-
ಧೀರ ಯೆಹೋಯಾದಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 53
ಧೀರ ಯೆಹೋಯಾದ
ಈಜೆಬೇಲಳಿಗೆ ಅತಲ್ಯಳೆಂಬ ಮಗಳಿದ್ದಳು. ಅವಳೂ ತನ್ನ ತಾಯಿಯಂತೆ ತುಂಬಾ ದುಷ್ಟಳಾಗಿದ್ದಳು. ಅತಲ್ಯಳು ಯೆಹೂದದ ರಾಜನನ್ನು ಮದುವೆಯಾದಳು. ಅವನು ತೀರಿಹೋದಾಗ ಅವನ ಮಗ ರಾಜನಾದ. ಅವನೂ ಸತ್ತಾಗ ಯೆಹೂದದ ರಾಜ್ಯಭಾರವನ್ನು ಅತಲ್ಯಳು ತನ್ನ ಕೈಗೆತ್ತಿಕೊಂಡಳು. ಅವಳು ಎಷ್ಟು ಕೆಟ್ಟವಳಾಗಿದ್ದಳು ಅಂದರೆ ಇಡೀ ರಾಜವಂಶವನ್ನೇ ನಾಶ ಮಾಡಲು ಪ್ರಯತ್ನಿಸಿದಳು. ಅವಳ ಬದಲಿಗೆ ಯಾರಿಗೆಲ್ಲಾ ರಾಜರಾಗಲು ಹಕ್ಕಿತ್ತೋ ಅವರೆಲ್ಲರನ್ನು ಕೊಲ್ಲಿಸಿದಳು. ತನ್ನ ಸ್ವಂತ ಮೊಮ್ಮಕ್ಕಳನ್ನು ಕೂಡ ಬಿಡಲಿಲ್ಲ. ಹಾಗಾಗಿ ಅವಳನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು.
ಮಹಾ ಪುರೋಹಿತ ಯೆಹೋಯಾದ ಮತ್ತು ಅವನ ಹೆಂಡತಿ ಯೆಹೋಷೆಬಗೆ ಅತಲ್ಯಳು ಮಾಡುತ್ತಿದ್ದ ಕೆಟ್ಟ ಕೆಲಸಗಳ ಬಗ್ಗೆ ಗೊತ್ತಿತ್ತು. ಅವರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಅತಲ್ಯಳ ಮೊಮ್ಮಗ ಯೆಹೋವಾಷನನ್ನು ಬಚ್ಚಿಟ್ಟು ಸಾಕಿದರು. ಅವನು ದೇವಾಲಯದಲ್ಲಿ ಬೆಳೆದ.
ಯೆಹೋವಾಷ ಏಳು ವರ್ಷದವನಾದಾಗ ಯೆಹೋಯಾದ ಎಲ್ಲಾ ಅಧಿಕಾರಿಗಳನ್ನು ಮತ್ತು ಪುರೋಹಿತರನ್ನು ಕರೆಸಿ ‘ದೇವಾಲಯದ ಬಾಗಿಲನ್ನು ಕಾಯಿರಿ. ಯಾರನ್ನೂ ಒಳಗೆ ಬಿಡಬೇಡಿ’ ಎಂದು ಹೇಳಿದ. ಆಮೇಲೆ ಅವನು ಯೆಹೋವಾಷನ ತಲೆಯ ಮೇಲೆ ಕಿರೀಟವನ್ನಿಟ್ಟು ಯೆಹೂದದ ರಾಜನಾಗಿ ಅಭಿಷೇಕ ಮಾಡಿದ. ಆಗ ಜನರೆಲ್ಲರೂ ‘ರಾಜ ಚಿರಂಜೀವಿ ಆಗಿರಲಿ!’ ಎಂದು ಕೂಗಿದರು.
