-
ಯೇಸು ಸಬ್ಬತ್ ದಿನದಂದು ವಾಸಿ ಮಾಡಿದನುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 85
ಯೇಸು ಸಬ್ಬತ್ ದಿನದಂದು ವಾಸಿ ಮಾಡಿದನು
ಫರಿಸಾಯರು ಯೇಸುವನ್ನು ತುಂಬಾ ದ್ವೇಷಿಸುತ್ತಿದ್ದರು. ಅವನನ್ನು ಬಂಧಿಸಲು ಏನಾದರೂ ಕಾರಣ ಸಿಗುತ್ತಾ ಅಂತ ಕಾಯುತ್ತಿದ್ದರು. ಅವರು ಜನರಿಗೆ ಸಬ್ಬತ್ ದಿನದಲ್ಲಿ ಕಾಯಿಲೆ ಬಿದ್ದವರನ್ನು ವಾಸಿ ಮಾಡಬಾರದು ಎಂದು ಹೇಳಿದ್ದರು. ಏಕೆಂದರೆ ಅದು ವಿಶ್ರಾಂತಿಯ ದಿನವಾಗಿತ್ತು. ಒಮ್ಮೆ ಸಬ್ಬತ್ ದಿನದಂದು ಯೇಸು ದಾರಿ ಬದಿಯಲ್ಲಿ ಒಬ್ಬ ಕುರುಡ ಭಿಕ್ಷೆ ಬೇಡುತ್ತಿರುವುದನ್ನು ನೋಡಿದನು. ಅವನು ತನ್ನ ಶಿಷ್ಯರಿಗೆ ‘ದೇವರ ಶಕ್ತಿಯಿಂದ ಇವನಿಗೆ ಏನಾಗುವುದೆಂದು ನೋಡಿ’ ಅಂದನು. ಯೇಸು ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿ ಅದನ್ನು ಆ ಕುರುಡನ ಕಣ್ಣಿಗೆ ಹಚ್ಚಿದನು. ಆಮೇಲೆ ಯೇಸು ಆ ಕುರುಡನಿಗೆ ‘ಹೋಗಿ ಸಿಲೋವ ಕೊಳದಲ್ಲಿ ನಿನ್ನ ಕಣ್ಣನ್ನು ತೊಳ್ಕೊ’ ಅಂದನು. ಅವನು ಯೇಸು ಹೇಳಿದಂತೆ ಮಾಡಿದನು. ಆಶ್ಚರ್ಯ ಏನೆಂದರೆ ತನ್ನ ಜೀವನದಲ್ಲಿ ಮೊದಲ ಬಾರಿ ಅವನಿಗೆ ದೃಷ್ಟಿ ಬಂತು.
ಇದನ್ನು ಕಂಡ ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಅವರು ‘ಇವನು ದಾರಿ ಬದಿಯಲ್ಲಿ ಭಿಕ್ಷೆ ಬೇಡ್ತಿದ್ದವನು ಅಲ್ವಾ? ಅಥವಾ ಅವನ ತರ ಕಾಣೋ ಬೇರೆ ವ್ಯಕ್ತಿನಾ?’ ಎಂದರು. ಆಗ ಆ ಮನುಷ್ಯನು ‘ನಾನೇ ಆ ಹುಟ್ಟು ಕುರುಡ’ ಅಂದನು. ಅದಕ್ಕೆ ಜನರು ‘ನಿನಗೆ ಕಣ್ಣು ಹೇಗೆ ಬಂತು?’ ಎಂದು ಕೇಳಿದರು. ಅವನು ನಡೆದದ್ದೆಲ್ಲವನ್ನು ಹೇಳಿದನು. ಆಗ ಜನರು ಅವನನ್ನು ಫರಿಸಾಯರ ಹತ್ತಿರ ಕರೆದುಕೊಂಡು ಹೋದರು.
