ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಯೋರ್ದನ್‌ ನದಿ ತೀರದಲ್ಲಿ ಜನರಿಗೆ ಬೋಧಿಸುತ್ತಿರುವ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ

      ಪಾಠ 73

      ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು

      ಜಕರೀಯ ಮತ್ತು ಎಲಿಸಬೆತರ ಮಗನಾದ ಯೋಹಾನನು ದೊಡ್ಡವನಾದಾಗ ಒಬ್ಬ ಪ್ರವಾದಿಯಾದನು. ಮೆಸ್ಸೀಯನು ಬರುತ್ತಾನೆ ಎಂದು ಜನರಿಗೆ ಕಲಿಸಲು ಯೆಹೋವನು ಯೋಹಾನನನ್ನು ಉಪಯೋಗಿಸಿದನು. ಅವನು ಸಭಾಮಂದಿರಗಳಲ್ಲಿ ಅಥವಾ ಪಟ್ಟಣಗಳಲ್ಲಿ ಸಾರದೆ ಕಾಡಿನಲ್ಲಿ ಸಾರಿದನು. ಯೋಹಾನನಿಂದ ಕಲಿಯಲು ಜನರು ಯೆರೂಸಲೇಮ್‌ ಮತ್ತು ಯೂದಾಯದ ಎಲ್ಲಾ ಕಡೆಗಳಿಂದ ಬಂದರು. ದೇವರನ್ನು ಮೆಚ್ಚಿಸಬೇಕೆಂದರೆ ಕೆಟ್ಟ ಕೆಲಸಗಳನ್ನು ಮಾಡುವುದನ್ನು ಬಿಟ್ಟುಬಿಡಬೇಕೆಂದು ಅವನು ಆ ಜನರಿಗೆ ಕಲಿಸಿದನು. ಯೋಹಾನನ ಮಾತುಗಳನ್ನು ಕೇಳಿದಾಗ ಅನೇಕರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು ಮತ್ತು ಯೋಹಾನನು ಅವರಿಗೆ ಯೋರ್ದನ್‌ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು.

      ಯೋಹಾನ ತುಂಬ ಸರಳ ಜೀವನ ನಡೆಸಿದನು. ಅವನು ಒಂಟೆಯ ಕೂದಲಿನಿಂದ ಮಾಡಿದ ಬಟ್ಟೆಯನ್ನು ಧರಿಸುತ್ತಿದ್ದನು. ಮಿಡತೆ ಹಾಗೂ ಕಾಡುಜೇನನ್ನು ತಿನ್ನುತ್ತಿದ್ದನು. ಜನರು ಯೋಹಾನನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದರು. ಅಹಂಕಾರಿಗಳಾಗಿದ್ದ ಫರಿಸಾಯರು ಮತ್ತು ಸದ್ದುಕಾಯರು ಸಹ ಅವನನ್ನು ನೋಡಲು ಬಂದರು. ಯೋಹಾನನು ಅವರಿಗೆ, ‘ನೀವು ನಿಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಪಶ್ಚಾತ್ತಾಪಪಡಬೇಕು. ನೀವು ಅಬ್ರಹಾಮನ ಮಕ್ಕಳು ಎಂದು ಹೇಳಿಕೊಂಡ ಮಾತ್ರಕ್ಕೆ ಇತರರಿಗಿಂತ ಶ್ರೇಷ್ಠರೆಂದು ಭಾವಿಸಬೇಡಿ. ಅಬ್ರಹಾಮನ ಮಕ್ಕಳೆಂದ ಮಾತ್ರಕ್ಕೆ ನೀವು ದೇವರ ಮಕ್ಕಳಾಗುವುದಿಲ್ಲ’ ಎಂದನು.

