ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
© 2025 Watch Tower Bible and Tract Society of Pennsylvania
ಜುಲೈ 7-13
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 21
ಸುಖ ಸಂಸಾರಕ್ಕೆ ಸುವರ್ಣ ಸಲಹೆಗಳು
ವಿವೇಕಯುತ ನಿರ್ಣಯಗಳನ್ನು ನೀವು ಹೇಗೆ ಮಾಡಬಲ್ಲಿರಿ?
ನಾವು ಅವಸರದಿಂದ ಮಾಡುವ ನಿರ್ಣಯಗಳು ಸುಲಭವಾಗಿ ಅವಿವೇಕಯುತ ನಿರ್ಣಯಗಳಾಗಿ ಪರಿಣಮಿಸಬಲ್ಲವು. ಜ್ಞಾನೋಕ್ತಿ 21:5 ಎಚ್ಚರಿಸುವುದು: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ.” ಉದಾಹರಣೆಗಾಗಿ, ಮೋಹಪರವಶಗೊಂಡಿರುವ ಹದಿಪ್ರಾಯದವರು ಹಿಂದುಮುಂದು ಯೋಚಿಸದೆ ಮದುವೆ ಮಾಡಿಕೊಳ್ಳಲು ನಿರ್ಧರಿಸಬಾರದು. ಇಲ್ಲವಾದರೆ, 18ನೇ ಶತಮಾನದ ಆಂಗ್ಲ ನಾಟಕಕಾರ ವಿಲ್ಯಂ ಕಾಂಗ್ರಿವ್ ಹೇಳಿದ ಮಾತುಗಳ ಸತ್ಯತೆಯನ್ನು ಅವರು ಅನುಭವಿಸಬೇಕಾದೀತು. ಅವರಂದದ್ದು: “ಅವಸರದಲ್ಲಿ ಮದುವೆಯಾದರೆ, ಪುರುಸೊತ್ತಿನಲ್ಲಿ ಚಿಂತೆಮಾಡಬೇಕಾಗಬಹುದು.”
g-E 7/08 7 ¶2
ಮದುವೆ ಜೀವನ ಯಶಸ್ಸು ಕಾಣಬೇಕಾದ್ರೆ ಏನು ಮಾಡಬೇಕು?
ದೀನತೆ ತೋರಿಸಿ. “ಏನೇ ಆದ್ರೂ ಜಗಳ ಮಾಡಬೇಡಿ, ‘ನಾನೇ ಮೇಲು’ ಅಂತ ಹೆಮ್ಮೆಪಡದೆ ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.” (ಫಿಲಿಪ್ಪಿ 2:3) ಗಂಡ ಹೆಂಡತಿ ಮಧ್ಯೆ ಜಗಳ ಬರೋದಕ್ಕೆ ಮುಖ್ಯ ಕಾರಣ, ಅವ್ರ ಮಧ್ಯೆ ಸಮಸ್ಯೆಗಳು ಬಂದಾಗ ದೀನತೆಯಿಂದ ಅದನ್ನ ಸರಿ ಮಾಡೋ ಬದಲು ಒಬ್ರ ಮೇರೊಬ್ರು ತಪ್ಪು ಹೊರಿಸ್ತಾರೆ. ಆದ್ರೆ ಹೀಗೆ ಮಾಡದೇ ದೀನತೆ ತೋರಿಸಿದ್ರೆ ಇನ್ನೊಬ್ರ ಮೇಲೆ ತಪ್ಪು ಹೊರಿಸ್ತಾ ‘ನಾನೇ ಸರಿ’ ಅಂತ ಹೇಳಲ್ಲ.
“ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು”
13 ಸಂಗಾತಿಗಳೇ ಪರಸ್ಪರರೊಂದಿಗೆ ನಡೆದುಕೊಳ್ಳುವ ರೀತಿಯು ವಿವಾಹದ ಮೇಲೆ ಒತ್ತಡಹಾಕುತ್ತಿರುವಲ್ಲಿ ಆಗೇನು? ಪರಿಹಾರವನ್ನು ಹುಡುಕಲಿಕ್ಕಾಗಿ ಪ್ರಯತ್ನ ಅವಶ್ಯ. ದೃಷ್ಟಾಂತಕ್ಕಾಗಿ, ಅವರ ವಿವಾಹಜೀವನದಲ್ಲಿ ನಿರ್ದಯ ಮಾತುಗಳು ನಿಧಾನವಾಗಿ ನುಸುಳಿ, ಈಗ ಅದರ ಭಾಗವಾಗಿಬಿಟ್ಟಿರಬಹುದು. (ಜ್ಞಾನೋಕ್ತಿ 12:18) ಹಿಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವಂತೆ ಇದರಿಂದಾಗುವ ಪರಿಣಾಮಗಳು ಧ್ವಂಸಕರವಾಗಿರಬಲ್ಲವು. ಒಂದು ಬೈಬಲ್ ಜ್ಞಾನೋಕ್ತಿಯು ಹೇಳುವುದು: “ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ ಕಾಡಿನ ವಾಸವೇ ಲೇಸು.” (ಜ್ಞಾನೋಕ್ತಿ 21:19) ಇಂಥ ವಿವಾಹಜೀವನವಿರುವ ಒಬ್ಬ ಹೆಂಡತಿ ನೀವಾಗಿರುವಲ್ಲಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಸ್ವಭಾವದಿಂದಾಗಿ ನನ್ನ ಗಂಡನಿಗೆ ನನ್ನೊಂದಿಗೆ ಸಮಯಕಳೆಯಲು ಕಷ್ಟವಾಗುತ್ತಿದೆಯೊ?’ ಬೈಬಲ್ ಗಂಡಂದಿರಿಗೆ ಹೀಗನ್ನುತ್ತದೆ: “ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ.” (ಕೊಲೊಸ್ಸೆ 3:19) ನೀವೊಬ್ಬ ಗಂಡನಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನನ್ನ ನಡವಳಿಕೆಯು ಭಾವಶೂನ್ಯವಾಗಿದ್ದು, ನನ್ನ ಹೆಂಡತಿ ಬೇರೆಲ್ಲಿಂದಾದರೂ ಸಮಾಧಾನ ಪಡೆಯುವಂತೆ ಮಾಡುತ್ತದೊ?’ ಲೈಂಗಿಕ ಅನೈತಿಕತೆಯನ್ನು ನಡೆಸಿದಕ್ಕಾಗಿ ಯಾವುದೇ ನೆವವನ್ನು ಕೊಡಲು ಸಾಧ್ಯವಿಲ್ಲವೆಂಬುದಂತೂ ನಿಜ. ಆದರೂ, ಅಂಥ ದುರಂತವು ನಡೆಯಸಾಧ್ಯವಿದೆ ಎಂಬುದು ವಾಸ್ತವಾಂಶವಾಗಿರುವುದರಿಂದ, ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಇದೊಂದು ಉತ್ತಮ ಕಾರಣವಾಗಿದೆ.
ಬೈಬಲಿನಲ್ಲಿರುವ ರತ್ನಗಳು
ದೇವರ ರಾಜ್ಯದ ಮುನ್ನೋಟಗಳು ವಾಸ್ತವಿಕವಾಗಿ ಪರಿಣಮಿಸುತ್ತವೆ
9 ಯೇಸು ಈಗ ಕತ್ತೆಮರಿಯ ಮೇಲೆ ಕುಳಿತುಕೊಂಡಿರುವ ಒಬ್ಬ ಮಾನವನಲ್ಲ, ಬದಲಿಗೆ ಒಬ್ಬ ಪ್ರಬಲ ಅರಸನಾಗಿದ್ದಾನೆ. ಒಂದು ಕುದುರೆಯ ಮೇಲೆ ಸವಾರಿಮಾಡುತ್ತಿರುವವನಂತೆ ಅವನನ್ನು ಚಿತ್ರಿಸಲಾಗಿದೆ; ಈ ರೀತಿಯ ಸವಾರಿಯು ಬೈಬಲಿನಲ್ಲಿ ಯುದ್ಧದ ಸಂಕೇತವಾಗಿದೆ. (ಜ್ಞಾನೋಕ್ತಿ 21:31) ಪ್ರಕಟನೆ 6:2 ಹೇಳುವುದು: “ಇಗೋ, ಒಂದು ಬಿಳಿ ಕುದುರೆ ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಬಿಲ್ಲು ಇತ್ತು; ಅವನಿಗೆ ಜಯಮಾಲೆ ಕೊಡಲ್ಪಟ್ಟಿತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.” ಅಷ್ಟುಮಾತ್ರವಲ್ಲ, ಯೇಸುವಿನ ಕುರಿತಾಗಿ ಕೀರ್ತನೆಗಾರನಾದ ದಾವೀದನು ಬರೆದುದು: “ಯೆಹೋವನು ನಿನ್ನ ರಾಜದಂಡದ ಆಳಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು.”—ಕೀರ್ತನೆ 110:2.
ಜುಲೈ 14-20
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 22
ಮಕ್ಕಳನ್ನ ಬೆಳೆಸಲು ಸುವರ್ಣ ಸಲಹೆಗಳು
ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡ್ತಾರಾ?
7 ನಿಮ್ಗೆ ಮದ್ವೆಯಾಗಿದ್ದು ಮಕ್ಕಳಾಗಬೇಕು ಅಂತ ಆಸೆ ಇದ್ರೆ, ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ನಾವು ದೀನ ವ್ಯಕ್ತಿಗಳಾ? ಯೆಹೋವನನ್ನ ಪ್ರೀತಿಸ್ತೇವಾ? ಆತನ ವಾಕ್ಯ ಹೇಳೋ ತರ ನಡ್ಕೊಳ್ತೇವಾ? ನಮ್ಗೆ ಮಗುವಾದ್ರೆ ಅದನ್ನ ಒಳ್ಳೇ ರೀತಿಯಲ್ಲಿ ಬೆಳೆಸ್ತೇವೆ ಅಂತ ಯೆಹೋವ ನಮ್ಮ ಮೇಲೆ ಭರವಸೆ ಇಡೋಕಾಗುತ್ತಾ? ನಾವು ಆ ತರ ಇದ್ದೀವಾ?’ (ಕೀರ್ತ. 127:3, 4) ಒಂದ್ವೇಳೆ ನಿಮಗೆ ಮಕ್ಕಳಿರೋದಾದ್ರೆ ಈ ಪ್ರಶ್ನೆಗಳನ್ನು ಕೇಳ್ಕೊಳ್ಳಿ: ‘ಕಷ್ಟಪಟ್ಟು ದುಡಿಯೋದು ಯಾಕೆ ಒಳ್ಳೇದು ಅಂತ ಮಕ್ಕಳಿಗೆ ಕಲಿಸ್ತಿದ್ದೇನಾ? (ಪ್ರಸಂ. 3:12, 13) ಸೈತಾನನ ಲೋಕದಿಂದ ನನ್ನ ಮಕ್ಕಳನ್ನ ಕಾಪಾಡೋಕೆ ನನ್ನಿಂದಾದ ಪ್ರಯತ್ನ ಮಾಡ್ತಿದ್ದೇನಾ? ಅಂದ್ರೆ ಅವ್ರಿಗೆ ಎದುರಾಗೋ ದೌರ್ಜನ್ಯಗಳಿಂದ, ಸೈತಾನನ ಲೋಕದ ಕೆಟ್ಟ ಪ್ರಭಾವಗಳಿಂದ ಅವ್ರನ್ನ ಕಾಪಾಡ್ತಿದ್ದೀನಾ?’ (ಜ್ಞಾನೋ. 22:3) ನೀವು ಮಕ್ಕಳ ಹಿಂದೆನೇ ಇದ್ದು ಅವ್ರನ್ನು ಎಲ್ಲಾ ಸಮಸ್ಯೆಗಳಿಂದ ತಪ್ಪಿಸೋಕಾಗಲ್ಲ. ಆದ್ರೆ ಅವ್ರ ಜೀವನದಲ್ಲಿ ಕಷ್ಟಗಳು ಎದುರಾದಾಗ ಅವನ್ನು ಜಯಿಸೋಕೆ ಬೈಬಲಿಂದ ಹೇಗೆ ಸಹಾಯ ಪಡ್ಕೊಳ್ಳಬಹುದು ಅನ್ನೋದನ್ನು ಪ್ರೀತಿಯಿಂದ ಕಲಿಸ್ತಾ ಇರಿ. (ಜ್ಞಾನೋಕ್ತಿ 2:1-6 ಓದಿ.) ಉದಾಹರಣೆಗೆ, ಸಂಬಂಧಿಕರಲ್ಲಿ ಒಬ್ರು ಯೆಹೋವನ ಆರಾಧನೆಯನ್ನ ನಿಲ್ಲಿಸಿಬಿಟ್ರೆ ಆಗ ನಾವು ಯೆಹೋವನಿಗೆ ನಿಷ್ಠರಾಗಿ ಉಳಿಯೋದು ಯಾಕೆ ಒಳ್ಳೇದು ಅಂತ ಮಕ್ಕಳಿಗೆ ದೇವರ ವಾಕ್ಯದಿಂದ ಕಲಿಸಿ. (ಕೀರ್ತ. 31:23) ಅಥವಾ ಕುಟುಂಬದಲ್ಲಿ ಒಬ್ರು ತೀರಿಹೋದ್ರೆ ಆ ದುಃಖವನ್ನು ಸಹಿಸಿಕೊಳ್ಳೋಕೆ, ಸಮಾಧಾನ ಮಾಡ್ಕೊಳ್ಳೋಕೆ ಸಹಾಯ ಮಾಡೋ ಬೈಬಲ್ ವಚನಗಳನ್ನ ಮಕ್ಕಳಿಗೆ ತೋರಿಸಿ.—2 ಕೊರಿಂ. 1:3, 4; 2 ತಿಮೊ. 3:16.
ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ
17 ಮಕ್ಕಳಿಗೆ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ತರಬೇತಿ ಕೊಡಲು ಶುರುಮಾಡಿ. ಹೆತ್ತವರು ಮಕ್ಕಳಿಗೆ ಎಷ್ಟು ಬೇಗ ತರಬೇತಿ ಕೊಡುತ್ತಾರೋ ಅಷ್ಟು ಒಳ್ಳೇದು. (ಜ್ಞಾನೋ. 22:6) ತಿಮೊಥೆಯನ ಉದಾಹರಣೆ ನೋಡಿ. ಅವನ ತಾಯಿ ಯೂನಿಕೆ ಮತ್ತು ಅಜ್ಜಿ ಲೋವಿ ಅವನಿಗೆ “ಶೈಶವದಿಂದಲೇ” ಅಂದ್ರೆ ಎಳೇ ಮಗು ಆಗಿರುವಾಗಲೇ ತರಬೇತಿ ಕೊಡೋಕೆ ಶುರುಮಾಡಿದ್ರು. (2 ತಿಮೊ. 1:5; 3:15) ಮುಂದೆ ಅವ್ನು ದೊಡ್ಡವನಾದಾಗ ಪೌಲನ ಜೊತೆ ಸಂಚರಣ ಕೆಲಸ ಮಾಡಿದ್ನು.
18 ಕೋಟ್ ಡೀವಾರ್‌ನಲ್ಲಿರುವ ಜಾನ್ ಕ್ಲಾಡ್ ಮತ್ತು ಪೀಸ್ ಎಂಬ ದಂಪತಿ ತಮ್ಮ ಆರೂ ಮಕ್ಕಳು ಯೆಹೋವನನ್ನು ಪ್ರೀತಿಸಿ ಆರಾಧಿಸುವಂತೆ ಬೆಳೆಸಿದ್ರು. ಇದನ್ನು ಮಾಡಲು ಅವರಿಗೆ ಯಾವ್ದು ಸಹಾಯ ಮಾಡ್ತು? ಅವ್ರು ಯೂನಿಕೆ ಮತ್ತು ಲೋವಿಯ ಮಾದರಿಯನ್ನು ಅನುಕರಿಸಿದ್ರು. ಅವ್ರು ಹೀಗೆ ಹೇಳ್ತಾರೆ: “ನಮ್ಮ ಮಕ್ಕಳು ಹುಟ್ಟಿದ ಸ್ವಲ್ಪ ಸಮಯದಿಂದಲೇ ನಾವು ಅವ್ರಿಗೆ ದೇವರ ವಾಕ್ಯವನ್ನು ಅಭ್ಯಾಸ ಮಾಡಿಸಲು ಆರಂಭಿಸಿದೆವು.”—ಧರ್ಮೋ. 6:6, 7.
19 ಯೆಹೋವನ ವಾಕ್ಯವನ್ನು ಮಕ್ಕಳಿಗೆ ‘ಅಭ್ಯಾಸ ಮಾಡಿಸುವುದು’ ಅಂದ್ರೇನು? ‘ಅಭ್ಯಾಸ ಮಾಡಿಸುವುದು’ ಅಂದ್ರೆ, “ಪುನಃ ಪುನಃ ಹೇಳುವ ಮೂಲಕ ಕಲಿಸುವುದು ಅಥವಾ ಮನ್ಸಲ್ಲಿ ಅಚ್ಚೊತ್ತಿಸುವುದು” ಎಂದರ್ಥ. ಹೆತ್ತವರು ಹೀಗೆ ಮಾಡ್ಬೇಕಂದ್ರೆ, ತಮ್ಮ ಮಕ್ಕಳ ಜೊತೆ ಪ್ರತಿದಿನ ಸಮಯ ಕಳೀಬೇಕು. ಮಕ್ಕಳಿಗೆ ಹೇಳಿದ್ದನ್ನೇ ಪುನಃ ಪುನಃ ಹೇಳ್ಬೇಕಂದ್ರೆ ಹೆತ್ತವರಿಗೆ ಕಿರಿಕಿರಿ ಆಗ್ಬಹುದು. ಆದ್ರೆ ಹೆತ್ತವರು ಹೀಗೆ ಮಾಡೋದ್ರಿಂದ್ಲೇ ಮಕ್ಕಳು ದೇವರ ವಾಕ್ಯವನ್ನು ಅರ್ಥಮಾಡಿಕೊಂಡು ಅನ್ವಯಿಸಲಿಕ್ಕೆ ಸಹಾಯ ಆಗುತ್ತೆ.
ಹೆತ್ತವರೇ ನಿಮ್ಮ ಮಕ್ಕಳಿಗೆ ಉತ್ತಮ ಮಾದರಿಯಾಗಿರಿ
ಮಕ್ಕಳು ಮಕ್ಕಳೇ. ಕೆಲವರು ಹಟಮಾರಿಗಳು, ಮೊಂಡುತನದವರೂ ಆಗಿರುತ್ತಾರೆ. (ಆದಿಕಾಂಡ 8:21) ಆದರೆ ಹೆತ್ತವರು ಏನು ಮಾಡಸಾಧ್ಯವಿದೆ? “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವದು” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 22:15) ಇದು ಈಗಿನ ಕಾಲಕ್ಕೆ ಉಪಯುಕ್ತವಲ್ಲದ ಕಠೋರವಾದ ವರ್ತನೆ ಎಂದು ಕೆಲವರು ಭಾವಿಸುತ್ತಾರೆ. ಬೈಬಲ್ ಹಿಂಸಾಕೃತ್ಯ ಮತ್ತು ಯಾವುದೇ ರೀತಿಯ ದುರ್ವರ್ತನೆಯನ್ನು ವಿರೋಧಿಸುತ್ತದೆ. “ಬೆತ್ತ” ಎಂದು ಹೇಳುವಾಗ ಕೆಲವೊಮ್ಮೆ ಅಕ್ಷರಾರ್ಥವಾದ ಶಿಕ್ಷೆಯನ್ನು ಸೂಚಿಸುವುದಾದರೂ ಅನೇಕವೇಳೆ ಅದು, ಪ್ರೀತಿಯಿಂದಲೂ ಮಕ್ಕಳ ನಿತ್ಯ ಹಿತಚಿಂತನೆಯಿಂದಲೂ ಕಟ್ಟುನಿಟ್ಟಾಗಿ ನಿರ್ವಹಿಸಲ್ಪಡುವ ಹೆತ್ತವರ ಅಧಿಕಾರವನ್ನು ಸೂಚಿಸುತ್ತದೆ.—ಇಬ್ರಿಯ 12:7-11.
ಬೈಬಲಿನಲ್ಲಿರುವ ರತ್ನಗಳು
ಇರೋ ನೇಮಕವನ್ನ ಖುಷಿಯಿಂದ ಮಾಡಿ
11 ಯೆಹೋವನ ಸೇವೆಲಿ ನಿಮಗೆ ಸಿಗೋ ಕೆಲಸನ ಕಷ್ಟಪಟ್ಟು ಚೆನ್ನಾಗಿ ಮಾಡಿ. ಆಗ ನಿಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. “ಜಾಸ್ತಿ ಸಮಯ” ಸಿಹಿಸುದ್ದಿ ಸಾರಿ, ಸಭೆ ಕೆಲಸಗಳಲ್ಲಿ ಬಿಝಿ ಆಗಿರಿ. (ಅ. ಕಾ. 18:5; ಇಬ್ರಿ. 10:24, 25) ಕೂಟಗಳಿಗೆ ಚೆನ್ನಾಗಿ ತಯಾರಿಮಾಡಿ. ಒಳ್ಳೇ ಉತ್ತರಗಳನ್ನ ಕೊಡಿ. ವಾರಮಧ್ಯದ ಕೂಟದಲ್ಲಿ ವಿದ್ಯಾರ್ಥಿ ನೇಮಕನ ಚೆನ್ನಾಗಿ ಮಾಡಿ. ಕೊಟ್ಟ ಕೆಲಸನ ಹೇಳಿದ ಸಮಯಕ್ಕೆ ನಿಯತ್ತಾಗಿ ಮಾಡಿ. ‘ಒಂದು ಚಿಕ್ಕ ಕೆಲಸಕ್ಕೆ ಅಷ್ಟೊಂದು ಸಮಯ ಕೊಡಬೇಕಾ?’ ಅಂತ ನೆನಸಬೇಡಿ. ಒಂದು ಕೆಲಸನಾ ಚೆನ್ನಾಗಿ ಮಾಡೋಕೆ ಕಲಿಯಿರಿ. (ಜ್ಞಾನೋ. 22:29) ಯೆಹೋವನ ಸೇವೆನ ಕಷ್ಟಪಟ್ಟು ಚೆನ್ನಾಗಿ ಮಾಡಿದ್ರೆ ನಿಮ್ಮ ಮತ್ತು ಯೆಹೋವನ ಸ್ನೇಹ ಚೆನ್ನಾಗಿರುತ್ತೆ, ನಿಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. (ಗಲಾ. 6:4) ಅಷ್ಟೇ ಅಲ್ಲ, ನೀವು ಇಷ್ಟಪಡೋ ಸುಯೋಗ ಬೇರೆಯವರಿಗೆ ಸಿಕ್ಕಿದಾಗ ನೀವು ಬೇಜಾರು ಮಾಡಿಕೊಳ್ಳಲ್ಲ, ಖುಷಿಯಾಗಿ ಇರ್ತೀರ.—ರೋಮ. 12:15; ಗಲಾ. 5:26.
ಜುಲೈ 21-27
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 23
ಮದ್ಯಪಾನದ ಬಗ್ಗೆ ಕೆಲವು ಕಿವಿಮಾತು
ಮದ್ಯವನ್ನು ಉಪಯೋಗಿಸುವ ವಿಷಯದಲ್ಲಿ ಸಮತೂಕ ನೋಟವುಳ್ಳವರಾಗಿರಿ
5 ಒಬ್ಬನು ಮದ್ಯಪಾನಮಾಡಿರುವುದಾದರೂ, ಅವನು ಕುಡಿದಿದ್ದಾನೆಂದು ಇತರರು ಗ್ರಹಿಸುವಷ್ಟರ ಮಟ್ಟಿಗೆ ಕುಡಿಯದಿರುವಂತೆ ಜಾಗರೂಕನಾಗಿರುವುದು ಹಾನಿರಹಿತವೋ? ಕೆಲವು ವ್ಯಕ್ತಿಗಳು ಬಹಳಷ್ಟು ಮದ್ಯವನ್ನು ಸೇವಿಸಿದ ಬಳಿಕವೂ ಕುಡಿಕತನದ ಯಾವುದೇ ಲಕ್ಷಣವನ್ನು ತೋರಿಸುವುದಿಲ್ಲ. ಆದರೂ, ಇಂಥ ರೂಢಿಯು ಹಾನಿರಹಿತವಾಗಿದೆ ಎಂದು ನೆನಸುವುದು ವಾಸ್ತವದಲ್ಲಿ ಒಂದು ರೀತಿಯ ಆತ್ಮವಂಚನೆಯಾಗಿದೆ. (ಯೆರೆಮೀಯ 17:9) ಕ್ರಮೇಣವಾಗಿ, ಪ್ರಗತಿಪರವಾಗಿ ಒಬ್ಬನು ಮದ್ಯಪಾನದ ಮೇಲೆ ಅವಲಂಬನೆಯನ್ನು ಬೆಳೆಸಿಕೊಳ್ಳಬಹುದು ಮತ್ತು ‘ಮದ್ಯಕ್ಕೆ ಗುಲಾಮನೂ’ ಆಗಬಹುದು. (ತೀತ 2:2) ಒಬ್ಬ ಮದ್ಯವ್ಯಸನಿಯಾಗಿ ಪರಿಣಮಿಸುವ ಕಾರ್ಯಗತಿಯ ಕುರಿತು ಬರಹಗಾರ್ತಿಯಾದ ಕ್ಯಾರಲೈನ್ ನ್ಯಾಪ್ ಹೇಳುವುದು: “ಮದ್ಯವ್ಯಸನಿಯಾಗುವುದು, ನಿಧಾನಗತಿಯ, ಕ್ರಮೇಣವಾದ, ಕುಟಿಲವಾದ, ವರ್ಣಿಸಲಸಾಧ್ಯವಾದ ಕಾರ್ಯಗತಿಯಾಗಿದೆ.” ಮದ್ಯಪಾನದಲ್ಲಿ ವಿಪರೀತವಾಗಿ ಒಳಗೂಡುವುದು ಎಷ್ಟು ಮಾರಕವಾದ ಪಾಶವಾಗಿದೆ!