ಆಗ ಆ ಮನುಷ್ಯನು ಫರಿಸಾಯರಿಗೆ ‘ಯೇಸು ನನ್ನ ಕಣ್ಣಿನ ಮೇಲೆ ಕೆಸರು ಹಚ್ಚಿದ, ಆಮೇಲೆ ಹೋಗಿ ತೊಳ್ಕೊಳ್ಳೋಕೆ ಹೇಳಿದ. ಅದೇ ತರ ಮಾಡಿದೆ, ನಂಗೆ ಕಣ್ಣು ಬಂತು’ ಅಂದನು. ಅದಕ್ಕೆ ಫರಿಸಾಯರು ‘ಯೇಸು ಸಬ್ಬತ್ತಲ್ಲಿ ವಾಸಿ ಮಾಡಿದ್ರಿಂದ ಅವನು ದೇವರ ಶಕ್ತಿಯಿಂದ ವಾಸಿ ಮಾಡಿಲ್ಲ’ ಅಂದರು. ಆದರೆ ಇನ್ನು ಕೆಲವರು ‘ಅವನಿಗೆ ದೇವರಿಂದ ಶಕ್ತಿ ಸಿಕ್ಕಿಲ್ಲ ಅಂದಿದ್ರೆ ಅವನು ವಾಸಿ ಮಾಡೋಕೆ ಆಗ್ತಾನೇ ಇರಲಿಲ್ಲ’ ಅಂದರು.
ಫರಿಸಾಯರು ಆ ವ್ಯಕ್ತಿಯ ಅಪ್ಪಅಮ್ಮನನ್ನ ಕರೆದು ‘ನಿಮ್ಮ ಮಗನಿಗೆ ಹೇಗೆ ಕಣ್ಣು ಬಂತು?’ ಎಂದು ಕೇಳಿದರು. ಆಗ ಅವರು ಭಯಪಟ್ಟರು. ಯಾಕೆಂದರೆ ಯಾರು ಯೇಸುವಿನಲ್ಲಿ ನಂಬಿಕೆ ಇಡುತ್ತಾರೋ ಅಂಥವರನ್ನು ಸಭಾಮಂದಿರದಿಂದ ಹೊರಗೆ ಹಾಕಲಾಗುವುದು ಎಂದು ಫರಿಸಾಯರು ಹೇಳಿದ್ದರು. ಆದ್ದರಿಂದ ಅವರು ‘ನಮಗೆ ಅದರ ಬಗ್ಗೆ ಗೊತ್ತಿಲ್ಲ. ನೀವು ನಮ್ಮ ಮಗನನ್ನೇ ಕೇಳಿ’ ಅಂದರು. ಆಗ ಫರಿಸಾಯರು ಅವನ ಹತ್ತಿರ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಕೊನೆಗೆ ಅವನು ‘ನನಗೆ ಗೊತ್ತಿರುವುದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಮತ್ತೆ ಮತ್ತೆ ನೀವು ಅದರ ಬಗ್ಗೆ ಯಾಕೆ ಕೇಳುತ್ತಿದ್ದೀರಿ?’ ಅಂದನು. ಆಗ ಫರಿಸಾಯರು ಕೋಪಗೊಂಡು ಅವನನ್ನು ಹೊರಗೆ ದೊಬ್ಬಿದರು.
