ಸೈತಾನನ ಮತ್ತು ಅವನ ಕೃತ್ಯಗಳ ಮೇಲೆ ಜಯಸಾಧಿಸುವುದು
“ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.”—ಯಾಕೋಬ 4:7.
1. ‘ದುಷ್ಟನ ಕೈ’ ಮಾನವಜಾತಿಯನ್ನು ಇಂದು ಹೇಗೆ ಪ್ರಭಾವಿಸಿದೆ?
“ಭೂಲೋಕವು ದುಷ್ಟರ ಕೈ ಸೇರಿದೆ,” ಎಂದು ಯೋಬನು ಸರಿಯಾಗಿಯೇ ಹೇಳಿದನು. (ಯೋಬ 9:24) ಮತ್ತು ಈಗ ನಾವು ಇಡೀ ಮಾನವ ಇತಿಹಾಸದಲ್ಲೇ ಅತ್ಯಂತ ಕಠಿನ ಸಮಯಗಳನ್ನು ಎದುರಿಸುತ್ತೇವೆ. ಯಾಕೆ? ಯಾಕೆಂದರೆ ಭೂಮಿಯ ಸಂಬಂಧದಲ್ಲಿ ಇವು ಸೈತಾನನ ಪೈಶಾಚಿಕ ಆಧಿಪತ್ಯದ “ಕಡೇ ದಿವಸ” ಗಳಾಗಿವೆ. ಸೈತಾನನ ಪ್ರೇರಣೆಯಿಂದ, ‘ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುತ್ತಿರುವುದು’ ಆಶ್ಚರ್ಯಕರವೇನೂ ಅಲ್ಲ. (2 ತಿಮೊಥೆಯ 3:1, 13) ಅಲ್ಲದೆ, ಹಿಂಸೆಗಳು, ಅನ್ಯಾಯಗಳು, ಕ್ರೂರಕಾರ್ಯಗಳು, ಅಪರಾಧಗಳು, ಆರ್ಥಿಕ ತೊಂದರೆಗಳು, ಅಸ್ಥಿಗತವಾದ ಕಾಯಿಲೆಗಳು, ವೃದ್ಧಾಪ್ಯದ ವೇದನೆಗಳು, ಭಾವನಾತ್ಮಕ ಖಿನ್ನತೆಗಳು—ಇವು ಮತ್ತು ಇನ್ನೂ ಹೆಚ್ಚಿನವು ನಮ್ಮ ಮೇಲೆ ಅತಿಯಾಗಿ ದುಃಖಪಡಿಸುವ ಹಾಗೂ ಎದೆಗುಂದಿಸುವ ಪರಿಣಾಮವನ್ನು ಬೀರಬಹುದು.
2. ಇಂದು ನಾವು ಸೈತಾನನ ಆಕ್ರಮಣಗಳನ್ನು ಹೇಗೆ ನಿಭಾಯಿಸಬಹುದು?
2 ಮಹಾ ವೈರಿಯಾಗಿರುವ ಪಿಶಾಚನಾದ ಸೈತಾನನು, ಮಾನವಜಾತಿಯ ಮೇಲೆ ಮತ್ತು ವಿಶೇಷವಾಗಿ ದೇವರ ಸತ್ಯ ಆರಾಧಕರ ಮೇಲೆ ಕೇಂದ್ರೀಕೃತವಾದ ಆಕ್ರಮಣವನ್ನು ಮಾಡುತ್ತಿದ್ದಾನೆ. ಸಮಗ್ರತೆಯನ್ನು ಕಾಪಾಡಿಕೊಳ್ಳುವ ಎಲ್ಲ ಸಂಭಾವ್ಯ ವ್ಯಕ್ತಿಗಳನ್ನು ದೇವರ ವಿರುದ್ಧ ತಿರುಗಿಸುವುದು ಮತ್ತು ಅವರನ್ನು ತನ್ನೊಂದಿಗೆ ಮತ್ತು ತನ್ನ ದೆವ್ವದೂತರೊಂದಿಗೆ ನಾಶನಕ್ಕೆ ತರುವುದು ಅವನ ಗುರಿಯಾಗಿದೆ. ಆದರೆ, ಸಮಗ್ರತೆಯಿಂದ ನಾವು ತಾಳಿಕೊಳ್ಳುವುದಾದರೆ ಪಿಶಾಚನು ನಮ್ಮಿಂದ ಓಡಿಹೋಗುವನೆಂಬ ಆಶ್ವಾಸನೆ ನಮಗಿದೆ. ಯೇಸುವಿನಂತೆ, ನಾವು ಕಷ್ಟಾನುಭವಿಸುವ ವಿಷಯಗಳ ಮುಖಾಂತರ ದೇವರ ಕಡೆಗೆ ‘ವಿಧೇಯತೆಯನ್ನು ಕಲಿಯ’ ಬಲ್ಲೆವು ಮತ್ತು ಆತನ ಅಪಾತ್ರ ದಯೆಯ ಮೂಲಕ ಅನಂತ ಜೀವನವನ್ನು ಪಡೆಯಬಲ್ಲೆವು.—ಇಬ್ರಿಯ 5:7, 8; ಯಾಕೋಬ 4:7; 1 ಪೇತ್ರ 5:8-10.
3, 4. (ಎ) ಯಾವ ಬಾಹ್ಯ ಪರೀಕೆಗ್ಷಳೊಂದಿಗೆ ಪೌಲನು ಹೋರಾಡಬೇಕಿತ್ತು? (ಬಿ) ಕ್ರೈಸ್ತ ಹಿರಿಯನೋಪಾದಿ ಪೌಲನ ಚಿಂತೆಯು ಏನಾಗಿತ್ತು?
3 ಅಪೊಸ್ತಲ ಪೌಲನು ಸಹ ಅನೇಕ ವಿಧಗಳಲ್ಲಿ ಪರೀಕ್ಷಿಸಲ್ಪಟ್ಟನು. ಕ್ರಿಸ್ತನ ಶುಶ್ರೂಷಕನೋಪಾದಿ ತನ್ನ ಸಾಕ್ಷ್ಯಗಳನ್ನು ಕೊಡುತ್ತಾ, ಅವನು ಬರೆದದ್ದು: “ಆತನ ಸೇವೆಯಲ್ಲಿ ಅವರಿಗಿಂತ ಹೆಚ್ಚಾಗಿ ಪ್ರಯಾಸಪಟ್ಟೆನು, ಹೆಚ್ಚಾಗಿ ಸೆರೆಮನೆಗಳೊಳಗೆ ಬಿದ್ದೆನು; ಮಿತಿಮೀರಿ ಪೆಟ್ಟುಗಳನ್ನು ತಿಂದೆನು, ಅನೇಕ ಸಾರಿ ಮರಣದ ಬಾಯೊಳಗೆ ಸಿಕ್ಕಿಕೊಂಡೆನು. ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು; ಮೂರು ಸಾರಿ ಸರಕಾರದವರು ಚಡಿಗಳಿಂದ ನನ್ನನ್ನು ಹೊಡಿಸಿದರು; ಒಂದು ಸಾರಿ ಜನರು ನನ್ನನ್ನು ಕೊಲ್ಲುವದಕ್ಕೆ ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗವು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು. ಆತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನದಿಗಳ ಅಪಾಯಗಳೂ ಕಳ್ಳರ ಅಪಾಯಗಳೂ ಸ್ವಂತಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು. ಪ್ರಯಾಸಪರಿಶ್ರಮಗಳಿಂದ ಕೆಲಸನಡಿಸಿ ಅನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನು ಪಟ್ಟು ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ.
