ಅಧ್ಯಾಯ 3
ದೇವರು ನಮ್ಮನ್ನು ಯಾಕೆ ಸೃಷ್ಟಿ ಮಾಡಿದನು?
1. ದೇವರು ನಮ್ಮನ್ನು ಯಾಕೆ ಸೃಷ್ಟಿ ಮಾಡಿದನು?
ಸಂತೋಷದ ಶಾಶ್ವತ ಜೀವನವನ್ನು ನಮಗೆ ಕೊಡಬೇಕೆಂಬ ಬಯಕೆಯಿಂದ ದೇವರು ನಮ್ಮನ್ನು ಸೃಷ್ಟಿ ಮಾಡಿದನು. ಹಾಗಾಗಿ ದೇವರು ಆದಾಮ ಹವ್ವ ಎಂಬ ಮೊದಲ ಗಂಡುಹೆಣ್ಣನ್ನು ಸೃಷ್ಟಿಮಾಡಿ, ಅವರಿಗೆ ಏದೆನ್ ಎಂಬ ಸುಂದರ ತೋಟವನ್ನು ಮನೆಯಾಗಿ ಕೊಟ್ಟನು. ಅವರು ಮಕ್ಕಳನ್ನು ಪಡೆಯಬೇಕು, ಇಡೀ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡಬೇಕು, ಪ್ರಾಣಿಗಳನ್ನು ಸಹ ನೋಡಿಕೊಳ್ಳಬೇಕು ಎನ್ನುವುದು ದೇವರ ಬಯಕೆಯಾಗಿತ್ತು.—ಆದಿಕಾಂಡ 1:28; 2:8, 9, 15; ಟಿಪ್ಪಣಿ 6ನ್ನು ನೋಡಿ.
2. (ಎ) ದೇವರು ತಾನು ಅಂದುಕೊಂಡಿದ್ದನ್ನು ಖಂಡಿತ ಮಾಡುತ್ತಾನೆ ಅಂತ ನಮಗೆ ಹೇಗೆ ಗೊತ್ತು? (ಬಿ) ಮುಂದೆ ಭೂಮಿಯಲ್ಲಿ ಎಂಥ ಜನರು ಇರುತ್ತಾರೆ, ಎಷ್ಟು ವರ್ಷ ಜೀವಿಸುತ್ತಾರೆ?
2 ಆದರೆ ಈಗ ಭೂಮಿ ಮೇಲೆ ಅಂಥ ಪರಿಸ್ಥಿತಿ ಇಲ್ಲ, ಹಾಗಂತ ಯಾವತ್ತಿಗೂ ಅದು ಬರಲ್ಲ ಅಂತನಾ? ಇದರ ಬಗ್ಗೆ ಯೆಹೋವ ದೇವರು ನಮಗೆ ಹೀಗೆ ಹೇಳಿದ್ದಾನೆ: “ನಾನು ನುಡಿದಿದ್ದೇನೆ, ಈಡೇರಿಸುವೆನು.” (ಯೆಶಾಯ 46:9-11; 55:11) ಇದರರ್ಥ, ದೇವರು ಏನು ಮಾಡಬೇಕು ಅಂದುಕೊಂಡಿದ್ದಾನೋ ಅದನ್ನು ಖಂಡಿತ ಮಾಡುತ್ತಾನೆ, ಯಾರೂ ಆತನನ್ನು ತಡೆಯಲು ಆಗುವುದಿಲ್ಲ. ಅಷ್ಟೇ ಅಲ್ಲ, ಯೆಹೋವನು ಭೂಮಿಯನ್ನು “ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ” ಒಂದು ಕಾರಣಕ್ಕಾಗಿ ಸೃಷ್ಟಿಸಿದನು. (ಯೆಶಾಯ 45:18) ಇಡೀ ಭೂಮಿಯಲ್ಲಿ ಮನುಷ್ಯರು ಜೀವಿಸಬೇಕು ಎನ್ನುವುದೇ ಆ ಕಾರಣ. ಆದರೆ ಎಂಥ ಮನುಷ್ಯರು ಭೂಮಿಯಲ್ಲಿ ಇರಬೇಕು ಮತ್ತು ಅವರು ಎಷ್ಟು ವರ್ಷ ಜೀವಿಸಬೇಕು ಎಂದು ದೇವರು ಇಷ್ಟಪಡುತ್ತಾನೆ? ‘ನೀತಿವಂತರು [ಅಂದರೆ ದೇವರ ಮಾತಿನಂತೆ ನಡೆಯುವವರು] ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು’ ಎಂದು ಬೈಬಲ್ ಹೇಳುತ್ತದೆ.—ಕೀರ್ತನೆ 37:29; ಪ್ರಕಟನೆ 21:3, 4.
3. ಇವತ್ತಿನ ಪರಿಸ್ಥಿತಿ ನೋಡಿ ನಮಗೆ ಯಾವ ಪ್ರಶ್ನೆ ಬರುತ್ತದೆ?
3 ಆದರೆ ಇವತ್ತು ಜನರು ಕಾಯಿಲೆ ಬೀಳುತ್ತಾರೆ, ಸಾಯುತ್ತಾರೆ. ಒಬ್ಬರು ಇನ್ನೊಬ್ಬರನ್ನು ಕೊಲ್ಲುವಷ್ಟು ಕ್ರೂರಿಗಳೂ ಆಗಿದ್ದಾರೆ. ಮನುಷ್ಯರಿಗೆ ಇಂಥ ಪರಿಸ್ಥಿತಿ ಬರಬೇಕು ಅಂತ ದೇವರು ಯಾವತ್ತೂ ಬಯಸಿರಲಿಲ್ಲ. ಅಂದಮೇಲೆ ಯಾಕೆ ಹೀಗೆ ಆಗುತ್ತಿದೆ? ಈ ಪ್ರಶ್ನೆಗೆ ಬೈಬಲ್ ಉತ್ತರ ಕೊಡುತ್ತದೆ.
