ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೇಸುವು ಜೀವಂತನಿದ್ದಾನೆ!
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 128

      ಯೇಸುವು ಜೀವಂತನಿದ್ದಾನೆ!

      ಯೇಸುವಿನ ಸಮಾಧಿಯು ಖಾಲಿಯಾಗಿರುವದನ್ನು ಸ್ತ್ರೀಯರು ಕಂಡಾಗ ಮಗಲ್ದದ ಮರಿಯಳು ಪೇತ್ರ, ಯೋಹಾನರಿಗೆ ತಿಳಿಸಲು ಓಡುತ್ತಾಳೆ. ಆದಾಗ್ಯೂ, ಇತರ ಹೆಂಗಸರು ಅಲ್ಲಿಯೇ ಸಮಾಧಿಯ ಬಳಿ ನಿಲ್ಲುತ್ತಾರೆ. ಕೂಡಲೇ ಒಬ್ಬ ದೇವದೂತನು ಗೋಚರಿಸುತ್ತಾನೆ ಮತ್ತು ಅವರನ್ನು ಒಳಗೆ ಬರಲು ಆಮಂತ್ರಿಸುತ್ತಾನೆ.

      ಇಲ್ಲಿ ಹೆಂಗಸರು ಇನ್ನೊಬ್ಬ ದೇವದೂತನನ್ನು ಕಾಣುತ್ತಾರೆ. ಮತ್ತು ದೇವದೂತರಲ್ಲೊಬ್ಬನು ಅವರಿಗೆ ಅಂದದ್ದು: “ನೀವು ಹೆದರಬೇಡಿರಿ; ವಧಾಸ್ತಂಭಕ್ಕೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; ತಾನು ಹೇಳಿದಂತೆ ಎದ್ದಿದ್ದಾನೆ; ಬನ್ನಿ ಆತನು ಮಲಗಿದ್ದ ಸ್ಥಳವನ್ನು ನೋಡಿರಿ; ಬೇಗ ಹೋಗಿ ಆತನ ಶಿಷ್ಯರಿಗೆ—ಸತ್ತವನು ಬದುಕಿದ್ದಾನೆ ಎಂದು ತಿಳಿಸಿರಿ.” ಆದರೆ ಭಯದಿಂದಲೂ ಮಹಾ ಸಂತೋಷದಿಂದಲೂ ಈ ಸ್ತ್ರೀಯರು ಓಡಿ ಹೋಗುತ್ತಾರೆ.

      ಅಷ್ಟರೊಳಗೆ, ಮರಿಯಳು ಪೇತ್ರ, ಯೋಹಾನರನ್ನು ಕಾಣುತ್ತಾಳೆ ಮತ್ತು ಅವರಿಗೆ ತಿಳಿಸುತ್ತಾಳೆ: “ಸ್ವಾಮಿಯನ್ನು ಸಮಾಧಿಯೊಳಗಿಂದ ತೆಗೆದು ಕೊಂಡು ಹೋಗಿ ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ.” ಕೂಡಲೆ ಇಬ್ಬರು ಅಪೊಸ್ತಲರೂ ಓಡಲಾರಂಭಿಸುತ್ತಾರೆ. ಯೋಹಾನನು ಕಾಲುಗಳಲ್ಲಿ ಚುರುಕು—ಎಳೆಯನೆಂದು ತೋರುತ್ತದೆ—ಅವನು ಸಮಾಧಿಯ ಬಳಿ ಮೊದಲು ತಲುಪುತ್ತಾನೆ. ಅಷ್ಟರೊಳಗೆ ಹೆಂಗಸರು ಅಲ್ಲಿಂದ ತೆರಳಿರುತ್ತಾರೆ ಮತ್ತು ಅಲ್ಲಿ ಸುತ್ತಲೂ ಯಾರೂ ಇರಲಿಲ್ಲ. ಯೋಹಾನನು ಬೊಗ್ಗಿ, ಸಮಾಧಿಯೊಳಗೆ ಇಣಿಕಿದಾಗ ಅಲ್ಲಿ ನಾರುಬಟ್ಟೆಗಳನ್ನು ಕಾಣುತ್ತಾನೆ. ಆದರೆ ಅವನು ಹೊರಗೆ ನಿಲ್ಲುತ್ತಾನೆ.