4 “ಇನ್ನೂ ಬೇರೆ ಸಂಗತಿಗಳಲ್ಲದೆ ಎಲ್ಲಾ ಸಭೆಗಳ ವಿಷಯವಾದ ಚಿಂತೆಯು ದಿನದಿನ ನನ್ನನ್ನು ಪೀಡಿಸುತ್ತದೆ. ಯಾವನಾದರೂ ಬಲವಿಲ್ಲದವನಾದರೆ ನಾನು ಅವನೊಂದಿಗೆ ಬಲವಿಲ್ಲದವನಾಗದೆ ಇರುವೆನೋ? ಯಾವಾನಾದರೂ ಪಾಪದಲ್ಲಿ ಸಿಕ್ಕಿಕೊಂಡರೆ ನಾನು ತಾಪಪಡುವದಿಲ್ಲವೋ?” (2 ಕೊರಿಂಥ 11:23-29) ಹೀಗೆ ಹೊರಗಿನಿಂದ ಬಂದ ಹಿಂಸೆಗಳನ್ನು ಮತ್ತು ಪರೀಕ್ಷೆಗಳನ್ನು ಎದುರಿಸುವಾಗ ಪೌಲನು ಸಮಗ್ರತೆಯನ್ನು ಕಾಪಾಡಿಕೊಂಡನು, ಮತ್ತು ಒಬ್ಬ ಕ್ರೈಸ್ತ ಹಿರಿಯನೋಪಾದಿ, ಸಭೆಯಲ್ಲಿದ್ದ ಬಲಹೀನ ಸಹೋದರ ಸಹೋದರಿಯರನ್ನು ಬಲಗೊಳಿಸುವುದರ ಕುರಿತು—ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯ ಮಾಡುತ್ತಾ—ಅವನು ಆಳವಾಗಿ ಚಿಂತಿತನಾಗಿದ್ದನು. ಕ್ರೈಸ್ತ ಹಿರಿಯರಿಗೆ ಇಂದು ಎಂತಹ ಒಂದು ಉತ್ತಮ ಮಾದರಿ!
ಹಿಂಸೆಯಲ್ಲಿ ಸಮಗ್ರತೆ
5. ನೇರವಾದ ಹಿಂಸೆಗೆ ಉತ್ತರವು ಏನಾಗಿದೆ?
5 ಸಮಗ್ರತೆಯನ್ನು ಮುರಿಯಲು ಸೈತಾನನು ಯಾವ ಸಾಧನಗಳನ್ನು ಬಳಸುತ್ತಾನೆ? ಮೇಲೆ ಸೂಚಿಸಿದಂತೆ, ಸೈತಾನನ ಅತ್ಯಂತ ದುಷ್ಟ ತಂತ್ರಗಳಲ್ಲಿ ಒಂದು, ನೇರವಾದ ಹಿಂಸೆಯಾಗಿದೆ, ಆದರೆ ಉತ್ತರವೊಂದಿದೆ. ಎಫೆಸ 6:10, 11 ನಮಗೆ ಸಲಹೆ ನೀಡುವುದು: “ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ. ಸೈತಾನನ ತಂತ್ರೋಪಾಯಗಳನ್ನು [ಯಾ, “ಕುಟಿಲ ಕೃತ್ಯಗಳು,” ಪಾದಟಿಪ್ಪಣಿ] ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.”
6. ಯೆಹೋವನ ಸಾಕ್ಷಿಗಳು “ಸಂಪೂರ್ಣವಾಗಿ ಜಯಶಾಲಿಗಳಾಗಿ” ಬಂದಿದ್ದಾರೆಂದು ಹೇಗೆ ತೋರಿಸಸಾಧ್ಯವಿದೆ?
6 ಅನೇಕ ಬಾರಿ ಈ ಕಡೇ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಪರೀಕೆಗ್ಷಳೊಂದಿಗೆ ಹೆಣಗಾಡಬೇಕಾಗಿದೆ. ಆದುದರಿಂದ, ನಾವು ಪೌಲನೊಂದಿಗೆ ಹೀಗೆ ಹೇಳಬಲ್ಲೆವು: “ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ.” (ರೋಮಾಪುರ 8:37) ಇದು 1933 ಮತ್ತು 1945ರ ನಡುವಿನ ನಾಜಿ ಶಕದಲ್ಲಿ, ಜರ್ಮನಿ, ಆಸ್ಟ್ರಿಯ, ಪೋಲೆಂಡ್ ಮತ್ತು ಯುಗೊಸ್ಲಾವಿಯದ ಸೆರೆಶಿಬಿರಗಳಲ್ಲಿದ್ದ, 1945 ಮತ್ತು 1989ರ ನಡುವೆ ಪೂರ್ವ ಯೂರೋಪಿನಲ್ಲಿ ಕಮ್ಯೂನಿಸ್ಟ್ ದಬ್ಬಾಳಿಕೆಯ ಕೆಳಗೆ, ಮತ್ತು ತೀರ ಇತ್ತೀಚೆಗಿನ ಸಮಯಗಳಲ್ಲಿ ಆಫ್ರಿಕದ ಕೆಲವು ಭಾಗಗಳನ್ನು ಮತ್ತು ಲ್ಯಾಟಿನ್ ಅಮೆರಿಕವನ್ನು ಪೀಡಿಸಿರುವ ಹಿಂಸೆಗಳ ಸಮಯದಲ್ಲಿ, ಯೆಹೋವನ ಸಾಕ್ಷಿಗಳ ಸಮಗ್ರತೆಯ ದಾಖಲೆಯಿಂದ ರುಜುವಾಗುತ್ತದೆ.
7. ಇಥಿಯೋಪ್ಯದಿಂದ ಸಮಗ್ರತೆಯ ಯಾವ ಪ್ರೇರಿಸುವಂತಹ ಉದಾಹರಣೆಗಳು ವರದಿಸಲಾಗಿವೆ?
7 ಇಥಿಯೋಪಿಯದಲ್ಲಿರುವ ಯೆಹೋವನ ಸಾಕ್ಷಿಗಳು 1974 ಮತ್ತು 1991ರ ನಡುವೆ ಸಮಗ್ರತೆಯ ಪ್ರೇರಕ ಮಾದರಿಯನ್ನು ಒದಗಿಸಿದರು. ರಾಜಕೀಯ ಮನಸ್ಸುಳ್ಳ ಸೆರೆಹಿಡಿಯುವವರಲ್ಲಿ ಒಬ್ಬನು, ಸೆರೆಹಿಡಿಯಲ್ಪಟ್ಟ ಒಬ್ಬ ಸಹೋದರನಿಗೆ ಹೇಳಿದ್ದು: “ನಿಮ್ಮನ್ನು ಪುನಃ ಸ್ವತಂತ್ರರಾಗಿ ಹೋಗುವಂತೆ ಬಿಡುವುದಕ್ಕಿಂತ ಮೃಗಾಲಯದಿಂದ ಸಿಂಹಗಳನ್ನು ಬಿಡುಗಡೆಗೊಳಿಸುವುದು ಲೇಸು!” ಈ ಕ್ರೂರ ಹಿಂಸಕರು ಯೆಹೋವನ ಸೇವಕರನ್ನು ಹಿಂಸಿಸಿದರು ಮತ್ತು ಹಲವಾರು ವರ್ಷಗಳಾನಂತರ ಒಂದು ಅಪೀಲು ನ್ಯಾಯಲಯವು ಮರಣ ದಂಡನೆಗಳನ್ನು ವಿಧಿಸಿತು. ಒಬ್ಬ ಸಹೋದರನ ದೇಹವನ್ನು, ಇತರರಿಗೆ ಒಂದು ಎಚ್ಚರಿಕೆಯ ಮಾದರಿಯೋಪಾದಿ ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು. ಮರಣ ದಂಡನೆಯ ವಿರುದ್ಧ ಅಪೀಲು ಮಾಡಿದ ಇತರ ಸಹೋದರರು ಅಧಿಕ ಉದಾರವಾದ ನ್ಯಾಯಾಲಯದ ಮೂಲಕ ಬಿಡುಗಡೆಗೊಳಿಸಲ್ಪಟ್ಟರು, ಮತ್ತು ಈ ನಂಬಿಗಸ್ತ ‘ಜಯಶಾಲಿಗಳಲ್ಲಿ’ ಕೆಲವರಿಗೆ 1994ರ ಆರಂಭದಲ್ಲಿ ಆ್ಯಡಿಸಾಬಬದಲ್ಲಿ ನಡೆದ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನದಲ್ಲಿ ಭಾಗಗಳಿದ್ದವು.a—ಯೋಹಾನ 16:33; ಹೋಲಿಸಿ 1 ಕೊರಿಂಥ 4:9.
8. “ಕುಲಸಂಬಂಧವಾದ ಶುದ್ಧೀಕರಣ”ದ ಮೇಲೆ ಲಾಭ ಪಡೆಯಲು ಸೈತಾನನು ಹೇಗೆ ಪ್ರಯತ್ನಿಸಿದ್ದಾನೆ?
