ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr22 ಜನವರಿ ಪು. 1-9
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2022
  • ಉಪಶೀರ್ಷಿಕೆಗಳು
  • ಜನವರಿ 3-9
  • ಜನವರಿ 10-16
  • ಜನವರಿ 17-23
  • ಜನವರಿ 24-30
  • ಜನವರಿ 31–ಫೆಬ್ರವರಿ 6
  • ಫೆಬ್ರವರಿ 7-13
  • ಫೆಬ್ರವರಿ 14-20
  • ಬೈಬಲಿನಲ್ಲಿರುವ ರತ್ನಗಳು
  • ಫೆಬ್ರವರಿ 21-27
  • ಫೆಬ್ರವರಿ 28–ಮಾರ್ಚ್‌ 6
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2022
mwbr22 ಜನವರಿ ಪು. 1-9

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಜನವರಿ 3-9

ಬೈಬಲಿನಲ್ಲಿರುವ ನಿಧಿ | ನ್ಯಾಯಸ್ಥಾಪಕರು 15-16

“ಛೇ . . . ಎಂಥಾ ದ್ರೋಹ!”

ಕಾವಲಿನಬುರುಜು12 4/15 ಪುಟ 9 ಪ್ಯಾರ 4

ನಂಬಿಕೆದ್ರೋಹ ಕಡೇ ದಿವಸಗಳ ಸೂಚನೆ

4 ಮೊದಲು ನಾವು ನಯವಂಚಕಿ ದೆಲೀಲಳ ಉದಾಹರಣೆ ನೋಡೋಣ. ದೇವಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಲು ಹೆಜ್ಜೆ ತೆಗೆದುಕೊಳ್ಳಲಿದ್ದ ನ್ಯಾಯಸ್ಥಾಪಕ ಸಂಸೋನ ಅವಳನ್ನು ಪ್ರೇಮಿಸಿದ. ದೆಲೀಲಳಿಗೆ ಸಂಸೋನನ ಮೇಲೆ ನಿಜ ಪ್ರೀತಿ ಇರಲಿಲ್ಲ. ಆಕೆಯಲ್ಲಿ ನಿಷ್ಠೆ ಇರಲಿಲ್ಲ. ಇದು ಫಿಲಿಷ್ಟಿಯರ ಐದು ಮಂದಿ ಪ್ರಭುಗಳಿಗೆ ಗೊತ್ತಿದ್ದಿರಬೇಕು. ಹಾಗಾಗಿ ಅವರು ಸಂಸೋನನನ್ನು ಕೊಲ್ಲುವ ಉದ್ದೇಶದಿಂದ ದೆಲೀಲಳ ಬಳಿ ಹೋಗಿ ದೊಡ್ಡ ಮೊತ್ತದ ಲಂಚ ಕೊಟ್ಟು ಅವನ ಮಹಾಶಕ್ತಿಯ ರಹಸ್ಯವನ್ನು ತಿಳಿದುಕೊಳ್ಳುವಂತೆ ಪುಸಲಾಯಿಸಿದರು. ಹಣದಾಸೆಯಿಂದ ದೆಲೀಲಾ ಅದಕ್ಕೆ ಒಪ್ಪಿ ಅವನ ಮಹಾಶಕ್ತಿಯ ಗುಟ್ಟನ್ನು ರಟ್ಟು ಮಾಡಲು ಕುತಂತ್ರ ಹೂಡಿದಳು. ಆದರೆ ಮೂರು ಬಾರಿ ಅವಳ ಪ್ರಯತ್ನ ಫಲಕಾರಿಯಾಗಲಿಲ್ಲ. ಅಷ್ಟಕ್ಕೆ ಬಿಡದೆ “ಅವನನ್ನು ದಿನ ದಿನವೂ ಮಾತಿನಿಂದ” ಪೀಡಿಸುತ್ತಾ ಇದ್ದಳು. ಎಷ್ಟರಮಟ್ಟಿಗೆಂದರೆ “ಅವನಿಗೆ ಸಾಯುವದು ಒಳ್ಳೇದನ್ನುವಷ್ಟು ಬೇಸರವಾಯಿತು.” ಕೊನೆಗೆ ಅವನು ತನ್ನ ಶಕ್ತಿಯ ಗುಟ್ಟನ್ನು ತಿಳಿಸಿದನು. ಹುಟ್ಟಿನಿಂದ ತಲೆಗೂದಲನ್ನು ಕತ್ತರಿಸಿಲ್ಲ, ಕತ್ತರಿಸಿದರೆ ತನ್ನ ಶಕ್ತಿಯನ್ನೆಲ್ಲಾ ಕಳಕೊಳ್ಳುವೆನೆಂದು ಹೇಳಿದನು. ಆಗ ಅವಳು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನಿದ್ರೆ ಬರಿಸಿ ಒಬ್ಬ ಮನುಷ್ಯನಿಂದ ಅವನ ತಲೆಯ ಕೂದಲನ್ನೆಲ್ಲಾ ಬೋಳಿಸಿದಳು. ಬಳಿಕ ವೈರಿಗಳ ಕೈಗೊಪ್ಪಿಸಿದಳು. (ನ್ಯಾಯ. 16:4, 5, 15-21) ನೀಚಕೃತ್ಯ! ಹಣದಾಸೆಯಿಂದ ತನ್ನನ್ನು ಪ್ರೀತಿಸಿದವನಿಗೇ ದ್ರೋಹ!

ಕಾವಲಿನಬುರುಜು05 1/15 ಪುಟ 27 ಪ್ಯಾರ 5

ನ್ಯಾಯಸ್ಥಾಪಕರು ಪುಸ್ತಕದ ಮುಖ್ಯಾಂಶಗಳು

14:16, 17; 16:16. ಅಳುವ ಮತ್ತು ಕಾಡಿಸುವ ಮೂಲಕ ಇತರರ ಮೇಲೆ ಒತ್ತಡವನ್ನು ಹಾಕುವುದು ಒಂದು ಸಂಬಂಧವನ್ನು ಹಾಳುಮಾಡಬಲ್ಲದು.—ಜ್ಞಾನೋಕ್ತಿ 19:13; 21:19.

ಕಾವಲಿನಬುರುಜು12 4/15 ಪುಟ 11-12 ಪ್ಯಾರ 15-16

ನಂಬಿಕೆದ್ರೋಹ ಕಡೇ ದಿವಸಗಳ ಸೂಚನೆ

15 ಪತಿಪತ್ನಿ ಒಬ್ಬರಿಗೊಬ್ಬರು ಹೇಗೆ ನಿಷ್ಠಾವಂತರಾಗಿರಬಲ್ಲರು? “ನಿನ್ನ ಯೌವನಕಾಲದ ಪತ್ನಿಯಲ್ಲಿ [ಪತಿಯಲ್ಲಿ] ಆನಂದಿಸು,” “ನಿನ್ನ ಪ್ರಿಯಪತ್ನಿಯೊಡನೆ [ಪ್ರಿಯಪತಿಯೊಡನೆ] ಸುಖದಿಂದ ಬದುಕು” ಎನ್ನುತ್ತದೆ ದೇವರ ವಾಕ್ಯ. (ಜ್ಞಾನೋ. 5:18; ಪ್ರಸಂ. 9:9) ದಾಂಪತ್ಯದಲ್ಲಿ ವರ್ಷಗಳು ಕಳೆದಂತೆ ಪತಿಪತ್ನಿ ಇಬ್ಬರೂ ತಮ್ಮ ಶಾರೀರಿಕ ಮತ್ತು ಭಾವನಾತ್ಮಕ ಬಂಧವನ್ನು ಬಲಪಡಿಸಲು ಕೈಲಾದುದ್ದೆಲ್ಲವನ್ನೂ ಮಾಡಬೇಕು. ಅಂದರೆ ಒಬ್ಬರಿಗೊಬ್ಬರು ಕಿವಿಗೊಡಬೇಕು, ಗಮನಕೊಡಬೇಕು. ಒಬ್ಬರಿಗೊಬ್ಬರು ಸಮಯ ಕೊಡಬೇಕು. ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾಗಬೇಕು. ತಮ್ಮ ವೈವಾಹಿಕ ಬಂಧವನ್ನು ಮತ್ತು ಯೆಹೋವನೊಂದಿಗಿನ ಸಂಬಂಧವನ್ನು ಕಾಪಾಡಲು ಶ್ರಮಿಸಬೇಕು. ಅದಕ್ಕಾಗಿ ಪತಿಪತ್ನಿ ಬೈಬಲನ್ನು ಜೊತೆಯಾಗಿ ಅಧ್ಯಯನ ಮಾಡಬೇಕು, ನಿಯತವಾಗಿ ಕ್ಷೇತ್ರಸೇವೆಯಲ್ಲಿ ಜೊತೆಯಾಗಿ ಭಾಗವಹಿಸಬೇಕು, ಯೆಹೋವನ ಆಶೀರ್ವಾದಕ್ಕಾಗಿ ಜೊತೆಯಾಗಿ ಪ್ರಾರ್ಥಿಸಬೇಕು.

ಯೆಹೋವನಿಗೆ ನಿಷ್ಠರಾಗಿರಿ

16 ಸಭೆಯ ಸದಸ್ಯರು ಗಂಭೀರ ಪಾಪಗಳನ್ನು ಮಾಡಿದಾಗ ‘ನಂಬಿಕೆಯಲ್ಲಿ ಸ್ವಸ್ಥರಾಗಲಿಕ್ಕಾಗಿ ಅವರನ್ನು ಕಠಿಣವಾಗಿ’ ಖಂಡಿಸಲಾಗಿದೆ. (ತೀತ 1:13) ಕೆಲವರನ್ನು ಅವರ ದುರ್ನಡತೆಯ ಕಾರಣ ಬಹಿಷ್ಕರಿಸಲಾಗಿದೆ. ಈ ಶಿಸ್ತಿನಿಂದ ‘ತರಬೇತಿಹೊಂದಿದವರು’ ಆಧ್ಯಾತ್ಮಿಕವಾಗಿ ಪುನಃಸ್ಥಾಪಿಸಲ್ಪಟ್ಟಿದ್ದಾರೆ. (ಇಬ್ರಿ. 12:11) ನಮ್ಮ ಸಂಬಂಧಿಕನೋ ಆಪ್ತ ಸ್ನೇಹಿತನೋ ಬಹಿಷ್ಕರಿಸಲ್ಪಟ್ಟಿರುವಲ್ಲಿ ಆಗೇನು? ಅಂಥ ಸಂದರ್ಭದಲ್ಲಿ ನಮ್ಮ ನಿಷ್ಠೆ ಪರೀಕ್ಷೆಗೊಳಗಾಗುತ್ತದೆ. ನಾವು ಆ ವ್ಯಕ್ತಿಗೆ ನಿಷ್ಠರಾಗಿರುತ್ತೇವಾ ಅಥವಾ ಯೆಹೋವನಿಗೆ ನಿಷ್ಠರಾಗಿರುತ್ತೇವಾ? ಬಹಿಷ್ಕರಿಸಲ್ಪಟ್ಟಿರುವವನು ಯಾರೇ ಆಗಿರಲಿ ಅವನೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬಾರದೆಂಬ ಯೆಹೋವನ ಆಜ್ಞೆಯನ್ನು ನಾವು ಪಾಲಿಸುತ್ತೇವೋ ಇಲ್ಲವೋ ಎಂದು ಆತನು ಗಮನಿಸುತ್ತಿರುತ್ತಾನೆ.—1 ಕೊರಿಂಥ 5:11-13 ಓದಿ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 3/15 ಪುಟ 27 ಪ್ಯಾರ 6

ಯೆಹೋವನ ಬಲದಿಂದ ಸಂಸೋನನು ಜಯಗಳಿಸುತ್ತಾನೆ!

