ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೇಸು ಸೌಲನನ್ನು ಆರಿಸಿಕೊಂಡನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಸೌಲನ ಸುತ್ತ ಬೆಳಕು ಮಿಂಚುತ್ತಿದೆ

      ಪಾಠ 96

      ಯೇಸು ಸೌಲನನ್ನು ಆರಿಸಿಕೊಂಡನು

      ಸೌಲ ಹುಟ್ಟಿದ್ದು ತಾರ್ಸ ಎಂಬಲ್ಲಿ. ಇವನು ರೋಮನ್‌ ಪ್ರಜೆಯಾಗಿದ್ದ. ಫರಿಸಾಯನಾಗಿದ್ದ ಇವನು ಯೆಹೂದಿ ನಿಯಮ ಪುಸ್ತಕದಲ್ಲಿ ಪರಿಣಿತನಾಗಿದ್ದನು. ಅವನಿಗೆ ಕ್ರೈಸ್ತರನ್ನು ಕಂಡರೆ ಆಗುತ್ತಿರಲಿಲ್ಲ. ಅವನು ಕ್ರೈಸ್ತ ಗಂಡಸರನ್ನು ಮತ್ತು ಹೆಂಗಸರನ್ನು ಮನೆಯಿಂದ ಹೊರಗೆ ಎಳೆದು ತಂದು ಜೈಲಿಗೆ ಹಾಕಿಸುತ್ತಿದ್ದನು. ಅಲ್ಲದೆ ಕೋಪಗೊಂಡ ಗುಂಪೊಂದು ಶಿಷ್ಯನಾದ ಸ್ತೆಫನನನ್ನು ಕಲ್ಲೆಸೆದು ಕೊಲ್ಲುತ್ತಿದ್ದಾಗ ಸೌಲನು ನೋಡುತ್ತಾ ನಿಂತಿದ್ದನು.

      ಅವನು ಯೆರೂಸಲೇಮಿನಲ್ಲಿರುವ ಕ್ರೈಸ್ತರನ್ನು ಜೈಲಿಗೆ ಹಾಕಿಸಿದ. ಅಷ್ಟಕ್ಕೆ ಅವನಿಗೆ ತೃಪ್ತಿಯಾಗಲಿಲ್ಲ. ದಮಸ್ಕಕ್ಕೆ ಹೋಗಿ ಅಲ್ಲಿರುವ ಕ್ರೈಸ್ತರನ್ನು ಸಹ ಹಿಂಸಿಸಲು ಮಹಾ ಪುರೋಹಿತನ ಹತ್ತಿರ ಅನುಮತಿ ಪಡೆದನು. ಅವನು ದಮಸ್ಕದ ಹತ್ತಿರ ಬಂದಾಗ ಆಕಾಶದಿಂದ ಒಂದು ಬೆಳಕು ಅವನ ಸುತ್ತಲೂ ಮಿಂಚಿತು. ಸೌಲನು ನೆಲಕ್ಕೆ ಬಿದ್ದನು. ಆಗ ಅವನಿಗೆ ‘ಸೌಲ, ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?’ ಎಂಬ ಮಾತು ಕೇಳಿಸಿತು. ಆಗ ಸೌಲನು ‘ನೀನು ಯಾರು?’ ಎಂದು ಕೇಳಿದನು. ಅದಕ್ಕೆ ‘ನಾನು ಯೇಸು. ನೀನು ದಮಸ್ಕ ಪಟ್ಟಣಕ್ಕೆ ಹೋಗು. ನೀನೇನು ಮಾಡಬೇಕಂತ ಅಲ್ಲಿ ನಿನಗೆ ಗೊತ್ತಾಗುತ್ತೆ’ ಎಂಬ ಉತ್ತರ ಕೇಳಿಸಿತು. ಕ್ಷಣದಲ್ಲೇ ಸೌಲನಿಗೆ ಕಣ್ಣು ಕಾಣಿಸದಂತಾಯಿತು. ಅವನ ಜೊತೆಯಲ್ಲಿದ್ದವರು ಅವನನ್ನು ಕೈ ಹಿಡಿದು ಊರೊಳಕ್ಕೆ ಕರೆದುಕೊಂಡು ಹೋದರು.

