-
ಯೇಸುವನ್ನು ಬಂಧಿಸಲಾಯಿತುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 88
ಯೇಸುವನ್ನು ಬಂಧಿಸಲಾಯಿತು
ಯೇಸು ಮತ್ತವನ ಅಪೊಸ್ತಲರು ಕಿದ್ರೋನ್ ಕಣಿವೆಯ ಮೂಲಕ ಆಲೀವ್ ಮರಗಳ ಗುಡ್ಡಕ್ಕೆ ಹೋದರು. ಈಗಾಗಲೇ ಮಧ್ಯ ರಾತ್ರಿಯಾಗಿತ್ತು. ಆಕಾಶದಲ್ಲಿ ಪೂರ್ಣ ಚಂದಿರನಿದ್ದ. ಅವರು ಗೆತ್ಸೇಮನೆ ತೋಟಕ್ಕೆ ಬಂದರು. ಆಗ ಯೇಸು ಅವರಿಗೆ “ಇಲ್ಲೇ ಇರಿ, ಎಚ್ಚರವಾಗಿರಿ” ಎಂದು ಹೇಳಿದನು. ನಂತರ ಯೇಸು ಸ್ವಲ್ಪ ದೂರ ಹೋಗಿ ಮಂಡಿಯೂರಿ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸಿದನು. ‘ನಿನ್ನ ಇಷ್ಟ ನೆರವೇರಲಿ’ ಅಂದನು. ಆಗ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿ ಅವನನ್ನು ಬಲಪಡಿಸಿದನು. ಯೇಸು ಹಿಂತಿರುಗಿ ಬಂದಾಗ ತನ್ನ ಅಪೊಸ್ತಲರು ನಿದ್ದೆ ಮಾಡುತ್ತಿದ್ದರು. ಆಗ ಯೇಸು ಅವರಿಗೆ ‘ಎದ್ದೇಳಿ! ಇದು ನಿದ್ದೆ ಮಾಡುವ ಸಮಯವಲ್ಲ! ವೈರಿಗಳು ನನ್ನನ್ನು ಹಿಡಿದುಕೊಂಡು ಹೋಗುವ ಸಮಯ ಬಂದಿದೆ’ ಅಂದನು.
ಸ್ವಲ್ಪ ಸಮಯದಲ್ಲೇ ಇಸ್ಕರಿಯೂತ ಯೂದ ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡ ಒಂದು ದೊಡ್ಡ ಗುಂಪಿನೊಂದಿಗೆ ಅಲ್ಲಿಗೆ ಬಂದನು. ಯೂದನಿಗೆ ಯೇಸು ಎಲ್ಲಿರುವನು ಎಂದು ಗೊತ್ತಿತ್ತು. ಏಕೆಂದರೆ ಅವನು ಈ ತೋಟಕ್ಕೆ ಅನೇಕ ಸಲ ಯೇಸುವಿನೊಂದಿಗೆ ಬಂದಿದ್ದನು. ‘ಯೇಸು ಯಾರು ಅಂತ ನಾನು ತೋರಿಸಿಕೊಡುತ್ತೇನೆ’ ಎಂದು ಯೂದ ಮೊದಲೇ ಸೈನಿಕರಿಗೆ ಹೇಳಿದ್ದನು. ಅವನು ನೇರವಾಗಿ ಯೇಸುವಿನ ಹತ್ತಿರ ಹೋಗಿ “ರಬ್ಬೀ ನಮಸ್ಕಾರ” ಎಂದು ಮುತ್ತು ಕೊಟ್ಟನು. ಆಗ ಯೇಸು ‘ಯೂದ, ನೀನು ನನಗೆ ಮುತ್ತು ಕೊಟ್ಟು ಮೋಸ ಮಾಡ್ತಿದ್ದೀಯಾ?’ ಅಂದನು.
