-
ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 98
ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು
ಇಡೀ ಭೂಮಿಯಲ್ಲಿ ಸಿಹಿಸುದ್ದಿಯನ್ನು ಸಾರಬೇಕೆಂಬ ಯೇಸುವಿನ ಆಜ್ಞೆಯನ್ನು ಅಪೊಸ್ತಲರು ಪಾಲಿಸಿದರು. ಕ್ರಿ.ಶ. 47ರಲ್ಲಿ ಅಂತಿಯೋಕ್ಯದಲ್ಲಿದ್ದ ಸಹೋದರರು ಪೌಲ ಮತ್ತು ಬಾರ್ನಬರನ್ನು ಅನೇಕ ಊರುಗಳಿಗೆ ಸಾರಲು ಕಳುಹಿಸಿದರು. ಇವರಿಬ್ಬರೂ ಏಷ್ಯಾ ಮೈನರ್‌ನ ದೆರ್ಬೆ, ಲುಸ್ತ್ರ, ಇಕೋನ್ಯ ಮುಂತಾದ ಸ್ಥಳಗಳಿಗೆ ಹೋಗಿ ಹುರುಪಿನಿಂದ ಸಾರಿದರು.
ಪೌಲ ಮತ್ತು ಬಾರ್ನಬರು ಶ್ರೀಮಂತರು-ಬಡವರು, ಚಿಕ್ಕವರು-ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರಿಗೂ ಸಾರಿದರು. ಅನೇಕರು ಯೇಸುವಿನ ಬಗ್ಗೆ ಸತ್ಯವನ್ನು ಸ್ವೀಕರಿಸಿದರು. ಪೌಲ ಮತ್ತು ಬಾರ್ನಬರು ಸೆರ್ಗ್ಯ ಪೌಲನೆಂಬ ಸೈಪ್ರಸ್ ಪ್ರಾಂತ್ಯದ ರಾಜ್ಯಪಾಲನಿಗೆ ಸಾರಿದಾಗ ಒಬ್ಬ ಮಂತ್ರವಾದಿ ಅವರನ್ನು ತಡೆಯಲು ಪ್ರಯತ್ನಿಸಿದನು. ಆಗ ಪೌಲನು ಆ ಮಂತ್ರವಾದಿಗೆ, ‘ಯೆಹೋವ ನಿನಗೆ ಶಿಕ್ಷೆ ಕೊಡ್ತಾನೆ’ ಎಂದನು. ತಕ್ಷಣ, ಆ ಮಂತ್ರವಾದಿ ಕುರುಡನಾದನು. ಇದನ್ನು ನೋಡಿದ ರಾಜ್ಯಪಾಲ ಸೆರ್ಗ್ಯ ಪೌಲನು ಕ್ರೈಸ್ತನಾದನು.
ಪೌಲ ಮತ್ತು ಬಾರ್ನಬರು ಮನೆಯಿಂದ ಮನೆಗೆ, ಮಾರುಕಟ್ಟೆಗಳಲ್ಲಿ, ಬೀದಿಗಳಲ್ಲಿ ಮತ್ತು ಸಭಾಮಂದಿರಗಳಲ್ಲಿ, ಹೀಗೆ ಎಲ್ಲಾ ಕಡೆಗಳಲ್ಲಿ ಸಾರಿದರು. ಅವರು ಲುಸ್ತ್ರದಲ್ಲಿ ಒಬ್ಬ ಕುಂಟನನ್ನು ವಾಸಿ ಮಾಡಿದಾಗ ಅದನ್ನು ನೋಡಿದವರು ಪೌಲ ಮತ್ತು ಬಾರ್ನಬರನ್ನು ದೇವರು ಎಂದು ಭಾವಿಸಿ ಆರಾಧಿಸಲು ಆರಂಭಿಸಿದರು. ಆದರೆ ಪೌಲ-ಬಾರ್ನಬರು, ‘ದೇವರನ್ನ ಮಾತ್ರ ಆರಾಧಿಸಿ, ನಾವೂ ನಿಮ್ಮ ತರಾನೇ ಮನುಷ್ಯರು’ ಎಂದು ಹೇಳಿ ಆ ಜನರನ್ನು ತಡೆದರು. ನಂತರ, ಕೆಲವು ಯೆಹೂದಿಗಳು ಬಂದು ಜನರನ್ನು ಪೌಲನ ವಿರುದ್ಧ ಎತ್ತಿಕಟ್ಟಿದರು. ಆಗ ಜನರು ಪೌಲನ ಮೇಲೆ ಕಲ್ಲೆಸೆದರು. ಅವನನ್ನು ಪಟ್ಟಣದಿಂದ ಹೊರಕ್ಕೆ ಎಳೆದುಕೊಂಡು ಹೋಗಿ ಅವನು ಸತ್ತನೆಂದು ಭಾವಿಸಿ ಅಲ್ಲೇ ಬಿಟ್ಟು ಹೋದರು. ಆದರೆ, ಪೌಲನು ಇನ್ನೂ ಬದುಕಿದ್ದನು. ತಕ್ಷಣ, ಸಹೋದರರು ಅವನ ರಕ್ಷಣೆಗೆ ಬಂದರು. ಆಮೇಲೆ ಅವನನ್ನು ಪಟ್ಟಣದೊಳಕ್ಕೆ ಕರೆದುಕೊಂಡು ಹೋದರು. ನಂತರ, ಪೌಲನು ಅಂತಿಯೋಕ್ಯಕ್ಕೆ ಹಿಂದಿರುಗಿದನು.
