ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr24 ಜನವರಿ ಪು. 1-12
  • “ಜೀವನ ಮತ್ತು ಸೇವೆ ಕೂಟದ ಕೈಪಿಡಿಯ” ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಜೀವನ ಮತ್ತು ಸೇವೆ ಕೂಟದ ಕೈಪಿಡಿಯ” ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2024
  • ಉಪಶೀರ್ಷಿಕೆಗಳು
  • ಜನವರಿ 1-7
  • ಜನವರಿ 8-14
  • ಜನವರಿ 15-21
  • ಜನವರಿ 22-28
  • ಜನವರಿ 29-ಬ್ರವರಿ 4
  • ಫೆಬ್ರವರಿ 5-11
  • ಫೆಬ್ರವರಿ 12-18
  • ಫೆಬ್ರವರಿ19-25
  • ಫೆಬ್ರವರಿ 26- ಮಾರ್ಚ್‌ 3
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2024
mwbr24 ಜನವರಿ ಪು. 1-12

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

© 2023 Watch Tower Bible and Tract Society of Pennsylvania

ಜನವರಿ 1-7

ಬೈಬಲಿನಲ್ಲಿರುವ ನಿಧಿ |ಯೋಬ 32-33

ಚಿಂತೆಯಲ್ಲಿ ಮುಳುಗಿ ಹೋದವ್ರನ್ನ ಸಂತೈಸಿ

it-1-E ಪುಟ 710

ಎಲೀಹು

ಎಲೀಹು ಪಕ್ಷಪಾತ ಮಾಡ್ಲಿಲ್ಲ, ಬೇರೆಯವ್ರನ್ನ ಸುಮ್ಮಸುಮ್ಮನೆ ಹೊಗಳಲಿಲ್ಲ. ತಾನೂ ಯೋಬನ ತರ ಮಣ್ಣಿಂದ ಸೃಷ್ಟಿ ಆದವನು ಮತ್ತು ತಮ್ಮನ್ನ ಸೃಷ್ಟಿ ಮಾಡಿದ್ದು ಸರ್ವಶಕ್ತ ಅಂತ ಅವನು ಅರ್ಥ ಮಾಡ್ಕೊಂಡ. ಎಲೀಫಜ, ಬಿಲ್ದದ ಮತ್ತು ಚೋಫರನ ತರ ಎಲೀಹು ಯೋಬನನ್ನ ಹೆದರಿಸಲಿಲ್ಲ ಬದ್ಲಿಗೆ ಒಬ್ಬ ಒಳ್ಳೇ ಸ್ನೇಹಿತನ ತರ ನಡ್ಕೊಂಡ. ಯೋಬನ ಜೊತೆ ಮಾತಾಡುವಾಗ ಎಲೀಹು ಹೆಸರು ಹೇಳಿ ಕರೆದ. ಹೀಗೆ ಅವನಿಗೆ ಯೋಬನ ಮೇಲೆ ಕಾಳಜಿ ಇದೆ ಅಂತ ತೋರಿಸಿದ.—ಯೋಬ 32:21, 22; 33:1, 6.

ಕಾವಲಿನಬುರುಜು14 6/15 ಪುಟ 25 ಪ್ಯಾರ 8-10

ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ನಿಮಗೂ ಇದೆಯೇ?

8 ನಮ್ಮ ಪ್ರಿಯ ಸಹೋದರ ಸಹೋದರಿಯರಲ್ಲಿ ಕೆಲವರು ಕಾಯಿಲೆ ಬಿದ್ದಿರಬಹುದು, ಅವಿಶ್ವಾಸಿ ಸದಸ್ಯರಿರುವ ಕುಟುಂಬದಲ್ಲಿ ವಾಸಿಸುತ್ತಿರಬಹುದು, ಖಿನ್ನತೆಯಿಂದ ಬಾಧಿತರಾಗಿರಬಹುದು. ಇಂಥ ಕಷ್ಟಕರ ಪರಿಸ್ಥಿತಿಗಳಿಂದಾಗಿ ಅವರು ಬಲಹೀನರಾಗುತ್ತಾರೆ ಎಂಬುದನ್ನು ಮನಸ್ಸಿನಲ್ಲಿಟ್ಟರೆ ನಾವು ಹೆಚ್ಚು ಸಹಾನುಭೂತಿ ತೋರಿಸುವೆವು. ಅವರಿಗಿರುವಂಥ ಕಷ್ಟಗಳು ನಮಗೂ ಒಂದು ದಿನ ಬಂದೀತು. ಇಸ್ರಾಯೇಲ್ಯರು ಐಗುಪ್ತದಲ್ಲಿದ್ದಾಗ ಬಡವರು, ಬಲಹೀನರು ಆಗಿದ್ದರು. ಆದ್ದರಿಂದ ಅವರು ಕಷ್ಟದಲ್ಲಿರುವ ತಮ್ಮ ಸಹೋದರರ ವಿಷಯದಲ್ಲಿ ‘ಮನಸ್ಸನ್ನು ಕಠಿಣಮಾಡಿಕೊಳ್ಳಬಾರದು’ ಎಂದು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ಅವರಿಗೆ ನೆನಪುಹುಟ್ಟಿಸಲಾಯಿತು. ಅವರು ಬಡವರಿಗೆ ಸಹಾಯ ಕೊಡುವಂತೆ ಯೆಹೋವನು ನಿರೀಕ್ಷಿಸಿದನು.—ಧರ್ಮೋ. 15:7, 11; ಯಾಜ. 25:35-38.

9 ಕಷ್ಟದಲ್ಲಿರುವ ಸಹೋದರರನ್ನು ಟೀಕಿಸುವ ಅಥವಾ ಸಂಶಯಿಸುವ ಬದಲು ನಾವು ಅವರಿಗೆ ಆಧ್ಯಾತ್ಮಿಕ ಸಾಂತ್ವನ ಕೊಡಬೇಕು. (ಯೋಬ 33:6, 7; ಮತ್ತಾ. 7:1) ದೃಷ್ಟಾಂತಕ್ಕೆ, ಬೈಕ್‌ ಸವಾರನೊಬ್ಬ ಅಪಘಾತಕ್ಕೀಡಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದಾನೆ. ಅಲ್ಲಿನ ವೈದ್ಯಕೀಯ ತಂಡ ಅಪಘಾತಕ್ಕೆ ಯಾರು ಕಾರಣ ಎಂದು ಚರ್ಚಿಸುತ್ತಾ ಕೂತರೆ ಏನಾಗಬಹುದೆಂದು ಸ್ವಲ್ಪ ಯೋಚಿಸಿ. ಅದರ ಬದಲು ಅವರು ತಕ್ಷಣ ಚಿಕಿತ್ಸೆ ಕೊಡಬೇಕಲ್ಲವಾ? ಹಾಗೆಯೇ ಜೊತೆ ವಿಶ್ವಾಸಿಯೊಬ್ಬನು ವೈಯಕ್ತಿಕ ಸಮಸ್ಯೆಗಳಿಂದಾಗಿ ಬಲಹೀನನಾದಾಗ ನಾವು ಅವನಿಗೆ ಮೊದಲು ನೀಡಬೇಕಾದದ್ದು ಆಧ್ಯಾತ್ಮಿಕ ನೆರವು.—1 ಥೆಸಲೊನೀಕ 5:14 ಓದಿ.

10 ನಮ್ಮ ಸಹೋದರರ ಪರಿಸ್ಥಿತಿಗಳ ಬಗ್ಗೆ ಯೋಚಿಸಲು ನಾವು ಸ್ವಲ್ಪ ಸಮಯ ತೆಗೆದುಕೊಂಡರೆ, ಅವರಲ್ಲಿ ಬಲಹೀನತೆಗಳಂತೆ ತೋರುವ ವಿಷಯಗಳ ಬಗ್ಗೆ ನಮ್ಮ ನೋಟವೇ ಬದಲಾಗುವುದು. ಹಲವಾರು ವರ್ಷಗಳಿಂದ ಕುಟುಂಬದ ವಿರೋಧ ಎದುರಿಸುತ್ತಿರುವ ಸಹೋದರಿಯರ ಕುರಿತು ಯೋಚಿಸಿ. ಅವರಲ್ಲಿ ಕೆಲವರು ತೀರ ಸಾಧಾರಣರು, ನಾಜೂಕು ಆಗಿರುವಂತೆ ಕಾಣಬಹುದು. ಆದರೆ ಅವರಲ್ಲಿ ಎಷ್ಟೊಂದು ದೃಢವಾದ ನಂಬಿಕೆ, ಮನೋಬಲ ಇರುತ್ತದಲ್ಲವೇ? ಒಂಟಿ ತಾಯಿಯೊಬ್ಬಳು ತನ್ನ ಮಕ್ಕಳನ್ನು ಕೂಟಗಳಿಗೆ ನಿಯಮಿತವಾಗಿ ಕರಕೊಂಡು ಬರುವುದನ್ನು ನೋಡಿ ಅವಳ ನಂಬಿಕೆ, ದೃಢ ನಿರ್ಧಾರವನ್ನು ನೀವು ಮೆಚ್ಚುವುದಿಲ್ಲವೇ? ನಮ್ಮ ಹದಿಪ್ರಾಯದವರು ಶಾಲಾಕಾಲೇಜುಗಳಲ್ಲಿ ಕೆಟ್ಟ ಪ್ರಭಾವಗಳನ್ನು ಎದುರಿಸುತ್ತಿದ್ದರೂ ಸತ್ಯಕ್ಕೆ ಅಂಟಿಕೊಂಡಿದ್ದಾರಲ್ಲವೇ? ಇವರೆಲ್ಲರೂ ಬಲಹೀನರಂತೆ ತೋರಿದರೂ “ನಂಬಿಕೆಯಲ್ಲಿ ಐಶ್ವರ್ಯವಂತ”ರಾಗಿದ್ದಾರೆ.—ಯಾಕೋ. 2:5.

ಕಾವಲಿನಬುರುಜು20.03 ಪುಟ 23 ಪ್ಯಾರ 17-18

ಯಾವಾಗ ಮಾತಾಡ್ಬೇಕು?

17 ಯೋಬನನ್ನು ನೋಡೋಕೆ ಬಂದ ನಾಲ್ಕನೇ ವ್ಯಕ್ತಿಯ ಹೆಸ್ರು ಎಲೀಹು. ಅವನು ಅಬ್ರಹಾಮನ ಸಂಬಂಧಿಕನಾಗಿದ್ದನು. ಅವನು ಯೋಬ ಮತ್ತು ಆ ಮೂವರು ಸ್ನೇಹಿತರು ಮಾತಾಡೋದನ್ನು ಚೆನ್ನಾಗಿ ಕೇಳಿಸಿಕೊಂಡಿದ್ದನು. ಯೋಬನ ಯೋಚನಾರೀತಿಯನ್ನು ತಿದ್ದಿಕೊಳ್ಳೋಕೆ ಬೇಕಾದ ಸಲಹೆಯನ್ನ ದಯೆಯಿಂದ ಕೊಡೋಕೆ ಅವನಿಗೆ ಸಾಧ್ಯವಾಯಿತು. (ಯೋಬ 33: 1, 6, 17) ಎಲೀಹುವಿನ ಮುಖ್ಯ ಉದ್ದೇಶ ತನಗೆ ಅಥ್ವಾ ಬೇರೆ ಮನುಷ್ಯರಿಗೆ ಮಹಿಮೆ ಕೊಡೋದು ಆಗಿರಲಿಲ್ಲ. ಬದಲಿಗೆ, ಯೆಹೋವನಿಗೆ ಮಹಿಮೆ ಕೊಡುವುದೇ ಆಗಿತ್ತು. (ಯೋಬ 32:21, 22; 37:23, 24) ಮಾತಾಡೋಕೆ ಮತ್ತು ಸುಮ್ಮನಿರೋಕೆ ತಕ್ಕ ಸಮಯ ಇದೆ ಅಂತ ಎಲೀಹುವಿನ ಉದಾಹರಣೆಯಿಂದ ನಾವು ತಿಳುಕೊಳ್ಳಬಹುದು. (ಯಾಕೋ. 1:19) ಅಷ್ಟೇ ಅಲ್ಲ, ಬೇರೆಯವ್ರಿಗೆ ಸಲಹೆ ಕೊಡುವಾಗ ನಮ್ಮ ಮುಖ್ಯ ಉದ್ದೇಶ ನಮ್ಗೆ ಮಹಿಮೆ ತರೋದಲ್ಲ, ಯೆಹೋವನಿಗೆ ಮಹಿಮೆ ತರೋದೇ ಆಗಿರಬೇಕು.

18 ಯಾವಾಗ, ಹೇಗೆ ಮಾತಾಡ್ಬೇಕು ಅನ್ನೋದ್ರ ಬಗ್ಗೆ ಬೈಬಲಿನಲ್ಲಿರುವ ಸಲಹೆಗಳನ್ನ ಅನುಸರಿಸಿದರೆ ಮಾತಾಡುವ ಉಡುಗೊರೆಯನ್ನ ನಾವು ಅಮೂಲ್ಯವಾಗಿ ನೋಡ್ತೇವೆ ಅಂತ ತೋರಿಸಿಕೊಡ್ತೇವೆ. ವಿವೇಕಿ ರಾಜ ಸೊಲೊಮೋನ ದೇವರ ಪ್ರೇರಣೆಯಿಂದ ಹೀಗೆ ಹೇಳಿದನು: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಜ್ಞಾನೋ. 25:11) ಬೇರೆಯವ್ರು ಹೇಳೋದನ್ನು ಚೆನ್ನಾಗಿ ಕೇಳಿಸಿಕೊಂಡ್ರೆ ಮತ್ತು ಮಾತಾಡೋ ಮುಂಚೆ ಯೋಚಿಸಿದ್ರೆ ನಮ್ಮ ಮಾತು ಬಂಗಾರದ ಹಣ್ಣುಗಳ ತರ ಇರುತ್ತೆ. ಅಂದ್ರೆ ನಮ್ಮ ಮಾತಿಗೆ ಬೆಲೆ ಇರುತ್ತೆ, ಸುಂದರವಾಗಿಯೂ ಇರುತ್ತೆ. ಹಾಗೆ ಮಾಡುವಾಗ ನಾವು ಹೆಚ್ಚೇ ಮಾತಾಡ್ಲಿ ಕಡಿಮೆನೇ ಮಾತಾಡ್ಲಿ ಇದ್ರಿಂದ ಬೇರೆಯವ್ರಿಗೆ ಪ್ರಯೋಜನ ಆಗುತ್ತೆ. ಅಷ್ಟೇ ಅಲ್ಲ, ಯೆಹೋವನಿಗೆ ನಮ್ಮ ಬಗ್ಗೆ ಹೆಮ್ಮೆ ಅನ್ಸುತ್ತೆ. (ಜ್ಞಾನೋ. 23:15; ಎಫೆ. 4:29) ನಮ್ಗೆ ಮಾತಾಡುವ ಉಡುಗೊರೆ ಕೊಟ್ಟಿರುವುದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳೋ ಅತ್ಯುತ್ತಮ ವಿಧಾನ ಇದೇ ಆಗಿದೆ!