ಜನರ ಶಬ್ದ ಅತಲ್ಯಳಿಗೆ ಕೇಳಿಸಿತು. ಅವಳು ದೇವಾಲಯಕ್ಕೆ ಓಡಿಬಂದಳು. ಅವಳು ಹೊಸ ರಾಜನನ್ನು ಕಂಡಾಗ ‘ದ್ರೋಹ! ದ್ರೋಹ!’ ಎಂದು ಕಿರಿಚಿದಳು. ಅಧಿಕಾರಿಗಳು ಆ ದುಷ್ಟ ರಾಣಿಯನ್ನು ಹಿಡಿದು ಹೊರಗೆ ಕರೆದುಕೊಂಡು ಹೋಗಿ ಕೊಂದರು. ಅವಳು ಜನರ ಮೇಲೆ ಕೆಟ್ಟ ಪ್ರಭಾವ ಬೀರಿದ್ದಳು. ಇದು ಹೇಗೆ ಸರಿಯಾಯಿತು ಗೊತ್ತಾ?
ಜನರು ಯೆಹೋವನೊಬ್ಬನನ್ನೇ ಆರಾಧಿಸುತ್ತೇವೆಂದು ಮಾತುಕೊಟ್ಟು ಆತನೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಲು ಯೆಹೋಯಾದ ಸಹಾಯ ಮಾಡಿದ. ಅಲ್ಲದೇ ಬಾಳನ ದೇವಾಲಯವನ್ನು ಕೆಡವಿ ಎಲ್ಲಾ ಮೂರ್ತಿಗಳನ್ನು ಪುಡಿ-ಪುಡಿ ಮಾಡಿದ. ದೇವಾಲಯದಲ್ಲಿ ಕೆಲಸ ಮಾಡಲು ಪುರೋಹಿತರನ್ನು ಮತ್ತು ಲೇವಿಯರನ್ನು ನೇಮಿಸಿದ. ಇದರಿಂದ ಜನರು ದೇವಾಲಯದಲ್ಲಿ ಪುನಃ ಆರಾಧನೆ ಮಾಡಲು ಶುರು ಮಾಡಿದರು. ದೇವಾಲಯದ ಬಾಗಿಲು ಕಾಯಲು ಜನರನ್ನು ನೇಮಿಸಿ ಯಾವ ಅಶುದ್ಧನೂ ದೇವಾಲಯದೊಳಗೆ ಬರದಂತೆ ನೋಡಿಕೊಳ್ಳಲು ಹೇಳಿದ. ಯೆಹೋಯಾದ ಮತ್ತು ಅಧಿಕಾರಿಗಳು ಯೆಹೋವಾಷನನ್ನು ಅರಮನೆಗೆ ಕರೆದುಕೊಂಡು ಹೋಗಿ ಸಿಂಹಾಸನದಲ್ಲಿ ಕೂರಿಸಿದರು. ಯೆಹೂದದ ಜನರೆಲ್ಲರೂ ಸಂತೋಷಪಟ್ಟರು. ಕೊನೆಗೂ ದುಷ್ಟ ಅತಲ್ಯ ಮತ್ತು ಬಾಳನ ಆರಾಧನೆಯಿಂದ ಜನರು ಬಿಡುಗಡೆ ಪಡೆದು ಈಗ ಯೆಹೋವನನ್ನು ಆರಾಧಿಸಬಹುದಿತ್ತು. ಯೆಹೋಯಾದನ ಧೈರ್ಯ ಅನೇಕರಿಗೆ ಎಷ್ಟು ಸಹಾಯ ಮಾಡಿತಲ್ವಾ?
“ಹೆದರಬೇಡಿ. ಯಾಕಂದ್ರೆ ನೀವು ಭವಿಷ್ಯದಲ್ಲಿ ಮತ್ತೆ ಬದುಕೋದನ್ನ ತಡಿಯೋಕೆ ಅವ್ರಿಂದ ಆಗಲ್ಲ. ಅವ್ರಿಗೆ ಹೆದರೋ ಬದಲು ನಿಮ್ಮನ್ನ ಸಂಪೂರ್ಣವಾಗಿ ನಾಶ ಮಾಡೋ ಶಕ್ತಿ ಇರುವವನಿಗೆ ಹೆದ್ರಿ.”—ಮತ್ತಾಯ 10:28
-
-
ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 54
ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ
ಅಶ್ಶೂರಕ್ಕೆ ಸೇರಿದ ನಿನೆವೆ ಪಟ್ಟಣದ ಜನರು ತುಂಬ ಕೆಟ್ಟವರಾಗಿದ್ದರು. ಆದ್ದರಿಂದ ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವಂತೆ ಎಚ್ಚರಿಸಲು ಯೆಹೋವನು ತನ್ನ ಪ್ರವಾದಿ ಯೋನನನ್ನು ಕಳುಹಿಸಿದನು. ಆದರೆ ಯೋನ ಅಲ್ಲಿಗೆ ಹೋಗದೆ ವಿರುದ್ಧವಾದ ದಿಕ್ಕಿಗೆ ಓಡಿಹೋದ. ತಾರ್ಷೀಷಿಗೆ ಹೋಗುವ ಹಡಗನ್ನು ಹತ್ತಿ ಪ್ರಯಾಣ ಆರಂಭಿಸಿದ.