ಆಮೇಲೆ ಯೇಸು ತಾನು ವಾಸಿ ಮಾಡಿದ ವ್ಯಕ್ತಿಯ ಹತ್ತಿರ ಹೋಗಿ ‘ನಿನಗೆ ಮೆಸ್ಸೀಯನ ಮೇಲೆ ನಂಬಿಕೆ ಇದೆಯಾ?’ ಎಂದು ಕೇಳಿದನು. ಅದಕ್ಕೆ ಆ ವ್ಯಕ್ತಿ ‘ಅವನು ಯಾರು ಅಂತ ಗೊತ್ತಾದರೆ ಖಂಡಿತ ನಂಬಿಕೆ ಇಡ್ತೀನಿ’ ಅಂದನು. ಆಗ ಯೇಸು ಅವನಿಗೆ ‘ನಾನೇ ಮೆಸ್ಸೀಯ’ ಅಂದನು. ಯೇಸು ಎಷ್ಟು ದಯಾಭರಿತ ವ್ಯಕ್ತಿ ಅಂತ ಗಮನಿಸಲು ಆಯಿತಾ? ಯೇಸು ಆ ವ್ಯಕ್ತಿಯನ್ನು ವಾಸಿ ಮಾಡಿದ್ದಷ್ಟೇ ಅಲ್ಲ ತನ್ನಲ್ಲಿ ನಂಬಿಕೆ ಇಡುವಂತೆ ಅವನಿಗೆ ಸಹಾಯ ಮಾಡಿದನು.
“ನೀವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ದೀರ. ಪವಿತ್ರ ಗ್ರಂಥದಲ್ಲಿ ಇರೋ ವಿಷ್ಯಗಳಾಗಲಿ ದೇವರ ಶಕ್ತಿ ಬಗ್ಗೆಯಾಗಲಿ ನಿಮಗೆ ಗೊತ್ತಿಲ್ಲ.”—ಮತ್ತಾಯ 22:29
-
-
ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟನುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 86
ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟನು
ಯೇಸುವಿಗೆ ಬೇಥಾನ್ಯದಲ್ಲಿ ಮೂವರು ಆಪ್ತ ಸ್ನೇಹಿತರಿದ್ದರು. ಅವರು ಯಾರೆಂದರೆ ಲಾಜರ ಮತ್ತು ಅವನ ಇಬ್ಬರು ಸಹೋದರಿಯರಾದ ಮರಿಯ ಮತ್ತು ಮಾರ್ಥ. ಒಂದು ದಿನ, ಯೇಸು ಯೋರ್ದನಿನ ಆಚೆ ಪಕ್ಕದಲ್ಲಿದ್ದನು. ಆಗ ಮರಿಯ ಮತ್ತು ಮಾರ್ಥ ಯೇಸುವಿಗೆ, ‘ಲಾಜರನಿಗೆ ಹುಷಾರಿಲ್ಲ. ದಯವಿಟ್ಟು ಬೇಗ ಬನ್ನಿ!’ ಎಂಬ ತುರ್ತಿನ ಸಂದೇಶ ಕಳುಹಿಸಿದರು. ಆದರೆ ಯೇಸು ತಕ್ಷಣ ಹೋಗಲಿಲ್ಲ. ಅವನು ಇನ್ನೆರಡು ದಿನ ಅಲ್ಲೇ ಉಳಿದನು, ನಂತರ ಯೇಸು ಶಿಷ್ಯರಿಗೆ, ‘ಬೇಥಾನ್ಯಕ್ಕೆ ಹೋಗೋಣ ಬನ್ನಿ. ನಮ್ಮ ಗೆಳೆಯ ಲಾಜರ ನಿದ್ದೆ ಮಾಡ್ತಿದ್ದಾನೆ. ಅವನನ್ನ ಎಬ್ಬಿಸೋಕೆ ನಾನು ಹೋಗ್ತಾ ಇದ್ದೀನಿ’ ಎಂದನು. ಶಿಷ್ಯರು, ‘ಲಾಜರನು ನಿದ್ದೆ ಮಾಡಿದ್ರೆ ವಾಸಿ ಆಗಿಬಿಡ್ತಾನೆ’ ಎಂದರು. ಆಗ ಯೇಸು ಅವರಿಗೆ ಸ್ಪಷ್ಟವಾಗಿ, ‘ಲಾಜರನು ಸತ್ತುಹೋಗಿದ್ದಾನೆ’ ಅಂದನು.