      ದಮಸ್ಕದಲ್ಲಿ ಅನನೀಯನೆಂಬ ನಂಬಿಗಸ್ತ ಕ್ರೈಸ್ತನಿದ್ದನು. ಯೇಸು ಅವನಿಗೆ ದರ್ಶನದಲ್ಲಿ ‘ನೀನು ನೇರ ಅನ್ನೋ ಬೀದಿಯಲ್ಲಿರೋ ಯೂದನ ಮನೆಗೆ ಹೋಗಿ ಸೌಲನನ್ನ ಭೇಟಿ ಮಾಡು’ ಎಂದನು. ಆಗ ಅನನೀಯನು ‘ಪ್ರಭು, ಅವನು ಎಂಥವನು ಅಂತ ನನಗೆ ಗೊತ್ತು. ಅವನು ನಿನ್ನ ಶಿಷ್ಯರನ್ನೆಲ್ಲಾ ಜೈಲಿಗೆ ಹಾಕಿಸ್ತಿದ್ದಾನೆ’ ಎಂದನು. ಆಗ ಯೇಸು ‘ಅವನ ಹತ್ರ ಹೋಗು. ತುಂಬ ದೇಶಗಳಿಗೆ ಸಿಹಿಸುದ್ದಿ ಸಾರೋಕೆ ನಾನು ಸೌಲನನ್ನ ಆರಿಸ್ಕೊಂಡಿದ್ದೀನಿ’ ಅಂದನು.

      ಬೆಳಕನ್ನು ನೋಡಿದ ಮೇಲೆ ಸೌಲನು ಕುರುಡನಾದನು

      ಅನನೀಯ ಸೌಲನನ್ನು ಕಂಡಾಗ ‘ಸಹೋದರ ಸೌಲ, ನಿನಗೆ ಮತ್ತೆ ಕಣ್ಣು ಕಾಣೋ ತರ ಮಾಡೋಕೆ ಯೇಸು ನನ್ನನ್ನ ಕಳಿಸಿದ್ದಾನೆ’ ಅಂದನು. ತಕ್ಷಣ ಸೌಲನಿಗೆ ಕಣ್ಣು ಕಾಣಿಸಿತು. ಸೌಲನು ಯೇಸುವಿನ ಬಗ್ಗೆ ಕಲಿತು ಆತನ ಹಿಂಬಾಲಕನಾದನು. ದೀಕ್ಷಾಸ್ನಾನ ಪಡೆದ ಸೌಲ, ಇತರ ಕ್ರೈಸ್ತರೊಂದಿಗೆ ಸಭಾಮಂದಿರಗಳಲ್ಲಿ ಸಾರಲು ಆರಂಭಿಸಿದನು. ಯೇಸುವಿನ ಬಗ್ಗೆ ಬೋಧಿಸುತ್ತಿರುವ ಸೌಲನನ್ನು ಯೆಹೂದಿಗಳು ಕಂಡಾಗ ಅವರಿಗೆ ಎಷ್ಟು ಆಶ್ಚರ್ಯವಾಗಿರಬೇಕಲ್ವಾ? ಅವರು ‘ಯೇಸುವಿನ ಶಿಷ್ಯರನ್ನ ಕ್ರೂರವಾಗಿ ಹಿಂಸಿಸ್ತಾ ಇದ್ದವನು ಇವನೇ ಅಲ್ವಾ!’ ಎಂದು ಮಾತಾಡಿಕೊಂಡರು.

      ಮೂರು ವರ್ಷ ಸೌಲನು ದಮಸ್ಕದ ಜನರಿಗೆ ಸಾರಿದನು. ಯೆಹೂದಿಗಳು ಸೌಲನನ್ನು ಎಷ್ಟು ದ್ವೇಷಿಸಿದರೆಂದರೆ ಅವನನ್ನು ಕೊಲ್ಲಲು ಸಂಚು ಮಾಡಿದರು. ಆದರೆ ಈ ವಿಚಾರ ಅಲ್ಲಿನ ಸಹೋದರರಿಗೆ ಗೊತ್ತಾಗಿ ಅವರಿಂದ ತಪ್ಪಿಸಿಕೊಳ್ಳಲು ಸೌಲನಿಗೆ ಸಹಾಯ ಮಾಡಿದರು. ಅವರು ಅವನನ್ನು ಒಂದು ಬುಟ್ಟಿಯಲ್ಲಿ ಕೂರಿಸಿ ಪಟ್ಟಣದ ಗೋಡೆಯ ಮೇಲಿಂದ ಕೆಳಗೆ ಇಳಿಸಿದರು.

