ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನು ಯೇಸುವನ್ನು ಕಾಪಾಡಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಮರಿಯ ಮತ್ತು ಪುಟ್ಟ ಯೇಸು ಕತ್ತೆಯ ಮೇಲೆ ಪ್ರಯಾಣಿಸುತ್ತಿದ್ದಾರೆ; ಯೋಸೇಫನು ಅವರ ಜೊತೆ ನಡೆದುಕೊಂಡು ಹೋಗುತ್ತಿದ್ದಾನೆ

      ಪಾಠ 71

      ಯೆಹೋವನು ಯೇಸುವನ್ನು ಕಾಪಾಡಿದನು

      ಇಸ್ರಾಯೇಲಿನ ಪೂರ್ವದಲ್ಲಿದ್ದ ಜನರು ನಕ್ಷತ್ರಗಳು ತಮಗೆ ದಾರಿ ತೋರಿಸುತ್ತವೆ ಎಂದು ನಂಬುತ್ತಿದ್ದರು. ಒಂದು ರಾತ್ರಿ ನಕ್ಷತ್ರದಂತೆ ಹೊಳೆಯುತ್ತಿದ್ದ ಒಂದು ವಸ್ತು ಆಕಾಶದಲ್ಲಿ ಚಲಿಸುತ್ತಿರುವುದನ್ನು ಕೆಲವು ಪುರುಷರು ನೋಡಿ ಅದನ್ನು ಹಿಂಬಾಲಿಸಿದರು. ಆ “ನಕ್ಷತ್ರ” ಅವರನ್ನು ಯೆರೂಸಲೇಮಿಗೆ ನಡೆಸಿತು. ಅಲ್ಲಿಗೆ ಹೋದ ಮೇಲೆ ಅವರು ಜನರ ಹತ್ತಿರ ‘ಯೆಹೂದ್ಯರ ರಾಜನು ಹುಟ್ಟಿದ್ದಾನಂತೆ. ಆ ಮಗು ಎಲ್ಲಿದೆ? ನಾವು ಆತನಿಗೆ ನಮಸ್ಕಾರ ಮಾಡೋಕೆ ಬಂದಿದ್ದೀವಿ’ ಎಂದು ಹೇಳಿದರು.

      ಹೊಸ ರಾಜನ ಬಗ್ಗೆ ಯೆರೂಸಲೇಮಿನ ರಾಜ ಹೆರೋದನಿಗೆ ಗೊತ್ತಾದಾಗ ಅವನಿಗೆ ತುಂಬಾ ಚಿಂತೆ ಆಯಿತು. ಅವನು ಮುಖ್ಯ ಪುರೋಹಿತರ ಹತ್ತಿರ ‘ಈ ರಾಜನು ಎಲ್ಲಿ ಹುಟ್ತಾನೆ?’ ಎಂದು ಕೇಳಿದನು. ಅದಕ್ಕೆ ಅವರು ‘ಬೆತ್ಲೆಹೇಮಲ್ಲಿ ಹುಟ್ಟುವನು ಎಂದು ಪ್ರವಾದಿಗಳು ತಿಳಿಸಿದ್ದಾರೆ’ ಅಂದರು. ಆಗ ಹೆರೋದನು ಪೂರ್ವದಿಂದ ಬಂದ ಆ ಪುರುಷರನ್ನು ಕರೆದು ‘ನೀವು ಬೆತ್ಲೆಹೇಮಿಗೆ ಹೋಗಿ ಆ ಮಗುವನ್ನು ಹುಡುಕಿ. ಅದು ಎಲ್ಲಿದೆ ಎಂದು ಬಂದು ನನಗೆ ತಿಳಿಸಿ. ನಾನೂ ಅದಕ್ಕೆ ನಮಸ್ಕರಿಸಬೇಕು’ ಅಂದನು. ಆದರೆ ಅದು ಶುದ್ಧ ಸುಳ್ಳಾಗಿತ್ತು.

