ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
    •  ಪವಿತ್ರ ಡೇರೆಯಲ್ಲಿ ಹನ್ನಳು ಪುಟ್ಟ ಸಮುವೇಲನನ್ನು ಏಲಿ ಕೈಗೆ ಒಪ್ಪಿಸುತ್ತಿದ್ದಾಳೆ

      ಪಾಠ 35

      ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ

      ಇಸ್ರಾಯೇಲ್ಯನಾದ ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ, ಇನ್ನೊಬ್ಬಳು ಪೆನಿನ್ನ. ಎಲ್ಕಾನನಿಗೆ ಹನ್ನಳ ಮೇಲೆ ತುಂಬ ಪ್ರೀತಿ. ಪೆನಿನ್ನಳಿಗೆ ತುಂಬ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ಪೆನಿನ್ನ ಹನ್ನಳನ್ನು ಗೇಲಿ ಮಾಡುತ್ತಿದ್ದಳು. ಎಲ್ಕಾನ ಪ್ರತಿವರ್ಷ ಆರಾಧನೆಗಾಗಿ ತನ್ನ ಇಡೀ ಕುಟುಂಬವನ್ನು ಕರಕೊಂಡು ಶೀಲೋವಿನಲ್ಲಿದ್ದ ಪವಿತ್ರ ಡೇರೆಗೆ ಹೋಗುತ್ತಿದ್ದ. ಒಂದು ಸಾರಿ ಅಲ್ಲಿಗೆ ಹೋದಾಗ ತನ್ನ ಹೆಂಡತಿ ತುಂಬ ದುಃಖದಿಂದ ಇರುವುದನ್ನು ಎಲ್ಕಾನ ಗಮನಿಸಿದ. ಆಗ ಅವನು ‘ಹನ್ನ, ದಯವಿಟ್ಟು ಅಳಬೇಡ. ನಿನಗೆ ನಾನಿದ್ದೀನಿ. ನಾನು ನಿನ್ನನ್ನ ಪ್ರೀತಿಸುತ್ತೀನಿ’ ಎಂದ.

      ನಂತರ ಹನ್ನ ಪ್ರಾರ್ಥನೆ ಮಾಡಲು ಒಂಟಿಯಾಗಿ ಪವಿತ್ರ ಡೇರೆಗೆ ಹೋದಳು. ಅವಳು ಅಳುತ್ತಾ ‘ಯೆಹೋವನೇ ನನಗೆ ಸಹಾಯ ಮಾಡು’ ಅಂತ ಪ್ರಾರ್ಥಿಸುತ್ತಿದ್ದಳು. ‘ಯೆಹೋವನೇ, ನೀನು ನನಗೆ ಒಂದು ಗಂಡು ಮಗುವನ್ನ ಕೊಟ್ರೆ ಅವನನ್ನು ಜೀವನಪೂರ್ತಿ ನಿನ್ನ ಸೇವೆ ಮಾಡಲು ನಿನಗೆ ಕೊಡ್ತೀನಿ’ ಎಂದು ಯೆಹೋವನಿಗೆ ಮಾತು ಕೊಟ್ಟಳು.