ಫಿಲಿಷ್ಟಿಯರ ವಿರುದ್ಧ ಹೋರಾಡುವ ತನ್ನ ಗುರಿಯನ್ನು ಸಾಧಿಸುವುದರಲ್ಲಿ ಸಂಸೋನನು ದೃಢನಿಶ್ಚಿತನಾಗಿದ್ದನು. ದೇವರ ವಿರೋಧಿಗಳ ವಿರುದ್ಧ ಹೋರಾಡಬೇಕೆಂಬ ಉದ್ದೇಶದಿಂದಲೇ ಅವನು ಗಾಜದಲ್ಲಿ ಒಬ್ಬ ಸೂಳೆಯ ಮನೆಯಲ್ಲಿ ತಂಗಿದನು. ವೈರಿಗಳ ಪಟ್ಟಣದಲ್ಲಿ ಉಳುಕೊಳ್ಳಲು ಸಂಸೋನನಿಗೆ ಒಂದು ವಾಸಸ್ಥಳದ ಅಗತ್ಯವಿತ್ತು, ಮತ್ತು ಅದು ಕೇವಲ ಒಬ್ಬ ಸೂಳೆಯ ಮನೆಯಲ್ಲಿ ಮಾತ್ರ ಸಿಗಸಾಧ್ಯವಿತ್ತು. ಸಂಸೋನನ ಮನಸ್ಸಿನಲ್ಲಿ ಯಾವುದೇ ಅನೈತಿಕ ಉದ್ದೇಶವಿರಲಿಲ್ಲ. ಮಧ್ಯರಾತ್ರಿಯಲ್ಲಿಯೇ ಅವನು ಆ ಸ್ತ್ರೀಯ ಮನೆಯಿಂದ ಹೊರಟು, ಊರುಬಾಗಲಿನ ಕದಗಳನ್ನೂ ಅದರ ಎರಡು ನಿಲುವು ಪಟ್ಟಿಗಳನ್ನೂ ಕಿತ್ತು ಹೆಗಲ ಮೇಲೆ ಹೊತ್ತುಕೊಂಡು ಹೋಗಿ 60 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದ ಹೆಬ್ರೋನಿನ ಎದುರಿಗಿರುವ ಪರ್ವತದ ಶಿಖರದ ಮೇಲೆ ಇಟ್ಟನು. ಇದನ್ನು ಅವನು ದೈವಿಕ ಒಪ್ಪಿಗೆಯಿಂದ ಮತ್ತು ದೇವದತ್ತ ಬಲದಿಂದ ಮಾಡಿದನು.—ನ್ಯಾಯಸ್ಥಾಪಕರು 16:1-3.

ಜನವರಿ 10-16

ಬೈಬಲಿನಲ್ಲಿರುವ ನಿಧಿ | ನ್ಯಾಯಸ್ಥಾಪಕರು 17-19

“ದೇವರ ಮಾತನ್ನ ಕೇಳದೆ ಇದ್ರೆ ತೊಂದ್ರೆಗಳಾಗುತ್ತೆ!”

it-2-E ಪುಟ 390-391

ಮೀಕ

1. ಇವನು ಎಫ್ರಾಯೀಮ್‌ ಕುಲದವನಾಗಿದ್ದ. ತಾಯಿಯಿಂದ ಕದ್ದ ಹಣವನ್ನ ವಾಪಸ್ಸು ಕೊಟ್ಟ. ಅವಳು 200 ಬೆಳ್ಳಿ ಶೆಕೆಲ್‌ ತಗೊಂಡು ಮೂರ್ತಿ ಮಾಡೋರಿಗೆ ಕೊಟ್ಟಳು. ಅದರಿಂದ ಒಂದು “ಕೆತ್ತಿದ ಮೂರ್ತಿ ಮತ್ತೆ ಒಂದು ಲೋಹದ ಮೂರ್ತಿ” ಮಾಡಿಸಿಕೊಂಡು ಮನೆಯಲ್ಲಿ ಇಟ್ರು. ಮೀಕ “ಒಂದು ಗುಡಿ ಕಟ್ಟಿಸಿದ್ದ.” ಒಂದು ಏಫೋದನ್ನ, ಮನೆದೇವರುಗಳ ಮೂರ್ತಿಗಳನ್ನ ತಯಾರಿಸಿ ಅಲ್ಲಿಟ್ಟ. ತನ್ನ ಮಕ್ಕಳಲ್ಲಿ ಒಬ್ಬನನ್ನ ಪುರೋಹಿತನಾಗಿ ನೇಮಿಸಿದ. ಇದನ್ನೆಲ್ಲಾ ಯೆಹೋವ ದೇವರಿಗೋಸ್ಕರನೇ ಮಾಡ್ತಾ ಇದ್ದೀವಿ ಅಂತ ಅವನು ಮತ್ತು ಅವನ ಮನೆಯವರು ಹೇಳಿಕೊಂಡರು. ಆದ್ರೆ ದೇವರ ದೃಷ್ಟಿಯಲ್ಲಿ ಇದು ದೊಡ್ಡ ತಪ್ಪಾಗಿತ್ತು. ಯಾಕಂದ್ರೆ ಮೂರ್ತಿ ಪೂಜೆ ಮಾಡಬಾರದು ಅನ್ನೋ ಆಜ್ಞೆಯನ್ನ ಅವರು ಮುರಿದಿದ್ದರು. (ವಿಮೋ 20:4-6) ಯೆಹೋವ ಈಗಾಗಲೇ ಪವಿತ್ರ ಡೇರೆಯನ್ನ ಮತ್ತು ಪುರೋಹಿತರನ್ನ ಇಟ್ಟಿದ್ದನು. ಈ ಆರಾಧನೆಯ ಏರ್ಪಾಡಿಗೆ ಮೀಕ ಮತ್ತು ಅವನ ಮನೆಯವರು ಗೌರವನೇ ಕೊಡಲಿಲ್ಲ. (ನ್ಯಾಯ 17:1-6; ಧರ್ಮೋ 12:1-14) ಆಮೇಲೆ ಯೋನಾತಾನ ಅನ್ನೋ ಲೇವಿಯನನ್ನ ಮೀಕ ಪುರೋಹಿತನಾಗಿ ನೇಮಿಸಿದ. “ಈಗ ಯೆಹೋವ ನನಗೆ ಖಂಡಿತ ಒಳ್ಳೇದನ್ನ ಮಾಡ್ತಾನೆ” ಅಂತ ಮೀಕ ಖುಷಿಯಾಗಿದ್ದ. (ನ್ಯಾಯ 17:7-13; 18:4) ಆದ್ರೆ ಇದು ಕೂಡ ತಪ್ಪಾಗಿತ್ತು. ಯಾಕಂದ್ರೆ ಯೋನಾತಾನ ಮೋಶೆಯ ಮಗನಾದ ಗೆರ್ಷೋನನ ವಂಶದವನಾಗಿದ್ದ. ಆರೋನನ ವಂಶದವನಾಗಿರಲಿಲ್ಲ. ಅದಕ್ಕೆ ಅವನು ಪುರೋಹಿತನಾಗಿ ಸೇವೆ ಮಾಡೋ ಹಾಗಿರಲಿಲ್ಲ. ಮೀಕ ಅವನನ್ನ ಪುರೋಹಿತನಾಗಿ ನೇಮಿಸಿಕೊಂಡು ತಪ್ಪಿನ ಮೇಲೆ ತಪ್ಪು ಮಾಡಿದ. (ನ್ಯಾಯ 18:30; ಅರ 3:10)

it-2-E ಪುಟ 391 ಪ್ಯಾರ 2

ಮೀಕ

ದಾನ್‌ ಕುಲದವರು ತಗೊಂಡು ಹೋಗಿದ್ದ ಮೂರ್ತಿಗಳನ್ನ ಮತ್ತು ಪುರೋಹಿತನನ್ನ ಬಿಡಿಸಿಕೊಂಡು ಬರೋಕೆ ಕೂಡಲೆ ಮೀಕ ಮತ್ತು ಅವನ ಅಕ್ಕಪಕ್ಕದ ಮನೆಯವರು ಅವರ ಹಿಂದೆನೇ ಹೋದ್ರು. ಆಗ ದಾನ್‌ ಕುಲದವರು ಮೀಕನಿಗೆ “ಏನು ವಿಷ್ಯ” ಅಂತ ಕೇಳಿದ್ರು. ಆಗ ಮೀಕ “ನಾನು ಮಾಡಿಸಿದ ದೇವರುಗಳನ್ನ ನೀವು ತಗೊಂಡಿದ್ದೀರ. ನನ್ನ ಪುರೋಹಿತನನ್ನೂ ಕರ್ಕೊಂಡು ಹೋಗ್ತಾ ಇದ್ದೀರ” ಅಂತ ಹೇಳಿದ. ಆಗ ದಾನ್‌ ಕುಲದವರು ‘ನಮಗೆ ತೊಂದರೆ ಕೊಟ್ರೆ ಸಾಯಿಸಿಬಿಡ್ತೀವಿ’ ಅಂತ ಹೆದರಿಸಿದ್ರು. ಅವರು ತನಗಿಂತ ಬಲಿಷ್ಠರಾಗಿರೋದನ್ನ ನೋಡಿ ಮೀಕ ಮನೆಗೆ ವಾಪಸ್ಸು ಹೋದ. (ನ್ಯಾಯ 18:22-26)