      ಪೇತ್ರನು ಬಂದಾಗ, ಅವನು ಹಿಂದೆಮುಂದೆ ನೋಡುವದಿಲ್ಲ, ನೇರವಾಗಿ ಸಮಾಧಿಯೊಳಗೆ ಹೋಗುತ್ತಾನೆ. ಅಲ್ಲಿ ನಾರುಬಟ್ಟೆಗಳು ಬಿದ್ದಿರುವದನ್ನೂ ಯೇಸುವಿನ ತಲೆಯನ್ನು ಸುತ್ತಿದ್ದ ಕೈಪಾವುಡವನ್ನು ನೋಡುತ್ತಾನೆ. ಆದು ಸುತ್ತಿ ಒಂದು ಕಡೆಯಲ್ಲಿ ಬೇರೆಯೇ ಇತ್ತು. ಈಗ ಯೋಹಾನನು ಕೂಡ ಸಮಾಧಿಯೊಳಗೆ ಪ್ರವೇಶಿಸುತ್ತಾನೆ ಮತ್ತು ಮರಿಯಳ ವರದಿಯನ್ನು ನಂಬುತ್ತಾನೆ. ಆದರೆ ಯೇಸುವು ತಾನು ಏಳಲಿದ್ದೇನೆ ಎಂದು ಅನೇಕ ಬಾರಿ ಅವರಿಗೆ ಹೇಳಿದ್ದನಾದರೂ, ಈಗ ಅವನು ಎಬ್ಬಿಸಲ್ಪಟ್ಟಿದ್ದಾನೆ ಎಂದು ಪೇತ್ರನಾಗಲಿ, ಯೋಹಾನನಾಗಲಿ ಗ್ರಹಿಸುವುದಿಲ್ಲ. ತಬ್ಬಿಬ್ಬಾಗಿ, ಇಬ್ಬರೂ ಮನೆಗೆ ಹಿಂತೆರಳುತ್ತಾರೆ, ಆದರೆ ಮರಿಯಳು ಪುನಃ ಹಿಂತಿರುಗಿ ಬಂದು ಸಮಾಧಿಯ ಬಳಿ ನಿಲ್ಲುತ್ತಾಳೆ.

      ದೇವದೂತರು ಅವರಿಗೆ ಮಾಡಲು ಅಪ್ಪಣೆ ಕೊಟ್ಟಂತೆ, ಇತರ ಹೆಂಗಸರು, ಯೇಸುವು ಪುನರುತ್ಥಾನಗೊಂಡಿದ್ದಾನೆ ಎಂದು ಶಿಷ್ಯರಿಗೆ ಹೇಳಲು ಧಾವಿಸುತ್ತಾರೆ. ಎಷ್ಟು ತೀವ್ರವಾಗಿ ಅವರಿಗೆ ಸಾಧ್ಯವೋ ಅಷ್ಟು ಬೇಗನೆ ಅವರು ಓಡುತ್ತಿರುವಾಗ, ಯೇಸುವು ಅವರಿಗೆ ಭೇಟಿಯಾಗಿ, ಹೇಳುವದು: “ನಿಮಗೆ ಶುಭವಾಗಲಿ!” ಅವರು ಅವನ ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರ ಮಾಡಿದರು. ನಂತರ ಯೇಸುವು ಹೇಳುವದು: “ಹೆದರಬೇಡಿರಿ! ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ನನ್ನನ್ನು ನೋಡುವರು.”

      ಇದಕ್ಕೆ ಮೊದಲು, ಭೂಕಂಪವಾದಾಗ ಮತ್ತು ದೇವದೂತರು ಕಾಣಿಸಿಕೊಂಡಾಗ, ಕಾವಲು ನಡಿಸುತ್ತಿದ್ದ ಸಿಪಾಯಿಗಳು ಹೆದರಿ ನಡುಗಿ ಸತ್ತವರ ಹಾಗಾದರು. ಪುನಃ ಚೇತರಿಸಲ್ಪಟ್ಟ ಮೇಲೆ, ಅವರು ಕೂಡಲೇ ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮಹಾ ಯಾಜಕರುಗಳಿಗೆ ತಿಳಿಸಿದರು. ಯೆಹೂದ್ಯರ “ಹಿರಿಯರ” ಸಂಗಡ ಸಮಾಲೋಚನೆ ನಡಿಸಿದ ನಂತರ, ಸಿಪಾಯಿಗಳಿಗೆ ಲಂಚಕೊಟ್ಟು, ವಿಷಯವನ್ನು ಮುಚ್ಚಿಬಿಡುವ ಪ್ರಯತ್ನದ ನಿರ್ಧಾರಕ್ಕೆ ಬಂದರು. ಅವರಿಗೆ ಹೇಳಿದ್ದು: “ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆ ಮಾಡುತ್ತಿರುವಾಗ ಅವನನ್ನು ಕದ್ದು ಕೊಂಡು ಹೋದರು ಎಂದು ಹೇಳಿರಿ.”