8 ನೇರವಾದ ಮುಖಾಕ್ರಮಣದ ಮೂಲಕ ಇಂತಹ ನಿಷ್ಠಾವಂತ ಸಹೋದರ ಸಹೋದರಿಯರ ಸಮಗ್ರತೆಯನ್ನು ಮುರಿಯಲು ಸೈತಾನನು ವಿಫಲನಾಗಿದ್ದಾನೆ. ಆದುದರಿಂದ, ಇತರ ಯಾವ ಕುಟಿಲ ತಂತ್ರಗಳನ್ನು ಅವನು ಉಪಯೋಗಿಸುತ್ತಾನೆ? ಈ ಕಡೇ ದಿವಸಗಳ ಕುರಿತು ಪ್ರಕಟನೆ 12:12 ಹೇಳುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” ಹಿಂಸೆಗಳ ಮೂಲಕ ದೇವರ ನಿಷ್ಠಾವಂತ ಜನರನ್ನು ನಿರ್ಮೂಲಗೊಳಿಸಲು ತಪ್ಪಿರುವುದರಿಂದ, ತನ್ನ ಕೋಪದಲ್ಲಿ ಇಡೀ ಜನಸಂಖ್ಯೆಗಳ ಕಗ್ಗೊಲೆ ಮಾಡಲು ಅವನು ಪ್ರಯತ್ನಿಸುತ್ತಾನೆ—ಇದು ಉಳಿದ ಜನಸಂಖ್ಯೆಯೊಂದಿಗೆ ಯೆಹೋವನ ಜನರನ್ನು ನಾಶಗೊಳಿಸುವ ದೃಷ್ಟಿಯಿಂದ ಎಂಬುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ಹೀಗೆ ಪೂರ್ವ ಯುಗೊಸ್ಲಾವಿಯದ ಭಾಗಗಳಲ್ಲಿ ಕುಲ ಸಂಬಂಧವಾದ ಶುದ್ಧೀಕರಣವೆಂದು ಕರೆಯಲ್ಪಡುವ ಸಂಗತಿಯು ನಡೆದಿದೆ ಮತ್ತು ಲೈಬೀರಿಯ, ಬುರುಂಡಿ, ಮತ್ತು ರುಆಂಡದಲ್ಲಿ ಜನಾಂಗಗಳ ನಾಶನವನ್ನು ಯತ್ನಿಸಲಾಗಿದೆ.
9. ಸೈತಾನನ ತಂತ್ರಗಳು ಅನೇಕ ವೇಳೆ ವಿಫಲವಾಗುತ್ತವೆ ಏಕೆ? ಉದಾಹರಣೆಗಳನ್ನು ಕೊಡಿ.
9 ಅನೇಕ ವೇಳೆಯಾದರೋ, ಸೈತಾನನ ಯುಕ್ತಿಗಳು ಅವನ ಮೇಲೆಯೆ ತಿರುಗುಬಾಣವಾಗುತ್ತವೆ, ಯಾಕೆಂದರೆ ಯೆಹೋವನ ಸಾಕ್ಷಿಗಳ ಮೂಲಕ ಹುರುಪಿನಿಂದ ಘೋಷಿಸಲ್ಪಡುವ ದೇವರ ರಾಜ್ಯದ ಮೇಲೆ ಅವರ ಏಕೈಕ ನಿರೀಕ್ಷೆಯು ಆಧರಿಸಿದೆ ಎಂಬ ಗ್ರಹಿಕೆಗೆ, ಪೈಶಾಚಿಕ ಬಾಧೆಯು ಪ್ರಾಮಾಣಿಕ ಹೃದಯವುಳ್ಳ ಜನರನ್ನು ಎಚ್ಚರಿಸುತ್ತದೆ. (ಮತ್ತಾಯ 12:21) ನಿಶ್ಚಯವಾಗಿಯೂ, ಅಭಿರುಚಿಯುಳ್ಳವರು ರಾಜ್ಯದ ಕಡೆಗೆ ಒಟ್ಟುಗೂಡುತಾರ್ತೆ! ಉದಾಹರಣೆಗೆ, ಕಲಹದಿಂದ ತುಂಬಿರುವ ಬಾಸ್ನಿಯ ಮತ್ತು ಹೆರ್ಸಗೋವಿನದಲ್ಲಿ, 1994ರ ಮಾರ್ಚ್ 26 ರಂದು, ಯೇಸುವಿನ ಮರಣದ ಜ್ಞಾಪಕಾಚರಣೆಗೆ 1,307 ಜನರು ಹಾಜರಾದರು, ಹಿಂದಿನ ವರ್ಷದ ಹಾಜರಿಗಿಂತ ಇದು 291 ಜನರ ಅಭಿವೃದ್ಧಿಯಾಗಿತ್ತು. ಉಚ್ಚಾಂಕ ಹಾಜರಿಗಳು ಸಾರಯೆವೊ (414), ಜೇನೆಟ್ಜಾ (223), ಟೂಜ್ಲಾ (339), ಬಾನ್ಯಾ ಲೂಕ (255), ಮತ್ತು ಇತರ ಪಟ್ಟಣಗಳಲ್ಲಿ ದಾಖಲಿಸಲಾದವು. ನೆರೆಯ ಕ್ರೊಏಷಿಯದಲ್ಲಿ 8,326ರ ಹೊಸ ಉಚ್ಚಾಂಕ ಹಾಜರಿಯಿತ್ತು. “ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿ” ಪಡಿಸಿರಿ ಎಂಬ ಆಜೆಗ್ಞೆ ವಿಧೇಯರಾಗುವುದರಿಂದ ಆ ದೇಶಗಳಲ್ಲಿದ್ದ ಯೆಹೋವನ ಸಾಕ್ಷಿಗಳನ್ನು, ಅವರ ಸುತ್ತಲೂ ಸಂಭವಿಸುತ್ತಿದ್ದ ಹಿಂಸೆಯು ತಡೆಯಲಿಲ್ಲ.—1 ಕೊರಿಂಥ 11:26.
ಕಲಹದಿಂದ ತುಂಬಿರುವ ರುಆಂಡದಲ್ಲಿ
10, 11. (ಎ) ಕ್ರೈಸ್ತ ಎಂದು ಕರೆಯಲ್ಪಡುವ ರುಆಂಡದಲ್ಲಿ ಏನು ಸಂಭವಿಸಿದೆ? (ಬಿ) ನಂಬಿಗಸ್ತ ಮಿಷನೆರಿಗಳು ತಮ್ಮನ್ನು ಹೇಗೆ ವ್ಯಕ್ತಪಡಿಸಿಕೊಂಡಿದ್ದಾರೆ?