6 ಯೇಸುವಿನ ಎಚ್ಚರಿಕೆಯನ್ನೂ ಪರಿಗಣಿಸಿರಿ: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.” (ಲೂಕ 21:34, 35) ಕುಡಿಯುವುದು ಒಬ್ಬ ವ್ಯಕ್ತಿಯನ್ನು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಜಡಗಟ್ಟಿಸುವ ಹಾಗೂ ಸೋಮಾರಿಯನ್ನಾಗಿ ಮಾಡುವ ಮುಂಚೆ ಅದು ಕುಡಿಕತನದ ಮಟ್ಟವನ್ನು ತಲಪಬೇಕೆಂದಿಲ್ಲ. ಅವನು ಈ ಸ್ಥಿತಿಯಲ್ಲಿರುವಾಗಲೇ ಯೆಹೋವನ ದಿನವು ಬರುವುದಾದರೆ ಆಗೇನು?
it-1-E 656
ಕುಡಿಕತನ
ಬೈಬಲಿನಲ್ಲಿ ಖಂಡಿಸಲಾಗಿದೆ. ಕಂಠಪೂರ್ತಿ ಕುಡಿಯೋದನ್ನ ಕುಡಿಕತನ ಅಂತ ಹೇಳ್ತಾರೆ, ಇದನ್ನ ಬೈಬಲ್ ಖಂಡಿಸುತ್ತೆ. ಅದಕ್ಕೆ ಜ್ಞಾನೋಕ್ತಿ ಪುಸ್ತಕವನ್ನ ಬರೆದ ವ್ಯಕ್ತಿ ಅತಿಯಾಗಿ ಕುಡಿಯೋದ್ರಿಂದ ಏನೆಲ್ಲಾ ಆಗುತ್ತೆ ಅಂತ ಬರೆದಿದ್ದಾನೆ. ಅವನು ಹೇಳೋದು, “ಯಾರಿಗೆ ಕಷ್ಟ? ಯಾರಿಗೆ ದುಃಖ? ಯಾರಿಗೆ ಜಗಳ ಇದೆ? ಯಾರಿಗೆ ದೂರಿದೆ? ಯಾರಿಗೆ ಕಾರಣ ಇಲ್ಲದೆ ಗಾಯ ಆಗಿದೆ? ಯಾರ ಕಣ್ಣು ಮಬ್ಬಾಗಿದೆ? ಯಾರಿಗಂದ್ರೆ ದ್ರಾಕ್ಷಾಮದ್ಯ ಕುಡಿದು ಕಾಲಹರಣ ಮಾಡುವವರಿಗೆ, ಅಮಲೇರಿಸೋ ದ್ರಾಕ್ಷಾಮದ್ಯ ಹುಡುಕುವವರಿಗೆ. ಲೋಟದಲ್ಲಿ ಮಿನುಗೋ, ಸಲೀಸಾಗಿ ಇಳಿದುಹೋಗೋ, ದ್ರಾಕ್ಷಾಮದ್ಯದ ಕೆಂಪು ಬಣ್ಣ ನೋಡಬೇಡ. ಯಾಕಂದ್ರೆ ಕೊನೇಲಿ ಅದು ಹಾವಿನ ತರ ಕಚ್ಚುತ್ತೆ, ವಿಷ ತುಂಬಿರೋ ಹಾವಿನ ತರ ವಿಷ ಕಾರುತ್ತೆ.” ಇದ್ರ ಅರ್ಥ ಏನಂದ್ರೆ ಜಾಸ್ತಿ ಕುಡಿಯೋದ್ರಿಂದ ಆರೋಗ್ಯ ಹಾಳಾಗುತ್ತೆ. ಉದಾಹರಣೆಗೆ, ಲಿವರ್ ಹಾಳಾಗುತ್ತೆ, ಜೊತೆಗೆ ಮಾನಸಿಕ ತೊಂದ್ರೆನೂ ಆಗುತ್ತೆ. ಕುಡಿದ ವ್ಯಕ್ತಿಗೆ ಗೊಂದಲ ಆಗುತ್ತೆ, ಕೈಕಾಲು ನಡುಗುತ್ತೆ, ಭಯ ಆಗುತ್ತೆ. ಅಷ್ಟೇ ಅಲ್ಲ ಇದ್ರಿಂದ ಅವನು ಸಾಯಲೂಬಹುದು. ಅವನ “ಕಣ್ಣುಗಳು ವಿಚಿತ್ರ ವಿಷ್ಯಗಳನ್ನ ನೋಡುತ್ತೆ.” ಅಂದ್ರೆ ಮದ್ಯ ಕುಡಿಯೋದ್ರಿಂದ ಮೆದುಳು ಸರಿಯಾಗಿ ಕೆಲ್ಸ ಮಾಡಲ್ಲ, ಅವನು ವಿಚಿತ್ರವಾಗಿ ನಡ್ಕೊತಾನೆ. ಅವನ “ಹೃದಯ ತಪ್ಪನ್ನ ಸಾಧಿಸೋ ಮಾತುಗಳನ್ನ ಆಡುತ್ತೆ.” ಈ ಮಾತಿನ ಅರ್ಥ ಏನಂದ್ರೆ ಕುಡಿದ ವ್ಯಕ್ತಿ ಮನಸ್ಸಿಗೆ ಬಂದ ಹಾಗೆ ಮಾತಾಡ್ತಾನೆ, ಮನಸ್ಸಿಗೆ ಬಂದ ಹಾಗೆ ನಡ್ಕೊತಾನೆ.—ಜ್ಞಾನೋ 23:29-33; ಹೋಶೇ 4:11; ಮತ್ತಾ 15:18, 19.
ಕುಡಿದವನಿಗೆ ಏನು ಅನಿಸುತ್ತೆ ಅಂತನೂ ಜ್ಞಾನೋಕ್ತಿ ಬರೆದವನು ಹೇಳಿದ್ದಾನೆ. ಅವನು ಹೀಗೆ ಬರೆದಿದ್ದಾನೆ: “ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮಧ್ಯ ಮಲಗೋ ವ್ಯಕ್ತಿ ತರ, ಹಡಗಿನ ಪಟ ಕಟ್ಟೋ ಕಂಬದ ಮೇಲೆ ಬಿದ್ಕೊಂಡಿರೋ ವ್ಯಕ್ತಿ ತರ ನೀನಿರ್ತಿಯ.” ಅಂದ್ರೆ ಕುಡಿದ ವ್ಯಕ್ತಿಗೆ ತಾನು ತೇಲಾಡ್ತಿರೋ ತರ ಅನಿಸುತ್ತೆ, ಕೊನೆಗೆ ಅವನು ಪ್ರಜ್ಞೆ ಕಳ್ಕೊತಾನೆ. ಹಡಗಿನ ತರ ಅವನ ಜೀವನ ಅಲ್ಲಾಡ್ತಿರುತ್ತೆ, ಕುಡುಕನ ಜೀವಕ್ಕೆ ಯಾವಾಗ ಬೇಕಾದ್ರೂ ಅಪಾಯ ಆಗಬಹುದು, ಅಪಘಾತ, ಸ್ಟ್ರೋಕ್, ಜಗಳ ಇಂಥಾ ಅಪಾಯದಲ್ಲಿ ಅವನು ಸಿಕ್ಕಾಕೊಳ್ಳಬಹುದು.
ಕುಡಿದ ವ್ಯಕ್ತಿ “ಅವರು ನನಗೆ ಹೊಡೆದ್ರು. ನನಗೆ ನೋವಾಗ್ಲೇ ಇಲ್ಲ. ಅವರು ನನಗೆ ಬಾರಿಸಿದ್ರು, ನನಗೆ ಗೊತ್ತಾಗ್ಲೇ ಇಲ್ಲ” ಅಂತ ಹೇಳ್ತಾನೆ. ಇದರರ್ಥ ಏನಂದ್ರೆ ಕುಡಿದ ವ್ಯಕ್ತಿ ಅವನಿಗೆ ಅವನೇ ಮಾತಾಡ್ಕೊತಾನೆ. ತನ್ನ ಸುತ್ತಮುತ್ತ ಏನಾಗುತ್ತೆ ಅಂತ ಅವನಿಗೆ ಗೊತ್ತಾಗಲ್ಲ, ಅವನಿಗೆ ನೋವಾದ್ರೂ, ಯಾರಾದ್ರೂ ಹೊಡೆದ್ರೂ ಅವನಿಗೆ ಗೊತ್ತಾಗಲ್ಲ. “ನಾನು ಯಾವಾಗ ಎದ್ದು ಇನ್ನು ಸ್ವಲ್ಪ ಕುಡಿಯೋದು?” ಅಂತ ಯೋಚ್ನೆ ಮಾಡ್ತಾನೆ. ಕಂಠಪೂರ್ತಿ ಕುಡಿದ ವ್ಯಕ್ತಿಗೆ ನಿದ್ದೆ ಮಾಡಿ ಎದ್ದ ಮೇಲೆನೇ ಅವನ ನಶೆ ಇಳಿಯೋದು, ನಶೆ ಇಳಿದ ಮೇಲೆ ಅವನಿಗೆ ಮತ್ತೆ ಕುಡಿಬೇಕು ಅನ್ಸುತ್ತೆ. ಹೀಗೆ ಅವನು ಕುಡಿಯೋಕೆ ದಾಸನಾಗ್ತಾನೆ. ಕುಡುಕ ತನ್ನ ಕೈಯಲ್ಲಿರೋ ದುಡ್ಡನ್ನೆಲ್ಲಾ ಕುಡಿಯೋದಕ್ಕೆ ಸುರಿತಾ ಬಡತನಕ್ಕೆ ಬಲಿ ಬೀಳ್ತಾನೆ, ಅವನಿಗೆ ಏನೂ ಕೆಲ್ಸ ಮಾಡೋದಕ್ಕೆ ಆಗಲ್ಲ, ಅಷ್ಟೇ ಅಲ್ಲ ಅವನನ್ನ ಯಾರೂ ನಂಬಲ್ಲ.—ಜ್ಞಾನೋ 23:20, 21, 34, 35.