      ಆ “ನಕ್ಷತ್ರ” ಮತ್ತೆ ಚಲಿಸಲು ಆರಂಭಿಸಿತು. ಆ ಪುರುಷರು ಅದನ್ನು ಹಿಂಬಾಲಿಸುತ್ತಾ ಬೆತ್ಲೆಹೇಮಿಗೆ ಬಂದರು. ಆ “ನಕ್ಷತ್ರ” ಯೇಸುವಿದ್ದ ಮನೆಯ ಮೇಲೆ ನಿಂತಿತು. ಆ ಪುರುಷರು ಮನೆಯ ಒಳಗೆ ಹೋದಾಗ ಅಲ್ಲಿ ಮರಿಯಳ ಜೊತೆಯಿದ್ದ ಯೇಸುವನ್ನು ಕಂಡರು. ಅವರು ಆ ಮಗುವಿಗೆ ನಮಸ್ಕರಿಸಿ ತಾವು ತಂದಿದ್ದ ಚಿನ್ನ, ಸಾಂಬ್ರಾಣಿ, ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ಕೊಟ್ಟರು. ಯೇಸುವನ್ನು ಹುಡುಕಲು ಈ ಪುರುಷರನ್ನು ನಿಜವಾಗಲೂ ಯೆಹೋವನೇ ಕಳುಹಿಸಿದನಾ? ಖಂಡಿತ ಇಲ್ಲ.

      ಅಂದು ರಾತ್ರಿ ಯೆಹೋವನು ಯೋಸೇಫನ ಕನಸಿನಲ್ಲಿ ‘ಹೆರೋದ ಯೇಸುವನ್ನು ಕೊಲ್ಲಬೇಕೆಂದಿದ್ದಾನೆ. ನೀನು, ನಿನ್ನ ಹೆಂಡತಿ ಮಗುವನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ನಾನು ನಿನಗೆ ಹೇಳೋ ತನಕ ಅಲ್ಲೇ ಇರು’ ಎಂದು ಹೇಳಿದನು. ತಕ್ಷಣ ಯೋಸೇಫನು ತನ್ನ ಕುಟುಂಬವನ್ನು ಈಜಿಪ್ಟಿಗೆ ಕರೆದುಕೊಂಡು ಹೋದನು.

      ಪೂರ್ವದಿಂದ ಬಂದ ಪುರುಷರಿಗೆ ಯೆಹೋವನು ‘ಹೆರೋದನ ಹತ್ರ ಹಿಂದಿರುಗಿ ಹೋಗಬೇಡಿ’ ಎಂದು ಹೇಳಿದನು. ಆ ಪುರುಷರು ತನ್ನ ಬಳಿಗೆ ಬರಲಿಲ್ಲ ಎಂದು ಹೆರೋದನಿಗೆ ಗೊತ್ತಾದಾಗ ಅವನು ಕೋಪಗೊಂಡನು. ಯೇಸು ಎಲ್ಲಿದ್ದಾನೆಂದು ತಿಳಿದುಕೊಳ್ಳಲು ಅವನಿಗೆ ಆಗಲಿಲ್ಲ. ಅದಕ್ಕಾಗಿ ಯೇಸುವಿನ ವಯಸ್ಸಿನಲ್ಲಿದ್ದ ಬೆತ್ಲೆಹೇಮಿನ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲಿಸುವ ಆಜ್ಞೆ ಕೊಟ್ಟ. ಆದರೆ ಯೇಸು ದೂರದ ಈಜಿಪ್ಟಿನಲ್ಲಿ ಸುರಕ್ಷಿತವಾಗಿ ಇದ್ದನು.

      ಸ್ವಲ್ಪ ಸಮಯದ ನಂತರ ಹೆರೋದ ಸತ್ತು ಹೋದನು. ಆಗ ಯೆಹೋವನು ಯೋಸೇಫನಿಗೆ ‘ನೀನು ಈಗ ನಿನ್ನ ಊರಿಗೆ ವಾಪಸ್ಸು ಹೋಗು. ಅಲ್ಲಿ ನಿನಗೆ ಯಾವುದೇ ಅಪಾಯ ಇಲ್ಲ’ ಅಂದನು. ಯೋಸೇಫ, ಮರಿಯ ಮತ್ತು ಯೇಸು ಇಸ್ರಾಯೇಲಿಗೆ ಹಿಂದೆ ಹೋಗಿ ನಜರೇತಿನಲ್ಲಿ ಮನೆ ಮಾಡಿಕೊಂಡರು.