10 1993 ರಲ್ಲಿ, 2,080 ರಾಜ್ಯ ಪ್ರಚಾರಕರಿದ್ದ ರುಆಂಡದಲ್ಲಿ, “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಕ್ಕೆ 4,075 ಜನರು ಹಾಜರಾದರು, ಮತ್ತು 230 ಜನರು ದೀಕ್ಷಾಸ್ನಾನ ಪಡೆದರು. ಇವರಲ್ಲಿ 142 ಜನರು ಕೂಡಲೇ ಆಕ್ಸಿಲಿಯರಿ ಪಯನೀಯರ್ ಸೇವೆಗೆ ಅರ್ಜಿ ಸಲ್ಲಿಸಿದರು. ನಡೆಸಲ್ಪಡುತ್ತಿರುವ ಮನೆ ಬೈಬಲ್ ಅಧ್ಯಯನಗಳು 1994 ರಲ್ಲಿ 7,655ಕ್ಕೆ ಹೆಚ್ಚಿದವು—ಸೈತಾನನು ಈ ಅಭಿವೃದ್ಧಿಯನ್ನು ಇಷ್ಟಪಡಲಿಲ್ಲವೆಂಬುದು ಸ್ಪಷ್ಟ! ಸಾಮಾನ್ಯಜನರಲ್ಲಿ ಹೆಚ್ಚಿನವರು ಕ್ರೈಸ್ತರೆಂದು ಹೇಳಿಕೊಂಡರೂ, ಅಂತರ್ಜಾತೀಯ ಕಗ್ಗೊಲೆಗಳು ಆರಂಭಿಸಲ್ಪಟ್ಟವು. ವ್ಯಾಟಿಕನ್ನ ಲಾಸ್ವರೇಟಾರಿ ರೊಮಾನೊ ಅಂಗೀಕರಿಸಿದ್ದು: “ಇದು ಸಂಪೂರ್ಣವಾಗಿ ಜನಾಂಗದ ನಾಶವಾಗಿದೆ, ಇದಕ್ಕಾಗಿ ದುರದೃಷ್ಟದಿಂದ ಕ್ಯಾತೊಲಿಕರು ಸಹ ಜವಾಬ್ದಾರರಾಗಿದ್ದಾರೆ.” ಅಂದಾಜುಮಾಡಲಾದ ಐದು ಲಕ್ಷ ಪುರುಷರು, ಹೆಂಗಸರು, ಮತ್ತು ಮಕ್ಕಳು ಸತ್ತರು ಮತ್ತು ಸುಮಾರು 20 ಲಕ್ಷ ಜನರು ದಿಕ್ಕಿಲ್ಲದವರಾಗಿ ಮಾಡಲ್ಪಟ್ಟರು ಯಾ ಓಡಿಹೋಗುವಂತೆ ಒತ್ತಾಯಿಸಲ್ಪಟ್ಟರು. ತಮ್ಮ ಅಹಿಂಸಾತ್ಮಕ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಾ, ಯೆಹೋವನ ಸಾಕ್ಷಿಗಳು ಒಟ್ಟಾಗಿರಲು ಪ್ರಯತ್ನಿಸಿದರು. ನಮ್ಮ ಸಹೋದರ ಸಹೋದರಿಯರಲ್ಲಿ ನೂರಾರು ಜನರು ಕೊಲ್ಲಲ್ಪಟ್ಟರು. ಆದರೆ 65 ರಾಜ್ಯ ಪ್ರಚಾರಕರಿರುವ ಒಂದು ಸಭೆಯಲ್ಲಿ—ಅಲ್ಲಿ 13 ಸಾಕ್ಷಿಗಳು ಕೊಲ್ಲಲ್ಪಟ್ಟರು—ಕೂಟದ ಹಾಜರಿಯು ಆಗಸ್ಟ್ 1993ರೊಳಗಾಗಿ 170ಕ್ಕೆ ಏರಿತು. ಇತರ ದೇಶಗಳಲ್ಲಿರುವ ಸಾಕ್ಷಿಗಳಿಂದ ಬಂದ ಪರಿಹಾರ ಸಂಗ್ರಹಗಳು, ಬಂದು ತಲಪಿದ ಸಂಗ್ರಹಗಳಲ್ಲಿ ಪ್ರಥಮವಾಗಿದ್ದವು. ಬದುಕಿ ಉಳಿದಿರುವವರ ಪರವಾಗಿ ನಾವು ಪ್ರಾರ್ಥಿಸುತ್ತಿದ್ದೇವೆ.—ರೋಮಾಪುರ 12:12; 2 ಥೆಸಲೊನೀಕ 3:1, 2; ಇಬ್ರಿಯ 10:23-25.
11 ಈ ಎಲ್ಲ ಥರಥರಿಕೆಯ ಮಧ್ಯೆ, ರುಆಂಡದಲ್ಲಿದ್ದ ಮೂವರು ಮಿಷನೆರಿಗಳು ತಪ್ಪಿಸಿಕೊಂಡರು. ಅವರು ಬರೆಯುವುದು: “ಲೋಕದ ಸುತ್ತಲೂ ಇರುವ ನಮ್ಮ ಸಹೋದರರು ತದ್ರೀತಿಯ ಸನ್ನಿವೇಶಗಳನ್ನು ಯಾ ಇನ್ನೂ ಕೀಳಾದ ಸನ್ನಿವೇಶಗಳನ್ನು ಎದುರಿಸಬೇಕಾಗಿತ್ತೆಂಬುದು ನಮಗೆ ಗೊತ್ತು, ಮತ್ತು ಇದೆಲ್ಲವು ಈ ದುಷ್ಟ ವ್ಯವಸ್ಥೆಯ ಕೊನೆಯ ದಿನಗಳ ಸೂಚನೆಯಾಗಿದೆ ಎಂದು ನಮಗೆ ತಿಳಿದಿದೆ. ಆದರೂ, ಒಬ್ಬನು ವೈಯಕ್ತಿಕವಾಗಿ ಒಳಗೊಂಡಿರುವಾಗ, ವಿಷಯಗಳ ನೈಜತೆಯ ಕುರಿತು ಆಳವಾಗಿ ಅರಿಯುವಂತೆ ಮತ್ತು ಜೀವನವು ಎಷ್ಟು ಅಮೂಲ್ಯವಾಗಿದೆ ಎಂಬುದನ್ನು ಒಬ್ಬನು ಗಣ್ಯಮಾಡುವಂತೆ ಅದು ಮಾಡುತ್ತದೆ. ಕೆಲವೊಂದು ವಚನಗಳು ನಮಗೆ ಈಗ ಹೊಸ ಅರ್ಥವುಳ್ಳವುಗಳಾಗಿವೆ, ಮತ್ತು ಹಿಂದಿನ ವಿಷಯಗಳು ಇನ್ನು ಮುಂದೆ ಮನಸ್ಸಿಗೆ ಬಾರದ ಸಮಯಕ್ಕಾಗಿ ನಾವು ಎದುರು ನೋಡುತ್ತೇವೆ. ಈ ನಡುವೆ ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿ ಉಳಿಯಲು ನಾವು ಬಯಸುತ್ತೇವೆ.”
ಸಮಗ್ರತೆಯನ್ನು ಕಾಪಾಡಿಕೊಳ್ಳುವ ಯುವ ಜನರು
12, 13. (ಎ) ಸಮಗ್ರತೆಯನ್ನು ಕಾಪಾಡಿಕೊಳ್ಳುವ ಯಾವ ಮಾರ್ಗವನ್ನು ಒಬ್ಬ ಯೌವನಸ್ಥೆ ತೆಗೆದುಕೊಂಡಳು? (ಬಿ) ಇಂದು ನಮ್ಮ ಯುವಕರು ಉತ್ತೇಜನವನ್ನು ಎಲ್ಲಿ ಕಂಡುಕೊಳ್ಳಬಹುದು?