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು13 1/15 ಪುಟ 19 ಪ್ಯಾರ 10

ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾ ಇರಿ

10 ಅದೇ ರೀತಿ ನಮ್ಮ ಅಂದಚೆಂದದ ಬಗ್ಗೆ ಕಾಳಜಿ ವಹಿಸಬೇಕು ನಿಜ. ಆದರೆ ವಯಸ್ಸಾಗುವಾಗ ನಮ್ಮಲ್ಲಿ ಕಾಣುವ ಗುರುತುಗಳನ್ನು ಮುಚ್ಚಲು ಎಲ್ಲಿಲ್ಲದ ಪ್ರಯತ್ನ ಮಾಡಬೇಕಂತಲ್ಲ. ಅಂಥ ಗುರುತುಗಳು ಪ್ರಬುದ್ಧತೆ, ಘನತೆ, ಆಂತರಿಕ ಸೌಂದರ್ಯದ ಸಂಕೇತ. “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು” ಎನ್ನುತ್ತದೆ ಬೈಬಲ್‌. (ಜ್ಞಾನೋ. 16:31) ಯೆಹೋವನು ನಮ್ಮನ್ನು ಈ ರೀತಿ ವೀಕ್ಷಿಸುವಾಗ ನಮಗೂ ನಮ್ಮ ಬಗ್ಗೆ ಅದೇ ದೃಷ್ಟಿಕೋನ ಇರಬೇಕು. (1 ಪೇತ್ರ 3:3, 4 ಓದಿ.) ಸುಂದರವಾಗಿ ಕಾಣಬೇಕೆಂದು ಅನಗತ್ಯವಾದ, ಅಪಾಯ ತಂದೊಡ್ಡಬಹುದಾದ ಔಷಧೋಪಚಾರಗಳನ್ನು ಅಥವಾ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದು ಎಷ್ಟು ಸರಿ? “ಯೆಹೋವನ ಆನಂದ” ನಮ್ಮಲ್ಲಿದ್ದರೆ ನಿಜ ಸೌಂದರ್ಯ ತನ್ನಿಂತಾನೇ ಬರುತ್ತದೆ. ನಮ್ಮ ವಯಸ್ಸು ಎಷ್ಟೇ ಇರಲಿ ಆರೋಗ್ಯ ಹೇಗೇ ಇರಲಿ ಆಂತರ್ಯದಲ್ಲಿರುವ ಆ ಸಂತೋಷ ನಮ್ಮ ಮುಖಕ್ಕೆ ಕಾಂತಿಕೊಡುತ್ತದೆ. (ನೆಹೆ. 8:10) ಸಂಪೂರ್ಣ ಆರೋಗ್ಯ, ಯೌವನ, ಸೌಂದರ್ಯ ಸಿಗುವುದು ಹೊಸ ಲೋಕದಲ್ಲಿ ಮಾತ್ರ. (ಯೋಬ 33:25; ಯೆಶಾ. 33:24) ಅಲ್ಲಿಯ ವರೆಗೆ ವಿವೇಕಯುತ ನಿರ್ಣಯಗಳನ್ನು ಮಾಡುತ್ತಾ ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯಿಡೋಣ. ಇದು ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಆನಂದ ಕಂಡುಕೊಳ್ಳಲು ಮತ್ತು ಯೆಹೋವನಿಗೆ ಆಪ್ತರಾಗಿ ಉಳಿಯಲು ಸಹಾಯ ಮಾಡುತ್ತದೆ.—1 ತಿಮೊ. 4:8.

ಜನವರಿ 8-14

ಬೈಬಲಿನಲ್ಲಿರುವ ನಿಧಿ | ಯೋಬ 34-35

ಒಳ್ಳೆಯವ್ರಿಗೆ ಯಾಕೆ ಕಷ್ಟ ಬರ್ತಿದೆ?

ಕಾವಲಿನಬುರುಜು (ಸಾರ್ವಜನಿಕ)19.1 ಪುಟ 7 ಪ್ಯಾರ 6

ದೇವರು ಎಂಥವನು?

ದೇವರು ಯಾವಾಗಲೂ ನ್ಯಾಯವಾಗಿರುವುದನ್ನೇ ಮಾಡುತ್ತಾನೆ. ‘ಕೆಟ್ಟದ್ದನ್ನು ಮಾಡಬೇಕು, ಅನ್ಯಾಯವನ್ನು ನಡಿಸಬೇಕೆಂಬ’ ಯೋಚನೆ ಸಹ ದೇವರಿಗೆ ಬರುವುದಿಲ್ಲ. (ಯೋಬ 34:10) ಆತನು ಕೊಡುವ ತೀರ್ಪು ನ್ಯಾಯವಾಗಿರುತ್ತದೆ. ಆದ್ದರಿಂದಲೇ ಯೆಹೋವನು ‘ನೀತಿಯಿಂದ ಆಳುತ್ತಾನೆ’ ಎಂದು ಕೀರ್ತನೆಗಾರನು ಹೇಳಿದ್ದಾನೆ. (ಕೀರ್ತನೆ 67:4) “ಯೆಹೋವನು . . . ಹೃದಯವನ್ನೇ ನೋಡುವವನಾಗಿದ್ದಾನೆ.” ಹಾಗಾಗಿ, ಆತನು ಜನರ ಕಪಟತನದಿಂದ ಮೋಸಹೋಗುವುದಿಲ್ಲ, ಯಾವಾಗಲೂ ಸತ್ಯವನ್ನು ತಿಳಿದುಕೊಂಡು ಸರಿಯಾದ ತೀರ್ಪು ನೀಡಬಲ್ಲನು. (1 ಸಮುವೇಲ 16:7) ಅಷ್ಟೇ ಅಲ್ಲ, ದೇವರು ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಅನ್ಯಾಯ, ಭ್ರಷ್ಟಾಚಾರವನ್ನು ಗಮನಿಸುತ್ತಿದ್ದಾನೆ ಮತ್ತು ‘ದುಷ್ಟರು ದೇಶದೊಳಗಿಂದ ಕೀಳಲ್ಪಡುವರು’ ಎಂದು ಮಾತುಕೊಟ್ಟಿದ್ದಾನೆ.—ಜ್ಞಾನೋಕ್ತಿ 2:22.

ಕಾವಲಿನಬುರುಜು17.04 ಪುಟ 10 ಪ್ಯಾರ 5

ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?

5 ದುಷ್ಟರಿಗೆ ಯೆಹೋವನು ಏನು ಮಾಡುತ್ತಾನೆ? ಯೆಹೋವನು ದುಷ್ಟರಿಗೆ ಬದಲಾಗಲು ಅವಕಾಶ ಕೊಟ್ಟಿದ್ದಾನೆ. (ಯೆಶಾ. 55:7) ಈ ಲೋಕ ಬೇಗನೆ ನಾಶವಾಗುತ್ತಾದರೂ ದೇವರು ಜನರಲ್ಲಿ ಒಬ್ಬೊಬ್ಬರ ಬಗ್ಗೆ ಕೊನೆಯ ತೀರ್ಪನ್ನು ಇನ್ನು ಹೊರಡಿಸಿಲ್ಲ. ಮಹಾ ಸಂಕಟ ಬರುವವರೆಗೂ ಬದಲಾಗದೆ ಕೆಟ್ಟದ್ದನ್ನು ಮಾಡುತ್ತಾ ಹೋಗುವವರಿಗೆ ಏನಾಗುತ್ತದೆ? ದುಷ್ಟರನ್ನು ಹೇಳಹೆಸರಿಲ್ಲದ ಹಾಗೆ ಮಾಡುತ್ತೇನೆ ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. (ಕೀರ್ತನೆ 37:10 ಓದಿ.) ಇಂದು ಎಷ್ಟೋ ಜನ ತಪ್ಪು ಮಾಡಿ ಅದನ್ನು ಮುಚ್ಚಿಹಾಕುತ್ತಾರೆ. ಹಾಗಾಗಿ ಅವರಿಗೆ ಶಿಕ್ಷೆ ಸಿಗುವುದಿಲ್ಲ. (ಯೋಬ 21:7, 9) ಆದರೆ ಯೆಹೋವನು “ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು ಅವನ ಹೆಜ್ಜೆಗಳನ್ನೆಲ್ಲಾ ನೋಡುವನು. ಅಧರ್ಮಿಗಳು ಅಡಗಿಕೊಳ್ಳುವದಕ್ಕೆ ಅನುಕೂಲವಾದ ಯಾವ ಕತ್ತಲೂ ಯಾವ ಗಾಢಾಂಧಕಾರವೂ ಇರುವದಿಲ್ಲ” ಎಂದು ಬೈಬಲ್‌ ನೆನಪು ಹುಟ್ಟಿಸುತ್ತದೆ. (ಯೋಬ 34:21, 22) ಹಾಗಾಗಿ ಯೆಹೋವನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ. ದುಷ್ಟರು ಮಾಡುತ್ತಿರುವ ಪ್ರತಿಯೊಂದು ಕೆಲಸ ಆತನಿಗೆ ಬಟ್ಟಬಯಲಾಗಿದೆ. ಅರ್ಮಗೆದೋನಿನ ನಂತರ ನಾವು ದುಷ್ಟರನ್ನು ಹುಡುಕಿದರೂ ಅವರು ಸಿಗುವುದಿಲ್ಲ. ಅವರು ನಾಶವಾಗಿರುತ್ತಾರೆ!—ಕೀರ್ತ. 37:12-15.

ಕಾವಲಿನಬುರುಜು21.05 ಪುಟ 7 ಪ್ಯಾರ 19-20

ಯೇಸುವಿನ ಶಿಷ್ಯರಾಗೋಕೆ ನಿಮ್ಮನ್ನ ಯಾವುದು ತಡೆಯುತ್ತಿದೆ?

19 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಇವತ್ತೂ ಹಾಗೇ ಇದ್ದಾರೆ. ನಾವು ರಾಜಕೀಯ ವಿಷಯಗಳಿಂದ ದೂರ ಇರುವಾಗ ಜನ ನಮ್ಮನ್ನ ದೂರ ಇಡ್ತಾರೆ. ನಾವು ವೋಟ್‌ ಹಾಕಬೇಕು ಅಂತ ಅವರು ಬಯಸ್ತಾರೆ. ಆದ್ರೆ ನಾವು ಮಾನವ ನಾಯಕನನ್ನ ಆಯ್ಕೆ ಮಾಡೋದಾದ್ರೆ ಯೆಹೋವ ದೇವರನ್ನ ತಿರಸ್ಕರಿಸಿದ ಹಾಗೆ ಆಗುತ್ತೆ. (1 ಸಮು. 8:4-7) ನಾವು ಸ್ಕೂಲ್‌ಗಳನ್ನ, ಆಸ್ಪತ್ರೆಗಳನ್ನ ಕಟ್ಟಿಸಬೇಕು ಮತ್ತು ಬೇರೆ ರೀತಿಯ ಸಮಾಜ ಸೇವೆ ಮಾಡಬೇಕು ಅಂತ ಜನ ಬಯಸ್ತಾರೆ. ಆದರೆ ನಾವು ಈಗಿರೋ ಸಮಸ್ಯೆಗಳನ್ನ ಬಗೆಹರಿಸೋ ಬದಲು ಸಿಹಿಸುದ್ದಿ ಸಾರೋ ಕೆಲಸಕ್ಕೆ ಮೊದಲ ಸ್ಥಾನ ಕೊಡ್ತೇವೆ. ಇದನ್ನ ನೋಡಿದಾಗ ಜನ ನಮ್ಮ ಸಂದೇಶವನ್ನ ಕೇಳಿಸಿಕೊಳ್ಳಲ್ಲ.

20 ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು? (ಮತ್ತಾಯ 7:21-23 ಓದಿ.) ಯೇಸು ನಮಗೆ ಕೊಟ್ಟಿರೋ ಕೆಲಸವನ್ನೇ ನಾವು ಮಾಡಬೇಕು. (ಮತ್ತಾ. 28:19, 20) ಅದನ್ನ ಬಿಟ್ಟು ರಾಜಕೀಯ ವಿಷಯದ ಕಡೆಗೆ ಮತ್ತು ಸಮಾಜದಲ್ಲಿರೋ ಸಮಸ್ಯೆಗಳನ್ನ ಬಗೆಹರಿಸೋದ್ರ ಕಡೆಗೆ ನಮ್ಮ ಗಮನ ಯಾವತ್ತೂ ಹೋಗಬಾರದು. ನಾವು ಜನರನ್ನ ಪ್ರೀತಿಸ್ತೇವೆ ನಿಜ. ಅವರ ಸಮಸ್ಯೆಗಳನ್ನ ನೋಡಿದಾಗ ನಮಗೂ ನೋವಾಗುತ್ತೆ. ಆದ್ರೆ ಅವರ ಸಮಸ್ಯೆಗಳಿಗೆ ದೇವರ ಆಳ್ವಿಕೆಯಿಂದ ಮಾತ್ರ ಪರಿಹಾರ ಸಿಗುತ್ತೆ ಮತ್ತು ಅವರು ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಂಡರೆ ಅವರಿಗೆ ಒಳ್ಳೇದಾಗುತ್ತೆ ಅಂತ ನಮಗೆ ಗೊತ್ತು. ಅದಕ್ಕೇ ನಾವು ಆ ಸಹಾಯ ಮಾಡ್ತೀವಿ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು17.04 ಪುಟ 29 ಪ್ಯಾರ 3

ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ!

