೂಗುತ್ತಿದ್ದಳು.’ ನಂತರ “ಎಲ್ಲ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಪಾಲನೆಮಾಡಲಿದ್ದ ಒಬ್ಬ ಪುತ್ರನನ್ನು, ಒಂದು ಗಂಡುಮಗುವನ್ನು” ಅವಳು ಹೆತ್ತಳು. ಆ ಮಗುವನ್ನು ನುಂಗಲು ಅಥವಾ ಕೊಲ್ಲಲು ಘಟಸರ್ಪವು ಪ್ರಯತ್ನಪಟ್ಟರೂ ಆ “ಮಗು ಫಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.” (ಪ್ರಕ 12:1, 2, 4-6) ಇಸ್ರಾಯೇಲ್ಯರಲ್ಲಿ ಮಗು ಹುಟ್ಟಿದಾಗ ಅದನ್ನು ಅದರ ತಂದೆಯ ಬಳಿ ತೆಗೆದುಕೊಂಡು ಹೋಗುತ್ತಿದ್ದರು. ಆ ಮಗುವನ್ನು ತಂದೆ ತನ್ನ ಮಗು ಎಂದು ಸ್ವೀಕರಿಸುತ್ತಾನೆ ಅಂತ ತೋರಿಸುವ ಪದ್ಧತಿ ಅದಾಗಿತ್ತು. ಈ ವಚನದಲ್ಲಿ ‘ಮಗು ದೇವರ ಬಳಿಗೆ ಎತ್ತಲ್ಪಟ್ಟಿತು’ ಅಂದರೆ ದೇವರು ಆ ಮಗುವನ್ನು ತನ್ನ ಮಗನಾಗಿ ಸ್ವೀಕರಿಸಿದನು ಎಂದರ್ಥ. ಆ “ಸ್ವರ್ಗೀಯ ಸ್ತ್ರೀಯು” ದೇವರ “ಪತ್ನಿ”, “ಮೇಲಣ ಯೆರೂಸಲೇಮ್”, ಕ್ರಿಸ್ತನ ಮತ್ತು ಅವನ ಆಧ್ಯಾತ್ಮಿಕ ಸಹೋದರರ “ತಾಯಿ” ಸಹ ಆಗಿದ್ದಾಳೆ.—ಗಲಾ 4:26; ಇಬ್ರಿ 2:11, 12, 17.
ದೇವರ ಸ್ವರ್ಗೀಯ “ಸ್ತ್ರೀ” ಪರಿಪೂರ್ಣಳು. ಹಾಗಾಗಿ ಅವಳಿಗೆ ಪ್ರಸವವೇದನೆಯ ನಿಜವಾದ ನೋವು ಬರಲ್ಲ. ಅಂದರೆ, ಇಲ್ಲಿ ಹೇಳಿರುವ ಪ್ರಸವವೇದನೆ ಸಾಂಕೇತಿಕ. ಆ ‘ಸ್ತೀಯು’, ಮಗು ಬೇಗನೇ ಹೊರಬರಲಿದೆ ಎಂದು ಗ್ರಹಿಸುವಳು ಅಂತ ಇದು ಸೂಚಿಸುತ್ತೆ.—ಪ್ರಕ 12:2.
ಆ “ಮಗು”ಯಾರು? ಅವನು ‘ಎಲ್ಲ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಪಾಲನೆಮಾಡಲಿದ್ದನು.’ ಇದನ್ನು ಕೀರ್ತನೆ 2:6-9 ರಲ್ಲಿ ಮೆಸ್ಸೀಯನ ಬಗ್ಗೆ ಹೇಳಲಾದ ಪ್ರವಾದನೆಯಲ್ಲಿ ಮುಂತಿಳಿಸಲಾಗಿತ್ತು. ಆದರೆ ಯೋಹಾನನು ಈ ದರ್ಶನ ಕಂಡದ್ದು ಯೇಸು ಭೂಮಿಯ ಮೇಲೆ ಹುಟ್ಟಿ, ಸತ್ತು, ಪುನರುತ್ಥಾನವಾಗಿ ಸುಮಾರು ವರ್ಷಗಳು ಕಳೆದ ಮೇಲೆ. ಹಾಗಾಗಿ ಆ “ಮಗು” ಯೇಸುವನ್ನು ಸೂಚಿಸುತ್ತಿರಲಿಲ್ಲ. ಯೇಸು ಪುನರುತ್ಥಾನವಾದ ಮೇಲೆ, “ದೇವರ ಬಲಗಡೆಯಲ್ಲಿ ಕುಳಿತುಕೊಂಡನು. ಅಂದಿನಿಂದ ತನ್ನ ವೈರಿಗಳನ್ನು ತನ್ನ ಪಾದಪೀಠವಾಗಿ ಮಾಡುವ ತನಕ ಕಾಯುತ್ತಿರುವನು” ಅಂತ ಬೈಬಲ್ ಹೇಳುತ್ತೆ. ಹಾಗಾಗಿ ಈ ಪ್ರವಾದನೆ, ದೇವಪುತ್ರನಾದ ಯೇಸು ಮುನ್ನಡೆಸಲಿರುವ ಮೆಸ್ಸೀಯ ರಾಜ್ಯದ ಹುಟ್ಟನ್ನು ಸೂಚಿಸುತ್ತೆ ಅಂತ ಹೇಳಬಹುದು.—ಇಬ್ರಿ 10:12, 13; ಕೀರ್ತ 110:1; ಪ್ರಕ 12:10.
ಡಿಸೆಂಬರ್ 16-22
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 13-16
“ಭಯಾನಕ ಮೃಗಗಳಿಗೆ ಭಯಪಡಬೇಡಿ”
ಯೆಹೋವನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರು
6 ಕ್ರಿಸ್ತ ಶಕ 96 ರ ಸುಮಾರಿಗೆ ಅಪೊಸ್ತಲ ಯೋಹಾನನು ಯೇಸು ಕ್ರಿಸ್ತನಿಂದ ಭವಿಷ್ಯದ ಕುರಿತಾದ ಹಲವು ವಿಸ್ಮಯಕಾರಿ ದರ್ಶನಗಳನ್ನು ಪಡೆದುಕೊಂಡನು. (ಪ್ರಕ. 1:1) ಅವನು ಕಂಡ ಒಂದು ದರ್ಶನದಲ್ಲಿ ಪಿಶಾಚನನ್ನು ಪ್ರತಿನಿಧಿಸುವ ಘಟಸರ್ಪ ಸಮುದ್ರ ತೀರದಲ್ಲಿ ನಿಂತಿತ್ತು. (ಪ್ರಕಟನೆ 13:1, 2 ಓದಿ.) ಮಾತ್ರವಲ್ಲ, ಏಳು ತಲೆಗಳಿದ್ದ ವಿಲಕ್ಷಣ ಮೃಗವೊಂದು ಸಮುದ್ರದೊಳಗಿಂದ ಏರಿಬಂತು ಮತ್ತು ಅದಕ್ಕೆ ಸೈತಾನ ಮಹಾ ಅಧಿಕಾರ ಕೊಟ್ಟನು. ಅನಂತರ ಕಡುಗೆಂಪು ಬಣ್ಣದ ಮತ್ತೊಂದು ಮೃಗವನ್ನು ಸಹ ಯೋಹಾನ ಕಾಣುತ್ತಾನೆ. ಅದು ಪ್ರಕಟನೆ 13:1 ತಿಳಿಸುವ ಮೃಗದ ವಿಗ್ರಹವಾಗಿದ್ದು ಅದಕ್ಕೂ ಏಳು ತಲೆಗಳು ಇದ್ದವು. ಆ ಏಳು ತಲೆಗಳು “ಏಳು ಮಂದಿ ರಾಜರು” ಅಥವಾ ಏಳು ಸರಕಾರಗಳು ಎಂದು ದೇವದೂತನೊಬ್ಬನು ಯೋಹಾನನಿಗೆ ತಿಳಿಸಿದನು. (ಪ್ರಕ. 13:14, 15; 17:3, 9, 10) ಯೋಹಾನನು ಪ್ರಕಟನೆ ಪುಸ್ತಕವನ್ನು ಬರೆದ ವೇಳೆಗೆ ಅವರಲ್ಲಿ ಐದು ಮಂದಿ ಬಿದ್ದುಹೋಗಿದ್ದರು. ಒಬ್ಬನು ಆಧಿಪತ್ಯ ನಡೆಸುತ್ತಿದ್ದನು, ಮತ್ತೊಬ್ಬನು ಇನ್ನೂ ಆಧಿಪತ್ಯಕ್ಕೆ ಬಂದಿರಲಿಲ್ಲ. ಈ ಸರಕಾರಗಳು ಅಥವಾ ಲೋಕಶಕ್ತಿಗಳು ಯಾವುವು? ಪ್ರಕಟನೆ 13:1 ರಲ್ಲಿ ತಿಳಿಸಲಾಗಿರುವ ಮೃಗದ ಪ್ರತಿಯೊಂದು ತಲೆಯ ಕುರಿತು ನಾವೀಗ ನೋಡೋಣ. ಅದರೊಂದಿಗೆ ಆ ಕೆಲವು ಲೋಕಶಕ್ತಿಗಳ ಬಗ್ಗೆ ದಾನಿಯೇಲ ನೀಡಿರುವ ಸೂಕ್ಷ್ಮ ವಿವರಗಳನ್ನು ಸಹ ನೋಡಲಿರುವೆವು. ಕೆಲವು ಲೋಕಶಕ್ತಿಗಳು ಉದಯಿಸುವ ನೂರಾರು ವರ್ಷಗಳ ಮೊದಲೇ ಅವುಗಳ ಬಗ್ಗೆ ಅವನು ವಿವರಗಳನ್ನು ನೀಡಿದ್ದನು.