12 ಸತ್ಯದ ನಿಮಿತ್ತವಾಗಿ ಕುಟುಂಬದ ಸದಸ್ಯರಿಂದ ತ್ಯಜಿಸಲ್ಪಡುವವರು “ನೂರರಷ್ಟು” ಪ್ರತಿಫಲವನ್ನು ಪಡೆಯುವರೆಂದು ಯೇಸು ಸೂಚಿಸಿದನು. (ಮಾರ್ಕ 10:29, 30) ಇದು ಯೆಹೋವ ಎಂಬ ದೇವರ ಹೆಸರನ್ನು ಕೇಳಿದ ಕೂಡಲೆ ಅದನ್ನು ಪ್ರೀತಿಸಿದ ಉತ್ತರ ಆಫ್ರಿಕದಲ್ಲಿರುವ ಹತ್ತು ವರ್ಷ ಪ್ರಾಯದ ಹುಡುಗಿ, ಎನ್ಟೆಲ್ಯಾಳ ವಿಷಯದಲ್ಲಿ ಸತ್ಯವಾಗಿತ್ತು. ಆಕೆ ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಸಿಸಿದಳು ಮತ್ತು ವಿರೋಧಿಸುವ ಆಕೆಯ ಕುಟುಂಬವು ಅನೇಕ ವೇಳೆ ಆಕೆ ಹಿಂದಿರುಗಿದಾಗ ಮನೆಯೊಳಗೆ ಸೇರಿಸದಿದ್ದರೂ, ಆಕೆ ಕೂಟಗಳಿಗೆ ಹೋಗಲು 90 ನಿಮಿಷ ಬರಲು 90 ನಿಮಿಷ ನಡೆದಳು. 13ರ ಪ್ರಾಯದಲ್ಲಿ ಆಕೆ ಮನೆಯಿಂದ ಮನೆಗೆ ಸಾರಲು ತೊಡಗಿದಳು ಮತ್ತು ಕುಟುಂಬದ ವಿರೋಧವು ತೀಕ್ಷೈಗೊಂಡಿತು. ಒಂದು ದಿನ ಸಂಬಂಧಿಕರು ಆಕೆಯ ಕೈಕಾಲುಗಳನ್ನು ಕಟ್ಟಿ, ಕೆಲವೊಮ್ಮೆ ಆಕೆಯ ಮೇಲೆ ಹೊಲಸು ನೀರನ್ನು ಎರಚುತ್ತಾ, ಏಳು ತಾಸುಗಳ ವರೆಗೆ ಸುಡುವ ಬಿಸಿಲಿನಲ್ಲಿ ಬಿದ್ದಿರುವಂತೆ ಬಿಟ್ಟರು. ಆಕೆಯ ಒಂದು ಕಣ್ಣನ್ನು ನಾಶಗೊಳಿಸುತ್ತಾ, ಆಕೆಯನ್ನು ಅವರು ಕ್ರೂರವಾಗಿ ಹೊಡೆದರು, ಮತ್ತು ಅಂತಿಮವಾಗಿ ಮನೆಯಿಂದ ಆಕೆಯನ್ನು ಅಟಿಬ್ಟಿಟ್ಟರು. ಹಾಗಿದ್ದರೂ, ಆಸ್ಪತ್ರೆಯೊಂದರಲ್ಲಿ ಆಕೆ ಕೆಲಸವನ್ನು ಕಂಡುಕೊಂಡಳು ಮತ್ತು ಕಟ್ಟಕಡೆಗೆ ಒಬ್ಬ ದಾದಿಯೋಪಾದಿ ಅರ್ಹತೆಯನ್ನು ಪಡೆದಳು. 20ರ ವಯಸ್ಸಿನಲ್ಲಿ ಆಕೆ ದೀಕ್ಷಾಸ್ನಾನ ಪಡೆದಳು ಮತ್ತು ಕೂಡಲೇ ಒಬ್ಬಾಕೆ ಆಕ್ಸಿಲಿಯರಿ ಪಯನೀಯರಳಂತೆ ತನ್ನ ಹೆಸರನ್ನು ನಮೂದಿಸಿಕೊಂಡಳು. ಆಕೆಯ ಸಮಗ್ರತೆಯಿಂದ ಪ್ರಭಾವಿತರಾದ ಆಕೆಯ ಕುಟುಂಬದವರು ಆಕೆಯನ್ನು ಪುನಃ ಅವರ ಮನೆಯೊಳಗೆ ಸ್ವಾಗತಿಸಿದ್ದಾರೆ, ಮತ್ತು ಅವರಲ್ಲಿ ಒಂಬತ್ತು ಜನರು ಮನೆ ಬೈಬಲ್ ಅಧ್ಯಯನಗಳನ್ನು ಸ್ವೀಕರಿಸಿದ್ದಾರೆ.
13 ಕೀರ್ತನೆ 116, ಮತ್ತು ವಿಶೇಷವಾಗಿ ಆಕೆ ಸತತವಾಗಿ ಓದಿರುವ 1-4 ವಚನಗಳಿಂದ ಎನ್ಟೆಲ್ಯಾ ಹೆಚ್ಚಿನ ಉತ್ತೇಜನವನ್ನು ಪಡೆದಳು: “ಯೆಹೋವನನ್ನು ಪ್ರೀತಿಸುತ್ತೇನೆ; ಆತನು ನನ್ನ ಮೊರೆಯನ್ನು ಕೇಳುವವನು. ಆತನು ನನ್ನ ವಿಜ್ಞಾಪನೆಗೆ ಕಿವಿಗೊಟ್ಟಿದ್ದಾನೆ; ಜೀವದಿಂದಿರುವ ವರೆಗೂ ಆತನನ್ನೇ ಪ್ರಾರ್ಥಿಸುವೆನು. ಮರಣಪಾಶಗಳು ನನ್ನನ್ನು ಸುತ್ತಿಕೊಂಡಿದ್ದವು; ಪಾತಾಳವೇದನೆಗಳು ನನ್ನನ್ನು ಹಿಡಿದಿದ್ದವು. ಚಿಂತೆಯಲ್ಲಿಯೂ ಇಕ್ಕಟ್ಟಿನಲಿಯ್ಲೂ ಬಿದ್ದುಹೋಗಿದ್ದೆನು. ಆಗ ಯೆಹೋವನ ಹೆಸರು ಹೇಳಿ—ಯೆಹೋವನೇ, ಕೃಪೆಮಾಡಿ ನನ್ನ ಪ್ರಾಣವನ್ನು ರಕ್ಷಿಸು ಎಂದು ಪ್ರಾರ್ಥಿಸಿದೆನು.” ಯೆಹೋವನು ಅಂತಹ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ!
14. ಪೋಲಿಷ್ ಸಾಕ್ಷಿಗಳು ಎದ್ದುಕಾಣುವ ಸಮಗ್ರತೆಯನ್ನು ಹೇಗೆ ತೋರಿಸಿದ್ದಾರೆ?
14 ಯೇಸುವಿನ ದಿನದಲ್ಲಿ ಮಾಡಿದಂತೆ, ಸೈತಾನನು ಅನೇಕ ವೇಳೆ ಹಿಂಸೆಯನ್ನು ಕೆರಳಿಸಲು ಧರ್ಮಾಂಧತೆಯನ್ನು ಉಪಯೋಗಿಸಿದ್ದಾನೆ—ಆದರೆ ಸಾಫಲ್ಯವಿಲ್ಲದೆ. 1994 ಯಿಯರ್ಬುಕ್ ಆಫ್ ಜಿಹೋವಾಸ್ ವಿಟ್ನೆಸೆಸ್ ನಲ್ಲಿ ವರ್ಣಿಸಲಾದಂತೆ, ಪೋಲೆಂಡ್ನಲ್ಲಿರುವ ನಮ್ಮ ಸಹೋದರರ ಉದಾಹರಣೆಯು ಎದ್ದುಕಾಣುವಂತಹದ್ದಾಗಿದೆ. ತಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವವರೆಂದು ಯೌವನಸ್ಥರು ಸಹ ರುಜುಪಡಿಸಬೇಕಿತ್ತು. 1946 ರಲ್ಲಿ ಅಂತಹ ಒಬ್ಬಾಕೆ ಯೌವನಸ್ಥೆಯು 15 ವರ್ಷ ಪ್ರಾಯದ ಹುಡುಗಿಯಾಗಿದ್ದಳು. ಆಕೆಗೆ ಹೀಗೆ ಹೇಳಲಾಯಿತು: “ಶಿಲುಬೆಯ ಕ್ಯಾತೊಲಿಕ ಸಂಕೇತವನ್ನು ಮಾತ್ರ ಮಾಡು. ಇಲ್ಲದಿದ್ದರೆ ನಿನಗಾಗಿ ಒಂದು ಗುಂಡು ಕಾದಿದೆ!” ಸಮಗ್ರತೆಯನ್ನು ಕಾಪಾಡಿಕೊಂಡ ಕಾರಣ, ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಲಾಯಿತು, ಭಯಂಕರವಾಗಿ ಹಿಂಸಿಸಲಾಯಿತು ಮತ್ತು ಗುಂಡಿಕ್ಕಿ ಕೊಲಲ್ಲಾಯಿತು.—ಹೋಲಿಸಿ ಮತ್ತಾಯ 4:9, 10.
ಸೈತಾನನ ಇತರ ಕುಟಿಲ ತಂತ್ರಗಳು
15, 16. (ಎ) ಸೈತಾನನ ಪೈಶಾಚಿಕ ಕಾರ್ಯನೀತಿ ಏನಾಗಿದೆ, ಮತ್ತು ನಾವು ಅವನನ್ನು ಹೇಗೆ ಪ್ರತಿರೋಧಿಸಬಹುದು? (ಬಿ) ನಮ್ಮ ಯುವ ಜನರಿಗೆ ಎಡವುವ ಅಗತ್ಯವಿರುವುದಿಲ್ಲ ಏಕೆ?