ಸಮುದ್ರದ ಮಧ್ಯೆ ದೊಡ್ಡ ಬಿರುಗಾಳಿ ಬೀಸಿತು. ನಾವಿಕರು ಭಯದಿಂದ ಕಂಗಾಲಾದರು. ಅವರು ತಮ್ಮ ತಮ್ಮ ದೇವರುಗಳಿಗೆ ಪ್ರಾರ್ಥಿಸುತ್ತಾ, ‘ಯಾಕೆ ಹೀಗಾಗುತ್ತಿದೆ?’ ಅಂತ ಮಾತಾಡಿಕೊಂಡರು. ಕೊನೆಗೆ ಯೋನ ‘ಇದಕ್ಕೆಲ್ಲಾ ನಾನೇ ಕಾರಣ. ಯೆಹೋವನು ಹೇಳಿದ ಕೆಲಸವನ್ನು ಮಾಡದೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದೇನೆ. ನೀವು ನನ್ನನ್ನ ಸಮುದ್ರದಲ್ಲಿ ಬಿಸಾಕಿ. ಆಗ ಬಿರುಗಾಳಿ ನಿಲ್ಲುತ್ತದೆ’ ಅಂದ. ಯೋನನನ್ನು ನೀರಿಗೆ ಹಾಕಲು ನಾವಿಕರಿಗೆ ಇಷ್ಟ ಇರಲಿಲ್ಲ. ಆದರೆ ಯೋನ ಅವರನ್ನು ಒತ್ತಾಯ ಮಾಡಿದ. ಕೊನೆಗೆ ಅವರು ಅವನನ್ನು ಸಮುದ್ರಕ್ಕೆ ಹಾಕಿದರು. ಆಗ ಬಿರುಗಾಳಿ ನಿಂತು ಹೋಯಿತು.
ನೀರಿಗೆ ಬಿದ್ದ ಯೋನ ತಾನು ಖಂಡಿತ ಸಾಯುತ್ತೀನಿ ಅಂತ ಅಂದುಕೊಂಡ. ನೀರಿನಲ್ಲಿ ಮುಳುಗುತ್ತಿರುವಾಗ ಯೆಹೋವನಿಗೆ ಪ್ರಾರ್ಥಿಸಿದ. ಆಗ ಯೆಹೋವನು ಒಂದು ದೊಡ್ಡ ಮೀನನ್ನು ಕಳುಹಿಸಿದನು. ಅದು ಅವನನ್ನು ನುಂಗಿತು. ಆದರೆ ಸಾಯಿಸಲಿಲ್ಲ. ಮೀನಿನ ಹೊಟ್ಟೆಯಲ್ಲಿದ್ದ ಯೋನ ಯೆಹೋವನಿಗೆ ‘ಇನ್ನು ಮುಂದೆ ನಾನು ಯಾವಾಗಲೂ ನಿನ್ನ ಮಾತು ಕೇಳುತ್ತೀನಿ’ ಎಂದು ಪ್ರಾರ್ಥಿಸಿದ. ಯೆಹೋವನು ಮೂರು ದಿನ ಯೋನನನ್ನು ಮೀನಿನ ಹೊಟ್ಟೆಯಲ್ಲಿ ಸುರಕ್ಷಿತವಾಗಿಟ್ಟನು. ನಂತರ ಮೀನು ಅವನನ್ನು ಒಣನೆಲದಲ್ಲಿ ಕಕ್ಕುವಂತೆ ಮಾಡಿದನು.