ಆಮೇಲೆ ಯೇಸು ಮುಂದೆ ಬಂದು ಆ ಗುಂಪಿಗೆ “ಯಾರನ್ನ ಹುಡುಕ್ತಾ ಇದ್ದೀರಾ?” ಅಂದನು ಅದಕ್ಕೆ ಅವರು “ನಜರೇತಿನ ಯೇಸುವನ್ನ” ಅಂದರು. ಅದಕ್ಕೆ ಯೇಸು “ನಾನೇ ಅವನು” ಅಂದನು. ಆಗ ಅವರು ಹಿಂದೆ ಸರಿದು ನೆಲಕ್ಕೆ ಬಿದ್ದರು. ಮತ್ತೆ ಯೇಸು ಆ ಗುಂಪಿಗೆ “ನಿಮಗ್ಯಾರು ಬೇಕು?” ಅಂದನು. ಆಗ ಅವರು ಮತ್ತೆ “ನಜರೇತಿನ ಯೇಸು” ಅಂದರು. ಆಗ ಯೇಸು ‘ನಾನೇ ಯೇಸು ಅಂತ ಹೇಳಿದನಲ್ಲಾ? ಇವರನ್ನ ಹೋಗೋಕೆ, ಬಿಡಿ’ ಅಂದನು.
ಇದನ್ನು ಗಮನಿಸುತ್ತಿದ್ದ ಪೇತ್ರನು ತನ್ನ ಕತ್ತಿಯನ್ನು ತೆಗೆದು ಮಹಾ ಪುರೋಹಿತನ ಸೇವಕನಾದ ಮಲ್ಕನ ಕಿವಿಯನ್ನು ಕತ್ತರಿಸಿದನು. ಆದರೆ ಯೇಸು ಅವನ ಕಿವಿಯನ್ನು ಮುಟ್ಟಿ ವಾಸಿ ಮಾಡಿದನು. ನಂತರ ಯೇಸು ಪೇತ್ರನಿಗೆ “ನಿನ್ನ ಕತ್ತಿನ ಎಲ್ಲಿಂದ ತಗೊಂಡೋ ಅಲ್ಲಿಡು. ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ” ಅಂದನು. ಆಗ ಸೈನಿಕರು ಯೇಸುವಿನ ಕೈಗಳನ್ನು ಕಟ್ಟಿ ಅವನನ್ನು ಬಂಧಿಸಿದರು. ಇದನ್ನು ನೋಡಿದ ಅಪೊಸ್ತಲರು ಓಡಿ ಹೋದರು. ಆಮೇಲೆ ಆ ಜನರು ಯೇಸುವನ್ನು ಮಹಾ ಪುರೋಹಿತ ಅನ್ನನ ಹತ್ತಿರ ಕರೆದುಕೊಂಡು ಹೋದರು. ಅನ್ನನು ಯೇಸುವನ್ನು ವಿಚಾರಿಸಿ ಮಹಾ ಪುರೋಹಿತ ಕಾಯಫನ ಹತ್ತಿರ ಕಳುಹಿಸಿದನು. ಆದರೆ ಓಡಿ ಹೋದ ಅಪೊಸ್ತಲರಿಗೆ ಏನಾಯಿತು ಗೊತ್ತಾ?
“ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ.”—ಯೋಹಾನ 16:33
-
-
ಯೇಸು ಯಾರಂತ ನಂಗೊತ್ತಿಲ್ಲ ಅಂದ ಪೇತ್ರಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 89
ಯೇಸು ಯಾರಂತ ನಂಗೊತ್ತಿಲ್ಲ ಅಂದ ಪೇತ್ರ
ಯೇಸು ಅಪೊಸ್ತಲರೊಂದಿಗೆ ಮೇಲಂತಸ್ತಿನ ಕೋಣೆಯಲ್ಲಿದ್ದಾಗ “ನೀವೆಲ್ರೂ ಈ ರಾತ್ರಿ ನನ್ನನ್ನ ಬಿಟ್ಟು ಓಡಿಹೋಗ್ತೀರ” ಎಂದು ಹೇಳಿದನು. ಅದಕ್ಕೆ ಪೇತ್ರನು “ಬೇರೆ ಎಲ್ರೂ ಬಿಟ್ಟು ಹೋದ್ರೂ ನಾನು ಮಾತ್ರ ನಿನ್ನನ್ನ ಬಿಟ್ಟು ಹೋಗಲ್ಲ” ಎಂದು ಹೇಳಿದನು. ಆಗ ಯೇಸು, “ಇವತ್ತು ರಾತ್ರಿ ಕೋಳಿ ಕೂಗೋಕ್ಕಿಂತ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಎಂದನು.
