ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
“ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು.”—ವಿಮೋಚನಕಾಂಡ 33:13.
1, 2. (ಎ) ಐಗುಪ್ತ್ಯನೊಬ್ಬನು ಒಬ್ಬ ಇಬ್ರಿಯನನ್ನು ದುರುಪಚರಿಸುತ್ತಿದ್ದದ್ದನ್ನು ಮೋಶೆಯು ಕಂಡಾಗ ಅವನು ಹಾಗೆ ಏಕೆ ಪ್ರತಿಕ್ರಿಯಿಸಿದನು? (ಬಿ) ಯೆಹೋವನ ಸೇವೆಯಲ್ಲಿ ಉಪಯೋಗಿಸಲ್ಪಡಲಿಕ್ಕಾಗಿ ಮೋಶೆಯು ಏನನ್ನು ಕಲಿಯುವ ಅಗತ್ಯವಿತ್ತು?
ಮೋಶೆಯು ಫರೋಹನ ಮನೆವಾರ್ತೆಯಲ್ಲಿ ಬೆಳೆಸಲ್ಪಟ್ಟಿದ್ದನು ಮತ್ತು ಐಗುಪ್ತ ದೇಶದ ರಾಜಮನೆತನದವರಿಂದ ಮಾನ್ಯಮಾಡಲ್ಪಡುತ್ತಿದ್ದ ಸರ್ವವಿದ್ಯೆಗಳಲ್ಲಿಯೂ ಶಿಕ್ಷಿತನಾಗಿದ್ದನು. ಆದರೂ, ತಾನೊಬ್ಬ ಐಗುಪ್ತ್ಯನಲ್ಲ ಎಂಬುದನ್ನು ಮೋಶೆಯು ಮನಗಂಡನು. ಅವನು ಇಬ್ರಿಯ ಹೆತ್ತವರಿಗೆ ಹುಟ್ಟಿದವನಾಗಿದ್ದನು. ಅವನು 40 ವರ್ಷದವನಾಗಿದ್ದಾಗ, ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರು ಪಡುತ್ತಿದ್ದ ಪಾಡನ್ನು ನೋಡಲಿಕ್ಕಾಗಿ ಹೋದನು. ಐಗುಪ್ತ್ಯನೊಬ್ಬನು ಇಬ್ರಿಯರಲ್ಲಿ ಒಬ್ಬನನ್ನು ದುರುಪಚರಿಸುತ್ತಿರುವುದನ್ನು ಮೋಶೆಯು ಕಂಡಾಗ, ಅವನು ಅಲಕ್ಷ್ಯಭಾವವನ್ನು ತೋರಿಸಲಿಲ್ಲ. ಆ ಐಗುಪ್ತ್ಯನನ್ನು ಹೊಡೆದು ಕೊಂದುಹಾಕಿದನು. ಮೋಶೆಯು ಯೆಹೋವನ ಜನರ ಪಕ್ಷವನ್ನು ವಹಿಸುವ ಆಯ್ಕೆಯನ್ನು ಮಾಡಿದನು ಮತ್ತು ತನ್ನ ಸಹೋದರರಿಗೆ ಬಿಡುಗಡೆಯನ್ನು ಉಂಟುಮಾಡಲು ದೇವರು ತನ್ನನ್ನು ಉಪಯೋಗಿಸುತ್ತಿದ್ದಾನೆಂದು ನೆನಸಿದನು. (ಅ. ಕೃತ್ಯಗಳು 7:21-25; ಇಬ್ರಿಯ 11:24, 25) ನಡೆದ ಸಂಗತಿಯು ತಿಳಿದುಬಂದಾಗ ಐಗುಪ್ತದ ರಾಜಮನೆತನವು ಮೋಶೆಯನ್ನು ಒಬ್ಬ ದಂಗೆಕೋರನಾಗಿ ಪರಿಗಣಿಸಿತು, ಮತ್ತು ಅವನು ತನ್ನ ಜೀವವನ್ನು ಕಾಪಾಡಿಕೊಳ್ಳಲಿಕ್ಕಾಗಿ ಪಲಾಯನಗೈಯಬೇಕಾಯಿತು. (ವಿಮೋಚನಕಾಂಡ 2:11-15) ಒಂದುವೇಳೆ ಮೋಶೆಯು ದೇವರಿಂದ ಉಪಯೋಗಿಸಲ್ಪಡಬೇಕಾಗಿದ್ದರೆ, ಅವನು ಯೆಹೋವನ ಮಾರ್ಗಗಳನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಬೇಕಾಗಿತ್ತು. ಮೋಶೆಯಲ್ಲಿ ಕಲಿಯುವ ಮನೋಭಾವವಿತ್ತೊ?—ಕೀರ್ತನೆ 25:9.
2 ಮುಂದಿನ 40 ವರ್ಷಗಳ ವರೆಗೆ ಮೋಶೆಯು ಒಬ್ಬ ದೇಶಭ್ರಷ್ಟನಾಗಿ ಮತ್ತು ಕುರುಬನಾಗಿ ಜೀವಿಸಿದನು. ತನ್ನ ಇಬ್ರಿಯ ಸಹೋದರರು ತನ್ನನ್ನು ಗಣ್ಯಮಾಡಲಿಲ್ಲವೆಂಬ ಕಾರಣಕ್ಕಾಗಿ ಮೋಶೆಯು ಕಹಿಮನೋಭಾವವನ್ನು ತಾಳುವ ಬದಲಿಗೆ, ದೇವರು ಏನನ್ನು ಅನುಮತಿಸಿದನೋ ಅದಕ್ಕೆ ತನ್ನನ್ನು ಅಧೀನಪಡಿಸಿಕೊಂಡನು. ಯಾವುದೇ ಮನ್ನಣೆ ಸಿಗದೆ ಅನೇಕ ವರ್ಷಗಳು ಗತಿಸಿದವಾದರೂ, ಯೆಹೋವನು ತನ್ನನ್ನು ರೂಪಿಸುವಂತೆ ಮೋಶೆಯು ಅನುಮತಿಸಿದನು. ಅವನು ಸಮಯಾನಂತರ, ತನ್ನ ಕುರಿತಾದ ವೈಯಕ್ತಿಕ ಅಭಿಪ್ರಾಯವನ್ನಲ್ಲ ಬದಲಾಗಿ ದೇವರ ಪವಿತ್ರಾತ್ಮದ ಪ್ರಭಾವದ ಕೆಳಗೆ ಬರೆದುದು, “ಆ ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಅಂದರೆ ಬಹುದೀನನಾಗಿದ್ದನು. (ಅರಣ್ಯಕಾಂಡ 12:3) ಯೆಹೋವನು ಮೋಶೆಯನ್ನು ಗಮನಾರ್ಹವಾದ ವಿಧಗಳಲ್ಲಿ ಉಪಯೋಗಿಸಿದನು. ನಾವು ಸಹ ದೈನ್ಯಭಾವವನ್ನು ರೂಢಿಸಿಕೊಳ್ಳಲು ಪ್ರಯತ್ನಿಸುವಲ್ಲಿ, ಯೆಹೋವನು ನಮ್ಮನ್ನು ಆಶೀರ್ವದಿಸುವನು.—ಚೆಫನ್ಯ 2:3.
ಒಂದು ನೇಮಕವು ಕೊಡಲ್ಪಟ್ಟದ್ದು
3, 4. (ಎ) ಯೆಹೋವನು ಮೋಶೆಗೆ ಯಾವ ನೇಮಕವನ್ನು ಕೊಟ್ಟನು? (ಬಿ) ಮೋಶೆಗೆ ಯಾವ ಬೆಂಬಲವು ಒದಗಿಸಲ್ಪಟ್ಟಿತು?
