ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೋಪದಿಂದ ಕೊಲೆಗೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಹೇಬೆಲ ಯೆಹೋವನಿಗೆ ಬಲಿಯನ್ನ ಅರ್ಪಿಸಿದಾಗ ಕಾಯಿನನಿಗೆ ಕೋಪ ಬಂತು

      ಪಾಠ 4

      ಕೋಪದಿಂದ ಕೊಲೆಗೆ

      ಆದಾಮ-ಹವ್ವ ಏದೆನ್‌ ತೋಟದಿಂದ ಹೊರಗೆ ಬಂದ ಮೇಲೆ ಅವರಿಗೆ ಮಕ್ಕಳಾದರು. ಅವರ ಮೊದಲ ಮಗ ಕಾಯಿನ. ಇವನು ವ್ಯವಸಾಯಗಾರನಾದನು. ಎರಡನೇ ಮಗ ಹೇಬೆಲ. ಇವನು ಕುರುಬನಾದನು.

      ಒಂದು ದಿನ ಕಾಯಿನ ಮತ್ತು ಹೇಬೆಲ ಯೆಹೋವನಿಗೆ ಬಲಿಯನ್ನ ಕೊಟ್ಟರು. ಬಲಿ ಅಂದರೆ ಏನು ಗೊತ್ತಾ? ಅದು ದೇವರಿಗೆ ಕೊಡುವ ವಿಶೇಷವಾದ ಕಾಣಿಕೆ. ಯೆಹೋವನು ಹೇಬೆಲನ ಕಾಣಿಕೆಯನ್ನು ಇಷ್ಟಪಟ್ಟನು. ಆದರೆ ಕಾಯಿನನ ಕಾಣಿಕೆಯನ್ನು ಇಷ್ಟಪಡಲಿಲ್ಲ. ಇದು ಕಾಯಿನನಿಗೆ ಗೊತ್ತಾದಾಗ ಅವನ ಕೋಪ ನೆತ್ತಿಗೇರಿತು. ಕೋಪ ಪಾಪಕ್ಕೆ ನಡೆಸುತ್ತದೆ ಎಂದು ಯೆಹೋವನು ಕಾಯಿನನನ್ನು ಎಚ್ಚರಿಸಿದನು. ಆದರೆ ಕಾಯಿನ ಆ ಎಚ್ಚರಿಕೆಯನ್ನು ಕಿವಿಗೇ ಹಾಕಿಕೊಳ್ಳಲಿಲ್ಲ.

      ಇದಾದ ಮೇಲೆ ಕಾಯಿನ ‘ಕಾಡಿಗೆ ಹೋಗೋಣ ಬಾ’ ಎಂದು ಹೇಬೆಲನನ್ನು ಕರೆದನು. ಅವರಿಬ್ಬರೇ ಇದ್ದಾಗ ಕಾಯಿನ ಹೇಬೆಲನನ್ನು ಹೊಡೆದು ಕೊಂದನು. ಯೆಹೋವನು ಕಾಯಿನನಿಗೆ ಏನು ಮಾಡಿದನು ಗೊತ್ತಾ? ಕಾಯಿನನನ್ನು ಕುಟುಂಬದಿಂದ ದೂರ, ತುಂಬ ದೂರ ಕಳುಹಿಸುವ ಮೂಲಕ ಅವನಿಗೆ ಶಿಕ್ಷೆ ಕೊಟ್ಟನು. ಕಾಯಿನ ಮುಂದೆ ಎಂದೂ ಅವನ ಕುಟುಂಬದವರ ಮುಖ ನೋಡಲು ಆಗಲಿಲ್ಲ.

      ಹೊಲದಲ್ಲಿ ಕಾಯಿನ ಹೇಬೆಲನ ಹತ್ತಿರ ಹೋಗುತ್ತಿದ್ದಾನೆ

      ಇದರಿಂದ ನಮಗೇನಾದರೂ ಪಾಠ ಇದೆಯಾ? ನಾವು ಅಂದುಕೊಂಡದ್ದು ಆಗದಿದ್ದಾಗ ನಮಗೆ ಕೋಪ ಬರಬಹುದು. ಒಳಗೊಳಗೆ ಕೋಪ ಉರಿಯುತ್ತಿದೆ ಎಂದು ನಮಗನಿಸಿದರೆ ಅಥವಾ ಯಾರಾದರೂ ಕೋಪ ಕಡಿಮೆ ಮಾಡಿಕೊಳ್ಳಲು ಹೇಳಿದರೆ ತಕ್ಷಣ ಕೋಪವನ್ನು ನಿಯಂತ್ರಿಸಬೇಕು, ಇಲ್ಲ ಅಂದರೆ ಕೋಪ ನಮ್ಮನ್ನು ನಿಯಂತ್ರಿಸುತ್ತದೆ.