      ಅನೇಕರು ಯೋಹಾನನ ಹತ್ತಿರ ಬಂದು, ‘ದೇವರನ್ನು ಮೆಚ್ಚಿಸಲು ನಾವೇನು ಮಾಡಬೇಕು?’ ಎಂದು ಕೇಳಿದರು. ಅದಕ್ಕೆ ಯೋಹಾನ, ‘ನಿಮ್ಮತ್ರ ಎರಡು ಬಟ್ಟೆ ಇದ್ರೆ ಬಟ್ಟೆ ಇಲ್ಲದವ್ರಿಗೆ ಒಂದನ್ನ ಕೊಡಿ’ ಅಂದನು. ಯೋಹಾನನು ಯಾಕೆ ಹಾಗೆ ಹೇಳಿದನೆಂದು ನಿನಗೆ ಗೊತ್ತಾ? ದೇವರನ್ನು ಮೆಚ್ಚಿಸಬೇಕೆಂದರೆ ಜನರನ್ನು ಪ್ರೀತಿಸಬೇಕು. ಈ ವಿಷಯವನ್ನು ಜನರು ತಿಳಿದುಕೊಳ್ಳಬೇಕೆಂದು ಅವನು ಹಾಗೆ ಹೇಳಿದನು.

      ಯೋಹಾನ ತೆರಿಗೆ ವಸೂಲಿ ಮಾಡುವವರಿಗೆ, ‘ಪ್ರಾಮಾಣಿಕರಾಗಿರಿ, ಯಾರಿಗೂ ಮೋಸ ಮಾಡಬೇಡಿ’ ಅಂದನು. ಸೈನಿಕರಿಗೆ, ‘ಲಂಚ ತೆಗೆದುಕೊಳ್ಳಬೇಡಿ ಮತ್ತು ಸುಳ್ಳು ಹೇಳಬೇಡಿ’ ಎಂದನು.

      ಪುರೋಹಿತರು ಮತ್ತು ಲೇವಿಯರು ಸಹ ಯೋಹಾನನ ಹತ್ತಿರ ಬಂದು, ‘ನೀನ್ಯಾರು? ಎಲ್ಲರೂ ನಿನ್ನ ಬಗ್ಗೆ ತಿಳಿಯಬೇಕು ಅಂತಿದ್ದಾರೆ’ ಅಂದರು. ಅದಕ್ಕೆ ಯೋಹಾನನು, ‘ಯೆಶಾಯನು ಹೇಳಿದಂತೆ, ಜನರನ್ನು ಯೆಹೋವನ ಕಡೆಗೆ ನಡೆಸುವ ಬಯಲು ಪ್ರದೇಶದಲ್ಲಿ ಕೇಳಿಸುವ ಶಬ್ದವೇ ನಾನು’ ಎಂದನು.

      ಯೋಹಾನ ಕಲಿಸಿದ ವಿಷಯಗಳು ಜನರಿಗೆ ತುಂಬ ಇಷ್ಟವಾದವು. ಅನೇಕರು ಯೋಹಾನನೇ ಮೆಸ್ಸೀಯನು ಇರಬಹುದೇನೋ ಎಂದು ಯೋಚಿಸಿದರು. ಆದರೆ ಯೋಹಾನನು, ‘ನನಗಿಂತ ದೊಡ್ಡವನು ಬರುತ್ತಾನೆ, ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ. ನಾನು ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ, ಆದರೆ ಆತನು ನಿಮಗೆ ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ’ ಅಂದನು.

      “ಎಲ್ಲ ರೀತಿಯ ಜನ ಆ ಬೆಳಕನ್ನ ನಂಬಬೇಕು ಅಂತ ಆ ಬೆಳಕಿನ ಬಗ್ಗೆ ಜನ್ರಿಗೆ ಹೇಳೋಕೆ ಬಂದ.”—ಯೋಹಾನ 1:7

      ಪ್ರಶ್ನೆಗಳು: ಯೆಹೋವನು ಯೋಹಾನನನ್ನು ಜನರ ಹತ್ತಿರ ಏಕೆ ಕಳುಹಿಸಿದನು? ಅವನು ಹೇಳಿದ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?