ಪ್ರಕಟನೆ ಪುಟ 194 ಪ್ಯಾರ 26
ಎರಡು ಭಯಂಕರ ಮೃಗಗಳೊಂದಿಗೆ ಹೋರಾಡುವುದು
26 ಅದೇನಾಗಿರಬಲ್ಲದು? ಆ್ಯಂಗ್ಲೋ-ಅಮೆರಿಕನ್ ಲೋಕ ಶಕ್ತಿ—ಮೊದಲನೆಯ ಕಾಡು ಮೃಗದ ಏಳನೆಯ ತಲೆಯೇ ಆಗಿದೆ, ಆದರೆ ಒಂದು ವಿಶೇಷ ಪಾತ್ರದಲ್ಲಿ! ದರ್ಶನದಲ್ಲಿ ಒಂದು ಬೇರೆಯೇ ಆದ ಕಾಡು ಮೃಗವೆಂದು ಅದನ್ನು ಪ್ರತ್ಯೇಕಿಸುವುದರಿಂದ, ಲೋಕ ರಂಗದ ಮೇಲೆ ಅದು ಸ್ವಚ್ಛಂದತೆಯಿಂದ ಹೇಗೆ ವರ್ತಿಸುತ್ತದೆ ಎಂದು ಹೆಚ್ಚು ಸ್ಪಷ್ಟವಾಗಿ ನೋಡಲು ನಮಗೆ ಸಹಾಯ ಮಾಡುತ್ತದೆ. ಈ ಲಾಕ್ಷಣಿಕ ಎರಡು ಕೊಂಬುಗಳ ಕಾಡು ಮೃಗವು ಎರಡು ಸಹ ಬಾಳೆಯ್ವ, ಸ್ವತಂತ್ರವಾಗಿರುವ, ಆದರೆ ಸಹಕರಿಸುವ ರಾಜಕೀಯ ಶಕ್ತಿಗಳನ್ನು ಒಳಗೊಂಡಿದೆ. “ಕುರಿಮರಿಗಿರುವಂತೆ” ಅದರ ಎರಡು ಕೊಂಬುಗಳು, ಅದು ಇಡೀ ಲೋಕವು ತನ್ನೆಡೆಗೆ ನೋಡತಕ್ಕದ್ದಾದ ಒಂದು ಜ್ಞಾನೋದಯ ಹೊಂದಿದ ಸರಕಾರದ ರೂಪವಾಗಿದ್ದು, ತನ್ನನ್ನು ಶಾಂತ ಮತ್ತು ನಿರಾಕ್ರಮಣದ ಸ್ವಭಾವದ್ದು ಎಂದು ತೋರಿಸುತ್ತದೆ. ಆದರೆ ಅದು “ಘಟಸರ್ಪದಂತೆ” ಮಾತಾಡುತ್ತದೆ ಹೇಗಂದರೆ ಅದರ ಆಳಿಕೆಯ ರೀತಿಯನ್ನು ಸ್ವೀಕರಿಸದಿರುವ ಕಡೆಗಳಲ್ಲಿಲ್ಲಾ ಅದು ಒತ್ತಡ ಮತ್ತು ಬೆದರಿಕೆಗಳನ್ನು, ಮುಚ್ಚುಮರೆಯಿಲ್ಲದ ಬಲಪ್ರಯೋಗವನ್ನು ಕೂಡ ಬಳಸುತ್ತದೆ. ದೇವರ ಕುರಿಮರಿಯ ಆಳಿಕ್ವೆಯ ಕೆಳಗೆ ದೇವರ ರಾಜ್ಯಕ್ಕೆ ಅಧೀನತೆಯನ್ನು ಅದು ಪ್ರೋತ್ಸಾಹಿಸಿರುವುದಿಲ್ಲ, ಬದಲಾಗಿ ಮಹಾ ಘಟಸರ್ಪವಾದ ಸೈತಾನನ ಅಭಿರುಚಿಗಳನ್ನು ಅದು ಪ್ರೋತ್ಸಾಹಿಸಿದೆ. ಅದು ಮೊದಲನೆಯ ಕಾಡು ಮೃಗವನ್ನು ಆರಾಧಿಸುವುದಕ್ಕೆ ಹೊಂದಿಕೆಯಾಗಿರುವ, ರಾಷ್ಟ್ರೀಯ ವಿಭಜನೆಗಳನ್ನು ಮತ್ತು ದ್ವೇಷಗಳನ್ನು ಪ್ರವರ್ಧಿಸಿದೆ.
ಪ್ರಕಟನೆ ಪುಟ 195 ಪ್ಯಾರ 30-31
ಎರಡು ಭಯಂಕರ ಮೃಗಗಳೊಂದಿಗೆ ಹೋರಾಡುವುದು
30 ಇತಿಹಾಸದ ಕಾರ್ಯಸರಣಿಯು ಈ ವಿಗ್ರಹವನ್ನು ಬ್ರಿಟನ್ ಮತ್ತು ಅಮೆರಿಕದಿಂದ ನಿಯೋಜಿಸಲ್ಪಟ್ಟ, ಪ್ರವರ್ಧಿಸಲ್ಪಟ್ಟ ಮತ್ತು ಬೆಂಬಲಿಸಲ್ಪಟ್ಟ ಮತ್ತು ಆರಂಭದಲ್ಲಿ ಜನಾಂಗ ಸಂಘವೆಂದು ಪ್ರಸಿದ್ಧವಾದ ಸಂಸ್ಥೆಯೋಪಾದಿ ಗುರುತಿಸುತ್ತದೆ. ತದನಂತರ, ಪ್ರಕಟನೆ 17ನೆಯ ಅಧ್ಯಾಯದಲ್ಲಿ, ಸ್ವತಂತ್ರವಾದ ಅಸ್ತಿತ್ವ ಇರುವ ಜೀವಂತವಿರುವ, ಉಸಿರಾಡುವ ಕಡುಗೆಂಪುವರ್ಣದ ಕಾಡು ಮೃಗವಾಗಿ ಅದು ಇನ್ನೊಂದು ಭಿನ್ನವಾದ ಚಿಹ್ನೆಯ ಕೆಳಗೆ ಕಾಣಬರುತ್ತದೆ. ಈ ಅಂತಾರಾಷ್ಟ್ರೀಯ ಸಂಘವು ‘ಮಾತಾಡುತ್ತದೆ,’ ಅಂದರೆ ಮಾನವಕುಲಕ್ಕೆ ಶಾಂತಿ ಮತ್ತು ಭದ್ರತೆಯನ್ನು ಅದು ಮಾತ್ರ ತರಶಕ್ತವಾಗಿದೆ ಎಂದು ಬಡಾಯಿಕೊಚ್ಚಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ, ಕಂಠೋಕ್ತ ದೂಷಣೆ ಮತ್ತು ನಿಂದೆಗಳನ್ನು ವಿನಿಮಯಮಾಡಿಕೊಳ್ಳಲು ಇರುವ ಸದಸ್ಯ ರಾಷ್ಟ್ರಗಳ ಒಂದು ವಾದಸ್ಥಾನವಾಗಿ ಅದು ಪರಿಣಮಿಸಿದೆ. ಅದರ ಅಧಿಕಾರಕ್ಕೆ ಮನ್ನಣೆಯನ್ನೀಯದ ಯಾವುದೇ ರಾಷ್ಟ್ರ ಯಾ ಜನಾಂಗಕ್ಕೆ ಸಾಮಾನ್ಯ ಹಕ್ಕುಬಾಧ್ಯತೆಗಳಿಂದ ಬಹಿಷ್ಕಾರದ ಯಾ ಸಜೀವ ಮರಣದ ಬೆದರಿಕೆಯನ್ನೊಡ್ಡಿದೆ. ಅದರ ಭಾವನಾಶಾಸ್ತ್ರಗಳನುಸಾರ ನಡೆಯಲು ತಪ್ಪುವ ಜನಾಂಗಗಳನ್ನು ಹೊರದಬ್ಬುವ ಬೆದರಿಕೆಯನ್ನು ಸಹ ಅದು ಒಡ್ಡಿದೆ. ಮಹಾ ಸಂಕಟದ ಮೇಲ್ನುಗ್ಗುವಿಕೆಯಲ್ಲಿ, ಕಾಡು ಮೃಗದ ಈ ವಿಗ್ರಹದ ಮಿಲಿಟರಿ “ಕೊಂಬುಗಳು” ಒಂದು ಧ್ವಂಸಕಾರಿ ಪಾತ್ರವನ್ನು ನೆರವೇರಿಸುವುವು.—ಪ್ರಕಟನೆ 7:14; 17:8, 16.