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು15 12/15 ಪುಟ 10 ಪ್ಯಾರ 6

ಸುಲಭವಾಗಿ ಅರ್ಥವಾಗುವ ಬೈಬಲ್‌ ಭಾಷಾಂತರ

6 ಯೆಹೋವನ ಹೆಸರನ್ನು ನಾವು ಬಳಸಬೇಕು ಎನ್ನುವುದಕ್ಕೆ ಇಂದು ಇನ್ನಷ್ಟು ಪುರಾವೆ ಸಹ ಇದೆ. 2013 ರ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿ ದೇವರ ಹೆಸರನ್ನು 7,216 ಬಾರಿ ಬಳಸಿದೆ. ಅಂದರೆ ಮುಂಚೆ ಇದ್ದ ಆವೃತ್ತಿಯಲ್ಲಿ ಇದ್ದದ್ದಕ್ಕಿಂತ ಆರು ಸಲ ಹೆಚ್ಚು. ಇದರಲ್ಲಿ ಐದನ್ನು, ಇತ್ತೀಚಿಗೆ ಹೊರತರಲಾದ ಮೃತ ಸಮುದ್ರ ಸುರುಳಿಗಳಲ್ಲಿ ದೇವರ ಹೆಸರು ಕಂಡುಬಂದದ್ದರಿಂದ ಸೇರಿಸಲಾಗಿದೆ.a (ಪಾದಟಿಪ್ಪಣಿ ನೋಡಿ.) ಆ ವಚನಗಳು ಯಾವುವೆಂದರೆ: 1 ಸಮುವೇಲ 2:25; 6:3; 10:26; 23:14, 16. ಆರನೇ ವಚನ ನ್ಯಾಯಸ್ಥಾಪಕರು 19:18. ಭರವಸಾರ್ಹ ಪುರಾತನ ಬೈಬಲ್‌ ಹಸ್ತಪ್ರತಿಗಳ ಹೆಚ್ಚಿನ ಅಧ್ಯಯನದಿಂದಾಗಿ ದೇವರ ಹೆಸರನ್ನು ಇಲ್ಲೂ ಸೇರಿಸಬೇಕೆಂದು ತಿಳಿದುಬಂತು.

ಜನವರಿ 17-23

ಬೈಬಲಿನಲ್ಲಿರುವ ನಿಧಿ | ನ್ಯಾಯಸ್ಥಾಪಕರು 20-21

“ಯಾವಾಗಲೂ ಯೆಹೋವ ದೇವರನ್ನ ಒಂದು ಮಾತು ಕೇಳಿ”

ಕಾವಲಿನಬುರುಜು11 9/15 ಪುಟ 32 ಪ್ಯಾರ 3

ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

ಒಮ್ಮೆ ಏನಾಯಿತೆಂದರೆ, ಲೇವಿಯನೊಬ್ಬನ ಉಪಪತ್ನಿಯನ್ನು ಬೆನ್ಯಾಮೀನ್ಯರ ಊರಿನ ಗಿಬೆಯದ ಜನರು ಮಾನಭಂಗಪಡಿಸಿದರು. ಆಕೆ ಸತ್ತಳು. ಈ ಹೃದಯವಿದ್ರಾವಕ ಸುದ್ದಿ ತಿಳಿದಾಗ ಬೇರೆ ಕುಲಗಳವರು ಬೆನ್ಯಾಮೀನ್ಯರ ವಿರುದ್ಧ ಯುದ್ಧಕ್ಕೆ ಹೋಗಲು ಸಿದ್ಧರಾದರು. (ನ್ಯಾಯ. 20:1-11) ಯೆಹೋವನಿಗೆ ಪ್ರಾರ್ಥಿಸಿಯೇ ಯುದ್ಧಕ್ಕೆ ಹೋದರು. ಆದರೆ ಎರಡು ಬಾರಿ ಸೋಲು, ತುಂಬ ನಷ್ಟ ಅನುಭವಿಸಿದರು. (ನ್ಯಾಯ. 20:​14-25) ತಮ್ಮ ಪ್ರಾರ್ಥನೆಗಳು ವ್ಯರ್ಥವಾದವೆಂಬ ತೀರ್ಮಾನಕ್ಕೆ ಅವರು ಬಂದರೋ? ಅಥವಾ ಆ ದುಷ್ಕೃತ್ಯಕ್ಕೆ ಅವರು ಪ್ರತಿಕ್ರಿಯಿಸಿದ ಕುರಿತು ಯೆಹೋವನಿಗೆ ಆಸಕ್ತಿಯಿರಲಿಲ್ಲವೋ?

ಕಾವಲಿನಬುರುಜು11 9/15 ಪುಟ 32 ಪ್ಯಾರ 5

ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

ಇದರಲ್ಲಿರುವ ಪಾಠ? ಕೆಲವೊಮ್ಮೆ ಹಿರಿಯರು ಶ್ರದ್ಧೆಯಿಂದ ಪ್ರಾರ್ಥಿಸಿ ಪ್ರಯತ್ನಿಸಿದರೂ ಸಭೆಯಲ್ಲಿ ಸಮಸ್ಯೆಗಳು ಹಾಗೇ ಮುಂದುವರಿಯಬಹುದು. ಹೀಗಾಗುವಲ್ಲಿ ಹಿರಿಯರು ಯೇಸುವಿನ ಈ ಮಾತುಗಳನ್ನು ನೆನಪಿಗೆ ತಂದುಕೊಳ್ಳಬೇಕು: “ಕೇಳುತ್ತಾ [ಅಥವಾ ಪ್ರಾರ್ಥಿಸುತ್ತಾ] ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.” (ಲೂಕ 11:9) ಪ್ರಾರ್ಥನೆಗೆ ಉತ್ತರ ಸಿಗುತ್ತಿಲ್ಲವೆಂದು ತೋರುವುದಾದರೂ ಯೆಹೋವನು ತಕ್ಕ ಸಮಯದಲ್ಲಿ ಸಹಾಯ ಮಾಡೇ ಮಾಡುವನೆಂದು ಮೇಲ್ವಿಚಾರಕರು ಭರವಸೆ ಇಡಸಾಧ್ಯವಿದೆ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು14-E 5/1 ಪುಟ 11 ಪ್ಯಾರ 4-6

ನಿಮಗೆ ಗೊತ್ತಿತ್ತಾ?

ಹಿಂದಿನ ಕಾಲದಲ್ಲಿ ಯುದ್ಧಮಾಡುವಾಗ ಕವಣೆಯನ್ನ ಹೇಗೆ ಉಪಯೋಗಿಸ್ತಾ ಇದ್ರು?

ದಾವೀದ ದೈತ್ಯ ಗೊಲ್ಯಾತನನ್ನ ಕವಣೆಯಿಂದ ಕೊಂದ. ದಾವೀದ ಕುರುಬನಾಗಿ ಇದ್ದಾಗ ಕವಣೆ ಬೀಸೋದು ಹೇಗೆ ಅಂತ ಕಲಿತಿರಬೇಕು.—1 ಸಮುವೇಲ 17:40-50.

ಹಿಂದಿನ ಕಾಲದ ಯುದ್ಧಗಳಲ್ಲಿ ಉಪಯೋಗಿಸಿದ ಕವಣೆ ಕಲ್ಲುಗಳು ಮಧ್ಯಪೂರ್ವದ ಅಗೆತಶಾಸ್ತ್ರಜ್ಞರಿಗೆ ಸಿಕ್ಕಿವೆ.

ಕವಣೆ ಬೀಸುವವನು ಕವಣೆಯಲ್ಲಿ ಕಲ್ಲಿಟ್ಟು ಮೇಲೆತ್ತಿ ಜೋರಾಗಿ ತಿರುಗಿಸಿ ಒಂದು ಎಳೆಯನ್ನ ಬಿಟ್ಟುಬಿಡುತ್ತಿದ್ದ. ಆಗ ಆ ಕಲ್ಲು 160 ರಿಂದ 240 ಕಿ.ಮೀ. ವೇಗದಲ್ಲಿ ಹೋಗಿ ಗುರಿಮುಟ್ಟುತ್ತಿತ್ತು. ಕವಣೆ ಕಲ್ಲು ಬಾಣದಷ್ಟು ವೇಗವಾಗಿ ಹೋಗುತ್ತಿತ್ತೋ ಗೊತ್ತಿಲ್ಲ, ಆದ್ರೆ ಬಾಣದ ತರಾನೇ ಕವಣೆ ಕಲ್ಲಿಂದ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಳ್ಳೋದಂತೂ ಗ್ಯಾರೆಂಟಿ ಅಂತ ಕೆಲವು ಪಂಡಿತರು ಹೇಳ್ತಾರೆ.—ನ್ಯಾಯಸ್ಥಾಪಕರು 20:16.

ಜನವರಿ 24-30

ಬೈಬಲಿನಲ್ಲಿರುವ ನಿಧಿ | ರೂತ್‌ 1-2

“ಶಾಶ್ವತ ಪ್ರೀತಿ ತೋರಿಸಿ”

ಕಾವಲಿನಬುರುಜು16.02 ಪುಟ 14 ಪ್ಯಾರ 5

ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ

5 ರೂತಳ ಕುಟುಂಬ ಮೋವಾಬಿನಲ್ಲಿ ನೆಲೆಸಿತ್ತು. ಅವರ ಹತ್ತಿರ ಅವಳು ಹೋಗಬಹುದಿತ್ತು. ಬಹುಶಃ ಅವರು ಅವಳನ್ನು ನೋಡಿಕೊಳ್ಳುತ್ತಿದ್ದರು. ಮೋವಾಬಿನ ಜನರು, ಅಲ್ಲಿನ ಭಾಷೆ, ಸಂಸ್ಕೃತಿ ಎಲ್ಲ ಅವಳಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲಿದ್ದಂತೆ ಬೇತ್ಲೆಹೇಮಿನಲ್ಲೂ ಇರುತ್ತದೆಂದು ನೊವೊಮಿ ಅವಳಿಗೆ ಧೈರ್ಯ ತುಂಬಿಸಲಿಕ್ಕೆ ಸಹ ಆಗಲಿಲ್ಲ. ರೂತಳಿಗೆ ಇನ್ನೊಂದು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಲು ತನ್ನಿಂದ ಆಗುವುದಿಲ್ಲವೇನೋ ಎಂದು ನೊವೊಮಿ ನೆನಸಿದಳು. ಹಾಗಾಗಿ ಮೋವಾಬ್‌ಗೆ ಹಿಂದಿರುಗುವಂತೆ ರೂತಳನ್ನು ಒತ್ತಾಯಿಸಿದಳು. ಒರ್ಫಳು “ತನ್ನ ಜನರ ಬಳಿಗೂ ದೇವತೆಗಳ ಬಳಿಗೂ” ಹೋಗಿ ಆಗಿತ್ತು. (ರೂತ. 1:9-15) ರೂತಳು ಸಹ ಅವಳ ಜನರ ಬಳಿಗೆ ಮತ್ತು ಸುಳ್ಳು ದೇವರುಗಳ ಆರಾಧನೆಗೆ ಹಿಂದಿರುಗಿದಳಾ? ಖಂಡಿತ ಇಲ್ಲ.

