ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 7/1 ಪು. 10
  • ‘ನಿನಗೆ ಹಂಬಲಿಕೆ ಇರುವುದು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಿನಗೆ ಹಂಬಲಿಕೆ ಇರುವುದು’
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಅನುರೂಪ ಮಾಹಿತಿ
  • “ಯೆಹೋವನ ಮೇಲೆ ನಿರೀಕ್ಷೆ ಇಡು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಯೋಬ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ತಿದ್ದುಪಾಟನ್ನು ಸ್ವೀಕರಿಸಿದ ಒಬ್ಬ ಆದರ್ಶ ಪುರುಷ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ‘ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು!’
    ಅವರ ನಂಬಿಕೆಯನ್ನು ಅನುಕರಿಸಿ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 7/1 ಪು. 10

ದೇವರ ಸಮೀಪಕ್ಕೆ ಬನ್ನಿರಿ

‘ನಿನಗೆ ಹಂಬಲಿಕೆ ಇರುವುದು’

ಪ್ರಿಯರೊಬ್ಬರು ನೋವಿನಿಂದ ನರಳಿ ಸಾಯುವುದನ್ನು ನೋಡುವಾಗ ನಮಗೆ ತೀವ್ರ ಸಂಕಟವಾಗುತ್ತದೆ. ಅವರನ್ನು ಕಳಕೊಂಡದ್ದಕ್ಕಾಗಿ ನಾವು ದುಃಖಿಸುತ್ತೇವೆ. ಆದರೆ ಸಾಂತ್ವನದಾಯಕ ವಿಷಯವೇನೆಂದರೆ ನಮ್ಮ ಈ ನೋವನ್ನು ನಮ್ಮ ನಿರ್ಮಾಣಿಕ ಯೆಹೋವ ದೇವರು ಅರ್ಥಮಾಡಿಕೊಳ್ಳುತ್ತಾನೆ. ಮೃತರನ್ನು ಪುನಃ ಜೀವಿತರನ್ನಾಗಿ ಮಾಡಲು ತನ್ನ ಮಹಾಶಕ್ತಿಯನ್ನು ಬಳಸಲು ಆತನು ಹಂಬಲಿಸುತ್ತಾನೆ ಎನ್ನುವುದು ಇನ್ನಷ್ಟು ಸಾಂತ್ವನಕರ. ಈ ನಿರೀಕ್ಷೆಯು ಯೋಬನ ಮಾತುಗಳಲ್ಲಿ ತಿಳಿಸಲಾಗಿರುವುದನ್ನು ಗಮನಿಸಿರಿ. ಅದು ಯೋಬ 14:13-15ರಲ್ಲಿದೆ.

ಆ ಸನ್ನಿವೇಶವನ್ನು ಪರಿಗಣಿಸಿರಿ. ಉದಾತ್ತ ನಂಬಿಕೆಯ ವ್ಯಕ್ತಿಯಾಗಿದ್ದ ಯೋಬನು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದನು. ಅವನ ಸಂಪತ್ತೆಲ್ಲ ನಷ್ಟವಾಗಿತ್ತು, ಕಣ್ಮಣಿಗಳಾಗಿದ್ದ ತನ್ನೆಲ್ಲ ಮಕ್ಕಳನ್ನು ಕಳಕೊಂಡಿದ್ದನು, ಜೀವಹಿಂಡುವ ರೋಗಕ್ಕೂ ಗುರಿಯಾಗಿದ್ದನು. ಇಂಥ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಯೋಬ ‘ನನ್ನನ್ನು ಪಾತಾಳದಲ್ಲಿ [ಮೂಲಪದ ಷೀಓಲ್‌, ಅಂದರೆ ಸಮಾಧಿಯಲ್ಲಿ] ಬಚ್ಚಿಡು’ ಎಂದು ದೇವರಿಗೆ ಗೋಗರೆದನು. (ವಚನ 13) ಯೋಬನು ಷೀಓಲ್‌ ಅನ್ನು ತನ್ನ ಕಷ್ಟಗಳಿಗೆ ಬಿಡುಗಡೆ ದೊರೆಯುವ ಸ್ಥಳವಾಗಿ ನೋಡಿದ್ದನು. ಏಕೆಂದರೆ ಅಲ್ಲಿ ಅವನು ದೇವರಿಂದ ಬಚ್ಚಿಡಲಾದ ಒಂದು ನಿಕ್ಷೇಪವೋ ಎಂಬಂತೆ ತನ್ನ ನೋವುಸಂಕಷ್ಟಗಳಿಂದ ಮುಕ್ತನಾಗಲಿದ್ದನು.a