ಸೈನಿಕರು ಯೇಸುವನ್ನು ಬಂಧಿಸಿ ಕಾಯಫನ ಮನೆಗೆ ಕರೆದುಕೊಂಡು ಹೋದಾಗ ಅನೇಕ ಅಪೊಸ್ತಲರು ಓಡಿ ಹೋದರು. ಆದರೆ ಇಬ್ಬರು ಯೇಸುವನ್ನು ಹಿಂಬಾಲಿಸುತ್ತಾ ಜನರ ಗುಂಪಿನೊಂದಿಗೆ ಹೋದರು. ಅವರಲ್ಲಿ ಒಬ್ಬ ಪೇತ್ರನಾಗಿದ್ದನು. ಇವನು ಕಾಯಫನ ಮನೆಯ ಅಂಗಳಕ್ಕೆ ಹೋಗಿ ಅಲ್ಲಿ ಬೆಂಕಿಯ ಬಳಿ ಚಳಿ ಕಾಯಿಸಿಕೊಳ್ಳುತ್ತಿದ್ದನು. ಆಗ ಒಬ್ಬ ಸೇವಕಿ ‘ಯೇಸು ಜೊತೆ ನೀನೂ ಇದ್ದೆ ಅಲ್ವಾ?’ ಅಂದಳು.
ಆಗ ಪೇತ್ರನು “ನೀನು ಏನು ಮಾತಾಡ್ತಾ ಇದ್ದೀಯಾ ಅಂತ ನಂಗೆ ಅರ್ಥ ಆಗ್ತಿಲ್ಲ” ಅಂದನು. ಅಲ್ಲಿಂದ ಮುಖ್ಯ ಬಾಗಿಲ ಹತ್ರ ಬಂದನು. ಆದರೆ ಅಲ್ಲಿ ಇನ್ನೊಬ್ಬ ಸೇವಕಿ ಇವನನ್ನು ನೋಡಿ ಜನರಿಗೆ ‘ಯೇಸು ಜೊತೆ ಇವನೂ ಇದ್ದ’ ಎಂದು ಹೇಳಿದಳು. ಪೇತ್ರ “ಅವನು ಯಾರಂತ ನಂಗೊತ್ತಿಲ್ಲ” ಅಂದನು. ಇನ್ನೊಬ್ಬ ವ್ಯಕ್ತಿ “ನೀನೂ ಅವ್ರಲ್ಲಿ ಒಬ್ಬ ತಾನೇ. ನಿನ್ನ ಭಾಷೆಯಿಂದಾನೇ ಅದು ಗೊತ್ತಾಗುತ್ತೆ. ನೀನೂ ಗಲಿಲಾಯದವನು” ಎಂದು ಹೇಳಿದನು. ಆದರೆ ಪೇತ್ರನು ಆಣೆಯಿಟ್ಟು “ಅವನು ಯಾರಂತ ನನಗೆ ಸತ್ಯವಾಗ್ಲೂ ಗೊತ್ತಿಲ್ಲ” ಅಂದನು.
ಆ ಕ್ಷಣವೇ ಕೋಳಿ ಕೂಗಿತು ಮತ್ತು ಯೇಸು ಪೇತ್ರನನ್ನು ನೋಡಿದನು. ಆಗ ಪೇತ್ರನಿಗೆ ಯೇಸು ಹೇಳಿದ ಮಾತು ನೆನಪಿಗೆ ಬಂತು. ಹೊರಗೆ ಹೋಗಿ ಜೋರಾಗಿ ಅತ್ತನು.