ಕಾವಲಿನಬುರುಜು16.02 ಪುಟ 14 ಪ್ಯಾರ 6

ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ

6 ರೂತಳು ತನ್ನ ಗಂಡ ಅಥವಾ ಅತ್ತೆಯಿಂದ ಯೆಹೋವನ ಕುರಿತು ಕಲಿತಿರಬೇಕು. ಯೆಹೋವನು ಮೋವಾಬ್ಯರ ದೇವದೇವತೆಗಳಂತೆ ಇಲ್ಲವೆಂದು ಕಲಿತಿದ್ದಳು. ಅವಳು ಯೆಹೋವನನ್ನು ಪ್ರೀತಿಸಿದಳು. ತನ್ನ ಪ್ರೀತಿ ಮತ್ತು ಆರಾಧನೆಗೆ ಆತನು ಅರ್ಹನೆಂದು ತಿಳಿದಿದ್ದಳು. ಆದ್ದರಿಂದ ರೂತಳು ಒಂದು ವಿವೇಕದ ನಿರ್ಣಯ ಮಾಡಿದಳು. “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು” ಎಂದು ನೊವೊಮಿಗೆ ಹೇಳಿದಳು. (ರೂತ. 1:16) ರೂತಳಿಗೆ ನೊವೊಮಿಯ ಮೇಲಿದ್ದ ಪ್ರೀತಿಯ ಕುರಿತು ಯೋಚಿಸುವಾಗ ನಮ್ಮ ಹೃದಯವು ತುಂಬಿಬರುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ನಮ್ಮ ಮನಸ್ಸನ್ನು ಸ್ಪರ್ಶಿಸುವಂಥದ್ದು ಯೆಹೋವನ ಮೇಲೆ ರೂತಳಿಗಿದ್ದ ಪ್ರೀತಿಯೇ. ಮುಂದಕ್ಕೆ ಬೋವಜನು ಸಹ ಇದನ್ನೇ ಮೆಚ್ಚಿದನು. ‘ಯೆಹೋವನ ರೆಕ್ಕೆಗಳ ಮರೆಯನ್ನು ಆಶ್ರಯಿಸಿದ್ದಕ್ಕಾಗಿ’ ಆಕೆಯನ್ನು ಹೊಗಳಿದನು. (ರೂತಳು 2:12 ಓದಿ.) ಬೋವಜನ ಈ ಮಾತುಗಳು, ಒಂದು ಮರಿಹಕ್ಕಿಯು ತನ್ನ ತಾಯಿಯ ರೆಕ್ಕೆಗಳ ಮರೆಯಲ್ಲಿ ಆಶ್ರಯ ಪಡೆಯುವುದನ್ನು ನೆನಪಿಗೆ ತರುತ್ತದೆ. (ಕೀರ್ತ. 36:7; 91:1-4) ಅದೇ ರೀತಿ ಯೆಹೋವನು ರೂತಳಿಗೆ ಪ್ರೀತಿಯಿಂದ ಆಶ್ರಯ ಕೊಟ್ಟನು. ಅವಳ ನಂಬಿಕೆಗೆ ಪ್ರತಿಫಲ ಕೊಟ್ಟನು. ಯೆಹೋವನನ್ನು ಆರಾಧಿಸಲು ಮಾಡಿದ ನಿರ್ಣಯಕ್ಕಾಗಿ ರೂತಳು ಎಂದೂ ವಿಷಾದಿಸಲಿಲ್ಲ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 3/1 ಪುಟ 27 ಪ್ಯಾರ 2

ರೂತಳು ಪುಸ್ತಕದ ಮುಖ್ಯಾಂಶಗಳು

1:13, 21—ಯೆಹೋವನು ನೊವೊಮಿಯ ಜೀವನವನ್ನು ದುಃಖಕ್ಕೊಳಪಡಿಸಿ ಅವಳ ಮೇಲೆ ಬಾಧೆಯನ್ನು ಬರಮಾಡಿದ್ದನೊ? ಇಲ್ಲ. ದೇವರು ತಪ್ಪುಗೈದಿದ್ದಾನೆಂದು ನೊವೊಮಿಯು ಸಹ ಆರೋಪಿಸಲಿಲ್ಲ. ಆದರೆ ಆ ವರೆಗೂ ತನಗೆ ಸಂಭವಿಸಿದಂಥ ಎಲ್ಲಾ ವಿಷಯಗಳ ನೋಟದಲ್ಲಿ, ಯೆಹೋವನು ತನಗೆ ವಿರೋಧವಾಗಿದ್ದಾನೆಂದು ಅವಳು ನೆನಸಿದಳು. ಅವಳಲ್ಲಿ ಕಹಿಭಾವನೆ ಮತ್ತು ನಿರಾಶೆ ಹುಟ್ಟಿತು. ಅದಲ್ಲದೆ ಆ ಸಮಯಗಳಲ್ಲಿ, ಗರ್ಭಫಲವನ್ನು ದೇವರಿಂದ ಬಂದ ಒಂದು ಆಶೀರ್ವಾದವಾಗಿ ಮತ್ತು ಬಂಜೆತನವನ್ನು ಶಾಪವಾಗಿ ಪರಿಗಣಿಸಲಾಗುತ್ತಿತ್ತು. ಯಾವುದೇ ಮೊಮ್ಮಕ್ಕಳಿಲ್ಲದೆ, ಇದ್ದ ಇಬ್ಬರು ಪುತ್ರರನ್ನೂ ಕಳೆದುಕೊಂಡಿದ್ದ ನೊವೊಮಿಗೆ, ಯೆಹೋವನು ತನ್ನನ್ನು ಗತಿಹೀನಳನ್ನಾಗಿ ಮಾಡಿದ್ದಾನೆಂದು ನೆನಸುವುದು ನ್ಯಾಯಸಮ್ಮತವಾಗಿ ತೋರಿದ್ದಿರಬಹುದು.

ಜನವರಿ 31–ಫೆಬ್ರವರಿ 6

ಬೈಬಲಿನಲ್ಲಿರುವ ನಿಧಿ | ರೂತ್‌ 3-4

“ಒಳ್ಳೇ ಹೆಸರು ಮಾಡಿಕೊಳ್ಳಿ”

ಅನುಕರಿಸಿ ಪುಟ 54 ಪ್ಯಾರ 18

“ಗುಣವಂತೆ”

ಬೋವಜನು ಗದರಿಸದೆ ಮೃದುವಾಗಿ ಮಾತಾಡಿದಾಗ ಖಂಡಿತ ರೂತಳಿಗೆ ನೆಮ್ಮದಿ ಅನಿಸಿರಬೇಕು. ಅವನು ಹೇಳಿದ್ದು: “ನನ್ನ ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರನ್ನು ನೋಡಿ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು [ನಿಷ್ಠಾವಂತ ಪ್ರೀತಿಯು, NW] ಮುಂಚಿಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು.” (ರೂತ. 3:10) “ಮುಂಚಿಗಿಂತ” ಎಂದು ಬೋವಜನು ಹೇಳಿದಾಗ ರೂತಳು ತನ್ನ ಅತ್ತೆಗೆ ನಿಷ್ಠಾವಂತ ಪ್ರೀತಿ ತೋರಿಸುತ್ತಾ ಇಸ್ರಾಯೇಲಿಗೆ ಬಂದು ಅವಳನ್ನು ನೋಡಿಕೊಳ್ಳುತ್ತಿರುವುದಕ್ಕೆ ಸೂಚಿಸುತ್ತಿದ್ದನು. “ಈಗ” ಎಂದು ಹೇಳಿದಾಗ ಅವಳು ಅವನ ಮುಂದಿಟ್ಟ ಪ್ರಸ್ತಾಪಕ್ಕೆ ಸೂಚಿಸುತ್ತಿದ್ದನು. ಬೇಕಿದ್ದರೆ ರೂತಳು ಬಡವರಲ್ಲಿ ಅಥವಾ ಐಶ್ವರ್ಯವಂತರಲ್ಲಿ ಒಬ್ಬ ಯುವ ಪುರುಷನನ್ನು ಮದುವೆಯಾಗಬಹುದಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ಏಕೆಂದರೆ ಅವಳು ನೊವೊಮಿಗೆ ಮಾತ್ರವಲ್ಲ ನೊವೊಮಿಯ ತೀರಿಹೋಗಿದ್ದ ಗಂಡನಿಗೂ ಒಳ್ಳೇದನ್ನು ಮಾಡಲು ಇಚ್ಛಿಸಿದಳು. ಅವನ ಹೆಸರು ಇಸ್ರಾಯೇಲಿನಲ್ಲಿ ಉಳಿಯುವಂತೆ ಬಯಸಿದಳು. ರೂತಳು ಇಷ್ಟು ನಿಸ್ವಾರ್ಥಿಯಾಗಿದ್ದ ಕಾರಣವೇ ಬೋವಜನು ಮೆಚ್ಚಿಕೆ ವ್ಯಕ್ತಪಡಿಸಿದನು.

ಅನುಕರಿಸಿ ಪುಟ 56 ಪ್ಯಾರ 21

“ಗುಣವಂತೆ”

ಊರಲ್ಲೆಲ್ಲಾ ಅವಳಿಗೆ “ಗುಣವಂತೆ” ಎಂಬ ಹೆಸರಿದೆಯೆಂದು ಬೋವಜನು ಹೇಳಿದ ಮಾತು ಮತ್ತೆ ಮತ್ತೆ ಅವಳ ನೆನಪಿಗೆ ಬಂದಂತೆ ಅವಳಿಗೆ ಎಷ್ಟೊಂದು ಖುಷಿಯಾಗಿರಬೇಕು. ಯೆಹೋವನ ಕುರಿತು ತಿಳಿದುಕೊಳ್ಳಲು ಮತ್ತು ಆತನನ್ನು ಆರಾಧಿಸಲು ಅವಳಿಗಿದ್ದ ಅತ್ಯಾಸಕ್ತಿ ಇಷ್ಟು ಒಳ್ಳೇ ಹೆಸರನ್ನು ತಂದುಕೊಟ್ಟಿತ್ತು. ಮಾತ್ರವಲ್ಲ, ತನಗೆ ಹೊಸದಾಗಿದ್ದ ರೀತಿನೀತಿಗಳಿಗೆ ಸ್ವಇಷ್ಟದಿಂದ ಹೊಂದಿಕೊಳ್ಳುವ ಮೂಲಕ ನೊವೊಮಿಗೂ ಅವಳ ಜನರಿಗೂ ರೂತಳು ಅಪಾರ ದಯೆ ತೋರಿಸಿದಳು. ಹಾಗಾಗಿ ಅಲ್ಲಿನ ಜನರ ಮೆಚ್ಚಿಕೆಗೆ ಪಾತ್ರಳಾಗಿದ್ದಳು. ನಾವು ರೂತಳ ನಂಬಿಕೆಯನ್ನು ಅನುಸರಿಸುವಾಗ ಇತರರನ್ನು ಗೌರವದಿಂದ ಕಾಣುವೆವು. ಅವರ ಆಚಾರವಿಚಾರಗಳನ್ನು ಅವಹೇಳನ ಮಾಡದಿರುವೆವು. ಹೀಗೆ ರೂತಳಂತೆ ನಾವು ಕೂಡ ಒಳ್ಳೇ ಹೆಸರನ್ನು ಸಂಪಾದಿಸುವೆವು.