ದೇವರ ವೈರಿ
4, 5. (ಎ) ಏದೆನ್ ತೋಟದಲ್ಲಿ ಹಾವಿನ ಮೂಲಕ ಹವ್ವಳ ಹತ್ತಿರ ಮಾತಾಡಿದ್ದು ಯಾರು? (ಬಿ) ಒಳ್ಳೇ ವ್ಯಕ್ತಿ ಸಹ ಕಳ್ಳನಾಗಲು ಹೇಗೆ ಸಾಧ್ಯ?
4 ದೇವರಿಗೊಬ್ಬ ವೈರಿ ಇದ್ದಾನೆ. ಅವನನ್ನು ಬೈಬಲ್ “ಪಿಶಾಚನೆಂದೂ ಸೈತಾನನೆಂದೂ” ಕರೆಯುತ್ತದೆ. ಅವನು ಏದೆನ್ ತೋಟದಲ್ಲಿ ಹಾವಿನ ಮೂಲಕ ಹವ್ವಳ ಹತ್ತಿರ ಮಾತಾಡಿದನು. (ಪ್ರಕಟನೆ 12:9; ಆದಿಕಾಂಡ 3:1) ತನ್ನೊಂದಿಗೆ ಮಾತಾಡುತ್ತಿರುವುದು ‘ಹಾವು’ ಎಂದು ಹವ್ವಳು ನಂಬುವಂತೆ ಸೈತಾನನು ಮಾಡಿದನು.—ಟಿಪ್ಪಣಿ 7ನ್ನು ನೋಡಿ.
5 ಆದರೆ ಈ ಸೈತಾನ ಎಲ್ಲಿಂದ ಬಂದ? ದೇವರು ಅವನನ್ನು ಒಬ್ಬ ದೇವದೂತನನ್ನಾಗಿ ಸೃಷ್ಟಿಮಾಡಿದ್ದನು. ಆದರೆ ಆದಾಮ ಮತ್ತು ಹವ್ವಳ ಸೃಷ್ಟಿಯ ಸಮಯದಲ್ಲಿ ಅವನು ಕೆಟ್ಟವನಾಗಿ ಬದಲಾದ. ಹೀಗೆ ಸೈತಾನನಾದ. (ಯೋಬ 38:4, 6) ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡೋಣ. ಒಬ್ಬ ವ್ಯಕ್ತಿ ಹುಟ್ಟುವಾಗಲೇ ಕಳ್ಳನಾಗಿ ಹುಟ್ಟುವುದಿಲ್ಲ. ಅವನು ಒಳ್ಳೆಯವನಾಗಿದ್ದರೂ ಬೇರೆಯವರ ವಸ್ತುವಿಗೆ ಆಸೆಪಟ್ಟು ಅದರ ಕುರಿತೇ ಯೋಚಿಸುತ್ತಾ ಇದ್ದರೆ ಆ ಕೆಟ್ಟ ಆಸೆ ಅವನಲ್ಲಿ ಹೆಚ್ಚಾಗುತ್ತದೆ. ಅವಕಾಶ ಸಿಕ್ಕಿದಾಗ ಕಳ್ಳತನ ಮಾಡಿಯೇ ಬಿಡುತ್ತಾನೆ. ಹೀಗೆ ಒಳ್ಳೆಯವನಾಗಿದ್ದ ವ್ಯಕ್ತಿ ಸಹ ಕಳ್ಳನಾಗುತ್ತಾನೆ.—ಯಾಕೋಬ 1:13-15 ಓದಿ; ಟಿಪ್ಪಣಿ 8ನ್ನು ನೋಡಿ.
6. ಒಬ್ಬ ದೇವದೂತ ಹೇಗೆ ದೇವರ ವೈರಿಯಾದ?
6 ಆ ಒಳ್ಳೇ ದೇವದೂತನಿಗೆ ಆಗಿದ್ದೂ ಅದೇ. ದೇವರು ಆದಾಮ ಹವ್ವರನ್ನು ಸೃಷ್ಟಿಮಾಡಿ ಅವರು ಮಕ್ಕಳನ್ನು ಪಡೆದು ‘ಭೂಮಿಯನ್ನು ತುಂಬಿಕೊಳ್ಳುವಂತೆ’ ಹೇಳಿದ್ದು ನಿಮಗೆ ನೆನಪಿದೆಯಾ? (ಆದಿಕಾಂಡ 1:27, 28) ಆಗ ಆ ದೇವದೂತ, ‘ಎಲ್ಲ ಜನರು ಯೆಹೋವನನ್ನು ಬಿಟ್ಟು ನನ್ನನ್ನು ಆರಾಧಿಸಿದರೆ ತುಂಬ ಚೆನ್ನಾಗಿರುತ್ತದೆ’ ಎಂದು ಯೋಚಿಸಿರಬಹುದು. ಹೀಗೆ ಅದರ ಬಗ್ಗೆನೇ ಯೋಚಿಸಿದ್ದರಿಂದ ಯೆಹೋವ ದೇವರಿಗೆ ಸೇರಬೇಕಾಗಿರುವುದು ತನಗೆ ಸಿಗಲಿ ಎಂಬ ಆಸೆ ಅವನಲ್ಲಿ ಬೆಳೆಯಿತು. ಈ ಬಯಕೆ ಹೆಚ್ಚಾಗಿ ಕೊನೆಗೆ ಒಂದು ದಿನ ಅವನು ಅವಕಾಶ ಸಿಕ್ಕಿದಾಗ ಹವ್ವಳಿಗೆ ದೇವರ ಬಗ್ಗೆ ಸುಳ್ಳು ಹೇಳಿಯೇ ಬಿಟ್ಟ. (ಆದಿಕಾಂಡ 3:1-5 ಓದಿ.) ಹೀಗೆ ಅವನು ಪಿಶಾಚ ಅಥವಾ ಸೈತಾನನಾದ. ದೇವರ ವೈರಿಯಾದ.