15 ಸೈತಾನನ ಪೈಶಾಚಿಕ ಸೂತ್ರವು ಖಂಡಿತವಾಗಿ “ಆಳು ಯಾ ಅಳಿಸು” ಎಂಬುದಾಗಿದೆ! ಅವನ ವಶದಲ್ಲಿ ಅನೇಕ ಕ್ರೂರ ಆಯುಧಗಳಿವೆ. “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. ಆದದರಿಂದ ಕಠಿನ ಯುದ್ಧವು ನಡೆಯುವ ದಿವಸದಲ್ಲಿ ಆ ವೈರಿಗಳನ್ನು ಎದುರಿಸುವದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ಜಯಶಾಲಿಗಳಾಗಿ ನಿಲ್ಲುವದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ತೆಗೆದುಕೊಳ್ಳಿರಿ,” ಎಂದು ಅಪೊಸ್ತಲ ಪೌಲನು ಎಚ್ಚರಿಸುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. (ಎಫೆಸ 6:12, 13) ಪ್ರಾಪಂಚಿಕ ಬಯಕೆಗಳು, ಕೀಳಾದ ಮನೋರಂಜನೆ ಮತ್ತು ಪ್ರಚಾರ, ಪೈಶಾಚಿಕ ಸಂಗೀತ, ಶಾಲೆಯಲ್ಲಿ ಸಮಾನಸ್ಕಂಧರ ಒತ್ತಡ, ಔಷಧದ ದುರುಪಯೋಗ, ಮತ್ತು ಕುಡಿಕತನ—ಇವುಗಳಲ್ಲಿ ಯಾವುದೇ ವಿಷಯವಾದರೂ ನಮ್ಮ ಜೀವಿತಗಳನ್ನು ನಾಶಮಾಡಬಲ್ಲದು. ಆದಕಾರಣ, ಅಪೊಸ್ತಲನು ಈ ಸಲಹೆಯನ್ನು ನೀಡಲು ಮುಂದುವರಿಯುತ್ತಾನೆ: “ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.”—ಎಫೆಸ 6:16.
16 ಸೈತಾನನು ಈ ಲೋಕವನ್ನು ವಿಲಕ್ಷಣ ಸಂಗೀತದಿಂದ ತುಂಬಿಸುತ್ತಿರುವ ದೃಷ್ಟಿಯಿಂದ, ಇಂದು ಇದು ವಿಶೇಷವಾಗಿ ಅಗತ್ಯವೆಂದು ತೋರುತ್ತದೆ. ಕೆಲವು ವಿದ್ಯಮಾನಗಳಲ್ಲಿ ಸೈತಾನವಾದಕ್ಕೆ ನೇರವಾದ ಸಂಬಂಧವಿರುತ್ತದೆ. ಸ್ಯಾಂಡಿಯೆಗೊ ಕೌಂಟಿ (ಅಮೆರಿಕ) ಯ ಷೆರಿಫ್ನ ಆಫೀಸಿನಿಂದ ಬಂದ ಒಂದು ವರದಿಯು ಹೇಳಿದ್ದು: “ಇಲ್ಲಿ ಒಂದು ಗಾನಗೋಷ್ಠಿ ಇತ್ತು; ಅಲ್ಲಿ 15,000 ಮಕ್ಕಳು ಸೇಟನ್ ಎಂಬ ಪದವನ್ನು ಹಿಂದುಮುಂದಾಗಿ ‘ನೇಟಸ್’ ಎಂಬುದಾಗಿ ಪಠನಮಾಡುತ್ತಿದ್ದರು.” ಸೈತಾನವಾದವನ್ನು ಒಂದು ನೆಲದ ಕುಳಿಯೋಪಾದಿ ವರ್ಣಿಸಲಾಗಿದೆ, ಇದರೊಳಗೆ ಹದಿವಯಸ್ಕರು ಎಡವಿದ್ದಾರೆ “ಯಾಕೆಂದರೆ ಅವರು ಹತಾಶೆಯಿಂದ, ಕೋಪಗೊಂಡವರಾಗಿಯೂ ಒಬ್ಬಂಟಿಗರಾಗಿಯೂ ಅಲೆದಾಡುತ್ತಿದ್ದಾರೆ.” ಕ್ರೈಸ್ತ ಸಭೆಯಲ್ಲಿರುವ ಯೌವನಸ್ಥರೇ, ಎಡವುವ ಅಗತ್ಯವೇನೂ ನಿಮಗಿರುವುದಿಲ್ಲ! ಸೈತಾನನ ಈಟಿಗಳು ಎಂದೂ ಇರಿಯದಂತೆ ಯೆಹೋವನು ನಿಮಗೆ ಆತ್ಮಿಕ ಯುದ್ಧ ಕವಚವನ್ನು ಒದಗಿಸುತ್ತಾನೆ.—ಕೀರ್ತನೆ 16:8, 9.
17. ಭಾವನಾತ್ಮಕ ಹತಾಶೆಯನ್ನು ಹೇಗೆ ಜಯಿಸಬಹುದು?
17 ಪೈಶಾಚಿಕ ಉರಿಯುವ ಕ್ಷಿಪಣಿಗಳು, ಭಾವನೆಗಳ ಮೇಲೆ ಕೌಶಲದಿಂದ ನಿರ್ವಹಿಸುವಂತೆ ರಚಿಸಲಾಗಿವೆ. ಶಾರೀರಿಕ ಕಾಯಿಲೆ ಯಾ ಆಳವಾದ ಹತಾಶೆಯ ಸ್ಥಿತಿಯಂತಹ ಜೀವಿತದ ಒತ್ತಡಗಳ ಮುಖಾಂತರ, ನಮ್ಮ ವೈರಿಯು ಕೆಲವರಲ್ಲಿ ಅಯೋಗ್ಯ ಅನಿಸಿಕೆಯನ್ನುಂಟುಮಾಡಬಹುದು. ದೇವರ ಸೇವೆಯಲ್ಲಿ ಅನೇಕ ತಾಸುಗಳನ್ನು ವ್ಯಯಿಸಲು ಸಾಧ್ಯವಾಗದ ಕಾರಣ ಯಾ ಸಭಾ ಕೂಟಗಳಲ್ಲಿ ಕೆಲವನ್ನು ತಪ್ಪಿಸಿದ ಕಾರಣ ಒಬ್ಬನು ನಿರಾಶನಾಗಬಹುದು. ಕಠಿನ ಗಾಯಗಳನ್ನು ಜಯಿಸುವುದರಲ್ಲಿ ಹಿರಿಯರಿಂದ ಮತ್ತು ಇತರ ಸುಹೃದಯವುಳ್ಳ ಸಹೋದರರು ಮತ್ತು ಸಹೋದರಿಯರಿಂದ ನೀಡಲ್ಪಡುವ ಪ್ರೀತಿಯ ಕಾಳಜಿಯು ಸಹಾಯ ಮಾಡಬಹುದು. ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಪ್ರೀತಿಸುತ್ತಾನೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. (1 ಯೋಹಾನ 4:16, 19) ಕೀರ್ತನೆ 55:22 ಹೇಳುವುದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”
18. ಯಾವ ಪೈಶಾಚಿಕ ತಂತ್ರೋಪಾಯಗಳೊಂದಿಗೆ ಕೆಲವರು ಹೋರಾಡಬೇಕಾಗಿದೆ?
18 ಸೈತಾನನ ಕುಟಿಲ “ತಂತ್ರೋಪಾಯಗಳು” ಇತ್ತೀಚೆಗೆ ಮತ್ತೊಂದು ರೂಪದಲ್ಲಿ ಕಾಣಿಸಿಕೊಂಡಿವೆ. ಕೆಲವು ದೇಶಗಳಲ್ಲಿ, ತಾವು ಮಕ್ಕಳಾಗಿರುವಾಗ ಪೈಶಾಚಿಕ ಪಂಥಗಳಿಂದ ಕ್ರೌರ್ಯ ರತಿಯ ಮೂಲಕ ದುರುಪಯೋಗಿಸಲ್ಪಟ್ಟೆವೆಂಬ ಭಾವಪರವಶಗೊಳಿಸುವ ಅಭಿಪ್ರಾಯವನ್ನು ಸಾಗಿಸುವ ಆಕ್ರಮಣಕಾರಿ ಯೋಚನೆಗಳನ್ನು ಅನೇಕ ವಯಸ್ಕರು ಅನುಭವಿಸಿದ್ದಾರೆ. ಇಂತಹ ವಿಚಾರಗಳು ಎಲ್ಲಿಂದ ಬರುತ್ತವೆ? ವಿಸ್ತಾರವಾದ ಸಂಶೋಧನೆಯ ಹೊರತೂ, ಐಹಿಕ ವಿಶೇಷಜ್ಞರ ಅಭಿಪ್ರಾಯಗಳು ಬಹಳ ಭಿನ್ನವಾಗಿವೆ. ಇಂತಹ ಯೋಚನೆಗಳನ್ನು ನಿಜವಾದ ಸ್ಮರಣೆಗಳೆಂದು ಕೆಲವರು ವೀಕ್ಷಿಸುತ್ತಾರೆ, ಇತರರು ಅವುಗಳನ್ನು ಬಹುಶಃ ಸಂದೇಹಾಸ್ಪದ ಚಿಕಿತ್ಸೆಯ ಮೂಲಕ ಪ್ರೇರೇಪಿಸಲಾದ ಭ್ರಮೆಗಳೆಂದು ವೀಕ್ಷಿಸುತ್ತಾರೆ ಮತ್ತು ಇನ್ನೂ ಇತರರು ಅವುಗಳನ್ನು ಬಾಲ್ಯಾವಸ್ಥೆಯ ಯಾವುದೊ ಪೆಟ್ಟಿನಿಂದ ಉಂಟಾದ ಒಂದು ರೀತಿಯ ಭ್ರಾಂತಿಯಂತೆ ವೀಕ್ಷಿಸುತ್ತಾರೆ.