      ಹನ್ನ ಪ್ರಾರ್ಥಿಸುವಾಗ ಅಳುತ್ತಿರುವುದನ್ನು ಮಹಾ ಪುರೋಹಿತ ಏಲಿ ನೋಡುತ್ತಿದ್ದಾನೆ

      ಹೀಗೆ ಪ್ರಾರ್ಥಿಸುವಾಗ ಹನ್ನಳ ತುಟಿಗಳು ಮಾತ್ರ ಅದುರುತ್ತಿದ್ದವು ಅವಳ ಧ್ವನಿ ಕೇಳಿಸ್ತಿರಲಿಲ್ಲ. ಇದನ್ನು ಮಹಾ ಪುರೋಹಿತ ಏಲಿ ನೋಡಿ ಹನ್ನ ಕುಡಿದ್ದಾಳೆ ಅಂತ ಅಂದುಕೊಂಡ. ಆಗ ಹನ್ನ ‘ಸ್ವಾಮಿ ನಾನು ಕುಡಿದಿಲ್ಲ. ನನ್ನ ನೋವನ್ನೆಲ್ಲ ಯೆಹೋವನ ಹತ್ತಿರ ಹೇಳ್ಕೊಳ್ತಾ ಇದ್ದೀನಿ’ ಅಂದಳು. ಏಲಿಗೆ ತನ್ನ ತಪ್ಪು ಅರಿವಾಗಿ ‘ನೀನು ಕೇಳಿಕೊಂಡದ್ದನ್ನು ಯೆಹೋವನು ನಿನಗೆ ಕೊಡಲಿ’ ಎಂದ. ಹನ್ನ ಸಮಾಧಾನದಿಂದ ಮನೆ ಕಡೆ ಹೆಜ್ಜೆ ಹಾಕಿದಳು. ಇದಾಗಿ ಒಂದು ವರ್ಷದೊಳಗೆ ಅವಳಿಗೆ ಒಬ್ಬ ಮಗ ಹುಟ್ಟಿದ. ಅವನಿಗೆ ಸಮುವೇಲ ಎಂದು ಹೆಸರಿಟ್ಟಳು. ಆಗ ಹನ್ನಳಿಗೆ ಅದೆಷ್ಟು ಖುಷಿ ಆಗಿರಬೇಕಲ್ವಾ?

      ಯೆಹೋವನಿಗೆ ಕೊಟ್ಟ ಮಾತನ್ನು ಹನ್ನ ಮರೆಯಲಿಲ್ಲ. ಸಮುವೇಲ ಎದೆಹಾಲು ಕುಡಿಯೋದನ್ನ ಬಿಟ್ಟ ತಕ್ಷಣ ಅವಳು ಅವನನ್ನು ಪವಿತ್ರ ಡೇರೆಗೆ ಕರಕೊಂಡು ಬಂದಳು. ಅವಳು ಏಲಿಗೆ ‘ನಾನು ಪ್ರಾರ್ಥಿಸಿದ್ದು ಇದೇ ಮಗನಿಗಾಗಿ. ಇವನು ತನ್ನ ಜೀವನಪರ್ಯಂತ ಯೆಹೋವನ ಸೇವೆ ಮಾಡ್ತಾನೆ’ ಅಂದಳು. ಪ್ರತಿವರ್ಷ ಎಲ್ಕಾನ ಮತ್ತು ಹನ್ನ ಸಮುವೇಲನನ್ನು ನೋಡಲು ಬರುತ್ತಿದ್ದರು. ಅವನಿಗಾಗಿ ತೋಳಿಲ್ಲದ ಅಂಗಿಯನ್ನು ತರುತ್ತಿದ್ದರು. ಯೆಹೋವನು ಹನ್ನಳಿಗೆ ಇನ್ನೂ ಮೂರು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಕೊಟ್ಟು ಆಶೀರ್ವದಿಸಿದನು.

      “ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ. ಹುಡುಕ್ತಾ ಇರಿ, ನಿಮಗೆ ಸಿಗುತ್ತೆ.”—ಮತ್ತಾಯ 7:7

      ಪ್ರಶ್ನೆಗಳು: ಹನ್ನ ಯಾಕೆ ದುಃಖಿತಳಾಗಿದ್ದಳು? ಯೆಹೋವನು ಹನ್ನಳನ್ನು ಹೇಗೆ ಆಶೀರ್ವದಿಸಿದನು?