      ಅವರ ಕೆಲಸದ ಸ್ಥಾನದಲ್ಲಿ ನಿದ್ದೆ ಮಾಡಿದ್ದಕ್ಕಾಗಿ ರೋಮನ್‌ ಸಿಪಾಯಿಗಳಿಗೆ ಮರಣ ದಂಡನೆಯಾಗಬಹುದಿತ್ತು, ಆದ್ದರಿಂದ ಯಾಜಕರು ಆಶ್ವಾಸನೆಯನ್ನಿತ್ತದ್ದು: “ಈ ಸುದ್ದಿ [ನೀವು ನಿದ್ದೆ ಮಾಡಿರುವ ವರದಿ] ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನ ಪಡಿಸಿ, ನಿಮಗೆ ಭಯವಿಲ್ಲದ ಹಾಗೆ ಮಾಡುತ್ತೇವೆ.” ಕೊಡಲ್ಪಟ್ಟ ಲಂಚದ ಮೊತ್ತವು ಸಾಕಷ್ಟು ದೊಡ್ಡದ್ದಾಗಿರಬಹುದಾದ್ದರಿಂದ, ಸಿಪಾಯಿಗಳು ಅವರಿಗೆ ಹೇಳಿಕೊಟ್ಟ ಹಾಗೆ ಮಾಡಿದರು. ಅದರ ಪರಿಣಾಮವಾಗಿ, ಯೇಸುವಿನ ದೇಹದ ಕಳವಿನ ಸುಳ್ಳು ವರದಿಯು ಯೆಹೂದ್ಯರಲ್ಲಿ ವಿಸ್ತಾರವಾಗಿ ಹಬ್ಬಿತು.

      ಸಮಾಧಿಯ ಬಳಿ ನಿಂತಿದ್ದ ಮಗಲ್ದದ ಮರಿಯಳು ದುಃಖದಿಂದ ತಪ್ತಳಾಗಿದ್ದಳು. ಯೇಸುವು ಎಲ್ಲಿರಸಾಧ್ಯವಿದೆ? ಸಮಾಧಿಯೊಳಗೆ ಬೊಗ್ಗಿ ನೋಡಲಾಗಿ, ಬೆಳ್ಳಗಿರುವ ವಸ್ತ್ರ ಹೊದ್ದುಕೊಂಡು ಮರುಗೋಚರಿಸಿದ ಇಬ್ಬರು ದೇವದೂತರನ್ನು ಅವಳು ಕಾಣುತ್ತಾಳೆ! ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ತಲೆ ಇದ್ದ ಕಡೆಯಲ್ಲಿ ಇನ್ನೊಬ್ಬನು ಕಾಲಿದ್ದ ಕಡೆಯಲ್ಲಿ ಕೂತಿದ್ದರು. “ಅಮ್ಮಾ, ಯಾಕೆ ನೀನು ಅಳುತ್ತೀ?” ಅವರು ಕೇಳುತ್ತಾರೆ.

      “ನನ್ನ ಸ್ವಾಮಿಯನ್ನು ತೆಗೆದು ಕೊಂಡುಹೋಗಿದ್ದಾರೆ,” ಮರಿಯಳು ಉತ್ತರಿಸುವದು, “ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ.” ಅನಂತರ ಅವಳು ತಿರುಗಿಕೊಳ್ಳುತ್ತಾಳೆ ಮತ್ತು ಅದೇ ಪ್ರಶ್ನೆಯನ್ನು ಪುನರಾವರ್ತಿ ಯಾರೋ ಒಬ್ಬನು ಹೇಳುವದನ್ನು ಕೇಳುತ್ತಾಳೆ: “ಅಮ್ಮಾ, ಯಾಕೆ ಅಳುತ್ತೀ?” ಮತ್ತು ಅವನು ಇದನ್ನೂ ಕೇಳುತ್ತಾನೆ: “ನೀನು ಯಾರನ್ನು ಹುಡುಕುತ್ತೀ?”