3 ಎಲೀಹು ಎಂಬ ಯುವಕನು ಈ ಮೂವರು ಪುರುಷರು ಮತ್ತು ಯೋಬನ ಮಧ್ಯೆ ನಡೆಯುತ್ತಿದ್ದ ಸಂಭಾಷಣೆಗೆ ಕಿವಿಗೊಡುತ್ತಾ ಇದ್ದನು. ಅವರ ಸಂಭಾಷಣೆ ಮುಗಿದ ನಂತರ ಯೆಹೋವನ ಬಗ್ಗೆ ಎಲೀಹು ಯೋಬನಿಗೆ ಈ ಪ್ರಶ್ನೆಗಳನ್ನು ಕೇಳಿದನು: “ನೀನು ನೀತಿವಂತನಾಗಿದ್ದರೆ ಆತನಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಆತನಿಗೆ ಲಾಭವೇನು?” (ಯೋಬ 35:7) ಎಲೀಹು ಸಹ ನಾವು ದೇವರ ಸೇವೆಯಲ್ಲಿ ಪಡುವ ಪ್ರಯಾಸ ವ್ಯರ್ಥವೆಂದು ಹೇಳುತ್ತಿದ್ದಾನಾ? ಇಲ್ಲ. ಹಾಗಿರುತ್ತಿದ್ದರೆ ಆ ಮೂವರನ್ನು ತಿದ್ದಿದಂತೆ ಯೆಹೋವನು ಎಲೀಹುವನ್ನು ತಿದ್ದುತ್ತಿದ್ದನು. ಅವನು ಹೇಳುತ್ತಿದ್ದ ವಿಷಯವೇ ಬೇರೆ. ಅವನು ಏನು ಹೇಳುತ್ತಿದ್ದಾನೆಂದರೆ, ಯೆಹೋವನಿಗೆ ನಮ್ಮ ಆರಾಧನೆಯ ಅಗತ್ಯವಿಲ್ಲ. ನಾವು ಮಾಡುವ ಯಾವುದೇ ವಿಷಯದಿಂದ ಆತನು ಹೆಚ್ಚು ಶ್ರೀಮಂತನು, ಬಲಿಷ್ಠನು ಆಗುವುದಿಲ್ಲ. ಆತನು ಸಂಪೂರ್ಣನು, ಆತನಿಗೆ ಯಾವುದರ ಕೊರತೆಯೂ ಇಲ್ಲ. ನಿಜವೇನೆಂದರೆ, ನಮಗೆ ಒಳ್ಳೇ ಗುಣಗಳನ್ನು, ಸಾಮರ್ಥ್ಯಗಳನ್ನು ಕೊಡುವವನು ಆತನೇ. ನಾವದನ್ನು ಹೇಗೆ ಬಳಸುತ್ತೇವೆಂದು ಆತನು ಗಮನಿಸುತ್ತಾನೆ.

ಜನವರಿ 15-21

ಬೈಬಲಿನಲ್ಲಿರುವ ನಿಧಿ | ಯೋಬ 36-37

ಶಾಶ್ವತ ಜೀವ ಸಿಗುತ್ತೆ ಅಂತ ನೀವ್ಯಾಕೆ ನಂಬಬಹುದು?

ಕಾವಲಿನಬುರುಜು (ಸಾರ್ವಜನಿಕ)16.1 ಪುಟ 13 ಪ್ಯಾರ 1-2

ದೇವರ ಕುರಿತ ಸತ್ಯ

ದೇವರ ಅಸ್ತಿತ್ವ: ದೇವರು ‘ಯುಗಯುಗಾಂತರಗಳಿಂದಲೂ’ ಅಸ್ತಿತ್ವದಲ್ಲಿದ್ದಾನೆಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 90:2) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ದೇವರಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅಸಂಖ್ಯಾತ ವರ್ಷಗಳಿಂದ ದೇವರು ಅಸ್ತಿತ್ವದಲ್ಲಿರುವುದರಿಂದ ಮನುಷ್ಯರು ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.—ಯೋಬ 36:26.

ಇದರಿಂದ ನಮಗಾಗುವ ಪ್ರಯೋಜನ: ತನ್ನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವವರಿಗೆಲ್ಲಾ ಸದಾಕಾಲ ಜೀವಿಸುವ ಆಶೀರ್ವಾದವನ್ನು ಯೆಹೋವ ದೇವರು ಕೊಡುತ್ತಾನೆ. (ಯೋಹಾನ 17:3) ನಮಗೆ ಸದಾಕಾಲ ಜೀವಿಸುವ ಆಶೀರ್ವಾದ ಕೊಟ್ಟು, ಆತನೇ ಶಾಶ್ವತವಾಗಿ ಜೀವಿಸುವುದಿಲ್ಲ ಅಂದರೆ ಆತನ ಮಾತಲ್ಲಿ ನಂಬಿಕೆ ಇಡಲು ಆಗುತ್ತಾ? ಇಲ್ಲ ತಾನೇ. ದೇವರು ‘ನಿತ್ಯತೆಯ ಅರಸನಾಗಿರುವುದರಿಂದ’ ನಾವು ಸದಾಕಾಲ ಜೀವಿಸುವಂತೆ ಮಾಡಬಲ್ಲನು.—1 ತಿಮೊಥೆಯ 1:17.

ಕಾವಲಿನಬುರುಜು20.05 ಪುಟ 22 ಪ್ಯಾರ 6

ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ?

6 ಭೂಮಿ ಸೂರ್ಯನಿಂದ ಸರಿಯಾದ ದೂರದಲ್ಲಿ ಇರೋದ್ರಿಂದ ನೀರನ್ನು ದ್ರವದ ರೂಪದಲ್ಲಿಡುವಂಥ ತಾಪಮಾನ ಅದಕ್ಕಿದೆ. ಒಂದುವೇಳೆ ಭೂಮಿ ಸೂರ್ಯನಿಗೆ ಈಗಿರೋದಕ್ಕಿಂತ ಸ್ವಲ್ಪ ಹತ್ತಿರ ಇದ್ದಿದ್ರೂ ನೀರೆಲ್ಲ ಆವಿಯಾಗ್ತಿಗ್ತು ಮತ್ತು ತಾಪಮಾನ ಏರುತ್ತಿತ್ತು. ಯಾವ ಜೀವಿಗಳು ಉಳಿಯುತ್ತಿರಲಿಲ್ಲ. ಒಂದುವೇಳೆ ಭೂಮಿ ಸೂರ್ಯನಿಗೆ ಈಗಿರೋದಕ್ಕಿಂತ ಸ್ವಲ್ಪ ದೂರ ಇದ್ದಿದ್ರೂ ನೀರೆಲ್ಲ ಹಿಮಗಟ್ಟಿ ಹೋಗ್ತಿತ್ತು ಮತ್ತು ಅದೊಂದು ದೊಡ್ಡ ಹಿಮದ ಚೆಂಡಿನ ತರ ಇರ್ತಿತ್ತು. ಯೆಹೋವನು ಭೂಮಿಯನ್ನು ಸೂರ್ಯನಿಂದ ಸರಿಯಾದ ದೂರದಲ್ಲಿ ಇಟ್ಟಿರೋದ್ರಿಂದ ಭೂಮಿಯಲ್ಲಿರೋ ಜಲಚಕ್ರ ಜೀವಿಗಳನ್ನು ಪೋಷಿಸುತ್ತಿದೆ. ಸೂರ್ಯ ಸಮುದ್ರದಲ್ಲಿರುವ ಮತ್ತು ಭೂಮಿ ಮೇಲಿರೋ ನೀರನ್ನು ಬಿಸಿ ಮಾಡುತ್ತೆ, ನಂತರ ಆ ನೀರು ಆವಿಯಾಗಿ ಮೋಡಗಳಾಗುತ್ತವೆ. ಪ್ರತಿವರ್ಷ ಸೂರ್ಯ, ಭೂಮಿಯಲ್ಲಿರೋ ಎಲ್ಲಾ ಸರೋವರಗಳ ನೀರಿಗಿಂತ ಹೆಚ್ಚಿನ ನೀರನ್ನು ಆವಿ ಮಾಡುತ್ತೆ. ಆವಿಯಾದ ನೀರು ವಾತಾವರಣದಲ್ಲಿ ಸುಮಾರು ಹತ್ತು ದಿನಗಳಿದ್ದು ಆಮೇಲೆ ಮಳೆ ರೂಪದಲ್ಲೋ ಹಿಮದ ರೂಪದಲ್ಲೋ ಭೂಮಿಗೆ ಬೀಳುತ್ತೆ. ಈ ನೀರು ಕೊನೆಗೆ ಸಮುದ್ರಕ್ಕೋ ಅಥ್ವಾ ಜಲಾಶಯಗಳಿಗೋ ಹರಿದು ಹೋಗುತ್ತೆ. ಈ ಜಲಚಕ್ರದ ಕ್ರಿಯೆ ಮುಂದುವರಿಯುತ್ತೆ. ಯೆಹೋವನು ವಿನ್ಯಾಸಿಸಿರೋ ಈ ಜಲಚಕ್ರದಿಂದ ಭೂಮಿ ಮೇಲೆ ಯಾವಾಗಲೂ ನೀರು ಇರುತ್ತೆ. ಇದ್ರಿಂದ ಆತನಿಗೆ ವಿವೇಕ ಇದೆ, ಶಕ್ತಿ ಇದೆ ಅಂತ ಗೊತ್ತಾಗುತ್ತೆ.—ಯೋಬ 36:27, 28; ಪ್ರಸಂ. 1:7.

ಕಾವಲಿನಬುರುಜು22.10 ಪುಟ 28 ಪ್ಯಾರ 16

ನಿಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡಿದುಕೊಳ್ಳಿ

16 ಶಾಶ್ವತ ಜೀವದ ನಿರೀಕ್ಷೆ ಯೆಹೋವ ದೇವರು ನಮಗೆ ಕೊಟ್ಟಿರೋ ಉಡುಗೊರೆ. ಅದಕ್ಕೆ ನಾವು ಬೆಲೆಕಟ್ಟಕ್ಕಾಗಲ್ಲ. ಏನೇ ಆದ್ರೂ ಈ ನಿರೀಕ್ಷೆ ಸುಳ್ಳಾಗಲ್ಲ. ಇದು ಲಂಗರದ ತರ ಇದೆ. ನಮಗೆ ಕಷ್ಟ ಬರಲಿ, ಹಿಂಸೆ ಬರಲಿ, ಸಾವೇ ನಮ್ಮ ಮುಂದೆ ಬಂದ್ರೂ ನಾವು ಧೈರ್ಯವಾಗಿ ಇರುತ್ತೀವಿ. ಈ ನಿರೀಕ್ಷೆ ಶಿರಸ್ತ್ರಾಣದ ತರ ಇದೆ. ಅದು ನಾವು ಕೆಟ್ಟದನ್ನ ಯೋಚನೆ ಮಾಡದೆ ಯಾವಾಗಲೂ ಒಳ್ಳೇದನ್ನೇ ಯೋಚನೆ ಮಾಡೋಕೆ ಸಹಾಯ ಮಾಡುತ್ತೆ. ಈ ನಿರೀಕ್ಷೆ ನಮ್ಮನ್ನ ಆತನ ಹತ್ರಕ್ಕೆ ಸೆಳೆಯುತ್ತೆ ಮತ್ತು ಆತನು ನಮ್ಮನ್ನೆಷ್ಟು ಪ್ರೀತಿಸ್ತಾನೆ ಅಂತ ತೋರಿಸಿಕೊಡುತ್ತೆ. ಹಾಗಾಗಿ ನಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಇಟ್ಟುಕೊಳ್ಳೋಣ, ಬಲವಾಗಿ ಇಟ್ಟುಕೊಳ್ಳೋಣ.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 492

ಸುದ್ದಿ-ಸಮಾಚಾರ

ಬೈಬಲ್‌ ಕಾಲದಲ್ಲಿ ಜನ್ರಿಗೆ ಸುದ್ದಿ-ಸಮಾಚಾರಗಳು ಬೇರೆಬೇರೆ ರೀತಿಯಲ್ಲಿ ಸಿಗ್ತಿತ್ತು. ಅವರಿರೋ ಊರಲ್ಲಿ ಏನಾಗ್ತಿತ್ತು ಮತ್ತು ಬೇರೆ ಊರುಗಳಲ್ಲಿ ಏನಾಗ್ತಿತ್ತು ಅಂತ ಜನ್ರು ಒಬ್ರಿಂದ ಒಬ್ರಿಗೆ ಹೇಳಿ ಸುದ್ದಿ ಮುಟ್ಟಿಸ್ತಿದ್ರು. (2ಸಮು 3:17, 19; ಯೋಬ 37:20) ಕೆಲವರು ಕುದುರೆ ಅಥವಾ ಎತ್ತಿನ ಗಾಡಿಗಳಲ್ಲಿ ಬೇರೆ ಊರಿಗೆ ಹೋಗುವಾಗ ಊಟಕ್ಕೆ, ನೀರಿಗೆ ಮತ್ತು ಬೇರೆ ವಿಷ್ಯಗಳಿಗಾಗಿ ಕೆಲವೊಂದು ಊರುಗಳಲ್ಲಿ ಗಾಡಿಗಳನ್ನ ನಿಲ್ಲಿಸ್ತಿದ್ರು. ಆಗ ಅವರು ಸುದ್ದಿ-ಸಮಾಚಾರಗಳನ್ನ ಆ ಊರಲ್ಲಿದ್ದ ಜನ್ರಿಗೆ ಹೇಳ್ತಿದ್ರು. ಆ ಕಾಲದಲ್ಲಿ ಪ್ಯಾಲೆಸ್‌ಟೈನ್‌ಗೆ ತುಂಬ ಪ್ರಯಾಣಿಕರು ಗಾಡಿಗಳಲ್ಲಿ ಬಂದು ಹೋಗ್ತಿದ್ರು. ಇಲ್ಲಿಗೆ ಅವರು ಏಷ್ಯಾ, ಆಫ್ರಿಕಾ ಮತ್ತು ಯೂರೋಪನ್ನ ದಾಟಿ ಬರ್ತಿದ್ರು. ಹಾಗಾಗಿ ಇವರು ಬೇರೆ ಊರುಗಳಲ್ಲಿದ್ದ ಸುದ್ದಿಯನ್ನ ಜನ್ರಿಗೆ ಮುಟ್ಟಿಸ್ತಿದ್ರು. ಅಷ್ಟೇ ಅಲ್ಲ ಮಾರುಕಟ್ಟೆಗಳಲ್ಲಿ ಜನ್ರು ಅವರ ದೇಶದ ಮತ್ತು ಬೇರೆ ದೇಶಗಳ ಸುದ್ದಿ-ಸಮಾಚಾರಗಳನ್ನ ಒಬ್ರಿಗೊಬ್ರು ಹೇಳ್ತಿದ್ರು.

