ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮೇ 3-9
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 27-29
“ಯೆಹೋವನ ನಿಷ್ಪಕ್ಷಪಾತ ಗುಣವನ್ನ ಅನುಕರಿಸಿ”
ಕಾವಲಿನಬುರುಜು13 6/15 ಪುಟ 10 ಪ್ಯಾರ 14
ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿ
14 ಆ ಐವರು ಸಹೋದರಿಯರು ಮೋಶೆಗೆ: “ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರು ಕುಲದಿಂದ ತೆಗೆಯಲ್ಪಡುವದು ನ್ಯಾಯವೋ?” ಎಂದು ಕೇಳಿದರು. ನಂತರ, “ತಂದೆಯ ಕುಲದವರೊಂದಿಗೆ ನಮಗೂ ಸ್ವಾಸ್ತ್ಯವನ್ನು ಕೊಡಬೇಕೆಂದು ಕೇಳಿಕೊಂಡರು.” ಆಗ ಮೋಶೆ ‘ನಿಮಗಾಗಿ ನಿಯಮಗಳನ್ನು ಬದಲಾಯಿಸಲು ಆಗುವುದಿಲ್ಲ’ ಅಂತ ಹೇಳಿಲ್ಲ. ಬದಲಾಗಿ “ಅವರ ಪ್ರಾರ್ಥನೆಯನ್ನು ಯೆಹೋವನ ಬಳಿಯಲ್ಲಿ” ವಿಚಾರಿಸಿದನು. (ಅರ. 27:2-5) ನಂತರ ಏನಾಯಿತು? ಯೆಹೋವನು ಉತ್ತರಿಸಿದ್ದು: “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವದು ನ್ಯಾಯ. ಅವರ ತಂದೆಯ ಕುಲದವರೊಂದಿಗೆ ಅವರಿಗೂ ನೀನು ಸ್ವಾಸ್ತ್ಯವನ್ನು ಕೊಡಬೇಕು; ತಂದೆಯ ಸ್ವಾಸ್ತ್ಯವು ಅವರಿಗೆ ಬರಲಿ.” ನಂತರ ಯೆಹೋವನು “ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವಾಸ್ತ್ಯವು ಅವನ ಮಗಳಿಗೆ ಆಗಬೇಕು” ಎಂಬ ನಿಯಮವನ್ನು ಸಹ ಕೊಟ್ಟನು. (ಅರ. 27:6-8; ಯೆಹೋ. 17:1-6) ಅಂದಿನಿಂದ ಇಂಥ ಸ್ಥಿತಿ ಎದುರಿಸಿದ ಅನೇಕ ಸ್ತ್ರೀಯರಿಗೆ ಅವರ ತಂದೆಯ ಸ್ವಾಸ್ತ್ಯ ದೊರೆಯಿತು.
ಕಾವಲಿನಬುರುಜು13 6/15 ಪುಟ 11 ಪ್ಯಾರ 15
ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿ
15 ಎಂಥ ದಯಾಭರಿತ ನಿಷ್ಪಕ್ಷಪಾತದ ತೀರ್ಪು ಅದಾಗಿತ್ತಲ್ಲವೇ! ಯೆಹೋವನು ಇತರ ಇಸ್ರಾಯೇಲ್ಯರನ್ನು ವೀಕ್ಷಿಸಿದಂತೆಯೇ ಸಂಕಷ್ಟದಲ್ಲಿದ್ದ ಈ ಸ್ತ್ರೀಯರನ್ನು ವೀಕ್ಷಿಸಿದನು. ಅದೇ ಕಾಳಜಿ, ಗೌರವ ಇವರಿಗೂ ಸಿಕ್ಕಿತು. (ಕೀರ್ತ. 68:5) ಈ ನಿಜಾಂಶವನ್ನು ಬಿಚ್ಚಿಟ್ಟ ಬೈಬಲ್ ಉದಾಹರಣೆ ಇದೊಂದೇ ಅಲ್ಲ. ಇನ್ನೂ ಅನೇಕ ಇವೆ. ಅವುಗಳೆಲ್ಲವು ಈ ಸತ್ಯವನ್ನು ನಮ್ಮ ಮುಂದೆ ತೆರೆದಿಡುತ್ತವೆ: ಯೆಹೋವನಿಗೆ ತನ್ನ ಸೇವಕರೆಲ್ಲರೂ ಒಂದೇ.—1 ಸಮು. 16:1-13; ಅ. ಕಾ. 10:30-35, 44-48.
ಕಾವಲಿನಬುರುಜು13 6/15 ಪುಟ 11 ಪ್ಯಾರ 16
ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿl
16 ಯೆಹೋವನ ಈ ಗುಣವನ್ನು ಅನುಕರಿಸುವುದು ಹೇಗೆ? ನಿಷ್ಪಕ್ಷಪಾತದಲ್ಲಿ ಎರಡು ಅಂಶಗಳಿವೆ. ಒಂದು, ನಮ್ಮಲ್ಲಿ ನಿಷ್ಪಕ್ಷಪಾತ ಮನೋಭಾವ ಇರುವುದು. ಇನ್ನೊಂದು ಇತರರನ್ನು ನಿಷ್ಪಕ್ಷಪಾತದಿಂದ ಉಪಚರಿಸುವುದು. ಈ ಗುಣ ನಮ್ಮಲ್ಲಿದ್ದರೆ ಮಾತ್ರ ಅದನ್ನು ಇತರರ ಕಡೆಗೆ ತೋರಿಸಲು ಸಾಧ್ಯ. ನಾನು ಪಕ್ಷಪಾತ ತೋರಿಸುವುದಿಲ್ಲ, ನಾನು ತೆರೆದ, ಮುಕ್ತ ಮನಸ್ಸಿನವನು ಎಂದು ನಮಗನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನೋಭಾವ ಹೇಗಿದೆ ಎಂದು ತಿಳಿದುಕೊಳ್ಳಲು ನಮಗೇ ಕಷ್ಟವಾಗುತ್ತದೆ. ಹಾಗಾದರೆ ಏನು ಮಾಡಬಹುದು? ಯೇಸು ಏನು ಮಾಡಿದನು ನೆನಪಿಸಿಕೊಳ್ಳಿ. ತನ್ನ ಬಗ್ಗೆ ಜನರು ಏನು ಹೇಳುತ್ತಾರೆಂದು ತಿಳಿದುಕೊಳ್ಳಲಿಕ್ಕಾಗಿ “ಮನುಷ್ಯಕುಮಾರನು ಯಾರೆಂದು ಜನರು ಹೇಳುತ್ತಾರೆ?” ಎಂದು ಶಿಷ್ಯರ ಹತ್ತಿರ ಕೇಳಿದನು. (ಮತ್ತಾ. 16:13, 14) ನಾವೂ ಹಾಗೇ ಮಾಡಬಹುದು. ನಮ್ಮಲ್ಲಿ ಎಂಥ ಮನೋಭಾವವಿದೆ ಎಂದು ತಿಳಿದುಕೊಳ್ಳಲು, ಮುಚ್ಚುಮರೆಯಿಲ್ಲದೆ ಮಾತಾಡುವ ಒಬ್ಬ ಸ್ನೇಹಿತನ ಹತ್ತಿರ ‘ನಾನು ಪಕ್ಷಪಾತ ತೋರಿಸುತ್ತೇನಾ? ಬೇರೆಯವರಿಗೆ ನನ್ನ ಬಗ್ಗೆ ಯಾವ ಅಭಿಪ್ರಾಯವಿದೆ?’ ಎಂದು ಕೇಳಬಹುದು. ಆಗ ಅವನು, ‘ನೀನು ಸ್ವಲ್ಪ ಪಕ್ಷಪಾತ ತೋರಿಸುತ್ತಿ. ಸ್ಥಾನ, ಜಾತಿ, ಅಂತಸ್ತಿಗೆ ಪ್ರಾಮುಖ್ಯತೆ ಕೊಡುತ್ತಿ ಎಂದು ನನಗನಿಸುತ್ತೆ’ ಎಂದು ಹೇಳಿದರೆ? ಯೆಹೋವನಲ್ಲಿ ಪಟ್ಟುಬಿಡದೆ ಪ್ರಾರ್ಥಿಸಿ. ನಿಮ್ಮ ಮನೋಭಾವವನ್ನು ಬದಲಾಯಿಸಿಕೊಂಡು ಆತನಲ್ಲಿರುವ ನಿಷ್ಪಕ್ಷಪಾತದ ಗುಣವನ್ನು ಬೆಳೆಸಿಕೊಳ್ಳಲು ಸಹಾಯಮಾಡುವಂತೆ ಬೇಡಿ.—ಮತ್ತಾ. 7:7; ಕೊಲೊ. 3:10, 11.
ಆಧ್ಯಾತ್ಮಿಕ ಮುತ್ತುಗಳು
it-2-E ಪುಟ 528 ಪ್ಯಾರ 5
ಅರ್ಪಣೆಗಳು
ಪಾನ ಅರ್ಪಣೆ. ಇಸ್ರಾಯೇಲ್ಯರು ದೇವರು ಕೊಟ್ಟ ದೇಶಕ್ಕೆ ಹೋದ ಮೇಲೆ ಪಾನ ಅರ್ಪಣೆಗಳನ್ನು ಕೊಡೋಕೆ ಶುರುಮಾಡಿದ್ರು. (ಅರ 15:2, 5, 8-10) ‘ದ್ರಾಕ್ಷಾಮದ್ಯವನ್ನು’ ಪಾನ ಅರ್ಪಣೆಯಾಗಿ ಯಜ್ಞವೇದಿ ಮೇಲೆ ಸುರಿಯುತ್ತಿದ್ರು. (ಅರ 28:7, 14; ವಿಮೋ 30:9 ಮತ್ತು ಅರ 15:10 ಹೋಲಿಸಿ.) ಅಪೊಸ್ತಲ ಪೌಲ ಫಿಲಿಪ್ಪಿಯ ಕ್ರೈಸ್ತರಿಗೆ “ನಂಬಿಕೆಯಿಂದ ನೀವು ಮಾಡ್ತಿರೋ ತ್ಯಾಗಕ್ಕೆ, ಪವಿತ್ರ ಸೇವೆಗೆ ಸಹಾಯ ಮಾಡೋಕೆ ನಾನು ನನ್ನನ್ನೇ ಪಾನ ಅರ್ಪಣೆ ತರ ಪೂರ್ತಿ ಸುರೀತಾ ಇದ್ದೀನಿ. . . . ನಾನು ಖುಷಿಪಡ್ತೀನಿ” ಅಂತ ಬರೆದನು. ಪೌಲ ಯಾಕೆ ತನ್ನನ್ನು ಪಾನ ಅರ್ಪಣೆಗೆ ಹೋಲಿಸಿಕೊಂಡ? ಸಹೋದರ ಸಹೋದರಿಯರಿಗಾಗಿ ತಾನು ಏನು ಮಾಡೋಕೂ ಸಿದ್ಧ ಅಂತ ಸೂಚಿಸೋಕೆ ಹೋಲಿಸಿಕೊಂಡ. (ಫಿಲಿ 2:17) ಪೌಲ ತೀರಿಹೋಗೋ ಸ್ವಲ್ಪ ಸಮಯದ ಮುಂಚೆ ತಿಮೊತಿಗೆ ಹೀಗೆ ಬರೆದನು: “ನಾನು ಈಗಾಗ್ಲೇ ನನ್ನನ್ನ ಸುರಿಯೋ ಪಾನ ಅರ್ಪಣೆ ತರ ಅರ್ಪಿಸ್ಕೊಂಡಿದ್ದೀನಿ. ಇನ್ನೂ ಸ್ವಲ್ಪ ಸಮಯದಲ್ಲೇ ನನಗೆ ಬಿಡುಗಡೆ ಆಗುತ್ತೆ.”—2ತಿಮೊ 4:6.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು07-E 4/1 ಪುಟ 17-18
ದೇವರಿಗೆ ಇಷ್ಟ ಆಗೋ ಬಲಿಗಳನ್ನ ಕೊಡಿ
“ಮೆಸೋಅಮೆರಿಕದಲ್ಲಿ ಹಿಂದೆ ಎಝ್ಟೆಕ್ ಅನ್ನೋ ಜನಾಂಗದವರು ಇದ್ರು. ಅವರು ಒಬ್ಬರ ಸಾವು ಇನ್ನೊಬ್ಬರಿಗೆ ಜೀವ ಕೊಡುತ್ತೆ ಅಂತ ನಂಬ್ತಿದ್ರು. ಈ ಕಾರಣಕ್ಕಾಗಿ ಹೆಚ್ಚೆಚ್ಚು ಜನರನ್ನ ಬಲಿ ಕೊಡ್ತಿದ್ರು. ಅವರ ಸಾಮ್ರಾಜ್ಯ ದೊಡ್ಡದಾಗುತ್ತಾ ಹೋದ ಹಾಗೆ ಅವರು ಕೊಡ್ತಿದ್ದ ಜನರ ಬಲಿಗಳ ಸಂಖ್ಯೆನೂ ಹೆಚ್ಚಾಗುತ್ತಾ ಹೋಯ್ತು” ಅಂತ ದ ಮೈಟಿ ಎಝ್ಟೆಕ್ ಅನ್ನೋ ಪುಸ್ತಕ ಹೇಳುತ್ತೆ. ಇನ್ನೊಂದು ಪುಸ್ತಕ ಹೇಳೋ ಪ್ರಕಾರ ಈ ಜನಾಂಗದವರು ಒಂದು ವರ್ಷದಲ್ಲಿ 20,000 ಜನರ ಬಲಿ ಕೊಟ್ಟಿದ್ರು.
ಹಿಂದಿನ ಕಾಲದಿಂದಲೂ ಜನರು ತಮ್ಮ ದೇವರುಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬಲಿಗಳನ್ನ ಕೊಡ್ತಾ ಬಂದಿದ್ದಾರೆ. ಭಯದಿಂದಲೋ ಅಥ್ವಾ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿಯೋ ಈ ರೀತಿ ಬಲಿಗಳನ್ನ ಕೊಡ್ತಾ ಇದ್ದಾರೆ. ಬೈಬಲಲ್ಲೂ ಸರ್ವಶಕ್ತ ದೇವರಾದ ಯೆಹೋವ ಕೆಲವು ಬಲಿಗಳನ್ನ ತನಗೆ ಕೊಡಬೇಕು ಅಂತ ಇಸ್ರಾಯೇಲ್ಯರಿಗೆ ಹೇಳಿದ್ದರ ಬಗ್ಗೆ ಇದೆ. ನಾವೀಗ, ದೇವರಿಗೆ ಯಾವ ರೀತಿಯ ಬಲಿಗಳು ಇಷ್ಟ ಆಗ್ತಿತ್ತು? ಇವತ್ತು ಯೆಹೋವನ ಆರಾಧನೆಯಲ್ಲಿ ನಾವು ಕಾಣಿಕೆಗಳನ್ನ ಬಲಿಗಳನ್ನ ಕೊಡಬೇಕಾ? ಅಂತ ನೋಡೋಣ.
ಇಸ್ರಾಯೇಲ್ಯರು ಯೆಹೋವನಿಗೆ ಕೊಡಬೇಕಿದ್ದ ಕಾಣಿಕೆಗಳು ಮತ್ತು ಬಲಿಗಳು
ಇಸ್ರಾಯೇಲ್ ಜನಾಂಗ ಸ್ಥಾಪನೆ ಆದಾಗ ಯೆಹೋವ ಅವರಿಗೆ ತನ್ನನ್ನು ಯಾವ ರೀತಿ ಆರಾಧಿಸಬೇಕು ಮತ್ತು ತನಗೆ ಯಾವ ರೀತಿಯ ಕಾಣಿಕೆಗಳನ್ನ, ಬಲಿಗಳನ್ನ ಕೊಡಬೇಕು ಅಂತ ವಿವರವಾಗಿ ಹೇಳಿದನು. (ಅರಣ್ಯಕಾಂಡ 28 ಮತ್ತು 29 ನೇ ಅಧ್ಯಾಯಗಳು) ಇಸ್ರಾಯೇಲ್ಯರು ಬೆಳೆಯನ್ನು ಕಾಣಿಕೆಯಾಗಿ ಕೊಡಬೇಕಿತ್ತು ಮತ್ತು ಕೆಲವು ಪ್ರಾಣಿ ಪಕ್ಷಿಗಳನ್ನ ಬಲಿಯಾಗಿ ಕೊಡಬೇಕಿತ್ತು. ಅವು ಯಾವುವೆಂದ್ರೆ ಹೋರಿಗಳು, ಕುರಿಗಳು, ಆಡುಗಳು, ಕಾಡುಪಾರಿವಾಳಗಳು ಮತ್ತು ಪಾರಿವಾಳದ ಮರಿಗಳು. (ಯಾಜಕಕಾಂಡ 1:3, 5, 10, 14; 23:10-18; ಅರ. 15:1-7; 28:7) ಒಂದು ಪ್ರಾಣಿಯನ್ನು ಸರ್ವಾಂಗಹೋಮ ಬಲಿಯಾಗಿ ಕೊಡುವಾಗ ಅದನ್ನ ಪೂರ್ತಿಯಾಗಿ ಬೆಂಕಿಯಲ್ಲಿ ಸುಡಬೇಕಿತ್ತು. (ವಿಮೋಚನಕಾಂಡ 29:38-42) ಇಸ್ರಾಯೇಲ್ಯರು ಸಮಾಧಾನ ಬಲಿಯನ್ನೂ ಕೊಡಬೇಕಿತ್ತು. ಈ ಬಲಿ ಕೊಡುವಾಗ ಪ್ರಾಣಿಯ ಕೆಲವು ಭಾಗವನ್ನ ದೇವರಿಗೆ ಅರ್ಪಿಸಬೇಕಿತ್ತು ಮತ್ತು ಇನ್ನು ಕೆಲವು ಭಾಗವನ್ನ ಬಲಿ ಅರ್ಪಿಸುತ್ತಿದ್ದವನು ತಿನ್ನಬಹುದಿತ್ತು.—ಯಾಜಕಕಾಂಡ 19:5-8.