7. (ಎ) ಆದಾಮಹವ್ವರಿಗೆ ಯಾಕೆ ಸಾವು ಬಂತು? (ಬಿ) ನಮಗೆ ಯಾಕೆ ವಯಸ್ಸಾಗುತ್ತದೆ ಮತ್ತು ನಾವು ಯಾಕೆ ಸಾಯುತ್ತೇವೆ?
7 ಸೈತಾನನ ಮಾತು ಕೇಳಿ ಆದಾಮಹವ್ವ ಹಣ್ಣು ತಿಂದು ದೇವರ ವಿರುದ್ಧ ತಪ್ಪು ಮಾಡಿದರು. (ಆದಿಕಾಂಡ 2:17; 3:6) ಯೆಹೋವ ದೇವರು ಹೇಳಿದಂತೆಯೇ ಮುಂದೆ ಒಂದು ದಿನ ಅವರಿಗೆ ಸಾವು ಬಂತು. (ಆದಿಕಾಂಡ 3:17-19) ಆದಾಮಹವ್ವರಿಂದ ಅವರ ಮಕ್ಕಳಾದ ನಮಗೂ ಪಾಪ ಬಂತು, ಹಾಗಾಗಿ ನಾವೂ ಸಾಯುತ್ತೇವೆ. (ರೋಮನ್ನರಿಗೆ 5:12 ಓದಿ.) ‘ತಪ್ಪು ಮಾಡಿದ್ದು ಆದಾಮಹವ್ವ ಅಂದಮೇಲೆ ಮಕ್ಕಳಿಗೆ ಯಾಕೆ ಶಿಕ್ಷೆ?’ ಇದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ನೋಡಿ. ಇಡ್ಲಿ ಮಾಡುವ ತಟ್ಟೆ ಕೆಳಗೆ ಬಿದ್ದು ತಗ್ಗಾಗಿದೆ ಅಂದುಕೊಳ್ಳಿ. ಅದರಲ್ಲಿ ಇಡ್ಲಿ ಮಾಡಿದರೆ ಇಡ್ಲಿ ಹೇಗೆ ಬರುತ್ತದೆ? ಆ “ತಗ್ಗು” ಇಡ್ಲಿಯಲ್ಲೂ ಇರುತ್ತದೆ ಅಲ್ವಾ? ಅದೇರೀತಿ ದೇವರ ಮಾತುಕೇಳದೆ ಆದಾಮ ಪಾಪಿಯಾದ. ನಾವು ಆದಾಮನ ವಂಶದವರು ಆಗಿರುವುದರಿಂದ ಆ “ಪಾಪ” ನಮ್ಮಲ್ಲೂ ಬಂತು. ಹಾಗಾಗಿ ನಮಗೆ ವಯಸ್ಸಾಗುತ್ತದೆ ಮತ್ತು ನಾವು ಸಾಯುತ್ತೇವೆ.—ರೋಮನ್ನರಿಗೆ 3:23; ಟಿಪ್ಪಣಿ 9ನ್ನು ನೋಡಿ.
8, 9. (ಎ) ಆದಾಮಹವ್ವ ಏನೆಂದು ನಂಬುವಂತೆ ಸೈತಾನ ಮಾಡಿದ? (ಬಿ) ದೇವರು ಅವರನ್ನು ಆಗಲೇ ಯಾಕೆ ಸಾಯಿಸಿಬಿಡಲಿಲ್ಲ?
8 ಈಗಾಗಲೇ ನೋಡಿದಂತೆ, ಆದಾಮ ಹವ್ವ ತಪ್ಪುಮಾಡುವಂತೆ ಸೈತಾನನು ಮಾಡಿದ. ಹಾಗೆ ಮಾಡಿದಾಗಲೇ ಅವನು ದೇವರಿಗೆ ವಿರುದ್ಧವಾಗಿ ನಡೆದ. ‘ಯೆಹೋವ ದೇವರು ಸುಳ್ಳು ಹೇಳಿದ್ದಾನೆ, ಆತನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ, ನಮಗೆ ಒಳ್ಳೇದಾಗಬೇಕು ಅಂತ ಆತನು ಬಯಸುವುದಿಲ್ಲ’ ಎಂದು ಆದಾಮಹವ್ವರು ನಂಬುವಂತೆ ಮಾಡುವುದೇ ಅವನ ಗುರಿಯಾಗಿತ್ತು. ‘ಸರಿ ಯಾವುದು ತಪ್ಪು ಯಾವುದು ಅಂತ ದೇವರು ನಿಮಗೆ ಹೇಳುವ ಅವಶ್ಯಕತೆಯಿಲ್ಲ, ನೀವೇ ಅದನ್ನು ನಿರ್ಧರಿಸಬಹುದು, ನಿಮ್ಮನ್ನು ನೀವೇ ಆಳಿಕೊಳ್ಳಬಹುದು’ ಎಂದು ಸೈತಾನನು ಅವರಿಗೆ ಹೇಳಿದನು. ಆ ಕ್ಷಣದಲ್ಲೇ ದೇವರು ಆದಾಮ ಹವ್ವರನ್ನು ಮತ್ತು ಸೈತಾನನನ್ನು ನಾಶ ಮಾಡಬಹುದಿತ್ತು. ಆದರೆ ಯೋಚಿಸಿ, ಹಾಗೆ ಮಾಡಿದ್ದರೆ ಸೈತಾನ ಸುಳ್ಳುಗಾರ ಎಂದು ರುಜುಪಡಿಸಲು ದೇವರಿಗೆ ಆಗುತ್ತಿತ್ತಾ? ಖಂಡಿತ ಇಲ್ಲ.