ಅದೇ ಸಮಯದಲ್ಲಿ, ಹಿರೀಸಭೆಯ ಸದಸ್ಯರು ಕಾಯಫನ ಮನೆಯಲ್ಲಿ ಯೇಸುವಿನ ನ್ಯಾಯವಿಚಾರಣೆಗಾಗಿ ಸೇರಿದ್ದರು. ಆದರೆ ಅವರು ವಿಚಾರಣೆಯ ಮೊದಲೇ ಯೇಸುವನ್ನು ಕೊಲ್ಲಲು ತೀರ್ಮಾನಿಸಿ ಬಿಟ್ಟಿದ್ದರು. ಈಗ ಕೇವಲ ತಪ್ಪು ಹೊರಿಸಲು ಒಂದು ಕಾರಣ ಹುಡುಕುತ್ತಿದ್ದರು ಅಷ್ಟೇ. ಆದರೆ ಯೇಸುವಿನಲ್ಲಿ ತಪ್ಪು ಹೊರಿಸಲು ಅವರಿಗೆ ಏನೂ ಸಿಗಲಿಲ್ಲ. ಕೊನೆಗೆ, ಕಾಯಫನು ಯೇಸುವಿಗೆ ನೇರವಾಗಿ “ನೀನು ಪವಿತ್ರ ದೇವರ ಮಗನಾದ ಕ್ರಿಸ್ತನಾ?” ಎಂದು ಕೇಳಿದನು. ಅದಕ್ಕೆ ಯೇಸು ‘ಹೌದು’ ಎಂದನು. ಆಗ ಕಾಯಫನು, “ಇದಕ್ಕಿಂತ ನಮಗೆ ಬೇರೆ ಸಾಕ್ಷಿ ಬೇಕಾ? ದೇವರ ವಿರುದ್ಧ ಮಾತಾಡಿದ್ದನ್ನ ನೀವೇ ಕೇಳಿಸ್ಕೊಂಡ್ರಿ. ನಿಮ್ಮ ತೀರ್ಮಾನ ಏನು?” ಎಂದನು. ನ್ಯಾಯಾಲಯ ‘ಯೇಸುಗೆ ಮರಣಶಿಕ್ಷೆ ಆಗ್ಲೇಬೇಕು’ ಎಂದು ತೀರ್ಪು ಹೊರಡಿಸಿತು. ಅವರು ಯೇಸುವಿನ ಕೆನ್ನೆಗೆ ಹೊಡೆದರು, ಮುಖದ ಮೇಲೆ ಉಗುಳಿದರು, ಮುಖಕ್ಕೆ ಮುಸುಕು ಹಾಕಿ ಗುದ್ದುತ್ತಾ ‘ನೀನು ಪ್ರವಾದಿಯಲ್ವಾ?’ “ನಿನ್ನನ್ನ ಯಾರು ಹೊಡೆದ್ರು ಅಂತ ಹೇಳು ನೋಡೋಣ!” ಎಂದು ಗೇಲಿ ಮಾಡಿದರು.
ಬೆಳಗಾದಾಗ, ಅವರು ಯೇಸುವನ್ನು ಯೆಹೂದಿ ನ್ಯಾಯಾಲಯದ ಮುಂದೆ ನಿಲ್ಲಿಸಿ ಮತ್ತೆ ‘ನೀನು ದೇವರ ಮಗನೋ?’ ಎಂದು ಕೇಳಿದರು. ಅದಕ್ಕೆ ಯೇಸು, ‘ನೀನೇ ಹೇಳ್ತಾ ಇದ್ದೀಯಲ್ಲ’ ಎಂದು ಹೇಳಿದನು. ನಂತರ ಅವರು ಯೇಸುವಿನ ಮೇಲೆ ದೇವರ ವಿರುದ್ಧ ಮಾತಾಡುತ್ತಿದ್ದಾನೆ ಎಂಬ ಆರೋಪ ಹಾಕಿ ರೋಮನ್ ಅಧಿಕಾರಿ ಪೊಂತ್ಯ ಪಿಲಾತನ ಬಳಿ ಕರೆದುಕೊಂಡು ಹೋದರು. ಆಮೇಲೆ ಏನಾಯ್ತು? ಬನ್ನಿ ನೋಡೋಣ.
“ನೋಡಿ, ಒಂದು ಸಮಯ ಬರುತ್ತೆ, ಆ ಸಮಯ ಈಗಾಗಲೇ ಬಂದಿದೆ. ನೀವೆಲ್ಲ ನನ್ನನ್ನ ಬಿಟ್ಟು ನಿಮ್ಮನಿಮ್ಮ ಮನೆಗೆ ಓಡಿಹೋಗ್ತೀರ. ಆದ್ರೆ ನಾನು ಒಂಟಿ ಅಲ್ಲ. ನನ್ನ ಜೊತೆ ನನ್ನ ಅಪ್ಪ ಇದ್ದಾನೆ.”—ಯೋಹಾನ 16:32
-