      ಮತ್ತಾಯ 3:1-11; ಮಾರ್ಕ 1:1-8; ಲೂಕ 3:1-18; ಯೋಹಾನ 1:19-28; ಯೆಶಾಯ 40:3

  • ಯೇಸು ಮೆಸ್ಸೀಯನಾದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ದೇವರ ಪವಿತ್ರಶಕ್ತಿ ಪಾರಿವಾಳದಂತೆ ಅವನ ಮೇಲೆ ಬಂತು

      ಪಾಠ 74

      ಯೇಸು ಮೆಸ್ಸೀಯನಾದನು

      ‘ತನಗಿಂತ ದೊಡ್ಡವನೊಬ್ಬ ಬರುವನು’ ಎಂದು ಯೋಹಾನ ಸಾರುತ್ತಿದ್ದನು. ಯೇಸು 30 ವರ್ಷದವನಾಗಿದ್ದಾಗ ಗಲಿಲಾಯದ ಯೋರ್ದನ್‌ ನದಿಗೆ ಬಂದನು. ಅಲ್ಲಿ ಯೋಹಾನ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಯೇಸು ತನಗೂ ದೀಕ್ಷಾಸ್ನಾನ ಮಾಡಿಸುವಂತೆ ಕೇಳಿಕೊಂಡನು. ಅದಕ್ಕೆ ಯೋಹಾನ ‘ನಾನು ನಿನಗೆ ದೀಕ್ಷಾಸ್ನಾನ ಮಾಡಿಸಬಾರದು. ನೀನೇ ನನಗೆ ದೀಕ್ಷಾಸ್ನಾನ ಮಾಡಿಸಬೇಕು’ ಅಂದನು. ಅದಕ್ಕೆ ಯೇಸು ‘ನೀನು ನನಗೆ ದೀಕ್ಷಾಸ್ನಾನ ಮಾಡಿಸಬೇಕೆನ್ನುವುದು ಯೆಹೋವನ ಇಚ್ಛೆ’ ಅಂದನು. ಯೇಸು ಮತ್ತು ಯೋಹಾನ ಇಬ್ಬರೂ ಯೋರ್ದನ್‌ ನದಿಗೆ ಹೋದರು. ಯೋಹಾನನು ಯೇಸುವನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸುವ ಮೂಲಕ ದೀಕ್ಷಾಸ್ನಾನ ಮಾಡಿಸಿದನು.

      ಯೇಸು ನೀರಿನಿಂದ ಮೇಲೆ ಬಂದಾಗ ಯೆಹೋವನಿಗೆ ಪ್ರಾರ್ಥಿಸಿದನು. ಆ ಕ್ಷಣವೇ ಆಕಾಶವು ತೆರೆಯಿತು. ದೇವರ ಪವಿತ್ರಶಕ್ತಿ ಪಾರಿವಾಳದಂತೆ ಯೇಸುವಿನ ಮೇಲೆ ಬಂತು. ನಂತರ ಯೆಹೋವನು ಸ್ವರ್ಗದಿಂದ ‘ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ’ ಎಂದು ಹೇಳಿದನು.

      ಯೇಸುವಿನ ಮೇಲೆ ಯೆಹೋವನ ಪವಿತ್ರಶಕ್ತಿ ಬಂದಾಗ ಅವನು ಕ್ರಿಸ್ತ ಅಥವಾ ಮೆಸ್ಸೀಯನಾದನು. ಯೆಹೋವನು ಯೇಸುವನ್ನು ಭೂಮಿಗೆ ಯಾವ ಕೆಲಸಕ್ಕಾಗಿ ಕಳುಹಿಸಿದ್ದನೋ ಆ ಕೆಲಸವನ್ನು ಯೇಸು ಮಾಡಲು ಆರಂಭಿಸಿದನು.