ಅನುಕರಿಸಿ ಪುಟ 57 ಪ್ಯಾರ 25

“ಗುಣವಂತೆ”

ರೂತಳನ್ನು ಬೋವಜ ಮದುವೆಯಾದ. ಬಳಿಕ “ಆಕೆಯು ಯೆಹೋವನ ಅನುಗ್ರಹದಿಂದ ಗರ್ಭಿಣಿಯಾಗಿ ಮಗನನ್ನು ಹೆತ್ತಳು.” ಬೇತ್ಲೆಹೇಮಿನಲ್ಲಿದ್ದ ಹೆಂಗಸರು ನೊವೊಮಿಯ ಜೊತೆಸೇರಿ ಹರ್ಷಿಸಿದರು. ನೊವೊಮಿಗೆ ರೂತಳು ಏಳು ಗಂಡು ಮಕ್ಕಳಿಗಿಂತ ಉತ್ತಮಳೆಂದು ಹೊಗಳಿದರು. ರೂತಳ ಮಗ ಮುಂದಕ್ಕೆ ರಾಜ ದಾವೀದನ ಪೂರ್ವಜನಾದನು. (ರೂತ. 4:11-22) ದಾವೀದನು ಯೇಸು ಕ್ರಿಸ್ತನ ಪೂರ್ವಜನಾದನು.—ಮತ್ತಾ. 1:1.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 3/1 ಪುಟ 29 ಪ್ಯಾರ 3

ರೂತಳು ಪುಸ್ತಕದ ಮುಖ್ಯಾಂಶಗಳು

4:6—ಪುನಃ ಕೊಂಡುಕೊಳ್ಳುವ ಮೂಲಕ ಕೊಂಡುಕೊಳ್ಳುವವನು ತನ್ನ ಆಸ್ತಿಯನ್ನು ಯಾವ ವಿಧದಲ್ಲಿ ‘ನಷ್ಟ’ಪಡಿಸಿಕೊಳ್ಳಸಾಧ್ಯವಿತ್ತು? ಮೊದಲಾಗಿ, ಬಡತನಕ್ಕೆ ತುತ್ತಾಗಿರುವ ಒಬ್ಬ ವ್ಯಕ್ತಿಯು ತನ್ನ ಆಸ್ತಿಯಾಗಿರುವ ಜಮೀನನ್ನು ಮಾರಿರುವಲ್ಲಿ, ಅದನ್ನು ಪುನಃ ಕೊಂಡುಕೊಳ್ಳುವವನು ಮುಂದಿನ ಜೂಬಿಲಿ ಸಂವತ್ಸರಕ್ಕಾಗಿ ಉಳಿದಿರುವ ವರ್ಷಗಳ ಸಂಖ್ಯೆಯಿಂದ ನಿರ್ಧರಿತವಾಗಿರುವ ಬೆಲೆಗೆ ಅದನ್ನು ಖರೀದಿಸಬೇಕಾಗಿತ್ತು. (ಯಾಜಕಕಾಂಡ 25:25-27) ಹಾಗೆ ಮಾಡುವುದರಿಂದ ಅವನ ಸ್ವಂತ ಆಸ್ತಿಯ ಮೌಲ್ಯವು ಕಡಿಮೆಯಾಗುವುದು. ಅಲ್ಲದೆ, ರೂತಳಿಗೆ ಒಬ್ಬ ಮಗನು ಹುಟ್ಟಿದರೆ, ಕೊಂಡುಕೊಳ್ಳುವವನ ಸದ್ಯದ ಯಾವುದೇ ಸಮೀಪಬಂಧುವಿನ ಬದಲು ಈ ಮಗನು ಆ ಖರೀದಿಸಲ್ಪಟ್ಟ ಹೊಲಕ್ಕೆ ವಾರಸುದಾರನಾಗುತ್ತಿದ್ದನು.

ಫೆಬ್ರವರಿ 7-13

ಬೈಬಲಿನಲ್ಲಿರುವ ನಿಧಿ | 1 ಸಮುವೇಲ 1-2

“ನಿಮಗೆ ಅನಿಸೋದನ್ನೆಲ್ಲ ಯೆಹೋವನ ಹತ್ರ ಹೇಳಿ”

ಅನುಕರಿಸಿ ಪುಟ 63 ಪ್ಯಾರ 12

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

12 ಹೀಗೆ ಹನ್ನ ಪ್ರಾರ್ಥನೆಯ ವಿಷಯದಲ್ಲಿ ದೇವರ ಎಲ್ಲ ಸೇವಕರಿಗೆ ಮಾದರಿ. ಒಂದು ಮಗು ತನ್ನ ಪ್ರೀತಿಯ ಅಪ್ಪನಲ್ಲಿ ಪೂರ್ಣ ಭರವಸೆಯಿಟ್ಟು ಯಾವುದೇ ಅಳುಕಿಲ್ಲದೆ, ಮನಬಿಚ್ಚಿ ಮಾತಾಡುವಂತೆಯೇ ತನ್ನ ಜನರು ತಮ್ಮೆಲ್ಲ ಚಿಂತೆಗಳನ್ನು ತನಗೆ ಹೇಳುವಂತೆ ಯೆಹೋವನು ಕೇಳಿಕೊಳ್ಳುತ್ತಾನೆ. (ಕೀರ್ತನೆ 62:8; 1 ಥೆಸಲೊನೀಕ 5:17 ಓದಿ.) ಪ್ರಾರ್ಥಿಸುವುದರ ಬಗ್ಗೆ ಅಪೊಸ್ತಲ ಪೇತ್ರನು ದೇವಪ್ರೇರಿತನಾಗಿ ಈ ಸಾಂತ್ವನದಾಯಕ ಮಾತುಗಳನ್ನು ಬರೆದನು: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

ಅನುಕರಿಸಿ ಪುಟ 64 ಪ್ಯಾರ 15

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

ಹನ್ನಳು ಆರಾಧನೆಗಾಗಿ ಗುಡಾರಕ್ಕೆ ಬಂದದ್ದು, ಯೆಹೋವನಲ್ಲಿ ಹೃದಯ ತೋಡಿಕೊಂಡದ್ದು ಆಕೆಯ ಮೇಲೆ ಯಾವ ಪರಿಣಾಮ ಬೀರಿತು? ಆಕೆ “ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎನ್ನುತ್ತದೆ ವೃತ್ತಾಂತ. (1 ಸಮು. 1:18) ಹೌದು ಹನ್ನಳ ಮನಸ್ಸು ಹೂವಿನಷ್ಟು ಹಗುರವಾಯಿತು. ಒಂದರ್ಥದಲ್ಲಿ ತನ್ನ ಹೆಗಲ ಮೇಲಿದ್ದ ಭಾವನಾತ್ಮಕ ಹೊರೆಯನ್ನು ಬಲಿಷ್ಠನಾದ ತನ್ನ ಸ್ವರ್ಗೀಯ ತಂದೆಯ ಹೆಗಲ ಮೇಲೆ ಹಾಕಿಬಿಟ್ಟಿದ್ದಳು. (ಕೀರ್ತನೆ 55:22 ಓದಿ.) ಯೆಹೋವನಿಗೆ ಯಾವುದೇ ಸಮಸ್ಯೆ ಭಾರವೆನಿಸುತ್ತದೋ? ಇಲ್ಲ! ಅಂದು ಇಂದು ಮುಂದೆಂದಿಗೂ ಆತನಿಗೆ ಹಾಗನಿಸದು.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 3/15 ಪುಟ 21 ಪ್ಯಾರ 5

ಒಂದನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು

2:10—ಇಸ್ರಾಯೇಲಿನಲ್ಲಿ ಯಾವ ಮಾನವ ಅರಸನೂ ಇಲ್ಲದಿದ್ದ ಸಮಯದಲ್ಲಿ ಹನ್ನಳು, ಯೆಹೋವನು “ತಾನು ನೇಮಿಸಿದ ಅರಸನಿಗೆ ಬಲವನ್ನು ಅನುಗ್ರಹಿಸು”ವಂತೆ ಏಕೆ ಬೇಡಿದಳು? ಮೋಶೆಯ ಧರ್ಮಶಾಸ್ತ್ರದಲ್ಲಿ, ಇಸ್ರಾಯೇಲ್ಯರಿಗೆ ಒಬ್ಬ ಮಾನವ ಅರಸನಿರುವನೆಂದು ಮುಂತಿಳಿಸಲ್ಪಟ್ಟಿತ್ತು. (ಧರ್ಮೋಪದೇಶಕಾಂಡ 17:14-18) ಯಾಕೋಬನು ತನ್ನ ಮರಣಶಯ್ಯೆಯಲ್ಲಿನ ಪ್ರವಾದನೆಯಲ್ಲಿ ಹೇಳಿದ್ದು: “ರಾಜದಂಡವನ್ನು ಹಿಡಿಯತಕ್ಕವನು [ರಾಜಾಧಿಕಾರದ ಸಂಕೇತ] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ.” (ಆದಿಕಾಂಡ 49:10) ಅಷ್ಟುಮಾತ್ರವಲ್ಲದೆ, ಇಸ್ರಾಯೇಲ್ಯರ ಪೂರ್ವಜಳಾದ ಸಾರಳ ಕುರಿತು ಯೆಹೋವನು ಹೇಳಿದ್ದು: “ಆಕೆಯಿಂದ . . . ಅರಸರೂ ಉತ್ಪತ್ತಿಯಾಗುವರು.” (ಆದಿಕಾಂಡ 17:16) ಆದುದರಿಂದ, ಹನ್ನಳು ಭವಿಷ್ಯದ ರಾಜನ ಕುರಿತು ಬೇಡುತ್ತಿದ್ದಳು.