3 ಒಂದು ದಿನ ಯೆಹೋವನ ಪ್ರತಿನಿಧಿಯಾಗಿದ್ದ ಒಬ್ಬ ದೇವದೂತನು ಸೀನಾಯಿ ದ್ವೀಪಕಲ್ಪದಲ್ಲಿದ್ದ ಹೋರೇಬ್ ಬೆಟ್ಟದ ಬಳಿ ಮೋಶೆಯೊಂದಿಗೆ ಮಾತಾಡಿದನು. ಅಲ್ಲಿ ಮೋಶೆಗೆ ಹೀಗೆ ಹೇಳಲಾಯಿತು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ . . . ನಡಿಸಿಕೊಂಡು ಹೋಗುವದಕ್ಕೂ ಇಳಿದುಬಂದಿದ್ದೇನೆ.” (ವಿಮೋಚನಕಾಂಡ 3:2, 7, 8) ಈ ಸಂಬಂಧದಲ್ಲಿ ದೇವರು ಮೋಶೆಗೆ ಒಂದು ಕೆಲಸವನ್ನು ಒಪ್ಪಿಸಿದನು, ಆದರೆ ಇದನ್ನು ಅವನು ಯೆಹೋವನು ನಿರ್ದೇಶಿಸಿದ ರೀತಿಯಲ್ಲೇ ಮಾಡಬೇಕಾಗಿತ್ತು.
4 ಯೆಹೋವನ ದೂತನು ಮುಂದುವರಿಸುತ್ತಾ ಹೇಳಿದ್ದು: “ನನ್ನ ಜನರಾಗಿರುವ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡುವದಕ್ಕೆ ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ ಬಾ.” ಇದಕ್ಕೆ ಮೋಶೆಯು ಹಿಂಜರಿದನು. ತಾನು ಇದಕ್ಕೆ ಅರ್ಹನಾಗಿದ್ದೇನೆಂದು ಅವನಿಗೆ ಅನಿಸಲಿಲ್ಲ, ಮತ್ತು ಅವನ ಸ್ವಂತ ಸಾಮರ್ಥ್ಯದಲ್ಲಿ ಅವನು ಅದನ್ನು ಮಾಡಲು ಅರ್ಹನಾಗಿರಲಿಲ್ಲ. ಆದರೂ, ಯೆಹೋವನು ಮೋಶೆಗೆ “ನಾನೇ ನಿನ್ನ ಸಂಗಡ ಇರುವೆನು” ಎಂಬ ಆಶ್ವಾಸನೆಯನ್ನು ನೀಡಿದನು. (ವಿಮೋಚನಕಾಂಡ 3:10-12) ತಾನು ನಿಜವಾಗಿಯೂ ದೇವರಿಂದಲೇ ಕಳುಹಿಸಲ್ಪಟ್ಟಿದ್ದೇನೆ ಎಂಬುದನ್ನು ರುಜುಪಡಿಸುವಂಥ ರುಜುವಾತುಗಳಾಗಿ ಕಾರ್ಯನಡಿಸುವ ಅದ್ಭುತಕರ ಸೂಚಕಕಾರ್ಯಗಳನ್ನು ಮಾಡುವಂತೆ ಯೆಹೋವನು ಮೋಶೆಗೆ ಶಕ್ತಿನೀಡಿದನು. ಮೋಶೆಯ ಸಹೋದರನಾದ ಆರೋನನು ವದನಕನಾಗಿ ಅವನ ಜೊತೆ ಹೋಗಲಿದ್ದನು. ಏನು ಹೇಳಬೇಕು, ಏನು ಮಾಡಬೇಕು ಎಂಬುದನ್ನು ಯೆಹೋವನು ಅವರಿಗೆ ಬೋಧಿಸಲಿದ್ದನು. (ವಿಮೋಚನಕಾಂಡ 4:1-17) ಮೋಶೆಯು ಈ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಲಿದ್ದನೊ?
5. ಇಸ್ರಾಯೇಲ್ಯರ ಮನೋಭಾವವು ಮೋಶೆಗೆ ಒಂದು ಸಮಸ್ಯೆಯಾಗಿತ್ತೇಕೆ?
5 ಆರಂಭದಲ್ಲಿ ಇಸ್ರಾಯೇಲ್ಯರ ಹಿರಿಯರು ಮೋಶೆ ಮತ್ತು ಆರೋನರನ್ನು ನಂಬಿದರು. (ವಿಮೋಚನಕಾಂಡ 4:29-31) ಆದರೆ ಸ್ವಲ್ಪ ಸಮಯಾನಂತರ, ಫರೋಹನು ಮತ್ತು ಅವನ ಸೇವಕರು ತಮ್ಮನ್ನು ನೋಡಿ “ಹೇಸಿಕೊಳ್ಳುವಂತೆ” ಮಾಡಿದ್ದಕ್ಕಾಗಿ “ಇಸ್ರಾಯೇಲ್ ಮೇಸ್ತ್ರಿಗಳು” ಮೋಶೆಯನ್ನು ಮತ್ತು ಅವನ ಸಹೋದರನನ್ನು ದೂಷಿಸಿದರು. (ವಿಮೋಚನಕಾಂಡ 5:19-21; 6:9) ಇಸ್ರಾಯೇಲ್ಯರು ಐಗುಪ್ತ ದೇಶವನ್ನು ಬಿಟ್ಟುಹೋಗುತ್ತಿರುವಾಗ, ಐಗುಪ್ತ್ಯರ ರಥಗಳು ತಮ್ಮನ್ನು ಬೆನ್ನಟ್ಟುತ್ತಿರುವುದನ್ನು ನೋಡಿ ಅವರು ಭಯಭೀತರಾದರು. ಇಸ್ರಾಯೇಲ್ಯರ ಮುಂದೆ ಕೆಂಪು ಸಮುದ್ರ ಮತ್ತು ಹಿಂದೆ ಯುದ್ಧದ ರಥಗಳು ಇದ್ದುದರಿಂದ, ತಾವು ಮಧ್ಯೆ ಸಿಕ್ಕಿಕೊಂಡಿದ್ದೇವೆ ಎಂದು ಅವರಿಗನಿಸಿತು ಮತ್ತು ಅವರು ಮೋಶೆಯನ್ನು ನಿಂದಿಸಿದರು. ನೀವಾಗಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ಇಸ್ರಾಯೇಲ್ಯರ ಬಳಿ ದೋಣಿಗಳು ಇರಲಿಲ್ಲವಾದರೂ, ಯೆಹೋವನ ನಿರ್ದೇಶನದ ಮೇರೆಗೆ ಮೋಶೆಯು ಜನರಿಗೆ ಮುಂದೆ ಹೊರಡಲಿಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಉತ್ತೇಜಿಸಿದನು. ತದನಂತರ ದೇವರು ಕೆಂಪು ಸಮುದ್ರದ ನೀರುಗಳನ್ನು ಹಿಂದಕ್ಕೆ ಸರಿಸಿದನು, ಮತ್ತು ಇಸ್ರಾಯೇಲ್ಯರು ಹಾದುಹೋಗಲು ಸಾಧ್ಯವಾಗುವಂತೆ ಸಮುದ್ರತಳವು ಒಣನೆಲವಾಗಿ ಪರಿಣಮಿಸಿತು.—ವಿಮೋಚನಕಾಂಡ 14:1-22.
ವಿಮೋಚನೆಗಿಂತಲೂ ಹೆಚ್ಚು ಪ್ರಾಮುಖ್ಯವಾದ ಒಂದು ವಿವಾದಾಂಶ
6. ಮೋಶೆಗೆ ನೇಮಕವನ್ನು ಕೊಡುವಾಗ ಯೆಹೋವನು ಏನನ್ನು ಒತ್ತಿಹೇಳಿದನು?
6 ಮೋಶೆಗೆ ಈ ನೇಮಕವನ್ನು ಕೊಡುವಾಗ ಯೆಹೋವನು ತನ್ನ ಹೆಸರಿನ ಪ್ರಮುಖತೆಯನ್ನು ಒತ್ತಿಹೇಳಿದನು. ಆ ಹೆಸರಿಗೆ ಮತ್ತು ಅದು ಯಾರನ್ನು ಪ್ರತಿನಿಧಿಸುತ್ತದೋ ಆ ವ್ಯಕ್ತಿಗೆ ಗೌರವವನ್ನು ತೋರಿಸುವುದು ಅತ್ಯಾವಶ್ಯಕವಾಗಿತ್ತು. ತನ್ನ ಹೆಸರಿನ ಕುರಿತು ತಿಳಿಸುವಾಗ ಯೆಹೋವನು ಮೋಶೆಗೆ ಹೇಳಿದ್ದು: “ನಾನು ಏನಾಗಿ ಪರಿಣಮಿಸುವೆನೋ ಅದಾಗಿಯೇ ಪರಿಣಮಿಸುತ್ತೇನೆ.” (NW) ಅಷ್ಟುಮಾತ್ರವಲ್ಲ, ಮೋಶೆಯು ಇಸ್ರಾಯೇಲ್ಯರಿಗೆ ಹೀಗೆ ಹೇಳಬೇಕಾಗಿತ್ತು: “ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ.” ಯೆಹೋವನು ಕೂಡಿಸಿದ್ದು: “ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲಾತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.” (ವಿಮೋಚನಕಾಂಡ 3:13-15) ಇಂದಿಗೂ ದೇವರು ಭೂಮಿಯಾದ್ಯಂತ ಇರುವ ತನ್ನ ಸೇವಕರಿಗೆ ಯೆಹೋವ ಎಂಬ ತನ್ನ ಹೆಸರಿನಿಂದಲೇ ಪ್ರಸಿದ್ಧನಾಗಿದ್ದಾನೆ.—ಯೆಶಾಯ 12:4, 5; 43:10-12.