      ದೀಕ್ಷಾಸ್ನಾನ ಆದ ತಕ್ಷಣ ಯೇಸು ಕಾಡಿಗೆ ಹೋಗಿ 40 ದಿನ ಅಲ್ಲೇ ಇದ್ದನು. ಅವನು ಕಾಡಿನಿಂದ ತಿರುಗಿ ಬಂದ ಮೇಲೆ ಯೋಹಾನನನ್ನು ನೋಡಲು ಹೋದನು. ಯೇಸು ತನ್ನ ಕಡೆ ಬರುತ್ತಿರುವುದನ್ನು ನೋಡಿದ ಯೋಹಾನ ‘ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ ಇವನೇ’ ಅಂದನು. ಯೇಸುವೇ ಮೆಸ್ಸೀಯ ಎಂದು ಜನರು ತಿಳಿದುಕೊಳ್ಳುವಂತೆ ಯೋಹಾನ ಹೀಗೆ ಹೇಳಿದನು. ಯೇಸು ಕಾಡಿನಲ್ಲಿ ಇದ್ದಾಗ ಏನಾಯಿತು ಗೊತ್ತಾ? ಮುಂದಿನ ಅಧ್ಯಾಯದಲ್ಲಿ ತಿಳಿಯೋಣ.

      “ಸ್ವರ್ಗದಿಂದ ‘ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ’ ಅನ್ನೋ ಧ್ವನಿ ಕೇಳಿಸ್ತು.”—ಮಾರ್ಕ 1:11

      ಪ್ರಶ್ನೆಗಳು: ಯೇಸು ಏಕೆ ದೀಕ್ಷಾಸ್ನಾನ ಪಡೆದುಕೊಂಡನು? ಯೋಹಾನನು ಯೇಸುವನ್ನು ದೇವರ ಕುರಿಮರಿ ಎಂದು ಏಕೆ ಕರೆದನು?

      ಮತ್ತಾಯ 3:13-17; ಮಾರ್ಕ 1:9-11; ಲೂಕ 3:21-23; ಯೋಹಾನ 1:29-34; ಯೆಶಾಯ 42:1; ಇಬ್ರಿಯ 10:7-9

  • ಯೇಸುವನ್ನು ಪಿಶಾಚನು ಪರೀಕ್ಷಿಸಿದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ದೇವಾಲಯದ ಮೇಲಿಂದ ಕೆಳಕ್ಕೆ ಜಿಗಿಯಲು ಯೇಸು ನಿರಾಕರಿಸುತ್ತಾನೆ

      ಪಾಠ 75

      ಯೇಸುವನ್ನು ಪಿಶಾಚನು ಪರೀಕ್ಷಿಸಿದನು

      ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಲು ಯೇಸು ನಿರಾಕರಿಸುತ್ತಾನೆ

      ಯೇಸು ದೀಕ್ಷಾಸ್ನಾನ ಪಡೆದ ಮೇಲೆ, ಪವಿತ್ರಶಕ್ತಿ ಅವನನ್ನು ಬರಡು ಪ್ರದೇಶಕ್ಕೆ ನಡೆಸಿತು. ಯೇಸು ನಲವತ್ತು ದಿನಗಳವರೆಗೆ ಏನೂ ತಿನ್ನಲಿಲ್ಲ, ಅವನಿಗೆ ತುಂಬಾ ಹಸಿವಾಯಿತು. ಆಗ ಪಿಶಾಚನು ಯೇಸುವನ್ನು ಪರೀಕ್ಷಿಸಲು ಬಂದನು. ಅವನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ರೆ ಈ ಕಲ್ಲುಗಳಿಗೆ ರೊಟ್ಟಿ ಆಗು ಅಂತ ಹೇಳು’ ಅಂದನು. ಆದರೆ ಯೇಸು ಪವಿತ್ರ ಗ್ರಂಥವನ್ನ ಉಪಯೋಗಿಸಿ, ‘ಬದುಕಲು ಕೇವಲ ಆಹಾರ ಅಷ್ಟೇ ಸಾಕಾಗಲ್ಲ. ಯೆಹೋವನು ಹೇಳುವ ಪ್ರತಿಯೊಂದು ಮಾತನ್ನು ಕೇಳಬೇಕು ಎಂದು ಬರೆದಿದೆ’ ಎಂದು ಉತ್ತರಿಸಿದನು.

      ನಂತರ, ಪಿಶಾಚನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ರೆ ದೇವಾಲಯದ ಮೇಲಿಂದ ಕೆಳಕ್ಕೆ ಜಿಗಿ. ದೇವರು ತನ್ನ ದೂತರನ್ನು ಕಳುಹಿಸಿ ನಿನ್ನನ್ನು ಕಾಪಾಡುವನು ಎಂದು ಬರೆದಿದೆಯಲ್ಲಾ’ ಎಂದು ಹೇಳಿದನು. ಆದರೆ ಯೇಸು ಪುನಃ ಪವಿತ್ರ ಗ್ರಂಥವನ್ನು ಉಪಯೋಗಿಸಿ, ‘ಯೆಹೋವನನ್ನು ಪರೀಕ್ಷಿಸಬಾರದು ಎಂದು ಸಹ ಬರೆದಿದೆ’ ಅಂದನು.

      ಸೈತಾನನು ತೋರಿಸಿದ ಲೋಕದ ಎಲ್ಲ ಸಾಮ್ರಾಜ್ಯಗಳನ್ನ ಯೇಸು ನಿರಾಕರಿಸುತ್ತಾನೆ

      ಬಳಿಕ, ಸೈತಾನನು ಎಲ್ಲಾ ಸಾಮ್ರಾಜ್ಯಗಳನ್ನೂ ಅವುಗಳ ಸಂಪತ್ತನ್ನೂ, ಮಹಿಮೆಯನ್ನೂ ತೋರಿಸಿ, ‘ನೀನು ನನಗೆ ಒಂದೇ ಒಂದು ಸಾರಿ ಆರಾಧನೆ ಮಾಡಿದರೆ ಈ ಎಲ್ಲಾ ಸಾಮ್ರಾಜ್ಯಗಳನ್ನು ಮತ್ತು ಸಂಪತ್ತನ್ನು ನಿನಗೆ ಕೊಡ್ತೀನಿ’ ಅಂದನು. ಆದರೆ ಯೇಸು ಅವನಿಗೆ, ‘ಸೈತಾನನೇ, ಇಲ್ಲಿಂದ ತೊಲಗಿ ಹೋಗು! ಯೆಹೋವನನ್ನು ಮಾತ್ರ ಆರಾಧಿಸಬೇಕು ಎಂದು ಬರೆದಿದೆ’ ಅಂದನು.

      ಆಗ ಪಿಶಾಚನು ಅಲ್ಲಿಂದ ಹೋದನು ಮತ್ತು ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು. ಅಂದಿನಿಂದ ಯೇಸು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ಸಾರಿದನು. ಈ ಕೆಲಸಕ್ಕಾಗಿಯೇ ದೇವರು ಅವನನ್ನು ಭೂಮಿಗೆ ಕಳುಹಿಸಿದ್ದನು. ಯೇಸುವಿನ ಬೋಧನೆಯನ್ನು ಜನರು ಇಷ್ಟಪಟ್ಟರು. ಅವನು ಹೋದಲ್ಲೆಲ್ಲಾ ಅವರು ಅವನ ಹಿಂದೆ ಹೋದರು.

      “ಅವನು [ಪಿಶಾಚ] ಸುಳ್ಳು ಹೇಳ್ತಾನೆ. ಯಾಕಂದ್ರೆ ಅವನ ಮನಸ್ಸು ತುಂಬ ಅದೇ ತುಂಬಿದೆ. ಅವನು ಸುಳ್ಳುಬುರುಕ. ಸುಳ್ಳನ್ನ ಹುಟ್ಟಿಸಿದವನೇ ಅವನು.”—ಯೋಹಾನ 8:44

      ಪ್ರಶ್ನೆಗಳು: ಯೇಸುವಿಗೆ ಯಾವ ಮೂರು ಪರೀಕ್ಷೆಗಳು ಬಂದವು? ಯೇಸು ಪಿಶಾಚನಿಗೆ ಹೇಗೆ ಉತ್ತರ ಕೊಟ್ಟನು?

      ಮತ್ತಾಯ 4:1-11; ಮಾರ್ಕ 1:12, 13; ಲೂಕ 4:1-15; ಧರ್ಮೋಪದೇಶಕಾಂಡ 6:13, 16; 8:3; ಯಾಕೋಬ 4:7

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