      ಹೇಬೆಲ ಯೆಹೋವನನ್ನು ಪ್ರೀತಿಸಿ, ಸರಿಯಾದದ್ದನ್ನು ಮಾಡಿದ್ದರಿಂದ ಅವನನ್ನು ಯೆಹೋವನು ಎಂದಿಗೂ ಮರೆಯುವುದಿಲ್ಲ. ಮುಂದೆ ಈ ಭೂಮಿ ಸುಂದರ ತೋಟವಾಗುವಾಗ ಯೆಹೋವನು ಹೇಬೆಲನನ್ನು ಖಂಡಿತ ಎಬ್ಬಿಸುವನು.

      “ಮೊದ್ಲು ಹೋಗಿ ನಿನ್ನ ಸಹೋದರನ ಜೊತೆ ಸಮಾಧಾನ ಮಾಡ್ಕೊ. ಆಮೇಲೆ ಕಾಣಿಕೆ ಕೊಡು.”—ಮತ್ತಾಯ 5:24

      ಪ್ರಶ್ನೆಗಳು: ಆದಾಮ ಹವ್ವರ ಇಬ್ಬರು ಗಂಡು ಮಕ್ಕಳ ಹೆಸರೇನು? ಕಾಯಿನ ಹೇಬೆಲನನ್ನು ಯಾಕೆ ಕೊಂದ?

      ಆದಿಕಾಂಡ 4:1-12; ಇಬ್ರಿಯ 11:4; 1 ಯೋಹಾನ 3:11, 12

  • ನೋಹನ ಹಡಗು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ನೋಹ ಮತ್ತವನ ಕುಟುಂಬ ಹಡಗನ್ನ ಕಟ್ಟುತ್ತಿದ್ದಾರೆ

      ಪಾಠ 5

      ನೋಹನ ಹಡಗು

      ದಿನ ಕಳೆದಂತೆ ಭೂಮಿಯಲ್ಲಿ ಜನರು ಹೆಚ್ಚಾದರು. ಅವರಲ್ಲಿ ತುಂಬ ಜನ ಕೆಟ್ಟದ್ದನ್ನೇ ಮಾಡುತ್ತಿದ್ದರು. ಮನುಷ್ಯರು ಮಾತ್ರ ಅಲ್ಲ, ಸ್ವರ್ಗದಲ್ಲಿದ್ದ ಕೆಲವು ದೇವದೂತರು ಕೂಡ ಕೆಟ್ಟವರಾದರು. ಅವರು ಸ್ವರ್ಗವನ್ನು ಬಿಟ್ಟು ಭೂಮಿಗೆ ಬಂದರು. ಯಾಕೆ ಗೊತ್ತಾ? ಮಾನವ ದೇಹವನ್ನು ಧರಿಸಿ ಭೂಮಿಯಲ್ಲಿದ್ದ ಸುಂದರ ಸ್ತ್ರೀಯರನ್ನು ಮದುವೆಯಾಗಲಿಕ್ಕಾಗಿ.

      ಹೀಗೆ ಮದುವೆಯಾದ ದೇವದೂತರಿಗೆ ಮಕ್ಕಳು ಹುಟ್ಟಿದರು. ಆ ಮಕ್ಕಳು ಬೇರೆ ಮಕ್ಕಳಂತೆ ಇರಲಿಲ್ಲ. ಅವರಿಗೆ ತುಂಬ ಶಕ್ತಿ ಇತ್ತು, ನೋಡಲು ತುಂಬ ಎತ್ತರ ಹಾಗೂ ಸಿಕ್ಕಾಪಟ್ಟೆ ದಪ್ಪ ಇದ್ದರು. ಅವರು ಜನರಿಗೆ ಹಿಂಸೆ ಕೊಡುತ್ತಿದ್ದರು. ಪರಿಸ್ಥಿತಿ ಹೀಗೇ ಮುಂದುವರಿಯುವುದು ಯೆಹೋವನಿಗೆ ಇಷ್ಟವಿರಲಿಲ್ಲ. ಆದ್ದರಿಂದಲೇ ಜಲಪ್ರಳಯದ ಮೂಲಕ ಎಲ್ಲಾ ಕೆಟ್ಟ ಜನರನ್ನು ನಾಶಮಾಡಲು ಮುಂದಾದನು.