ಯೆಹೋವನು ಯೋನನನ್ನು ಕಾಪಾಡಿದ. ಹಾಗಂತ ಯೋನ ನಿನೆವೆಗೆ ಹೋಗಬೇಕಾಗಿ ಇರಲಿಲ್ವಾ? ಯೆಹೋವನು ಯೋನನಿಗೆ ನಿನೆವೆಗೆ ಹೋಗಲು ಮತ್ತೆ ಹೇಳಿದನು. ಈ ಸಾರಿ ಯೋನ ವಿಧೇಯನಾದ. ಅವನು ಅಲ್ಲಿಗೆ ಹೋಗಿ ಆ ಕೆಟ್ಟ ಜನರಿಗೆ ‘ಇನ್ನು 40 ದಿನದಲ್ಲಿ ನಿನೆವೆ ನಾಶ ಆಗುತ್ತೆ’ ಎಂದ. ನಿನೆವೆಯ ಜನರು ಬದಲಾಗುತ್ತಾರೆ ಅಂತ ಯೋನ ಅಂದುಕೊಂಡಿರಲಿಲ್ಲ. ಆದರೆ ಅವರು ಬದಲಾದರು! ನಿನೆವೆಯ ರಾಜ, ‘ದೇವರಿಗೆ ಪ್ರಾರ್ಥಿಸಿ, ಕೆಟ್ಟತನವನ್ನು ಬಿಟ್ಟುಬಿಡಿ. ಆಗ ಒಂದುವೇಳೆ ಅವನು ನಮ್ಮನ್ನು ನಾಶಮಾಡದೇ ಇರಬಹುದು’ ಎಂದು ಜನರಿಗೆ ಹೇಳಿದ. ಜನರು ಪಶ್ಚಾತ್ತಾಪ ಪಟ್ಟಿದ್ದರಿಂದ ಯೆಹೋವನು ನಿನೆವೆಯನ್ನು ನಾಶಮಾಡಲಿಲ್ಲ.
ಆಗ ಯೋನನಿಗೆ ತುಂಬ ಸಿಟ್ಟು ಬಂತು. ಯೆಹೋವನು ಯೋನನಿಗೆ ತಾಳ್ಮೆ ಮತ್ತು ಕನಿಕರ ತೋರಿಸಿದ್ದನು. ಆದರೆ ಯೋನ ನಿನೆವೆಯ ಜನರಿಗೆ ಕನಿಕರ ತೋರಿಸಲಿಲ್ಲ. ಬದಲಿಗೆ ಊರ ಹೊರಗೆ ಹೋಗಿ ಸೋರೆಬಳ್ಳಿಯ ಕೆಳಗೆ ಕೂತುಕೊಂಡು ಪಟ್ಟಣ ನಾಶ ಆಗುತ್ತಾ ಅಂತ ನೋಡುತ್ತಿದ್ದ. ಆ ಸೋರೆಬಳ್ಳಿ ಒಣಗಿಹೋಯಿತು. ಯೋನನ ಕೋಪ ನೆತ್ತಿಗೇರಿತು. ಆಗ ಯೆಹೋವನು ಯೋನನಿಗೆ ‘ನಿನಗೆ ಈ ಬಳ್ಳಿಯ ಮೇಲೆ ಇರುವಷ್ಟು ಕನಿಕರ ಆ ಜನರ ಮೇಲೆ ಇಲ್ಲ. ನಾನು ಅವರಿಗೆ ಕನಿಕರ ತೋರಿಸಿದ್ದೀನಿ. ಆದ್ದರಿಂದ ಅವರು ನಾಶವಾಗಲಿಲ್ಲ’ ಅಂದನು. ಇದರಿಂದ ಏನು ಗೊತ್ತಾಗುತ್ತೆ? ಬಳ್ಳಿಗಿಂತ ನಿನೆವೆಯ ಜನರು ತುಂಬ ಪ್ರಾಮುಖ್ಯವಾಗಿದ್ದರು.
“ಯಾರೂ ನಾಶ ಆಗಬಾರದು ಅಂತ ದೇವರು ತಾಳ್ಮೆಯಿಂದ ಕಾಯ್ತಾ ಇದ್ದಾನೆ. ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.”—2 ಪೇತ್ರ 3:9
-