ಜನವರಿ 22-28

ಬೈಬಲಿನಲ್ಲಿರುವ ನಿಧಿ | ಯೋಬ 38-39

ಸೃಷ್ಟಿ ನೋಡೋಕೆ ಸಮಯ ಮಾಡ್ಕೊಳ್ತಿದ್ದೀರಾ?

ಕಾವಲಿನಬುರುಜು21.08 ಪುಟ 9 ಪ್ಯಾರ 7

ಯೆಹೋವನ ಸಮಯಕ್ಕಾಗಿ ಕಾಯುತ್ತೀರಾ?

7 ಯೆಹೋವ ದೇವರು ಭೂಮಿನ ಸೃಷ್ಟಿಮಾಡುವಾಗ ಅದರ ‘ಉದ್ದ ಅಗಲ ಅಳೆದ್ರು, ಆಧಾರ ಕಂಬಗಳನ್ನ ಇಟ್ರು, ಮೂಲೆಗಲ್ಲು ಇಟ್ರು’ ಅಂತ ಬೈಬಲ್‌ ಹೇಳುತ್ತೆ. (ಯೋಬ 38:5, 6) ಎಲ್ಲಾ ಕೆಲಸ ಮುಗಿಸಿದ ಮೇಲೆ ಅದು ಹೇಗಿದೆ ಅಂತ ನೋಡೋಕೆ ಸಮಯನೂ ಮಾಡ್ಕೊಂಡ್ರು. (ಆದಿ. 1:10, 12) ದೇವರು ಭೂಮಿಲಿ ಒಂದೊಂದೇ ಕೆಲಸ ಮಾಡ್ತಾ ಇರೋದನ್ನ ನೋಡಿದಾಗ ದೇವದೂತರು ತುಂಬ ‘ಖುಷಿಯಿಂದ ಜೈಕಾರ ಹಾಕಿದ್ರು.’ (ಯೋಬ 38:7) ಯೆಹೋವ ದೇವರಿಂದ ನಾವೇನು ಕಲಿಬಹುದು? ಯೆಹೋವ ದೇವರು ಭೂಮಿ, ನಕ್ಷತ್ರ, ಪ್ರಾಣಿ, ಪಕ್ಷಿ ಎಲ್ಲವನ್ನ ಸೃಷ್ಟಿಮಾಡೋಕೆ ಸಾವಿರಾರು ವರ್ಷ ತಗೊಂಡ್ರು. ಇದನ್ನೆಲ್ಲಾ ತುಂಬ ಯೋಚ್ನೆ ಮಾಡಿ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ನೋಡಿದಾಗ ‘ಅವು ತುಂಬ ಚೆನ್ನಾಗಿತ್ತು’ ಅಂತ ಹೇಳಿದ್ರು.—ಆದಿ. 1:31.

ಕಾವಲಿನಬುರುಜು20.08 ಪುಟ 14 ಪ್ಯಾರ 2

ಪುನರುತ್ಥಾನ—ದೇವರ ಪ್ರೀತಿ ವಿವೇಕ ತಾಳ್ಮೆಯ ಪುರಾವೆ

2 ಯೆಹೋವ ಮೊದ್ಲು ಯೇಸುನ ಸೃಷ್ಟಿ ಮಾಡಿದ. ಆಮೇಲೆ ‘ಯೇಸು ಮೂಲಕ ಇತರ ಎಲ್ಲವನ್ನು ಸೃಷ್ಟಿ ಮಾಡಿದ.’ ಅದ್ರಲ್ಲಿ ಕೋಟಿಗಟ್ಟಲೆ ದೇವದೂತರೂ ಸೇರಿದ್ದಾರೆ. (ಕೊಲೊ. 1:16) ಯೆಹೋವನ ಜೊತೆ ಕೆಲ್ಸ ಮಾಡಕ್ಕೆ ಯೇಸುಗೆ ತುಂಬ ಖುಷಿಯಾಗ್ತಿತ್ತು. (ಜ್ಞಾನೋ. 8:30) ಯೆಹೋವ ಮತ್ತು ಯೇಸು ಭೂಮಿ, ಆಕಾಶವನ್ನು ಸೃಷ್ಟಿ ಮಾಡ್ದಾಗ ಅದನ್ನ ನೋಡಿ ದೇವದೂತರೂ ಆನಂದಿಸಿದ್ರು. ಭೂಮಿ ಸೃಷ್ಟಿಯಾದಾಗ ದೇವದೂತರು “ಆನಂದಘೋಷ” ಮಾಡಿದ್ರು ಅಂತ ಬೈಬಲ್‌ ಹೇಳುತ್ತೆ. ಹಾಗಂದ ಮೇಲೆ ವಿಶ್ವದಲ್ಲಿರೋ ಪ್ರತಿಯೊಂದನ್ನು ಸೃಷ್ಟಿ ಮಾಡ್ದಾಗ ಅದ್ರಲ್ಲೂ ವಿಶೇಷವಾಗಿ ಮನುಷ್ಯರನ್ನು ಸೃಷ್ಟಿ ಮಾಡ್ದಾಗ ದೇವದೂತರು ಖಂಡಿತ ಯೆಹೋವನನ್ನ ಸ್ತುತಿಸಿರ್ತಾರೆ. (ಯೋಬ 38:6; ಜ್ಞಾನೋ. 8:31) ಯೆಹೋವ ದೇವ್ರು ಸೃಷ್ಟಿಸಿದ್ದೆಲ್ಲವೂ ಆತನ ಪ್ರೀತಿ, ವಿವೇಕವನ್ನು ಸಾರಿಹೇಳ್ತಿದ್ವು.—ಕೀರ್ತ. 104:24; ರೋಮ. 1:20.

ಕಾವಲಿನಬುರುಜು23.03 ಪುಟ 17 ಪ್ಯಾರ 8

ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ

8 ನಾವು ಯೆಹೋವನನ್ನು ಪೂರ್ತಿಯಾಗಿ ನಂಬಬಹುದು. ತನ್ನ ಮೇಲೆ ಜಾಸ್ತಿ ನಂಬಿಕೆ ಬೆಳೆಸ್ಕೊಳ್ಳೋಕೆ ಯೆಹೋವ ಯೋಬನಿಗೆ ಸಹಾಯ ಮಾಡಿದನು. (ಯೋಬ 32:2; 40:6-8) ಅದಕ್ಕೆ ಯೆಹೋವ ಅವನಿಗೆ ಸೃಷ್ಟಿ ಬಗ್ಗೆ ಅಂದ್ರೆ ನಕ್ಷತ್ರ, ಮೋಡಗಳು ಮತ್ತು ಮಿಂಚಿನ ಬಗ್ಗೆ ಹೇಳಿದನು. ಅಷ್ಟೇ ಅಲ್ಲ ಕಾಡುಕೋಣ, ಕುದುರೆ ಮತ್ತು ಇನ್ನೂ ಕೆಲವು ಪ್ರಾಣಿಗಳ ಬಗ್ಗೆ ಮಾತಾಡಿದನು. (ಯೋಬ 38:32-35; 39:9, 19, 20) ಇದನ್ನೆಲ್ಲ ಕೇಳಿದಾಗ ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಮಾತ್ರ ಅಲ್ಲ, ಎಷ್ಟು ಪ್ರೀತಿ ಇದೆ, ವಿವೇಕ ಇದೆ ಅಂತನೂ ಯೋಬ ಅರ್ಥ ಮಾಡ್ಕೊಂಡ. ಯೆಹೋವನ ಮೇಲೆ ಅವನಿಗೆ ಮುಂಚೆಗಿಂತ ನಂಬಿಕೆ ಜಾಸ್ತಿ ಆಯ್ತು. (ಯೋಬ 42:1-6) ಅದೇ ತರ ನಾವೂ ಸೃಷ್ಟಿ ಬಗ್ಗೆ ಓದಿದಾಗ ಯೆಹೋವನಿಗೆ ಇರೋಷ್ಟು ವಿವೇಕ ಯಾರಿಗೂ ಇಲ್ಲ, ನಮ್ಮೆಲ್ಲರಿಗಿಂತ ಆತನು ಶಕ್ತಿಶಾಲಿ ಅಂತ ಅರ್ಥ ಮಾಡ್ಕೊಳ್ತೀವಿ. ನಮ್ಮ ಕಷ್ಟಗಳನ್ನೆಲ್ಲ ಆತನು ಬೇಗ ಪರಿಹಾರ ಮಾಡ್ತಾನೆ ಅನ್ನೋ ನಂಬಿಕೆನೂ ಇದ್ರಿಂದ ಜಾಸ್ತಿಯಾಗುತ್ತೆ.

ಬೈಬಲಿನಲ್ಲಿರುವ ರತ್ನಗಳು

it-2-E ಪುಟ 222

ನಿಯಮ ಕೊಡುವವನು

ಯೆಹೋವ ಒಬ್ಬ ಶಾಸನಕಾರ. ಇಡೀ ವಿಶ್ವಕ್ಕೇ ನಿಯಮ ಕೊಡುವವನು ಯೆಹೋವ ಒಬ್ಬನೇ. ಜೀವಿಗಳಿಗೂ, ಜೀವ ಇಲ್ಲದೇ ಇರೋ ವಸ್ತುಗಳಿಗೂ ನಿಯಮ ಕೊಡೋಕೆ ಆತನಿಗೆ ಮಾತ್ರ ಆಗೋದು. (ಯೋಬ 38:4-38; ಕೀರ್ತ 104:5-19; ಯೋಬ 39:1-30) ಮನುಷ್ಯರನ್ನ ಸೃಷ್ಟಿ ಮಾಡಿರೋದು ಯೆಹೋವನೇ ಆಗಿರೋದ್ರಿಂದ ಆತನು ಕೊಡೋ ಎಲ್ಲ ನಿಯಮವನ್ನ ನಾವು ಪಾಲಿಸಬೇಕು. (ರೋಮ 12:1; 1ಕೊರಿಂ 2:14-16) ಸ್ವರ್ಗದಲ್ಲಿರೋ ದೇವದೂತರಿಗೂ ಯೆಹೋವ ನಿಯಮ ಕೊಟ್ಟಿದ್ದಾನೆ.—ಕೀರ್ತ 103:20; 2ಪೇತ್ರ 2:4, 11.

ಯೆಹೋವ ಇಟ್ಟಿರೋ ನಿಯಮವನ್ನ ನಮಗೆ ಮುರಿಯೋಕೆ ಆಗಲ್ಲ. (ಯೆರೆ 33:20, 21) ಆತನು ಈ ನಿಸರ್ಗದಲ್ಲಿ ಇಟ್ಟಿರೋ ನಿಯಮಗಳು ಯಾವತ್ತೂ ಬದಲಾಗಲ್ಲ. ಅದಕ್ಕೇ ವಿಜ್ಞಾನಿಗಳಿಗೆ ಚಂದ್ರ, ಗ್ರಹಗಳು ಮತ್ತು ಆಕಾಶಕಾಯಗಳು ಪ್ರತಿ ಸೆಕೆಂಡಿಗೂ ಹೇಗೆ ಕೆಲಸ ಮಾಡುತ್ತವೆ ಅಂತ ನಿಖರವಾಗಿ ಕಂಡು ಹಿಡಿಯೋಕೆ ಆಗ್ತಿದೆ. ಒಂದುವೇಳೆ ಯೆಹೋವ ನಿಸರ್ಗದಲ್ಲಿ ಇಟ್ಟಿರೋ ಈ ನಿಯಮಗಳಿಗೆ ವಿರುದ್ಧವಾಗಿ ಯಾರಾದ್ರೂ ಹೋದ್ರೆ ಹಾನಿಯಾಗೋದಂತೂ ಗ್ಯಾರಂಟಿ. ಅದೇ ತರ ನೈತಿಕತೆ ಬಗ್ಗೆ ಯೆಹೋವ ಇಟ್ಟಿರೋ ನಿಯಮಗಳು ಬದಲಾಗಲ್ಲ, ಅದನ್ನ ನಾವು ಕಡೆಗಣಿಸೋಕೂ ಆಗಲ್ಲ. ನಾವು ಈ ನಿಯಮಗಳನ್ನ ಮೀರಿ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ನಮಗೆ ತಕ್ಷಣ ಶಿಕ್ಷೆ ಸಿಗದೆ ಇರಬಹುದು. ಆದ್ರೆ “ಯಾರೂ ದೇವರಿಗೆ ಮೋಸ ಮಾಡಕ್ಕಾಗಲ್ಲ. ಯಾಕಂದ್ರೆ ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.”—ಗಲಾ. 6:7; 1 ತಿಮೊ. 5:24.

ಜನವರಿ 29-ಬ್ರವರಿ 4

ಬೈಬಲಿನಲ್ಲಿರುವ ನಿಧಿ | ಯೋಬ 40-42

ಯೋಬನಿಂದ ನಾವೇನು ಕಲಿಬಹುದು?

ಕಾವಲಿನಬುರುಜು10 10/15 ಪುಟ 3-4 ಪ್ಯಾರ 4-6

‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’

4 ನಾವು ಯೆಹೋವನ ಕಾರ್ಯಗಳನ್ನು ಧ್ಯಾನಿಸುವಾಗ ಆತನನ್ನು ಮಾನವ ಮಟ್ಟಗಳಿಗನುಸಾರ ತೀರ್ಮಾನಿಸುವ ತಪ್ಪನ್ನು ಮಾಡಬಾರದು. ಈ ಪ್ರವೃತ್ತಿಯನ್ನು ಕೀರ್ತನೆ 50:21ರಲ್ಲಿರುವ ಯೆಹೋವನ ಮಾತುಗಳು ಸೂಚಿಸುತ್ತವೆ. “ನೀವು . . . ದೇವರೂ ನಮ್ಮಂಥವನೇ ಎಂದು ನೆನಸಿಕೊಂಡಿರಿ” ಎಂದು ಅಲ್ಲಿ ಹೇಳಲಾಗಿದೆ. ಇದು 175ಕ್ಕೂ ಹೆಚ್ಚು ವರ್ಷಗಳ ಹಿಂದೆ ಒಬ್ಬ ಬೈಬಲ್‌ ವಿದ್ವಾಂಸನು ಹೇಳಿದ ಮಾತುಗಳಂತೆಯೇ ಇದೆ. ಅವನು ಹೇಳಿದ್ದು: “ಮನುಷ್ಯರಿಗೆ ದೇವರನ್ನು ತಮ್ಮ ಮಟ್ಟಗಳಿಗನುಸಾರ ತೀರ್ಪುಮಾಡುವ ಪ್ರವೃತ್ತಿಯಿದೆ. ಮನುಷ್ಯರು ಅನುಸರಿಸುವಂಥ ನಿಯಮಗಳನ್ನೇ ದೇವರು ಸಹ ಬಳಸಬೇಕೆಂದು ಅವರು ನೆನಸುತ್ತಾರೆ.”