19. (ಎ) ಯೋಬನು ಯಾವ ಯೋಚನೆಗಳೊಂದಿಗೆ ಹೋರಾಡಬೇಕಿತ್ತು? (ಬಿ) ಎಲೀಹುವಿನ ಉದಾಹರಣೆಯನ್ನು ಹಿರಿಯರು ಹೇಗೆ ಹಿಂಬಾಲಿಸಬಹುದು?
19 ದೇವರ ಸೇವಕನಾದ ಯೋಬನು ಎಲೀಫಜ ಮತ್ತು ಚೋಫರನ ಮುಖಾಂತರ ಸೈತಾನನು ಸಾಗಿಸಿದ “ವ್ಯಾಕುಲಗೊಳಿಸುವ ಯೋಚನೆಗಳೊಂದಿಗೆ” ಹೋರಾಡಬೇಕಿತ್ತೆಂಬುದು ಆಸಕ್ತಿಯ ವಿಷಯವಾಗಿದೆ. (ಯೋಬ 4:13-18; 20:2, 3, NW) ಹೀಗೆ ಯೋಬನು “ಕಿರುಕುಳ” ವನ್ನನುಭವಿಸಿದನು, ಇದು ತನ್ನ ಮನಸ್ಸನ್ನು ಬಾಧಿಸುವ “ಭೀತಿಗಳ” ಕುರಿತು “ಗೊತ್ತುಗುರಿಯಿಲ್ಲದ ಮಾತಿ” ನಲ್ಲಿ ಅವನ ಒಳಗೂಡಿಕೆಯಲ್ಲಿ ಫಲಿಸಿತು. (ಯೋಬ 6:2-4; 30:15, 16, NW) ಎಲೀಹು ಶಾಂತವಾಗಿ ಯೋಬನಿಗೆ ಕಿವಿಗೊಟ್ಟನು ಮತ್ತು ವಿಷಯಗಳ ಕುರಿತು ಎಲ್ಲವನ್ನು ಬಲ್ಲ ಯೆಹೋವನ ನೋಟವನ್ನು ನೋಡುವಂತೆ ಅವನಿಗೆ ಯಥಾರ್ಥವಾಗಿ ಸಹಾಯ ಮಾಡಿದನು. ತದ್ರೀತಿಯಲ್ಲಿ ಇಂದು, ನೋಯಿಸಲ್ಪಟ್ಟವರ ಕುರಿತು ತಾವು ಚಿಂತಿಸುತ್ತೇವೆಂದು ಅಂತಹವರಿಗೆ ಹೆಚ್ಚಿನ “ಒತ್ತಡವನ್ನು” ಕೂಡಿಸದಿರುವ ಮೂಲಕ ತಿಳಿವಳಿಕೆಯುಳ್ಳ ಹಿರಿಯರು ತೋರಿಸುತ್ತಾರೆ. ಬದಲಿಗೆ, ಎಲೀಹುವಿನಂತೆ, ಅವರು ತಾಳ್ಮೆಯಿಂದ ಆಲಿಸುತ್ತಾರೆ ಮತ್ತು ತದನಂತರ ದೇವರ ವಾಕ್ಯದ ಉಪಶಮನಕಾರಿ ತೈಲವನ್ನು ಹಚ್ಚುತ್ತಾರೆ. (ಯೋಬ 33:1-3, 7; ಯಾಕೋಬ 5:13-15) ಹೀಗೆ ಯಾರ ಭಾವನೆಗಳು ಗಾಯಗಳಿಂದ—ನಿಜವಾದ ಯಾ ಭ್ರಾಂತಿಯ—ಕಲಕಲ್ಪಟ್ಟಿವೆಯೊ, ಅಥವಾ ಯಾರು ಯೋಬನಂತೆ “ಸ್ವಪ್ನಗಳಿಂದ . . . ದರ್ಶನಗಳ ಮೂಲಕ ಭಯ” ಪಟ್ಟಿರುತ್ತಾರೊ, ಅವರು ಸಭೆಯೊಳಗೆ ಉಪಶಮನಗೊಳಿಸುವ ಆತ್ಮಿಕ ಸಾಂತ್ವನವನ್ನು ಕಂಡುಕೊಳ್ಳಬಹುದು.—ಯೋಬ 7:14; ಯಾಕೋಬ 4:7.
20. ತೊಂದರೆಗೀಡಾದ ಕ್ರೈಸ್ತರು ತಮ್ಮ ಆತ್ಮಿಕ ಸಮತೆಯನ್ನು ಕಾಪಾಡಿಕೊಳ್ಳುವಂತೆ ಹೇಗೆ ಸಹಾಯಿಸಲ್ಪಡಬಹುದು?
20 ಈ ಭಯಂಕರವಾದ ಯೋಚನೆಗಳ ಹಿಂದೆ ಸೈತಾನನು ಒಂದಲ್ಲ ಒಂದು ವಿಧದಲ್ಲಿ ಇದ್ದಾನೆಂದು, ಪ್ರಸ್ತುತ ಕ್ರೈಸ್ತನೊಬ್ಬನು ನಿಶ್ಚಿತನಾಗಿರಬಲ್ಲನು. ಸಭೆಯಲ್ಲಿ ಕೆಲವರು ಈ ರೀತಿಯಲ್ಲಿ ಕಷ್ಟಾನುಭವಿಸಿದರೆ, ಅಂತಹ ಭಯಗೊಳಿಸುವ ಮಾನಸಿಕ ಪ್ರಭಾವಗಳನ್ನು ಅವರು ತಮ್ಮ ಆತ್ಮಿಕ ಸಮತೆಯನ್ನು ಕೆಡಿಸಲು ಸೈತಾನನ ಮೂಲಕ ಮಾಡಲಾದ ನೇರವಾದ ಪ್ರಯತ್ನವೆಂದು ಮನಗಾಣುವುದು ವಿವೇಕವುಳ್ಳದ್ದು. ಇವರಿಗೆ ತಾಳ್ಮೆಯ ಮತ್ತು ಅರ್ಥಮಾಡಿಕೊಳ್ಳುವ ಶಾಸ್ತ್ರೀಯ ಬೆಂಬಲದ ಅಗತ್ಯವಿದೆ. ಪ್ರಾರ್ಥನಾಪೂರ್ವಕವಾಗಿ ಯೆಹೋವನ ಕಡೆಗೆ ತಿರುಗುವ ಮೂಲಕ ಮತ್ತು ಆತ್ಮಿಕ ಕುರಿಪಾಲನೆಯಿಂದ ಪ್ರಯೋಜನ ಪಡೆಯುವ ಮೂಲಕ, ಸಂಕಟವನ್ನು ಅನುಭವಿಸುತ್ತಿರುವವರು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುವ ಬಲವನ್ನು ತಮಗಾಗಿ ಪಡೆದುಕೊಳ್ಳುವರು. (ಯೆಶಾಯ 32:2; 2 ಕೊರಿಂಥ 4:7, 8) ಹೀಗೆ ಅವರು ನಂಬಿಗಸ್ತರಾಗಿ ತಾಳಿಕೊಳ್ಳಲು ಶಕ್ತರಾಗಿರುವರು ಮತ್ತು ಸಭೆಯ ಶಾಂತಿಯನ್ನು ದುಷವ್ಟಾದ ಒಳನುಗ್ಗುವ ಯೋಚನೆಗಳು ಪ್ರಭಾವಿಸುವಂತೆ ಅನುಮತಿಸಲು ನಿರಾಕರಿಸುವರು. (ಯಾಕೋಬ 3:17, 18) ಹೌದು, “ಸೈತಾನನೇ, ನೀನು ತೊಲಗಿಹೋಗು” ಎಂದು ಹೇಳಿದ ಯೇಸುವಿನ ಅದೇ ಆತ್ಮವನ್ನು ತೋರಿಸುತ್ತಾ, ಪಿಶಾಚನನ್ನು ಎದುರಿಸಲು ಅವರು ಶಕ್ತರಾಗಿರುವರು.—ಮತ್ತಾಯ 4:10; ಯಾಕೋಬ 4:7.
