ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ದೇವದೂತನೊಬ್ಬ ಅಶ್ಶೂರ್ಯರ ಪಾಳೆಯದ ಮೇಲೆ ಆಕ್ರಮಣ ಮಾಡುತ್ತಿದ್ದಾನೆ

      ಪಾಠ 55

      ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ

      ಇಸ್ರಾಯೇಲ್‌ ರಾಜ್ಯದ ಹತ್ತು ಕುಲಗಳು ಅಶ್ಶೂರ್ಯರ ಆಳ್ವಿಕೆಯ ಕೆಳಗಿತ್ತು. ಅಶ್ಶೂರ್ಯದ ರಾಜ ಸನ್ಹೇರೀಬನಿಗೆ ಯೆಹೂದದ ಎರಡು ಕುಲಗಳನ್ನು ತನ್ನದಾಗಿಸಿಕೊಳ್ಳುವ ಬಯಕೆಯಿತ್ತು. ಹಾಗಾಗಿ ಯೆಹೂದ ರಾಜ್ಯದ ಒಂದೊಂದೇ ಪಟ್ಟಣಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದ. ಅದರಲ್ಲೂ ಅವನ ಮುಖ್ಯ ಗುರಿ ಯೆರೂಸಲೇಮ್‌ ಆಗಿತ್ತು. ಆದರೆ ಯೆರೂಸಲೇಮನ್ನು ರಕ್ಷಿಸುತ್ತಿರುವುದು ಯೆಹೋವನೇ ಎಂಬ ವಿಷಯ ಸನ್ಹೇರೀಬನಿಗೆ ಗೊತ್ತಿರಲಿಲ್ಲ.

      ಯೆಹೂದದ ರಾಜ ಹಿಜ್ಕೀಯ ಯೆರೂಸಲೇಮನ್ನು ಉಳಿಸಿಕೊಳ್ಳಲು ಸನ್ಹೇರೀಬನಿಗೆ ತುಂಬ ಹಣ ಕೊಟ್ಟ. ಆದರೆ ಸನ್ಹೇರೀಬ ಹಣ ತೆಗೆದುಕೊಂಡ ಮೇಲೂ ಯೆರೂಸಲೇಮನ್ನು ಆಕ್ರಮಿಸಲು ತನ್ನ ಬಲಾಢ್ಯ ಸೈನ್ಯವನ್ನು ಕಳುಹಿಸಿದ. ಅಶ್ಶೂರ್ಯರ ಸೈನ್ಯ ಹತ್ತಿರ ಹತ್ತಿರ ಬರುತ್ತಿದ್ದಂತೆ ಯೆರೂಸಲೇಮಿನ ಜನರು ಭಯಭೀತರಾದರು. ಆಗ ಹಿಜ್ಕೀಯ ಅವರಿಗೆ ‘ಹೆದರಬೇಡಿ. ಅಶ್ಶೂರ್ಯರರು ಬಲಶಾಲಿಗಳೇ ಇರಬಹುದು, ಆದರೆ ಯೆಹೋವನು ನಮ್ಮನ್ನು ಅವರಿಗಿಂತ ಬಲಶಾಲಿಗಳನ್ನಾಗಿ ಮಾಡುವನು’ ಅಂದನು.

      ಜನರನ್ನು ಗೇಲಿ ಮಾಡಲು ಸನ್ಹೇರೀಬ ತನ್ನ ಸಂದೇಶವಾಹಕ ರಬ್ಷಾಕೆಯನ್ನು ಯೆರೂಸಲೇಮಿಗೆ ಕಳುಹಿಸಿದ. ಅವನು ಪಟ್ಟಣದ ಹೊರಗೆ ನಿಂತು ‘ನಿಮಗೆ ಸಹಾಯ ಮಾಡೋದಕ್ಕೆ ಯೆಹೋವನ ಕೈಯಲ್ಲಿ ಆಗಲ್ಲ. ಹಿಜ್ಕೀಯನ ಮಾತು ಕೇಳಿ ಮೋಸ ಹೋಗಬೇಡಿ. ನಿಮ್ಮನ್ನು ನಮ್ಮಿಂದ ಕಾಪಾಡೋಕೆ ಯಾವ ದೇವರಿಗೂ ಆಗಲ್ಲ’ ಎಂದು ಕೂಗಿ ಹೇಳಿದ.