31 ಎರಡನೆಯ ಲೋಕ ಯುದ್ಧದಂದಿನಿಂದ, ಕಾಡು ಮೃಗದ ವಿಗ್ರಹವು—ಈಗ ಸಂಯುಕ್ತ ರಾಷ್ಟ್ರ ಸಂಘವೆಂದು ತೋರಿಬಂದಿದೆ—ಅಕ್ಷರಾರ್ಥಕ ರೀತಿಯಲ್ಲಿ ಈಗಾಗಲೇ ಹತಿಸುವಿಕೆಯನ್ನು ನಡಿಸಿದೆ. ಉದಾಹರಣೆಗೆ, 1950 ರಲ್ಲಿ ಸಂಯುಕ್ತ ರಾಷ್ಟ್ರ ಸೇನೆಯು ಉತ್ತರ ಮತ್ತು ದಕ್ಷಿಣ ಕೊರಿಯದ ನಡುವಣ ಯುದ್ಧದಲ್ಲಿ ರಣರಂಗಕ್ಕೆ ಇಳಿಯಿತು. ಸಂಯುಕ್ತ ರಾಷ್ಟ್ರ ಸೇನೆಯು ದಕ್ಷಿಣ ಕೊರಿಯದವರೊಂದಿಗೆ ಸೇರಿ 14,20,000 ಮಂದಿ ಉತ್ತರ ಕೊರಿಯದವರನ್ನು ಮತ್ತು ಚೀನಿಯರನ್ನು ಕೊಂದಿದೆ ಎಂದು ಅಂದಾಜಿಸಲಾಗಿದೆ. ತದ್ರೀತಿಯಲ್ಲಿ, 1960 ರಿಂದ 1964 ರ ತನಕ ಸಂಯುಕ್ತ ರಾಷ್ಟ್ರ ಸೇನೆಗಳು ಕಾಂಗೋದಲ್ಲಿ (ಈಗ ಸಾಯೀರ್) ಬಹಳಷ್ಟು ಕ್ರಿಯಾತ್ಮಕವಾಗಿದ್ದವು. ಇದಲ್ಲದೆ, ಪೋಪರಾದ ಪೌಲ್ VI ಮತ್ತು ಜಾನ್ ಪೌಲ್ II ಸಹಿತ ಲೋಕದ ಧುರೀಣರು, ಈ ವಿಗ್ರಹವು ಶಾಂತಿಗಾಗಿ ಮನುಷ್ಯನ ಬಾಳುವ ಮತ್ತು ಅತ್ಯುತ್ತಮ ನಿರೀಕ್ಷೆಯೆಂದು ಸಮರ್ಥಿಸುವುದನ್ನು ಮುಂದುವರಿಸಿದ್ದಾರೆ. ಮಾನವ ಕುಲವು ಅದನ್ನು ಸೇವಿಸಲು ತಪ್ಪುವುದಾದರೆ, ಮಾನವ ವರ್ಗವು ತನ್ನನ್ನು ಸ್ವತಃ ನಾಶಗೊಳಿಸಿಕೊಳ್ಳುವುದು ಎಂದು ಅವರು ಪಟ್ಟುಹಿಡಿಯುತ್ತಾರೆ. ಹೀಗೆ ಅವರು ವಿಗ್ರಹದೊಂದಿಗೆ ಮತ್ತು ಅದರ ಆರಾಧನೆಯೊಂದಿಗೆ ಹೋಗಲು ನಿರಾಕರಿಸುವ ಎಲ್ಲಾ ಮಾನವರು ಸಾಂಕೇತಿಕವಾಗಿ ಕೊಲ್ಲಲ್ಪಡುವಂತೆ ಕಾರಣವಾಗುತ್ತಾರೆ.—ಹೋಲಿಸಿರಿ ಧರ್ಮೋಪದೇಶಕಾಂಡ 5:8, 9.
ಪ್ರಕಟನೆ ಪುಸ್ತಕದ ಮುಖ್ಯಾಂಶಗಳು—II
13:16, 17. “ಕ್ರಯ ವಿಕ್ರಯ”ದಂಥ ದಿನನಿತ್ಯದ ಚಟುವಟಿಕೆಗಳ ವಿಷಯದಲ್ಲಿ ನಮಗೆ ತೊಂದರೆಗಳು ಎದುರಾದರೂ, ಮೃಗವು ನಮ್ಮ ಜೀವಿತಗಳನ್ನು ಆಳುವಂತೆ ಬಿಡಬಾರದು. ‘ನಮ್ಮ ಬಲಗೈಯ ಮೇಲಾಗಲಿ ಹಣೆಯ ಮೇಲಾಗಲಿ ಮೃಗದ ಗುರುತನ್ನು’ ಸ್ವೀಕರಿಸುವುದರ ಅರ್ಥ, ಮೃಗವು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವಂತೆ ಇಲ್ಲವೇ ಯೋಚನಾರೀತಿಯನ್ನು ಪ್ರಭಾವಿಸುವಂತೆ ಬಿಟ್ಟಿದ್ದೇವೆಂದಾಗಿದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಲೋಕಾಂತ್ಯದ ಕುರಿತ ಸತ್ಯ
ಬೈಬಲಿನ ಪ್ರಕಟನೆ ಪುಸ್ತಕದ ಒಂದು ಭವಿಷ್ಯವಾಣಿಗನುಸಾರ ಬಲು ಬೇಗನೆ ದೇವಜನರ ಮೇಲೆ ಒಂದು ದಾಳಿಯಾಗಲಿದೆ. ಸೈತಾನ ಮತ್ತವನ ದೆವ್ವಗಳು ಮಾನವ ಸರ್ಕಾರಗಳನ್ನು ಈ ದಾಳಿಗೆ ಚಿತಾಯಿಸಿ ಅವರ ಸೈನ್ಯಗಳನ್ನು ಕೂಡಿಸುವಂತೆ ಮಾಡುವವು. ದಾಳಿಮಾಡಲು ಬಂದವರನ್ನು ದೇವರು ಧೂಳಿಪಟ ಮಾಡುವನು, ಕೋಟಿಗಟ್ಟಲೆ ಮಂದಿ ಸತ್ತುಬೀಳುವರು.—ಪ್ರಕಟನೆ 19:11-18.
ಅರ್ಮಗೆದ್ದೋನ್ ಯುದ್ಧಕ್ಕೆ ನಾಂದಿಹಾಡುವುದು ಯೆಹೋವನಲ್ಲ. ತನ್ನ ಜನರನ್ನು ರಕ್ಷಿಸಲಿಕ್ಕಾಗಿ ಅವನು ಮಧ್ಯಬರುತ್ತಾನೆ ಅಷ್ಟೇ. ಕಾಲ್ಕೆರೆದು ಜಗಳಕ್ಕಿಳಿಯುವುದು ‘ಇಡೀ ನಿವಾಸಿತ ಭೂಮಿಯ ರಾಜರು’ ಅಂದರೆ ಲೋಕ ನಾಯಕರು. ಸೂತ್ರಧಾರಿಯಾಗಿರುವ ಸೈತಾನನ ಕೈಗೊಂಬೆಗಳಾಗಿ ಸರಕಾರೀ/ಮಿಲಿಟರಿ ಸಂಘಟನೆಗಳು ಯೆಹೋವ ದೇವರ ಆರಾಧಕರ ಮೇಲೆ ಮುಗಿಬಿದ್ದು ದಾಳಿಮಾಡಿ ಅವರನ್ನು ಅಳಿಸಿಹಾಕಲು ಪ್ರಯತ್ನಿಸುವರು.—ಪ್ರಕಟನೆ 16:13, 14; 19:17, 18.
“ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!
9 ಮಹಾ ಸಂಕಟದ ಸಮಯದಲ್ಲಿ ನಾವು ‘ರಾಜ್ಯದ ಸುವಾರ್ತೆಯನ್ನು’ ಸಾರುವುದಿಲ್ಲ. ಏಕೆಂದರೆ ಅದನ್ನು ಸಾರುವ ಸಮಯ ಕಳೆದು ಹೋಗಿರುತ್ತದೆ. “ಅಂತ್ಯ”ದ ಸಮಯ ಬಂದಿರುತ್ತದೆ! (ಮತ್ತಾ. 24:14) ಆಗ ದೇವರ ಜನರು ಎಲ್ಲಾ ಜನರನ್ನು ಬಾಧಿಸಲಿರುವ ನ್ಯಾಯತೀರ್ಪಿನ ಕುರಿತ ಸಂದೇಶವನ್ನು ಧೈರ್ಯದಿಂದ ಘೋಷಿಸುವರು. ಆ ಸಂದೇಶ ಸೈತಾನನ ದುಷ್ಟ ಲೋಕ ಇನ್ನೇನು ಪೂರ್ತಿಯಾಗಿ ನಾಶವಾಗಲಿದೆ ಎಂದಾಗಿರಬಹುದು. ಬೈಬಲ್ ಈ ಸಂದೇಶವನ್ನು ಆಲಿಕಲ್ಲುಗಳಿಗೆ ಹೋಲಿಸಿ ಹೀಗನ್ನುತ್ತದೆ: “ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು; ಪ್ರತಿಯೊಂದು ಕಲ್ಲು ಸುಮಾರು ಒಂದು ತಲಾಂತು ತೂಕವುಳ್ಳದ್ದಾಗಿತ್ತು; ಆ ಆಲಿಕಲ್ಲಿನ ಬಾಧೆಯ ಕಾರಣ ಮನುಷ್ಯರು ದೇವರನ್ನು ದೂಷಿಸಿದರು, ಏಕೆಂದರೆ ಅದರ ಬಾಧೆಯು ಅಸಾಮಾನ್ಯವಾಗಿ ಮಹತ್ತಾದದ್ದಾಗಿತ್ತು.”—ಪ್ರಕ. 16:21.