ನಿಯಮ ಪುಸ್ತಕದಲ್ಲಿ ಮೋಶೆ ಬರೆದ ಕಾಣಿಕೆಗಳನ್ನ, ಬಲಿಗಳನ್ನ ಕೊಡುತ್ತಾ ಇದ್ದಿದ್ದು ಯೆಹೋವನನ್ನು ಆರಾಧಿಸೋ ಒಂದು ವಿಧಾನ ಆಗಿತ್ತು. ಅಷ್ಟೇ ಅಲ್ಲ, ಇಸ್ರಾಯೇಲ್ಯರು ಈ ಬಲಿಗಳನ್ನ ಕೊಡ್ತಾ ಇದ್ದದ್ದು ಯೆಹೋವನೇ ವಿಶ್ವದ ರಾಜ ಅಂತ ಅವರು ಒಪ್ಪಿಕೊಂಡಿದ್ದಾರೆ ಅನ್ನೋದನ್ನ ತೋರಿಸಿಕೊಡ್ತಿತ್ತು. ಯೆಹೋವ ಅವರನ್ನ ಆಶೀರ್ವದಿಸುತ್ತಿರೋದಕ್ಕೆ, ಕಾಪಾಡುತ್ತಿರೋದಕ್ಕೆ ಮತ್ತು ಪಾಪಗಳನ್ನ ಕ್ಷಮಿಸುತ್ತಿರೋದಕ್ಕೆ ಕೃತಜ್ಞರಾಗಿದ್ದಾರೆ ಅಂತನೂ ತೋರಿಸಿಕೊಡ್ತಿತ್ತು. ಯೆಹೋವ ಹೇಳಿದ ತರ ಇಸ್ರಾಯೇಲ್ಯರು ಆತನನ್ನು ಎಲ್ಲಿ ತನಕ ಆರಾಧಿಸಿದರೋ ಅಲ್ಲಿ ತನಕ ಯೆಹೋವ ಅವರನ್ನ ಆಶೀರ್ವದಿಸಿದನು.—ಜ್ಞಾನೋಕ್ತಿ 3:9, 10.
ಯೆಹೋವ ದೇವರಿಗೆ ಬಲಿ ಮುಖ್ಯವಾಗಿರಲಿಲ್ಲ, ಬಲಿ ಅರ್ಪಿಸುತ್ತಿದ್ದವರ ಯೋಚನೆ, ನಡತೆ ಮುಖ್ಯವಾಗಿತ್ತು. ಪ್ರವಾದಿ ಹೋಶೇಯನ ಮೂಲಕ ಯೆಹೋವ ಹೀಗೆ ಹೇಳಿದ್ದನು: “ನಾನು ನಿಮ್ಮ ಬಲಿಗಳನ್ನ ಇಷ್ಟಪಡದೆ, ನೀವು ಶಾಶ್ವತ ಪ್ರೀತಿ ತೋರಿಸಬೇಕಂತಾನೇ ಇಷ್ಟಪಡ್ತೀನಿ, ನಾನು ನಿಮ್ಮ ಸರ್ವಾಂಗಹೋಮಗಳನ್ನ ಇಷ್ಟಪಡದೆ, ನೀವು ನನ್ನ ಬಗ್ಗೆ ತಿಳ್ಕೋಬೇಕಂತನೇ ಇಷ್ಟಪಡ್ತೀನಿ.” (ಹೋಶೇಯ 6:6) ಆದ್ರೆ ಅವರು ಯಾವಾಗ ಬೇರೆ ದೇವರುಗಳನ್ನ ಆರಾಧಿಸೋಕೆ, ಕೆಟ್ಟ ಕೆಲಸಗಳನ್ನ ಮಾಡೋಕೆ, ಅಮಾಯಕರ ಜೀವ ತೆಗೆಯೋಕೆ ಶುರು ಮಾಡಿದರೋ ಆವಾಗಿಂದ ಅವರು ಕೊಡ್ತಿದ್ದ ಬಲಿಗಳನ್ನ ಯೆಹೋವ ಸ್ವೀಕರಿಸಲಿಲ್ಲ. ಅದಕ್ಕೇ ಆತನು ಯೆಶಾಯನ ಮೂಲಕ ಹೀಗೆ ಹೇಳಿದನು: “ನೀವು ಕೊಡೋ ತುಂಬ ಬಲಿಗಳಿಂದ ನನಗೇನು ಲಾಭ? ನಿಮ್ಮ ಟಗರುಗಳ ಸರ್ವಾಂಗಹೋಮ ಬಲಿಗಳಿಂದ ಮತ್ತು ದಷ್ಟಪುಷ್ಟ ಪ್ರಾಣಿಗಳ ಕೊಬ್ಬಿಂದ ನನಗೆ ಸಾಕಾಗಿ ಹೋಗಿದೆ, ಹೋರಿ, ಕುರಿ, ಆಡುಗಳ ರಕ್ತದಲ್ಲಿ ನನಗೆ ಸಂತೋಷ ಇಲ್ಲ.”—ಯೆಶಾಯ 1:11.
“ಇದನ್ನ ಮಾಡಿ ಅಂತ ನಾನು ಹೇಳಲೇ ಇಲ್ಲ”
ಇಸ್ರಾಯೇಲ್ಯರು ಅರ್ಪಿಸ್ತಿದ್ದ ಬಲಿಗಳಿಗೂ ಕಾನಾನ್ಯರು ಅರ್ಪಿಸ್ತಿದ್ದ ಬಲಿಗಳಿಗೂ ತುಂಬ ವ್ಯತ್ಯಾಸ ಇತ್ತು. ಕಾನಾನ್ಯರು ತಮ್ಮ ಹೆತ್ತ ಮಕ್ಕಳನ್ನೇ ಅವರ ದೇವರುಗಳಿಗೆ ಬಲಿಯಾಗಿ ಅರ್ಪಿಸ್ತಿದ್ರು. ಅಷ್ಟೇ ಅಲ್ಲ, ಅಮ್ಮೋನಿಯರ ದೇವರಾದ ಮೋಲೆಕನಿಗೂ ತಮ್ಮ ಮಕ್ಕಳನ್ನ ಅರ್ಪಿಸ್ತಿದ್ರು. ಮೋಲೆಕನಿಗೆ ಮಿಲ್ಕೋಮ್, ಮೊಲೋಖ ಅನ್ನೋ ಹೆಸರೂ ಇತ್ತು. (1 ಅರಸು 11:5, 7, 33; ಅಪೊಸ್ತಲರ ಕಾರ್ಯ 7:43) ಹ್ಯಾಲೀಸ್ ಬೈಬಲ್ ಹ್ಯಾಂಡ್ಬುಕ್ ಹೀಗೆ ಹೇಳುತ್ತೆ: “ಕಾನಾನ್ಯರು ತಮ್ಮ ದೇವರುಗಳ ಎದುರಲ್ಲೇ ನೀಚ ಲೈಂಗಿಕ ಕೃತ್ಯ ನಡೆಸ್ತಿದ್ರು, ನಂತರ ತಮಗೆ ಹುಟ್ಟಿದ ಮೊದಲನೇ ಮಕ್ಕಳನ್ನ ಬಲಿ ಕೊಡ್ತಿದ್ರು.”
ಈ ರೀತಿ ಮಾಡ್ತಾ ಇದ್ದಿದ್ದು ಯೆಹೋವನಿಗೆ ಇಷ್ಟ ಆಯ್ತಾ? ಖಂಡಿತ ಇಲ್ಲ. ಇಸ್ರಾಯೇಲ್ಯರು ಇನ್ನೇನು ಕಾನಾನ್ ದೇಶಕ್ಕೆ ಹೋಗಬೇಕು ಅಂತಿದ್ದಾಗ ಯೆಹೋವ ಅವರಿಗೆ ಈ ಆಜ್ಞೆ ಕೊಟ್ಟನು: “ನನ್ನ ಮಾತುಗಳನ್ನ ನೀನು ಇಸ್ರಾಯೇಲ್ಯರಿಗೆ ಹೇಳು: ‘ಇಸ್ರಾಯೇಲ್ಯರಾಗ್ಲಿ ಅವ್ರ ಮಧ್ಯ ವಾಸ ಮಾಡೋ ವಿದೇಶಿಯರಾಗ್ಲಿ ಯಾವನಾದ್ರೂ ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ರೆ ಅವನನ್ನ ಸಾಯಿಸ್ಲೇಬೇಕು. ಅಲ್ಲಿನ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. ಅವನು ತನ್ನ ಮಕ್ಕಳನ್ನ ಮೋಲೆಕನಿಗೆ ಕೊಟ್ಟು ನನ್ನ ಪವಿತ್ರ ಸ್ಥಳನ, ನನ್ನ ಪವಿತ್ರ ಹೆಸರನ್ನ ಅಪವಿತ್ರ ಮಾಡಿದ್ರಿಂದ ನನಗೆ ಅವನು ಬೇಡ. ಅವನನ್ನ ಸಾಯಿಸ್ತೀನಿ.’”—ಯಾಜಕಕಾಂಡ 20:2, 3.
ಆಶ್ಚರ್ಯದ ಮಾತೇನಂದ್ರೆ ಕಾನಾನ್ ದೇಶಕ್ಕೆ ಹೋದ ಮೇಲೆ ಕೆಲವು ಇಸ್ರಾಯೇಲ್ಯರು ಯೆಹೋವನ ಆರಾಧನೆ ಬಿಟ್ಟು ಸುಳ್ಳು ದೇವರುಗಳನ್ನ ಆರಾಧಿಸೋಕೆ ಶುರು ಮಾಡಿದ್ರು. ತಮ್ಮ ಮಕ್ಕಳನ್ನ ಆ ದೇವರುಗಳಿಗೆ ಬಲಿ ಕೊಡ್ತಿದ್ರು! ಇದರ ಬಗ್ಗೆ ಕೀರ್ತನೆ 106:35-38 ಹೀಗೆ ಹೇಳುತ್ತೆ: “ಅವರು ಬೇರೆ ಜನಾಂಗಗಳ ಜೊತೆ ಸೇರಿ ಅವ್ರ ಪದ್ಧತಿಗಳನ್ನ ಒಪ್ಕೊಂಡ್ರು. ಅವ್ರ ಮೂರ್ತಿಗಳನ್ನ ಆರಾಧಿಸ್ತಾ ಇದ್ರು, ಇದು ಅವ್ರ ಪ್ರಾಣಕ್ಕೆ ಕುತ್ತು ತಂತು. ಅವರು ತಮ್ಮ ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿಯಾಗಿ ಕೊಡ್ತಿದ್ರು. ಅವರು ನಿರಪರಾಧಿಗಳ ರಕ್ತವನ್ನ, ತಮ್ಮ ಸ್ವಂತ ಮಕ್ಕಳ ರಕ್ತವನ್ನ ಸುರಿಸ್ತಾನೇ ಇದ್ರು. ಅವ್ರನ್ನ ಕಾನಾನಿನ ಮೂರ್ತಿಗಳಿಗೆ ಅರ್ಪಿಸ್ತಿದ್ರು, ದೇಶ ರಕ್ತಪಾತದಿಂದ ಹಾಳಾಗಿ ಹೋಯ್ತು.”
ಮೇ 10-16
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 30-31
“ಕೊಟ್ಟ ಮಾತನ್ನ ಮುರಿಯಬೇಡಿ”
it-2-E ಪುಟ 1162
ಹರಕೆ
ಹರಕೆ ಮಾಡಿದ ಮೇಲೆ ಅದನ್ನ ತೀರಿಸಲೇಬೇಕು. ಹರಕೆ ಅಂದ್ರೆ ಸ್ವಂತ ಇಷ್ಟದಿಂದ ಮಾತು ಕೊಡೋದಾಗಿತ್ತು. ಸ್ವಂತ ಇಷ್ಟದಿಂದ ಮಾತು ಕೊಟ್ರೂ ಅದನ್ನು ತೀರಿಸಲೇ ಬೇಕು ಅಂತ ನಿಯಮ ಪುಸ್ತಕದಲ್ಲಿ ಇತ್ತು. ಹಾಗಾಗಿ ಒಬ್ಬ ವ್ಯಕ್ತಿ ಒಂದು ಮಾತು ಕೊಟ್ಟು ಅದ್ರ ಪ್ರಕಾರ ನಡೆಯದಿದ್ರೆ ಅವನಿಗೆ ಮರಣ ಶಿಕ್ಷೆ ಆಗ್ತಿತ್ತು. (ಅರ 30:2; ರೋಮ 1:31, 32 ನೋಡಿ.) ಅದಕ್ಕೆ ಬೈಬಲ್, ನಾವು ಒಂದು ಮಾತು ಕೊಡೋ ಮುಂಚೆ ನಮಗೆ ಯಾವೆಲ್ಲಾ ಜವಾಬ್ದಾರಿಗಳು ಬರಬಹುದು ಮತ್ತು ಆ ಜವಾಬ್ದಾರಿಗಳನ್ನು ನಿಭಾಯಿಸೋಕೆ ತಯಾರಿದ್ದೀವಾ ಅಂತ ಯೋಚಿಸಿ ಮಾತು ಕೊಡಬೇಕು ಅಂತ ಹೇಳುತ್ತೆ. ಇದರ ಬಗ್ಗೆ ನಿಯಮ ಪುಸ್ತಕ ಹೀಗೆ ಹೇಳಿದೆ: “ನಿಮ್ಮ ದೇವರಾದ ಯೆಹೋವನಿಗೆ ಒಂದು ಹರಕೆ ಮಾಡ್ಕೊಂಡ್ರೆ ಅದನ್ನ ತೀರಿಸೋಕೆ ತಡಮಾಡಬಾರದು. ಅದನ್ನ ತೀರಿಸ್ಲೇಬೇಕು ಅಂತ ನಿಮ್ಮ ದೇವರಾದ ಯೆಹೋವ ಬಯಸ್ತಾನೆ. ಹರಕೆ ತೀರಿಸದೇ ಇರೋದು ಪಾಪ. ಹರಕೆಯನ್ನೇ ಮಾಡ್ಕೊಳ್ಳದೆ ಇದ್ರೆ ಅದು ಪಾಪ ಅಲ್ಲ.”—ಧರ್ಮೋ 23:21, 22.
it-2-E ಪುಟ 1162
ಹರಕೆ
ಒಬ್ಬ ಇಸ್ರಾಯೇಲ್ಯ ಏನಾದ್ರೂ ಮಾಡ್ತೀನಿ ಅಂತನೋ, ಒಂದು ಅರ್ಪಣೆ ಇಲ್ಲಾ ಕಾಣಿಕೆ ಕೊಡ್ತೀನಿ ಅಂತನೋ, ಯಾವುದಾದ್ರೂ ಸೇವೆ ಮಾಡ್ತೀನಿ ಅಂತನೋ, ನಿಯಮ ಪುಸ್ತಕದ ಪ್ರಕಾರ ತಪ್ಪಲ್ಲದ ಕೆಲವು ವಿಷ್ಯಗಳಿಂದ ದೂರ ಇರ್ತೀನಿ ಅಂತನೋ ದೇವರಿಗೆ ಮಾಡೋ ಒಂದು ಮುಖ್ಯ ಪ್ರಮಾಣನೇ ಹರಕೆ. ಒಬ್ಬ ವ್ಯಕ್ತಿ ಹರಕೆ ಮಾಡ್ವಾಗ ಮನಸಾರೆ ಸ್ವಇಷ್ಟದಿಂದ ಮಾತು ಕೊಡ್ತಿದ್ದ. ಆಣೆ ಇಡೋದು ಎಷ್ಟು ಗಂಭೀರವಾದ ವಿಷ್ಯ ಆಗಿತ್ತೋ ಅದೇ ತರ ಹರಕೆ ಹೊರೋದು ಕೂಡ ತುಂಬ ಗಂಭೀರವಾದ ವಿಷ್ಯ ಆಗಿತ್ತು. ಹಾಗಾಗಿ ಬೈಬಲಲ್ಲಿ ಕೆಲವು ವಚನಗಳಲ್ಲಿ ಆಣೆ ಮತ್ತು ಹರಕೆ ಎರಡನ್ನೂ ಒಟ್ಟೊಟ್ಟಿಗೆ ತಿಳಿಸಲಾಗಿದೆ. (ಅರ 30:2; ಮತ್ತಾ 5:33) ‘ಹರಕೆ ಹೊರೋದು’ ಅಂದ್ರೆ ಮಾತು ಕೊಡೋದು ಅಂತ ಅರ್ಥ. ‘ಆಣೆ ಮಾಡೋದು’ ಅಂದ್ರೆ ಒಂದು ವಿಷ್ಯ ಮಾಡೇ ಮಾಡ್ತೀನಿ ಅಂತ ತನಗಿಂತ ಒಳ್ಳೇ ಸ್ಥಾನದಲ್ಲಿ ಇರೋ ವ್ಯಕ್ತಿಯ ಹೆಸರಲ್ಲಿ ಶಪಥ ಮಾಡೋದು ಅಂತ ಅರ್ಥ. ಸಾಮಾನ್ಯವಾಗಿ ಜನ ಒಪ್ಪಂದ ಮಾಡಿಕೊಳ್ಳುವಾಗ ಆಣೆ ಮಾಡ್ತಿದ್ರು.—ಆದಿ 26:28; 31:44, 53.