      ಹಿಜ್ಕೀಯ ತಾನೇನು ಮಾಡಬೇಕು ಎಂದು ಯೆಹೋವನ ಹತ್ತಿರ ಕೇಳಿದ. ಆಗ ಯೆಹೋವನು ‘ರಬ್ಷಾಕೆಯ ಮಾತುಗಳನ್ನ ಕೇಳಿಸ್ಕೊಂಡು ನೀನು ಹೆದರಬೇಡ. ಸನ್ಹೇರೀಬ ಯೆರೂಸಲೇಮನ್ನು ವಶಪಡಿಸಿಕೊಳ್ಳುವುದಿಲ್ಲ’ ಅಂದನು. ಆಮೇಲೆ ಸನ್ಹೇರಿಬ ಹಿಜ್ಕೀಯನಿಗೆ ಕೆಲವು ಪತ್ರಗಳನ್ನು ಕಳುಹಿಸಿದ. ಅದರಲ್ಲಿ ‘ಯೆಹೋವನಿಗೆ ನಿಮ್ಮನ್ನು ಕಾಪಾಡಲು ಆಗಲ್ಲ. ನಮಗೆ ಶರಣಾಗಿ’ ಎಂದು ಬರೆಯಲಾಗಿತ್ತು. ಹಿಜ್ಕೀಯ ಯೆಹೋವನಿಗೆ ‘ಯೆಹೋವನೇ ದಯವಿಟ್ಟು ನಮ್ಮನ್ನ ರಕ್ಷಿಸು. ಆಗ ನೀನೊಬ್ಬನೇ ಸತ್ಯ ದೇವರಂತ ಎಲ್ಲರಿಗೂ ಗೊತ್ತಾಗುತ್ತೆ’ ಎಂದು ಪ್ರಾರ್ಥಿಸಿದನು. ಅದಕ್ಕೆ ಯೆಹೋವನು ‘ಅಶ್ಶೂರ್ಯರ ರಾಜ ಯೆರೂಸಲೇಮಿಗೆ ಬರುವುದಿಲ್ಲ. ನಾನು ನನ್ನ ಪಟ್ಟಣವನ್ನು ಕಾಪಾಡ್ತೀನಿ’ ಎಂದನು.

      ಸನ್ಹೇರೀಬ ಯೆರೂಸಲೇಮ್‌ ಖಂಡಿತ ತನ್ನ ಕೈವಶವಾಗುತ್ತದೆ ಎಂದು ನೆನಸಿದ್ದ. ಅಶ್ಶೂರ್ಯರ ಸೈನಿಕರು ಯೆರೂಸಲೇಮಿನ ಹೊರಗೆ ಪಾಳೆಯ ಹಾಕಿದ್ದರು. ಅದೇ ರಾತ್ರಿ ಯೆಹೋವನು ಒಬ್ಬ ದೂತನನ್ನು ಅಲ್ಲಿಗೆ ಕಳುಹಿಸಿದ. ಆ ದೂತನು 1,85,000 ಸೈನಿಕರನ್ನು ಸಾಯಿಸಿದ! ರಾಜ ಸನ್ಹೇರೀಬ ತನ್ನ ಬಲಿಷ್ಠ ಸೈನ್ಯವನ್ನು ಕಳೆದುಕೊಂಡ. ಸೋತು ಮನೆಗೆ ಹೋದ. ಕೊಟ್ಟ ಮಾತಿನಂತೆ ಯೆಹೋವನು ಹಿಜ್ಕೀಯನನ್ನು ಮತ್ತು ಯೆರೂಸಲೇಮನ್ನು ರಕ್ಷಿಸಿದ. ಒಂದುವೇಳೆ ನೀವು ಯೆರೂಸಲೇಮಿನಲ್ಲಿ ಇದ್ದಿದ್ದರೆ ಯೆಹೋವನ ಮೇಲೆ ಭರವಸೆ ಇಡುತ್ತಿದ್ದೀರಾ?

      “ದೇವ್ರಿಗೆ ಭಯಪಡೋರ ಸುತ್ತ ಯೆಹೋವನ ದೂತ ಪಾಳೆಯ ಹಾಕ್ತಾನೆ, ಅವನು ಅವ್ರನ್ನ ಕಾದು ಕಾಪಾಡ್ತಾನೆ.”—ಕೀರ್ತನೆ 34:7

      ಪ್ರಶ್ನೆಗಳು: ಯೆಹೋವನು ಯೆರೂಸಲೇಮನ್ನು ಹೇಗೆ ಕಾಪಾಡಿದ? ಯೆಹೋವನು ನಿನ್ನನ್ನೂ ಕಾಪಾಡುತ್ತಾನೆ ಎಂದು ನಂಬುತ್ತೀಯಾ?