      ಸೌಲನು ಯೆರೂಸಲೇಮಿಗೆ ಹೋದಾಗ ಅಲ್ಲಿನ ಸಹೋದರರು ಅವನನ್ನು ಕಂಡು ಹೆದರಿದರು. ಅಲ್ಲಿ ಬಾರ್ನಬ ಅನ್ನೋ ವ್ಯಕ್ತಿ ಇದ್ದನು, ಅವನು ತುಂಬ ದಯೆ ತೋರಿಸ್ತಿದ್ದ. ಅವನು ಸೌಲನನ್ನು ಅಪೊಸ್ತಲರ ಹತ್ತಿರ ಕರೆದುಕೊಂಡು ಬಂದು ಇವನು ನಿಜವಾಗಿಯೂ ಬದಲಾಗಿದ್ದಾನೆ ಎಂದು ಮನವರಿಕೆ ಮಾಡಿದನು. ಆಮೇಲೆ ಸೌಲನು ಯೆರೂಸಲೇಮಿನ ಸಭೆಯೊಟ್ಟಿಗೆ ಸಿಹಿಸುದ್ದಿಯನ್ನು ಹುರುಪಿನಿಂದ ಸಾರಲು ಆರಂಭಿಸಿದನು. ನಂತರ ಪೌಲನೆಂದು ಹೆಸರುವಾಸಿಯಾದನು.

      “ಕ್ರಿಸ್ತ ಯೇಸು ಪಾಪಿಗಳನ್ನ ರಕ್ಷಿಸೋಕೆ ಈ ಲೋಕಕ್ಕೆ ಬಂದನು. ಆ ಪಾಪಿಗಳಲ್ಲಿ ದೊಡ್ಡ ಪಾಪಿ ನಾನೇ.”—1 ತಿಮೊತಿ 1:15

      ಪ್ರಶ್ನೆಗಳು: ಸೌಲನನ್ನು ಕಂಡರೆ ಕ್ರೈಸ್ತರು ಏಕೆ ಹೆದರುತ್ತಿದ್ದರು? ಸೌಲ ಏಕೆ ಬದಲಾದನು?

      ಅಪೊಸ್ತಲರ ಕಾರ್ಯ 7:54–8:3; 9:1-28; 13:9; 21:40–22:15; ರೋಮನ್ನರಿಗೆ 1:1; ಗಲಾತ್ಯ 1:11-18

  • ಕೊರ್ನೇಲ್ಯನು ಪವಿತ್ರಶಕ್ತಿ ಪಡೆದನು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಪೇತ್ರನನ್ನು ಕೊರ್ನೇಲ್ಯನು ತನ್ನ ಮನೆಗೆ ಆಮಂತ್ರಿಸುತ್ತಿದ್ದಾನೆ