ಕ್ರಿ.ಶ. 49ರಲ್ಲಿ ಪೌಲನು ಇನ್ನೊಂದು ಪ್ರಯಾಣ ಮಾಡಿದನು. ಏಷ್ಯಾ ಮೈನರ್‌ನಲ್ಲಿರುವ ಸಹೋದರರನ್ನು ನೋಡಲು ಹೋದನು. ನಂತರ, ಯೂರೋಪಿನಷ್ಟು ದೂರದೂರಿಗೆ ಸಿಹಿಸುದ್ದಿ ಸಾರಿದನು. ಅವನು ಅಥೆನ್ಸ್, ಎಫೆಸ, ಫಿಲಿಪ್ಪಿ, ಥೆಸಲೋನಿಕ ಮತ್ತು ಇತರ ಅನೇಕ ಊರುಗಳಿಗೆ ಹೋದನು. ಸೀಲ, ಲೂಕ ಮತ್ತು ಯುವ ತಿಮೊತಿ ಸಹ ಪೌಲನ ಜೊತೆಯಲ್ಲಿ ಹೋದರು. ಅವರೆಲ್ಲರೂ ಸೇರಿ ಅನೇಕ ಸಭೆಗಳನ್ನು ಸ್ಥಾಪಿಸಿದರು ಮತ್ತು ಸಹೋದರರನ್ನು ಬಲಪಡಿಸಿದರು. ಪೌಲನು ಒಂದುವರೆ ವರ್ಷ ಕೊರಿಂಥದಲ್ಲೇ ಉಳಿದು ಅಲ್ಲಿನ ಸಹೋದರರನ್ನು ಬಲಪಡಿಸಿದನು. ಅವನು ಸಾರುತ್ತಾ, ಕಲಿಸುತ್ತಾ ಅನೇಕ ಸಭೆಗಳಿಗೆ ಪತ್ರಗಳನ್ನು ಬರೆದನು. ಅವನು ಡೇರೆ ಹೊಲಿಯುವ ಕೆಲಸ ಸಹ ಮಾಡಿದನು. ಸಮಯಾನಂತರ, ಪೌಲನು ಅಂತಿಯೋಕ್ಯಕ್ಕೆ ಹಿಂದಿರುಗಿದನು.
ಕ್ರಿ.ಶ. 52ರಲ್ಲಿ ಪೌಲನು ಮೂರನೇ ಮಿಷನರಿ ಪ್ರಯಾಣ ಮಾಡಿದನು. ಏಷ್ಯಾ ಮೈನರ್‌ನಿಂದ ಆರಂಭಿಸಿ ಉತ್ತರದ ಫಿಲಿಪ್ಪಿಗೆ ಮತ್ತು ನಂತರ ಕೊರಿಂಥಕ್ಕೆ ಹೋದನು. ಪೌಲನು ಎಫೆಸದಲ್ಲಿ ಕಲಿಸುತ್ತಾ, ವಾಸಿಮಾಡುತ್ತಾ, ಸಭೆಗೆ ಸಹಾಯ ಮಾಡುತ್ತಾ ಅನೇಕ ವರ್ಷ ಅಲ್ಲೇ ಕಳೆದನು. ಅವನು ಶಾಲೆಯ ಸಭಾಂಗಣದಲ್ಲಿ ಪ್ರತಿದಿನ ಭಾಷಣ ನೀಡಿದನು. ಅನೇಕರು ಅದನ್ನು ಕೇಳಿ ತಮ್ಮ ಜೀವನ ರೀತಿಯನ್ನು ಬದಲಾಯಿಸಿಕೊಂಡರು. ಹೀಗೆ ಅನೇಕ ಊರುಗಳಲ್ಲಿ ಸಾರಿದ ನಂತರ ಪೌಲನು ಯೆರೂಸಲೇಮಿಗೆ ಹಿಂದಿರುಗಿದನು.
“ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ.”—ಮತ್ತಾಯ 28:19
-
-
ಸತ್ಯ ಕಲಿತ ಜೈಲಿನ ಅಧಿಕಾರಿಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 99
ಸತ್ಯ ಕಲಿತ ಜೈಲಿನ ಅಧಿಕಾರಿ
ಫಿಲಿಪ್ಪಿಯಲ್ಲಿ ಕೆಟ್ಟ ದೇವದೂತನ ನಿಯಂತ್ರಣದಲ್ಲಿದ್ದ ಒಬ್ಬ ಹುಡುಗಿ ಇದ್ದಳು. ಆ ಕೆಟ್ಟ ದೇವದೂತನ ಸಹಾಯದಿಂದ ಅವಳು ಭವಿಷ್ಯ ಹೇಳ್ತಾ ಇದ್ದಳು. ಇದರಿಂದ ಅವಳ ಯಜಮಾನರಿಗೆ ತುಂಬಾ ಆದಾಯ ಬರುತ್ತಿತ್ತು. ಪೌಲ ಮತ್ತು ಸೀಲರು ಫಿಲಿಪ್ಪಿಗೆ ಬಂದಾಗ ಅವಳು ಅನೇಕ ದಿನಗಳವರೆಗೆ ಅವರನ್ನು ಹಿಂಬಾಲಿಸುತ್ತಿದ್ದಳು. ಕೆಟ್ಟ ದೇವದೂತನ ಪ್ರಭಾವದಿಂದ ಅವಳು, “ಇವರು ಸರ್ವೋನ್ನತ ದೇವ್ರ ಸೇವಕ್ರು” ಎಂದು ಕೂಗುತ್ತಿದ್ದಳು. ಕೊನೆಗೆ ಪೌಲನು ಅವಳಲ್ಲಿದ್ದ ಕೆಟ್ಟ ದೇವದೂತನಿಗೆ ‘ಯೇಸು ಕ್ರಿಸ್ತನ ಹೆಸ್ರಲ್ಲಿ ಅವಳನ್ನ ಬಿಟ್ಟು ಹೋಗು’ ಎಂದನು. ತಕ್ಷಣ ಆ ಕೆಟ್ಟ ದೇವದೂತ ಅವಳನ್ನು ಬಿಟ್ಟು ಹೋದನು.
ಈ ವಿಷಯ ಆ ಹುಡುಗಿಯ ಯಜಮಾನರಿಗೆ ತಿಳಿದಾಗ ಅವಳಿಂದ ಇನ್ನು ಮುಂದೆ ತಮಗೆ ಯಾವ ಆದಾಯವು ಬರುವುದಿಲ್ಲ ಎಂದು ತಿಳಿದು ತುಂಬಾ ಕೋಪಗೊಂಡರು. ಅವರು ಪೌಲ ಮತ್ತು ಸೀಲರನ್ನು ನ್ಯಾಯಾಧೀಶರ ಹತ್ತಿರ ಎಳೆದುಕೊಂಡು ಬಂದು ‘ಇವರು ಕಾನೂನನ್ನ ಮುರೀತಿದ್ದಾರೆ ಮತ್ತು ಪಟ್ಟಣದಲ್ಲಿ ಗಲಿಬಿಲಿ ಹುಟ್ಟಿಸ್ತಾ ಇದ್ದಾರೆ’ ಎಂದರು. ಆಗ ನ್ಯಾಯಾಧೀಶ ಪೌಲ-ಸೀಲರನ್ನು ಹೊಡೆಸಿ ಜೈಲಿಗೆ ಹಾಕಲು ಹೇಳಿದನು. ಜೈಲಿನ ಅಧಿಕಾರಿ ಅವರನ್ನು ಜೈಲಿನ ಕತ್ತಲ ಕೋಣೆಗೆ ಹಾಕಿ ಬೇಡಿಗಳಿಂದ ಬಂಧಿಸಿದನು.