      2 ಅರಸು 17:1-6; 18:13-37; 19:1-37; 2 ಪೂರ್ವಕಾಲವೃತ್ತಾಂತ 32:1-23

  • ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಶಾಫಾನನು ರಾಜ ಯೋಷೀಯನಿಗೆ ಸುರುಳಿಯಲ್ಲಿರುವುದನ್ನು ಓದಿ ಹೇಳುತ್ತಿದ್ದಾನೆ

      ಪಾಠ 56

      ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ

      ಯೋಷೀಯ ಯೆಹೂದದ ರಾಜನಾದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಆ ದಿನಗಳಲ್ಲಿ ಜನರು ಮಾಟಮಂತ್ರ ಮಾಡುತ್ತಿದ್ದರು ಹಾಗೂ ಮೂರ್ತಿಗಳನ್ನ ಪೂಜಿಸುತ್ತಿದ್ದರು. ಯೋಷೀಯ ತನ್ನ 16ನೇ ವಯಸ್ಸಿನಲ್ಲಿ ಯೆಹೋವನನ್ನು ಸರಿಯಾದ ರೀತಿಯಲ್ಲಿ ಆರಾಧಿಸುವುದು ಹೇಗೆಂದು ತಿಳಿಯಲು ಪ್ರಯತ್ನಿಸಿದ. 20ನೇ ವಯಸ್ಸಿನಲ್ಲಿ ಇಡೀ ದೇಶದಲ್ಲಿದ್ದ ಮೂರ್ತಿಗಳನ್ನ ಹಾಗೂ ಯಜ್ಞವೇದಿಗಳನ್ನು ನಾಶಮಾಡಲು ಶುರುಮಾಡಿದ. 26ನೇ ವಯಸ್ಸಿನಲ್ಲಿ ಹಾಳಾಗಿದ್ದ ಯೆಹೋವನ ಆಲಯವನ್ನು ಸರಿಪಡಿಸಿದ.

      ಮಹಾ ಪುರೋಹಿತ ಹಿಲ್ಕೀಯನಿಗೆ ದೇವಾಲಯದಲ್ಲಿ ನಿಯಮ ಪುಸ್ತಕದ ಸುರುಳಿಯೊಂದು ಸಿಕ್ಕಿತು. ಅದನ್ನು ಮೋಶೆ ತನ್ನ ಕೈಯಾರೆ ಬರೆದಿರಬಹುದು. ರಾಜನ ಕಾರ್ಯದರ್ಶಿಯಾದ ಶಾಫಾನ ಅದನ್ನು ಯೋಷೀಯನ ಹತ್ತಿರ ತೆಗೆದುಕೊಂಡು ಬಂದು ಜೋರಾಗಿ ಓದಲು ಶುರುಮಾಡಿದ. ಯೋಷೀಯ ಅದನ್ನು ಕೇಳಿಸಿಕೊಂಡಾಗ ಜನರು ತುಂಬ ವರ್ಷಗಳಿಂದ ಯೆಹೋವನಿಗೆ ಅವಿಧೇಯರಾಗುತ್ತಾ ಬಂದಿದ್ದಾರೆ ಎಂದು ಗೊತ್ತಾಯಿತು. ಆಗ ಅವನು ಹಿಲ್ಕೀಯನಿಗೆ ‘ಯೆಹೋವನಿಗೆ ನಮ್ಮ ಮೇಲೆ ತುಂಬ ಕೋಪ ಬಂದಿದೆ. ಹೋಗಿ ಆತನ ಹತ್ತಿರ ಮಾತಾಡು. ಆಗ ಆತನು ನಾವೇನು ಮಾಡಬೇಕು ಎಂದು ಹೇಳುತ್ತಾನೆ’ ಅಂದ. ಯೆಹೋವನು ಪ್ರವಾದಿನಿಯಾದ ಹುಲ್ದಳ ಮೂಲಕ ಹೀಗಂದನು: ‘ಯೆಹೂದದ ಜನರು ನನ್ನನ್ನು ಬಿಟ್ಟುಬಿಟ್ಟಿದ್ದಾರೆ. ನಾನು ಅವರನ್ನು ಶಿಕ್ಷಿಸುತ್ತೇನೆ. ಆದರೆ ಯೋಷೀಯನು ತಗ್ಗಿಸಿಕೊಂಡ. ಹಾಗಾಗಿ ಅವನು ರಾಜನಾಗಿ ಇರುವವರೆಗೂ ಜನರನ್ನು ಶಿಕ್ಷಿಸುವುದಿಲ್ಲ.’