ಕಾವಲಿನಬುರುಜು04 8/1 ಪುಟ 27 ಪ್ಯಾರ 3
ಅರಣ್ಯಕಾಂಡ ಪುಸ್ತಕದ ಮುಖ್ಯಾಂಶಗಳು
30:6-8—ಕ್ರೈಸ್ತ ಪುರುಷನೊಬ್ಬನು ತನ್ನ ಹೆಂಡತಿಯ ಹರಕೆಗಳನ್ನು ರದ್ದುಪಡಿಸಸಾಧ್ಯವಿದೆಯೊ? ಹರಕೆಗಳ ವಿಷಯದಲ್ಲಿ ಹೇಳುವುದಾದರೆ, ಈಗ ಯೆಹೋವನು ತನ್ನ ಆರಾಧಕರೊಂದಿಗೆ ವೈಯಕ್ತಿಕವಾಗಿ ವ್ಯವಹರಿಸುತ್ತಾನೆ. ಉದಾಹರಣೆಗೆ, ಯೆಹೋವನಿಗೆ ಮಾಡಲ್ಪಡುವ ಸಮರ್ಪಣೆಯು ಒಂದು ವೈಯಕ್ತಿಕ ಹರಕೆಯಾಗಿದೆ. (ಗಲಾತ್ಯ 6:5) ಇಂಥ ಹರಕೆಯನ್ನು ಬದಿಗೊತ್ತಲು ಅಥವಾ ರದ್ದುಪಡಿಸಲು ಗಂಡನಿಗೆ ಯಾವುದೇ ಅಧಿಕಾರವಿಲ್ಲ. ಆದರೂ, ದೇವರ ವಾಕ್ಯದೊಂದಿಗೆ ಅಥವಾ ಗಂಡನ ಕಡೆಗಿನ ತನ್ನ ಕರ್ತವ್ಯಗಳೊಂದಿಗೆ ಘರ್ಷಿಸುವಂಥ ಯಾವುದೇ ಹರಕೆಯನ್ನು ಪತ್ನಿಯು ಮಾಡಿಕೊಳ್ಳಬಾರದು.
ಆಧ್ಯಾತ್ಮಿಕ ಮುತ್ತುಗಳು
it-2-E ಪುಟ 28 ಪ್ಯಾರ 1
ಯೆಫ್ತಾಹ
ಯೆಹೋವನ ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ತಮ್ಮ ಮಕ್ಕಳನ್ನು ಕಳಿಸೋ ಅಧಿಕಾರ ಇಸ್ರಾಯೇಲಿನ ಹೆತ್ತವರಿಗೆ ಇತ್ತು. ಹನ್ನ ಕೂಡ ಸಮುವೇಲ ಹುಟ್ಟೋ ಮುಂಚೆ ಯೆಹೋವ ದೇವರಿಗೆ ‘ನಮಗೆ ಮಗ ಹುಟ್ಟಿದ್ರೆ ನಿನ್ನ ಸೇವೆ ಮಾಡೋಕೆ ಅವನನ್ನು ಕೊಡ್ತೀನಿ’ ಅಂತ ಮಾತು ಕೊಟ್ಟಳು. ಇದಕ್ಕೆ ಅವಳ ಗಂಡ ಎಲ್ಕಾನ ಒಪ್ಪಿಗೆ ಕೊಟ್ಟಿದ್ದ. ಸಮುವೇಲ ಎದೆಹಾಲು ಕುಡಿಯೋದನ್ನು ಬಿಟ್ಟ ಕೂಡಲೇ ಹನ್ನ ಅವನನ್ನು ಯೆಹೋವನ ಆರಾಧನಾ ಸ್ಥಳಕ್ಕೆ ಕರಕೊಂಡು ಹೋಗಿ ಒಪ್ಪಿಸಿದಳು. ಜೊತೆಗೆ ಒಂದು ಪ್ರಾಣಿಯನ್ನು ಬಲಿ ಕೊಟ್ಟಳು. (1ಸಮು 1:11, 22-28; 2:11) ಸಂಸೋನನನ್ನು ಕೂಡ ನಾಜೀರನಾಗಿ ದೇವರ ಸೇವೆ ಮಾಡೋಕೆ ಆಯ್ಕೆ ಮಾಡಲಾಗಿತ್ತು. (ನ್ಯಾಯ 13:2-5, 11-14) ತಂದೆಗೆ ಮಗಳ ಮೇಲೆ ಯಾವ ಅಧಿಕಾರ ಇದೆ ಅನ್ನೋದರ ಬಗ್ಗೆ ಅರಣ್ಯಕಾಂಡ 30:3-5, 16 ರಲ್ಲಿ ತಿಳಿಸಲಾಗಿದೆ.
ಮೇ 17-23
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 32-33
“ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು”
ಕಾವಲಿನಬುರುಜು10-E 8/1 ಪುಟ 23
ನಿಮಗೆ ಗೊತ್ತಿತ್ತಾ?
ಪವಿತ್ರ ಗ್ರಂಥದ ಹೀಬ್ರು ಭಾಗದಲ್ಲಿ ತಿಳಿಸಿರೋ “ಎತ್ತರ ಸ್ಥಳಗಳು” ಅಂದರೇನು?
ದೇವರು ಇಸ್ರಾಯೇಲ್ಯರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶದಲ್ಲಿ ಮುಂಚೆ ಕಾನಾನ್ಯರು ಇದ್ರು. ಅವರು ತುಂಬ ಕಡೆ ಪೂಜಾಸ್ಥಳಗಳನ್ನು ಮಾಡಿಕೊಂಡಿದ್ರು. ಅದಕ್ಕೆ ಇಸ್ರಾಯೇಲ್ಯರು ಆ ದೇಶಕ್ಕೆ ಇನ್ನೇನು ಹೋಗಬೇಕಂತ ಇದ್ದಾಗ ಯೆಹೋವ ಅವರಿಗೆ “[ಕಾನಾನ್ಯರ] ಹತ್ರ ಇರೋ ಕಲ್ಲಲ್ಲಿ ಕೆತ್ತಿದ ಎಲ್ಲ ಮೂರ್ತಿಗಳನ್ನ, ಅಚ್ಚಲ್ಲಿ ಲೋಹ ಹೊಯ್ದು ಮಾಡಿದ ಮೂರ್ತಿಗಳನ್ನ ನಾಶಮಾಡಬೇಕು. ಅವರು ತಮ್ಮ ದೇವರುಗಳನ್ನ ಆರಾಧಿಸೋ ಎಲ್ಲ ಜಾಗಗಳನ್ನ ನೆಲಸಮ ಮಾಡಬೇಕು” ಅಂತ ಹೇಳಿದ್ದನು. (ಅರಣ್ಯಕಾಂಡ 33:52) ಈ ಪೂಜಾಸ್ಥಳಗಳು ಬೆಟ್ಟಗುಡ್ಡಗಳು ಆಗಿರಬಹುದು. ಪಟ್ಟಣಗಳಲ್ಲಿ ಅಥವಾ ಮರಗಳ ಕೆಳಗೆ ಅವರೇ ಕಟ್ಟಿದ ಪೂಜಾ ಮಂದಿರಗಳೂ ಆಗಿರಬಹುದು. (1 ಅರಸು 14:23; 2 ಅರಸು 17:29; ಯೆಹೆಜ್ಕೇಲ 6:3) ಆ ಪೂಜಾಸ್ಥಳಗಳಲ್ಲಿ ಯಜ್ಞವೇದಿಗಳು, ಪೂಜಾಕಂಬಗಳು, ವಿಗ್ರಹಸ್ತಂಭಗಳು, ಮೂರ್ತಿಗಳು, ಧೂಪಸ್ತಂಭಗಳು ಮತ್ತು ಆರಾಧನೆಗೆ ಬಳಸ್ತಿದ್ದ ಇತರ ವಸ್ತುಗಳು ಇರುತ್ತಿತ್ತು.
ಕಾವಲಿನಬುರುಜು08 2/15 ಪುಟ 27 ಪ್ಯಾರ 5-6
ಇಸ್ರಾಯೇಲ್ಯರ ತಪ್ಪುಗಳಿಂದ ಪಾಠಕಲಿಯಿರಿ
ಇಸ್ರಾಯೇಲ್ಯರು ಎದುರಿಸಿದ್ದಕ್ಕೆ ಸಮಾನವಾದ ಅನೇಕ ಪರೀಕ್ಷೆಗಳನ್ನು ಇಂದು ನಾವು ಸಹ ಎದುರಿಸುತ್ತೇವೆ. ಇಂದಿನ ಆಧುನಿಕ ಸಮಾಜದಲ್ಲಿ ಅನೇಕ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ದೇವರುಗಳೋ ಎಂಬಂತೆ ವೀಕ್ಷಿಸುವ ಜನರಿದ್ದಾರೆ. ಅದರಲ್ಲಿ ಹಣ, ಮನೋರಂಜನಾ ಜಗತ್ತಿನ ತಾರೆಗಳು, ಕ್ರೀಡಾಪಟುಗಳು, ರಾಜಕೀಯ ವ್ಯವಸ್ಥೆಗಳು, ನಿರ್ದಿಷ್ಟ ಧಾರ್ಮಿಕ ಮುಖಂಡರು ಮತ್ತು ಕುಟುಂಬ ಸದಸ್ಯರು ಸಹ ಸೇರಿರುತ್ತಾರೆ. ಇವರಲ್ಲಿ ಯಾರಾದರೂ ನಮ್ಮ ಜೀವನದ ಕೇಂದ್ರಬಿಂದು ಆಗುವ ಸಂಭಾವ್ಯತೆ ಇದೆ. ಯೆಹೋವನನ್ನು ಪ್ರೀತಿಸದಿರುವ ಜನರೊಂದಿಗೆ ಆಪ್ತ ಸ್ನೇಹವನ್ನು ಬೆಳೆಸುವುದು ನಮ್ಮ ಆಧ್ಯಾತ್ಮಿಕ ಧ್ವಂಸಕ್ಕೆ ನಡಿಸಬಲ್ಲದು.
ಅನೇಕ ಇಸ್ರಾಯೇಲ್ಯರನ್ನು ಆಕರ್ಷಿಸಿ ಪಾಶಕ್ಕೆ ಸೆಳೆದದ್ದು ಬಾಳನ ಆರಾಧನೆಯ ಮೂಲಭೂತ ಭಾಗವಾಗಿದ್ದ ನಿಷಿದ್ಧ ಲೈಂಗಿಕತೆಯೇ. ತದ್ರೀತಿಯ ಪಾಶಗಳಿಗೆ ದೇವಜನರು ಇನ್ನೂ ಬಲಿಪಶುಗಳಾಗುತ್ತಿದ್ದಾರೆ. ದೃಷ್ಟಾಂತಕ್ಕಾಗಿ, ಕುತೂಹಲಿಯೂ ಅಜಾಗರೂಕನೂ ಆಗಿರುವ ವ್ಯಕ್ತಿಗೆ ಈಗಿನ ಕಾಲದಲ್ಲಿ ತನ್ನ ಶುದ್ಧ ಮನಸ್ಸಾಕ್ಷಿಯನ್ನು ಧ್ವಂಸಗೊಳಿಸಿಕೊಳ್ಳುವುದು ಅತಿ ಸುಲಭ; ಕೇವಲ ತನ್ನ ಮನೆಯ ಏಕಾಂತದಲ್ಲಿ ಕೂತುಕೊಂಡು ಕಂಪ್ಯೂಟರ್ ಇಂಟರ್ನೆಟ್ ಮೂಲಕ ಕಾಮಪ್ರಚೋದಕ ಕೃತ್ಯಗಳನ್ನು ನೋಡುವುದಷ್ಟೇ ಸಾಕು. ಈ ರೀತಿ ಇಂಟರ್ನೆಟ್ನ ಅಶ್ಲೀಲ ಚಿತ್ರಗಳ ಮೂಲಕ ಕ್ರೈಸ್ತರು ಪ್ರಲೋಭನೆಗೆ ಸೆಳೆಯಲ್ಪಡುವುದು ಅದೆಷ್ಟು ಶೋಚನೀಯ!