7. ಫರೋಹನ ಸೊಕ್ಕಿನ ಎದುರಿನಲ್ಲಿಯೂ ಏನನ್ನು ಮಾಡುವಂತೆ ದೇವರು ಮೋಶೆಯನ್ನು ಹುರಿದುಂಬಿಸಿದನು?
7 ಮೋಶೆಆರೋನರು ಫರೋಹನ ಸನ್ನಿಧಿಗೆ ಹೋಗಿ, ಯೆಹೋವನ ಹೆಸರಿನಲ್ಲಿ ತಮ್ಮ ಸಂದೇಶವನ್ನು ತಿಳಿಯಪಡಿಸಿದರು. ಆದರೆ ಫರೋಹನು ಸೊಕ್ಕಿನಿಂದ ಹೇಳಿದ್ದು: “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ ಇಸ್ರಾಯೇಲ್ಯರು ಹೊರಟುಹೋಗುವದಕ್ಕೆ ನಾನು ಒಪ್ಪುವದೇ ಇಲ್ಲ.” (ವಿಮೋಚನಕಾಂಡ 5:1, 2) ಹೀಗೆ ತಾನು ಕಲ್ಲುಮನಸ್ಸಿನವನೂ ವಂಚಕನೂ ಆಗಿದ್ದೇನೆ ಎಂಬುದನ್ನು ಫರೋಹನು ರುಜುಪಡಿಸಿದನಾದರೂ, ಪುನಃ ಪುನಃ ದೈವಿಕ ಸಂದೇಶಗಳನ್ನು ಅವನಿಗೆ ತಿಳಿಯಪಡಿಸುವಂತೆ ಯೆಹೋವನು ಮೋಶೆಯನ್ನು ಹುರಿದುಂಬಿಸಿದನು. (ವಿಮೋಚನಕಾಂಡ 7:14-16, 20-23; 8:1, 2, 20) ಫರೋಹನು ಕೋಪದಿಂದ ಕೆರಳುತ್ತಿದ್ದಾನೆ ಎಂಬುದು ಮೋಶೆಗೆ ಗೊತ್ತಾಗುತ್ತಿತ್ತು. ಹೀಗಿರುವಾಗ, ಅವನನ್ನು ಪುನಃ ಎದುರಿಸುವುದರಿಂದ ಏನಾದರೂ ಒಳಿತಾಗಲಿತ್ತೊ? ಇಸ್ರಾಯೇಲ್ಯರು ವಿಮೋಚನೆಗಾಗಿ ತವಕದಿಂದ ಎದುರುನೋಡುತ್ತಿದ್ದರು. ಆದರೆ ಫರೋಹನು ಅವರನ್ನು ಬಿಡುಗಡೆಗೊಳಿಸುವುದಿಲ್ಲ ಎಂಬ ನಿರ್ಧಾರದಲ್ಲಿ ಅಚಲನಾಗಿದ್ದನು. ನೀವು ಮೋಶೆಯ ಸ್ಥಾನದಲ್ಲಿರುತ್ತಿದ್ದರೆ ಏನು ಮಾಡುತ್ತಿದ್ದಿರಿ?
8. ಫರೋಹನನ್ನು ಒಳಗೂಡಿದ್ದ ಸನ್ನಿವೇಶದೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯಿಂದ ಯಾವ ಪ್ರಯೋಜನವು ದೊರಕಿತು, ಮತ್ತು ಆ ಘಟನೆಗಳು ನಮ್ಮ ಮೇಲೆ ಹೇಗೆ ಪ್ರಭಾವ ಬೀರಬೇಕು?
8 ಮೋಶೆಯು ಇನ್ನೊಂದು ಸಂದೇಶವನ್ನು ಸಹ ತಿಳಿಯಪಡಿಸಿದನು. ಅವನಂದದ್ದು: “ಇಬ್ರಿಯರ ದೇವರಾದ ಯೆಹೋವನು ಆಜ್ಞಾಪಿಸುವದೇನಂದರೆ—ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು.” ದೇವರು ಇನ್ನೂ ತಿಳಿಯಪಡಿಸಿದ್ದು: “ನಾನು ಕೈಯೆತ್ತಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಅಂಟುರೋಗದಿಂದ ಸಾಯಿಸಬಹುದಾಗಿತ್ತು; ಆಗ ನೀನು ಈ ವರೆಗೆ ಭೂಮಿಯಲ್ಲಿ ಇರದಂತೆ ನಿರ್ಮೂಲವಾಗುತ್ತಿದ್ದಿ. ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.” (ವಿಮೋಚನಕಾಂಡ 9:13-16) ಕಲ್ಲುಮನಸ್ಸಿನವನಾದ ಫರೋಹನ ವಿರುದ್ಧ ನ್ಯಾಯತೀರ್ಪನ್ನು ಬರಮಾಡುವ ಮೂಲಕ ಯೆಹೋವನು, ತನ್ನನ್ನು ಅಗೌರವಿಸುವವರೆಲ್ಲರಿಗೆ ಎಚ್ಚರಿಕೆ ನೀಡುವಂಥ ರೀತಿಯಲ್ಲಿ ತನ್ನ ಶಕ್ತಿಯನ್ನು ತೋರ್ಪಡಿಸಲು ಉದ್ದೇಶಿಸಿದನು. ಇವರಲ್ಲಿ ಪಿಶಾಚನಾದ ಸೈತಾನನು ಸಹ ಒಳಗೂಡಿದ್ದು, ಸಮಯಾನಂತರ ಯೇಸು ಕ್ರಿಸ್ತನು ಇವನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 14:30; ರೋಮಾಪುರ 9:17-24) ಮುಂತಿಳಿಸಲ್ಪಟ್ಟಂತೆಯೇ ಯೆಹೋವನ ಹೆಸರು ಭೂಮಿಯಾದ್ಯಂತ ಘೋಷಿಸಲ್ಪಟ್ಟಿತು. ದೇವರ ದೀರ್ಘಶಾಂತಿಯು ಇಸ್ರಾಯೇಲ್ಯರ ಮತ್ತು ಆತನನ್ನು ಆರಾಧಿಸುವುದರಲ್ಲಿ ಅವರೊಂದಿಗೆ ಜೊತೆಗೂಡಿದ ಮಿಶ್ರ ಜನಸ್ತೋಮದ ಸಂರಕ್ಷಣೆಗೆ ನಡಿಸಿತು. (ವಿಮೋಚನಕಾಂಡ 9:20, 21; 12:37, 38) ಅಂದಿನಿಂದ, ಯೆಹೋವನ ಹೆಸರಿನ ಘೋಷಣೆಯು ಸತ್ಯ ಆರಾಧನೆಯನ್ನು ಸ್ವೀಕರಿಸಿರುವಂಥ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ತಂದಿದೆ.
ಮೊಂಡರಾದ ಜನರೊಂದಿಗೆ ವ್ಯವಹರಿಸುವುದು
9. ಮೋಶೆಯ ಸ್ವಂತ ಜನರೇ ಯೆಹೋವನಿಗೆ ಹೇಗೆ ಅಗೌರವವನ್ನು ತೋರಿಸಿದರು?
