-
ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 51
ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ
ಅಪ್ಪ-ಅಮ್ಮನಿಂದ ದೂರವಾದ ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ಸಿರಿಯ ದೇಶದಲ್ಲಿ ಇದ್ದಳು. ಸಿರಿಯದ ಸೈನ್ಯದವರು ಅವಳನ್ನು ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವಳು ನಾಮಾನನೆಂಬ ಸೇನಾಪತಿಯ ಹೆಂಡತಿಗೆ ಸೇವಕಿಯಾದಳು. ತನ್ನ ಸುತ್ತಮುತ್ತ ಇದ್ದವರು ಯೆಹೋವನನ್ನು ಆರಾಧಿಸದೇ ಇದ್ದರೂ ಆ ಪುಟ್ಟ ಹುಡುಗಿ ಯೆಹೋವನನ್ನೇ ಆರಾಧಿಸುತ್ತಿದ್ದಳು.
ನಾಮಾನನಿಗೆ ಭಯಂಕರವಾದ ಚರ್ಮದ ಕಾಯಿಲೆ ಇತ್ತು. ಅದರಿಂದ ಅವನಿಗೆ ತುಂಬ ನೋವಾಗುತ್ತಿತ್ತು. ಆ ಪುಟ್ಟ ಹುಡುಗಿಗೆ ಅವನಿಗೆ ಸಹಾಯ ಮಾಡಬೇಕು ಅಂತ ಅನಿಸಿತು. ಅವಳು ನಾಮಾನನ ಹೆಂಡತಿಗೆ ‘ನಮ್ಮ ಒಡೆಯನ ಕಾಯಿಲೆಯನ್ನು ವಾಸಿ ಮಾಡುವ ಒಬ್ಬ ವ್ಯಕ್ತಿ ನನಗೆ ಗೊತ್ತು. ಅವನು ಇಸ್ರಾಯೇಲಿನಲ್ಲಿರುವ ಯೆಹೋವನ ಪ್ರವಾದಿ ಎಲೀಷ. ಅವನು ಒಡೆಯನನ್ನ ವಾಸಿಮಾಡುವನು’ ಅಂದಳು.
ಆ ಪುಟ್ಟ ಹುಡುಗಿ ಹೇಳಿದ್ದನ್ನು ನಾಮಾನನ ಹೆಂಡತಿ ಅವನಿಗೆ ಹೇಳಿದಳು. ತನ್ನ ಕಾಯಿಲೆ ವಾಸಿಯಾಗೋದಕ್ಕೆ ಅವನು ಏನು ಮಾಡೋದಕ್ಕೂ ಸಿದ್ಧನಿದ್ದ. ಹಾಗಾಗಿ ಅವನು ಇಸ್ರಾಯೇಲ್‌ನಲ್ಲಿದ್ದ ಎಲೀಷನ ಮನೆಗೆ ಹೋದ. ತಾನೊಬ್ಬ ದೊಡ್ಡ ವ್ಯಕ್ತಿ ಆಗಿರೋದರಿಂದ ಎಲೀಷ ತನ್ನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾನೆ ಎಂದು ನಾಮಾನ ನೆನೆಸಿದ್ದ. ಆದರೆ ಎಲೀಷ ನಾಮಾನನನ್ನು ಭೇಟಿಯಾಗಲು ತನ್ನ ಸೇವಕನನ್ನು ಕಳುಹಿಸಿ ‘ಹೋಗಿ ಯೋರ್ದನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು. ಆಗ ನಿನ್ನ ಕಾಯಿಲೆ ವಾಸಿಯಾಗುವುದು ಎಂದು ಹೇಳು’ ಅಂದನು.
ಆಗ ನಾಮಾನನಿಗೆ ತುಂಬಾ ನಿರಾಶೆಯಾಯಿತು. ಅವನು ‘ಈ ಪ್ರವಾದಿ ತನ್ನ ದೇವರ ಹೆಸರನ್ನು ಹೇಳಿ ನನ್ನ ಮೇಲೆ ಕೈ ಆಡಿಸಿ ವಾಸಿ ಮಾಡ್ತಾನೆ ಅಂದ್ಕೊಂಡಿದ್ದೆ. ಆದರೆ ಇವನು ಇಸ್ರಾಯೇಲಿನಲ್ಲಿರುವ ನದಿಗೆ ಹೋಗು ಎಂದು ಹೇಳುತ್ತಿದ್ದಾನೆ. ಸಿರಿಯದಲ್ಲಿ ಇದಕ್ಕಿಂತ ಉತ್ತಮ ನದಿಗಳಿವೆ. ನಾನು ಅಲ್ಲಿಗೇ ಹೋಗಬಹುದಿತ್ತಲ್ಲಾ?’ ಅಂದನು. ಕೋಪಗೊಂಡ ನಾಮಾನ ಎಲೀಷನ ಮನೆಯಿಂದ ಹೊರಟು ಹೋದನು.