ಫೆಬ್ರವರಿ 14-20

ಬೈಬಲಿನಲ್ಲಿರುವ ನಿಧಿ | 1 ಸಮುವೇಲ 3-5

“ಅರ್ಥಮಾಡಿಕೊಳ್ಳೋ ದೇವರು ಯೆಹೋವ”

ಕಾವಲಿನಬುರುಜು18.09 ಪುಟ 24 ಪ್ಯಾರ 3

ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ

3 ಸಮುವೇಲನು ತುಂಬ ಚಿಕ್ಕ ವಯಸ್ಸಿನಿಂದಲೇ ದೇವಗುಡಾರದಲ್ಲಿ ಸೇವೆ ಮಾಡುತ್ತಿದ್ದನು. (1 ಸಮು. 3:1) ಒಂದು ರಾತ್ರಿ, ಅವನು ನಿದ್ದೆ ಮಾಡುತ್ತಿದ್ದಾಗ ತುಂಬ ಅಪರೂಪದ ಒಂದು ಘಟನೆ ನಡೆಯಿತು. (1 ಸಮುವೇಲ 3:2-10 ಓದಿ.) ಯಾರೋ ಅವನ ಹೆಸರನ್ನು ಕರೆದಂತೆ ಅನಿಸಿತು. ವೃದ್ಧನಾಗಿದ್ದ ಮಹಾ ಯಾಜಕ ಏಲಿಯೇ ತನ್ನನ್ನು ಕರೆದಿರಬೇಕು ಎಂದು ಸಮುವೇಲ ನೆನಸಿದನು. ಥಟ್ಟನೆ ಎದ್ದು ಏಲಿಯ ಹತ್ತಿರ ಹೋಗಿ ‘ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲಾ’ ಎಂದು ಕೇಳಿದನು. ಆಗ ಏಲಿ “ನಾನು ನಿನ್ನನ್ನು ಕರೆಯಲಿಲ್ಲ” ಎಂದನು. ಇದೇ ರೀತಿ ಇನ್ನೂ ಎರಡು ಸಾರಿ ಆಯಿತು. ಆಗ ಏಲಿಗೆ ಯೆಹೋವನೇ ಸಮುವೇಲನನ್ನು ಕರೆದಿರುವುದು ಎಂದು ಗೊತ್ತಾಯಿತು. ಅವನು ಸಮುವೇಲನಿಗೆ, ಇನ್ನೊಂದು ಸಾರಿ ಈ ರೀತಿ ಕರೆದರೆ ಏನು ಮಾಡಬೇಕು ಎಂದು ಹೇಳಿ ಕಳುಹಿಸಿದನು. ಅದೇ ರೀತಿ ಸಮುವೇಲ ಮಾಡಿದನು. ತಾನೇ ಕರೆಯುತ್ತಿರುವುದು ಎಂದು ಯೆಹೋವನು ಯಾಕೆ ಸಮುವೇಲನಿಗೆ ಮೊದಲೇ ಹೇಳಲಿಲ್ಲ? ಇದರ ಕಾರಣ ಬೈಬಲಲ್ಲಿ ಇಲ್ಲ. ಆದರೆ ಯೆಹೋವನಿಗೆ ಸಮುವೇಲನ ಮೇಲೆ ಕಾಳಜಿ ಇದ್ದದರಿಂದಲೇ ಹೀಗೆ ಮಾಡಿರಬೇಕು ಎಂದು ಗೊತ್ತಾಗುತ್ತದೆ.

ಕಾವಲಿನಬುರುಜು18.09 ಪುಟ 24 ಪ್ಯಾರ 4

ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ

4 ಒಂದನೇ ಸಮುವೇಲ 3:11-18 ಓದಿ. ಮಕ್ಕಳು ದೊಡ್ಡವರಿಗೆ, ಅದರಲ್ಲೂ ಅಧಿಕಾರದಲ್ಲಿ ಇರುವವರಿಗೆ ಗೌರವ ಕೊಡಬೇಕು ಎಂಬ ಆಜ್ಞೆಯನ್ನು ಯೆಹೋವನು ಧರ್ಮಶಾಸ್ತ್ರದಲ್ಲಿ ಕೊಟ್ಟಿದ್ದನು. (ವಿಮೋ. 22:28; ಯಾಜ. 19:32) ಹಾಗಾಗಿ ಚಿಕ್ಕ ಹುಡುಗನಾಗಿದ್ದ ಸಮುವೇಲನಿಗೆ ಬೆಳಗ್ಗೆ ಎದ್ದು ಏಲಿಯ ಹತ್ತಿರ ಹೋಗಿ ದೇವರ ನ್ಯಾಯತೀರ್ಪಿನ ಸಂದೇಶವನ್ನು ಹೇಳುವುದು ಎಷ್ಟು ಕಷ್ಟವಾಗಿರಬೇಕು. ಸಮುವೇಲನು ತನಗೆ ಗೊತ್ತಾದ ವಿಷಯವನ್ನು “ಏಲಿಗೆ ತಿಳಿಸುವದಕ್ಕೆ ಭಯಪಟ್ಟನು” ಎಂದು ಬೈಬಲ್‌ ಹೇಳುತ್ತದೆ. ಆದರೆ ತಾನೇ ಸಮುವೇಲನನ್ನು ಕರೆದಿದ್ದು ಎಂದು ಯೆಹೋವನು ಏಲಿಗೆ ಸ್ಪಷ್ಟವಾಗಿ ತೋರಿಸಿಕೊಟ್ಟನು. ಹಾಗಾಗಿ ಏಲಿ ‘ದೇವರು ಹೇಳಿದ್ದರಲ್ಲಿ ಒಂದು ಮಾತನ್ನೂ ಮುಚ್ಚಿಡಬೇಡ’ ಎಂದು ಸಮುವೇಲನಿಗೆ ಹೇಳಿದನು. ಏಲಿಯ ಮಾತಿನಂತೆ ಸಮುವೇಲ ‘ಒಂದನ್ನೂ ಮುಚ್ಚಿಡದೆ ಎಲ್ಲವನ್ನೂ ತಿಳಿಸಿದನು.’

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 3/15 ಪುಟ 21 ಪ್ಯಾರ 6

ಒಂದನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು

3:3—ವಾಸ್ತವದಲ್ಲಿ ಸಮುವೇಲನು ಮಹಾ ಪವಿತ್ರಸ್ಥಾನದಲ್ಲಿ ಮಲಗಿದ್ದನೋ? ಇಲ್ಲ. ಸಮುವೇಲನು ಕೆಹಾತ್ಯರ ವಂಶವೆಂಬ ಯಾಜಕೇತರ ಕುಟುಂಬಕ್ಕೆ ಸೇರಿದಂಥ ಒಬ್ಬ ಲೇವಿಯನಾಗಿದ್ದನು. (1 ಪೂರ್ವಕಾಲವೃತ್ತಾಂತ 6:33-38) ಆದುದರಿಂದಲೇ ‘ಒಳಗೆ ಹೋಗಿ ಪರಿಶುದ್ಧವಸ್ತುಗಳನ್ನು ನೋಡುವ’ ಅನುಮತಿಯು ಅವನಿಗೆ ಕೊಡಲ್ಪಟ್ಟಿರಲಿಲ್ಲ. (ಅರಣ್ಯಕಾಂಡ 4:17-20) ಸಮುವೇಲನು ಪ್ರವೇಶಿಸಸಾಧ್ಯವಿದ್ದ ದೇವಾಲಯದ ಏಕಮಾತ್ರ ಭಾಗವು, ದೇವದರ್ಶನದ ಗುಡಾರದ ಅಂಗಣವಾಗಿತ್ತು. ಅವನು ಅಲ್ಲಿಯೇ ಮಲಗಿದ್ದಿರಬಹುದು. ಏಲಿಯು ಸಹ ಅಂಗಣದಲ್ಲೇ ಎಲ್ಲಿಯೊ ಮಲಗುತ್ತಿದ್ದನು ಎಂಬುದು ಸುವ್ಯಕ್ತ. “ದೇವರ ಮಂಜೂಷವಿದ್ದ ಸ್ಥಳ” ಎಂಬ ಅಭಿವ್ಯಕ್ತಿಯು ದೇವದರ್ಶನದ ಗುಡಾರದ ಕ್ಷೇತ್ರಕ್ಕೆ ಸೂಚಿತವಾಗಿದೆ ಎಂಬುದು ಸುವ್ಯಕ್ತ.

ಫೆಬ್ರವರಿ 21-27

ಬೈಬಲಿನಲ್ಲಿರುವ ನಿಧಿ | 1 ಸಮುವೇಲ 6-8

“ನಿಮ್ಮ ರಾಜ ಯಾರು?”