ಯೇಸು ಬೇಥಾನ್ಯಕ್ಕೆ ಬಂದು ಮುಟ್ಟಿದಾಗ ಲಾಜರನನ್ನು ಸಮಾಧಿ ಮಾಡಿ ಈಗಾಗಲೇ ನಾಲ್ಕು ದಿನಗಳಾಗಿದ್ದವು. ಮಾರ್ಥ ಮತ್ತು ಮರಿಯಳನ್ನು ಸಮಾಧಾನ ಪಡಿಸಲು ಜನರು ಗುಂಪು ಬಂದಿತ್ತು. ಯೇಸು ಬಂದಿದ್ದಾನೆಂದು ಮಾರ್ಥ ಕೇಳಿದ ಕೂಡಲೇ, ಅವನನ್ನು ನೋಡಲು ಓಡೋಡಿ ಬಂದಳು. ಅವಳು ಯೇಸುವಿಗೆ, “ಪ್ರಭು, ನೀನು ಇಲ್ಲಿ ಇರ್ತಿದ್ರೆ ನನ್ನ ತಮ್ಮ ಸಾಯ್ತಿರಲಿಲ್ಲ.” ಅಂದಳು. ಯೇಸು ಅವಳಿಗೆ, “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ನೀನು ಇದನ್ನು ನಂಬುತ್ತೀಯಾ ಮಾರ್ಥ?’ ಎಂದು ಕೇಳಿದನು. ಮಾರ್ಥಳು, “ಕೊನೇ ದಿನದಲ್ಲಿ ಸತ್ತವ್ರಿಗೆ ನೀನು ಮತ್ತೆ ಜೀವ ಕೊಡುವಾಗ ನನ್ನ ತಮ್ಮನೂ ಬರ್ತಾನೆ ಅಂತ ನಂಗೊತ್ತು” ಅಂದಳು. ಯೇಸು ಮಾರ್ಥಳಿಗೆ, “ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ” ಎಂದನು.
ನಂತರ ಮಾರ್ಥಳು ಮರಿಯಳ ಬಳಿಗೆ ಹೋಗಿ, “ಗುರು ಬಂದಿದ್ದಾನೆ” ಎಂದಳು. ಮರಿಯಳು ಯೇಸುವಿನ ಬಳಿಗೆ ಓಡೋಡಿ ಹೋದಳು, ಜನರ ಗುಂಪೂ ಅವಳನ್ನು ಹಿಂಬಾಲಿಸಿತು. ಅವಳು ಯೇಸುವಿನ ಕಾಲ ಹತ್ತಿರ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತ, “ಪ್ರಭು, ನೀನು ಇಲ್ಲಿ ಇರ್ತಿದ್ರೆ ತಮ್ಮ ಸಾಯ್ತಿರಲಿಲ್ಲ” ಎಂದಳು. ಮರಿಯಳು ಪಡುತ್ತಿದ್ದ ಸಂಕಟವನ್ನು ನೋಡಿ ಯೇಸು ಸಹ ಅತ್ತನು. ಇದನ್ನು ನೋಡಿದ ಜನರ ಗುಂಪು, “ಇವನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ ನೋಡಿ!” ಎಂದರು. ಆದರೆ ಕೆಲವರು, ‘ಇವನು ತನ್ನ ಸ್ನೇಹಿತನನ್ನೇಕೆ ಕಾಪಾಡಲಿಲ್ಲ?’ ಅಂದುಕೊಂಡರು. ಯೇಸು ಮುಂದೆ ಏನು ಮಾಡಿದನು? ನೋಡೋಣ ಬನ್ನಿ.