ಬೈಬಲಿನಲ್ಲಿರುವ ರತ್ನಗಳು
ವಾಚಕರಿಂದ ಪ್ರಶ್ನೆಗಳು
ಉದಾಹರಣೆಗೆ, ಸ್ಥೂಲಕಾಯವು ಹೊಟ್ಟೆಬಾಕತನದ ಸೂಚನೆಯಾಗಿರಬಹುದು. ಆದರೆ, ಅದು ಯಾವಾಗಲೂ ಸತ್ಯವಾಗಿರುವುದಿಲ್ಲ. ಒಬ್ಬ ವ್ಯಕ್ತಿಯು ಸ್ಥೂಲಕಾಯನಾಗಿರುವುದಕ್ಕೆ ಒಂದು ಅಸ್ವಸ್ಥತೆಯು ಕಾರಣವಾಗಿರಬಹುದು. ಕೆಲವೊಮ್ಮೆ ಅನುವಂಶಿಕ ಸಂಗತಿಗಳು ಸಹ ಸ್ಥೂಲಕಾಯವನ್ನು ಹೊಂದಿರುವುದಕ್ಕೆ ಕಾರಣವಾಗಿರುತ್ತವೆ. ನಾವು ಮನಸ್ಸಿನಲ್ಲಿಡಬೇಕಾದ ಇನ್ನೊಂದು ವಿಷಯವೇನೆಂದರೆ, ಸ್ಥೂಲಕಾಯವು ಒಂದು ದೈಹಿಕ ಸ್ಥಿತಿಯಾಗಿದೆ, ಆದರೆ ಹೊಟ್ಟೆಬಾಕತನವು ಒಂದು ಮನೋಭಾವವಾಗಿದೆ. ಸ್ಥೂಲಕಾಯವನ್ನು ವಿಪರೀತ ಬೊಜ್ಜುಳ್ಳ ಶಾರೀರಿಕ ಸ್ಥಿತಿ ಎಂದು ಅರ್ಥನಿರೂಪಿಸಲಾಗಿದೆ, ಆದರೆ ಹೊಟ್ಟೆಬಾಕತನವನ್ನು ಲೋಭ ಅಥವಾ ಅತಿಯಾದ ಸುಖಾನುಭವ ಎಂಬುದಾಗಿ ಅರ್ಥನಿರೂಪಿಸಲಾಗಿದೆ. ಆದುದರಿಂದ, ಹೊಟ್ಟೆಬಾಕತನವು ಒಬ್ಬನ ಶರೀರದ ಗಾತ್ರದಿಂದ ನಿರ್ಣಯಿಸಲ್ಪಡುವುದಿಲ್ಲ, ಬದಲಾಗಿ ಆಹಾರದ ಕಡೆಗೆ ಅವನಿಗಿರುವ ಮನೋಭಾವದಿಂದ ನಿರ್ಣಯಿಸಲ್ಪಡುತ್ತದೆ. ಒಬ್ಬ ವ್ಯಕ್ತಿಯು ಸಾಮಾನ್ಯ ಗಾತ್ರದ ಶರೀರವನ್ನು ಹೊಂದಿರಬಹುದಾದರೂ ಅಥವಾ ಒಂದುವೇಳೆ ತೆಳ್ಳಗಿನ ಮೈಕಟ್ಟಿನವನಾಗಿದ್ದರೂ, ಹೊಟ್ಟೆಬಾಕನಾಗಿರಬಲ್ಲನು. ಅಷ್ಟುಮಾತ್ರವಲ್ಲದೆ, ಯಾವುದನ್ನು ಒಂದು ಆದರ್ಶ ದೇಹತೂಕ ಅಥವಾ ಆಕಾರವೆಂದು ವೀಕ್ಷಿಸಲಾಗುತ್ತದೋ ಅದು ಸ್ಥಳದಿಂದ ಸ್ಥಳಕ್ಕೆ ಬಹಳಷ್ಟು ವ್ಯತ್ಯಾಸವಾಗಿರುತ್ತದೆ.
ಜುಲೈ 28–ಆಗಸ್ಟ್ 3
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 24
ಕಷ್ಟಗಳನ್ನ ಎದುರಿಸೋಕೆ ನಿಮ್ಮನ್ನ ಬಲಪಡಿಸ್ಕೊಳ್ಳಿ
it-2-E 610 ¶8
ಹಿಂಸೆ
ತಾಳ್ಕೊಂಡ್ರೆ ಬಹುಮಾನ ಸಿಗುತ್ತೆ ಅಂತ ಕ್ರೈಸ್ತರಿಗೆ ಗೊತ್ತು. ಅದಕ್ಕೇ ಯೇಸು ಹೀಗೆ ಹೇಳಿದ: “ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.” (ಮತ್ತಾ 5:10) ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರ್ತಾರೆ ಅನ್ನೋ ನಿರೀಕ್ಷೆ ಬಗ್ಗೆ ಮತ್ತು ಆ ನಿರೀಕ್ಷೆಯನ್ನ ನಿಜ ಮಾಡೋ ದೇವರ ಬಗ್ಗೆ ತಿಳ್ಕೊಳ್ಳೋದು ಹಿಂಸೆನ ಎದುರಿಸೋಕೆ ಸಹಾಯ ಮಾಡುತ್ತೆ. ಹಿಂಸೆ ಮಾಡೋರು ನಮ್ಮನ್ನ ಸಾಯಿಸ್ತೀವಿ ಅಂತ ಬೆದರಿಕೆ ಹಾಕಿದಾಗ ನಾವು ಧೈರ್ಯವಾಗಿ ಇರೋಕೆ ಮತ್ತು ದೇವರಿಗೆ ನಿಯತ್ತಾಗಿರೋಕೆ ಈ ನಿರೀಕ್ಷೆ ಸಹಾಯ ಮಾಡುತ್ತೆ. ಕ್ರೈಸ್ತರಿಗೆ ಯೇಸುವಿನ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇರೋದ್ರಿಂದ ವೈರಿಗಳಿಂದ ಬರೋ ಸಾವಿಗೂ ಅವರು ಭಯಪಡಲ್ಲ. (ಇಬ್ರಿ 2:14, 15) ಕಷ್ಟ ಹಿಂಸೆಗಳನ್ನ ಅನುಭವಿಸೋವಾಗ ಅವರು ಸರಿಯಾಗಿ ಯೋಚ್ನೆ ಮಾಡೋದು ತುಂಬ ಮುಖ್ಯ. ಈ ವಿಷ್ಯದಲ್ಲಿ ಯೇಸು ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ‘ಕ್ರಿಸ್ತ ಯೇಸುವಿನ ಈ ಮನೋಭಾವ ನಿಮ್ಮಲ್ಲೂ ಇರಲಿ. ಆತನು ಎಷ್ಟರ ಮಟ್ಟಿಗೆ ವಿಧೇಯತೆ ತೋರಿಸಿದನಂದ್ರೆ ಸಾವನ್ನೂ ಸಹಿಸ್ಕೊಂಡನು. ಹೌದು, ಹಿಂಸಾ ಕಂಬದ ಮೇಲೆ ಸತ್ತನು.’ (ಫಿಲಿ 2:5-8) “ಆತನು ತನ್ನ ಮುಂದಿದ್ದ ಖುಷಿಗೋಸ್ಕರ ಹಿಂಸಾ ಕಂಬದ ಮೇಲೆ ಸಾವನ್ನ ಸಹಿಸ್ಕೊಂಡ, ಅವಮಾನವನ್ನೂ ಲೆಕ್ಕಮಾಡಲಿಲ್ಲ.”—ಇಬ್ರಿ 12:2; ಈ ವಚನಗಳನ್ನೂ ನೋಡಿ, 2ಕೊರಿಂ 12:10; 2ಥೆಸ 1:4; 1ಪೇತ್ರ 2:21-23.
ಸಂಕಷ್ಟಗಳ ಸಮಯದಲ್ಲಿ ಆನಂದವನ್ನು ಕಾಪಾಡಿಕೊಳ್ಳಿರಿ
12 ಜ್ಞಾನೋಕ್ತಿ 24:10 ಹೇಳುವುದು: “ಇಕ್ಕಟ್ಟಿನ ದಿನಗಳಲ್ಲಿ ನೀನು ಬಳಲಿ ಹೋದರೆ ನಿನ್ನ ಬಲವು ಇಕ್ಕಟ್ಟೇ.” ಇನ್ನೊಂದು ಜ್ಞಾನೋಕ್ತಿ ಹೇಳುವುದು: “ಹೃದಯವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.” (ಜ್ಞಾನೋ. 15:3, NIBV) ಕೆಲವು ಕ್ರೈಸ್ತರು ಎಷ್ಟು ಮನಗುಂದಿ ಹೋಗಿದ್ದಾರೆಂದರೆ ತಮ್ಮ ವೈಯಕ್ತಿಕ ಬೈಬಲ್ ವಾಚನವನ್ನು ಹಾಗೂ ದೇವರ ವಾಕ್ಯದ ಮನನವನ್ನು ಸಹ ಅವರು ನಿಲ್ಲಿಸಿಬಿಟ್ಟಿದ್ದಾರೆ. ಅವರ ಪ್ರಾರ್ಥನೆಗಳು ಕಾಟಾಚಾರದ ಪ್ರಾರ್ಥನೆಗಳಾಗಿ ಪರಿಣಮಿಸಿವೆ ಮತ್ತು ಅವರು ಜೊತೆ ಆರಾಧಕರಿಂದ ತಮ್ಮನ್ನು ಬೇರ್ಪಡಿಸಿಕೊಳ್ಳಲೂಬಹುದು. ಹೀಗೆ ದೀರ್ಘಕಾಲ ಮನಗುಂದಿದ ಸ್ಥಿತಿಯಲ್ಲಿ ಉಳಿಯುವುದು ಅಪಾಯಕಾರಿಯಾಗಿರಬಲ್ಲದು.—ಜ್ಞಾನೋ. 18:1, 14.
13 ಆದುದರಿಂದ ಜೀವಿತದಲ್ಲಿ ನಾವು ಸಂತೋಷ ಮತ್ತು ಆನಂದವನ್ನು ಪಡೆಯಬಲ್ಲ ಅಂಶಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಕಾರಾತ್ಮಕ ದೃಷ್ಟಿಕೋನವು ಸಹಾಯಕಾರಿ. ದಾವೀದನು ಬರೆದದ್ದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು.” (ಕೀರ್ತ. 40:8) ನಮ್ಮ ಜೀವಿತದಲ್ಲಿ ಸಂಕಷ್ಟಗಳು ಬರುವಾಗ ನಮ್ಮ ಆರಾಧನೆಯ ಸ್ವಸ್ಥಕರ ರೂಢಿಯನ್ನು ನಾವು ಬಿಟ್ಟುಬಿಡಲು ಬಯಸಬಾರದು. ವಾಸ್ತವದಲ್ಲಿ ಸಂತೋಷ ತರುವ ಕೆಲಸದಲ್ಲಿ ಭಾಗವಹಿಸುವುದೇ ದುಃಖಕ್ಕೆ ಸಿದ್ಧೌಷದ! ತನ್ನ ವಾಕ್ಯದ ವಾಚನದಲ್ಲಿ ಮತ್ತು ಕ್ರಮವಾಗಿ ಅದರೊಳಗೆ ಇಣಿಕಿ ನೋಡುವುದರಲ್ಲಿ ಸಂತೋಷವನ್ನು ಮತ್ತು ಆನಂದವನ್ನು ಪಡೆಯಬಹುದು ಎಂದು ಯೆಹೋವನು ನಮಗನ್ನುತ್ತಾನೆ. (ಕೀರ್ತ. 1:1, 2; ಯಾಕೋ. 1:25) ಪವಿತ್ರ ಶಾಸ್ತ್ರಗ್ರಂಥದಿಂದ ಮತ್ತು ಕ್ರೈಸ್ತ ಕೂಟಗಳಿಂದ ನಾವು ಪಡೆಯುವ “ಕನಿಕರದ ಮಾತುಗಳು” ನಮ್ಮನ್ನು ಚೈತನ್ಯಗೊಳಿಸಿ ನಮ್ಮ ಹೃದಯವನ್ನು ಉಲ್ಲಾಸದಿಂದ ಹಿಗ್ಗಿಸಬಲ್ಲವು.—ಜ್ಞಾನೋ. 12:25; 16:24.
ವಾಚಕರಿಂದ ಪ್ರಶ್ನೆಗಳು
“ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಅಂತ ಜ್ಞಾನೋಕ್ತಿ 24:16 ಹೇಳುತ್ತೆ. ಇದರರ್ಥ ಒಬ್ಬ ವ್ಯಕ್ತಿ ಪದೇಪದೇ ತಪ್ಪು ಮಾಡಿದ್ರೂ ದೇವ್ರು ಅವನನ್ನ ಕ್ಷಮಿಸ್ತಾನೆ ಅಂತನಾ?
ಆ ವಚನದ ಅರ್ಥ ಅದಲ್ಲ. ‘ಬೀಳೋದು’ ಅಂದ್ರೆ ಒಬ್ಬ ವ್ಯಕ್ತಿಗೆ ಒಂದರ ಹಿಂದೆ ಒಂದು ಸಮಸ್ಯೆ ಬರುವುದು ಮತ್ತು “ಮತ್ತೆ ಏಳುವನು” ಅಂದ್ರೆ ಆ ಕಷ್ಟಗಳನ್ನ ಸಹಿಸಿಕೊಳ್ಳೋದು ಅಂತ ಅರ್ಥ.