it-1-E ಪುಟ 404 ಪ್ಯಾರ 2
ಕಾನಾನ್
ಯೆಹೋವ ಮೋಶೆ ಮೂಲಕ ಯೆಹೋಶುವನಿಗೆ ಕಾನಾನ್ಯರನ್ನು ನಾಶ ಮಾಡಬೇಕು ಅಂತ ಆಜ್ಞೆ ಕೊಟ್ಟಿದ್ದನು. ಯೆಹೋವ “ಹೇಳಿದ ವಿಷ್ಯಗಳಲ್ಲಿ ಒಂದನ್ನೂ ಬಿಡದೆ ಎಲ್ಲವನ್ನ ಯೆಹೋಶುವ ಪಾಲಿಸಿದ.” (ಯೆಹೋ 11:15) ಆದ್ರೆ ಮುಂದಕ್ಕೆ ಇಸ್ರಾಯೇಲ್ಯರು ಯೆಹೋಶುವನ ತರ ಮಾಡಲಿಲ್ಲ. ಆ ದೇಶದಲ್ಲಿ ಉಳಿದಿದ್ದ ಕಾನಾನ್ಯರನ್ನು ನಾಶ ಮಾಡದೆ ಹಾಗೇ ಬಿಟ್ಟುಬಿಟ್ರು. ಇದರಿಂದಾಗಿ ಇಸ್ರಾಯೇಲ್ಯರ ಮಧ್ಯನೂ ಅಪರಾಧಗಳು, ಲೈಂಗಿಕ ಅನೈತಿಕತೆ, ಮೂರ್ತಿಪೂಜೆ ಸರ್ವಸಾಮಾನ್ಯ ಆಗಿಹೋಯ್ತು. ಇದ್ರ ಪರಿಣಾಮವಾಗಿ ತುಂಬ ಜನ ಪ್ರಾಣ ಕಳಕೊಂಡ್ರು. ಒಂದುವೇಳೆ ಇಸ್ರಾಯೇಲ್ಯರು ಯೆಹೋವ ಹೇಳಿದಂತೆ ಕಾನಾನ್ಯರನ್ನು ಸರ್ವನಾಶ ಮಾಡಿದ್ರೆ ಎಷ್ಟು ಜನ ಪ್ರಾಣ ಕಳಕೊಳ್ಳುತ್ತಿದ್ರೋ ಅದಕ್ಕಿಂತ ಜಾಸ್ತಿ ಸಂಖ್ಯೆಯಲ್ಲಿ ಯೆಹೋವನ ಮಾತು ಕೇಳದೆ ಪ್ರಾಣ ಕಳಕೊಂಡ್ರು. (ಅರ 33:55, 56; ನ್ಯಾಯ 2:1-3, 11-23; ಕೀರ್ತ 106:34-43) ‘ಕಾನಾನ್ಯರ ಸ್ನೇಹ ಮಾಡಬಾರದು, ಅವರಲ್ಲಿ ಯಾರನ್ನೂ ಮದುವೆ ಆಗಬಾರದು, ಅವರ ಧರ್ಮದ ಆಚಾರ-ವಿಚಾರಗಳನ್ನು ಪಾಲಿಸಬಾರದು, ಅವರ ತರ ಕೆಟ್ಟ ಕೆಲಸ ಮಾಡಬಾರದು. ಮಾಡಿದ್ರೆ ಶಿಕ್ಷೆ ಕೊಡ್ತೀನಿ. ಅವರನ್ನು ಹೇಗೆ ನಾಶ ಮಾಡಿದ್ನೋ ಹಾಗೇ ನಿಮ್ಮನ್ನೂ ನಾಶ ಮಾಡ್ತೀನಿ. ಅವರನ್ನು ಈ ದೇಶದಿಂದ ಓಡಿಸಿದ ಹಾಗೆ ನಿಮ್ಮನ್ನೂ ಓಡಿಸಿಬಿಡ್ತೀನಿ. ಇದ್ರಲ್ಲಿ ಯಾವುದೇ ವಿನಾಯಿತಿ ತೋರಿಸಲ್ಲ’ ಅಂತ ಯೆಹೋವ ಮೊದಲೇ ಇಸ್ರಾಯೇಲ್ಯರಿಗೆ ಎಚ್ಚರಿಕೆ ಕೊಟ್ಟಿದ್ದನು.—ವಿಮೋ 23:32, 33; 34:12-17; ಯಾಜ 18:26-30; ಧರ್ಮೋ 7:2-5, 25, 26.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 359 ಪ್ಯಾರ 2
ಗಡಿ
ಯಾವ ಕುಲಕ್ಕೆ ಎಲ್ಲಿ ಜಮೀನು ಕೊಡಬೇಕು ಅಂತ ಚೀಟು ಹಾಕಿ ತೀರ್ಮಾನ ಮಾಡಿದ ಮೇಲೆ ಪ್ರತಿಯೊಂದು ಕುಲ ಎಷ್ಟು ದೊಡ್ಡದಿದೆ ಅಂತ ನೋಡಿ ಅದಕ್ಕೆ ತಕ್ಕ ಹಾಗೆ ಜಮೀನನ್ನು ಹಂಚಿಕೊಡಬೇಕಿತ್ತು. ಯಾಕಂದ್ರೆ ಯೆಹೋವ ಅವ್ರಿಗೆ ಹೀಗೆ ಹೇಳಿದ್ದನು: “ನೀವು ಚೀಟು ಹಾಕಿ ದೇಶವನ್ನ ಪ್ರತಿಯೊಂದು ಕುಲಕ್ಕೆ, ಕುಟುಂಬಕ್ಕೆ ಹಂಚಿಕೊಡಬೇಕು. ಜಾಸ್ತಿ ಜನ ಇರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ ಇರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡಬೇಕು. ಚೀಟು ಹಾಕಿದಾಗ ಯಾವ ಕುಟುಂಬಕ್ಕೆ ಯಾವ ಜಮೀನು ಬರುತ್ತೋ ಅದೇ ಜಮೀನನ್ನ ಕೊಡಬೇಕು.” (ಅರ 33:54) ಚೀಟು ಹಾಕಿದಾಗ ಯಾವ ಕುಲಕ್ಕೆ ಎಲ್ಲಿ ಜಮೀನು ಸಿಗಬೇಕು ಅಂತ ಬಂತೋ ಅಲ್ಲೇ ಜಮೀನನ್ನು ಕೊಡಲಾಯ್ತು. ಅದ್ರಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಆದ್ರೆ ಪ್ರತಿಯೊಂದು ಕುಲ ಎಷ್ಟು ದೊಡ್ಡದಿದೆ ಅಂತ ನೋಡಿ ಅದ್ರ ಪ್ರಕಾರ ಎಷ್ಟು ಜಮೀನು ಕೊಡಬೇಕು ಅನ್ನೋ ವಿಷ್ಯದಲ್ಲಿ ಸ್ವಲ್ಪ ಬದಲಾವಣೆ ಆಯ್ತು. ಹೀಗೆ ಯೆಹೂದ ಕುಲಕ್ಕೆ ಸಿಕ್ಕಿದ ದೊಡ್ಡ ಪ್ರದೇಶದಲ್ಲಿ ಸ್ವಲ್ಪ ಭಾಗವನ್ನು ಸಿಮೆಯೋನ್ ಕುಲಕ್ಕೆ ಹಂಚಿಕೊಡಲಾಯ್ತು.—ಯೆಹೋ 19:9.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು09-E 10/1 ಪುಟ 30 ರ ಚೌಕ
ದೇವರು ಇಸ್ರಾಯೇಲ್ಯರಿಗೆ ಯುದ್ಧದಲ್ಲಿ ಜಯ ಕೊಟ್ಟನು
ಕ್ರೈಸ್ತ ಧರ್ಮ ಸ್ಥಾಪನೆ ಆಗೋ ಶತಮಾನಗಳ ಮುಂಚೆನೇ ಇಸ್ರಾಯೇಲನ್ನು ಯೆಹೋವ ತನ್ನ ಜನಾಂಗವಾಗಿ ಆರಿಸಿಕೊಂಡನು. ಬೇರೆ ದೇಶಗಳ ಜೊತೆ ಯುದ್ಧ ಮಾಡೋಕೆ ಆತನು ಅವರಿಗೆ ಕೆಲವೊಮ್ಮೆ ಹೇಳ್ತಿದ್ದನು. ಅವರು ಕಾನಾನ್ ದೇಶಕ್ಕೆ ಅಂದ್ರೆ ಅಬ್ರಹಾಮನಿಗೆ ದೇವರು ಕೊಡ್ತೀನಿ ಅಂತ ಮಾತುಕೊಟ್ಟ ದೇಶಕ್ಕೆ ಹೋಗೋ ಮುಂಚೆ ಹೀಗೆ ಹೇಳಿದ್ದನು: “ನಿಮ್ಮ ದೇವರಾದ ಯೆಹೋವ . . . ಏಳು ದೇಶದವರನ್ನ . . . ನಿಮ್ಮ ಕೈಗೆ ಕೊಡ್ತಾನೆ, ನೀವು ಸೋಲಿಸ್ತೀರ. ಆಗ ಅವ್ರನ್ನ ಪೂರ್ತಿಯಾಗಿ ನಾಶ ಮಾಡಬೇಕು. ಅವ್ರ ಜೊತೆ ಯಾವುದೇ ಒಪ್ಪಂದ ಮಾಡ್ಕೊಬಾರದು, ಸ್ವಲ್ಪನೂ ದಯೆ ತೋರಿಸಬಾರದು.” (ಧರ್ಮೋಪದೇಶಕಾಂಡ 7:1, 2) ಹಾಗಾಗಿ ಇಸ್ರಾಯೇಲಿನ ನಾಯಕನಾದ ಯೆಹೋಶುವ “ಇಸ್ರಾಯೇಲಿನ ದೇವರಾದ ಯೆಹೋವ ಆಜ್ಞಾಪಿಸಿದ ಹಾಗೇ” ಆ ಶತ್ರು ದೇಶದವರನ್ನು ಸೋಲಿಸಿದ.—ಯೆಹೋಶುವ 10:40.
ಯೆಹೋವ ಇಸ್ರಾಯೇಲ್ಯರಿಗೆ ಬೇರೆ ದೇಶದವರ ಮೇಲೆ ಯುದ್ಧ ಮಾಡಿ, ಅವರನ್ನು ದೋಚಿ, ಕಣ್ಣಿಗೆ ಕಂಡವರನ್ನೆಲ್ಲ ಕೊಂದುಬಿಡಿ ಅಂತ ಹೇಳಿದ್ನಾ? ಖಂಡಿತ ಇಲ್ಲ. ಬೇರೆ ದೇಶಗಳ ಮೇಲೆ ಯುದ್ಧ ಮಾಡಿ ಅಂತ ಹೇಳೋಕೆ ಯೆಹೋವನಿಗೆ ಒಂದು ಕಾರಣ ಇತ್ತು. ಅದೇನಂದ್ರೆ ಆ ದೇಶಗಳನ್ನು ಜನ್ರು ಮೂರ್ತಿಪೂಜೆ, ಕೊಲೆ, ನೀಚ ಲೈಂಗಿಕ ನಡತೆಗಳಿಂದ ತುಂಬಿಸಿಬಿಟ್ಟಿದ್ರು. ಅಷ್ಟೇ ಅಲ್ಲ ಮಕ್ಕಳನ್ನು ಬೆಂಕಿಯಲ್ಲಿ ಬಲಿ ಕೊಡ್ತಿದ್ರು. (ಅರಣ್ಯಕಾಂಡ 33:52; ಯೆರೆಮೀಯ 7:31) ಯೆಹೋವ ಪವಿತ್ರನಾದ ದೇವರು. ಏನೇ ಮಾಡಿದ್ರೂ ನ್ಯಾಯದಿಂದ ಮಾಡ್ತಾನೆ. ತನ್ನ ಜನರನ್ನು ತುಂಬ ಪ್ರೀತಿಸೋ ದೇವರು. ಹಾಗಾಗಿ ದೇಶದಿಂದ ಕೆಟ್ಟ ಜನರನ್ನು ಪೂರ್ತಿ ನಾಶ ಮಾಡಬೇಕು ಅಂತ ಆಜ್ಞೆ ಕೊಟ್ಟನು. ಆದ್ರೆ ಯಾರೆಲ್ಲ ಕೆಟ್ಟ ಕೆಲಸ ಮಾಡೋದನ್ನು ನಿಲ್ಲಿಸಿ ತನ್ನ ಆರಾಧನೆ ಮಾಡ್ತಾರೋ ಅಂಥವರನ್ನು ನಾಶ ಮಾಡಬಾರದು ಅಂತನೂ ಯೆಹೋವ ಇಸ್ರಾಯೇಲ್ಯರಿಗೆ ಹೇಳಿದ್ದನು. ಯಾಕಂದ್ರೆ ಯೆಹೋವನಿಗೆ ಪ್ರತಿಯೊಬ್ಬನ ಹೃದಯಲ್ಲಿ ಏನಿದೆ ಅಂತ ಗೊತ್ತಾಗುತ್ತೆ. ಆ ಸಾಮರ್ಥ್ಯ ಇವತ್ತಿರೋ ಯಾವ ಸೇನಾಧಿಕಾರಿಗೂ ಇಲ್ಲ.
ಮೇ 24-30
ಬೈಬಲಿನಲ್ಲಿರುವ ರತ್ನಗಳು | ಅರಣ್ಯಕಾಂಡ 34-36
“ಯೆಹೋವನಲ್ಲಿ ಆಶ್ರಯಿಸಿ”
ಕಾವಲಿನಬುರುಜು17.11 ಪುಟ 9 ಪ್ಯಾರ 4
ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?
4 ಆದರೆ ಇಸ್ರಾಯೇಲ್ಯನೊಬ್ಬನಿಂದಾಗಿ ಆಕಸ್ಮಿಕವಾಗಿ ಒಬ್ಬನ ಜೀವ ಹೋದರೆ ಆಗೇನು? ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲವಾದರೂ ಒಬ್ಬ ಅಮಾಯಕನ ಜೀವ ತೆಗೆದಿದ್ದಾನೆಂಬ ಕಾರಣಕ್ಕೆ ಅವನು ದೋಷಿ ಆಗುತ್ತಿದ್ದನು. (ಆದಿ. 9:5) ಆದರೆ ಇಂಥವನಿಗೆ ಕರುಣೆ ತೋರಿಸಬೇಕೆಂದು ಯೆಹೋವನು ಹೇಳಿದನು. ಕೈತಪ್ಪಿ ಕೊಂದವನು ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧುವಿನಿಂದ ತಪ್ಪಿಸಿಕೊಂಡು ಆರು ಆಶ್ರಯನಗರಗಳಲ್ಲಿ ಒಂದಕ್ಕೆ ಓಡಿಹೋಗಬೇಕಿತ್ತು. ಆ ನಗರ ಪ್ರವೇಶಿಸಿದ ನಂತರ ಅವನಿಗೆ ಅಲ್ಲಿ ಸಂರಕ್ಷಣೆ ಸಿಗುತ್ತಿತ್ತು. ಮಹಾಯಾಜಕ ತೀರಿಹೋಗುವ ತನಕ ಅವನು ಅಲ್ಲೇ ಇರಬೇಕಾಗಿತ್ತು.—ಅರ. 35:15, 28.
ಕಾವಲಿನಬುರುಜು17.11 ಪುಟ 9 ಪ್ಯಾರ 6
ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?
6 ಆಕಸ್ಮಿಕವಾಗಿ ಒಬ್ಬನನ್ನು ಕೊಂದ ಇಸ್ರಾಯೇಲ್ಯನು ಆಶ್ರಯನಗರವೊಂದಕ್ಕೆ ಓಡಿಹೋಗಿ ಅಲ್ಲಿನ ಹಿರಿಯರಿಗೆ ಊರಬಾಗಲಲ್ಲೇ ‘ತನ್ನ ಸಂಗತಿಯನ್ನು ತಿಳಿಯಪಡಿಸಬೇಕಿತ್ತು.’ ನಂತರ ಆ ಹಿರಿಯರು ಅವನನ್ನು ಊರೊಳಗೆ ಸೇರಿಸಿಕೊಳ್ಳಬೇಕಿತ್ತು. (ಯೆಹೋ. 20:4) ಸ್ವಲ್ಪ ಸಮಯದ ನಂತರ ಈ ಹಿರಿಯರು ಅವನನ್ನು, ಹತ್ಯೆ ಎಲ್ಲಿ ನಡೆದಿತ್ತೊ ಆ ಊರಿನ ಹಿರಿಯರ ಬಳಿ ನ್ಯಾಯವಿಚಾರಣೆಗಾಗಿ ಕಳುಹಿಸಬೇಕಿತ್ತು. (ಅರಣ್ಯಕಾಂಡ 35:24, 25 ಓದಿ.) ಆ ಊರಿನ ಹಿರಿಯರು ಇದು ನಿಜವಾಗಲೂ ಆಕಸ್ಮಿಕವಾಗಿ ನಡೆದ ಘಟನೆ ಎಂದು ತೀರ್ಮಾನಿಸಿದ ನಂತರ ಅವನನ್ನು ಆಶ್ರಯನಗರಕ್ಕೆ ಹಿಂದೆ ಕಳುಹಿಸಬೇಕಿತ್ತು.
ಕಾವಲಿನಬುರುಜು17.11 ಪುಟ 11 ಪ್ಯಾರ 13
ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?
13 ಆಕಸ್ಮಿಕವಾಗಿ ಒಬ್ಬನನ್ನು ಕೊಂದುಬಿಟ್ಟವನು ಆಶ್ರಯನಗರದ ಒಳಗೆ ಹೋದ ಮೇಲೆ ಸುರಕ್ಷಿತವಾಗಿರುತ್ತಾನೆ. ಆ ನಗರಗಳ ಬಗ್ಗೆ ಯೆಹೋವನು ಹೇಳಿದ್ದು: “ಅವು ನಿಮಗೆ ಆಶ್ರಯಸ್ಥಾನಗಳಾಗುವವು.” (ಯೆಹೋ. 20:2, 3) ಆಕಸ್ಮಿಕವಾಗಿ ನಡೆದ ಆ ಹತ್ಯೆಗಾಗಿ ಪುನಃ ನ್ಯಾಯವಿಚಾರಣೆ ನಡೆಸಬೇಕೆಂದು ಯೆಹೋವನು ಅವಶ್ಯಪಡಿಸಲಿಲ್ಲ. ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧು ಆ ವ್ಯಕ್ತಿಯನ್ನು ಕೊಲ್ಲಲಿಕ್ಕಾಗಿ ಆ ನಗರವನ್ನು ಪ್ರವೇಶಿಸುವ ಅನುಮತಿಯೂ ಇರಲಿಲ್ಲ. ಹಾಗಾಗಿ ಆಕಸ್ಮಿಕವಾಗಿ ಒಬ್ಬನನ್ನು ಕೊಂದುಬಿಟ್ಟವನು ಆಶ್ರಯನಗರದೊಳಗೆ ಇದ್ದರೆ ಅವನು ಯೆಹೋವನ ಸಂರಕ್ಷಣೆಯಲ್ಲಿದ್ದಾನೆ ಎಂದರ್ಥ. ಆಶ್ರಯನಗರ ಅವನಿಗೆ ಜೈಲು ಆಗಿರಲಿಲ್ಲ. ಯಾಕೆಂದರೆ ಅವನು ಅಲ್ಲಿ ಕೆಲಸ ಮಾಡಬಹುದಿತ್ತು, ಬೇರೆಯವರಿಗೆ ಸಹಾಯ ಮಾಡಬಹುದಿತ್ತು ಮತ್ತು ಯೆಹೋವನನ್ನು ಶಾಂತಿ-ಸಮಾಧಾನದಿಂದ ಆರಾಧಿಸಬಹುದಿತ್ತು. ಅಲ್ಲಿ ಅವನು ಸಂತೋಷ-ಸಂತೃಪ್ತಿಯಿಂದ ಜೀವನ ನಡೆಸಬಹುದಿತ್ತು!