      ಈ ವ್ಯಕ್ತಿಯು ಸಮಾಧಿ ಇದ್ದ ತೋಟದ ತೋಟಗಾರನೆಂದು ಎಣಿಸಿ, ಅವಳು ಅವನೊಡನೆ ಹೇಳುವದು: “ಅಯ್ಯಾ, ಆತನನ್ನು ನೀನು ಎತ್ತಿಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ನನಗೆ ಹೇಳು; ನಾನು ತೆಗೆದುಕೊಂಡು ಹೋಗುತ್ತೇನೆ.”

      “ಮರಿಯಳೇ,” ಆ ವ್ಯಕ್ತಿ ಹೇಳುವದು. ಅವಳೊಡನೆ ಮಾತಾಡುವವನ ಪರಿಚಿತವಾದ ರೀತಿಯ ಮೂಲಕ, ಅವನು ಯೇಸುವು ಎಂದು ಅವಳಿಗೆ ಕೂಡಲೇ ಗೊತ್ತಾಗುತ್ತದೆ, ಅವಳೊಡನೆ ಮಾತಾಡುವವನ ರೀತಿಯು ಪರಿಚಿತವಾದದ್ದು, ಅವನು ಯೇಸುವು. “ರಬ್ಬೂನಿ!” (ಅಂದರೆ “ಗುರುವೇ!”) ಅವಳು ಉದ್ಗರಿಸುವದು. ಅಪರಿಮಿತ ಸಂತೋಷದಿಂದ ಅವಳು ಅವನನ್ನು ಗಟ್ಟಿಯಾಗಿ ಹಿಡಿಯುತ್ತಾಳೆ. ಆದರೆ ಯೇಸುವು ಹೇಳುವದು: “ನನ್ನನ್ನು ಹಿಡಿಯಬೇಡ; ಯಾಕಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ—ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ ಎಂದು ಅವರಿಗೆ ಹೇಳು.”

      ಅಪೊಸ್ತಲರೂ, ಇತರ ಜೊತೆ ಶಿಷ್ಯರೂ ಎಲ್ಲಿ ಒಟ್ಟುಸೇರಿದ್ದರೋ ಅಲ್ಲಿಗೆ ಮರಿಯಳು ಈಗ ಓಡಿ ಹೋಗುತ್ತಾಳೆ. ಪುನರುತಿತ್ಥ ಯೇಸುವನ್ನು ಕಂಡದ್ದನ್ನು ಈಗಾಗಲೇ ಇತರ ಸ್ತ್ರೀಯರು ತಿಳಿಸಿದ ವರದಿಗೆ ತನ್ನ ವಿಷಯವನ್ನೂ ಅವಳು ಕೂಡಿಸುತ್ತಾಳೆ. ಆದರೂ, ಈ ಪುರುಷರು ಮೊದಲನೆಯ ಸ್ತ್ರೀಯರನ್ನು ನಂಬಲಿಲ್ಲ, ಅದೇ ರೀತಿಯಲ್ಲಿ ಮರಿಯಳನ್ನೂ ನಂಬಲಿಲ್ಲ. ಮತ್ತಾಯ 28:3-15; ಮಾರ್ಕ 16:5-8; ಲೂಕ 24:4-12; ಯೋಹಾನ 20:2-18.

      ▪ ಸಮಾಧಿಯು ಖಾಲಿಯಾಗಿರುವದನ್ನು ಕಂಡಾದ ನಂತರ, ಮಗಲ್ದದ ಮರಿಯಳು ಏನು ಮಾಡುತ್ತಾಳೆ, ಮತ್ತು ಇತರ ಸ್ತ್ರೀಯರಿಗೆ ಯಾವ ಅನುಭವವಾಯಿತು?

      ▪ ಸಮಾಧಿಯು ಖಾಲಿಯಾಗಿರುವದನ್ನು ಕಂಡು ಪೇತ್ರ ಮತ್ತು ಯೋಹಾನರು ಹೇಗೆ ಪ್ರತಿವರ್ತಿಸಿದರು?

      ▪ ಶಿಷ್ಯರಿಗೆ ಯೇಸುವಿನ ಪುನರುತ್ಥಾನವನ್ನು ತಿಳಿಸಲು ಹೋಗುವಾಗ ದಾರಿಯಲ್ಲಿ ಹೆಂಗಸರಿಗೆ ಯಾವುದರ ಸಮಾಗಮವಾಯಿತು?