ಹಾಗಾದ್ರೆ ಜ್ಞಾನೋಕ್ತಿ 24:16ರಲ್ಲಿ “ಬಿದ್ದರೂ” ಅನ್ನೋ ಪದ ಪಾಪ ಮಾಡುವುದಕ್ಕೆ ಸೂಚಿಸಲ್ಲ. ಪದೇಪದೇ ಕಷ್ಟ ಅನುಭವಿಸೋದನ್ನ ಸೂಚಿಸುತ್ತೆ. ಈ ಕೆಟ್ಟಲೋಕದಲ್ಲಿ ಒಬ್ಬ ಒಳ್ಳೇ ವ್ಯಕ್ತಿಗೆ ಆರೋಗ್ಯ ಸಮಸ್ಯೆಗಳು, ಬೇರೆ ಸಮಸ್ಯೆಗಳು ಬರಬಹುದು. ಸರ್ಕಾರದಿಂದ ತುಂಬ ಹಿಂಸೆನೂ ಬರಬಹುದು. ಆದ್ರೆ ಆ ವ್ಯಕ್ತಿಗೆ ದೇವ್ರು ತನ್ನ ಜೊತೆ ಇರ್ತಾನೆ, ಸಹಾಯ ಮಾಡ್ತಾನೆ, ಆ ಕಷ್ಟಗಳನ್ನೆಲ್ಲಾ ಸಹಿಸಿಕೊಳ್ಳೋಕೆ ತನಗಾಗುತ್ತೆ ಅನ್ನೋ ನಂಬಿಕೆ ಇರುತ್ತೆ. ನೀವೇ ಯೋಚಿಸಿ, ಕಷ್ಟ ಅಂತ ಅಂದುಕೊಂಡಿದ್ರಿಂದ ಕೂಡ ಎಷ್ಟೋ ಸಾರಿ ದೇವರ ಸೇವಕರಿಗೆ ಒಳ್ಳೇದಾಗಿದೆ ಅಲ್ವಾ? ನಾವ್ಯಾಕೆ ಅಷ್ಟು ಭರವಸೆ ಇಡಬಹುದು? ಯಾಕಂದ್ರೆ “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.”—ಕೀರ್ತ. 41:1-3; 145:14-19.
ಬೈಬಲಿನಲ್ಲಿರುವ ರತ್ನಗಳು
ವಾಚಕರಿಂದ ಪ್ರಶ್ನೆಗಳು
ಬೈಬಲ್ ಕಾಲಗಳಲ್ಲಿ ಒಬ್ಬ ಪುರುಷನು ‘ತನ್ನ ಮನೆಯನ್ನು ಕಟ್ಟಲು’ ಅಂದರೆ ಮದುವೆಯಾಗಿ ಒಂದು ಕುಟುಂಬವನ್ನು ಪಡೆಯಲು ಬಯಸುವಲ್ಲಿ, ಅವನು ತನ್ನನ್ನೇ ಹೀಗೆ ಕೇಳಿಕೊಳ್ಳಬೇಕಾಗಿತ್ತು: ‘ಹೆಂಡತಿಯನ್ನೂ, ಮುಂದೆ ಹುಟ್ಟಬಹುದಾದ ಮಕ್ಕಳನ್ನೂ ನೋಡಿಕೊಳ್ಳಲು ನಾನು ಸಿದ್ಧನಿದ್ದೇನೋ?’ ಒಂದು ಕುಟುಂಬವನ್ನು ಆರಂಭಿಸುವ ಮುಂಚೆ ಅವನು ಕೆಲಸ ಮಾಡಬೇಕಿತ್ತು. ಅವನು ತನ್ನ ಹೊಲಗಳನ್ನು ನೋಡಿಕೊಳ್ಳಬೇಕಿತ್ತು. ಹೀಗಿರುವುದರಿಂದಲೇ ಟುಡೇಸ್ ಇಂಗ್ಲಿಷ್ ವರ್ಷನ್ ಈ ವಚನವನ್ನು ಸ್ಪಷ್ಟವಾಗಿ ಹೀಗೆ ಭಾಷಾಂತರಿಸುತ್ತದೆ: “ನಿನ್ನ ಹೊಲಗಳು ಸಿದ್ಧವಾಗುವವರೆಗೂ, ಸಂಪಾದನೆ ಮಾಡಿ ಜೀವನಸಾಗಿಸಬಹುದೆಂದು ನಿನಗೆ ಖಾತ್ರಿಯಾಗುವವರೆಗೂ ನಿನ್ನ ಮನೆಯನ್ನು ಕಟ್ಟಬೇಡ, ಸಂಸಾರ ಹೂಡಬೇಡ.” ಇದೇ ಮೂಲತತ್ತ್ವ ಇಂದಿಗೂ ಅನ್ವಯವಾಗುತ್ತದೋ?
ಹೌದು. ಮದುವೆಯಾಗಲು ಇಚ್ಛಿಸುವ ಪುರುಷನು ಆ ಜವಾಬ್ದಾರಿಯನ್ನು ಹೊರಲು ಸರಿಯಾಗಿ ಸಿದ್ಧನಾಗಬೇಕು. ಅವನು ದೈಹಿಕವಾಗಿ ಸಮರ್ಥನಾಗಿರುವಲ್ಲಿ ಕೆಲಸಮಾಡಲೇಬೇಕು. ತನ್ನ ಕುಟುಂಬವನ್ನು ನೋಡಿಕೊಳ್ಳಲು ಕಠಿನ ಶ್ರಮಪಡುವುದರಲ್ಲಿ ಕೇವಲ ಶಾರೀರಿಕ ವಿಷಯಗಳನ್ನು ನೋಡಿಕೊಳ್ಳುವುದು ಮಾತ್ರ ಒಳಗೂಡಿರುವುದಿಲ್ಲ. ತನ್ನ ಕುಟುಂಬದ ಶಾರೀರಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸದ ಪುರುಷನು ನಂಬಿಕೆಯಿಲ್ಲದವನಿಗಿಂತಲೂ ಕಡೆಯಾದವನು ಎಂದು ದೇವರ ವಾಕ್ಯ ಹೇಳುತ್ತದೆ. (1 ತಿಮೊ. 5:8) ಹೀಗಿರುವುದರಿಂದ, ಮದುವೆ ಮತ್ತು ಸಾಂಸಾರಿಕ ಜೀವನಕ್ಕೆ ಸಿದ್ಧನಾಗುತ್ತಿರುವ ಯುವ ವ್ಯಕ್ತಿಯು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸಲು ನಾನು ತಕ್ಕಮಟ್ಟಿಗೆ ಸಿದ್ಧನಾಗಿದ್ದೇನೋ? ಕುಟುಂಬದ ಆಧ್ಯಾತ್ಮಿಕ ಶಿರಸ್ಸಾಗಿರಲು ಸಿದ್ಧನಿದ್ದೇನೋ? ನನ್ನ ಹೆಂಡತಿ ಮಕ್ಕಳೊಂದಿಗೆ ಕ್ರಮವಾದ ಬೈಬಲ್ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಪೂರೈಸುವೆನೋ?’ ದೇವರ ವಾಕ್ಯ ಖಂಡಿತವಾಗಿಯೂ ಅಂಥ ಅತ್ಯಾವಶ್ಯಕ ಜವಾಬ್ದಾರಿಗಳನ್ನು ಒತ್ತಿಹೇಳುತ್ತದೆ.—ಧರ್ಮೋ. 6:6-8; ಎಫೆ. 6:4.
ಆದುದರಿಂದ ಮದುವೆಯಾಗಲು ಬಯಸುವ ಯುವ ಪುರುಷನು ಜ್ಞಾನೋಕ್ತಿ 24:27ರಲ್ಲಿರುವ ಮೂಲತತ್ತ್ವದ ಬಗ್ಗೆ ಜಾಗರೂಕತೆಯಿಂದ ಯೋಚಿಸಬೇಕು. ಅದೇ ರೀತಿಯಲ್ಲಿ ಒಬ್ಬ ಯುವ ಸ್ತ್ರೀ, ತಾನು ಹೆಂಡತಿ ಹಾಗೂ ತಾಯಿಯಾಗುವ ಜವಾಬ್ದಾರಿಗಳಿಗಾಗಿ ಸಿದ್ಧಳಿದ್ದೇನೋ ಎಂದು ಕೇಳಿಕೊಳ್ಳುವುದು ಉತ್ತಮ. ಇತ್ತೀಚೆಗೆ ವಿವಾಹವಾದವರು ಮತ್ತು ವಿವಾಹವಾಗಲಿಕ್ಕಿರುವವರು ಮಕ್ಕಳನ್ನು ಪಡೆಯಬೇಕೋ ಇಲ್ಲವೋ ಎಂಬುದರ ಬಗ್ಗೆ ಯೋಚಿಸುವಾಗಲೂ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. (ಲೂಕ 14:28) ಇಂಥ ದೇವಪ್ರೇರಿತ ಮಾರ್ಗದರ್ಶನವನ್ನು ಪಾಲಿಸುವಲ್ಲಿ, ದೇವಜನರು ಬಹಳಷ್ಟು ಮನೋವೇದನೆಯಿಂದ ತಪ್ಪಿಸಿಕೊಳ್ಳಲು ಮತ್ತು ತೃಪ್ತಿದಾಯಕ ಕುಟುಂಬ ಜೀವನವನ್ನು ಆನಂದಿಸಲು ಶಕ್ತರಾಗುವರು.
ಆಗಸ್ಟ್ 4-10
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 25
ಮಾತಿನ ಬಗ್ಗೆ ಮನಸ್ಸಲ್ಲಿಡಬೇಕಾದ ಸುವರ್ಣ ಸಲಹೆಗಳು
ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ
6 ಸರಿಯಾದ ಸಮಯ ಆಯ್ಕೆ ಮಾಡಿ ಮಾತಾಡಬೇಕು ಏಕೆ? ಜ್ಞಾನೋಕ್ತಿ 25:11 ಹೀಗನ್ನುತ್ತದೆ: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” ಬಂಗಾರದ ಹಣ್ಣುಗಳು ನೋಡಲಿಕ್ಕೆ ಚೆಂದ. ಅದರ ಹಿನ್ನೆಲೆಯಲ್ಲಿ ಬೆಳ್ಳಿಯ ಕೆತ್ತನೆ ಇದ್ದರಂತೂ ನೋಡಲು ಇನ್ನೂ ಚೆಂದ. ಹಾಗೆಯೇ, ಒಬ್ಬ ವ್ಯಕ್ತಿಗೆ ನಾವು ಏನೋ ಒಳ್ಳೇ ವಿಷಯ ಹೇಳಲಿಕ್ಕಿರಬಹುದು. ಆದರೆ ಅದನ್ನು ಹೇಳಲು ನಾವು ಸರಿಯಾದ ಸಮಯವನ್ನು ಆರಿಸಿಕೊಂಡರೆ ಅದರಿಂದ ಆ ವ್ಯಕ್ತಿಗೆ ಹೆಚ್ಚು ಸಹಾಯವಾಗುವುದು. ಇದನ್ನು ಮಾಡುವುದು ಹೇಗೆ?
7 ಒಂದು ವಿಷಯವನ್ನು ತಪ್ಪಾದ ಸಮಯದಲ್ಲಿ ಹೇಳಿದರೆ ಅದು ಜನರಿಗೆ ಅರ್ಥವಾಗಲಿಕ್ಕಿಲ್ಲ ಅಥವಾ ಅವರದನ್ನು ಸ್ವೀಕರಿಸಲಿಕ್ಕಿಲ್ಲ. (ಜ್ಞಾನೋಕ್ತಿ 15:23 ಓದಿ.) ಉದಾಹರಣೆಗೆ, ಮಾರ್ಚ್ 2011ರಲ್ಲಿ ಜಪಾನಿನ ಪೂರ್ವ ಭಾಗದಲ್ಲಾದ ಭೂಕಂಪ ಹಾಗೂ ಸುನಾಮಿಯಿಂದಾಗಿ ಅನೇಕ ನಗರಗಳು ನೆಲಸಮವಾದವು. 15,000ಕ್ಕಿಂತಲೂ ಹೆಚ್ಚು ಜನರು ಸತ್ತುಹೋದರು. ಯೆಹೋವನ ಸಾಕ್ಷಿಗಳಲ್ಲೂ ಅನೇಕರು ತಮ್ಮ ಕುಟುಂಬ ಸದಸ್ಯರನ್ನು, ಸ್ನೇಹಿತರನ್ನು ಕಳೆದುಕೊಂಡರು. ಹಾಗಿದ್ದರೂ, ತಮ್ಮಂಥ ಕಷ್ಟದ ಪರಿಸ್ಥಿತಿಯಲ್ಲಿದ್ದ ಬೇರೆ ಜನರಿಗೆ ಬೈಬಲಿನಿಂದ ಸಾಂತ್ವನ ಕೊಡಲು ಇಷ್ಟಪಟ್ಟರು. ಆದರೆ ಆ ಜನರಲ್ಲಿ ಹೆಚ್ಚಿನವರು ಬೌದ್ಧಮತದವರು, ಬೈಬಲ್ ಬಗ್ಗೆ ಅಷ್ಟೇನೂ ಗೊತ್ತಿಲ್ಲದವರೆಂದು ಈ ಸಾಕ್ಷಿಗಳಿಗೆ ತಿಳಿದಿತ್ತು. ಹಾಗಾಗಿ ಆ ಸಮಯದಲ್ಲಿ ಅವರಿಗೆ ಪುನರುತ್ಥಾನದ ಬಗ್ಗೆ ಹೇಳುವ ಬದಲು ಅವರೊಟ್ಟಿಗೆ ಸಮಾಧಾನದ ಒಂದೆರಡು ಮಾತುಗಳನ್ನಾಡಿ, ಒಳ್ಳೇ ಜನರಿಗೆ ಯಾಕೆ ಇಂಥ ಕಷ್ಟಗಳು ಬರುತ್ತವೆಂದು ವಿವರಿಸಿದರು.
ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ
15 ನಾವೇನು ಮಾತಾಡುತ್ತೇವೊ ಅದು ಮಾತ್ರವಲ್ಲ, ಹೇಗೆ ಮಾತಾಡುತ್ತೇವೆ ಎನ್ನುವುದೂ ಮುಖ್ಯ. ಯೇಸು ಮಾತಾಡುವುದನ್ನು ಕೇಳಿಸಿಕೊಳ್ಳಲು ಜನರಿಗೆ ತುಂಬ ಖುಷಿ ಆಗುತ್ತಿತ್ತು. ಅವನು “ಮನವೊಲಿಸುವ” ಅಥವಾ ಮಧುರ ಮಾತುಗಳಿಂದ ಮಾತಾಡಿದನು. (ಲೂಕ 4:22) ಅಂದರೆ ಕರುಣೆಯಿಂದ ಮಾತಾಡಿದನು. ನಾವೂ ದಯೆಯಿಂದ ಮಾತಾಡಿದಾಗ ಜನ ನಾವು ಮಾತಾಡುವುದನ್ನು ಕೇಳಲು ತುಂಬ ಇಷ್ಟಪಡುತ್ತಾರೆ. ನಾವು ಹೇಳಿದ್ದನ್ನು ಒಪ್ಪಿಕೊಳ್ಳಲೂಬಹುದು. (ಜ್ಞಾನೋ. 25:15) ನಮಗೆ ಇತರರ ಬಗ್ಗೆ ಗೌರವ ಇರುವಾಗ, ಅವರ ಭಾವನೆಗಳಿಗೆ ಬೆಲೆಕೊಡುವಾಗ ಅವರೊಟ್ಟಿಗೆ ದಯೆಯಿಂದ ಮಾತಾಡಲು ಆಗುತ್ತದೆ. ಯೇಸು ಇದನ್ನೇ ಮಾಡಿದನು. ಉದಾಹರಣೆಗೆ, ಅವನ ಮಾತುಗಳನ್ನು ಕೇಳಲು ತುಂಬ ಶ್ರಮಪಟ್ಟು ಬಂದಿದ್ದ ಒಂದು ಗುಂಪಿನ ಜೊತೆ ಸಮಯ ಕಳೆದು ಅವರಿಗೆ ಕಲಿಸಲು ಸಂತೋಷಪಟ್ಟನು. (ಮಾರ್ಕ 6:34) ಜನರು ಅವನನ್ನು ಹೀಯಾಳಿಸಿದಾಗಲೂ ಅವನು ಅವರನ್ನು ಹೀಯಾಳಿಸಲಿಲ್ಲ.—1 ಪೇತ್ರ 2:23.
16 ನಮ್ಮ ಕುಟುಂಬವನ್ನು, ಸ್ನೇಹಿತರನ್ನು ನಾವು ಪ್ರೀತಿಸುತ್ತೇವೆ. ಅವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಂತ ನಾವು ಅವರ ಹತ್ತಿರ ಹೇಗೆ ಬೇಕೊ ಹಾಗೆ ಮಾತಾಡುತ್ತಿರಬಹುದು. ನಮ್ಮ ಮಾತಿನ ಮೇಲೆ ನಿಗಾ ಇಡಬೇಕಾಗಿಲ್ಲ ಎಂದು ನಮಗನಿಸಬಹುದು. ಆದರೆ ಯೇಸು ತನ್ನ ಸ್ನೇಹಿತರ ಜೊತೆ ಮಾತಾಡಿದಾಗ ಯಾವತ್ತೂ ದಯೆ ಇಲ್ಲದೆ ಮಾತಾಡಲಿಲ್ಲ. ತಮ್ಮಲ್ಲಿ ಯಾರು ದೊಡ್ಡವನೆಂದು ಅವನ ಶಿಷ್ಯರಲ್ಲಿ ಕೆಲವರು ವಾಗ್ವಾದ ಮಾಡುತ್ತಿದ್ದಾಗ ಅವರ ಯೋಚನೆಯನ್ನು ಬದಲಾಯಿಸಲು ಚಿಕ್ಕ ಮಗುವಿನ ಉದಾಹರಣೆ ಬಳಸಿ ದಯೆಯಿಂದ ಮಾತಾಡಿದನು. (ಮಾರ್ಕ 9:33-37) ಇತರರಿಗೆ ಸಲಹೆ, ಬುದ್ಧಿವಾದವನ್ನು ದಯೆಯಿಂದ ಕೊಡುವ ಮೂಲಕ ಹಿರಿಯರು ಯೇಸುವಿನ ಮಾದರಿಯನ್ನು ಅನುಕರಿಸಬಲ್ಲರು.—ಗಲಾ. 6:1.
ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸುವುದು—ಹೇಗೆ?
8 ನಮ್ಮ ದೇವರ ಸೇವೆ ಮಾಡುವುದರಲ್ಲಿ, ಮಾದರಿಯ ಮೂಲಕ ನಾವೆಲ್ಲರು ಒಬ್ಬರನ್ನೊಬ್ಬರು ಹುರಿದುಂಬಿಸಬಹುದು. ನಿಶ್ಚಯವಾಗಿ ಯೇಸು ತನ್ನ ಕೇಳುಗರನ್ನು ಹುರಿದುಂಬಿಸಿದನು. ಕ್ರೈಸ್ತ ಶುಶ್ರೂಷೆಯ ಕೆಲಸವನ್ನು ಆತನು ಪ್ರೀತಿಸಿದನು ಮತ್ತು ಆ ಶುಶ್ರೂಷೆಯನ್ನು ಘನತೆಗೇರಿಸಿದನು. ಅದು ತನಗೆ ಆಹಾರದೋಪಾದಿ ಇತ್ತೆಂದು ಆತನು ಹೇಳಿದನು. (ಯೋಹಾನ 4:34; ರೋಮಾಪುರ 11:13) ಅಂತಹ ಉತ್ಸಾಹವು ಒಬ್ಬರಿಂದೊಬ್ಬರಿಗೆ ಹರಡಸಾಧ್ಯವಿದೆ. ತದ್ರೀತಿಯಲ್ಲಿ ಶುಶ್ರೂಷೆಯಲ್ಲಿ ನಿಮಗಿರುವ ಆನಂದವು ಇತರರಿಗೆ ಸುವ್ಯಕ್ತವಾಗುವಂತೆ ನೀವು ಆಸ್ಪದಕೊಡಬಲ್ಲಿರೊ? ಜಂಬಕೊಚ್ಚುವ ಒಂದು ನಡೆವಳಿಯನ್ನು ಜಾಗರೂಕತೆಯಿಂದ ದೂರಮಾಡುತ್ತಾ, ಸಭೆಯಲ್ಲಿರುವ ಇತರರೊಂದಿಗೆ ನಿಮ್ಮ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳಿರಿ. ನಿಮ್ಮೊಂದಿಗೆ ಕೆಲಸ ಮಾಡುವಂತೆ ಇತರರನ್ನು ನೀವು ಆಮಂತ್ರಿಸುವಾಗ, ನಮ್ಮ ಮಹಾ ಸೃಷ್ಟಿಕರ್ತನಾದ ಯೆಹೋವನ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ಅವರು ನಿಜವಾದ ಸಂತೋಷವನ್ನು ಕಂಡುಕೊಳ್ಳುವಂತೆ ನೀವು ಸಹಾಯ ಮಾಡಬಲ್ಲಿರೋ ಎಂಬುದನ್ನು ಅವಲೋಕಿಸಿರಿ.—ಜ್ಞಾನೋಕ್ತಿ 25:25.
ಬೈಬಲಿನಲ್ಲಿರುವ ರತ್ನಗಳು
it-2-E 399
ಸೌಮ್ಯ ಸ್ವಭಾವ
ಸೌಮ್ಯ ಸ್ವಭಾವದವರು ಬಲಶಾಲಿಗಳಾಗಿರ್ತಾರೆ, ಅವ್ರಿಗೆ ನಂಬಿಕೆ ಇರುತ್ತೆ. ಅವರು ತಕ್ಷಣ ಕೋಪ ಮಾಡ್ಕೊಳ್ಳಲ್ಲ, ಸರಿಯಾಗಿ ಯೋಚ್ನೆ ಮಾಡ್ತಾರೆ. ಆದ್ರೆ ಸೌಮ್ಯಸ್ವಭಾವ ಇಲ್ಲದೇ ಇರೋ ವ್ಯಕ್ತಿಯಲ್ಲಿ ಹತಾಶೆ, ಗೊಂದಲ ಇರುತ್ತೆ, ನಂಬಿಕೆ ಮತ್ತು ನಿರೀಕ್ಷೆ ಇರಲ್ಲ. ಜ್ಞಾನೋಕ್ತಿ 25:28ರಲ್ಲಿ ಸೌಮ್ಯ ಸ್ವಭಾವ ತೋರಿಸದ ವ್ಯಕ್ತಿ ಬಗ್ಗೆ ಈ ತರ ಹೇಳಿದೆ. “ಕೋಪಕ್ಕೆ ಕಡಿವಾಣ ಹಾಕದವನು ಗೋಡೆ ಬಿದ್ದ ಪಟ್ಟಣ ತರ.” ಇಂಥಾ ವ್ಯಕ್ತಿಗಳಿಗೆ ಕೆಟ್ಟ ಯೋಚನೆಗಳು ಬೇಗ ಬರೋದ್ರಿಂದ ಕೆಟ್ಟ ಕೆಲಸಗಳನ್ನ ಮಾಡ್ತಾರೆ.
ಆಗಸ್ಟ್ 11-17
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 26
‘ಮೂರ್ಖನಿಂದ’ ದೂರ ಇರಿ
it-2-E 729 ¶6
ಮಳೆ
ಋತುಗಳು/ಕಾಲಗಳು. ಮಾತುಕೊಟ್ಟ ದೇಶದಲ್ಲಿ ಮುಖ್ಯವಾಗಿ ಎರಡು ಕಾಲಗಳು ಇತ್ತು. ಬೇಸಿಗೆ ಕಾಲ ಮತ್ತು ಚಳಿಗಾಲ. ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಇರ್ತಿತ್ತು, ಚಳಿಗಾಲದಲ್ಲಿ ಮಳೆ ಬರ್ತಿತ್ತು. (ಕೀರ್ತ 32:4; ಪರಮ 2:11, ಪಾದಟಿಪ್ಪಣಿ ಹೋಲಿಸಿ) ಏಪ್ರಿಲ್ ತಿಂಗಳ ಮಧ್ಯದಿಂದ ಅಕ್ಟೋಬರ್ ತಿಂಗಳ ಮಧ್ಯದವರೆಗೆ ಸ್ವಲ್ಪನೇ ಮಳೆ ಆಗ್ತಿತ್ತು. ಈ ಸಮಯದಲ್ಲಿ ಜಾಸ್ತಿ ಮಳೆ ಬರ್ತಿರಲಿಲ್ಲ. ಇದು ಕೊಯ್ಲಿನ ಸಮಯ ಆಗಿದ್ರಿಂದ ಮಳೆ ಬಂದ್ರೆ ಬೆಳೆಯೆಲ್ಲಾ ಹಾಳಾಗ್ತಿತ್ತು, ಜನ್ರಿಗೆ ತೊಂದ್ರೆ ಆಗ್ತಿತ್ತು.—ಜ್ಞಾನೋ 26:1.
w87-E 10/1 19 ¶12
ಶಿಸ್ತು ಒಳ್ಳೇ ಪ್ರತಿಫಲ ಕೊಡುತ್ತೆ
12 ಕೆಲವರಿಗೆ ಕಠಿಣವಾದ ಶಿಸ್ತನ್ನ ಕೊಡಬೇಕಾಗುತ್ತೆ. ಅದಕ್ಕೇ ಜ್ಞಾನೋಕ್ತಿ 26:3ರಲ್ಲಿ “ಕುದುರೆಗೆ ಚಾಟಿ, ಕತ್ತೆಗೆ ಲಗಾಮು, ಮೂರ್ಖನ ಬೆನ್ನಿಗೆ ಬೆತ್ತ” ಅಂತ ಹೇಳುತ್ತೆ. ಯೆಹೋವ ದೇವರು ತಾನು ಆರಿಸ್ಕೊಂಡ ಇಸ್ರಾಯೇಲ್ಯರಿಗೆ ದೀನತೆ ಕಲಿಸೋಕಂತ ಕಷ್ಟ ಅನುಭವಿಸೋಕೆ ಬಿಟ್ಟುಕೊಟ್ಟನು. ಇನ್ನೂ ಕೆಲವು ಸಲ ಅವ್ರನ್ನ ಬೇರೆ ಜನಾಂಗದವರು ಕೈದಿಗಳಾಗಿ ಕರ್ಕೊಂಡು ಹೋಗೋಕೂ ಅನುಮತಿಸಿದನು. ಈ ಕಷ್ಟಗಳಿಗೆ ಅವ್ರೇ ಕಾರಣ ಆಗಿದ್ರು. (ಕೀರ್ತನೆ 107:11-13) ಆದ್ರೆ ಕೆಲವು ಜನ್ರು ಎಷ್ಟು ಮೂರ್ಖರಾಗಿರ್ತಾರೆ ಅಂದ್ರೆ ದೀನತೆ ಗುಣನ ಬೆಳೆಸ್ಕೊಳ್ಳೋದೇ ಇಲ್ಲ. ಅವರು ಹೃದಯನ ಕಲ್ಲು ಮಾಡ್ಕೊಂಡಿರೋದ್ರಿಂದ ಯಾವ ಶಿಸ್ತು ಸಿಕ್ಕಿದ್ರೂ ಅವರು ಬದಲಾಗಲ್ಲ.—ಜ್ಞಾನೋಕ್ತಿ 29:1.