5 ನಾವು ಯೆಹೋವನನ್ನು ನಮ್ಮ ಸ್ವಂತ ಮಟ್ಟಗಳು ಹಾಗೂ ಇಷ್ಟಗಳಿಗೆ ಸರಿಯಾಗಿ ಕಲ್ಪಿಸದಿರುವಂತೆ ಜಾಗ್ರತೆವಹಿಸಬೇಕು. ಅದೇಕೆ ಪ್ರಾಮುಖ್ಯ? ಏಕೆಂದರೆ ನಾವು ಬೈಬಲನ್ನು ಅಧ್ಯಯನ ಮಾಡುವಾಗ, ಯೆಹೋವನ ಕೆಲವೊಂದು ಕ್ರಿಯೆಗಳು ಅಷ್ಟು ಸರಿಯಲ್ಲವೆಂದು ನಮ್ಮ ಸೀಮಿತ ಹಾಗೂ ಅಪರಿಪೂರ್ಣ ದೃಷ್ಟಿಕೋನದಿಂದ ತೀರ್ಮಾನಿಸೇವು. ಪ್ರಾಚೀನ ಇಸ್ರಾಯೇಲ್ಯರು ಇದೇ ರೀತಿಯ ಯೋಚನೆಗೆ ಬಲಿಬಿದ್ದು ಯೆಹೋವನು ಅವರೊಂದಿಗೆ ವ್ಯವಹರಿಸಿದ ರೀತಿಯ ಕುರಿತು ತಪ್ಪಾದ ತೀರ್ಮಾನಕ್ಕೆ ಬಂದರು. ಯೆಹೋವನು ಅವರಿಗೆ ಏನು ಹೇಳಿದನೆಂದು ಪರಿಗಣಿಸಿ: “ನೀವು—[ಯೆಹೋವನ] ಕ್ರಮವು ಸಮವಲ್ಲ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್‌ ವಂಶದವರೇ, ನನ್ನ ಕ್ರಮವು ಸಮವಲ್ಲವೋ? ನಿಮ್ಮ ಕ್ರಮವೇ ಸಮವಲ್ಲವಷ್ಟೆ.”—ಯೆಹೆ. 18:25.

6 ಯೆಹೋವನನ್ನು ನಮ್ಮ ಸ್ವಂತ ಮಟ್ಟಗಳಿಗನುಸಾರ ತೀರ್ಪುಮಾಡುವ ಪಾಶಕ್ಕೆ ಬೀಳದಂತೆ ಯಾವುದು ಸಹಾಯಮಾಡುತ್ತದೆ? ನಮ್ಮ ದೃಷ್ಟಿಕೋನ ಇತಿಮಿತಿಯುಳ್ಳದ್ದಾಗಿದೆ ಹಾಗೂ ಕೆಲವೊಮ್ಮೆ ಗಂಭೀರವಾಗಿ ತಪ್ಪಾಗಿದೆ ಎಂದು ಮನಗಾಣುವುದೇ. ಈ ಪಾಠವನ್ನು ಯೋಬನು ಕಲಿಯಬೇಕಾಯಿತು. ಅವನು ಸಂಕಷ್ಟಗಳಿಂದ ನರಳುತ್ತಿದ್ದಾಗ ಹತಾಶೆಗೊಂಡು ಸ್ವಾರ್ಥಪರತೆಯಿಂದ ತನ್ನ ಕುರಿತೇ ಚಿಂತಿಸಿದನು. ಅವನು ಹೆಚ್ಚು ಮಹತ್ವದ ವಿಷಯಗಳನ್ನು ಮರೆತುಬಿಟ್ಟನು. ಆದರೆ ಅವನ ಸಂಕುಚಿತ ದೃಷ್ಟಿಕೋನವನ್ನು ವಿಶಾಲಗೊಳಿಸಲು ಯೆಹೋವನು ಪ್ರೀತಿಯಿಂದ ಸಹಾಯ ನೀಡಿದನು. ಅವನಿಗೆ 70ಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ಅವನ ತಿಳಿವಳಿಕೆಗಿರುವ ಇತಿಮಿತಿಯನ್ನು ಒತ್ತಿಹೇಳಿದನು. ಯಾಕೆಂದರೆ ಆ ಪ್ರಶ್ನೆಗಳಲ್ಲಿ ಒಂದನ್ನೂ ಅವನು ಉತ್ತರಿಸಶಕ್ತನಾಗಲಿಲ್ಲ. ಆಗ ಯೋಬನು ದೀನತೆಯಿಂದ ಪ್ರತಿಕ್ರಿಯಿಸಿ ತನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಂಡನು.—ಯೋಬ 42:1-6 ಓದಿ.

ಕಾವಲಿನಬುರುಜು17.06 ಪುಟ 25 ಪ್ಯಾರ 12

ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ

12 ಯೋಬನಿಗೆ ಇಷ್ಟೆಲ್ಲ ಕಷ್ಟ ಬಂದಿರುವಾಗ ಯೆಹೋವನು ಅವನ ಜೊತೆ ಹಾಗೆ ಮಾತಾಡಿದ್ದು ಸ್ವಲ್ಪ ಕಠೋರ ಆಗಿತ್ತಾ? ಇಲ್ಲ. ದೇವರು ಕಠೋರನಾಗಿರಲಿಲ್ಲ, ಯೋಬನಿಗೂ ಹಾಗನಿಸಲಿಲ್ಲ. ಯೆಹೋವನು ಕೊಟ್ಟ ಬುದ್ಧಿವಾದ ಅವನಿಗೆ ಅರ್ಥವಾಯಿತು. ಅದಕ್ಕೆ ಕೃತಜ್ಞನಾಗಿದ್ದನು. ಹೀಗೂ ಹೇಳಿದನು: “[ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.” (ಯೋಬ 42:1-6) ಯೋಬ ತನ್ನ ಯೋಚನಾರೀತಿಯನ್ನು ತಿದ್ದಿಕೊಳ್ಳಲು ಎಲೀಹು ಎಂಬ ಯುವಕನು ಕೂಡ ಈ ಹಿಂದೆ ಸಹಾಯಮಾಡಿದ್ದನು. (ಯೋಬ 32:5-10) ಯೆಹೋವನು ಪ್ರೀತಿಯಿಂದ ಕೊಟ್ಟ ಬುದ್ಧಿವಾದಕ್ಕೆ ಯೋಬನು ಕಿವಿಗೊಟ್ಟು ತನ್ನ ದೃಷ್ಟಿಕೋನವನ್ನು ಬದಲಾಯಿಸಿದ ನಂತರ, ಅವನ ನಂಬಿಗಸ್ತಿಕೆಯನ್ನು ಮೆಚ್ಚುತ್ತೇನೆಂದು ಯೆಹೋವನು ಇತರರಿಗೆ ತಿಳಿಯಪಡಿಸಿದನು.—ಯೋಬ 42:7, 8.

ಕಾವಲಿನಬುರುಜು22.06 ಪುಟ 25 ಪ್ಯಾರ 17-18

“ಯೆಹೋವನ ಮೇಲೆ ನಿರೀಕ್ಷೆ ಇಡು”

17 ತಮ್ಮ ಜೀವನದಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದಾಗಲೂ ಎಷ್ಟೋ ಜನ ಅದನ್ನ ಧೈರ್ಯದಿಂದ ಸಹಿಸಿಕೊಂಡು ಯೆಹೋವನಿಗೆ ನಿಷ್ಠೆ ತೋರಿಸಿದ್ದಾರೆ. ಅಂಥವರಲ್ಲಿ ಯೋಬನೂ ಒಬ್ಬ. ಇವರನ್ನೆಲ್ಲಾ ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದಲ್ಲಿ, ‘ದೊಡ್ಡ ಮೋಡದ ಹಾಗೆ ಇರುವ ಸಾಕ್ಷಿಗಳ ದೊಡ್ಡ ಗುಂಪು’ ಅಂತ ಕರೆದಿದ್ದಾನೆ. (ಇಬ್ರಿ. 12:1) ಇವರ ಜೀವನದಲ್ಲಿ ಕಷ್ಟಗಳ ಪ್ರವಾಹನೇ ಹರಿಯಿತು. ಆದ್ರೂ ಯೆಹೋವ ಅವರ ಮೇಲೆ ಇಟ್ಟಿದ್ದ ನಂಬಿಕೆನ ಅವರು ಉಳಿಸಿಕೊಂಡ್ರು. (ಇಬ್ರಿ. 11:36-40) ಆದ್ರೆ ಅವರು ಪಟ್ಟ ಕಷ್ಟ ಅವರು ತೋರಿಸಿದ ತಾಳ್ಮೆ ನೀರು ಪಾಲಾಯ್ತಾ? ಖಂಡಿತ ಇಲ್ಲ. ಯೆಹೋವ ಹೇಳಿರೋ ಎಲ್ಲಾ ಮಾತುಗಳು ನೆರವೇರೋದನ್ನ ಅವರು ನೋಡದೇ ಇದ್ರೂ ಯೆಹೋವನ ಮೇಲೆ ನಂಬಿಕೆಯಿಟ್ರು. ಅವರು ಯೆಹೋವನಿಗೆ ಇಷ್ಟ ಆಗೋ ತರ ನಡೆದುಕೊಂಡಿದ್ರಿಂದ, ಮುಂದೆ ಯೆಹೋವನ ಮಾತುಗಳು ನೆರವೇರುವಾಗ ಅದನ್ನ ಕಣ್ಣಾರೆ ನೋಡ್ತೀವಿ ಅನ್ನೋ ಭರವಸೆ ಅವರಿಗಿತ್ತು. (ಇಬ್ರಿ. 11:4, 5) ಯೆಹೋವನ ಮೇಲಿರೋ ನಂಬಿಕೆನ ಮತ್ತು ನಮಗಿರೋ ನಿರೀಕ್ಷೆನ ಕಳೆದುಕೊಳ್ಳಬಾರದು ಅಂತ ಇವರ ಮಾದರಿಯಿಂದ ನಾವು ಕಲಿತೀವಿ.

18 ಇವತ್ತು ಲೋಕದಲ್ಲಿರೋ ಜನರು ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ ಇಳಿಯುತ್ತಿದ್ದಾರೆ. (2 ತಿಮೊ. 3:13) ಸೈತಾನನೂ ದೇವರ ಜನರಿಗೆ ಹಿಂಸೆಗಳನ್ನ ತರುತ್ತಾ ಇದ್ದಾನೆ. ಮುಂದೆ ನಮಗೆ ಯಾವ ಕಷ್ಟ ಬರುತ್ತೋ ಗೊತ್ತಿಲ್ಲ, ಹಾಗಾಗಿ ‘ಜೀವ ಇರೋ ದೇವರ ಮೇಲೆ ನಾವು ಭರವಸೆ ಇಟ್ಟು’ ಆತನ ಸೇವೆಯನ್ನ ಮಾಡುತ್ತಾ ಇರೋಣ. (1 ತಿಮೊ. 4:10) ಯೆಹೋವ ಯೋಬನಿಗೆ ತೋರಿಸಿದ ಹಾಗೆ ನಮಗೂ ‘ಕೋಮಲ ಮಮತೆ ತೋರಿಸ್ತಾನೆ ಮತ್ತು ಆತನು ಕರುಣಾಮಯಿ ಆಗಿದ್ದಾನೆ’ ಅನ್ನೋದನ್ನ ನಾವು ಮರೆಯಬಾರದು. (ಯಾಕೋ. 5:11) “ಆತನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆತನು ಆಶೀರ್ವಾದಿಸ್ತಾನೆ” ಅನ್ನೋದನ್ನ ಮನಸ್ಸಲ್ಲಿಟ್ಟು ನಾವೂ ಯೆಹೋವನಿಗೆ ನಿಷ್ಠೆ ತೋರಿಸೋಣ.—ಇಬ್ರಿಯ 11:6 ಓದಿ.

ಬೈಬಲಿನಲ್ಲಿರುವ ರತ್ನಗಳು

it-2-E ಪುಟ 808

ಚುಚ್ಚು ಮಾತು

ಯೋಬನಿಗೆ ನೋವಾಗೋ ತರ ಚುಚ್ಚಿ ಮಾತಾಡಿದ್ರೂ ಅವನು ಯೆಹೋವನಿಗೆ ನಿಯತ್ತಾಗಿದ್ದ. ಮೊದಮೊದ್ಲು ಯೋಬ ತಪ್ಪಾಗಿ ಯೋಚ್ನೆ ಮಾಡಿದ. ಆದ್ರೆ ಆಮೇಲೆ ಅವನು ಸರಿಯಾಗಿ ಯೋಚಿಸೋಕೆ ಯೆಹೋವ ಸಹಾಯ ಮಾಡಿದನು. ಎಲೀಹು ಅವನ ಬಗ್ಗೆ ಏನು ಹೇಳ್ತಾನೆ ನೋಡಿ, “ಯೋಬನ ತರ ಯಾರಿದ್ದಾರೆ? ಅವನು ಅವಮಾನದ ಮಾತುಗಳನ್ನ ನೀರಿನ ಹಾಗೆ ಕುಡಿತಾನೆ” ಅಂತ ಹೇಳಿದ. (ಯೋಬ 34:7) ಯೋಬ ಯೆಹೋವನನ್ನ ಹೊಗೊಳೋ ಬದ್ಲು ತನ್ನನ್ನೇ ಹೊಗಳ್ಕೊಂಡ. ಯೆಹೋವನಿಗಿಂತ ತಾನೇ ನೀತಿವಂತ ಅಂದ್ಕೊಂಡ. (ಯೋಬ 35:2; 36:24) ಅವನ ಮೂರು ‘ಸ್ನೇಹಿತರು’ ಚುಚ್ಚಿ ಮಾತಾಡಿದಾಗ, ಅವರು ತನ್ನ ವಿರುದ್ಧನೇ ಮಾತಾಡ್ತಿದ್ದಾರೆ ಅಂದ್ಕೊಂಡ. ಆದ್ರೆ ಆಮೇಲೆ ದೇವರು ಅವರು ಮಾತಾಡಿದ್ದು ‘ನಿನ್ನ ವಿರುದ್ಧ ಅಲ್ಲ, ನನ್ನ ವಿರುದ್ಧ’ ಅಂತ ಯೋಬನಿಗೆ ಅರ್ಥ ಮಾಡಿಸಿದನು. (ಯೋಬ 42:7; ಈ ವಚನಗಳನ್ನೂ ನೋಡಿ: 1 ಸಮು. 8:7; ಮತ್ತಾ. 24:9.) ಯೋಬನ ಹತ್ರ ಚುಚ್ಚಿ ಮಾತಾಡಿದ ತರ, ಕೆಲವರು ನಮ್ಮ ಹತ್ರನೂ ಮಾತಾಡಬಹುದು. ಆಗ ನಾವು ನಮ್ಮ ಬಗ್ಗೆನೇ ಯೋಚಿಸದೇ ಯೆಹೋವನ ಬಗ್ಗೆ ಯೋಚಿಸಬೇಕು ಮತ್ತು ಅದನ್ನ ಸಹಿಸ್ಕೊಬೇಕು. ಹೀಗೆ ಮಾಡಿದ್ರೆ ಯೆಹೋವ ನಮ್ಮನ್ನ ಖಂಡಿತ ಆಶೀರ್ವದಿಸ್ತಾನೆ.—ಲೂಕ 6:22, 23.