9 ಹಾಗಾಗಿ ದೇವರು ಅವರನ್ನು ಸಾಯಿಸಲಿಲ್ಲ. ಸ್ವಲ್ಪ ಸಮಯದ ವರೆಗೆ ಮನುಷ್ಯರು ತಮ್ಮನ್ನು ತಾವೇ ಆಳಿಕೊಳ್ಳುವಂತೆ ಬಿಟ್ಟನು. ‘ತಾನು ಮನುಷ್ಯರಿಗೋಸ್ಕರ ಒಳ್ಳೇದನ್ನೇ ಬಯಸುತ್ತೇನೆ ಮತ್ತು ಸೈತಾನನು ಸುಳ್ಳುಗಾರನು’ ಎಂದು ಎಲ್ಲರೂ ತಿಳಿಯಬೇಕಂತ ದೇವರು ಹೀಗೆ ಮಾಡಿದನು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು 11ನೇ ಅಧ್ಯಾಯದಲ್ಲಿ ಕಲಿಯುತ್ತೇವೆ. ಆದಾಮಹವ್ವ ಮಾಡಿದ ಆಯ್ಕೆ ಬಗ್ಗೆ ನಿಮಗೇನು ಅನಿಸುತ್ತದೆ? ಅವರು ಸೈತಾನನನ್ನು ನಂಬಿ ದೇವರ ವಿರುದ್ಧ ತಪ್ಪು ಮಾಡಿದ್ದು ಸರಿನಾ? ದೇವರು ಅವರಿಗೆ ಉತ್ತಮ ಆರೋಗ್ಯ, ವಾಸಿಸಲು ಸುಂದರ ಸ್ಥಳ ಮತ್ತು ಮನಸ್ಸಿಗೆ ಸಂತೋಷ ಕೊಡುವಂಥ ಕೆಲಸ ಹೀಗೆ ಎಲ್ಲವನ್ನೂ ಕೊಟ್ಟಿದ್ದ. ಇಷ್ಟೆಲ್ಲ ಒಳ್ಳೇದನ್ನು ಕೊಟ್ಟಂಥ ದೇವರನ್ನು ಬಿಟ್ಟು ತಮಗಾಗಿ ಏನೂ ಒಳ್ಳೇದನ್ನು ಮಾಡದ ಸೈತಾನನನ್ನು ನಂಬಿದ್ದು ಎಂಥ ಮುರ್ಖತನ ಅಲ್ವಾ? ಒಂದುವೇಳೆ ನೀವು ಅವರ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?
10. ನಾವು ಯಾವ ಪ್ರಾಮುಖ್ಯ ಆಯ್ಕೆ ಮಾಡಬೇಕಾಗಿದೆ?
10 ಇವತ್ತು ನಮ್ಮ ಮುಂದೆ ಎರಡು ದಾರಿಗಳಿವೆ. ಅದರಲ್ಲಿ ಒಂದನ್ನು ನಾವು ಆಯ್ಕೆ ಮಾಡಬೇಕು. ಯೆಹೋವನ ಪಕ್ಷ ವಹಿಸಿದರೆ, ನಮ್ಮನ್ನು ಆಳಲು ಯೆಹೋವನೇ ಸರಿಯಾದವನು ಎಂದು ಒಪ್ಪಿಕೊಂಡು, ಸೈತಾನನನ್ನು ಸುಳ್ಳುಗಾರನೆಂದು ರುಜುಪಡಿಸಲು ದೇವರಿಗೆ ಸಹಾಯಮಾಡುತ್ತೇವೆ. ಸೈತಾನನ ಪಕ್ಷ ವಹಿಸಿದರೆ ಸೈತಾನನೇ ನಮ್ಮನ್ನು ಆಳಲು ಸರಿಯಾದವನು ಎಂದು ರುಜುಪಡಿಸುತ್ತೇವೆ. ನಾವು ಮಾಡುವ ಆಯ್ಕೆಯ ಮೇಲೆ ನಮ್ಮ ಜೀವ ಹೊಂದಿಕೊಂಡಿದೆ. (ಕೀರ್ತನೆ 73:28; ಜ್ಞಾನೋಕ್ತಿ 27:11 ಓದಿ.) ಈಗ ಕೆಲವರು ಮಾತ್ರ ಯೆಹೋವನ ಪಕ್ಷ ವಹಿಸುತ್ತಿದ್ದಾರೆ. ಯಾಕೆಂದರೆ ಈ ಪ್ರಪಂಚ ಯೆಹೋವನ ಕೈಯಲ್ಲಿಲ್ಲ. ಇನ್ಯಾರ ಕೈಯಲ್ಲಿದೆ? ಬನ್ನಿ ಮುಂದೆ ನೋಡೋಣ.