      “ಹಾಗೇ ನನ್ನ ಬಾಯಿಂದ ಹೊರಡೋ ಮಾತು ಕೂಡ ಇರುತ್ತೆ . . . ಯಾವ ಕೆಲಸಕ್ಕಾಗಿ ಅದನ್ನ ಕಳಿಸ್ತೀನೋ ಆ ಕೆಲಸವನ್ನ ಸಫಲಗೊಳಿಸಿನೇ ಅದು ವಾಪಸ್‌ ಬರುತ್ತೆ.”—ಯೆಶಾಯ 55:11

      ಪ್ರಶ್ನೆಗಳು: ಯೇಸು ಯಾವ ಅಪಾಯದಲ್ಲಿದ್ದನು? ಯೆಹೋವನು ಅವನನ್ನು ಹೇಗೆ ಕಾಪಾಡಿದನು?

      ಮತ್ತಾಯ 2:1-23; ಮೀಕ 5:2

  • ಬಾಲಕ ಯೇಸು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಹನ್ನೆರಡು ವರ್ಷದ ಯೇಸು ದೇವಾಲಯದಲ್ಲಿ ಗುರುಗಳ ಮಧ್ಯೆ ಕುಳಿತಿದ್ದಾನೆ

      ಪಾಠ 72

      ಬಾಲಕ ಯೇಸು

      ಯೋಸೇಫ ಮತ್ತು ಮರಿಯ ನಜರೇತಿನಲ್ಲಿ ವಾಸಿಸುತ್ತಿದ್ದರು. ಅವರೊಂದಿಗೆ ಯೇಸು ಮತ್ತು ಇತರ ಗಂಡು-ಹೆಣ್ಣು ಮಕ್ಕಳೂ ಇದ್ದರು. ಯೋಸೇಫನು ಬಡಗಿಯ ಕೆಲಸಮಾಡಿ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವನು ಯೆಹೋವನ ಬಗ್ಗೆ ಮತ್ತು ನಿಯಮ ಪುಸ್ತಕದ ಬಗ್ಗೆ ತನ್ನ ಮಕ್ಕಳಿಗೆ ಕಲಿಸುತ್ತಿದ್ದನು. ಯೋಸೇಫನು ತನ್ನ ಕುಟುಂಬದ ಜೊತೆಗೆ ಕ್ರಮವಾಗಿ ಸಭಾಮಂದಿರಕ್ಕೆ ಮತ್ತು ಪ್ರತಿ ವರ್ಷ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದನು.

      ಯೇಸು ಹನ್ನೆರಡು ವರ್ಷದವನಾಗಿದ್ದಾಗ, ಯೋಸೇಫನ ಕುಟುಂಬ ಪ್ರತಿವರ್ಷದಂತೆ ಯೆರೂಸಲೇಮಿಗೆ ದೀರ್ಘ ಪ್ರಯಾಣ ಮಾಡಿತು. ಪಟ್ಟಣವು ಪಸ್ಕಹಬ್ಬವನ್ನು ಆಚರಿಸಲು ಬಂದಿದ್ದ ಜನರಿಂದ ತುಂಬಿಹೋಗಿತ್ತು. ಹಬ್ಬವನ್ನು ಆಚರಿಸಿದ ನಂತರ, ಯೋಸೇಫ ಮತ್ತು ಮರಿಯ ತಮ್ಮ ಮನೆಗೆ ಪ್ರಯಾಣ ಮಾಡಿದರು. ಯೇಸು ಕೂಡ ತಮ್ಮ ಸಂಬಂಧಿಕರ ಗುಂಪಿನಲ್ಲಿ ಎಲ್ಲೋ ಇದ್ದಾನೆ ಎಂದು ನೆನಸಿದರು. ಆದರೆ, ಅವನನ್ನು ಹುಡುಕಿದಾಗ ಅವನು ಸಿಗಲಿಲ್ಲ.