9 ಇಬ್ರಿಯರಿಗೆ ದೇವರ ಹೆಸರು ತಿಳಿದಿತ್ತು. ಅವರೊಂದಿಗೆ ಮಾತಾಡುತ್ತಿರುವಾಗ ಮೋಶೆಯು ಆ ಹೆಸರನ್ನು ಉಪಯೋಗಿಸಿದನು, ಆದರೆ ಅವರು ಯಾವಾಗಲೂ ಆ ಹೆಸರು ಯಾರಿಗೆ ಸೇರಿದ್ದಾಗಿತ್ತೋ ಆ ವ್ಯಕ್ತಿಗೆ ಯೋಗ್ಯವಾದ ಗೌರವವನ್ನು ತೋರಿಸಲಿಲ್ಲ. ಯೆಹೋವನು ಅದ್ಭುತಕರವಾದ ರೀತಿಯಲ್ಲಿ ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ವಿಮೋಚಿಸಿದ ಬಳಿಕ, ಸೂಕ್ತವಾದ ಕುಡಿಯುವ ನೀರು ಆ ಕೂಡಲೆ ಅವರಿಗೆ ದೊರಕದಿದ್ದಾಗ ಏನು ಸಂಭವಿಸಿತು? ಅವರು ಮೋಶೆಯ ವಿರುದ್ಧ ಗುಣುಗುಟ್ಟಿದರು. ತದನಂತರ ಅವರು ಆಹಾರದ ವಿಷಯದಲ್ಲಿ ದೂರಿದರು. ಅವರ ಗುಣುಗುಟ್ಟುವಿಕೆಯು ಕೇವಲ ತನ್ನ ವಿರುದ್ಧ ಮತ್ತು ಆರೋನನ ವಿರುದ್ಧವಲ್ಲ, ಬದಲಾಗಿ ಯೆಹೋವನ ವಿರುದ್ಧವಾಗಿತ್ತೆಂದು ಮೋಶೆಯು ಅವರಿಗೆ ಎಚ್ಚರಿಕೆ ನೀಡಿದನು. (ವಿಮೋಚನಕಾಂಡ 15:22-24; 16:2-12) ಸೀನಾಯಿಬೆಟ್ಟದಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು ಮತ್ತು ಇದರೊಂದಿಗೆ ಪ್ರಕೃತ್ಯತೀತ ಘಟನೆಗಳು ಪ್ರದರ್ಶಿಸಲ್ಪಟ್ಟವು. ಆದರೂ ಜನರು ಅವಿಧೇಯರಾಗಿ, ಆರಾಧನೆಗಾಗಿ ಒಂದು ಚಿನ್ನದ ಬಸವನನ್ನು ಮಾಡಿಕೊಂಡರು ಮತ್ತು ತಾವು “ಯೆಹೋವನಿಗೆ ಉತ್ಸವ”ವನ್ನು ನಡೆಸುತ್ತಿದ್ದೇವೆ ಎಂದು ಹೇಳಿಕೊಂಡರು.—ವಿಮೋಚನಕಾಂಡ 32:1-9.
10. ವಿಮೋಚನಕಾಂಡ 33:13ರಲ್ಲಿ ದಾಖಲಿಸಲ್ಪಟ್ಟಿರುವ ಮೋಶೆಯ ಬೇಡಿಕೆಯು ಕ್ರೈಸ್ತ ಮೇಲ್ವಿಚಾರಕರಿಗೆ ಇಂದು ವಿಶೇಷವಾಗಿ ಆಸಕ್ತಿಕರವಾಗಿದೆ ಏಕೆ?
10 ಆಜ್ಞೆಗೆ ಬೊಗ್ಗದವರು ಎಂದು ಸ್ವತಃ ಯೆಹೋವನೇ ವರ್ಣಿಸಿದಂಥ ಜನರೊಂದಿಗೆ ಮೋಶೆಯು ಹೇಗೆ ವ್ಯವಹರಿಸಲಿದ್ದನು? ಮೋಶೆಯು ಯೆಹೋವನಿಗೆ ಹೀಗೆ ಬಿನ್ನವಿಸಿಕೊಂಡನು: “ನನಗೆ ನಿನ್ನ ದಯೆ ದೊರಕಿದ್ದಾದರೆ ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು; ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿದಿರುವದು.” (ವಿಮೋಚನಕಾಂಡ 33:13) ಯೆಹೋವನ ಆಧುನಿಕ ದಿನದ ಸಾಕ್ಷಿಗಳನ್ನು ಪರಾಮರಿಸುವಾಗ, ಕ್ರೈಸ್ತ ಮೇಲ್ವಿಚಾರಕರು ಇಸ್ರಾಯೇಲ್ ಜನಾಂಗಕ್ಕಿಂತ ಹೆಚ್ಚು ದೀನಭಾವವಿರುವ ಮಂದೆಯನ್ನು ಪರಿಪಾಲಿಸುತ್ತಾರೆ. ಆದರೂ, ಕ್ರೈಸ್ತ ಮೇಲ್ವಿಚಾರಕರು “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು” ಎಂದು ಪ್ರಾರ್ಥಿಸುತ್ತಾರೆ. (ಕೀರ್ತನೆ 25:4) ಯೆಹೋವನ ಮಾರ್ಗಗಳ ಕುರಿತಾದ ಜ್ಞಾನವು, ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ಮತ್ತು ಆತನ ವ್ಯಕ್ತಿತ್ವಕ್ಕೆ ಅನುಗುಣವಾಗಿ ಸನ್ನಿವೇಶಗಳೊಂದಿಗೆ ವ್ಯವಹರಿಸುವಂತೆ ಮೇಲ್ವಿಚಾರಕರಿಗೆ ಸಹಾಯಮಾಡುತ್ತದೆ.
ಯೆಹೋವನು ತನ್ನ ಜನರಿಂದ ಏನನ್ನು ನಿರೀಕ್ಷಿಸುತ್ತಾನೆ?
11. ಯೆಹೋವನು ಮೋಶೆಗೆ ಯಾವ ನಿರ್ದೇಶನಗಳನ್ನು ನೀಡಿದನು, ಮತ್ತು ನಾವು ಅವುಗಳಲ್ಲಿ ಆಸಕ್ತರಾಗಿದ್ದೇವೆ ಏಕೆ?
11 ತನ್ನ ಜನರಿಂದ ಯೆಹೋವನು ಏನನ್ನು ನಿರೀಕ್ಷಿಸುತ್ತಾನೆ ಎಂಬುದು ಸೀನಾಯಿಬೆಟ್ಟದಲ್ಲಿ ಬಾಯಿಮಾತಿನ ಮೂಲಕ ಪ್ರಕಟಿಸಲ್ಪಟ್ಟಿತು. ತದನಂತರ ಮೋಶೆಯು ಲಿಖಿತ ರೂಪದಲ್ಲಿ ದಶಾಜ್ಞೆಗಳನ್ನು ಒಳಗೊಂಡಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಪಡೆದುಕೊಂಡನು. ಅವನು ಬೆಟ್ಟದಿಂದ ಕೆಳಗಿಳಿಯುತ್ತಿದ್ದಾಗ, ಇಸ್ರಾಯೇಲ್ಯರು ಚಿನ್ನವನ್ನು ಕರಗಿಸಿ ಮಾಡಿದ ಬಸವನ ಮೂರ್ತಿಯನ್ನು ಆರಾಧಿಸುವುದನ್ನು ನೋಡಿದನು ಮತ್ತು ಕೋಪದಿಂದ ಅವನು ಕಲ್ಲಿನ ಹಲಿಗೆಗಳನ್ನು ನೆಲಕ್ಕೆ ಹಾಕಿ ಒಡೆದುಬಿಟ್ಟನು. ಪುನಃ ಯೆಹೋವನು ಈ ಬಾರಿ ಸ್ವತಃ ಮೋಶೆಯೇ ಸಿದ್ಧಪಡಿಸಿದ ಕಲ್ಲಿನ ಹಲಿಗೆಗಳ ಮೇಲೆ ದಶಾಜ್ಞೆಗಳನ್ನು ಬರೆದನು. (ವಿಮೋಚನಕಾಂಡ 32:19; 34:1) ಈ ಆಜ್ಞೆಗಳು ಪ್ರಥಮ ಬಾರಿ ಕೊಡಲ್ಪಟ್ಟಂದಿನಿಂದ ಸ್ವಲ್ಪವೂ ಬದಲಾಗಿರಲಿಲ್ಲ. ಹೀಗೆ ಮೋಶೆಯು ಅವುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕಾಗಿತ್ತು. ತಾನು ಯಾವ ರೀತಿಯ ವ್ಯಕ್ತಿಯಾಗಿದ್ದೇನೆ ಎಂಬುದನ್ನು ಸಹ ದೇವರು ಮೋಶೆಗೆ ಬಲವತ್ತಾಗಿ ಸ್ಪಷ್ಟಪಡಿಸಿದನು, ಹೀಗೆ ಯೆಹೋವನ ಪ್ರತಿನಿಧಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಆತನು ಮೋಶೆಗೆ ತೋರಿಸಿದನು. ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲವಾದರೂ, ಯೆಹೋವನು ಮೋಶೆಗೆ ಏನು ಹೇಳಿದನೋ ಅದರಲ್ಲಿ ಅನೇಕ ಮೂಲಭೂತ ತತ್ತ್ವಗಳು ಒಳಗೂಡಿದ್ದು, ಅವು ಬದಲಾಗಿಲ್ಲ ಮತ್ತು ಯೆಹೋವನನ್ನು ಆರಾಧಿಸುವವರೆಲ್ಲರಿಗೆ ಅವು ಈಗಲೂ ಅನ್ವಯವಾಗುತ್ತವೆ. (ರೋಮಾಪುರ 6:14; 13:8-10) ಇವುಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.