it-2-E ಪುಟ 163 ಪುಟ 1

ದೇವರ ಆಳ್ವಿಕೆ

ರಾಜ ಬೇಕು ಅಂತ ಹಠ ಮಾಡಿದ್ರು. ಬೇರೆ ದೇಶದವರಿಗೆ ಇರೋ ತರ ತಮಗೂ ಒಬ್ಬ ರಾಜ ಬೇಕು ಅಂತ ಇಸ್ರಾಯೇಲ್ಯರು ಹಠ ಹಿಡಿದರು. ಒಂದರ್ಥದಲ್ಲಿ ಅವರು ಯೆಹೋವ ತಮ್ಮ ರಾಜನಾಗಿರೋದು ಬೇಡ ಅಂತ ಹೇಳಿದ ಹಾಗಿತ್ತು. (1ಸಮು 8:4-8) ಆದ್ರೆ ಯೆಹೋವ ದೇವರು ಇಸ್ರಾಯೇಲ್ಯರಿಗಂತಾನೇ ಒಂದು ರಾಜ್ಯ ಸ್ಥಾಪನೆ ಮಾಡ್ತೀನಿ ಅಂತ ಮಾತು ಕೊಟ್ಟಿದ್ದನಲ್ವಾ? ಹೌದು. ಅಬ್ರಹಾಮನಿಗೆ ಮತ್ತು ಯಾಕೋಬನಿಗೆ ಆ ಮಾತು ಕೊಟ್ಟಿದ್ದನು. ಯಾಕೋಬ ಸಾಯೋ ಮುಂಚೆ ಯೆಹೂದ ಕುಲದ ಬಗ್ಗೆ ಹೇಳಿದ ಭವಿಷ್ಯವಾಣಿಯಲ್ಲೂ ಆ ಸೂಚನೆ ಇತ್ತು. (ಆದಿ 49:8-10) ಈಜಿಪ್ಟ್‌ನಿಂದ ಇಸ್ರಾಯೇಲ್ಯರನ್ನ ಬಿಡಿಸಿಕೊಂಡು ಬಂದ ಸ್ವಲ್ಪ ಸಮಯದಲ್ಲೇ ಯೆಹೋವ ಇದರ ಬಗ್ಗೆ ಹೇಳಿದ್ದನು. (ವಿಮೋ 19:3-6) ನಿಯಮ ಪುಸ್ತಕದಲ್ಲೂ ಇದರ ಬಗ್ಗೆ ಹೇಳಿದ್ದನು. (ಧರ್ಮೋ 17:14, 15) ಬಿಳಾಮನಿಂದ ಸಂದೇಶ ಹೇಳಿಸುವಾಗಲೂ ಹೇಳಿದ್ದನು. (ಅರ 24:2-7, 17) ಸಮುವೇಲನ ಅಮ್ಮ ಹನ್ನ ಮಾಡಿದ ಪ್ರಾರ್ಥನೆಯಲ್ಲಿ ಆ ರಾಜ್ಯಕ್ಕೋಸ್ಕರ ಕಾಯ್ತಾ ಇದ್ದಾಳೆ ಅಂತ ತೋರಿಸಿಕೊಟ್ಟಳು. (1ಸಮು 2:7-10) ಯೆಹೋವ ದೇವರು ಒಂದು ರಾಜ್ಯವನ್ನು ಸ್ಥಾಪಿಸ್ತೀನಿ ಅಂತ ಹೇಳಿದ್ರು ನಿಜ, ಆದ್ರೆ ಅದರ ಬಗ್ಗೆ ಎಲ್ಲಾ “ಪವಿತ್ರ ರಹಸ್ಯವನ್ನ” ಆಗಲೇ ಹೇಳಲಿಲ್ಲ. ಆ ರಾಜ್ಯನ ದೇವರು ಯಾವಾಗ ಸ್ಥಾಪನೆ ಮಾಡುತ್ತಾನೆ? ಯಾರೆಲ್ಲಾ ಆಳ್ತಾರೆ? ಅದು ಸ್ವರ್ಗದಲ್ಲಿ ಇರುತ್ತಾ? ಭೂಮಿಯಲ್ಲಿರುತ್ತಾ? ಇದ್ಯಾವುದನ್ನೂ ಆಗಲೇ ಹೇಳಲಿಲ್ಲ. ಹಾಗಾಗಿ ಇಸ್ರಾಯೇಲ್ಯರು ‘ಒಬ್ಬ ರಾಜನನ್ನ ನೇಮಿಸು’ ಅಂತ ದುಡುಕಿ ಕೇಳಿದ್ರು. ಅವರು ಹಾಗೆ ಕೇಳಬಾರದಿತ್ತು.

ಕಾವಲಿನಬುರುಜು11 7/1 ಪುಟ 19 ಪ್ಯಾರ 1

ಸಾಲಾಗಿ ಬಂದ ನಿರಾಶೆಗಳನ್ನು ಸಹಿಸಿಕೊಂಡಾತನು

ಈ ವಿಷಯವನ್ನು ಸಮುವೇಲನು ಪ್ರಾರ್ಥನೆಯ ಮೂಲಕ ಯೆಹೋವನ ಮುಂದಿಟ್ಟಾಗ ಯೆಹೋವನು ಏನು ಹೇಳಿದನೆಂದು ಗಮನಿಸಿ: “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳಿಕೆಗೆ ಬೇಡವೆನ್ನುತ್ತಾರೆ.” ಈ ಮಾತುಗಳು ಸಮುವೇಲನ ಮನಸ್ಸಿಗೆ ಎಷ್ಟು ತಂಪೆರಚಿರಬೇಕು! ಹಾಗಿದ್ದರೂ ಜನರ ಬೇಡಿಕೆ ಸರ್ವಶಕ್ತ ದೇವರಿಗೆ ಎಂಥ ಅವಮಾನ ತಂದಿತ್ತು! ಒಬ್ಬ ಅರಸನಿದ್ದಲ್ಲಿ ಜನರಿಗೆ ಕಷ್ಟ ಬರುವುದೆಂದು ಇಸ್ರಾಯೇಲ್ಯರನ್ನು ಎಚ್ಚರಿಸುವಂತೆ ಯೆಹೋವನು ಸಮುವೇಲನಿಗೆ ಹೇಳಿದನು. ಸಮುವೇಲನು ಇದನ್ನು ಹೇಳಿದರೂ ಜನರು “ಅದಿರಲಿ; ನಮಗೆ ಅರಸನನ್ನು ಕೊಡು” ಎಂದು ಹಠಹಿಡಿದರು. ಯೆಹೋವನ ಮಾತನ್ನು ಯಾವತ್ತೂ ಮೀರದ ಸಮುವೇಲನು ಯೆಹೋವನು ಆಯ್ದುಕೊಂಡವನನ್ನು ರಾಜನನ್ನಾಗಿ ಅಭಿಷೇಕಿಸಿದನು.—1 ಸಮುವೇಲ 8:7-19.

ಕಾವಲಿನಬುರುಜು10 1/15 ಪುಟ 30 ಪ್ಯಾರ 9

ಯೆಹೋವನ ಆಳ್ವಿಕೆಯ ನಿರ್ದೋಷೀಕರಣ!

9 ಯೆಹೋವನ ಎಚ್ಚರಿಕೆಯ ಸತ್ಯತೆಯನ್ನು ಇತಿಹಾಸವು ತೋರಿಸಿಕೊಟ್ಟಿತು. ಒಬ್ಬ ಮಾನವ ರಾಜನಿಂದ ಆಳಲ್ಪಡುವುದು, ಇಸ್ರಾಯೇಲಿಗೆ ಗಂಭೀರವಾದ ಸಮಸ್ಯೆಗಳನ್ನು ತಂದಿತು. ಅಂಥ ಒಬ್ಬ ರಾಜನು ಅಪನಂಬಿಗಸ್ತನಾದಾಗಲಂತೂ ಇನ್ನೂ ಹೆಚ್ಚು ತೊಂದರೆ ಉಂಟಾಯಿತು. ಇಸ್ರಾಯೇಲಿಗೆ ಸಂಭವಿಸಿದ ಈ ವಿಷಯವನ್ನು ಪರಿಗಣಿಸುವಾಗ, ಯೆಹೋವನನ್ನು ತಿಳಿದಿಲ್ಲದ ಮಾನವರ ಸರಕಾರವು ಎಂದಿಗೂ ಶಾಶ್ವತವಾದ ಒಳ್ಳೇ ಫಲಿತಾಂಶಗಳನ್ನು ತರಲಾರದು ಎಂಬುದೇನೂ ಆಶ್ಚರ್ಯವಲ್ಲ. ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲಿಕ್ಕಾಗಿ ತಮ್ಮ ಪ್ರಯತ್ನಗಳನ್ನು ಆಶೀರ್ವದಿಸುವಂತೆ ಕೆಲವು ರಾಜಕಾರಣಿಗಳು ದೇವರನ್ನು ಬೇಡುತ್ತಾರೆ ಎಂಬುದು ನಿಜ. ಆದರೆ ತನ್ನ ಆಳ್ವಿಕೆಗೆ ಅಧೀನಪಡಿಸಿಕೊಳ್ಳದ ವ್ಯಕ್ತಿಗಳನ್ನು ದೇವರು ಹೇಗೆ ತಾನೇ ಆಶೀರ್ವದಿಸಿಯಾನು?—ಕೀರ್ತ. 2:10-12.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು02 4/1 ಪುಟ 12 ಪ್ಯಾರ 13

ದೀಕ್ಷಾಸ್ನಾನವನ್ನು ಏಕೆ ಮಾಡಿಸಿಕೊಳ್ಳಬೇಕು?

13 ನಾವು ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಹೊಂದುವ ಮೊದಲು ಪರಿವರ್ತನೆಯೂ ಸಂಭವಿಸಬೇಕು. ಪರಿವರ್ತನೆಯು, ಕ್ರಿಸ್ತ ಯೇಸುವನ್ನು ಅನುಸರಿಸಲು ಸಂಪೂರ್ಣ ಹೃದಯದ ನಿರ್ಣಯವನ್ನು ಮಾಡಿರುವವನು ಒತ್ತಾಯವಿಲ್ಲದೆ ಇಷ್ಟಪೂರ್ವಕವಾಗಿ ಮಾಡಿರುವ ಕ್ರಿಯೆಯಾಗಿದೆ. ಇಂಥ ಜನರು ತಮ್ಮ ಹಿಂದಿನ ತಪ್ಪಾದ ಜೀವನಕ್ರಮವನ್ನು ತ್ಯಜಿಸಿ ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡಲು ನಿಶ್ಚಯಿಸುತ್ತಾರೆ. ಶಾಸ್ತ್ರವಚನಗಳಲ್ಲಿ, ಪರಿವರ್ತನೆಗೆ ಸಂಬಂಧಿಸಿರುವ ಹೀಬ್ರು ಮತ್ತು ಗ್ರೀಕ್‌ ಪದಗಳಿಗೆ ‘ಹಿಂದೆ ತಿರುಗುವ’ ಅರ್ಥವಿದೆ. ಈ ಕ್ರಿಯೆಯು ತಪ್ಪಾದ ಮಾರ್ಗದಿಂದ ದೇವರ ಕಡೆಗೆ ತಿರುಗುವುದನ್ನು ಸೂಚಿಸುತ್ತದೆ. (1 ಅರಸು 8:33, 34) ಪರಿವರ್ತನೆಗೆ, “ಮಾನಸಾಂತರಕ್ಕೆ [“ಪಶ್ಚಾತ್ತಾಪಕ್ಕೆ,” NW] ಯೋಗ್ಯವಾದ ಕೃತ್ಯಗಳನ್ನು” ಮಾಡುವುದು ಅಗತ್ಯ. (ಅ. ಕೃತ್ಯಗಳು 26:20) ನಾವು ಸುಳ್ಳಾರಾಧನೆಯನ್ನು ತ್ಯಜಿಸಬೇಕು, ದೇವರ ಆಜ್ಞಾನುಸಾರ ವರ್ತಿಸಬೇಕು ಮತ್ತು ಯೆಹೋವನಿಗೆ ಮಾತ್ರ ಮೀಸಲಾಗಿರುವ ಭಕ್ತಿಯನ್ನು ತೋರಿಸಬೇಕೆಂದು ಇದು ಕೇಳಿಕೊಳ್ಳುತ್ತದೆ. (ಧರ್ಮೋಪದೇಶಕಾಂಡ 30:2, 8-10; 1 ಸಮುವೇಲ 7:3) ಈ ಪರಿವರ್ತನೆಯು ನಮ್ಮ ಯೋಚನೆಗಳಲ್ಲಿ, ಗುರಿಗಳಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ತರುತ್ತದೆ. (ಯೆಹೆಜ್ಕೇಲ 18:31) ದೇವಭಕ್ತಿರಹಿತ ಗುಣಗಳ ಸ್ಥಾನವನ್ನು ನೂತನ ವ್ಯಕ್ತಿತ್ವವು ಆವರಿಸುವಾಗ ನಾವು ‘ತಿರುಗಿಕೊಳ್ಳುತ್ತೇವೆ.’—ಅ. ಕೃತ್ಯಗಳು 3:19; ಎಫೆಸ 4:20-24; ಕೊಲೊಸ್ಸೆ 3:5-14.