it-2-E 191 ¶4
ಕುಂಟ, ಕುಂಟುತನ
ಗಾದೆ ಮಾತು. ಮೂರ್ಖನ ಮೇಲೆ ನಂಬಿಕೆ ಇಡೋನು ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕೊಂಡ ಹಾಗೆ. ಹೀಗೆ ಅವನು ಕುಂಟನ ತರ ಇರ್ತಾನೆ, ಇದ್ರಿಂದ ಅವನಿಗೇ ತೊಂದ್ರೆ ಆಗುತ್ತೆ. (ಜ್ಞಾನೋ 26:6) ಯಾರು ‘ಮೂರ್ಖನನ್ನ’ ಕೆಲ್ಸಕ್ಕೆ ಇಟ್ಕೊಳ್ತಾನೋ ಅವನಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಅವನು ಮಾಡೋ ಯೋಜನೆಗಳೆಲ್ಲ ನೆಲಕಚ್ಚುತ್ತೆ, ಅದ್ರಿಂದ ಆಗೋ ನಷ್ಟನೆಲ್ಲ ಅವನು ಅನುಭವಿಸಬೇಕಾಗುತ್ತೆ.
ಬೈಬಲಿನಲ್ಲಿರುವ ರತ್ನಗಳು
it-1-E 846
ಮೂರ್ಖ
ಜ್ಞಾನೋಕ್ತಿ 26:4ರಲ್ಲಿ “ಮೂರ್ಖನಿಗೆ ಅವನ ಮೂರ್ಖತನಕ್ಕೆ ತಕ್ಕ ಹಾಗೆ ಉತ್ತರ ಕೊಡಬೇಡ” ಅಂತ ಇದೆ. ಇದ್ರ ಅರ್ಥ ಏನಂದ್ರೆ ಮೂರ್ಖ ಯಾವ ತರ ಮಾತಾಡ್ತಾನೋ ನಾವು ಅದೇ ತರ ಮಾತಾಡಬಾರದು. ಒಂದುವೇಳೆ ಹಾಗೆ ಮಾತಾಡಿದ್ರೆ ಅವನು ಏನು ಹೇಳ್ತಿದ್ದಾನೋ ಅದನ್ನ ನಾವು ಒಪ್ಕೊಂಡ ಹಾಗೆ ಆಗುತ್ತೆ. ನಾವೂ ಮೂರ್ಖರ ತರ ಆಗಿಬಿಡ್ತೀವಿ. ಆದ್ರೆ ಅದೇ ಅಧ್ಯಾಯದ 5ನೇ ವಚನದಲ್ಲಿ “ಮೂರ್ಖನಿಗೆ ಅವನ ಮೂರ್ಖತನಕ್ಕೆ ತಕ್ಕ ಹಾಗೆ ಉತ್ತರ ಕೊಡು” ಅಂತ ಇದೆ. ಇದ್ರ ಅರ್ಥ ಏನಂದ್ರೆ, ನಾವು ಅವನಿಗೆ ಕೊಡೋ ಉತ್ರ ಹೇಗಿರಬೇಕು ಅಂದ್ರೆ ಮೂರ್ಖನಿಗೆ ತಾನು ಹೇಳ್ತಿರೋದು ಎಷ್ಟು ತಪ್ಪು ಅಂತ ಗೊತ್ತಾಗೋ ತರ ಇರಬೇಕು. ಅಷ್ಟೇ ಅಲ್ಲ, ಅವನು ಅಂದ್ಕೊಳ್ಳೋದೇ ಒಂದು ಆಗೋದೇ ಇನ್ನೊಂದು ಅಂತ ಅವನಿಗೆ ಅರ್ಥ ಮಾಡಿಸೋ ತರ ಇರಬೇಕು. ಹಾಗಾಗಿ 4 ಮತ್ತು 5ನೇ ವಚನ ಒಂದಕ್ಕೊಂದು ವಿರುದ್ಧವಾಗಿಲ್ಲ ಅಂತ ಹೇಳಬಹುದು.
ಆಗಸ್ಟ್ 18-24
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 27
ಒಳ್ಳೇ ಸ್ನೇಹಿತರಿಂದ ಸಿಗೋ ಪ್ರಯೋಜನಗಳು
ದೀನರು ಯೆಹೋವನಿಗೆ ಅಮೂಲ್ಯರು
12 ದೀನತೆ ಇರುವ ವ್ಯಕ್ತಿಗೆ ಸಲಹೆ ಕೊಟ್ಟರೆ ಅದಕ್ಕೆ ಅವನು ಕೃತಜ್ಞನಾಗಿರುತ್ತಾನೆ. ಉದಾಹರಣೆಗಾಗಿ, ನೀವು ಕ್ರೈಸ್ತ ಕೂಟದಲ್ಲಿದ್ದೀರೆಂದು ನೆನಸಿ. ಸಹೋದರ ಸಹೋದರಿಯರ ಜೊತೆ ಮಾತಾಡುತ್ತಿರುವಾಗ ಅವರಲ್ಲೊಬ್ಬರು ನಿಮ್ಮನ್ನು ಪಕ್ಕಕ್ಕೆ ಕರಕೊಂಡು ಹೋಗಿ ನಿಮ್ಮ ಹಲ್ಲಲ್ಲಿ ಆಹಾರ ಪದಾರ್ಥ ಇದೆ ಎಂದು ಹೇಳುತ್ತಾರೆ. ಆಗ ನಿಮಗೆ ಸ್ವಲ್ಪ ಮುಜುಗರ ಆಗಬಹುದು. ಆದರೆ ಅದನ್ನು ಹೇಳಿದ್ದಕ್ಕೆ ನೀವು ಅವರಿಗೆ ಥ್ಯಾಂಕ್ಸ್ ಹೇಳುತ್ತೀರಲ್ವಾ? ಬೇರೆ ಯಾರಾದರೂ ಇದನ್ನು ಮೊದಲೇ ಹೇಳಬೇಕಿತ್ತು ಅಂತನೂ ನೆನಸುತ್ತೀರಲ್ವಾ? ಅದೇ ರೀತಿ ಯಾರಾದರೂ ಸಲಹೆ ಕೊಡಲು ಧೈರ್ಯವಾಗಿ ಮುಂದೆ ಬಂದಾಗ ನಾವು ಅವರ ಸಲಹೆಯನ್ನು ದೀನತೆಯಿಂದ ಸ್ವೀಕರಿಸಬೇಕು ಮತ್ತು ಅವರಿಗೆ ನಾವು ಕೃತಜ್ಞರಾಗಿರಬೇಕು. ಅವರನ್ನು ಶತ್ರು ತರ ಅಲ್ಲ, ಮಿತ್ರನ ತರ ನೋಡಬೇಕು.—ಜ್ಞಾನೋಕ್ತಿ 27:5, 6 ಓದಿ; ಗಲಾ. 4:16.
it-2-E 491 ¶3
ನೆರೆಯವನು
ಜ್ಞಾನೋಕ್ತಿ 27:10 ಹೇಳೋ ತರ ಕಷ್ಟ ಬಂದಾಗ ದೂರದಲ್ಲಿರೋ ಸಂಬಂಧಿಕನಿಗಿಂತ ಹತ್ರದಲ್ಲಿರೋ ಆಪ್ತ ಸ್ನೇಹಿತನ ಸಹಾಯ ಕೇಳೋದು ಒಳ್ಳೇದು. ಯಾಕಂದ್ರೆ ದೂರದಲ್ಲಿರೋ ಸಂಬಂಧಿಕನಿಗೆ ಸಹಾಯ ಮಾಡೋಕೆ ಆಗಲ್ಲ, ಆದ್ರೆ ಅದೇ ಸಹಾಯನ ಹತ್ರದಲ್ಲಿರೋ ಸ್ನೇಹಿತ ಮಾಡ್ತಾನೆ. ಅದಕ್ಕೇ ಅಂಥ ಆಪ್ತ ಸ್ನೇಹಿತರನ್ನ ಅಮೂಲ್ಯವಾಗಿ ನೋಡಬೇಕು, ಅವ್ರ ಸಹಾಯ ಪಡ್ಕೊಬೇಕು.
ಮಕ್ಕಳೇ, ಮುಂದೆ ನಿಮ್ಮ ಜೀವನ ಚೆನ್ನಾಗಿರುತ್ತೆ!
7 ಯೆಹೋವಾಷ ಮಾಡಿದ ತಪ್ಪಾದ ತೀರ್ಮಾನದಿಂದ ನಾವೊಂದು ಪಾಠ ಕಲಿತೀವಿ. ಅದೇನಂದ್ರೆ, ನಮ್ಮ ಜೀವನ ಚೆನ್ನಾಗಿ ಇರಬೇಕಂದ್ರೆ ನಾವು ಎಂಥವರ ಸಹವಾಸ ಮಾಡ್ತೀವಿ ಅನ್ನೋದು ಮುಖ್ಯ. ಯೆಹೋವನನ್ನ ಪ್ರೀತಿಸುವವ್ರನ್ನ, ಆತನಿಗೆ ಇಷ್ಟ ಆಗೋದನ್ನೇ ಮಾಡುವವ್ರನ್ನ ನಾವು ಸ್ನೇಹಿತರಾಗಿ ಮಾಡ್ಕೊಬೇಕು. ಅವರು ನಮ್ಮ ವಯಸ್ಸಿನವರೇ ಆಗಿರಬೇಕು ಅಂತೇನಿಲ್ಲ. ಯೆಹೋಯಾದನಿಗೂ ಯೆಹೋವಾಷನಿಗೂ ವಯಸ್ಸಲ್ಲಿ ತುಂಬ ವ್ಯತ್ಯಾಸ ಇತ್ತು. ಹಾಗಿದ್ರೂ ಅವರಿಬ್ರು ಒಳ್ಳೇ ಸ್ನೇಹಿತರಾಗಿದ್ರು ಅನ್ನೋದನ್ನ ನೆನಪಿಡಿ. ಒಬ್ಬ ವ್ಯಕ್ತಿನ ಫ್ರೆಂಡ್ ಮಾಡ್ಕೊಬೇಕಾ ಬೇಡ್ವಾ ಅಂತ ಯೋಚ್ನೆ ಮಾಡುವಾಗ ಈ ಪ್ರಶ್ನೆಗಳನ್ನ ನೆನಪಲ್ಲಿಡಿ: ‘ಅವರು ಯೆಹೋವ ದೇವರ ಮೇಲಿರೋ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡ್ತಾರಾ? ಯೆಹೋವ ಕೊಟ್ಟಿರೋ ನೀತಿ-ನಿಯಮಗಳನ್ನ ಪಾಲಿಸೋಕೆ ನಂಗೆ ಪ್ರೋತ್ಸಾಹಿಸ್ತಾರಾ? ಯೆಹೋವನ ಬಗ್ಗೆ, ಬೈಬಲಲ್ಲಿ ಕಲ್ತಿರೋ ವಿಷ್ಯಗಳ ಬಗ್ಗೆ ಮಾತಾಡ್ತಾರಾ? ಅವ್ರಿಗೆ ಯೆಹೋವನ ನೀತಿ-ನಿಯಮಗಳ ಮೇಲೆ ಗೌರವ ಇದ್ಯಾ? ನಾನು ಏನಾದ್ರು ತಪ್ಪು ಮಾಡಿದಾಗ ಸುಮ್ನೆ ಇರ್ತಾರಾ ಅಥವಾ ತಿದ್ದುತಾರಾ?’ (ಜ್ಞಾನೋ. 27:5, 6, 17) ನೇರವಾಗಿ ಹೇಳೋದಾದ್ರೆ, ನಿಮ್ಮ ಸ್ನೇಹಿತರಿಗೆ ಯೆಹೋವ ದೇವರ ಮೇಲೆ ಪ್ರೀತಿ ಇಲ್ವಾ? ಅಂಥವ್ರನ್ನ ಬಿಟ್ಟುಬಿಡಿ. ಯೆಹೋವನನ್ನ ಪ್ರೀತಿಸೋರ ಜೊತನೇ ಇರಿ. ನಿಮಗೆ ಬೇಕಾಗಿರೋದು ಇಂಥವ್ರೇ!—ಜ್ಞಾನೋ. 13:20.