ಈ ಪ್ರಪಂಚ ಯಾರ ಕೈಯಲ್ಲಿದೆ?
ಈ ಪ್ರಪಂಚ ಸೈತಾನನ ಕೈಯಲ್ಲಿ ಇರುವುದರಿಂದಲೇ ‘ಇವೆಲ್ಲವನ್ನೂ ನಿನಗೆ ಕೊಡುತ್ತೇನೆ’ ಅಂತ ಅವನು ಯೇಸುವಿಗೆ ಹೇಳಿದನು
11, 12. (ಎ) ಸೈತಾನನು ಯೇಸುವಿಗೆ ಎಲ್ಲವನ್ನೂ ಕೊಡುತ್ತೇನೆ ಎಂದು ಹೇಳಿದ ಮಾತಿನಿಂದ ನಮಗೇನು ಗೊತ್ತಾಗುತ್ತದೆ? (ಬಿ) ಈ ಲೋಕ ಸೈತಾನನ ಕೈಯಲ್ಲಿದೆ ಎಂದು ಯಾವೆಲ್ಲ ಬೈಬಲ್ ವಚನಗಳಿಂದ ಗೊತ್ತಾಗುತ್ತದೆ?
11 ಈ ಪ್ರಶ್ನೆಗೆ ಉತ್ತರ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಒಮ್ಮೆ ಸೈತಾನನು ಯೇಸುವಿಗೆ “ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ತೋರಿಸಿ, “ನೀನು ಅಡ್ಡಬಿದ್ದು ನನಗೆ ಒಂದು ಆರಾಧನಾ ಕ್ರಿಯೆಯನ್ನು ಮಾಡಿದರೆ ನಾನು ಇವೆಲ್ಲವನ್ನೂ ನಿನಗೆ ಕೊಡುವೆನು” ಎಂದು ಹೇಳಿದನು. (ಮತ್ತಾಯ 4:8, 9; ಲೂಕ 4:5, 6) ನೀವೇ ಯೋಚಿಸಿ, ಈ ಪ್ರಪಂಚ ಸೈತಾನನ ಕೈಯಲ್ಲಿ ಇಲ್ಲದೇ ಇದ್ದಿದ್ದರೆ ಇವೆಲ್ಲವನ್ನೂ ಕೊಡುತ್ತೇನೆ ಅಂತ ಅವನು ಹೇಗೆ ಹೇಳುತ್ತಿದ್ದ? ಇದರಿಂದ ಗೊತ್ತಾಗುತ್ತದೆ, ಎಲ್ಲ ರಾಜ್ಯಗಳು ಅಂದರೆ ಸರ್ಕಾರಗಳು ಸೈತಾನನ ಕೈಯಲ್ಲಿವೆ.
12 ಇಡೀ ಜಗತ್ತನ್ನು ಸೃಷ್ಟಿ ಮಾಡಿದ್ದು ಸರ್ವಶಕ್ತನಾದ ಯೆಹೋವ ದೇವರೇ. (ಪ್ರಕಟನೆ 4:11) ಆದರೂ ಸೈತಾನನು “ಈ ಲೋಕದ ಅಧಿಪತಿ” ಆಗಿದ್ದಾನೆ ಎಂದು ಯೇಸುವೇ ಹೇಳಿದನು. (ಯೋಹಾನ 12:31; 14:30; 16:11) ಅಪೊಸ್ತಲ ಪೌಲನು ಸೈತಾನನನ್ನು “ಈ ವಿಷಯಗಳ ವ್ಯವಸ್ಥೆಯ ದೇವನು” ಎಂದು ಕರೆದನು. (2 ಕೊರಿಂಥ 4:3, 4) ಅಪೊಸ್ತಲ ಯೋಹಾನನು ಸಹ “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬರೆದನು.—1 ಯೋಹಾನ 5:19.
ಸೈತಾನನ ಆಡಳಿತ ಹೇಗೆ ನಾಶವಾಗುತ್ತದೆ?
13. (ಎ) ಮುಂದೆ ದೇವರು ಎಂಥ ಪರಿಸ್ಥಿತಿಯನ್ನು ತರಲಿದ್ದಾನೆ? (ಬಿ) ಅದು ನಮಗೆ ಯಾಕೆ ಅಗತ್ಯ?
13 ಈ ಪ್ರಪಂಚ ದಿನದಿಂದ ದಿನಕ್ಕೆ ಕೆಡುತ್ತಾ ಹೋಗುತ್ತಿದೆ. ಎಲ್ಲಿ ನೋಡಿದರೂ ಯುದ್ಧ, ಭ್ರಷ್ಟಾಚಾರ, ಕಪಟತನ, ಹಿಂಸಾಚಾರ ತುಂಬಿ ತುಳುಕುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಇಂಥ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಮ್ಮಿಂದ ಆಗುತ್ತಿಲ್ಲ. ಆದರೆ ದೇವರು ಬೇಗನೆ ಒಂದು ಯುದ್ಧ ಮಾಡಿ ಇವೆಲ್ಲವನ್ನು ತೆಗೆದುಹಾಕಲಿದ್ದಾನೆ. ಆ ಯುದ್ಧದ ಹೆಸರು ಅರ್ಮಗೆದೋನ್ (ಹರ್ಮಗೆದೋನ್). ಆ ಯುದ್ಧದಲ್ಲಿ ದೇವರು ದುಷ್ಟತನವನ್ನು ತೆಗೆದುಹಾಕಲಿದ್ದಾನೆ. ನಂತರ ಭೂಮಿಯ ಮೇಲೆ ಒಳ್ಳೇ ಪರಿಸ್ಥಿತಿಯನ್ನು ತರಲಿದ್ದಾನೆ.—ಪ್ರಕಟನೆ 16:14-16; ಟಿಪ್ಪಣಿ 10ನ್ನು ನೋಡಿ.