      ಪಾಠ 97

      ಕೊರ್ನೇಲ್ಯನು ಪವಿತ್ರಶಕ್ತಿ ಪಡೆದನು

      ಕೈಸರೈಯದಲ್ಲಿ ಒಬ್ಬ ಪ್ರಮುಖ ರೋಮನ್‌ ಸೇನಾಧಿಕಾರಿ ಇದ್ದನು. ಅವನ ಹೆಸರು ಕೊರ್ನೇಲ್ಯ. ಅವನು ಯೆಹೂದ್ಯನಲ್ಲದಿದ್ದರೂ, ಯೆಹೂದ್ಯರು ಅವನನ್ನು ತುಂಬ ಗೌರವಿಸುತ್ತಿದ್ದರು. ಅವನು ಬಡ ಜನರಿಗೆ ಮತ್ತು ಕಷ್ಟದಲ್ಲಿರುವವರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದನು. ಕೊರ್ನೇಲ್ಯನು ಯೆಹೋವನ ಮೇಲೆ ನಂಬಿಕೆಯಿಟ್ಟಿದ್ದನು ಮತ್ತು ಯಾವಾಗಲೂ ಪ್ರಾರ್ಥಿಸುತ್ತಿದ್ದನು. ಒಂದು ದಿನ, ದೇವದೂತನೊಬ್ಬ ಕೊರ್ನೇಲ್ಯನಿಗೆ ಕಾಣಿಸಿಕೊಂಡು, ‘ನಿನ್ನ ಪ್ರಾರ್ಥನೆ ದೇವ್ರಿಗೆ ಕೇಳಿಸಿದೆ. ಈಗ ಸ್ವಲ್ಪ ಜನ್ರನ್ನ ಯೊಪ್ಪಕ್ಕೆ ಕಳಿಸಿ ಪೇತ್ರನಿಗೆ ನಿನ್ನ ಹತ್ರ ಬರೋಕೆ ಹೇಳು’ ಎಂದನು. ತಕ್ಷಣ, ಕೊರ್ನೇಲ್ಯನು ಮೂವರು ಸೇವಕರನ್ನು ಯೊಪ್ಪಕ್ಕೆ ಕಳುಹಿಸಿದನು. ಅದು ದಕ್ಷಿಣದಲ್ಲಿ 50 ಕಿಲೊಮೀಟರ್‌ ದೂರದಲ್ಲಿತ್ತು.

      ಅದೇ ವೇಳೆ ಯೊಪ್ಪದಲ್ಲಿ, ಪೇತ್ರನು ಒಂದು ದರ್ಶನವನ್ನು ನೋಡಿದನು. ಅದರಲ್ಲಿ ಯೆಹೂದ್ಯರಿಗೆ ತಿನ್ನಬಾರದೆಂದು ಹೇಳಿದ ಪ್ರಾಣಿಗಳನ್ನು ಕಂಡನು ಮತ್ತು ಅದನ್ನು ತಿನ್ನುವಂತೆ ಅವನಿಗೆ ಹೇಳಲಾಯಿತು. ಅದಕ್ಕೆ ಪೇತ್ರನು, ‘ಅಪವಿತ್ರ ಆಗಿರೋದನ್ನ ನಾನು ಯಾವತ್ತೂ ತಿಂದಿಲ್ಲ’ ಎಂದನು. ಆಗ ಆ ಧ್ವನಿ ಅವನಿಗೆ, ‘ದೇವರು ಶುದ್ಧ ಮಾಡಿರೋದನ್ನ ನೀನು ಅಶುದ್ಧ ಅನ್ನೋದನ್ನ ನಿಲ್ಲಿಸು’ ಎಂದಿತು. ಅಲ್ಲದೆ, ‘ಮನೆಯ ಬಾಗಿಲ ಹತ್ರ ಮೂರು ಜನ ನಿಂತಿದ್ದಾರೆ. ನೀನು ಅವ್ರ ಜೊತೆ ಹೋಗು’ ಎಂದೂ ಹೇಳಿತು. ಪೇತ್ರನು ಮನೆಯ ಬಾಗಿಲ ಹತ್ತಿರ ಹೋಗಿ, ಅವರು ಬಂದಿರುವುದು ಯಾಕೆಂದು ಕೇಳಿದನು. ಅದಕ್ಕೆ ಅವರು, ‘ರೋಮನ್‌ ಸೇನಾಧಿಕಾರಿ ಕೊರ್ನೇಲ್ಯ ನಮ್ಮನ್ನ ಕಳಿಸಿದ್ದಾನೆ. ನೀನು ಕೈಸರೈಯದಲ್ಲಿರೋ ಅವನ ಮನೆಗೆ ಬರಬೇಕು’ ಎಂದರು. ಆ ರಾತ್ರಿ ತನ್ನ ಮನೆಯಲ್ಲಿ ಉಳಿದುಕೊಳ್ಳುವಂತೆ ಪೇತ್ರನು ಅವರಿಗೆ ಹೇಳಿದನು. ಮರುದಿನ, ಯೊಪ್ಪದಲ್ಲಿದ್ದ ಕೆಲವು ಸಹೋದರರನ್ನು ಕರೆದುಕೊಂಡು ಪೇತ್ರನು ಆ ಪುರುಷರೊಂದಿಗೆ ಕೈಸರೈಯಕ್ಕೆ ಹೋದನು.