ಡಿಸೆಂಬರ್ 23-29
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 17-19
“ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ”
15 ಜನಾಂಗಗಳನ್ನು ಹೊಡೆಯುವುದಕ್ಕಾಗಿ ಅವನ ಬಾಯೊಳಗಿಂದ ಹರಿತವಾದ ಒಂದು ಉದ್ದ ಕತ್ತಿಯು ಹೊರಚಾಚುತ್ತದೆ; ಅವನು ಅವರನ್ನು ಕಬ್ಬಿಣದ ಕೋಲಿನಿಂದ ನಡೆಸುವನು. ಅವನು ಸರ್ವಶಕ್ತನಾದ ದೇವರ ಉಗ್ರ ಕೋಪದ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ಸಹ ತುಳಿಯುತ್ತಾನೆ. 16 ಅವನ ಮೇಲಂಗಿಯ ಮೇಲೆ, ಅಂದರೆ ಅವನ ತೊಡೆಯ ಮೇಲೆ ರಾಜರ ರಾಜನು ಮತ್ತು ಕರ್ತರ ಕರ್ತನು ಎಂಬ ಹೆಸರು ಬರೆಯಲ್ಪಟ್ಟಿದೆ.
w08E 4/1 ಪುಟ 8 ಪ್ಯಾರ 3-4
ಅರ್ಮಗೆದ್ದೋನ್—ಎಲ್ಲಾ ಯುದ್ಧಗಳನ್ನು ನಿಲ್ಲಿಸುವ ದೇವರ ಯುದ್ಧ
ದುಷ್ಟರು ಆಳ್ವಿಕೆ ಮಾಡುವಷ್ಟು ಕಾಲ ಒಳ್ಳೇ ಜನರಿಗೆ ನಿಜ ಶಾಂತಿ ಮತ್ತು ಭದ್ರತೆಯನ್ನು ಪಡೆಯಲು ಸಾಧ್ಯವಿಲ್ಲ. (ಜ್ಞಾನೋಕ್ತಿ 29:2; ಪ್ರಸಂಗಿ 8:9) ಎಲ್ಲಾ ಭ್ರಷ್ಟ ಮತ್ತು ಕೆಟ್ಟ ಜನರನ್ನು, ಬದಲಾಯಿಸಿ ಅವರನ್ನು ಒಳ್ಳೆಯವರನ್ನಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಿಜ ಶಾಂತಿ ಮತ್ತು ಭದ್ರತೆಯನ್ನು ಪಡೆಯಲು ಇರೋದು ಒಂದೇ ದಾರಿ - ದುಷ್ಟರ ನಾಶನ. ಇಂಥವರ ಬಗ್ಗೆ ಸೊಲೊಮೋನ, “ಶಿಷ್ಟನಿಗೆ ಪ್ರತಿಯಾಗಿ ದುಷ್ಟನೂ ಸತ್ಯವಂತರಿಗೆ ಬದಲಾಗಿ ದ್ರೋಹಿಯೂ ದಂಡನೆಗೆ ಈಡು” ಅಂತ ಹೇಳಿದನು.—ಜ್ಞಾನೋಕ್ತಿ 21:18.
ದೇವರೇ ನ್ಯಾಯಾಧೀಶನಾಗಿರುವುದರಿಂದ ದುಷ್ಟರ ವಿರುದ್ಧ ನ್ಯಾಯವನ್ನೇ ಮಾಡ್ತಾನೆ ಅನ್ನೋದು ಖಂಡಿತ. “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂದು ಅಬ್ರಹಾಮನು ಕೇಳಿದನು. ಯೆಹೋವನು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆ ಎಂದು ಅಬ್ರಹಾಮನು ಮುಂದೆ ತಿಳಿದುಕೊಂಡನು. (ಆದಿಕಾಂಡ 18:25) ಯೆಹೋವನು ದುಷ್ಟರ ನಾಶನದಲ್ಲಿ ಸ್ವಲ್ಪನೂ ಖುಷಿಪಡುವುದಿಲ್ಲ ಎಂದು ಬೈಬಲ್ ನಮಗೆ ಹೇಳುತ್ತೆ. ಅವರು ಬದಲಾಗದಿದ್ದರೆ ಮಾತ್ರ ಯೆಹೋವನು ಅವರನ್ನು ನಾಶಮಾಡುತ್ತಾನೆ.—ಯೆಹೆಜ್ಕೇಲ 18:32; 2 ಪೇತ್ರ 3:9.
it-1 ಪುಟ 1146 ಪ್ಯಾರ 1
ಕುದುರೆ
ಅಪೊಸ್ತಲ ಯೋಹಾನನು ದರ್ಶನದಲ್ಲಿ, ಕ್ರಿಸ್ತನು ಬಿಳಿ ಕುದುರೆಯ ಮೇಲೆ ಸವಾರಿ ಮಾಡುವುದನ್ನು ಕಂಡನು. ಇವನೊಂದಿಗೆ ಒಂದು ದೊಡ್ಡ ಸೈನ್ಯ ಇತ್ತು. ಅವನ ಸೈನ್ಯದ ಎಲ್ಲಾ ಸೈನಿಕರು ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದರು. ಯೇಸು ತನ್ನ ತಂದೆ ಹಾಗೂ ದೇವರಾದ ಯೆಹೋವನಿಗಾಗಿ ವೈರಿಗಳ ವಿರುದ್ಧ ಮಾಡುವ ನೀತಿ ಮತ್ತು ನ್ಯಾಯದ ಯುದ್ಧವನ್ನು ಈ ದರ್ಶನ ಸೂಚಿಸಿತು. (ಪ್ರಕ 19:11, 14) ಪ್ರಕಟನೆ ಪುಸ್ತಕದ ಹಿಂದಿನ ಅಧ್ಯಾಯಗಳಲ್ಲಿ ಬೇರೆ ಬೇರೆ ಕುದುರೆ ಸವಾರರು ಮತ್ತು ಅವರ ಸವಾರಿ, ಕ್ರಿಸ್ತನು ರಾಜನಾಗಿ ತೆಗೆದುಕೊಳ್ಳುವ ಕ್ರಮವನ್ನು ಹಾಗೂ ಅದರ ಪರಿಣಾಮಗಳನ್ನು ಸೂಚಿಸುತ್ತೆ.—ಪ್ರಕ 6:2-8.
ಪ್ರಕಟನೆ ಪುಟ 286 ಪ್ಯಾರ 24
ಯೋಧ-ಅರಸನು ಅರ್ಮಗೆದೋನ್ನಲ್ಲಿ ವಿಜಯಿಯಾಗುತ್ತಾನೆ
24 ಸೈತಾನನ ರಾಜಕೀಯ ಸಂಸ್ಥೆಯನ್ನು ಪ್ರತಿನಿಧಿಸುವ, ಸಮುದ್ರದಿಂದ ಬರುವ ಏಳು ತಲೆಗಳ, ಹತ್ತು ಕೊಂಬುಗಳ ಕಾಡು ಮೃಗವು ಮತ್ತು ಇದರೊಂದಿಗೆ ಸುಳ್ಳು ಪ್ರವಾದಿಯಾದ ಏಳನೆಯ ಲೋಕ ಶಕ್ತಿಯು ವಿಸ್ಮೃತಿಯೊಳಗೆ ಮಗುಚಿಬೀಳುವುದು. (ಪ್ರಕಟನೆ 13:1, 11-13; 16:13) “ಸಜೀವವಾಗಿರುವಾಗಲೇ” ಯಾ ಭೂಮಿಯ ಮೇಲಿರುವ ದೇವರ ಜನರ ಮೇಲೆ ತಮ್ಮ ಏಕೀಕೃತ ವಿರೋಧದಲ್ಲಿ ಇನ್ನೂ ಕಾರ್ಯ ನಡಿಸುವಾಗಲೇ ಅವರು “ಬೆಂಕಿಯ ಕೆರೆ” ಯೊಳಗೆ ಬಿಸಾಡಲ್ಪಡುತ್ತಾರೆ. ಇದು ಅಕ್ಷರಾರ್ಥಕವಾದ ಒಂದು ಬೆಂಕಿಯ ಕೆರೆಯೋ? ಅಲ್ಲ, ಹೇಗೆ ಕಾಡು ಮೃಗ ಮತ್ತು ಸುಳ್ಳು ಪ್ರವಾದಿಯು ಅಕ್ಷರಾರ್ಥಕ ಪ್ರಾಣಿಗಳಾಗಿಲ್ಲವೋ ಹಾಗೆಯೇ. ಅದರ ಬದಲು ಅದು ಸಂಪೂರ್ಣ, ಅಂತಿಮ ನಾಶನದ, ಪುನಃ ಬರಲಾಗದ ಸ್ಥಳದ ಚಿಹ್ನೆಯಾಗಿದೆ. ಅನಂತರ ಇಲ್ಲಿ ಮರಣ ಮತ್ತು ಹೇಡಿಸ್ ಹಾಗೂ ಪಿಶಾಚನು ತಾನೇ ದೊಬ್ಬಲ್ಪಡಲಿದ್ದಾರೆ. (ಪ್ರಕಟನೆ 20:10, 14) ಅದು ನಿಶ್ಚಯವಾಗಿಯೂ ದುಷ್ಟರಿಗಿರುವ ನಿತ್ಯ ಯಾತನೆಯ ಇನ್ನೊಂದು ಅತಿ ಘೋರಸ್ಥಳ ಆಗಿರುವುದಿಲ್ಲ. ಯಾಕಂದರೆ ಇಂಥದೊಂದು ಸ್ಥಳದ ಕಲ್ಪನೆಯು ತಾನೇ ಯೆಹೋವನಿಗೆ ಅಸಹ್ಯವಾಗಿದೆ.—ಯೆರೆಮೀಯ 19:5; 32:35; 1 ಯೋಹಾನ 4:8, 16.