14. (ಎ) ದೇವರು ಯಾರನ್ನು ತನ್ನ ರಾಜ್ಯದ ರಾಜನನ್ನಾಗಿ ಮಾಡಿದ್ದಾನೆ? (ಬಿ) ಯೇಸುವಿನ ಬಗ್ಗೆ ಬೈಬಲಿನಲ್ಲಿ ಏನೆಂದು ಬರೆಯಲಾಗಿತ್ತು?
14 ಒಳ್ಳೆಯ ಪರಿಸ್ಥಿತಿ ತರಲು ಯೆಹೋವ ದೇವರು ಸ್ವರ್ಗದಲ್ಲಿರುವ ತನ್ನ ರಾಜ್ಯವನ್ನು ಅಂದರೆ ಸರ್ಕಾರವನ್ನು ಬಳಸಲಿದ್ದಾನೆ. ಯೇಸು ಕ್ರಿಸ್ತನನ್ನು ಅದರ ರಾಜನನ್ನಾಗಿ ಮಾಡಿದ್ದಾನೆ. ಯೇಸು “ಸಮಾಧಾನದ ಪ್ರಭು” ಆಗಿರುತ್ತಾನೆ ಎಂದು ಬೈಬಲಿನಲ್ಲಿ ಸಾವಿರಾರು ವರ್ಷಗಳ ಮುಂಚೆಯೇ ಬರೆಯಲಾಗಿತ್ತು. (ಯೆಶಾಯ 9:6, 7) ಯೇಸು ತನ್ನ ಹಿಂಬಾಲಕರಿಗೆ ‘ದೇವರ ರಾಜ್ಯವು ಬರಲಿ. ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ’ ಎಂದು ಪ್ರಾರ್ಥಿಸುವಂತೆ ಕಲಿಸಿದನು. (ಮತ್ತಾಯ 6:10) ದೇವರ ಸರ್ಕಾರವು ಪ್ರಪಂಚದಲ್ಲಿರುವ ಬೇರೆಲ್ಲ ಸರ್ಕಾರಗಳನ್ನು ಹೇಗೆ ತೆಗೆದುಹಾಕಲಿದೆ ಎಂದು ಈ ಪುಸ್ತಕದ 8ನೇ ಅಧ್ಯಾಯದಲ್ಲಿ ಕಲಿಯಲಿದ್ದೇವೆ. (ದಾನಿಯೇಲ 2:44 ಓದಿ.) ಹೀಗೆ ದೇವರು ಬೇರೆಲ್ಲ ಸರ್ಕಾರಗಳನ್ನು ತೆಗೆದುಹಾಕಿದ ನಂತರ ಇಡೀ ಭೂಮಿಯನ್ನು ಒಂದು ಸುಂದರ ತೋಟವನ್ನಾಗಿ ಮಾಡಲಿದ್ದಾನೆ.—ಟಿಪ್ಪಣಿ 11ನ್ನು ನೋಡಿ.
ದೇವರ ರಾಜ್ಯ ತುಂಬ ಹತ್ತಿರವಿದೆ!
15. “ನೂತನ ಭೂಮಿ” ಅಂದರೇನು?
15 “ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು” ಎಂದು ಬೈಬಲ್ ಹೇಳುತ್ತದೆ. (2 ಪೇತ್ರ 3:13; ಯೆಶಾಯ 65:17) ಈ ವಚನದಲ್ಲಿ ತಿಳಿಸಿರುವ “ಭೂಮಿ” ಏನಾಗಿದೆ? ಕೆಲವೊಂದು ಸಾರಿ ಬೈಬಲಿನಲ್ಲಿ “ಭೂಮಿ” ಎಂಬ ಪದವನ್ನು ‘ಜನರಿಗೆ’ ಸೂಚಿಸಿ ಹೇಳಲಾಗಿದೆ. (ಯೆಶಾಯ 1:2) ಹಾಗಾದರೆ ನೀತಿ ತುಂಬಿರುವ “ನೂತನ ಭೂಮಿ” ಅಂದರೆ ಹೊಸ ಭೂಮಿಯಲ್ಲ, ಬದಲಿಗೆ ದೇವರ ಮಾತನ್ನು ಕೇಳಿ ಅದರ ಪ್ರಕಾರ ನಡೆಯುವ ಜನರಾಗಿದ್ದಾರೆ.
16. (ಎ) ದೇವರು ಹೊಸ ಲೋಕದಲ್ಲಿ ಜನರಿಗೆ ಎಂಥ ಜೀವನ ಕೊಡಲಿದ್ದಾನೆ? (ಬಿ) ಅದನ್ನು ಪಡೆಯಲು ನಾವೇನು ಮಾಡಬೇಕು?