ಯೇಸು ಸಮಾಧಿಯ ಹತ್ತಿರ ಹೋದನು. ಅದರ ಬಾಗಿಲಿಗೆ ಒಂದು ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. “ಆ ಕಲ್ಲನ್ನ ಪಕ್ಕಕ್ಕೆ ಸರಿಸಿ” ಎಂದನು ಯೇಸು. ಮಾರ್ಥಳು ಯೇಸುವಿಗೆ, “ಪ್ರಭು, ಅವನು ಸತ್ತು ನಾಲ್ಕು ದಿನ ಆಗಿದೆ. ಈಗ ಅವನ ದೇಹ ವಾಸನೆ ಬರುತ್ತಿರುತ್ತೆ” ಎಂದಳು. ಆದರೂ ಅವರು ಕಲ್ಲನ್ನು ತೆಗೆದರು. ಆಗ ಯೇಸು, “ಅಪ್ಪಾ, ನನ್ನ ಪ್ರಾರ್ಥನೆ ಕೇಳಿದ್ದಕ್ಕೆ ತುಂಬ ಧನ್ಯವಾದ. ನೀನು ಯಾವಾಗ್ಲೂ ನನ್ನ ಪ್ರಾರ್ಥನೆ ಕೇಳ್ತೀಯ ಅಂತ ನಂಗೊತ್ತು. ಆದ್ರೆ ನೀನೇ ನನ್ನನ್ನ ಕಳಿಸಿದ್ದೀಯ ಅನ್ನೋ ನಂಬಿಕೆ ನನ್ನ ಸುತ್ತ ಇರೋ ಜನ್ರಿಗೆ ಬರಲಿ ಅಂತ ಹೀಗೆ ಹೇಳ್ತಾ ಇದ್ದೀನಿ” ಎಂದು ಪ್ರಾರ್ಥಿಸಿದನು. ನಂತರ, ಯೇಸು ಗಟ್ಟಿಯಾದ ಸ್ವರದಿಂದ, “ಲಾಜರ, ಎದ್ದು ಹೊರಗೆ ಬಾ” ಎಂದು ಕೂಗಿದನು. ಆಗೊಂದು ಅದ್ಭುತ ನಡೆಯಿತು. ಲಾಜರನು ಸಮಾಧಿಯಿಂದ ಹೊರಗೆ ಬಂದನು. ಅವನಿಗೆ ಸುತ್ತಿದ್ದ ಬಟ್ಟೆಯು ಇನ್ನೂ ಹಾಗೆಯೇ ಇತ್ತು. ಯೇಸು ಅಲ್ಲಿದ್ದವರಿಗೆ, “ಆ ಪಟ್ಟಿಗಳನ್ನ ಬಿಚ್ಚಿ, ಅವನು ನಡಿಲಿ” ಎಂದನು.
ಇದನ್ನು ನೋಡಿದ ಅನೇಕರು ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಕೆಲವರು ಫರಿಸಾಯರ ಬಳಿ ಹೋಗಿ ಎಲ್ಲಾ ಸಂಗತಿಗಳನ್ನು ತಿಳಿಸಿದರು. ಅಂದಿನಿಂದ ಫರಿಸಾಯರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಲು ನೋಡುತ್ತಿದ್ದರು. ಹನ್ನೆರಡು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೂತ ಯೂದ ರಹಸ್ಯವಾಗಿ ಫರಿಸಾಯರ ಹತ್ತಿರ ಹೋಗಿ, ‘ನಾನು ಯೇಸುವನ್ನು ಹಿಡುಕೊಟ್ರೆ ನೀವು ನನಗೆಷ್ಟು ಹಣ ಕೊಡುವಿರಿ?’ ಎಂದು ಕೇಳಿದ. ಅವರು ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಲು ಒಪ್ಪಿಕೊಂಡರು. ಅಂದಿನಿಂದ ಯೂದನು ಯೇಸುವನ್ನು ಫರಿಸಾಯರಿಗೆ ಹಿಡಿದುಕೊಡುವ ಸಂದರ್ಭಕ್ಕಾಗಿ ಹುಡುಕುತ್ತಿದ್ದನು.