ಬೈಬಲಿನಲ್ಲಿರುವ ರತ್ನಗಳು
ಜ್ಞಾನೋಕ್ತಿಗಳು ಪುಸ್ತಕದ ಮುಖ್ಯಾಂಶಗಳು
27:21. ಹೊಗಳಿಕೆ ನಮ್ಮ ನಿಜರೂಪವನ್ನು ಬಯಲಿಗೆಳೆಯಬಲ್ಲದು. ನಾವು ದೇವರಿಗೆ ಚಿರಋಣಿಗಳಾಗಿದ್ದೇವೆ ಎಂದು ಒಪ್ಪಿಕೊಳ್ಳಲು ಮತ್ತು ಆತನನ್ನು ಸೇವಿಸುತ್ತಾ ಮುಂದುವರಿಯಲು ಈ ಹೊಗಳಿಕೆ ನಮ್ಮನ್ನು ಪ್ರಚೋದಿಸುವುದಾದರೆ ನಮ್ಮ ನಮ್ರತೆ ತೋರಿಬರುವುದು. ಆದರೆ ಹೊಗಳಿಕೆಯು ನಮ್ಮಲ್ಲಿ ಶ್ರೇಷ್ಠತೆಯ ಮನೋಭಾವವನ್ನು ಪ್ರವರ್ಧಿಸುವುದಾದರೆ ನಮ್ರತೆಯ ಕೊರತೆಯು ಬಯಲಾಗುವುದು.
ಆಗಸ್ಟ್ 25-31
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 28
ಕೆಟ್ಟವನಿಗೆ ಮತ್ತು ನೀತಿವಂತನಿಗೆ ಇರೋ ವ್ಯತ್ಯಾಸ
w93-E 5/15 26 ¶2
ನೀವು ಮನಸ್ಸು ಪೂರ್ತಿ ಯೆಹೋವನ ಮಾತು ಕೇಳ್ತೀರಾ?
“ನೀತಿವಂತ ಸಿಂಹದ ಹಾಗೆ ಧೈರ್ಯವಾಗಿ ಇರ್ತಾನೆ.” (ಜ್ಞಾನೋಕ್ತಿ 28:1) ಅವನಿಗೆ ದೇವರ ವಾಕ್ಯದ ಮೇಲೆ ಪೂರ್ತಿ ನಂಬಿಕೆ ಇರುತ್ತೆ. ಕಷ್ಟ ಸಮಸ್ಯೆಗಳು ಬಂದ್ರೂ ಯೆಹೋವನ ಸೇವೆ ಮಾಡ್ತಾ ಮುಂದೆ ಹೋಗ್ತಾನೆ.
it-2-E 1139 ¶3
ತಿಳುವಳಿಕೆ
ತಿಳುವಳಿಕೆಯನ್ನ ಕೊಡೋ ದೇವರಿಂದ ದೂರ ಇರೋರು. ದೇವರಿಂದ ದೂರ ಇರೋ ಕೆಟ್ಟ ವ್ಯಕ್ತಿ ನಿರ್ಧಾರಗಳನ್ನ ಮಾಡೋವಾಗ ದೇವರ ನೀತಿ ನಿಯಮಗಳನ್ನ ಪಾಲಿಸಲ್ಲ. (ಯೋಬ 34:27) ಅವನು ಮಾಡ್ತಿರೋದು ತಪ್ಪು ಅಂತ ಅವನಿಗೆ ಅನಿಸೋದೇ ಇಲ್ಲ. ಹಾಗಾಗಿ ಅವನಿಗೆ ತಿಳುವಳಿಕೆ ಇಲ್ಲ ಅಂತ ಹೇಳಬಹುದು. (ಕೀರ್ತ 36:1-4) ಅವನು ಬಾಯಿಮಾತಲ್ಲಷ್ಟೇ ದೇವರನ್ನ ಆರಾಧಿಸ್ತೀನಿ ಅಂತ ಹೇಳ್ತಾನೆ, ಆದ್ರೆ ಮನುಷ್ಯರು ಹೇಳೋ ತರ ನಡ್ಕೊತಾನೆ. (ಯೆಶಾ 29:13, 14) ಕೆಟ್ಟ ವಿಷ್ಯಗಳನ್ನ ‘ನನ್ನ ಖುಷಿಗೆ ಮಾಡ್ತಿದ್ದೀನಿ’ ಅಂತಾನೆ. (ಜ್ಞಾನೋ 10:23) ಹೀಗೆ ತನ್ನನ್ನ ತಾನೇ ಮೋಸ ಮಾಡ್ಕೊತಾನೆ. ದೇವರು ಕಣ್ಣಿಗೆ ಕಾಣಿಸದೇ ಇರೋದ್ರಿಂದ ‘ನಾನು ಮಾಡೋ ಕೆಟ್ಟ ಕೆಲಸಗಳನ್ನ ಆತನು ನೋಡಲ್ಲ’ ಅಂತ ಅಂದ್ಕೊತಾನೆ. (ಕೀರ್ತ 94:4-10; ಯೆಶಾ 29:15, 16; ಯೆರೆ 10:21) ಅವನು ಹೀಗೆ ನಡ್ಕೊಳ್ಳೋದು “ಯೆಹೋವ ಇಲ್ಲವೇ ಇಲ್ಲ” ಅಂತ ಹೇಳಿದ್ದ ತರ ಇರುತ್ತೆ. (ಕೀರ್ತ 14:1-3) ಇದ್ರಿಂದ ಅವನಿಗೆ ಸರಿಯಾಗಿ ಯೋಚ್ನೆ ಮಾಡೋಕೆ ಆಗಲ್ಲ, ಯಾವುದು ಸರಿ ಯಾವುದು ತಪ್ಪು ಅಂತ ಗೊತ್ತಾಗಲ್ಲ, ಸರಿಯಾದ ತೀರ್ಮಾನ ಮಾಡೋಕೂ ಆಗಲ್ಲ.
it-1-E 1211 ¶4
ನಿಯತ್ತು, ನಿಷ್ಠೆ
ಶ್ರೀಮಂತನಾಗಿರೋ ಕೆಟ್ಟವನಿಗಿಂತ ಬಡವನಾಗಿರೋ ನೀತಿವಂತನಿಗೆ ಬೆಲೆ ಜಾಸ್ತಿ. ಯಾಕಂದ್ರೆ ದೇವರ ಮೇಲೆ ಅವನಿಗಿರೋ ನಂಬಿಕೆ ಮತ್ತು ಭರವಸೆ ನಿಯತ್ತಾಗಿರೋಕೆ ಅವನಿಗೆ ಸಹಾಯ ಮಾಡುತ್ತೆ. (ಕೀರ್ತ 25:21) ಯಾರು ತನಗೆ ನಿಯತ್ತಾಗಿ ಇರ್ತಾರೋ ಅವ್ರಿಗೆ “ಗುರಾಣಿಯಾಗಿ” ಮತ್ತು ‘ಭದ್ರಕೋಟೆಯಾಗಿ’ ಇರ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಜ್ಞಾನೋ 2:6-8; 10:29; ಕೀರ್ತ 41:12) ನಿಯತ್ತಾಗಿರೋ ವ್ಯಕ್ತಿ ಯಾವಾಗ್ಲೂ ಯೆಹೋವನಿಗೆ ಖುಷಿ ಆಗೋ ವಿಷ್ಯಗಳನ್ನ ಮಾಡ್ತಾನೆ. ಹೀಗೆ ಮಾಡೋದ್ರಿಂದ ಅವನು ಸರಿ ದಾರಿಯಲ್ಲಿ ನಡೀತಾನೆ. (ಕೀರ್ತ 26:1-3; ಜ್ಞಾನೋ 11:5; 28:18) ಕೆಲವು ಸಲ ಕೆಟ್ಟವರಿಂದ ನಿಯತ್ತಾಗಿರೋರಿಗೆ ಸಮಸ್ಯೆಗಳು ಬರುತ್ತೆ. ಆದ್ರೆ ಯೆಹೋವ ಇದನ್ನೆಲ್ಲಾ ನೋಡ್ತಿದ್ದಾನೆ ಮತ್ತು ಅವ್ರಿಗೆ ಸಮಸ್ಯೆಗಳಿಲ್ಲದೇ ಇರೋ ಒಳ್ಳೇ ಜೀವನವನ್ನ ಮುಂದೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಯೋಬ 9:20-22; ಕೀರ್ತ 37:18, 19, 37; 84:11; ಜ್ಞಾನೋ 28:10) ಹಣ ಆಸ್ತಿಗಿಂತ ಯೆಹೋವನಿಗೆ ನಿಯತ್ತಾಗಿರೋದೇ ತುಂಬ ಮುಖ್ಯ ಅಂತ ನೀತಿವಂತನಾದ ಯೋಬನ ಉದಾರಣೆಯಿಂದ ಗೊತ್ತಾಗುತ್ತೆ.—ಜ್ಞಾನೋ 19:1; 28:6.
ಬೈಬಲಿನಲ್ಲಿರುವ ರತ್ನಗಳು
ಆತ್ಮಿಕ ಹೃದಯಾಘಾತವನ್ನು ನೀವು ತಪ್ಪಿಸಬಹುದು
ಮಿತಿಮೀರಿದ ಆತ್ಮವಿಶ್ವಾಸ. ಹೃದಯಾಘಾತಕ್ಕೆ ತುತ್ತಾದ ಅನೇಕರು, ತಮ್ಮ ಹೃದಯಾಘಾತಕ್ಕೆ ಸ್ವಲ್ಪ ಮುಂಚೆ ತಮ್ಮ ಆರೋಗ್ಯದ ಕುರಿತಾಗಿ ತುಂಬ ಆತ್ಮವಿಶ್ವಾಸದಿಂದಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ, ತಪಾಸಣೆಗಳನ್ನು ಅಥವಾ ವೈದ್ಯಕೀಯ ಪರೀಕ್ಷೆಗಳನ್ನು, ಅವು ಸುಮ್ಮನೆ ಅನಾವಶ್ಯಕವೆಂದು ಅವರು ಉಪೇಕ್ಷೆ ಮಾಡುತ್ತಿದ್ದರು ಅಥವಾ ತಮಾಷೆಯೋಪಾದಿ ಪರಿಗಣಿಸುತ್ತಿದ್ದರು. ತದ್ರೀತಿಯಲ್ಲಿ ಕೆಲವರಿಗೆ, ತಾವು ಎಷ್ಟೋ ಸಮಯದಿಂದ ಕ್ರೈಸ್ತರಾಗಿರುವುದರಿಂದ ತಮಗೆ ಏನೂ ಆಗಲಾರದೆಂಬ ಭಾವನೆಯಿರಬಹುದು. ವಿಪತ್ತು ಬಂದೆರಗುವವರೆಗೂ ಅವರು ತಮ್ಮನ್ನು ಆತ್ಮಿಕ ತಪಾಸಣೆಗಳಿಗೆ ಇಲ್ಲವೇ ಸ್ವಪರೀಕ್ಷೆಗೆ ಒಳಪಡಿಸುವುದನ್ನು ಅಲಕ್ಷಿಸುತ್ತಿರಬಹುದು. ಮಿತಿಮೀರಿದ ಆತ್ಮವಿಶ್ವಾಸದ ಕುರಿತಾಗಿ ಅಪೊಸ್ತಲ ಪೌಲನು ಕೊಟ್ಟ ಈ ಒಳ್ಳೆಯ ಸಲಹೆಯನ್ನು ಮನಸ್ಸಿನಲ್ಲಿಡುವುದು ಅತ್ಯಾವಶ್ಯಕ: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” ನಮ್ಮ ಅಪರಿಪೂರ್ಣ ಸ್ವಭಾವವನ್ನು ಅಂಗೀಕರಿಸಿ, ಆಗಿಂದಾಗ್ಗೆ ನಮ್ಮನ್ನೇ ಆತ್ಮಿಕವಾಗಿ ಪರಿಶೀಲಿಸುವುದು ವಿವೇಕದ ಮಾರ್ಗವಾಗಿದೆ.—1 ಕೊರಿಂಥ 10:12; ಜ್ಞಾನೋಕ್ತಿ 28:14.