16 ದೇವರ ಸರ್ಕಾರ ಈ ಭೂಮಿಯನ್ನು ಆಳುವಾಗ ಎಲ್ಲರಿಗೆ “ನಿತ್ಯಜೀವ” ಅಂದರೆ ಸಾವಿಲ್ಲದ ಜೀವನ ಸಿಗುತ್ತದೆ ಎಂದು ಯೇಸು ಮಾತುಕೊಟ್ಟಿದ್ದಾನೆ. (ಮಾರ್ಕ 10:30) ಅದನ್ನು ಪಡೆಯಲು ನಾವೇನು ಮಾಡಬೇಕು? ಉತ್ತರಕ್ಕಾಗಿ ದಯವಿಟ್ಟು ಯೋಹಾನ 3:16 ಮತ್ತು ಯೋಹಾನ 17:3ನ್ನು ಓದಿ. ದೇವರು ತರಲಿರುವ ಆ ಹೊಸ ಲೋಕದಲ್ಲಿ ಪರಿಸ್ಥಿತಿ ಹೇಗೆ ಇರುತ್ತದೆ ಅಂತ ಈಗ ನೋಡೋಣ.
17, 18. (ಎ) ದೇವರು ತರಲಿರುವ ಹೊಸ ಲೋಕದಲ್ಲಿ ಶಾಂತಿ-ಸಮಾಧಾನ ಇರುತ್ತದೆ ಎಂದು ನಾವು ಹೇಗೆ ಹೇಳಬಹುದು? (ಬಿ) ನೆಮ್ಮದಿಯ ಸುರಕ್ಷಿತ ಜೀವನ ಸಿಗುತ್ತದೆ ಎಂದು ನಮಗೆ ಹೇಗೆ ಗೊತ್ತು?
17 ದುಷ್ಟತನ, ಯುದ್ಧ, ಅಪರಾಧ ಮತ್ತು ಹಿಂಸಾಚಾರ ಇರುವುದೇ ಇಲ್ಲ. ದುಷ್ಟರೆಲ್ಲ ಶಾಶ್ವತವಾಗಿ ನಾಶವಾಗಿ ಹೋಗುತ್ತಾರೆ. (ಕೀರ್ತನೆ 37:10, 11) ದೇವರು ‘ಎಲ್ಲ ಕಡೆಗಳಲ್ಲಿ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’ (ಕೀರ್ತನೆ 46:9; ಯೆಶಾಯ 2:4) ಭೂಮಿಯಲ್ಲಿ ದೇವರನ್ನು ಪ್ರೀತಿಸುವ ಜನರು ಮಾತ್ರ ಇರುತ್ತಾರೆ. ‘ಚಂದ್ರನಿರುವ ವರೆಗೂ ಸೌಭಾಗ್ಯವಿರುತ್ತದೆ’ ಅಂದರೆ ಶಾಶ್ವತವಾಗಿ ಶಾಂತಿ-ಸಮಾಧಾನ ಇರುತ್ತದೆ.—ಕೀರ್ತನೆ 72:7.
18 ನಾವು ಸುರಕ್ಷಿತವಾಗಿ ಇರುತ್ತೇವೆ. ಬೈಬಲ್ ಬರೆದ ಸಮಯದಲ್ಲಿ, ಇಸ್ರಾಯೇಲ್ಯರು ದೇವರ ಮಾತಿನ ಪ್ರಕಾರ ನಡೆದುಕೊಂಡ ಕಾರಣ ದೇವರು ಅವರನ್ನು ಕಾಪಾಡಿದನು. ಹಾಗಾಗಿ ಅವರು ಸುರಕ್ಷಿತರಾಗಿದ್ದರು. (ಯಾಜಕಕಾಂಡ 25:18, 19) ಅದೇ ರೀತಿ ದೇವರ ರಾಜ್ಯದಲ್ಲಿ ನಮಗೆ ಯಾರ ಭಯವೂ ಇರುವುದಿಲ್ಲ. ನೆಮ್ಮದಿಯ ಸುರಕ್ಷಿತ ಜೀವನ ನಮ್ಮದಾಗುತ್ತದೆ.—ಯೆಶಾಯ 32:18 ಮತ್ತು ಮೀಕ 4:4 ಓದಿ.
19. ಹೊಸ ಲೋಕದಲ್ಲಿ ನಮಗೆ ಆಹಾರದ ಕೊರತೆ ಇರುವುದಿಲ್ಲ ಎಂದು ನಾವು ಹೇಗೆ ಹೇಳಬಹುದು?
19 ಸಾಕಷ್ಟು ಆಹಾರ ಇರುತ್ತದೆ. ‘ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಿರುತ್ತದೆ’ ಎಂದು ಬೈಬಲಿನಲ್ಲಿದೆ. (ಕೀರ್ತನೆ 72:16) “ಭೂಮಿಯು ಒಳ್ಳೇ ಬೆಳೆಯನ್ನು” ಕೊಡುವಂತೆ ಮಾಡಿ ದೇವರು “ನಮ್ಮನ್ನು ಆಶೀರ್ವದಿಸುವನು.”—ಕೀರ್ತನೆ 67:6.
20. ಇಡೀ ಭೂಮಿ ಸುಂದರ ತೋಟವಾಗುತ್ತದೆ ಎಂದು ನಾವು ಹೇಗೆ ಹೇಳಬಹುದು?
20 ಇಡೀ ಭೂಮಿ ಸುಂದರ ತೋಟವಾಗುವುದು. ನಮಗೆ ಸುಂದರವಾದ ಮನೆಗಳು ತೋಟಗಳು ಇರುತ್ತವೆ. (ಯೆಶಾಯ 65:21-24 ಮತ್ತು ಪ್ರಕಟನೆ 11:18 ಓದಿ.) ಈ ಭೂಮಿ ಏದೆನ್ ತೋಟ ಎಷ್ಟು ಸುಂದರವಾಗಿತ್ತೋ ಅಷ್ಟು ಸುಂದರವಾಗಿ ಇರುತ್ತದೆ. ನಮಗೇನು ಬೇಕೋ ಅವೆಲ್ಲವೂ ಸಿಗುವಂತೆ ದೇವರು ಮಾಡುತ್ತಾನೆ. ‘ಯೆಹೋವನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಾನೆ’ ಎಂದು ಬೈಬಲ್ ತಿಳಿಸುತ್ತದೆ.—ಕೀರ್ತನೆ 145:16.