ಫೆಬ್ರವರಿ 5-11

ಬೈಬಲಿನಲ್ಲಿರುವ ನಿಧಿ | ಕೀರ್ತನೆ 1-4

ದೇವರ ಸರ್ಕಾರವನ್ನೇ ಬೆಂಬಲಿಸಿ

ಕಾವಲಿನಬುರುಜು21.09 ಪುಟ 15 ಪ್ಯಾರ 8

“ನಾನು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ”

8 ಈ ಸಂದೇಶ ಎಲ್ಲ ಜನ್ರಿಗೆ ಇಷ್ಟ ಆಯ್ತಾ? ತುಂಬ ಜನ್ರಿಗೆ ಇಷ್ಟ ಆಗಲಿಲ್ಲ. (ಕೀರ್ತನೆ 2:1-3 ಓದಿ.) ಈಗಲೂ ಕೋಪದಿಂದ ಕೆಂಡಕಾರುತ್ತಾ ಇದ್ದಾರೆ. ಅವರು ಯೆಹೋವ ನೇಮಿಸಿರೋ ನಾಯಕನನ್ನ ಒಪ್ಪಿಕೊಳ್ತಿಲ್ಲ. ನಾವು ಸಾರುತ್ತಿರೋ ಸಂದೇಶನ ಅವರು “ಸಿಹಿಸುದ್ದಿ” ತರ ನೋಡ್ತಿಲ್ಲ. ಅಷ್ಟೇ ಅಲ್ಲ, ಕೆಲವು ಸರ್ಕಾರಗಳು ನಮ್ಮ ಸಾರುವ ಕೆಲಸನ ನಿಷೇಧ ಮಾಡಿವೆ! ಈ ಸರ್ಕಾರದ ನಾಯಕರಿಗೆ ದೇವರಿಗಿಂತ ತಮ್ಮ ಅಧಿಕಾರದ ಕುರ್ಚಿನೇ ಹೆಚ್ಚಾಗಿಬಿಟ್ಟಿದೆ. ಅದಕ್ಕೆ ದೇವಜನರ ಮೇಲೆ ದಾಳಿಮಾಡ್ತಾ ಇದ್ದಾರೆ. ಯೇಸುವಿನ ಕಾಲದಲ್ಲಿದ್ದ ನಾಯಕರು ಮಾಡಿದ ಹಾಗೇ ಇವರೂ ಯೆಹೋವನ ಅಭಿಷಿಕ್ತನನ್ನ ವಿರೋಧಿಸ್ತಾ ಇದ್ದಾರೆ.—ಅ. ಕಾ. 4:25-28.

ಕಾವಲಿನಬುರುಜು16.04 ಪುಟ 29 ಪ್ಯಾರ 11

ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ

11 ಹಣ ಆಸ್ತಿಪಾಸ್ತಿ. ನಮ್ಮಲ್ಲಿರುವ ಹಣ, ಸ್ವತ್ತು ಎಲ್ಲಕ್ಕಿಂತ ಮುಖ್ಯವಾಗಿಬಿಟ್ಟರೆ ತಟಸ್ಥರಾಗಿ ಉಳಿಯಲಿಕ್ಕೆ ತುಂಬ ಕಷ್ಟ. ಮಲಾವಿ ದೇಶದಲ್ಲಾದ ಘಟನೆಯನ್ನು ಗಮನಿಸಿ. 1970ರ ನಂತರ ಅಲ್ಲಿನ ಅನೇಕ ಸಾಕ್ಷಿಗಳು ಒಂದು ರಾಜಕೀಯ ಗುಂಪನ್ನು ಸೇರಲು ನಿರಾಕರಿಸಿದ್ದರಿಂದ ತಮ್ಮೆಲ್ಲ ಸ್ವತ್ತನ್ನು ಕಳೆದುಕೊಂಡರು. ಆದರೆ ಕೆಲವರಿಗೆ ತಮ್ಮ ಆರಾಮದ ಜೀವನವನ್ನು ತ್ಯಜಿಸಲು ಆಗಲಿಲ್ಲ. ರೂತ್‌ ಎಂಬ ಸಹೋದರಿ ಹೀಗೆ ಜ್ಞಾಪಿಸಿಕೊಳ್ಳುತ್ತಾಳೆ: “ನಮ್ಮ ಜೊತೆ ಗಡೀಪಾರಾದವರಲ್ಲಿ ಕೆಲವರು ನಂತರ ರಾಜಿಮಾಡಿಕೊಂಡು ಆ ರಾಜಕೀಯ ಪಕ್ಷ ಸೇರಿದರು ಮತ್ತು ಮನೆಗೆ ಹಿಂತಿರುಗಿದರು. ಯಾಕೆಂದರೆ ಅವರಿಗೆ ನಿರಾಶ್ರಿತರ ಶಿಬಿರದಲ್ಲಿ ಸುಖಸೌಕರ್ಯಗಳಿಲ್ಲದೆ ಜೀವಿಸುವುದು ಕಷ್ಟವಾಯಿತು.” ಆದರೆ ದೇವಜನರಲ್ಲಿ ಹೆಚ್ಚಿನವರು ಹಾಗಿಲ್ಲ. ಅವರು ತಮ್ಮ ಹಣ ಆಸ್ತಿಪಾಸ್ತಿ ಎಲ್ಲವನ್ನು ಕಳೆದುಕೊಂಡರೂ ತಟಸ್ಥರಾಗಿ ಉಳಿಯುತ್ತಾರೆ.—ಇಬ್ರಿ. 10:34.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 425

ಹೊಟ್ಟು

ಸಾಮನ್ಯವಾಗಿ ಹೊಟ್ಟು ಕಾಳುಗಳ ಮೇಲಿರುತ್ತೆ. ಉದಾಹರಣೆಗೆ ಗೋದಿ ಮತ್ತು ಬಾರ್ಲಿ. ಬೈಬಲಲ್ಲಿ ಹೊಟ್ಟಿನ ಬಗ್ಗೆ ಮಾತಾಡುವಾಗೆಲ್ಲ ಕಾಳುಗಳಿಂದ ಅದನ್ನ ಬೇರೆ ಮಾಡೋದಕ್ಕೆ ಸೂಚಿಸುತ್ತೆ. ಈ ಹೊಟ್ಟನ್ನ ತಿನ್ನೋಕೂ ಆಗಲ್ಲ, ಬೇರೆ ಯಾವದಕ್ಕೂ ಬಳಸೋಕೂ ಆಗಲ್ಲ. ಹಾಗಾಗಿ ಈ ಹೊಟ್ಟನ್ನ ಕಾಳುಗಳಿಂದ ಬೇರೆ ಮಾಡೋಕೆ ಒಂದು ಮೊರದಲ್ಲಿ ಕಾಳುಗಳನ್ನ ಹಾಕೊಂಡು ಗಾಳಿಯಲ್ಲಿ ತೂರ್ತಾರೆ. ಆಗ ಹೊಟ್ಟು ಗಾಳಿಲಿ ದೂಳಿನ ತರ ತೂರ್ಕೊಂಡು ಹೋಗುತ್ತೆ. ಇದೇ ತರನೇ ಯೆಹೋವ ಧರ್ಮಭ್ರಷ್ಟರನ್ನ, ಕೆಟ್ಟ ಜನ್ರನ್ನ ಮತ್ತು ತನ್ನನ್ನ ವಿರೋಧಿಸುವವ್ರನ್ನ ನಾಶ ಮಾಡ್ತಾನೆ. (ಯೋಬ 21:18; ಕೀರ್ತ. 1:4; 35:5; ಯೆಶಾ. 17:13; 29:5; 41:15; ಹೋಶೇ. 13:3) ದೇವರ ಸರ್ಕಾರ ಶತ್ರುಗಳನ್ನ ಪುಡಿ ಪುಡಿ ಮಾಡಿ, ಹೊಟ್ಟಿನ ತರ ಗಾಳಿಗೆ ತೂರುತ್ತೆ.—ದಾನಿ. 2:35.

ಹೊಟ್ಟು ಗಾಳಿಗೆ ತೂರ್ಕೊಂಡು ಮತ್ತೆ ಕಾಳುಗಳ ಮೇಲೆ ಬರದೆ ಇರೊಕೆ ಅದನ್ನ ಸುಟ್ಟು ಹಾಕ್ತಾರೆ. ಅದೇ ತರ ಸುಳ್ಳು ಧರ್ಮದ ಜನ್ರು ಸುಟ್ಟು ನಾಶ ಆಗ್ತಾರೆ ಅಂತ ಯೋಹಾನ (ದೀಕ್ಷಸ್ನಾನ ಕೊಡ್ತಿದ್ದವನು) ಹೇಳಿದ. ಯೇಸು ಗೋದಿಯನ್ನ ಕಣಜಕ್ಕೆ ತುಂಬಿಸಿ “ಉಳಿದಿರೋ ಹೊಟ್ಟನ್ನ ಆರಿಸೋಕೆ ಆಗದ ಬೆಂಕಿಯಲ್ಲಿ ಹಾಕಿ ಸುಟ್ಟುಬಿಡ್ತಾನೆ.”—ಮತ್ತಾ. 3:7-12; ಲೂಕ 3:17.

ಫೆಬ್ರವರಿ 12-18

ಬೈಬಲಿನಲ್ಲಿರುವ ನಿಧಿ | ಕೀರ್ತನೆ 5-7

ಯಾರು ಏನೇ ಮಾಡಿದ್ರೂ ನೀವು ಯೆಹೋವನನ್ನ ಬಿಟ್ಟು ಹೋಗಬೇಡಿ

ಕಾವಲಿನಬುರುಜು21.03 ಪುಟ 15 ಪ್ಯಾರ 7-8

ಕಷ್ಟ ತಾಳಿಕೊಳ್ಳೋಕೆ ಬೈಬಲ್‌ ನಿಮಗೆ ಹೇಗೆ ಸಹಾಯ ಮಾಡುತ್ತೆ?

7 ನಿಮ್ಮ ಸ್ನೇಹಿತರೋ ಕುಟುಂಬದ ಸದಸ್ಯರೋ ನಿಮಗೆ ನಂಬಿಕೆದ್ರೋಹ ಮಾಡಿದ್ದಾರಾ? ಹಾಗಿದ್ರೆ ರಾಜ ದಾವೀದನ ಜೀವನದಲ್ಲಿ ಆದ ಒಂದು ಘಟನೆ ಬಗ್ಗೆ ನೋಡೋಣ. ಅವನ ಮಗ ಅಬ್ಷಾಲೋಮ ಅವನಿಗೆ ಮೋಸ ಮಾಡಿದ ಮತ್ತು ಅವನ ರಾಜ್ಯ ಕಿತ್ತುಕೊಳ್ಳೋಕೆ ಪ್ರಯತ್ನಿಸಿದ. (2 ಸಮು. 15:5-14, 31; 18:6-14) ಈ ಘಟನೆಯಿಂದ ನಾವೇನು ಕಲಿಬಹುದು ಅಂತ ಈಗ ನೋಡೋಣ.

8 (1) ಪ್ರಾರ್ಥಿಸಿ. ದಾವೀದನ ಈ ಅನುಭವವನ್ನು ಮನಸ್ಸಲ್ಲಿಟ್ಟು ನಿಮಗಾಗಿರೋ ನೋವನ್ನು ಯೆಹೋವನ ಹತ್ರ ಪ್ರಾರ್ಥನೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳಿ. (ಕೀರ್ತ. 6:6-9) ಆಮೇಲೆ ಆ ನೋವಿಂದ ಹೊರಗೆ ಬರೋಕೆ ಸಹಾಯ ಮಾಡುವಂಥ ತತ್ವಗಳನ್ನು ತೋರಿಸಿಕೊಡಪ್ಪಾ ಅಂತನೂ ಯೆಹೋವನ ಹತ್ರ ಬೇಡಿಕೊಳ್ಳಿ.

ಕಾವಲಿನಬುರುಜು20.07 ಪುಟ 8-9 ಪ್ಯಾರ 3-4

ನೀವು ನಂಬಿರೋದು ಸತ್ಯ ಅನ್ನೋದು ನಿಮ್ಗೆ ಮನವರಿಕೆಯಾಗಿದ್ಯಾ?