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು91-E 2/15 ಪುಟ 13 ಪ್ಯಾರ 13
ಸರಿಸಮವಾದ ಬಿಡುಗಡೆ ಬೆಲೆ
13 ನಿಯಮ ಪುಸ್ತಕದಲ್ಲಿ “ಮರಣಕ್ಕೆ ಅರ್ಹನಾದ ಕೊಲೆಗಾರನ ಜೀವ ಉಳಿಸೋಕೆ ಬಿಡುಗಡೆ ಬೆಲೆ ತಗೊಳ್ಳಬಾರದು” ಅನ್ನೋ ನಿಯಮ ಇತ್ತು. (ಅರಣ್ಯಕಾಂಡ 35:31) ಈ ನಿಯಮದ ಹಿಂದಿರುವ ತತ್ವದ ಆಧಾರದ ಮೇಲೆ ಆದಾಮನಿಗಾಗಲಿ ಹವ್ವಳಿಗಾಗಲಿ ಯೇಸು ಕೊಟ್ಟ ಬಿಡುಗಡೆ ಬೆಲೆಯಿಂದ ಪ್ರಯೋಜನ ಸಿಗಲ್ಲ. ಆದಾಮ ಬೇಕು ಬೇಕಂತನೇ ಪಾಪಮಾಡಿದ. ಯಾಕಂದ್ರೆ ಆದಾಮ ಮೋಸ ಹೋಗಲಿಲ್ಲ ಅಂತ ಬೈಬಲ್ ಹೇಳುತ್ತೆ. (1 ತಿಮೊತಿ 2:14) ಅವನು ಪಾಪ ಮಾಡಿದ್ದರಿಂದ ಅವನ ವಂಶದವರೆಲ್ಲಾ ಅಪರಿಪೂರ್ಣರಾಗಿದ್ದಾರೆ ಮತ್ತು ಸಾಯ್ತಾನೇ ಇದ್ದಾರೆ. ಹೀಗೆ ಅವನು ಕೊಲೆಗಾರನಾದ. ಅಷ್ಟೇ ಅಲ್ಲ ಅವನು ಪರಿಪೂರ್ಣ ಮನುಷ್ಯನಾಗಿದ್ರೂ ದೇವರ ನಿಯಮವನ್ನು ಬೇಕಂತನೇ ಮುರಿದ. ಹಾಗಾಗಿ ಆದಾಮನಿಗೆ ಮರಣ ಶಿಕ್ಷೆ ಆಗಲೇಬೇಕು. ಯೆಹೋವ ದೇವರು ನೀತಿಯನ್ನ ಪಾಲಿಸೋ ದೇವರು. ಒಂದುವೇಳೆ ಆದಾಮನಿಗೆ ಬಿಡುಗಡೆ ಬೆಲೆಯ ಪ್ರಯೋಜನ ಸಿಗೋ ತರ ಮಾಡಿದ್ರೆ ತನ್ನ ನಿಯಮವನ್ನ ತಾನೇ ಮುರಿದ ಹಾಗೆ ಆಗ್ತಿತ್ತು. ಹಾಗಾಗಿ ದೇವರು ಆದಾಮ ಮಾಡಿದ ಪಾಪಕ್ಕೆ ಅವನಿಗೆ ತಕ್ಕ ಶಿಕ್ಷೆ ಕೊಟ್ಟನು. ಅಷ್ಟೇ ಅಲ್ಲ ಆದಾಮನ ವಂಶದವರನ್ನ ಮರಣದಿಂದ ಬಿಡಿಸೋಕೆ ಬೇಕಾದ ಏರ್ಪಾಡನ್ನ ಮಾಡಿದನು. (ರೋಮನ್ನರಿಗೆ 5:16) ಯೇಸು ತನ್ನ ಪ್ರಾಣವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು “ಎಲ್ರಿಗೋಸ್ಕರ” ಅಂದ್ರೆ ಆದಾಮನ ಎಲ್ಲಾ ಮಕ್ಕಳಿಗೋಸ್ಕರ “ಸಾವಿನ ರುಚಿ ನೋಡಿದನು.” ಹೀಗೆ ಎಲ್ಲಾ ಮನುಷ್ಯರಿಗೆ ಮರಣದಿಂದ ಬಿಡುಗಡೆಯಾಗೋಕೆ ಯೆಹೋವ ಏರ್ಪಾಡು ಮಾಡಿದನು.—ಇಬ್ರಿಯ 2:9; 2 ಕೊರಿಂಥ 5:21; 1 ಪೇತ್ರ 2:24.
ಮೇ 31–ಜೂನ್ 6
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 1-2
“ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ”
ಕಾವಲಿನಬುರುಜು96 3/15 ಪುಟ 23 ಪ್ಯಾರ 1
ಯೆಹೋವ—ನೀತಿ ಮತ್ತು ನ್ಯಾಯವನ್ನು ಪ್ರೀತಿಸುವವನು
ನೇಮಿತ ಸಭಾ ಹಿರಿಯರು ಗಂಭೀರವಾದ ತಪ್ಪುಮಾಡುವಿಕೆಯ ಮೊಕದ್ದಮೆಗಳನ್ನು ತೀರ್ಪು ಮಾಡುವ ಹಂಗಿನವರಾಗಿದ್ದಾರೆ. (1 ಕೊರಿಂಥ 5:12, 13) ಹಾಗೆ ಮಾಡುವಾಗ, ದೇವರ ನ್ಯಾಯವು ಸಾಧ್ಯವಾಗುವಲ್ಲೆಲ್ಲಾ ಕರುಣೆಯನ್ನು ನೀಡಲು ಕೋರುತ್ತದೆ ಎಂಬುದನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. ಕರುಣೆಗಾಗಿ ಆಧಾರವು ಇಲ್ಲದಿರುವಲ್ಲಿ—ಪಶ್ಚಾತ್ತಾಪವಿಲ್ಲದ ಪಾಪಿಗಳ ವಿಷಯದಲ್ಲಿರುವಂತೆ—ಅದನ್ನು ನೀಡಸಾಧ್ಯವಿಲ್ಲ. ಆದರೆ ಅಂತಹ ಒಬ್ಬ ತಪ್ಪಿತಸ್ಥನನ್ನು ಹಿರಿಯರು, ಸೇಡನ್ನು ತೀರಿಸಲು ಸಭೆಯಿಂದ ಬಹಿಷ್ಕರಿಸುವುದಿಲ್ಲ. ಬಹಿಷ್ಕಾರ ಮಾಡುವ ಕ್ರಿಯೆಯು ತಾನೇ ಅವನಿಗೆ ಬುದ್ಧಿ ಕಲಿಸುವುದೆಂದು ಅವರು ನಿರೀಕ್ಷಿಸುತ್ತಾರೆ. (ಹೋಲಿಸಿ ಯೆಹೆಜ್ಕೇಲ 18:23.) ಕ್ರಿಸ್ತನ ತಲೆತನದ ಕೆಳಗೆ, ಹಿರಿಯರು ನ್ಯಾಯಪಾಲನೆಗಾಗಿ ಸೇವೆ ಮಾಡುತ್ತಾರೆ, ಮತ್ತು ಇದು “ಗಾಳಿಯಲ್ಲಿ ಮರೆಯಂತೆ” ಇರುವುದನ್ನು ಒಳಗೊಳ್ಳುತ್ತದೆ. (ಯೆಶಾಯ 32:1, 2) ಆದುದರಿಂದ ಅವರು ನಿಷ್ಪಕ್ಷಪಾತವನ್ನೂ ವಿವೇಚನೆಯನ್ನೂ ತೋರಿಸಬೇಕು.—ಧರ್ಮೋಪದೇಶಕಾಂಡ 1:16, 17.
ಕಾವಲಿನಬುರುಜು02 8/1 ಪುಟ 9 ಪ್ಯಾರ 4
ದೈವಿಕ ಅಧಿಕಾರಕ್ಕೆ ನಿಷ್ಠೆಯಿಂದ ಅಧೀನರಾಗಿರಿ
4 ಆದರೂ, ನ್ಯಾಯಾಧೀಶನಾಗಿ ಸೇವೆಮಾಡುವುದರಲ್ಲಿ ನಿಯಮಜ್ಞಾನಕ್ಕಿಂತ ಹೆಚ್ಚಿನದ್ದು ಸೇರಿಕೊಂಡಿತ್ತು. ಅಪರಿಪೂರ್ಣರಾಗಿದ್ದುದರಿಂದ, ಈ ಹಿರೀ ಪುರುಷರು ತಮ್ಮ ತೀರ್ಪನ್ನು ವಕ್ರಗೊಳಿಸಸಾಧ್ಯವಿದ್ದ ತಮ್ಮ ಸ್ವಂತ ಮೊಂಡಾದ ಪ್ರವೃತ್ತಿಗಳನ್ನು, ಅಂದರೆ ಸ್ವಾರ್ಥ, ಪಕ್ಷಪಾತ ಮತ್ತು ಲೋಭಗಳನ್ನು ನಿಗ್ರಹಿಸಿಕೊಳ್ಳಲು ಎಚ್ಚರವಾಗಿರಬೇಕಾಗಿತ್ತು. ಮೋಶೆಯು ಅವರಿಗೆ ಹೇಳಿದ್ದು: “ನೀವು ನ್ಯಾಯದ ಪ್ರಕಾರವೇ ತೀರ್ಪು ಮಾಡಬೇಕು. ನ್ಯಾಯವಿಚಾರಿಸುವಾಗ ಮುಖದಾಕ್ಷಿಣ್ಯಮಾಡದೆ ಅಧಿಕರನ್ನೂ ಅಲ್ಪರನ್ನೂ ಸಮನಾಗಿ ತಿಳಿಯಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವವರಾದ ಕಾರಣ [“ನ್ಯಾಯತೀರ್ಪು ದೇವರದ್ದಾಗಿರುವ ಕಾರಣ,” NW] ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ.” (ಓರೆ ಅಕ್ಷರಗಳು ನಮ್ಮವು.) ಹೌದು, ಇಸ್ರಾಯೇಲಿನ ನ್ಯಾಯಾಧೀಶರು ದೇವರ ಹೆಸರಿನಲ್ಲಿ ನ್ಯಾಯತೀರಿಸುತ್ತಿದ್ದರು. ಎಂಥ ಗಂಭೀರ ಸುಯೋಗ ಅದಾಗಿತ್ತು!—ಧರ್ಮೋಪದೇಶಕಾಂಡ 1:16, 17.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು13 9/15 ಪುಟ 9 ಪ್ಯಾರ 9
ಯೆಹೋವನ ಮರುಜ್ಞಾಪನಗಳು ವಿಶ್ವಾಸಾರ್ಹ
9 ಇಸ್ರಾಯೇಲ್ಯರು ನಲ್ವತ್ತು ವರ್ಷ “ಘೋರವಾದ ಮಹಾರಣ್ಯದ”ಲ್ಲಿ ಅಲೆದಾಡಲಿದ್ದರು. ಅವರನ್ನು ಹೇಗೆ ನಡೆಸಿ ಕಾಪಾಡಿ ಪರಾಮರಿಸಲಿದ್ದಾನೆಂದು ಯೆಹೋವನು ಮೊದಲೇ ಅವರಿಗೆ ನಿರ್ದಿಷ್ಟ ವಿವರಣೆ ಕೊಡಲಿಲ್ಲ. ಆದರೂ ಅವರು ತನ್ನಲ್ಲಿ ಮತ್ತು ತನ್ನ ನಿರ್ದೇಶನಗಳಲ್ಲಿ ಭರವಸೆ ಇಡಬಹುದೆಂದು ಪದೇಪದೇ ತೋರಿಸಿದನು. ಹಗಲಲ್ಲಿ ಮೇಘಸ್ತಂಭ ಮತ್ತು ರಾತ್ರಿಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸುವ ಮೂಲಕ ಯೆಹೋವನು ಇಸ್ರಾಯೇಲ್ಯರನ್ನು ನಡೆಸಿದನು. ಹೀಗೆ ವಾಸಿಸಲು ಯೋಗ್ಯವಲ್ಲದ ಪ್ರದೇಶದುದ್ದಕ್ಕೂ ತಾನು ಅವರಿಗೆ ಬೆಂಬಲವಾಗಿದ್ದೇನೆಂದು ತೋರಿಸಿದನು. (ಧರ್ಮೋ. 1:19; ವಿಮೋ. 40:36-38) ಅವರ ಮೂಲಭೂತ ಅವಶ್ಯಕತೆಗಳನ್ನೂ ಒದಗಿಸಿದನು. “ಅವರ ಬಟ್ಟೆಗಳು ಜೀರ್ಣವಾಗಲಿಲ್ಲ, ಕಾಲುಗಳು ಬಾತುಹೋಗಲಿಲ್ಲ.” “ಅವರಿಗೆ ಯಾವ ಕೊರತೆಯೂ ಇರಲಿಲ್ಲ.”—ನೆಹೆ. 9:19-21.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು13 8/15 ಪುಟ 11 ಪ್ಯಾರ 7
ಯಾವತ್ತೂ ‘ಯೆಹೋವನ ಮೇಲೆ ಕುದಿಯಬೇಡಿ’
7 ಬೇರೆಯವರ ನಕಾರಾತ್ಮಕ ಮಾತು ನಮ್ಮನ್ನು ಪ್ರಭಾವಿಸಬಹುದು. (ಧರ್ಮೋಪದೇಶಕಾಂಡ 1:26-28 ಓದಿ.) ಯೆಹೋವನು ಈಜಿಪ್ಟಿನವರ ಮೇಲೆ ಅದ್ಭುತಕರವಾಗಿ ಹತ್ತು ಬಾಧೆಗಳನ್ನು ತಂದು ಇಸ್ರಾಯೇಲ್ಯರನ್ನು ಈಜಿಪ್ಟಿನ ದಾಸತ್ವದಿಂದ ಬಿಡುಗಡೆ ಮಾಡಿದ್ದನು. ಫರೋಹ ಮತ್ತವನ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿ ನಾಶಮಾಡಿದ್ದನು. (ವಿಮೋ. 12:29-32, 51; 14:29-31; ಕೀರ್ತ. 136:15) ದೇವಜನರು ವಾಗ್ದತ್ತ ದೇಶಕ್ಕೆ ಹೋಗಲು ಸಿದ್ಧರಾಗಿದ್ದರು. ಇಂಥ ಮಹತ್ವದ ಸಮಯದಲ್ಲಿ ಅವರು ಯೆಹೋವನನ್ನು ದೂರಿದರು. ಈ ಮಟ್ಟಕ್ಕೆ ಹೋಗುವಷ್ಟು ಅವರ ನಂಬಿಕೆ ಕುಗ್ಗಿದ್ದೇಕೆ? ವಾಗ್ದತ್ತ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದವರು ಕೊಟ್ಟ ನಕಾರಾತ್ಮಕ ವರದಿ ಅವರ ಧೈರ್ಯಗೆಡಿಸಿತು. (ಅರ. 14:1-4) ಫಲಿತಾಂಶ? ಆ ತಲೆಮಾರಿನವರು “ಒಳ್ಳೇ ದೇಶವನ್ನು” ನೋಡುವ ಸೌಭಾಗ್ಯವನ್ನು ಕಳೆದುಕೊಂಡರು. (ಧರ್ಮೋ. 1:34, 35) ನಾವೂ ಸಹ ಇನ್ನೊಬ್ಬರ ನಕಾರಾತ್ಮಕ ಮಾತುಗಳನ್ನು ಕೇಳಿ ನಮ್ಮ ನಂಬಿಕೆಗೆ ಪೆಟ್ಟಾಗುವಂತೆ ಬಿಟ್ಟುಕೊಡುತ್ತೇವಾ? ಯೆಹೋವನು ನಮ್ಮ ಜೊತೆ ವ್ಯವಹರಿಸುವ ರೀತಿಯ ಬಗ್ಗೆ ಗುಣುಗುಟ್ಟುತ್ತೇವಾ?