ಜೈಲಿನಲ್ಲಿ ಪೌಲ ಮತ್ತು ಸೀಲರು ಯೆಹೋವನಿಗೆ ಸ್ತುತಿ ಗೀತೆಗಳನ್ನು ಹಾಡುತ್ತಿದ್ದಾಗ ಜೈಲಿನಲ್ಲಿದ್ದ ಇತರರು ಕೇಳಿಸಿಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಒಂದು ದೊಡ್ಡ ಭೂಕಂಪವಾಯಿತು. ಜೈಲಿನ ಬಾಗಿಲು ತೆರೆದುಕೊಂಡಿತು. ಕೈದಿಗಳ ಬೇಡಿಗಳು ಕಳಚಿಬಿದ್ದವು. ಆಗ ಜೈಲಿನ ಅಧಿಕಾರಿ ಒಳಗೆ ಓಡಿಹೋಗಿ ನೋಡಿದಾಗ ಜೈಲಿನ ಬಾಗಿಲು ತೆರೆದಿತ್ತು. ಕೈದಿಗಳು ತಪ್ಪಿಸಿಕೊಂಡು ಹೋಗಿರಬಹುದೆಂದು ಭಾವಿಸಿದನು. ತನ್ನ ಕತ್ತಿ ತೆಗೆದುಕೊಂಡು ಪ್ರಾಣ ಕಳೆದುಕೊಳ್ಳಲು ಮುಂದಾದನು.
ಆಗ ಪೌಲನು ‘ಹಾಗೆ ಮಾಡಬೇಡ. ನಾವೆಲ್ಲ ಇಲ್ಲೇ ಇದ್ದೀವಿ’ ಅಂದನು. ಜೈಲಿನ ಅಧಿಕಾರಿ ಓಡಿಹೋಗಿ ಪೌಲ ಸೀಲರ ಮುಂದೆ ಬಿದ್ದನು. ‘ನನಗೆ ರಕ್ಷಣೆ ಸಿಗಬೇಕಂದ್ರೆ ನಾನೇನು ಮಾಡ್ಬೇಕು?’ ಎಂದು ಅವರ ಹತ್ತಿರ ಕೇಳಿದನು. ಅದಕ್ಕೆ ಅವರು ‘ಯೇಸು ಪ್ರಭು ಮೇಲೆ ನಂಬಿಕೆ ಇಡು. ಆಗ ನಿನಗೂ ನಿನ್ನ ಕುಟುಂಬಕ್ಕೂ ರಕ್ಷಣೆ ಸಿಗುತ್ತೆ’ ಅಂದರು. ಆಮೇಲೆ ಪೌಲ ಮತ್ತು ಸೀಲ ಅವನಿಗೆ ಯೆಹೋವನ ವಾಕ್ಯವನ್ನು ಬೋಧಿಸಿದರು. ಅವನು ಮತ್ತು ಅವನ ಮನೆಯವರು ದೀಕ್ಷಾಸ್ನಾನ ಪಡೆದುಕೊಂಡರು.
“ಜನ ನಿಮ್ಮನ್ನ ಬಂಧಿಸ್ತಾರೆ. ಹಿಂಸೆ ಮಾಡ್ತಾರೆ. ಸಭಾಮಂದಿರಕ್ಕೆ ಕರ್ಕೊಂಡು ಹೋಗ್ತಾರೆ. ನ್ಯಾಯಾಲಯದ ಮೆಟ್ಟಿಲು ಹತ್ತಿಸ್ತಾರೆ. ನನ್ನಿಂದಾಗಿ ನಿಮ್ಮನ್ನ ರಾಜ್ಯಪಾಲರ ಹತ್ರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ. ಇದ್ರಿಂದ ನಿಮಗೆ ಸಾಕ್ಷಿ ಕೊಡೋ ಅವಕಾಶ ಸಿಗುತ್ತೆ.”—ಲೂಕ 21:12, 13
-