      ▪ ಸಿಪಾಯಿಗಳಾಗಿದ್ದ ಕಾವಲುಗಾರರಿಗೆ ಏನು ಸಂಭವಿಸಿತು, ಮತ್ತು ಯಾಜಕರಿಗೆ ಮಾಡಿದ ಅವರ ವರದಿಯ ಪ್ರತಿಕ್ರಿಯೆಯೇನು?

      ▪ ಸಮಾಧಿಯ ಹತ್ತಿರ ಮಗಲ್ದದ ಮರಿಯಳು ಒಬ್ಬಳೇ ಇದ್ದಾಗ ಏನು ಸಂಭವಿಸುತ್ತದೆ ಮತ್ತು ಸ್ತ್ರೀಯರ ವರದಿಗಳಿಗೆ ಶಿಷ್ಯರ ಪ್ರತಿವರ್ತನೆ ಏನು?

  • ಇನ್ನಷ್ಟು ಗೋಚರಿಸುವಿಕೆಗಳು
    ಅತ್ಯಂತ ಮಹಾನ್‌ ಪುರುಷ
    • ಅಧ್ಯಾಯ 129

      ಇನ್ನಷ್ಟು ಗೋಚರಿಸುವಿಕೆಗಳು

      ಶಿಷ್ಯರು ಇನ್ನೂ ಎದೆಗುಂದಿದವರಾಗಿದ್ದರು. ಸಮಾಧಿಯು ಖಾಲಿಯಾಗಿರುವದರ ಸೂಚಿತಾರ್ಥವನ್ನು ಅವರು ಗ್ರಹಿಸುವದಿಲ್ಲ, ಇಲ್ಲವೇ ಸ್ತ್ರೀಯರ ವರದಿಗಳನ್ನು ಅವರು ನಂಬುವದಿಲ್ಲ. ಆದುದರಿಂದ, ಅನಂತರ ಆದಿತ್ಯವಾರ, ಕೆಯ್ಲೊಫ ಮತ್ತು ಇನ್ನೊಬ್ಬ ಶಿಷ್ಯನು ಸುಮಾರು 11 ಕಿಲೊಮೀಟರ್‌ ದೂರದಲ್ಲಿರುವ ಎಮ್ಮಾಹುಗೆ ಹೋಗಲು ಯೆರೂಸಲೇಮಿನಿಂದ ಹೊರಡುತ್ತಾರೆ.

      ದಾರಿಯಲ್ಲಿ ದಿನದ ಘಟನೆಗಳನ್ನು ಚರ್ಚಿಸುತ್ತಿರುವಾಗ, ಒಬ್ಬ ಅಪರಿಚಿತನು ಅವರೊಂದಿಗೆ ಜೊತೆಗೂಡುತ್ತಾನೆ. “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತಾಡಿಕೊಳ್ಳುವ ಆ ಸಂಗತಿಗಳೇನು?” ಅವನು ವಿಚಾರಿಸುತ್ತಾನೆ.

      ಶಿಷ್ಯರು ದುಃಖದ ಮುಖವುಳ್ಳವರಾಗಿ ನಿಂತರು, ಮತ್ತು ಕೆಯ್ಲೊಫನು ಉತ್ತರಿಸುವದು: “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿವಸಗಳಲ್ಲಿ ಅದರೊಳಗೆ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಅವನು ಕೇಳುವದು: “ಯಾವ ಸಂಗತಿಗಳು?”

      “ನಜರೇತಿನವನಾದ ಯೇಸುವಿನ ಸಂಗತಿಗಳೇ,” ಅವರು ಉತ್ತರಿಸುತ್ತಾರೆ. “ಆತನನ್ನು ಮಹಾ ಯಾಜಕರೂ ನಮ್ಮ ಅಧಿಕಾರಿಗಳೂ ಮರಣ ದಂಡನೆಗೆ ಒಪ್ಪಿಸಿ ವಧಾಸ್ತಂಭಕ್ಕೇರಿಸಿದರು. ನಾವಾದರೋ ಇಸ್ರಾಯೇಲ್‌ ಜನವನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು.”