12. ಯೆಹೋವನು ಸಂಪೂರ್ಣ ಭಕ್ತಿಯನ್ನು ಅಗತ್ಯಪಡಿಸುವ ಸಂಗತಿಯು ಇಸ್ರಾಯೇಲ್ಯರ ಮೇಲೆ ಹೇಗೆ ಪರಿಣಾಮ ಬೀರಿದ್ದಿರಬೇಕು?
12 ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸಿರಿ. ತನಗೇ ಸಂಪೂರ್ಣ ಭಕ್ತಿಯು ಸಲ್ಲಬೇಕೆಂದು ಯೆಹೋವನು ತಿಳಿಯಪಡಿಸಿದಾಗ ಇಸ್ರಾಯೇಲ್ ಜನಾಂಗವು ಅಲ್ಲಿ ಹಾಜರಿತ್ತು. (ವಿಮೋಚನಕಾಂಡ 20:2-5) ಯೆಹೋವನೇ ಸತ್ಯ ದೇವರು ಎಂಬುದಕ್ಕೆ ಇಸ್ರಾಯೇಲ್ಯರು ಸಾಕಷ್ಟು ಪುರಾವೆಗಳನ್ನು ನೋಡಿದ್ದರು. (ಧರ್ಮೋಪದೇಶಕಾಂಡ 4:33-35) ಬೇರೆ ಜನಾಂಗಗಳು ಏನೇ ಮಾಡುತ್ತಿರಲಿ, ತನ್ನ ಜನರ ನಡುವೆ ಮಾತ್ರ ಯಾವುದೇ ರೀತಿಯ ಮೂರ್ತಿಪೂಜೆಯನ್ನು ಅಥವಾ ಮಾಟಮಂತ್ರವನ್ನು ತಾನು ಸಹಿಸುವವನಲ್ಲ ಎಂದು ಯೆಹೋವನು ಸ್ಪಷ್ಟವಾಗಿ ತಿಳಿಯಪಡಿಸಿದ್ದನು. ಅವರು ಆತನಿಗೆ ಸಲ್ಲಿಸುತ್ತಿದ್ದ ಭಕ್ತಿಯು ಕೇವಲ ಹರಕೆ ಸಂದಾಯವಾಗಿರಬಾರದಿತ್ತು. ಅವರೆಲ್ಲರೂ ತಮ್ಮ ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ ಮತ್ತು ಪೂರ್ಣಶಕ್ತಿಯಿಂದ ಯೆಹೋವನನ್ನು ಪ್ರೀತಿಸಬೇಕಾಗಿತ್ತು. (ಧರ್ಮೋಪದೇಶಕಾಂಡ 6:5, 6) ಇದು ಅವರ ಮಾತು, ಅವರ ನಡತೆ, ಒಟ್ಟಿನಲ್ಲಿ ಅವರ ಜೀವಿತದ ಪ್ರತಿಯೊಂದು ಅಂಶವನ್ನೂ ಒಳಗೂಡಿತ್ತು. (ಯಾಜಕಕಾಂಡ 20:27; 24:15, 16; 26:1) ಯೆಹೋವನು ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುತ್ತಾನೆ ಎಂಬುದನ್ನು ಯೇಸು ಕ್ರಿಸ್ತನು ಸಹ ಸ್ಪಷ್ಟಪಡಿಸಿದನು.—ಮಾರ್ಕ 12:28-30; ಲೂಕ 4:8.
13. ಇಸ್ರಾಯೇಲ್ಯರು ದೇವರಿಗೆ ಕಟ್ಟುನಿಟ್ಟಾದ ವಿಧೇಯತೆಯನ್ನು ಏಕೆ ತೋರಿಸಬೇಕಾಗಿತ್ತು, ಮತ್ತು ಆತನಿಗೆ ವಿಧೇಯರಾಗಲು ಯಾವುದು ನಮ್ಮನ್ನು ಪ್ರಚೋದಿಸಬೇಕು? (ಪ್ರಸಂಗಿ 12:13)
13 ಯೆಹೋವನ ಆಜ್ಞೆಗಳಿಗೆ ಕಟ್ಟುನಿಟ್ಟಾಗಿ ವಿಧೇಯರಾಗಿರಿ. ಇಸ್ರಾಯೇಲ್ಯರು ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಗೆ ತರಲ್ಪಟ್ಟಾಗ ಆತನಿಗೆ ಕಟ್ಟುನಿಟ್ಟಾಗಿ ವಿಧೇಯರಾಗುತ್ತೇವೆ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು ಎಂದು ಅವರಿಗೆ ಜ್ಞಾಪಕಹುಟ್ಟಿಸುವ ಅಗತ್ಯವಿತ್ತು. ಬಹಳಷ್ಟು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಅವರು ಆನಂದಿಸುತ್ತಿದ್ದರಾದರೂ, ಯಾವ ವಿಷಯಗಳಲ್ಲಿ ಯೆಹೋವನು ಅವರಿಗೆ ಆಜ್ಞೆಗಳನ್ನು ನೀಡಿದ್ದನೋ ಆ ವಿಷಯಗಳಲ್ಲಿ ಅವರು ಕಟ್ಟುನಿಟ್ಟಾಗಿ ವಿಧೇಯರಾಗಬೇಕಿತ್ತು. ಹೀಗೆ ಮಾಡುವುದು ದೇವರಿಗಾಗಿರುವ ಅವರ ಪ್ರೀತಿಯ ಪುರಾವೆಯನ್ನು ನೀಡುತ್ತಿತ್ತು ಮತ್ತು ಅವರಿಗೂ ಅವರ ಸಂತತಿಯವರಿಗೂ ಪ್ರಯೋಜನ ತರುತ್ತಿತ್ತು, ಏಕೆಂದರೆ ಯೆಹೋವನು ಏನನ್ನು ಅಗತ್ಯಪಡಿಸಿದನೋ ಅದೆಲ್ಲವೂ ಅವರ ಒಳಿತಿಗಾಗಿಯೇ ಆಗಿತ್ತು.—ವಿಮೋಚನಕಾಂಡ 19:5-8; ಧರ್ಮೋಪದೇಶಕಾಂಡ 5:27-33; 11:22, 23.
14. ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳಿಗೆ ಆದ್ಯತೆ ನೀಡುವುದರ ಪ್ರಮುಖತೆಯನ್ನು ದೇವರು ಇಸ್ರಾಯೇಲ್ಯರಿಗೆ ಹೇಗೆ ಒತ್ತಿಹೇಳಿದನು?