3 ನಮ್ಮ ನಂಬಿಕೆಗೆ ದೇವ ಜನ್ರ ಮಧ್ಯೆ ಇರೋ ಕ್ರೈಸ್ತ ಪ್ರೀತಿಯೊಂದೇ ಆಧಾರವಾಗಿರಬಾರ್ದು. ಯಾಕೆ? ಯಾಕಂದ್ರೆ ಪ್ರಚಾರಕರೋ ಹಿರಿಯರೋ ಪಯನೀಯರರೋ ಗಂಭೀರ ತಪ್ಪನ್ನ ಮಾಡಿಬಿಡಬಹುದು. ಅಥ್ವಾ ಒಬ್ಬ ಸಹೋದರನೋ ಸಹೋದರಿಯೋ ನಮ್ಗೆ ನೋವು ಮಾಡಬಹುದು. ಇಲ್ಲವೇ ಯಾರಾದ್ರೂ ಒಬ್ರು ಧರ್ಮಭ್ರಷ್ಟರಾಗಿ ನಮ್ಮ ಬೋಧನೆಗಳು ಸುಳ್ಳು ಅಂತ ಹೇಳ್ಬಿಡಬಹುದು. ಇಂಥ ವಿಷ್ಯಗಳು ನಡೆದಾಗ ನೀವು ಅದ್ರಿಂದ ಎಡವಿ ದೇವ್ರ ಸೇವೆನ ನಿಲ್ಲಿಸಿಬಿಡ್ತೀರಾ? ನೀವು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ದೇ ಬರೀ ಜನ್ರ ಪ್ರೀತಿ ನೋಡಿ ಸತ್ಯಕ್ಕೆ ಬಂದಿದ್ರೆ ನಿಮ್ಮ ನಂಬಿಕೆ ಹೆಚ್ಚು ಕಾಲ ಬಾಳಲ್ಲ. ಯೆಹೋವನ ಬಗ್ಗೆ, ಆತನ ಜನ್ರ ಬಗ್ಗೆ ಇರೋ ಅನಿಸಿಕೆ ಸ್ವಲ್ಪ ಮಟ್ಟಿಗಿನ ನಂಬಿಕೆನಾ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ ಅನ್ನೋದು ನಿಜನೇ. ಆದ್ರೆ ಅದ್ರ ಜೊತೆಗೆ ನೀವು ಬೈಬಲನ್ನು ಚೆನ್ನಾಗಿ ಅಧ್ಯಯನ ಮಾಡ್ಬೇಕು, ಅದ್ರಿಂದ ಕಲಿತದ್ದನ್ನು ಚೆನ್ನಾಗಿ ಅರ್ಥ ಮಾಡ್ಕೊಳ್ಳಬೇಕು ಮತ್ತು ಯೆಹೋವನ ಬಗ್ಗೆ ಕಲಿಯುತ್ತಿರೋದೆಲ್ಲಾ ಸತ್ಯ ಅಂತ ಖಚಿತಪಡಿಸಿಕೊಳ್ಳಲು ಸಂಶೋಧನೆ ಮಾಡ್ಬೇಕು. ಹೀಗೆ ಮಾಡಿದಾಗ ಮಾತ್ರನೇ ನಿಮ್ಮ ನಂಬಿಕೆ ದೃಢವಾಗುತ್ತೆ.—ರೋಮ. 12:2.

4 ಕೆಲವ್ರು ಆರಂಭದಲ್ಲಿ “ಸಂತೋಷದಿಂದ” ಸತ್ಯನ ಸ್ವೀಕರಿಸ್ತಾರೆ, ಆದ್ರೆ ಸಮಸ್ಯೆಗಳು ಬಂದಾಗ ಬಿದ್ದುಹೋಗ್ತಾರೆ ಅಂತ ಯೇಸು ಹೇಳಿದ. (ಮತ್ತಾಯ 13:3-6, 20, 21 ಓದಿ.) ಬಹುಶಃ ಅವ್ರು, ತಾವು ಯೇಸುವಿನ ಹಿಂಬಾಲಕರಾದ್ರೆ ಕಷ್ಟಗಳು ಬರುತ್ತೆ ಅನ್ನೋದನ್ನ ಅರ್ಥಮಾಡಿಕೊಂಡಿರಲ್ಲ. (ಮತ್ತಾ. 16:24) ಅಥ್ವಾ ಕ್ರೈಸ್ತರಾದ್ರೆ ಜೀವ್ನದಲ್ಲಿ ಯಾವಾಗ್ಲೂ ಸಂತೋಷ ಇರುತ್ತೆ ಅಂತ ನೆನಸಿರ್ತಾರೆ. ಈ ಅಪರಿಪೂರ್ಣ ಲೋಕದಲ್ಲಿ ಕಷ್ಟಸಮಸ್ಯೆಗಳು ಸರ್ವೇಸಾಮಾನ್ಯ. ಯಾಕಂದ್ರೆ ಸನ್ನಿವೇಶಗಳು ಈಗ ಇದ್ದಂತೆ ಇನ್ನೊಂದು ಕ್ಷಣಕ್ಕೆ ಇರಲ್ಲ ಮತ್ತು ಇದ್ರಿಂದ ನಮ್ಮ ಸಂತೋಷ ಕಳಕೊಳ್ತೇವೆ.—ಕೀರ್ತ. 6:6; ಪ್ರಸಂ. 9:11.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 995

ಸಮಾಧಿ

ಕೀರ್ತನೆ 5:9ರಲ್ಲಿರೋ ಮಾತನ್ನೇ ಅಪೊಸ್ತಲ ಪೌಲ ರೋಮನ್ನರಿಗೆ 3:13ರಲ್ಲಿ ಹೇಳಿದ್ದಾನೆ. ಮೋಸಗಾರರ ಮತ್ತು ಕೆಟ್ಟ ಜನ್ರ “ಬಾಯಿ ತೆರೆದಿರೋ ಸಮಾಧಿ ತರ” ಇದೆ ಅಂತ ಅವನು ಹೇಳಿದ. ಸಮಾಧಿಯಲ್ಲಿ ಬರೀ ಕೊಳೆತಿರೋ ಹೆಣಗಳೇ ಇರುತ್ತೆ. ಹಾಗೇ ಕೆಟ್ಟ ಜನ್ರ ಮಾತು ಕೊಳೆತ ಹೆಣದ ತರ ಇರುತ್ತೆ.—ಮತ್ತಾ 15:18-20 ಹೋಲಿಸಿ.

ಫೆಬ್ರವರಿ19-25

ಬೈಬಲಿನಲ್ಲಿರುವ ನಿಧಿ | ಕೀರ್ತನೆ 8-10

“ಯೆಹೋವನೇ, ನಾನು . . . ನಿನ್ನನ್ನ ಹೊಗಳ್ತೀನಿ”!

ಕಾವಲಿನಬುರುಜು21.08 ಪುಟ 3 ಪ್ಯಾರ 6

ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ

6 ಯೆಹೋವ ದೇವರು ನಮಗೆ ಸುಂದರವಾದ ಮನೆ ಸಿದ್ಧಮಾಡಿದ್ರು. ಮೊದಲ ಮನುಷ್ಯನನ್ನ ಸೃಷ್ಟಿ ಮಾಡೋಕೂ ಮುಂಚೆ ಯೆಹೋವ ದೇವರು ಈ ಭೂಮಿನ ಸಿದ್ಧಮಾಡಿದ್ರು. (ಯೋಬ 38:4-6; ಯೆರೆ. 10:12) ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇರೋದ್ರಿಂದ ನಾವು ಖುಷಿಯಾಗಿರೋಕೆ ಬೇಕಾದ ವಿಷಯಗಳನ್ನ ಧಾರಾಳವಾಗಿ ಕೊಟ್ಟಿದ್ದಾರೆ. (ಕೀರ್ತ. 104:14, 15, 24) ಯೆಹೋವ ತಾನು ಮಾಡಿದ ಸೃಷ್ಟಿನೆಲ್ಲಾ ನೋಡಿದಾಗ ‘ಅವು ಚೆನ್ನಾಗಿತ್ತು.’ (ಆದಿ. 1:10, 12, 31) ಯೆಹೋವ ದೇವರು ಮನುಷ್ಯನಿಗೆ ತನ್ನ ಎಲ್ಲಾ ಅದ್ಭುತ ಸೃಷ್ಟಿಗಳ ಮೇಲೆ “ಅಧಿಕಾರ” ಕೊಟ್ಟು ಗೌರವ ಕೊಟ್ಟಿದ್ದಾನೆ. (ಕೀರ್ತ. 8:6) ಮನುಷ್ಯರು ಪರಿಪೂರ್ಣರಾಗಿ ಸದಾಕಾಲ ಜೀವಿಸಬೇಕು ಮತ್ತು ತನ್ನ ಸೃಷ್ಟಿನ ಖುಷಿಖುಷಿಯಾಗಿ ನೋಡಿಕೊಳ್ಳಬೇಕು ಅನ್ನೋದು ಯೆಹೋವನ ಇಷ್ಟ. ಇದು ಮುಂದೆ ಖಂಡಿತ ನಡಿಯುತ್ತೆ ಅಂತ ಯೆಹೋವ ದೇವರು ಮಾತು ಕೊಟ್ಟಿದ್ದಾರೆ. ಅದಕ್ಕೆ ನಾವು ಎಷ್ಟು ಥ್ಯಾಂಕ್ಸ್‌ ಹೇಳಿದ್ರು ಸಾಕಾಗಲ್ಲ ಅಲ್ವಾ?

ಕಾವಲಿನಬುರುಜು20.05 ಪುಟ 23 ಪ್ಯಾರ 10

ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ?

10 ಮಾತಾಡುವ ಉಡುಗೊರೆ ಸಿಕ್ಕಿರೋದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸ್ಬಹುದು? ವಿಕಾಸವಾದ ನಂಬುವ ಜನರ ಹತ್ತಿರ ದೇವರೇ ಎಲ್ಲವನ್ನೂ ಸೃಷ್ಟಿಮಾಡಿದ್ದಾನೆ ಅಂತ ನಾವ್ಯಾಕೆ ನಂಬುತ್ತೇವೆಂದು ವಿವರಿಸಬೇಕು. (ಕೀರ್ತ. 9:1; 1 ಪೇತ್ರ 3:15) ವಿಕಾಸವಾದವೇ ಸರಿ ಅಂತ ಸಮರ್ಥಿಸೋ ಜನ್ರು ಈ ಭೂಮಿ ಮತ್ತು ಇದರಲ್ಲಿರೋ ಜೀವಸಂಕುಲ ಆಕಸ್ಮಿಕವಾಗಿ ಬಂತು ಅಂತ ಹೇಳ್ತಾರೆ. ಅಂಥವರ ಹತ್ರ ನಾವು ಬೈಬಲನ್ನು ಮತ್ತು ಈ ಲೇಖನದಲ್ಲಿ ಚರ್ಚಿಸಿದ ಕೆಲವು ಅಂಶಗಳನ್ನು ಉಪಯೋಗಿಸಿ ನಮ್ಮ ಸ್ವರ್ಗೀಯ ತಂದೆ ಪರ ಮಾತಾಡ್ಬಹುದು. ಅಷ್ಟೇ ಅಲ್ಲ ಇದ್ರ ಬಗ್ಗೆ ಆಸಕ್ತಿ ತೋರಿಸೋವ್ರ ಹತ್ರ ಯೆಹೋವನೇ ಸ್ವರ್ಗ ಮತ್ತು ಭೂಮಿಯ ಸೃಷ್ಟಿಕರ್ತನಾಗಿದ್ದಾನೆ ಅನ್ನೋದನ್ನ ನಾವ್ಯಾಕೆ ಒಪ್ಪುತ್ತೇವೆಂದು ವಿವರಿಸಬಹುದು.—ಕೀರ್ತ. 102:25; ಯೆಶಾ. 40:25, 26.

ಕಾವಲಿನಬುರುಜು22.04 ಪುಟ 7 ಪ್ಯಾರ 13

ನೀವು ‘ಮಾತಲ್ಲಿ ಮಾದರಿಯಾಗಿದ್ದೀರಾ?’

13 ಮನಸಾರೆ ಹಾಡಿ. ನಾವು ಕೂಟಗಳಲ್ಲಿ ಯೆಹೋವನನ್ನು ಸ್ತುತಿಸೋಕೆ ಹಾಡು ಹಾಡ್ತೀವಿ ಅನ್ನೋದನ್ನ ನೆನಪಲ್ಲಿಟ್ಟುಕೊಳ್ಳಬೇಕು. ಸಾರಾ ಅನ್ನೋ ಸಹೋದರಿಗೆ ಅಷ್ಟು ಚೆನ್ನಾಗಿ ಹಾಡೋಕೆ ಬರಲ್ಲ ಅಂತ ಅನಿಸಿದ್ರೂ ಕೂಟಗಳಲ್ಲಿ ಹಾಡೋದನ್ನ ಬಿಟ್ಟುಬಿಡಲಿಲ್ಲ. ಯೆಹೋವನನ್ನು ಸ್ತುತಿಸೋಕೆ ಆಸೆ ಪಡುತ್ತಿದ್ರು. ಹಾಗಾಗಿ ಅವರು ಕೂಟಗಳಿಗೆ ತಯಾರಿ ಮಾಡುವಾಗಲೇ ಹಾಡನ್ನ ಚೆನ್ನಾಗಿ ಪ್ರಾಕ್ಟಿಸ್‌ ಮಾಡ್ತಾ ಇದ್ರು. ಕೂಟದಲ್ಲಿ ಕಲಿಯೋ ವಿಷಯಕ್ಕೂ, ಆ ಹಾಡಿಗೂ ಏನು ಸಂಬಂಧ ಅಂತ ನೋಡ್ತಿದ್ರು. “ಇದ್ರಿಂದ ನಾನು ಹೇಗೆ ಹಾಡ್ತೀನಿ ಅನ್ನೋದರ ಮೇಲಲ್ಲ, ಹಾಡಲ್ಲಿರೋ ವಿಷಯಗಳ ಮೇಲೆ ನನಗೆ ಗಮನ ಕೊಡೋಕೆ ಆಯ್ತು” ಅಂತ ಆ ಸಹೋದರಿ ಹೇಳ್ತಾರೆ.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 832

ಬೆರಳು ಅಥವಾ ಕೈ

ಯೆಹೋವ ಬೇರೆಬೇರೆ ಕೆಲಸಗಳನ್ನ ಮಾಡುವಾಗ ಸಾಂಕೇತಿಕವಾಗಿ, ತನ್ನ ‘ಬೆರಳುಗಳನ್ನ’ ಅಥವಾ ಕೈಯನ್ನ ಬಳಸಿದ್ದಾನೆ. ಉದಾಹರಣೆಗೆ, ದಶಾಜ್ಞೆಗಳನ್ನ ಬರೆದನು (ವಿಮೋ 31:18; ಧರ್ಮೋ 9:10), ಅದ್ಭುತಗಳನ್ನ ಮಾಡಿದನು (ವಿಮೋ 8:18, 19), ಆಕಾಶವನ್ನ ಸೃಷ್ಟಿ ಮಾಡಿದನು (ಕೀರ್ತ 8:3). ಸೃಷ್ಟಿಕಾರ್ಯ ಮಾಡುವಾಗ ಯೆಹೋವನ ‘ಬೆರಳುಗಳು’ ಹೇಗೆ ಕೆಲಸ ಮಾಡ್ತು ಅಂತ ಆದಿಕಾಂಡ ಪುಸ್ತಕ ಹೇಳುತ್ತೆ. ಅಲ್ಲಿ ದೇವರ ಪವಿತ್ರಶಕ್ತಿ (ಸಕ್ರಿಯ ಶಕ್ತಿ) ನೀರಿನ ಮೇಲೆ ಓಡಾಡ್ತಿತ್ತು ಅಂತ ಹೇಳುತ್ತೆ. (ಆದಿ 1:2) ಕ್ರೈಸ್ತ ಗ್ರೀಕ್‌ ಪುಸ್ತಕಗಳಲ್ಲಿ “ಬೆರಳು” ಅಂತ ಸಾಂಕೇತಿಕವಾಗಿ ಬಳಸಿರೋದು ಇನ್ನೂ ಸ್ಪಷ್ಟವಾಗಿ ಗೊತ್ತಾಗುತ್ತೆ. ಮತ್ತಾಯ ಪುಸ್ತಕದಲ್ಲಿ, “ದೇವರ ಪವಿತ್ರಶಕ್ತಿಯಿಂದ” ಯೇಸು ಕೆಟ್ಟ ದೇವದೂತರನ್ನ ಬಿಡಿಸಿದನು ಅಂತ ಹೇಳುತ್ತೆ. ಆದ್ರೆ ಲೂಕ ಪುಸ್ತಕದಲ್ಲಿ ಯೇಸು “ದೇವರ ಬೆರಳು” ಬಳಸಿದನು ಅಂತ ಹೇಳುತ್ತೆ.—ಮತ್ತಾ 12:28; ಲೂಕ 11:20, ಪಾದಟಿಪ್ಪಣಿ.