      ಯೆಹೋವನ ನಿಯಮಗಳಿದ್ದ ಸುರುಳಿಯೊಂದು ಹಿಲ್ಕೀಯನಿಗೆ ಸಿಕ್ಕಿತು

      ಯೆಹೋವನ ಮಾತು ಯೋಷೀಯನಿಗೆ ಗೊತ್ತಾದಾಗ ಅವನು ದೇವಾಲಯಕ್ಕೆ ಹೋಗಿ ಯೆಹೂದದ ಜನರನ್ನು ಅಲ್ಲಿ ಒಟ್ಟುಸೇರಿಸಿದ. ನಂತರ ಯೆಹೋವನ ನಿಯಮ ಪುಸ್ತಕವನ್ನ ಇಡೀ ಜನಾಂಗದ ಮುಂದೆ ಜೋರಾಗಿ ಓದಿದ. ಯೋಷೀಯ ಮತ್ತು ಜನರು ಇನ್ನು ಮುಂದೆ ಯೆಹೋವನಿಗೆ ಪೂರ್ಣ ಹೃದಯದಿಂದ ವಿಧೇಯರಾಗುತ್ತೇವೆ ಎಂದು ಮಾತುಕೊಟ್ಟರು.

      ಯೆಹೂದ ಜನಾಂಗದವರು ಪಸ್ಕ ಹಬ್ಬವನ್ನು ಆಚರಿಸಿ ಅನೇಕ ವರ್ಷಗಳೇ ಕಳೆದಿದ್ದವು. ಆದರೆ ಯೋಷೀಯ ಸುರುಳಿಯನ್ನು ಓದಿದಾಗ ಪಸ್ಕವನ್ನು ಪ್ರತಿವರ್ಷ ಆಚರಿಸಬೇಕು ಎಂದು ತಿಳಿಯಿತು. ಹಾಗಾಗಿ ಅವನು ಜನರಿಗೆ ‘ನಾವು ಯೆಹೋವನಿಗೋಸ್ಕರ ಪಸ್ಕ ಹಬ್ಬವನ್ನು ಆಚರಿಸೋಣ’ ಎಂದ. ನಂತರ ಯೋಷೀಯ ಅನೇಕ ಬಲಿಗಳನ್ನು ಸಿದ್ಧಮಾಡಿ ದೇವಾಲಯದಲ್ಲಿ ಸ್ತುತಿಯನ್ನು ಹಾಡಲು ಹಾಡುಗಾರರನ್ನು ನೇಮಿಸಿದ. ಇಡೀ ಜನಾಂಗ ಪಸ್ಕ ಹಬ್ಬವನ್ನು ಮತ್ತು ಅದರ ನಂತರ ಬರುವ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿನ ಆಚರಿಸಿತು. ಸಮುವೇಲನ ಕಾಲದಿಂದ ಅಂಥ ಪಸ್ಕ ಹಬ್ಬ ನಡೆದಿರಲಿಲ್ಲ. ಯೋಷೀಯ ನಿಯಮ ಪುಸ್ತಕವನ್ನ ಹೃದಯದಿಂದ ಪ್ರೀತಿಸಿದ. ಅವನಂತೆ ನಿಮಗೂ ಯೆಹೋವನ ಬಗ್ಗೆ ಕಲಿಯಲು ಇಷ್ಟ ಇದೆಯಾ?

      “ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.”—ಕೀರ್ತನೆ 119:105

      ಪ್ರಶ್ನೆಗಳು: ನಿಯಮ ಪುಸ್ತಕದಲ್ಲಿ ಬರೆದಿರುವುದನ್ನು ಕೇಳಿಸಿಕೊಂಡಾಗ ಯೋಷೀಯ ಹೇಗೆ ಪ್ರತಿಕ್ರಿಯಿಸಿದ? ಯೋಷೀಯನ ಬಗ್ಗೆ ಯೆಹೋವನಿಗೆ ಹೇಗನಿಸಿತು?

      2 ಅರಸು 21:26; 22:1–23:30; 2 ಪೂರ್ವಕಾಲವೃತ್ತಾಂತ 34:1–35:25

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