      ಆಗ ಅವರು ಯೆರೂಸಲೇಮಿಗೆ ಹಿಂದಿರುಗಿ ಮೂರು ದಿನಗಳ ತನಕ ಯೇಸುವನ್ನು ಹುಡುಕಿದರು. ಕೊನೆಗೆ, ಅವರು ದೇವಾಲಯಕ್ಕೆ ಹೋದರು. ಅಲ್ಲಿ ಯೇಸು ಗುರುಗಳ ಮಧ್ಯೆ ಕುಳಿತು ಅವರು ಹೇಳುವುದನ್ನು ಗಮನಕೊಟ್ಟು ಕೇಳಿಸಿಕೊಳ್ಳುತ್ತಾ, ಒಳ್ಳೊಳ್ಳೇ ಪ್ರಶ್ನೆಗಳನ್ನು ಕೇಳುತ್ತಾ ಇದ್ದನು. ಗುರುಗಳು ಅವನ ಜ್ಞಾನ ನೋಡಿ ಎಷ್ಟು ಪ್ರಭಾವಿತರಾದರೆಂದರೆ ಅವರು ಯೇಸುವಿಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಯೇಸು ಕೊಟ್ಟ ಉತ್ತರಗಳನ್ನು ನೋಡಿ ಅವರು ಆಶ್ಚರ್ಯಪಟ್ಟರು. ಯೆಹೋವನ ನಿಯಮ ಪುಸ್ತಕವನ್ನ ಯೇಸು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು ಎಂದು ಅವರಿಗೆ ಗೊತ್ತಾಯಿತು.

      ಯೋಸೇಫ ಮತ್ತು ಮರಿಯಳಿಗೆ ಎಷ್ಟು ಚಿಂತೆ ಆಗಿತ್ತೆಂದರೆ ಮರಿಯಳು, ‘ಕಂದಾ, ನಿನಗಾಗಿ ಎಲ್ಲ ಕಡೆ ಹುಡುಕ್ತಾ ಇದ್ವಿ! ನೀನೆಲ್ಲಿಗೆ ಹೋಗಿದ್ದೆ?’ ಎಂದು ಕೇಳಿದಳು. ಆಗ ಯೇಸು, ‘ನಾನು ನನ್ನ ಅಪ್ಪನ ಮನೆಯಲ್ಲಿ ಇರಬೇಕು ಅಂತ ನಿಮಗೆ ಗೊತ್ತಿಲ್ವಾ?’ ಅಂದನು.

      ಆಮೇಲೆ ಯೇಸು ತನ್ನ ಅಪ್ಪ-ಅಮ್ಮನ ಜೊತೆ ನಜರೇತಿಗೆ ಹೋದನು. ಯೋಸೇಫನು ಯೇಸುವಿಗೆ ಬಡಗಿಯ ಕೆಲಸವನ್ನು ಕಲಿಸಿದನು. ಯೇಸು ಯುವಕನಾಗಿದ್ದಾಗ ಎಂಥಾ ವ್ಯಕ್ತಿಯಾಗಿದ್ದನು? ನಿನಗೆ ಏನನಿಸುತ್ತೆ? ಅವನು ಬೆಳೆಯುತ್ತಾ ಹೋದಂತೆ ವಿವೇಕಿಯಾಗಿ ದೇವರ ಮತ್ತು ಮನುಷ್ಯರ ಅನುಗ್ರಹವನ್ನು ಪಡೆದನು.

      ಯೋಸೇಫ ಮತ್ತು ಮರಿಯ, ಯೇಸು ಮತ್ತು ಇತರ ಮಕ್ಕಳೊಂದಿಗೆ ಮೇಜಿನ ಬಳಿ ಕುಳಿತುಕೊಂಡಿದ್ದಾರೆ

      “ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ, ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ.”—ಕೀರ್ತನೆ 40:8

      ಪ್ರಶ್ನೆಗಳು: ಯೋಸೇಫ ಮತ್ತು ಮರಿಯಳಿಗೆ ಯೇಸು ಎಲ್ಲಿ ಸಿಕ್ಕಿದನು? ಅವನು ಅಲ್ಲಿದ್ದದ್ದೇಕೆ?

      ಮತ್ತಾಯ 13:55, 56; ಮಾರ್ಕ 6:3; ಲೂಕ 2:40-52; 4:16; ಧರ್ಮೋಪದೇಶಕಾಂಡ 16:15, 16

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