“ಸತ್ಯದೇವರು ನಮ್ಮನ್ನ ರಕ್ಷಿಸೋ ದೇವರಾಗಿದ್ದಾನೆ, ವಿಶ್ವದ ರಾಜ ಯೆಹೋವ ಸಾವಿಂದ ನಮ್ಮನ್ನ ತಪ್ಪಿಸ್ತಾನೆ.”—ಕೀರ್ತನೆ 68:20
-
-
ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 87
ಯೇಸು ಆಚರಿಸಿದ ಕೊನೆಯ ಪಸ್ಕ ಹಬ್ಬ
ಯೆಹೂದ್ಯರು ಪ್ರತಿ ವರ್ಷ ನೈಸಾನ್ ತಿಂಗಳ 14ನೇ ದಿನದಂದು ಪಸ್ಕ ಹಬ್ಬವನ್ನು ಆಚರಿಸುತ್ತಿದ್ದರು. ಯೆಹೋವನು ತಮ್ಮನ್ನು ಈಜಿಪ್ಟಿನ ದಾಸತ್ವದಿಂದ ಬಿಡುಗಡೆ ಮಾಡಿದ್ದನ್ನು, ಮಾತುಕೊಟ್ಟ ದೇಶಕ್ಕೆ ಕರೆದುಕೊಂಡು ಬಂದದ್ದನ್ನು ನೆನಪು ಮಾಡಿಕೊಳ್ಳಲು ಈ ಹಬ್ಬವನ್ನು ಆಚರಿಸುತ್ತಿದ್ದರು. ಕ್ರಿ.ಶ. 33ರಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಪಸ್ಕ ಹಬ್ಬವನ್ನು ಆಚರಿಸಲು ಯೆರೂಸಲೇಮಿನ ಮೇಲಂತಸ್ತಿನ ಒಂದು ಕೋಣೆಯಲ್ಲಿ ಸೇರಿ ಬಂದಿದ್ದರು. ಊಟದ ಕೊನೆಯಲ್ಲಿ ಯೇಸು ಅಪೊಸ್ತಲರಿಗೆ, “ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಎಂದು ಹೇಳಿದನು. ಆಗ ಅಪೊಸ್ತಲರಿಗೆ ಆಶ್ಚರ್ಯವಾಯಿತು, “ಸ್ವಾಮಿ, ಅದು ನಾನಲ್ಲ ತಾನೇ?”ಎಂದು ಕೇಳಿದರು. ಅದಕ್ಕೆ ಯೇಸು “ನಾನು ಈ ರೊಟ್ಟಿ ತುಂಡನ್ನ ಅದ್ದಿ ಯಾರಿಗೆ ಕೊಡ್ತಿನೋ ಅವನೇ” ಅಂದನು. ಆಮೇಲೆ ರೊಟ್ಟಿಯನ್ನು ಇಸ್ಕರಿಯೂತ ಯೂದನಿಗೆ ಕೊಟ್ಟನು. ತಕ್ಷಣ, ಯೂದ ಎದ್ದು ಅಲ್ಲಿಂದ ಹೊರಟು ಹೋದನು.
ನಂತರ ಯೇಸು, ಪ್ರಾರ್ಥನೆ ಮಾಡಿ ರೊಟ್ಟಿಯನ್ನು ಮುರಿದು ಉಳಿದ ಅಪೊಸ್ತಲರಿಗೆ ಕೊಟ್ಟು, “ತಗೊಳಿ, ತಿನ್ನಿ. ಇದು ನಾನು ನಿಮಗೋಸ್ಕರ ಅರ್ಪಿಸೋ ನನ್ನ ದೇಹವನ್ನ ಸೂಚಿಸುತ್ತೆ.” ಎಂದನು. ಆಮೇಲೆ ದ್ರಾಕ್ಷಾಮದ್ಯ ತಗೊಂಡು ಪ್ರಾರ್ಥಿಸಿ, ‘ತಗೊಳಿ, ಇದನ್ನ ಕುಡಿದು ಇನ್ನೊಬ್ರಿಗೆ ದಾಟಿಸಿ. ಇದು ನನ್ನ ರಕ್ತವನ್ನ ಸೂಚಿಸುತ್ತೆ. ಇದರಿಂದ ನಿಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತೆ. ನೀವು ನನ್ನೊಂದಿಗೆ ಸ್ವರ್ಗದಲ್ಲಿ ರಾಜರಾಗಿರುವಿರಿ ಎಂದು ನಾನು ನಿಮಗೆ ಮಾತು ಕೊಡುತ್ತೇನೆ. ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಪ್ರತಿ ವರ್ಷ ಮಾಡ್ತಾ ಇರಿ’ ಎಂದನು. ಆದ್ದರಿಂದ ಇವತ್ತಿಗೂ ಯೇಸುವಿನ ಹಿಂಬಾಲಕರು ಪ್ರತಿ ವರ್ಷದ ಆ ದಿನ ಯೇಸುವನ್ನು ನೆನಪಿಸಿಕೊಳ್ಳಲು ಕೂಡಿಬರುತ್ತಾರೆ. ಇದನ್ನು ಒಡೆಯನ ರಾತ್ರಿ ಊಟ ಎಂದು ಕರೆಯಲಾಗುತ್ತದೆ.