ಜೂನ್ 7-13
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 3-4
“ಯೆಹೋವನ ನಿಯಮಗಳಲ್ಲಿ ವಿವೇಕ ಮತ್ತು ನ್ಯಾಯ ಇದೆ”
it-2-E ಪುಟ 1140 ಪ್ಯಾರ 5
ತಿಳುವಳಿಕೆ
ಒಬ್ಬ ವ್ಯಕ್ತಿ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿ ಅದ್ರಲ್ಲಿರೋ ದೇವರ ನಿಯಮಗಳನ್ನ ಪಾಲಿಸಿದ್ರೆ ತನ್ನ ಶಿಕ್ಷಕರಿಗಿಂತ ಜಾಸ್ತಿ ತಿಳುವಳಿಕೆ ಪಡೀತಾನೆ ಮತ್ತು ವಯಸ್ಸಾದವರಿಗಿಂತ ಬುದ್ಧಿವಂತ ಆಗ್ತಾನೆ. (ಕೀರ್ತ 119:99, 100, 130; ಲೂಕ 2:46, 47 ಹೋಲಿಸಿ.) ಯಾಕಂದ್ರೆ ದೇವರು ಕೊಟ್ಟ ನೀತಿನಿಯಮಗಳ ಹಿಂದೆ ಆತನ ವಿವೇಕ, ತಿಳುವಳಿಕೆ ಅಡಗಿದೆ. ಹಾಗಾಗಿ ಇಸ್ರಾಯೇಲ್ಯರು ದೇವರ ನಿಯಮಗಳನ್ನ ಪಾಲಿಸಿದ್ರೆ ಸುತ್ತಮುತ್ತ ಇದ್ದ ಜನಾಂಗಗಳು ಇವರು “ತುಂಬಾ ವಿವೇಕಿಗಳು, ತಿಳುವಳಿಕೆ ಇರೋರು” ಅಂತ ಗುರುತಿಸ್ತಿದ್ದರು. (ಧರ್ಮೋ 4:5-8; ಕೀರ್ತ 111:7, 8, 10; 1ಅರ 2:3 ಹೋಲಿಸಿ.) ತಿಳುವಳಿಕೆ ಇರೋ ವ್ಯಕ್ತಿ ದೇವರ ನೀತಿ ನಿಯಮಗಳು ಎಷ್ಟು ಮುಖ್ಯ ಅಂತ ಅರ್ಥ ಮಾಡಿಕೊಳ್ತಾನೆ. ಒಂದು ಕೆಲ್ಸ ಮಾಡೋ ಮುಂಚೆ ಅದು ದೇವರಿಗೆ ಇಷ್ಟ ಆಗುತ್ತಾ ಅಂತ ಯೋಚಿಸ್ತಾನೆ ಮತ್ತು ಅದಕ್ಕಾಗಿ ದೇವರ ಸಹಾಯ ಕೇಳ್ತಾನೆ. (ಕೀರ್ತ 119:169) ಅವನು ದೇವರ ಸಂದೇಶವನ್ನ ಚೆನ್ನಾಗಿ ಅರ್ಥ ಮಾಡಿಕೊಳ್ತಾನೆ. (ಮತ್ತಾ 13:19-23) ಅದನ್ನ ತನ್ನ ಹೃದಯದ ಹಲಗೆ ಮೇಲೆ ಬರೆದುಕೊಳ್ತಾನೆ. (ಜ್ಞಾನೋ 3:3-6; 7:1-4) ಮತ್ತು ‘ಕೆಟ್ಟದಾರಿಗೆ ನಡೆಸುವಂಥ ವಿಷ್ಯಗಳನ್ನ ದ್ವೇಷಿಸ್ತಾನೆ.’ (ಕೀರ್ತ 119:104) ಇಂಥ ತಿಳುವಳಿಕೆ ದೇವರ ಮಗ ಯೇಸುಗೂ ಇತ್ತು. ಪವಿತ್ರ ಗ್ರಂಥದಲ್ಲಿ ಬರೆದಿದ್ದ ತರಾನೇ ಹಿಂಸಾ ಕಂಬದಲ್ಲಿ ಮರಣ ಶಿಕ್ಷೆ ಅನುಭವಿಸೋಕೆ ಅವನು ಸಿದ್ಧನಿದ್ದ. ಆ ಸಾವಿನಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನಿಸಲಿಲ್ಲ.—ಮತ್ತಾ 26:51-54.
ಕಾವಲಿನಬುರುಜು99 11/1 ಪುಟ 20 ಪ್ಯಾರ 6-7
ಉದಾರಭಾವವು ತುಂಬಿತುಳುಕುವಾಗ
ತಾನು ಕೇಳಿಸಿಕೊಂಡ ಹಾಗೂ ನೋಡಿದ ಸಂಗತಿಗಳಿಂದ ಅತ್ಯಾಶ್ಚರ್ಯಗೊಂಡ ರಾಣಿಯು ದೀನಭಾವದಿಂದ ಹೇಳಿದ್ದು: “ನಿನ್ನ ಪ್ರಜೆಗಳೂ ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರೂ ಧನ್ಯರು.” (1 ಅರಸು 10:4-8) ಸೊಲೊಮೋನನ ಸೇವಕರು ಸುಖಭೋಗದಲ್ಲಿ ಜೀವಿಸುತ್ತಿದ್ದುದರಿಂದ ಅವರು ಧನ್ಯರು ಎಂದು ಅವಳು ಹೇಳಲಿಲ್ಲ. ಅವರು ಸುಖಭೋಗದಲ್ಲಿ ಜೀವಿಸುತ್ತಿದ್ದರೂ, ಸೊಲೊಮೋನನ ದೇವದತ್ತ ವಿವೇಕವನ್ನು ಯಾವಾಗಲೂ ಕೇಳಿಸಿಕೊಳ್ಳುವ ಅವಕಾಶ ಅವರಿಗಿದ್ದುದರಿಂದ ಅವರು ಆಶೀರ್ವದಿಸಲ್ಪಟ್ಟಿದ್ದರು. ಸ್ವತಃ ಸೃಷ್ಟಿಕರ್ತನ ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ವಿವೇಕದ ಅಭಯ ಹಸ್ತದ ಕೆಳಗಿರುವಂತಹ ಇಂದಿನ ಯೆಹೋವನ ಜನರಿಗೆ ಶೆಬದ ರಾಣಿಯು ಎಂತಹ ಅತ್ಯುತ್ತಮ ಮಾದರಿಯಾಗಿದ್ದಾಳೆ!
ಶೆಬದ ರಾಣಿಯು ಸೊಲೊಮೋನನಿಗೆ ಹೇಳಿದ ಮುಂದಿನ ಮಾತು ಸಹ ತುಂಬ ಗಮನಾರ್ಹವಾದದ್ದಾಗಿತ್ತು: “ನಿನ್ನ ದೇವರಾದ ಕರ್ತನಿಗೆ [“ಯೆಹೋವನಿಗೆ,” NW] ಸ್ತೋತ್ರವಾಗಲಿ.” (1 ಅರಸು 10:9) ಸೊಲೊಮೋನನ ವಿವೇಕ ಹಾಗೂ ಸಮೃದ್ಧಿಯಲ್ಲಿ ಯೆಹೋವನ ಹಸ್ತವು ಒಳಗೂಡಿದ್ದನ್ನು ಅವಳು ಮನಗಂಡಳು ಎಂಬುದು ಸುವ್ಯಕ್ತ. ಈ ಮುಂಚೆ ಯೆಹೋವನು ಇಸ್ರಾಯೇಲ್ಯರಿಗೆ ಏನನ್ನು ವಾಗ್ದಾನಿಸಿದನೋ ಅದರೊಂದಿಗೆ ಇದು ಹೊಂದಿಕೆಯಲ್ಲಿದೆ. ‘ಆಜ್ಞಾವಿಧಿಗಳನ್ನು ಕೈಕೊಂಡು ಅನುಸರಿಸಿರಿ’ ಎಂದು ಆತನು ಹೇಳಿದನು. “ಇವುಗಳನ್ನು . . . ಅನುಸರಿಸಿದರೇ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ—ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ ಎಂದು ಮಾತಾಡಿಕೊಳ್ಳುವರು.”—ಧರ್ಮೋಪದೇಶಕಾಂಡ 4:5-7.
ಕಾವಲಿನಬುರುಜು07 8/1 ಪುಟ 30 ಪ್ಯಾರ 13
ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರೋ?’
13 ಯೆಹೋವನು ತನ್ನ ಜನರಿಗೆ ಆಶೀರ್ವಾದವನ್ನು ಅನುಗ್ರಹಿಸುವಾಗ ಅವರಿಗೆ ಯಾವಾಗಲೂ ಅತ್ಯುತ್ತಮವಾದುದ್ದನ್ನೇ ಕೊಡುತ್ತಾನೆ. (ಯಾಕೋಬ 1:17) ಉದಾಹರಣೆಗಾಗಿ, ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ನಿವಾಸಸ್ಥಾನವು “ಹಾಲೂ ಜೇನೂ ಹರಿಯುವ ದೇಶ”ವಾಗಿತ್ತು. ಐಗುಪ್ತ ದೇಶವು ಸಹ ಅದೇ ರೀತಿಯಾಗಿ ವರ್ಣಿಸಲ್ಪಟ್ಟಿತ್ತಾದರೂ, ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಂಥ ದೇಶವು ಕಡಿಮೆಪಕ್ಷ ಒಂದು ಪ್ರಾಮುಖ್ಯ ವಿಷಯದಲ್ಲಿ ಭಿನ್ನವಾಗಿತ್ತು. “ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ” ಎಂದು ಮೋಶೆ ಇಸ್ರಾಯೇಲ್ಯರಿಗೆ ಹೇಳಿದ್ದನು. ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಯೆಹೋವನು ಅವರ ಪರಾಮರಿಕೆ ಮಾಡಲಿದ್ದ ಕಾರಣ ಅವರು ಸಮೃದ್ಧಿಯನ್ನು ಹೊಂದಲಿದ್ದರು. ಇಸ್ರಾಯೇಲ್ಯರು ಎಷ್ಟರ ತನಕ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರೋ ಅಷ್ಟರ ತನಕ ಆತನು ಅವರನ್ನು ಹೇರಳವಾಗಿ ಆಶೀರ್ವದಿಸಿದನು. ಮತ್ತು ಅವರು ತಮ್ಮ ಸುತ್ತಲಿದ್ದ ಜನಾಂಗಗಳಿಗಿಂತ ಉತ್ಕೃಷ್ಟವೆಂದು ಕಂಡುಬಂದ ಜೀವನಶೈಲಿಯಲ್ಲಿ ಆನಂದಿಸಿದ್ದರು. ಹೌದು, “ಐಶ್ವರ್ಯವನ್ನುಂಟುಮಾಡುವುದು” ಯೆಹೋವನ ಆಶೀರ್ವಾದವೇ ಎಂಬುದು ನಿಶ್ಚಯ!—ಅರಣ್ಯಕಾಂಡ 16:13; ಧರ್ಮೋಪದೇಶಕಾಂಡ 4:5-8; 11:8-15.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು04 9/15 ಪುಟ 25 ಪ್ಯಾರ 3
ಧರ್ಮೋಪದೇಶಕಾಂಡ ಪುಸ್ತಕದ ಮುಖ್ಯಾಂಶಗಳು
4:15-20, 23, 24—ಯಾವುದೇ ಮೂರ್ತಿಯನ್ನು ಮಾಡುವುದರ ನಿಷೇಧವು, ಕಲಾ ಸೌಂದರ್ಯಕ್ಕಾಗಿ ಯಾವುದೇ ವಸ್ತುವನ್ನು ಇಡುವುದನ್ನೂ ತಪ್ಪೆಂದು ಸೂಚಿಸುತ್ತದೊ? ಇಲ್ಲ. ಇಲ್ಲಿ ಕೊಡಲ್ಪಟ್ಟಿರುವ ನಿಷೇಧವು, ಆರಾಧನೆಗಾಗಿ ಮೂರ್ತಿಗಳನ್ನು ಮಾಡುವುದರ ವಿರುದ್ಧವಾಗಿತ್ತು—‘ಅವುಗಳನ್ನು ಪೂಜಿಸುವ ಮತ್ತು ನಮಸ್ಕರಿಸುವ’ ವಿರುದ್ಧ ಒಂದು ನಿಷೇಧವಾಗಿತ್ತು. ಕಲಾ ಸೌಂದರ್ಯಕ್ಕಾಗಿ ಶಿಲ್ಪಕೃತಿಗಳ ಕೆತ್ತನೆಯನ್ನು ಅಥವಾ ಯಾವುದೇ ವಸ್ತುವಿನ ವರ್ಣಚಿತ್ರಗಳನ್ನು ಬಿಡಿಸುವುದನ್ನು ಶಾಸ್ತ್ರವಚನಗಳು ನಿಷೇಧಿಸುವುದಿಲ್ಲ.—1 ಅರಸುಗಳು 7:18, 25.
ಜೂನ್ 14-20
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 5-6
“ಯೆಹೋವನನ್ನ ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ”
ಕಾವಲಿನಬುರುಜು05 6/15 ಪುಟ 20 ಪ್ಯಾರ 11
ಹೆತ್ತವರೇ, ನಿಮ್ಮ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸಿರಿ
11 ಈ ವಿಷಯದ ಕುರಿತು ಮಾತಾಡುವಾಗ, ಪ್ರಾಯಶಃ ಧರ್ಮೋಪದೇಶಕಾಂಡ 6:5-7 ರ ಶಾಸ್ತ್ರೀಯ ಭಾಗವು ಅತಿ ಹೆಚ್ಚಾಗಿ ಉದ್ಧರಿಸಲ್ಪಟ್ಟಿರುತ್ತದೆ. ನಿಮ್ಮ ಬೈಬಲನ್ನು ದಯವಿಟ್ಟು ತೆರೆದು ಈ ವಚನಗಳನ್ನು ಓದಿರಿ. ಅಲ್ಲಿ, ಹೆತ್ತವರು ಮೊದಲಾಗಿ ತಮ್ಮ ಸ್ವಂತ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವಂತೆ ಮತ್ತು ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಂಡು ಆತನ ಮಾತುಗಳನ್ನು ಹೃದಯದಲ್ಲಿಟ್ಟುಕೊಳ್ಳುವಂತೆ ಹೇಳಲಾಗಿರುವುದನ್ನು ಗಮನಿಸಿರಿ. ಹೌದು, ಯೆಹೋವನ ಮಾರ್ಗಗಳು, ಮೂಲತತ್ವಗಳು ಮತ್ತು ನಿಯಮಗಳ ಬಗ್ಗೆ ನಿಜವಾದ ತಿಳಿವಳಿಕೆಯನ್ನು ಪಡೆದುಕೊಂಡು ಅವುಗಳನ್ನು ಪ್ರೀತಿಸುವ ಸಲುವಾಗಿ ನೀವು ದೇವರ ವಾಕ್ಯದ ಗಂಭೀರ ವಿದ್ಯಾರ್ಥಿಗಳಾಗಿದ್ದು ಬೈಬಲನ್ನು ಕ್ರಮವಾಗಿ ಓದಿ, ಅದರ ಕುರಿತು ಧ್ಯಾನಿಸಬೇಕು. ಇದರ ಪರಿಣಾಮವಾಗಿ ನಿಮ್ಮ ಹೃದಯವು ಅತ್ಯಾಕರ್ಷಕ ಬೈಬಲ್ ಸತ್ಯಗಳಿಂದ ತುಂಬಿಕೊಳ್ಳುವುದು. ಇದು ನೀವು ಆನಂದಪಡುವಂತೆ ಮಾಡುವುದು, ಮತ್ತು ನಿಮ್ಮಲ್ಲಿ ಯೆಹೋವನಿಗಾಗಿ ಪೂಜ್ಯಭಾವ ಹಾಗೂ ಪ್ರೀತಿಯನ್ನು ಪ್ರಚೋದಿಸುವುದು. ನಿಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳಲು ನಿಮ್ಮ ಬಳಿ ಒಳ್ಳೆಯ ವಿಷಯಗಳ ಬೊಕ್ಕಸವಿರುವುದು.—ಲೂಕ 6:45.
ಕಾವಲಿನಬುರುಜು07-E 5/15 ಪುಟ 15-16
ನಾನು ಹೇಗೆ ನನ್ನ ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಬಹುದು?
ಅಪ್ಪಅಮ್ಮ ಬರೀ ಮಾತಲ್ಲಲ್ಲ ತಮ್ಮ ಜೀವನ ರೀತಿಯಿಂದಾನೂ ಯಾವುದು ಮುಖ್ಯ ಅಂತ ತೋರಿಸಿಕೊಡಬಹುದು. (ರೋಮನ್ನರಿಗೆ 2:21, 22) ಮಕ್ಕಳು ಚಿಕ್ಕವರಿಂದಾನೇ ತಮ್ಮ ಹೆತ್ತವರನ್ನು ಚೆನ್ನಾಗಿ ಗಮನಿಸ್ತಾರೆ. ಅಪ್ಪಅಮ್ಮಗೆ ಜೀವನದಲ್ಲಿ ಯಾವುದು ಮುಖ್ಯ ಅಂತ ಗುರುತಿಸ್ತಾರೆ ಮತ್ತು ಹೆಚ್ಚಾಗಿ ಆ ವಿಷ್ಯಗಳೇ ಮಕ್ಕಳಿಗೂ ಮುಖ್ಯವಾಗಿ ಬಿಡುತ್ತೆ. ನಿಮಗೆ ಯೆಹೋವನ ಮೇಲೆ ಪ್ರೀತಿ ಇದ್ಯಾ ಇಲ್ವಾ ಅಂತ ಮಕ್ಕಳಿಗೆ ಗೊತ್ತಾಗುತ್ತೆ. ಉದಾಹರಣೆಗೆ, ಬೈಬಲನ್ನು ಓದೋದು ಮತ್ತು ಅಧ್ಯಯನ ಮಾಡೋದು ನಿಮಗೆ ಮುಖ್ಯ ಅನ್ನೋದನ್ನು ಮಕ್ಕಳು ಅರ್ಥ ಮಾಡಿಕೊಳ್ತಾರೆ. ನೀವು ಜೀವನದಲ್ಲಿ ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡ್ತೀರಿ ಅನ್ನೋದನ್ನು ಅವ್ರು ಗುರುತಿಸ್ತಾರೆ. (ಮತ್ತಾಯ 6:33) ನೀವು ತಪ್ಪದೆ ಕೂಟಗಳಿಗೆ, ಸೇವೆಗೆ ಹೋಗೋದನ್ನು ನೋಡಿ ನಿಮ್ಮ ಜೀವನದಲ್ಲಿ ಯೆಹೋವನಿಗೆ ಪವಿತ್ರ ಸೇವೆ ಮಾಡೋದೇ ಎಲ್ಲಕ್ಕಿಂತ ಮುಖ್ಯ ಅನ್ನೋದನ್ನು ಮಕ್ಕಳು ಅರ್ಥ ಮಾಡಿಕೊಳ್ತಾರೆ.—ಮತ್ತಾಯ 28:19, 20; ಇಬ್ರಿಯ 10:24, 25.