ಫೆಬ್ರವರಿ 26- ಮಾರ್ಚ್‌ 3

ಬೈಬಲಿನಲ್ಲಿರುವ ನಿಧಿ | ಕೀರ್ತನೆ 11-15

ಶಾಂತಿ ತುಂಬಿರೋ ಹೊಸ ಲೋಕದಲ್ಲಿ ನಿಮ್ಮನ್ನ ಕಲ್ಪಿಸ್ಕೊಳ್ಳಿ

ಕಾವಲಿನಬುರುಜು06 5/15 ಪುಟ 18 ಪ್ಯಾರ 3

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

11:3—ಯಾವ ಆಧಾರಗಳು ಅಥವಾ ಅಸ್ತಿವಾರಗಳು ಕೆಡವಲ್ಪಡುವವು? ಇವು ಸ್ವತಃ ಮಾನವ ಸಮಾಜವು ಯಾವುದರ ಮೇಲೆ ಆಧಾರಿತವಾಗಿದೆಯೋ ಆ ಅಸ್ತಿವಾರಗಳು ಅಂದರೆ ನಿಯಮ, ಸುವ್ಯವಸ್ಥೆ ಮತ್ತು ನ್ಯಾಯಗಳೇ ಆಗಿವೆ. ಇವು ಅಸ್ತವ್ಯಸ್ತಗೊಂಡಿರುವಾಗ, ಸಾಮಾಜಿಕ ಅವ್ಯವಸ್ಥೆ ಮೇಲುಗೈಪಡೆಯುತ್ತದೆ ಮತ್ತು ನ್ಯಾಯವು ಅಸ್ತಿತ್ವದಲ್ಲಿರುವುದಿಲ್ಲ. ಇಂಥ ಪರಿಸ್ಥಿತಿಗಳ ಕೆಳಗೆ ಯಾವನೇ ‘ನೀತಿವಂತನು’ ದೇವರಲ್ಲಿ ಸಂಪೂರ್ಣವಾಗಿ ಭರವಸೆಯಿಡತಕ್ಕದ್ದು.—ಕೀರ್ತನೆ 11:3-7.

ಕಾವಲಿನಬುರುಜು (ಸಾರ್ವಜನಿಕ)16.3 ಪುಟ 13 ಪ್ಯಾರ 5-6

ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?

ಲೋಕದಲ್ಲಿ ಎಲ್ಲೂ ಹಿಂಸಾಚಾರವೇ ನಡೆಯದಂತೆ ದೇವರು ಮಾಡುತ್ತಾನೆಂದು ಬೈಬಲ್‌ ಹೇಳಿದೆ. ಹಿಂಸೆ, ಅಪರಾಧ, ಕ್ರೌರ್ಯಕ್ಕಿಳಿದಿರುವ ಜನರಿಗಾಗಿ ದೇವರು ‘ನ್ಯಾಯತೀರ್ಪಿನ ದಿನವೊಂದನ್ನು’ ಇಟ್ಟಿದ್ದಾನೆ. ದೇವಭಕ್ತಿಯಿಲ್ಲದ ಜನರನ್ನು ದೇವರು ನಾಶಮಾಡಲಿದ್ದಾನೆ. (2 ಪೇತ್ರ 3:5-7) ಆಗ ನಮ್ಮನ್ನು ಪೀಡಿಸಲು ಈ ಭೂಮಿ ಮೇಲೆ ಯಾವ ಕೆಟ್ಟ ಜನರೂ ಇರುವುದಿಲ್ಲ. ದೇವರು ನಿಜವಾಗಲೂ ಇದನ್ನು ಮಾಡುತ್ತಾನೆ ಅಂತ ಹೇಗೆ ನಂಬುವುದು?

ದೇವರು “ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ” ಎನ್ನುತ್ತೆ ಬೈಬಲ್‌. (ಕೀರ್ತನೆ 11:5) ಏಕೆಂದರೆ ನಮ್ಮನ್ನೆಲ್ಲ ಸೃಷ್ಟಿಮಾಡಿರುವ ದೇವರು ಶಾಂತಿ ಮತ್ತು ನ್ಯಾಯವನ್ನು ಪ್ರೀತಿಸುತ್ತಾನೆ. (ಕೀರ್ತನೆ 33:5; 37:28) ಹಾಗಾಗಿ ಹಿಂಸಾಚಾರವನ್ನು ಮಾಡುತ್ತಾ ಇರುವುದನ್ನು ಆತನು ಸಹಿಸುವುದಿಲ್ಲ.

ಕಾವಲಿನಬುರುಜು17.08 ಪುಟ 7 ಪ್ಯಾರ 15

ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?

15 ದಾವೀದನು ಯಾಕೆ ತಾಳ್ಮೆಯಿಂದ ಕಾಯಲು ಸಿದ್ಧನಿದ್ದನು? “ಇನ್ನೆಷ್ಟರ ವರೆಗೆ,” “ಇನ್ನೆಲ್ಲಿಯ ತನಕ” ಎಂದು ಅವನು ಕೇಳಿದ್ದ ಅದೇ ಕೀರ್ತನೆಯಲ್ಲಿ ಉತ್ತರ ಕೊಡುತ್ತಾನೆ: “ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವದು. ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.” (ಕೀರ್ತ. 13:5, 6) ಯೆಹೋವನ “ಕೃಪೆ” ಅಂದರೆ ನಿಷ್ಠಾವಂತ ಪ್ರೀತಿ ತನ್ನ ಮೇಲೆ ಇದೆಯೆಂಬ ಭರವಸೆ ದಾವೀದನಿಗಿತ್ತು. ಹಿಂದೆ ಯೆಹೋವನು ತನಗೆ ಹೇಗೆಲ್ಲಾ ಸಹಾಯ ಮಾಡಿದನೆಂಬುದರ ಕುರಿತು ಅವನು ಯೋಚಿಸಿದನು. ಮುಂದೆ ತನ್ನ ಕಷ್ಟಕಾಲವನ್ನು ಕೊನೆಗೊಳಿಸುವ ಸಮಯಕ್ಕಾಗಿ ಎದುರುನೋಡಿದನು. ಯೆಹೋವನ ಆಶೀರ್ವಾದಗಳಿಗಾಗಿ ಕಾಯುವುದು ಸಾರ್ಥಕ ಎಂದು ದಾವೀದನಿಗೆ ಗೊತ್ತಿತ್ತು.

kr-E ಪುಟ 236 ಪ್ಯಾರ 16

ದೇವರ ಸರ್ಕಾರ ಯೆಹೋವನ ಇಷ್ಟನ ನೆರವೇರಿಸುತ್ತೆ

16 ಸುರಕ್ಷತೆ. ಯೆಶಾಯ 11:6-9ರಲ್ಲಿ ಪರದೈಸ್‌ ಹೇಗಿರುತ್ತೆ ಅಂತ ತುಂಬ ಸುಂದರವಾಗಿ ವರ್ಣಿಸಿದೆ. ನಾವು ಅಲ್ಲಿ ಎಷ್ಟು ಖುಷಿಯಾಗಿ ಇರ್ತೀವಿ ಅಂತ ಸ್ವಲ್ಪ ಊಹಿಸಿ. ಹೆಂಗಸರು, ಮಕ್ಕಳು ಮತ್ತು ಪ್ರತಿಯೊಬ್ರು ಭೂಮಿಯ ಯಾವ ಮೂಲೆಗೆ ಹೋದ್ರೂ ಸುರಕ್ಷಿತವಾಗಿ ಇರ್ತಾರೆ. ಯಾವ ಮನುಷ್ಯನೂ ಪ್ರಾಣಿನೂ ನಮಗೆ ಹಾನಿ ಮಾಡಲ್ಲ. ಇಡೀ ಭೂಮಿನೇ ನಮ್ಮ ಸ್ವಂತ ಮನೆಯಾಗಿರುತ್ತೆ. ನದಿ, ಕೆರೆ, ಸಮುದ್ರ ಎಲ್ಲಿ ಬೇಕಾದ್ರೂ ನಾವು ಆರಾಮಾಗಿ ಈಜಾಡಬಹುದು. ಗುಡ್ಡ-ಬೆಟ್ಟ, ಕಾಡು-ಮೇಡಲ್ಲೂ ಭಯ ಇಲ್ಲದೆ ತಿರುಗಾಡಬಹುದು. ಕತ್ತಲಿಗೂ ನಾವು ಹೆದರೋ ಅವಶ್ಯಕತೆ ಇರಲ್ಲ. ಯೆಹೆಜ್ಕೇಲ 34:25ರಲ್ಲಿ ಹೇಳಿರೋ ಹಾಗೆ ನಾವು “ಕಾಡಲ್ಲಿ ಸುರಕ್ಷಿತವಾಗಿ” ಇರ್ತೀವಿ ಮತ್ತು “ಕಾಡುಗಳಲ್ಲಿ ನೆಮ್ಮದಿಯಿಂದ ನಿದ್ದೆ” ಮಾಡ್ತೀವಿ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರಜು13 9/15 ಪುಟ 19 ಪ್ಯಾರ 12

ನೀವು ನವೀಕರಿಸಲ್ಪಟ್ಟಿದ್ದೀರಾ?

12 ದುಃಖಕರವಾಗಿ ಪೌಲನು ವರ್ಣಿಸಿದ್ದಂಥ ಜನರೇ ನಮ್ಮ ಸುತ್ತಮುತ್ತಲಿದ್ದಾರೆ. ಮಟ್ಟಗಳು ಮತ್ತು ತತ್ವಗಳು ಬೇಕೆಂದು ಹೇಳುವವರು ‘ಹಳೇ ಕಾಲದವರು, ಆ ಮಟ್ಟಗಳಿಗನುಸಾರ ನಡೆಯಬೇಕೆಂದು ಇತರರನ್ನು ಒತ್ತಾಯಿಸುವವರು ಆಗಿದ್ದಾರೆ’ ಎಂದು ಜನರು ಯೋಚಿಸುತ್ತಾರೆ. ಅನೇಕ ಶಿಕ್ಷಕರು ಮತ್ತು ಹೆತ್ತವರು ಮಕ್ಕಳಿಗೆ ಇಷ್ಟಬಂದಂತೆ ಮಾಡಲು ಹೇಳುತ್ತಾರೆ. ಮಾತ್ರವಲ್ಲ ತಪ್ಪು, ಸರಿ ಯಾವುದೆಂದು ಅವರವರೇ ನಿರ್ಣಯಿಸಬೇಕೆಂದು ಕಲಿಸುತ್ತಾರೆ. ಸರಿ-ತಪ್ಪು ಯಾವುದೆಂದು ನಿಷ್ಕೃಷ್ಟವಾಗಿ ತಿಳಿಯಲು ಸಾಧ್ಯವೇ ಇಲ್ಲ ಎನ್ನುವುದು ಅವರ ಅಂಬೋಣ. ತಾವು ದೇವಭಕ್ತರೆಂದು ಹೇಳಿಕೊಳ್ಳುವ ಅನೇಕರು ಸಹ, ತಮಗೆ ಯಾವುದು ಸರಿಯೆಂದು ಕಾಣುತ್ತದೋ ಅದನ್ನು ಮಾಡಲು ತಮಗೆ ಸ್ವಾತಂತ್ರ್ಯವಿದೆ, ದೇವರಿಗೆ, ಆತನ ಆಜ್ಞೆಗಳಿಗೆ ಅಧೀನರಾಗಬೇಕಿಲ್ಲವೆಂದು ಯೋಚಿಸುತ್ತಾರೆ. (ಕೀರ್ತ. 14:1) ಈ ಮನೋಭಾವ ಸತ್ಯ ಕ್ರೈಸ್ತರಿಗೆ ಅಪಾಯಕಾರಿ. ಏಕೆಂದರೆ ಎಚ್ಚರವಾಗಿಲ್ಲದಿದ್ದರೆ ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನೂ ಹೀಗೆಯೇ ವೀಕ್ಷಿಸಬಹುದು. ಸಭೆಯ ಏರ್ಪಾಡುಗಳಿಗನುಸಾರ ನಡೆಯದೆ ಇರಬಹುದು. ತಮಗೆ ಇಷ್ಟವಾಗದ ವಿಷಯಗಳ ಬಗ್ಗೆ ದೂರಲೂಬಹುದು. ಇಲ್ಲವೆ ಮನರಂಜನೆ, ಇಂಟರ್‌ನೆಟ್‌ ಬಳಕೆ ಮತ್ತು ಉನ್ನತ ಶಿಕ್ಷಣದ ಕುರಿತಾದ ಬೈಬಲಾಧರಿತ ಸಲಹೆಯನ್ನು ಸಂಪೂರ್ಣವಾಗಿ ಒಪ್ಪಲಿಕ್ಕಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