ನಾಮಾನನ ಸೇವಕರು ಸರಿಯಾಗಿ ಯೋಚಿಸಲು ಅವನಿಗೆ ಸಹಾಯ ಮಾಡಿದರು. ‘ಒಡೆಯನೇ, ಪ್ರವಾದಿ ನಿನಗೆ ಯಾವುದಾದ್ರೂ ಕಷ್ಟದ ಕೆಲಸ ಹೇಳಿದ್ದರೆ ಮಾಡ್ತಿರಲಿಲ್ವಾ? ಹಾಗಿರುವಾಗ ಈ ಚಿಕ್ಕ ಕೆಲಸ ಯಾಕೆ ಮಾಡಬಾರದು?’ ಅಂದರು. ನಾಮಾನ ಅವರ ಮಾತನ್ನು ಕೇಳಿದನು. ಯೋರ್ದನ್ ನದಿಗೆ ಹೋಗಿ ಏಳು ಸಾರಿ ಮುಳುಗಿ ಎದ್ದನು. ಏಳನೇ ಸಾರಿ ನೀರಿನಿಂದ ಮೇಲೆ ಬಂದಾಗ ಅವನ ಕಾಯಿಲೆ ಸಂಪೂರ್ಣವಾಗಿ ವಾಸಿಯಾಗಿತ್ತು. ಅವನಿಗೆ ತುಂಬಾ ಸಂತೋಷವಾಯಿತು. ಎಲೀಷನ ಹತ್ತಿರ ಹೋಗಿ ‘ಯೆಹೋವನೇ ಸತ್ಯ ದೇವರು ಎಂದು ಈಗ ನನಗೆ ಗೊತ್ತಾಯಿತು’ ಅಂದನು. ಒಡೆಯನ ಕಾಯಿಲೆ ವಾಸಿ ಆಗಿರೋದನ್ನು ನೋಡಿದಾಗ ಆ ಪುಟ್ಟ ಇಸ್ರಾಯೇಲ್ಯ ಹುಡುಗಿಗೆ ಎಷ್ಟು ಖುಷಿ ಆಗಿರಬೇಕಲ್ವಾ?
“ಚಿಕ್ಕಮಕ್ಕಳು ಪುಟಾಣಿಗಳು ನಿನ್ನನ್ನ ಹೊಗಳೋ ಹಾಗೆ ಮಾಡಿದ್ದೀಯ.”—ಮತ್ತಾಯ 21:16
-
-
ಯೆಹೋವನ ಅಗ್ನಿಮಯ ಸೈನ್ಯಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 52
ಯೆಹೋವನ ಅಗ್ನಿಮಯ ಸೈನ್ಯ
ಸಿರಿಯದ ರಾಜನಾದ ಬೆನ್ಹದದನು ಇಸ್ರಾಯೇಲಿನ ಮೇಲೆ ಆಗಾಗ ಯುದ್ಧಕ್ಕೆ ಬರುತ್ತಿದ್ದ. ಆದರೆ ಎಲೀಷ ಅವನ ಒಳಸಂಚಿನ ಬಗ್ಗೆ ಇಸ್ರಾಯೇಲಿನ ರಾಜನಿಗೆ ಮೊದಲೇ ತಿಳಿಸುತ್ತಿದ್ದದ್ದರಿಂದ ಅವನು ಬೆನ್ಹದದನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ. ಆದ್ದರಿಂದ ಬೆನ್ಹದದ ಎಲೀಷನನ್ನು ಹಿಡಿಸಲು ನಿರ್ಧರಿಸಿದ. ಎಲೀಷ ದೋತಾನಿನಲ್ಲಿದ್ದಾನೆ ಎಂದು ಗೊತ್ತಾದಾಗ ಅವನನ್ನು ಹಿಡಿದುಕೊಂಡು ಬರಲು ತನ್ನ ಸೈನ್ಯವನ್ನು ಕಳುಹಿಸಿದ.