      ನೋಹ ಮತ್ತವನ ಕುಟುಂಬ ಹಡಗನ್ನ ಕಟ್ಟುತ್ತಿದ್ದಾರೆ ಮತ್ತು ಆಹಾರ ತಯಾರಿಸುತ್ತಿದ್ದಾರೆ

      ಆದರೆ ಇವರ ಮಧ್ಯೆ ಒಬ್ಬ ಒಳ್ಳೇ ವ್ಯಕ್ತಿ ಇದ್ದ. ಅವನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅವನೇ ನೋಹ. ಅವನ ಕುಟುಂಬದಲ್ಲಿ ಹೆಂಡತಿ, ಶೇಮ್‌, ಹಾಮ್‌, ಯೆಫೆತ್‌ ಎಂಬ ಮೂರು ಗಂಡುಮಕ್ಕಳು ಹಾಗೂ ಮೂರು ಜನ ಸೊಸೆಯರಿದ್ದರು. ನೋಹ ಮತ್ತವನ ಕುಟುಂಬ ಜಲಪ್ರಳಯದಿಂದ ಬಚಾವಾಗಲು ದೊಡ್ಡದೊಂದು ಹಡಗನ್ನ ಕಟ್ಟಲು ಯೆಹೋವನು ಹೇಳಿದನು. ಹಡಗು ಅಂದರೆ ನೀರಿನ ಮೇಲೆ ತೇಲುವ ಒಂದು ದೊಡ್ಡ ಪೆಟ್ಟಿಗೆ. ಯೆಹೋವನು ನೋಹನಿಗೆ ಪ್ರಾಣಿಗಳನ್ನೂ ಹಡಗಲ್ಲಿ ಸೇರಿಸಲು ಹೇಳಿದನು. ಹೀಗೆ ಪ್ರಾಣಿಗಳ ಜೀವ ಸಹ ಉಳಿಯಲು ಸಾಧ್ಯವಿತ್ತು.

      ನೋಹನು ಕೂಡಲೇ ಹಡಗನ್ನ ಕಟ್ಟಲು ಶುರುಮಾಡಿದನು. ಅದನ್ನು ಕಟ್ಟಿ ಮುಗಿಸಲು ನೋಹ ಮತ್ತು ಅವನ ಕುಟುಂಬಕ್ಕೆ ಸುಮಾರು 50 ವರ್ಷ ಹಿಡಿಯಿತು. ಯೆಹೋವನು ಹಡಗನ್ನ ಹೇಗೆ ಕಟ್ಟಬೇಕೆಂದು ಹೇಳಿದನೋ ನೋಹನು ಹಾಗೆಯೇ ಕಟ್ಟಿದನು. ಹಡಗು ಕಟ್ಟುವುದರ ಜೊತೆಗೆ ಜಲಪ್ರಳಯ ಬರುತ್ತದೆ ಎಂದು ನೋಹ ಜನರನ್ನು ಎಚ್ಚರಿಸುತ್ತಿದ್ದನು. ಆದರೆ ಆ ಎಚ್ಚರಿಕೆಯನ್ನು ಜನ ಕೇಳಲೇ ಇಲ್ಲ.

      ಕೊನೆಗೂ ಹಡಗಿನ ಒಳಗೆ ಹೋಗುವ ದಿನ ಬಂದೇ ಬಿಟ್ಟಿತು! ನಂತರ ಏನಾಯಿತು? ನೋಡೋಣ ಬನ್ನಿ.

      “ನೋಹನ ದಿನಗಳು ಹೇಗಿದ್ದವೋ ಅದೇ ತರ ಮನುಷ್ಯಕುಮಾರನ ಸಾನಿಧ್ಯದ ಸಮಯ ಇರುತ್ತೆ.”—ಮತ್ತಾಯ 24:37

      ಪ್ರಶ್ನೆಗಳು: ಯೆಹೋವನು ಯಾಕೆ ಜಲಪ್ರಳಯ ತರಲು ಮುಂದಾದನು? ಯೆಹೋವನು ನೋಹನಿಗೆ ಯಾವ ನಿರ್ದೇಶನಗಳನ್ನು ಕೊಟ್ಟನು?

      ಆದಿಕಾಂಡ 6:1-22; ಮತ್ತಾಯ 24:37-41; 2 ಪೇತ್ರ 2:5; ಯೂದ 6

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