      ಕೆಯ್ಲೋಫನು ಮತ್ತು ಅವನ ಸಂಗಾತಿಯು ಆ ದಿನದ ಆಶ್ಚರ್ಯಕರ ಘಟನೆಗಳನ್ನು ವಿವರಿಸಿದರು—ದೇವದೂತರುಗಳ ಅಲೌಕಿಕ ದೃಶ್ಯಗಳ ವರದಿ ಮತ್ತು ಖಾಲಿ ಸಮಾಧಿ—ಆದರೆ ಈ ಸಂಗತಿಗಳ ಅರ್ಥದ ಕುರಿತು ತಮ್ಮಲ್ಲುಂಟಾದ ದಿಗ್‌ಭ್ರಮೆಯನ್ನು ಒಪ್ಪಿಕೊಳ್ಳುತ್ತಾರೆ. ಅಪರಿಚಿತನು ಅವರನ್ನು ಗದರಿಸುತ್ತಾನೆ: “ಎಲಾ, ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯರೇ, ಕ್ರಿಸ್ತನು ಇಂಥ ಶ್ರಮಗಳನ್ನು ಅನುಭವಿಸಿ ತನ್ನ ಮಹಾ ಪದವಿಗೆ ಸೇರುವದು ಅಗತ್ಯವಾಗಿತ್ತಲ್ಲವೇ?” ಅನಂತರ ಅವನು ಪವಿತ್ರ ಶಾಸ್ತ್ರದಿಂದ ಕ್ರಿಸ್ತನ ಕುರಿತಾದ ಉಲ್ಲೇಖಗಳ ಅರ್ಥ ವಿವರಿಸುತ್ತಾನೆ.

      ಕೊನೆಗೆ ಅವರು ಎಮ್ಮಾಹುಗೆ ಸಮೀಪಿಸಿದಾಗ, ಈ ಅಪರಿಚಿತನು ಇನ್ನೂ ಮುಂದಕ್ಕೆ ಹೋಗುವವನಂತೆ ಕಾಣಿಸಿದನು. ಅವನಿಂದ ಇನ್ನಷ್ಟು ಕೇಳಲು ಬಯಸಿ, ಶಿಷ್ಯರು ಒತ್ತಾಯಿಸುವದು: “ನಮ್ಮ ಸಂಗಡ ಇರು, ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂತು.” ಆಗ ಆತನು ಅವರೊಂದಿಗೆ ಊಟಕ್ಕೆ ನಿಲ್ಲುತ್ತಾನೆ. ಅವನು ಪ್ರಾರ್ಥನೆಯನ್ನು ಹೇಳಿ, ರೊಟ್ಟಿ ಮುರಿದು ಅವರಿಗೆ ಕೊಡುವಾಗ, ಅವನು ನಿಜವಾಗಿಯೂ ಮಾನವ ರೂಪಾಂತರಗೊಂಡ ಯೇಸುವು ಎಂದು ಅವರಿಗೆ ಗುರುತು ಸಿಕ್ಕಿತು. ಆದರೆ ಅವನು ಆಗ ಮಾಯವಾದನು.

      ಒಬ್ಬ ಅಪರಿಚಿತನು ಅಷ್ಟೊಂದು ಸಂಗತಿಗಳನ್ನು ತಿಳಿದದ್ದು ಹೇಗೆ ಎಂದು ಈಗ ಅವರಿಗೆ ತಿಳಿದು ಬಂತು! “ಆತನು ದಾರಿಯಲ್ಲಿ ಮಾತಾಡಿದಾಗಲೂ,” ಅವರು ಕೇಳುವದು “ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” ತಡಮಾಡದೆ, ಅವರು ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು, ಅಲ್ಲಿ ಅವರು ಅಪೊಸ್ತಲರನ್ನೂ, ಅವರೊಂದಿಗೆ ಒಟ್ಟುಗೂಡಿದವರನ್ನು ಕಂಡರು. ಕೆಯ್ಲೊಫನು ಮತ್ತು ಅವನ ಸಂಗಾತಿಯು ಒಂದು ವಿಷಯವನ್ನು ಹೇಳುವ ಮೊದಲೇ, ಇತರರೂ, ಹುರುಪಿನಿಂದ ಹೇಳುತ್ತಿದ್ದರು: “ಸ್ವಾಮಿಯು ಎದ್ದದ್ದು ನಿಜ, ಸೀಮೋನನಿಗೆ ಕಾಣಿಸಿಕೊಂಡನು.” ಅನಂತರ ಯೇಸುವು ಅವರಿಗೆ ಕಾಣಿಸಿಕೊಂಡ ವಿಧವನ್ನು ಅವರಿಬ್ಬರು ವಿವರಿಸಿದರು. ಇದು ಅವನ ಶಿಷ್ಯರಲ್ಲಿ ಬೇರೆಬೇರೆಯವರಿಗೆ ಒಂದು ದಿನದಲ್ಲಿ ನಾಲ್ಕು ಬಾರಿ ಕಾಣಿಸಿಕೊಂಡಂತೆ ಆಯಿತು.