ಯೋಬ ಶಾಶ್ವತವಾಗಿ ಷೀಓಲ್‌ನಲ್ಲೇ ಇರಲಿದ್ದನೊ? ಅವನು ಹಾಗೆ ನಂಬಿರಲಿಲ್ಲ. ‘ನೀನು ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಒಳ್ಳೇದು!’ ಎಂದವನು ಪ್ರಾರ್ಥನೆಯಲ್ಲಿ ಹೇಳಿದನು. ತಾನು ಷೀಓಲ್‌ನಲ್ಲಿ ಇರುವುದು ತಾತ್ಕಾಲಿಕ, ಯೆಹೋವನು ತನ್ನನ್ನು ನೆನಪಿಸಿಕೊಂಡು ಪುನಃ ಜೀವಂತಗೊಳಿಸುವನು ಎಂಬ ದೃಢ ನಿರೀಕ್ಷೆ ಯೋಬನಿಗಿತ್ತು. ಅವನು ಷೀಓಲ್‌ನಲ್ಲಿರುವ ದಿನಗಳನ್ನು ‘ವಾಯಿದೆಯ ದಿನಗಳಿಗೆ’ ಅಂದರೆ ಕಾಯಲು ನಿರ್ಬಂಧಿಸಲಾದ ಅವಧಿಗೆ ಹೋಲಿಸಿದನು. ಅದೆಷ್ಟು ಸಮಯ? “ನನಗೆ ಬಿಡುಗಡೆಯಾಗುವವರೆಗೆ” ಎಂದನು ಯೋಬ. (ವಚನ 14) ಆಗ ಅವನಿಗೆ ಷೀಓಲ್‌ನಿಂದ ಬಿಡುಗಡೆ ಅಂದರೆ ಸತ್ತವರೊಳಗಿಂದ ಪುನರುತ್ಥಾನವಾಗಲಿತ್ತು!

ತನಗೆ ಬಿಡುಗಡೆಯಾಗುವುದೆಂದು ಯೋಬನು ಅಷ್ಟು ದೃಢವಾಗಿ ನಂಬಿದ್ದೇಕೆ? ಮೃತಪಟ್ಟ ತನ್ನ ನಂಬಿಗಸ್ತ ಆರಾಧಕರ ಬಗ್ಗೆ ನಮ್ಮ ಪ್ರೀತಿಯ ನಿರ್ಮಾಣಿಕ ಯೆಹೋವನಿಗೆ ಹೇಗನಿಸುತ್ತದೆ ಎಂದು ಯೋಬನಿಗೆ ಗೊತ್ತಿದ್ದರಿಂದಲೇ. ‘ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಇರುವುದು’ ಎಂದನು ಯೋಬ. (ವಚನ 15) ದೇವರೇ ತನ್ನನ್ನು ಸೃಷ್ಟಿಸಿದವನೆಂದು ಯೋಬನು ಒಪ್ಪಿಕೊಂಡನು. ಯೋಬನನ್ನು ಗರ್ಭದಲ್ಲಿ ರೂಪಿಸಿದ್ದ ಜೀವದಾತ ಯೆಹೋವನು ಅವನು ಸತ್ತರೂ ಪುನಃ ಜೀವಂತ ಮಾಡಶಕ್ತನು ಎಂಬುದರಲ್ಲಿ ಸಂಶಯವಿಲ್ಲ.—ಯೋಬ 10:8, 9; 31:15.