      1 ಸಮುವೇಲ 1:1–2:11, 18-21

  • ಯೆಫ್ತಾಹ ಕೊಟ್ಟ ಮಾತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಯೆಫ್ತಾಹ, ತನ್ನ ಮಗಳು ಅವನನ್ನು ಭೇಟಿ ಮಾಡಲು ಬರುತ್ತಿರುವುದನ್ನು ಕಂಡು ಬಟ್ಟೆಯನ್ನು ಹರಿದುಕೊಳ್ಳುತ್ತಿದ್ದಾನೆ

      ಪಾಠ 36

      ಯೆಫ್ತಾಹ ಕೊಟ್ಟ ಮಾತು

      ಇಸ್ರಾಯೇಲ್ಯರು ಮತ್ತೆ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಅಮ್ಮೋನಿಯರು ಇಸ್ರಾಯೇಲ್ಯರ ಮೇಲೆ ಆಕ್ರಮಣ ಮಾಡಿದಾಗ ಆ ಸುಳ್ಳು ದೇವರುಗಳು ಇಸ್ರಾಯೇಲ್ಯರಿಗೆ ಯಾವುದೇ ಸಹಾಯ ಮಾಡಲಿಲ್ಲ. ಅನೇಕ ವರ್ಷಗಳ ವರೆಗೆ ಇಸ್ರಾಯೇಲ್ಯರು ಕಷ್ಟ ಅನುಭವಿಸಿದರು. ಕೊನೆಗೆ ಅವರು ಯೆಹೋವನಿಗೆ ‘ನಾವು ಪಾಪ ಮಾಡಿದ್ದೀವಿ. ದಯವಿಟ್ಟು ಶತ್ರುಗಳಿಂದ ನಮ್ಮನ್ನು ಕಾಪಾಡು’ ಎಂದು ಬೇಡಿಕೊಂಡರು. ಇಸ್ರಾಯೇಲ್ಯರು ತಮ್ಮಲ್ಲಿದ್ದ ಮೂರ್ತಿಗಳನ್ನು ನಾಶ ಮಾಡಿ ಮತ್ತೆ ಯೆಹೋವನನ್ನು ಆರಾಧಿಸಲು ಶುರು ಮಾಡಿದರು. ಅವರು ಇನ್ನು ಮುಂದೆ ಕಷ್ಟ ಪಡುವುದು ಯೆಹೋವನಿಗೆ ಇಷ್ಟವಿರಲಿಲ್ಲ.

      ಅಮ್ಮೋನಿಯರ ವಿರುದ್ಧ ಯುದ್ಧದಲ್ಲಿ ಇಸ್ರಾಯೇಲ್ಯರನ್ನು ಮುನ್ನಡೆಸಲು ಯೆಫ್ತಾಹ ಎಂಬ ಸೈನಿಕನನ್ನ ಆರಿಸಲಾಯಿತು. ಅವನು ಯೆಹೋವನಿಗೆ, ‘ಈ ಯುದ್ಧವನ್ನು ಗೆಲ್ಲಲು ನೀನು ನಮಗೆ ಸಹಾಯ ಮಾಡಿದರೆ ನಾನು ನಿನಗೆ ಒಂದು ಮಾತು ಕೊಡುತ್ತೇನೆ. ಅದೇನೆಂದರೆ ನಾನು ಮನೆಗೆ ವಾಪಸ್ಸು ಹೋಗುವಾಗ ಯಾರು ಮೊದಲ ನನ್ನ ಮನೆ ಬಾಗಿಲಿಂದ ನನ್ನನ್ನ ಸ್ವಾಗತಿಸೋಕೆ ಬರ್ತಾರೋ ಆ ವ್ಯಕ್ತಿಯನ್ನ ನಿನಗೆ ಕೊಡುತ್ತೀನಿ’ ಎಂದನು. ಯೆಹೋವನು ಯೆಫ್ತಾಹನ ಬೇಡಿಕೆಯನ್ನು ಕೇಳಿ ಯುದ್ಧದಲ್ಲಿ ಅವನಿಗೆ ಜಯ ನೀಡಿದನು.