14 ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ನೀಡಿರಿ. ಇಸ್ರಾಯೇಲ್ ಜನಾಂಗವು, ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಸ್ವಲ್ಪವೂ ಸಮಯ ಮತ್ತು ಶಕ್ತಿಯು ಉಳಿಯದಿರುವಷ್ಟರ ಮಟ್ಟಿಗೆ ಭೌತಿಕ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿ ತಲ್ಲೀನವಾಗಿರಬಾರದಿತ್ತು. ಇಸ್ರಾಯೇಲ್ಯರು ಕ್ಷುಲ್ಲಕವಾದ ಬೆನ್ನಟ್ಟುವಿಕೆಗಳಿಗೆ ತಮ್ಮ ಜೀವಿತಗಳನ್ನು ಮುಡಿಪಾಗಿರಿಸಬಾರದಿತ್ತು. ಯೆಹೋವನು ಪವಿತ್ರವಾಗಿ ಪರಿಗಣಿಸಿದ ನಿಗದಿತ ಸಮಯವನ್ನು ಪ್ರತಿ ವಾರ ಬದಿಗಿರಿಸಿದನು; ಈ ಸಮಯವನ್ನು ಅವರು ಸಂಪೂರ್ಣವಾಗಿ ಸತ್ಯ ದೇವರ ಆರಾಧನೆಗೆ ಸಂಬಂಧಿಸಿದ ಚಟುವಟಿಕೆಗಾಗಿ ಉಪಯೋಗಿಸಬೇಕಾಗಿತ್ತು. (ವಿಮೋಚನಕಾಂಡ 35:1-3; ಅರಣ್ಯಕಾಂಡ 15:32-36) ಪ್ರತಿ ವರ್ಷ, ನಿರ್ದಿಷ್ಟ ಹಬ್ಬಗಳಿಗಾಗಿ ಹೆಚ್ಚಿನ ಸಮಯವನ್ನು ಬದಿಗಿರಿಸಬೇಕಾಗಿತ್ತು. (ಯಾಜಕಕಾಂಡ 23:4-44) ಇವು ಯೆಹೋವನ ಪರಾಕ್ರಮಕೃತ್ಯಗಳ ಕುರಿತು ಚರ್ಚಿಸಲು, ಆತನ ಮಾರ್ಗಗಳ ಕುರಿತು ಜ್ಞಾಪಿಸಲ್ಪಡಲು ಮತ್ತು ಆತನ ಎಲ್ಲ ಒಳ್ಳೇತನಕ್ಕಾಗಿ ಆತನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವಕಾಶಗಳನ್ನು ಒದಗಿಸಲಿದ್ದವು. ಜನರು ಯೆಹೋವನಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾ ಹೋದಂತೆ, ದೇವರ ಕಡೆಗಿನ ಅವರ ಭಯ ಮತ್ತು ಪ್ರೀತಿಯು ಹೆಚ್ಚುತ್ತಾ ಹೋಗುತ್ತಿತ್ತು ಮತ್ತು ಆತನ ಮಾರ್ಗಗಳಲ್ಲಿ ನಡೆಯುವಂತೆ ಇದು ಅವರಿಗೆ ಸಹಾಯವನ್ನು ನೀಡುತ್ತಿತ್ತು. (ಧರ್ಮೋಪದೇಶಕಾಂಡ 10:12, 13) ಆ ಉಪದೇಶಗಳಲ್ಲಿ ಒಳಗೂಡಿಸಲ್ಪಟ್ಟಿರುವ ಉಪಯುಕ್ತಕರ ಮೂಲತತ್ತ್ವಗಳು ಇಂದು ಯೆಹೋವನ ಸೇವಕರಿಗೂ ಪ್ರಯೋಜನಾರ್ಹವಾಗಿವೆ.—ಇಬ್ರಿಯ 10:24, 25.
ಯೆಹೋವನ ಗುಣಗಳನ್ನು ಗಣ್ಯಮಾಡುವುದು
15. (ಎ) ಯೆಹೋವನ ಗುಣಗಳಿಗಾಗಿರುವ ಗಣ್ಯತೆಯು ಮೋಶೆಗೆ ಏಕೆ ಪ್ರಯೋಜನದಾಯಕವಾಗಿತ್ತು? (ಬಿ) ಯೆಹೋವನ ಪ್ರತಿಯೊಂದು ಗುಣಗಳ ಕುರಿತು ಗಹನವಾಗಿ ಆಲೋಚಿಸಲು ಯಾವ ಪ್ರಶ್ನೆಗಳು ನಮಗೆ ಸಹಾಯಮಾಡಬಹುದು?
15 ಯೆಹೋವನ ಗುಣಗಳಿಗಾಗಿರುವ ಗಣ್ಯತೆಯು ಸಹ ಜನರೊಂದಿಗೆ ವ್ಯವಹರಿಸುವುದರಲ್ಲಿ ಮೋಶೆಗೆ ಸಹಾಯ ನೀಡಲಿತ್ತು. ವಿಮೋಚನಕಾಂಡ 34:5-7, ದೇವರು ಮೋಶೆಯ ಎದುರಾಗಿ ಹೋಗುತ್ತಾ ಹೀಗೆ ಪ್ರಕಟಿಸಿದನೆಂದು ತಿಳಿಸುತ್ತದೆ: “ಯೆಹೋವ, ಯೆಹೋವ ಕನಿಕರವೂ [ಕರುಣಾಳುವೂ] ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಕೊಡುವವನು.” ಈ ಮಾತುಗಳ ಕುರಿತು ಧ್ಯಾನಿಸಲು ಸಮಯವನ್ನು ತೆಗೆದುಕೊಳ್ಳಿ. ಸ್ವತಃ ಹೀಗೆ ಕೇಳಿಕೊಳ್ಳಿ: ‘ಪ್ರತಿಯೊಂದು ಗುಣದ ಅರ್ಥ ಏನಾಗಿದೆ? ಯೆಹೋವನು ಅದನ್ನು ಹೇಗೆ ತೋರಿಸುತ್ತಾನೆ? ಕ್ರೈಸ್ತ ಮೇಲ್ವಿಚಾರಕರು ಈ ಗುಣವನ್ನು ಹೇಗೆ ತೋರಿಸಸಾಧ್ಯವಿದೆ? ನಮ್ಮಲ್ಲಿ ಪ್ರತಿಯೊಬ್ಬರ ಕೃತ್ಯಗಳ ಮೇಲೆ ಈ ನಿರ್ದಿಷ್ಟ ಗುಣವು ಹೇಗೆ ಪ್ರಭಾವ ಬೀರಬೇಕು?’ ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.
16. ದೇವರ ಕರುಣೆಗಾಗಿರುವ ನಮ್ಮ ಗಣ್ಯತೆಯನ್ನು ನಾವು ಹೇಗೆ ಗಾಢಗೊಳಿಸಬಹುದು, ಮತ್ತು ಹೀಗೆ ಮಾಡುವುದು ಪ್ರಾಮುಖ್ಯವೇಕೆ?