ಕಾವಲಿನಬುರುಜು05 6/15 ಪುಟ 21 ಪ್ಯಾರ 14
ಹೆತ್ತವರೇ, ನಿಮ್ಮ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸಿರಿ
14 ಧರ್ಮೋಪದೇಶಕಾಂಡ 6:7 ತೋರಿಸುವಂತೆ, ಹೆತ್ತವರಾದ ನೀವು ನಿಮ್ಮ ಮಕ್ಕಳೊಂದಿಗೆ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುವ ಸಂದರ್ಭಗಳು ಬಹಳಷ್ಟು ಇವೆ. ಕೂಡಿ ಪ್ರಯಾಣಿಸುವಾಗ, ಕೆಲಸಮಾಡುವಾಗ ಮತ್ತು ಕೂಡಿ ವಿಶ್ರಮಿಸುತ್ತಿರುವಾಗ ನಿಮ್ಮ ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ನಿಮಗೆ ಅವಕಾಶಗಳು ದೊರೆಯಬಹುದು. ಆದರೆ ನೀವು ನಿರಂತರವೂ ಬೈಬಲ್ ಸತ್ಯಗಳ ಕುರಿತು ನಿಮ್ಮ ಮಕ್ಕಳಿಗೆ “ಭಾಷಣ ಬಿಗಿಯುವ” ಅಗತ್ಯವಿಲ್ಲ. ಬದಲಿಗೆ, ಕುಟುಂಬದ ಸಂಭಾಷಣೆಯನ್ನು ಭಕ್ತಿವೃದ್ಧಿಮಾಡುವ ಆಧ್ಯಾತ್ಮಿಕ ಮಟ್ಟದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿರಿ. ಉದಾಹರಣೆಗೆ, ಎಚ್ಚರ! ಪತ್ರಿಕೆಯಲ್ಲಿ ವಿವಿಧ ವಿಷಯಗಳ ಕುರಿತು ಅನೇಕ ಲೇಖನಗಳು ಬರುತ್ತವೆ. ಇಂತಹ ಲೇಖನಗಳು ಯೆಹೋವನ ಪ್ರಾಣಿಸೃಷ್ಟಿಯ ಕುರಿತು, ಲೋಕದ ಸುತ್ತಲೂ ಪ್ರಾಕೃತಿಕ ಸೌಂದರ್ಯವಿರುವ ಸ್ಥಳಗಳ ಕುರಿತು ಮತ್ತು ಮಾನವ ಸಂಸ್ಕೃತಿಗಳು ಹಾಗೂ ಜೀವನರೀತಿಗಳ ಕುರಿತಾದ ಸಂಭಾಷಣೆಗಳಿಗೆ ಆಧಾರವಾಗಿರಬಹುದು. ಇಂತಹ ಸಂಭಾಷಣೆಗಳಿಂದಾಗಿ ಮಕ್ಕಳು, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ಒದಗಿಸುವ ಸಾಹಿತ್ಯಗಳನ್ನು ಹೆಚ್ಚು ಓದುವಂತೆ ಪ್ರಚೋದಿಸಲ್ಪಡಬಹುದು.—ಮತ್ತಾಯ 24:45-47.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು19.22 ಪುಟ 22 ಪ್ಯಾರ 11
ಆ ಕಾಲದ ಇಸ್ರಾಯೇಲಿನಲ್ಲಿ ಪ್ರೀತಿ ಮತ್ತು ನ್ಯಾಯ
11 ಪಾಠ: ಯೆಹೋವನು ಒಬ್ಬ ವ್ಯಕ್ತಿಯ ಹೊರತೋರಿಕೆಯನ್ನು ಮಾತ್ರ ನೋಡದೆ ಆ ವ್ಯಕ್ತಿಯ ಹೃದಯದಲ್ಲಿ ಏನಿದೆ ಅಂತ ನೋಡುತ್ತಾನೆ. (1 ಸಮು. 16:7) ಯಾವುದೇ ಯೋಚನೆ, ಭಾವನೆ ಅಥವಾ ಕ್ರಿಯೆಯನ್ನು ನಾವು ಯೆಹೋವನಿಂದ ಬಚ್ಚಿಡಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೇದೇನಿದೆ ಅಂತ ನೋಡುತ್ತಾನೆ ಮತ್ತು ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತಾನೆ. ನಮ್ಮಲ್ಲಿ ಏನಾದರೂ ಕೆಟ್ಟ ಯೋಚನೆಗಳಿದ್ದರೆ ಅದನ್ನು ಗುರುತಿಸಿ ಸರಿಪಡಿಸಿಕೊಳ್ಳಬೇಕೆಂದು ಹೇಳುತ್ತಾನೆ. ಇಲ್ಲ ಅಂದರೆ ನಾವು ಖಂಡಿತ ಜೀವನದಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತೇವೆ.—2 ಪೂರ್ವ. 16:9; ಮತ್ತಾ. 5:27-30.
ಜೂನ್ 21-27
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 7-8
“ನೀವು ಅವರ ಜೊತೆ ಮದುವೆ ಸಂಬಂಧ ಬೆಳೆಸಬಾರದು”
ಕಾವಲಿನಬುರುಜು12-E 7/1 ಪುಟ 29 ಪ್ಯಾರ 2
ತನ್ನ ಜನರು ತನ್ನನ್ನು ಆರಾಧಿಸುವವರನ್ನೇ ಮದುವೆ ಆಗಬೇಕು ಅಂತ ಯೆಹೋವ ಯಾಕೆ ಹೇಳಿದನು?
ಇಸ್ರಾಯೇಲ್ಯರು ಸುಳ್ಳುದೇವರುಗಳನ್ನು ಆರಾಧನೆ ಮಾಡೋ ತರ ಮಾಡಿ ಆ ಜನಾಂಗದ ಪವಿತ್ರತೆಯನ್ನು ಹಾಳುಮಾಡೋಕೆ ಸೈತಾನ ಪ್ರಯತ್ನಿಸ್ತಾನೆ ಅಂತ ಯೆಹೋವನಿಗೆ ಗೊತ್ತಿತ್ತು. ಹಾಗಾಗಿ ‘ಸುಳ್ಳುಧರ್ಮದವರು ನಿಮ್ಮ ಮಕ್ಕಳನ್ನ ನನ್ನಿಂದ ದೂರಮಾಡಿ ಬೇರೆ ದೇವರುಗಳನ್ನ ಆರಾಧನೆ ಮಾಡೋ ತರ ಮಾಡ್ತಾರೆ’ ಅಂತ ದೇವರು ಮುಂಚೆನೇ ಎಚ್ಚರಿಸಿದನು. ಇಸ್ರಾಯೇಲ್ಯರು ದೇವರ ಮಾತನ್ನು ಕೇಳದೇ ಹೋದ್ರೆ ದೊಡ್ಡ ಗಂಡಾಂತರಕ್ಕೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಅವರು ಬೇರೆ ದೇವರನ್ನು ಆರಾಧಿಸಿದ್ರೆ ಯೆಹೋವನ ಮೆಚ್ಚಿಗೆ, ರಕ್ಷಣೆ ಕಳಕೊಳ್ಳುತ್ತಿದ್ರು. ಇದ್ರಿಂದ ಶತ್ರುಗಳು ಅವರ ಮೇಲೆ ಸುಲಭವಾಗಿ ದಾಳಿ ಮಾಡೋಕೆ ಆಗ್ತಿತ್ತು. ಅಷ್ಟೇ ಅಲ್ಲ, ಆ ಜನಾಂಗದಲ್ಲೇ ಮೆಸ್ಸೀಯ ಹುಟ್ಟುತ್ತಿದ್ನಾ? ಇಲ್ಲ. ಈ ಕಾರಣಕ್ಕೇ ಸೈತಾನ ಇಸ್ರಾಯೇಲ್ಯರು ವಿದೇಶಿಯರನ್ನು ಮದುವೆ ಆಗೋ ತರ ಕುತಂತ್ರ ಮಾಡಿದ.
“ಕರ್ತನಲ್ಲಿ” ಮಾತ್ರ ಮದುವೆ ಈಗಲೂ ಸಾಧ್ಯವೇ?
ಹಾಗಿದ್ದರೂ ಕರ್ತನಲ್ಲಿ ವಿಶ್ವಾಸಿಯಾಗಿರುವವನನ್ನು ಮಾತ್ರ ಮದುವೆ ಆಗಬೇಕೆಂದು ಯೆಹೋವನು ತನ್ನ ವಾಕ್ಯದಲ್ಲಿ ನಿಯಮ ಕೊಟ್ಟಿದ್ದಾನೆ. ಯಾಕೆ? ತನ್ನ ಜನರಿಗೆ ಯಾವುದು ಒಳ್ಳೇದೆಂದು ಆತನಿಗೆ ಗೊತ್ತಿರುವುದರಿಂದಲೇ. ಬುದ್ಧಿಯಿಲ್ಲದ ಕೆಲಸ ಮಾಡಿದರೆ ಆಗುವ ನೋವಿನಿಂದ ತನ್ನ ಸೇವಕರನ್ನು ಆತನು ರಕ್ಷಿಸಲು ಬಯಸುತ್ತಾನೆ. ಅಷ್ಟೇ ಅಲ್ಲ ಅವರು ಸಂತೋಷವಾಗಿ ಇರಬೇಕೆನ್ನುವುದು ಆತನ ಆಸೆ. ನೆಹೆಮೀಯನ ಕಾಲದಲ್ಲಿ ಅನೇಕ ಯೆಹೂದ್ಯರು ಯೆಹೋವನನ್ನು ಆರಾಧಿಸದಿದ್ದ ಅನ್ಯ ಸ್ತ್ರೀಯರನ್ನು ಮದುವೆಯಾಗುತ್ತಿದ್ದರು. ಆಗ ನೆಹೆಮೀಯನು ಅವರಿಗೆ ಸೊಲೊಮೋನನ ಕೆಟ್ಟ ಮಾದರಿ ಬಗ್ಗೆ ಹೇಳಿದ್ದು: “ಅವನು ತನ್ನ ದೇವರಿಗೆ ವಿಶೇಷಪ್ರಿಯನು . . . ಆದರೂ ಅನ್ಯದೇಶಸ್ತ್ರೀಯರು ಅವನನ್ನು ಪಾಪದಲ್ಲಿ ಬೀಳಿಸಿದರು.” (ನೆಹೆ. 13:23-26) ಹಾಗಾಗಿ ದೇವರು ತನ್ನ ಸೇವಕರಿಗೆ ಸತ್ಯಾರಾಧಕರನ್ನು ಮಾತ್ರ ಮದುವೆಯಾಗಬೇಕೆಂದು ಆಜ್ಞಾಪಿಸಿರುವುದು ಅವರ ಸ್ವಂತ ಒಳಿತಿಗಾಗಿಯೇ. (ಕೀರ್ತ. 19:7-10; ಯೆಶಾ. 48:17, 18) ದೇವರು ಪ್ರೀತಿಯಿಂದ ಕೊಡುವ ಆರೈಕೆಗಾಗಿ ನಿಜ ಕ್ರೈಸ್ತರು ಕೃತಜ್ಞರು. ಆತನು ಕೊಡುವ “ಉಚಿತಾಲೋಚನೆ” ಇಲ್ಲವೆ ನಿರ್ದೇಶನ ಪಾಲಿಸುತ್ತಾರೆ. ಹೀಗೆ ತಮ್ಮ ಅಧಿಪತಿಯಾದ ಆತನಿಗೆ ಅಧೀನರಾಗುವ ಮೂಲಕ ಆತನೇ ವಿಶ್ವದ ಪರಮ ಅಧಿಕಾರಿಯೆಂದು ಅಂಗೀಕರಿಸುತ್ತಾರೆ.—ಜ್ಞಾನೋ. 1:5.
ಕಾವಲಿನಬುರುಜು15 8/15 ಪುಟ 26 ಪ್ಯಾರ 12
ಈ ಕಡೇ ದಿವಸಗಳಲ್ಲಿ ಸಹವಾಸದ ಬಗ್ಗೆ ಎಚ್ಚರವಹಿಸಿರಿ!
12 ಮದುವೆ ಆಗಬೇಕೆಂದಿರುವ ಕ್ರೈಸ್ತರು ತಾವು ಯಾರ ಜೊತೆ ಸಹವಾಸಮಾಡಲು ಆರಿಸಿಕೊಳ್ಳುತ್ತೇವೆಂಬ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಏಕೆಂದರೆ ದೇವರ ವಾಕ್ಯ ನಮ್ಮನ್ನು ಹೀಗೆ ಎಚ್ಚರಿಸುತ್ತದೆ: “ನೀವು ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ಜೊತೆಯಾಗಬೇಡಿರಿ. ನೀತಿಗೂ ಅನೀತಿಗೂ ಮೈತ್ರಿ ಏನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?” (2 ಕೊರಿಂ. 6:14) ದೇವರ ಸೇವಕರು “ಕರ್ತನಲ್ಲಿರುವವನನ್ನು ಮಾತ್ರ” ಅಂದರೆ ಸಮರ್ಪಣೆಮಾಡಿ, ದೀಕ್ಷಾಸ್ನಾನ ಪಡೆದು, ಯೆಹೋವನ ಮಟ್ಟಗಳ ಪ್ರಕಾರ ಜೀವಿಸುವವರನ್ನೇ ಮದುವೆಯಾಗಬೇಕೆಂದು ಬೈಬಲ್ ಹೇಳುತ್ತದೆ. (1 ಕೊರಿಂ. 7:39) ಯೆಹೋವನನ್ನು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾದರೆ ಆತನಿಗೆ ನಂಬಿಗಸ್ತರಾಗಿರಲು ಅವರು ನಿಮಗೆ ನೆರವಾಗುವರು.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು04 2/1 ಪುಟ 13 ಪ್ಯಾರ 4
ಯೆಹೋವನು ನಮ್ಮ ದೈನಂದಿನ ಆವಶ್ಯಕತೆಗಳನ್ನು ಒದಗಿಸುತ್ತಾನೆ
4 ಅನುದಿನದ ಆಹಾರಕ್ಕಾಗಿ ನಮ್ಮ ಪ್ರಾರ್ಥನೆಯು, ನಮಗೆ ಅನುದಿನದ ಆತ್ಮಿಕ ಆಹಾರದ ಅಗತ್ಯವಿದೆ ಎಂಬುದನ್ನು ಸಹ ನೆನಪಿಸಬೇಕು. ದೀರ್ಘಕಾಲದ ಉಪವಾಸದ ನಂತರ ಬಹಳ ಹಸಿದಿದ್ದರೂ, ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಲು ಸೈತಾನನು ತಂದ ಶೋಧನೆಯನ್ನು ಯೇಸು ಪ್ರತಿಭಟಿಸಿದನು. ಅವನಂದದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4) ಇಲ್ಲಿ ಯೇಸು, ಮೋಶೆಯು ಇಸ್ರಾಯೇಲ್ಯರಿಗೆ ಹೇಳಿದ ಈ ಮಾತುಗಳನ್ನು ಉಲ್ಲೇಖಿಸಿದನು: “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆಂಬದು ನಿಮಗೆ ತಿಳಿಯುವಂತೆ ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಹಸಿವೆಯಿಂದ ಬಳಲಿಸಿ ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದನು.” (ಧರ್ಮೋಪದೇಶಕಾಂಡ 8:3) ಯೆಹೋವನು ಮನ್ನವನ್ನು ಒದಗಿಸಿದ ವಿಧವು, ಇಸ್ರಾಯೇಲ್ಯರಿಗೆ ಶಾರೀರಿಕ ಆಹಾರವನ್ನು ಮಾತ್ರವಲ್ಲ ಆತ್ಮಿಕ ಪಾಠಗಳನ್ನೂ ಒದಗಿಸಿತು. ಇದರಲ್ಲಿ ಒಂದು ಆತ್ಮಿಕ ಪಾಠವೇನೆಂದರೆ, ಅವರು ‘ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕಿತ್ತು.’ ಒಂದುವೇಳೆ ಅವರು ಅದಕ್ಕಿಂತ ಹೆಚ್ಚನ್ನು ಕೂಡಿಸಿದರೆ, ಉಳಿದಿರುವುದು ಹುಳಬಿದ್ದು ನಾತಹಿಡಿದು ಕೆಟ್ಟುಹೋಗುತ್ತಿತ್ತು. (ವಿಮೋಚನಕಾಂಡ 16:4, 20) ಆದರೆ, ಸಬ್ಬತ್ ದಿನದ ಅವರ ಆವಶ್ಯಕತೆಯನ್ನು ಪೂರೈಸಲು ಆರನೆಯ ದಿನದಲ್ಲಿ ಪ್ರತಿದಿನ ಕೂಡಿಸಿಕೊಂಡದ್ದಕ್ಕಿಂತ ಎರಡರಷ್ಟು ಕೂಡಿಸುತ್ತಿದ್ದರೂ ಅದು ಹುಳಬಿದ್ದು ನಾತಹಿಡಿದು ಕೆಟ್ಟುಹೋಗುತ್ತಿರಲಿಲ್ಲ. (ವಿಮೋಚನಕಾಂಡ 16:5, 23, 24) ಆದುದರಿಂದ ಮನ್ನವು, ಅವರು ವಿಧೇಯರಾಗಿರಲೇಬೇಕೆಂಬುದನ್ನೂ ಅವರ ಜೀವನವು ಕೇವಲ ಶಾರೀರಿಕ ಆಹಾರದ ಮೇಲಲ್ಲ ಬದಲಾಗಿ ‘ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನ’ ಮೇಲೆ ಅವಲಂಬಿಸಿದೆ ಎಂಬುದನ್ನೂ ಅವರ ಮನಸ್ಸಿನಲ್ಲಿ ಅಚ್ಚೊತ್ತಿತು.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು06 1/1 ಪುಟ 28 ಪ್ಯಾರ 14-15
ನೀತಿಗಾಗಿ ತವಕಪಡುವುದು ನಮ್ಮನ್ನು ಸಂರಕ್ಷಿಸುವುದು
14 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಿಂತ ತುಸು ಮುಂಚೆ ಯೆಹೋವನು ಅವರಿಗೆ ತನ್ನನ್ನು ಮರೆಯಬಾರದು ಎಂದು ಎಚ್ಚರಿಸಿದನು. ಆತನು ಹೇಳಿದ್ದು: “ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಳ್ಳದವರೂ ಆತನನ್ನು ಮರೆಯುವವರೂ ಆಗಬೇಡಿರಿ, ನೋಡಿರಿ. ನೀವು ಹೊಟ್ಟೆತುಂಬಾ ಉಂಡು ಸುಖವಾಗಿದ್ದು ಒಳ್ಳೇ ಮನೆಗಳನ್ನು ಕಟ್ಟಿಸಿಕೊಂಡು ಅವುಗಳಲ್ಲಿ ವಾಸವಾಗಿರುವ ಕಾಲದಲ್ಲಿ ನಿಮ್ಮ ದನಗಳೂ ಆಡುಕುರಿಗಳೂ ನಿಮ್ಮ ಬೆಳ್ಳಿಬಂಗಾರವೂ ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ ಒಂದು ವೇಳೆ ನೀವು ಮದಿಸಿ ನಿಮ್ಮ ದೇವರಾದ ಯೆಹೋವನನ್ನು ಮರೆತೀರಿ.”—ಧರ್ಮೋಪದೇಶಕಾಂಡ 8:11-14.