21. ಸೈತಾನನ ಕುತಂತ್ರದ ವಿಧಗಳ ಕುರಿತು ಶಾಸ್ತ್ರಗಳು ಹೇಗೆ ಎಚ್ಚರಿಸುತ್ತವೆ?
21 2 ಕೊರಿಂಥ 11:3 ರಲ್ಲಿ ಅಪೊಸ್ತಲ ಪೌಲನು ಎಚ್ಚರಿಸಿದಂತೆ, ಸೈತಾನನ ಗುರಿಯು ಹೇಗಾದರೂ ನಮ್ಮ ಮನಸ್ಸುಗಳನ್ನು ಭ್ರಷ್ಟಗೊಳಿಸುವುದಾಗಿದೆ ಎಂದು ನಮಗೆ ಗೊತ್ತಿದೆ: “ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.” ದೇವರಿಂದ ವಿಮುಖವಾದ ಇಡೀ ಮನುಷ್ಯ ವರ್ಗ ಯಾ ಮಾನವ ಸಮಾಜದ ಧ್ವಂಸವು ನಮಗೆ ನೋಹನ ದಿನದ ಭ್ರಷ್ಟ ಹಾಗೂ ಹಿಂಸಾತ್ಮಕ ಮಿಶ್ರ “ಪರಾಕ್ರಮಶಾಲಿಗಳ” ಮೂಲಕ ತರಲ್ಪಟ್ಟ ಅವನತಿಯ ಕುರಿತು ಜ್ಞಾಪಕ ಹುಟ್ಟಿಸುತ್ತದೆ. (ಆದಿಕಾಂಡ 6:4, 12, 13, ಪಾದಟಿಪ್ಪಣಿ; ಲೂಕ 17:26) ಆದುದರಿಂದ ತನ್ನ ಕೋಪವನ್ನು ವಿಶೇಷವಾಗಿ ದೇವರ ಜನರ ವಿರುದ್ಧ ವ್ಯಕ್ತಪಡಿಸಲು ಸೈತಾನನು ಕುಟಿಲ ಕೃತ್ಯಗಳನ್ನು ಮತ್ತು ಚತುರ ವಿಧಾನಗಳನ್ನು ಆಶ್ರಯಿಸುತ್ತಾನೆಂಬುದು ಆಶ್ಚರ್ಯಕರವಲ್ಲ.—1 ಪೇತ್ರ 5:8; ಪ್ರಕಟನೆ 12:17.
22. ಸೈತಾನನು ಇನ್ನು ಮುಂದೆ ನಮ್ಮನ್ನು ಕಳವಳಗೊಳಿಸದೆ ಇರುವಾಗ, ಯಾವ ಆಶೀರ್ವಾದಗಳನ್ನು ಅಪೇಕ್ಷಿಸಬಹುದು?
22 ಬೈಬಲ್ ಪುಸ್ತಕವಾದ ಯೋಬನ ಸಮಾಪ್ತಿಯ ಅಧ್ಯಾಯಗಳಲ್ಲಿ ಸೈತಾನನ ಹೆಸರಿನ ಉಲ್ಲೇಖವೂ ಇರುವುದಿಲ್ಲ. ಮಾನವರಿಗೆ ದೇವರ ಕಡೆಗೆ ಸಮಗ್ರತೆಯನ್ನು ಕಾಪಾಡಲು ಸಾಧ್ಯವಿಲ್ಲವೆಂಬ ದುಷ್ಟ ಪಂಥಾಹ್ವಾನವು ಯೋಬನ ಸಮಗ್ರತೆಯಿಂದ ಸುಳ್ಳೆಂದು ರುಜುವಾಗಿತ್ತು. ತದ್ರೀತಿಯಲ್ಲಿ, ಹತ್ತಿರದ ಭವಿಷ್ಯತ್ತಿನಲ್ಲಿ ಸಮಗ್ರತೆಯನ್ನು ಕಾಪಾಡುವವರ “ಮಹಾ ಸಮೂಹವು” “ಮಹಾ ಸಂಕಟದಿಂದ ಹೊರ” ಬಂದಾಗ, ಸೈತಾನನನ್ನು ಅಧೋಲೋಕದೊಳಗೆ ಹಾಕಲಾಗುವುದು. ನಂಬಿಗಸ್ತ ಯೋಬನನ್ನು ಸೇರಿಸಿ ನಂಬಿಕೆಯ ಪುರುಷರು ಮತ್ತು ಸ್ತ್ರೀಯರು, ಪ್ರಮೋದವನದ ಆಶೀರ್ವಾದಗಳನ್ನು—ಯೋಬನನ್ನು ಬಹುಮಾನಿಸಿದ ಆಶೀರ್ವಾದಗಳಿಗಿಂತಲೂ ಅಧಿಕ ಮಹಾನ್ ಆಶೀರ್ವಾದಗಳನ್ನು—ಅನುಭವಿಸಲು “ಮಹಾ ಸಮೂಹ” ದೊಂದಿಗೆ ಸೇರುವರು!—ಪ್ರಕಟನೆ 7:9-17; 20:1-3, 11-13; ಯೋಬ 14:13.
[ಅಧ್ಯಯನ ಪ್ರಶ್ನೆಗಳು]
a 1992 ಯಿಯರ್ಬುಕ್ ಆಫ್ ಜಿಹೋವಾಸ್ ವಿಟ್ನೆಸೆಸ್, ಪುಟ 177 ನೋಡಿರಿ.
ಪುನರ್ವಿಮರ್ಶೆಯಲ್ಲಿ ಪ್ರಶ್ನೆಗಳು
▫ ಸಮಗ್ರತೆಯ ಯಾವ ಉತ್ತಮ ಮಾದರಿಯನ್ನು ಪೌಲನು ಸ್ಥಾಪಿಸಿದನು?
▫ ಸಮಗ್ರತೆಯನ್ನು ಕಾಪಾಡಿಕೊಳ್ಳುವವರು ಸೈತಾನನನ್ನು ಹೇಗೆ ಎದುರಿಸಿದ್ದಾರೆ?
▫ ಯುವ ಜನರು ಸೈತಾನನ ಕುಟಿಲ ತಂತ್ರಗಳನ್ನು ಹೇಗೆ ಪ್ರತಿರೋಧಿಸಬಹುದು?
▫ ಪೈಶಾಚಿಕ ತಂತ್ರೋಪಾಯಗಳನ್ನು ನಿಭಾಯಿಸಲು ಏನು ಮಾಡಸಾಧ್ಯವಿದೆ?
[ಪುಟ 7 ರಲ್ಲಿರುವ ಚಿತ್ರ]
ಇಥಿಯೋಪಿಯದಲ್ಲಿ, ಮೆಸ್ವಟ್ ಮತ್ತು ಯೊಅಲಾನ್, ಮರಣದಂಡನೆ ವಿಧಿಸಲ್ಪಟ್ಟ ತಮ್ಮ ತಂದೆಯ ಮಾದರಿಯನ್ನು ಅನುಸರಿಸುತ್ತಾ, ಯೆಹೋವನನ್ನು ಈಗ ಪೂರ್ಣ ಸಮಯ ಸೇವಿಸುತ್ತಾರೆ
[ಪುಟ 7 ರಲ್ಲಿರುವ ಚಿತ್ರ]
ಎನ್ಟೆಲ್ಯಾ, ಉತ್ತರ ಆಫ್ರಿಕದಲ್ಲಿ ಸಮಗ್ರತೆಯನ್ನು ಕಾಪಾಡಿಕೊಂಡ ಒಬ್ಬ ಯೌವನಸ್ಥೆ