16 ಯೆಹೋವನು “ಕರುಣಾಳುವೂ ದಯೆಯೂ ಉಳ್ಳ ದೇವರು.” ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್) ಎಂಬ ಪರಾಮರ್ಶನ ಗ್ರಂಥವು ನಿಮ್ಮ ಬಳಿ ಇರುವುದಾದರೆ, “ಮರ್ಸಿ” (ಕರುಣೆ) ಎಂಬ ಶೀರ್ಷಿಕೆಯ ಕೆಳಗೆ ಅದು ಏನು ಹೇಳುತ್ತದೆ ಎಂಬುದನ್ನು ಓದಬಾರದೇಕೆ? ಅಥವಾ ವಾಚ್ ಟವರ್ ಪ್ರಕಾಶನಗಳ ವಿಷಯಸೂಚಿ (ಇಂಗ್ಲಿಷ್) ಇಲ್ಲವೆ ವಾಚ್ಟವರ್ ಲೈಬ್ರರಿ (ಸಿಡಿ-ರಾಮ್)a ಕಂಪ್ಯೂಟರ್ ಪ್ರೊಗ್ರಾಮ್ನ ಸಹಾಯದಿಂದ ಈ ವಿಷಯವಸ್ತುವಿನ ಕುರಿತು ಸಂಶೋಧನೆಯನ್ನು ಮಾಡಿ. ಕರುಣೆಗೆ ಸೂಚಿತವಾಗಿರುವ ಶಾಸ್ತ್ರವಚನಗಳನ್ನು ಕಂಡುಕೊಳ್ಳಲಿಕ್ಕಾಗಿ ಕನ್ಕಾರ್ಡೆನ್ಸ್ ಅನ್ನು ಉಪಯೋಗಿಸಿರಿ. ಕೆಲವೊಮ್ಮೆ ಯೆಹೋವನ ಕರುಣೆಯು ಶಿಕ್ಷೆಯನ್ನು ಕಡಿಮೆಮಾಡುವಂತೆ ಅನುಮತಿಸುವುದರ ಜೊತೆಗೆ, ಕೋಮಲ ಸಹಾನುಭೂತಿಯನ್ನೂ ಒಳಗೂಡಿರುತ್ತದೆ ಎಂಬುದನ್ನು ನೀವು ನೋಡುವಿರಿ. ದೇವರು ತನ್ನ ಜನರಿಗೆ ಒಳಿತನ್ನು ಮಾಡಲಿಕ್ಕಾಗಿ ಕಾರ್ಯನಡಿಸುವಂತೆ ಕರುಣೆಯು ಆತನನ್ನು ಪ್ರಚೋದಿಸುತ್ತದೆ. ಇದಕ್ಕೆ ಪುರಾವೆ ಯಾವುದೆಂದರೆ, ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಪ್ರಯಾಣಿಸುತ್ತಿದ್ದಾಗ ದೇವರು ಅವರ ಶಾರೀರಿಕ ಮತ್ತು ಆಧ್ಯಾತ್ಮಿಕ ಆವಶ್ಯಕತೆಗಳಿಗಾಗಿ ಒದಗಿಸುವಿಕೆಯನ್ನು ಮಾಡಿದನು. (ಧರ್ಮೋಪದೇಶಕಾಂಡ 1:30-33; 8:4) ತಪ್ಪುಗಳು ಮಾಡಲ್ಪಟ್ಟಾಗ ಯೆಹೋವನು ಕರುಣೆಯಿಂದಲೇ ಕ್ಷಮಾಪಣೆಯನ್ನು ನೀಡಿದನು. ತನ್ನ ಪುರಾತನ ಜನರಿಗೆ ಆತನು ಕರುಣೆಯನ್ನು ತೋರಿಸಿದನು. ಹೀಗಿರುವಾಗ, ಆತನ ಆಧುನಿಕ ದಿನದ ಸೇವಕರು ಒಬ್ಬರು ಇನ್ನೊಬ್ಬರಿಗೆ ಇನ್ನೂ ಎಷ್ಟು ಸಹಾನುಭೂತಿಯನ್ನು ತೋರಿಸಬೇಕಾಗಿದೆ!—ಮತ್ತಾಯ 9:13; 18:21-35.
17. ಯೆಹೋವನ ದಯಾಪರತೆಯ ಕುರಿತಾದ ನಮ್ಮ ತಿಳಿವಳಿಕೆಯು ಸತ್ಯ ಆರಾಧನೆಯನ್ನು ಹೇಗೆ ಪ್ರವರ್ಧಿಸಬಲ್ಲದು?
17 ಯೆಹೋವನ ಕರುಣೆಯಲ್ಲಿ ದಯಾಪರತೆಯು ಸೇರಿದೆ. ನೀವು ‘ದಯಾಪರತೆ’ ಎಂಬ ಪದವನ್ನು ಹೇಗೆ ವಿವರಿಸುತ್ತೀರಿ? ಇದನ್ನು, ಯೆಹೋವನನ್ನು ದಯಾಳುವಾಗಿ ಸೂಚಿಸಿ ಮಾತಾಡುವಂಥ ಶಾಸ್ತ್ರವಚನಗಳೊಂದಿಗೆ ಹೋಲಿಸಿನೋಡಿ. ಯೆಹೋವನ ದಯಾಪರತೆಯಲ್ಲಿ, ತನ್ನ ಜನರ ನಡುವೆ ಅನನುಕೂಲ ಸ್ಥಿತಿಯಲ್ಲಿರುವವರ ಕಡೆಗೆ ಪ್ರೀತಿಪರ ಕಾಳಜಿಯು ಒಳಗೂಡಿದೆ ಎಂದು ಬೈಬಲ್ ತೋರಿಸುತ್ತದೆ. (ವಿಮೋಚನಕಾಂಡ 22:26, 27) ಯಾವುದೇ ದೇಶದಲ್ಲಿ ಪರದೇಶಸ್ಥರು ಹಾಗೂ ಇನ್ನಿತರರು ತುಂಬ ಪ್ರತಿಕೂಲ ಸನ್ನಿವೇಶಗಳಲ್ಲಿರಬಹುದು. ಇಂಥವರ ಕಡೆಗೆ ಯಾವುದೇ ಪಕ್ಷಪಾತವನ್ನು ತೋರಿಸಬಾರದು ಮತ್ತು ಅವರಿಗೆ ದಯೆಯನ್ನು ತೋರಿಸಬೇಕು ಎಂದು ತನ್ನ ಜನರಿಗೆ ಬೋಧಿಸುತ್ತಿರುವಾಗ, ಅವರು ಸಹ ಐಗುಪ್ತ ದೇಶದಲ್ಲಿ ಪರದೇಶಿಗಳಾಗಿದ್ದರು ಎಂಬುದನ್ನು ಯೆಹೋವನು ಅವರಿಗೆ ನೆನಪುಹುಟ್ಟಿಸಿದನು. (ಧರ್ಮೋಪದೇಶಕಾಂಡ 24:17-22) ಇಂದು ದೇವಜನರಾಗಿರುವ ನಮ್ಮ ಕುರಿತಾಗಿ ಏನು? ನಾವು ದಯಾಪರರಾಗಿರುವುದು, ಯೆಹೋವನ ಆರಾಧನೆಯಲ್ಲಿ ನಮ್ಮನ್ನು ಐಕ್ಯಗೊಳಿಸಲು ಮತ್ತು ಇತರರನ್ನೂ ಅದರ ಕಡೆಗೆ ಆಕರ್ಷಿಸಲು ಸಹಾಯಮಾಡುತ್ತದೆ.—ಅ. ಕೃತ್ಯಗಳು 10:34, 35; ಪ್ರಕಟನೆ 7:9, 10.
18. ಬೇರೆ ಜನಾಂಗಗಳವರ ಮಾರ್ಗಗಳ ವಿಷಯದಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಯಾವುದರಿಂದ ದೂರವಿರಬೇಕೆಂದು ಕಲಿಸಿದನೋ ಅದರಿಂದ ನಾವೇನನ್ನು ಕಲಿಯುತ್ತೇವೆ?
18 ಆದರೂ, ಬೇರೆ ಜನಾಂಗಗಳವರ ಕಡೆಗೆ ಪರಿಗಣನೆ ತೋರಿಸುವುದು, ಯೆಹೋವನಿಗಾಗಿ ಮತ್ತು ಆತನ ನೈತಿಕ ಮಟ್ಟಗಳಿಗಾಗಿರುವ ಇಸ್ರಾಯೇಲ್ಯರ ಪ್ರೀತಿಗಿಂತ ಹೆಚ್ಚು ಪ್ರಾಮುಖ್ಯವಾಗಿರಬಾರದಿತ್ತು. ಆದುದರಿಂದಲೇ, ತಮ್ಮ ಸುತ್ತುಮುತ್ತಣ ಜನಾಂಗಗಳ ಮಾರ್ಗಗಳನ್ನು ಅನುಸರಿಸಬಾರದು, ಅವರ ಧಾರ್ಮಿಕ ಪದ್ಧತಿಗಳು ಹಾಗೂ ಅನೈತಿಕ ಜೀವನಶೈಲಿಯನ್ನು ಹೊಂದಿಸಿಕೊಳ್ಳಬಾರದು ಎಂದು ಇಸ್ರಾಯೇಲ್ಯರಿಗೆ ಬೋಧಿಸಲಾಗಿತ್ತು. (ವಿಮೋಚನಕಾಂಡ 34:11-16; ಧರ್ಮೋಪದೇಶಕಾಂಡ 7:1-4) ಅದು ಇಂದು ನಮಗೆ ಸಹ ಅನ್ವಯವಾಗುತ್ತದೆ. ನಮ್ಮ ದೇವರಾಗಿರುವ ಯೆಹೋವನು ಪರಿಶುದ್ಧನಾಗಿರುವ ಪ್ರಕಾರವೇ ನಾವು ಪರಿಶುದ್ಧ ಜನರಾಗಿರಬೇಕು.—1 ಪೇತ್ರ 1:15, 16.