15 ಇಂತಹದ್ದೇ ಸಂಗತಿಯು ಇಂದು ಸಂಭವಿಸಲು ಸಾಧ್ಯವಿದೆಯೋ? ನಾವು ತಪ್ಪಾದ ಆದ್ಯತೆಗಳನ್ನಿಟ್ಟಿರುವುದಾದರೆ ಸಂಭವಿಸಸಾಧ್ಯವಿದೆ. ಆದರೆ, ನಾವು ಮೊದಲು ದೇವರ ನೀತಿಗಾಗಿ ತವಕಪಡುವುದಾದರೆ, ಶುದ್ಧಾರಾಧನೆಯು ನಮ್ಮ ಜೀವನದಲ್ಲಿ ಅತಿ ಪ್ರಾಮುಖ್ಯ ವಿಷಯವಾಗಿರುವುದು. ಪೌಲನು ಪ್ರೋತ್ಸಾಹಿಸಿದಂತೆ ನಾವು “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ”ಕೊಳ್ಳುವೆವು ಮತ್ತು ನಮ್ಮ ಶುಶ್ರೂಷೆಯ ಬಗ್ಗೆ ತುರ್ತುಪ್ರಜ್ಞೆಯನ್ನು ಹೊಂದಿರುವೆವು. (ಕೊಲೊಸ್ಸೆ 4:5; 2 ತಿಮೊಥೆಯ 4:2) ಒಂದುವೇಳೆ ಆರಾಮಮಾಡುವುದು ಅಥವಾ ಸುಖಭೋಗಗಳಲ್ಲಿ ಆನಂದಿಸಲಿಕ್ಕಾಗಿರುವ ವಿಧಾನಗಳು ಕೂಟದ ಹಾಜರಿ ಮತ್ತು ಕ್ಷೇತ್ರ ಸೇವೆಗಿಂತ ಹೆಚ್ಚು ಪ್ರಾಮುಖ್ಯವಾಗುವುದಾದರೆ, ನಾವು ಯೆಹೋವನನ್ನು ನಮ್ಮ ಜೀವನಗಳಲ್ಲಿ ಎರಡನೆಯ ಸ್ಥಾನದಲ್ಲಿಡುವಂತಾಗಿ ನಾವು ಆತನನ್ನು ಮರೆತುಹೋಗುವ ಸಾಧ್ಯತೆಯಿದೆ. ಕಡೇ ದಿವಸಗಳಲ್ಲಿ ಜನರು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವ”ರಾಗಿರುವರು ಎಂದು ಅಪೊಸ್ತಲ ಪೌಲನು ಹೇಳಿದನು. (2 ತಿಮೊಥೆಯ 3:4) ತಾವು ಅಂತಹ ರೀತಿಯ ಯೋಚನೆಯಿಂದ ಬಾಧಿಸಲ್ಪಟ್ಟಿಲ್ಲ ಎಂದು ಪ್ರಾಮಾಣಿಕ ಕ್ರೈಸ್ತರು ಕ್ರಮವಾಗಿ ತಮ್ಮನ್ನು ಪರಿಶೋಧಿಸಿ ಖಚಿತಪಡಿಸಿಕೊಳ್ಳುತ್ತಾರೆ.—2 ಕೊರಿಂಥ 13:5.
ಜೂನ್ 28–ಜುಲೈ 4
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 9-10
“ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”
ಕಾವಲಿನಬುರುಜು10 7/1 ಪುಟ 16 ಪ್ಯಾರ 3-4
ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?
ಸ್ವಇಚ್ಛೆಯಿಂದ ದೇವರಿಗೆ ವಿಧೇಯರಾಗುವಂತೆ ನಮ್ಮನ್ನು ಯಾವುದು ಪ್ರಚೋದಿಸುತ್ತದೆ? ಒಂದು ಅಂಶವನ್ನು ಮೋಶೆ ಹೀಗೆ ತಿಳಿಸುತ್ತಾನೆ: ‘ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ.’ (ವಚನ 12) ಈ ಭಯವು ಅಹಿತಕರ ಭೀತಿಯಲ್ಲ, ಬದಲಾಗಿ ದೇವರ ಮತ್ತು ಆತನ ಮಾರ್ಗಗಳ ಕಡೆಗೆ ಹಿತಕರವಾದ ಭಕ್ತಿಪೂರ್ವಕ ಗೌರವವಾಗಿದೆ. ನಮ್ಮಲ್ಲಿ ಆ ರೀತಿಯ ಅಪಾರ ಭಯಭಕ್ತಿಯಿರುವಲ್ಲಿ ದೇವರ ಮನನೋಯಿಸದಿರುವೆವು.
ಆದರೆ ನಾವು ದೇವರಿಗೆ ವಿಧೇಯರಾಗುವ ಪ್ರಧಾನ ಕಾರಣ ಏನಾಗಿರಬೇಕು? ‘ಯೆಹೋವನನ್ನು ಪ್ರೀತಿಸುತ್ತಾ ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡುತ್ತಾ ಇರಿ’ ಎನ್ನುತ್ತಾನೆ ಮೋಶೆ. (ವಚನ 12) ದೇವರನ್ನು ಪ್ರೀತಿಸುವುದರಲ್ಲಿ ಕೇವಲ ಭಾವನೆಗಳು ಕೂಡಿಲ್ಲ. ಒಂದು ಪರಾಮರ್ಶೆ ಕೃತಿ ವಿವರಿಸುವುದು: “ಹೀಬ್ರು ಭಾಷೆಯಲ್ಲಿ ಭಾವನೆಗಳಿಗೆ ಬಳಸಲಾಗಿರುವ ಕ್ರಿಯಾ ಪದಗಳು ಭಾವನೆಗಳಿಂದ ಪ್ರಚೋದಿತವಾದ ಕ್ರಿಯೆಗಳನ್ನೂ ಸೂಚಿಸುತ್ತವೆ.” ದೇವರನ್ನು ಪ್ರೀತಿಸುವುದೆಂದರೆ ಆ “ಪ್ರೀತಿಯನ್ನು ಕ್ರಿಯೆಗಳಲ್ಲಿ ತೋರಿಸುವುದಾಗಿದೆ” ಎನ್ನುತ್ತದೆ ಆ ಕೃತಿ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಾವು ನಿಜವಾಗಿಯೂ ದೇವರನ್ನು ಪ್ರೀತಿಸುವಲ್ಲಿ ಆತನು ಮೆಚ್ಚುವ ರೀತಿಯಲ್ಲೇ ನಡೆಯುವೆವು.—ಜ್ಞಾನೋಕ್ತಿ 27:11.
ಕಾವಲಿನಬುರುಜು10 7/1 ಪುಟ 16 ಪ್ಯಾರ 6
ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?
ನಾವು ಸ್ವಇಚ್ಛೆಯಿಂದ ತೋರಿಸುವ ವಿಧೇಯತೆ ಆಶೀರ್ವಾದಗಳನ್ನೇ ತರುತ್ತದೆ. ಮೋಶೆ ಬರೆದದ್ದು: ‘ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರಿ.’ (ವಚನ 13) ಹೌದು, ಯೆಹೋವನ ಪ್ರತಿಯೊಂದು ಆಜ್ಞೆ ಅಂದರೆ ಆತನು ನಮ್ಮಿಂದ ಕೇಳಿಕೊಳ್ಳುವ ಪ್ರತಿಯೊಂದೂ ನಮ್ಮ ಒಳಿತಿಗಾಗಿಯೇ ಇದೆ. ಅದರಿಂದ ನಮಗೆ ಕೆಡುಕಾಗಲು ಸಾಧ್ಯವೇ ಇಲ್ಲ ಏಕೆಂದರೆ ಬೈಬಲ್ ತಿಳಿಸುವಂತೆ “ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾನ 4:8) ಆತನು ಕೊಟ್ಟಿರುವ ಆಜ್ಞೆಗಳು ನಮಗೆ ನಿತ್ಯಕ್ಕೂ ಕ್ಷೇಮವನ್ನು ಉಂಟುಮಾಡುವಂಥವುಗಳೇ. (ಯೆಶಾಯ 48:17) ಯೆಹೋವನು ಹೇಳಿದ್ದೆಲ್ಲವನ್ನೂ ಮಾಡುವುದು ಇಂದು ನಮ್ಮನ್ನು ಅನೇಕ ಚಿಂತೆ, ಹತಾಶೆಗಳಿಂದ ಮುಕ್ತಗೊಳಿಸುತ್ತದೆ ಮತ್ತು ಮುಂದೆ ಆತನ ರಾಜ್ಯದಾಳಿಕೆಯ ಅಡಿಯಲ್ಲಿ ಅನಂತ ಆಶೀರ್ವಾದಗಳನ್ನು ತರುತ್ತದೆ.
ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 16 ಪ್ಯಾರ 2
ನೀವು ನಿಜವಾಗಿ ‘ದೇವರ ಸಮೀಪಕ್ಕೆ ಬರಬಲ್ಲಿರೊ?’
2 ಪುರಾತನ ಕಾಲದ ಅಬ್ರಹಾಮನು ಅಂಥ ಆಪ್ತತೆಯನ್ನು ಆನಂದಿಸಿದವರಲ್ಲಿ ಒಬ್ಬನಾಗಿದ್ದನು. ಆ ಪೂರ್ವಜನನ್ನು ಯೆಹೋವನು “ನನ್ನ ಸ್ನೇಹಿತ” ಎಂದು ಕರೆದನು. (ಯೆಶಾಯ 41:8) ಹೌದು, ಯೆಹೋವನು ಅಬ್ರಹಾಮನನ್ನು ಒಬ್ಬ ವೈಯಕ್ತಿಕ ಸ್ನೇಹಿತನಾಗಿ ಪರಿಗಣಿಸಿದ್ದನು. ಅಬ್ರಹಾಮನಿಗೆ ಆ ಆಪ್ತ ಸಂಬಂಧದ ಅನುಗ್ರಹವು ದೊರೆತದ್ದು ಅವನು ‘ದೇವರನ್ನು ನಂಬಿದ’ ಕಾರಣದಿಂದಲೇ. (ಯಾಕೋಬ 2:23) ಇಂದು ಸಹ ಯೆಹೋವನು, ಪ್ರೀತಿಯಿಂದ ತನ್ನ ಸೇವೆಮಾಡುವವರೊಂದಿಗೆ “ಇಷ್ಟವುಳ್ಳ”ವನಾಗುವ ಸಂದರ್ಭಗಳಿಗಾಗಿ ಹುಡುಕುತ್ತಿದ್ದಾನೆ. (ಧರ್ಮೋಪದೇಶಕಾಂಡ 10:15) ಆತನ ವಾಕ್ಯವು ಪ್ರೋತ್ಸಾಹಿಸುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಈ ಮಾತುಗಳಲ್ಲಿ ಒಂದು ಆಮಂತ್ರಣ ಮತ್ತು ಒಂದು ವಾಗ್ದಾನ, ಹೀಗೆ ಎರಡೂ ಸೇರಿರುತ್ತವೆ.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 103
ಅನಾಕ್ಯರು
ಈ ಜನಾಂಗದ ಜನರು ತುಂಬ ಎತ್ತರ, ತುಂಬ ಬಲಿಷ್ಠರಾಗಿದ್ದರು. ಇವರು ಕಾನಾನಿನ ಬೆಟ್ಟ ಪ್ರದೇಶದಲ್ಲಿ ಮತ್ತು ದಕ್ಷಿಣದ ಕೆಲವು ಕರಾವಳಿ ಪ್ರದೇಶದಲ್ಲಿ ಜೀವಿಸ್ತಿದ್ರು. ಒಂದು ಕಾಲದಲ್ಲಿ ಹೆಬ್ರೋನಿನಲ್ಲಿ ಮೂರು ಮುಖ್ಯ ಅನಾಕ್ಯರು ಇದ್ರು. ಅವರ ಹೆಸರು ಅಹೀಮನ್, ಶೇಷೈ, ತಲ್ಮೈ. (ಅರ 13:22) ಇಲ್ಲೇ ಇಸ್ರಾಯೇಲಿನ 12 ಗೂಢಚಾರರು ಅನಾಕ್ಯರನ್ನು ಮೊದಲನೇ ಸಲ ನೋಡಿದ್ದು. 10 ಗೂಢಚಾರರು ಇವರನ್ನು ನೋಡಿ ಹೆದರಿ ‘ಇವರು ಜಲಪ್ರಳಯಕ್ಕೆ ಮುಂಚೆ ಇದ್ದ ನೆಫೀಲಿಯರ ವಂಶದವರು. ಇವರು ಮುಂದೆ ನಾವು ಮಿಡತೆಗಳ ತರ ಕಾಣ್ತೀವಿ‘ ಅಂತ ವರದಿಸಿದ್ರು. (ಅರ 13:28-33; ಧರ್ಮೋ 1:28) ಏಮಿಯರು ಮತ್ತು ರೆಫಾಯರು ಕೂಡ ತುಂಬ ದೈತ್ಯರಾಗಿದ್ರು. ಇವರು ಅನಾಕ್ಯರ ವಂಶದವರು ಅಂತ ಜನ ಹೇಳ್ತಿದ್ರು. “ಅನಾಕ್ಯರನ್ನ ಸೋಲಿಸೋಕೆ ಯಾರಿಂದ್ಲೂ ಆಗಲ್ಲ” ಅನ್ನೋ ಮಾತು ಜನರ ಮಧ್ಯ ಹರಿದಾಡುತ್ತಿತ್ತು.—ಧರ್ಮೋ 2:10, 11, 20, 21; 9:1-3.