      ಪೇತ್ರನನ್ನು ನೋಡಿದಾಗ ಕೊರ್ನೇಲ್ಯನು ಅವನ ಕಾಲಿಗೆ ಬಿದ್ದನು. ಆಗ ಪೇತ್ರನು, ‘ಎದ್ದೇಳು, ನಾನೂ ನಿನ್ನ ತರ ಒಬ್ಬ ಮನುಷ್ಯ ಅಷ್ಟೇ! ಯೆಹೂದ್ಯರು ಬೇರೆ ಜನಾಂಗದವರ ಮನೆಗೆ ಹೋಗದಿದ್ರೂ ನಾನು ನಿನ್ನ ಮನೆಗೆ ಬರುವಂತೆ ದೇವರು ನನಗೆ ಹೇಳಿದನು. ದಯವಿಟ್ಟು ನನ್ನನ್ನ ಯಾಕೆ ಕರಿಸಿದೆ ಅಂತ ಹೇಳು’ ಎಂದನು.

      ಅದಕ್ಕೆ ಕೊರ್ನೇಲ್ಯನು, ‘ನಾಲ್ಕು ದಿನಗಳ ಹಿಂದೆ ನಾನು ದೇವ್ರಿಗೆ ಪ್ರಾರ್ಥಿಸ್ತಾ ಇದ್ದಾಗ ಒಬ್ಬ ದೇವದೂತ ನನಗೆ ಕಾಣಿಸಿಕೊಂಡು ನಿನ್ನನ್ನ ಕರಿಸುವಂತೆ ಹೇಳಿದನು. ದಯವಿಟ್ಟು ಯೆಹೋವನ ಬಗ್ಗೆ ನಮಗೆ ಕಲಿಸು’ ಎಂದನು. ಆಗ ಪೇತ್ರನು, ‘ದೇವರು ಭೇದಭಾವ ಮಾಡಲ್ಲ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. ಆತನನ್ನ ಆರಾಧಿಸೋಕೆ ಇಷ್ಟಪಡೋ ಯಾರನ್ನಾದ್ರೂ ಆತನು ಆರಿಸ್ಕೊಳ್ತಾನೆ’ ಎಂದನು. ಪೇತ್ರನು ಯೇಸುವಿನ ಬಗ್ಗೆ ಅನೇಕ ವಿಷಯಗಳನ್ನು ಅವರಿಗೆ ಕಲಿಸಿದನು. ನಂತರ, ಕೊರ್ನೇಲ್ಯನ ಮೇಲೆ ಮತ್ತು ಅವನೊಂದಿಗೆ ಇದ್ದ ಜನರ ಮೇಲೆ ಪವಿತ್ರಶಕ್ತಿ ಬಂತು. ಆಗ, ಎಲ್ಲರೂ ದೀಕ್ಷಾಸ್ನಾನ ಪಡೆದುಕೊಂಡರು.

      “ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”—ಅಪೊಸ್ತಲರ ಕಾರ್ಯ 10:35.

      ಪ್ರಶ್ನೆಗಳು: ಅಶುದ್ಧವಾದ ಪ್ರಾಣಿಗಳನ್ನು ತಿನ್ನಲು ಪೇತ್ರನು ಏಕೆ ನಿರಾಕರಿಸಿದನು? ಯೆಹೂದ್ಯರಲ್ಲದ ಒಬ್ಬನ ಮನೆಗೆ ಹೋಗುವಂತೆ ಯೆಹೋವನು ಪೇತ್ರನಿಗೆ ಏಕೆ ಹೇಳಿದನು?

      ಅಪೊಸ್ತಲರ ಕಾರ್ಯ 10:1-48

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