ಫೆಬ್ರವರಿ 28–ಮಾರ್ಚ್‌ 6

ಬೈಬಲಿನಲ್ಲಿರುವ ನಿಧಿ | 1 ಸಮುವೇಲ 9-11

“ಸೌಲ ಮೊದಮೊದಲು ದೀನನಾಗಿದ್ದ, ನಮ್ರನಾಗಿದ್ದ”

ಕಾವಲಿನಬುರುಜು20.08 ಪುಟ 10 ಪ್ಯಾರ 11

ದೀನತೆ ತೋರಿಸ್ತಾ ನಮ್ರರಾಗಿ ನಡಕೊಳ್ಳಿ

11 ರಾಜ ಸೌಲನ ಉದಾಹರಣೆ ನೋಡಿ. ಆರಂಭದಲ್ಲಿ ಅವನಿಗೆ ತುಂಬ ನಮ್ರತೆ ಇತ್ತು. ತನ್ನ ಇತಿಮಿತಿ ಗೊತ್ತಿದ್ರಿಂದ ಮಹತ್ವದ ಜವಾಬ್ದಾರಿ ಸಿಕ್ಕಾಗ ಅದನ್ನು ಸ್ವೀಕರಿಸೋಕೆ ಹಿಂಜರಿದ. (1 ಸಮು. 9:21; 10:20-22) ಆದ್ರೆ ರಾಜನಾದ ಮೇಲೆ ಅವನಲ್ಲಿ ಅಹಂಕಾರ ಚಿಗುರೊಡೆದು ತಾನು ಮಾಡಬಾರದಾಗಿದ್ದ ಕೆಲಸ ಮಾಡೋಕೆ ಮುಂದಾದ. ಒಮ್ಮೆ ಪ್ರವಾದಿ ಸಮುವೇಲ ಬಂದು ಯಜ್ಞ ಅರ್ಪಿಸುವವರೆಗೂ ಅವನು ತಾಳ್ಮೆಯಿಂದ ಕಾಯಬೇಕಿತ್ತು. ಆದ್ರೆ ಸಮುವೇಲ ಬರೋದು ತಡವಾದಾಗ ಅವನು ತಾಳ್ಮೆ ಕಳಕೊಂಡ. ಯಜ್ಞ ಅರ್ಪಿಸೋ ಅಧಿಕಾರ ತನಗಿಲ್ಲದಿದ್ರು ಅದನ್ನು ಅರ್ಪಿಸಿದ. ಯೆಹೋವ ತನ್ನ ಜನ್ರನ್ನು ಕಾಪಾಡ್ತಾನೆ ಅಂತ ಅವನು ಭರವಸೆ ಇಡೋ ಬದ್ಲು ವಿಷ್ಯನಾ ತಾನೇ ನಿರ್ವಹಿಸೋದಕ್ಕೆ ಮುಂದಾದ. ಪರಿಣಾಮ ಏನಾಯ್ತು? ಯೆಹೋವನ ಮೆಚ್ಚುಗೆ ಕಳಕೊಂಡ, ರಾಜನ ಸ್ಥಾನನೂ ಕಳಕೊಂಡ. (1 ಸಮು. 13:8-14) ನಾವ್ಯಾವತ್ತೂ ಸೌಲನ ತರ ಆಗಬಾರ್ದು, ನಮ್ಗೆ ಅಧಿಕಾರವಿರದ ಕೆಲಸ ಮಾಡೋಕೆ ಯಾವತ್ತೂ ಹೋಗಬಾರ್ದು.

ಕಾವಲಿನಬುರುಜು14 3/15 ಪುಟ 9 ಪ್ಯಾರ 8

ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡಬೇಡಿ

8 ನಮ್ಮಲ್ಲಿರುವ ಸ್ವತ್ಯಾಗ ಮನೋಭಾವವನ್ನು ಸ್ವಾರ್ಥವು ಹೇಗೆ ಕೊರೆದು ಹಾಕಬಲ್ಲದು ಎಂಬುದಕ್ಕೆ ಇಸ್ರಾಯೇಲಿನ ರಾಜ ಸೌಲನು ಒಂದು ಎಚ್ಚರಿಕೆಯ ಉದಾಹರಣೆ. ಅವನು ಅರಸನಾದ ಆರಂಭದಲ್ಲಿ ತುಂಬ ದೀನನಾಗಿದ್ದ. ತನ್ನ ಇತಿಮಿತಿಗಳನ್ನು ಅರಿತಿದ್ದ. (1 ಸಮು. 9:21) ಅವನು ಅರಸನಾದದ್ದನ್ನು ಕೆಲವು ಇಸ್ರಾಯೇಲ್ಯರು ಹೀಯಾಳಿಸಿದಾಗ ಪ್ರತೀಕಾರ ಮಾಡಲಿಲ್ಲ. ದೇವರೇ ತನ್ನನ್ನು ಆ ಅಧಿಕಾರ ಸ್ಥಾನಕ್ಕೆ ನೇಮಿಸಿದ್ದಾನೆಂದು ಸಮರ್ಥಿಸುತ್ತಾ ಅವರನ್ನು ದಂಡಿಸುವ ಹಕ್ಕಿದ್ದರೂ ದಂಡಿಸಲಿಲ್ಲ. (1 ಸಮು. 10:27) ಇನ್ನೊಂದು ಸಂದರ್ಭದಲ್ಲಿ ಸೌಲನು ದೇವರಾತ್ಮದ ನಿರ್ದೇಶನವನ್ನು ಅನುಸರಿಸಿ ಇಸ್ರಾಯೇಲ್ಯರನ್ನು ಅಮ್ಮೋನಿಯರ ವಿರುದ್ಧ ಯುದ್ಧಕ್ಕೆ ನಡೆಸಿ ಜಯಸಾಧಿಸಿದನು. ಬಳಿಕ ದೀನತೆಯಿಂದ ಆ ಕೀರ್ತಿಯನ್ನು ಯೆಹೋವನಿಗೆ ಸಲ್ಲಿಸಿದನು.—1 ಸಮು. 11:6, 11-13.

ಕಾವಲಿನಬುರುಜು95 12/15 ಪುಟ 10 ಪ್ಯಾರ 1

ಅಮ್ಮೋನಿಯರು—ದಯೆಗೆ ದ್ವೇಷಭಾವವನ್ನು ಹಿಂದಿರುಗಿಕೊಟ್ಟ ಒಂದು ಜನಾಂಗ

ಪುನಃ ಒಮ್ಮೆ ಅಮ್ಮೋನಿಯರು ಯೆಹೋವನ ದಯೆಗೆ ದ್ವೇಷಭಾವವನ್ನು ಹಿಂದಿರುಗಿಸಿದ್ದರು. ಈ ಕುತ್ಸಿತ ಬೆದರಿಕೆಯನ್ನು ಯೆಹೋವನು ಅಲಕ್ಷಿಸಲಿಲ್ಲ. “[ನಾಹಾಷನ] ಈ ಮಾತುಗಳನ್ನು ಕೇಳಿದಾಗ ದೇವರ ಆತ್ಮವು ಸೌಲನ ಮೇಲೆ ಬಂತು, ಮತ್ತು ಅವನು ಅತ್ಯಂತ ಕುಪಿತನಾದನು.” ದೇವರ ಆತ್ಮದ ಮಾರ್ಗದರ್ಶನೆಯ ಕೆಳಗೆ, ಸೌಲನು 3,30,000 ಹೋರಾಡುವ ಪುರುಷರ ಒಂದು ದಳವನ್ನು ಒಟ್ಟುಗೂಡಿಸಿದನು. ಇವರು ಅಮ್ಮೋನಿಯರನ್ನು ಎಷ್ಟು ಪೂರ್ಣವಾಗಿ ಸೋಲಿಸಿದರೆಂದರೆ “ಅವರೊಳಗೆ ಇಬ್ಬರು ಜೊತೆಯಾಗಿರಲಿಲ್ಲ.”—1 ಸಮುವೇಲ 11:6, 11, NW.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು05 3/15 ಪುಟ 22 ಪ್ಯಾರ 8

ಒಂದನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು

9:9—“ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದರ್ಶಿಗಳೆಂದು ಕರೆಯುತ್ತಿದ್ದರು” ಎಂಬ ಅಭಿವ್ಯಕ್ತಿಯ ವಿಷಯದಲ್ಲಿ ಯಾವುದು ಗಮನಾರ್ಹವಾಗಿದೆ? ಸಮುವೇಲನ ದಿನಗಳಲ್ಲಿ ಪ್ರವಾದಿಗಳು ಹೆಚ್ಚು ಪ್ರಮುಖತೆಯನ್ನು ಪಡೆದಂತೆ, ಇಸ್ರಾಯೇಲಿನಲ್ಲಿ ಅರಸರ ಆಳ್ವಿಕೆಯ ಸಮಯದಲ್ಲಿ “ದರ್ಶಿ” ಎಂಬ ಪದವು “ಪ್ರವಾದಿ” ಎಂಬ ಪದದಿಂದ ಸ್ಥಳಾಂತರಿಸಲ್ಪಟ್ಟಿತು ಎಂಬುದನ್ನು ಈ ಮಾತುಗಳು ಸೂಚಿಸಬಹುದು. ಪ್ರವಾದಿಗಳ ಸರಣಿಯಲ್ಲಿ ಸಮುವೇಲನನ್ನು ಪ್ರಥಮ ಪ್ರವಾದಿಯಾಗಿ ಪರಿಗಣಿಸಲಾಗಿದೆ.—ಅ. ಕೃತ್ಯಗಳು 3:24.

[ಪಾದಟಿಪ್ಪಣಿ]

a ಮೃತ ಸಮುದ್ರ ಸುರುಳಿಗಳು ಹೀಬ್ರು ಮ್ಯಾಸರೆಟಿಕ್‌ ಗ್ರಂಥಪಾಠಕ್ಕಿಂತ 1,000 ವರ್ಷ ಹಳೆಯದು. ಇದನ್ನೇ ನೂತನ ಲೋಕ ಭಾಷಾಂತರಕ್ಕಾಗಿ ಆಧಾರವಾಗಿ ಬಳಸಲಾಯಿತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