      ಯೇಸುವು ಫಕ್ಕನೆ ಐದನೆಯ ಬಾರಿ ಕಾಣಿಸಿಕೊಂಡನು. ಯೆಹೂದ್ಯರ ಹೆದರಿಕೆಯ ಕಾರಣ ಶಿಷ್ಯರು ಬಾಗಲುಗಳಿಗೆ ಬೀಗ ಹಾಕಿದ್ದರೂ, ಅವನು ಪ್ರವೇಶಿಸಿ, ಅವರ ನಡುವೆ ನಿಲ್ಲುತ್ತಾನೆ ಮತ್ತು ಹೀಗನ್ನುತ್ತಾನೆ: “ಮನಶ್ಶಾಂತಿಯಾಗಲಿ.” ತಾವು ಕಂಡದ್ದನ್ನು ಭೂತವೆಂದು ಭಾವಿಸಿ, ಅವರು ದಿಗಿಲುಬಿದ್ದು ಭಯಪಟ್ಟರು. ಆದುದರಿಂದ ತಾನು ಭೂತವಲ್ಲವೆಂದು ವಿವರಿಸುತ್ತಾ, ಯೇಸುವಂದದ್ದು: “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯದಲ್ಲಿ ಅನುಮಾನಗಳು ಹುಟ್ಟುವದೇಕೆ? ನನ್ನ ಕೈಗಳನ್ನೂ, ನನ್ನ ಕಾಲುಗಳನ್ನೂ ನೋಡಿರಿ, ನಾನೇ ಅಲ್ಲವೇ. ನನ್ನನ್ನು ಮುಟ್ಟಿ ನೋಡಿರಿ, ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು; ಅವು ಭೂತಕ್ಕಿಲ್ಲ.” ಆದರೂ, ಅವರು ನಂಬಲು ಹಿಂಜರಿದರು.

      ನಿಜವಾಗಿ ತಾನು ಯೇಸುವೇ ಆಗಿದ್ದೇನೆ ಎಂದು ತಿಳಿದು ಕೊಳ್ಳಲು ಅವರಿಗೆ ಸಹಾಯವಾಗುವಂತೆ, ಅವನು ಕೇಳುವದು: “ತಿನ್ನತಕ್ಕ ಪದಾರ್ಥವೇನಾದರೂ ಇಲ್ಲಿ ನಿಮಗುಂಟೋ?” ಸುಟ್ಟ ಮೀನಿನ ಒಂದು ತುಂಡನ್ನು ಅವರಿಂದ ಸ್ವೀಕರಿಸಿ, ಅವನು ತಿನ್ನುತ್ತಾ, ಹೇಳುವದು: “ನಾನು ಇನ್ನೂ ನಿಮ್ಮ ಸಂಗಡ ಇದ್ದಾಗ [ನನ್ನ ಮರಣದ ಮುಂಚೆ] ಇದೆಲ್ಲಾ ನಿಮಗೆ ತಿಳಿಸಿದೆನು. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯವೆಂದು ನಿಮಗೆ ಹೇಳಿದೆನು.”

      ಮುಂದುವರಿಸುತ್ತಾ, ಅವರೊಂದಿಗಿನ ಒಂದು ಬೈಬಲ್‌ ಅಧ್ಯಯನದೋಪಾದಿ, ಯೇಸುವು ಕಲಿಸುವದು: “ಕ್ರಿಸ್ತನು ಶ್ರಮೆ ಪಟ್ಟು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ ಪಾಪ ಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮ್‌ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ.”

      ಈ ಪ್ರಾಮುಖ್ಯವಾದ ಆದಿತ್ಯವಾರದ ಸಾಯಂಕಾಲದ ಕೂಟದಲ್ಲಿ ಏನೋ ಕಾರಣದಿಂದ ತೋಮನು ಇರಲಿಲ್ಲ. ಹಿಂಬಾಲಿಸಿ ಬಂದ ದಿನಗಳಲ್ಲಿ ಇತರರು ಸಂತೋಷದಿಂದ ಅವನಿಗೆ ಹೇಳಿದ್ದು: “ನಾವು ಸ್ವಾಮಿಯನ್ನು ನೋಡಿದ್ದೇವೆ!”