ಪ್ರಕಟನೆ ಪುಟ 286 ಪ್ಯಾರ 25
ಯೋಧ-ಅರಸನು ಅರ್ಮಗೆದೋನ್ನಲ್ಲಿ ವಿಜಯಿಯಾಗುತ್ತಾನೆ
25 ಸರಕಾರದ ನೇರ ಭಾಗವಾಗದೆ ಇರುವ, ಆದರೆ ಮಾನವ ಕುಲದ ಈ ಭ್ರಷ್ಟ ಲೋಕದ ತಿದ್ದಲಾಗದ ಭಾಗವಾಗಿರುವ ಇತರರೆಲ್ಲರನ್ನೂ ಅಂತೆಯೇ ಆ “ಕುದುರೆಯ ಮೇಲೆ ಕೂತಿದ್ದವನ ಉದ್ದ ಕತ್ತಿಯಿಂದ . . . ಕೊಲಲ್ಲಾಯಿತು.” ಯೇಸುವು ಅವರನ್ನು ಮರಣಕ್ಕೆ ಯೋಗ್ಯರೆಂದು ತೀರ್ಪು ನೀಡುವನು. ಅವರ ವಿಷಯದಲ್ಲಾದರೋ ಬೆಂಕಿಯ ಕೆರೆ ತಿಳಿಸಲ್ಪಟ್ಟಿಲ್ಲವಾದುದರಿಂದ ಅವರಿಗೆ ಪುನರುತ್ಥಾನವಿರುವುದೆಂದು ನಾವು ನಿರೀಕ್ಷಿಸಬಹುದೋ? ಆ ಸಮಯದಲ್ಲಿ ಯೆಹೋವನ ನ್ಯಾಯಾಧೀಶನಿಂದ ಹತಿಸಲ್ಪಟ್ಟವರು ಪುನರುತ್ಥಾನಗೊಳಿಸಲ್ಪಡುವರೆಂದು ನಮಗೆ ಎಲ್ಲಿಯೂ ಹೇಳಲ್ಪಟ್ಟಿರುವುದಿಲ್ಲ. ಯೇಸುವು ಸ್ವತಃ ನುಡಿದಂತೆ, “ಕುರಿ” ಗಳಾಗಿರದ ಎಲ್ಲರೂ “ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ” ಅಂದರೆ “ನಿತ್ಯ ಶಿಕ್ಷೆಗೂ” ಹೋಗುವರು. (ಮತ್ತಾಯ 25:33, 41, 46) ಇದು “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನ” ವನ್ನು ತುತ್ತತುದಿಗೇರಿಸಲಿರುವುದು.—2 ಪೇತ್ರ 3:7; ನಹೂಮ 1:2, 7-9; ಮಲಾಕಿಯ 4:1.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಪ್ರಕಟನೆ ಪುಟ 247-248 ಪ್ಯಾರ 5-6
ಭೀಕರ ರಹಸ್ಯವೊಂದು ಬಗೆಹರಿಸಲ್ಪಡುವುದು
5 “ಕಾಡು ಮೃಗವು ಮೊದಲು . . . ಇತ್ತು.” ಹೌದು, ಜನವರಿ 10, 1920 ರಿಂದ ಹಿಡಿದು ಒಂದು ಯಾ ಇನ್ನೊಂದು ಸಮಯದಲ್ಲಿ 63 ಜನಾಂಗಗಳು ಭಾಗವಹಿಸುವುದರೊಂದಿಗೆ, ಅದು ಜನಾಂಗ ಸಂಘವಾಗಿ ಅಸ್ತಿತ್ವದಲ್ಲಿತ್ತು. ಆದರೆ, ಜಪಾನ್, ಜರ್ಮನಿ ಮತ್ತು ಇಟೆಲಿ ಸರದಿಯಾಗಿ ಹಿಂದೆ ಸರಿದವು, ಮತ್ತು ಜನಾಂಗ ಸಂಘದಿಂದ ಸೋವಿಯೆಟ್ ಯೂನಿಯನನ್ನು ಹೊರಹಾಕಲಾಯಿತು. ಸಪ್ಟಂಬರ 1939 ರಲ್ಲಿ ಜರ್ಮನಿಯ ನಾಜಿ ನಿರಂಕುಶ ಪ್ರಭುವು ಎರಡನೆಯ ಲೋಕ ಯುದ್ಧವನ್ನು ಆರಂಭಿಸಿದನು. ಲೋಕದಲ್ಲಿ ಸಮಾಧಾನವನ್ನು ಕಾಪಾಡಲು ವಿಫಲ ಹೊಂದಿದ ಜನಾಂಗ ಸಂಘವು ನಿಷ್ಕ್ರಿಯತೆಯ ಅಧೋಲೋಕದೊಳಗೆ ಕಾರ್ಯತಃ ಧುಮುಕಿತು. ಅದು 1942 ರೊಳಗೆ ಹಿಂದೆ ಇದ್ದದ್ದಾಗಿ ಪರಿಣಮಿಸಿತು. ಇದರ ಮುಂಚೆ ಯಾ ಸ್ವಲ್ಪ ನಂತರದ ಸಮಯದಲ್ಲಿ ಆಗಿರದೆ—ನೇರವಾಗಿ ಆ ಸಂದಿಗ್ಧ ಸಮಯದಲ್ಲಿಯೇ—ಯೆಹೋವನು ತನ್ನ ಜನರಿಗೆ ದರ್ಶನದ ಪೂರ್ಣ ಗಾಢ ಅರ್ಥವನ್ನು ಬಿಚ್ಚಿದನು! ನ್ಯೂ ವರ್ಲ್ಡ್ ತೀಯೊಕ್ರ್ಯಾಟಿಕ್ ಎಸೆಂಬ್ಲಿಯಲ್ಲಿ, ಅಧ್ಯಕ್ಷ ನಾರ್ ಪ್ರವಾದನೆಯೊಂದಿಗೆ ಹೊಂದಿಕೆಯಲ್ಲಿ “ಮೃಗವು . . . ಈಗ ಇಲ್ಲ” ಎಂಬುದಾಗಿ ಘೋಷಿಸಲು ಸಾಧ್ಯವಾಯಿತು. ಅವರು ಅನಂತರ ಈ ಪ್ರಶ್ನೆಯನ್ನು ಕೇಳಿದರು, “ಜನಾಂಗ ಸಂಘವು ಗುಂಡಿಯಲ್ಲಿಯೇ ಉಳಿಯುವುದೋ?” ಪ್ರಕಟನೆ 17:8 ನ್ನು ಉಲ್ಲೇಖಿಸುತ್ತಾ, ಅವರು ಉತ್ತರಿಸಿದ್ದು: “ಐಹಿಕ ಜನಾಂಗಗಳ ಸಂಘವು ಪುನಃ ಮೇಲೇರುವುದು.” ಅದು ಹಾಗೆಯೇ—ಯೆಹೋವನ ಪ್ರವಾದನಾ ವಾಕ್ಯದ ಸಮರ್ಥನೆಯಲ್ಲಿ—ಆಗಿ ಪರಿಣಮಿಸಿತು!