21. ಹೊಸ ಲೋಕದಲ್ಲಿ ಪ್ರಾಣಿಗಳು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ ಎಂದು ನಾವು ಹೇಗೆ ಹೇಳಬಹುದು?
21 ಪ್ರಾಣಿಗಳು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಇವತ್ತು ನಾವು ಯಾವ ಪ್ರಾಣಿಗಳನ್ನು ನೋಡಿ ಹೆದರುತ್ತೇವೋ ಅಂಥ ಪ್ರಾಣಿಗಳೊಂದಿಗೆ ಆಗ ಚಿಕ್ಕ ಮಕ್ಕಳು ಸಹ ಆಟವಾಡುತ್ತಾರೆ.—ಯೆಶಾಯ 11:6-9; 65:25 ಓದಿ.
22. ಅಸ್ವಸ್ಥರಿಗೆ ಯೇಸು ಏನು ಮಾಡಲಿದ್ದಾನೆ?
22 ಎಲ್ಲರಿಗೂ ಒಳ್ಳೇ ಆರೋಗ್ಯ ಇರುತ್ತದೆ. ಯೇಸು ಭೂಮಿಯಲ್ಲಿದ್ದಾಗ ಅನೇಕರನ್ನು ವಾಸಿಮಾಡಿದನು. (ಮತ್ತಾಯ 9:35; ಮಾರ್ಕ 1:40-42; ಯೋಹಾನ 5:5-9) ದೇವರ ರಾಜ್ಯದ ರಾಜನಾಗಿ ಯೇಸು ಮುಂದೆ ಎಲ್ಲರನ್ನೂ ವಾಸಿಮಾಡಲಿದ್ದಾನೆ. ಆಗ ಯಾರೂ ‘ನಾನು ಅಸ್ವಸ್ಥನು ಎಂದು ಹೇಳುವುದಿಲ್ಲ.’—ಯೆಶಾಯ 33:24; 35:5, 6.
23. ತೀರಿಹೋದ ನಮ್ಮ ಪ್ರೀತಿಯ ಜನರು ಹೊಸ ಲೋಕದಲ್ಲಿ ನಮ್ಮೊಂದಿಗೆ ಇರುತ್ತಾರೆಂದು ನಮಗೆ ಹೇಗೆ ಗೊತ್ತು?
23 ತೀರಿಹೋದ ನಮ್ಮ ಪ್ರೀತಿಯ ಜನರು ನಮ್ಮೊಂದಿಗೆ ಇರುತ್ತಾರೆ. ತೀರಿ ಹೋಗಿರುವ ಕೋಟ್ಯಾಂತರ ಜನರನ್ನು ಪುನರುತ್ಥಾನ ಮಾಡುತ್ತೇನೆ ಅಂದರೆ ಪುನಃ ಎಬ್ಬಿಸುತ್ತೇನೆ ಎಂದು ದೇವರು ಮಾತುಕೊಟ್ಟಿದ್ದಾನೆ. “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ಬೈಬಲ್ ಹೇಳುತ್ತದೆ.—ಯೋಹಾನ 5:28, 29 ಓದಿ; ಅಪೊಸ್ತಲರ ಕಾರ್ಯಗಳು 24:15.
24. ಹೊಸ ಲೋಕದಲ್ಲಿ ಜೀವಿಸುವುದರ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ?
24 ನಮ್ಮೆಲ್ಲರ ಮುಂದೆ ಒಂದು ಆಯ್ಕೆ ಇದೆ. ದೇವರ ಬಗ್ಗೆ ಕಲಿತು ಆತನನ್ನು ಆರಾಧಿಸಬಹುದು ಅಥವಾ ನಮಗೆ ಬೇಕಾಗಿದ್ದನ್ನೇ ಮಾಡಿಕೊಂಡು ಹೋಗಬಹುದು. ಯೆಹೋವ ದೇವರನ್ನು ಆರಾಧಿಸುವ ಆಯ್ಕೆ ಮಾಡಿದರೆ ಹೊಸ ಲೋಕದಲ್ಲಿ ಒಳ್ಳೇ ಜೀವನ ನಮ್ಮದಾಗುತ್ತದೆ. ಯೇಸು ತಾನು ಸಾಯುವ ಸಮಯದಲ್ಲಿ ತನ್ನ ಪಕ್ಕದಲ್ಲಿದ್ದ ವ್ಯಕ್ತಿಗೆ “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಅಂದರೆ ‘ನನ್ನೊಂದಿಗೆ ಹೊಸ ಲೋಕದಲ್ಲಿರುವಿ’ ಎಂದು ಮಾತುಕೊಟ್ಟನು. (ಲೂಕ 23:43) ಮುಂದಿನ ಅಧ್ಯಾಯದಲ್ಲಿ ನಾವು ಯೇಸು ಕ್ರಿಸ್ತನ ಬಗ್ಗೆ ಮತ್ತು ಆತನು ಹೇಗೆ ಈ ಎಲ್ಲ ವಿಷಯಗಳನ್ನು ನಿಜ ಮಾಡಲಿದ್ದಾನೆ ಎನ್ನುವುದರ ಬಗ್ಗೆ ಕಲಿಯೋಣ.