ಸಿರಿಯದ ಸೈನ್ಯ ರಾತ್ರಿ ದೋತಾನಿಗೆ ಬಂದು ಮುಟ್ಟಿತು. ಮಾರನೇ ದಿನ ಬೆಳಗ್ಗೆ ಎಲೀಷನ ಸೇವಕ ಹೊರಗೆ ಬಂದಾಗ ಇಡೀ ಪಟ್ಟಣವನ್ನು ಸಿರಿಯದ ಸೈನ್ಯ ಮುತ್ತಿಗೆ ಹಾಕಿತ್ತು. ಅವನು ಭಯದಿಂದ ಕೂಗುತ್ತಾ ‘ಎಲೀಷ, ನಾವೀಗ ಏನು ಮಾಡೋಣ?’ ಅಂದ. ಆಗ ಎಲೀಷ ‘ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ’ ಎಂದ. ಅದೇ ಕ್ಷಣದಲ್ಲಿ ಬೆಟ್ಟದ ಸುತ್ತ ನಿಂತಿದ್ದ ಅಗ್ನಿಮಯ ಯುದ್ಧರಥಗಳು ಮತ್ತು ಕುದುರೆಗಳು ಸೇವಕನಿಗೆ ಕಾಣುವಂತೆ ಯೆಹೋವನು ಮಾಡಿದನು.
ಸಿರಿಯದ ಸೈನಿಕರು ಎಲೀಷನನ್ನು ಹಿಡಿಯಲು ಬಂದಾಗ ಅವನು ‘ಯೆಹೋವನೇ, ದಯವಿಟ್ಟು ಇವರನ್ನು ಕುರುಡರಾಗೋ ತರ ಮಾಡು’ ಎಂದು ಪ್ರಾರ್ಥಿಸಿದ. ಆಗ ಅವರಿಗೆ ಕಣ್ಣು ಕಾಣಿಸುತ್ತಿದ್ದರೂ ಸಹ ತಾವು ಎಲ್ಲಿದ್ದೇವೆ ಅಂತ ಗೊತ್ತಾಗಲಿಲ್ಲ. ಎಲೀಷ ಸೈನಿಕರಿಗೆ ‘ನೀವು ದಾರಿ ತಪ್ಪಿ ಬಂದಿದ್ದೀರ. ನನ್ನ ಜೊತೆ ಬನ್ನಿ. ನೀವು ಹುಡುಕ್ತಿರೋ ಮನುಷ್ಯನ ಹತ್ರ ನಾನು ಕರ್ಕೊಂಡು ಹೋಗ್ತೀನಿ’ ಅಂದ. ಅವರು ಎಲೀಷನ ಜೊತೆಗೆ ಇಸ್ರಾಯೇಲಿನ ರಾಜನಿದ್ದ ಸಮಾರ್ಯಕ್ಕೆ ಬಂದರು.
ಅವರಿಗೆ ತಾವು ಎಲ್ಲಿದ್ದೇವೆ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ‘ನಾನು ಇವರನ್ನ ಸಾಯಿಸ್ಲಾ?’ ಎಂದು ಇಸ್ರಾಯೇಲಿನ ರಾಜ ಎಲೀಷನಿಗೆ ಕೇಳಿದ. ಆಗ ಎಲೀಷ ಇದೇ ಒಳ್ಳೇ ಅವಕಾಶ ಅಂತ ತನ್ನನ್ನು ಹಿಡಿಯೋಕೆ ಬಂದವರ ಮೇಲೆ ಸೇಡು ತೀರಿಸಿಕೊಂಡನಾ? ಇಲ್ಲ. ಅವನು ‘ಇವರನ್ನ ಸಾಯಿಸಬೇಡ. ಇವರಿಗೆ ಊಟ ಕೊಡು. ಆಮೇಲೆ ಅವರನ್ನು ಕಳುಹಿಸು’ ಎಂದ. ಆದ್ದರಿಂದ ರಾಜ ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ನಂತರ ಮನೆಗೆ ಕಳುಹಿಸಿದ.
“ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.”—1 ಯೋಹಾನ 5:14
-