19. ತಪ್ಪುಗೈಯುವುದರ ಕುರಿತಾದ ಯೆಹೋವನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಆತನ ಜನರನ್ನು ಸಂರಕ್ಷಿಸಬಲ್ಲದು?
19 ಮೋಶೆಯು ತನ್ನ ಮಾರ್ಗಗಳನ್ನು ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಿಕ್ಕಾಗಿ, ತಾನು ಪಾಪವನ್ನು ಅಂಗೀಕರಿಸುವುದಿಲ್ಲವಾದರೂ ದೀರ್ಘಶಾಂತನಾಗಿದ್ದೇನೆ ಎಂಬುದನ್ನು ಯೆಹೋವನು ಸ್ಪಷ್ಟಪಡಿಸಿದನು. ತಾನು ಅಪೇಕ್ಷಿಸುವ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸಲು ಆತನು ಜನರಿಗೆ ಕಾಲಾವಕಾಶವನ್ನು ನೀಡುತ್ತಾನೆ. ಪಶ್ಚಾತ್ತಾಪವು ತೋರಿಸಲ್ಪಡುವಾಗ ಯೆಹೋವನು ಪಾಪವನ್ನು ಕ್ಷಮಿಸುತ್ತಾನಾದರೂ, ಗಂಭೀರವಾದ ತಪ್ಪುಗಳಿಗೆ ವಿಧಿಸಲ್ಪಡುವ ಶಿಕ್ಷೆಯಿಂದ ಆತನು ವಿನಾಯಿತಿಯನ್ನು ನೀಡುವುದಿಲ್ಲ. ಇಸ್ರಾಯೇಲ್ಯರು ಏನು ಮಾಡುತ್ತಾರೋ ಅದು ಮುಂದಿನ ಸಂತತಿಗಳ ಮೇಲೆ ಒಳಿತನ್ನು ಅಥವಾ ಕೆಡುಕನ್ನು ಉಂಟುಮಾಡಸಾಧ್ಯವಿದೆ ಎಂದು ಆತನು ಮೋಶೆಗೆ ಎಚ್ಚರಿಕೆ ನೀಡಿದನು. ಯೆಹೋವನ ಮಾರ್ಗಗಳಿಗಾಗಿ ಗಣ್ಯತೆಯನ್ನು ಹೊಂದಿರುವುದು, ತಮ್ಮ ಮೇಲೆ ತಾವೇ ಬರಮಾಡಿಕೊಂಡ ಸನ್ನಿವೇಶಗಳಿಗಾಗಿ ದೇವರನ್ನು ದೂರುವುದರಿಂದ ಅಥವಾ ಆತನು ಬೇಗನೆ ಕ್ರಿಯೆಗೈಯುವುದಿಲ್ಲ ಎಂಬ ತೀರ್ಮಾನಕ್ಕೆ ಬರುವುದರಿಂದ ದೇವಜನರನ್ನು ಸಂರಕ್ಷಿಸುವುದು.
20. ಜೊತೆ ವಿಶ್ವಾಸಿಗಳೊಂದಿಗೆ ಮತ್ತು ನಮ್ಮ ಶುಶ್ರೂಷೆಯಲ್ಲಿ ನಾವು ಭೇಟಿಯಾಗುವವರೊಂದಿಗೆ ಒಳ್ಳೇ ರೀತಿಯಲ್ಲಿ ವ್ಯವಹರಿಸಲು ಯಾವುದು ನಮಗೆ ಸಹಾಯಮಾಡಬಲ್ಲದು? (ಕೀರ್ತನೆ 86:11)
20 ಯೆಹೋವನ ಹಾಗೂ ಆತನ ಮಾರ್ಗಗಳ ಕುರಿತಾದ ನಿಮ್ಮ ಜ್ಞಾನವನ್ನು ಆಳಗೊಳಿಸಲು ನೀವು ಬಯಸುವಲ್ಲಿ, ಬೈಬಲನ್ನು ಓದುವಾಗ ಸಂಶೋಧನೆ ಮಾಡುವುದನ್ನು ಹಾಗೂ ಧ್ಯಾನಿಸುವುದನ್ನು ಮುಂದುವರಿಸಿರಿ. ಯೆಹೋವನ ವ್ಯಕ್ತಿತ್ವದ ಬೇರೆ ಬೇರೆ ಆಕರ್ಷಕ ಅಂಶಗಳನ್ನು ಜಾಗರೂಕತೆಯಿಂದ ಪರಿಶೀಲಿಸಿರಿ. ನೀವು ಹೇಗೆ ದೇವರನ್ನು ಅನುಕರಿಸಬಹುದು ಮತ್ತು ಆತನ ಉದ್ದೇಶಕ್ಕೆ ನಿಮ್ಮ ಜೀವಿತವನ್ನು ಹೇಗೆ ಇನ್ನೂ ಹೆಚ್ಚಾಗಿ ಹೊಂದಿಸಿಕೊಳ್ಳಬಹುದು ಎಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿರಿ. ಇದು ನಿಮಗೆ ಯಾವುದೇ ಪಾಶದಿಂದ ದೂರವಿರಲು, ಜೊತೆ ವಿಶ್ವಾಸಿಗಳೊಂದಿಗೆ ಒಳ್ಳೇ ರೀತಿಯಲ್ಲಿ ವ್ಯವಹರಿಸಲು ಮತ್ತು ನಮ್ಮ ಮಹಿಮಾನ್ವಿತ ದೇವರನ್ನು ತಿಳಿದುಕೊಂಡು ಆತನನ್ನು ಪ್ರೀತಿಸುವಂತೆ ಇತರರಿಗೆ ನೆರವು ನೀಡಲು ಸಹಾಯಮಾಡುವುದು.
[ಪಾದಟಿಪ್ಪಣಿ]
a ಎಲ್ಲವೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟವುಗಳಾಗಿವೆ.
ನೀವು ಏನನ್ನು ಕಲಿತುಕೊಂಡಿರಿ?
• ಮೋಶೆಗೆ ದೈನ್ಯಭಾವವು ಏಕೆ ಪ್ರಾಮುಖ್ಯವಾಗಿತ್ತು, ಮತ್ತು ಅದು ನಮಗೆ ಏಕೆ ಅತ್ಯಾವಶ್ಯಕವಾಗಿದೆ?
• ಯೆಹೋವನ ಮಾತುಗಳನ್ನು ತಿಳಿಸಲು ಪುನಃ ಪುನಃ ಫರೋಹನ ಮುಂದೆ ಹೋಗುವ ಮೂಲಕ ಯಾವ ಒಳಿತು ಸಾಧಿಸಲ್ಪಟ್ಟಿತು?
• ಮೋಶೆಗೆ ಕಲಿಸಲ್ಪಟ್ಟ ಮತ್ತು ಇಂದು ನಮಗೂ ಅನ್ವಯವಾಗುವ ಪ್ರಮುಖ ಮೂಲತತ್ತ್ವಗಳಲ್ಲಿ ಕೆಲವು ಯಾವುವು?
• ಯೆಹೋವನ ಗುಣಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ನಾವು ಹೇಗೆ ಆಳಗೊಳಿಸಬಲ್ಲೆವು?
[ಪುಟ 21ರಲ್ಲಿರುವ ಚಿತ್ರ]
ಮೋಶೆಯು ನಂಬಿಗಸ್ತಿಕೆಯಿಂದ ಯೆಹೋವನ ಮಾತುಗಳನ್ನು ಫರೋಹನಿಗೆ ತಿಳಿಯಪಡಿಸಿದನು
[ಪುಟ 23ರಲ್ಲಿರುವ ಚಿತ್ರ]
ತಾನು ಅಪೇಕ್ಷಿಸುವ ವಿಷಯಗಳನ್ನು ಯೆಹೋವನು ಮೋಶೆಗೆ ತಿಳಿಯಪಡಿಸಿದನು
[ಪುಟ 24, 25ರಲ್ಲಿರುವ ಚಿತ್ರ]
ಯೆಹೋವನ ಗುಣಗಳ ಕುರಿತು ಧ್ಯಾನಿಸಿರಿ