ಯೋಬನ ಮಾತುಗಳು ನಮಗೆ ಯೆಹೋವನ ಪ್ರೀತಿಯ ಬಗ್ಗೆ ಈ ಸಂಗತಿಯನ್ನು ಕಲಿಸುತ್ತವೆ: ಯೋಬನಂತೆ ತಮ್ಮನ್ನು ಯೆಹೋವನ ಕೈಗೊಪ್ಪಿಸಿ, ಆತನು ತನ್ನ ಇಚ್ಛೆಗನುಸಾರ ತಮ್ಮನ್ನು ರೂಪಿಸಿ ರಚಿಸುವಂತೆ ಬಿಟ್ಟುಕೊಡುವವರ ಮೇಲೆ ಯೆಹೋವನಿಗೆ ವಿಶೇಷ ಒಲುಮೆ ಇದೆ. (ಯೆಶಾಯ 64:8) ಆತನು ತನ್ನ ನಂಬಿಗಸ್ತ ಆರಾಧಕರನ್ನು ಅಮೂಲ್ಯ ಎಂದೆಣಿಸುತ್ತಾನೆ. ಕೊನೇ ತನಕ ನಿಷ್ಠಾವಂತರಾಗಿ ಸತ್ತವರನ್ನು ಪುನಃ ಜೀವಿತರನ್ನಾಗಿ ಮಾಡಲು ಆತನಿಗೆ ಹಂಬಲಿಕೆ ಇದೆ. “ಹಂಬಲಿಕೆ” ಪದಕ್ಕೆ ಬಳಸಲಾದ ಹೀಬ್ರು ಪದ “ಮನದಾಳದ ಉತ್ಕಟ ಬಯಕೆಯನ್ನು ತಿಳಿಸುವ ಪ್ರಬಲ ಪದಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ” ಎನ್ನುತ್ತಾರೆ ವಿದ್ವಾಂಸರೊಬ್ಬರು. ತನ್ನ ಆರಾಧಕರಲ್ಲಿ ಮೃತಪಟ್ಟವರನ್ನು ಯೆಹೋವನು ನೆನಪಿನಲ್ಲಿಡುತ್ತಾನೆ ಮಾತ್ರವಲ್ಲ ಅವರನ್ನು ಪುನಃ ಜೀವಿತರನ್ನಾಗಿ ಮಾಡಲು ಹಂಬಲಿಸುತ್ತಾನೆ.

ಯೋಬ ಪುಸ್ತಕ ಬೈಬಲಿನಲ್ಲಿ ಪ್ರಥಮವಾಗಿ ಬರೆಯಲ್ಪಟ್ಟ ಪುಸ್ತಕಗಳಲ್ಲಿ ಒಂದು. ಇದರಲ್ಲಿ, ಮೃತರನ್ನು ಪುನಃ ಜೀವಿತರನ್ನಾಗಿ ಮಾಡುವ ತನ್ನ ಉದ್ದೇಶವನ್ನು ಯೆಹೋವನು ಪ್ರಕಟಿಸಿದ್ದಾನೆ.b ಮೃತಪಟ್ಟಿರುವ ನಿಮ್ಮ ಪ್ರಿಯರು ಪುನಃ ಜೀವಿತರಾಗಿ ನಿಮ್ಮೊಂದಿಗೆ ಇರಬೇಕೆಂದೇ ಆತನ ಇಚ್ಛೆ. ಈ ವಿಚಾರ ವಿಯೋಗ ದುಃಖವನ್ನು ಸಹಿಸಿಕೊಳ್ಳಲು ಬಲಕೊಡುತ್ತದೆ. ಈ ಪ್ರೀತಿಯ ದೇವರ ಕುರಿತು ನೀವು ಹೆಚ್ಚನ್ನು ತಿಳಿದುಕೊಂಡು ಆತನ ಉದ್ದೇಶ ನೆರವೇರುವುದನ್ನು ಕಾಣುವಂಥ ವ್ಯಕ್ತಿಯಾಗಲು ಆತನು ನಿಮ್ಮನ್ನು ರೂಪಿಸುವಂತೆ ಬಿಡಬಾರದೇಕೆ? (w11-E 03/01)

[ಪಾದಟಿಪ್ಪಣಿಗಳು]

a ‘ನನ್ನನ್ನು ಬಚ್ಚಿಡು’ ಎಂಬ ಯೋಬನ ಮಾತುಗಳಿಗೆ “[ನನ್ನನ್ನು] ಅಮೂಲ್ಯ ನಿಧಿಯಂತೆ ಭದ್ರವಾಗಿಡು” ಎಂಬರ್ಥ ಇರಬಲ್ಲದು ಎನ್ನುತ್ತದೆ ಒಂದು ಪರಾಮರ್ಶೆ ಕೃತಿ. “ನನ್ನನ್ನು ನಿಕ್ಷೇಪದಂತೆ ಅಡಗಿಸಿಡು” ಎನ್ನುತ್ತದೆ ಇನ್ನೊಂದು ಕೃತಿ.

b ನೀತಿಭರಿತ ಹೊಸ ಲೋಕದಲ್ಲಿ ಸತ್ತವರು ಪುನಃ ಜೀವಿತರಾಗುವರು ಎಂಬ ಬೈಬಲಿನ ವಾಗ್ದಾನದ ಬಗ್ಗೆ ಹೆಚ್ಚು ತಿಳಿಯಲಿಕ್ಕಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 7 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