      “ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಘಾಯವನ್ನು ನೋಡಿ,” ತೋಮನು ಪ್ರತಿರೋಧಿಸುವದು, “ಆ ಮೊಳೆಯ ಘಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದರೆ ಹೊರತು ನಿಮ್ಮ ಮಾತನ್ನು ನಂಬುವದೇ ಇಲ್ಲ.”

      ಒಳ್ಳೇದು, ಎಂಟು ದಿವಸಗಳಾದ ನಂತರ, ಶಿಷ್ಯರು ಒಳಗಿನ ಕೋಣೆಯಲ್ಲಿ ಪುನಃ ಕೂಟವಾಗಿ ಕೂಡಿಬಂದಿದ್ದರು. ಈ ಸಾರಿ ತೋಮನೂ ಅವರೊಂದಿಗೆ ಇದ್ದನು. ಬಾಗಲುಗಳು ಬೀಗಹಾಕಿ ಮುಚ್ಚಿದ್ದರೂ, ಯೇಸುವು ಇನ್ನೊಮ್ಮೆ ಅವರ ನಡುವೆ ನಿಂತು, ಹೇಳಿದ್ದು: “ನಿಮಗೆ ಸಮಾಧಾನವಿರಲಿ.” ಅನಂತರ, ತೋಮನ ಕಡೆಗೆ ತಿರುಗಿ, ಅವನಿಗೆ ಆಮಂತ್ರಿಸುವದು: “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು; ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು; ನಂಬದವನಾಗಿರಬೇಡ, ನಂಬುವವನಾಗು.”

      “ನನ್ನ ಸ್ವಾಮಿ, ನನ್ನ ದೇವರು!” ತೋಮನು ಉದ್ಗಾರವೆತ್ತುತ್ತಾನೆ.

      “ನೀನು ನೋಡಿದರ್ದಿಂದ ನಂಬಿದ್ದೀ?” ಯೇಸುವು ಕೇಳುತ್ತಾನೆ. “ನೋಡದೆ ನಂಬಿದವರು ಧನ್ಯರು.” ಲೂಕ 24:11, 13-48; ಯೋಹಾನ 20:19-29.

      ▪ ಎಮ್ಮಾಹುಗೆ ಹೋಗುವ ದಾರಿಯಲ್ಲಿ ಇಬ್ಬರು ಶಿಷ್ಯರೊಂದಿಗೆ ಅಪರಿಚಿತನೊಬ್ಬನು ಯಾವ ವಿಚಾರಣೆ ಮಾಡುತ್ತಾನೆ?

      ▪ ಶಿಷ್ಯರ ಹೃದಯವು ಕುದಿಯುವಂತೆ ಮಾಡುವ ಯಾವದನ್ನು ಅಪರಿಚಿತನು ಹೇಳಿದನು?

      ▪ ಅಪರಿಚಿತನು ಯಾರೆಂದು ಶಿಷ್ಯರು ವಿವೇಚಿಸಿದ್ದು ಹೇಗೆ?

      ▪ ಕೆಯ್ಲೊಫನು ಮತ್ತು ಅವನ ಸಂಗಡಿಗನು ಯೆರೂಸಲೇಮಿಗೆ ಹಿಂದಿರುಗಿದಾಗ, ಯಾವ ಹುರುಪಿನ ಒಂದು ವರದಿಯನ್ನು ಅವರು ಕೇಳುತ್ತಾರೆ?

      ▪ ತನ್ನ ಶಿಷ್ಯರಿಗೆ ಯೇಸುವು ಐದನೆಯ ಸಲ ಗೋಚರಸಿದ್ದು ಹೇಗೆ ಮತ್ತು ಆ ಸಂದರ್ಭದಲ್ಲಿ ಏನು ಸಂಭವಿಸಿತು?

      ▪ ಯೇಸುವಿನ ಐದನೆಯ ಗೋಚರಿಸುವಿಕೆಯ ಎಂಟು ದಿನಗಳ ನಂತರ ಏನು ಸಂಭವಿಸುತ್ತದೆ ಮತ್ತು ಯೇಸುವು ಜೀವಂತವಿದ್ದಾನೆ ಎಂದು ಕೊನೆಗೂ ತೋಮನಿಗೆ ಮನವರಿಕೆ ಆದದ್ದು ಹೇಗೆ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