ಆ ಊಟದ ನಂತರ, ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವರು ಎಂದು ದೊಡ್ಡ ಜಗಳ ಮಾಡಿದರು. ಅದಕ್ಕೆ ಯೇಸು, ‘ನಿಮ್ಮಲ್ಲಿ ದೊಡ್ಡವರು ಎಲ್ರಿಗಿಂತ ಚಿಕ್ಕವರಾಗಿ ಇರಬೇಕು.’ ಎಂದು ಹೇಳಿದನು.
‘ನಿಮ್ಮನ್ನ ಸ್ನೇಹಿತರಂತ ಕರಿದಿದ್ದೀನಿ. ಯಾಕಂದ್ರೆ ಅಪ್ಪನ ಹತ್ರ ನಾನು ಕೇಳಿಸ್ಕೊಂಡ ಎಲ್ಲ ವಿಷ್ಯ ನಿಮಗೆ ಹೇಳಿದ್ದೀನಿ. ನಾನು ಬೇಗ ನನ್ನ ತಂದೆಯ ಬಳಿ ಸ್ವರ್ಗಕ್ಕೆ ಹೋಗುತ್ತೇನೆ. ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು ಆಗ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು’ ಎಂದು ಯೇಸು ಹೇಳಿದನು.
ಕೊನೆಗೆ ಯೇಸು, ತನ್ನ ಶಿಷ್ಯರನ್ನು ಕಾಪಾಡಬೇಕೆಂದು, ಎಲ್ಲರೂ ಶಾಂತಿಯಿಂದ ಸೇವೆ ಮಾಡಲು ಸಹಾಯ ಮಾಡಬೇಕೆಂದು ಯೆಹೋವನನ್ನು ಬೇಡಿಕೊಂಡನು. ಅಷ್ಟೆ ಅಲ್ಲದೇ, ಯೆಹೋವನ ಹೆಸರು ಪವಿತ್ರವಾಗಲಿ ಎಂದು ಪ್ರಾರ್ಥಿಸಿದನು. ನಂತರ, ಯೇಸು ಮತ್ತವನ ಅಪೊಸ್ತಲರು ಯೆಹೋವನಿಗೆ ಸ್ತುತಿ ಗೀತೆಗಳನ್ನು ಹಾಡಿ ಅಲ್ಲಿಂದ ಹೊರಟರು. ಯೇಸುವನ್ನು ಬಂಧಿಸುವ ಸಮಯ ಈಗ ತುಂಬಾ ಹತ್ತಿರ ಇತ್ತು.
“ಚಿಕ್ಕ ಹಿಂಡೇ, ಭಯಪಡಬೇಡ, ನಿಮ್ಮನ್ನ ರಾಜರಾಗಿ ಮಾಡೋದಂದ್ರೆ ನಿಮ್ಮ ತಂದೆಗೆ ತುಂಬ ಇಷ್ಟ.”—ಲೂಕ 12:32
-