ಅಧೋಲೋಕದಿಂದ ಏರಿಬರುವುದು
6 ಕಡುಗೆಂಪು ಬಣ್ಣದ ಕಾಡು ಮೃಗವು ನಿಜವಾಗಿಯೂ ಅಧೋಲೋಕದೊಳಗಿಂದ ಏರಿಬಂತು. ಜೂನ್ 26, 1945 ರಂದು ಅಮೆರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ ಕೋಲಾಹಲದ ಘೋಷದೊಂದಿಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಶಾಸನವನ್ನು ಸ್ವೀಕರಿಸುತ್ತಾ 50 ರಾಷ್ಟ್ರಗಳು ಮತಹಾಕಿದವು. ಈ ಸಂಸ್ಥೆಯ ಉದ್ದೇಶವು “ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದೇ” ಆಗಿತ್ತು. ಜನಾಂಗ ಸಂಘ ಮತ್ತು ಸಂಯುಕ್ತ ರಾಷ್ಟ್ರ ಸಂಘ (ಯು.ಎನ್.) ಗಳ ನಡುವೆ ಅನೇಕ ಸಾದೃಶ್ಯಗಳು ಇದ್ದವು. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಗಮನಿಸುವುದು: “ಕೆಲವು ರೀತಿಗಳಲ್ಲಿ, ಸಂಯುಕ್ತ ರಾಷ್ಟ್ರವು, ಯಾವುದು ಒಂದನೇ ಲೋಕ ಯುದ್ಧದ ಅನಂತರ ಸಂಘಟಿಸಲ್ಪಟ್ಟಿತ್ತೋ ಆ ಜನಾಂಗ ಸಂಘವನ್ನು ಹೋಲುತ್ತದೆ. . . . ಸಂಯುಕ್ತ ರಾಷ್ಟ್ರವನ್ನು ಸ್ಥಾಪಿಸಿದ ಅನೇಕ ರಾಷ್ಟ್ರಗಳು ಜನಾಂಗ ಸಂಘವನ್ನು ಕೂಡ ಸ್ಥಾಪಿಸಿದವುಗಳಾಗಿದ್ದವು. ಜನಾಂಗ ಸಂಘದಂತೆ, ಜನಾಂಗಗಳ ಮಧ್ಯೆ ಶಾಂತಿ ಕಾಪಾಡಲಿಕ್ಕಾಗಿ ಸಹಾಯ ನೀಡಲು ಸಂಯುಕ್ತ ರಾಷ್ಟ್ರವು ಸ್ಥಾಪಿಸಲ್ಪಟ್ಟಿತ್ತು. ಸಂಯುಕ್ತ ರಾಷ್ಟ್ರದ ಹೆಚ್ಚಿನ ಅಂಗಗಳು ಜನಾಂಗ ಸಂಘದವುಗಳಂತೆ ಇವೆ.” ಹಾಗಾದರೆ ಸಂಯುಕ್ತ ರಾಷ್ಟ್ರವು ನಿಜವಾಗಿಯೂ ಕಡುಗೆಂಪು ಬಣ್ಣದ ಮೃಗದ ಪುನರುಜ್ಜೀವನವಾಗಿದೆ. ಅದರ 175 ರಾಷ್ಟ್ರಗಳ ಸದಸ್ಯತನ ಜನಾಂಗ ಸಂಘದ 63 ನ್ನು ತುಂಬಾ ಮೀರಿಸುತ್ತದೆ; ಅದರ ಪೂರ್ವಾಧಿಕಾರಿಗಿಂತ ಇದು ವಿಶಾಲ ಜವಾಬ್ದಾರಿಕೆಗಳನ್ನು ಕೂಡ ತೆಗೆದುಕೊಂಡಿದೆ.
“ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
17 ಹಾಗಂತ ಸುಳ್ಳು ಧರ್ಮ ತನ್ನ ಪ್ರಭಾವವನ್ನು ಕಳಕೊಂಡು ಕಣ್ಮರೆಯಾಗುವುದಿಲ್ಲ. ದೇವರು ತನ್ನ ಯೋಚನೆಯನ್ನು ರಾಜರ ಹೃದಯಗಳಲ್ಲಿ ಹಾಕುವ ವರೆಗೂ ಅದರ ಪ್ರಭಾವ ಮುಂದುವರಿಯುತ್ತದೆ. ಅಷ್ಟರವರೆಗೂ ಅದು ರಾಜರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಇಷ್ಟಬಂದಂತೆ ನಡೆಸಿಕೊಳ್ಳುತ್ತದೆ. (ಪ್ರಕಟನೆ 17:16, 17 ಓದಿ.) ಆದರೆ ಶೀಘ್ರದಲ್ಲೇ ವಿಶ್ವ ಸಂಸ್ಥೆಯಿಂದ ಪ್ರತಿನಿಧಿಸಲ್ಪಡುವ ಈ ಲೋಕದ ಎಲ್ಲ ಸರಕಾರಗಳು ಸುಳ್ಳು ಧರ್ಮದ ಮೇಲೆ ಆಕ್ರಮಣ ಮಾಡುವಂತೆ ಯೆಹೋವನು ಮಾಡುವನು. ಈ ಸರಕಾರಗಳು ಸುಳ್ಳು ಧರ್ಮದ ಪ್ರಭಾವವನ್ನು ಅಡಗಿಸಿ ಅದರ ಐಶ್ವರ್ಯವನ್ನೆಲ್ಲಾ ನಾಶಮಾಡಿ ಬಿಡುವವು. ಇಂಥ ಒಂದು ಘಟನೆಯನ್ನು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಿರಲಿಲ್ಲ. ಸುಳ್ಳು ಧರ್ಮ ಅಷ್ಟು ಪ್ರಭಾವಶಾಲಿಯಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಕಡುಗೆಂಪು ಬಣ್ಣದ ಕಾಡುಮೃಗದ ಮೇಲೆ ಕೂತಿರುವ ಮಹಾ ಬಾಬೆಲ್ ಅಲುಗಾಡುತ್ತಿದ್ದಾಳೆ. ಆದರೂ ಅವಳು ಮೆಲ್ಲಮೆಲ್ಲನೆ ಜಾರಿ ಕೆಳಗೆ ಬೀಳುವುದಿಲ್ಲ. ಒಮ್ಮೆಲೆ ಧಡಮ್ಮನೆ ಬಿದ್ದು ನಾಶವಾಗುವಳು.—ಪ್ರಕ. 18:7, 8, 15-19.
ಡಿಸೆಂಬರ್ 30–ಜನವರಿ 5
ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 20-22
“ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”
ಪ್ರಕಟನೆ ಪುಟ 301 ಪ್ಯಾರ 2
ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನ ಭೂಮಂಡಲ
2 ಯೋಹಾನನ ದಿವಸಗಳ ನೂರಾರು ವರ್ಷಗಳ ಮೊದಲು, ಯೆಹೋವನು ಯೆಶಾಯನಿಗೆ ಹೇಳಿದ್ದು: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17; 66:22) ಬಾಬೆಲಿನಲ್ಲಿ 70 ವರ್ಷಗಳ ದೇಶಭ್ರಷ್ಟತೆಯ ಅನಂತರ, ಸಾ. ಶ. ಪೂ. 537 ರಲ್ಲಿ ನಂಬಿಗಸ್ತ ಯೆಹೂದ್ಯರು ಯೆರೂಸಲೇಮಿಗೆ ಹಿಂದೆರಳಿದಾಗ, ಈ ಪ್ರವಾದನೆಯು ಪ್ರಥಮವಾಗಿ ನೆರವೇರಿತು. ಆ ಪುನಃ ಸ್ಥಾಪನೆಯಲ್ಲಿ, ಅವರು ಒಂದು ಹೊಸ ಸರಕಾರೀ ವ್ಯವಸ್ಥೆಯ—“ನೂತನಾಕಾಶಮಂಡಲದ”—ಕೆಳಗೆ ಒಂದು ಶುದ್ಧೀಕರಿಸಲ್ಪಟ್ಟ ಸಮಾಜ—“ನೂತನ ಭೂಮಂಡಲ”—ವಾಗಿ ರೂಪಿತರಾದರು. ಅಪೊಸ್ತಲ ಪೇತ್ರನು ಈ ಪ್ರವಾದನೆಯ ಹೆಚ್ಚಿನ ಅನ್ವಯಕ್ಕೆ ನಿರ್ದೇಶಿಸುತ್ತಾ, ಅಂದ್ದದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಕರ್ತನ ದಿನದಲ್ಲಿ ಈ ವಾಗ್ದಾನವು ನೆರವೇರುತ್ತದೆಂದು ಯೋಹಾನನು ಈಗ ತೋರಿಸುತ್ತಾನೆ. ಸೈತಾನನಿಂದ ಮತ್ತು ಅವನ ದೆವ್ವಗಳಿಂದ ಪ್ರಭಾವಿಸಲ್ಪಟ್ಟ ಅದರ ಸರಕಾರೀ ರಚನೆಯೊಂದಿಗಿನ ಸೈತಾನನ ಸಂಘಟಿತ ವಿಷಯಗಳ ವ್ಯವಸ್ಥೆಯ—“ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ”—ಗತಿಸಿ ಹೋಗುವುವು. ದುಷ್ಟ, ದಂಗೆಕೋರ ಮಾನವ ಕುಲದ ಅವಿಶ್ರಾಂತ “ಸಮುದ್ರ”ವು ಅಸ್ತಿತ್ವದಲ್ಲಿ ಇಲ್ಲದೆ ಹೋಗುವುದು. ಅದರ ಸ್ಥಳದಲ್ಲಿ “ನೂತನಾಕಾಶಮಂಡಲ . . . ನೂತನ ಭೂಮಂಡಲ . . . “—ಒಂದು ಹೊಸ ಸರಕಾರ, ದೇವರ ರಾಜ್ಯದ ಕೆಳಗೆ ಒಂದು ಹೊಸ ಐಹಿಕ ಸಮಾಜವು ಇರುವುದು.—ಹೋಲಿಸಿ ಪ್ರಕಟನೆ 20:11.
“ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”
“[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 21:4) ಯಾವ ರೀತಿಯ ಕಣ್ಣೀರನ್ನು ಒರಸಿಹಾಕುವನು? ಆನಂದಬಾಷ್ಪವನ್ನಾಗಲಿ, ಕಣ್ಣುಗಳನ್ನು ಕಾಪಾಡುವ ಕಣ್ಣೀರನ್ನಾಗಲಿ ಅಲ್ಲ. ಕಷ್ಟ, ದುಃಖದಿಂದಾಗಿ ಉಮ್ಮಳಿಸಿ ಬರುವ ಕಣ್ಣೀರಿಗೆ ಆ ವಾಗ್ದಾನ ಸೂಚಿಸುತ್ತದೆ. ಯಾರಿಗೂ ಬೇಡವಾದ ಇಂಥ ಕಣ್ಣೀರನ್ನು ದೇವರು ಒರಸಿಬಿಡುವನು ಮಾತ್ರವಲ್ಲ ಅದಕ್ಕೆ ಕಾರಣವಾಗಿರುವ ಕಷ್ಟ, ನೋವನ್ನೂ ತೆಗೆದುಹಾಕುವನು. ಹೀಗೆ ಅದನ್ನು ಸಂಪೂರ್ಣವಾಗಿ ಅಳಿಸಿಹಾಕುವನು.
“ಇನ್ನು ಮರಣವಿರುವುದಿಲ್ಲ.” (ಪ್ರಕಟನೆ 21:4) ನಮ್ಮೆಲ್ಲರ ಶತ್ರುವಾದ ಮರಣ ಬರಿಸಿರುವಷ್ಟು ಕಣ್ಣೀರನ್ನು ಬೇರಾವುದೂ ಬರಿಸಿಲ್ಲ. ವಿಧೇಯ ಮಾನವರನ್ನು ಮರಣದ ಬಿಗಿಮುಷ್ಠಿಯಿಂದ ಯೆಹೋವನು ಬಿಡಿಸಲಿದ್ದಾನೆ. ಹೇಗೆ? ಮರಣದ ನಿಜ ಕಾರಣವನ್ನು ಅಂದರೆ ಆದಾಮನಿಂದ ಬಾಧ್ಯತೆಯಾಗಿ ಬಂದಿರುವ ಪಾಪವನ್ನು ನಿರ್ಮೂಲಮಾಡುವ ಮೂಲಕ. (ರೋಮನ್ನರಿಗೆ 5:12) ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಆಧಾರದ ಮೇಲೆ ಯೆಹೋವನು ವಿಧೇಯ ಮಾನವರನ್ನು ಪರಿಪೂರ್ಣತೆಗೇರಿಸುವನು. ಆಗ ಆ ಕೊನೆ ಶತ್ರುವಾದ ಮರಣ ‘ನಿರ್ಮೂಲವಾಗುವುದು.’ (1 ಕೊರಿಂಥ 15:26) ಹೀಗೆ ನಂಬಿಗಸ್ತ ಮಾನವರು ದೇವರು ಉದ್ದೇಶಿಸಿದಂತೆಯೇ ಪರಿಪೂರ್ಣ ಆರೋಗ್ಯದಲ್ಲಿ ಸದಾಕಾಲ ಜೀವಿಸಲು ಶಕ್ತರಾಗುವರು.
‘ನೋವು ಇರುವುದಿಲ್ಲ.’ (ಪ್ರಕಟನೆ 21:4) ಯಾವ ರೀತಿಯ ನೋವು? ಪಾಪ, ಅಪರಿಪೂರ್ಣತೆಯಿಂದಾಗಿ ಬಂದಿರುವ ಎಲ್ಲ ವಿಧದ ಮಾನಸಿಕ, ಭಾವನಾತ್ಮಕ, ದೈಹಿಕ ನೋವು. ಕೋಟಿಗಟ್ಟಲೆ ಜನರ ಬಾಳನ್ನು ದುಸ್ತರಗೊಳಿಸಿರುವ ಆ ನೋವು ಇರುವುದಿಲ್ಲ.
ಸತ್ಯದ ದೇವರಾಗಿರುವ ಯೆಹೋವನು
14 ತನ್ನ ವಾಕ್ಯದಲ್ಲಿ ಯೆಹೋವನು ನಮಗೆ ಏನನ್ನು ತಿಳಿಸುತ್ತಾನೋ ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ತಾನು ಏನಾಗಿದ್ದೇನೆಂದು ಆತನು ಹೇಳುತ್ತಾನೋ ಅದೇ ಆಗಿದ್ದಾನೆ ಮತ್ತು ತಾನು ಏನನ್ನು ಮಾಡುತ್ತೇನೆಂದು ಆತನು ಹೇಳುತ್ತಾನೋ ಅದನ್ನು ಖಂಡಿತವಾಗಿಯೂ ಮಾಡುವನು. ನಾವು ದೇವರಲ್ಲಿ ಭರವಸೆಯಿಡಲು ನಮಗೆ ಸಕಲ ಕಾರಣಗಳೂ ಇವೆ. ‘ದೇವರನ್ನರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವೆನು’ ಎಂದು ಯೆಹೋವನು ಹೇಳುವಾಗ ನಾವದನ್ನು ನಂಬಸಾಧ್ಯವಿದೆ. (2 ಥೆಸಲೊನೀಕ 1:8) ನೀತಿಯನ್ನು ಬೆನ್ನಟ್ಟುವವರನ್ನು ತಾನು ಪ್ರೀತಿಸುತ್ತೇನೆ ಎಂದು ಯೆಹೋವನು ಹೇಳುವಾಗ, ನಂಬಿಕೆಯನ್ನು ತೋರಿಸುವವರಿಗೆ ತಾನು ನಿತ್ಯಜೀವವನ್ನು ನೀಡುತ್ತೇನೆಂದು ಆತನು ಹೇಳುವಾಗ, ಮತ್ತು ದುಃಖ, ಗೋಳಾಟ ಹಾಗೂ ಮರಣವನ್ನು ಸಹ ತಾನು ಸಂಪೂರ್ಣವಾಗಿ ತೆಗೆದುಹಾಕುತ್ತೇನೆಂದು ಆತನು ಹೇಳುವಾಗ, ನಾವು ನಿಶ್ಚಯವಾಗಿಯೂ ಆತನ ಮಾತಿನಲ್ಲಿ ಭರವಸೆಯಿಡಸಾಧ್ಯವಿದೆ. ಅಪೊಸ್ತಲ ಯೋಹಾನನಿಗೆ, “ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂಬ ಸೂಚನೆಯನ್ನು ಕೊಡುವ ಮೂಲಕ ಯೆಹೋವನು ಈ ಕೊನೆಯ ವಾಗ್ದಾನದ ವಿಶ್ವಾಸಾರ್ಹತೆಯನ್ನು ಒತ್ತಿಹೇಳಿದನು.—ಪ್ರಕಟನೆ 21:4, 5; ಜ್ಞಾನೋಕ್ತಿ 15:9; ಯೋಹಾನ 3:36.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 ಪುಟ 249 ಪ್ಯಾರ 2
ಜೀವ