      ಯೆಫ್ತಾಹ ಮನೆಗೆ ವಾಪಸ್ಸು ಬಂದಾಗ ಮೊದಲು ಅವನನ್ನು ನೋಡಲು ಬಂದದ್ದು ಅವನ ಒಬ್ಬಳೇ ಮುದ್ದಿನ ಮಗಳು. ಅವಳು ಕುಣಿತಾ ದಮ್ಮಡಿ ಬಡಿಯುತ್ತಾ ಬಂದಳು. ಆಗ ಯೆಫ್ತಾಹ ಏನು ಮಾಡಿದ? ಅವನು ತನ್ನ ಮಾತನ್ನು ನೆನಪಿಸಿಕೊಂಡು ‘ಅಯ್ಯೋ, ನನ್ನ ಮಗಳೇ! ನನ್ನ ಹೃದಯ ಒಡೆದುಬಿಟ್ಯಲ್ಲಾ. ನಾನು ಯೆಹೋವನಿಗೆ ಮಾತು ಕೊಟ್ಟಿದ್ದೀನಿ. ಅದನ್ನು ಪಾಲಿಸಲು ನಿನ್ನನ್ನು ದೇವರ ಸೇವೆ ಮಾಡಲು ಶೀಲೋವಿನಲ್ಲಿರುವ ಪವಿತ್ರ ಡೇರೆಗೆ ಕಳುಹಿಸಬೇಕು’ ಅಂದನು. ಆಗ ಅವನ ಮಗಳು ‘ಅಪ್ಪಾ, ನೀನು ಯೆಹೋವನಿಗೆ ಮಾತು ಕೊಟ್ಟಿದ್ರೆ ಅದ್ರ ತರಾನೇ ಮಾಡು. ಆದರೆ ನನಗೊಂದು ಆಸೆ ಇದೆ, ಎರಡು ತಿಂಗಳು ಗೆಳತಿಯರ ಜೊತೆ ಬೆಟ್ಟಗಳಿಗೆ ಹೋಗಿ ಇದ್ದು ಬರುತ್ತೇನೆ. ಆಮೇಲೆ ಶೀಲೋವಿಗೆ ಹೋಗುತ್ತೇನೆ’ ಅಂದಳು. ಯೆಫ್ತಾಹನ ಮಗಳು ತನ್ನ ಉಳಿದ ಜೀವಮಾನವೆಲ್ಲಾ ಪವಿತ್ರ ಡೇರೆಯಲ್ಲಿ ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡಿದಳು. ಪ್ರತಿವರ್ಷ ಆಕೆಯ ಸ್ನೇಹಿತರು ಅವಳನ್ನು ಭೇಟಿ ಮಾಡಲು ಶೀಲೋವಿಗೆ ಹೋಗುತ್ತಿದ್ದರು.

      ಪವಿತ್ರ ಡೇರೆಯಲ್ಲಿ ಯೆಫ್ತಾಹನ ಮಗಳನ್ನು ಅವಳ ಸ್ನೇಹಿತರು ಭೇಟಿ ಮಾಡುತ್ತಿದ್ದಾರೆ

      “ನನಗಿಂತ ಹೆಚ್ಚಾಗಿ ಮಗ ಅಥವಾ ಮಗಳನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ.”—ಮತ್ತಾಯ 10:37

      ಪ್ರಶ್ನೆಗಳು: ಯೆಫ್ತಾಹ ಏನೆಂದು ಮಾತು ಕೊಟ್ಟ? ಯೆಫ್ತಾಹನ ಮಗಳು ತಂದೆ ಕೊಟ್ಟ ಮಾತನ್ನು ಹೇಗೆ ನೆರವೇರಿಸಿದಳು?

      ನ್ಯಾಯಸ್ಥಾಪಕರು 10:6–11:11; 11:29-40; 1 ಸಮುವೇಲ 12:10, 11

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