ಆದಾಮನು ದೇವರು ಹೇಳಿದ ಮಾತು ಕೇಳಿ ನಡೆದಿದ್ದರೆ, ಅವನು ಯಾವತ್ತೂ ಸಾಯದೇ, ಸದಾಕಾಲ ಬದುಕಬಹುದಿತ್ತು. (ಆದಿ 2:17) ನಾವು ಕೂಡ ದೇವರ ಮಾತಿನಂತೆ ನಡೆಯುವುದಾದ್ರೆ, ಕಡೆಯ ಶತ್ರುವಾದ ಮರಣವನ್ನು ತೆಗೆದುಹಾಕುವಾಗ, ಸದಾಕಾಲ ಪರಿಪೂರ್ಣರಾಗಿ ಬಾಳಬಹುದು. (1 ಕೊರಿಂ. 15:26) ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಮರಣವನ್ನು ಸಂಪೂರ್ಣವಾಗಿ ಭೂಮಿಯಿಂದ ತೆಗೆದುಹಾಕಲಾಗುತ್ತೆ. ಯೇಸುವಿನೊಂದಿಗೆ ರಾಜರಾಗಿ ಮತ್ತು ಯಾಜಕರಾಗಿ ಆಳಲಿರುವ ಅಭಿಷಿಕ್ತರು, “ಪುನಃ ಜೀವಿತರಾಗಿ ಆ ಸಾವಿರ ವರ್ಷಗಳ ವರೆಗೆ ಕ್ರಿಸ್ತನೊಂದಿಗೆ ರಾಜರಾಗಿ ಆಳಿದರು” ಅಂತ ಪ್ರಕಟನೆ ಪುಸ್ತಕ ಹೇಳುತ್ತೆ. “ಸತ್ತವರಲ್ಲಿ ಉಳಿದವರು ಸಾವಿರ ವರ್ಷಗಳು ಮುಗಿಯುವ ತನಕ ಜೀವಿತರಾಗಿ ಏಳಲಿಲ್ಲ” ಎಂದೂ ಅದರಲ್ಲಿ ಹೇಳಲಾಗಿದೆ. “ಸತ್ತವರಲ್ಲಿ ಉಳಿದವರು” ಯಾರು? ಅವರು ಸಾವಿರ ವರ್ಷಗಳ ಕೊನೆಯ ತನಕ ಆದರೆ ಸೈತಾನನು ಅಗಾಧ ಸ್ಥಳದಿಂದ ಹೊರ ಬಂದು ಮನುಷ್ಯರ ಮೇಲೆ ತರುವ ಕೊನೆ ಪರೀಕ್ಷೆಯ ಮುಂಚೆ ಜೀವಿಸುತ್ತಿರುವ ಜನರು. ಅವರು ಯಾವ ಅರ್ಥದಲ್ಲಿ ಸಾವಿರ ವರ್ಷಗಳ ಕೊನೆಯಲ್ಲಿ ಜೀವಂತವಾಗಿ ಎದ್ದು ಬರುವರು? ಅವರೆಲ್ಲರೂ ಪರಿಪೂರ್ಣರಾಗುತ್ತಾರೆ. ಸಾವಿರ ವರ್ಷದ ಆಳ್ವಿಕೆ ಮುಗಿಯುವುದರೊಳಗೆ ಮರಣವನ್ನು ಭೂಮಿಯಿಂದ ತೆಗೆದುಹಾಕಲಾಗುತ್ತೆ. ಆದಾಮ ಹವ್ವ ಪಾಪ ಮಾಡುವ ಮುಂಚೆ ಇದ್ದ ಅದೇ ಪರಿಪೂರ್ಣ ಸ್ಥಿತಿಗೆ ಎಲ್ಲಾ ಮನುಷ್ಯರು ತಲುಪುತ್ತಾರೆ. ಸೈತಾನನಿಗೆ ಸ್ವಲ್ಪ ಸಮಯದ ತನಕ ಅಗಾಧ ಸ್ಥಳದಿಂದ ಬಿಡುಗಡೆಯಾದಾಗ ಅವನು ತರುವ ಪರೀಕ್ಷೆಗಳನ್ನು ಸಮಗ್ರತೆಯಿಂದ ಎದುರಿಸುವವರೆಲ್ಲರೂ ಭೂಮಿಯ ಮೇಲೆ ಸದಾಕಾಲ ಜೀವನ ಮಾಡುತ್ತಾರೆ.—ಪ್ರಕ 20:4-10.
it-2 ಪುಟ 189-190
ಬೆಂಕಿಯ ಕೆರೆ
ಈ ಪದಕ್ಕಿರುವುದು ಸಾಂಕೇತಿಕ ಅರ್ಥ ಅಷ್ಟೆ. ಬೈಬಲ್ ಪ್ರಕಟನೆ ಪುಸ್ತಕದಲ್ಲಿ ಈ ಪದದ ಬಗ್ಗೆ ವಿವರಿಸುತ್ತಾ ಹೀಗೆ ಹೇಳುತ್ತೆ: “ಬೆಂಕಿಯ ಕೆರೆ ಎಂದರೆ ಎರಡನೆಯ ಮರಣ.”—ಪ್ರಕ 20:14; 21:8.
ಈ ಪದಕ್ಕಿರುವುದು ಸಾಂಕೇತಿಕ ಅರ್ಥ ಅಷ್ಟೆ ಅಂತ ಹೇಗೆ ಹೇಳಬಹುದು? ಎರಡು ಆಧಾರಗಳನ್ನು ನೋಡೋಣ. ಮರಣವನ್ನು ಈ ಬೆಂಕಿಯ ಕೆರೆಗೆ ದೊಬ್ಬಲಾಗುತ್ತೆ ಅಂತ ಬೈಬಲ್ ಹೇಳುತ್ತೆ. (ಪ್ರಕ 19:20; 20:14) ಮರಣವನ್ನು ಹೇಗೆ ತಾನೆ ಸುಡಕ್ಕೆ ಸಾಧ್ಯ! ಇನ್ನೊಂದು ಆಧಾರ ನೋಡಿ, ಆತ್ಮಜೀವಿ ಆದ ಪಿಶಾಚನು ಸಹ ಈ ಕೆರೆಗೆ ದೊಬ್ಬಲ್ಪಡುತ್ತಾನೆ. ಆದರೆ ಒಬ್ಬ ಆತ್ಮಜೀವಿಯನ್ನು ನಿಜವಾದ ಬೆಂಕಿಯಲ್ಲಿ ಸುಡೋದ್ರಿಂದ ಅವನಿಗೆ ಏನಾದರು ಹಾನಿ ಆಗುತ್ತಾ? ಇಲ್ಲ. ಹಾಗಾಗಿ ಈ ಬೆಂಕಿಯ ಕೆರೆಗೆ ಸಾಂಕೇತಿಕ ಅರ್ಥ ಇದೆ ಅಂತ ಹೇಳಬಹುದು.—ಪ್ರಕ 20:10; ವಿಮೋ 3:2 ಮತ್ತು ನ್ಯಾಯ 13:20 ವಚನಗಳನ್ನು ಹೋಲಿಸಿ.
ಬೆಂಕಿಯ ಕೆರೆ ಅಂದರೆ, “ಎರಡನೇ ಮರಣ” ಅಂತ ಬೈಬಲ್ ಹೇಳುತ್ತೆ. ಪ್ರಕಟನೆ 20:14 ರಲ್ಲಿ ‘ಮರಣ ಮತ್ತು ಹೇಡೀಸ್’ ಆ ಕೆರೆಗೆ (ಎರಡನೇ ಮರಣಕ್ಕೆ) ದೊಬ್ಬಲ್ಪಡುವವು ಎಂದು ಹೇಳಲಾಗಿದೆ. ಹಾಗಾದ್ರೆ ಈ ಕೆರೆ, ಆದಾಮನಿಂದ ಮಾನವರು ಪಡೆದುಕೊಂಡ ಮರಣವನ್ನಾಗಲಿ ಹೇಡೀಸನ್ನಾಗಲಿ ಸೂಚಿಸುತ್ತಿಲ್ಲ ಅಂತಾಯ್ತು. (ರೋಮ 5:12) ಬೆಂಕಿಯ ಕೆರೆ ಇನ್ನೊಂದು ರೀತಿಯ ಮರಣವನ್ನು ಅಂದ್ರೆ ಶಾಶ್ವತ ನಾಶನವನ್ನು ಸೂಚಿಸುತ್ತೆ. ಇದು ಶಾಶ್ವತ ನಾಶನ ಅಂತ ಹೇಗೆ ಹೇಳಬಹುದು? ಆದಾಮನಿಂದ ಬಂದ ಮರಣ ಮತ್ತು ಹೇಡೀಸ್ ತಮ್ಮೊಳಗಿನ ಸತ್ತವರನ್ನು ಒಪ್ಪಿಸಿದವು ಅಂತ ಬೈಬಲ್ ಹೇಳುತ್ತೆ. (ಪ್ರಕ 20:13) ಆದರೆ ಬೆಂಕಿಯ ಕೆರೆ, ಅದರಲ್ಲಿ ಬಿದ್ದ ಯಾರನ್ನೂ ಒಪ್ಪಿಸುವುದಿಲ್ಲ. ಹಾಗಾಗಿ, ಯಾರ ಹೆಸರು “ಜೀವದ ಪುಸ್ತಕದಲ್ಲಿ” ಇಲ್ವೋ, ಯಾರು ತಾವು ಮಾಡಿದ ಪಾಪಗಳಿಗೆ ಪಶ್ಚಾತ್ತಾಪಪಡದೇ ದೇವರ ಅಧಿಕಾರದ ವಿರುದ್ಧ ದಂಗೆ ಏಳುತ್ತಾರೋ ಅಂಥವರನ್ನು ಈ ಕೆರೆಗೆ ಹಾಕಲಾಗುತ್ತೆ. ಅಂದ್ರೆ ಇವರಿಗೆ ಎರಡನೇ ಮರಣ ನೀಡಲಾಗುತ್ತೆ ಅಥವಾ ಇಂಥವರು ಶಾಶ್ವತವಾಗಿ ನಾಶವಾಗುತ್ತಾರೆ. ಇವರಿಗೆ ಯಾವ ನಿರೀಕ್ಷೆಯೂ ಇರಲ್ಲ.—ಪ್ರಕ 20:15.